Revised Common Lectionary (Complementary)
ರಚನೆಗಾರ: ದಾವೀದ.
36 ದುಷ್ಟನು ಪಾಪದಿಂದ ಪ್ರಭಾವಿತನಾಗಿ, “ನಾನು ದೇವರಿಗೆ ಭಯಪಡುವುದೂ ಇಲ್ಲ
ಆತನನ್ನು ಗೌರವಿಸುವುದೂ ಇಲ್ಲ” ಎಂದುಕೊಳ್ಳುವನು.
2 ಅವನು ತನ್ನನ್ನು ವಂಚಿಸಿಕೊಳ್ಳುವನು.
ಅವನು ತನ್ನ ತಪ್ಪುಗಳನ್ನು ಕಾಣುವುದೂ ಇಲ್ಲ,
ಅವುಗಳಿಗಾಗಿ ಕ್ಷಮೆಯನ್ನು ಕೇಳುವುದೂ ಇಲ್ಲ.
3 ಅವನ ಮಾತುಗಳು ಕೇವಲ ಸುಳ್ಳುಗಳಾಗಿವೆ.
ಅವನು ಜ್ಞಾನಿಯಾಗುವುದೂ ಇಲ್ಲ, ಒಳ್ಳೆಯದನ್ನು ಕಲಿತುಕೊಳ್ಳುವುದೂ ಇಲ್ಲ.
4 ರಾತ್ರಿಯಲ್ಲಿ, ಅವನು ಕೇಡನ್ನೇ ಆಲೋಚಿಸುವನು.
ಮರುದಿನ ಮುಂಜಾನೆ ಎದ್ದಾಗ,
ಒಳ್ಳೆಯದನ್ನು ಮಾಡದೆ ಕೇಡನ್ನು ಮಾಡಲು ಸಿದ್ಧನಾಗಿರುವನು.
5 ಯೆಹೋವನೇ, ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ.
ನಿನ್ನ ನಂಬಿಗಸ್ತಿಕೆಯು ಮೇಘಗಳಿಗಿಂತಲೂ ಎತ್ತರವಾಗಿದೆ.
6 ನಿನ್ನ ನೀತಿಯು ಅತ್ಯುನ್ನತವಾದ ಬೆಟ್ಟಕ್ಕಿಂತಲೂ ಎತ್ತರವಾಗಿದೆ.
ನಿನ್ನ ನ್ಯಾಯವು ಮಹಾಸಾಗರಕ್ಕಿಂತಲೂ ಆಳವಾಗಿದೆ.
ಯೆಹೋವನೇ, ಮನುಷ್ಯರನ್ನೂ ಪ್ರಾಣಿಗಳನ್ನೂ ಕಾಪಾಡುವಾತನು ನೀನೇ.
7 ನಿನ್ನ ಶಾಶ್ವತವಾದ ಪ್ರೀತಿಗಿಂತ ಅಮೂಲ್ಯವಾದದ್ದು ಬೇರೊಂದಿಲ್ಲ.
ಜನರೂ ದೇವದೂತರೂ ನಿನ್ನನ್ನೇ ಆಶ್ರಯಿಸಿಕೊಳ್ಳುವರು.
8 ನಿನ್ನ ಆಲಯದ ಸಮೃದ್ಧಿಯಿಂದ ಅವರು ನವಚೈತನ್ಯವನ್ನು ಪಡೆದುಕೊಳ್ಳುವರು.
ನಿನ್ನ ಶ್ರೇಷ್ಠ ನದಿಯಲ್ಲಿ ಕುಡಿಯಲು ಅವರಿಗೆ ಆಸ್ಪದನೀಡು.
9 ಜೀವಬುಗ್ಗೆಯು ನಿನ್ನ ಬಳಿಯಿಂದ ಹರಿಯುವುದು!
ನಾವು ಬೆಳಕನ್ನು ನೋಡುವುದು ನಿನ್ನ ಬೆಳಕಿನಿಂದಲೇ.
10 ನಿನ್ನನ್ನು ಅರಿತುಕೊಂಡವರ ಮೇಲೆ ನಿನ್ನ ಪ್ರೀತಿಯು ನೆಲೆಸಿರಲಿ.
