Revised Common Lectionary (Complementary)
8 ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
9 ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.
ಇಸ್ರೇಲಿನ ಶಿಕ್ಷೆ
6 ಯೆಹೋವನು ಹೇಳುವುದೇನೆಂದರೆ, “ಅನೇಕ ಅಪರಾಧಗಳನ್ನು ಮಾಡಿದ ಇಸ್ರೇಲನ್ನು ನಾನು ಖಂಡಿತವಾಗಿಯೂ ದಂಡಿಸುವೆನು. ಯಾಕೆಂದರೆ ಅವರು ಸ್ವಲ್ಪ ಬೆಳ್ಳಿಗಾಗಿ ಒಳ್ಳೆಯವರನ್ನೂ ಮತ್ತು ನಿರಪರಾಧಿಗಳನ್ನೂ ಮಾರಿದರು; ಒಂದು ಜೊತೆ ಕೆರಗಳ ಕ್ರಯಕ್ಕೆ ಬಡ ಜನರನ್ನು ಮಾರಿದರು. 7 ಆ ಬಡಜನರ ಮುಖವನ್ನು ನೆಲದ ಮೇಲೆ ದೂಡಿ ಅವರ ಮೇಲೆ ನಡೆದರು. ಕಷ್ಟ ಅನುಭವಿಸುವ ಜನರ ಮೊರೆಯನ್ನು ಅವರು ಲಾಲಿಸದೆ ಹೋದರು. ತಂದೆಗಳೂ ಗಂಡುಮಕ್ಕಳೂ ಒಬ್ಬ ತರುಣಿಯೊಂದಿಗೇ ಲೈಂಗಿಕ ಸಂಬಂಧವನ್ನಿಟ್ಟುಕೊಂಡರು. ನನ್ನ ಪವಿತ್ರನಾಮವನ್ನು ಹಾಳುಮಾಡಿದರು. 8 ಬಡಜನರ ಬಟ್ಟೆಗಳನ್ನು ತೆಗೆದುಕೊಂಡು ತಾವು ವೇದಿಕೆಯ ಮೇಲೆ ಯಜ್ಞ ಮಾಡುತ್ತಿರುವಾಗ ಆ ಬಟ್ಟೆಗಳ ಮೇಲೆ ಕುಳಿತುಕೊಳ್ಳುವರು. ಬಡವರಿಗೆ ಸಾಲಕೊಟ್ಟು ಅವರು ಬಟ್ಟೆಗಳನ್ನು ಒತ್ತೆಗೆ ತೆಗೆದುಕೊಳ್ಳುವರು. ಅವರು ಜನರಿಗೆ ದಂಡ ವಿಧಿಸಿ, ಆ ಹಣದಿಂದ ದ್ರಾಕ್ಷಾರಸವನ್ನು ಕೊಂಡುಕೊಂಡು ದೇವರ ಆಲಯದಲ್ಲಿ ಕುಡಿಯುವರು.
9 “ಆದರೆ ಅವರ ಎದುರಿನಲ್ಲಿ ಅಮೋರಿಯರನ್ನು ನಾಶಮಾಡಿದವನು ನಾನೇ, ಅಮೋರಿಯರು ದೇವದಾರು ಮರಗಳಂತೆ ಎತ್ತರವೂ, ಅಲ್ಲೊನ್ ಮರಗಳಂತೆ ಬಲಶಾಲಿಗಳೂ ಆಗಿದ್ದರು. ಆದರೆ ನಾನು ಕೆಳಗಿನಿಂದ ಅವರ ಬೇರನ್ನೂ ಮೇಲಿನಿಂದ ಅವರ ಫಲಗಳನ್ನೂ ನಾಶಮಾಡಿದೆನು.
