Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 5

ರಚನೆಗಾರ: ದಾವೀದ.

ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು.
    ನನ್ನ ಆಲೋಚನೆಗಳಿಗೆ ಗಮನಕೊಡು.
ನನ್ನ ರಾಜನೇ, ನನ್ನ ದೇವರೇ, ನಿನಗೇ ಮೊರೆಯಿಡುವೆನು.
    ನನ್ನ ಪ್ರಾರ್ಥನೆಯನ್ನು ಆಲೈಸು.
ಯೆಹೋವನೇ, ಪ್ರತಿಮುಂಜಾನೆ ನಿನಗೆ ಕಾಣಿಕೆಗಳನ್ನು ಅರ್ಪಿಸಿ ಸಹಾಯಕ್ಕಾಗಿ ಎದುರುನೋಡುವೆನು;
    ಪ್ರತಿಮುಂಜಾನೆ ನೀನು ನನ್ನ ಪ್ರಾರ್ಥನೆಗಳಿಗೆ ಕಿವಿಗೊಡುವೆ.

ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.
    ನಿನ್ನ ಸನ್ನಿಧಿಯಲ್ಲಿ ದುಷ್ಟರು ಇರಲಾರರು.
ನಿನ್ನನ್ನು ನಂಬದವರು ನಿನ್ನ ಬಳಿಗೆ ಬರಲಾರರು;
    ದುಷ್ಟರನ್ನು ನೀನು ದ್ವೇಷಿಸುವೆ.
ಸುಳ್ಳಾಡುವವರನ್ನು ನೀನು ನಾಶಪಡಿಸುವೆ.
    ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವನು ದ್ವೇಷಿಸುವನು.

ನಾನಂತೂ ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಆಲಯಕ್ಕೆ ಬರುವೆನು,
    ನಿನ್ನಲ್ಲಿ ಭಯಭಕ್ತಿಯುಳ್ಳವನಾಗಿ ನಿನ್ನ ಪವಿತ್ರ ಆಲಯದ ಕಡೆಗೆ ಅಡ್ಡಬೀಳುವೆನು.
ಯೆಹೋವನೇ, ವೈರಿಗಳು ನನ್ನನ್ನು ಗಮನಿಸುತ್ತಿರುವುದರಿಂದ
    ನಿನ್ನ ನೀತಿಯ ಮಾರ್ಗವನ್ನು ನನಗೆ ತೋರಿಸಿ,
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
ಅವರ ಮಾತುಗಳಲ್ಲಿ ಸತ್ಯವೆಂಬುದೇ ಇಲ್ಲ.
    ಅವರ ಬಾಯಿಗಳು ಸವಿಮಾತುಗಳನ್ನಾಡಿದರೂ
ಅವರ ಹೃದಯಗಳು ನಾಶಕರವಾದ ಗುಂಡಿಯಾಗಿವೆ.
    ಅವರ ಗಂಟಲು ತೆರೆದ ಸಮಾಧಿಗಳಂತಿವೆ.
10 ದೇವರೇ, ಅವರನ್ನು ದಂಡಿಸು!
    ಅವರು ತಮ್ಮ ಬಲೆಗಳಿಗೇ ಸಿಕ್ಕಿಕೊಳ್ಳಲಿ.
ಅವರು ನಿನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
    ಅವರ ಅನೇಕ ಅಪರಾಧಗಳ ನಿಮಿತ್ತ ಅವರನ್ನು ದಂಡಿಸು.
11 ದೇವರಲ್ಲಿ ಭರವಸವಿಟ್ಟಿರುವ ಜನರೆಲ್ಲರೂ ಸದಾಕಾಲ ಸಂತೋಷವಾಗಿರಲಿ.
    ನಿನ್ನ ಹೆಸರನ್ನು ಪ್ರೀತಿಸುವ ಜನರನ್ನು ಕಾಪಾಡಿ ಅವರಿಗೆ ಶಕ್ತಿಯನ್ನು ದಯಪಾಲಿಸು.
12 ಯೆಹೋವನೇ, ನೀನು ನೀತಿವಂತರಿಗೆ ಒಳ್ಳೆಯದನ್ನೇ ಮಾಡುವೆ;
    ನೀನು ಅವರನ್ನು ವಿಶಾಲವಾದ ಗುರಾಣಿಯಂತೆ ಸಂರಕ್ಷಿಸುವೆ.

