Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಮಲಾಕಿ 1-4

ದೇವರಿಂದ ಬಂದ ಸಂದೇಶ. ಯೆಹೋವ ದೇವರು ಮಲಾಕಿಯ ಮೂಲಕ ಇಸ್ರೇಲರಿಗೆ ಕೊಟ್ಟ ಸಂದೇಶ.

ದೇವರು ಇಸ್ರೇಲರನ್ನು ಪ್ರೀತಿಸುತ್ತಾನೆ

ಯೆಹೋವನು, “ನಾನು ನಿಮ್ನನ್ನೆಲ್ಲಾ ಪ್ರೀತಿಸುತ್ತೇನೆ” ಎಂದು ಹೇಳುತ್ತಾನೆ.

ಆದರೆ ನೀವು, “ನೀನು ಪ್ರೀತಿಸುವದಕ್ಕೆ ಗುರುತು ಏನು?” ಎಂದು ಕೇಳುತ್ತೀರಿ.

ಯೆಹೋವನು ಅದಕ್ಕುತ್ತರವಾಗಿ, “ಏಸಾವನು ಯಾಕೊಬನ ಅಣ್ಣನಲ್ಲವೋ? ಆದರೆ ನಾನು ಯಾಕೋಬನನ್ನು ಆರಿಸಿಕೊಂಡೆನು. ಏಸಾವನನ್ನು ನಾನು ಸ್ವೀಕರಿಸಲಿಲ್ಲ. ಏಸಾವನಿರುವ ಬೆಟ್ಟಪ್ರದೇಶವನ್ನು ನಾನು ಹಾಳುಮಾಡಿದೆನು. ಈಗ ಕಾಡುನಾಯಿಗಳು ಮಾತ್ರ ಅಲ್ಲಿ ವಾಸಿಸುತ್ತವೆ.” ಎಂದು ಹೇಳಿದನು.

ಎದೋಮ್ಯರು ಒಂದುವೇಳೆ ಹೀಗೆ ಹೇಳಿಯಾರು: “ನಾವು ನಾಶವಾಗಿದ್ದೇವೆ. ಹೌದು, ಆದರೆ ನಾವು ಹಿಂದೆ ಹೋಗಿ ತಿರುಗಿ ನಮ್ಮ ಪಟ್ಟಣಗಳನ್ನು ಕಟ್ಟುವೆವು.”

ಸರ್ವಶಕ್ತನಾದ ಯೆಹೋವನು, “ಅವರು ಪಟ್ಟಣಗಳನ್ನು ತಿರುಗಿ ಕಟ್ಟಿದರೆ ನಾನು ತಿರುಗಿ ನಾಶಮಾಡುವೆನು” ಎಂದು ಹೇಳುತ್ತಾನೆ. ಇದಕ್ಕಾಗಿಯೇ ಜನರು, “ಎದೋಮ್ ದುಷ್ಟ ಪ್ರಾಂತ್ಯವಾಗಿದೆ, ಯೆಹೋವನು ನಿರಂತರವಾಗಿ ಅದನ್ನು ದ್ವೇಷಿಸುತ್ತಾನೆ” ಎಂದು ಅನ್ನುವರು.

ಇದನ್ನು ನೋಡಿದವರಾದ ನೀವು ಹೇಳುತ್ತೀರಿ, “ಯೆಹೋವನು ಮಹಾದೇವರು. ಇಸ್ರೇಲಿನ ಹೊರಗೂ ತನ್ನ ಪ್ರತಾಪವನ್ನು ತೋರಿಸುವನು.”

ಜನರು ಯೆಹೋವನನ್ನು ಗೌರವಿಸುವುದಿಲ್ಲ

ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ, “ಮಕ್ಕಳು ಹೆತ್ತವರನ್ನು ಗೌರವಿಸುವರು. ಸೇವಕರು ಯಜಮಾನನನ್ನು ಗೌರವಿಸುತ್ತಾರೆ. ನಾನು ನಿಮ್ಮ ತಂದೆಯಾಗಿದ್ದೇನೆ, ಆದರೆ ನನ್ನನ್ನು ಯಾಕೆ ಗೌರವಿಸುವದಿಲ್ಲ? ನಾನು ನಿಮ್ಮ ಯಜಮಾನನಾಗಿದ್ದೇನೆ, ಆದರೆ ನನ್ನನ್ಯಾಕೆ ಗೌರವಿಸುವದಿಲ್ಲ? ಯಾಜಕರೇ, ನೀವು ನನ್ನ ಹೆಸರನ್ನು ಗೌರವಿಸುವದಿಲ್ಲ.”

ಆದರೆ ನೀವು, “ನಾವು ನಿನಗೆ ಯಾವ ವಿಷಯದಲ್ಲಿ ಗೌರವ ಕೊಟ್ಟಿಲ್ಲ” ಎಂದು ಕೇಳುತ್ತೀರಿ.

“ನನ್ನ ಯಜ್ಞವೇದಿಕೆಗೆ ನೀವು ಅಶುದ್ಧ ರೊಟ್ಟಿಗಳನ್ನು ಅರ್ಪಿಸುತ್ತೀರಿ” ಎಂದು ಯೆಹೋವನು ಹೇಳುತ್ತಾನೆ.

“ಯಾವ ವಿಷಯದಲ್ಲಿ ಅದು ಅಶುದ್ಧವಾಯಿತು?” ಎಂದು ನೀವು ಕೇಳುತ್ತೀರಿ.

ಅದಕ್ಕೆ ಯೆಹೋವನು, “ನನ್ನ ಯಜ್ಞವೇದಿಕೆಯನ್ನು ನೀವು ಗೌರವಿಸುವದಿಲ್ಲ. ನೀವು ಕುರುಡು ಪ್ರಾಣಿಗಳನ್ನು ಯಜ್ಞಕ್ಕಾಗಿ ತರುತ್ತೀರಿ. ಅದು ತಪ್ಪಲ್ಲವೇ? ಕುಂಟು, ರೋಗಪೀಡಿತ ಪಶುಗಳನ್ನು ಯಜ್ಞಾರ್ಪಣೆಗಾಗಿ ತರುತ್ತೀರಿ. ಅದು ತಪ್ಪಲ್ಲವೇ? ನಿಮ್ಮ ರಾಜ್ಯಪಾಲನಿಗೆ ನೀವು ಅಂಥಾ ಪ್ರಾಣಿಗಳನ್ನು ಕಾಣಿಕೆಯಾಗಿ ಕೊಟ್ಟರೆ ಅವನು ಅದನ್ನು ಸ್ವೀಕರಿಸುವನೋ? ಇಲ್ಲ, ಅಂಥಾ ಕಾಣಿಕೆಯನ್ನು ಅವನು ಸ್ವೀಕರಿಸುವದೇ ಇಲ್ಲ” ಸರ್ವಶಕ್ತನಾದ ಯೆಹೋವನು ಇದನ್ನು ಹೇಳುತ್ತಿದ್ದಾನೆ.

