Revised Common Lectionary (Complementary)
ಕೃತಜ್ಞತಾ ಸ್ತುತಿಗೀತೆ.
100 ಸಮಸ್ತ ಭೂನಿವಾಸಿಗಳೇ,
ಯೆಹೋವನಿಗೆ ಗಾಯನ ಮಾಡಿರಿ!
2 ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡಿರಿ;
ಹರ್ಷಗೀತೆಗಳೊಡನೆ ಆತನ ಸನ್ನಿಧಿಗೆ ಬನ್ನಿರಿ!
3 ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ.
ನಮ್ಮನ್ನು ಸೃಷ್ಟಿಸಿದವನು ಆತನೇ, ನಾವು ಆತನವರು.
ನಾವು ಆತನ ಜನರೂ ಮಂದೆಯೂ ಆಗಿದ್ದೇವೆ.
4 ಕೃತಜ್ಞತಾಗೀತೆಗಳೊಡನೆ ಆತನ ಪಟ್ಟಣಕ್ಕೆ ಬನ್ನಿರಿ.
ಸ್ತುತಿಗೀತೆಗಳೊಡನೆ ಆತನ ಆಲಯಕ್ಕೆ ಬನ್ನಿರಿ.
ಆತನನ್ನು ಸನ್ಮಾನಿಸುತ್ತಾ ಆತನ ಹೆಸರನ್ನು ಕೊಂಡಾಡಿರಿ.
5 ಯೆಹೋವನು ಒಳ್ಳೆಯವನು!
ಆತನ ಪ್ರೀತಿಯು ಶಾಶ್ವತವಾದದ್ದು,
ಆತನ ನಂಬಿಗಸ್ತಿಕೆಯು ನಿರಂತರವಾದದ್ದು.
ಇಸ್ರೇಲರು ದಾವೀದನನ್ನು ರಾಜನನ್ನಾಗಿ ಮಾಡುವರು
5 ಆಗ ಇಸ್ರೇಲಿನ ಕುಲಗಳವರೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು, “ನಾವೆಲ್ಲಾ ಒಂದೇ ಕುಲದವರಾಗಿದ್ದೇವೆ. 2 ಹಿಂದಿನ ದಿನಗಳಲ್ಲಿ, ಸೌಲನು ರಾಜನಾಗಿದ್ದಾಗಲೂ ನಮ್ಮನ್ನು ಯುದ್ಧದಲ್ಲಿ ಮುನ್ನಡೆಸಿದವನು ನೀನೇ. ಯೆಹೋವನು ನಿನ್ನನ್ನು ಕುರಿತು, ‘ನೀನು ನನ್ನ ಜನರಾದ ಇಸ್ರೇಲರ ನಾಯಕನೂ ಪಾಲಕನೂ ಆಗಿರುವೆ’ ಎಂದು ಹೇಳಿದ್ದಾನೆ” ಎಂದರು.
3 ರಾಜನಾದ ದಾವೀದನಿದ್ದ ಹೆಬ್ರೋನಿಗೆ ಇಸ್ರೇಲಿನ ಎಲ್ಲಾ ನಾಯಕರೂ ಬಂದರು. ಹೆಬ್ರೋನಿನಲ್ಲಿ ರಾಜನಾದ ದಾವೀದನು ಯೆಹೋವನ ಸನ್ನಿಧಿಯಲ್ಲಿ ಈ ನಾಯಕರೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಆಗ ನಾಯಕರು ದಾವೀದನನ್ನು ಇಸ್ರೇಲಿನ ರಾಜನನ್ನಾಗಿ ಅಭಿಷೇಕಿಸಿದರು.
4 ದಾವೀದನು ಆಳುವುದಕ್ಕೆ ಪ್ರಾರಂಭಿಸಿದಾಗ ಅವನಿಗೆ ಮೂವತ್ತು ವರ್ಷ ವಯಸ್ಸಾಗಿತ್ತು. ಅವನು ನಲವತ್ತು ವರ್ಷಗಳ ಕಾಲ ಆಳಿದನು. 5 ಅವನು ಏಳು ವರ್ಷ ಆರು ತಿಂಗಳ ಕಾಲ ಹೆಬ್ರೋನಿನಲ್ಲಿದ್ದು ಯೆಹೂದ್ಯರನ್ನು ಆಳಿದನು. ಅವನು ಮೂವತ್ತಮೂರು ವರ್ಷ ಜೆರುಸಲೇಮಿನಲ್ಲಿದ್ದು ಸಮಸ್ತ ಇಸ್ರೇಲನ್ನು ಮತ್ತು ಯೆಹೂದವನ್ನು ಆಳಿದನು.
