Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 107:1-3

ಐದನೆಯ ಭಾಗ

(ಕೀರ್ತನೆಗಳು 107–150)

107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
    ಆತನ ಪ್ರೀತಿ ಶಾಶ್ವತವಾದದ್ದು!
ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
    ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
    ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.

ಕೀರ್ತನೆಗಳು 107:23-32

23 ಕೆಲವರು ತಮ್ಮ ಉದ್ಯೋಗಗಳ ನಿಮಿತ್ತ
    ಸಮುದ್ರಯಾನ ಮಾಡಿದರು.
24 ಯೆಹೋವನು ಮಾಡಬಲ್ಲ ಕಾರ್ಯಗಳನ್ನು ಅವರು ನೋಡಿದರು.
    ಆತನು ಸಮುದ್ರದಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಅವರು ಕಣ್ಣಾರೆ ಕಂಡರು.
25 ಆತನು ಆಜ್ಞಾಪಿಸಲು ಬಲವಾದ ಗಾಳಿ ಬೀಸತೊಡಗಿತು;
    ಅಲೆಗಳು ದೊಡ್ಡದಾಗತೊಡಗಿದವು.
26 ಅಲೆಗಳು ಆಕಾಶದಷ್ಟು ಎತ್ತರವಾಗಿದ್ದವು.
    ಭಯಂಕರವಾದ ಬಿರುಗಾಳಿಯಿಂದ ಅವರು ಭಯಗೊಂಡರು.
27     ಅವರು ಅಮಲೇರಿದವರಂತೆ ಎಡವಿಬೀಳತೊಡಗಿದರು;
    ನಾವಿಕರಾಗಿದ್ದ ಅವರ ಕೌಶಲ್ಯವು ನಿಷ್ಪ್ರಯೋಜಕವಾಯಿತು.
28 ಆಗ ಅವರು ಯೆಹೋವನಿಗೆ ಮೊರೆಯಿಡಲು
    ಆತನು ಅವರನ್ನು ಆಪತ್ತುಗಳಿಂದ ಬಿಡಿಸಿದನು.
29 ಆತನು ಬಿರುಗಾಳಿಯನ್ನು ನಿಲ್ಲಿಸಿ
    ಅಲೆಗಳನ್ನು ಶಾಂತಗೊಳಿಸಿದನು.
30 ಸಮುದ್ರವು ಶಾಂತವಾದದ್ದರಿಂದ ನಾವಿಕರು ಬಹು ಸಂತೋಷಪಟ್ಟರು.
    ಅವರು ತಲುಪಬೇಕಿದ್ದ ಸ್ಥಳಕ್ಕೆ ಆತನು ಅವರನ್ನು ಸುರಕ್ಷಿತವಾಗಿ ನಡೆಸಿದನು.
31 ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ
    ಆತನು ಮಾಡುವ ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ.
32 ಆತನನ್ನು ಮಹಾಸಭೆಯಲ್ಲಿ ಸ್ತುತಿಸಿರಿ.
    ಹಿರಿಯರ ಸಭೆಯಲ್ಲಿ ಆತನನ್ನು ಕೊಂಡಾಡಿರಿ.

