Old/New Testament
ಸುಖವನ್ನು ಆಶಿಸುವ ಹೆಂಗಸರು
4 ಸಮಾರ್ಯದ ಪರ್ವತಗಳಲ್ಲಿರುವ ಬಾಷಾನಿನ ದನಗಳೇ, ನನ್ನ ಮಾತಿಗೆ ಕಿವಿಗೊಡಿರಿ. ನೀವು ಬಡ ಜನರನ್ನು ಹಿಂಸಿಸಿ ಜಜ್ಜುತ್ತೀರಿ. ನಿಮ್ಮ ಗಂಡಂದಿರ ಹತ್ತಿರ, “ನಮಗೆ ಕುಡಿಯಲಿಕ್ಕೆ ತಂದುಕೊಡು” ಎಂದು ಹೇಳುತ್ತೀರಿ.
2 ನನ್ನ ಒಡೆಯನಾದ ಯೆಹೋವನು ಒಂದು ವಾಗ್ದಾನ ಮಾಡಿರುತ್ತಾನೆ. ಆತನ ಪರಿಶುದ್ಧತೆಯ ಮೇಲೆ ಆಣೆಹಾಕಿ ವಾಗ್ದಾನ ಮಾಡಿರುತ್ತಾನೆ. ಏನೆಂದರೆ ನಿಮ್ಮ ಮೇಲೆ ಸಂಕಟಗಳು ಬರುವವು. ಜನರು ನಿಮಗೆ ಕೊಕ್ಕೆ ಸಿಕ್ಕಿಸಿ ಕೈದಿಗಳನ್ನಾಗಿ ಮಾಡಿ ಎಳೆದುಕೊಂಡು ಹೋಗುವರು. ನಿಮ್ಮ ಮಕ್ಕಳನ್ನು ಮೀನಿನ ಗಾಳಗಳಿಗೆ ಸಿಕ್ಕಿಸಿ ಎಳೆದುಕೊಂಡು ಹೋಗುವರು. 3 ನಿಮ್ಮ ಪಟ್ಟಣಗಳು ನಾಶವಾಗುವವು. ಗೋಡೆಯಲ್ಲಿರುವ ಬಿರುಕುಗಳ ಮೂಲಕ ಹೆಂಗಸರು ತಪ್ಪಿಸಿಕೊಂಡು ಹೋಗಿ ಹೆಣಗಳ ರಾಶಿಯ[a] ಮೇಲೆ ಬೀಳುವರು.
4 ಯೆಹೋವನು ಹೀಗೆ ಹೇಳುತ್ತಾನೆ, “ಬೇತೇಲಿನಲ್ಲಿ ಪಾಪ ಮಾಡಿರಿ. ಗಿಲ್ಗಾಲಿಗೆ ಹೋಗಿ ಇನ್ನೂ ಹೆಚ್ಚಾಗಿ ಪಾಪ ಮಾಡಿರಿ. ನಿಮ್ಮ ಯಜ್ಞವನ್ನು ಮುಂಜಾನೆ ಸಮರ್ಪಿಸಿರಿ. ಮೂರು ದಿವಸಗಳ ಹಬ್ಬಕ್ಕೆ ನಿಮ್ಮ ಬೆಳೆಯ ಹತ್ತನೆಯ ಒಂದು ಭಾಗವನ್ನು ತೆಗೆದುಕೊಂಡು ಬನ್ನಿ. 5 ಹುಳಿಹಾಕಿದ ರೊಟ್ಟಿಗಳನ್ನು ಕೃತಜ್ಞತಾ ಹೋಮಮಾಡಿರಿ. ಸ್ವೇಚ್ಚೆಯಿಂದ ಕೊಡುವ ಕಾಣಿಕೆ ಬಗ್ಗೆ ಎಲ್ಲರಿಗೂ ತಿಳಿಸಿರಿ. ಇಸ್ರೇಲರೇ ಅಂಥಾ ಕಾರ್ಯಗಳನ್ನು ಮಾಡಲು ನಿಮಗೆ ಇಷ್ಟ. ಆದ್ದರಿಂದ ಹೋಗಿ ಅದನ್ನು ಮಾಡಿರಿ.” ಇದು ಯೆಹೋವನ ನುಡಿ.
6 “ನೀವು ನನ್ನ ಬಳಿಗೆ ಬರುವಂತೆ ಅನೇಕ ಕಾರ್ಯಗಳನ್ನು ಮಾಡಿದೆನು. ನಿಮಗೆ ನಾನು ಊಟಕ್ಕೆ ಕೊಡಲಿಲ್ಲ. ನಿಮ್ಮ ಯಾವ ಪಟ್ಟಣದಲ್ಲಿಯೂ ಆಹಾರವಿಲ್ಲ. ಆದರೂ ನೀವು ನನ್ನ ಬಳಿಗೆ ಹಿಂದಿರುಗಿ ಬರಲಿಲ್ಲ.” ಇದು ಯೆಹೋವನ ನುಡಿ.
7 “ನಾನು ಮಳೆಯನ್ನು ನಿಲ್ಲಿಸಿದೆನು. ಸುಗ್ಗಿಗೆ ಮೂರು ತಿಂಗಳು ಇರುವಾಗಲೇ ಮಳೆಗರೆಯುವುದನ್ನು ನಿಲ್ಲಿಸಿದೆನು. ಆದ್ದರಿಂದ ಪೈರು ಬೆಳೆಯಲಿಲ್ಲ. ಆಮೇಲೆ ನಾನು ಒಂದು ಪಟ್ಟಣದ ಮೇಲೆ ಮಳೆ ಬೀಳುವಂತೆ ಮಾಡಿದೆನು. ಬೇರೆ ಪಟ್ಟಣಗಳ ಮೇಲೆ ಬೀಳದಂತೆ ಮಾಡಿದೆನು. ದೇಶದ ಒಂದು ಭಾಗದಲ್ಲಿ ಮಳೆ ಸುರಿಯಿತು. ಇನ್ನೊಂದು ಭಾಗವು ಒಣಗಿ ಬೆಂಗಾಡಾಗಿತ್ತು. 8 ಹೀಗೆ ಎರಡು ಮೂರು ಪಟ್ಟಣಗಳ ನಿವಾಸಿಗಳು ನೀರಿಗಾಗಿ ಇನ್ನೊಂದು ಪಟ್ಟಣಕ್ಕೆ ಕಷ್ಟಪಟ್ಟು ಕೊಂಡುಹೋದರು. ಆದರೆ ಅಲ್ಲಿ ಎಲ್ಲರಿಗೂ ನೀರು ದೊರಕಲಿಲ್ಲ. ಹೀಗಾದರೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇವು ಯೆಹೋವನ ನುಡಿಗಳು.
