Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಮೀಕ 6-7

ಯೆಹೋವನ ದೂರು

ಯೆಹೋವನು ಹೇಳುವುದನ್ನು ಕೇಳಿರಿ:
“ನಿನ್ನ ವ್ಯಾಜ್ಯವನ್ನು ಬೆಟ್ಟಗಳಿಗೆ ತಿಳಿಸು.
    ಗುಡ್ಡಗಳು ನಿನ್ನ ಕಥೆಯನ್ನು ಕೇಳಲಿ.
ಯೆಹೋವನಿಗೆ ತನ್ನ ಜನರ ವಿರುದ್ಧವಾಗಿ ವ್ಯಾಜ್ಯವಿದೆ.
    ಪರ್ವತಗಳೇ, ಭೂಮಿಯ ಅಸ್ತಿವಾರಗಳೇ
ಯೆಹೋವನ ದೂರುಗಳನ್ನು ಕೇಳಿರಿ.
    ಇಸ್ರೇಲ್ ತಪ್ಪಿತಸ್ಥನೆಂದು ಆತನು ಧೃಡಪಡಿಸುವನು.”

ಯೆಹೋವನು ಹೇಳುವುದೇನೆಂದರೆ, “ನನ್ನ ಜನರೇ, ನಾನು ಮಾಡಿದ್ದೇನು ತಿಳಿಸಿರಿ.
    ನಿಮಗೆ ವಿರೋಧವಾಗಿ ನಾನು ಏನಾದರೂ ಮಾಡಿದ್ದೇನೋ?
    ನಿಮಗೆ ಜೀವಿಸಲು ಕಷ್ಟವಾಗುವಂತೆ ಮಾಡಿದ್ದೇನೋ?
ನಾನು ಮಾಡಿದ್ದನ್ನು ನಿಮಗೆ ಹೇಳುತ್ತೇನೆ,
    ನಾನು ನಿಮ್ಮ ಬಳಿಗೆ ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು ಕಳುಹಿಸಿದೆನು.
ನಾನು ಈಜಿಪ್ಟ್ ದೇಶದಿಂದ ನಿಮ್ಮನ್ನು ಕರೆತಂದೆನು.
    ಗುಲಾಮತನದಿಂದ ನಿಮ್ಮನ್ನು ಬಿಡಿಸಿ ಸ್ವತಂತ್ರರನ್ನಾಗಿ ಮಾಡಿದೆನು.
ನನ್ನ ಜನರೇ, ಮೋವಾಬ್ಯರ ಅರಸನಾದ ಬಾಲಾಕನ ದುಷ್ಟ ಯೋಜನೆಯನ್ನು ನೆನಪುಮಾಡಿರಿ.
    ಬೆಯೋರನ ಮಗನಾದ ಬಿಳಾಮನು ಬಾಲಾಕನಿಗೆ ಏನು ಹೇಳಿದನೆಂದು ಜ್ಞಾಪಕಮಾಡಿರಿ.
ಶಿಟ್ಟೀಮಿನಿಂದ ಗಿಲ್ಗಾಲಿನ ತನಕ ನಡೆದ ಘಟನೆಗಳನ್ನು ನಿಮ್ಮ ನೆನಪಿಗೆ ತಂದುಕೊಳ್ಳಿರಿ.
    ಅವೆಲ್ಲವನ್ನು ನೀವು ನೆನಪುಮಾಡಿದರೆ ಯೆಹೋವನು ನೀತಿವಂತನು ಎಂದು ನಿಮಗೆ ಗೊತ್ತಾಗುವದು.”

ನಮ್ಮಿಂದ ದೇವರು ಏನನ್ನು ಅಪೇಕ್ಷಿಸುತ್ತಾನೆ?

ನಾನು ದೇವರಾದ ಯೆಹೋವನನ್ನು ಸಂಧಿಸಲು ಬರುವಾಗ ಏನನ್ನು ತೆಗೆದುಕೊಂಡು ಬರಲಿ?
    ಪರಲೋಕದ ದೇವರಿಗೆ ನಾನು ಅಡ್ಡಬಿದ್ದು ಆರಾಧಿಸುವಾಗ ಏನು ಮಾಡಲಿ?
ನಾನು ಕರ್ತನ ಬಳಿಗೆ ಬರುವಾಗ ಸರ್ವಾಂಗಹೋಮದೊಡನೆ
    ಒಂದು ವರ್ಷದ ಕರುವನ್ನು ತೆಗೆದುಕೊಂಡು ಬರಲೋ?
ದೇವರಾದ ಯೆಹೋವನು ಒಂದು ಸಾವಿರ ಟಗರು,
    ಹತ್ತುಸಾವಿರ ಎಣ್ಣೆಯ ಹೊಳೆಗಳಲ್ಲಿ ಸಂತೋಷಿಸುವನೋ?
ನಾನು ಮಾಡಿದ ತಪ್ಪಿನ ಪರಿಹಾರಕ್ಕಾಗಿ ನನ್ನ ಚೊಚ್ಚಲ ಮಗನನ್ನು ಸಮರ್ಪಿಸಲೋ?
    ನನ್ನ ಶರೀರದಿಂದ ಬಂದ ಮಗನನ್ನು ನನ್ನ ಪಾಪಗಳಿಗಾಗಿ ಸಮರ್ಪಿಸಲೋ?

