Old/New Testament
ಹಾರುವ ಸುರುಳಿ
5 ನಾನು ತಿರುಗಿ ಮೇಲಕ್ಕೆ ನೋಡಿದಾಗ ಒಂದು ಹಾರುವ ಸುರುಳಿಯನ್ನು ಕಂಡೆನು. 2 “ಏನನ್ನು ನೋಡುತ್ತೀ?” ಎಂದು ದೇವದೂತನು ಕೇಳಿದನು.
“ಒಂದು ಹಾರುವ ಸುರುಳಿ, ಅದು ಮೂವತ್ತು ಅಡಿ ಉದ್ದ, ಹದಿನೈದು ಅಡಿ ಅಗಲವಿದೆ” ಎಂದು ನಾನು ಉತ್ತರಿಸಿದೆನು.
3 ಆಗ ದೇವದೂತನು ನನಗೆ ಹೇಳಿದ್ದೇನೆಂದರೆ, “ಈ ಸುರುಳಿಯಲ್ಲಿ ಶಾಪವು ಬರೆಯಲ್ಪಟ್ಟಿದೆ. ಸುರುಳಿಯ ಒಂದು ಬದಿಯಲ್ಲಿ ಕದಿಯುವ ಜನರಿಗೆ ಶಾಪ ಬರೆಯಲ್ಪಟ್ಟಿದೆ. ಅದರ ಇನ್ನೊಂದು ಬದಿಯಲ್ಲಿ ವಾಗ್ದಾನ ಮಾಡಿಯೂ ಅದನ್ನು ಪಾಲಿಸದೆ ಸುಳ್ಳಾಡುವವರಿಗೆ ಶಾಪ ಬರೆಯಲ್ಪಟ್ಟಿದೆ. 4 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ‘ನಾನು ಆ ಸುರುಳಿಯನ್ನು ಕದಿಯುವವರ ಮನೆಗಳಿಗೂ ಮತ್ತು ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಡುವವರ ಮನೆಗಳಿಗೂ ಕಳುಹಿಸುವೆನು. ಆ ಸುರುಳಿಯು ಅಲ್ಲಿಯೇ ಇದ್ದು ಆ ಮನೆಗಳನ್ನು ನಾಶಮಾಡುವುದು. ಮನೆಯ ಕಲ್ಲುಕಂಬಗಳನ್ನು, ಮರದ ತೊಲೆಗಳನ್ನು ನಾಶಮಾಡುವದು.’”
ಸ್ತ್ರೀ ಮತ್ತು ಬುಟ್ಟಿ
5 ನನ್ನೊಡನೆ ಮಾತನಾಡುತ್ತಿದ್ದ ದೇವದೂತನು ಹೊರಗೆ ಹೋದನು. ಆಗ ಅವನು, “ನೋಡು, ನಮ್ಮ ಬಳಿಗೆ ಏನು ಬರುತ್ತಿದೆ ಎಂದು ನೋಡು” ಎಂದನು.
6 “ಅದು ಏನೋ ನನಗೆ ಗೊತ್ತಾಗುತ್ತಿಲ್ಲ. ಅದು ಏನಿರಬಹುದು?” ಎಂದು ನಾನು ವಿಚಾರಿಸಿದೆನು.
ಅದಕ್ಕವನು, “ಅದು ಒಂದು ಅಳೆಯುವ ಬುಟ್ಟಿ, ಈ ಬುಟ್ಟಿಯು ಈ ದೇಶದ ಜನರ ಪಾಪವನ್ನು ಅಳೆಯುವ ಬುಟ್ಟಿಯಾಗಿದೆ” ಎಂದನು.
7 ಸೀಸದಿಂದ ಮಾಡಲ್ಪಟ್ಟ ಒಂದು ಮುಚ್ಚಳವನ್ನು ಆ ಬುಟ್ಟಿಯಿಂದ ತೆಗೆಯಲಾಯಿತು. ಆಗ ಅದರೊಳಗೆ ಒಬ್ಬ ಹೆಂಗಸು ಇರುವುದನ್ನು ಕಂಡೆನು. 8 ಆಗ ಆ ದೂತನು, “ಆ ಸ್ತ್ರೀಯು ದುಷ್ಟತನವನ್ನು ಸೂಚಿಸುತ್ತಾಳೆ” ಎಂದು ಹೇಳಿ ದೂತನು ಆ ಸ್ತ್ರೀಯನ್ನು ಬುಟ್ಟಿಯ ತಳಕ್ಕೆ ನೂಕಿ, ಸೀಸದ ಮುಚ್ಚಳವನ್ನು ಹಾಕಿಬಿಟ್ಟನು. 9 ಆ ಬಳಿಕ ನಾನು ಮೇಲಕ್ಕೆ ನೋಡಿದಾಗ ಕೊಕ್ಕರೆಯಂತೆ ರೆಕ್ಕೆಗಳಿರುವ ಎರಡು ಸ್ತ್ರೀಯರನ್ನು ಕಂಡೆನು. ಅವರು ಹಾರುತ್ತಾ ರೆಕ್ಕೆಗಳಲ್ಲಿಯ ಗಾಳಿಯ ಸಹಾಯದಿಂದ ಬುಟ್ಟಿಯನ್ನು ಎತ್ತಿಕೊಂಡು ಆಕಾಶದಲ್ಲಿ ಹಾರಿಕೊಂಡು ಹೋದರು. 10 ಆಗ ನಾನು ದೂತನನ್ನು, “ಅವರು ಬುಟ್ಟಿಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ?” ಎಂದು ಪ್ರಶ್ನಿಸಿದೆನು.
11 “ಅವರು ಶಿನಾರಿನಲ್ಲಿ ಅದಕ್ಕೊಂದು ಮನೆ ಕಟ್ಟುವದಕ್ಕಿದ್ದಾರೆ. ಮನೆಕಟ್ಟಿದ ಬಳಿಕ ಆ ಬುಟ್ಟಿಯನ್ನು ಅವರು ಅದರೊಳಗಿಡುವರು” ಎಂದು ಹೇಳಿದನು.