ಯಥಾರ್ಥವಂತರಿಗೆ ಒಳ್ಳೆಯದನ್ನು ಮಾಡು.
11 ಗರ್ವಿಷ್ಠರ ಬಲೆಗೆ ನನ್ನನ್ನು ಬೀಳಿಸಬೇಡ;
ದುಷ್ಟರ ಕೈಹಿಡಿತಕ್ಕೆ ನನ್ನನ್ನು ಸಿಕ್ಕಿಸಬೇಡ.
12 “ದುಷ್ಟರು ಬಿದ್ದು ಜಜ್ಜಲ್ಪಟ್ಟದ್ದು ಇಲ್ಲಿಯೇ.
ಅವರು ಮತ್ತೆಂದಿಗೂ ಮೇಲೇಳುವುದಿಲ್ಲ”
ಎಂದು ಅವರ ಸಮಾಧಿಯ ಮೇಲೆ ಬರೆಯಿಸು.
ಯಾಕೋಬನು ಬೆನ್ಯಾಮೀನನನ್ನು ಈಜಿಪ್ಟಿಗೆ ಕಳುಹಿಸಲು ಒಪ್ಪಿದ್ದು
43 ಬರಗಾಲವು ದೇಶದಲ್ಲಿ ತುಂಬ ಭೀಕರವಾಗಿತ್ತು. 2 ಅವರು ಈಜಿಪ್ಟಿನಿಂದ ತಂದಿದ್ದ ದವಸಧಾನ್ಯಗಳನ್ನೆಲ್ಲ ಊಟ ಮಾಡಿದರು. ದವಸಧಾನ್ಯಗಳು ಮುಗಿದು ಹೋದಾಗ ಯಾಕೋಬನು, ತನ್ನ ಗಂಡುಮಕ್ಕಳಿಗೆ, “ಈಜಿಪ್ಟಿಗೆ ಮತ್ತೆ ಹೋಗಿ ನಮಗೆ ಊಟಕ್ಕೆ ದವಸಧಾನ್ಯಗಳನ್ನು ಕೊಂಡುಕೊಂಡು ಬನ್ನಿ” ಎಂದು ಹೇಳಿದನು.
3 ಯೆಹೂದನು ಯಾಕೋಬನಿಗೆ, “ಆ ದೇಶದ ರಾಜ್ಯಪಾಲನು ನಮಗೆ ಎಚ್ಚರಿಕೆ ಕೊಟ್ಟಿದ್ದಾನೆ. ಅವನು, ‘ನೀವು ನಿಮ್ಮ ಸಹೋದರನನ್ನು ನನ್ನ ಬಳಿಗೆ ಕರೆದುಕೊಂಡು ಬಾರದೆ ನನ್ನನ್ನು ಭೇಟಿಯಾಗಕೂಡದು’ ಎಂದು ಹೇಳಿದ್ದಾನೆ. 4 ನೀನು ನಮ್ಮೊಡನೆ ಬೆನ್ಯಾಮೀನನನ್ನು ಕಳುಹಿಸಿದರೆ, ನಾವು ಹೋಗಿ ದವಸಧಾನ್ಯಗಳನ್ನು ಕೊಂಡುಕೊಂಡು ಬರುವೆವು. 5 ಆದರೆ ಬೆನ್ಯಾಮೀನನನ್ನು ಕಳುಹಿಸದಿದ್ದರೆ, ನಾವು ಹೋಗುವುದಿಲ್ಲ; ಆ ಮನುಷ್ಯನು ನಮಗೆ ಬೆನ್ಯಾಮೀನನಿಲ್ಲದೆ ಬರಕೂಡದೆಂದು ಎಚ್ಚರಿಕೆ ಕೊಟ್ಟಿದ್ದಾನೆ” ಅಂದನು.
6 ಇಸ್ರೇಲನು, “ನಿಮಗೆ ಮತ್ತೊಬ್ಬ ಸಹೋದರನಿರುವುದಾಗಿ ನೀವು ಆ ಮನುಷ್ಯನಿಗೆ ಯಾಕೆ ಹೇಳಿದಿರಿ? ನೀವು ಅಂಥ ಕೆಟ್ಟದ್ದನ್ನು ಯಾಕೆ ಮಾಡಿದಿರಿ?” ಎಂದು ಕೇಳಿದನು.
