Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 142

ದಾವೀದನು ಗುಹೆಯಲ್ಲಿದ್ದಾಗ ಮಾಡಿದ ಪ್ರಾರ್ಥನೆ. ರಚನೆಗಾರ: ದಾವೀದ.

142 ನಾನು ಯೆಹೋವನಿಗೆ ಮೊರೆಯಿಡುವೆನು;
    ಯೆಹೋವನನ್ನು ಕೂಗಿಕೊಳ್ಳುವೆನು.
ನನ್ನ ಕಷ್ಟಗಳನ್ನೂ ಚಿಂತೆಗಳನ್ನೂ
    ಆತನಿಗೆ ಅರಿಕೆಮಾಡಿಕೊಳ್ಳುವೆನು.
ನನ್ನ ವೈರಿಗಳು ನನಗೆ ಉರುಲನ್ನು ಒಡ್ಡಿದ್ದಾರೆ.
    ನನ್ನ ಆತ್ಮವು ಕುಂದಿಹೋಗಿದೆ.
    ನನ್ನ ಮಾರ್ಗವನ್ನು ತಿಳಿದಿರುವಾತನು ನೀನೇ.

ನಾನು ಸುತ್ತಮುತ್ತ ನೋಡಿದರೂ
    ನನ್ನ ಸ್ನೇಹಿತರಲ್ಲಿ ಯಾರೂ ಕಾಣುತ್ತಿಲ್ಲ.
ಓಡಿಹೋಗಲು ನನಗೆ ಯಾವ ಸ್ಥಳವೂ ಇಲ್ಲ.
    ನನ್ನನ್ನು ರಕ್ಷಿಸಲು ಯಾರೂ ಪ್ರಯತ್ನಿಸುತ್ತಿಲ್ಲ.
ಆದ್ದರಿಂದ ಯೆಹೋವನನ್ನು ಕೂಗಿಕೊಳ್ಳುವೆನು.
    ನನ್ನ ಆಶ್ರಯಸ್ಥಾನವೂ ನೀನೇ,
    ನನ್ನನ್ನು ಬದುಕಿಸಬಲ್ಲಾತನೂ ನೀನೇ ಎಂದು ಆತನಿಗೆ ಮೊರೆಯಿಡುವೆನು.
ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
    ನೀನು ನನಗೆ ಬೇಕೇಬೇಕು.
ನನ್ನನ್ನು ಬೆನ್ನಟ್ಟುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
    ಅವರು ನನಗಿಂತ ಬಹು ಬಲಿಷ್ಠರಾಗಿದ್ದಾರೆ.
ಈ ಉರುಲಿನಿಂದ ಪಾರಾಗಲು ನನಗೆ ಸಹಾಯಮಾಡು.
    ಯೆಹೋವನೇ, ಆಗ ನಾನು ನಿನ್ನ ಹೆಸರನ್ನು ಕೊಂಡಾಡುವೆನು.
ನೀನು ನನ್ನನ್ನು ಕಾಪಾಡಿದ್ದರಿಂದ
    ನೀತಿವಂತರು ನನ್ನೊಂದಿಗೆ ಕೊಂಡಾಡುವರು.

