Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಆಮೋಸ 1-3

ಪರಿಚಯ

ಇದು ಆಮೋಸನ ಸಂದೇಶ. ಇವನು ತೆಕೋವ ಎಂಬ ಪಟ್ಟಣದ ಕುರುಬರಲ್ಲೊಬ್ಬನು. ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಸಮಯದಲ್ಲಿ ಮತ್ತು ಅದೇ ಸಮಯದಲ್ಲಿ ಯೋವಾಷನ ಮಗನಾದ ಯಾರೊಬ್ಬಾಮನು ಇಸ್ರೇಲನ್ನು ಆಳುತ್ತಿರುವಾಗ ಆಮೋಸನಿಗೆ ದೈವದರ್ಶನಗಳುಂಟಾದವು. ಭೂಕಂಪವಾಗುವುದಕ್ಕಿಂತ ಎರಡು ವರ್ಷಗಳಿಗೆ ಮೊದಲು ಈ ದರ್ಶನಗಳಾದವು.

ಅರಾಮ್ಯರಿಗೆ ಶಿಕ್ಷೆ

ಆಮೋಸನು ಹೇಳಿದ್ದೇನೆಂದರೆ,
“ಚೀಯೋನಿನಲ್ಲಿ ಯೆಹೋವನು ಸಿಂಹದಂತೆ ಗರ್ಜಿಸುವನು.
    ಜೆರುಸಲೇಮಿನಿಂದ ಆರ್ಭಟಿಸುತ್ತಾನೆ.
ಆಗ ಕುರುಬರ ಹಸಿರು ಹುಲ್ಲುಗಾವಲು ಕಂದುಬಣ್ಣವಾಗಿ ಸಾಯುವುದು.
    ಕರ್ಮೆಲ್ ಬೆಟ್ಟವು ಒಣಗಿ ಬರಡಾಗುವುದು.”

ಯೆಹೋವನು ಹೇಳುವುದೇನೆಂದರೆ, “ದಮಸ್ಕದವರು ನಡಿಸಿದ ಅನೇಕ ಅಪರಾಧಗಳ ನಿಮಿತ್ತವಾಗಿ ನಾನು ಖಂಡಿತವಾಗಿಯೂ ಅವರನ್ನು ಶಿಕ್ಷಿಸುವೆನು. ಯಾಕೆಂದರೆ ಅವರು ಗಿಲ್ಯಾದಿನ ಜನರನ್ನು ಒಕ್ಕಣೆಗೆ ಉಪಯೋಗಿಸುವ ಕಬ್ಬಿಣದ ಸಲಕರಣೆಗಳಿಂದ ಜಜ್ಜಿಬಿಟ್ಟರು. ಆದರೆ ನಾನು ಹಜಾಯೇಲನ ನಿವಾಸದಲ್ಲಿ ಬೆಂಕಿಯನ್ನು ಪ್ರಾರಂಭಿಸುವೆನು. ಅದು ಬೆನ್ಹದದನ ಭವ್ಯ ಅರಮನೆಗಳನ್ನೆಲ್ಲಾ ಸುಟ್ಟುಹಾಕುವದು.

“ನಾನು ದಮಸ್ಕದ ಹೆಬ್ಬಾಗಿಲುಗಳನ್ನೂ ಒಡೆದುಹಾಕುವೆನು; ಆವೆನ್ ಕಣಿವೆಯಲ್ಲಿ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನನ್ನು ತೆಗೆದುಬಿಡುವೆನು; ಬೇತ್ ಎದೆನ್‌ನಲ್ಲಿರುವ ಸಾಮರ್ಥ್ಯದ ಗುರುತನ್ನು ಕಿತ್ತುಹಾಕುವೆನು. ಆಗ ಅರಾಮ್ಯರು ಸೋಲಿಸಲ್ಪಟ್ಟವರಾಗಿ ಕೀರ್ ಎಂಬಲ್ಲಿಗೆ ಕೊಂಡೊಯ್ಯುವರು. ಇದು ಯೆಹೋವನ ನುಡಿ.”