ಯೋಬನು 29:21-30:15

21 “ಆ ದಿನಗಳಲ್ಲಿ ಜನರು ನನಗೆ ಕಿವಿಗೊಡುತ್ತಿದ್ದರು;
    ನನ್ನ ಆಲೋಚನೆಯನ್ನು ಕೇಳಲು ಮೌನದಿಂದ ಕಾದುಕೊಂಡಿರುತ್ತಿದ್ದರು.
22 ನನ್ನ ಮಾತುಗಳು ಪರಿಪೂರ್ಣವಾಗಿದ್ದ ಕಾರಣ ಅದಕ್ಕೆ ಬೇರೇನೂ ಸೇರಿಸಲು ಅವರಿಗೆ ಸಾಧ್ಯವಿರಲಿಲ್ಲ.
    ನನ್ನ ಮಾತುಗಳು ಅವರ ಕಿವಿಗಳಿಗೆ ಕೋಮಲವಾಗಿದ್ದವು.
23 ಮಳೆಗಾಗಿಯೋ ಎಂಬಂತೆ ಅವರು ನನ್ನ ಮಾತುಗಳಿಗಾಗಿ ಎದುರುನೋಡುತ್ತಿದ್ದರು.
    ವಸಂತ ಕಾಲದಲ್ಲಿ ಬೀಳುವ ಮಳೆಯ ನೀರನ್ನೋ ಎಂಬಂತೆ ಅವರು ನನ್ನ ಮಾತುಗಳನ್ನು ಕುಡಿಯುತ್ತಿದ್ದರು.
24 ನಾನು ಅವರನ್ನು ಕಂಡು ಮುಗುಳ್ನಗೆ ಬೀರಿದಾಗ ಅವರಿಗೆ ನಂಬುವುದಕ್ಕೇ ಆಗುತ್ತಿರಲಿಲ್ಲ.
    ನನ್ನ ಸಂತೋಷದ ಮುಖವು ಅವರನ್ನು ಪ್ರೋತ್ಸಾಹಗೊಳಿಸಿತು.
25 ನಾನು ನಾಯಕನಾಗಿದ್ದರೂ ಅವರೊಂದಿಗೇ ಇರುತ್ತಿದ್ದೆನು;
    ಪಾಳೆಯದಲ್ಲಿ ಸೈನ್ಯಗಳೊಂದಿಗಿರುವ ರಾಜನಂತೆ ನಾನು ದುಃಖಿತರನ್ನು ಆದರಿಸುತ್ತಿದ್ದೆನು.
30 “ಈಗಲಾದರೋ, ನನಗಿಂತ ಚಿಕ್ಕವರೂ ನನ್ನನ್ನು ಗೇಲಿ ಮಾಡುತ್ತಾರೆ.
    ಅವರ ತಂದೆಗಳನ್ನು ನನ್ನ ಕುರಿಕಾಯುವ ನಾಯಿಗಳಿಗೂ ಯೋಗ್ಯರಲ್ಲವೆಂದು ತಳ್ಳಿಬಿಟ್ಟಿದ್ದೆನು.
ಆ ಯೌವನಸ್ಥರ ತಂದೆಗಳಿಗೆ ನನ್ನಲ್ಲಿ ಕೆಲಸ ಮಾಡುವಷ್ಟು ಬಲವಿರಲಿಲ್ಲ.
    ಅವರು ಮುದುಕರಾಗಿದ್ದರು; ತ್ರಾಣವಿಲ್ಲದವರಾಗಿದ್ದರು.
ಆ ಮನುಷ್ಯರು ಬಡಕಲಾಗಿದ್ದರು; ತಿನ್ನಲಿಕ್ಕಿಲ್ಲದೆ ಹಸಿವೆಯಿಂದಿದ್ದರು;
    ಅಡವಿಯ ಒಣಧೂಳನ್ನು ತಿನ್ನುತ್ತಿದ್ದರು.
ಅವರು ಮರುಭೂಮಿಯಲ್ಲಿ ಉಪ್ಪುಸಸಿಗಳನ್ನು ಕೀಳುತ್ತಿದ್ದರು;
    ಕುರುಚಲು ಮರದ ಬೇರುಗಳನ್ನು ತಿನ್ನುತ್ತಿದ್ದರು.
ಅವರನ್ನು ಬೇರೆಯವರು ಬಲವಂತದಿಂದ ಹೊರಗಟ್ಟುತ್ತಿದ್ದರು.
    ಕಳ್ಳರನ್ನೋ ಎಂಬಂತೆ ಜನರು ಅವರನ್ನು ಕಂಡು ಕೂಗಿಕೊಳ್ಳುತ್ತಿದ್ದರು.
ಆ ಮುದುಕರು ನದಿಯ ದಂಡೆಗಳಲ್ಲಿಯೂ ನೆಲದ ಕುಳಿಗಳಲ್ಲಿಯೂ
    ಗುಹೆಗಳಲ್ಲಿಯೂ ವಾಸಿಸುತ್ತಿದ್ದರು.
ಅವರು ಪೊದೆಗಳಲ್ಲಿ ಕಾಡುಕತ್ತೆಗಳಂತೆ ಅರಚುತ್ತಿದ್ದರು;
    ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುತ್ತಿದ್ದರು.
ಅಯೋಗ್ಯರಾಗಿದ್ದ ಈ ಗುಂಪಿನವರು
    ದೇಶಭ್ರಷ್ಟರಾಗಿದ್ದರು.