ಆಮೋಸ 9:1-4

ವೇದಿಕೆ ಬದಿಯಲ್ಲಿ ನಿಂತ ಯೆಹೋವನ ದರ್ಶನ

ಯಜ್ಞವೇದಿಕೆಯ ಬಳಿಯಲ್ಲಿ ನನ್ನ ಒಡೆಯನು ನಿಂತಿರುವುದನ್ನು ಕಂಡೆನು. ಆತನು ಹೇಳಿದ್ದೇನೆಂದರೆ,

“ಸ್ತಂಭಗಳ ಮೇಲೆ ಹೊಡೆಯಿರಿ,
    ಆಗ ಕಟ್ಟಡವು ಹೊಸ್ತಿಲಿನ ತನಕ ಕಂಪಿಸುವದು.
ಸ್ತಂಭಗಳು ಜನರ ತಲೆಗಳ ಮೇಲೆ ಕುಸಿದುಬೀಳುವಂತೆ ಮಾಡಿರಿ.
    ಅದರಿಂದ ಸಾಯದೆ ಉಳಿಯುವವರನ್ನು ನಾನು ಖಡ್ಗದಿಂದ ಸಾಯಿಸುವೆನು.
ಅದರಿಂದ ತಪ್ಪಿಸಿಕೊಂಡು ಓಡಿಹೋಗಲು ಒಬ್ಬನು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.
    ಒಬ್ಬನಾದರೂ ತಪ್ಪಿಸಿಕೊಳ್ಳುವುದಿಲ್ಲ.
ಭೂಮಿಯನ್ನು ಅವರು ಅಗೆದು ಅದರೊಳಗೆ ಅವಿತುಕೊಂಡರೆ
    ಅದರೊಳಗಿಂದ ಅವರನ್ನು ಎಳೆದುಹಾಕುವೆನು.
ಆಕಾಶದೊಳಗೆ ಹಾರಿ ತಪ್ಪಸಿಕೊಂಡರೆ
    ಅಲ್ಲಿಂದಲೂ ನಾನು ಅವರನ್ನು ಎಳೆದುಹಾಕುವೆನು.
ಕರ್ಮೆಲ್ ಬೆಟ್ಟದ ತುದಿಯಲ್ಲಿ ಅವರು ಅಡಗಿಕೊಂಡರೆ
    ಅವರನ್ನು ಕಂಡುಹಿಡಿದು ಅಲ್ಲಿಂದ ತೆಗೆದುಬಿಡುವೆನು.
ಸಮುದ್ರ ತಳದಲ್ಲಿ ಅವರು ಅಡಗಿಕೊಂಡರೆ
    ಅವರನ್ನು ಕಚ್ಚುವಂತೆ ನಾನು ಸರ್ಪಕ್ಕೆ ಆಜ್ಞಾಪಿಸುವೆನು.
ಶತ್ರುಗಳು ಅವರನ್ನು ಸೆರೆಹಿಡಿದರೆ
    ನಾನು ಅವರನ್ನು ಕೊಂದುಹಾಕಲು
    ಕತ್ತಿಗೆ ಆಜ್ಞಾಪಿಸುವೆನು.
ಹೌದು ನಾನು ಅವರನ್ನು ಗಮನಿಸುತ್ತಾ ಕಾಯುವೆನು.
    ಅವರಿಗೆ ಒಳ್ಳೆಯದು ಮಾಡುವುದಕ್ಕಾಗಿ ಅಲ್ಲ.
    ಅವರಿಗೆ ಸಂಕಟ ಕೊಡುವುದಕ್ಕಾಗಿ ಅವರನ್ನು ಕಾಯುತ್ತೇನೆ.”

ಅಪೊಸ್ತಲರ ಕಾರ್ಯಗಳು 23:12-35

ಪೌಲನನ್ನು ಕೊಲ್ಲಲು ಕೆಲವು ಯೆಹೂದ್ಯರ ಸಂಚು

12 ಮರುದಿನ ಮುಂಜಾನೆ ಯೆಹೂದ್ಯರಲ್ಲಿ ಕೆಲವರು, ತಾವು ಪೌಲನನ್ನು ಕೊಲ್ಲದ ಹೊರತು ಏನನ್ನೂ ತಿನ್ನುವುದಿಲ್ಲ ಮತ್ತು ಏನನ್ನೂ ಕುಡಿಯುವುದಿಲ್ಲ ಎಂಬುದಾಗಿ ಹರಕೆ ಮಾಡಿಕೊಂಡರು. 13 ಹೀಗೆ ಸುಮಾರು ನಲವತ್ತಕ್ಕಿಂತಲೂ ಹೆಚ್ಚು ಮಂದಿ ಹರಕೆ ಮಾಡಿಕೊಂಡಿದ್ದರು. 14 ಈ ಯೆಹೂದ್ಯರು ಮಹಾಯಾಜಕರ ಮತ್ತು ಯೆಹೂದ್ಯರ ಹಿರಿಯ ನಾಯಕರ ಬಳಿಗೆ ಹೋಗಿ, “ನಾವು ಪೌಲನನ್ನು ಕೊಲ್ಲುವ ತನಕ ತಿನ್ನುವುದೂ ಇಲ್ಲ ಕುಡಿಯುವುದೂ ಇಲ್ಲ ಎಂಬ ಕಠಿಣವಾದ ಹರಕೆ ಮಾಡಿಕೊಂಡಿದ್ದೇವೆ! 15 ಆದ್ದರಿಂದ ಈಗ ನೀವು ಮಾಡಬೇಕಾದದ್ದೇನೆಂದರೆ, ಸೇನಾಧಿಪತಿಗೂ ಎಲ್ಲಾ ಯೆಹೂದ್ಯ ನಾಯಕರಿಗೂ ಒಂದು ಸಂದೇಶವನ್ನು ಕಳುಹಿಸಿಕೊಡಿರಿ. ಪೌಲನಿಗೆ ಇನ್ನೂ ಹೆಚ್ಚು ಪ್ರಶ್ನೆಗಳನ್ನು ಕೇಳಬೇಕಾಗಿರುವುದರಿಂದ ಪೌಲನನ್ನು ನಮ್ಮ ಬಳಿಗೆ ಕರೆದುಕೊಂಡು ಬರಬೇಕೆಂದು ಸೇನಾಧಿಪತಿಗೆ ತಿಳಿಸಿರಿ. ಪೌಲನು ಇಲ್ಲಿಗೆ ಬರುತ್ತಿರುವಾಗಲೇ ನಾವು ಮಾರ್ಗದಲ್ಲಿ ಕಾದುಕೊಂಡಿದ್ದು ಅವನನ್ನು ಕೊಲ್ಲುತ್ತೇವೆ” ಎಂದು ಹೇಳಿದರು.

