Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 85:8-13

ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
    ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
    ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
    ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
    ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
    ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
    ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
    ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.

1 ರಾಜರುಗಳು 18:17-19

17 ಅಹಾಬನು ಎಲೀಯನನ್ನು ಕಂಡು, “ಇಸ್ರೇಲಿಗೆ ತೊಂದರೆ ಕೊಡುವವನು ನೀನೇ ಅಲ್ಲವೇ?” ಎಂದನು.

18 ಎಲೀಯನು, “ಇಸ್ರೇಲಿನ ತೊಂದರೆಗೆ ನಾನು ಕಾರಣನಲ್ಲ. ನೀನು ಮತ್ತು ನಿನ್ನ ತಂದೆಯ ಕುಟುಂಬವು ಈ ತೊಂದರೆಗಳಿಗೆಲ್ಲ ಕಾರಣ. ಯೆಹೋವನ ಆಜ್ಞೆಗಳಿಗೆ ವಿಧೇಯನಾಗದೆ ಸುಳ್ಳುದೇವರುಗಳನ್ನು ಅನುಸರಿಸತೊಡಗಿದ್ದರಿಂದ ಆ ತೊಂದರೆಗಳಿಗೆಲ್ಲಾ ನೀನೇ ಕಾರಣನಾಗಿರುವೆ. 19 ಈಗ ಕರ್ಮೆಲ್ ಬೆಟ್ಟದ ಮೇಲೆ ನನ್ನನ್ನು ಭೇಟಿಮಾಡಲು ಎಲ್ಲಾ ಇಸ್ರೇಲರಿಗೆ ತಿಳಿಸು. ಬಾಳನ ನಾನೂರೈವತ್ತು ಮಂದಿ ಪ್ರವಾದಿಗಳನ್ನು ಆ ಸ್ಥಳಕ್ಕೆ ಕರೆದುಕೊಂಡು ಬಾ. ಸುಳ್ಳುದೇವತೆಯಾದ ಅಶೇರಳ ನಾನೂರು ಮಂದಿ ಪ್ರವಾದಿಗಳನ್ನೂ ಕರೆದುಕೊಂಡು ಬಾ. ಆ ಪ್ರವಾದಿಗಳನ್ನು ರಾಣಿಯಾದ ಈಜೆಬೆಲಳು ಪೋಷಣೆ ಮಾಡುತ್ತಿದ್ದಾಳೆ” ಎಂದು ಹೇಳಿದನು.

1 ರಾಜರುಗಳು 18:30-40

30 ಆಗ ಎಲೀಯನು ಜನರೆಲ್ಲರಿಗೂ, “ಈಗ ನನ್ನ ಬಳಿಗೆ ಬನ್ನಿ” ಎಂದನು. ಅವನ ಸುತ್ತಲೂ ಜನರೆಲ್ಲರೂ ಒಟ್ಟುಗೂಡಿದರು. ಯೆಹೋವನ ಯಜ್ಞವೇದಿಕೆಯು ಒಡೆದುಹೋಗಿತ್ತು. ಎಲೀಯನು ಅದನ್ನು ಸರಿಪಡಿಸಿದನು. 31 ಎಲೀಯನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಒಂದೊಂದು ಕಲ್ಲಿನಂತೆ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡನು. ಯೆಹೋವನಿಂದ ಇಸ್ರೇಲನೆಂದು ಕರೆಸಿಕೊಂಡ ಯಾಕೋಬನ ಹನ್ನೆರಡು ಗಂಡುಮಕ್ಕಳ ಹೆಸರನ್ನೇ ಈ ಕುಲಗಳಿಗೆ ಕೊಡಲಾಗಿತ್ತು. 32 ಎಲೀಯನು ಯೆಹೋವನ ಗೌರವಾರ್ಥವಾಗಿ ಯಜ್ಞವೇದಿಕೆಯನ್ನು ಈ ಕಲ್ಲುಗಳಿಂದ ಸರಿಪಡಿಸಿದನು. ಎಲೀಯನು ಯಜ್ಞವೇದಿಕೆಯ ಸುತ್ತಲೂ ಹಳ್ಳವನ್ನು ತೋಡಿದನು. ಅದು ಹದಿನೈದು ಲೀಟರ್ ನೀರು ತುಂಬುವಷ್ಟು ಅಗಲವಾಗಿತ್ತು ಮತ್ತು ಆಳವಾಗಿತ್ತು. 33 ನಂತರ ಎಲೀಯನು ಸೌದೆಯನ್ನು ಯಜ್ಞವೇದಿಕೆಯ ಮೇಲೆ ಇಟ್ಟನು. ಅವನು ಹೋರಿಯನ್ನು ತುಂಡುತುಂಡಾಗಿ ಕತ್ತರಿಸಿದನು. ಅವನು ಆ ತುಂಡುಗಳನ್ನು ಸೌದೆಯ ಮೇಲಿಟ್ಟನು. 34 ಎಲೀಯನು, “ನಾಲ್ಕು ಕೊಡಗಳಲ್ಲಿ ನೀರನ್ನು ತುಂಬಿಸಿ. ಆ ಮಾಂಸದ ತುಂಡುಗಳ ಮೇಲೆ ಮತ್ತು ಸೌದೆಯ ಮೇಲೆ ಆ ನೀರನ್ನು ಸುರಿಯಿರಿ” ಎಂದು ಹೇಳಿದನು. ಎಲೀಯನು, “ಮತ್ತೆ ಅದೇ ರೀತಿ ಮಾಡಿ” ಎಂದನು, ಅವನು, “ಮೂರನೆಯ ಸಲ ಅದೇ ರೀತಿ ಮಾಡಿ” ಎಂದನು. 35 ಯಜ್ಞವೇದಿಕೆಯಿಂದ ಹರಿದ ನೀರೆಲ್ಲ ಹಳ್ಳವನ್ನು ತುಂಬಿಕೊಂಡಿತ್ತು.