“ಯಾಜಕರೇ, ಯೆಹೋವನು ನಮಗೆ ಶುಭವನ್ನು ಉಂಟುಮಾಡುವಂತೆ ಆತನನ್ನು ಕೇಳಿಕೊಳ್ಳಿರಿ. ಆದರೆ ಆತನು ನಿಮಗೆ ಕಿವಿಗೊಡುವುದಿಲ್ಲ. ನಿಮ್ಮ ತಪ್ಪು ದೋಷಗಳೇ ಅದಕ್ಕೆ ಕಾರಣ.” ಇದು ಸರ್ವಶಕ್ತನಾದ ಯೆಹೋವನ ನುಡಿ.

10 “ನಿಮ್ಮಲ್ಲಿ ಕೆಲವು ಯಾಜಕರು ಆಲಯದ ಬಾಗಿಲುಗಳನ್ನು ಮುಚ್ಚಿ ಬೆಂಕಿಯನ್ನು ಸರಿಯಾದ ರೀತಿಯಲ್ಲಿ ಹಚ್ಚುವರು. ಆದರೆ ನಾನು ನಿಮ್ಮನ್ನು ಮೆಚ್ಚುವದಿಲ್ಲ. ನಿಮ್ಮ ಕಾಣಿಕೆಗಳನ್ನು ಸ್ವೀಕರಿಸುವದಿಲ್ಲ” ಇದು ಸರ್ವಶಕ್ತನಾದ ಯೆಹೋವನ ನುಡಿ.

11 “ಭೂಲೋಕದ ಜನರೆಲ್ಲಾ ನನ್ನ ಹೆಸರನ್ನು ಗೌರವಿಸುತ್ತಾರೆ; ಒಳ್ಳೆಯ ಕಾಣಿಕೆಗಳನ್ನು ತಂದೊಪ್ಪಿಸುತ್ತಾರೆ, ಒಳ್ಳೆಯ ಧೂಪವನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಯಾಕೆಂದರೆ ಅವರಿಗೆಲ್ಲಾ ನನ್ನ ನಾಮ ಮಹತ್ತರವಾದದ್ದು, ವಿಶೇಷವಾದದ್ದು.” ಇದು ಸರ್ವಶಕ್ತನಾದ ಯೆಹೋವನ ನುಡಿ.

12 “ಆದರೆ ನೀವು ನನ್ನ ನಾಮವನ್ನು ಘನಪಡಿಸುವದಿಲ್ಲ. ನನ್ನ ಮೇಜು ಅಶುದ್ಧವಾದದ್ದೆಂದು ನೀವು ಹೇಳುತ್ತೀರಿ. 13 ನೀವು ಆ ಮೇಜಿನಿಂದ ಆಹಾರವನ್ನು ತೆಗೆದುಕೊಳ್ಳುವದಿಲ್ಲ. ನೀವು ಆಹಾರವನ್ನು ಮೂಸಿನೋಡಿ ಅದನ್ನು ತಿನ್ನಲು ನಿರಾಕರಿಸುತ್ತೀರಿ. ಅದು ಚೆನ್ನಾಗಿಲ್ಲ ಎಂದು ಹೇಳುತ್ತೀರಿ. ಆದರೆ ಅದು ನಿಜವಲ್ಲ. ಆ ಮೇಲೆ, ನೀವು ರೋಗಪೀಡಿತವಾದ ಕುಂಟಾದ ಮತ್ತು ಕಳುವು ಮಾಡಿದ ಪಶುಗಳನ್ನು ನನಗರ್ಪಿಸುತ್ತೀರಿ. ಆದರೆ ಅಂಥಾ ಪಶುಗಳನ್ನು ನಿಮ್ಮಿಂದ ನಾನು ಸ್ವೀಕರಿಸುವದಿಲ್ಲ. 14 ನಿಮ್ಮಲ್ಲಿ ಕೆಲವರಲ್ಲಿ ಯಜ್ಞಕ್ಕೆ ಬೇಕಾಗಿರುವ ಒಳ್ಳೆಯ ಗಂಡು ಪಶುಗಳು ಇದ್ದಾಗ್ಯೂ ಅವರು ನನಗೆ ಅವುಗಳನ್ನು ಸಮರ್ಪಿಸುವದಿಲ್ಲ. ಕೆಲವರು ಕಳಂಕವಿಲ್ಲದ ಪಶುಗಳನ್ನು ನನಗೆ ತರುತ್ತಾರೆ. ಅವರು ಅಂಥಾ ಆರೋಗ್ಯಕರ ಪಶುಗಳನ್ನು ನನಗೆ ಸಮರ್ಪಿಸಲು ವಾಗ್ದಾನ ಮಾಡುವರು. ಆದರೆ ಗುಪ್ತವಾಗಿ ಅವರು ಆ ಪಶುವನ್ನು ಬದಲಿಸಿ ನನಗೆ ರೋಗಿಯಾದ ಪಶುಗಳನ್ನು ಕೊಡುತ್ತಾರೆ. ಅವರಿಗೆ ದುರ್ದೆಶೆ ಸಂಭವಿಸಲಿರುವದು. ನಾನು ದೊಡ್ಡ ಅರಸನು. ನೀವು ನನ್ನನ್ನು ಗೌರವಿಸಬೇಕು. ಭೂಲೋಕದ ಸರ್ವಜನರು ನನ್ನನ್ನು ಸನ್ಮಾನಿಸುವರು.” ಇವು ಸರ್ವಶಕ್ತನಾದ ಯೆಹೋವನ ನುಡಿಗಳು.

ಯಾಜಕರ ನಿಯಮಗಳು

“ಯಾಜಕರೇ, ನನ್ನ ಮಾತನ್ನು ಕೇಳಿರಿ. ನಾನು ಹೇಳುವುದಕ್ಕೆ ಗಮನ ಕೊಡಿರಿ. ಈ ನಿಯಮಗಳನ್ನು ನಿಮಗಾಗಿ ಹೇಳುತ್ತಿದ್ದೇನೆ. ನನ್ನ ನಾಮವನ್ನು ಘನಪಡಿಸದೆ ಹೋದರೆ ಕೆಟ್ಟ ವಿಷಯಗಳು ನಿಮಗೆ ಪ್ರಾಪ್ತಿಯಾಗುವವು. ನೀವು ಆಶೀರ್ವದಿಸುವಿರಿ. ಆದರೆ ಅದು ಶಾಪವಾಗುವದು. ಕೆಟ್ಟ ವಿಷಯಗಳು ನೆರವೇರುವಂತೆ ನಾನು ಮಾಡುವೆನು. ಯಾಕೆಂದರೆ ನೀವು ನನ್ನ ಹೆಸರನ್ನು ಘನಪಡಿಸುವದಿಲ್ಲ.” ಇದನ್ನು ಸರ್ವಶಕ್ತನಾದ ಯೆಹೋವನು ನುಡಿದಿದ್ದಾನೆ.