“ಈಗಲಾದರೋ ಅವರ ಗಂಡುಮಕ್ಕಳು ನನ್ನ ಮೇಲೆ ಗೇಲಿ ಹಾಡುಗಳನ್ನು ಕಟ್ಟುವರು;
    ನನ್ನ ಹೆಸರು ಅವರಿಗೆ ಹಾಸ್ಯವಾಯಿತು.
10 ಆ ಯೌವನಸ್ಥರು ನನ್ನನ್ನು ಕಂಡು ಅಸಹ್ಯಪಡುತ್ತಾರೆ; ನನ್ನಿಂದ ದೂರ ನಿಲ್ಲುತ್ತಾರೆ.
    ನನ್ನ ಮುಖದ ಮೇಲೆ ಉಗುಳುವುದಕ್ಕೂ ಅವರು ಹಿಂದೆಗೆಯರು!
11 ದೇವರು ನನ್ನ ಬಿಲ್ಲಿನ ತಂತಿಯನ್ನು ಕಿತ್ತು ನನ್ನನ್ನು ಬಲಹೀನಗೊಳಿಸಿದ್ದಾನೆ.
    ಆ ಯೌವನಸ್ಥರು ಕಡಿವಾಣವಿಲ್ಲದವರಾಗಿ ಕೋಪದಿಂದ ನನಗೆ ವಿರೋಧವಾಗಿ ಎದ್ದಿದ್ದಾರೆ.
12 ಅವರು ನನ್ನ ಬಲಗಡೆಯಲ್ಲಿ ಎದ್ದು ನನ್ನ ಕಾಲುಗಳನ್ನು ಹಿಂದಕ್ಕೆ ನೂಕಿ
    ನನ್ನನ್ನು ನಾಶಮಾಡಲು ದಿಬ್ಬಹಾಕಿದ್ದಾರೆ.
13 ನಾನು ತಪ್ಪಿಸಿಕೊಂಡು ಹೋಗುವ ದಾರಿಯನ್ನು ಆ ಯೌವನಸ್ಥರು ಕಾಯುತ್ತಿದ್ದಾರೆ.
    ನನ್ನನ್ನು ನಾಶಮಾಡುವುದರಲ್ಲಿ ಅವರು ಯಶಸ್ವಿಯಾಗುವರು.
    ಅವರಿಗೆ ವಿರುದ್ಧವಾಗಿ ನನಗೆ ಸಹಾಯಮಾಡಲು ಯಾರೂ ಇಲ್ಲ.
14 ಅವರು ಗೋಡೆಯನ್ನು ಒಡೆದು ನುಗ್ಗಿಬರಲು
    ಕಲ್ಲುಗಳು ನನ್ನ ಮೇಲೆ ಬೀಳುವವು.
15 ನಾನು ಭಯದಿಂದ ನಡುಗುತ್ತಿರುವೆ.
    ಗಾಳಿಯು ವಸ್ತುಗಳನ್ನು ಕೊಚ್ಚಿಕೊಂಡು ಹೋಗುವಂತೆ ಆ ಯೌವನಸ್ಥರು ನನ್ನ ಮಾನವನ್ನು ಅಟ್ಟಿಬಿಡುವರು.
    ನನ್ನ ಸುರಕ್ಷತೆಯು ಮೋಡದಂತೆ ಕಾಣದೆಹೋಗುವುದು.

ಅಪೊಸ್ತಲರ ಕಾರ್ಯಗಳು 21:1-16

ಪೌಲನು ಜೆರುಸಲೇಮಿಗೆ ಹೋಗುವನು

21 ನಾವೆಲ್ಲರೂ ಹಿರಿಯರನ್ನು ಬೀಳ್ಕೊಟ್ಟ ಬಳಿಕ ನೌಕಾಯಾನ ಮಾಡಿ ನೇರವಾಗಿ ಕೋಸ್ ದ್ವೀಪಕ್ಕೆ ಹೋದೆವು. ಮರುದಿನ ರೋದ ದ್ವೀಪಕ್ಕೆ ಹೋದೆವು ಮತ್ತು ಅಲ್ಲಿಂದ ಪತಾರಕ್ಕೆ ಹೋದೆವು. ಫೆನಿಷ್ಯಕ್ಕೆ ಹೋಗುವ ಹಡಗನ್ನು ನಾವು ಅಲ್ಲಿ ಕಂಡೆವು. ನಾವು ಆ ಹಡಗನ್ನೇರಿ ಪ್ರಯಾಣ ಮಾಡಿದೆವು.

