Revised Common Lectionary (Complementary)
ರಚನೆಗಾರ: ದಾವೀದ.
65 ದೇವರೇ, ಚೀಯೋನಿನಲ್ಲಿ ನಾವು ನಿನ್ನನ್ನು ಸ್ತುತಿಸುವೆವು.
ನಾವು ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆವು.
2 ಪ್ರಾರ್ಥನೆಯನ್ನು ಕೇಳುವಾತನೇ,
ಜನರೆಲ್ಲರೂ ನಿನ್ನ ಬಳಿಗೆ ಬರುವರು.
3 ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ;
ನಮ್ಮನ್ನು ಆ ಪಾಪಗಳಿಂದ ಬಿಡಿಸು.
4 ನಿನ್ನ ಸೇವಕರನ್ನು ಆರಿಸಿಕೊಂಡಾತನು ನೀನೇ.
ನಿನ್ನ ಆಲಯಕ್ಕೆ ಬಂದು ನಿನ್ನನ್ನು ಆರಾಧಿಸಲು
ನಮ್ಮನ್ನು ಆರಿಸಿಕೊಂಡಾತನು ನೀನೇ.
ನಿನ್ನ ಮಹಾಪವಿತ್ರ ಆಲಯದ ಸೌಭಾಗ್ಯದಿಂದ
ನಾವು ಉಲ್ಲಾಸಗೊಂಡಿದ್ದೇವೆ.
5 ನಮ್ಮ ರಕ್ಷಕನಾದ ದೇವರೇ,
ನೀತಿವಂತರ ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸು;
ಅವರಿಗೋಸ್ಕರ ಮಹತ್ಕಾರ್ಯಗಳನ್ನು ನಡೆಸು.
ಸರ್ವಭೂನಿವಾಸಿಗಳ ನಂಬಿಕೆಗೆ ನೀನೇ ಆಧಾರ.
6 ಸ್ವಬಲದಿಂದ ಪರ್ವತಗಳನ್ನು ನಿರ್ಮಿಸಿದಾತನು ದೇವರೇ.
ಆತನು “ಶೌರ್ಯ” ಎಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾನೆ.
7 ಭೋರ್ಗರೆಯುವ ಸಮುದ್ರಗಳನ್ನೂ
ಅನ್ಯಜನಾಂಗಗಳ ದಂಗೆಯನ್ನೂ ಶಾಂತಗೊಳಿಸುವಾತನು ದೇವರೇ.
8 ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ.
ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ.
9 ದೇವರೇ, ಭೂಪಾಲಕನು ನೀನೇ.
ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ.
ತೊರೆಗಳನ್ನು ತುಂಬಿಸಿ
ಸುಗ್ಗಿಯನ್ನು ಬರಮಾಡುವಾತನು ನೀನೇ.
10 ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ,
ಹೆಂಟೆಗಳನ್ನು ಕರಗಿಸಿ,
ಭೂಮಿಯನ್ನು ಮೃದುಗೊಳಿಸಿ,
ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
11 ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ.
ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ.
12 ಅರಣ್ಯವು ಹುಲ್ಲಿನಿಂದ ಆವೃತವಾಗಿದೆ.
ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ.
13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ.
ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ.
ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.