ಮನುಷ್ಯನೇ, ಒಳ್ಳೆಯದು ಏನೆಂದು ಯೆಹೋವನು ನಿನಗೆ ತಿಳಿಸಿದ್ದಾನೆ.
    ಯೆಹೋವನು ನಿನ್ನಿಂದ ಅಪೇಕ್ಷಿಸುವದೇನೆಂದರೆ,
ಇತರರಿಗೆ ನೀನು ಅನ್ಯಾಯ ಮಾಡದಿರು.
    ದಯೆ ಮತ್ತು ನಂಬಿಗಸ್ತಿಕೆಗಳನ್ನು ಪ್ರೀತಿಸು.
    ದೀನತೆಯಿಂದ ನಿನ್ನ ದೇವರಿಗೆ ವಿಧೇಯನಾಗಿರು.

ಇಸ್ರೇಲರು ಏನನ್ನು ಮಾಡುತ್ತಿದ್ದರು?

ಯೆಹೋವನ ಸ್ವರವು ಪಟ್ಟಣದಲ್ಲಿ ಗಟ್ಟಿಯಾಗಿ ಕೇಳಿಸುತ್ತದೆ.
“ಬುದ್ಧಿವಂತನು ಯೆಹೋವನ ನಾಮವನ್ನು ಗೌರವಿಸುವನು.
    ಆದ್ದರಿಂದ ಶಿಕ್ಷೆಯ ಬೆತ್ತದ ಕಡೆಗೆ ಲಕ್ಷ್ಯವಿಡು.
    ಆ ಬೆತ್ತವನ್ನು ಹಿಡುಕೊಂಡವನನ್ನೂ ಗೌರವಿಸು.
10 ಕದ್ದುಕೊಂಡ ಭಂಡಾರಗಳನ್ನು ದುಷ್ಟರು
    ಇನ್ನೂ ಗುಪ್ತವಾಗಿಡುವರೋ?
ಕೆಟ್ಟ ಜನರು ತಮ್ಮ ಚಿಕ್ಕ ಅಳತೆಯಿಂದ
    ಜನರನ್ನು ಇನ್ನೂ ಮೋಸಪಡಿಸುವರೋ?
    ಹೌದು, ಅವೆಲ್ಲವೂ ನಡಿಯುತ್ತಲಿದೆ.
11 ಕೆಲವರು ಮೋಸದ ಅಳತೆ ಪ್ರಮಾಣಗಳಿಂದ ಜನರನ್ನು ಮೋಸಗೊಳಿಸುತ್ತಾರೆ.
    ನಾನು ಅವರನ್ನು ಕ್ಷಮಿಸಬೇಕೋ?
12 ಪಟ್ಟಣದ ಧನಿಕರು ಕ್ರೂರವಾದ ಮತ್ತು ದುಷ್ಟತ್ವದ ಕೃತ್ಯಗಳನ್ನು ಇನ್ನೂ ಮಾಡುತ್ತಿದ್ದಾರೆ.
    ಆ ಪಟ್ಟಣದಲ್ಲಿರುವ ಜನರು ಇನ್ನೂ ಸುಳ್ಳು ಹೇಳುತ್ತಾರೆ.
    ಹೌದು, ಆ ಜನರು ತಮ್ಮ ಸುಳ್ಳನ್ನು ಪ್ರದರ್ಶಿಸುತ್ತಾರೆ.
13 ಆದ್ದರಿಂದ ನಾನು ನಿಮ್ಮನ್ನು ಶಿಕ್ಷಿಸಲು ಪ್ರಾರಂಭಿಸಿದೆನು.
    ನಿಮ್ಮ ಪಾಪಗಳ ದೆಸೆಯಿಂದ ನಿಮ್ಮನ್ನು ನಾಶಮಾಡುವೆನು.
14 ನೀವು ತಿನ್ನುವಿರಿ ಆದರೆ ನಿಮ್ಮ ಹೊಟ್ಟೆ ತುಂಬದು.
    ನೀವು ಹೊಟ್ಟೆಗಿಲ್ಲದವರಂತೆ ಹಸಿವಿನಿಂದಲೇ ಇರುವಿರಿ.
ನೀವು ಜನರನ್ನು ಸುರಕ್ಷಿತ ಸ್ಥಳಕ್ಕೆ ತರಲು ಪ್ರಯತ್ನಿಸುವಿರಿ.
    ಆದರೆ ನೀವು ರಕ್ಷಿಸಿದ ಜನರನ್ನು ಖಡ್ಗಧಾರಿಗಳು ಕೊಂದುಬಿಡುವರು.
    ಜನರು ನಿಮ್ಮನ್ನು ಹಿಡಿಯುವರು.
15 ನೀವು ಬೀಜ ಬಿತ್ತುವಿರಿ,
    ಆದರೆ ಪೈರು ಕೊಯ್ಯುವುದಿಲ್ಲ.
ಆಲೀವ್ ಕಾಯಿಗಳನ್ನು ಗಾಣದಲ್ಲಿ ಹಾಕಿ ಎಣ್ಣೆ ತೆಗೆಯುವಿರಿ.
    ಆದರೆ ನಿಮಗೆ ಎಣ್ಣೆಯೇ ಸಿಗುವದಿಲ್ಲ.
ನೀವು ದ್ರಾಕ್ಷಿಹಣ್ಣುಗಳನ್ನು ತೊಟ್ಟಿಯಲ್ಲಿ ಹಾಕಿ ತುಳಿಯುವಿರಿ,
    ಆದರೆ ಕುಡಿಯಲು ದ್ರಾಕ್ಷಾರಸವೇ ಸಿಗುವದಿಲ್ಲ.
16 ಯಾಕೆಂದರೆ ನೀವು ಒಮ್ರಿಯ ಆಜ್ಞೆಯನ್ನು ಪರಿಪಾಲಿಸಿದಿರಿ.
    ಅಹಾಬನ ಮನೆಯವರು ಮಾಡುತ್ತಿದ್ದ ದುಷ್ಕೃತ್ಯಗಳನ್ನು ನೀವು ಮಾಡುತ್ತೀರಿ.
ನೀವು ಅವರ ಬೋಧನೆಯನ್ನು ಅನುಸರಿಸುತ್ತೀರಿ.
    ಆದ್ದರಿಂದ ನೀವು ನಾಶವಾಗುವಂತೆ ಮಾಡುವೆನು.
ಕೆಡವಲ್ಪಟ್ಟ ನಿಮ್ಮ ನಗರವನ್ನು ನೋಡಿದ ಜನರು ಆಶ್ಚರ್ಯದಿಂದ ಸಿಳ್ಳುಹಾಕುವರು.
    ಆಗ ಬೇರೆ ಜನಾಂಗದವರು ನಿಮ್ಮ ಮೇಲೆ ಹೊರಿಸಿದ ಅವಮಾನವನ್ನು ನೀವು ಸಹಿಸಿಕೊಳ್ಳುವಿರಿ.”