ನಾವು ಸೈಪ್ರಸ್ ದ್ವೀಪದ ಸಮೀಪದಲ್ಲಿ ನೌಕಾಯಾನ ಮಾಡಿದೆವು. ಅದು ನಮ್ಮ ಉತ್ತರದಿಕ್ಕಿನಲ್ಲಿ ಕಾಣುತ್ತಿತ್ತು. ಆದರೆ ನಾವು ಹಡಗನ್ನು ಅಲ್ಲಿ ನಿಲ್ಲಿಸದೆ ಸಿರಿಯ ದೇಶಕ್ಕೆ ಪ್ರಯಾಣ ಮಾಡಿ ಟೈರ್ ಪಟ್ಟಣದಲ್ಲಿ ಹಡಗನ್ನು ನಿಲ್ಲಿಸಿದೆವು. ಯಾಕೆಂದರೆ ಹಡಗಿನಿಂದ ಸರಕನ್ನು ಇಳಿಸಬೇಕಾಗಿತ್ತು. ನಾವು ಟೈರ್ ನಲ್ಲಿ ಯೇಸುವಿನಲ್ಲಿ ಕೆಲವು ಶಿಷ್ಯರನ್ನು ಕಂಡೆವು. ಅವರೊಂದಿಗೆ ಏಳು ದಿನ ತಂಗಿದ್ದೆವು. ಅವರು ಪವಿತ್ರಾತ್ಮನ ಪ್ರೇರಣೆಯಿಂದ ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಎಚ್ಚರಿಕೆ ಕೊಟ್ಟರು. ಆದರೆ ನಮ್ಮ ಸಂದರ್ಶನವು ಮುಗಿದ ಮೇಲೆ ನಾವು ಅಲ್ಲಿಂದ ಹೊರಟು ಪ್ರಯಾಣವನ್ನು ಮುಂದುವರಿಸಿದೆವು. ಯೇಸುವಿನ ಎಲ್ಲಾ ಶಿಷ್ಯರು, ಸ್ತ್ರೀಯರು ಮತ್ತು ಮಕ್ಕಳು ಸಹ ನಮ್ಮನ್ನು ಬೀಳ್ಕೊಡುವುದಕ್ಕಾಗಿ ನಮ್ಮೊಂದಿಗೆ ಪಟ್ಟಣದಿಂದ ಹೊರಗೆ ಬಂದರು. ನಾವೆಲ್ಲರೂ ಸಮುದ್ರ ತೀರದಲ್ಲಿ ಮೊಣಕಾಲೂರಿ ಪ್ರಾರ್ಥಿಸಿದೆವು. ಬಳಿಕ ನಾವು ಒಬ್ಬರಿಗೊಬ್ಬರು ಅಂತಿಮ ವಂದನೆಗಳನ್ನು ಸಲ್ಲಿಸಿ ಹಡಗನ್ನು ಹತ್ತಿದೆವು. ಶಿಷ್ಯರು ತಮ್ಮ ಮನೆಗಳಿಗೆ ಹಿಂತಿರುಗಿದರು.

ನಾವು ಟೈರ್ ನಿಂದ ನಮ್ಮ ಪ್ರಯಾಣವನ್ನು ಮುಂದುವರೆಸಿ ಪ್ಟೊಲೊಮಾಯ ಎಂಬಲ್ಲಿಗೆ ಹೋದೆವು. ಅಲ್ಲಿಯ ಸಹೋದರರನ್ನು (ವಿಶ್ವಾಸಿಗಳು) ವಂದಿಸಿ ಅವರೊಂದಿಗೆ ಒಂದು ದಿನ ಇದ್ದೆವು. ಮರುದಿನ ನಾವು ಪ್ಟೊಲೊಮಾಯದಿಂದ ಹೊರಟು ಸೆಜರೇಯ ಪಟ್ಟಣಕ್ಕೆ ಹೋದೆವು. ಅಲ್ಲಿ ನಾವು ಫಿಲಿಪ್ಪನ ಮನೆಗೆ ಹೋಗಿ ಅವನೊಂದಿಗೆ ತಂಗಿದೆವು. ಸುವಾರ್ತೆಯನ್ನು ತಿಳಿಸುವುದೇ ಫಿಲಿಪ್ಪನ ಕೆಲಸವಾಗಿತ್ತು. ಏಳುಮಂದಿ ಸಹಾಯಕರುಗಳಲ್ಲಿ[a] ಅವನೂ ಒಬ್ಬನಾಗಿದ್ದನು. ಮದುವೆಯಾಗಿಲ್ಲದ ನಾಲ್ಕುಮಂದಿ ಹೆಣ್ಣುಮಕ್ಕಳು ಅವನಿಗಿದ್ದರು. ಅವರೆಲ್ಲರಿಗೂ ಪ್ರವಾದಿಸುವ ವರವಿತ್ತು.

