Revised Common Lectionary (Complementary)
ರಚನೆಗಾರ: ದಾವೀದ.
23 ಯೆಹೋವನೇ ನನಗೆ ಕುರುಬನು.
ನನಗೆ ಕೊರತೆಯೇ ಇಲ್ಲ.
2 ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
3 ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
4 ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
5 ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
6 ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.
ವಿನಾಶವು ಬರುತ್ತಿದೆ
17 ನಿಮ್ಮದಾದ ಎಲ್ಲವನ್ನು ತೆಗೆದುಕೊಂಡು ಇಲ್ಲಿಂದ ಹೊರಡುವುದಕ್ಕೆ ಸಿದ್ಧರಾಗಿರಿ.
ಯೆಹೂದದ ಜನರಾದ ನೀವು ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದೀರಿ.
ವೈರಿಯು ನಗರವನ್ನು ಮುತ್ತಿದ್ದಾನೆ.
18 ಯೆಹೋವನು ಹೇಳುತ್ತಾನೆ:
“ಈ ಸಾರಿ ಯೆಹೂದದ ಜನರನ್ನು ನಾನು ದೇಶದಿಂದ ಹೊರಗೆ ತಳ್ಳುತ್ತೇನೆ.
ಅವರಿಗೆ ನಾನು ನೋವು ಮತ್ತು ಕಷ್ಟಗಳನ್ನು ತರುತ್ತೇನೆ.
ಅವರು ಪಾಠ ಕಲಿಯುವದಕ್ಕೋಸ್ಕರ ನಾನು ಹೀಗೆ ಮಾಡುತ್ತೇನೆ.”
19 ಅಯ್ಯೋ, ನನಗೆ (ಯೆರೆಮೀಯನಿಗೆ) ತುಂಬಾ ಪೆಟ್ಟಾಗಿದೆ.
ನನಗೆ ಗಾಯವಾಗಿದೆ; ನನಗೆ ವಾಸಿಯಾಗುತ್ತಿಲ್ಲ.
ಆದರೂ “ಇದು ನನ್ನ ವ್ಯಾಧಿ, ಇದನ್ನು ನಾನು ಅನುಭವಿಸಬೇಕು”
ಎಂದು ಸಮಾಧಾನ ತಂದುಕೊಂಡೆ.
20 ನನ್ನ ಗುಡಾರವು ಹಾಳಾಗಿದೆ.
ಗುಡಾರದ ಎಲ್ಲಾ ಹಗ್ಗಗಳು ಕಿತ್ತುಹೋಗಿವೆ.
ನನ್ನ ಮಕ್ಕಳು ನನ್ನನ್ನು ಬಿಟ್ಟು
ಹೊರಟುಹೋಗಿದ್ದಾರೆ.
ನನ್ನ ಗುಡಾರವನ್ನು ಹಾಕುವದಕ್ಕೆ ಯಾರೂ ಉಳಿದಿಲ್ಲ.
ನನಗಾಗಿ ಒಂದು ಆಸರೆಯನ್ನು ನಿರ್ಮಿಸುವದಕ್ಕೆ ಯಾರೂ ಉಳಿದಿಲ್ಲ.
21 ಕುರುಬರು ಬುದ್ಧಿಗೇಡಿಗಳಾಗಿದ್ದಾರೆ.
ಅವರು ಯೆಹೋವನನ್ನು ಹುಡುಕುವ ಪ್ರಯತ್ನ ಮಾಡುವುದಿಲ್ಲ.
ಅವರು ಜ್ಞಾನಿಗಳಲ್ಲ,
ಅವರ ಹಿಂಡುಗಳು ಚದರಿಹೋಗುವವು; ಕಳೆದುಹೋಗುವವು.
22 ಕೇಳಿರಿ, ಉತ್ತರ ದಿಕ್ಕಿನಿಂದ
ಬರುತ್ತಿರುವ ಮಹಾಧ್ವನಿಯನ್ನು!
ಇದು ಯೆಹೂದದ ನಗರಗಳನ್ನು ನಾಶಮಾಡುತ್ತದೆ.
ಯೆಹೂದವು ಒಂದು ಬರಿದಾದ ಮರಳುಗಾಡಾಗುವದು, ನರಿಗಳ ನಿವಾಸವಾಗುವುದು.
23 ಯೆಹೋವನೇ, ಮಾನವನ ಜೀವ ಅವನ ಸ್ವಾಧೀನದಲ್ಲಿಲ್ಲವೆಂಬುದು ನನಗೆ ಗೊತ್ತು.
