Revised Common Lectionary (Complementary)
ಸ್ತುತಿಗೀತೆ. ರಚನೆಗಾರರು: ಕೋರಹೀಯರಿಗೆ ಸೇರಿದ ಜೇರಹ ಕುಟುಂಬದ ಹೇಮಾನ.
88 ಯೆಹೋವ ದೇವರೇ, ನೀನೇ ನನ್ನ ರಕ್ಷಕನು.
ಹಗಲಿರುಳು ನಿನಗೆ ಪ್ರಾರ್ಥಿಸುತ್ತಿದ್ದೇನೆ.
2 ನನ್ನ ಪ್ರಾರ್ಥನೆಗಳಿಗೆ ದಯವಿಟ್ಟು ಗಮನಕೊಡು.
ಕರುಣೆಗೋಸ್ಕರ ನಾನಿಡುವ ಮೊರೆಗಳನ್ನು ಆಲಿಸು.
3 ನನ್ನ ಜೀವವು ನೋವಿನಿಂದ ತುಂಬಿಹೋಯಿತು.
ಮರಣವು ನನಗೆ ಸಮೀಪವಾಗಿದೆ.
4 ಜನರು ನನ್ನನ್ನು ಸತ್ತವನಂತೆಯೂ
ಬದುಕಲಾರದ ಬಲಹೀನನಂತೆಯೂ ಪರಿಗಣಿಸಿದ್ದಾರೆ.
5 ಸತ್ತವರ ಮಧ್ಯದಲ್ಲಿ ನನಗಾಗಿ ಹುಡುಕು.
ಸಮಾಧಿಯಲ್ಲಿ ಬಿದ್ದಿರುವ ಶವದಂತಾಗಿದ್ದೇನೆ,
ನೀನು ಮರೆತುಬಿಟ್ಟ ಸತ್ತ ಜನರಂತೆ ಆಗಿದ್ದೇನೆ.
ನಿನ್ನಿಂದಲೂ ನಿನ್ನ ಪರಿಪಾಲನೆಯಿಂದಲೂ ದೂರವಾದವನಾಗಿದ್ದೇನೆ.
6 ನೀನು ನನ್ನನ್ನು ಪಾತಾಳಕ್ಕೆ ದಬ್ಬಿರುವೆ;
ನನ್ನನ್ನು ಕತ್ತಲೆಯ ಸ್ಥಳಕ್ಕೆ ನೂಕಿರುವೆ.
7 ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದಲೇ
ನನ್ನನ್ನು ಶಿಕ್ಷಿಸಿದೆ.
8 ಸ್ನೇಹಿತರು ನನ್ನನ್ನು ತೊರೆದುಬಿಟ್ಟರು.
ಹೊಲೆಯಾದ ಮನುಷ್ಯನಂತೆ ಅವರೆಲ್ಲರೂ ನನ್ನನ್ನು ದೂರ ಮಾಡಿದ್ದಾರೆ.
ನನ್ನನ್ನು ಮನೆಯೊಳಗೆ ದೊಬ್ಬಿ ಬೀಗ ಹಾಕಿದ್ದಾರೆ; ನಾನು ಹೊರಗೆ ಹೋಗಲಾರೆನು.
9 ನನ್ನ ಎಲ್ಲಾ ಸಂಕಟಗಳಿಂದ ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ.
ಯೆಹೋವನೇ, ನಾನು ನಿನಗೆ ಎಡಬಿಡದೆ ಪ್ರಾರ್ಥಿಸುವೆನು!
ನನ್ನ ಕೈಗಳನ್ನು ಎತ್ತಿ ನಿನಗೆ ಪ್ರಾರ್ಥಿಸುವೆನು!
10 ಯೆಹೋವನೇ, ಸತ್ತ ಜನರಿಗಾಗಿ ನೀನು ಮಹತ್ಕಾರ್ಯಗಳನ್ನು ಮಾಡುವೆಯಾ?
ಇಲ್ಲ! ದೆವ್ವಗಳು ಎದ್ದುನಿಂತು ನಿನ್ನನ್ನು ಕೊಂಡಾಡುತ್ತವೆಯೋ? ಇಲ್ಲ!