ನಾಲ್ಕು ರಥಗಳು
6 ನಾನು ತಿರುಗಿ ಮೇಲಕ್ಕೆ ನೋಡಿದಾಗ ನಾಲ್ಕು ರಥಗಳು ನಾಲ್ಕು ಹಿತ್ತಾಳೆಯ ಪರ್ವತಗಳ ಮಧ್ಯೆ ಓಡುವುದನ್ನು ಕಂಡೆನು. 2 ಮೊದಲನೇ ರಥವನ್ನು ಕೆಂಪು ಕುದುರೆಗಳು ಎಳೆಯುತ್ತಿದ್ದವು. ಎರಡನೇ ರಥವನ್ನು ಕಪ್ಪು ಕುದುರೆಗಳು ಎಳೆಯುತ್ತಿದ್ದವು. 3 ಬಿಳಿ ಕುದುರೆಗಳು ಮೂರನೇ ರಥವನ್ನೂ ಕೆಂಪು ಮಚ್ಚೆಗಳುಳ್ಳ ಕುದುರೆಗಳು ನಾಲ್ಕನೇ ರಥವನ್ನೂ ಎಳೆಯುತ್ತಿದ್ದವು. 4 “ಇವು ಏನನ್ನು ಸೂಚಿಸುತ್ತವೆ?” ಎಂದು ನನ್ನೊಡನೆ ಮಾತನಾಡುತ್ತಿದ್ದ ದೂತನೊಡನೆ ವಿಚಾರಿಸಿದೆನು.
5 ದೇವದೂತನು ಹೇಳಿದ್ದೇನೆಂದರೆ, “ಇವು ನಾಲ್ಕು ಗಾಳಿಗಳು. ಅವು ಭೂಲೋಕದ ಒಡೆಯನ ಬಳಿಯಿಂದ ಈಗ ತಾನೇ ಬಂದವು. 6 ಕಪ್ಪು ಕುದುರೆಗಳು ಉತ್ತರದಿಕ್ಕಿಗೆ ಹೋಗುವವು. ಕೆಂಪು ಕುದುರೆಗಳು ಪೂರ್ವದಿಕ್ಕಿಗೆ ಹೋಗುವವು. ಬಿಳಿ ಕುದುರೆಗಳು ಪಶ್ಚಿಮಕ್ಕೂ ಮಚ್ಚೆಯಿರುವ ಕುದುರೆಗಳು ದಕ್ಷಿಣ ದಿಕ್ಕಿಗೂ ಹೋಗುವವು.”
7 ಕೆಂಪು ಮಚ್ಚೆ ಇರುವ ಕುದುರೆಗಳು ತಮಗೆ ನೇಮಕವಾದ ಜಾಗಕ್ಕೆ ಹೋಗಿ ಅದನ್ನು ನೋಡಲು ಆತುರಗೊಂಡಿದ್ದವು. ಆಗ ದೂತನು ಅವುಗಳಿಗೆ, “ಹೋಗಿ, ಭೂಮಿಯ ಮೇಲೆ ಹೋಗಿ ಬನ್ನಿ” ಎಂದು ಹೇಳಿದಾಗ ಅವುಗಳು ಹೋಗಿ ತಮ್ಮ ಪ್ರಾಂತ್ಯದಲ್ಲಿ ನಡೆದಾಡಿದವು.
8 ಆಗ ಯೆಹೋವನು ನನ್ನನ್ನು ಗಟ್ಟಿಯಾಗಿ ಕರೆದು, “ನೋಡು, ಆ ಉತ್ತರ ದಿಕ್ಕಿಗೆ ಹೋಗುತ್ತಿದ್ದ ಆ ಕುದುರೆಗಳು ತಮ್ಮ ಕೆಲಸವನ್ನು ಬಾಬಿಲೋನಿನಲ್ಲಿ ಮುಗಿಸಿವೆ. ಅವು ನನ್ನ ಆತ್ಮವನ್ನು ಶಾಂತಗೊಳಿಸಿವೆ. ಈಗ ನಾನು ಕೋಪಗೊಂಡಿಲ್ಲ.” ಎಂದು ಹೇಳಿದನು.
ಪ್ರಧಾನ ಯಾಜಕನಾದ ಯೆಹೋಶುವನು ಕಿರೀಟ ಹೊಂದುವನು
9 ಆಗ ತಿರುಗಿ ನಾನು ಯೆಹೋವನಿಂದ ಸಂದೇಶವನ್ನು ಪಡಕೊಂಡೆನು. 10 ಆತನು ಹೇಳಿದ್ದೇನೆಂದರೆ, “ಹೆಲ್ದಾಯ, ತೋಬೀಯ ಮತ್ತು ಯೆದಾಯ ಇವರು ಬಾಬಿಲೋನಿನಿಂದ ಸೆರೆಯಾಳುಗಳಾಗಿ ಬಂದಿರುತ್ತಾರೆ. ಅವರಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಚೆಫನ್ಯನ ಮಗನಾದ ಯೋಷೀಯನ ಮನೆಗೆ ಹೋಗಿರಿ. 11 ಆ ಬೆಳ್ಳಿಬಂಗಾರಗಳಿಂದ ಒಂದು ಕಿರೀಟವನ್ನು ಮಾಡಿ ಯೆಹೋಶುವನ ತಲೆಯ ಮೇಲಿಟ್ಟು ಅವನಿಗೆ ಹೀಗೆ ಹೇಳಿರಿ: (ಯೆಹೋಶುವನು ಪ್ರಧಾನ ಯಾಜಕನಾಗಿದ್ದನು. ಇವನ ತಂದೆ ಯೆಹೋಜಾದಾಕನು.) 12 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ,
“ಕೊಂಬೆ ಎಂಬ ಒಬ್ಬಾತನು ಇದ್ದಾನೆ.
ಆತನು ಬೆಳೆದು ಬಲಿಷ್ಠನಾಗುವನು.
ಆತನು ದೇವಾಲಯವನ್ನು ಕಟ್ಟುವನು.
13 ಆತನು ದೇವಾಲಯವನ್ನು ಕಟ್ಟುವನು
ಮತ್ತು ಗೌರವವನ್ನು ಹೊಂದುವನು.
ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ರಾಜ್ಯವನ್ನು ಆಳುವನು.
ಒಬ್ಬ ಯಾಜಕನು ಆತನ ಸಿಂಹಾಸನದ ಬಳಿಯಲ್ಲಿ ನಿಂತುಕೊಂಡಿರುವನು.
ಅವರಿಬ್ಬರೂ ಸಮಾಧಾನದಿಂದ ಕೆಲಸ ಮಾಡುವರು.
