Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 107:1-3

ಐದನೆಯ ಭಾಗ

(ಕೀರ್ತನೆಗಳು 107–150)

107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
    ಆತನ ಪ್ರೀತಿ ಶಾಶ್ವತವಾದದ್ದು!
ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
    ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
    ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.

ಕೀರ್ತನೆಗಳು 107:33-43

33 ಆತನು ನದಿಗಳನ್ನು ಮರಳುಗಾಡನ್ನಾಗಿ ಮಾರ್ಪಡಿಸಿದನು;
    ಹರಿಯುವ ಒರತೆಗಳನ್ನು ತಡೆದು ನಿಲ್ಲಿಸಿದನು.
34 ಆತನು ಫಲವತ್ತಾದ ಭೂಮಿಯನ್ನು ಉಪಯೋಗವಿಲ್ಲದ ಉಪ್ಪುಭೂಮಿಯನ್ನಾಗಿ ಪರಿವರ್ತಿಸಿದನು,
    ಯಾಕೆಂದರೆ ಅಲ್ಲಿ ಕೆಟ್ಟಜನರು ನೆಲೆಸಿದ್ದರು.
35 ಆತನು ಮರಳುಗಾಡನ್ನು ಸರೋವರಗಳುಳ್ಳ ನಾಡನ್ನಾಗಿ ಪರಿವರ್ತಿಸಿದನು;
    ಒಣನೆಲದಿಂದ ನೀರಿನ ಒರತೆಗಳನ್ನು ಹರಿಯಮಾಡಿದನು.
36 ಆತನು ಹಸಿದವರನ್ನು ಒಳ್ಳೆಯ ನಾಡಿಗೆ ನಡೆಸಿದನು.
    ಅವರು ಅಲ್ಲಿ ನೆಲೆಸಿ ಪಟ್ಟಣವನ್ನು ಕಟ್ಟಿದರು.
37 ಅವರು ಹೊಲಗಳಲ್ಲಿ ಬೀಜ ಬಿತ್ತಿ
    ತೋಟಗಳಲ್ಲಿ ದ್ರಾಕ್ಷಾಲತೆಗಳನ್ನು ನೆಟ್ಟು ಒಳ್ಳೆಯ ಸುಗ್ಗಿಗಳನ್ನು ಪಡೆದರು.
38 ಆತನ ಆಶೀರ್ವಾದದಿಂದ ಅವರ ಕುಟುಂಬಗಳು ವೃದ್ಧಿಯಾದವು.
    ಅವರ ಪಶುಗಳು ಅಸಂಖ್ಯಾತಗೊಂಡವು.
39 ವಿಪತ್ತುಗಳಿಂದಲೂ ತೊಂದರೆಗಳಿಂದಲೂ
    ಅವರ ಕುಟುಂಬಗಳು ಚಿಕ್ಕದಾಗಿದ್ದವು; ಬಲಹೀನವಾಗಿದ್ದವು.
40 ಆತನು ಅವರ ನಾಯಕರುಗಳಿಗೆ ಅವಮಾನ ಮಾಡಿದನು;
    ದಾರಿಗಳಿಲ್ಲದ ಅರಣ್ಯದಲ್ಲಿ ಅಲೆದಾಡುವಂತೆ ಅವರನ್ನು ತೊರೆದುಬಿಟ್ಟನು.
41 ಬಳಿಕ ಆತನು ದೀನರನ್ನು ಅವರ ಸಂಕಟದಿಂದ ಬಿಡಿಸಿದನು.
    ಈಗ ಅವರ ಕುಟುಂಬಗಳು ಕುರಿಮಂದೆಗಳಂತೆ ದೊಡ್ಡದಾದವು.
42 ಒಳ್ಳೆಯವರು ಇದನ್ನು ಕಂಡು ಸಂತೋಷಪಡುವರು.
    ದುಷ್ಟರು ಇದನ್ನು ಕಂಡು ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳುವರು.
43 ಜ್ಞಾನಿಯು ಇವುಗಳನ್ನು ನೆನಪು ಮಾಡಿಕೊಂಡು
    ದೇವರ ನಿಜಪ್ರೀತಿಯನ್ನು ಅರ್ಥಮಾಡಿಕೊಳ್ಳುವನು.