“ನಿಮ್ಮ ಸಂತತಿಯವರನ್ನು ನಾನು ಶಿಕ್ಷಿಸುವೆನು. ಹಬ್ಬದ ದಿವಸಗಳಲ್ಲಿ ಯಾಜಕರೇ, ನೀವು ನನಗೆ ಯಜ್ಞಗಳನ್ನರ್ಪಿಸುತ್ತೀರಿ. ಪಶುವನ್ನು ಕೊಯಿದ ಬಳಿಕ ಅದರ ಒಳಗಿನ ಭಾಗಗಳನ್ನೂ ಅದರ ಮಲವನ್ನು ನಿಮ್ಮ ಮುಖಗಳಿಗೆ ಹಚ್ಚುವೆನು ಮತ್ತು ನೀವು ಅದರೊಂದಿಗೆ ಹೊರಗೆ ಬಿಸಾಡಲ್ಪಡುವಿರಿ. ಆಗ ನೀವು ನಾನು ಈ ಆಜ್ಞೆಯನ್ನು ಯಾಕೆ ಕೊಡುತ್ತಿದ್ದೇನೆಂದು ಅರಿಯುವಿರಿ. ಲೇವಿಯರೊಂದಿಗೆ ನಾನು ಮಾಡಿರುವ ಒಡಂಬಡಿಕೆಯು ಮುಂದುವರಿಯುವ ಹಾಗೆ ನಾನು ಈ ಸಂಗತಿಗಳನ್ನು ನಿಮಗೆ ತಿಳಿಸುತ್ತಿದ್ದೇನೆ.” ಸೇನಾಧೀಶ್ವರನಾದ ಯೆಹೋವನು ಈ ಮಾತುಗಳನ್ನು ಅಂದಿದ್ದಾನೆ.

ಯೆಹೋವನು ಹೀಗೆನ್ನುತ್ತಾನೆ, “ಆ ಒಡಂಬಡಿಕೆಯನ್ನು ನಾನು ಲೇವಿಯರೊಂದಿಗೆ ಮಾಡಿದೆನು. ನಾನು ಅವನಿಗೆ ಜೀವ ಮತ್ತು ಸಮಾಧಾನವನ್ನು ವಾಗ್ದಾನ ಮಾಡಿ ಅವನಿಗೆ ಅದನ್ನು ಕೊಟ್ಟೆನು. ಲೇವಿಯು ನನ್ನನ್ನು ಘನಪಡಿಸಿದನು. ನನ್ನ ಹೆಸರನ್ನು ಗೌರವಿಸಿದನು. ಲೇವಿಯು ಸುಳ್ಳನ್ನು ಸಮರ್ಥಿಸದೆ ಸತ್ಯ ಬೋಧನೆಯನ್ನು ಬೋಧಿಸಿದನು. ಅವನು ಪ್ರಮಾಣಿಕನಾಗಿದ್ದು ಸಮಾಧಾನವನ್ನು ಪ್ರೀತಿಸುತ್ತಿದ್ದನು. ಲೇವಿಯು ನನಗೆ ವಿಧೇಯನಾಗಿದ್ದು ಎಷ್ಟೋ ಮಂದಿ ಕೆಟ್ಟದಾರಿಯಲ್ಲಿ ಹೋಗುತ್ತಿರುವವರನ್ನು ನನ್ನ ಶಿಕ್ಷೆಯಿಂದ ಪಾರುಮಾಡಿದನು. ಒಬ್ಬ ಯಾಜಕನು ಯೆಹೋವನ ಬೋಧನೆಯನ್ನು ಚೆನ್ನಾಗಿ ಅರಿತಿರಬೇಕು. ಜನರು ಯಾಜಕನ ಬಳಿಗೆ ಹೋಗಿ ದೇವರ ಬೋಧನೆಯನ್ನು ಕೇಳಿ ತಿಳಿದುಕೊಳ್ಳಬೇಕು. ಯಾಜಕನು ದೇವರ ಸಂದೇಶವನ್ನು ಜನರಿಗೆ ತಲುಪಿಸುವವನಾಗಿರಬೇಕು.

“ಆದರೆ ಯಾಜಕರೇ, ನೀವು ನನ್ನನ್ನು ಹಿಂಬಾಲಿಸುವದನ್ನು ನಿಲ್ಲಿಸಿ ಬಿಟ್ಟಿರಿ. ಅನೇಕ ಜನರು ತಪ್ಪು ದಾರಿಯಲ್ಲಿ ಹೋಗುವಂತೆ ಮಾಡಲು ನೀವು ಉಪದೇಶವನ್ನು ಬಳಸಿಕೊಂಡಿರಿ. ಲೇವಿಯೊಂದಿಗೆ ಮಾಡಿದ ಒಡಂಬಡಿಕೆಯನ್ನು ನೀವು ಹಾಳುಮಾಡಿಬಿಟ್ಟಿರಿ.” ಇದು ಸರ್ವಶಕ್ತನಾದ ಯೆಹೋವನ ನುಡಿ. “ನಾನು ಹೇಳಿರುವ ಪ್ರಕಾರ ನೀವು ಜೀವಿಸುತ್ತಿಲ್ಲ. ನೀವು ನನ್ನ ಉಪದೇಶವನ್ನು ಜನರಿಗೆ ತಿಳಿಸುವಾಗ ಮುಖದಾಕ್ಷಿಣ್ಯ ಮಾಡುತ್ತೀರಿ. ಈ ಕಾರಣದಿಂದಾಗಿ ನಿಮ್ಮನ್ನು ಗಣನೆಗೆ ಬಾರದವರಂತೆಯೂ ಜನರು ನಿಮ್ಮನ್ನು ಸನ್ಮಾನಿಸದಂತೆಯೂ ಮಾಡುವೆನು.”

ಯೆಹೂದವು ದೇವರಿಗೆ ನಂಬಿಗಸ್ತವಾಗಿಲ್ಲ

10 ನಮಗೆಲ್ಲರಿಗೂ ಒಬ್ಬನೇ ತಂದೆಯಾದ ದೇವರು. ಆ ದೇವರೇ ನಮ್ಮೆಲ್ಲರನ್ನು ಉಂಟುಮಾಡಿದನು. ಹೀಗಿರುವಾಗ ಜನರು ತಮ್ಮ ಸಹೋದರರನ್ನು ಯಾಕೆ ಮೋಸಪಡಿಸುತ್ತಾರೆ? ಒಡಂಬಡಿಕೆಯನ್ನು ಅವರು ಮಾನ್ಯತೆ ಮಾಡುವವರೆಂದು ಜನರಿಗೆ ತೋರಿಸುವದಿಲ್ಲ. ತಮ್ಮ ಪೂರ್ವಿಕರು ಯೆಹೋವನೊಂದಿಗೆ ಮಾಡಿದ್ದ ಒಡಂಬಡಿಕೆಯನ್ನು ಅವರು ಮಾನ್ಯತೆ ಮಾಡಲಿಲ್ಲ. 11 ಯೆಹೂದದ ಜನರು ಬೇರೆ ಜನರಿಗೆ ಮೋಸ ಮಾಡಿದರು. ಜೆರುಸಲೇಮಿನಲ್ಲಿಯೂ ಇಸ್ರೇಲಿನಲ್ಲಿಯೂ ಇರುವ ಜನರು ಭಯಂಕರ ಕೃತ್ಯಗಳನ್ನು ಮಾಡಿದರು. ದೇವರು ತನ್ನ ಆಲಯವನ್ನು ಪ್ರೀತಿಸುತ್ತಾನೆ. ಆದರೆ ಯೆಹೂದದ ಜನರು ಗೊತ್ತಿಲ್ಲದ ದೇವತೆಗಳನ್ನು ಪೂಜಿಸಲು ಪ್ರಾರಂಭಿಸುತ್ತಾರೆ. 12 ಅಂಥಾ ಜನರನ್ನು ಯೆಹೋವನು ಯೆಹೂದ ವಂಶದಿಂದಲೇ ತೆಗೆದುಹಾಕುವನು. ಅವರು ಯೆಹೋವನಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬರಬಹುದು. ಆದರೆ ಅದು ಏನೂ ಪ್ರಯೋಜನವಿಲ್ಲ. 13 ನೀವು ಅತ್ತು ಗೋಳಾಡಿ ಯೆಹೋವನ ವೇದಿಕೆಯನ್ನು ಕಣ್ಣೀರಿನಿಂದ ತೋಯಿಸಿದರೂ ಪ್ರಯೋಜನವಿಲ್ಲ. ಯೆಹೋವನು ನಿಮ್ಮ ಕಾಣಿಕೆಯನ್ನು ಸ್ವೀಕರಿಸುವುದಿಲ್ಲ. ನಿಮ್ಮ ಕಾಣಿಕೆಗಳನ್ನು ಆತನು ಮೆಚ್ಚುವವನಲ್ಲ.