16 ಆದರೆ ಈ ಯೋಜನೆಯ ಬಗ್ಗೆ ಪೌಲನ ಸೋದರಳಿಯನಿಗೆ ತಿಳಿಯಿತು. ಅವನು ಸೈನ್ಯದ ಕೋಟೆಯೊಳಗೆ ಹೋಗಿ ಈ ಯೋಜನೆಯ ಬಗ್ಗೆ ಪೌಲನಿಗೆ ತಿಳಿಸಿದನು. 17 ಆಗ ಪೌಲನು ಸೇನಾಧಿಕಾರಿಗಳಲ್ಲಿ ಒಬ್ಬನನ್ನು ಕರೆದು, “ಈ ಯೌವನಸ್ಥನನ್ನು ಸೇನಾಧಿಪತಿಯ ಬಳಿಗೆ ಕರೆದುಕೊಂಡು ಹೋಗು. ಇವನು ಒಂದು ಸಂದೇಶವನ್ನು ಅವನಿಗೆ ತಿಳಿಸಬೇಕಾಗಿದೆ” ಎಂದು ಹೇಳಿದನು. 18 ಆದ್ದರಿಂದ ಸೇನಾಧಿಕಾರಿಯು ಪೌಲನ ಸೋದರಳಿಯನನ್ನು ಸೇನಾಧಿಪತಿಯ ಬಳಿಗೆ ಕರೆದುಕೊಂಡು ಹೋದನು. ಆ ಅಧಿಕಾರಿಯು ಸೇನಾಧಿಪತಿಗೆ, “ಈ ಯೌವನಸ್ಥನನ್ನು ನಿನ್ನ ಬಳಿಗೆ ಕರೆದುಕೊಂಡು ಹೋಗಬೇಕೆಂದು ಸೆರೆವಾಸದಲ್ಲಿರುವ ಪೌಲನು ನನ್ನನ್ನು ಕೇಳಿಕೊಂಡನು ಇವನು ನಿನಗೊಂದು ಸಂದೇಶವನ್ನು ತಿಳಿಸಬೇಕೆಂದಿದ್ದಾನೆ” ಎಂದು ಹೇಳಿದನು.

19 ಸೇನಾಧಿಪತಿಯು ಆ ಯೌವನಸ್ಥನನ್ನು ಕೈಹಿಡಿದು ಏಕಾಂತವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ, “ನೀನು ಏನು ತಿಳಿಸಬೇಕೆಂದಿರುವೆ?” ಎಂದು ಕೇಳಿದನು.

20 ಆ ಯೌವನಸ್ಥನು, “ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ಪೌಲನಿಗೆ ಕೇಳಬೇಕೆಂಬ ನೆವವನ್ನು ಹೇಳಿ ನಾಳೆಯ ಆಲೋಚನಾಸಭೆಗೆ ಪೌಲನನ್ನು ಕರೆದುಕೊಂಡುಬರಬೇಕೆಂದು ಯೆಹೂದ್ಯರು ನಿನ್ನನ್ನು ಕೇಳಿಕೊಳ್ಳಲು ನಿರ್ಧರಿಸಿದ್ದಾರೆ. 21 ಆದರೆ ಅವರನ್ನು ನಂಬಬೇಡ! ಪೌಲನನ್ನು ಕೊಲ್ಲುವುದಕ್ಕಾಗಿ ನಲವತ್ತಕ್ಕಿಂತಲೂ ಹೆಚ್ಚು ಮಂದಿ ಯೆಹೂದ್ಯರು ಅಡಗಿಕೊಂಡು ಕಾಯುತ್ತಿದ್ದಾರೆ. ಪೌಲನನ್ನು ಕೊಲ್ಲುವ ತನಕ ತಿನ್ನುವುದೂ ಇಲ್ಲ ಕುಡಿಯುವುದೂ ಇಲ್ಲ ಎಂದು ಅವರೆಲ್ಲರೂ ಹರಕೆ ಮಾಡಿಕೊಂಡಿದ್ದಾರೆ! ಈಗ ಅವರು ನಿನ್ನ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ” ಎಂದು ಹೇಳಿದನು.