ಅರಣ್ಯಕಾಂಡ 11:16-23

16 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಲ್ಲಿ ಹಿರಿಯರೆಂದೂ ಅಧಿಕಾರಿಗಳೆಂದೂ ನೀನು ತಿಳಿದುಕೊಂಡಿರುವ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನಗುಡಾರದ ಬಾಗಿಲಿಗೆ ಕರೆದುತಂದು ಅಲ್ಲೇ ನಿನ್ನೊಡನೆ ನಿಲ್ಲಿಸಿಕೊ. 17 ನಾನು ಅಲ್ಲಿಗೆ ಇಳಿದುಬಂದು ನಿನ್ನ ಸಂಗಡ ಮಾತಾಡುವೆನು. ಅದಲ್ಲದೆ ನಾನು ನಿನಗೆ ಅನುಗ್ರಹಿಸಿದ ಆತ್ಮವನ್ನೇ ಅವರ ಮೇಲೆ ಸುರಿಸುವೆನು. ಆಗ ಸ್ವತಃ ನೀನೇ ಈ ಜನರ ಭಾರವನ್ನು ವಹಿಸಬೇಕಾಗಿರುವುದಿಲ್ಲ. ಈ ಎಪ್ಪತ್ತು ಮಂದಿ ಹಿರಿಯರು ಆ ಭಾರವನ್ನು ಹೊರಲು ನಿನಗೆ ಸಹಾಯ ಮಾಡುವರು.

18 “ಇಸ್ರೇಲರಿಗೆ ಹೀಗೆ ಹೇಳು: ನಾಳೆಗಾಗಿ ನಿಮ್ಮನ್ನು ಪವಿತ್ರರನ್ನಾಗಿ ಮಾಡಿಕೊಳ್ಳಿರಿ. ನಾಳೆ ನೀವು ಮಾಂಸವನ್ನು ತಿನ್ನುವಿರಿ. ‘ನಮಗೆ ಮಾಂಸವನ್ನು ಕೊಡುವವರು ಯಾರು? ನಾವು ಈಜಿಪ್ಟಿನಲ್ಲಿ ಇದಕ್ಕಿಂತಲೂ ಚೆನ್ನಾಗಿದ್ದೆವಲ್ಲಾ’ ಎಂಬ ನಿಮ್ಮ ದೂರನ್ನು ಯೆಹೋವನು ಕೇಳಿದ್ದಾನೆ. ಆದ್ದರಿಂದ ಯೆಹೋವನು ನಿಮಗೆ ಮಾಂಸವನ್ನು ಕೊಡುವನು ಮತ್ತು ನೀವು ತಿನ್ನುವಿರಿ. 19 ನೀವು ಒಂದು ದಿನವಲ್ಲ, ಎರಡು ದಿನವಲ್ಲ, ಐದು ದಿನವಲ್ಲ, ಹತ್ತು ದಿನವಲ್ಲ, ಇಪ್ಪತ್ತು ದಿನವಲ್ಲ, 20 ಒಂದು ತಿಂಗಳು ಪೂರ್ತಿ ಮಾಂಸವನ್ನು ತಿನ್ನುವಿರಿ. ಅದು ನಿಮ್ಮ ಮೂಗಿನಲ್ಲಿ ಓಕರಿಕೆಯಾಗಿ ಹೊರಬರುವ ತನಕ ಮತ್ತು ನಿಮಗೆ ಅಸಹ್ಯವಾಗುವವರೆಗೆ ಅದನ್ನು ತಿನ್ನುವಿರಿ. ನೀವು ನಿಮ್ಮ ಮಧ್ಯದಲ್ಲಿರುವ ಯೆಹೋವನನ್ನು ತಿರಸ್ಕರಿಸಿದ್ದರಿಂದ ಮತ್ತು ‘ನಾವೇಕೆ ಈಜಿಪ್ಟನ್ನು ಬಿಟ್ಟು ಬಂದೆವು?’ ಎಂದು ಆತನ ಮುಂದೆ ದೂರು ಹೇಳಿದ್ದರಿಂದ ಇದು ನಿಮಗೆ ಸಂಭವಿಸುವುದು.”

