Revised Common Lectionary (Complementary)
9 ಯೆಹೋವನ ಜನರೇ, ಆತನನ್ನು ಆರಾಧಿಸಿರಿ.
ಆತನ ಭಕ್ತರಿಗೆ ಬೇರೆ ಯಾವ ಆಶ್ರಯಸ್ಥಾನವೂ ಇಲ್ಲ.
10 ಪ್ರಾಯದ ಸಿಂಹಗಳಾದರೋ ಹೊಟ್ಟೆಗಿಲ್ಲದೆ ಹಸಿದಾವು.
ಆದರೆ ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರು ಸುವರಗಳನ್ನು ಹೊಂದಿಕೊಳ್ಳುವರು.
11 ಮಕ್ಕಳಿರಾ, ಬನ್ನಿರಿ, ನನ್ನ ಮಾತನ್ನು ಕೇಳಿರಿ;
ಯೆಹೋವನಲ್ಲಿ ನಿಮಗಿರಬೇಕಾದ ಭಯಭಕ್ತಿಯನ್ನು ಕಲಿಸಿಕೊಡುವೆನು.
12 ದೀರ್ಘಾಯುಷ್ಯವು ಬೇಕೋ?
ಬಹುಕಾಲ ಸುಖವನ್ನು ಅನುಭವಿಸಬೇಕೋ?
13 ಹಾಗಾದರೆ ಕೆಟ್ಟದ್ದನ್ನು ಮಾತಾಡದಂತೆ ನಾಲಿಗೆಯನ್ನು ಕಾದುಕೊಳ್ಳಿರಿ.
ಸುಳ್ಳಾಡದಂತೆ ತುಟಿಗಳನ್ನು ಇಟ್ಟುಕೊಳ್ಳಿರಿ.
14 ಕೆಟ್ಟದ್ದನ್ನು ಬಿಟ್ಟು ಒಳ್ಳೆಯವುಗಳನ್ನು ಮಾಡಿರಿ.
ಸಮಾಧಾನವನ್ನು ಬಯಸಿ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ.
ಚೋಫರನ ವಾದ
11 ಆಗ ನಾಮಾಥ ದೇಶದ ಚೋಫರನು ಯೋಬನಿಗೆ ಉತ್ತರಿಸಿದನು:
2 “ಮಾತುಗಳ ಈ ಪ್ರವಾಹಕ್ಕೆ ಯಾರಾದರೊಬ್ಬರು ಉತ್ತರ ಕೊಡಬೇಕು!
ಇಷ್ಟೆಲ್ಲಾ ಮಾತುಗಳು ಯೋಬನನ್ನು ನೀತಿವಂತನನ್ನಾಗಿ ಮಾಡುತ್ತವೆಯೋ? ಇಲ್ಲ!
3 ಯೋಬನೇ, ಅರ್ಥರಹಿತವಾದ ನಿನ್ನ ಮಾತುಗಳಿಗೆ
ನಮ್ಮಲ್ಲಿ ಉತ್ತರವೇ ಇಲ್ಲವೆಂದು ಆಲೋಚಿಸಿಕೊಂಡಿರುವೆಯಾ?
ನೀನು ದೇವರನ್ನು ಅಪಹಾಸ್ಯ ಮಾಡುವಾಗ
ಯಾರೂ ನಿನ್ನನ್ನು ಎಚ್ಚರಿಸುವುದಿಲ್ಲ ಎಂದುಕೊಂಡಿರುವಿಯಾ?
4 ಯೋಬನೇ, ನೀನು ದೇವರಿಗೆ,
‘ನನ್ನ ವಾದಗಳು ಸರಿಯಾಗಿವೆ,
ನಿನ್ನ ದೃಷ್ಟಿಯಲ್ಲಿ ನಾನು ಶುದ್ಧನಾಗಿರುವೆ’ ಎಂದು ಹೇಳಿದೆಯಲ್ಲವೇ?