14 ಜನರು ಸ್ಮರಿಸಿಕೊಳ್ಳುವಂತೆ ಅವರು ಆ ಕಿರೀಟವನ್ನು ಆಲಯದೊಳಗೆ ಇಡುವರು. ಅದು ಹೆಲ್ದಾಯ, ತೋಬೀಯ, ಯೆದಾಯ ಮತ್ತು ಚೆಫನ್ಯನ ಮಗನಾದ ಹೇನ್‌ನಿಗೆ ಘನತೆಯನ್ನು ತರುವುದು.”
15 ದೂರದಲ್ಲಿ ವಾಸಿಸುವ ಜನರು ಬಂದು ಆಲಯವನ್ನು ಕಟ್ಟುವರು. ಆಗ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ನೀವು ತಿಳಿಯುವಿರಿ. ಯೆಹೋವನು ಹೇಳಿದಂತೆ ನೀವು ಮಾಡಿದರೆ ಇವೆಲ್ಲಾ ನೆರವೇರುವುದು.
ಯೆಹೋವನಿಗೆ ದಯೆ ಕರುಣೆಗಳು ಬೇಕಾಗಿವೆ
7 ಪರ್ಶಿಯದ ಅರಸನಾದ ದಾರ್ಯಾವೆಷನ ಆಳ್ವಿಕೆಯ ನಾಲ್ಕನೇ ವರ್ಷದ ಒಂಭತ್ತನೇ ತಿಂಗಳಿನ (ಕಿಸ್ಲೇವ್) ನಾಲ್ಕನೇ ದಿವಸದಲ್ಲಿ ಯೆಹೋವನ ಸಂದೇಶವನ್ನು ಜೆಕರ್ಯನು ಹೊಂದಿದನು. 2 ಬೇತೇಲಿನ ಜನರು ಸರೆಚರ್, ರೆಗೆಮ್ ಮೆಲೆಕ್ ಮತ್ತು ಅವರ ಜನರನ್ನು ಯೆಹೋವನಿಗೆ ಒಂದು ಪ್ರಶ್ನೆಯನ್ನು ಕೇಳಲು ಕಳುಹಿಸಿದರು. 3 ಅವರು ಸರ್ವಶಕ್ತನಾದ ಯೆಹೋವನ ಆಲಯದಲ್ಲಿದ್ದ ಯಾಜಕರ ಬಳಿಗೂ ಪ್ರವಾದಿಗಳ ಬಳಿಗೂ ಹೋದರು. ಅವರು ಹೀಗೆ ಪ್ರಶ್ನೆ ಕೇಳಿದರು: “ಅನೇಕ ವರ್ಷಗಳಿಂದ ಆಲಯವು ಕೆಡವಲ್ಪಟ್ಟದ್ದಕ್ಕಾಗಿ ನಮ್ಮ ದುಃಖವನ್ನು ತೋರಿಸಿದೆವು. ಪ್ರತೀ ವರ್ಷದ ಐದನೇ ತಿಂಗಳಿನಲ್ಲಿ ಉಪವಾಸಕ್ಕಾಗಿ ಮತ್ತು ರೋದಿಸುವುದಕ್ಕಾಗಿ ನಾವು ಪ್ರತ್ಯೇಕ ಸಮಯವನ್ನು ನೇಮಿಸುತ್ತಿದ್ದೆವು. ನಾವು ಇದನ್ನು ಹೀಗೆಯೇ ಮುಂದುವರಿಸಬೇಕೋ?”
4 ಆಗ ನನಗೆ ಸರ್ವಶಕ್ತನಾದ ಯೆಹೋವನಿಂದ ಈ ಸಂದೇಶವು ದೊರಕಿತು: 5 “ಯಾಜಕರಿಗೂ, ದೇಶದ ಇತರ ಜನರಿಗೂ ಇದನ್ನು ಹೇಳು, ಎಪ್ಪತ್ತು ವರ್ಷಗಳ ತನಕ ನೀವು ಐದನೇ ಮತ್ತು ಏಳನೇ ತಿಂಗಳಿನಲ್ಲಿ ನಿಮ್ಮ ದುಃಖವನ್ನು ಉಪವಾಸ ಮಾಡವದರಲ್ಲಿ ತೋರಿಸಿದಿರಿ. ಆದರೆ ಮಾಡಿದ ಆ ಉಪವಾಸವು ನಿಜವಾಗಿಯೂ ನನಗಾಗಿಯೋ? ಇಲ್ಲ! 6 ನೀವು ತಿಂದು ಕುಡಿದಾಗ ಅದು ನನಗಾಗಿ ಇತ್ತೋ? ಇಲ್ಲ. ಅದು ನಿಮ್ಮ ಒಳ್ಳೆಯದಕ್ಕಾಗಿಯೇ ಇತ್ತು. 7 ಇದನ್ನು ತಿಳಿಸುವುದಕ್ಕಾಗಿಯೇ ದೇವರು ಹಿಂದಿನ ಕಾಲದಲ್ಲಿ ಪ್ರವಾದಿಗಳನ್ನು ಉಪಯೋಗಿಸಿದ್ದನು. ಜೆರುಸಲೇಮ್ ಜನಭರಿತವಾದ ಪಟ್ಟಣವಾಗಿದ್ದಾಗ ದೇವರು ಇದನ್ನು ಜನರಿಗೆ ತಿಳಿಸಿದ್ದನು. ಜೆರುಸಲೇಮಿನ ಸುತ್ತಮುತ್ತ ಇರುವ ಪಟ್ಟಣಗಳಲ್ಲಿ ಜನರು ವಾಸಿಸುತ್ತಿದ್ದ ಸಮಯದಲ್ಲಿ ದೇವರು ಇದನ್ನು ತಿಳಿಸಿದ್ದನು. ನೆಗೆವ್‌ನಲ್ಲಿಯೂ ಪಶ್ಚಿಮದ ಪರ್ವತಗಳ ಬುಡದಲ್ಲಿಯೂ ದೇವರು ಇದನ್ನು ಜನರಿಗೆ ತಿಳಿಸಿದ್ದನು.”
