Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 63

ದಾವೀದನು ಯೆಹೂದದ ಅರಣ್ಯದಲ್ಲಿದ್ದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

63 ದೇವರೇ, ನೀನೇ ನನ್ನ ದೇವರು.
    ನಿನಗಾಗಿ ಕುತೂಹಲದಿಂದ ಎದುರು ನೋಡುತ್ತೇನೆ.
ನೀರಿಲ್ಲದೆ ಒಣಗಿದ ಭೂಮಿಯಂತೆ ನನ್ನ ಆತ್ಮವು ನಿನಗಾಗಿ ಬಾಯಾರಿದೆ;
    ನನ್ನ ದೇಹವು ನಿನಗಾಗಿ ಬಯಸಿದೆ.
ಹೌದು, ನಿನ್ನನ್ನು ನಿನ್ನ ಆಲಯದಲ್ಲಿ ನೋಡಿದ್ದೇನೆ,
    ನಿನ್ನ ಶಕ್ತಿಯನ್ನೂ ಮಹಿಮೆಯನ್ನೂ ಕಂಡಿದ್ದೇನೆ.
ನಿನ್ನ ಪ್ರೀತಿಯು ಜೀವಕ್ಕಿಂತಲೂ ಶ್ರೇಷ್ಠ.
    ನನ್ನ ತುಟಿಗಳು ನಿನ್ನನ್ನು ಕೊಂಡಾಡುತ್ತವೆ.
ಹೌದು, ನನ್ನ ಜೀವಮಾನವೆಲ್ಲಾ ನಿನ್ನನ್ನು ಕೊಂಡಾಡುವೆನು.
    ನಿನ್ನ ಹೆಸರಿನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
ಮೃಷ್ಟಾನ್ನವನ್ನು ತಿಂದಿರುವವನಂತೆ ತೃಪ್ತನಾಗಿರುವೆನು.
    ನನ್ನ ಬಾಯಿ ನಿನ್ನನ್ನು ಕೊಂಡಾಡುವುದು.
ಹಾಸಿಗೆಯು ಮೇಲೆ ಮಲಗಿರುವಾಗಲೂ ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
    ಮಧ್ಯರಾತ್ರಿಯಲ್ಲಿಯೂ ನಿನ್ನನ್ನು ನೆನಸಿಕೊಳ್ಳುವೆನು.
ನಿಜವಾಗಿಯೂ ನೀನೇ ನನಗೆ ಸಹಾಯಕ.
    ನಿನ್ನ ರೆಕ್ಕೆಗಳ ಮರೆಯಲ್ಲಿ ಆನಂದಘೋಷ ಮಾಡುವೆನು.
ನನ್ನ ಆತ್ಮವು ನಿನ್ನನ್ನು ಅಂಟಿಕೊಂಡಿರುವುದು.
    ನಿನ್ನ ಬಲಗೈ ನನ್ನ ಕೈಹಿಡಿದು ನಡೆಸುವುದು.

ನನ್ನನ್ನು ಕೊಲ್ಲಬೇಕೆಂದಿರುವವರು
    ಪಾತಾಳಕ್ಕೆ ಇಳಿದುಹೋಗುವರು.
10 ಅವರು ಖಡ್ಗಗಳಿಂದ ಕೊಲ್ಲಲ್ಪಡುವರು.
    ಅವರ ಶವಗಳು ನರಿಗಳ ಪಾಲಾಗುವವು.
11 ರಾಜನಾದರೋ ತನ್ನ ದೇವರಲ್ಲಿಯೇ ಸಂತೋಷಿಸುವನು.
    ಹರಕೆಹೊತ್ತು ಅವನಿಗೆ ವಿಧೇಯರಾಗಿರುವವರು ದೇವರನ್ನು ಕೊಂಡಾಡುವರು,
    ಯಾಕೆಂದರೆ ಆ ಸುಳ್ಳುಗಾರರನ್ನೆಲ್ಲಾ ಆತನು ಸೋಲಿಸಿದ್ದಾನೆ.

ಯೋವೇಲ 1:1-14

ಮಿಡತೆಗಳು ಬೆಳೆಯನ್ನು ನಾಶಮಾಡುವವು

ಪೆತೂವೇಲನ ಮಗನಾದ ಯೋವೇಲನು ಯೆಹೋವನಿಂದ ಈ ಸಂದೇಶವನ್ನು ಪಡೆದನು.

