Revised Common Lectionary (Complementary)
10 ಯೆಹೋವನೇ, ನಿನ್ನ ಸೃಷ್ಟಿಯೆಲ್ಲವೂ ನಿನ್ನನ್ನು ಸ್ತುತಿಸುತ್ತವೆ.
ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು.
11 ಅವರು ನಿನ್ನ ರಾಜ್ಯದ ಮಹತ್ವವನ್ನು ಕುರಿತು ಹೇಳುವರು.
ನಿನ್ನ ಪರಾಕ್ರಮವನ್ನು ವರ್ಣಿಸುವರು.
12 ಹೀಗೆ ನಿನ್ನ ಮಹತ್ಕಾರ್ಯಗಳನ್ನು ಇತರ ಜನರು ತಿಳಿದುಕೊಳ್ಳುವರು.
ನಿನ್ನ ರಾಜ್ಯದ ಮಹತ್ವವನ್ನೂ ವೈಭವವನ್ನೂ ಅವರು ತಿಳಿದುಕೊಳ್ಳುವರು.
13 ಯೆಹೋವನೇ, ನಿನ್ನ ರಾಜ್ಯವು ಶಾಶ್ವತವಾಗಿದೆ.
ನೀನು ಎಂದೆಂದಿಗೂ ಆಳುವೆ.
14 ಯೆಹೋವನು ಬಿದ್ದುಹೋಗಿರುವವರನ್ನು ಮೇಲೆತ್ತುವವನೂ
ಕುಗ್ಗಿಹೋದವರನ್ನು ಉದ್ಧರಿಸುವವನೂ ಆಗಿದ್ದಾನೆ.
15 ಎಲ್ಲಾ ಜೀವಿಗಳು ತಮ್ಮ ಆಹಾರಕ್ಕಾಗಿ ನಿನ್ನನ್ನೇ ನೋಡುತ್ತವೆ.
ನೀನು ಸಮಯಕ್ಕೆ ಸರಿಯಾಗಿ ಅವುಗಳಿಗೆ ಆಹಾರವನ್ನು ಕೊಡುವೆ.
16 ನೀನು ಕೈಯನ್ನು ತೆರೆದು
ಜೀವಿಗಳ ಅವಶ್ಯಕತೆಗಳನ್ನೆಲ್ಲಾ ಪೂರೈಸುವೆ.
17 ಯೆಹೋವನ ಕಾರ್ಯಗಳೆಲ್ಲ ನೀತಿಯುಳ್ಳವುಗಳಾಗಿವೆ.
ಆತನ ಪ್ರತಿಯೊಂದು ಕಾರ್ಯದಲ್ಲೂ ಆತನ ಶಾಶ್ವತ ಪ್ರೀತಿ ತೋರಿಬರುವುದು.
18 ಯೆಹೋವನು ತನ್ನ ಭಕ್ತರಿಗೆ ಸಮೀಪವಾಗಿದ್ದಾನೆ.
ಆತನು ತನ್ನನ್ನು ಯಥಾರ್ಥವಾಗಿ ಕರೆಯುವ ಪ್ರತಿಯೊಬ್ಬರಿಗೂ ಸಮೀಪವಾಗಿದ್ದಾನೆ.
ಎಲೀಷನು ಪ್ರವಾದಿಯಾದನು
19 ಎಲೀಯನು ಆ ಸ್ಥಳದಿಂದ ಹೊರಟು ಶಾಫಾಟನ ಮಗನಾದ ಎಲೀಷನನ್ನು ಕಂಡುಹಿಡಿಯಲು ಹೋದನು. ಎಲೀಷನು ಹನ್ನೆರಡು ಜೋಡಿ ಎತ್ತುಗಳನ್ನು ತಂದು ಭೂಮಿಯನ್ನು ಉಳುತ್ತಿದ್ದನು. ಎಲೀಯನು ಬಂದಾಗ ಎಲೀಷನು ಹನ್ನೆರಡನೆಯ ಜೋಡಿಯಿಂದ ತಾನಾಗಿ ಭೂಮಿಯನ್ನು ಉಳುತ್ತಿದ್ದನು. ಎಲೀಯನು ಎಲೀಷನ ಹತ್ತಿರಕ್ಕೆ ಹೋಗಿ ತನ್ನ ಮೇಲಂಗಿಯನ್ನು ಎಲೀಷನಿಗೆ ತೊಡಿಸಿದನು. 20 ಎಲೀಷನು ತಕ್ಷಣ ತನ್ನ ಎತ್ತುಗಳನ್ನು ಬಿಟ್ಟು ಎಲೀಯನ ಹಿಂದೆ ಹೋದನು. ಎಲೀಷನು, “ನನ್ನ ತಾಯಿಗೆ ಮುದ್ದಿಟ್ಟು, ತಂದೆಗೆ ನಮಸ್ಕರಿಸಿ, ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಿದನು.