8 ಇದು ಜೆಕರ್ಯನಿಗೆ ಯೆಹೋವನ ಸಂದೇಶ:
9 “ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
‘ನೀವು ಯಾವದು ನ್ಯಾಯವೋ ಯಾವುದು ಯೋಗ್ಯವೋ ಅದನ್ನು ಮಾಡಬೇಕು.
ನೀವು ಒಬ್ಬರಿಗೊಬ್ಬರು ದಯೆಕರುಣೆಗಳನ್ನು ತೋರಿಸಬೇಕು.
10 ವಿಧವೆಯರಿಗೂ ಅನಾಥರಿಗೂ ಹಾನಿಮಾಡಬೇಡಿರಿ.
ಅಪರಿಚಿತರಿಗೂ ಬಡವರಿಗೂ ಕೇಡುಮಾಡಬೇಡಿ.
ಒಬ್ಬರಿಗೊಬ್ಬರು ಕೇಡುಮಾಡಲು ಯೋಚಿಸಲೂಬೇಡಿ!’”
11 ಆದರೆ ಆ ಜನರು ಈ ಮಾತುಗಳನ್ನು ಕೇಳಲಿಲ್ಲ.
ಆತನು ಹೇಳಿದ ಹಾಗೆ ನಡೆಯಲಿಲ್ಲ.
ದೇವರು ಹೇಳುವುದು ತಮಗೆ ಕೇಳದಂತೆ
ತಮ್ಮ ಕಿವಿಗಳನ್ನು ಮುಚ್ಚಿಕೊಂಡರು.
12 ಅವರು ಹಠಮಾರಿಗಳಾಗಿದ್ದರು.
ನ್ಯಾಯವಿಧಿಗಳಿಗೆ ಅವರು ವಿಧೇಯರಾಗಲಿಲ್ಲ.
ಸರ್ವಶಕ್ತನಾದ ಯೆಹೋವನು ತನ್ನ ಆತ್ಮನಿಂದ
ಪ್ರವಾದಿಗಳ ಮೂಲಕ ಅವರಿಗೆ ಸಂದೇಶ ಕಳುಹಿಸಿದನು.
ಆದರೂ ಜನರು ಅವರಿಗೆ ಕಿವಿಗೊಡಲಿಲ್ಲ.
ಆದ್ದರಿಂದ ಸರ್ವಶಕ್ತನಾದ ಯೆಹೋವನು ಬಹಳ ಕೋಪಗೊಂಡನು.
13 ಆತನು ಹೇಳಿದ್ದೇನೆಂದರೆ, “ನಾನು ಅವರನ್ನು ಕರೆದರೂ
ಅವರು ನನಗೆ ಕಿವಿಗೊಡಲಿಲ್ಲ.
ಆದ್ದರಿಂದ ಈಗ ಅವರು ನನ್ನನ್ನು ಕರೆದರೂ
ನಾನು ಅವರಿಗೆ ಉತ್ತರಕೊಡುವುದಿಲ್ಲ.
14 ನಾನು ಇತರ ಜನಾಂಗಗಳನ್ನು ಬಿರುಗಾಳಿಯಂತೆ ಅವರ ಬಳಿಗೆ ಕಳುಹಿಸುವೆನು.
ಆ ರಾಷ್ಟ್ರಗಳನ್ನು ಅವರು ತಿಳಿದಿರಲಿಲ್ಲ.
ಆದರೆ ಆ ದೇಶಗಳವರು ಇವರ ದೇಶವನ್ನು ದಾಟಿಹೋಗುವಾಗ
ಆ ಸುಂದರವಾದ ದೇಶವು ನಾಶವಾಗುವದು.”
ಜೆರುಸಲೇಮನ್ನು ಆಶೀರ್ವದಿಸುವೆನು ಎಂಬ ಯೆಹೋವನ ವಾಗ್ದಾನ
8 ಸರ್ವಶಕ್ತನಾದ ಯೆಹೋವನ ಸಂದೇಶ: 2 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಚೀಯೋನ್ ಪರ್ವತವನ್ನು ನಾನು ಸತ್ಯವಾಗಿಯೂ ಪ್ರೀತಿಸುತ್ತೇನೆ. ನನಗೆ ನಂಬಿಗಸ್ತಳಾಗದಿದ್ದಾಗ ನಾನು ಆಕೆಯ ಮೇಲೆ ಕೋಪಗೊಳ್ಳುವಷ್ಟರವರೆಗೆ ಪ್ರೀತಿಸುತ್ತೇನೆ.” 3 ಯೆಹೋವನು ಹೇಳುವುದೇನೆಂದರೆ, “ನಾನು ಚೀಯೋನಿಗೆ ಹಿಂದಿರುಗಿ ಬಂದಿದ್ದೇನೆ. ನಾನು ಜೆರುಸಲೇಮಿನಲ್ಲಿ ವಾಸಿಸುತ್ತೇನೆ. ಜೆರುಸಲೇಮ್ ನಂಬಿಗಸ್ತನಗರವೆಂದು ಕರೆಯಲ್ಪಡುವುದು. ಸರ್ವಶಕ್ತನ ಪರ್ವತವು ಪವಿತ್ರ ಪರ್ವತವೆಂದು ಕರೆಯಲ್ಪಡುವುದು.”
4 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ವೃದ್ಧವೃದ್ಧೆಯರು ಜೆರುಸಲೇಮಿನ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಿ ಕಾಣಸಿಗುವರು. ಅವರು ಬಹು ದೀರ್ಘ ಆಯುಷ್ಯವನ್ನು ಹೊಂದುವದರಿಂದ ಅವರಿಗೆ ಕೈಕೋಲು ಬೇಕಾಗುತ್ತದೆ. 5 ನಗರದ ತುಂಬಾ ಬಾಲಬಾಲೆಯರು ಆಡುವರು.” 6 ಅಳಿದುಳಿದುವರು “ಇದು ಆಶ್ಚರ್ಯಕರ” ಎಂದು ಹೇಳುವರು. ನಾನೂ ಇದು ಆಶ್ಚರ್ಯಕರವೆಂದು ತಿಳಿಯುತ್ತೇನೆ.