14 “ನಮ್ಮ ಕಾಣಿಕೆಗಳನ್ನು ಯೆಹೋವನು ಏಕೆ ಸ್ವೀಕರಿಸುವುದಿಲ್ಲ?” ಎಂದು ನೀವು ಕೇಳಬಹುದು. ಯಾಕೆಂದರೆ ನಿಮ್ಮ ಪಾಪಕೃತ್ಯಗಳನ್ನು ಆತನು ನೋಡಿರುತ್ತಾನೆ. ಅವುಗಳಿಗೆ ವಿರೋಧವಾಗಿ ಆತನೇ ಸಾಕ್ಷಿಯಾಗಿರುತ್ತಾನೆ. ನಿಮ್ಮ ಹೆಂಡತಿಯರನ್ನು ನೀವು ಮೋಸಗೊಳಿಸಿದ್ದನ್ನು ಆತನು ನೋಡಿರುತ್ತಾನೆ. ನೀವು ಆಕೆಯನ್ನು ನಿಮ್ಮ ಯೌವನ ಕಾಲದಲ್ಲಿ ಹೆಂಡತಿಯನ್ನಾಗಿ ಮಾಡಿಕೊಂಡಿರುತ್ತೀರಿ. ಆಕೆಯು ನಿಮ್ಮ ಆಪ್ತ ಸ್ನೇಹಿತೆಯಾಗಿದ್ದಳು. ನೀವಿಬ್ಬರೂ ಮಾತುಕೊಟ್ಟಿರಿ. ಆಕೆ ನಿಮ್ಮ ಹೆಂಡತಿಯಾದಳು. ಆದರೆ ನೀವು ಅವಳಿಗೆ ಅಪನಂಬಿಗಸ್ಥರಾದಿರಿ. 15 ದೇವರ ಇಚ್ಫೆಗನುಸಾರವಾಗಿ ಗಂಡಹೆಂಡತಿಯರು ದೇಹದಲ್ಲಿಯೂ ಆತ್ಮದಲ್ಲಿಯೂ ಒಂದಾಗಿರಬೇಕು. ಆಗ ಅವರ ಮಕ್ಕಳೂ ಪರಿಶುದ್ಧರಾಗಿರುವರು. ಆದ್ದರಿಂದ ಆತ್ಮಿಕ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಿ. ನಿಮ್ಮ ಹೆಂಡತಿಯರಿಗೆ ಮೋಸಮಾಡಬೇಡಿ. ಯಾಕೆಂದರೆ ಯೌವನ ಪ್ರಾಯದಿಂದಲೂ ಆಕೆ ನಿಮ್ಮ ಹೆಂಡತಿಯಾಗಿದ್ದಾಳೆ.

16 ಇಸ್ರೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, “ವಿವಾಹವಿಚ್ಪೇದನೆಯನ್ನು ನಾನು ಹಗೆ ಮಾಡುತ್ತೇನೆ. ಮತ್ತು ಮನುಷ್ಯನು ಮಾಡುವ ದುಷ್ಕೃತ್ಯವನ್ನು ನಾನು ಹಗೆ ಮಾಡುತ್ತೇನೆ. ಆದ್ದರಿಂದ ನಿಮ್ಮ ಆತ್ಮೀಯ ಒಗ್ಗಟ್ಟನ್ನು ಕಾಪಾಡಿಕೊಳ್ಳಿರಿ. ನಿಮ್ಮ ಹೆಂಡತಿಯರಿಗೆ ಮೋಸ ಮಾಡಬೇಡಿರಿ.”

ನ್ಯಾಯತೀರ್ಪಿನ ವಿಶೇಷವಾದ ಕಾಲ

17 ನೀವು ತಪ್ಪಾದ ವಿಷಯಗಳನ್ನು ಬೋಧಿಸಿದ್ದೀರಿ. ಅಂಥಾ ದುರ್ಬೋಧನೆಯು ಯೆಹೋವನನ್ನು ದುಃಖಗೊಳಿಸಿದೆ. ಯೆಹೋವನು ದುಷ್ಟರನ್ನು ಪ್ರೀತಿಸುತ್ತಾನೆ ಎಂದು ಜನರಿಗೆ ಬೋಧಿಸಿದ್ದೀರಿ. ಅಂಥಾ ಜನರನ್ನು ಯೆಹೋವನು ಒಳ್ಳೆಯವರೆಂದು ಕರೆಯುತ್ತಾನೆ ಎಂದು ನೀವು ಜನರಿಗೆ ಕಲಿಸಿದ್ದೀರಿ. ಅಲ್ಲದೆ ಪಾಪಮಾಡುವ ಜನರನ್ನು ಯೆಹೋವನು ಶಿಕ್ಷಿಸುವದಿಲ್ಲವೆಂದೂ ನೀವು ಹೇಳಿದ್ದೀರಿ.

ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಮಾರ್ಗವನ್ನು ಸಿದ್ಧಮಾಡಲು ನಾನು ಮುಂದೂತನನ್ನು ಕಳುಹಿಸುತ್ತೇನೆ. ನೀವು ಹುಡುಕುತ್ತಿರುವ ಧಣಿಯು ತನ್ನ ಆಲಯಕ್ಕೆ ಬರುತ್ತಾನೆ. ಹೌದು, ನಿಮಗೆ ಬೇಕಾಗಿರುವ ಹೊಸ ಒಡಂಬಡಿಕೆಯ ಸಂದೇಶಕನು ನಿಜವಾಗಿಯೂ ಬರುತ್ತಿದ್ದಾನೆ.