ಎಲೀಯನು, “ಸರಿ, ನಾನು ನಿನ್ನನ್ನು ತಡೆಯುವುದಿಲ್ಲ” ಎಂದು ಉತ್ತರಿಸಿದನು.
21 ನಂತರ ಎಲೀಷನು ಹೋಗಿ ತಾನು ಉಳುತ್ತಿದ್ದ ಎತ್ತುಗಳನ್ನು ವಧಿಸಿ, ಮಾಂಸವನ್ನು ನೊಗದಿಂದಲೇ ಬೇಯಿಸಿ ಜನರೆಲ್ಲರಿಗೆ ಔತಣವನ್ನು ಏರ್ಪಡಿಸಿದನು. ನಂತರ ಅವನು ಎಲೀಯನನ್ನು ಹಿಂಬಾಲಿಸಿ ಅವನ ಸಹಾಯಕನಾದನು.
9 ನಿಮ್ಮ ಬಗ್ಗೆ ಈ ಸಂಗತಿಗಳನ್ನು ಕೇಳಿದ ದಿನದಿಂದ, ನಿಮಗೋಸ್ಕರ ಎಡಬಿಡದೆ ಪ್ರಾರ್ಥಿಸುತ್ತಿದ್ದೇವೆ.
ದೇವರು ಅಪೇಕ್ಷಿಸುವ ಸಂಗತಿಗಳೆಲ್ಲವನ್ನು ನೀವು ಪೂರ್ಣವಾಗಿ ತಿಳಿದುಕೊಳ್ಳಬೇಕೆಂತಲೂ ಆತ್ಮಿಕ ಸಂಗತಿಗಳಲ್ಲಿ ಮಹಾಜ್ಞಾನವನ್ನು ಮತ್ತು ತಿಳುವಳಿಕೆಯನ್ನು ಹೊಂದಿಕೊಳ್ಳಬೇಕೆಂತಲೂ 10 ಪ್ರಭುವಿಗೆ ಯೋಗ್ಯರಾಗಿ ನಡೆದು ಪ್ರತಿಯೊಂದು ವಿಷಯದಲ್ಲಿ ಆತನನ್ನು ಸಂತೋಷಪಡಿಸಬೇಕೆಂತಲೂ ನೀವು ಎಲ್ಲಾ ವಿಧವಾದ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ದೇವಜ್ಞಾನದಲ್ಲಿ ಬೆಳಯಬೇಕೆಂತಲೂ 11 ಆತನ ಮಹಿಮಾಶಕ್ತಿಯಿಂದ ಪರಿಪೂರ್ಣ ಬಲ ಹೊಂದಿ ಆನಂದಪೂರ್ವಕವಾದ ತಾಳ್ಮೆಯನ್ನು, ದೀರ್ಘಶಾಂತಿಯನ್ನು ಯಾವಾಗಲೂ ತೋರಿಸುವವರಾಗಿರಬೇಕೆಂತಲೂ ನಾವು ಪ್ರಾರ್ಥಿಸುತ್ತಿದ್ದೇವೆ.
12 ಆಗ ನೀವು ಆನಂದದಿಂದ ತಂದೆಗೆ ಕೃತಜ್ಞತಾಸ್ತುತಿ ಮಾಡಬಲ್ಲಿರಿ. ಬೆಳಕಿನಲ್ಲಿ ವಾಸಿಸುವ ತನ್ನ ಜನರೆಲ್ಲರಿಗೂ ಆತನು ಸಿದ್ಧಪಡಿಸಿರುವಂಥವುಗಳನ್ನು ಹೊಂದಿಕೊಳ್ಳಲು ಆತನೇ ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದನು. 13 ದೇವರು ನಮ್ಮನ್ನು ಅಂಧಕಾರದ ಶಕ್ತಿಯಿಂದ ಬಿಡುಗಡೆ ಮಾಡಿದ್ದಾನೆ. ಆತನು ನಮ್ಮನ್ನು ತನ್ನ ಪ್ರಿಯ ಮಗನ (ಯೇಸುವಿನ) ರಾಜ್ಯದೊಳಗೆ ಸೇರಿಸಿದ್ದಾನೆ. 14 ಮಗನು ನಮ್ಮ ಪಾಪಗಳಿಗೆ ಪರಿಹಾರ ನೀಡಿದನು. ಆತನಲ್ಲಿಯೇ ನಮ್ಮ ಪಾಪಗಳಿಗೆ ಕ್ಷಮೆ ದೊರೆಯಿತು.
Kannada Holy Bible: Easy-to-Read Version. All rights reserved. © 1997 Bible League International