5 ದೇವರು ನಿನಗೆ ಉತ್ತರ ನೀಡಿ ನಿನ್ನನ್ನು ತಪ್ಪಿತಸ್ಥನೆಂದು ಹೇಳಿದರೆ
ಎಷ್ಟೋ ಒಳ್ಳೆಯದು.
6 ಆತನು ನಿನಗೆ ಜ್ಞಾನದ ರಹಸ್ಯಗಳನ್ನು ತಿಳಿಸಿ
ಜ್ಞಾನಕ್ಕೆ ಎರಡು ಮುಖಗಳಿವೆ ಎಂದು ತೋರಿಸಿಕೊಟ್ಟರೆ ಎಷ್ಟೋ ಲೇಸು.
ದೇವರು ನಿನಗೆ ತಕ್ಕ ದಂಡನೆಯನ್ನು ವಿಧಿಸಿಲ್ಲವೆಂಬುದು
ನಿನಗೆ ತಿಳಿದಿರಲಿ.
7 “ನೀನು ದೇವರ ರಹಸ್ಯಗಳನ್ನು ಅರ್ಥಮಾಡಿಕೊಳ್ಳಬಲ್ಲೆಯಾ?
ಸರ್ವಶಕ್ತನಾದ ದೇವರ ಜ್ಞಾನದ ಮೇರೆಗಳನ್ನು ತಿಳಿದುಕೊಳ್ಳಬಲ್ಲೆಯಾ?
8 ಆತನ ಜ್ಞಾನವು ಆಕಾಶಕ್ಕಿಂತಲೂ ಉನ್ನತವಾಗಿದೆ; ಅದನ್ನು ಅರ್ಥಮಾಡಿಕೊಳ್ಳಲು ನಿನಗೆ ಸಾಧ್ಯವೇ ಇಲ್ಲ.
ಅದು ಮೃತ್ಯುಲೋಕಕ್ಕಿಂತಲೂ ಆಳವಾಗಿದೆ. ನೀನು ಅದನ್ನು ಗ್ರಹಿಸಿಕೊಳ್ಳಲಾರೆ.
9 ದೇವರ ಜ್ಞಾನವು ಭೂಮಿಗಿಂತಲೂ ಉದ್ದವಾಗಿದೆ;
ಸಮುದ್ರಕ್ಕಿಂತಲೂ ಅಗಲವಾಗಿದೆ.
10 “ದೇವರು ನಿನ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಎಳೆದುಕೊಂಡು ಬರುವುದಾದರೆ
ಆತನನ್ನು ತಡೆಯಬಲ್ಲವರು ಯಾರು?
11 ಅಯೋಗ್ಯರು ಯಾರೆಂಬುದು ದೇವರಿಗೆ ಚೆನ್ನಾಗಿ ಗೊತ್ತಿದೆ.
ಆತನು ಕೆಟ್ಟದ್ದನ್ನು ಕಂಡಾಗ ಗಮನಿಸುವನು.
12 ಕಾಡುಕತ್ತೆಯು ಮನುಷ್ಯನನ್ನು ಹೇಗೆ ಹೆರಲಾರದೋ
ಅದೇ ರೀತಿಯಲ್ಲಿ ದಡ್ಡನು ಎಂದಿಗೂ ಜ್ಞಾನಿಯಾಗಲಾರನು.
13 ಯೋಬನೇ, ನಿನ್ನ ಕೈಗಳನ್ನು ಮೇಲೆತ್ತಿ ದೇವರೊಬ್ಬನನ್ನೇ ಆರಾಧಿಸುವುದಕ್ಕಾಗಿ
ನಿನ್ನ ಹೃದಯವನ್ನು ಸಿದ್ಧಪಡಿಸಿಕೊ.
14 ನೀನು ಪಾಪವನ್ನು ಹಿಡಿದುಕೊಂಡಿದ್ದರೆ ಅದನ್ನು ನಿನ್ನಿಂದ ದೂರಮಾಡು.