ಸೂರ್ಯನು ನಿಶ್ಚಲನಾಗಿ ನಿಂತ ದಿನ
10 ಈ ಸಮಯದಲ್ಲಿ ಅದೋನೀಚೆದೆಕನು ಜೆರುಸಲೇಮಿನ ಅರಸನಾಗಿದ್ದನು. ಯೆಹೋಶುವನು ಆಯಿ ಪಟ್ಟಣವನ್ನು ಸ್ವಾಧೀನಪಡಿಸಿಕೊಂಡ ಮತ್ತು ಅದನ್ನು ಸಂಪೂರ್ಣವಾಗಿ ನಾಶಮಾಡಿದ ಸಂಗತಿಯನ್ನು ಅವನು ಕೇಳಿದ್ದನು. ಜೆರಿಕೊ ಪಟ್ಟಣಕ್ಕೂ ಅದರ ರಾಜನಿಗೂ ಯೆಹೋಶುವನು ಹಾಗೆಯೇ ಮಾಡಿದ್ದನೆಂಬುದನ್ನೂ ಗಿಬ್ಯೋನಿನ ಜನರು ಇಸ್ರೇಲರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದಾರೆಂಬುದನ್ನೂ ಅವನು ಕೇಳಿದ್ದನು. ಅವರು ಜೆರುಸಲೇಮಿಗೆ ಅತೀಸಮೀಪದಲ್ಲಿ ವಾಸವಾಗಿದ್ದರು. 2 ಆದ್ದರಿಂದ ಅದೋನೀಚೆದೆಕನು ಮತ್ತು ಅವನ ಜನರು ಬಹಳ ಹೆದರಿಕೊಂಡರು. ಗಿಬ್ಯೋನ್ “ಆಯಿ”ಯಂತೆ ಸಣ್ಣ ಊರಾಗಿರಲಿಲ್ಲ. ಗಿಬ್ಯೋನ್ ಬಹಳ ದೊಡ್ಡ ನಗರವಾಗಿತ್ತು. ಅದು ರಾಜಧಾನಿಯಷ್ಟು ದೊಡ್ಡ ಪಟ್ಟಣವಾಗಿತ್ತು. ಆ ಪಟ್ಟಣದ ಜನರೆಲ್ಲರೂ ಒಳ್ಳೆಯ ಯೋಧರಾಗಿದ್ದರು. ಆದ್ದರಿಂದ ಆ ಅರಸನು ಭಯಗೊಂಡಿದ್ದನು. 3 ಜೆರುಸಲೇಮಿನ ಅರಸನಾದ ಅದೋನೀಚೆದೆಕನು ಹೆಬ್ರೋನಿನ ಅರಸನಾದ ಹೋಹಾಮನೊಂದಿಗೆ ಮಾತನಾಡಿದನು. ಅವನು ಯರ್ಮೂತಿನ ಅರಸನಾದ ಪಿರಾಮ್, ಲಾಕೀಷಿನ ಅರಸನಾದ ಯಾಫೀಯ ಮತ್ತು ಎಗ್ಲೋನಿನ ಅರಸನಾದ ದೆಬೀರ್ ಇವರೊಂದಿಗೂ ಮಾತನಾಡಿದನು. ಜೆರುಸಲೇಮಿನ ಅರಸನು ಅವರಿಗೆ, 4 “ನನ್ನೊಂದಿಗೆ ಬಂದು ಗಿಬ್ಯೋನಿನ ಮೇಲೆ ಧಾಳಿಮಾಡಲು ಸಹಾಯಮಾಡಿರಿ. ಗಿಬ್ಯೋನ್ ಯೆಹೋಶುವನೊಂದಿಗೂ ಇಸ್ರೇಲರೊಂದಿಗೂ ಶಾಂತಿಒಪ್ಪಂದ ಮಾಡಿಕೊಂಡಿದೆ” ಎಂದು ಬೇಡಿಕೊಂಡನು.
5 ಆಗ ಆ ಐದು ಮಂದಿ ಅಮೋರಿಯರ ಅರಸರು ಸೈನ್ಯವನ್ನು ಸೇರಿಸಿದರು. (ಜೆರುಸಲೇಮಿನ ಅರಸ, ಹೆಬ್ರೋನಿನ ಅರಸ, ಯರ್ಮೂತಿನ ಅರಸ, ಲಾಕೀಷಿನ ಅರಸ ಮತ್ತು ಎಗ್ಲೋನಿನ ಅರಸ; ಇವರೇ ಆ ಐದು ಮಂದಿ ಅರಸರು.) ಆ ಸೈನ್ಯಗಳು ಗಿಬ್ಯೋನಿಗೆ ಹೋಗಿ ಪಟ್ಟಣವನ್ನು ಸುತ್ತುವರಿದು ಅದರ ವಿರುದ್ಧ ಹೋರಾಟ ಪ್ರಾರಂಭಿಸಿದವು.