ದಾವೀದನು ಜೆರುಸಲೇಮ್ ಪಟ್ಟಣವನ್ನು ಗೆಲ್ಲುವನು
6 ದಾವೀದನು ಯೆಬೂಸಿಯರಿಗೆ ವಿರುದ್ಧವಾಗಿ ಜೆರುಸಲೇಮಿಗೆ ತನ್ನ ಜನರೊಂದಿಗೆ ಹೋದನು. (ಯೆಬೂಸಿಯರು ಆ ದೇಶದ ಮೂಲನಿವಾಸಿಗಳು.) ಯೆಬೂಸಿಯರು ದಾವೀದನಿಗೆ, “ನೀನು ನಮ್ಮ ನಗರದೊಳಕ್ಕೆ ಬರಲಾಗದು.[a] ಕುರುಡರು ಮತ್ತು ಕುಂಟರು ಸಹ ನಿನ್ನನ್ನು ತಡೆಯಬಲ್ಲರು” ಎಂದು ಹೇಳಿದರು. (ದಾವೀದನು ಅವರ ನಗರದೊಳಕ್ಕೆ ಪ್ರವೇಶಿಸಲು ಸಮರ್ಥನಲ್ಲವೆಂದು ಅವರು ಈ ರೀತಿ ಹೇಳಿದರು. 7 ಆದರೆ ದಾವೀದನು ಚೀಯೋನ್ ಕೋಟೆಯನ್ನು ವಶಪಡಿಸಿಕೊಂಡನು. ಈ ಕೋಟೆಗೆ ದಾವೀದ ನಗರವೆಂದು ಹೆಸರಾಯಿತು.)
8 ದಾವೀದನು ತನ್ನ ಜನರಿಗೆ ಅಂದು, “ನೀವು ಯೆಬೂಸಿಯರನ್ನು ಸೋಲಿಸಬೇಕೆಂದಿದ್ದರೆ ಜಲಮಾರ್ಗದ ಮೂಲಕ[b] ಹೋಗಿ ಶತ್ರುಗಳಾದ ಕುಂಟರು ಮತ್ತು ಕುರುಡರನ್ನು ಎದುರಿಸಿ” ಎಂದು ಹೇಳಿದನು. ಆದ್ದರಿಂದಲೇ “ಕುರುಡರು ಮತ್ತು ಕುಂಟರು ಮನೆಯೊಳಕ್ಕೆ[c] ಬರಲಾಗದು” ಎಂಬ ನಾಣ್ಣುಡಿ ಉಂಟಾಯಿತು.
9 ದಾವೀದನು ಕೋಟೆಯಲ್ಲಿ ನೆಲೆಸಿದ್ದನು. ಅವನು ಆ ಕೋಟೆಗೆ “ದಾವೀದನ ನಗರ”ವೆಂದು ಕರೆದನು. ದಾವೀದನು ಮಿಲ್ಲೋವನ್ನು ಕಟ್ಟಿಸಿದನು. ಅವನು ನಗರದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದನು. 10 ಸರ್ವಶಕ್ತನಾದ ಯೆಹೋವನು ದಾವೀದನೊಂದಿಗೆ ಇದ್ದುದರಿಂದ ಅವನು ಬಲಶಾಲಿಯಾಗುತ್ತಲೇ ಇದ್ದನು.