7 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಾನೂ ಪೂರ್ವ ಪಶ್ಚಿಮದಲ್ಲಿರುವ ದೇಶಗಳೊಳಗಿಂದ ನನ್ನ ಜನರನ್ನು ರಕ್ಷಿಸುವುದನ್ನು ನೋಡಿರಿ. 8 ನಾನು ಅವರನ್ನು ಇಲ್ಲಿಗೆ ಕರೆತರುವೆನು. ಅವರು ಜೆರುಸಲೇಮಿನಲ್ಲಿ ವಾಸಿಸುವರು. ಅವರು ನನ್ನ ಜನರಾಗಿರುವರು; ನಾನು ಅವರಿಗೆ ಒಳ್ಳೆಯವನಾದ ನಂಬಿಗಸ್ತನಾದ ದೇವರಾಗಿರುವೆನು.”
9 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಬಲಗೊಳ್ಳಿರಿ! ಸರ್ವಶಕ್ತನಾದ ಯೆಹೋವನು ತನ್ನ ಆಲಯವನ್ನು ತಿರುಗಿ ಕಟ್ಟಲು ಅಸ್ತಿವಾರವನ್ನು ಹಾಕುವಾಗ ಪ್ರವಾದಿಗಳು ಕೊಟ್ಟ ಸಂದೇಶವನ್ನೇ ನೀವು ತಿರುಗಿ ಕೇಳುತ್ತಿದ್ದೀರಿ! 10 ಇದಕ್ಕಿಂತ ಮುಂಚೆ ಜನರ ಕೈಯಲ್ಲಿ ಕೆಲಸಗಾರರಿಗೆ ಕೂಲಿ ಕೊಡುವದಕ್ಕಾಗಲಿ ಪ್ರಾಣಿಗಳ ಬಾಡಿಗೆ ಕೊಡುವದಕ್ಕಾಗಲಿ ಹಣವಿರಲಿಲ್ಲ. ಅದೇ ಸಮಯದಲ್ಲಿ ಜನರು ಹೋಗುತ್ತಾ ಬರುತ್ತಾ ಇರುವದಕ್ಕೆ ಸುರಕ್ಷತೆ ಇರಲಿಲ್ಲ. ಎಲ್ಲಾ ತೊಂದರೆಗಳು ತೊರೆಯಲ್ಪಡಲಿಲ್ಲ. ಪ್ರತಿ ಮನುಷ್ಯನು ತನ್ನ ನೆರೆಯವನ ಮೇಲೆ ಎದುರುಬೀಳುವಂತೆ ನಾನು ಮಾಡಿದ್ದೆನು. 11 ಆದರೆ ಈಗ ಹಾಗಿಲ್ಲ. ಅಳಿಯದೆ ಉಳಿದವರಿಗೆ ಹಾಗೆ ಆಗುವದಿಲ್ಲ. ಇದು ಸರ್ವಶಕ್ತನಾದ ಯೆಹೋವನ ನುಡಿ.
12 “ಈ ಜನರು ನೆಮ್ಮದಿಯಿಂದ ಭೂಮಿಯ ಮೇಲೆ ನಡೆಯುವರು. ಅವರ ದ್ರಾಕ್ಷಾಲತೆಗಳು ದ್ರಾಕ್ಷಿಹಣ್ಣನ್ನು ಕೊಡುವವು. ದೇಶವು ಸಮೃದ್ಧಿಯಾದ ಬೆಳೆಯನ್ನು ಕೊಡುವದು. ಆಕಾಶವು ಮಳೆಯನ್ನು ಸುರಿಸುವದು. ಇವೆಲ್ಲವನ್ನು ನಾನು ನನ್ನ ಜನರಿಗೆ ಕೊಡುವೆನು. 13 ಜನರು ಇಸ್ರೇಲ್ ಮತ್ತು ಯೆಹೂದದ ಹೆಸರುಗಳನ್ನು ಶಾಪ ಇಡುವದಕ್ಕಾಗಿ ಉಪಯೋಗಿಸುವರು. ಆದರೆ ನಾನು ಇಸ್ರೇಲ್ ಮತ್ತು ಯೆಹೂದವನ್ನು ಸಂರಕ್ಷಿಸುವೆನು. ಆ ಹೆಸರುಗಳು ಆಶೀರ್ವದಿಸುವದಕ್ಕಾಗಿ ಉಪಯೋಗಿಸಲ್ಪಡುವದು. ಆದ್ದರಿಂದ ಭಯಪಡಬೇಡಿ, ಬಲಶಾಲಿಗಳಾಗಿರಿ.”
14 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನಿಮ್ಮ ಪೂರ್ವಿಕರು ನನ್ನನ್ನು ಕೋಪಗೊಳಿಸಿದರು. ಆದ್ದರಿಂದ ಅವರನ್ನು ನಾಶಮಾಡಲು ನಾನು ತೀರ್ಮಾನಿಸಿದೆನು. ಮತ್ತು ಈ ತೀರ್ಮಾನವನ್ನು ಬದಲಾಯಿಸುವದೇ ಇಲ್ಲವೆಂದು ನಿರ್ಧರಿಸಿದೆನು. 15 ಆದರೆ ಈಗ ನನ್ನ ನಿರ್ಧಾರವನ್ನು ಬದಲಾಯಿಸಿದ್ದೇನೆ. ಜೆರುಸಲೇಮಿಗೂ ಯೆಹೂದದ ಜನರಿಗೂ ಒಳ್ಳೆಯದನ್ನೇ ಮಾಡುವೆನು. ಆದ್ದರಿಂದ ಭಯಪಡಬೇಡಿ. 16 ಆದರೆ ನೀವು ಮಾಡಬೇಕಾದದ್ದೇನೆಂದರೆ, ನಿಮ್ಮ ನೆರೆಯವರ ಸಂಗಡ ಸತ್ಯವನ್ನೇ ಆಡಿರಿ. ನಿಮ್ಮ ನಗರಗಳಲ್ಲಿ ಯಾವುದೇ ತೀರ್ಮಾನಗಳನ್ನು ಮಾಡುವುದಾಗಿದ್ದರೂ ಅವು ನ್ಯಾಯವಾದವುಗಳಾಗಿಯೂ ಸತ್ಯವಾದವುಗಳಾಗಿಯೂ ಸಮಾಧಾನವನ್ನು ತರುವಂಥವುಗಳಾಗಿಯೂ ಇರಲಿ. 17 ನಿಮ್ಮ ನೆರೆಯವನಿಗೆ ಹಾನಿಮಾಡುವುದನ್ನು ಗುಟ್ಟಾಗಿ ಆಲೋಚಿಸಬೇಡಿರಿ. ಸುಳ್ಳು ವಾಗ್ದಾನ ಮಾಡಬೇಡಿರಿ. ಅವುಗಳನ್ನೆಲ್ಲಾ ಮಾಡುವದರಲ್ಲಿ ಆನಂದಿಸಬೇಡಿರಿ. ಯಾಕೆಂದರೆ ಅವುಗಳನ್ನು ನಾನು ದ್ವೇಷಿಸುತ್ತೇನೆ.” ಇದು ಯೆಹೋವನ ನುಡಿ.