36 ಅದು ಮಧ್ಯಾಹ್ನದ ಯಜ್ಞಗಳನ್ನು ಅರ್ಪಿಸುವ ಸಮಯ. ಪ್ರವಾದಿಯಾದ ಎಲೀಯನು ಯಜ್ಞವೇದಿಕೆಯ ಹತ್ತಿರಕ್ಕೆ ಹೋಗಿ, “ಅಬ್ರಹಾಮನ, ಇಸಾಕನ ಮತ್ತು ಯಾಕೋಬನ ದೇವರಾದ ಯೆಹೋವನೇ, ನೀನು ಇಸ್ರೇಲಿನಲ್ಲಿರುವ ದೇವರೆಂಬುದನ್ನು ರುಜುವಾತುಪಡಿಸಲು ನಾನೀಗ ನಿನ್ನನ್ನು ಪ್ರಾರ್ಥಿಸುತ್ತಿದ್ದೇನೆ. ನಾನು ನಿನ್ನ ಸೇವಕನೆಂಬುದನ್ನೂ ನೀನು ನಿರೂಪಿಸು. ಈ ಕಾರ್ಯಗಳನ್ನೆಲ್ಲಾ ನಾನು ಮಾಡುವಂತೆ ನೀನು ಆಜ್ಞಾಪಿಸಿದೆ ಎನ್ನುವುದನ್ನೂ ಈ ಜನರಿಗೆ ತೋರಿಸು. 37 ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು. ಯೆಹೋವನೇ, ನೀನು ದೇವರೆಂಬುದನ್ನು ಈ ಜನರಿಗೆಲ್ಲ ತೋರಿಸು. ಈ ಜನರನ್ನೆಲ್ಲ ಮತ್ತೆ ನೀನು ನಿನ್ನ ಬಳಿಗೆ ತರುತ್ತಿರುವೆ ಎಂಬುದನ್ನೂ ಈ ಜನರು ತಿಳಿದುಕೊಳ್ಳಲಿ” ಎಂದು ಪ್ರಾರ್ಥಿಸಿದನು.

38 ಕೂಡಲೇ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಗಳನ್ನು, ಸೌದೆಯನ್ನು, ಕಲ್ಲುಗಳನ್ನು ಮತ್ತು ಯಜ್ಞವೇದಿಕೆಯ ಸುತ್ತಲಿನ ಮಣ್ಣನ್ನೆಲ್ಲ ದಹಿಸಿತು. ಆ ಹಳ್ಳದಲ್ಲಿದ್ದ ನೀರನ್ನೆಲ್ಲ ಬೆಂಕಿಯು ದಹಿಸಿ ಒಣಗಿಸಿತು. 39 ಈ ದೃಶ್ಯವನ್ನು ಜನರೆಲ್ಲರೂ ನೋಡಿದರು. ಜನರು ನೆಲಕ್ಕೆ ಬಾಗಿ ನಮಸ್ಕರಿಸುತ್ತಾ, “ಯೆಹೋವನೇ ದೇವರು! ಯೆಹೋವನೇ ದೇವರು!” ಎಂದು ಕೂಗಿದರು.