11 ಸತ್ತ ಜನರು ತಮ್ಮ ಸಮಾಧಿಗಳಲ್ಲಿ ನಿನ್ನ ಪ್ರೀತಿಯ ಬಗ್ಗೆ ಮಾತಾಡಲಾರರು.
ಸತ್ತವರು, ಸತ್ತವರ ಲೋಕದಲ್ಲಿ ನಿನ್ನ ನಂಬಿಗಸ್ತಿಕೆಯ ಬಗ್ಗೆ ಮಾತಾಡಲಾರರು.
12 ಸತ್ತು ಕತ್ತಲೆಯಲ್ಲಿ ಬಿದ್ದಿರುವ ಜನರು ನಿನ್ನ ಅದ್ಭುತಕಾರ್ಯಗಳನ್ನು ನೋಡಲಾರರು.
ಸತ್ತವರು, ಮರೆಯಲ್ಪಟ್ಟವರ ಲೋಕದಲ್ಲಿ ನಿನ್ನ ನೀತಿಯ ಬಗ್ಗೆ ಮಾತಾಡಲಾರರು.
13 ಯೆಹೋವನೇ, ನಿನ್ನ ಸಹಾಯಕ್ಕಾಗಿ ಮೊರೆಯಿಡುತ್ತಿದ್ದೇನೆ.
ಪ್ರತಿ ಮುಂಜಾನೆಯೂ ನಿನಗೆ ಪ್ರಾರ್ಥಿಸುತ್ತಿದ್ದೇನೆ.
14 ಯೆಹೋವನೇ, ನೀನು ನನ್ನನ್ನು ತೊರೆದುಬಿಟ್ಟಿದ್ದೇಕೆ?
ನೀನು ನನಗೆ ಕಿವಿಗೊಡದಿರುವುದೇಕೆ?
15 ನಾನು ಚಿಕ್ಕಂದಿನಿಂದಲೂ ಬಲಹೀನನಾಗಿದ್ದೇನೆ ಮತ್ತು ಕಾಯಿಲೆಯವನಾಗಿದ್ದೇನೆ.
ನಿನ್ನ ಕೋಪದಿಂದ ನಾನು ಸಂಕಟಪಡುತ್ತಿರುವೆ.
ನಾನು ನಿಸ್ಸಹಾಯನಾಗಿರುವೆ.
16 ನೀನು ನನ್ನ ಮೇಲೆ ಕೋಪಗೊಂಡಿದ್ದರಿಂದ
ನಿನ್ನ ದಂಡನೆಯು ನನ್ನನ್ನು ಕೊಲ್ಲುತ್ತಿದೆ.
17 ಬಾಧೆಗಳೂ ನೋವುಗಳೂ ಯಾವಾಗಲೂ ನನ್ನೊಂದಿಗಿವೆ.
ಬಾಧೆಗಳಿಂದಲೂ ನೋವುಗಳಿಂದಲೂ ಮುಳುಗಿ ಹೋಗುತ್ತಿದ್ದೇನೆ.
18 ಯೆಹೋವನೇ, ಸ್ನೇಹಿತರೆಲ್ಲರನ್ನೂ ಪ್ರಿಯರನ್ನೂ ನೀನು ನನ್ನಿಂದ ದೂರಮಾಡಿದೆ.
ಕೇವಲ ಕತ್ತಲೆಯೊಂದೇ ನನ್ನೊಂದಿಗೆ ಉಳಿದುಕೊಂಡಿದೆ.
