Revised Common Lectionary (Complementary)
10 ಯೆಹೋವನೇ, ನಿನ್ನ ಸೃಷ್ಟಿಯೆಲ್ಲವೂ ನಿನ್ನನ್ನು ಸ್ತುತಿಸುತ್ತವೆ.
ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು.
11 ಅವರು ನಿನ್ನ ರಾಜ್ಯದ ಮಹತ್ವವನ್ನು ಕುರಿತು ಹೇಳುವರು.
ನಿನ್ನ ಪರಾಕ್ರಮವನ್ನು ವರ್ಣಿಸುವರು.
12 ಹೀಗೆ ನಿನ್ನ ಮಹತ್ಕಾರ್ಯಗಳನ್ನು ಇತರ ಜನರು ತಿಳಿದುಕೊಳ್ಳುವರು.
ನಿನ್ನ ರಾಜ್ಯದ ಮಹತ್ವವನ್ನೂ ವೈಭವವನ್ನೂ ಅವರು ತಿಳಿದುಕೊಳ್ಳುವರು.
13 ಯೆಹೋವನೇ, ನಿನ್ನ ರಾಜ್ಯವು ಶಾಶ್ವತವಾಗಿದೆ.
ನೀನು ಎಂದೆಂದಿಗೂ ಆಳುವೆ.
14 ಯೆಹೋವನು ಬಿದ್ದುಹೋಗಿರುವವರನ್ನು ಮೇಲೆತ್ತುವವನೂ
ಕುಗ್ಗಿಹೋದವರನ್ನು ಉದ್ಧರಿಸುವವನೂ ಆಗಿದ್ದಾನೆ.
15 ಎಲ್ಲಾ ಜೀವಿಗಳು ತಮ್ಮ ಆಹಾರಕ್ಕಾಗಿ ನಿನ್ನನ್ನೇ ನೋಡುತ್ತವೆ.
ನೀನು ಸಮಯಕ್ಕೆ ಸರಿಯಾಗಿ ಅವುಗಳಿಗೆ ಆಹಾರವನ್ನು ಕೊಡುವೆ.
16 ನೀನು ಕೈಯನ್ನು ತೆರೆದು
ಜೀವಿಗಳ ಅವಶ್ಯಕತೆಗಳನ್ನೆಲ್ಲಾ ಪೂರೈಸುವೆ.
17 ಯೆಹೋವನ ಕಾರ್ಯಗಳೆಲ್ಲ ನೀತಿಯುಳ್ಳವುಗಳಾಗಿವೆ.
ಆತನ ಪ್ರತಿಯೊಂದು ಕಾರ್ಯದಲ್ಲೂ ಆತನ ಶಾಶ್ವತ ಪ್ರೀತಿ ತೋರಿಬರುವುದು.
18 ಯೆಹೋವನು ತನ್ನ ಭಕ್ತರಿಗೆ ಸಮೀಪವಾಗಿದ್ದಾನೆ.
ಆತನು ತನ್ನನ್ನು ಯಥಾರ್ಥವಾಗಿ ಕರೆಯುವ ಪ್ರತಿಯೊಬ್ಬರಿಗೂ ಸಮೀಪವಾಗಿದ್ದಾನೆ.
ಎಲೀಷ ಮತ್ತು ವಿಷದ ಸಾರು
38 ಎಲೀಷನು ಗಿಲ್ಗಾಲಿಗೆ ಮತ್ತೆ ಬಂದನು. ಆಗ ಆ ದೇಶದಲ್ಲಿ ಬರಗಾಲವಿತ್ತು. ಪ್ರವಾದಿಗಳ ಗುಂಪು ಎಲೀಷನ ಎದುರಿನಲ್ಲಿ ಕುಳಿತಿದ್ದರು. ಎಲೀಷನು ತನ್ನ ಸೇವಕನಿಗೆ, “ಒಂದು ದೊಡ್ಡ ಪಾತ್ರೆಯನ್ನು ಒಲೆಯ ಮೇಲಿಟ್ಟು ಪ್ರವಾದಿಗಳ ಗುಂಪಿಗೆಲ್ಲ ಸಾರನ್ನು ಮಾಡು” ಎಂದು ಹೇಳಿದನು.
39 ಒಬ್ಬನು ಅಡಿಗೆಯ ಸೊಪ್ಪಿಗಾಗಿ ತೋಟಕ್ಕೆ ಹೋದನು. ಅಲ್ಲಿ ಅವನು ಒಂದು ಕಾಡುಬಳ್ಳಿಯಿಂದ ಕಾಡುಸೋರೆ ಕಾಯಿಗಳನ್ನು ಕಿತ್ತುಕೊಂಡು, ಅವುಗಳನ್ನು ತನ್ನ ಮೇಲಂಗಿಯ ಜೇಬಿನಲ್ಲಿ ತುಂಬಿಸಿಕೊಂಡನು. ನಂತರ ಅವನು ಬಂದು, ಆ ಕಾಡುಸೋರೆ ಕಾಯಿಗಳನ್ನು ಪಾತ್ರೆಯಲ್ಲಿ ಹಾಕಿದನು. ಆದರೆ ಪ್ರವಾದಿಗಳ ಗುಂಪಿಗೆ ಅವು ಯಾವ ಜಾತಿಯ ಸೋರೆಕಾಯಿಗಳೆಂಬುದು ತಿಳಿದಿರಲಿಲ್ಲ.
