Revised Common Lectionary (Complementary)
81 ನಿನ್ನ ರಕ್ಷಣೆಗಾಗಿ ಕಾಯುತ್ತಾ ಸಾಯುವಂತಾಗಿದ್ದೇನೆ.
ನಿನ್ನ ವಾಕ್ಯಗಳಲ್ಲಿಯೇ ಭರವಸವಿಟ್ಟಿದ್ದೇನೆ.
82 ನಿನ್ನ ವಾಗ್ದಾನಗಳಿಗಾಗಿ ಎದುರುನೋಡುತ್ತಾ ನನ್ನ ಕಣ್ಣುಗಳು ಆಯಾಸಗೊಳ್ಳುತ್ತಿವೆ.
ನೀನು ಯಾವಾಗ ನನ್ನನ್ನು ಸಂತೈಸುವೆ?
83 ಬಿಸಾಕಲ್ಪಟ್ಟ ದ್ರಾಕ್ಷಾರಸದ ಬುದ್ದಲಿಯಂತಿದ್ದೇನೆ,
ಆದರೂ ನಾನು ನಿನ್ನ ಕಟ್ಟಳೆಗಳನ್ನು ಮರೆಯುವುದಿಲ್ಲ.
84 ನಾನು ಇನ್ನೆಷ್ಟುಕಾಲ ಬದುಕಲಿ?
ನನ್ನನ್ನು ಹಿಂಸಿಸುವವರನ್ನು ಯಾವಾಗ ದಂಡಿಸುವೆ?
85 ನಿನ್ನ ಕಟ್ಟಳೆಗಳಿಗೆ ವಿರೋಧವಾಗಿ
ಗರ್ವಿಷ್ಠರು ನನಗೆ ಗುಂಡಿಗಳನ್ನು ಅಗೆದಿದ್ದಾರೆ.
86 ನಿನ್ನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
ಅವರಾದರೋ ನನ್ನನ್ನು ನಿಷ್ಕಾರಣವಾಗಿ ಹಿಂಸಿಸುತ್ತಾರೆ;
ನನಗೆ ಸಹಾಯಮಾಡು!
87 ಅವರು ನನ್ನನ್ನು ನಾಶಮಾಡಿಯೇ ಬಿಟ್ಟಿದ್ದರು.
ನಾನಾದರೋ ನಿನ್ನ ನಿಯಮಗಳನ್ನು ಮರೆತುಬಿಡಲೇ ಇಲ್ಲ.
88 ನಿನ್ನ ಶಾಶ್ವತ ಪ್ರೀತಿಯನ್ನು ತೋರಿ ನನ್ನನ್ನು ಉಜ್ಜೀವಿಸಮಾಡು.
ಆಗ, ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗುವೆನು.
14 ಯೆಹೋವನು ಹೇಳಿದನು: “ಪ್ರಮಾಣ ಮಾಡಬೇಕಾದರೆ ಜನರು ‘ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದ ಯೆಹೋವನ ಜೀವದಾಣೆ’ ಎಂದು ಹೇಳುತ್ತಾರೆ. ಒಂದು ಕಾಲ ಬರಲಿದೆ. 15 ಆಗ ಅವರು ‘ಇಸ್ರೇಲರನ್ನು ಉತ್ತರದ ನಾಡಿನಿಂದಲೂ ಎಲ್ಲಾ ದೇಶಗಳಿಂದಲೂ ಹೊರತಂದ ಯೆಹೋವನ ಜೀವದಾಣೆ.’ ಇಸ್ರೇಲರನ್ನು ನಾನು ಅವರ ಪೂರ್ವಿಕರಿಗೆ ಕೊಟ್ಟ ದೇಶಕ್ಕೆ ಮತ್ತೆ ಕರೆದುಕೊಂಡು ಬರುವೆನು. ಆದ್ದರಿಂದಲೇ ಜನರು ಹೀಗೆ ಹೇಳುವರು.”