18 ಸರ್ವಶಕ್ತನಾದ ಯೆಹೋವನಿಂದ ನಾನು ಈ ಸಂದೇಶವನ್ನು ಹೊಂದಿದೆನು. 19 ಆತನು ಹೇಳುವುದೇನೆಂದರೆ, “ನಾಲ್ಕನೇ, ಐದನೇ, ಏಳನೇ ಮತ್ತು ಹತ್ತನೇ ತಿಂಗಳಿನಲ್ಲಿ ನೀವು ದುಃಖದಿಂದ ಉಪವಾಸ ಮಾಡುವ ವಿಶೇಷ ದಿವಸಗಳಿವೆ. ಆ ದುಃಖದ ದಿವಸಗಳು ನಿಮ್ಮ ಸಂತಸದ ದಿವಸಗಳಾಗಿ ಪರಿಗಣಿಸಬೇಕು. ನೀವು ಸತ್ಯವನ್ನೂ ಸಮಾಧಾನವನ್ನೂ ಪ್ರೀತಿಸುವವರಾಗಬೇಕು.”
20 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ,
“ಮುಂದಿನ ದಿವಸಗಳಲ್ಲಿ ಬೇರೆಬೇರೆ ನಗರದ ಜನರು ಜೆರುಸಲೇಮಿಗೆ ಬರುವರು.
21 ಬೇರೆಬೇರೆ ನಗರದ ಜನರು ಪರಸ್ಪರ ವಂದಿಸುವರು.
ಅವರಲ್ಲಿ ಕೆಲವರು, ‘ನಾವು ಸರ್ವಶಕ್ತನಾದ ಯೆಹೋವನನ್ನು ಆರಾಧಿಸಲು ಹೋಗುತ್ತಿದ್ದೇವೆ’ ಅನ್ನುವರು.
ಅದಕ್ಕೆ ಇನ್ನೊಬ್ಬನು,
‘ನಾನು ನಿಮ್ಮೊಂದಿಗೆ ಬರುತ್ತೇನೆ’” ಅನ್ನುವನು.
22 ಎಷ್ಟೋ ಜನರು, ಎಷ್ಟೋ ಬಲಶಾಲಿ ಜನಾಂಗಗಳು ಜೆರುಸಲೇಮಿಗೆ ಸರ್ವಶಕ್ತನಾದ ಯೆಹೋವನನ್ನು ಕಂಡುಕೊಳ್ಳಲೂ ಆತನನ್ನು ಆರಾಧಿಸಲೂ ಬರುವರು. 23 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ಆ ಸಮಯದಲ್ಲಿ ಬೇರೆಬೇರೆ ಭಾಷೆಗಳನ್ನು ಮಾತಾಡುವ ಅನೇಕ ವಿದೇಶಿಯರು ಯೆಹೂದ್ಯನೊಬ್ಬನ ಬಳಿಗೆ ಬಂದು, ಅವನ ಬಟ್ಟೆಯ ಅಂಚನ್ನು ಹಿಡಿದು, ‘ದೇವರು ನಿಮ್ಮೊಂದಿಗಿದ್ದಾನೆಂದು ನಾವು ಕೇಳಿದ್ದೇವೆ. ನಿಮ್ಮೊಂದಿಗೆ ನಾವೂ ಬಂದು ಆತನನ್ನು ಆರಾಧಿಸಬಹುದೋ?’” ಎಂದು ಕೇಳುವರು.
ಪರಲೋಕದಲ್ಲಿ ದೇವರಿಗೆ ಸ್ತೋತ್ರ
19 ಇದಾದ ಬಳಿಕ, ಪರಲೋಕದಲ್ಲಿ ಅನೇಕಾನೇಕ ಜನರ ಮಹಾಶಬ್ದವೋ ಎಂಬಂತೆ ಇದ್ದ ಧ್ವನಿಯನ್ನು ಕೇಳಿದೆನು. ಆ ಜನರು ಹೀಗೆ ಹೇಳುತ್ತಿದ್ದರು:
“ಹಲ್ಲೆಲೂಯಾ, (ದೇವರಿಗೆ ಸ್ತೋತ್ರ ಮಾಡಿರಿ)
ಜಯವೂ ಪ್ರಭಾವವೂ ಅಧಿಕಾರವೂ ನಮ್ಮ ದೇವರಿಗೆ ಸೇರಿದ್ದಾಗಿವೆ.
2 ಆತನ ತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ.
ನಮ್ಮ ದೇವರು ವೇಶ್ಯೆಯನ್ನು ದಂಡಿಸಿದನು.
ಅವಳ ಲೈಂಗಿಕ ಪಾಪದಿಂದಲೇ ಲೋಕವು ಕೆಟ್ಟುಹೋಯಿತು.
ಆತನು ತನ್ನ ಸೇವಕರ ರಕ್ತಕ್ಕೆ ಪ್ರತಿಯಾಗಿ ಆ ವೇಶ್ಯೆಯನ್ನು ದಂಡಿಸಿದನು.”
3 ಇದಲ್ಲದೆ ಪರಲೋಕದಲ್ಲಿದ್ದ ಆ ಜನರು ಹೇಳಿದ್ದೇನೆಂದರೆ:
“ಹಲ್ಲೆಲೂಯಾ!
ಅವಳು ಸುಟ್ಟುಹೋಗುತ್ತಿದ್ದಾಳೆ. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಮೇಲೇಳುತ್ತಿರುವುದು.”
4 ನಂತರ ಇಪ್ಪತ್ತನಾಲ್ಕು ಮಂದಿ ಹಿರಿಯರು ಮತ್ತು ನಾಲ್ಕು ಜೀವಿಗಳು ಮೊಣಕಾಲೂರಿ ನಮಸ್ಕರಿಸಿದರು. ಸಿಂಹಾಸನದ ಮೇಲೆ ಕುಳಿತಿರುವ ದೇವರನ್ನು ಆರಾಧಿಸಿದರು. ಅವರು,
“ಆಮೆನ್! ಹಲ್ಲೆಲೂಯಾ!” ಎಂದು ಹೇಳಿದರು.