“ಆ ಸಮಯಕ್ಕಾಗಿ ಯಾರೂ ಸಿದ್ಧಮಾಡಿಕೊಳ್ಳಲಾರರು. ಯಾರೂ ಆತನು ಬರುವಾಗ ಆತನಿಗೆ ವಿರುದ್ಧವಾಗಿ ನಿಲ್ಲರು. ಆತನು ಸುಡುವ ಬೆಂಕಿಯಾಗಿರುವನು. ಆತನು ಶಕ್ತಿಯುತವಾದ ಸಾಬೂನಿನಂತೆ ಕೊಳೆಯನ್ನು ಹೋಗಲಾಡಿಸಿ ಶುದ್ಧಮಾಡುವನು. ಆತನು ಲೇವಿಯರನ್ನು ಶುದ್ಧಮಾಡುವನು. ಅವರನ್ನು ಬೆಂಕಿಯಿಂದ ಪರಿಶುದ್ಧ ಮಾಡುವನು. ಶುದ್ಧ ಬೆಳ್ಳಿ ಚಿನ್ನದಂತೆ ಆತನು ಅವರನ್ನು ಶುದ್ಧಿಮಾಡುವನು. ಆಗ ಅವರು ಯೆಹೋವನಿಗೆ ಕಾಣಿಕೆಗಳನ್ನು ತರುವರು; ಸರಿಯಾದ ರೀತಿಯಲ್ಲಿ ಕಾಣಿಕೆಗಳನ್ನು ಅರ್ಪಿಸುವರು. ಜೆರುಸಲೇಮಿನಿಂದಲೂ ಯೆಹೂದದಿಂದಲೂ ಯೆಹೋವನು ಕಾಣಿಕೆಗಳನ್ನು ಸ್ವೀಕರಿಸುವನು. ಹಿಂದಿನ ಕಾಲದಲ್ಲಿದ್ದಂತೆಯೇ ಈಗಲೂ ಆಗುವದು. ಬಹಳ ವರ್ಷಗಳ ಹಿಂದಿನ ಕಥೆಯೇ ಈಗಲೂ ಆಗುವದು. ಆಗ ನಾನು ನಿಮ್ಮ ಬಳಿಗೆ ಬಂದು ಯೋಗ್ಯವಾದ ಕಾರ್ಯವನ್ನು ಮಾಡುವೆನು. ದುಷ್ಟ ಕ್ರಿಯೆಗಳನ್ನು ಮಾಡಿದ ಜನರ ಬಗ್ಗೆ ನ್ಯಾಯಾಧೀಶರೊಡನೆ ದೂರು ಹೇಳುವ ಮನುಷ್ಯನಂತಿರುವೆನು. ಕೆಲವರು ಮಾಟಮಂತ್ರ ಮಾಡುವರು; ಕೆಲವರು ವ್ಯಭಿಚಾರ ಮಾಡುವರು; ಕೆಲವರು ಸುಳ್ಳು ವಾಗ್ದಾನಗಳನ್ನು ಮಾಡುವರು; ಕೆಲವರು ಕೂಲಿಯಾಳುಗಳಿಗೆ ಹೇಳಿದ ಕೂಲಿಯನ್ನು ಕೊಡದೆ ಅವರಿಗೆ ಮೋಸಮಾಡುವರು. ಜನರು ವಿಧವೆಯರಿಗೂ ಅನಾಥರಿಗೂ ಸಹಾಯ ಮಾಡುವದಿಲ್ಲ. ಪರದೇಶಿಗಳಿಗೆ ಸಹಾಯ ಮಾಡುವದಿಲ್ಲ. ನನಗೆ ಗೌರವ ಸಲ್ಲಿಸುವದಿಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.

ದೇವರಿಂದ ಕದ್ದುಕೊಳ್ಳುವದು

“ನಾನು ದೇವರಾದ ಯೆಹೋವನು. ನಾನು ಬದಲಾಗದ ದೇವರು. ನೀವು ಯಾಕೋಬನ ಮಕ್ಕಳು. ನೀವು ಸಂಪೂರ್ಣವಾಗಿ ನಾಶ ಹೊಂದಲಿಲ್ಲ. ನೀವು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನಿಮ್ಮ ಪೂರ್ವಿಕರು ನನ್ನನ್ನು ಅನುಸರಿಸುವದನ್ನು ನಿಲ್ಲಿಸಿಬಿಟ್ಟಿದ್ದರು. ನೀವು ಹಿಂತಿರುಗಿ ನನ್ನ ಬಳಿಗೆ ಬಂದರೆ ನಾನು ನಿಮ್ಮ ಬಳಿಗೆ ಬರುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.

“ನಾವು ಹೇಗೆ ಹಿಂತಿರುಗಿ ಬರಬಹುದು?” ಎಂದು ನೀವು ಕೇಳುತ್ತೀರೋ?

ದೇವರಿಂದ ಕದ್ದುಕೊಳ್ಳುವದನ್ನು ನಿಲ್ಲಿಸಿರಿ. ಮನುಷ್ಯನು ದೇವರಿಂದ ಕದ್ದುಕೊಳ್ಳಬಾರದು. ಆದರೆ ನೀವು ನನ್ನಿಂದ ಕದ್ದುಕೊಂಡಿದ್ದೀರಿ.

“ನಿನ್ನಿಂದ ಏನು ಕದ್ದುಕೊಂಡಿದ್ದೇವೆ” ಎಂದು ಕೇಳುತ್ತೀರಾ?

“ನಿಮ್ಮ ದಶಮ ಭಾಗವನ್ನು ನೀವು ನನಗೆ ಅರ್ಪಿಸಬೇಕಿತ್ತು. ವಿಶೇಷ ಕಾಣಿಕೆಗಳನ್ನು ನೀವು ನನಗೆ ಕೊಡಬೇಕಾಗಿತ್ತು. ಆದರೆ ನೀವು ಹಾಗೆ ಮಾಡಲಿಲ್ಲ. ಈ ರೀತಿಯಾಗಿ ನಿಮ್ಮ ಇಡೀ ಜನಾಂಗವೇ ನನ್ನಿಂದ ಕದ್ದುಕೊಂಡಿದ್ದಾರೆ. ಆದ್ದರಿಂದ ನಿಮಗೆ ದುರ್ದೆಶೆ ಸಂಭವಿಸುತ್ತಲಿದೆ.” ಇದು ಸರ್ವಶಕ್ತನಾದ ಯೆಹೋವನ ನುಡಿ.