ಯಾಜಕರು ಅನುಸರಿಸತಕ್ಕ ನಿಯಮಗಳು
21 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಯಾಜಕರಾದ ಆರೋನನ ಮಕ್ಕಳಿಗೆ ಈ ಸಂಗತಿಗಳನ್ನು ಹೇಳು: ಯಾಜಕನು ಸತ್ತ ವ್ಯಕ್ತಿಯನ್ನು ಮುಟ್ಟಿ ತನ್ನನ್ನು ಅಶುದ್ಧಮಾಡಿಕೊಳ್ಳಬಾರದು. 2 ಆದರೆ ಸತ್ತವನು ಅವನ ಹತ್ತಿರದ ಸಂಬಂಧಿಕರಲ್ಲಿ ಒಬ್ಬನಾಗಿದ್ದರೆ, ಆಗ ಅವನು ಆ ಹೆಣವನ್ನು ಮುಟ್ಟಬಹುದು. ಸತ್ತ ವ್ಯಕ್ತಿ ಅವನ ತಾಯಿ, ತಂದೆ, ಮಗ, ಮಗಳು, ಸಹೋದರ ಅಥವಾ 3 ಮದುವೆಯಾಗದ ಸಹೋದರಿಯಾಗಿದ್ದರೆ[a] ಯಾಜಕನು ತನ್ನನ್ನು ಅಶುದ್ಧಮಾಡಿಕೊಳ್ಳಬಹುದು. (ಈ ಸಹೋದರಿಗೆ ಗಂಡನಿಲ್ಲದಿರುವುದರಿಂದ ಅವಳು ಅವನಿಗೆ ಹತ್ತಿರದ ಸಂಬಂಧಿಯಾಗಿದ್ದಾಳೆ. ಆದ್ದರಿಂದ ಯಾಜಕನು ತನ್ನನ್ನು ಅಶುದ್ಧಮಾಡಿಕೊಳ್ಳಬಹುದು.) 4 ಆದರೆ ಸತ್ತವನು ಕೇವಲ ಅವನ ಗುಲಾಮರಲ್ಲಿ ಒಬ್ಬನಾಗಿದ್ದರೆ ಯಾಜಕನು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದು.
5 “ಯಾಜಕರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳಬಾರದು; ತಮ್ಮ ಗಡ್ಡದ ಪಾರ್ಶ್ವಗಳನ್ನು ಕತ್ತರಿಸಿ ವಿಕಾರಗೊಳಿಸಬಾರದು; ತಮ್ಮ ದೇಹಗಳಲ್ಲಿ ಯಾವ ಗಾಯ ಮಾಡಿಕೊಳ್ಳಬಾರದು. 6 ಅವರು ತಮ್ಮ ದೇವರಿಗೆ ಪ್ರತಿಷ್ಠಿತರಾಗಿರಬೇಕು. ಅವರು ದೇವರ ಹೆಸರಿಗೆ ಗೌರವ ತೋರಿಸಬೇಕು. ಯಾಕೆಂದರೆ ಅವರು ಅಗ್ನಿಯ ಮೂಲಕ ಅರ್ಪಿಸಿದ ರೊಟ್ಟಿಯನ್ನು ಮತ್ತು ಕಾಣಿಕೆಗಳನ್ನು ಯೆಹೋವನಿಗೆ ತೆಗೆದುಕೊಂಡು ಹೋಗುತ್ತಾರೆ. ಆದ್ದರಿಂದ ಅವರು ಪವಿತ್ರರಾಗಿರಬೇಕು.
7 “ಯಾಜಕನು ವಿಶೇಷವಾದ ರೀತಿಯಲ್ಲಿ ದೇವರ ಸೇವೆ ಮಾಡುತ್ತಾನೆ. ಆದ್ದರಿಂದ ಯಾಜಕನು ಬೇರೆಯವರೊಡನೆ ಲೈಂಗಿಕ ಸಂಬಂಧಮಾಡಿದ ಸ್ತ್ರೀಯನ್ನು ಮದುವೆಯಾಗಬಾರದು. ಯಾಜಕನು ವೇಶ್ಯೆಯನ್ನಾಗಲಿ ಗಂಡ ಬಿಟ್ಟವಳನ್ನಾಗಲಿ ಮದುವೆಯಾಗಬಾರದು. 8 ಯಾಜಕನು ವಿಶೇಷವಾದ ರೀತಿಯಲ್ಲಿ ದೇವರ ಸೇವೆ ಮಾಡುತ್ತಾನೆ. ಆದ್ದರಿಂದ ನೀವು ಅವನನ್ನು ವಿಶೇಷವಾದ ರೀತಿಯಲ್ಲಿ ನೋಡಿಕೊಳ್ಳಬೇಕು. ಯಾಕೆಂದರೆ ಅವನು ಪವಿತ್ರ ವಸ್ತುಗಳನ್ನು ಸಮರ್ಪಿಸುತ್ತಾನಲ್ಲ! ಅವನು ದೇವರ ಬಳಿಗೆ ಪವಿತ್ರ ರೊಟ್ಟಿಯನ್ನು ತರುತ್ತಾನೆ. ನಾನೇ ಪರಿಶುದ್ಧನು! ನಾನೇ ಯೆಹೋವನು! ಮತ್ತು ನಾನು ನಿಮ್ಮನ್ನು ಪರಿಶುದ್ಧಗೊಳಿಸುತ್ತೇನೆ.