ಫಿಲಿಷ್ಟಿಯರಿಗೆ ಶಿಕ್ಷೆ

ಯೆಹೋವನು ಹೇಳುವುದೇನೆಂದರೆ, “ಗಾಜದ ಜನರನ್ನು ಅವರು ಮಾಡಿದ ಅಪರಾಧಗಳ ನಿಮಿತ್ತ ಖಂಡಿತವಾಗಿಯೂ ಶಿಕ್ಷಿಸುವೆನು. ಯಾಕೆಂದರೆ ಅವರು ಒಂದು ಇಡೀ ಜನಾಂಗವನ್ನೇ ಎದೋಮಿಗೆ ಗುಲಾಮರನ್ನಾಗಿ ಕಳುಹಿಸಿದರು. ಅದಕ್ಕಾಗಿ ನಾನು ಗಾಜದ ಗೋಡೆಯ ಮೇಲೆ ಬೆಂಕಿಯನ್ನು ಕಳುಹಿಸುವೆನು. ಈ ಬೆಂಕಿಯು ಗಾಜದ ಎತ್ತರವಾದ ಗೋಪುರಗಳನ್ನು ನಾಶಮಾಡುವದು. ಇದಲ್ಲದೆ, ನಾನು ಅಷ್ಡೋದಿನಲ್ಲಿ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನನ್ನು ನಾಶಮಾಡುವೆನು; ಅಷ್ಕೆಲೋನಿನಲ್ಲಿ ರಾಜದಂಡ ಹಿಡಿಯುವವನನ್ನು ನಾಶಮಾಡುವೆನು; ಎಕ್ರೋನಿನ ಜನರನ್ನು ಶಿಕ್ಷಿಸುವೆನು. ಆಮೇಲೆ ಅಳಿದುಳಿದ ಫಿಲಿಷ್ಟಿಯರು ಸಾಯುವರು.” ಇದು ಯೆಹೋವನ ನುಡಿ.

ತೂರಿಗೆ ಶಿಕ್ಷೆ

ಯೆಹೋವನು ಹೇಳುವುದೇನೆಂದರೆ, “ಅನೇಕ ಅಪರಾಧಗಳನ್ನು ಮಾಡಿದ ತೂರಿನ ಜನರನ್ನು ನಾನು ಖಂಡಿತವಾಗಿ ಶಿಕ್ಷಿಸುವೆನು. ಯಾಕೆಂದರೆ ಅವರು ಒಂದು ಜನಾಂಗದ ಜನರನ್ನೆಲ್ಲಾ ಗುಲಾಮರನ್ನಾಗಿ ಎದೋಮಿಗೆ ಕಳುಹಿಸಿದರು. ಅವರು ತಮ್ಮ ಸಹೋದರರೊಂದಿಗೆ (ಇಸ್ರೇಲಿನೊಂದಿಗೆ) ಮಾಡಿದ ಒಡಂಬಡಿಕೆಯನ್ನು ಮರೆತುಬಿಟ್ಟರು. 10 ಆದ್ದರಿಂದ ನಾನು ತೂರಿನ ಗೋಡೆಯ ಮೇಲೆ ಬೆಂಕಿಯನ್ನು ಹಾಕುವೆನು. ಆ ಬೆಂಕಿಯು ತೂರಿನ ಎತ್ತರವಾದ ಬುರುಜುಗಳನ್ನು ನಾಶಮಾಡುವದು.”

ಎದೋಮ್ಯರಿಗೆ ಶಿಕ್ಷೆ

11 ಯೆಹೋವನು ಹೇಳುವುದೇನೆಂದರೆ, “ಅನೇಕ ಅಪರಾಧಗಳನ್ನು ಮಾಡಿದ ಎದೋಮ್ಯರನ್ನು ನಾನು ಖಂಡಿತವಾಗಿ ಶಿಕ್ಷಿಸುವೆನು. ಯಾಕೆಂದರೆ ಎದೋಮ್ ತನ್ನ ಸಹೋದರನಾದ ಇಸ್ರೇಲನ್ನು ಕತ್ತಿಯಿಂದ ಹತಿಸಿತು. ಎದೋಮ್ ಯಾವ ಕರುಣೆಯನ್ನೂ ತೋರಲಿಲ್ಲ. ಅದರ ಕೋಪವು ನಿರಂತರವಾಗಿ ಮುಂದುವರಿಯಿತು; ಕ್ರೂರಪ್ರಾಣಿಯಂತೆ ಇಸ್ರೇಲನ್ನು ಹರಿದುಹರಿದು ಹಾಕಿತು. 12 ಆದ್ದರಿಂದ ನಾನು ತೇಮಾನಿನಲ್ಲಿ ಬೆಂಕಿಯನ್ನು ಹಾಕುವೆನು. ಆ ಬೆಂಕಿಯು ಬೋಚ್ರದ ಉನ್ನತ ಗೋಪುರಗಳನ್ನು ನಾಶಮಾಡುವದು.”