22 ಸೇನಾಧಿಪತಿಯು ಯೌವನಸ್ಥನಿಗೆ, “ಅವರ ಯೋಜನೆಯ ಬಗ್ಗೆ ನೀನು ನನಗೆ ಹೇಳಿರುವುದಾಗಿ ಯಾರಿಗೂ ತಿಳಿಸಬೇಡ” ಎಂದು ಹೇಳಿ ಅವನನ್ನು ಕಳುಹಿಸಿಬಿಟ್ಟನು.

ಪೌಲನನ್ನು ಸೆಜರೇಯಕ್ಕೆ ಕಳುಹಿಸಲಾಯಿತು

23 ಬಳಿಕ ಸೇನಾಧಿಪತಿಯು ಇಬ್ಬರು ಸೇನಾಧಿಕಾರಿಗಳನ್ನು ಕರೆದು ಅವರಿಗೆ, “ಸೆಜರೇಯಕ್ಕೆ ಕಳುಹಿಸಿಕೊಡಲು ಇನ್ನೂರು ಮಂದಿ ಸೈನಿಕರನ್ನು ಸಿದ್ಧಪಡಿಸು. ಅಲ್ಲದೆ ಎಪ್ಪತ್ತು ಮಂದಿಯ ಅಶ್ವದಳವನ್ನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಪಡಿಸು. ಈ ರಾತ್ರಿ ಒಂಭತ್ತು ಗಂಟೆಗೆ ಇಲ್ಲಿಂದ ಹೊರಡಲು ನೀವು ಸಿದ್ಧರಾಗಿರಬೇಕು. 24 ಪೌಲನ ಪ್ರಯಾಣಕ್ಕಾಗಿ ಕೆಲವು ಕುದುರೆಗಳನ್ನು ತೆಗೆದುಕೊ. ರಾಜ್ಯಪಾಲನಾದ ಫೇಲಿಕ್ಸನ ಬಳಿಗೆ ಅವನನ್ನು ಸುರಕ್ಷಿತವಾಗಿ ಕೊಂಡೊಯ್ಯಲೇಬೇಕು” ಎಂದು ಹೇಳಿದನು. 25 ಸೇನಾಧಿಪತಿಯು ಒಂದು ಪತ್ರವನ್ನೂ ಬರೆದನು. ಅದರಲ್ಲಿ ಹೀಗೆ ತಿಳಿಸಲಾಗಿತ್ತು:

26 ಕ್ಲಾಡಿಯ ಲೂಸಿಯನಿಂದ ಮಹಾರಾಜಶ್ರೀಗಳಾದ ರಾಜ್ಯಪಾಲ ಫೇಲಿಕ್ಸನಿಗೆ,

ವಂದನೆಗಳು.