6 ಗಿಲ್ಗಾಲಿನ ಪಾಳೆಯದಲ್ಲಿದ್ದ ಯೆಹೋಶುವನಿಗೆ ಗಿಬ್ಯೋನ್ ನಗರದ ಜನರು ಒಂದು ಸಂದೇಶವನ್ನು ಕಳಿಸಿದರು. ಆ ಸಂದೇಶ ಹೀಗಿತ್ತು: “ನಾವು ನಿಮ್ಮ ಸೇವಕರಾಗಿದ್ದೇವೆ, ನಮ್ಮನ್ನು ನಿಸ್ಸಹಾಯಕರಾಗಿ ಬಿಡಬೇಡಿರಿ. ಬಂದು ನಮಗೆ ಸಹಾಯ ಮಾಡಿರಿ; ತ್ವರೆಮಾಡಿರಿ; ನಮ್ಮನ್ನು ಉಳಿಸಿರಿ. ಬೆಟ್ಟಪ್ರದೇಶದ ಅಮೋರಿಯರ ಅರಸರೆಲ್ಲಾ ತಮ್ಮ ಸೈನ್ಯವನ್ನು ಒಟ್ಟುಗೂಡಿಸಿ ನಮ್ಮ ವಿರುದ್ಧ ಯುದ್ಧಮಾಡುತ್ತಿದ್ದಾರೆ.”
7 ಆದ್ದರಿಂದ ಯೆಹೋಶುವನು ತನ್ನ ಎಲ್ಲ ಸೈನ್ಯದೊಂದಿಗೆ ಗಿಲ್ಗಾಲಿನಿಂದ ಹೊರಟನು. ಯೆಹೋಶುವನೊಂದಿಗೆ ಅತ್ಯುತ್ತಮವಾದ ಯೋಧರಿದ್ದರು. 8 ಯೆಹೋವನು ಯೆಹೋಶುವನಿಗೆ, “ಆ ಸೈನ್ಯಗಳಿಗೆ ಹೆದರಬೇಡ, ನೀನು ಅವರನ್ನು ಸೋಲಿಸುವಂತೆ ಮಾಡುತ್ತೇನೆ. ಆ ಸೈನ್ಯದ ಯಾರೊಬ್ಬರೂ ನಿನ್ನನ್ನು ಸೋಲಿಸಲು ಸಾಧ್ಯವಿಲ್ಲ” ಎಂದು ಹೇಳಿದನು.
9 ಯೆಹೋಶುವನು ಮತ್ತು ಅವನ ಸೈನ್ಯದವರು ಇಡೀರಾತ್ರಿ ಗಿಬ್ಯೋನಿನ ಕಡೆಗೆ ಪ್ರಯಾಣ ಮಾಡಿದರು. ಯೆಹೋಶುವನು ಬರುತ್ತಿದ್ದಾನೆಂಬುದು ವೈರಿಗಳಿಗೆ ಗೊತ್ತಿರಲಿಲ್ಲ. ಯೆಹೋಶುವನು ಅವರ ಮೇಲೆ ಧಾಳಿ ಮಾಡಿದಾಗ ಅವರಿಗೆ ಅತ್ಯಾಶ್ಚರ್ಯವಾಯಿತು.
10 ಇಸ್ರೇಲರು ಧಾಳಿಮಾಡಿದಾಗ ಯೆಹೋವನು ಆ ಶತ್ರು ಸೈನ್ಯವನ್ನು ಗಾಬರಿಗೊಳಿಸಿದನು. ಆದ್ದರಿಂದ ಇಸ್ರೇಲಿನ ಸೈನಿಕರು ಅವರನ್ನು ಸೋಲಿಸಿ ಮಹಾವಿಜಯವನ್ನು ಸಾಧಿಸಿದರು. ಇಸ್ರೇಲರು ಶತ್ರುಗಳನ್ನು ಗಿಬ್ಯೋನಿನಿಂದ ಬೇತ್‌ಹೋರೋನಿಗೆ ಹೋಗುವ ದಾರಿಯವರೆಗೂ ಬೆನ್ನಟ್ಟಿದರು. ಇಸ್ರೇಲರು ಅಜೇಕ ಮತ್ತು ಮಕ್ಕೇದದವರೆಗೆ ಅವರನ್ನು ಕೊಂದರು. 11 ಬೇತ್‌ಹೋರೋನ್ ಇಳಿಜಾರಿನಿಂದ ಅಜೇಕದವರೆಗೆ ಅವರನ್ನು ಕೊಂದರು. ಅವರು ಶತ್ರುಗಳನ್ನು ಬೆನ್ನಟ್ಟುತ್ತಿದ್ದಾಗ ಯೆಹೋವನು ಆಕಾಶದಿಂದ ಆಲಿಕಲ್ಲು ಮಳೆ ಸುರಿಯುವಂತೆ ಮಾಡಿದನು. ಬಹಳಷ್ಟು ಮಂದಿ ಶತ್ರುಗಳು ಈ ದೊಡ್ಡ ಆಲಿಕಲ್ಲುಗಳಿಂದಲೇ ಮೃತಪಟ್ಟರು. ಇಸ್ರೇಲರು ತಮ್ಮ ಖಡ್ಗಗಳಿಂದ ಕೊಂದ ಜನರಿಗಿಂತ ಹೆಚ್ಚು ಜನರು ಈ ಆಲಿಕಲ್ಲಿನ ಮಳೆಯಿಂದ ಸತ್ತರು.