40 ಆಗ ಎಲೀಯನು, “ಬಾಳನ ಪ್ರವಾದಿಗಳನ್ನು ಹಿಡಿದು ತನ್ನಿ! ಅವರಲ್ಲಿ ಒಬ್ಬರಾದರೂ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ!” ಎಂದು ಹೇಳಿದನು. ಪ್ರವಾದಿಗಳನ್ನೆಲ್ಲ ಜನರು ಹಿಡಿದುಕೊಂಡರು. ಎಲೀಯನು ಅವರನ್ನೆಲ್ಲಾ ಕೀಷೋನ್ ಬುಗ್ಗೆಗೆ ಎಳೆದುಕೊಂಡು ಹೋಗಿ ಕೊಂದು ಹಾಕಿದನು.

ಅಪೊಸ್ತಲರ ಕಾರ್ಯಗಳು 18:24-28

ಎಫೆಸದಲ್ಲಿ ಮತ್ತು ಅಖಾಯದಲ್ಲಿ ಅಪೊಲ್ಲೋಸನು

24 ಅಲೆಕ್ಸಾಂಡ್ರಿಯಾ ಪಟ್ಟಣದಿಂದ ಅಪೊಲ್ಲೋಸನೆಂಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಿದ್ಯಾವಂತನಾಗಿದ್ದನು ಮತ್ತು ಪವಿತ್ರ ಗ್ರಂಥದಲ್ಲಿ ಪಾಂಡಿತ್ಯ ಪಡೆದಿದ್ದನು. 25 ಅಪೊಲ್ಲೋಸನು ಯಾವಾಗಲೂ ಬಹು ಉತ್ಸುಕತೆಯಿಂದ ಯೇಸುವಿನ ಬಗ್ಗೆ ಜನರಿಗೆ ಉಪದೇಶಿಸುತ್ತಿದ್ದನು. ಯೇಸುವಿನ ಬಗ್ಗೆ ಅಪೊಲ್ಲೋಸನು ಹೇಳಿದ ಸಂಗತಿಗಳು ಸರಿಯಾಗಿದ್ದವು. ಆದರೆ ಸ್ನಾನಿಕ ಯೋಹಾನನ ದೀಕ್ಷಾಸ್ನಾನವೊಂದೇ ಇವನಿಗೆ ಗೊತ್ತಿತ್ತು. 26 ಅಪೊಲ್ಲೋಸನು ಸಭಾಮಂದಿರದಲ್ಲಿ ಬಹು ಧೈರ್ಯವಾಗಿ ಮಾಡಿದ ಉಪದೇಶವನ್ನು ಕೇಳಿದ ಪ್ರಿಸ್ಕಿಲ್ಲ ಮತ್ತು ಅಕ್ವಿಲ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ, ದೇವರ ಮಾರ್ಗವನ್ನು ಆಳವಾಗಿ ಗ್ರಹಿಸಿಕೊಳ್ಳಲು ನೆರವು ನೀಡಿದರು.

27 ಅಪೊಲ್ಲೋಸನು ಅಖಾಯ ಪ್ರಾಂತ್ಯಕ್ಕೆ ಹೋಗಲು ಅಪೇಕ್ಷಿಸಿದಾಗ ಎಫೆಸದ ಸಹೋದರರು ಅವನನ್ನು ಪ್ರೋತ್ಸಾಹಿಸಿದರು. ಅಲ್ಲದೆ ಅಖಾಯದಲ್ಲಿದ್ದ ಯೇಸುವಿನ ಶಿಷ್ಯರಿಗೆ ಅವರು ಪತ್ರವನ್ನು ಬರೆದು, ಅಪೊಲ್ಲೋಸನನ್ನು ಸ್ವೀಕರಿಸಿಕೊಳ್ಳಬೇಕೆಂದು ಅವರನ್ನು ಕೇಳಿಕೊಂಡರು. ಅಖಾಯದಲ್ಲಿ ಈ ಶಿಷ್ಯರು ದೇವರ ಕೃಪೆಯಿಂದಾಗಿ ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದರು. ಅಪೊಲ್ಲೋಸನು ಅಲ್ಲಿಗೆ ಹೋಗಿ ಅವರಿಗೆ ಬಹಳ ನೆರವು ನೀಡಿದನು. 28 ಅವನು ಜನರೆಲ್ಲರ ಮುಂದೆ ಯೆಹೂದ್ಯರ ವಿರುದ್ಧ ಬಹು ಬಲವಾಗಿ ವಾದಿಸಿ, ಪವಿತ್ರ ಗ್ರಂಥವನ್ನು ಆಧಾರವಾಗಿ ತೆಗೆದುಕೊಂಡು ಯೇಸುವೇ ಕ್ರಿಸ್ತನೆಂಬುದನ್ನು ಸ್ಪಷ್ಟವಾಗಿ ನಿರೂಪಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International