7 ಸಹೋದರರು, “ಆ ಮನುಷ್ಯನು ನಮ್ಮ ವಿಷಯವಾಗಿಯೂ ನಮ್ಮ ಕುಟುಂಬದ ವಿಷಯವಾಗಿಯೂ ತಿಳಿದುಕೊಳ್ಳಲು ಸೂಕ್ಷ್ಮವಾಗಿ ಪ್ರಶ್ನೆಗಳನ್ನು ಕೇಳಿದನು. ಅವನು ನಮಗೆ, ‘ನಿಮ್ಮ ತಂದೆಯು ಇನ್ನೂ ಜೀವಂತವಾಗಿರುವನೇ? ನಿಮಗೆ ಮನೆಯಲ್ಲಿ ಮತ್ತೊಬ್ಬ ಸಹೋದರನಿರುವನೇ?’ ಎಂದು ಕೇಳಿದನು. ನಾವು ಅವನ ಪ್ರಶ್ನೆಗಳಿಗೆ ಮಾತ್ರ ಉತ್ತರಕೊಟ್ಟೆವು. ನಮ್ಮ ಸಹೋದರನನ್ನು ತನ್ನ ಬಳಿಗೆ ಕರೆದುಕೊಂಡು ಬರಬೇಕೆಂದು ಅವನು ಹೇಳುತ್ತಾನೆಂದು ನಮಗೆ ತಿಳಿದಿರಲಿಲ್ಲ” ಎಂದು ಹೇಳಿದರು.
8 ಆಮೇಲೆ ಯೆಹೂದನು ತನ್ನ ತಂದೆಯಾದ ಇಸ್ರೇಲನಿಗೆ, “ನನ್ನೊಂದಿಗೆ ಬೆನ್ಯಾಮೀನನನ್ನು ಕಳುಹಿಸಿಕೊಡು. ನಾನು ಅವನನ್ನು ನೋಡಿಕೊಳ್ಳುವೆನು. ನಾವು ಈಜಿಪ್ಟಿಗೆ ಹೋಗಿ ಆಹಾರವನ್ನು ತರಬೇಕು. ಇಲ್ಲವಾದರೆ ನಾವೂ ಸಾಯುವೆವು, ನಮ್ಮ ಮಕ್ಕಳೂ ಸಾಯುವರು. 9 ಅವನು ಸುರಕ್ಷಿತವಾಗಿರುವಂತೆ ನಾನು ನೋಡಿಕೊಳ್ಳುವೆನು. ನಾನು ಅವನಿಗೆ ಜವಾಬ್ದಾರನಾಗಿರುತ್ತೇನೆ. ನಾನು ಅವನನ್ನು ನಿನ್ನ ಬಳಿಗೆ ಮತ್ತೆ ಕರೆದುಕೊಂಡು ಬರದಿದ್ದರೆ, ನೀನು ಸದಾಕಾಲ ನನ್ನನ್ನು ದೂಷಿಸಬಹುದು. 10 ಮೊದಲೇ ನೀನು ನಮ್ಮನ್ನು ಕಳುಹಿಸಿಕೊಟ್ಟಿದ್ದರೆ, ಈಗಾಗಲೇ ಎರಡು ಸಲ ಆಹಾರವನ್ನು ತೆಗೆದುಕೊಂಡು ಬರಬಹುದಾಗಿತ್ತು” ಎಂದು ಹೇಳಿದನು.