9 “ನಿಮ್ಮ ಬೆಳೆಗಳು ಸೂರ್ಯನ ಶಾಖದಿಂದಲೂ ರೋಗದಿಂದಲೂ ಸಾಯುವಂತೆ ಮಾಡಿದೆನು. ನಿಮ್ಮ ತೋಟಗಳನ್ನೂ ದ್ರಾಕ್ಷಿತೋಟಗಳನ್ನೂ ನಾನು ನಾಶಮಾಡಿದೆನು. ಮಿಡತೆಗಳು ನಿಮ್ಮ ಅಂಜೂರದ ಮತ್ತು ಆಲೀವ್ ಮರಗಳನ್ನು ತಿಂದುಬಿಟ್ಟವು. ಆದಾಗ್ಯೂ ಸಹಾಯಕ್ಕಾಗಿ ನೀವು ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.
10 “ನಾನು ಈಜಿಪ್ಟಿಗೆ ವ್ಯಾಧಿಗಳನ್ನು ಹೇಗೆ ಬರಮಾಡಿದೆನೋ ಹಾಗೆಯೇ ನಿಮಗೂ ಮಾಡಿದೆನು. ನಿಮ್ಮ ಯೌವನಸ್ಥರನ್ನು ಕತ್ತಿಯಿಂದ ಕೊಂದೆನು. ನಿಮ್ಮ ಕುದುರೆಗಳನ್ನು ತೆಗೆದುಕೊಂಡೆನು. ಹೆಣಗಳ ರಾಶಿಯಿಂದ ನಿಮ್ಮ ಸ್ಥಳವು ದುರ್ವಾಸನೆಯಿಂದ ತುಂಬುವಂತೆ ಮಾಡಿದೆನು. ಆದಾಗ್ಯೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.
11 “ಸೊದೋಮ್ ಗೊಮೋರವನ್ನು ನಾಶಮಾಡಿದಂತೆ ನಾನು ನಿಮ್ಮನ್ನು ನಾಶಮಾಡಿದೆನು. ಆ ನಗರಗಳು ಸಂಪೂರ್ಣವಾಗಿ ನಾಶವಾದವು. ನೀವು ಬೆಂಕಿಯಿಂದ ಎಳೆದ ಕೊಳ್ಳಿಯಂತಿದ್ದೀರಿ. ಆದರೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.
12 “ಆದ್ದರಿಂದ ಇಸ್ರೇಲೇ, ನಿನಗೆ ವಿರುದ್ಧವಾಗಿ ಈ ಸಂಗತಿಗಳನ್ನು ಮಾಡುತ್ತೇನೆ. ಇಸ್ರೇಲೇ, ನಿನ್ನ ದೇವರನ್ನು ಸಂಧಿಸಲು ನಿನ್ನನ್ನು ತಯಾರು ಮಾಡಿಕೊ.”
13 ನಾನು ಯಾರು? ನಾನೇ ಪರ್ವತಗಳನ್ನು ನಿರ್ಮಿಸಿದಾತನು.
ನಿಮ್ಮಲ್ಲಿ ಮನಸ್ಸನ್ನು ಉಂಟುಮಾಡಿದಾತನು ನಾನೇ.
ನಾನು ಜನರಿಗೆ ಮಾತನಾಡಲು ಕಲಿಸಿದೆನು.
ಕತ್ತಲೆಯನ್ನು ಬೆಳಕು ಮಾಡಿದೆನು.
ಭೂಮಿಯ ಮೇಲಿರುವ ಪರ್ವತಗಳ ಮೇಲೆ ನಾನು ನಡಿಯುತ್ತೇನೆ.
ನಾನು ಯಾರು? ನನ್ನ ಹೆಸರು ಸೈನ್ಯಗಳ ದೇವರಾದ ಯೆಹೋವನು.
ಇಸ್ರೇಲಿಗಾಗಿ ದುಃಖದ ಗೀತೆ
5 ಇಸ್ರೇಲಿನ ಜನರೇ, ಈ ಹಾಡನ್ನು ಕೇಳಿರಿ. ಇದು ನಿಮ್ಮ ಮರಣದ ಗೀತೆ.
2 ಇಸ್ರೇಲ್ ಕುಮಾರಿಯು ಬಿದ್ದಳು.
ಇನ್ನೆಂದಿಗೂ ಆಕೆ ಏಳುವದಿಲ್ಲ.
ಆಕೆ ಒಬ್ಬಂಟಿಗಳಾಗಿ ಧೂಳಿನ ಮೇಲೆ ಬಿದ್ದಿದ್ದಾಳೆ.
ಆಕೆಯನ್ನು ಎಬ್ಬಿಸಲು ಯಾರೂ ಇಲ್ಲ.
3 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳುತ್ತಾನೆ.
“ಸೈನ್ಯಾಧಿಕಾರಿಗಳು ಸಾವಿರ ಮಂದಿಯೊಂದಿಗೆ ಪಟ್ಟಣದ ಹೊರಗೆ ಹೋದರೆ
ನೂರು ಮಂದಿಯೊಂದಿಗೆ ಹಿಂದಿರುಗುವರು.