12 ಆ ದಿನ ಯೆಹೋವನ ಸಹಾಯದಿಂದ ಇಸ್ರೇಲರು ಅಮೋರಿಯರನ್ನು ಸೋಲಿಸಿದರು. ಅಂದು ಯೆಹೋಶುವನು ಎಲ್ಲ ಜನರ ಎದುರಿಗೆ ನಿಂತುಕೊಂಡು ಯೆಹೋವನಿಗೆ ಹೀಗೆ ಮೊರೆಯಿಟ್ಟನು:
“ಸೂರ್ಯನೇ, ಗಿಬ್ಯೋನಿನ ಆಕಾಶದಲ್ಲಿ ನಿಂತಿರು, ಚಲಿಸಬೇಡ.
ಚಂದ್ರನೇ, ಅಯ್ಯಾಲೋನ್ ಕಣಿವೆಯ ಆಕಾಶದಲ್ಲಿ ನಿಂತಿರು, ಚಲಿಸಬೇಡ.”
13 ಆದ್ದರಿಂದ ಅವರು ಶತ್ರುಗಳನ್ನು ಸೋಲಿಸುವವರೆಗೆ ಸೂರ್ಯನೂ ಚಲಿಸಲಿಲ್ಲ, ಚಂದ್ರನೂ ಚಲಿಸಲಿಲ್ಲ. ಈ ಕಥೆಯು ಯಾಷಾರ್ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. ಸೂರ್ಯನು ಆಕಾಶದ ಮಧ್ಯದಲ್ಲಿ ನಿಂತನು. ಅವನು ಇಡೀ ದಿನ ಚಲಿಸಲಿಲ್ಲ. 14 ಅದಕ್ಕಿಂತ ಮೊದಲೆಂದೂ ಹೀಗಾಗಿರಲಿಲ್ಲ; ಆಮೇಲೆಯೂ ಆಗಲಿಲ್ಲ. ಯೆಹೋವನು ಒಬ್ಬ ಮಾನವನ ಆಜ್ಞೆಯನ್ನು ಪಾಲಿಸಿದ ದಿನ ಅದಾಗಿತ್ತು. ಇಸ್ರೇಲರಿಗೋಸ್ಕರ ಯೆಹೋವನು ನಿಜವಾಗಿಯೂ ಯುದ್ಧಮಾಡುತ್ತಿದ್ದನು.
ನೀರಿನ ಮೇಲೆ ಕಾಲ್ನಡಿಗೆ
(ಮತ್ತಾಯ 14:22-33; ಯೋಹಾನ 6:15-21)
45 ಆಗ ಯೇಸು ತನ್ನ ಶಿಷ್ಯರಿಗೆ ದೋಣಿಯೊಳಕ್ಕೆ ಹೋಗಲು ತಿಳಿಸಿದನು. ಸರೋವರದ ಆಚೆಯ ದಡದಲ್ಲಿದ್ದ ಬೆತ್ಸಾಯಿದಕ್ಕೆ ಹೋಗಬೇಕೆಂತಲೂ ಸ್ವಲ್ಪ ಸಮಯದ ನಂತರ ತಾನು ಬರುವುದಾಗಿಯೂ ಯೇಸು ಅವರಿಗೆ ಹೇಳಿ ಅವರನ್ನು ಕಳುಹಿಸಿದನು. ತಮ್ಮತಮ್ಮ ಮನೆಗಳಿಗೆ ಹೋಗುವಂತೆ ಜನರಿಗೆ ತಿಳಿಸುವುದಕ್ಕಾಗಿ ಯೇಸು ಅಲ್ಲಿ ಉಳಿದುಕೊಂಡನು. 46 ಯೇಸು ಜನರನ್ನು ಬೀಳ್ಕೊಟ್ಟ ಮೇಲೆ ಪ್ರಾರ್ಥಿಸುವುದಕ್ಕಾಗಿ ಬೆಟ್ಟದ ಮೇಲಕ್ಕೆ ಹೋದನು.