21 ಅದಕ್ಕೆ ಮೋಶೆ, “ಯೆಹೋವನೇ, ಇಲ್ಲಿ ಆರು ಲಕ್ಷ ಗಂಡಸರು ನನ್ನೊಂದಿಗೆ ಇದ್ದಾರೆ. ಆದಾಗ್ಯೂ ನೀನು ಇವರಿಗೆ ಮಾಂಸ ಕೊಡುವುದಾಗಿಯೂ ಇವರು ಒಂದು ತಿಂಗಳೆಲ್ಲಾ ಅದನ್ನು ತಿನ್ನುವುದಾಗಿಯೂ ನೀನು ಹೇಳುತ್ತಿರುವೆ. 22 ನಾವು ಎಲ್ಲಾ ಕುರಿಗಳನ್ನು, ದನಕರುಗಳನ್ನು ಕೊಂದರೂ ಇಷ್ಟು ಜನರು ಒಂದು ತಿಂಗಳು ತಿನ್ನುವುದಕ್ಕೆ ಸಾಕಾಗದು. ಸಮುದ್ರದಲ್ಲಿರುವ ಮೀನುಗಳೆಲ್ಲವನ್ನು ಹಿಡಿದರೂ ಅದು ಇಷ್ಟು ಜನರಿಗೆ ಸಾಕಾಗದು” ಎಂದು ಹೇಳಿದನು.

23 ಆದರೆ ಯೆಹೋವನು ಮೋಶೆಗೆ, “ಯೆಹೋವನ ಶಕ್ತಿಗೆ ಮಿತಿಯಿಲ್ಲ. ನಾನು ಹೇಳುತ್ತಿರುವ ಸಂಗತಿಗಳು ನಡೆಯುವುದನ್ನು ನೀನು ನೋಡುವೆ” ಎಂದು ಹೇಳಿದನು.

ಅರಣ್ಯಕಾಂಡ 11:31-32

ಲಾವಕ್ಕಿಗಳು

31 ಆಗ ಯೆಹೋವನು ಸಮುದ್ರದ ಕಡೆಯಿಂದ ಬಲವಾದ ಗಾಳಿಯು ಬೀಸುವಂತೆ ಮಾಡಿದನು. ಗಾಳಿಯು ಲಾವಕ್ಕಿಗಳನ್ನು ಹೊತ್ತುಕೊಂಡು ಬಂತು. ಲಾವಕ್ಕಿಗಳು ಪಾಳೆಯದ ಸುತ್ತಲೂ ಹಾರಿಬಂದವು. ಒಬ್ಬನು ಪ್ರತಿಯೊಂದು ದಿಕ್ಕಿನಲ್ಲಿ ಒಂದು ದಿನ ನಡೆಯಬಹುದಾದಷ್ಟು ದೂರದವರೆಗೂ ಲಾವಕ್ಕಿಗಳು ಭೂಮಿಯಿಂದ ಮೂರು ಅಡಿ ಎತ್ತರದಲ್ಲಿ ಹಾರಾಡುತ್ತಿದ್ದವು. 32 ಜನರು ಎದ್ದು ಆ ದಿನವೆಲ್ಲಾ ಮತ್ತು ರಾತ್ರಿಯೆಲ್ಲಾ ಮತ್ತು ಮರುದಿನವೆಲ್ಲಾ ಲಾವಕ್ಕಿಗಳನ್ನು ಕೂಡಿಸಿಕೊಂಡರು. ಸ್ವಲ್ಪ ಕೂಡಿಸಿಕೊಂಡವನು ಅರವತ್ತು ಕಿಲೋಗ್ರಾಂ ಕೂಡಿಸಿಕೊಂಡನು. ಬಳಿಕ ಜನರು ಲಾವಕ್ಕಿಗಳ ಮಾಂಸವನ್ನು ಪಾಳೆಯದ ಸುತ್ತಲೂ ಹರಡಿ ಬಿಸಿಲಿನಲ್ಲಿ ಒಣಗಿಸಿಕೊಂಡರು.