ಸೈನ್ಯಾಧಿಕಾರಿಗಳು ನೂರು ಮಂದಿಯೊಂದಿಗೆ ಹೋದರೆ
ಕೇವಲ ಹತ್ತು ಮಂದಿಯೊಂದಿಗೆ ಹಿಂದಿರುಗುವರು.”
ಇಸ್ರೇಲರು ಮರಳಿ ಬರುವಂತೆ ಯೆಹೋವನ ಆಗ್ರಹ
4 ಇಸ್ರೇಲ್ ಜನಾಂಗಕ್ಕೆ ಯೆಹೋವನು ಹೀಗೆನ್ನುತ್ತಾನೆ:
“ನನ್ನನ್ನು ಹುಡುಕುತ್ತಾ ಬಂದು ಬದುಕುವವನಾಗು.
5 ಆದರೆ ಬೇತೇಲಿನಲ್ಲಿ ಹುಡುಕಬೇಡ,
ಗಿಲ್ಗಾಲಿನಲ್ಲಿ ಕಾಲಿಡಬೇಡ.
ಗಡಿಯನ್ನು ದಾಟಿ ಬೇರ್ಷೆಬಕ್ಕೆ ಹೋಗಬೇಡ.
ಗಿಲ್ಗಾಲಿನ ಜನರು ಕೈದಿಗಳಂತೆ ತೆಗೆಯಲ್ಪಡುವರು.
ಮತ್ತು ಬೇತೇಲ್ ನಾಶಮಾಡಲ್ಪಡುವದು.
6 ಯೆಹೋವನ ಬಳಿಗೆ ಹೋಗು. ಆಗ ಜೀವಿಸುವೆ.
ಯೆಹೋವನ ಬಳಿಗೆ ನೀನು ಹೋಗದಿದ್ದಲ್ಲಿ ಯೋಸೇಫನ ಮನೆತನಕ್ಕೆ ಬೆಂಕಿಯು ಹಿಡಿಯುವುದು.
ಆ ಬೆಂಕಿಯು ಯೋಸೇಫನ ಮನೆಯನ್ನು ದಹಿಸುವದು.
ಬೇತೇಲಿನಲ್ಲಿ ಅದನ್ನು ಯಾರೂ ನಂದಿಸಲಾರರು.
7-9 ನೀನು ಯೆಹೋವನ ಬಳಿಗೆ ಸಹಾಯಕ್ಕಾಗಿ ಹೋಗಬೇಕು.
ದೇವರು ನಕ್ಷತ್ರಪುಂಜಗಳನ್ನು ನಿರ್ಮಿಸಿದ್ದಾನೆ.
ಆತನು ಕತ್ತಲೆಯನ್ನು ಮುಂಜಾನೆಯ ಬೆಳಕನ್ನಾಗಿ ಮಾಡುತ್ತಾನೆ.
ಹಗಲನ್ನು ಕಾರ್ಗತ್ತಲೆಯನ್ನಾಗಿ ಮಾರ್ಪಡಿಸುತ್ತಾನೆ.
ಆತನು ಸಮುದ್ರದ ನೀರನ್ನು ಕರೆದು ಭೂಮಿಯ ಮೇಲೆ ಹೊಯ್ಯುತ್ತಾನೆ.
ಆತನ ಹೆಸರು ಯೆಹೋವನು.
ಆತನು ಒಂದು ಬಲವಾದ ನಗರವನ್ನು ರಕ್ಷಿಸಿ
ಇನ್ನೊಂದನ್ನು ನಾಶನಕ್ಕೆ ಒಪ್ಪಿಸುತ್ತಾನೆ.”
ಇಸ್ರೇಲರು ನಡಿಸಿದ ದುಷ್ಕೃತ್ಯ
ನೀನು ಒಳ್ಳೆಯತನವನ್ನು ವಿಷಕಾರಿಯನ್ನಾಗಿ ಮಾಡಿದಿ.
ನ್ಯಾಯವನ್ನು ಕೊಲೆಮಾಡಿದಿ. ಅದು ನೆಲದ ಮೇಲೆ ಬೀಳುವಂತೆ ಮಾಡಿದಿ.
10 ಪ್ರವಾದಿಗಳು ಸಾರ್ವಜನಿಕ ಸ್ಥಳಗಳಿಗೆ ಹೋಗಿ ಜನರು ಮಾಡುವ ದುಷ್ಕೃತ್ಯಗಳನ್ನು ಖಂಡಿಸುವರು.
ಜನರು ಪ್ರವಾದಿಗಳನ್ನು ಹಗೆಮಾಡುವರು.
ಪ್ರವಾದಿಗಳು ಒಳ್ಳೆಯದನ್ನು ಸರಳವಾದ ಸತ್ಯಗಳನ್ನು ಉಪದೇಶಿಸುವರು.
ಆದರೆ ಜನರು ಅವರನ್ನು ದ್ವೇಷಿಸುವರು.
11 ನೀವು ಅನ್ಯಾಯವಾಗಿ ಜನರಿಂದ ಸುಂಕ ವಸೂಲಿ ಮಾಡುವಿರಿ.
ಗೋದಿಯ ಮೂಟೆಗಳನ್ನು ಅವರಿಂದ ಸುಲುಕೊಳ್ಳುತ್ತೀರಿ.
ಕಲ್ಲುಗಳನ್ನು ಕೊರೆದು ನಿಮಗಾಗಿ ಅಂದವಾದ ಮನೆಗಳನ್ನು ಕಟ್ಟಿಸಿಕೊಳ್ಳುವಿರಿ.
ಆದರೆ ಆ ಮನೆಗಳಲ್ಲಿ ನೀವು ವಾಸಿಸುವುದಿಲ್ಲ.
ಸುಂದರವಾದ ದ್ರಾಕ್ಷಿತೋಟಗಳನ್ನು ನೆಡುವಿರಿ.