10 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನೀವು ಈ ಪರೀಕ್ಷೆ ಮಾಡಿನೋಡಿ. ನಿಮ್ಮ ವಸ್ತುಗಳ ಹತ್ತನೇ ಒಂದು ಅಂಶವನ್ನು ನನಗೆ ತೆಗೆದುಕೊಂಡು ಬನ್ನಿರಿ. ಅವುಗಳನ್ನು ಆಲಯದ ಬಂಡಾರದೊಳಗೆ ಹಾಕಿರಿ. ನನ್ನ ಮನೆಗೆ ನೀವು ಆಹಾರ ವಸ್ತುಗಳನ್ನು ತನ್ನಿರಿ. ನನ್ನನ್ನು ಪರೀಕ್ಷಿಸಿರಿ. ನೀವು ಹೀಗೆ ಮಾಡುವುದಾದರೆ ಖಂಡಿತವಾಗಿಯೂ ನಾನು ನಿಮ್ಮನ್ನು ಆಶೀರ್ವದಿಸುವೆನು. ಆಕಾಶದಿಂದ ಮಳೆ ಸುರಿಯುವ ಹಾಗೆ ನಿಮಗೆ ಶುಭವು ಸುರಿಯುವವು. ನಿಮ್ಮ ಮನೆಯಲ್ಲಿ ಬೇಕಾಗಿರುವದಕ್ಕಿಂತ ಹೆಚ್ಚು ಯಾವಾಗಲೂ ಇರುವದು. 11 ನಿಮ್ಮ ಬೆಳೆಗಳು ಹುಳಗಳಿಂದ ನಾಶವಾಗದಂತೆ ನಾನು ಸಂರಕ್ಷಿಸುವೆನು; ನಿಮ್ಮ ದ್ರಾಕ್ಷಾಲತೆಗಳೆಲ್ಲಾ ದ್ರಾಕ್ಷಿಯನ್ನು ಫಲಿಸುವವು.” ಇದು ಸರ್ವಶಕ್ತನಾದ ಯೆಹೋವನ ನುಡಿ.

12 “ಇತರ ಜನಾಂಗಗಳವರು ನಿಮ್ಮೊಂದಿಗೆ ಸಮಾಧಾನದಿಂದಿರುವರು. ನಿಜವಾಗಿಯೂ ನಿಮ್ಮ ದೇಶವು ಆಗ ಆಶ್ಚರ್ಯಕರವಾದ ದೇಶವಾಗಿರುವುದು.” ಇದು ಸರ್ವಶಕ್ತನಾದ ಯೆಹೋವನ ನುಡಿ.

ನ್ಯಾಯತೀರ್ಪಿನ ವಿಶೇಷ ಕಾಲ

13 ಯೆಹೋವನು ಹೀಗೆನ್ನುತ್ತಾನೆ, “ನೀವು ನನಗೆ ವಿರುದ್ಧವಾಗಿ ಹೇಯ ಮಾತುಗಳನ್ನಾಡಿದಿರಿ.”

ಅದಕ್ಕೆ ನೀವು “ನಿನ್ನ ವಿರುದ್ಧವಾಗಿ ಏನು ಹೇಳಿದ್ದೇವೆ?” ಎಂದು ಕೇಳುತ್ತೀರಿ.

14 ನೀವು, “ದೇವರಾದ ಯೆಹೋವನನ್ನು ಆರಾಧಿಸುವುದು ನಿಷ್ಪ್ರಯೋಜಕ. ಆತನ ಕಟ್ಟಳೆಗಳನ್ನು ನಾವು ಅನುಸರಿಸಿದೆವು. ಆದರೆ ಅದರಲ್ಲಿ ನಮಗೇನೂ ಲಾಭವಾಗಲಿಲ್ಲ. ಸಮಾಧಿಯಲ್ಲಿ ಜನರು ರೋದಿಸುವ ಹಾಗೆ ನಮ್ಮ ಪಾಪಗಳಿಗಾಗಿ ನಾವು ರೋದಿಸಿದೆವು. ಆದರೆ ಅದರಿಂದ ನಮಗೇನೂ ಸಹಾಯವಾಗಲಿಲ್ಲ. 15 ಗರ್ವಿಷ್ಟರು ಸಂತೋಷವಾಗಿದ್ದಾರೆ ಎಂದು ನಾವು ತಿಳಿಯುತ್ತೇವೆ. ದುಷ್ಟಜನರು ಸಫಲತೆ ಹೊಂದುತ್ತಿದ್ದಾರೆ, ದೇವರ ತಾಳ್ಮೆಯನ್ನು ಪರೀಕ್ಷಿಸಲು ದುಷ್ಕೃತ್ಯಗಳನ್ನು ಮಾಡುತ್ತಿದ್ದಾರೆ. ಆದರೆ ದೇವರು ಅವರನ್ನು ಶಿಕ್ಷಿಸಲಿಲ್ಲ” ಎಂದು ಹೇಳಿದಿರಿ.

16 ದೇವರನ್ನು ಅನುಸರಿಸುವ ಭಕ್ತರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲು ಯೆಹೋವನು ಆಲೈಸಿದನು. ಆತನ ಮುಂದೆ ದೇವಜನರ ಹೆಸರುಗಳನ್ನು ಬರೆದಿರುವ ಒಂದು ಪುಸ್ತಕವಿತ್ತು. ಯೆಹೋವನ ಹೆಸರನ್ನು ಘನಪಡಿಸುವವರ ಹೆಸರುಗಳು ಅದರಲ್ಲಿದ್ದವು.

17 ಯೆಹೋವನು ಹೇಳುವುದೇನೆಂದರೆ, “ಅವರು ನನ್ನ ಜನರು. ನಾನು ಅವರಿಗೆ ಕರುಣೆ ತೋರಿಸುವೆನು. ತಂದೆಯು ತನಗೆ ವಿಧೇಯತೆ ತೋರಿಸುವ ತನ್ನ ಮಕ್ಕಳಿಗೆ ಕನಿಕರವುಳ್ಳವನಾಗಿರುತ್ತಾನೆ. ಅದೇ ರೀತಿಯಲ್ಲಿ ನನ್ನನ್ನು ಅನುಸರಿಸುವವರ ಮೇಲೆ ನಾನು ದಯೆ ತೋರಿಸುವೆನು. 18 ನೀವು ನನ್ನ ಬಳಿಗೆ ಹಿಂತಿರುಗಿ ಬರುವಿರಿ. ಆಗ ನೀವು ಒಳ್ಳೆಯವರಿಗೂ ಕೆಟ್ಟವರಿಗೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವಿರಿ. ಆಗ ನೀವು ದೇವರನ್ನು ಹಿಂಬಾಲಿಸುವವರಿಗೂ ಹಿಂಬಾಲಿಸದೆ ಇರುವವರಿಗೂ ಇರುವ ವ್ಯತ್ಯಾಸವನ್ನು ನೋಡುವಿರಿ.

“ಆ ನ್ಯಾಯತೀರ್ಪಿನ ದಿನವು ಬರುತ್ತಿದೆ. ಅದು ಕುಲುಮೆಯಂತೆ ತೀಕ್ಷ್ಣವಾಗಿರುವದು. ಅಹಂಕಾರಿಗಳೆಲ್ಲಾ ಶಿಕ್ಷಿಸಲ್ಪಡುವರು. ದುಷ್ಟಜನರೆಲ್ಲಾ ಹುಲ್ಲಿನಂತೆ ಸುಡುವರು. ಆ ಸಮಯದಲ್ಲಿ ಒಂದು ಪೊದೆ ಬೆಂಕಿಯಲ್ಲಿ ಸುಡುವಂತೆ ಸುಡುವರು. ಆದರೆ ಕೊಂಬೆ ಅಥವಾ ಬೇರು ಯಾವದೂ ಉಳಿಯುವದಿಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.