ನೆಹೆಮೀಯ 1

ನೆಹೆಮೀಯನ ಪ್ರಾರ್ಥನೆ

ಇವು ನೆಹೆಮೀಯನ ಮಾತುಗಳು; ನೆಹೆಮೀಯನು ಹಕಲ್ಯನ ಮಗ. ಕಿಸ್ಲೇವ್ ತಿಂಗಳಿನಲ್ಲಿ ರಾಜಧಾನಿಯಾದ ಶೂಷನ್‌ನಲ್ಲಿ ನಾನು ಇದ್ದೆನು. ಅದು ಅರ್ತಷಸ್ತನ ಆಳ್ವಿಕೆಯ ಇಪ್ಪತ್ತನೆಯ ವರ್ಷವಾಗಿತ್ತು. ನಾನು ಶೂಷನ್‌ನಲ್ಲಿದ್ದಾಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀ ಮತ್ತು ಇನ್ನಿತರರು ಯೆಹೂದ ಪ್ರಾಂತ್ಯದಿಂದ ಬಂದಿದ್ದರು. ನಾನು ಅಲ್ಲಿರುವ ಯೆಹೂದ್ಯರ ಯೋಗಕ್ಷೇಮದ ಬಗ್ಗೆ ವಿಚಾರಿಸಿದೆನು. ಈ ಯೆಹೂದ್ಯರು ಸೆರೆವಾಸದಿಂದ ತಪ್ಪಿಸಿಕೊಂಡು ಇನ್ನೂ ಯೆಹೂದದಲ್ಲಿ ವಾಸವಾಗಿದ್ದರು. ಜೆರುಸಲೇಮ್ ನಗರದ ವಿಷಯವಾಗಿಯೂ ವಿಚಾರಿಸಿದೆನು.

ಆಗ ಹನಾನೀ ಮತ್ತು ಅವನ ಜೊತೆಗಾರರು, “ನೆಹೆಮೀಯನೇ, ಸೆರೆಯಿಂದ ತಪ್ಪಿಸಿಕೊಂಡು ಯೆಹೂದ ಪ್ರಾಂತ್ಯಕ್ಕೆ ಹೋಗಿರುವವರು ತುಂಬಾ ಶೋಚನೀಯ ಸ್ಥಿತಿಯಲ್ಲಿದ್ದಾರೆ. ಅವರು ಅನೇಕ ಸಮಸ್ಯೆಗಳಲ್ಲಿ ಸಿಕ್ಕಿಕೊಂಡು ಅವಮಾನಕ್ಕೀಡಾಗಿದ್ದಾರೆ. ಯಾಕೆಂದರೆ ಜೆರುಸಲೇಮಿನ ಪೌಳಿಗೋಡೆಗಳು ಕೆಡವಲ್ಪಟ್ಟಿವೆ; ಅದರ ಬಾಗಿಲುಗಳೆಲ್ಲಾ ಸುಟ್ಟುಹೋಗಿವೆ” ಎಂದು ಹೇಳಿದರು.

ಜೆರುಸಲೇಮಿನ ಪೌಳಿಗೋಡೆಯ ಮತ್ತು ಅಲ್ಲಿಯ ಜನರ ವಿಚಾರವಾಗಿ ಕೇಳಿದಾಗ ನಾನು ತುಂಬಾ ಗಲಿಬಿಲಿಗೊಂಡೆನು; ನಾನು ಅಲ್ಲಿಯೇ ನೆಲದ ಮೇಲೆ ಕುಳಿತು ಅತ್ತೆನು; ದುಃಖಕ್ರಾಂತನಾದೆನು; ಅಲ್ಲದೆ ಅನೇಕ ದಿವಸಗಳವರೆಗೆ ಉಪವಾಸಮಾಡಿ ಪರಲೋಕದ ದೇವರಿಗೆ ಪ್ರಾರ್ಥಿಸಿದೆನು. ನಂತರ ನಾನು ಈ ಪ್ರಾರ್ಥನೆ ಮಾಡಿದೆನು:

“ಪರಲೋಕದ ದೇವರಾದ ಯೆಹೋವನೇ, ನೀನು ಮಹಾ ದೇವರೂ ಪರಾಕ್ರಮವುಳ್ಳ ದೇವರೂ ಆಗಿರುವಿ. ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳಿಗೆ ವಿಧೇಯರಾಗುವವರಿಗೆ ನೀನು ಮಾಡಿದ ವಾಗ್ದಾನವನ್ನು ನೆರವೇರಿಸುವವನಾಗಿರುವಿ.