ಆದರೆ ಅದರ ದ್ರಾಕ್ಷಾರಸವನ್ನು ನೀವು ಕುಡಿಯುವುದಿಲ್ಲ.
12 ಯಾಕೆ ಹೀಗೆ? ಯಾಕೆಂದರೆ ನಿಮ್ಮ ಅನೇಕ ಪಾಪಕೃತ್ಯಗಳನ್ನು ನಾನು ಬಲ್ಲೆನು.
ನೀವು ಭಯಂಕರ ಪಾಪಗಳನ್ನು ಮಾಡಿದ್ದೀರಿ.
ನ್ಯಾಯವಂತರನ್ನು ಗಾಯಗೊಳಿಸಿದ್ದೀರಿ.
ಅನ್ಯಾಯ ಮಾಡಲು ಹಣವನ್ನು ತೆಗೆದುಕೊಂಡಿದ್ದೀರಿ.
ಬಡಜನರಿಗೆ ನ್ಯಾಯವನ್ನು ದೊರಕಿಸುವುದಿಲ್ಲ.
13 ಆ ಸಮಯದಲ್ಲಿ ಜ್ಞಾನಿಗಳಾದ ಬೋಧಕರು ಸುಮ್ಮನಿರುವರು.
ಯಾಕೆಂದರೆ ಅದು ಕೆಟ್ಟ ಸಮಯವಾಗಿರುತ್ತದೆ.
14 ದೇವರು ನಿಮ್ಮೊಂದಿಗಿದ್ದಾನೆಂದು ನೀವು ಹೇಳುತ್ತೀರಿ.
ಆದ್ದರಿಂದ ನೀವು ಕೆಟ್ಟಕಾರ್ಯವನ್ನು ಮಾಡದೆ ಒಳ್ಳೆಯ ಕಾರ್ಯಗಳನ್ನು ಮಾಡಬೇಕು.
ಆಗ ನೀವು ಬದುಕುವಿರಿ.
ಸರ್ವಶಕ್ತನಾದ ಯೆಹೋವನು ನಿಮ್ಮ ಬಳಿಯಲ್ಲಿ ಖಂಡಿತವಾಗಿಯೂ ಇರುವನು.
15 ದುಷ್ಟತನವನ್ನು ದ್ವೇಷಿಸಿ ಒಳ್ಳೆಯತನವನ್ನು ಪ್ರೀತಿಸಿರಿ,
ನಿಮ್ಮ ನ್ಯಾಯಾಲಯಗಳಲ್ಲಿ ನ್ಯಾಯವನ್ನು ಸ್ಧಾಪಿಸಿರಿ.
ಆಗ ಒಂದುವೇಳೆ ಸರ್ವಶಕ್ತನಾದ ಯೆಹೋವನು
ಯೋಸೇಫನ ವಂಶದಲ್ಲಿ ಉಳಿದವರಿಗೆ ದಯೆತೋರಿಸಬಹುದು.
ಮಹಾ ಶೋಕದ ದಿನಗಳು ಬರುವವು
16 ನನ್ನ ಒಡೆಯನಾದ ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ,
“ಸಾರ್ವಜನಿಕ ಸ್ಥಳಗಳಲ್ಲಿ ಜನರು ಗೋಳಾಡುವರು.
ರಸ್ತೆ ಬದಿಗಳಲ್ಲಿ ಜನರು ಗೋಳಾಡುವರು.
ಪಟ್ಟಣದ ನಿವಾಸಿಗಳು ತಮ್ಮೊಂದಿಗೆ ಗೋಳಾಡಲು ರೈತರನ್ನು ಆಹ್ವಾನಿಸುವರು.
ಅಳುವವರನ್ನು ಬಾಡಿಗೆಗೆ ಕರೆದುಕೊಂಡು ಬರುವರು.
17 ದ್ರಾಕ್ಷಿತೋಟಗಳಲ್ಲಿ ಜನರು ಯಾಕೆ ಅಳುವರು?
ಯಾಕೆಂದರೆ ನಾನು ಹಾದುಹೋಗುತ್ತಾ ನಿಮ್ಮನ್ನು ಶಿಕ್ಷಿಸುವೆನು.”
ಇದು ಯೆಹೋವನ ನುಡಿ.
18 ನಿಮ್ಮಲ್ಲಿ ಕೆಲವರಿಗೆ ಯೆಹೋವನ
ನ್ಯಾಯತೀರ್ಪಿನ ದಿನವನ್ನು ನೋಡುವ ಮನಸ್ಸಿದೆ.
ಆ ದಿವಸವನ್ನು ಯಾಕೆ ನೀವು ನೋಡಬೇಕು?
ಯೆಹೋವನ ನ್ಯಾಯಾತೀರ್ಪಿನ ದಿನವು ಬೆಳಕನ್ನಲ್ಲ, ಕತ್ತಲನ್ನು ತರುವುದು.
19 ಆಗ ನೀವು ಸಿಂಹದ ಬಾಯಿಂದ ತಪ್ಪಿಸಿಕೊಂಡು
ಕರಡಿಯ ಬಾಯಿಗೆ ಬೀಳುವ ಮನುಷ್ಯನಂತಿರುವಿರಿ.
ಆಗ ನೀವು ನಿಮ್ಮ ಮನೆಯ ಆಶ್ರಯಕ್ಕೆ ಓಡಿಹೋಗಿ
ಗೋಡೆಗೆ ಒರಗಿ ನಿಂತಾಗ
ಒಂದು ಹಾವಿನಿಂದ ಕಚ್ಚಿಸಿಕೊಂಡವರಂತೆ ಇರುವಿರಿ.
20 ಯೆಹೋವನ ನ್ಯಾಯತೀರ್ಪಿನ ದಿವಸವು
ಬೆಳಕಿನ ದಿವಸವಾಗಿರದೆ ಕತ್ತಲೆಯ ದಿವಸವಾಗಿರುವುದು;
ಬೆಳಕಿನ ಮಿಣಕೂ ಇಲ್ಲದ ಅಂಧಕಾರದ ದಿನವಾಗಿರುವುದು.