“ನನ್ನನ್ನು ಹಿಂಬಾಲಿಸುವವರ ಮೇಲೆ ಸೂರ್ಯನ ಪ್ರಕಾಶದಂತೆ ಶುಭವು ಪ್ರಕಾಶಿಸುವದು. ಸೂರ್ಯನ ಕಿರಣಗಳಂತೆ ಅದು ಗುಣಪಡಿಸುವ ಶಕ್ತಿಯನ್ನು ಹೊಂದುವದು. ಕೊಟ್ಟಿಗೆಯಿಂದ ಬಿಟ್ಟ ಕರುಗಳಂತೆ ನೀವು ಸ್ವತಂತ್ರರಾಗಿಯೂ ಸಂತೋಷವಾಗಿಯೂ ಇರುವಿರಿ. ಆಗ ನೀವು ದುಷ್ಟಜನರ ಮೇಲೆ ನಡೆದುಕೊಂಡು ಹೋಗುವಿರಿ; ಅವರು ನಿಮ್ಮ ಕಾಲುಗಳ ಕೆಳಗೆ ಬೂದಿಯಂತಿರುವರು. ನ್ಯಾಯತೀರ್ಪಿನ ಸಮಯದಲ್ಲಿ ನಾನು ಹಾಗೆ ಮಾಡುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.

“ನನ್ನ ಸೇವಕನಾದ ಮೋಶೆಯ ಕಟ್ಟಳೆಗಳನ್ನು ಅನುಸರಿಸಲು ಮರೆಯಬೇಡಿ. ಹೋರೇಬ್ ಬೆಟ್ಟದಲ್ಲಿ ನಾನು ಆ ನ್ಯಾಯವಿಧಿಗಳನ್ನು ಅವನಿಗೆ ಕೊಟ್ಟೆನು. ಆ ಕಟ್ಟಳೆಗಳೆಲ್ಲಾ ಇಸ್ರೇಲ್ ಜನರಿಗಾಗಿ ಇರುವದು.”

ಯೆಹೋವನು ಹೀಗೆನ್ನುತ್ತಾನೆ, “ನಾನು ಪ್ರವಾದಿಯಾದ ಎಲೀಯನನ್ನು ನಿಮ್ಮ ಬಳಿಗೆ ಕಳುಹಿಸುವೆನು. ಅವನು ಯೆಹೋವನಿಂದ ಪ್ರಾಪ್ತಿಯಾಗುವ ಭಯಂಕರವಾದ ಮಹಾ ನ್ಯಾಯತೀರ್ಪಿನ ಕಾಲದಲ್ಲಿ ಬರುವನು. ತಂದೆತಾಯಿಗಳು ಮಕ್ಕಳಿಗೂ ಮಕ್ಕಳು ತಂದೆತಾಯಿಗಳಿಗೂ ನಿಕಟ ಸಂಬಂಧಿಗಳಾಗುವಂತೆ ಅವನು ಮಾಡುವನು. ಇದು ನೆರವೇರಲೇಬೇಕು, ಇಲ್ಲದಿದ್ದಲ್ಲಿ ನಾನು ಬಂದು ನಿಮ್ಮ ದೇಶವನ್ನು ಸಂಪೂರ್ಣವಾಗಿ ನಾಶಮಾಡುವೆನು.”

ಪ್ರಕಟನೆ 22

22 ಆಗ ದೇವದೂತನು ನನಗೆ ಜೀವಜಲದ ನದಿಯನ್ನು ತೋರಿಸಿದನು. ಆ ನದಿಯು ಸ್ಫಟಿಕದಂತೆ ಪ್ರಕಾಶಮಾನವಾಗಿತ್ತು. ಆ ನದಿಯು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಆಗಮಿಸಿ, ನಗರದ ಬೀದಿಯ ಮಧ್ಯಭಾಗದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿಯೂ ಜೀವವೃಕ್ಷಗಳಿದ್ದ್ದವು. ಆ ಜೀವವೃಕ್ಷವು ಪ್ರತಿತಿಂಗಳು ಫಲವನ್ನು ಫಲಿಸುತ್ತಾ ವರ್ಷದಲ್ಲಿ ಹನ್ನೆರಡು ತರದ ಫಲಗಳನ್ನು ನೀಡುತ್ತದೆ. ಆ ವೃಕ್ಷದ ಎಲೆಗಳು ಜನಾಂಗದವರನ್ನು ಗುಣಪಡಿಸುತ್ತವೆ.

ದೇವರಿಂದ ಶಾಪ ಹೊಂದಿದ ಯಾವುದೂ ಆ ಪಟ್ಟಣದಲ್ಲಿರುವುದಿಲ್ಲ. ದೇವರ ಮತ್ತು ಕುರಿಮರಿಯಾದಾತನ (ಯೇಸು) ಸಿಂಹಾಸನವು ಆ ನಗರದಲ್ಲಿರುತ್ತದೆ. ದೇವರ ಸೇವಕರು ಆತನನ್ನು ಆರಾಧಿಸುತ್ತಾರೆ. ಅವರು ಆತನ ಮುಖವನ್ನು ನೋಡುತ್ತಾರೆ. ದೇವರ ಹೆಸರನ್ನು ಅವರ ಹಣೆಗಳ ಮೇಲೆ ಬರೆಯಲಾಗುತ್ತದೆ. ಅಲ್ಲಿ ರಾತ್ರಿಯೆಂಬುದೇ ಇರುವುದಿಲ್ಲ. ಜನರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಬೇಕಾಗುವುದಿಲ್ಲ. ಪ್ರಭುವಾದ ದೇವರೇ ಅವರಿಗೆ ಬೆಳಕನ್ನು ನೀಡುತ್ತಾನೆ. ಅವರು ಯುಗಯುಗಾಂತರಗಳಲ್ಲಿ ರಾಜರುಗಳಂತೆ ಆಳುತ್ತಾರೆ.

ಆ ದೇವದೂತನು ನನಗೆ, “ಈ ವಾಕ್ಯಗಳು ಸತ್ಯವಾದವುಗಳೂ ನಂಬತಕ್ಕವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳಿಗೆ ಪ್ರಭುವೇ ದೇವರಾಗಿದ್ದಾನೆ. ಬೇಗನೆ ಸಂಭವಿಸಲಿರುವ ಸಂಗತಿಗಳನ್ನು ತನ್ನ ಸೇವಕರಿಗೆ ತೋರಿಸಲು ದೇವರು ತನ್ನ ದೂತನನ್ನು ಕಳುಹಿಸಿದ್ದಾನೆ: ‘ಕೇಳಿರಿ, ನಾನು ಬೇಗನೆ ಬರುತ್ತೇನೆ! ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳಿಗೆ ವಿಧೇಯತೆಯಿಂದಿರುವವನು ಧನ್ಯನಾಗುತ್ತಾನೆ’” ಎಂದು ಹೇಳಿದನು.

