Revised Common Lectionary (Complementary)
22 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು:
“ನಾನು ಎತ್ತರವಾದ ದೇವದಾರು ಮರದಿಂದ ಒಂದು ಕೊಂಬೆಯನ್ನು ಕೀಳುವೆನು.
ಆ ಮರದ ಮೇಲಿರುವ ಒಂದು ಸಣ್ಣ ಕೊಂಬೆಯನ್ನು ಕೀಳುವೆನು.
ಅದನ್ನು ನಾನು ಎತ್ತರವಾದ ಪರ್ವತದಲ್ಲಿ ನೆಡುವೆನು.
23 ಸ್ವತಃ ನಾನೇ ಅದನ್ನು ಇಸ್ರೇಲಿನ ಉನ್ನತವಾದ ಪರ್ವತದ ಮೇಲೆ ನೆಡುವೆನು.
ಅದು ಕೊಂಬೆಗಳನ್ನು ಬೆಳೆಸಿ, ಫಲವನ್ನು ಫಲಿಸಿ,
ಅಮೋಘವಾದ ದೇವದಾರು ಮರವಾಗುವುದು;
ಅದರ ಕೊಂಬೆಗಳ ಮೇಲೆ ಅನೇಕ ಬಗೆಯ ಪಕ್ಷಿಗಳು ವಾಸಿಸುವವು.
ಅದರ ಕೊಂಬೆಯ ನೆರಳಿನಲ್ಲಿ
ವಿವಿಧ ಬಗೆಯ ಪಕ್ಷಿಗಳು ವಾಸಿಸುವವು.
24 “ಆಗ ಬೇರೆ ಮರಗಳಿಗೆ, ನಾನು ದೊಡ್ಡ ಮರಗಳನ್ನು ನೆಲಕ್ಕೆ ಬೀಳಿಸುವೆನೆಂತಲೂ,
ಚಿಕ್ಕ ಮರಗಳನ್ನು ಉದ್ದವಾಗಿ ಬೆಳೆಯುವಂತೆ ಮಾಡುತ್ತೇನೆಂತಲೂ ಗೊತ್ತಾಗುವದು.
ಹಸಿರು ಮರಗಳು ಒಣಗಿಹೋಗುವಂತೆಯೂ
ಒಣಗಿಹೋದ ಮರಗಳು ಹಸಿರಾಗಿ ಬೆಳೆಯುವಂತೆಯೂ ನಾನು ಮಾಡುತ್ತೇನೆ.
ನಾನೇ ಯೆಹೋವನು.
ಇದನ್ನು ನಾನೇ ಹೇಳಿದ್ದೇನೆ; ಮತ್ತು ನಾನೇ ಇದನ್ನು ನೆರವೇರಿಸುವೆನು.”
ಸಬ್ಬತ್ ದಿನದ ಸ್ತುತಿಗೀತೆ.
92 ಯೆಹೋವನೇ, ನಿನ್ನನ್ನು ಸ್ತುತಿಸುವುದೂ
ಮಹೋನ್ನತನಾದ ದೇವರೇ, ನಿನ್ನ ಹೆಸರನ್ನು ಕೊಂಡಾಡುವುದೂ ಯುಕ್ತವಾಗಿದೆ.
2-3 ಹತ್ತು ತಂತಿವಾದ್ಯಗಳನ್ನೂ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ನುಡಿಸುತ್ತಾ
ನಿನ್ನ ಪ್ರೀತಿಯ ಕುರಿತು ಮುಂಜಾನೆಯಲ್ಲಿಯೂ
ನಿನ್ನ ನಂಬಿಗಸ್ತಿಕೆಯ ಕುರಿತು ರಾತ್ರಿಯಲ್ಲಿಯೂ ಹಾಡುವುದು ಯುಕ್ತವಾಗಿದೆ.
4 ಯೆಹೋವನೇ, ನಿನ್ನ ಕಾರ್ಯಗಳಿಂದ ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಿರುವೆ.
ಅವುಗಳ ಕುರಿತು ನಾವು ಹರ್ಷದಿಂದ ಹಾಡುವೆವು.
12-13 ನೀತಿವಂತರಾದರೋ ಯೆಹೋವನ ಆಲಯದಲ್ಲಿ
ಬೆಳೆಯುತ್ತಿರುವ ಲೆಬನೋನಿನ ದೇವದಾರು ವೃಕ್ಷದಂತಿರುವರು.
