Revised Common Lectionary (Complementary)
ಸ್ತುತಿಗೀತೆ. ರಚನೆಗಾರರು: ಕೋರಹೀಯರಿಗೆ ಸೇರಿದ ಜೇರಹ ಕುಟುಂಬದ ಹೇಮಾನ.
88 ಯೆಹೋವ ದೇವರೇ, ನೀನೇ ನನ್ನ ರಕ್ಷಕನು.
ಹಗಲಿರುಳು ನಿನಗೆ ಪ್ರಾರ್ಥಿಸುತ್ತಿದ್ದೇನೆ.
2 ನನ್ನ ಪ್ರಾರ್ಥನೆಗಳಿಗೆ ದಯವಿಟ್ಟು ಗಮನಕೊಡು.
ಕರುಣೆಗೋಸ್ಕರ ನಾನಿಡುವ ಮೊರೆಗಳನ್ನು ಆಲಿಸು.
3 ನನ್ನ ಜೀವವು ನೋವಿನಿಂದ ತುಂಬಿಹೋಯಿತು.
ಮರಣವು ನನಗೆ ಸಮೀಪವಾಗಿದೆ.
4 ಜನರು ನನ್ನನ್ನು ಸತ್ತವನಂತೆಯೂ
ಬದುಕಲಾರದ ಬಲಹೀನನಂತೆಯೂ ಪರಿಗಣಿಸಿದ್ದಾರೆ.
5 ಸತ್ತವರ ಮಧ್ಯದಲ್ಲಿ ನನಗಾಗಿ ಹುಡುಕು.
ಸಮಾಧಿಯಲ್ಲಿ ಬಿದ್ದಿರುವ ಶವದಂತಾಗಿದ್ದೇನೆ,
ನೀನು ಮರೆತುಬಿಟ್ಟ ಸತ್ತ ಜನರಂತೆ ಆಗಿದ್ದೇನೆ.
ನಿನ್ನಿಂದಲೂ ನಿನ್ನ ಪರಿಪಾಲನೆಯಿಂದಲೂ ದೂರವಾದವನಾಗಿದ್ದೇನೆ.
6 ನೀನು ನನ್ನನ್ನು ಪಾತಾಳಕ್ಕೆ ದಬ್ಬಿರುವೆ;
ನನ್ನನ್ನು ಕತ್ತಲೆಯ ಸ್ಥಳಕ್ಕೆ ನೂಕಿರುವೆ.
7 ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದಲೇ
ನನ್ನನ್ನು ಶಿಕ್ಷಿಸಿದೆ.
8 ಸ್ನೇಹಿತರು ನನ್ನನ್ನು ತೊರೆದುಬಿಟ್ಟರು.
ಹೊಲೆಯಾದ ಮನುಷ್ಯನಂತೆ ಅವರೆಲ್ಲರೂ ನನ್ನನ್ನು ದೂರ ಮಾಡಿದ್ದಾರೆ.
ನನ್ನನ್ನು ಮನೆಯೊಳಗೆ ದೊಬ್ಬಿ ಬೀಗ ಹಾಕಿದ್ದಾರೆ; ನಾನು ಹೊರಗೆ ಹೋಗಲಾರೆನು.
9 ನನ್ನ ಎಲ್ಲಾ ಸಂಕಟಗಳಿಂದ ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ.
ಯೆಹೋವನೇ, ನಾನು ನಿನಗೆ ಎಡಬಿಡದೆ ಪ್ರಾರ್ಥಿಸುವೆನು!
ನನ್ನ ಕೈಗಳನ್ನು ಎತ್ತಿ ನಿನಗೆ ಪ್ರಾರ್ಥಿಸುವೆನು!
10 ಯೆಹೋವನೇ, ಸತ್ತ ಜನರಿಗಾಗಿ ನೀನು ಮಹತ್ಕಾರ್ಯಗಳನ್ನು ಮಾಡುವೆಯಾ?
ಇಲ್ಲ! ದೆವ್ವಗಳು ಎದ್ದುನಿಂತು ನಿನ್ನನ್ನು ಕೊಂಡಾಡುತ್ತವೆಯೋ? ಇಲ್ಲ!
11 ಸತ್ತ ಜನರು ತಮ್ಮ ಸಮಾಧಿಗಳಲ್ಲಿ ನಿನ್ನ ಪ್ರೀತಿಯ ಬಗ್ಗೆ ಮಾತಾಡಲಾರರು.