ಜನರ ದುಷ್ಟತನವನ್ನು ನೋಡಿ ಮೀಕನಿಗಾದ ಬೇಸರ

ನಾನು ಬೇಸರಗೊಂಡಿದ್ದೇನೆ. ಯಾಕೆಂದರೆ ನಾನು ಕೂಡಿಸಲ್ಪಟ್ಟ ಹಣ್ಣಿನಂತಿದ್ದೇನೆ;
    ಕೊಯಿದು ಶೇಖರಿಸಿದ ದ್ರಾಕ್ಷಿಹಣ್ಣಿನಂತಿದ್ದೇನೆ.
ತಿನ್ನಲು ದ್ರಾಕ್ಷಿಹಣ್ಣು ಏನೂ ಉಳಿಯಲಿಲ್ಲ.
    ನನಗೆ ಪ್ರಿಯವಾದ ಫಲಕಾಲದ ಆರಂಭದಲ್ಲೇ ಫಲಿಸುವ ಅಂಜೂರದ ಹಣ್ಣು ಸಿಕ್ಕಲೇ ಇಲ್ಲ.
ನಾನು ಹೇಳುವುದೇನೆಂದರೆ ನಂಬಿಗಸ್ತ ಜನರೆಲ್ಲಾ ಹೋಗಿಬಿಟ್ಟರು.
    ಈ ದೇಶದಲ್ಲಿ ಒಳ್ಳೆಯ ಜನರು ಯಾರೂ ಉಳಿಯಲಿಲ್ಲ.
ಪ್ರತಿಯೊಬ್ಬನೂ ಇನ್ನೊಬ್ಬನನ್ನು ಕೊಲ್ಲಲು ಕಾಯುತ್ತಿದ್ದಾನೆ.
    ಪ್ರತಿಯೊಬ್ಬನೂ ತನ್ನ ಸೋದರನನ್ನು ಸಿಕ್ಕಿಸಿಹಾಕಲು ಕಾಯುತ್ತಿದ್ದಾನೆ.
ಕೆಟ್ಟದ್ದನ್ನು ಎರಡೂ ಕೈಗಳಿಂದ ಮಾಡಲು ಜನರು ನಿಪುಣರಾಗಿದ್ದಾರೆ.
    ಅಧಿಕಾರಿಗಳು ಲಂಚ ಕೇಳುತ್ತಾರೆ.
ನ್ಯಾಯಾಧೀಶರು ತಮ್ಮ ತೀರ್ಪು ಬದಲಾಯಿಸಲು ಹಣ ಕೇಳುತ್ತಾರೆ.
    “ಪ್ರಮುಖ ನಾಯಕರು” ನ್ಯಾಯವಾದ ಮತ್ತು ಜನರಿಗೆ ಹಿತವಾದ ತೀರ್ಮಾನವನ್ನು ಮಾಡುವದಿಲ್ಲ.
    ತಮ್ಮ ಇಷ್ಟಪ್ರಕಾರ ಅವರು ಮಾಡುತ್ತಿದ್ದಾರೆ.
ಅವರಲ್ಲಿರುವ ಉತ್ತಮರೂ ಸಹ ಮುಳ್ಳಿನ ಪೊದೆಯಂತಿದ್ದಾರೆ.
    ಅವರಲ್ಲಿರುವ ಉತ್ತಮರೂ ಸಹ ಡೊಂಕುಡೊಂಕಾಗಿರುವ ಮುಳ್ಳುಪೊದೆಗಿಂತಲೂ ಡೊಂಕಾಗಿದ್ದಾರೆ.