11 ಅದಕ್ಕೆ ಅವರ ತಂದೆಯಾದ ಇಸ್ರೇಲನು, “ಇದು ನಿಜವಾಗಿಯೂ ಸತ್ಯವಾಗಿದ್ದರೆ, ನಿನ್ನೊಂದಿಗೆ ಬೆನ್ಯಾಮೀನನನ್ನು ಕರೆದುಕೊಂಡು ಹೋಗು. ಆದರೆ ರಾಜ್ಯಪಾಲನಿಗೆ ಶ್ರೇಷ್ಠವಾದ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು ಹೋಗಿ. ನಮ್ಮ ನಾಡಿನಲ್ಲಿ ದೊರಕುವ ಜೇನು, ಆಕ್ರೋಡು, ಬಾದಾಮಿ, ಹಾಲುಮಡ್ಡಿ ಮತ್ತು ಗೋಲರಸ ಇವುಗಳನ್ನು ತೆಗೆದುಕೊಳ್ಳಿ. 12 ಈ ಸಲ ಎರಡರಷ್ಟು ಹಣವನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ಕಳೆದ ಸಲ ನೀವು ಪಾವತಿ ಮಾಡಿದ್ದರೂ ಹಿಂತಿರುಗಿಸಲಾದ ಹಣವನ್ನು ತೆಗೆದುಕೊಂಡು ಹೋಗಿ. ಒಂದುವೇಳೆ ರಾಜ್ಯಪಾಲನು ತಪ್ಪು ಮಾಡಿದ್ದಿರಬೇಕು. 13 ಬೆನ್ಯಾಮೀನನನ್ನು ಕರೆದುಕೊಂಡು ಆ ಮನುಷ್ಯನ ಬಳಿಗೆ ಹಿಂತಿರುಗಿ ಹೋಗಿರಿ. 14 ನೀವು ರಾಜ್ಯಪಾಲನ ಮುಂದೆ ನಿಂತುಕೊಂಡಾಗ ಸರ್ವಶಕ್ತನಾದ ದೇವರು ನಿಮಗೆ ಸಹಾಯ ಮಾಡುವಂತೆ ನಾನು ಪ್ರಾರ್ಥಿಸುತ್ತೇನೆ. ಬೆನ್ಯಾಮೀನನನ್ನೂ ಸಿಮೆಯೋನನನ್ನೂ ಕಳುಹಿಸಿಕೊಡುವಂತೆ ಮತ್ತು ನೀವು ಸುರಕ್ಷಿತವಾಗಿ ಮರಳಿಬರುವಂತೆ ನಾನು ಪ್ರಾರ್ಥಿಸುತ್ತೇನೆ. ಇಲ್ಲವಾದರೆ, ನನ್ನ ಮಗನನ್ನು ಕಳೆದುಕೊಂಡು ನಾನು ಮತ್ತೆ ದುಃಖಿತನಾಗುವೆ” ಎಂದು ಹೇಳಿದನು.
15 ಆದ್ದರಿಂದ ಸಹೋದರರು ರಾಜ್ಯಪಾಲನಿಗೆ ಕೊಡಲು ಉಡುಗೊರೆಗಳನ್ನು ತೆಗೆದುಕೊಂಡರು; ಮೊದಲನೆ ಸಲ ತೆಗೆದುಕೊಂಡು ಹೋಗಿದ್ದ ಹಣಕ್ಕಿಂತ ಎರಡರಷ್ಟು ಹೆಚ್ಚಾಗಿ ತೆಗೆದುಕೊಂಡರು. ಬೆನ್ಯಾಮೀನನು ಸಹೋದರರೊಂದಿಗೆ ಈಜಿಪ್ಟಿಗೆ ಹೋದನು.
ವಿಶೇಷ ಕಾರ್ಯಕ್ಕೆ ಏಳು ಮಂದಿಯ ಆಯ್ಕೆ
6 ಯೇಸುವಿನ ಶಿಷ್ಯರ ಸಂಖ್ಯೆಯು ಹೆಚ್ಚುಹೆಚ್ಚಾಗುತ್ತಿತ್ತು. ಆದರೆ ಈ ಸಮಯದಲ್ಲಿ ಗ್ರೀಕ್ ಮಾತಾಡುವ ಶಿಷ್ಯರು ಯೆಹೂದ್ಯ ಶಿಷ್ಯರಿಗೆ ದೂರು ಹೇಳಿದರು. ಪ್ರತಿದಿನ ಶಿಷ್ಯರಿಗೆ ಕೊಡುವಂಥವುಗಳಲ್ಲಿ ತಮ್ಮ ವಿಧವೆಯರಿಗೆ ಅವರ ಪಾಲು ದೊರೆಯುತ್ತಿಲ್ಲವೆಂದು ಅವರು ಆಪಾದಿಸಿದರು.
