Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 52

ಎದೋಮ್ಯನಾದ ದೋಯೇಗನು ಸೌಲನ ಬಳಿಗೆ ಹೋಗಿ, “ದಾವೀದನು ಅಹೀಮೆಲೆಕನ ಮನೆಯಲ್ಲಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.

52 ದುಷ್ಟಾಧಿಕಾರಿಯೇ, ನಿನ್ನ ದುಷ್ಕೃತ್ಯಗಳ ಕುರಿತು ಜಂಬಪಡುವುದೇಕೇ?
    ದೇವರ ದೃಷ್ಟಿಗೆ ನೀನು ಅಸಹ್ಯಕರವಾಗಿರುವೆ.
ಮೋಸಗಾರನೇ, ನಿನ್ನ ನಾಲಗೆಯು ಹರಿತವಾದ ಕ್ಷೌರ ಕತ್ತಿಯಂತಿದ್ದು
    ನಾಶನದ ಸಂಚುಗಳನ್ನೇ ಮಾಡುವುದು.
ಒಳ್ಳೆಯದಕ್ಕಿಂತಲೂ ಕೆಟ್ಟದ್ದನ್ನೇ ನೀನು ಹೆಚ್ಚು ಪ್ರೀತಿಸುವೆ.
    ನಿನಗೆ ಸತ್ಯಕ್ಕಿಂತಲೂ ಸುಳ್ಳೇ ಇಷ್ಟ.

ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.
ದೇವರು ನಿನ್ನನ್ನು ಶಾಶ್ವತವಾಗಿ ನಾಶಮಾಡುವನು,
    ಗಿಡವನ್ನು ಬೇರು ಸಹಿತ ಕಿತ್ತುಹಾಕುವಂತೆ ಆತನು ನಿನ್ನನ್ನು ಹಿಡಿದು ನಿನ್ನ ಮನೆಯೊಳಗಿಂದ[a] ಕಿತ್ತು ಬೀಸಾಡುವನು.

ಒಳ್ಳೆಯವರು ಇದನ್ನು ಕಂಡು
    ದೇವರಲ್ಲಿ ಭಯಭಕ್ತಿಯುಳ್ಳವರಾಗುವರು.
ಅವರು ನಿಮ್ಮನ್ನು ನೋಡಿ ನಗುತ್ತಾ ಹೀಗೆನ್ನುವರು:
    “ದೇವರ ಮೇಲೆ ಅವಲಂಬಿಸಿಕೊಳ್ಳದ ಇವನಿಗೆ ಏನಾಯಿತು?
    ತನ್ನ ಐಶ್ವರ್ಯವೂ ಸುಳ್ಳುಗಳೂ ತನ್ನನ್ನು ಕಾಪಾಡುತ್ತವೆ ಎಂದು ಭಾವಿಸಿಕೊಂಡವನು ಇವನೇ.”

ನಾನಾದರೋ ದೇವರ ಆಲಯದ ಅಂಗಳದಲ್ಲಿ ಹಸಿರಸಿರಾಗಿ ಬೆಳೆಯುವ ಆಲೀವ್ ಮರದಂತಿದ್ದೇನೆ.
    ನಾನು ದೇವರ ಶಾಶ್ವತವಾದ ಪ್ರೀತಿಯಲ್ಲೇ ಯಾವಾಗಲೂ ಭರವಸವಿಟ್ಟಿರುವೆ.
ದೇವರೇ, ನಿನ್ನ ಉಪಕಾರಗಳಿಗಾಗಿ ನಾನು ನಿನ್ನನ್ನು ಎಂದೆಂದಿಗೂ ಕೊಂಡಾಡುವೆನು.
    ನಿನ್ನ ಹೆಸರಿನಲ್ಲೇ ಭರವಸವಿಟ್ಟಿರುವೆ; ಯಾಕೆಂದರೆ ನಿನ್ನ ಹೆಸರು ಎಷ್ಟೋ ಒಳ್ಳೆಯದು.
    ನಿನ್ನ ಪವಿತ್ರ ಜನರ ಸನ್ನಿಧಿಯಲ್ಲಿ ನಿನ್ನನ್ನು ಕೊಂಡಾಡುವೆನು.