ಶಿಕ್ಷೆಯ ದಿನ ಬರುತ್ತಿದೆ

ನಿನ್ನ ಪ್ರವಾದಿಗಳು ಈ ದಿನವು ಬರುತ್ತಿದೆ ಎಂದು ಹೇಳುತ್ತಿದ್ದಾರೆ.
    ನಿನ್ನ ಪ್ರವಾದಿಗಳ ದಿವಸವು ಬಂದದೆ.
ಈಗ ನೀನು ಶಿಕ್ಷಿಸಲ್ಪಡುವೆ.
    ನೀನು ಈಗ ಗಲಿಬಿಲಿಗೆ ಒಳಗಾಗುವೆ!
ನಿನ್ನ ನೆರೆಯವನ ಮೇಲೆ ನಂಬಿಕೆ ಇಡಬೇಡ!
    ನಿನ್ನ ಸ್ನೇಹಿತನ ಮೇಲೆ ಭರವಸವಿಡಬೇಡ!
ನಿನ್ನ ಹೆಂಡತಿಯೊಂದಿಗೂ
    ನಿನ್ನ ಮನಸ್ಸಿನಲ್ಲಿರುವ ವಿಷಯವನ್ನು ತಿಳಿಸಬೇಡ.
ಒಬ್ಬನ ವೈರಿಯು ಅವನ ಮನೆಯವರೇ ಆಗಿರುತ್ತಾರೆ.
    ಮಗನು ತಂದೆಗೆ ಗೌರವವನ್ನು ಕೊಡುವದಿಲ್ಲ.
ಮಗಳು ತಾಯಿಗೆ ವಿರುದ್ಧವಾಗಿ ನಡೆಯುವಳು.
    ಸೊಸೆಯು ಅತ್ತೆಗೆ ವಿರುದ್ಧವಾಗಿ ನಡೆಯುವಳು.

ಯೆಹೋವನೇ ರಕ್ಷಕನು

ನಾನು ಸಹಾಯಕ್ಕಾಗಿ ಯೆಹೋವನ ಕಡೆಗೆ ನೋಡುತ್ತೇನೆ.
    ದೇವರ ರಕ್ಷಣೆಗಾಗಿ ನಿರೀಕ್ಷಿಸುತ್ತೇನೆ.
    ನನ್ನ ದೇವರು ನನಗೆ ಕಿವಿಗೊಡುತ್ತಾನೆ.
ನಾನು ಬಿದ್ದಿದ್ದೇನೆ, ಆದರೆ ವೈರಿಯೇ, ನನ್ನನ್ನು ನೋಡಿ ನಗಾಡಬೇಡ!
    ನಾನು ತಿರುಗಿ ಏಳುತ್ತೇನೆ;
ನಾನೀಗ ಅಂಧಕಾರದಲ್ಲಿ ಕುಳಿತುಕೊಳ್ಳುತ್ತೇನೆ.
    ಆದರೆ ಯೆಹೋವನು ನನ್ನ ಬೆಳಕಾಗಿರುತ್ತಾನೆ.