9 “ಯಾಜಕನ ಮಗಳು ವೇಶ್ಯೆಯಾಗಿದ್ದರೆ, ಅವಳು ತನ್ನ ಗೌರವವನ್ನು ಹಾಳುಮಾಡಿಕೊಂಡವಳೂ ತನ್ನ ತಂದೆಗೆ ಅವಮಾನವನ್ನು ಉಂಟುಮಾಡಿದವಳೂ ಆಗಿದ್ದಾಳೆ. ಅವಳನ್ನು ಸುಟ್ಟುಹಾಕಬೇಕು.
10 “ಪ್ರಧಾನಯಾಜಕನು ಅವನ ಸಹೋದರರೊಳಗಿಂದ ಆರಿಸಲ್ಪಟ್ಟವನಾಗಿದ್ದಾನೆ. ಅಭಿಷೇಕತೈಲವು ಅವನ ತಲೆಯ ಮೇಲೆ ಹೊಯ್ಯಲ್ಪಟ್ಟಿದೆ. ಈ ರೀತಿಯಾಗಿ ಅವನು ಪ್ರಧಾನಯಾಜಕನ ವಿಶೇಷ ಕೆಲಸಕ್ಕೆ ಆರಿಸಲ್ಪಟ್ಟಿದ್ದಾನೆ. ಅವನು ವಿಶೇಷ ಬಟ್ಟೆಗಳನ್ನು ಧರಿಸಿಕೊಳ್ಳಲು ಆರಿಸಲ್ಪಟ್ಟಿದ್ದಾನೆ. ಆದ್ದರಿಂದ ಅವನು ಬಹಿರಂಗವಾಗಿ ದುಃಖ ಸೂಚಿಸುವ ಕಾರ್ಯಗಳನ್ನು ಮಾಡಬಾರದು. ಅವನು ತನ್ನ ಕೂದಲನ್ನು ಕೆದರಿಕೊಳ್ಳಬಾರದು. ಅವನು ತನ್ನ ಬಟ್ಟೆಗಳನ್ನು ಹರಿದುಕೊಳ್ಳಬಾರದು. 11 ಅವನು ಹೆಣವನ್ನು ಮುಟ್ಟಿ ತನ್ನನ್ನು ಅಶುದ್ಧನನ್ನಾಗಿ ಮಾಡಿಕೊಳ್ಳಬಾರದು. ಅದು ಅವನ ತಂದೆಯ ಶವವಾಗಿದ್ದರೂ ಸರಿ, ಅಥವಾ ತಾಯಿಯ ಶವವಾಗಿದ್ದರೂ ಸರಿ, ಅವನು ಅದರ ಬಳಿಗೆ ಹೋಗಬಾರದು. 12 ಪ್ರಧಾನಯಾಜಕನು ದೇವರ ಪರಿಶುದ್ಧ ಸ್ಥಳವನ್ನು ಬಿಟ್ಟು ಹೊರಗೆ ಹೋದರೆ ಅಶುದ್ಧನಾಗುವನು. ಅಲ್ಲದೆ ಅವನಿಂದ ದೇವರ ಪರಿಶುದ್ಧಸ್ಥಳವು ಅಶುದ್ಧವಾಗುವುದು. ಅಭಿಷೇಕತೈಲವು ಪ್ರಧಾನಯಾಜಕನ ತಲೆಯ ಮೇಲೆ ಹೊಯ್ಯಲ್ಪಟ್ಟಿದೆ. ಇದು ಅವನನ್ನು ಇತರ ಜನರಿಂದ ಪ್ರತ್ಯೇಕಗೊಳಿಸಿದೆ. ನಾನೇ ಯೆಹೋವನು!