ಯೆರೆಮೀಯ 22:1-9

ದುಷ್ಟರಾಜರ ವಿರುದ್ಧ ನ್ಯಾಯನಿರ್ಣಯ

22 ಯೆಹೋವನು ಹೇಳಿದನು: “ಯೆರೆಮೀಯನೇ, ರಾಜನ ಅರಮನೆಗೆ ಹೋಗು. ಯೆಹೂದದ ರಾಜನ ಬಳಿಗೆ ಹೋಗಿ ಅಲ್ಲಿ ಈ ಸಂದೇಶವನ್ನು ಸಾರು. ‘ಯೆಹೂದದ ರಾಜನೇ, ಯೆಹೋವನಿಂದ ಬಂದ ಸಂದೇಶವನ್ನು ಕೇಳು. ನೀನು ದಾವೀದನ ಸಿಂಹಾಸನಾರೂಢನಾಗಿ ರಾಜ್ಯಭಾರ ಮಾಡುವೆ, ಅದಕ್ಕಾಗಿ ಕೇಳು. ರಾಜನೇ, ನೀನು ಮತ್ತು ನಿನ್ನ ಅಧಿಕಾರಿಗಳು ಚೆನ್ನಾಗಿ ಕೇಳಬೇಕು. ಜೆರುಸಲೇಮಿನ ದ್ವಾರಗಳ ಮೂಲಕ ಬರುವ ನಿನ್ನ ಜನರೆಲ್ಲರೂ ಯೆಹೋವನ ಸಂದೇಶವನ್ನು ಕೇಳಬೇಕು. ಯೆಹೋವನು ಅನ್ನುತ್ತಾನೆ, ನಿಮ್ಮ ಆಚರಣೆ ನೀತಿಬದ್ಧವಾಗಿಯೂ ನ್ಯಾಯಬದ್ಧವಾಗಿಯೂ ಇರಲಿ. ಸುಲಿಗೆಗೀಡಾದವರನ್ನು ದೋಚಿಕೊಂಡವನಿಂದ ರಕ್ಷಿಸಿರಿ. ಅನಾಥರನ್ನು ಮತ್ತು ವಿಧವೆಯರನ್ನು ಹಿಂಸಿಸಬೇಡಿ; ನಿರಪರಾಧಿಗಳನ್ನು ಕೊಲ್ಲಬೇಡಿ. ನೀವು ಈ ಆಜ್ಞೆಗಳನ್ನು ಪಾಲಿಸಿದರೆ ದಾವೀದನ ಸಿಂಹಾಸನಾರೂಢರಾದ ರಾಜರು ಈ ದ್ವಾರಗಳಿಂದ ಜೆರುಸಲೇಮ್ ನಗರವನ್ನು ಪ್ರವೇಶಿಸುವುದು ಮುಂದುವರೆಯುತ್ತದೆ. ಆ ರಾಜರು ತಮ್ಮ ಅಧಿಕಾರಿಗಳೊಂದಿಗೆ ಈ ದ್ವಾರಗಳಿಂದ ಬರುತ್ತಾರೆ. ಆ ಅರಸರು, ಅವರ ಅಧಿಕಾರಿಗಳು, ಅವರ ಜನರು, ರಥಗಳಲ್ಲಿ ಮತ್ತು ಕುದುರೆಗಳ ಮೇಲೆ ಕುಳಿತುಕೊಂಡು ಬರುವರು. ನೀವು ಈ ಆಜ್ಞೆಗಳನ್ನು ಪಾಲಿಸದಿದ್ದರೆ ರಾಜನ ಅರಮನೆಯನ್ನು ನಾಶಮಾಡಲಾಗುವುದು. ಅದು ಕಲ್ಲುಬಂಡೆಗಳ ರಾಶಿಯಾಗುವದೆಂದು ಯೆಹೋವನಾದ ನಾನು ಆಣೆಯಿಟ್ಟುಕೊಂಡು ಹೇಳುತ್ತೇನೆ’” ಎಂದು ಯೆಹೋವನು ನುಡಿದನು.