ಯೆಹೋವನು ಕ್ಷಮಿಸುತ್ತಾನೆ

ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ.
    ಆದ್ದರಿಂದ ಆತನು ನನ್ನ ಮೇಲೆ ಕೋಪಿಸಿಕೊಂಡಿದ್ದಾನೆ.
ಆದರೆ ನನ್ನ ಪರವಾಗಿ ಆತನು ವಾದಿಸುತ್ತಾನೆ.
    ನನಗೆ ಒಳ್ಳೆಯದನ್ನೇ ಆತನು ಮಾಡುತ್ತಾನೆ.
ಆ ಬಳಿಕ ನನ್ನನ್ನು ಹೊರಗೆ ಬೆಳಕಿಗೆ ತರುವನು.
    ಆತನು ನೀತಿವಂತನೆಂಬುದು ಆಗ ನನಗೆ ತಿಳಿಯುವುದು.
10 “ನಿನ್ನ ದೇವರಾದ ಯೆಹೋವನು ಎಲ್ಲಿ?”
    ಎಂದು ಕೇಳಿದ ವೈರಿಗಳು ಇದನ್ನು ನೋಡಿ, ನಾಚಿಕೆಗೊಳ್ಳುವರು.
ಆಗ ನಾನು ಅವರ ವಿಷಯವಾಗಿ ನಗಾಡುವೆನು;
    ರಸ್ತೆಯ ಮಣ್ಣಿನ ಮೇಲೆ ನಡೆಯುವಂತೆ ಜನರು ಅವರ ಮೇಲೆ ನಡೆಯುವರು.

ಯೆಹೂದ್ಯರು ಮರಳಿ ಬರುವರು

11 ನಿನ್ನ ನಗರದ ಗೋಡೆಗಳು ತಿರುಗಿ ಕಟ್ಟಲ್ಪಡುವ ದಿನಗಳು ಬರುತ್ತವೆ.
    ಆಗ ದೇಶವು ಬೆಳೆಯುವುದು.
12 ನಿನ್ನ ಜನರು ದೇಶಕ್ಕೆ ಹಿಂತಿರುಗುವರು.
    ಅವರು ಅಶ್ಶೂರದಿಂದಲೂ ಈಜಿಪ್ಟ್ ನಗರಗಳಿಂದಲೂ ಹಿಂದೆ ಬರುವರು.
ನಿನ್ನ ಜನರು ಈಜಿಪ್ಟಿನಿಂದಲೂ
    ಯೂಫ್ರೇಟೀಸ್ ನದಿಯ ಆಚೆಕಡೆಯಿಂದಲೂ ಬರುವರು.
ಪಶ್ಟಿಮದ ಸಮುದ್ರದ ಕಡೆಯಿಂದ ಬರುವರು.
    ಪೂರ್ವದ ಪರ್ವತಗಳ ಕಡೆಯಿಂದ ಬರುವರು.

13 ದೇಶದಲ್ಲಿ ವಾಸಿಸಿದ್ದ ಜನರಿಂದಲೂ
    ಅವರು ಮಾಡಿದ್ದ ಕೆಲಸಗಳಿಂದಲೂ ದೇಶವು ಹಾಳಾಗಿಹೋಗಿತ್ತು.
14 ಆದ್ದರಿಂದ ನಿನ್ನ ಜನರನ್ನು ಕಬ್ಬಿಣದ ಕೋಲಿನಿಂದ ಆಳು,
    ನಿನಗೆ ಸೇರಿದ ಜನರ ಹಿಂಡುಗಳನ್ನು ಆಳು.
ಆ ಗುಂಪು ಅಡವಿಯಲ್ಲಿ ತಾನಾಗಿಯೇ ವಾಸಿಸುತ್ತದೆ;
    ಕರ್ಮೆಲ್ ಬೆಟ್ಟದಲ್ಲಿಯೂ ವಾಸಿಸುತ್ತದೆ.
ಹಿಂದಿನ ಕಾಲದಲ್ಲಿ ಮಾಡಿದಂತೆ ಆ ಗುಂಪು ಬಾಷಾನ್
    ಮತ್ತು ಗಿಲ್ಯಾದ್ ಪ್ರಾಂತ್ಯದಲ್ಲಿ ವಾಸಿಸುತ್ತದೆ.

ಇಸ್ರೇಲ್ ತನ್ನ ವೈರಿಗಳನ್ನು ಸೋಲಿಸುವುದು

15 ನಿನ್ನನ್ನು ಈಜಿಪ್ಟಿನಿಂದ ಬರಮಾಡಿದಾಗ ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆನು.
    ಇನ್ನೂ ಅನೇಕ ಅದ್ಭುತಗಳನ್ನು ನೀನು ನೋಡುವಂತೆ ಮಾಡುವೆನು.
16 ಜನಾಂಗಗಳು ಆ ಅದ್ಭುತವನ್ನು ನೋಡಿ ನಾಚಿಕೆಗೊಳ್ಳುವರು.
    ನನ್ನ ಶಕ್ತಿಯ ಎದುರು ಅವರ ಬಲವು ಏನೂ ಅಲ್ಲವೆಂದು ತಿಳಿಯುವರು.
ಅವರು ಆಶ್ಚರ್ಯಚಕಿತರಾಗಿ ತಮ್ಮ ಬಾಯಿಗಳ ಮೇಲೆ ಕೈಗಳನ್ನಿಡುವರು.
    ತಮ್ಮ ಕಿವಿಗಳನ್ನು ಮುಚ್ಚಿ ವಾರ್ತೆ ಕೇಳಲು ನಿರಾಕರಿಸುವರು.
17 ಅವರು ಹಾವಿನಂತೆ ಧೂಳಿನ ಮೇಲೆ ಹರಿದಾಡುವರು.
    ಭಯದಿಂದ ನಡುಗುವರು.
ಅವರು ನೆಲದ ಮೇಲಿನ ಬಿಲಗಳಿಂದ
    ಹರಿದುಕೊಂಡು ಬರುವ ಹುಳಗಳಂತಿರುವರು.
ಅವರು ನಮ್ಮ ದೇವರಾದ ಯೆಹೋವನ ಬಳಿಗೆ ಬಂದು
    ನಿಮ್ಮನ್ನು ಭಯದಿಂದ ನೋಡುವರು.