16 ಯೆಹೋವನು, “ನಾನು ಅನೇಕ ಮೀನುಗಾರರನ್ನು ಈ ಪ್ರದೇಶಕ್ಕೆ ಕರೆಸುವೆನು. ಆ ಮೀನುಗಾರರು ಯೆಹೂದದ ಜನರನ್ನು ಬಂಧಿಸುವರು. ಇದಾದ ಮೇಲೆ ನಾನು ಹಲವಾರು ಜನ ಬೇಟೆಗಾರರನ್ನು ಈ ಪ್ರದೇಶಕ್ಕೆ ಕರೆಸುವೆನು. ಆ ಬೇಟೆಗಾರರು[a] ಪ್ರತಿಯೊಂದು ಪರ್ವತ, ಬೆಟ್ಟ ಮತ್ತು ಬಂಡೆಗಳ ಸಂದುಗೊಂದುಗಳಲ್ಲಿ ಯೆಹೂದ್ಯರನ್ನು ಬೇಟೆಯಾಡುವರು. 17 ಅವರು ಮಾಡುವ ಪಾಪಕೃತ್ಯಗಳು ನನಗೆ ಕಾಣಿಸುತ್ತಿವೆ. ಯೆಹೂದದ ಜನರು ತಾವು ಮಾಡುವದನ್ನು ನನ್ನಿಂದ ಮುಚ್ಚಿಡಲು ಸಾಧ್ಯವಿಲ್ಲ. ಅವರ ಪಾಪವು ನನಗೆ ಗೊತ್ತಾಗುವುದು. 18 ಅವರು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ಯೆಹೂದದ ಜನರನ್ನು ಶಿಕ್ಷಿಸುತ್ತೇನೆ. ಪ್ರತಿಯೊಂದು ಪಾಪಕ್ಕಾಗಿ ನಾನು ಅವರನ್ನು ಎರಡು ಸಲ ಶಿಕ್ಷಿಸುತ್ತೇನೆ. ಅವರು ನನ್ನ ದೇಶವನ್ನು ‘ಹೊಲಸು’ ಮಾಡಿದ್ದಕ್ಕಾಗಿ ನಾನು ಹೀಗೆ ಮಾಡುತ್ತೇನೆ. ಅವರು ತಮ್ಮ ಭಯಂಕರವಾದ ವಿಗ್ರಹಗಳಿಂದ ನನ್ನ ಪ್ರದೇಶವನ್ನು ‘ಹೊಲಸು’ ಮಾಡಿದ್ದಾರೆ. ನಾನು ಆ ವಿಗ್ರಹಗಳನ್ನು ದ್ವೇಷಿಸುತ್ತೇನೆ. ಆದರೆ ಅವರು ತಮ್ಮ ವಿಗ್ರಹಗಳಿಂದ ನನ್ನ ದೇಶವನ್ನು ತುಂಬಿಸಿಬಿಟ್ಟಿದ್ದಾರೆ.”
19 ಯೆಹೋವನೇ, ನೀನೇ ನನ್ನ ಬಲವಾಗಿರುವೆ. ನನ್ನ ರಕ್ಷಕನಾಗಿರುವೆ.
ಕಷ್ಟ ಬಂದಾಗ ಓಡಿಬಂದು ಆಶ್ರಯ ಪಡೆಯಲು ಸುರಕ್ಷಿತ ಸ್ಥಳವಾಗಿರುವೆ.
ಜಗತ್ತಿನ ಎಲ್ಲಾ ಭಾಗಗಳ ಜನಾಂಗದ ಜನರು ನಿನ್ನಲ್ಲಿಗೆ ಬರುವರು.
ಅವರು, “ನಮ್ಮ ಪೂರ್ವಿಕರು ಸುಳ್ಳುದೇವರುಗಳನ್ನಿಟ್ಟುಕೊಂಡಿದ್ದರು.
ಅವರು ಆ ನಿರರ್ಥಕವಾದ ವಿಗ್ರಹಗಳನ್ನು ಪೂಜಿಸಿದರು.
ಆದರೆ ಆ ವಿಗ್ರಹಗಳು ಅವರಿಗೆ ಕೊಂಚವೂ ಸಹಾಯ ಮಾಡಲಿಲ್ಲ” ಎಂದು ಹೇಳುವರು.
20 ಜನರು ನಿಜವಾದ ದೇವರುಗಳನ್ನು ಮಾಡಬಲ್ಲರೇ?
ಇಲ್ಲ, ಅವರು ವಿಗ್ರಹಗಳನ್ನು ಮಾಡಬಹುದು.
ಆದರೆ ಆ ವಿಗ್ರಹಗಳು ನಿಜವಾದ ದೇವರುಗಳಲ್ಲ.
21 “ವಿಗ್ರಹಗಳನ್ನು ಮಾಡುವ ಜನರಿಗೆ ನಾನು ಪಾಠ ಕಲಿಸುತ್ತೇನೆ.