ನಾಯಕರೇ, ಈ ಸಂದೇಶಕ್ಕೆ ಕಿವಿಗೊಡಿರಿ.
    ದೇಶದಲ್ಲಿ ವಾಸಿಸುವ ಎಲ್ಲಾ ಜನರೇ, ನನ್ನ ಮಾತುಗಳನ್ನು ಆಲೈಸಿರಿ.
ನಿಮ್ಮ ಜೀವಮಾನಕಾಲದಲ್ಲಿ ಇಂಥಾ ಸಂಗತಿ ಎಂದಾದರೂ ಸಂಭವಿಸಿದೆಯೋ? ಇಲ್ಲ!
    ನಿಮ್ಮ ತಂದೆಗಳ ಕಾಲದಲ್ಲಿಯಾದರೂ ಇಂಥಾ ಸಂಗತಿಗಳು ಸಂಭವಿಸಿದೆಯೋ? ಇಲ್ಲ!
ಇವುಗಳನ್ನು ನೀವು ನಿಮ್ಮ ಮಕ್ಕಳಿಗೆ ತಿಳಿಸುವಿರಿ.
    ಮತ್ತು ನಿಮ್ಮ ಮಕ್ಕಳು ಅವರ ಮಕ್ಕಳಿಗೆ ತಿಳಿಸುವರು.
    ಮತ್ತು ನಿಮ್ಮ ಮೊಮ್ಮಕ್ಕಳು ಅವರ ನಂತರದ ಪೀಳಿಗೆಗೆ ತಿಳಿಸುವರು.
ಚೂರಿ ಮಿಡತೆ ತಿಂದುಬಿಟ್ಟಿದ್ದನ್ನು
    ಗುಂಪು ಮಿಡತೆ ತಿಂದಿತು.
ಗುಂಪು ಮಿಡತೆ ತಿಂದುಬಿಟ್ಟದ್ದನ್ನು
    ಹಾರುವ ಮಿಡತೆ ತಿಂದಿತು.
ಹಾರುವ ಮಿಡತೆ ತಿಂದು ಉಳಿದದ್ದನ್ನು
    ನಾಶಮಾಡುವ ಮಿಡತೆ ತಿಂದುಬಿಟ್ಟಿತು.

ಮಿಡತೆಗಳು ಆಗಮಿಸಿದವು

ಅಮಲೇರಿದವರೇ, ಎಚ್ಚರಗೊಂಡು ಅಳಿರಿ.
    ದ್ರಾಕ್ಷಾರಸವನ್ನು ಕುಡಿಯುವವರೇ, ಅಳಿರಿ.
ಯಾಕೆಂದರೆ ನಿಮ್ಮ ಸಿಹಿಯಾದ ದ್ರಾಕ್ಷಾರಸವು ಮುಗಿದುಹೋಯಿತು.
    ಆ ದ್ರಾಕ್ಷಾರಸದ ಸವಿಯು ನಿಮಗೆ ಇನ್ನು ಸಿಗದು.
ನನ್ನ ಜನಾಂಗಕ್ಕೆ ವಿರುದ್ಧವಾಗಿ ಬಲಶಾಲಿಯಾದ ದೊಡ್ಡ ರಾಜ್ಯವು ಯುದ್ಧಕ್ಕೆ ಬರುವದು.
    ಅವರು ಸೈನಿಕರನ್ನು ಲೆಕ್ಕಿಸಲು ಸಾಧ್ಯವಿಲ್ಲ.
ಆ ಮಿಡತೆಗಳಂತಿರುವ ಸೈನಿಕರು ನಿಮ್ಮನ್ನು ಸೀಳಿಬಿಡುವರು.
    ಅವರ ಹಲ್ಲುಗಳು ಸಿಂಹದ ಹಲ್ಲಿನಂತಿವೆ.

ಆ ಮಿಡತೆಗಳು ನನ್ನ ದ್ರಾಕ್ಷಿತೋಟದ
    ಹಣ್ಣುಗಳನ್ನೆಲ್ಲಾ ತಿಂದುಬಿಡುವವು.
ನನ್ನ ಅಂಜೂರದ ಮರಗಳನ್ನು ನಾಶಮಾಡುವವು.
    ನನ್ನ ಮರಗಳ ತೊಗಟೆಗಳನ್ನು ಮಿಡತೆಗಳು ತಿಂದುಬಿಡುವವು.
ಅದರ ಕೊಂಬೆಗಳು ಬಿಳುಪಾಗುವವು.
    ಮರಗಳು ನಾಶವಾಗುವವು.