10 ನಾವು ಅಲ್ಲಿಗೆ ಹೋಗಿ ಅನೇಕ ದಿನಗಳಾದ ಮೇಲೆ, ಅಗಬ ಎಂಬ ಪ್ರವಾದಿಯು ಜುದೇಯದಿಂದ ಬಂದನು. 11 ಅವನು ನಮ್ಮ ಬಳಿಗೆ ಬಂದು ಪೌಲನ ನಡುಪಟ್ಟಿಯನ್ನು ತೆಗೆದುಕೊಂಡು ಅದರಿಂದ ತನ್ನ ಕೈಕಾಲುಗಳನ್ನು ಕಟ್ಟಿಕೊಂಡು, “ಪವಿತ್ರಾತ್ಮನು ನನಗೆ ಹೇಳುವುದೇನೆಂದರೆ, ‘ಈ ನಡುಪಟ್ಟಿಯನ್ನು ಕಟ್ಟಿಕೊಳ್ಳುವ ವ್ಯಕ್ತಿಯನ್ನು ಜೆರುಸಲೇಮಿನ ಯೆಹೂದ್ಯರು ಇದೇ ರೀತಿ ಕಟ್ಟಿಹಾಕುವರು. ಬಳಿಕ ಅವರು ಅವನನ್ನು ಯೆಹೂದ್ಯರಲ್ಲದ ಜನರಿಗೆ ಒಪ್ಪಿಸಿಕೊಡುವರು’” ಎಂದು ಹೇಳಿದನು.

12 ನಾವೆಲ್ಲರೂ ಈ ಮಾತುಗಳನ್ನು ಕೇಳಿದೆವು. ಆದ್ದರಿಂದ ನಾವು ಮತ್ತು ಯೇಸುವಿನ ಇತರ ಶಿಷ್ಯರು ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಾರದು” ಎಂದು ಬೇಡಿಕೊಂಡೆವು. 13 ಆದರೆ ಪೌಲನು, “ನೀವು ಯಾಕೆ ಅಳುತ್ತಿರುವಿರಿ? ನೀವು ನನಗೆ ಬಹು ದುಃಖವನ್ನು ಯಾಕೆ ಉಂಟು ಮಾಡುತ್ತಿದ್ದೀರಿ? ನಾನು ಜೆರುಸಲೇಮಿನಲ್ಲಿ ಬಂಧಿಸಲ್ಪಡುವುದಕ್ಕಲ್ಲದೆ ಪ್ರಭು ಯೇಸುವಿನ ಹೆಸರಿಗಾಗಿ ಸಾಯುವುದಕ್ಕೂ ಸಿದ್ಧನಾಗಿದ್ದೇನೆ!” ಎಂದು ಹೇಳಿದನು.

14 ಜೆರುಸಲೇಮಿಗೆ ಹೋಗದಂತೆ ನಾವು ಅವನನ್ನು ಒಪ್ಪಿಸಲಾಗಲಿಲ್ಲ. ಆದ್ದರಿಂದ ಬೇಡಿಕೊಳ್ಳುವುದನ್ನು ನಿಲ್ಲಿಸಿ, “ಪ್ರಭುವಿನ ಚಿತ್ತವು ನೆರವೇರಲೆಂದು ಪ್ರಾರ್ಥಿಸುತ್ತೇವೆ” ಎಂದೆವು.

15 ಬಳಿಕ ನಾವು ಸಿದ್ಧರಾಗಿ ಜೆರುಸಲೇಮಿಗೆ ಹೊರಟೆವು. 16 ಸೆಜರೇಯ ಪಟ್ಟಣದಿಂದ ಯೇಸುವಿನ ಶಿಷ್ಯರಲ್ಲಿ ಕೆಲವರು ನಮ್ಮೊಂದಿಗೆ ಬಂದರು. ಈ ಶಿಷ್ಯರು ನಾವು ಇಳಿದುಕೊಳ್ಳಬೇಕಾಗಿದ್ದ ಸೈಪ್ರಸಿನ ಮ್ನಾಸೋನ ಎಂಬವನ ಮನೆಗೆ ನಮ್ಮನ್ನು ಕರೆದೊಯ್ದರು. ಯೇಸುವಿನ ಆದಿ ಶಿಷ್ಯರಲ್ಲಿ ಮ್ನಾಸೋನನು ಒಬ್ಬನಾಗಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International