ನೀತಿವಂತರಾದರೋ ನಮ್ಮ ದೇವಾಲಯದ ಅಂಗಳದಲ್ಲಿ
ಮೊಗ್ಗು ಬಿಡುತ್ತಿರುವ ಖರ್ಜೂರದ ಮರಗಳಂತಿರುವರು.
14 ಅವರು ಮುಪ್ಪಿನಲ್ಲಿಯೂ ಪುಷ್ಟಿಯಾಗಿ ಬೆಳೆದಿರುವ
ಎಲೆಮರಗಳಂತೆ ಫಲಿಸುವರು.
15 ಯೆಹೋವನು ಒಳ್ಳೆಯವನೆಂಬುವುದಕ್ಕೆ
ಅವರು ದೃಷ್ಟಾಂತವಾಗಿರುವರು.
ಆತನೇ ನನ್ನ ಬಂಡೆ.
ಆತನು ಎಂದಿಗೂ ತಪ್ಪು ಮಾಡನು.
6 ಆದ್ದರಿಂದ ಯಾವಾಗಲೂ ಧೈರ್ಯದಿಂದಿದ್ದೇವೆ. ಈ ದೇಹದಲ್ಲಿ ವಾಸವಾಗಿರುವ ತನಕ ಪ್ರಭುವಿನಿಂದ ದೂರವಾಗಿರುತ್ತೇವೆಂಬುದು ನಮಗೆ ತಿಳಿದಿದೆ. 7 ನಾವು ಯಾವುದನ್ನು ನೋಡುತ್ತಿದ್ದೇವೋ ಅದರಿಂದ ಜೀವಿಸುತ್ತಿಲ್ಲ. ಆದರೆ ಯಾವುದನ್ನು ನಂಬಿದ್ದೇವೋ ಅದರಿಂದ ಜೀವಿಸುತ್ತಿದ್ದೇವೆ. 8 ಆದ್ದರಿಂದ ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಪ್ರಭುವಿನೊಂದಿಗೆ ವಾಸಿಸುವುದನ್ನೇ ನಿಜವಾಗಿಯೂ ಅಪೇಕ್ಷಿಸುತ್ತೇವೆ. 9 ದೇವರನ್ನು ಮೆಚ್ಚಿಸಬೇಕೆಂಬುದೊಂದೇ ನಮಗಿರುವ ಉದ್ದೇಶವಾಗಿದೆ. ನಾವು ನಮ್ಮ ದೇಹದಲ್ಲಿ ಇಲ್ಲಿ ವಾಸವಾಗಿರುವಾಗಲೂ ಪ್ರಭುವಿನೊಂದಿಗೆ ಅಲ್ಲಿ ವಾಸವಾಗಿರುವಾಗಲೂ ಆತನನ್ನು ಮೆಚ್ಚಿಸಬೇಕೆಂಬುದೊಂದೇ ನಮ್ಮ ಬಯಕೆಯಾಗಿದೆ. 10 ನಾವೆಲ್ಲರೂ ನ್ಯಾಯ ವಿಚಾರಣೆಗಾಗಿ ಕ್ರಿಸ್ತನ ಮುಂದೆ ನಿಂತುಕೊಳ್ಳಲೇಬೇಕು. ಪ್ರತಿಯೊಬ್ಬನು ಇಹಲೋಕದ ದೇಹದಲ್ಲಿ ವಾಸವಾಗಿದ್ದಾಗ ಮಾಡಿದ ಒಳ್ಳೆಯದಕ್ಕಾಗಲಿ ಕೆಟ್ಟದಕ್ಕಾಗಲಿ ಪ್ರತಿಫಲವನ್ನು ಹೊಂದುವನು.