ಸತ್ತವರು, ಸತ್ತವರ ಲೋಕದಲ್ಲಿ ನಿನ್ನ ನಂಬಿಗಸ್ತಿಕೆಯ ಬಗ್ಗೆ ಮಾತಾಡಲಾರರು.
12 ಸತ್ತು ಕತ್ತಲೆಯಲ್ಲಿ ಬಿದ್ದಿರುವ ಜನರು ನಿನ್ನ ಅದ್ಭುತಕಾರ್ಯಗಳನ್ನು ನೋಡಲಾರರು.
ಸತ್ತವರು, ಮರೆಯಲ್ಪಟ್ಟವರ ಲೋಕದಲ್ಲಿ ನಿನ್ನ ನೀತಿಯ ಬಗ್ಗೆ ಮಾತಾಡಲಾರರು.
13 ಯೆಹೋವನೇ, ನಿನ್ನ ಸಹಾಯಕ್ಕಾಗಿ ಮೊರೆಯಿಡುತ್ತಿದ್ದೇನೆ.
ಪ್ರತಿ ಮುಂಜಾನೆಯೂ ನಿನಗೆ ಪ್ರಾರ್ಥಿಸುತ್ತಿದ್ದೇನೆ.
14 ಯೆಹೋವನೇ, ನೀನು ನನ್ನನ್ನು ತೊರೆದುಬಿಟ್ಟಿದ್ದೇಕೆ?
ನೀನು ನನಗೆ ಕಿವಿಗೊಡದಿರುವುದೇಕೆ?
15 ನಾನು ಚಿಕ್ಕಂದಿನಿಂದಲೂ ಬಲಹೀನನಾಗಿದ್ದೇನೆ ಮತ್ತು ಕಾಯಿಲೆಯವನಾಗಿದ್ದೇನೆ.
ನಿನ್ನ ಕೋಪದಿಂದ ನಾನು ಸಂಕಟಪಡುತ್ತಿರುವೆ.
ನಾನು ನಿಸ್ಸಹಾಯನಾಗಿರುವೆ.
16 ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದ
ನಿನ್ನ ದಂಡನೆಯು ನನ್ನನ್ನು ಕೊಲ್ಲುತ್ತಿದೆ.
17 ಬಾಧೆಗಳೂ ನೋವುಗಳೂ ಯಾವಾಗಲೂ ನನ್ನೊಂದಿಗಿವೆ.
ಬಾಧೆಗಳಿಂದಲೂ ನೋವುಗಳಿಂದಲೂ ಮುಳುಗಿ ಹೋಗುತ್ತಿದ್ದೇನೆ.
18 ಯೆಹೋವನೇ, ಸ್ನೇಹಿತರೆಲ್ಲರನ್ನೂ ಪ್ರಿಯರನ್ನೂ ನೀನು ನನ್ನಿಂದ ದೂರಮಾಡಿದೆ.
ಕೇವಲ ಕತ್ತಲೆಯೊಂದೇ ನನ್ನೊಂದಿಗೆ ಉಳಿದುಕೊಂಡಿದೆ.
ಹಿಜ್ಕೀಯನಿಗೆ ಕಾಯಿಲೆ
20 ಆ ಸಮಯದಲ್ಲಿ ಹಿಜ್ಕೀಯನಿಗೆ ಕಾಯಿಲೆಯಾಗಿ ಸತ್ತಂತಾದನು. ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಹಿಜ್ಕೀಯನ ಬಳಿಗೆ ಹೋಗಿ, “ಯೆಹೋವನು ಹೀಗೆನ್ನುತ್ತಾನೆ. ‘ನಿನ್ನ ಮನೆಯನ್ನು ವ್ಯವಸ್ಥೆಗೊಳಿಸು; ಏಕೆಂದರೆ ನೀನು ಸಾಯುವೆ, ಬದುಕುವುದಿಲ್ಲ!’” ಎಂದು ಹೇಳಿದನು.
2 ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ ಯೆಹೋವನಲ್ಲಿ ಪ್ರಾರ್ಥಿಸುತ್ತಾ, 3 “ಯೆಹೋವನೇ, ನಾನು ಪೂರ್ಣಮನಸ್ಸಿನಿಂದ ನಿಜವಾಗಿಯೂ ನಿನ್ನ ಸೇವೆಮಾಡಿದ್ದೇನೆಂಬುದನ್ನು ನೆನಪುಮಾಡಿಕೊ. ನೀನು ಯೋಗ್ಯವೆಂದು ಹೇಳಿದವುಗಳನ್ನು ನಾನು ಮಾಡಿದೆನು” ಎಂದು ಹೇಳಿದನು. ನಂತರ ಹಿಜ್ಕೀಯನು ಬಹಳ ಜೋರಾಗಿ ಗೋಳಾಡಿದನು.