ಇಸ್ರೇಲಿನ ಆರಾಧನೆಯು ಯೆಹೋವನಿಗೆ ಬೇಕಿಲ್ಲ
21 “ನಿಮ್ಮ ಆರಾಧನಾ ದಿವಸಗಳನ್ನು ನಾನು ದ್ವೇಷಿಸುತ್ತೇನೆ.
ನಾನು ಅವುಗಳನ್ನು ಸ್ವೀಕರಿಸುವುದಿಲ್ಲ.
ನಿಮ್ಮ ಧಾರ್ಮಿಕ ಕೂಟಗಳಲ್ಲಿ ನಾನು ಸಂತೋಷಿಸುವದಿಲ್ಲ.
22 ನೀವು ಸರ್ವಾಂಗಹೋಮವನ್ನಾಗಲಿ ಧಾನ್ಯದ ಹೋಮವನ್ನಾಗಲಿ ಅರ್ಪಿಸಿದರೆ
ನಾನು ಅದನ್ನು ಸ್ವೀಕರಿಸುವುದಿಲ್ಲ.
ಸಮಾಧಾನಯಜ್ಞದಲ್ಲಿ ಕೊಬ್ಬಿದ ಪ್ರಾಣಿಗಳನ್ನು ಬಲಿಯರ್ಪಿಸಿದರೂ
ನಾನು ಅದನ್ನು ಕಣ್ಣೆತ್ತಿ ನೋಡುವದಿಲ್ಲ.
23 ನಿಮ್ಮ ಗಟ್ಟಿಯಾದ ಹಾಡುಗಳನ್ನು ನನ್ನಿಂದ ದೂರ ಮಾಡಿರಿ.
ನಿಮ್ಮ ಹಾರ್ಪ್ ವಾದ್ಯಗಳ ಹಾಡುಗಳನ್ನು ನಾನು ಕೇಳುವುದಿಲ್ಲ.
24 ನಿಮ್ಮ ದೇಶದಿಂದ ನ್ಯಾಯವು ಹರಿಯುವಂತೆ ಮಾಡಿರಿ.
ಎಂದಿಗೂ ಬತ್ತದ ಒರತೆಯಂತೆ ನಿಮ್ಮ ಒಳ್ಳೆತನವು ಹರಿಯಲಿ.
25 ಇಸ್ರೇಲೇ, ನೀನು ನಲವತ್ತು ವರ್ಷ ಮರುಭೂಮಿಯಲ್ಲಿ
ನನಗೆ ಯಜ್ಞಹೋಮಗಳನ್ನು ಅರ್ಪಿಸಿದೆ.
26 ಆದರೂ ನೀನು ನಿನ್ನ ರಾಜನಾದ ಸಕ್ಕೂತನ ಮತ್ತು ಕೈವಾನನ ವಿಗ್ರಹಗಳನ್ನು ತೆಗೆದುಕೊಂಡು ಹೋದೆ.
ಆ ನಕ್ಷತ್ರಗಳನ್ನು ದೇವರುಗಳನ್ನಾಗಿ ನೀನೇ ಮಾಡಿಕೊಂಡೆ.
27 ಆದ್ದರಿಂದ ನಾನು ನಿನ್ನನ್ನು ದಮಸ್ಕದ ಆಚೆಗೆ ಸೆರೆಯಾಳಾಗಿ ಕಳುಹಿಸುವೆನು.”
ಇದು ಯೆಹೋವನ ನುಡಿ.
ಇಸ್ರೇಲರ ಸುಭಿಕ್ಷೆ ತೆಗೆಯಲ್ಪಡುವದು
6 ಚೀಯೋನಿನಲ್ಲಿ ಸುಖದಿಂದಿರುವ ಜನರಿಗೂ
ಸಮಾರ್ಯದ ಪರ್ವತಗಳ ಮೇಲೆ ಸುರಕ್ಷಿತರಾಗಿರುವ ಜನರಿಗೂ ಕೇಡು ಸಂಭವಿಸುವದು.
ನೀವು ವಿಶೇಷವಾದ ದೇಶದ ವಿಶೇಷ ನಾಯಕರು.
ಇಸ್ರೇಲಿನ ಮನೆತನವು ಸಲಹೆಗಾಗಿ ನಿಮ್ಮ ಹತ್ತಿರ ಬರುತ್ತದೆ.
2 ಹೋಗಿ ಕಲ್ನೆಯ ಕಡೆಗೆ ದಿಟ್ಟಿಸಿರಿ.
ಅಲ್ಲಿಂದ ದೊಡ್ಡ ಪಟ್ಟಣವಾದ ಹಾಮಾತಿಗೆ ಹೋಗಿರಿ.
ಫಿಲಿಷ್ಟಿಯರ ಗತ್ ಪಟ್ಟಣಕ್ಕೆ ಹೋಗಿರಿ.
ಆ ಜನಾಂಗಗಳಿಗಿಂತ ನೀವು ಉತ್ತಮರೋ? ಇಲ್ಲ.
ಅವರ ರಾಜ್ಯವು ನಿಮಗಿಂತ ವಿಸ್ತಾರವಾಗಿದೆ.
3 ಶಿಕ್ಷಿಸಲ್ಪಡುವ ದಿವಸದ ಕಡೆಗೆ ನೀವು ಧಾವಿಸುತ್ತಿದ್ದೀರಿ.
ಅಕ್ರಮ ಆಳ್ವಿಕೆಯನ್ನು ನೀವು ಹತ್ತಿರಕ್ಕೆ ಬರಮಾಡಿಕೊಳ್ಳುತ್ತಾ ಇದ್ದೀರಿ.
4 ಆದರೆ ಈಗ ನೀವು ಸುಖದ ಜೀವಿತದಲ್ಲಿ ಆನಂದಿಸುತ್ತಿದ್ದೀರಿ,
ದಂತದ ಮಂಚದಲ್ಲಿ ಮಲಗುವಿರಿ;
ಸುಖಾಸನಗಳ ಮೇಲೆ ಬಿದ್ದುಕೊಳ್ಳುವಿರಿ.