ಜನರನ್ನು ದೇವರ ಸ್ನೇಹಿತರನ್ನಾಗಿಸಲು ಮಾಡತಕ್ಕ ಸಹಾಯ
11 ಪ್ರಭುವಿನ ಭಯ ಎಂದರೇನೆಂಬುದು ನಮಗೆ ತಿಳಿದಿದೆ. ಆದ್ದರಿಂದ ಸತ್ಯವನ್ನು ಸ್ವೀಕರಿಸಿಕೊಳ್ಳುವಂತೆ ಜನರಿಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲನು. ನೀವು ಸಹ ನಿಮ್ಮ ಹೃದಯಗಳಲ್ಲಿ ನಮ್ಮನ್ನು ತಿಳಿದುಕೊಂಡಿದ್ದೀರೆಂದು ನಂಬುತ್ತೇವೆ. 12 ನಾವು ನಮ್ಮನ್ನು ನಿಮ್ಮ ಮುಂದೆ ಮತ್ತೊಮ್ಮೆ ನಿರೂಪಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಬಗ್ಗೆ ನಿಮಗೆ ಹೇಳುತ್ತಿದ್ದೇವೆಯಷ್ಟೆ. ನೀವು ನಮ್ಮ ವಿಷಯದಲ್ಲಿ ಹೆಮ್ಮೆಪಡುವುದಕ್ಕೆ ನಿಮಗೆ ಕಾರಣಗಳನ್ನು ಕೊಡುತ್ತಿದ್ದೇವೆ. ಆಗ, ಕಣ್ಣಿಗೆ ಕಾಣುವ ಸಂಗತಿಗಳ ಬಗ್ಗೆ ಹೆಮ್ಮೆಪಡುವ ಜನರಿಗೆ ಕೊಡತಕ್ಕ ಉತ್ತರವು ನಿಮ್ಮಲಿರುವುದು. ಆ ಜನರು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯ ಬಗ್ಗೆ ಚಿಂತಿಸುವುದಿಲ್ಲ. 13 ನಾವು ಹುಚ್ಚರಾಗಿದ್ದರೆ ಅದು ದೇವರಿಗೋಸ್ಕರವಾಗಿಯೇ. ನಮಗೆ ಸ್ವಸ್ಥಬುದ್ಧಿಯಿದ್ದರೆ ಅದು ನಿಮಗೋಸ್ಕರವಾಗಿಯೇ.
14 ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಿಸುತ್ತದೆ. ಏಕೆಂದರೆ, ಎಲ್ಲಾ ಜನರಿಗೋಸ್ಕರವಾಗಿ ಆತನು ಸತ್ತನೆಂಬುದು ನಮಗೆ ಗೊತ್ತಿದೆ. ಆದ್ದರಿಂದ ಎಲ್ಲರೂ ಸತ್ತುಹೋದರು. 15 ಜೀವಿಸುವವರು ಇನ್ನು ಮೇಲೆ ತಮಗೋಸ್ಕರ ಜೀವಿಸಬಾರದೆಂದು ಕ್ರಿಸ್ತನು ಎಲ್ಲಾ ಜನರಿಗಾಗಿ ಸತ್ತನು. ಆ ಜನರು ತನಗೋಸ್ಕರ ಜೀವಿಸಲೆಂದು ಆತನು ಅವರಿಗೋಸ್ಕರ ಸತ್ತನು ಮತ್ತು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನು.
16 ಹೀಗಿರಲಾಗಿ, ಲೋಕವು ಜನರ ವಿಷಯವಾಗಿ ಯೋಚಿಸುವಂತೆ ಇಂದಿನಿಂದ ನಾವು ಯಾರ ಬಗ್ಗೆಯೂ ಯೋಚಿಸುವುದಿಲ್ಲ. ಲೋಕವು ಯೋಚಿಸುವಂತೆ ಹಿಂದಿನ ಕಾಲದಲ್ಲಿ ನಾವು ಕ್ರಿಸ್ತನ ಬಗ್ಗೆ ಯೋಚಿಸಿಕೊಂಡಿದ್ದೆವು. ಆದರೆ ಈಗ ನಾವು ಆ ರೀತಿಯಲ್ಲಿ ಯೋಚಿಸುವುದಿಲ್ಲ. 17 ಯಾವನಾದರೂ ಕ್ರಿಸ್ತನಲ್ಲಿದ್ದರೆ, ಅವನು ಹೊಸ ಸೃಷ್ಟಿಯಾಗಿದ್ದಾನೆ. ಹಳೆಯ ಸಂಗತಿಗಳೆಲ್ಲಾ ಅಳಿದು ಹೋದವು; ಪ್ರತಿಯೊಂದೂ ಹೊಸದಾಯಿತು.