4 ಯೆಶಾಯನು ಅರಮನೆಯ ಮಧ್ಯಪ್ರಾಕಾರವನ್ನು ಬಿಡುವುದಕ್ಕೆ ಮುಂಚೆಯೇ, ಯೆಹೋವನ ವಾಕ್ಯವು ಅವನಿಗೆ ಬಂದಿತು. ಯೆಹೋವನು 5 “ಹಿಂದಿರುಗಿ ಹೋಗಿ, ನನ್ನ ಜನರ ನಾಯಕನಾದ ಹಿಜ್ಕೀಯನಿಗೆ ಇದನ್ನು ಹೇಳು: ‘ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದೆನು; ನಿನ್ನ ಕಣ್ಣೀರನ್ನು ನೋಡಿದೆನು. ಆದ್ದರಿಂದ ನಾನು ನಿನ್ನನ್ನು ಗುಣಪಡಿಸುತ್ತೇನೆ. ಮೂರನೆಯ ದಿನ, ನೀನು ದೇವಾಲಯಕ್ಕೆ ಹೋಗುವೆ. 6 ನಾನು ನಿನ್ನ ಜೀವಕ್ಕೆ ಹದಿನೈದು ವರ್ಷಗಳನ್ನು ಕೂಡಿಸುತ್ತೇನೆ. ನಾನು ನಿನ್ನನ್ನು ಮತ್ತು ಈ ನಗರವನ್ನು ಅಶ್ಶೂರದ ರಾಜನ ಅಧಿಕಾರದಿಂದ ರಕ್ಷಿಸುತ್ತೇನೆ. ನಾನು ಈ ನಗರವನ್ನು ಸಂರಕ್ಷಿಸುತ್ತೇನೆ. ನಾನು ನನ್ನ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದಕ್ಕಾಗಿಯೂ ನನಗಾಗಿಯೂ ಇದನ್ನು ಮಾಡುತ್ತೇನೆ’” ಎಂದು ಹೇಳಿದನು.
7 ಆಗ ಯೆಶಾಯನು, “ಅಂಜೂರದ ಹಣ್ಣಿನಿಂದ ಒಂದು ಉಂಡೆಯನ್ನು ಮಾಡಿಸಿ ಅದನ್ನು ಕುರುವಿನ ಮೇಲೆ ಇಡು” ಎಂದು ಹೇಳಿದನು.
ಅಂತೆಯೇ ಅವರು ಅಂಜೂರಹಣ್ಣಿನ ಒಂದು ಉಂಡೆಯನ್ನು ಹಿಜ್ಕೀಯನ ಕುರುವಿನ ಮೇಲೆ ಇಟ್ಟರು. ಆಗ ಹಿಜ್ಕೀಯನಿಗೆ ಗುಣವಾಯಿತು.
8 ಹಿಜ್ಕೀಯನು ಯೆಶಾಯನಿಗೆ, “ಯೆಹೋವನು ನನ್ನನ್ನು ಗುಣಪಡಿಸುತ್ತಾನೆಂಬುದಕ್ಕೆ ಮತ್ತು ಮೂರನೆಯ ದಿನ ನಾನು ದೇವಾಲಯದವರೆಗೆ ಹೋಗುವೆನೆಂಬುದಕ್ಕೆ ಏನು ಗುರುತು?” ಎಂದು ಕೇಳಿದನು.
9 ಯೆಶಾಯನು, “ನೆರಳು ಹತ್ತು ಮೆಟ್ಟಲು ಮುಂದಕ್ಕೆ ಹೋಗಬೇಕೋ ಅಥವಾ ಹತ್ತು ಮೆಟ್ಟಲು ಹಿಂದಕ್ಕೆ ಹೋಗಬೇಕೋ?[a] ನಿನಗೆ ಯಾವುದು ಬೇಕಾಗಿದೆ? ಯೆಹೋವನು ತಾನು ಹೇಳಿದ್ದನ್ನು ಮಾಡುತ್ತಾನೆಂಬುದಕ್ಕೆ ಇದೇ ನಿನಗೆ ಗುರುತು” ಎಂದು ಹೇಳಿದನು.