2 ಆಗ ಹನ್ನೆರಡು ಮಂದಿ ಅಪೊಸ್ತಲರು ಇಡೀ ಶಿಷ್ಯಸಮುದಾಯದ ಸಭೆಯನ್ನು ಕರೆದು ಅವರಿಗೆ, “ದೇವರ ವಾಕ್ಯವನ್ನು ಬೋಧಿಸುವುದು ನಮ್ಮ ಕೆಲಸ. ಆದರೆ ಅದು ನಿಂತುಹೋಗುವುದು ಸರಿಯಲ್ಲ! ನಾವು ಜನರಿಗೆ ಊಟವನ್ನು ಒದಗಿಸಲು ಸಹಾಯ ಮಾಡುವುದಕ್ಕಿಂತಲೂ ದೇವರ ವಾಕ್ಯೋಪದೇಶವನ್ನು ಮುಂದುವರಿಸುವುದು ಒಳ್ಳೆಯದು. 3 ಆದ್ದರಿಂದ, ಸಹೋದರರೇ, ನಿಮ್ಮ ಜನರಲ್ಲಿ ಏಳು ಮಂದಿಯನ್ನು ಆರಿಸಿಕೊಳ್ಳಿರಿ. ಅವರು ಜನರಿಂದ ಒಳ್ಳೆಯವರು ಎನಿಸಿಕೊಂಡವರಾಗಿರಬೇಕು; ಜ್ಞಾನಪೂರ್ಣರಾಗಿರಬೇಕು ಮತ್ತು ಪವಿತ್ರಾತ್ಮಭರಿತರಾಗಿರಬೇಕು. ನಾವು ಅವರಿಗೆ ಈ ಕೆಲಸವನ್ನು ಒಪ್ಪಿಸಿಕೊಡುತ್ತೇವೆ. 4 ಆಗ ನಾವು ನಮ್ಮ ಸಮಯವನ್ನೆಲ್ಲಾ ಪ್ರಾರ್ಥನೆಗೂ ದೇವರ ವಾಕ್ಯೋಪದೇಶಕ್ಕೂ ಕೊಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
5 ಇಡೀ ಸಮುದಾಯವು ಈ ಆಲೋಚನೆಯನ್ನು ಇಷ್ಟಪಟ್ಟಿತು. ಆದ್ದರಿಂದ ಅವರು ಈ ಏಳು ಮಂದಿಯನ್ನು ಆರಿಸಿಕೊಂಡರು: ಸ್ತೆಫನ (ಮಹಾನಂಬಿಕೆಯುಳ್ಳ ಮತ್ತು ಪವಿತ್ರಾತ್ಮಭರಿತನಾಗಿದ್ದ ಮನುಷ್ಯ), ಫಿಲಿಪ್ಪ,[a] ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ನಿಕೊಲಾಯ (ಮತಾಂತರ ಹೊಂದಿ ಯೆಹೂದ್ಯನಾಗಿದ್ದ ಇವನು ಅಂತಿಯೋಕ್ಯಕ್ಕೆ ಸೇರಿದವನು.) 6 ಬಳಿಕ ಅವರು ಈ ಏಳು ಮಂದಿಯನ್ನು ಅಪೊಸ್ತಲರ ಮುಂದೆ ನಿಲ್ಲಿಸಿದರು. ಅಪೊಸ್ತಲರು ಪ್ರಾರ್ಥಿಸಿ, ಅವರ ತಲೆಗಳ ಮೇಲೆ ತಮ್ಮ ಕೈಗಳನ್ನಿಟ್ಟರು.
7 ದೇವರ ವಾಕ್ಯವು ಹೆಚ್ಚುಹೆಚ್ಚು ಜನರಿಗೆ ತಲುಪತೊಡಗಿತು. ಜೆರುಸಲೇಮಿನ ಶಿಷ್ಯಸಮುದಾಯವು ಹೆಚ್ಚುಹೆಚ್ಚು ದೊಡ್ಡದಾಗ ತೊಡಗಿತು. ಅನೇಕ ಯೆಹೂದ್ಯಯಾಜಕರು ನಂಬಿಕೊಂಡರು ಮತ್ತು ವಿಧೇಯರಾದರು.
Kannada Holy Bible: Easy-to-Read Version. All rights reserved. © 1997 Bible League International