13 “ಪ್ರಧಾನಯಾಜಕನು ಕನ್ಯೆಯಾಗಿರುವವಳನ್ನು ಮದುವೆಯಾಗಬೇಕು. 14 ಪ್ರಧಾನಯಾಜಕನು ಬೇರೆ ಪುರುಷನೊಡನೆ ಲೈಂಗಿಕ ಸಂಬಂಧ ಮಾಡಿದ ಸ್ತ್ರೀಯನ್ನು ಮದುವೆಯಾಗಬಾರದು. ಪ್ರಧಾನಯಾಜಕನು ವೇಶ್ಯಾ ಸ್ತ್ರೀಯನ್ನಾಗಲಿ ಗಂಡ ಬಿಟ್ಟವಳನ್ನಾಗಲಿ ಅಥವಾ ವಿಧವೆಯನ್ನಾಗಲಿ ಮದುವೆಯಾಗಬಾರದು. ಪ್ರಧಾನಯಾಜಕನು ತನ್ನ ಸ್ವಂತ ಜನರಲ್ಲಿ ಒಬ್ಬ ಕನ್ಯೆಯನ್ನು ಮದುವೆಯಾಗಬೇಕು. 15 ಹೀಗಾಗಿ ಜನರು ಅವನ ಮಕ್ಕಳಿಗೆ ಗೌರವ ತೋರಿಸುವರು.[b] ಯೆಹೋವನಾಗಿರುವ ನಾನು ಪ್ರಧಾನಯಾಜಕನನ್ನು ಅವನ ವಿಶೇಷ ಕೆಲಸಕ್ಕಾಗಿ ಪ್ರತ್ಯೇಕಿಸಿದ್ದೇನೆ.”
ತೀತನು ಮತ್ತು ಅವನ ಸಂಗಡಿಗರು
16 ನಿಮ್ಮ ಮೇಲೆ ನನಗಿರುವ ಪ್ರೀತಿಯನ್ನು ದೇವರು ತೀತನಿಗೂ ಕೊಟ್ಟದ್ದಕ್ಕಾಗಿ ದೇವರನ್ನು ಸ್ತುತಿಸುತ್ತೇನೆ. 17 ನಾವು ಕೇಳಿಕೊಂಡ ಕಾರ್ಯಗಳನ್ನು ಮಾಡಲು ತೀತನು ಒಪ್ಪಿಕೊಂಡನು. ನಿಮ್ಮ ಬಳಿಗೆ ಬರಲು ಅವನು ಅತ್ಯಾಸಕ್ತನಾಗಿದ್ದನು. ಇದು ಅವನ ಸ್ವಂತ ಆಲೋಚನೆ. 18 ಎಲ್ಲಾ ಸಭೆಗಳಲ್ಲಿ ಹೊಗಳಿಕೆಗೆ ಪಾತ್ರನಾಗಿರುವ ಒಬ್ಬ ಸಹೋದರನನ್ನು ತೀತನೊಡನೆ ಕಳುಹಿಸುತ್ತಿದ್ದೇವೆ. ಈ ಸಹೋದರನು ಸುವಾರ್ತಾಸೇವೆಯ ವಿಷಯದಲ್ಲಿ ಕೀರ್ತಿಪಡೆದಿದ್ದಾನೆ. 19 ಇದಲ್ಲದೆ, ನಾವು ಈ ಸಹಾಯಧನವನ್ನು ತೆಗೆದುಕೊಂಡು ಹೋಗುವಾಗ ನಮ್ಮ ಸಂಗಡವಿರುವುದಕ್ಕಾಗಿ ಸಭೆಗಳವರು ಈ ಸಹೋದರನನ್ನು ಆಯ್ಕೆಮಾಡಿದ್ದಾರೆ. ದೇವರ ಮಹಿಮೆಗಾಗಿಯೂ ಮತ್ತು ಸಹಾಯ ಮಾಡಲು ನಿಜವಾಗಿ ಬಯಸುತ್ತೇವೆ ಎಂಬುದನ್ನು ತೋರಿಸುವುದಕ್ಕಾಗಿಯೂ ಈ ಸೇವಾಕಾರ್ಯವನ್ನು ಮಾಡುತ್ತಿದ್ದೇವೆ.