ಹಿಂಡಿನಿಂದ ಎಳೇ ಕುರಿಮರಿಯನ್ನೂ ಹಟ್ಟಿಯಿಂದ ಎಳೇ ಕರುವನ್ನೂ ಭಕ್ಷಿಸುತ್ತೀರಿ.
5 ನಿಮ್ಮ ತಂತಿವಾದ್ಯಗಳಿಂದ ಹಾಡನ್ನು ಬಾರಿಸುವಿರಿ;
ದಾವೀದನಂತೆ ನಿಮ್ಮ ವಾದ್ಯಗಳನ್ನು ಅಭ್ಯಾಸಿಸುವಿರಿ.
6 ಅಂದವಾದ ಪಾತ್ರೆಗಳಲ್ಲಿ ದ್ರಾಕ್ಷಾರಸ ಕುಡಿಯುವಿರಿ.
ಉತ್ತಮವಾದ ಸುಗಂಧತೈಲವನ್ನು ಉಪಯೋಗಿಸುವಿರಿ.
ಯೋಸೇಫನ ಕುಟುಂಬದ
ನಾಶನದ ಬಗ್ಗೆಯೂ ನೀವು ಬೇಸರಗೊಳ್ಳಲಿಲ್ಲ.
7 ಈಗ ಆ ಜನರು ತಮ್ಮ ಸುಖಾಸನಗಳಲ್ಲಿ ಕಾಲನ್ನು ನೇರವಾಗಿ ಚಾಚಿಕೊಂಡು ಮಲಗಿದ್ದಾರೆ. ಆದರೆ ಅವರ ಸುಖದ ಸಮಯಗಳು ಅಂತ್ಯವಾಗುವವು. ಅವರು ಕೈದಿಗಳಂತೆ ಸೆರೆಹಿಡಿಯಲ್ಪಟ್ಟು ಪರದೇಶಕ್ಕೆ ಒಯ್ಯಲ್ಪಡುವರು. ಅವರಲ್ಲಿ ಕೆಲವರು ಸೆರೆ ಒಯ್ಯಲ್ಪಡುವವರಲ್ಲಿ ಮೊದಲಿಗರಾಗುವರು. 8 ನನ್ನ ಒಡೆಯನಾದ ಯೆಹೋವನು ತನ್ನ ಹೆಸರಿನ ಮೇಲೆ ಆಣೆಯಿಟ್ಟು ಈ ಮಾತುಗಳನ್ನು ನುಡಿದಿದ್ದಾನೆ. ಸರ್ವಶಕ್ತನಾದ ಯೆಹೋವನ ನುಡಿಗಳಿವು:
“ಯಾಕೋಬನು ಹೆಚ್ಚಳಪಡುವಂಥವುಗಳನ್ನು ನಾನು ದ್ವೇಷಿಸುತ್ತೇನೆ.
ಅವನ ಬಲವಾದ ಬುರುಜುಗಳನ್ನು ದ್ವೇಷಿಸುತ್ತೇನೆ.
ಆದ್ದರಿಂದ ಶತ್ರುಗಳು ಬಂದು ಪಟ್ಟಣವನ್ನೂ
ಪಟ್ಟಣದಲ್ಲಿರುವದೆಲ್ಲವನ್ನೂ ಸೂರೆಮಾಡುವಂತೆ ಮಾಡುವೆನು.”
ಸ್ವಲ್ಪ ಮಂದಿ ಇಸ್ರೇಲರು ಬದುಕಿಕೊಳ್ಳುವರು
9 ಆ ಸಮಯದಲ್ಲಿ ಒಂದು ಮನೆಯಲ್ಲಿ ಹತ್ತು ಮಂದಿ ಇದ್ದರೂ ಅವರು ಸಾಯುವರು. 10 ಒಬ್ಬ ವ್ಯಕ್ತಿಯು ಸತ್ತಾಗ ಅವನ ಸಂಬಂಧಿಕರಲ್ಲಿ ಒಬ್ಬನು ಬಂದು ಶವವನ್ನು ಸುಡಲು ತೆಗೆದುಕೊಂಡು ಹೋಗುವನು. ಸಂಬಂಧಿಕನು ಬಂದು ಎಲುಬುಗಳನ್ನು ಕೊಂಡೊಯ್ಯುವನು. ಮನೆಯೊಳಗೆ ಅವಿತುಕೊಂಡಿರುವವರನ್ನು ಕರೆಯುವನು. “ಇನ್ನೂ ಸತ್ತ ಹೆಣಗಳು ಒಳಗಿವೆಯೋ?” ಎಂದು ವಿಚಾರಿಸುವನು.
ಒಳಗಿದ್ದವರು “ಇಲ್ಲ” ಎಂದು ಉತ್ತರಿಸುವರು.
ಆಗ ಆ ಸಂಬಂಧಿಕನು ಅವರನ್ನು ತಡೆದು, “ಯೆಹೋವನ ನಾಮವನ್ನು ನಾವು ಉಚ್ಚರಿಸಬಾರದು” ಎಂದು ಹೇಳುವನು.
11 ನೋಡು, ಯೆಹೋವನು ಆಜ್ಞೆಯನ್ನು ಕೊಡುವನು.
ಆಗ ಭವ್ಯಭವನಗಳು ಒಡೆದು ಚೂರುಚೂರಾಗಿ ಬೀಳುವವು.
ಮತ್ತು ಸಣ್ಣ ಮನೆಗಳು ಚಿಂದಿಚಿಂದಿಯಾಗಿ ಚೂರಾಗುವವು.
12 ಕುದುರೆಗಳು ಬಂಡೆಗಳ ಮೇಲೆ ಓಡುವವೋ? ಇಲ್ಲ!
