Revised Common Lectionary (Complementary)
ಎದೋಮ್ಯನಾದ ದೋಯೇಗನು ಸೌಲನ ಬಳಿಗೆ ಹೋಗಿ, “ದಾವೀದನು ಅಹೀಮೆಲೆಕನ ಮನೆಯಲ್ಲಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.
52 ದುಷ್ಟಾಧಿಕಾರಿಯೇ, ನಿನ್ನ ದುಷ್ಕೃತ್ಯಗಳ ಕುರಿತು ಜಂಬಪಡುವುದೇಕೇ?
ದೇವರ ದೃಷ್ಟಿಗೆ ನೀನು ಅಸಹ್ಯಕರವಾಗಿರುವೆ.
2 ಮೋಸಗಾರನೇ, ನಿನ್ನ ನಾಲಗೆಯು ಹರಿತವಾದ ಕ್ಷೌರ ಕತ್ತಿಯಂತಿದ್ದು
ನಾಶನದ ಸಂಚುಗಳನ್ನೇ ಮಾಡುವುದು.
3 ಒಳ್ಳೆಯದಕ್ಕಿಂತಲೂ ಕೆಟ್ಟದ್ದನ್ನೇ ನೀನು ಹೆಚ್ಚು ಪ್ರೀತಿಸುವೆ.
ನಿನಗೆ ಸತ್ಯಕ್ಕಿಂತಲೂ ಸುಳ್ಳೇ ಇಷ್ಟ.
4 ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.
5 ದೇವರು ನಿನ್ನನ್ನು ಶಾಶ್ವತವಾಗಿ ನಾಶಮಾಡುವನು,
ಗಿಡವನ್ನು ಬೇರು ಸಹಿತ ಕಿತ್ತುಹಾಕುವಂತೆ ಆತನು ನಿನ್ನನ್ನು ಹಿಡಿದು ನಿನ್ನ ಮನೆಯೊಳಗಿಂದ[a] ಕಿತ್ತು ಬೀಸಾಡುವನು.
6 ಒಳ್ಳೆಯವರು ಇದನ್ನು ಕಂಡು
ದೇವರಲ್ಲಿ ಭಯಭಕ್ತಿಯುಳ್ಳವರಾಗುವರು.
ಅವರು ನಿಮ್ಮನ್ನು ನೋಡಿ ನಗುತ್ತಾ ಹೀಗೆನ್ನುವರು:
7 “ದೇವರ ಮೇಲೆ ಅವಲಂಬಿಸಿಕೊಳ್ಳದ ಇವನಿಗೆ ಏನಾಯಿತು?
ತನ್ನ ಐಶ್ವರ್ಯವೂ ಸುಳ್ಳುಗಳೂ ತನ್ನನ್ನು ಕಾಪಾಡುತ್ತವೆ ಎಂದು ಭಾವಿಸಿಕೊಂಡವನು ಇವನೇ.”
8 ನಾನಾದರೋ ದೇವರ ಆಲಯದ ಅಂಗಳದಲ್ಲಿ ಹಸಿರಸಿರಾಗಿ ಬೆಳೆಯುವ ಆಲೀವ್ ಮರದಂತಿದ್ದೇನೆ.
ನಾನು ದೇವರ ಶಾಶ್ವತವಾದ ಪ್ರೀತಿಯಲ್ಲೇ ಯಾವಾಗಲೂ ಭರವಸವಿಟ್ಟಿರುವೆ.
9 ದೇವರೇ, ನಿನ್ನ ಉಪಕಾರಗಳಿಗಾಗಿ ನಾನು ನಿನ್ನನ್ನು ಎಂದೆಂದಿಗೂ ಕೊಂಡಾಡುವೆನು.
ನಿನ್ನ ಹೆಸರಿನಲ್ಲೇ ಭರವಸವಿಟ್ಟಿರುವೆ; ಯಾಕೆಂದರೆ ನಿನ್ನ ಹೆಸರು ಎಷ್ಟೋ ಒಳ್ಳೆಯದು.
ನಿನ್ನ ಪವಿತ್ರ ಜನರ ಸನ್ನಿಧಿಯಲ್ಲಿ ನಿನ್ನನ್ನು ಕೊಂಡಾಡುವೆನು.