47 ಅಂದು ರಾತ್ರಿ ದೋಣಿಯು ಸರೋವರದ ಮಧ್ಯದಲ್ಲಿಯೇ ಇದ್ದಿತು. ಯೇಸು ಒಬ್ಬನೇ ದಡದ ಮೇಲಿದ್ದನು. 48 ದೋಣಿಯು ಸರೋವರದ ಮೇಲೆ ದೂರದಲ್ಲಿರುವುದನ್ನೂ ಶಿಷ್ಯರು ಅದನ್ನು ದಡಕ್ಕೆ ಸಾಗಿಸಲು ಬಹಳ ಕಷ್ಟಪಡುತ್ತಿರುವುದನ್ನೂ ಯೇಸು ನೋಡಿದನು. ಗಾಳಿಯು ಅವರಿಗೆ ಪ್ರತಿಕೂಲವಾಗಿ ಬೀಸುತ್ತಿತ್ತು. ಮುಂಜಾನೆ ಮೂರರಿಂದ ಆರು ಗಂಟೆಯ ಸಮಯದಲ್ಲಿ, ಯೇಸು ನೀರಿನ ಮೇಲೆ ನಡೆದುಕೊಂಡು ದೋಣಿಯ ಸಮೀಪಕ್ಕೆ ಬಂದು ಅವರನ್ನು ಹಾದು ಮುಂದೆ ಹೋಗುವುದರಲ್ಲಿದ್ದನು. 49 ಆದರೆ ನೀರಿನ ಮೇಲೆ ನಡೆಯುತ್ತಿದ್ದ ಆತನನ್ನು ಕಂಡ ಶಿಷ್ಯರು ಆತನನ್ನು ಭೂತವೆಂದು ಭ್ರಮಿಸಿಕೊಂಡು ಭಯದಿಂದ ಕಿರುಚಿದರು. 50 ಶಿಷ್ಯರೆಲ್ಲರೂ ಯೇಸುವನ್ನು ನೋಡಿ ಬಹಳವಾಗಿ ಹೆದರಿದ್ದರು. ಆದರೆ ಯೇಸು ಅವರೊಂದಿಗೆ ಮಾತನಾಡಿ, “ಚಿಂತಿಸದಿರಿ! ನಾನೇ! ಅಂಜಬೇಡಿ” ಎಂದು ಹೇಳಿದನು. 51 ನಂತರ ಯೇಸು ತನ್ನ ಶಿಷ್ಯರಿದ್ದ ದೋಣಿಯೊಳಕ್ಕೆ ಹತ್ತಿದನು. ಆಗ ಗಾಳಿಯು ನಿಂತುಹೋಯಿತು. ಶಿಷ್ಯರಿಗೆ ಬಹಳ ಆಶ್ಚರ್ಯವಾಯಿತು. 52 ಯೇಸು ಐದು ರೊಟ್ಟಿಗಳಿಂದ ಐದು ಸಾವಿರ ಜನರಿಗೆ ಊಟ ಮಾಡಿಸಿದ್ದನ್ನು ಅವರು ನೋಡಿದ್ದರೂ ಅದರ ಅರ್ಥವನ್ನು ಗ್ರಹಿಸಲಿಲ್ಲ. ಅವರು ಅದನ್ನು ಅರ್ಥಮಾಡಿಕೊಳ್ಳುವಷ್ಟು ಸಮರ್ಥರಾಗಿರಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International