ದುಷ್ಟತನವು ನಿನ್ನ ಗುಡಾರಗಳಲ್ಲಿ ವಾಸಿಸದಿರಲಿ.
15 ಆಗ ನೀನು ಖಂಡಿತವಾಗಿ ನಾಚಿಕೆಯಿಲ್ಲದೆ ತಲೆಯೆತ್ತುವೆ;
ಸ್ಥಿರವಾಗಿ ನಿಂತುಕೊಂಡು ನಿರ್ಭಯದಿಂದಿರುವೆ.
16 ಯೋಬನೇ, ಆಗ ನೀನು ನಿನ್ನ ಕಷ್ಟವನ್ನು ಮರೆತುಬಿಡುವೆ;
ಹರಿದುಹೋದ ನೀರನ್ನೋ ಎಂಬಂತೆ ನಿನ್ನ ಕಷ್ಟಗಳನ್ನು ಜ್ಞಾಪಿಸಿಕೊಳ್ಳುವೆ.
17 ನಿನ್ನ ಜೀವಿತವು ಮಧ್ಯಾಹ್ನದ ಸೂರ್ಯನಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿರುವುದು.
ನಿನ್ನ ಜೀವಿತದ ಕಾರ್ಗತ್ತಲೆಯ ತಾಸುಗಳು ಮುಂಜಾನೆಯ ಸೂರ್ಯನಂತೆ ಹೊಳೆಯುತ್ತವೆ.
18 ಯೋಬನೇ, ನಿನಗೆ ನಿರೀಕ್ಷೆಯಿರುವುದರಿಂದ ಸುರಕ್ಷಿತನಾಗಿರುವೆ.
ಆತನು ನಿನ್ನನ್ನು ಪರಿಪಾಲಿಸುತ್ತಾ ನಿನಗೆ ವಿಶ್ರಾಂತಿಯನ್ನು ದಯಪಾಲಿಸುವನು.
19 ಆಗ ನೀನು ಮಲಗಿ ವಿಶ್ರಮಿಸಿಕೊಳ್ಳುವೆ; ಯಾರೂ ನಿನಗೆ ಭಯ ಹುಟ್ಟಿಸುವುದಿಲ್ಲ.
ಅನೇಕರು ನಿನ್ನ ಸಹಾಯಕ್ಕಾಗಿಯೇ ಕೇಳಿಕೊಳ್ಳುವರು.
20 ಆದರೆ ದುಷ್ಟರು ಸಹಾಯಕ್ಕಾಗಿ ಎದುರುನೋಡಿದರೂ
ತಮ್ಮ ಆಪತ್ತುಗಳಿಂದ ಪಾರಾಗಲು ಅವರಿಗೆ ಸಾಧ್ಯವಿಲ್ಲ.
ಅವರ ನಿರೀಕ್ಷೆಯೇ ಅವರನ್ನು ಮರಣಕ್ಕೆ ನಡೆಸುತ್ತದೆ.”