10 ಹಿಜ್ಕೀಯನು, “ನೆರಳು ಮುಂದೆ ಹೋಗುವುದು ಸುಲಭ, ಆದ್ದರಿಂದ ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡು” ಎಂದು ಉತ್ತರಿಸಿದನು.
11 ಆಗ ಯೆಶಾಯನು ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಈಗಾಗಲೇ ಹತ್ತು ಮೆಟ್ಟಲು ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡಿದನು.
ಯೇಸುವಿನಿಂದ ಕಾಯಿಲೆ ಹುಡುಗನಿಗೆ ಸ್ವಸ್ಥತೆ
(ಮತ್ತಾಯ 17:14-20; ಲೂಕ 9:37-43)
14 ನಂತರ ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಇತರ ಶಿಷ್ಯರ ಬಳಿಗೆ ಹೋದರು. ಆ ಶಿಷ್ಯರ ಸುತ್ತಲೂ ಅನೇಕ ಜನರು ನೆರೆದಿದ್ದರು. ಧರ್ಮೋಪದೇಶಕರು ಅವರೊಡನೆ ವಾದ ಮಾಡುತ್ತಾ ಇದ್ದರು. 15 ಆ ಜನರು ಯೇಸುವನ್ನು ನೋಡಿದಾಗ ಬಹಳ ಆಶ್ಚರ್ಯಪಟ್ಟು ಆತನನ್ನು ಸ್ವಾಗತಿಸಲು ಆತನ ಬಳಿಗೆ ಬಂದರು.
16 ಯೇಸು, “ನೀವು ಯಾವುದರ ಬಗ್ಗೆ ವಾದಿಸುತ್ತಿದ್ದೀರಿ?” ಎಂದು ಕೇಳಿದನು.
17 ಒಬ್ಬನು, “ಗುರುವೇ, ನನ್ನ ಮಗನಿಗೆ ದೆವ್ವ ಹಿಡಿದಿದ್ದ ಕಾರಣ ನಾನು ಅವನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಅವನು ಮಾತಾಡಲಾರ. 18 ಆ ದೆವ್ವವು ಅವನ ಮೇಲೆ ಆಕ್ರಮಣ ಮಾಡಿದಾಗಲೆಲ್ಲಾ ಅವನನ್ನು ನೆಲಕ್ಕೆ ಕೆಡವುತ್ತದೆ. ನನ್ನ ಮಗನು ಬಾಯಿಂದ ನೊರೆ ಸುರಿಸುತ್ತಾ ಹಲ್ಲುಗಳನ್ನು ಕಟಕಟನೆ ಕಡಿಯುತ್ತಾನೆ ಮತ್ತು ಬಹಳ ಬಿರುಸಾಗುತ್ತಾನೆ. ಅವನನ್ನು ಆ ದೆವ್ವದಿಂದ ಬಿಡಿಸುವಂತೆ ನಾನು ನಿನ್ನ ಶಿಷ್ಯರನ್ನು ಕೇಳಿಕೊಂಡೆನು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದು ಹೇಳಿದನು.
19 ಯೇಸು, “ವಿಶ್ವಾಸವಿಲ್ಲದ ಸಂತಾನವೇ, ನಾನು ನಿಮ್ಮೊಡನೆ ಇನ್ನೆಷ್ಟು ಕಾಲ ಇರಲಿ? ಇನ್ನೆಷ್ಟು ಕಾಲ ಸಹಿಸಿಕೊಳ್ಳಲಿ? ಆ ಹುಡುಗನನ್ನು ನನ್ನ ಬಳಿಗೆ ತನ್ನಿರಿ!” ಎಂದು ಉತ್ತರಿಸಿದನು.
20 ಆಗ ಶಿಷ್ಯರು ಆ ಹುಡುಗನನ್ನು ಯೇಸುವಿನ ಬಳಿಗೆ ತಂದರು. ಆ ದೆವ್ವವು ಯೇಸುವನ್ನು ನೋಡಿದ ಕೂಡಲೇ ಆ ಹುಡುಗನ ಮೇಲೆ ಆಕ್ರಮಣ ಮಾಡಿತು. ಆ ಹುಡುಗನು ಕೆಳಗೆ ಬಿದ್ದು, ಬಾಯಿಂದ ನೊರೆಯನ್ನು ಸುರಿಸುತ್ತಾ ಒದ್ದಾಡತೊಡಗಿದನು.