ಯೆಹೋವನಿಗೆ ಸ್ತೋತ್ರ

18 ನಿನ್ನ ಹಾಗೆ ಬೇರೆ ಯಾವ ದೇವರೂ ಇಲ್ಲ.
    ಪಾಪದಲ್ಲಿ ಬಿದ್ದವರನ್ನು ನೀನು ಕ್ಷಮಿಸುವೆ.
ನಿನ್ನ ಜನಶೇಷವನ್ನು ಮನ್ನಿಸುವೆ.
ನೀನು ನಿತ್ಯಕ್ಕೂ ಕೋಪಿಸುವದಿಲ್ಲ.
    ಯಾಕೆಂದರೆ ದಯೆತೋರಿಸುವದರಲ್ಲಿ ನೀನು ಸಂತೋಷಿಸುವೆ.
19 ಯೆಹೋವನೇ, ನಮ್ಮನ್ನು ತಿರುಗಿ ಸಂತೈಸು.
    ನಮ್ಮ ಪಾಪಗಳನ್ನು ನಮ್ಮಿಂದ ನಿವಾರಿಸು.
    ನಮ್ಮೆಲ್ಲಾ ಪಾಪಗಳನ್ನು ಆಳವಾದ ಸಮುದ್ರದ ತಳದಲ್ಲಿ ಹಾಕು.
20 ನೀನು ಯಾಕೋಬನಿಗೆ ನಂಬಿಗಸ್ತನಾಗುವೆ.
    ನೀನು ಅಬ್ರಹಾಮನ ಮೇಲೆ ದಯೆತೋರಿಸಿ ನಂಬಿಗಸ್ತನಾಗುವೆ.
    ಇದನ್ನು ನೀನು ಬಹಳ ಕಾಲದ ಹಿಂದೆಯೇ ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿರುವೆ.

ಪ್ರಕಟನೆ 13

ಎರಡು ಪ್ರಾಣಿಗಳು

13 ನಂತರ ಸಮುದ್ರದಿಂದ ಒಂದು ಮೃಗವು ಹೊರಗೆ ಬರುತ್ತಿರುವುದನ್ನು ನಾನು ನೋಡಿದೆನು. ಅದಕ್ಕೆ ಹತ್ತು ಕೊಂಬುಗಳೂ ಏಳು ತಲೆಗಳೂ ಇದ್ದವು. ಅದರ ಪ್ರತಿಯೊಂದು ಕೊಂಬಿನ ಮೇಲೆ ಒಂದೊಂದು ಕಿರೀಟವಿತ್ತು. ಪ್ರತಿಯೊಂದು ತಲೆಯ ಮೇಲೂ ದೇವದೂಷಣೆ ನಾಮಗಳನ್ನು ಬರೆಯಲಾಗಿತ್ತು. ಈ ಮೃಗವು ನೋಡಲು ಚಿರತೆ ಯಂತಿತ್ತು. ಅದರ ಪಾದಗಳು ಕರಡಿಯ ಪಾದಗಳಂತಿದ್ದವು. ಅದರ ಬಾಯಿಯು ಸಿಂಹದ ಬಾಯಿಯಂತಿತ್ತು. ಘಟಸರ್ಪವು ಆ ಮೃಗಕ್ಕೆ ತನ್ನ ಶಕ್ತಿಯನ್ನು, ತನ್ನ ಸಿಂಹಾಸನವನ್ನು ಮತ್ತು ಅಧಿಕವಾದ ಅಧಿಕಾರವನ್ನು ನೀಡಿತು.