20 ಹೇರಳವಾದ ಈ ಸಹಾಯಧನವನ್ನು ನಾವು ನೋಡಿಕೊಳ್ಳುವ ಬಗ್ಗೆ ಟೀಕಿಸಲು ಯಾರಿಗೂ ಅವಕಾಶ ಕೊಡಬಾರದೆಂದು ಎಚ್ಚರಿಕೆಯಿಂದಿದ್ದೇವೆ. 21 ಪ್ರಭುವು ಯಾವುದನ್ನು ಸರಿಯಾದದ್ದೆಂದು ಸ್ವೀಕರಿಸಿಕೊಳ್ಳುವನೋ ಮತ್ತು ಜನರು ಯಾವುದನ್ನು ಸರಿಯಾದದ್ದೆಂದು ಯೋಚಿಸುವರೋ ಅದನ್ನೇ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ.
22 ಇದಲ್ಲದೆ, ಸಹಾಯ ಮಾಡಲು ಯಾವಾಗಲೂ ಸಿದ್ಧನಾಗಿರುವ ನಮ್ಮ ಸಹೋದರನನ್ನು ಅವರೊಂದಿಗೆ ಕಳುಹಿಸಿಕೊಡುತ್ತಿದ್ದೇವೆ. ಅವನು ಅನೇಕ ವಿಧದಲ್ಲಿ ತನ್ನನ್ನು ನಿರೂಪಿಸಿದ್ದಾನೆ. ಈಗ ಅವನಿಗೆ ನಿಮ್ಮಲ್ಲಿ ಹೆಚ್ಚು ಭರವಸೆ ಇರುವುದರಿಂದ ಮತ್ತಷ್ಟು ಸಹಾಯ ಮಾಡಲು ಬಯಸುತ್ತಾನೆ.
23 ನಾನು ತೀತನ ಬಗ್ಗೆ ಹೇಳುವುದೇನೆಂದರೆ, ಅವನು ನನ್ನ ಜೊತೆಕೆಲಸಗಾರನಾಗಿದ್ದಾನೆ. ನಿಮಗೆ ಸಹಾಯ ಮಾಡಲು ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ. ಇತರ ಸಹೋದರರ ಬಗ್ಗೆ ನಾನು ಹೇಳುವುದೇನೆಂದರೆ, ಅವರು ಸಭೆಗಳಿಂದ ಕುಳುಹಿಸಲ್ಪಟ್ಟವರಾಗಿದ್ದಾರೆ ಮತ್ತು ಕ್ರಿಸ್ತನಿಗೆ ಮಹಿಮೆಯನ್ನು ಉಂಟುಮಾಡುವಂಥವರಾಗಿದ್ದಾರೆ. 24 ಆದ್ದರಿಂದ ನಿಮ್ಮಲ್ಲಿ ನಿಜವಾಗಿಯೂ ಪ್ರೀತಿಯಿದೆ ಎಂಬುದನ್ನು ಈ ಜನರಿಗೆ ತೋರಿಸಿಕೊಡಿರಿ. ನಾವು ನಿಮ್ಮ ವಿಷಯದಲ್ಲಿ ಯಾಕೆ ಹೆಮ್ಮೆಪಡುತ್ತೇವೆಂಬುದನ್ನು ಇವರಿಗೆ ತೋರಿಸಿಕೊಡಿರಿ. ಆಗ ಎಲ್ಲಾ ಸಭೆಗಳವರು ಅದನ್ನು ನೋಡಲು ಸಾಧ್ಯವಾಗುವುದು.
Kannada Holy Bible: Easy-to-Read Version. All rights reserved. © 1997 Bible League International