21 ಯೇಸು, “ಎಷ್ಟು ಕಾಲದಿಂದ ಹೀಗಾಗುತ್ತಿದೆ?” ಎಂದು ಆ ಹುಡುಗನ ತಂದೆಯನ್ನು ಕೇಳಿದನು.
ಅದಕ್ಕೆ ತಂದೆಯು, “ಬಾಲ್ಯದಿಂದಲೇ ಹೀಗಾಗುತ್ತಿದೆ. 22 ಆಗಿಂದಾಗ್ಗೆ ದೆವ್ವವು ಅವನನ್ನು ಕೊಲ್ಲಲು ಬೆಂಕಿಯೊಳಗೆ ಅಥವಾ ನೀರಿನೊಳಗೆ ಎಸೆಯುತ್ತದೆ. ನಿನಗೆ ಸಾಧ್ಯವಿರುವುದಾದರೆ, ದಯವಿಟ್ಟು ನಮ್ಮ ಮೇಲೆ ಕರುಣೆಯಿಟ್ಟು ಸಹಾಯಮಾಡು” ಎಂದು ಉತ್ತರಿಸಿದನು.
23 ಅದಕ್ಕೆ ಯೇಸು, “‘ನಿನಗೆ ಸಾಧ್ಯವಿರುವುದಾದರೆ’ ಎಂದು ನೀನು ಹೇಳುವುದೇಕೆ? ನಂಬಿಕೆಯಿಡುವ ವ್ಯಕ್ತಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.
24 ಆ ಹುಡುಗನ ತಂದೆಯು ಸಂತೋಷದಿಂದ, “ನಾನು ನಂಬುತ್ತೇನೆ. ಇನ್ನೂ ಹೆಚ್ಚಾಗಿ ನಂಬಲು ನನಗೆ ಸಹಾಯ ಮಾಡು” ಎಂದನು.
25 ಅಲ್ಲಿ ನಡೆಯುತ್ತಿರುವುದನ್ನು ನೋಡಲು ಜನರೆಲ್ಲರೂ ಓಡಿಬರುತ್ತಿರುವುದನ್ನು ಕಂಡ ಯೇಸು, ಆ ದೆವ್ವಕ್ಕೆ, “ಎಲೈ ಕಿವುಡು ಮೂಕ ದೆವ್ವವೇ, ಈ ಹುಡುಗನಿಂದ ಹೊರಗೆ ಬರುವಂತೆಯೂ ಇವನೊಳಗೆ ಇನ್ನೆಂದಿಗೂ ಪ್ರವೇಶಿಸದಂತೆಯೂ ನಾನು ನಿನಗೆ ಆಜ್ಞಾಪಿಸುತ್ತೇನೆ!” ಎಂದನು.
26 ಆ ದೆವ್ವವು ಅರಚಿತು. ಅದು ಆ ಹುಡುಗನನ್ನು ಮತ್ತೆ ನೆಲದ ಮೇಲೆ ಬೀಳಿಸಿ, ಒದ್ದಾಡಿಸಿ ಹೊರಬಂದಿತು. ಆ ಹುಡುಗನು ಸತ್ತವನಂತೆ ಬಿದ್ದಿದ್ದನು. ಅನೇಕ ಜನರು, “ಅವನು ಸತ್ತುಹೋದನು” ಎಂದರು. 27 ಆದರೆ ಯೇಸು ಆ ಹುಡುಗನ ಕೈ ಹಿಡಿದೆತ್ತಿ, ಎದ್ದುನಿಲ್ಲಲು ಅವನಿಗೆ ಸಹಾಯಮಾಡಿದನು.
28 ಯೇಸು ಮನೆಯೊಳಗೆ ಹೋದ ಮೇಲೆ ಆತನ ಶಿಷ್ಯರು ಪ್ರತ್ಯೇಕವಾದ ಸ್ಥಳದಲ್ಲಿ ಆತನಿಗೆ, “ಆ ದೆವ್ವವನ್ನು ಬಿಡಿಸಲು ನಮಗೆ ಏಕೆ ಸಾಧ್ಯವಾಗಲಿಲ್ಲ?” ಎಂದು ಕೇಳಿದರು.
29 ಯೇಸು, “ಈ ಬಗೆಯ ದೆವ್ವವನ್ನು ಪ್ರಾರ್ಥನೆಯಿಂದ ಮಾತ್ರ ಬಿಡಿಸಲು ಸಾಧ್ಯ” ಎಂದು ಉತ್ತರಿಸಿದನು.
Kannada Holy Bible: Easy-to-Read Version. All rights reserved. © 1997 Bible League International