40 ನಂತರ ಅವರು ಸ್ವಲ್ಪ ಸಾರನ್ನು ಜನರಿಗೆ ತಿನ್ನಲು ಬಡಿಸಿದರು. ಆದರೆ ಅವರು ಆ ಸಾರನ್ನು ಊಟಮಾಡಲಾರಂಭಿಸಿದಾಗ, ಅವರು, “ದೇವಮನುಷ್ಯನೇ! ಪಾತ್ರೆಯಲ್ಲಿ ವಿಷವಿದೆ!” ಎಂದು ಎಲೀಷನನ್ನು ಕೂಗಿಕೊಂಡರು. ಆ ಆಹಾರವು ತಿನ್ನಲು ಯೋಗ್ಯವಾಗಿರಲಿಲ್ಲವಾದುದರಿಂದ ಅವರು ಆ ಪಾತ್ರೆಯಿಂದ ಏನನ್ನೂ ತಿನ್ನಲಿಲ್ಲ.
41 ಆದರೆ ಎಲೀಷನು, “ಸ್ವಲ್ಪ ಹಿಟ್ಟನ್ನು ತನ್ನಿ” ಎಂದು ಹೇಳಿದನು. ಅವರು ಎಲೀಷನ ಬಳಿಗೆ ಹಿಟ್ಟನ್ನು ತಂದರು. ಅವನು ಅದನ್ನು ಪಾತ್ರೆಯೊಳಗೆ ಹಾಕಿದನು. ನಂತರ ಎಲೀಷನು, “ಜನರಿಗೆ ಸಾರನ್ನು ಬಡಿಸಿ, ಅವರು ಊಟಮಾಡಲಿ” ಎಂದು ಹೇಳಿದನು.
ಆಗ ಆ ಸಾರಿನಲ್ಲಿ ಯಾವ ದೋಷವೂ ಇರಲಿಲ್ಲ.
31 ಅಷ್ಟರಲ್ಲಿ ಯೇಸುವಿನ ಶಿಷ್ಯರು, “ಗುರುವೇ, ಊಟಮಾಡು” ಎಂದು ಆತನನ್ನು ಒತ್ತಾಯ ಮಾಡಿದರು.
32 ಅದಕ್ಕೆ ಯೇಸು, “ನನ್ನಲ್ಲಿ ಆಹಾರವಿದೆ. ಆ ಆಹಾರದ ಬಗ್ಗೆ ನಿಮಗೇನೂ ಗೊತ್ತಿಲ್ಲ” ಎಂದನು.
33 ಆದ್ದರಿಂದ ಶಿಷ್ಯರು, “ಯಾರಾದರೂ ಆತನಿಗೆ ಮೊದಲೇ ಆಹಾರವನ್ನು ತಂದುಕೊಟ್ಟರೇ?” ಎಂದು ತಮ್ಮತಮ್ಮೊಳಗೆ ಕೇಳತೊಡಗಿದರು.
34 ಯೇಸು, “ನನ್ನನ್ನು ಕಳುಹಿಸಿದಾತನು (ದೇವರು) ನಾನು ಏನು ಮಾಡಬೇಕೆಂದು ಬಯಸುವನೋ ಅದನ್ನು ಮಾಡುವುದೇ ನನಗೆ ಆಹಾರವಾಗಿದೆ. ಆತನು ನನಗೆ ಕೊಟ್ಟಿರುವ ಕೆಲಸವನ್ನು ಪೂರೈಸುವುದೇ ನನಗೆ ಆಹಾರವಾಗಿದೆ. 35 ‘ಸುಗ್ಗಿಗೆ ಇನ್ನೂ ನಾಲ್ಕು ತಿಂಗಳು ಕಾಯಬೇಕು’ ಎಂದು ನೀವು ಹೇಳುವಿರಿ. ಆದರೆ ನಾನು ನಿಮಗೆ ಹೇಳುತ್ತೇನೆ, ನಿಮ್ಮ ಕಣ್ಣುಗಳನ್ನು ತೆರೆಯಿರಿ. ಹೊಲಗಳ ಸುತ್ತಲೆಲ್ಲಾ ನೋಡಿರಿ, ಅವು ಕೊಯ್ಲಿಗೆ ಬಂದಿವೆ. 36 ಈಗಲೂ ಸಹ, ಬೆಳೆಯನ್ನು ಕೊಯ್ಯುವವನಿಗೆ ಕೂಲಿ ದೊರೆಯುತ್ತದೆ. ಅವನು ಬೆಳೆಗಳನ್ನು ನಿತ್ಯಜೀವಕ್ಕಾಗಿ ಕೂಡಿಸುತ್ತಿದ್ದಾನೆ. ಆದ್ದರಿಂದ ಈಗ ಬಿತ್ತುವವರೂ ಮತ್ತು ಕೊಯ್ಯುವವರೂ ಒಟ್ಟಿಗೆ ಸಂತೋಷವಾಗಿರುವರು. 37 ‘ಒಬ್ಬನು ಬಿತ್ತುತ್ತಾನೆ, ಆದರೆ ಮತ್ತೊಬ್ಬನು ಬೆಳೆಯನ್ನು ಕೊಯ್ಯುತ್ತಾನೆ’ ಎಂದು ನಾವು ಹೇಳುವ ನಾಣ್ಣುಡಿ ಸತ್ಯವಾದದ್ದು. 38 ನೀವು ದುಡಿದಿಲ್ಲದ ಬೆಳೆಯನ್ನು ಕೊಯ್ಯುವುದಕ್ಕಾಗಿ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಬೇರೆಯವರು ದುಡಿದರು, ಆದರೆ ಅವರ ದುಡಿಮೆಯಿಂದ ನೀವು ಲಾಭವನ್ನು ಪಡೆಯುತ್ತೀರಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International