ಅಮ್ಮೋನಿಯರಿಗೆ ಶಿಕ್ಷೆ

13 ಯೆಹೋವನು ಹೇಳುವುದೇನೆಂದರೆ, “ಅನೇಕಾನೇಕ ಅಪರಾಧಗಳನ್ನು ಮಾಡಿದ ಅಮ್ಮೋನಿಯರನ್ನು ನಾನು ಖಂಡಿತವಾಗಿಯೂ ಶಿಕ್ಷಿಸುತ್ತೇನೆ. ಯಾಕೆಂದರೆ ಅವರು ಗಿಲ್ಯಾದಿನ ಗರ್ಭಿಣಿ ಸ್ತ್ರೀಯರನ್ನು ಕೊಂದರು. ಆ ಪ್ರಾಂತ್ಯವನ್ನು ಕೈವಶಮಾಡಿಕೊಂಡು ತಮ್ಮ ದೇಶವನ್ನು ವಿಸ್ತಾರ ಮಾಡುವುದಕ್ಕಾಗಿ ಅವರು ಹೀಗೆ ಮಾಡಿದರು. 14 ಆದ್ದರಿಂದ ನಾನು ರಬ್ಬದ ಗೋಡೆಗಳಲ್ಲಿ ಬೆಂಕಿ ಹಾಕುವೆನು. ಆ ಬೆಂಕಿಯು ರಬ್ಬದ ಉನ್ನತ ಗೋಪುರಗಳನ್ನು ನಾಶಮಾಡುವದು; ಹಗಲಿನ ಯುದ್ಧದ ಕೂಗಾಟದಂತೆಯೂ ಸುಂಟರಗಾಳಿಯಂತೆಯೂ ಸಂಕಟವು ಅವರ ದೇಶಕ್ಕೆ ಬರುವದು. 15 ಆಗ ಅವರ ಅರಸನು ಮತ್ತು ನಾಯಕರು ಸೆರೆಹಿಡಿಯಲ್ಪಡುವರು. ಅವರನ್ನೆಲ್ಲ ಒಟ್ಟಿಗೆ ಕೊಂಡೊಯ್ಯಲಾಗುವುದು.” ಈ ಸಂಗತಿಗಳನ್ನೆಲ್ಲ ಯೆಹೋವನು ತಿಳಿಸಿದನು.

ಮೋವಾಬ್ಯರಿಗೆ ಶಿಕ್ಷೆ

ಯೆಹೋವನು ಹೇಳುವುದೇನೆಂದರೆ, “ಮೋವಾಬ್ಯರು ಅನೇಕ ಅಪರಾಧಗಳನ್ನು ಮಾಡಿದ್ದರಿಂದ ನಾನು ಖಂಡಿತವಾಗಿಯೂ ಅವರನ್ನು ಶಿಕ್ಷಿಸುವೆನು. ಎದೋಮ್ಯರ ಅರಸನ ಎಲುಬುಗಳನ್ನು ಮೋವಾಬ್ಯರು ಸುಟ್ಟು ಸುಣ್ಣವಾಗಿ ಮಾಡಿದರು. ಆದ್ದರಿಂದ ಮೋವಾಬಿನಲ್ಲಿ ನಾನು ಬೆಂಕಿಯನ್ನು ಹಾಕುವೆನು. ಅದು ಕೆರಿಯೋತಿನ ಉನ್ನತ ಗೋಪುರಗಳನ್ನು ನಾಶಮಾಡುವದು. ಅಲ್ಲಿ ಭಯಂಕರವಾದ ಕೂಗಾಟವೂ ತುತ್ತೂರಿಯ ಧ್ವನಿಯೂ ಇರುತ್ತದೆ. ಆಗ ಮೋವಾಬು ಸಾಯುವದು. ಹೀಗೆ ನಾನು ಮೋವಾಬಿನ ಅರಸರಿಗೆ ಅಂತ್ಯವನ್ನು ಮಾಡುವೆನು. ಮೋವಾಬಿನ ಎಲ್ಲಾ ನಾಯಕರುಗಳನ್ನು ಸಾಯಿಸುವೆನು” ಇದು ಯೆಹೋವನ ನುಡಿ.