ಜನರು ಬೊಬ್ಬಿಡುತ್ತಾರೆ

ಮದುಮಗನು ಸತ್ತುಹೋದಾಗ
    ಮದುಮಗಳು ಗೋಳಾಡುವಂತೆ ನೀವು ಗೋಳಾಡಿರಿ.
ಯಾಜಕರೇ, ಯೆಹೋವನ ಸೇವಕರೇ, ಗೋಳಾಡಿರಿ.
    ಯಾಕೆಂದರೆ ಇನ್ನು ಮುಂದೆ ಯೆಹೋವನ ಆಲಯದಲ್ಲಿ ಪಾನ ಮತ್ತು ಧಾನ್ಯಾರ್ಪಣೆ ಇರದು.
10 ಹೊಲಗದ್ದೆಗಳೆಲ್ಲಾ ನಾಶವಾದವು.
    ಭೂಮಿಯೂ ಗೋಳಾಡುತ್ತಿರುವುದು.
    ಯಾಕೆಂದರೆ ಧಾನ್ಯವು ನಾಶವಾದವು.
ಹೊಸ ದ್ರಾಕ್ಷಾರಸವು ಬತ್ತಿಹೋಯಿತು.
    ಎಣ್ಣೆಯು ಇಲ್ಲದೆಹೋಯಿತು.
11 ರೈತರೇ, ದುಃಖಿಸಿರಿ,
    ದ್ರಾಕ್ಷಿತೋಟ ಮಾಡಿದವರೇ, ಗಟ್ಟಿಯಾಗಿ ಬೊಬ್ಬಿಡಿರಿ.
ಗೋದಿಗಾಗಿಯೂ, ಜವೆಗೋದಿಗಾಗಿಯೂ ಅಳಿರಿ.
    ಯಾಕೆಂದರೆ ಬೆಳೆಯು ನಾಶವಾಯಿತು.
12 ದ್ರಾಕ್ಷಿಬಳ್ಳಿಗಳು ಒಣಗಿಹೋಗಿವೆ
    ಮತ್ತು ಅಂಜೂರದ ಮರವು ಸಾಯುತ್ತಲಿದೆ.
    ದಾಳಿಂಬದ ಮರ, ಖರ್ಜೂರದ ಮರ, ಸೇಬಿನ ಮರ,
ತೋಟದಲ್ಲಿರುವ ಎಲ್ಲಾ ಮರಗಳು ಒಣಗಿಹೋಗಿವೆ.
    ಜನರಲ್ಲಿರುವ ಸಂತೋಷವೂ ಬತ್ತಿಹೋಗಿದೆ.
13 ಯಾಜಕರೇ, ನೀವು ನಿಮ್ಮ ಶೋಕವಸ್ತ್ರವನ್ನು ಧರಿಸಿ ಗಟ್ಟಿಯಾಗಿ ರೋಧಿಸಿರಿ.
    ವೇದಿಕೆಯಲ್ಲಿ ಸೇವೆಮಾಡುವವರೇ, ಗಟ್ಟಿಯಾಗಿ ರೋಧಿಸಿರಿ.
ನನ್ನ ದೇವರ ಸೇವಕರೇ, ನೀವು ನಿಮ್ಮ ಶೋಕವಸ್ತ್ರಗಳಲ್ಲಿಯೇ ನಿದ್ರೆಮಾಡಿರಿ.
    ಯಾಕೆಂದರೆ ಇನ್ನು ದೇವಾಲಯದಲ್ಲಿ ಧಾನ್ಯ ಮತ್ತು ಪಾನಸಮರ್ಪಣೆ ಇಲ್ಲ.

ಮಿಡತೆಗಳ ಭಯಂಕರ ನಾಶನ

14 ಉಪವಾಸ ದಿನವನ್ನು ಗೊತ್ತುಪಡಿಸಿರಿ. ಆ ದಿನಕ್ಕಾಗಿ ಜನರನ್ನು ಒಟ್ಟುಗೂಡಿಸಿರಿ. ದೇಶದಲ್ಲಿ ವಾಸವಾಗಿರುವ ನಾಯಕರುಗಳೆಲ್ಲರನ್ನೂ ಜನರನ್ನೂ ಒಟ್ಟುಗೂಡಿಸಿರಿ; ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ಅವರನ್ನೆಲ್ಲ ಪ್ರಾರ್ಥನೆಗಾಗಿ ಕರೆದುಕೊಂಡು ಬನ್ನಿರಿ.