5 ಆಗ ಸಿಂಹಾಸನದಿಂದ ಒಂದು ಧ್ವನಿಯು ಬಂದಿತು. ಆ ಧ್ವನಿಯು,
“ನಮ್ಮ ದೇವರ ಸೇವೆ ಮಾಡುವ ಜನರೆಲ್ಲರೇ, ಆತನಿಗೆ ಸ್ತೋತ್ರ ಮಾಡಿರಿ!
ನಮ್ಮ ದೇವರಿಗೆ ಗೌರವ ನೀಡುವ ಚಿಕ್ಕವರೇ, ದೊಡ್ಡವರೇ, ಆತನಿಗೆ ಸ್ತೋತ್ರ ಮಾಡಿರಿ!” ಎಂದು ಹೇಳಿತು.
6 ನಂತರ ಅನೇಕಾನೇಕ ಜನರ ಮಹಾಶಬ್ದದಂತಿದ್ದ ಧ್ವನಿಯೊಂದು ನನಗೆ ಕೇಳಿಸಿತು. ಅದು ಪ್ರವಾಹದ ನೀರಿನ ಘೋಷದಂತೆಯೂ ಗಟ್ಟಿಯಾದ ಗುಡುಗಿನ ಶಬ್ದದಂತೆಯೂ ಇತ್ತು. ಆ ಜನರು ಹೀಗೆ ಹೇಳುತ್ತಿದ್ದರು:
“ಹಲ್ಲೆಲೂಯಾ!
ನಮ್ಮ ದೇವರಾದ ಪ್ರಭುವು ಆಳಲಾರಂಭಿಸಿದ್ದಾನೆ.
ಆತನು ಸರ್ವಶಕ್ತನಾಗಿದ್ದಾನೆ.
7 ನಾವೆಲ್ಲರೂ ಆನಂದಿಸೋಣ ಮತ್ತು ಸಂತಸಪಡೋಣ!
ದೇವರನ್ನು ಮಹಿಮೆಪಡಿಸೋಣ! ಕುರಿಮರಿಯಾದಾತನ (ಯೇಸು) ವಿವಾಹಕಾಲ ಬಂದಿರುವುದರಿಂದ ದೇವರನ್ನು ಘನಪಡಿಸೋಣ.
ಕುರಿಮರಿಯಾದಾತನ ವಧು (ಸಭೆ) ತನ್ನನ್ನು ಸಿದ್ಧಪಡಿಸಿಕೊಂಡಿದ್ದಾಳೆ.
8 ನಯವಾದ ನಾರುಮಡಿಯನ್ನು ವಧುವಿಗೆ ಧರಿಸಲು ನೀಡಲಾಗಿತ್ತು.
ಆ ನಾರುಮಡಿಯು ಪ್ರಕಾಶಮಾನವಾಗಿತ್ತು ಹಾಗೂ ಶುಭ್ರವಾಗಿತ್ತು.”
(ನಯವಾದ ನಾರುಮಡಿಯೆಂದರೆ ದೇವರ ಪರಿಶುದ್ಧ ಜನರು ಮಾಡಿದ ಒಳ್ಳೆಯ ಕಾರ್ಯಗಳು ಎಂದರ್ಥ.)
9 ಆಗ ದೇವದೂತನು ನನಗೆ ಹೀಗೆ ಹೇಳಿದನು: “ಈ ರೀತಿ ಬರೆ: ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟ ಜನರು ಧನ್ಯರು!” ನಂತರ ದೇವದೂತನು, “ಇವು ದೇವರ ಸತ್ಯವಾದ ನುಡಿಗಳು” ಎಂದು ಹೇಳಿದನು.
10 ಆಗ ನಾನು ದೇವದೂತನನ್ನು ಆರಾಧಿಸಲು ಅವನ ಪಾದದ ಮುಂದೆ ಅಡ್ಡಬಿದ್ದೆನು. ಆದರೆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ಯೇಸುವಿನ ಸತ್ಯವನ್ನು ಹೊಂದಿರುವ ನಿನ್ನಂತೆಯೂ ನಿನ್ನ ಸಹೋದರರಂತೆಯೂ ನಾನು ಒಬ್ಬ ಸೇವಕನಾಗಿದ್ದೇನೆ. ಆದ್ದರಿಂದ ದೇವರನ್ನು ಆರಾಧಿಸು! ಏಕೆಂದರೆ ಯೇಸುವಿನ ಸತ್ಯವೇ ಪ್ರವಾದನೆಯ ಸಾಕ್ಷಿಯಾಗಿದೆ” ಎಂದು ಹೇಳಿದನು.