11 “ಯೆಹೂದದ ರಾಜಮನೆತನದವರಿಗೆ ಈ ವಿಷಯಗಳನ್ನು ತಿಳಿಸಿರಿ:
‘ಯೆಹೋವನ ಸಂದೇಶವನ್ನು ಕೇಳಿರಿ.
12 ದಾವೀದನ ಮನೆತನದವರೇ, ಯೆಹೋವನು ಹೀಗೆ ಹೇಳುತ್ತಾನೆ:
ನೀವು ಪ್ರತಿದಿನ ನಿಷ್ಪಕ್ಷಪಾತವಾಗಿ ನ್ಯಾಯನಿರ್ಣಯ ಮಾಡಬೇಕು.
ಅಪರಾಧಿಗಳಿಂದ ಕಷ್ಟಕ್ಕೊಳಗಾದವರನ್ನು ರಕ್ಷಿಸಬೇಕು.
ನೀವು ಹಾಗೆ ಮಾಡದಿದ್ದರೆ
ನನಗೆ ಬಹಳ ಕೋಪ ಬರುತ್ತದೆ.
ನನ್ನ ಕೋಪವು ಯಾರಿಂದಲೂ ನಂದಿಸಲಾಗದ ಬೆಂಕಿಯಂತಿದೆ.
ನೀವು ದುಷ್ಕೃತ್ಯಗಳನ್ನು ಮಾಡಿದ್ದರಿಂದ ಹೀಗಾಗುತ್ತದೆ.’
13 “ಜೆರುಸಲೇಮ್ ನಗರವೇ, ನಾನು ನಿನ್ನ ವಿರುದ್ಧವಾಗಿದ್ದೇನೆ.
ನೀನು ಬೆಟ್ಟದ ಮೇಲೆ ಕುಳಿತಿರುವೆ,
ನೀನು ರಾಣಿಯಂತೆ ಈ ಕಣಿವೆಯ ಮೇಲೆ ಕುಳಿತಿರುವೆ.
‘ನಮ್ಮ ಮೇಲೆ ಯಾರೂ ಧಾಳಿ ಮಾಡಲಾರರು,
ನಮ್ಮ ಭದ್ರವಾದ ನಗರವನ್ನು ಯಾರೂ ಪ್ರವೇಶ ಮಾಡಲಾರರು’
ಎಂದು ಜೆರುಸಲೇಮಿನ ನಿವಾಸಿಗಳಾದ ನೀವು ಹೇಳುವಿರಿ.”
ಆದರೆ ಯೆಹೋವನ ಸಂದೇಶವನ್ನು ಕೇಳಿರಿ.
14 “ನೀವು ತಕ್ಕ ಶಿಕ್ಷೆಯನ್ನು ಅನುಭವಿಸುವಿರಿ.
ನಾನು ನಿಮ್ಮ ಅರಣ್ಯಗಳಲ್ಲಿ ಬೆಂಕಿಯನ್ನು ಹೊತ್ತಿಸುತ್ತೇನೆ.
ಆ ಬೆಂಕಿಯು ನಿಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಸ್ತುವನ್ನು ಸುಟ್ಟುಹಾಕುತ್ತದೆ.”
22 ನಾನು ನಗರದಲ್ಲಿ ಒಂದು ಆಲಯವನ್ನೂ ನೋಡಲಿಲ್ಲ. ಸರ್ವಶಕ್ತನಾದ ದೇವರಾದ ಪ್ರಭು ಮತ್ತು ಕುರಿಮರಿಯಾದಾತನು (ಯೇಸು) ನಗರದ ಆಲಯವಾಗಿದ್ದಾರೆ. 23 ನಗರದ ಮೇಲೆ ಸೂರ್ಯನಾಗಲಿ ಚಂದ್ರನಾಗಲಿ ಪ್ರಕಾಶಿಸುವ ಅಗತ್ಯವಿರಲಿಲ್ಲ. ದೇವರ ಪ್ರಭಾವವೇ ಆ ನಗರಕ್ಕೆ ಬೆಳಕನ್ನು ನೀಡುತ್ತಿತ್ತು. ಕುರಿಮರಿಯಾದಾತನು ನಗರಕ್ಕೆ ದೀಪವಾಗಿದ್ದನು.