ಬಂಡೆಗಳನ್ನು ಊಳಲು ನಿಮ್ಮ ಹಸುಗಳನ್ನು ಉಪಯೋಗಿಸುವಿರೋ? ಇಲ್ಲ!
ಆದರೆ ನೀವು ಎಲ್ಲವನ್ನು ತಿರುವುಮುರುವು ಮಾಡುತ್ತೀರಿ.
ಒಳ್ಳೆಯತನವನ್ನು ನೀವು ವಿಷವಾಗಿ ಮಾಡಿದ್ದೀರಿ.
ನ್ಯಾಯವನ್ನು ಕಹಿಯಾದ ವಿಷವನ್ನಾಗಿ ಮಾಡಿದ್ದೀರಿ.
13 ಲೊ ಡೆಬಾರಿನಲ್ಲಿ ನೀವು ಸಂತೋಷವಾಗಿದ್ದೀರಿ.
“ಕರ್ನಯಿಮನ್ನು ನಾವು ನಮ್ಮ ಬಲದಿಂದಲೇ ಗೆದ್ದಿದ್ದೇವೆ” ಎಂದು ನೀವು ಹೇಳುತ್ತೀರಿ.
14 “ಆದರೆ ಇಸ್ರೇಲೇ, ನಿನಗೆ ವಿರುದ್ಧವಾಗಿ ಒಂದು ಜನಾಂಗವನ್ನು ಎಬ್ಬಿಸುವೆನು. ಆ ಜನಾಂಗವು ನಿನ್ನ ದೇಶದಲ್ಲಿ ಪೂರ್ತಿ ಸಂಕಟವನ್ನುಂಟು ಮಾಡುವದು; ಅದು ಲೆಬೋಹಮಾತಿನಿಂದ ಹಿಡಿದು ಅರಾಬಾ ಹಳ್ಳದ ತನಕ ಸಂಕಟವನ್ನುಂಟು ಮಾಡುವದು.” ಸರ್ವಶಕ್ತನಾದ ಯೆಹೋವನು ಇದನ್ನು ಹೇಳಿದ್ದಾನೆ.
ಇಸ್ರೇಲಿನ 1,44,000 ಜನರು
7 ಇದಾದ ಮೇಲೆ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ಮೂಲೆಗಳಲ್ಲಿ ನಿಂತಿರುವುದನ್ನು ನಾನು ನೋಡಿದೆನು. ಗಾಳಿಯು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಮರದ ಮೇಲಾಗಲಿ ಬೀಸದಂತೆ ಅವರು ಭೂಮಿಯ ನಾಲ್ಕು ದಿಕ್ಕುಗಳ ಗಾಳಿಯನ್ನು ತಡೆಹಿಡಿದಿದ್ದರು. 2 ನಂತರ ಬೇರೊಬ್ಬ ದೇವದೂತನು ಪೂರ್ವದಿಕ್ಕಿನ ಕಡೆಯಿಂದ ಬರುತ್ತಿರುವುದನ್ನು ನಾನು ನೋಡಿದೆನು. ಜೀವಸ್ವರೂಪನಾದ ದೇವರ ಮುದ್ರೆಯು ಈ ದೇವದೂತನ ಬಳಿಯಿತ್ತು. ಈ ದೇವದೂತನು ನಾಲ್ಕುಮಂದಿ ದೇವದೂತರನ್ನು ಗಟ್ಟಿಯಾದ ಧ್ವನಿಯಲ್ಲಿ ಕರೆದನು. ಭೂಮಿಗೆ ಮತ್ತು ಸಮುದ್ರಕ್ಕೆ ತೊಂದರೆ ಮಾಡುವುದಕ್ಕೆ ಅಧಿಕಾರವನ್ನು ದೇವರು ಈ ನಾಲ್ವರು ದೇವದೂತರಿಗೆ ನೀಡಿದ್ದನು. ಆ ದೇವದೂತನು ಈ ನಾಲ್ವರು ದೇವದೂತರಿಗೆ, 3 “ನಮ್ಮ ದೇವರ ಸೇವೆಮಾಡುವ ಜನರ ಹಣೆಯ ಮೇಲೆ ಮುದ್ರೆ ಒತ್ತುವ ತನಕ ಭೂಮಿಗಾಗಲಿ ಸಮುದ್ರಕ್ಕಾಗಲಿ ಮರಗಳಿಗಾಗಲಿ ತೊಂದರೆಯನ್ನು ಮಾಡಬೇಡಿ” ಎಂದು ಕೂಗಿ ಹೇಳಿದನು.
4 ನಂತರ, ಮುದ್ರೆ ಒತ್ತಿಸಿಕೊಂಡವರ ಸಂಖ್ಯೆ ನನಗೆ ಕೇಳಿಬಂತು. ಅವರ ಒಟ್ಟು ಸಂಖ್ಯೆ 1,44,000 ಮಂದಿ. ಅವರು ಇಸ್ರೇಲರ ಹನ್ನೆರಡು ಕುಲಗಳಿಗೆ ಸೇರಿದವರಾಗಿದ್ದರು.