ಜನರಿಗೆ ಸರಿಯಾದ ಜೀವನ ಕ್ರಮಗೊತ್ತಿಲ್ಲ.
24 ಯೆಹೋವನೇ, ನಮ್ಮನ್ನು ತಿದ್ದು,
ಆದರೆ ಕಠೋರನಾಗಬೇಡ,
ಕೋಪದಲ್ಲಿ ನಮ್ಮನ್ನು ದಂಡಿಸಬೇಡ.
25 ನಿನಗೆ ಕೋಪ ಬಂದಿದ್ದರೆ
ಬೇರೆ ಜನಾಂಗಗಳನ್ನು ಶಿಕ್ಷಿಸು.
ಅವರು ನಿನ್ನನ್ನು ಅರಿಯದವರಾಗಿದ್ದಾರೆ; ಗೌರವಿಸದವರಾಗಿದ್ದಾರೆ.
ಅವರು ನಿನ್ನನ್ನು ಆರಾಧಿಸುವುದಿಲ್ಲ.
ಆ ಜನಾಂಗಗಳು ಯಾಕೋಬ್ಯರ ವಂಶವನ್ನು ನಾಶಮಾಡಿದರು.
ಅವರು ಇಸ್ರೇಲನ್ನು ಸಂಪೂರ್ಣವಾಗಿ ನಾಶಮಾಡಿದರು.
ಅವರು ಇಸ್ರೇಲರ ವಾಸಸ್ಥಳವನ್ನು ನಾಶಮಾಡಿದರು.
ಅಥೆನ್ಸಿನಲ್ಲಿ ಪೌಲನು
16 ಪೌಲನು ಅಥೆನ್ಸಿನಲ್ಲಿ ಸೀಲ ತಿಮೊಥೆಯರಿಗಾಗಿ ಎದುರು ನೋಡುತ್ತಿದ್ದನು. ಆ ಪಟ್ಟಣದ ಎಲ್ಲೆಲ್ಲಿಯೂ ವಿಗ್ರಹಗಳಿರುವುದನ್ನು ಕಂಡು ಅವನ ಮನಸ್ಸು ನೊಂದುಹೋಯಿತು. 17 ಸಭಾಮಂದಿರದಲ್ಲಿ ಪೌಲನು ಯೆಹೂದ್ಯರೊಂದಿಗೆ ಮತ್ತು ಯೆಹೂದ್ಯರಾಗಿದ್ದ ಗ್ರೀಕರೊಂದಿಗೆ ಚರ್ಚಿಸಿದನು. ಪಟ್ಟಣದ ವ್ಯಾಪಾರಸ್ಥಳದಲ್ಲಿಯೂ ಪೌಲನು ಕೆಲವು ಜನರೊಂದಿಗೆ ಪ್ರತಿದಿನ ಚರ್ಚಿಸಿದನು. 18 ಎಪಿಕೊರಿಯಾ ಮತ್ತು ಸ್ತೋಯಿಕ ತತ್ವಶಾಸ್ತ್ರಜ್ಞರಲ್ಲಿ ಕೆಲವರು ಅವನೊಂದಿಗೆ ವಾದಿಸಿದರು.
ಅವರಲ್ಲಿ ಕೆಲವರು, “ಈ ಮನುಷ್ಯನಿಗೆ ತಾನು ಯಾವುದರ ಬಗ್ಗೆ ಮಾತಾಡುತ್ತಿದ್ದೇನೆ ಎಂಬುದೇ ನಿಜವಾಗಿಯೂ ತಿಳಿದಿಲ್ಲ. ಅವನು ಏನು ಹೇಳಲು ಪ್ರಯತ್ನಿಸುತ್ತಿದ್ದಾನೆ?” ಎಂದರು. ಯೇಸುವು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದಿದ್ದಾನೆ ಎಂಬ ಸುವಾರ್ತೆಯನ್ನು ಪೌಲನು ಅವರಿಗೆ ಹೇಳುತ್ತಿದ್ದನು. ಆದ್ದರಿಂದ ಅವರು, “ಕೆಲವು ಬೇರೆ ದೇವರುಗಳ ಬಗ್ಗೆ ಅವನು ನಮಗೆ ಹೇಳುತ್ತಿರುವಂತೆ ತೋರುತ್ತಿದೆ” ಎಂದರು.