24 ಕುರಿಮರಿಯಾದಾತನು ನೀಡಿದ ಬೆಳಕಿನಿಂದ ಲೋಕದ ಜನರು ನಡೆಯುತ್ತಾರೆ. ಲೋಕದ ರಾಜರುಗಳು ತಮ್ಮ ಸಿರಿಸಂಪತ್ತನ್ನು ನಗರಕ್ಕೆ ತರುತ್ತಾರೆ. 25 ನಗರದ ಬಾಗಿಲುಗಳು ಎಂದಿಗೂ ಮುಚ್ಚುವುದೇ ಇಲ್ಲ. ಏಕೆಂದರೆ ಅಲ್ಲಿ ರಾತ್ರಿಯೇ ಇಲ್ಲ. 26 ಜನಾಂಗಗಳ ವೈಭವ ಮತ್ತು ಗೌರವಗಳು ನಗರಕ್ಕೆ ಬರುತ್ತವೆ. 27 ಪರಿಶುದ್ಧವಾಗಿಲ್ಲದ ಯಾವುದೂ ನಗರವನ್ನು ಪ್ರವೇಶಿಸುವುದೇ ಇಲ್ಲ. ಅವಮಾನಕರವಾದ ಕಾರ್ಯಗಳನ್ನು ಮಾಡುವವನಾಗಲಿ ಸುಳ್ಳು ಹೇಳುವವನಾಗಲಿ ನಗರವನ್ನು ಎಂದಿಗೂ ಪ್ರವೇಶಿಸುವುದಿಲ್ಲ. ಕುರಿಮರಿಯಾದಾತನು ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿರುವನೋ ಅವರು ಮಾತ್ರ ಆ ನಗರವನ್ನು ಪ್ರವೇಶಿಸುವರು.
22 ಆಗ ದೇವದೂತನು ನನಗೆ ಜೀವಜಲದ ನದಿಯನ್ನು ತೋರಿಸಿದನು. ಆ ನದಿಯು ಸ್ಫಟಿಕದಂತೆ ಪ್ರಕಾಶಮಾನವಾಗಿತ್ತು. ಆ ನದಿಯು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಆಗಮಿಸಿ, 2 ನಗರದ ಬೀದಿಯ ಮಧ್ಯಭಾಗದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿಯೂ ಜೀವವೃಕ್ಷಗಳಿದ್ದ್ದವು. ಆ ಜೀವವೃಕ್ಷವು ಪ್ರತಿತಿಂಗಳು ಫಲವನ್ನು ಫಲಿಸುತ್ತಾ ವರ್ಷದಲ್ಲಿ ಹನ್ನೆರಡು ತರದ ಫಲಗಳನ್ನು ನೀಡುತ್ತದೆ. ಆ ವೃಕ್ಷದ ಎಲೆಗಳು ಜನಾಂಗದವರನ್ನು ಗುಣಪಡಿಸುತ್ತವೆ.
3 ದೇವರಿಂದ ಶಾಪ ಹೊಂದಿದ ಯಾವುದೂ ಆ ಪಟ್ಟಣದಲ್ಲಿರುವುದಿಲ್ಲ. ದೇವರ ಮತ್ತು ಕುರಿಮರಿಯಾದಾತನ (ಯೇಸು) ಸಿಂಹಾಸನವು ಆ ನಗರದಲ್ಲಿರುತ್ತದೆ. ದೇವರ ಸೇವಕರು ಆತನನ್ನು ಆರಾಧಿಸುತ್ತಾರೆ. 4 ಅವರು ಆತನ ಮುಖವನ್ನು ನೋಡುತ್ತಾರೆ. ದೇವರ ಹೆಸರನ್ನು ಅವರ ಹಣೆಗಳ ಮೇಲೆ ಬರೆಯಲಾಗುತ್ತದೆ. 5 ಅಲ್ಲಿ ರಾತ್ರಿಯೆಂಬುದೇ ಇರುವುದಿಲ್ಲ. ಜನರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಬೇಕಾಗುವುದಿಲ್ಲ. ಪ್ರಭುವಾದ ದೇವರೇ ಅವರಿಗೆ ಬೆಳಕನ್ನು ನೀಡುತ್ತಾನೆ. ಅವರು ಯುಗಯುಗಾಂತರಗಳಲ್ಲಿ ರಾಜರುಗಳಂತೆ ಆಳುತ್ತಾರೆ.
Kannada Holy Bible: Easy-to-Read Version. All rights reserved. © 1997 Bible League International