“ಹಗಲಿರುಳು ನಿನ್ನಲ್ಲಿ ಪ್ರಾರ್ಥಿಸುವ ನಿನ್ನ ಸೇವಕನನ್ನು ಕಣ್ತೆರೆದು ನೋಡು; ಅವನ ಪ್ರಾರ್ಥನೆಗೆ ಕಿವಿಗೊಟ್ಟು ಆಲಿಸು. ನಿನ್ನ ಸೇವಕರಾದ ಇಸ್ರೇಲರಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ಇಸ್ರೇಲರಾದ ನಾವು ನಿನಗೆ ವಿರೋಧವಾಗಿ ಮಾಡಿದ ಪಾಪಗಳನ್ನು ನಾನು ನಿನಗೆ ಅರಿಕೆ ಮಾಡುತ್ತೇನೆ. ನಾನೂ ನನ್ನ ತಂದೆಯ ಮನೆಯವರೂ ನಿನಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ನಿನಗೆ ಅರಿಕೆ ಮಾಡುತ್ತೇವೆ. ಇಸ್ರೇಲರಾದ ನಾವು ನಿನಗೆ ಕೆಟ್ಟವರಾಗಿ ಜೀವಿಸಿದೆವು; ನೀನು ನಿನ್ನ ಸೇವಕನಾದ ಮೋಶೆಗೆ ಕೊಟ್ಟ ವಿಧಿನಿಯಮಗಳಿಗೆ ನಾವು ವಿಧೇಯರಾಗಲಿಲ್ಲ.

“ನಿನ್ನ ಸೇವಕನಾದ ಮೋಶೆಗೆ ನೀನು ಹೇಳಿದ್ದನ್ನು ನೆನಪುಮಾಡಿಕೊ, ನೀನು ಅವನಿಗೆ, ‘ಇಸ್ರೇಲ್ ಜನರಾದ ನೀವು ನಂಬಿಗಸ್ತರಾಗದಿದ್ದಲ್ಲಿ ನಿಮ್ಮನ್ನು ಅನ್ಯದೇಶಗಳಲ್ಲಿ ಚದರಿಸಿಬಿಡುವೆನು.’ ಆದರೆ ನೀವು ಹಿಂತಿರುಗಿ ನನ್ನ ಬಳಿಗೆ ಬಂದು, ನನ್ನ ಕಟ್ಟಳೆಗಳಿಗೆ ವಿಧೇಯರಾದರೆ, ನಿಮ್ಮ ಜನರನ್ನು ಬಲವಂತವಾಗಿ ಭೂಲೋಕದ ಕಟ್ಟಕಡೆಯವರೆಗೆ ಕೊಂಡೊಯ್ದಿದ್ದರೂ ಅಲ್ಲಿಂದ ನನ್ನ ಹೆಸರನ್ನು ನೆಲೆಗೊಳಿಸುವುದಕ್ಕಾಗಿ ನಾನು ಆರಿಸಿಕೊಂಡ ಸ್ಥಳಕ್ಕೆ ಕರೆದುಕೊಂಡು ಬರುವೆನು” ಎಂದು ಹೇಳಿರುವೆ.

10 “ಇಸ್ರೇಲ್ ಜನರು ನಿನ್ನ ಜನಾಂಗ; ಅವರು ನಿನ್ನ ಸೇವಕರಾಗಿದ್ದಾರೆ. ನೀನು ನಿನ್ನ ಮಹಾಶಕ್ತಿಯನ್ನು ಉಪಯೋಗಿಸಿ ಅವರನ್ನು ರಕ್ಷಿಸಿರುವೆ. 11 ಆದ್ದರಿಂದ ಯೆಹೋವನೇ, ನನ್ನ ಪ್ರಾರ್ಥನೆಯನ್ನು ಆಲೈಸು. ನಾನು ನಿನ್ನ ಸೇವಕ. ನಿನ್ನ ಹೆಸರನ್ನು ಗೌರವಿಸುವ ನಿನ್ನ ಸೇವಕರ ಪ್ರಾರ್ಥನೆಗೆ ಕಿವಿಗೊಡು. ನಾನು ಅರಸನ ಪಾನದಾಯಕನಾಗಿದ್ದೇನೆಂದು ನೀನು ತಿಳಿದಿರುವೆ. ಆದ್ದರಿಂದ ಈ ಹೊತ್ತು ನನಗೆ ಸಹಾಯ ಮಾಡು. ಅರಸನಲ್ಲಿ ಸಹಾಯಕ್ಕಾಗಿ ಕೇಳಿಕೊಳ್ಳುವಾಗ ನನಗೆ ನೆರವು ನೀಡು; ನನಗೆ ಯಶಸ್ಸನ್ನು ದಯಪಾಲಿಸು; ರಾಜನಿಗೆ ನಾನು ಮೆಚ್ಚಿಕೆಯುಳ್ಳವನಾಗಿ ಕಂಡುಬರುವಂತೆ ಸಹಾಯಮಾಡು.”