ಈಗಲೇ ನಾನು ಅವರಿಗೆ ನನ್ನ ಶಕ್ತಿಯ ಬಗ್ಗೆ ಮತ್ತು ನನ್ನ ಬಲದ ಬಗ್ಗೆ ಕಲಿಸುವೆನು.
ಆಗ ನಾನು ದೇವರೆಂಬುದು ಅವರಿಗೆ ತಿಳಿಯುವುದು.
ನಾನೇ ಯೆಹೋವನು ಎಂಬುದು ಅವರಿಗೆ ಗೊತ್ತಾಗುವುದು.
ಯೇಸು ಮತ್ತು ಆತನ ಸಹೋದರರು
7 ಇದಾದ ಮೇಲೆ, ಯೇಸು ಗಲಿಲಾಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದನು. ಜುದೇಯದಲ್ಲಿ ಸಂಚರಿಸಲು ಯೇಸುವಿಗೆ ಇಷ್ಟವಿರಲಿಲ್ಲ. ಏಕೆಂದರೆ ಅಲ್ಲಿನ ಯೆಹೂದ್ಯರು ಆತನನ್ನು ಕೊಲ್ಲಲು ಅವಕಾಶಕ್ಕಾಗಿ ಕಾಯುತ್ತಿದ್ದರು. 2 ಆಗ ಯೆಹೂದ್ಯರ ಪರ್ಣಕುಟೀರಗಳ ಹಬ್ಬದ ಸಮಯವಾಗಿತ್ತು. 3 ಆದ್ದರಿಂದ ಯೇಸುವಿನ ಸಹೋದರರು ಆತನಿಗೆ, “ನೀನು ಇಲ್ಲಿಂದ ಜುದೇಯಕ್ಕೆ ಹೋಗು. ಆಗ ಅಲ್ಲಿರುವ ನಿನ್ನ ಹಿಂಬಾಲಕರು ನೀನು ಮಾಡುವ ಅದ್ಭುತಕಾರ್ಯಗಳನ್ನು ನೋಡುವರು. 4 ತನ್ನ ಬಗ್ಗೆ ಜನರಿಗೆ ತಿಳಿಯಬೇಕೆಂದು ಅಪೇಕ್ಷಿಸುವವನು ತಾನು ಮಾಡುವ ಕಾರ್ಯಗಳನ್ನು ಮರೆಮಾಡಕೂಡದು. ನಿನ್ನನ್ನು ಈ ಲೋಕಕ್ಕೆ ತೋರಿಸಿಕೊ. ನೀನು ಮಾಡುವ ಕಾರ್ಯಗಳನ್ನು ಅವರು ನೋಡಲಿ” ಎಂದು ಹೇಳಿದರು. 5 (ಯೇಸುವಿನ ಸಹೋದರರು ಸಹ ಆತನನ್ನು ನಂಬಲಿಲ್ಲ.)
6 ಯೇಸು ತನ್ನ ಸಹೋದರರಿಗೆ, “ನನಗೆ ಸರಿಯಾದ ಸಮಯವು ಇನ್ನೂ ಬಂದಿಲ್ಲ. ನಿಮಗಾದರೋ ಹೋಗಲು ಎಲ್ಲಾ ಸಮಯವೂ ಸರಿಯಾಗಿರುತ್ತದೆ. 7 ಈ ಲೋಕವು ನಿಮ್ಮನ್ನು ದ್ವೇಷಿಸಲಾರದು. ಆದರೆ ಈ ಲೋಕವು ನನ್ನನ್ನು ದ್ವೇಷಿಸುತ್ತದೆ. ಏಕೆಂದರೆ ನಾನು ಈ ಲೋಕದ ಜನರಿಗೆ, ಅವರು ಮಾಡುತ್ತಿರುವುದು ಕೆಟ್ಟಕಾರ್ಯಗಳೆಂದು ಹೇಳುವೆನು. 8 ಆದ್ದರಿಂದ ನೀವು ಹಬ್ಬಕ್ಕೆ ಹೋಗಿರಿ. ನಾನು ಈ ಹಬ್ಬಕ್ಕೆ ಹೋಗುವುದಿಲ್ಲ. ನನಗೆ ಸರಿಯಾದ ಸಮಯವು ಇನ್ನೂ ಬಂದಿಲ್ಲ” ಎಂದು ಹೇಳಿದನು. 9 ಯೇಸು ಹೀಗೆ ಹೇಳಿ ಗಲಿಲಾಯದಲ್ಲೇ ಉಳಿದುಕೊಂಡನು.
Kannada Holy Bible: Easy-to-Read Version. All rights reserved. © 1997 Bible League International