5 ಯೂದನ ಕುಲದಿಂದ | 12,000 |
ರೂಬೇನನ ಕುಲದಿಂದ | 12,000 |
ಗಾದನ ಕುಲದಿಂದ | 12,000 |
6 ಆಶೇರನ ಕುಲದಿಂದ | 12,000 |
ನಫ್ತಾಲಿಯ ಕುಲದಿಂದ | 12,000 |
ಮನಸ್ಸೆಯ ಕುಲದಿಂದ | 12,000 |
7 ಸಿಮೆಯೋನನ ಕುಲದಿಂದ | 12,000 |
ಲೇವಿಯ ಕುಲದಿಂದ | 12,000 |
ಇಸ್ಸಾಕಾರನ ಕುಲದಿಂದ | 12,000 |
8 ಜೆಬುಲೋನನ ಕುಲದಿಂದ | 12,000 |
ಯೋಸೇಫನ ಕುಲದಿಂದ | 12,000 |
ಬೆನ್ಯಾಮೀನನ ಕುಲದಿಂದ | 12,000 |
ಜನರ ಮಹಾಸಮೂಹ
9 ಬಳಿಕ ನಾನು ನೋಡಿದಾಗ, ಜನರ ಮಹಾಸಮೂಹವನ್ನು ಕಂಡೆನು. ಅವರು ಎಣಿಸಲಾಗದಷ್ಟು ಅಸಂಖ್ಯಾತರಾಗಿದ್ದರು. ಅವರಲ್ಲಿ ಸಕಲ ಜನಾಂಗ, ಕುಲ, ಪ್ರಜೆಗಳವರೂ ಲೋಕದ ಸಕಲ ಭಾಷೆಗಳನ್ನಾಡುವವರೂ ಇದ್ದರು. ಈ ಜನರು ಸಿಂಹಾಸನದ ಮುಂದೆ ಮತ್ತು ಕುರಿಮರಿಯ (ಯೇಸು) ಮುಂದೆ ನಿಂತಿದ್ದರು. ಅವರೆಲ್ಲರೂ ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡು ಖರ್ಜೂರದ ಗರಿಗಳನ್ನು ತಮ್ಮ ಕೈಗಳಲ್ಲಿ ಹಿಡಿದಿದ್ದರು. 10 ಅವರು ಗಟ್ಟಿಯಾದ ಧ್ವನಿಯಲ್ಲಿ, “ಸಿಂಹಾಸನದ ಮೇಲೆ ಕುಳಿತುಕೊಳ್ಳುವ ನಮ್ಮ ಪ್ರಭುವಿಗೆ ಮತ್ತು ಕುರಿಮರಿಯಾದಾತನಿಗೆ ಜಯವು ಲಭಿಸಿತು” ಎಂದು ಕೂಗಿದರು. 11 ಹಿರಿಯರು ಅಲ್ಲಿದ್ದರು ಮತ್ತು ನಾಲ್ಕು ಜೀವಿಗಳು ಅಲ್ಲಿದ್ದವು. ಅವರ ಸುತ್ತಲೂ ಮತ್ತು ಸಿಂಹಾಸನದ ಸುತ್ತಲೂ ದೇವದೂತರೆಲ್ಲಾ ನಿಂತಿದ್ದರು. ದೇವದೂತರು ಸಿಂಹಾಸನದ ಮುಂದೆ ಮೊಣಕಾಲೂರಿ ದೇವರನ್ನು ಆರಾಧಿಸಿದರು. 12 ಅವರು, “ಆಮೆನ್! ನಮ್ಮ ದೇವರಿಗೆ ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸುತ್ತಿಯೂ ಗೌರವವೂ ಅಧಿಕಾರವೂ ಮತ್ತು ಬಲವೂ ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್!” ಎಂದರು.
13 ಆಗ ಹಿರಿಯರಲ್ಲೊಬ್ಬನು, “ಬಿಳಿ ನಿಲುವಂಗಿಗಳನ್ನು ಧರಿಸಿಕೊಂಡಿರುವ ಈ ಜನರು ಯಾರು! ಅವರು ಎಲ್ಲಿಂದ ಬಂದವರು?” ಎಂದು ನನ್ನನ್ನು ಕೇಳಿದನು.
14 “ಸ್ವಾಮೀ, ಅವರು ಯಾರೆಂಬುದು ನಿಮಗೆ ತಿಳಿದಿದೆ” ಎಂದು ನಾನು ಉತ್ತರಿಸಿದೆನು.
ಆಗ ಹಿರಿಯನು, “ಈ ಜನರು ಭೀಕರ ಸಂಕಟವನ್ನು ಅನುಭವಿಸಿ ಬಂದವರು. ಅವರು ಕುರಿಮರಿಯಾದಾತನ ರಕ್ತದಿಂದ ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡಿದ್ದಾರೆ.[a] ಈಗ ಅವರು ಶುಭ್ರವಾಗಿದ್ದಾರೆ ಮತ್ತು ಬಿಳುಪಾಗಿದ್ದಾರೆ. 15 ಆದ್ದರಿಂದ ಈ ಜನರು ಈಗ ದೇವರ ಸಿಂಹಾಸನದ ಮುಂದೆ ಇದ್ದಾರೆ. ಅವರು ದೇವರನ್ನು ಆತನ ಆಲಯದಲ್ಲಿ ಹಗಲಿರುಳು ಆರಾಧಿಸುತ್ತಾರೆ. ಸಿಂಹಾಸನದ ಮೇಲೆ ಕುಳಿತಿರುವಾತನು ಅವರನ್ನು ಸಂರಕ್ಷಿಸುತ್ತಾನೆ. 16 ಆ ಜನರಿಗೆ ಮತ್ತೆ ಹಸಿವೆಯಾಗಲಿ ಬಾಯಾರಿಕೆಯಾಗಲಿ ಸೂರ್ಯನ ತಾಪವಾಗಲಿ ಇರುವುದಿಲ್ಲ. ಅವರನ್ನು ಯಾವ ತಾಪವೂ ಸುಡುವುದಿಲ್ಲ. 17 ಸಿಂಹಾಸನದ ಮಧ್ಯೆ ಇರುವ ಕುರಿಮರಿಯಾದಾತನು ಅವರ ಕುರುಬನಾಗಿರುತ್ತಾನೆ. ಆತನು ಅವರನ್ನು ಜೀವ ನೀಡುವ ನೀರಿನ ಬುಗ್ಗೆಗಳ ಬಳಿಗೆ ಕರೆದೊಯ್ಯುತ್ತಾನೆ. ಅವರ ಕಣ್ಣುಗಳಿಂದ ತೊಟ್ಟಿಕ್ಕುವ ಕಣ್ಣೀರನ್ನೆಲ್ಲ ದೇವರು ಒರಸಿಹಾಕುತ್ತಾನೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International