ಅಪೊಸ್ತಲರ ಕಾರ್ಯಗಳು 3:1-10

ಪೇತ್ರನಿಂದ ಗುಣಹೊಂದಿದ ಕುಂಟ

ಒಂದು ದಿನ ಪೇತ್ರ ಮತ್ತು ಯೋಹಾನ ದೇವಾಲಯಕ್ಕೆ ಹೋದರು. ಆಗ ಮಧ್ಯಾಹ್ನ ಮೂರು ಗಂಟೆಯ ಸಮಯವಾಗಿತ್ತು. ಈ ವೇಳೆಯಲ್ಲೇ ಪ್ರತಿದಿನ ಪ್ರಾರ್ಥನಾಕೂಟ ನಡೆಯುತ್ತಿತ್ತು. ಅವರು ದೇವಾಲಯಕ್ಕೆ ಹೋಗುತ್ತಿದ್ದಾಗ ಅಲ್ಲೊಬ್ಬ ಹುಟ್ಟುಕುಂಟನಿದ್ದನು. ಅವನಿಗೆ ನಡೆಯಲಾಗುತ್ತಿರಲಿಲ್ಲ. ಆದ್ದರಿಂದ ಅವನ ಕೆಲವು ಸ್ನೇಹಿತರು ಅವನನ್ನು ಪ್ರತಿದಿನ ದೇವಾಲಯಕ್ಕೆ ಹೊತ್ತುಕೊಂಡು ಬಂದು, ದೇವಾಲಯದ ಹೊರ ಬಾಗಿಲುಗಳ ಒಂದರ ಸಮೀಪದಲ್ಲಿ ಕುಳ್ಳಿರಿಸುತ್ತಿದ್ದರು. ಆ ಬಾಗಿಲಿನ ಹೆಸರು “ಸುಂದರ ದ್ವಾರ.” ಅವನು ದೇವಾಲಯಕ್ಕೆ ಹೋಗುವ ಜನರಿಂದ ಭಿಕ್ಷೆ ಬೇಡುತ್ತಿದ್ದನು. ಅಂದು ದೇವಾಲಯದೊಳಕ್ಕೆ ಹೋಗುತ್ತಿದ್ದ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಕೇಳಿದನು.

ಪೇತ್ರ ಮತ್ತು ಯೋಹಾನ ಆ ಕುಂಟನಿಗೆ, “ನಮ್ಮನ್ನು ನೋಡು!” ಎಂದರು. ಅವನು ಅವರನ್ನು ನೋಡಿದನು. ಅವರು ಸ್ವಲ್ಪ ಹಣಕೊಡಬಹುದೆಂದು ಅವನು ಭಾವಿಸಿಕೊಂಡನು. ಆದರೆ ಪೇತ್ರನು, “ನನ್ನಲ್ಲಿ ಬೆಳ್ಳಿಬಂಗಾರಗಳಿಲ್ಲ, ಆದರೆ ನನ್ನಲ್ಲಿರುವುದನ್ನು ನಿನಗೆ ಕೊಡಬಲ್ಲೆನು. ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದುನಡೆ!” ಎಂದು ಹೇಳಿ,

ಆ ಮನುಷ್ಯನ ಕೈಹಿಡಿದು ಎತ್ತಿದನು. ಆ ಕೂಡಲೇ ಅವನ ಕಾಲುಗಳು ಮತ್ತು ಪಾದಗಳು ಬಲಗೊಂಡವು. ಅವನು ಜಿಗಿದು, ತನ್ನ ಪಾದಗಳ ಮೇಲೆ ನಿಂತುಕೊಂಡು ನಡೆಯತೊಡಗಿದನು. ಅವನೂ ಅವರೊಂದಿಗೆ ದೇವಾಲಯಕ್ಕೆ ಹೋದನು. ಅವನು ನಡೆಯುತ್ತಾ ಜಿಗಿಯುತ್ತಾ ದೇವರನ್ನು ಕೊಂಡಾಡುತ್ತಿದ್ದನು. 9-10 ಜನರೆಲ್ಲರೂ ಅವನನ್ನು ಗುರುತಿಸಿದರು. ಸುಂದರ ದ್ವಾರದ ಬಳಿಯಲ್ಲಿ ಯಾವಾಗಲೂ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಕುಂಟನೇ ಇವನೆಂದು ಜನರಿಗೆ ತಿಳಿದಿತ್ತು. ಈಗ ಅದೇ ವ್ಯಕ್ತಿಯು ನಡೆಯುತ್ತಾ ದೇವರನ್ನು ಕೊಂಡಾಡುತ್ತಿರುವುದನ್ನು ಕಂಡು ಅವರು ಆಶ್ಚರ್ಯಗೊಂಡು ಬೆರಗಾದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International