1 ಥೆಸಲೋನಿಕದವರಿಗೆ 3:6-13

ಆದರೆ ತಿಮೊಥೆಯನು ನಿಮ್ಮಿಂದ ನಮ್ಮ ಬಳಿಗೆ ಹಿಂತಿರುಗಿ ಬಂದಾಗ, ನಿಮ್ಮ ನಂಬಿಕೆಯ ಮತ್ತು ಪ್ರೀತಿಯ ಬಗ್ಗೆ ಶುಭವಾರ್ತೆಯನ್ನು ನಮಗೆ ಹೇಳಿದನು. ನೀವು ಯಾವಾಗಲೂ ನಮ್ಮನ್ನು ಜ್ಞಾಪಿಸಿಕೊಳ್ಳುವಿರೆಂತಲೂ ನಮ್ಮನ್ನು ಮತ್ತೆ ನೋಡಲು ಅತ್ಯಾಸೆಯಿಂದ ಇದ್ದೀರೆಂತಲೂ ಅವನು ನಮಗೆ ತಿಳಿಸಿದನು. ಅದೇ ರೀತಿಯಲ್ಲಿ ನಾವೂ ನಿಮ್ಮನ್ನು ನೋಡಲು ಅತ್ಯಾಸೆಯಿಂದ ಇದ್ದೇವೆ. ಸಹೋದರ ಸಹೋದರಿಯರೇ, ನಿಮ್ಮ ನಂಬಿಕೆಯ ದೆಸೆಯಿಂದ ನಿಮ್ಮ ವಿಷಯದಲ್ಲಿ ಪ್ರೋತ್ಸಾಹಗೊಂಡೆವು. ನಮಗೆ ಬಹಳ ತೊಂದರೆಯಿದ್ದರೂ ಹಿಂಸೆಯಿದ್ದರೂ ಆದರಣೆಯಾಯಿತು. ನೀವು ಪ್ರಭುವಿನಲ್ಲಿ ಬಲವಾಗಿದ್ದರೆ, ನಮ್ಮಲ್ಲಿ ಜೀವ ತುಂಬಿದಂತಿರುವುದು. ನಿಮ್ಮ ನಿಮಿತ್ತದಿಂದ ದೇವರ ಸನ್ನಿಧಿಯಲ್ಲಿ ಬಹಳ ಹರ್ಷಿತರಾಗಿದ್ದೇವೆ! ಆದ್ದರಿಂದ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನಮಗಿರುವ ಆನಂದಕ್ಕೆ ಸರಿಸಮವಾಗಿ ಕೃತಜ್ಞತಾಸ್ತುತಿ ಸಲ್ಲಿಸಲು ನಮಗೆ ಹೇಗೆ ಸಾಧ್ಯವಾದೀತು? 10 ಹಗಲಿರುಳು ನಿಮ್ಮ ವಿಷಯದಲ್ಲಿ ಬಹಳವಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ. ನಿಮ್ಮನ್ನು ಕಣ್ಣಾರೆ ಕಂಡು ನಿಮ್ಮ ನಂಬಿಕೆಯಲ್ಲಿರುವ ಕುಂದುಕೊರತೆಗಳನ್ನು ನಿವಾರಿಸಬೇಕೆಂದು ದೇವರಲ್ಲಿ ಹಗಲಿರುಳು ಪ್ರಾರ್ಥಿಸುತ್ತಿದ್ದೇವೆ.

11 ನಾವು ನಿಮ್ಮ ಬಳಿಗೆ ಬರಲು ಮಾರ್ಗವನ್ನು ಸರಾಗಗೊಳಿಸುವಂತೆ ನಮ್ಮ ತಂದೆಯಾದ ದೇವರಿಗೂ ಪ್ರಭುವಾದ ಯೇಸುವಿಗೂ ಪ್ರಾರ್ಥಿಸುತ್ತೇವೆ. 12 ನಾವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ಪ್ರೀತಿಯು ವೃದ್ಧಿಯಾಗಿ ಒಬ್ಬೊಬ್ಬರ ಮೇಲೆಯೂ ಇತರ ಜನರೆಲ್ಲರ ಮೇಲೆಯೂ ಹೆಚ್ಚಾಗಲೆಂದು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇವೆ. 13 ನಿಮ್ಮ ಹೃದಯಗಳು ಬಲಗೊಳ್ಳಲೆಂದು ಹೀಗೆ ಪ್ರಾರ್ಥಿಸುತ್ತೇವೆ. ನಮ್ಮ ಪ್ರಭುವಾದ ಯೇಸುವು ತನ್ನ ಪವಿತ್ರ ಜನರೊಂದಿಗೆ ಪ್ರತ್ಯಕ್ಷನಾದಾಗ ನೀವು ತಂದೆಯಾದ ದೇವರ ಸನ್ನಿಧಿಯಲ್ಲಿ ಪರಿಶುದ್ಧರೂ ತಪ್ಪಿಲ್ಲದವರೂ ಆಗಿರುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International