10 “ಈಜಿಪ್ಟ್ ದೇಶದಿಂದ ನಿಮ್ಮನ್ನು ಹೊರತಂದವನು ನಾನೇ. ನಲವತ್ತು ವರ್ಷಗಳ ತನಕ ನಾನು ಅಡವಿಯಲ್ಲಿ ನಿಮ್ಮನ್ನು ನಡಿಸಿದೆನು. ನಾನು ಅಮೋರಿಯರ ದೇಶವನ್ನು ಸ್ವಾಧೀನಪಡಿಸಲು ಅವರಿಗೆ ಸಹಾಯ ಮಾಡಿದೆನು. 11 ನಿಮ್ಮ ಕೆಲವು ಗಂಡುಮಕ್ಕಳನ್ನು ನಾನು ಪ್ರವಾದಿಗಳನ್ನಾಗಿ ಮಾಡಿದೆನು. ಇನ್ನು ಕೆಲವರನ್ನು ನಾಜೀರರನ್ನಾಗಿ ಮಾಡಿದೆನು. ಇಸ್ರೇಲ್ ಜನರೇ, ಇವು ಸತ್ಯವಾದ ಮಾತುಗಳು,” ಇವು ಯೆಹೋವನ ನುಡಿಗಳು. 12 “ಆದರೆ ನೀವು ನಾಜೀರರನ್ನು ದ್ರಾಕ್ಷಾರಸ ಕುಡಿಯುವಂತೆ ಮಾಡಿದಿರಿ. ಪ್ರವಾದಿಗಳನ್ನು ಪ್ರವಾದಿಸಬೇಡಿ ಎಂದು ಹೇಳಿದಿರಿ. 13 ನೀವು ನನಗೆ ಬಹು ಭಾರವಾಗಿದ್ದೀರಿ. ಬಂಡಿಯಲ್ಲಿ ಒತ್ತಿ ತುಂಬಿಸಿದಾಗ ಹೇಗೆ ಬಗ್ಗುತ್ತದೋ ಅದೇ ರೀತಿಯಲ್ಲಿ ನಾನು ಬಹುವಾಗಿ ಬಗ್ಗಿರುತ್ತೇನೆ. ಆದರೆ ನಾನು ನಿಮ್ಮನ್ನು ಅದೇ ರೀತಿಯಲ್ಲಿ ಬಗ್ಗಿಸುತ್ತೇನೆ.[a] 14 ಯಾರೂ ತಪ್ಪಿಸಿಕೊಳ್ಳಲಾರರು. ಅತಿ ವೇಗವಾದ ಓಟಗಾರರೂ ತಪ್ಪಿಸಿಕೊಳ್ಳಲಾರರು. ಬಲಶಾಲಿಗಳಿಗೂ ಶಕ್ತಿ ಸಾಲದು. ಸಿಪಾಯಿಗಳಿಗೂ ತಮ್ಮನ್ನು ಕಾಪಾಡಿಕೊಳ್ಳಲಾಗದು. 15 ಬಿಲ್ಲುಬಾಣ ಹಿಡಿದಿರುವವರೂ ಉಳಿಯರು. ವೇಗದ ಓಟಗಾರರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕುದುರೆ ಮೇಲಿನ ಸವಾರರು ಜೀವಸಹಿತ ತಪ್ಪಿಸಿಕೊಳ್ಳುವುದಿಲ್ಲ. 16 ಆ ಸಮಯದಲ್ಲಿ ಅತಿ ಧೈರ್ಯಶಾಲಿಗಳೂ ರಣವೀರರೂ ಓಡಿಬಿಡುವರು. ತಮ್ಮ ಬಟ್ಟೆಗಳನ್ನು ಧರಿಸಿಕೊಳ್ಳಲೂ ಅವರಿಗೆ ಸಮಯವಿರುವುದಿಲ್ಲ.” ಇವು ಯೆಹೋವನ ನುಡಿ.
2 ನಿಮಗೆ ಸಹಾಯ ಮಾಡಲು ನಾನು ಬಹಳವಾಗಿ ಮಾಡುತ್ತಿರುವ ಪ್ರಯತ್ನ ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ ಇದಲ್ಲದೆ ಲವೊದಿಕೀಯದಲ್ಲಿರುವವರಿಗೆ ಮತ್ತು ನನ್ನನ್ನು ಎಂದೂ ನೋಡಿಲ್ಲದವರಿಗೆ ಸಹ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. 2 ಅವರೆಲ್ಲರೂ ಆಂತರ್ಯದಲ್ಲಿ ಉತ್ತೇಜಿತರಾಗಿ ಪ್ರೀತಿಯಿಂದ ಒಂದಾಗಿರಬೇಕೆಂದು ಮತ್ತು ತಿಳುವಳಿಕೆಯಿಂದ ಬರುವ ದೃಢನಂಬಿಕೆಯಲ್ಲಿ ಶ್ರೀಮಂತರಾಗಿರಬೇಕೆಂದು ಆಶಿಸುತ್ತೇನೆ. ಅಂದರೆ ದೇವರ ನಿಗೂಢ ಸತ್ಯವನ್ನು ಅವರು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಸ್ವತಃ ಕ್ರಿಸ್ತನೇ ಆ ಸತ್ಯ. 3 ಕ್ರಿಸ್ತನಲ್ಲಿ ಸರ್ವಜ್ಞಾನವು ಮತ್ತು ತಿಳುವಳಿಕೆಯು ಬಚ್ಚಿಟ್ಟಿರುವ ನಿಕ್ಷೇಪಗಳಂತಿವೆ.
4 ಯಾವನೂ ನಿಮ್ಮನ್ನು ಸರಿಯೆನಿಸುವ ಸುಳ್ಳು ಮಾತುಗಳಿಂದ ಮೋಸಗೊಳಿಸದಂತೆ ಈ ಸಂಗತಿಗಳನ್ನು ನಿಮಗೆ ಹೇಳಿದ್ದೇನೆ. 5 ಅಲ್ಲಿ ನಾನು ನಿಮ್ಮೊಡನೆ ಇರದಿದ್ದರೂ ನನ್ನ ಮನಸ್ಸು ನಿಮ್ಮೊಡನಿರುತ್ತದೆ. ನಿಮ್ಮ ಕ್ರಮಬದ್ಧವಾದ ನಡತೆಯನ್ನು ನೋಡಲು ಮತ್ತು ಕ್ರಿಸ್ತನಲ್ಲಿ ಇಟ್ಟಿರುವ ದೃಢನಂಬಿಕೆಯನ್ನು ಅರಿಯಲು ಬಹಳ ಸಂತೋಷಪಡುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International