19 ಅವರು ಪೌಲನನ್ನು ಅರಿಯೊಪಾಗ ನ್ಯಾಯಸಭೆಗೆ ಕರೆದುಕೊಂಡು ಹೋದರು. ಅವರು ಅವನಿಗೆ, “ನೀನು ಉಪದೇಶಿಸುತ್ತಿರುವ ಹೊಸ ತತ್ವವನ್ನು ದಯವಿಟ್ಟು ನಮಗೆ ವಿವರಿಸು. 20 ನೀನು ಹೇಳುತ್ತಿರುವ ಸಂಗತಿಗಳು ನಮಗೆ ಹೊಸದಾಗಿವೆ. ನಾವು ಹಿಂದೆಂದೂ ಈ ಸಂಗತಿಗಳನ್ನು ಕೇಳಿಲ್ಲ. ಈ ಉಪದೇಶದ ಅರ್ಥವನ್ನು ನಾವು ತಿಳಿದುಕೊಳ್ಳ ಬಯಸುತ್ತೇವೆ” ಎಂದು ಹೇಳಿದರು. 21 (ಅಥೆನ್ಸಿನ ಎಲ್ಲಾ ಜನರು ಮತ್ತು ಅಲ್ಲಿ ವಾಸವಾಗಿದ್ದ ಬೇರೆ ದೇಶಗಳವರು ಹೊಸ ಆಲೋಚನೆಗಳ ಬಗ್ಗೆ ಮಾತಾಡುವುದಕ್ಕೂ ಕೇಳುವುದಕ್ಕೂ ಬಹಳ ಇಷ್ಟಪಡುತ್ತಿದ್ದರು.)
22 ಆಗ ಪೌಲನು ಅರಿಯೊಪಾಗ ನ್ಯಾಯಸಭೆಯ ಮುಂದೆ ನಿಂತುಕೊಂಡು ಹೀಗೆಂದನು: “ಅಥೆನ್ಸಿನ ಜನರೇ, ನೀವು ಎಲ್ಲಾ ಸಂಗತಿಗಳಲ್ಲೂ ಬಹು ಧಾರ್ಮಿಕರೆಂದು ನನಗೆ ತೋರುತ್ತದೆ. 23 ನಾನು ನಿಮ್ಮ ಪಟ್ಟಣದಲ್ಲಿ ನಡೆದು ಹೋಗುವಾಗ ನೀವು ಪೂಜಿಸುವ ದೇವತಾ ಪ್ರತಿಮೆಗಳನ್ನು ಕಂಡೆನು. ಒಂದು ಯಜ್ಞವೇದಿಕೆಯ ಮೇಲೆ, ‘ತಿಳಿಯದ ದೇವರಿಗೆ’ ಎಂದು ಬರೆದಿತ್ತು. ನಿಮಗೆ ಗೊತ್ತಿಲ್ಲದ ದೇವರನ್ನು ನೀವು ಆರಾಧಿಸುತ್ತಿದ್ದೀರಿ.
24 “ದೇವರ ಬಗ್ಗೆಯೇ ನಾನು ನಿಮಗೆ ಹೇಳುತ್ತಿದ್ದೇನೆ! ಇಡೀ ಪ್ರಪಂಚವನ್ನು ಮತ್ತು ಅದರಲ್ಲಿರುವ ಪ್ರತಿಯೊಂದನ್ನು ಸೃಷ್ಟಿಮಾಡಿದಾತನೇ ಆ ದೇವರು. ಆತನೇ ಭೂಮ್ಯಾಕಾಶಗಳ ಒಡೆಯನು. ಮನುಷ್ಯರು ನಿರ್ಮಿಸುವ ಗುಡಿಗಳಲ್ಲಿ ಆತನು ಜೀವಿಸುವವನಲ್ಲ. 25 ಮನುಷ್ಯರಿಗೆ ಜೀವವನ್ನೂ ಉಸಿರನ್ನೂ ಸಮಸ್ತವನ್ನೂ ಕೊಡುವಾತನು ಆ ದೇವರೇ. ಆತನಿಗೆ ಜನರ ಸೇವೆಯ ಅಗತ್ಯವೇನೂ ಇಲ್ಲ. ಆತನಿಗೆ ಕೊರತೆಯೆಂಬುದೂ ಇಲ್ಲ. 26 ದೇವರು ಒಬ್ಬ ಮನುಷ್ಯನನ್ನು ಸೃಷ್ಟಿ ಮಾಡುವುದರ ಮೂಲಕ ಮಾನವ ಜನಾಂಗವನ್ನು ಆರಂಭಿಸಿದನು. ಅವನಿಂದ ಬೇರೆಲ್ಲ ಜನರನ್ನು ಉತ್ಪತ್ತಿಮಾಡಿ, ಪ್ರಪಂಚದ ಎಲ್ಲೆಲ್ಲಿಯೂ ಅವರು ವಾಸಿಸುವಂತೆ ಮಾಡಿದನು; ಅವರು ಯಾವಾಗ ಮತ್ತು ಎಲ್ಲೆಲ್ಲಿ ವಾಸಿಸಬೇಕೆಂಬುದನ್ನು ಸರಿಯಾಗಿ ನಿರ್ಧರಿಸಿದನು.