27 ಯೆಹೂದ್ಯರು ಈ ಮನುಷ್ಯನನ್ನು ಹಿಡಿದು ಕೊಲ್ಲುವುದರಲ್ಲಿದ್ದರು. ಆದರೆ ಇವನು ರೋಮ್‌ನ ಪ್ರಜೆಯೆಂಬುದು ನನಗೆ ತಿಳಿಯಿತು. ಆದ್ದರಿಂದ ನಾನು ಸೈನಿಕರೊಂದಿಗೆ ಹೋಗಿ ಇವನನ್ನು ಕಾಪಾಡಿದೆನು. 28 ಅವರು ಇವನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆ ಕಾರಣವನ್ನು ತಿಳಿದುಕೊಳ್ಳಲು ನಾನು ನ್ಯಾಯಸಭೆಯ ಮುಂದೆ ನಿಲ್ಲಿಸಿದೆ. 29 ಅಲ್ಲಿ ನನಗೆ ತಿಳಿದುಬಂದದ್ದೇನೆಂದರೆ, ಪೌಲನು ದುಷ್ಕೃತ್ಯಗಳನ್ನು ಮಾಡಿದ್ದಾನೆಂದು ಯೆಹೂದ್ಯರು ಹೇಳಿದರೂ ಅವರ ಆಪಾದನೆಗಳು ಅವರ ಸ್ವಂತ ಯೆಹೂದ್ಯ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟದ್ದಾಗಿದ್ದವು. ಅಲ್ಲದೆ ಇವನನ್ನು ಸೆರೆಮನೆಗಾಗಲಿ ಮರಣದಂಡನೆಗಾಗಲಿ ಗುರಿಪಡಿಸಬಹುದಾದ ಯಾವ ಅಪರಾಧವೂ ಇರಲಿಲ್ಲ. 30 ಆದರೆ ಯೆಹೂದ್ಯರಲ್ಲಿ ಕೆಲವರು ಪೌಲನನ್ನು ಕೊಲ್ಲಲು ಯೋಜನೆ ಮಾಡುತ್ತಿರುವುದು ನನಗೆ ತಿಳಿಯಿತು. ಆದ್ದರಿಂದ ನಾನು ಅವನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ. ಅಲ್ಲದೆ ಅವನ ಮೇಲಿರುವ ದೂರುಗಳನ್ನು ನಿನಗೆ ತಿಳಿಸಬೇಕೆಂದು ನಾನು ಆಪಾದಕರಿಗೂ ಸಹ ತಿಳಿಸಿದ್ದೇನೆ.

31 ಸೇನಾಧಿಪತಿಯ ಆಜ್ಞೆಗನುಸಾರವಾಗಿ ಸೈನಿಕರು ಕಾರ್ಯವೆಸಗಿದರು. ಆ ರಾತ್ರಿ ಸೈನಿಕರು ಪೌಲನನ್ನು ಅಂತಿಪತ್ರಿಯ ಎಂಬ ಪಟ್ಟಣಕ್ಕೆ ಕರೆದುಕೊಂಡು ಹೋದರು. 32 ಮರುದಿನ ಅಶ್ವದಳದವರು ಪೌಲನೊಂದಿಗೆ ಸೆಜರೇಯ ಪಟ್ಟಣಕ್ಕೆ ಹೋದರು. ಆದರೆ ಉಳಿದ ಸೈನಿಕರು ಮತ್ತು ಭರ್ಜಿದಾರರು ಜೆರುಸಲೇಮಿನ ಸೈನ್ಯದ ಕೋಟೆಗೆ ಹಿಂತಿರುಗಿದರು. 33 ಅಶ್ವದಳದವರು ಸೆಜರೇಯ ಪಟ್ಟಣವನ್ನು ಪ್ರವೇಶಿಸಿ, ರಾಜ್ಯಪಾಲನಾದ ಫೇಲಿಕ್ಸನಿಗೆ ಪತ್ರವನ್ನು ಕೊಟ್ಟರು. ಬಳಿಕ ಅವರು ಪೌಲನನ್ನು ಅವನಿಗೆ ಒಪ್ಪಿಸಿದರು.

34 ರಾಜ್ಯಪಾಲನು ಪತ್ರವನ್ನು ಓದಿದನು. ಬಳಿಕ ಅವನು ಪೌಲನಿಗೆ, “ನೀನು ಯಾವ ದೇಶದವನು?” ಎಂದು ಕೇಳಿದಾಗ, ಸಿಲಿಸಿಯದವನೆಂಬುದು ತಿಳಿಯಿತು. 35 ರಾಜ್ಯಪಾಲನು, “ನಿನಗೆ ವಿರೋಧವಾಗಿರುವ ಯೆಹೂದ್ಯರು ಇಲ್ಲಿಗೆ ಬಂದಾಗ, ನಾನು ನಿನ್ನ ವಿಚಾರಣೆ ಮಾಡುತ್ತೇನೆ” ಎಂದು ಹೇಳಿದನು. ಬಳಿಕ ರಾಜ್ಯಪಾಲನು ಪೌಲನನ್ನು ಅರಮನೆಯೊಳಗೆ ಇರಿಸಬೇಕೆಂದು ಆಜ್ಞಾಪಿಸಿದನು. (ಈ ಕಟ್ಟಡವನ್ನು ಹೆರೋದನು ಕಟ್ಟಿಸಿದ್ದನು.)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International