Revised Common Lectionary (Complementary)
111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
2 ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
3 ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
ಆತನ ನೀತಿಯು ಶಾಶ್ವತವಾದದ್ದು.
4 ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
5 ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
6 ಆತನು ಅನ್ಯಜನಾಂಗಗಳ ದೇಶವನ್ನು
ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
7 ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
8 ದೇವರ ಆಜ್ಞೆಗಳು ಶಾಶ್ವತವಾಗಿವೆ.
ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
9 ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.
ದೇವರ ಮತ್ತು ಇಸ್ರೇಲರ ನಡುವೆ ಒಡಂಬಡಿಕೆ
24 ದೇವರು ಮೋಶೆಗೆ, “ನೀನು, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿಬಂದು ದೂರದಿಂದ ನನ್ನನ್ನು ಆರಾಧಿಸಬೇಕು. 2 ಬಳಿಕ ನೀನು ಮಾತ್ರ ನನ್ನ ಬಳಿಗೆ ಬರಬೇಕು; ಬೇರೆಯವರು ಬರಕೂಡದು; ಆದರೆ ಉಳಿದ ಜನರು ಬೆಟ್ಟವನ್ನೂ ಏರಕೂಡದು” ಎಂದು ಹೇಳಿದನು.
3 ಮೋಶೆಯು ಯೆಹೋವನ ಎಲ್ಲಾ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲರೂ, “ಯೆಹೋವನ ಆಜ್ಞೆಗಳಿಗೆಲ್ಲಾ ನಾವು ವಿಧೇಯರಾಗುವೆವು” ಎಂದು ಒಂದೇ ಸ್ವರದಿಂದ ಹೇಳಿದರು.
4 ಆದ್ದರಿಂದ ಮೋಶೆ ಯೆಹೋವನ ಆಜ್ಞೆಗಳನ್ನೆಲ್ಲಾ ಒಂದು ಸುರುಳಿಯಲ್ಲಿ ಬರೆದನು. ಮರುದಿನ ಮುಂಜಾನೆ, ಅವನು ಬೇಗನೆ ಎದ್ದು ಬೆಟ್ಟದ ಕೆಳಭಾಗದ ಹತ್ತಿರ, ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಂಬಗಳುಳ್ಳ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ಇಸ್ರೇಲರ ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. 5 ಬಳಿಕ ಮೋಶೆಯು ಯಜ್ಞಗಳನ್ನು ಸಮರ್ಪಿಸುವುದಕ್ಕೆ ಇಸ್ರೇಲರ ಯೌವನಸ್ಥರನ್ನು ಕಳುಹಿಸಿದನು. ಅವರು ಯೆಹೋವನಿಗೆ ಎತ್ತುಗಳನ್ನು ಸರ್ವಾಂಗಹೋಮಗಳಾಗಿಯೂ ಸಮಾಧಾನಯಜ್ಞಗಳಾಗಿಯೂ ಅರ್ಪಿಸಿದರು.
6 ಮೋಶೆಯು ಈ ಪಶುಗಳ ರಕ್ತವನ್ನು ತೆಗೆದುಕೊಂಡು ಅದರಲ್ಲಿ ಅರ್ಧಭಾಗವನ್ನು ಬೋಗುಣಿಗಳಲ್ಲಿ ಹಾಕಿದನು; ಉಳಿದ ಅರ್ಧಭಾಗವನ್ನು ಯಜ್ಞವೇದಿಕೆಯ ಮೇಲೆ ಸುರಿದನು.
7 ವಿಶೇಷ ಒಡಂಬಡಿಕೆಯಿಂದ ಬರೆಯಲ್ಪಟ್ಟಿದ್ದ ಸುರುಳಿಯನ್ನು ಮೋಶೆಯು ಎಲ್ಲಾ ಜನರಿಗೆ ಕೇಳುವಂತೆ ಓದಿದನು. ಆಗ ಜನರು, “ಯೆಹೋವನ ಆಜ್ಞೆಗಳನ್ನೆಲ್ಲ ಅನುಸರಿಸಿ ಆತನಿಗೆ ವಿಧೇಯರಾಗಿರುತ್ತೇವೆ” ಅಂದರು.