ಯೆಹೂದ್ಯರು ಸ್ತೆಫನನಿಗೆ ವಿರುದ್ಧವಾದರು
8 ಸ್ತೆಫನನು (ಏಳು ಮಂದಿಯಲ್ಲಿ ಒಬ್ಬನು) ದೇವರ ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿ ಅದ್ಭುತಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ಇದ್ದನು. 9 ಆದರೆ ಕೆಲವು ಯೆಹೂದ್ಯರು ಬಂದು ಅವನೊಂದಿಗೆ ವಾದಿಸಿದರು. ಈ ಯೆಹೂದ್ಯರು ಸಭಾಮಂದಿರಕ್ಕೆ ಸೇರಿದವರು. ಅದಕ್ಕೆ “ಬಿಡುಗಡೆ ಹೊಂದಿದವರ[a] ಸಭಾಮಂದಿರ” ಎಂದು ಕರೆಯುತ್ತಿದ್ದರು. (ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರಿಗೋಸ್ಕರವಾಗಿಯೂ ಈ ಸಭಾಮಂದಿರವಿತ್ತು.) ಸಿಲಿಸಿಯ ಮತ್ತು ಏಷ್ಯಾದಿಂದ ಬಂದ ಯೆಹೂದ್ಯರೂ ಅವರೊಂದಿಗಿದ್ದರು. ಅವರೆಲ್ಲರೂ ಬಂದು ಅವನೊಂದಿಗೆ ವಾದಮಾಡಿದರು. 10 ಆದರೆ ವಿವೇಕದಿಂದ ಮಾತಾಡಲು ಪವಿತ್ರಾತ್ಮನು ಅವನಿಗೆ ಸಹಾಯಮಾಡಿದನು. ಸ್ತೆಫನನ ಮಾತುಗಳು ಬಹು ಶಕ್ತಿಯುತವಾಗಿದ್ದ ಕಾರಣ ಅವನೊಂದಿಗೆ ವಾದಿಸಲು ಅವರಿಗೆ ಸಾಧ್ಯವಾಗದೆ,
11 “ಸ್ತೆಫನನು ಮೋಶೆಗೂ ದೇವರಿಗೂ ವಿರುದ್ಧವಾಗಿ ಕೆಟ್ಟ ಸಂಗತಿಗಳನ್ನು ಹೇಳುತ್ತಾನೆ; ಅವನ್ನು ನಾವೇ ಕೇಳಿದ್ದೇವೆ!” ಎಂದು ತಿಳಿಸುವಂತೆ ಕೆಲವರಿಗೆ ಹಣಕೊಟ್ಟರು. 12 ಹೀಗೆ ಈ ಯೆಹೂದ್ಯರು ಜನರನ್ನೂ ಯೆಹೂದ್ಯರ ಹಿರಿಯನಾಯಕರನ್ನೂ ಧರ್ಮೋಪದೇಶಕರನ್ನೂ ಗಲಿಬಿಲಿಗೊಳಿಸಿದರು. ಅವರು ಬಹು ಸಿಟ್ಟಿನಿಂದ ಬಂದು ಸ್ತೆಫನನನ್ನು ಬಂಧಿಸಿ ಯೆಹೂದ್ಯನಾಯಕರ ಸಭೆಗೆ ಕೊಂಡೊಯ್ದರು.
13 ಈ ಯೆಹೂದ್ಯರು ಕೆಲವು ಮಂದಿ ಸುಳ್ಳುಸಾಕ್ಷಿಗಳನ್ನು ಕರೆದುಕೊಂಡು ಬಂದು, “ಈ ಮನುಷ್ಯನು ಈ ಪವಿತ್ರಸ್ಥಳದ (ದೇವಾಲಯದ) ವಿರುದ್ಧವಾಗಿಯೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧವಾಗಿಯೂ ಕೆಟ್ಟಸಂಗತಿಗಳನ್ನು ಯಾವಾಗಲೂ ಹೇಳುತ್ತಾನೆ. 14 ನಜರೇತಿನ ಯೇಸು ಈ ದೇವಾಲಯವನ್ನು ಕೆಡವಿ ಮೋಶೆಯ ವಿಧಿಗಳನ್ನು ಬದಲಾಯಿಸುತ್ತಾನೆಂದು ಇವನು ಹೇಳುವುದನ್ನು ನಾವು ಕೇಳಿದ್ದೇವೆ” ಎಂದು ಹೇಳಿಸಿದರು. 15 ಸಭೆಯಲ್ಲಿ ಕುಳಿತಿದ್ದವರೆಲ್ಲರೂ ಸ್ತೆಫನನ ಮುಖವನ್ನು ದಿಟ್ಟಿಸಿ ನೋಡಲು ಅವನ ಮುಖವು ದೇವದೂತನ ಮುಖದಂತೆ ಕಂಗೊಳಿಸಿತು.
Kannada Holy Bible: Easy-to-Read Version. All rights reserved. © 1997 Bible League International