ಬಿಳಿ ಕುದುರೆಯ ಮೇಲಿನ ಸವಾರನು
11 ನಂತರ ಪರಲೋಕವು ತೆರೆದಿರುವುದನ್ನು ನಾನು ನೋಡಿದೆನು. ನನ್ನ ಎದುರಿನಲ್ಲಿ ಒಂದು ಬಿಳಿ ಕುದುರೆಯಿತ್ತು. ಕುದುರೆಯ ಮೇಲೆ ಕುಳಿತಿದ್ದ ಸವಾರನ ಹೆಸರು ನಂಬಿಗಸ್ತ ಮತ್ತು ಸತ್ಯವಂತ. ಆತನು ತನ್ನ ತೀರ್ಪುಗಳಲ್ಲಿಯೂ ಯುದ್ಧಗಳಲ್ಲಿಯೂ ನ್ಯಾಯವಂತನಾಗಿದ್ದನು. 12 ಆತನ ಕಣ್ಣುಗಳು ಉರಿಯುವ ಕೆಂಡಗಳಂತಿದ್ದವು. ಆತನ ತಲೆಯ ಮೇಲೆ ಅನೇಕ ಕಿರೀಟಗಳಿದ್ದವು. ಆತನ ಮೇಲೆ ಒಂದು ಹೆಸರನ್ನು ಬರೆಯಲಾಗಿತ್ತು, ಆದರೆ ಆ ಹೆಸರಿನ ಅರ್ಥ ಆತನೊಬ್ಬನಿಗೆ ಮಾತ್ರ ತಿಳಿದಿತ್ತೇ ಹೊರತು ಬೇರೆ ಯಾರಿಗೂ ತಿಳಿದಿರಲಿಲ್ಲ. 13 ಆತನು ರಕ್ತದಲ್ಲಿ ನೆನೆಸಿದ ನಿಲುವಂಗಿಯನ್ನು ಧರಿಸಿದ್ದನು. ಆತನ ಹೆಸರು ದೇವರವಾಕ್ಯ. 14 ಪರಲೋಕದ ಸೈನ್ಯಗಳು ಬಿಳಿ ಕುದುರೆಗಳ ಮೇಲೆ ಆತನನ್ನು ಹಿಂಬಾಲಿಸುತ್ತಿದ್ದವು. ಅವರು ಬಿಳುಪಾಗಿಯೂ ಶುಭ್ರವಾಗಿಯೂ ಇದ್ದ ನಯವಾದ ನಾರಮಡಿಯನ್ನು ಧರಿಸಿದ್ದರು. 15 ಕುದುರೆಯ ಮೇಲೆ ಕುಳಿತಿದ್ದಾತನ ಬಾಯಿಂದ ಹರಿತವಾದ ಕತ್ತಿಯೊಂದು ಹೊರಗೆ ಬರುತ್ತಿತ್ತು. ಆತನು ಜನಾಂಗಗಳನ್ನು ಸೋಲಿಸಲು ಈ ಕತ್ತಿಯನ್ನು ಬಳಸುತ್ತಾನೆ. ಆತನು ಕಬ್ಬಿಣದ ಕೋಲಿನಿಂದ ಜನಾಂಗಗಳನ್ನು ಆಳುತ್ತಾನೆ. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ಆಲೆಯಲ್ಲಿ ದ್ರಾಕ್ಷಿಯನ್ನು ಕಿವುಚಿ ಹಾಕುತ್ತಾನೆ. 16 ಆತನ ನಿಲುವಂಗಿಯ ಮೇಲೆಯೂ ಆತನ ಕಾಲಿನ ಮೇಲೆಯೂ,
ರಾಜಾಧಿರಾಜ ಮತ್ತು ಪ್ರಭುಗಳ ಪ್ರಭು
ಎಂಬ ಹೆಸರನ್ನು ಬರೆಯಲಾಗಿತ್ತು.
17 ನಂತರ ಒಬ್ಬ ದೇವದೂತನು ಸೂರ್ಯನ ಮೇಲೆ ನಿಂತಿರುವುದನ್ನು ನಾನು ನೋಡಿದೆನು. ಆ ದೇವದೂತನು ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳಿಗೆಲ್ಲ ಹೀಗೆ ಹೇಳುತ್ತಿದ್ದನು: “ದೇವರ ಮಹಾಭೋಜನಕ್ಕೆ ಒಟ್ಟುಗೂಡಿ ಬನ್ನಿರಿ. 18 ನೀವು ರಾಜರುಗಳ ಮತ್ತು ಸಹಸ್ರಾಧಿಪತಿಗಳ ಮತ್ತು ಸುಪ್ರಸಿದ್ಧ ಜನರ ದೇಹಗಳನ್ನು ತಿನ್ನಲು ಒಟ್ಟಾಗಿ ಬನ್ನಿರಿ. ಕುದುರೆಗಳ, ಕುದುರೆ ಸವಾರರ, ಸ್ವತಂತ್ರರಾದವರ, ಗುಲಾಮರ, ಚಿಕ್ಕವರ ಮತ್ತು ದೊಡ್ಡವರ ದೇಹಗಳನ್ನು ತಿನ್ನಲು ಬನ್ನಿರಿ.”
19 ನಂತರ ನಾನು ಲೋಕದ ರಾಜರನ್ನು ಮತ್ತು ಮೃಗವನ್ನು ನೋಡಿದೆನು. ಅವರು ಕುದುರೆಯ ಮೇಲೆ ಕುಳಿತಿದ್ದವನ ಮೇಲೆ ಮತ್ತು ಅವನ ಸೈನ್ಯದ ಮೇಲೆ ಯುದ್ಧ ಮಾಡುವುದಕ್ಕಾಗಿ ತಮ್ಮ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದ್ದರು. 20 ಆದರೆ ಆ ಮೃಗವನ್ನೂ ಸುಳ್ಳುಪ್ರವಾದಿಯನ್ನೂ ಸೆರೆಹಿಡಿಯಲಾಯಿತು. ಈ ಸುಳ್ಳುಪ್ರವಾದಿಯೇ ಮೃಗಕ್ಕಾಗಿ ಅದ್ಭುತಗಳನ್ನು ಮಾಡಿದವನು. ಈ ಸುಳ್ಳುಪ್ರವಾದಿಯು ಮೃಗದ ಗುರುತು ಹಾಕಿಸಿಕೊಂಡಿರುವ ಮತ್ತು ಅದರ ವಿಗ್ರಹವನ್ನು ಆರಾಧಿಸಿದ ಜನರನ್ನು ಮರುಳು ಮಾಡಲು ಈ ಅದ್ಭುತಗಳನ್ನು ಬಳಸಿದ್ದನು. ಈ ಸುಳ್ಳುಪ್ರವಾದಿಯನ್ನೂ ಮೃಗವನ್ನೂ, ಬೆಂಕಿ ಮತ್ತು ಗಂಧಕಗಳಿಂದ ಉರಿಯುವ ಕೆರೆಯಲ್ಲಿ ಜೀವಂತವಾಗಿ ಎಸೆಯಲಾಯಿತು. 21 ಅವರ ಸೈನ್ಯಗಳನ್ನು ಕುದುರೆಯ ಮೇಲೆ ಕುಳಿತಿದ್ದವನ ಬಾಯಿಂದ ಹೊರಬಂದ ಕತ್ತಿಯಿಂದ ಕೊಲ್ಲಲಾಯಿತು. ಈ ದೇಹಗಳನ್ನು ಪಕ್ಷಿಗಳೆಲ್ಲ ಹೊಟ್ಟೆ ತುಂಬುವವರೆಗೆ ತಿಂದವು.
Kannada Holy Bible: Easy-to-Read Version. All rights reserved. © 1997 Bible League International