8 ಆಗ ಮೋಶೆ ಯಜ್ಞಗಳ ರಕ್ತದಿಂದ ತುಂಬಿದ ಬೋಗುಣಿಯನ್ನು ತೆಗೆದುಕೊಂಡು ಅದರಲ್ಲಿದ್ದ ರಕ್ತವನ್ನು ಜನರ ಮೇಲೆ ಚಿಮಿಕಿಸಿ, “ಈ ಸುರುಳಿಯಲ್ಲಿರುವ ವಾಕ್ಯಗಳಿಗನುಸಾರವಾಗಿ ಯೆಹೋವನು ನಿಮ್ಮೊಡನೆ ಒಂದು ವಿಶೇಷ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆಂಬುದನ್ನು ಈ ರಕ್ತವು ಸೂಚಿಸುತ್ತದೆ” ಎಂದು ಹೇಳಿದನು.
9 ಬಳಿಕ ಮೋಶೆ, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿದರು. 10 ಈ ಜನರು ಇಸ್ರೇಲರ ಯೆಹೋವನನ್ನು ನೋಡಿದರು. ದೇವರು ಆಕಾಶಮಂಡಲದಂತೆ ಅತಿ ನಿರ್ಮಲವಾದ ಇಂದ್ರನೀಲಮಣಿಯ ನೆಲಗಟ್ಟಿನ ಮೇಲೆ ನಿಂತುಕೊಂಡಿದ್ದನು! 11 ಇಸ್ರೇಲರ ನಾಯಕರೆಲ್ಲರೂ ಯೆಹೋವನನ್ನು ನೋಡಿದರು, ಆದರೆ ದೇವರು ಅವರನ್ನು ನಾಶಮಾಡಲಿಲ್ಲ. ಅವರೆಲ್ಲರೂ ದೇವದರ್ಶನ ಮಾಡಿ ಅನ್ನಪಾನಗಳನ್ನು ತೆಗೆದುಕೊಂಡರು.
ರೋಮಿಗೆ ಹೋಗಲು ಪೌಲನ ಯೋಜನೆ
22 ಈ ಕಾರಣದಿಂದಲೇ, ನಿಮ್ಮ ಬಳಿಗೆ ಬಾರದಂತೆ ನನಗೆ ಅನೇಕ ಸಲ ಅಡಚಣೆ ಆಯಿತು.
23 ಆದರೆ ಈಗ ಈ ಪ್ರಾಂತ್ಯಗಳಲ್ಲಿ ನಾನು ಮಾಡಬೇಕಾಗಿದ್ದ ಸೇವೆಯನ್ನು ಮಾಡಿ ಮುಗಿಸಿದ್ದೇನೆ. ಅನೇಕ ವರ್ಷಗಳಿಂದ ನಾನು ನಿಮ್ಮ ಬಳಿಗೆ ಬರಬೇಕೆಂದಿದ್ದೆ. 24 ಆದ್ದರಿಂದ ನಾನು ಸ್ಪೇನಿಗೆ ಹೋಗುವಾಗ ನಿಮ್ಮನ್ನು ಸಂದರ್ಶಿಸುತ್ತೇನೆ. ಹೌದು, ನಾನು ಸ್ಪೇನಿಗೆ ಪ್ರಯಾಣ ಮಾಡುವಾಗ ನಿಮ್ಮನ್ನು ಸಂದರ್ಶಿಸಿ, ಸ್ವಲ್ಪಕಾಲ ನಿಮ್ಮೊಂದಿಗೆ ಸಂತೋಷವಾಗಿ ತಂಗಿರುತ್ತೇನೆಂಬ ನಿರೀಕ್ಷೆ ನನಗಿದೆ. ಬಳಿಕ ನೀವು ನನ್ನ ಪ್ರಯಾಣಕ್ಕೆ ಸಹಾಯ ಮಾಡಬಹದು.