ಬಿತ್ತಲ್ಪಟ್ಟ ಬೀಜವನ್ನು ಕುರಿತು ಯೇಸು ಹೇಳಿದ ಸಾಮ್ಯ
26 ನಂತರ ಯೇಸು, “ದೇವರ ರಾಜ್ಯವು ಭೂಮಿಯಲ್ಲಿ ಬೀಜ ಬಿತ್ತಿದ ಮನುಷ್ಯನಂತಿದೆ. 27 ಬೀಜವು ಹಗಲಿರುಳು ಬೆಳೆಯುತ್ತದೆ. ರೈತನು ಮಲಗಿರುವಾಗಲೂ ಎಚ್ಚರದಿಂದಿರುವಾಗಲೂ ಬೀಜ ಬೆಳೆಯುತ್ತಲೇ ಇರುವುದು. ಬೀಜ ಹೇಗೆ ಬೆಳೆಯುತ್ತದೆಂಬುದು ರೈತನಿಗೆ ತಿಳಿಯುವುದಿಲ್ಲ. 28 ಭೂಮಿಯು ಮೊದಲು ಸಸಿಯನ್ನೂ ಅನಂತರ ಹೊಡೆಯನ್ನೂ ತರುವಾಯ ತೆನೆತುಂಬ ಕಾಳನ್ನೂ ತನ್ನಷ್ಟಕ್ಕೇ ತಾನೇ ಉತ್ಪತ್ತಿಮಾಡುತ್ತದೆ. 29 ತೆನೆಯು ಬಲಿತಾಗ ರೈತನು ಗಿಡವನ್ನು ಕೊಯ್ಯುವನು. ಇದನ್ನೇ ಸುಗ್ಗಿಕಾಲ ಎನ್ನುವರು” ಎಂದು ಹೇಳಿದನು.
ದೇವರ ರಾಜ್ಯವು ಸಾಸಿವೆ ಕಾಳಿನಂತಿದೆ
(ಮತ್ತಾಯ 13:31-32,34-35; ಲೂಕ 13:18-19)
30 ನಂತರ ಯೇಸು, “ದೇವರ ರಾಜ್ಯದ ಬಗ್ಗೆ ವಿವರಿಸಲು ನಾನು ನಿಮಗೆ ಯಾವ ಸಾಮ್ಯವನ್ನು ಹೇಳಲಿ? 31 ದೇವರ ರಾಜ್ಯವು ಸಾಸಿವೆ ಕಾಳಿನಂತಿರುತ್ತದೆ. ನೀವು ಭೂಮಿಯಲ್ಲಿ ಬಿತ್ತುವ ಕಾಳುಗಳಲ್ಲಿ ಸಾಸಿವೆ ಕಾಳು ಅತ್ಯಂತ ಸಣ್ಣದಾಗಿದೆ. 32 ಆದರೆ ನೀವು ಈ ಕಾಳನ್ನು ಬಿತ್ತಿದಾಗ, ಅದು ಬೆಳೆದು, ನಿಮ್ಮ ತೋಟದ ಇತರ ಗಿಡಗಳಿಗಿಂತ ಅತಿ ದೊಡ್ಡದಾಗುತ್ತದೆ. ಅದಕ್ಕೆ ದೊಡ್ಡದೊಡ್ಡ ರೆಂಬೆಗಳಿರುತ್ತವೆ. ಕಾಡಿನ ಹಕ್ಕಿಗಳು ಬಂದು, ಅಲ್ಲಿ ಗೂಡುಗಳನ್ನು ಕಟ್ಟಿಕೊಂಡು ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳುತ್ತವೆ” ಎಂದು ಹೇಳಿದನು.
33 ಯೇಸು ಇಂಥ ಅನೇಕ ಸಾಮ್ಯಗಳ ಮೂಲಕ ಜನರಿಗೆ ಅರ್ಥವಾಗುವಂತೆ ಉಪದೇಶಿಸಿದನು. 34 ಯೇಸುವು ಜನರಿಗೆ ಯಾವಾಗಲೂ ಸಾಮ್ಯಗಳ ಮೂಲಕ ಉಪದೇಶಿಸಿದನು. ಆದರೆ ತನ್ನ ಶಿಷ್ಯರು ಮಾತ್ರ ಇರುವಾಗ ಎಲ್ಲವನ್ನೂ ಅವರಿಗೆ ವಿವರಿಸಿ ತಿಳಿಸುತ್ತಿದ್ದನು.
Kannada Holy Bible: Easy-to-Read Version. All rights reserved. © 1997 Bible League International