ಎಫೆಸದವರಿಗೆ 4:17-24

ನೀವು ಜೀವಿಸಬೇಕಾದ ರೀತಿ

17 ಪ್ರಭುವಿಗೋಸ್ಕರ ನಾನು ನಿಮಗೆ ಇದನ್ನು ಹೇಳುತ್ತೇನೆ ಮತ್ತು ಎಚ್ಚರಿಸುತ್ತೇನೆ. ಅವಿಶ್ವಾಸಿಗಳಂತೆ ಇನ್ನು ಮೇಲೆ ಜೀವಿಸದಿರಿ. ಅವರ ಆಲೋಚನೆಗಳು ನಿಷ್ಪ್ರಯೋಜಕವಾಗಿವೆ. 18 ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಕಿವಿಗೊಡದ ಕಾರಣ ಅವರಿಗೆ ಏನೂ ಗೊತ್ತಿಲ್ಲ. ಆದ್ದರಿಂದ ದೇವರು ಕೊಡುವ ಜೀವಿತವನ್ನು ಹೊಂದಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. 19 ಅವರಿಗೆ ನಾಚಿಕೆಯೇ ಇಲ್ಲ. ಅವರು ತಮ್ಮ ಜೀವಿತಗಳನ್ನು ದುಷ್ಕೃತ್ಯಗಳಿಗೆ ಉಪಯೋಗಿಸುತ್ತಾರೆ; ಎಲ್ಲಾ ಬಗೆಯ ಕೆಟ್ಟಕಾರ್ಯಗಳನ್ನು ಇನ್ನೂ ಹೆಚ್ಚೆಚ್ಚಾಗಿ ಮಾಡಲು ತವಕಪಡುತ್ತಾರೆ. 20 ಆದರೆ ಕ್ರಿಸ್ತನಿಂದ ನೀವು ಕಲಿತುಕೊಂಡದ್ದು ಅವುಗಳನ್ನಲ್ಲ. 21 ನೀವು ಆತನ ವಿಷಯವಾಗಿ ಕೇಳಿದ್ದೀರೆಂಬುದು ನನಗೆ ಗೊತ್ತಿದೆ. ನೀವು ಆತನಲ್ಲಿರುವುದರಿಂದ ಸತ್ಯವನ್ನು ಕಲಿತುಕೊಂಡಿರಿ. ಹೌದು, ಸತ್ಯವು ಯೇಸುವಿನಲ್ಲಿದೆ. 22 ನೀವು ನಿಮ್ಮ ಹಿಂದಿನ ಕೆಟ್ಟ ನಡತೆಯನ್ನು ಬಿಟ್ಟುಬಿಡಬೇಕೆಂಬುದನ್ನು ಅಂದರೆ ನಿಮ್ಮ ಹಳೆಯ ಸ್ವಭಾವವನ್ನು ತೊರೆದುಬಿಡಬೇಕೆಂಬುದನ್ನು ಕಲಿತುಕೊಂಡಿರಿ. ಜನರು ತಾವು ಮಾಡ ಬಯಸುವ ದುಷ್ಕೃತ್ಯಗಳಿಂದ ವಂಚಿತರಾಗಿರುವುದರಿಂದ ಆ ಹಳೆಯ ಸ್ವಭಾವವು ದಿನದಿಂದ ದಿನಕ್ಕೆ ಮತ್ತಷ್ಟು ಕೆಟ್ಟು ಹೋಗುತ್ತದೆ. 23 ಆದರೆ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಹೊಂದಿಕೊಳ್ಳತಕ್ಕ ರೀತಿಯನ್ನು ನೀವು ಕಲಿತುಕೊಂಡಿರಿ. 24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯವಾದ ನೀತಿಯುಳ್ಳದಾಗಿಯೂ ಪರಿಶುದ್ಧವಾಗಿಯೂ ನಿರ್ಮಿಸಲ್ಪಟ್ಟಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International