ಯೆಹೂದದ ರಾಜನು ವಾಸಮಾಡುವ ಅರಮನೆಯ ಬಗ್ಗೆ ಯೆಹೋವನು ಹೀಗೆನ್ನುತ್ತಾನೆ:

“ಈ ಅರಮನೆಯು ಗಿಲ್ಯಾದಿನ ಅರಣ್ಯದಂತೆ,
    ಲೆಬನೋನಿನ ಪರ್ವತದಂತೆ ಎತ್ತರವಾಗಿದೆ.
ಆದರೆ ನಾನು ಅದನ್ನು ನಿಜವಾಗಿ ಮರುಭೂಮಿಯಂತೆ ಮಾಡುತ್ತೇನೆ.
    ಈ ಅರಮನೆಯು ಹಾಳುಬಿದ್ದ ನಗರದಂತಾಗುವುದು.
ಅರಮನೆಯನ್ನು ಹಾಳುಮಾಡಲು ನಾನು ಜನರನ್ನು ಕಳುಹಿಸುತ್ತೇನೆ.
    ಪ್ರತಿಯೊಬ್ಬನ ಹತ್ತಿರ ಆ ಮನೆಯನ್ನು ಹಾಳುಮಾಡಲು ಬೇಕಾಗುವ ಸಾಧನಗಳಿರುವವು.
ಆ ಜನರು ನಿನ್ನ ಸುಂದರವಾದ ಮತ್ತು ಗಟ್ಟಿಯಾದ ದೇವದಾರಿನ ತೊಲೆಗಳನ್ನು ಕಡಿದುಹಾಕುತ್ತಾರೆ.
    ಅವರು ಆ ತೊಲೆಗಳನ್ನು ಬೆಂಕಿಯಲ್ಲಿ ಎಸೆಯುತ್ತಾರೆ.

“ಅನೇಕ ಜನಾಂಗಗಳ ಜನರು ಈ ನಗರದಿಂದ ಹಾದುಹೋಗುವರು. ಅವರು, ‘ಜೆರುಸಲೇಮ್ ಒಂದು ಮಹಾನಗರವಾಗಿತ್ತು. ಯೆಹೋವನು ಜೆರುಸಲೇಮಿಗೆ ಇಂಥ ಭಯಂಕರ ಸ್ಥಿತಿಯನ್ನು ಏಕೆ ತಂದನು?’ ಎಂದು ಒಬ್ಬರನ್ನೊಬ್ಬರು ಕೇಳುವರು. ಆ ಪ್ರಶ್ನೆಗೆ ಈ ಉತ್ತರ: ‘ಯೆಹೂದದ ಜನರು ತಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಅನುಸರಣೆಯನ್ನು ಬಿಟ್ಟುಬಿಟ್ಟರು. ಅವರು ಬೇರೆ ದೇವರುಗಳ ಸೇವೆಯನ್ನು ಮಾಡಿ ಪೂಜಿಸಿದರು.’”

ಲೂಕ 6:43-45

ಎರಡು ವಿಧವಾದ ಫಲ

(ಮತ್ತಾಯ 7:17-20; 12:34-35)

43 “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ. ಅದೇ ರೀತಿಯಲ್ಲಿ ಕೆಟ್ಟಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 44 ಪ್ರತಿಯೊಂದು ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು. ಜನರು ಮುಳ್ಳುಗಿಡಗಳಲ್ಲಿ ಅಂಜೂರದ ಹಣ್ಣುಗಳನ್ನಾಗಲಿ ಪೊದೆಗಳಲ್ಲಿ ದ್ರಾಕ್ಷಿಹಣ್ಣುಗಳನ್ನಾಗಲಿ ಪಡೆಯುವುದಿಲ್ಲ! 45 ಒಳ್ಳೆಯವನ ಹೃದಯದಲ್ಲಿ ಒಳ್ಳೆಯವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಒಳ್ಳೆಯವು ಹೊರಬರುತ್ತವೆ. ಆದರೆ ಕೆಟ್ಟವನ ಹೃದಯದಲ್ಲಿ ಕೆಟ್ಟವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಕೆಟ್ಟವು ಹೊರಬರುತ್ತವೆ. ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಬರುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International