25 ಈಗ ನಾನು ದೇವಜನರಿಗೆ ಸಹಾಯ ಮಾಡುವುಕ್ಕಾಗಿ ಜೆರುಸಲೇಮಿಗೆ ಹೋಗುತ್ತಿದ್ದೇನೆ. 26 ಅಲ್ಲಿನ ದೇವಜನರಲ್ಲಿ ಕೆಲವರು ಬಡವರಾಗಿದ್ದಾರೆ. ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಅಲ್ಲಿನ ಬಡಜನರಿಗಾಗಿ ಸಂತೋಷದಿಂದ ಧನಸಹಾಯ ಮಾಡಿದ್ದಾರೆ. 27 ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಸ್ವಂತ ಇಷ್ಟದಿಂದಲೇ ಈ ಕಾರ್ಯವನ್ನು ಮಾಡಿದ್ದಾರೆ. ಅದು ಅವರ ಕರ್ತವ್ಯವೂ ಹೌದು. ಯೆಹೂದ್ಯರಲ್ಲದ ಅವರು ಯೆಹೂದ್ಯರ ಆತ್ಮಿಕ ಅಶೀರ್ವಾದಗಳಲ್ಲಿ ಪಾಲು ಹೊಂದಿರುವುದರಿಂದ ಅವರು ತಮ್ಮಲ್ಲಿರುವಂಥವುಗಳ ಮೂಲಕ ಅವರಿಗೆ ನೆರವು ನೀಡುವುದು ಅವರ ಹೊಣೆಯಾಗಿದೆ. 28 ಜೆರುಸಲೇಮಿನ ಬಡಜನರಿಗೋಸ್ಕರ ಕೊಟ್ಟಿರುವ ಈ ಹಣವನ್ನೆಲ್ಲಾ ಸುರಕ್ಷಿತವಾಗಿ ಅವರಿಗೆ ತಲುಪಿಸಿದ ಮೇಲೆ ನಾನು ಸ್ಪೇನಿಗೆ ಹೊರಡುವೆನು.
ನಾನು ಸ್ಪೇನಿಗೆ ಪ್ರಯಾಣ ಮಾಡುವಾಗ (ರೋಮಿನಲ್ಲಿ) ಇಳಿದು ನಿಮ್ಮನ್ನು ಸಂದರ್ಶಿಸುವೆನು. 29 ನಾನು ನಿಮ್ಮ ಬಳಿಗೆ ಬರುವಾಗ ಕ್ರಿಸ್ತನ ಆಶೀರ್ವಾದವನ್ನು ಹೇರಳವಾಗಿ ತರುತ್ತೇನೆಂದು ಬಲ್ಲೆನು.
30 ಸಹೋದರ ಸಹೋದರಿಯರೇ, ನೀವು ನನಗೋಸ್ಕರ ದೇವರಲ್ಲಿ ಪ್ರಾರ್ಥಿಸುವುದರ ಮೂಲಕ ನನ್ನ ಸೇವೆಗೆ ಸಹಾಯ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನಮ್ಮ ಪ್ರಭುವಾದ ಯೇಸುವಿನ ನಿಮಿತ್ತವಾಗಿಯೂ ಪವಿತ್ರಾತ್ಮನು ನಮಗೆ ಕೊಡುವ ಪ್ರೀತಿಯ ನಿಮಿತ್ತವಾಗಿಯೂ ನೀವು ಪ್ರಾರ್ಥಿಸಿರಿ. 31 ಜುದೇಯದಲ್ಲಿರುವ ಅವಿಶ್ವಾಸಿಗಳ ಕೈಯಿಂದ ನಾನು ಪಾರಾಗುವಂತೆ ಪ್ರಾರ್ಥಿಸಿರಿ. ನಾನು ಜೆರುಸಲೇಮಿಗೆ ತೆಗೆದುಕೊಂಡು ಹೋಗುತ್ತಿರುವ ಈ ಸಹಾಯಧನವು ಅಲ್ಲಿರುವ ದೇವಮಕ್ಕಳಿಗೆ ಮೆಚ್ಚಿಕೆಯಾಗುವಂತೆ ಪ್ರಾರ್ಥಿಸಿರಿ. 32 ಅನಂತರ, ದೇವರು ಬಯಸುವುದಾದರೆ ನಾನು ನಿಮ್ಮ ಬಳಿಗೆ ಬರುತ್ತೇನೆ. ನಾನು ಸಂತೋಷದಿಂದ ಬಂದು ನಿಮ್ಮ ಸಂಗಡವಿದ್ದು ವಿಶ್ರಾಂತಿಯನ್ನು ಪಡೆಯುತ್ತೇನೆ. 33 ಶಾಂತಿಯನ್ನು ಕೊಡುವ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International