27 “ಜನರು ತನ್ನನ್ನು ಹುಡುಕಬೇಕೆಂಬುದು ದೇವರ ಉದ್ದೇಶವಾಗಿತ್ತು. ತನಗಾಗಿ ಸುತ್ತಮುತ್ತಲೆಲ್ಲಾ ಹುಡುಕಿ ಕಂಡುಕೊಳ್ಳಬಹುದೆಂದು ದೇವರು ಹಾಗೆ ಮಾಡಿದನು. ಆದರೆ ಆತನು ನಮ್ಮಲ್ಲಿ ಯಾರಿಗೂ ಬಹುದೂರವಾಗಿಲ್ಲ. 28 ನಾವು ಆತನೊಂದಿಗೆ ವಾಸಿಸುತ್ತೇವೆ, ನಡೆಯುತ್ತೇವೆ, ಇರುತ್ತೇವೆ. ನಿಮ್ಮವರೇ ಆದ ಕೆಲವು ಲೇಖಕರು, ‘ನಾವು ಆತನ ಸಂತಾನದವರೇ’ ಎಂದು ಹೇಳಿದ್ದಾರೆ.
29 “ನಾವು ದೇವರ ಮಕ್ಕಳಾಗಿದ್ದೇವೆ. ಆದ್ದರಿಂದ ಜನರು ಊಹಿಸಿಕೊಳ್ಳುವ ರೀತಿಯಲ್ಲಾಗಲಿ ನಿರ್ಮಿಸುವ ರೀತಿಯಲ್ಲಾಗಲಿ ದೇವರಿದ್ದಾನೆಂದು ನೀವು ಯೋಚಿಸಕೂಡದು. ಆತನು ಬೆಳ್ಳಿಬಂಗಾರ ಮತ್ತು ಕಲ್ಲುಗಳ ರೂಪದಲ್ಲಿಲ್ಲ. 30 ಹಿಂದಿನ ಕಾಲದಲ್ಲಿ ಜನರು ದೇವರನ್ನು ಅರ್ಥಮಾಡಿಕೊಳ್ಳಲಿಲ್ಲ. ಆದರೆ ದೇವರು ಅದಕ್ಕೆ ಲಕ್ಷ್ಯಕೊಡಲಿಲ್ಲ. ಈಗಲಾದರೋ ಪ್ರಪಂಚದ ಎಲ್ಲಾ ಕಡೆಗಳಲ್ಲಿರುವವರು ಪಶ್ಚಾತ್ತಾಪಪಡಬೇಕೆಂದು ಆತನು ಆಜ್ಞಾಪಿಸುತ್ತಾನೆ. 31 ಪ್ರಪಂಚದ ಜನರೆಲ್ಲರಿಗೂ ನ್ಯಾಯತೀರಿಸುವುದಕ್ಕಾಗಿ ದೇವರು ಒಂದು ದಿನವನ್ನು ಗೊತ್ತುಪಡಿಸಿದ್ದಾನೆ. ಅಂದು ನ್ಯಾಯತೀರಿಸುವುದಕ್ಕಾಗಿ ಆತನು ಒಬ್ಬ ವ್ಯಕ್ತಿಯನ್ನು ಬಹುಕಾಲದ ಹಿಂದೆಯೇ ಆರಿಸಿಕೊಂಡಿದ್ದಾನೆ. ಇದನ್ನು ಎಲ್ಲರಿಗೂ ಖಚಿತಪಡಿಸುವುದಕ್ಕಾಗಿ ಆ ವ್ಯಕ್ತಿಯನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾನೆ.”
Kannada Holy Bible: Easy-to-Read Version. All rights reserved. © 1997 Bible League International