ಮೃಗದ ತಲೆಗಳಲ್ಲಿ ಒಂದು ತಲೆಯು ಗಾಯಗೊಂಡು ಸತ್ತಂತೆ ಕಾಣುತ್ತಿತ್ತು. ಆದರೆ ಮರಣಕರವಾದ ಈ ಗಾಯವನ್ನು ವಾಸಿಮಾಡಲಾಯಿತು. ಈ ಲೋಕದಲ್ಲಿದ್ದ ಜನರೆಲ್ಲರೂ ಆಶ್ಚರ್ಯಗೊಂಡು ಆ ಮೃಗವನ್ನು ಹಿಂಬಾಲಿಸಿದರು. ಆ ಘಟಸರ್ಪವು ತನ್ನ ಶಕ್ತಿಯನ್ನೆಲ್ಲಾ ಆ ಮೃಗಕ್ಕೆ ನೀಡಿದ್ದರಿಂದ ಜನರೆಲ್ಲರೂ ಆ ಸರ್ಪವನ್ನೂ ಆ ಮೃಗವನ್ನೂ ಆರಾಧಿಸಿ, “ಮೃಗಕ್ಕಿಂತಲೂ ಅಧಿಕ ಬಲಶಾಲಿಗಳು ಯಾರಿದ್ದಾರೆ? ಅದರ ವಿರುದ್ಧ ಯಾರು ಹೋರಾಡಬಲ್ಲರು?” ಎಂದು ಹೇಳುತ್ತಿದ್ದರು.

ಆ ಮೃಗಕ್ಕೆ ಬಡಾಯಿ ಮಾತುಗಳನ್ನೂ ದೂಷಣೆಯ ಮಾತುಗಳನ್ನೂ ಆಡಲು ಅವಕಾಶ ನೀಡಲಾಯಿತು. ಆ ಮೃಗಕ್ಕೆ ಅದರ ಶಕ್ತಿಯನ್ನು ನಲವತ್ತೆರಡು ತಿಂಗಳ ಕಾಲ ಬಳಸಲು ಅವಕಾಶ ನೀಡಲಾಯಿತು. ಆ ಮೃಗವು ದೇವರಿಗೆ ಅಪಮಾನ ಮಾಡಲು ತನ್ನ ಬಾಯನ್ನು ತೆರೆಯಿತು. ಅಲ್ಲದೆ ದೇವರ ಹೆಸರಿನ ವಿರುದ್ಧವಾಗಿಯೂ ದೇವರು ವಾಸಿಸುವ ಸ್ಥಳದ ವಿರುದ್ಧವಾಗಿಯೂ ಪರಲೋಕದಲ್ಲಿ ಜೀವಿಸುವ ಜನರೆಲ್ಲರ ವಿರುದ್ಧವಾಗಿಯೂ ದೂಷಣೆ ಮಾಡಿತು. ದೇವರ ಪರಿಶುದ್ಧ ಜನರ ವಿರುದ್ಧ ಯುದ್ಧಮಾಡಿ, ಅವರನ್ನು ಸೋಲಿಸುವ ಶಕ್ತಿಯನ್ನು ಮೃಗಕ್ಕೆ ನೀಡಲಾಯಿತು. ಸಕಲ ಕುಲ, ಪ್ರಜೆ, ಭಾಷೆ ಮತ್ತು ಜನಾಂಗಗಳ ಮೇಲಿನ ಅಧಿಕಾರವನ್ನು ಆ ಮೃಗಕ್ಕೆ ಕೊಡಲಾಯಿತು. ಲೋಕದಲ್ಲಿ ವಾಸಿಸುವ ಜನರೆಲ್ಲರೂ ಆ ಮೃಗವನ್ನು ಆರಾಧಿಸುತ್ತಾರೆ. ಲೋಕವು ಆರಂಭಗೊಂಡಂದಿನಿಂದಲೂ ಕೊಲ್ಲಲ್ಪಟ್ಟ ಕುರಿಮರಿಯಾದಾತನ ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿಲ್ಲವೋ ಅವರೇ ಈ ಜನರು.

ಇವುಗಳನ್ನು ಕೇಳುವವನು ಗಮನವಿಟ್ಟು ಆಲಿಸಲಿ:

10 ಸೆರೆ ಒಯ್ಯುವವನು
    ಸೆರೆ ಒಯ್ಯಲ್ಪಡುವನು.
ಕತ್ತಿಯಿಂದ ಕೊಲ್ಲುವವನು
    ಕತ್ತಿಯಿಂದಲೇ ಕೊಲ್ಲಲ್ಪಡುವನು.

ಆದ್ದರಿಂದ ದೇವರ ಪರಿಶುದ್ಧ ಜನರು ತಾಳ್ಮೆಯನ್ನೂ ನಂಬಿಕೆಯನ್ನೂ ಹೊಂದಿರಬೇಕು.