ನಾನೇ ಯೋಹಾನನು. ನಾನು ಇವುಗಳನ್ನೆಲ್ಲ ಕೇಳಿದೆನು ಮತ್ತು ನೋಡಿದೆನು. ನಾನು ಇವುಗಳನ್ನು ಕೇಳಿ, ಕಂಡಾಗ, ನನಗೆ ಇವುಗಳನ್ನೆಲ್ಲ ತೋರಿಸಿದ ದೇವದೂತನನ್ನು ಆರಾಧಿಸುವುದಕ್ಕಾಗಿ ಅವನ ಪಾದಗಳಿಗೆ ಅಡ್ಡಬಿದ್ದೆನು. ಆದರೆ ಆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ನಾನು ನಿನ್ನಂತೆ, ಈ ಪುಸ್ತಕದಲ್ಲಿರುವ ವಾಕ್ಯಗಳಿಗೆ ವಿಧೇಯರಾಗಿರುವ ಎಲ್ಲ ಜನರಂತೆ ಮತ್ತು ನಿನ್ನ ಸಹೋದರರಾದ ಪ್ರವಾದಿಗಳಂತೆ ಒಬ್ಬ ಸೇವಕನು. ನೀನು ದೇವರನ್ನು ಆರಾಧಿಸಬೇಕು!” ಎಂದು ಹೇಳಿದನು.

10 ಬಳಿಕ ದೇವದೂತನು ನನಗೆ, “ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ರಹಸ್ಯವಾಗಿಡಬೇಡ. ಇವುಗಳೆಲ್ಲವೂ ಸಂಭವಿಸುವ ಕಾಲ ಸಮೀಪಿಸಿದೆ. 11 ತಪ್ಪು ಮಾಡುತ್ತಿರುವವನು ತಪ್ಪುಮಾಡುತ್ತಲೇ ಮುಂದುವರಿಯಲು ಬಿಡು. ಅಶುದ್ಧನಾದವನು ಅಶುದ್ಧತೆಯಲ್ಲೇ ಮುಂದುವರಿಯಲು ಬಿಡು. ಯೋಗ್ಯವಾದುದನ್ನು ಮಾಡುವವನು ಯೋಗ್ಯವಾದುದನ್ನೇ ಮಾಡಲಿ. ಪರಿಶುದ್ಧನಾಗಿರುವವನು ಪರಿಶುದ್ಧನಾಗಿಯೇ ಇರಲಿ” ಎಂದು ಹೇಳಿದನು.

12 “ಕೇಳು! ನಾನು ಬೇಗನೆ ಬರುತ್ತೇನೆ! ನನ್ನೊಂದಿಗೆ ಪ್ರತಿಫಲವನ್ನು ತರುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿದುದಕ್ಕೆ ತಕ್ಕ ಪ್ರತಿಫಲವನ್ನು ಕೊಡುತ್ತೇನೆ. 13 ನಾನೇ ಆದಿಯೂ ಅಂತ್ಯವೂ ಮೊದಲನೆಯವನೂ ಕಡೆಯವನೂ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ.

14 “ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡ ಜನರೇ ಧನ್ಯರು. ಅವರು ಜೀವವೃಕ್ಷದ ಹಣ್ಣನ್ನು ತಿನ್ನಲು ಹಕ್ಕುಳ್ಳವರಾಗಿದ್ದಾರೆ. ಅವರು ಬಾಗಿಲುಗಳ ಮೂಲಕ ನಗರದೊಳಕ್ಕೆ ಹೋಗಬಲ್ಲರು. 15 ನಗರದ ಹೊರಭಾಗದಲ್ಲಿ ನಾಯಿಗಳಿವೆ (ಕೆಟ್ಟಜನರು), ಕೆಟ್ಟ ಮಾಟವನ್ನು ಮಾಡುವ ಜನರಿದ್ದಾರೆ, ಲೈಂಗಿಕ ಪಾಪಗಳನ್ನು ಮಾಡುವ ಜನರಿದ್ದಾರೆ, ಕೊಲೆಗಾರರಿದ್ದಾರೆ, ವಿಗ್ರಹಗಳನ್ನು ಆರಾಧಿಸುವ ಜನರಿದ್ದಾರೆ ಮತ್ತು ಸುಳ್ಳನ್ನು ಪ್ರೀತಿಸುವ ಮತ್ತು ಹೇಳುವ ಜನರಿದ್ದಾರೆ.

16 “ಯೇಸುವೆಂಬ ನಾನೇ, ನನ್ನ ಸಭೆಗಳ ಪ್ರಯೋಜನಾರ್ಥವಾಗಿ ಈ ಸಂಗತಿಗಳ ಬಗ್ಗೆ ಸಾಕ್ಷಿ ನೀಡಲೆಂದು ನನ್ನ ದೂತನನ್ನು ಕಳುಹಿಸಿದೆನು. ದಾವೀದನ ವಂಶದಲ್ಲಿ ಹುಟ್ಟಿದವನೂ ಪ್ರಕಾಶಮಾನವಾದ ಉದಯನಕ್ಷತ್ರವೂ ಆಗಿದ್ದಾನೆ.”

17 ಆತ್ಮನೂ ಮದುಮಗಳೂ, “ಬಾ!” ಎನ್ನುತ್ತಾರೆ. ಇದನ್ನು ಕೇಳುವ ಪ್ರತಿಯೊಬ್ಬ ವ್ಯಕ್ತಿಯೂ, “ಬಾ!” ಎಂದು ಹೇಳಬೇಕು. ಬಾಯಾರಿದವನು ನನ್ನ ಬಳಿಗೆ ಬರಲಿ; ಅವನಿಗೆ ಇಷ್ಟವಿದ್ದರೆ ಜೀವಜಲವನ್ನು ಉಚಿತವಾಗಿ ಪಡೆದುಕೊಳ್ಳಲಿ.

18 ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ಕೇಳಿದ ಪ್ರತಿಯೊಬ್ಬರಿಗೂ ನಾನು ಎಚ್ಚರಿಕೆ ನೀಡುತ್ತೇನೆ: ಈ ವಾಕ್ಯಗಳಿಗೆ ಯಾರಾದರೂ ಏನನ್ನಾದರೂ ಸೇರಿಸಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಅವನಿಗೆ ಕೊಡುತ್ತಾನೆ. 19 ಈ ಪ್ರವಾದನೆಯ ಪುಸ್ತಕದಿಂದ ಯಾರಾದರೂ ಏನನ್ನಾದರೂ ತೆಗೆದುಹಾಕಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಪವಿತ್ರಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ತೆಗೆದುಹಾಕುತ್ತಾನೆ.

20 ಇವುಗಳೆಲ್ಲಾ ನಿಜವೆಂದು ಹೇಳುವಾತನು ಯೇಸುವೇ. ಈಗ ಆತನು, “ಹೌದು, ನಾನು ಬೇಗನೆ ಬರುತ್ತೇನೆ” ಎಂದು ಹೇಳುತ್ತಾನೆ.

ಆಮೆನ್! ಪ್ರಭು ಯೇಸುವೇ, ಬಾ!

21 ಪ್ರಭು ಯೇಸುವಿನ ಕೃಪೆಯು ಎಲ್ಲಾ ಜನರೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International