11 ತೂರಿನ ರಾಜನಾದ ಹೀರಾಮನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿದನು. ಹೀರಾಮನು ದೇವದಾರು ಮರಗಳನ್ನು, ಬಡಗಿಗಳನ್ನು ಮತ್ತು ಕಲ್ಲಿನಲ್ಲಿ ಕೆತ್ತನೆ ಮಾಡುವ ಶಿಲ್ಪಿಗಳನ್ನೂ ಸಹ ಕಳುಹಿಸಿದನು. ಅವರು ದಾವೀದನಿಗಾಗಿ ಒಂದು ಮನೆಯನ್ನು ಕಟ್ಟಿದರು. 12 ಯೆಹೋವನು ನಿಜವಾಗಿಯೂ ತನ್ನನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದ್ದಾನೆಂಬುದನ್ನೂ ಆತನು ತನ್ನ ಜನರಾದ ಇಸ್ರೇಲರಿಗಾಗಿ ನನ್ನ ರಾಜ್ಯವನ್ನು ಸ್ಥಿರಪಡಿಸಿದ್ದಾನೆಂತಲೂ ದಾವೀದನು ಇದರ ಮೂಲಕ ತಿಳಿದುಕೊಂಡನು.
ಸ್ವರ್ಗದಲ್ಲಿ ಆನಂದ
(ಮತ್ತಾಯ 18:12-14)
15 ಅನೇಕ ಸುಂಕವಸೂಲಿಗಾರರು ಮತ್ತು ಪಾಪಿಗಳು ಯೇಸುವಿನ ಉಪದೇಶವನ್ನು ಕೇಳಲು ಬಂದಿದ್ದರು. 2 ಆಗ ಫರಿಸಾಯರು ಮತ್ತು ಧರ್ಮೋಪದೇಶಕರು, “ನೋಡಿರಿ! ಈ ಮನುಷ್ಯನು (ಯೇಸು) ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರ ಜೊತೆಯಲ್ಲಿ ಊಟಮಾಡುತ್ತಾನೆ!” ಎಂದು ದೂರು ಹೇಳತೊಡಗಿದರು.
3 ಆಗ ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು: 4 “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳಿವೆ ಎಂದು ತಿಳಿದುಕೊಳ್ಳೋಣ. ಆ ಕುರಿಗಳಲ್ಲಿ ಒಂದು ಕಳೆದುಹೋದರೆ, ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಅಲ್ಲೇ ಬಿಟ್ಟು ಕಳೆದುಹೋದ ಒಂದು ಕುರಿಗೋಸ್ಕರ ಹುಡುಕುತ್ತಾ ಹೋಗುವನು. ಆ ಕುರಿಯು ಸಿಕ್ಕುವ ತನಕ ಅವನು ಅದಕ್ಕಾಗಿ ಹುಡುಕುತ್ತಲೇ ಇರುವನು. 5 ಅವನು ಆ ಕುರಿಯನ್ನು ಕಂಡುಕೊಂಡಾಗ ಬಹು ಸಂತೋಷಪಡುವನು. ಅವನು ಆ ಕುರಿಯನ್ನು ತನ್ನ ಮನೆಗೆ ಹೊತ್ತುಕೊಂಡು ಹೋಗುವನು. 6 ಅವನು ತನ್ನ ಸ್ನೇಹಿತರ ಮತ್ತು ನೆರೆಹೊರೆಯವರ ಬಳಿಗೆ ಹೋಗಿ, ‘ನನ್ನೊಡನೆ ಸಂತೋಷಪಡಿರಿ, ಕಳೆದುಹೋದ ನನ್ನ ಕುರಿ ಸಿಕ್ಕಿತು’ ಎಂದು ಹೇಳುವನು. 7 ಅದೇ ರೀತಿಯಲ್ಲಿ, ಒಬ್ಬ ಪಾಪಿ ತನ್ನ ಹೃದಯವನ್ನು ಪರಿವರ್ತಿಸಿಕೊಂಡಾಗ ಸ್ವರ್ಗದಲ್ಲಿ ಬಹಳ ಸಂತೋಷವಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ. ತಮ್ಮ ಹೃದಯಗಳನ್ನು ಪರಿವರ್ತಿಸಲು ಅವಶ್ಯವಿಲ್ಲದ ತೊಂಭತ್ತೊಂಭತ್ತು ಒಳ್ಳೆಯ ಜನರಿಗಿಂತ ಆ ಒಬ್ಬ ಪಾಪಿಯ ವಿಷಯದಲ್ಲಿ ಹೆಚ್ಚು ಸಂತೋಷವಾಗುತ್ತದೆ.
Kannada Holy Bible: Easy-to-Read Version. All rights reserved. © 1997 Bible League International