11 ನಂತರ ಭೂಮಿಯಿಂದ ಹೊರಗೆ ಬರುತ್ತಿರುವ ಮತ್ತೊಂದು ಮೃಗವನ್ನು ನಾನು ನೋಡಿದೆನು. ಅದಕ್ಕೆ ಟಗರಿನಂತೆ ಎರಡು ಕೊಂಬುಗಳಿದ್ದವು. ಆದರೆ ಅದು ಘಟಸರ್ಪದಂತೆ ಮಾತಾಡುತ್ತಿತ್ತು. 12 ಈ ಮೃಗವು ಮೊದಲಿನ ಮೃಗದ ಅಧಿಕಾರವನ್ನೇ ಬಳಸುತ್ತದೆ. ಭೂಮಿಯ ಮೇಲೆ ವಾಸಿಸುವ ಜನರೆಲ್ಲರೂ ಮೊದಲಿನ ಮೃಗವನ್ನು ಆರಾಧಿಸುವಂತೆ ಮಾಡಲು ಅದು ತನ್ನ ಶಕ್ತಿಯನ್ನೆಲ್ಲಾ ಬಳಸುತ್ತದೆ. ಮರಣಕರವಾದ ಗಾಯದಿಂದ ಗುಣಮುಖವಾದದ್ದೇ ಮೊದಲನೆಯ ಮೃಗ. 13 ಈ ಎರಡನೆಯ ಮೃಗವು ಮಹಾ ಅದ್ಭುತಗಳನ್ನು ಮಾಡುತ್ತದೆ. ಅದು ಜನರ ಕಣ್ಣೆದುರಿನಲ್ಲಿಯೇ ಬೆಂಕಿಯನ್ನು ಆಕಾಶದಿಂದ ಭೂಮಿಗೆ ಸುರಿಸುತ್ತದೆ.

14 ಈ ಎರಡನೆಯ ಮೃಗವು ಅದ್ಭುತಗಳನ್ನು ಮಾಡಲು ತನಗೆ ನೀಡಿರುವ ಶಕ್ತಿಯಿಂದ ಭೂಮಿಯ ಮೇಲೆ ವಾಸಿಸುವ ಜನರನ್ನು ಮರುಳು ಗೊಳಿಸುತ್ತದೆ. ಮೊದಲನೆಯ ಮೃಗದ ಸೇವೆಯನ್ನು ಮಾಡಲು ಅದು ಈ ಅದ್ಭುತಗಳನ್ನು ಮಾಡುತ್ತದೆ. ಕತ್ತಿಯಿಂದ ಗಾಯಗೊಂಡಿದ್ದೂ ಸಾಯದೆ ಬದುಕಿದ ಮೊದಲನೆಯ ಮೃಗಕ್ಕೆ ಗೌರವ ತೋರಲು ವಿಗ್ರಹವನ್ನು ನಿರ್ಮಿಸುವಂತೆ ಅದು ಜನರಿಗೆ ಆಜ್ಞಾಪಿಸಿತು. 15 ಮೊದಲನೆಯ ಮೃಗದ ವಿಗ್ರಹಕ್ಕೆ ಜೀವ ಬರುವಂತೆ ಮಾಡುವ ಶಕ್ತಿಯನ್ನು ಎರಡನೆಯ ಮೃಗಕ್ಕೆ ಕೊಡಲಾಯಿತು. ಆಗ ಆ ವಿಗ್ರಹಕ್ಕೆ ಮಾತಾಡುವ ಶಕ್ತಿ ಬಂದಿತು. ಅದು ತನ್ನನ್ನು ಪೂಜಿಸದವರನ್ನೆಲ್ಲಾ ಕೊಲ್ಲುವುದಾಗಿ ಆಜ್ಞೆ ಹೊರಡಿಸಿತು. 16 ಎರಡನೆಯ ಮೃಗವು ಸಹ ಎಲ್ಲರನ್ನು ಅಂದರೆ ಚಿಕ್ಕವರನ್ನು, ದೊಡ್ಡವರನ್ನು, ಶ್ರೀಮಂತರನ್ನು, ಬಡವರನ್ನು, ಗುಲಾಮರನ್ನು ಮತ್ತು ಸ್ವತಂತ್ರರನ್ನು, ತಮ್ಮ ಬಲಗೈಯ ಮೇಲಾಗಲಿ ಅಥವಾ ತಮ್ಮ ಹಣೆಗಳ ಮೇಲಾಗಲಿ ಗುರುತು ಹಾಕಿಕೊಳ್ಳಬೇಕೆಂದು ಒತ್ತಾಯಪಡಿಸಿತು. 17 ಈ ಗುರುತಿಲ್ಲದೆ ಯಾರೂ ಕೊಳ್ಳುವಂತಿಲ್ಲ ಮತ್ತು ಮಾರುವಂತಿಲ್ಲ. ಈ ಗುರುತು ಏನೆಂದರೆ ಆ ಮೃಗದ ಹೆಸರು ಅಥವಾ ಅದರ ಹೆಸರಿನ ಸಂಖ್ಯೆ.

18 ತಿಳುವಳಿಕೆಯುಳ್ಳ ಮನುಷ್ಯನು ಮೃಗದ ಸಂಖ್ಯೆಯ ಅರ್ಥವನ್ನು ಕಂಡುಕೊಳ್ಳಲು ಸಾಧ್ಯ. ಇಲ್ಲಿ ಜ್ಞಾನದ ಅಗತ್ಯವಿದೆ. ಈ ಸಂಖ್ಯೆಯು ಮನುಷ್ಯನ ಸಂಖ್ಯೆಯಾಗಿದೆ. ಅವನ ಸಂಖ್ಯೆ 666.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International