ಯೆಹೂದಕ್ಕೆ ಶಿಕ್ಷೆ

ಯೆಹೋವನು ಹೇಳುವುದೇನೆಂದರೆ, “ಯೆಹೂದ ಜನರ ಅನೇಕ ಅಪರಾಧಗಳಿಗಾಗಿ ಅವರನ್ನು ಖಂಡಿತವಾಗಿಯೂ ದಂಡಿಸುವೆನು. ಯಾಕೆಂದರೆ ಅವರು ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ. ನನ್ನ ಕಟ್ಟಳೆಗಳಿಗೆ ವಿಧೇಯರಾಗಲಿಲ್ಲ. ಅವರ ಪೂರ್ವಿಕರು ಸುಳ್ಳನ್ನು ನಂಬಿದರು. ಆ ಸುಳ್ಳುಗಳಿಂದ ಅವರು ನನ್ನನ್ನು ಹಿಂಬಾಲಿಸಲಿಲ್ಲ. ಆದ್ದರಿಂದ ನಾನು ಯೆಹೂದದಲ್ಲಿ ಬೆಂಕಿಯನ್ನು ಹಚ್ಚುವೆನು; ಆ ಬೆಂಕಿಯು ಜೆರುಸಲೇಮಿನ ಉನ್ನತ ಬುರುಜುಗಳನ್ನು ನಾಶಮಾಡುವದು.”

ಇಸ್ರೇಲಿನ ಶಿಕ್ಷೆ

ಯೆಹೋವನು ಹೇಳುವುದೇನೆಂದರೆ, “ಅನೇಕ ಅಪರಾಧಗಳನ್ನು ಮಾಡಿದ ಇಸ್ರೇಲನ್ನು ನಾನು ಖಂಡಿತವಾಗಿಯೂ ದಂಡಿಸುವೆನು. ಯಾಕೆಂದರೆ ಅವರು ಸ್ವಲ್ಪ ಬೆಳ್ಳಿಗಾಗಿ ಒಳ್ಳೆಯವರನ್ನೂ ಮತ್ತು ನಿರಪರಾಧಿಗಳನ್ನೂ ಮಾರಿದರು; ಒಂದು ಜೊತೆ ಕೆರಗಳ ಕ್ರಯಕ್ಕೆ ಬಡ ಜನರನ್ನು ಮಾರಿದರು. ಆ ಬಡಜನರ ಮುಖವನ್ನು ನೆಲದ ಮೇಲೆ ದೂಡಿ ಅವರ ಮೇಲೆ ನಡೆದರು. ಕಷ್ಟ ಅನುಭವಿಸುವ ಜನರ ಮೊರೆಯನ್ನು ಅವರು ಲಾಲಿಸದೆ ಹೋದರು. ತಂದೆಗಳೂ ಗಂಡುಮಕ್ಕಳೂ ಒಬ್ಬ ತರುಣಿಯೊಂದಿಗೇ ಲೈಂಗಿಕ ಸಂಬಂಧವನ್ನಿಟ್ಟುಕೊಂಡರು. ನನ್ನ ಪವಿತ್ರನಾಮವನ್ನು ಹಾಳುಮಾಡಿದರು. ಬಡಜನರ ಬಟ್ಟೆಗಳನ್ನು ತೆಗೆದುಕೊಂಡು ತಾವು ವೇದಿಕೆಯ ಮೇಲೆ ಯಜ್ಞ ಮಾಡುತ್ತಿರುವಾಗ ಆ ಬಟ್ಟೆಗಳ ಮೇಲೆ ಕುಳಿತುಕೊಳ್ಳುವರು. ಬಡವರಿಗೆ ಸಾಲಕೊಟ್ಟು ಅವರು ಬಟ್ಟೆಗಳನ್ನು ಒತ್ತೆಗೆ ತೆಗೆದುಕೊಳ್ಳುವರು. ಅವರು ಜನರಿಗೆ ದಂಡ ವಿಧಿಸಿ, ಆ ಹಣದಿಂದ ದ್ರಾಕ್ಷಾರಸವನ್ನು ಕೊಂಡುಕೊಂಡು ದೇವರ ಆಲಯದಲ್ಲಿ ಕುಡಿಯುವರು.

“ಆದರೆ ಅವರ ಎದುರಿನಲ್ಲಿ ಅಮೋರಿಯರನ್ನು ನಾಶಮಾಡಿದವನು ನಾನೇ, ಅಮೋರಿಯರು ದೇವದಾರು ಮರಗಳಂತೆ ಎತ್ತರವೂ, ಅಲ್ಲೊನ್ ಮರಗಳಂತೆ ಬಲಶಾಲಿಗಳೂ ಆಗಿದ್ದರು. ಆದರೆ ನಾನು ಕೆಳಗಿನಿಂದ ಅವರ ಬೇರನ್ನೂ ಮೇಲಿನಿಂದ ಅವರ ಫಲಗಳನ್ನೂ ನಾಶಮಾಡಿದೆನು.

10 “ಈಜಿಪ್ಟ್ ದೇಶದಿಂದ ನಿಮ್ಮನ್ನು ಹೊರತಂದವನು ನಾನೇ. ನಲವತ್ತು ವರ್ಷಗಳ ತನಕ ನಾನು ಅಡವಿಯಲ್ಲಿ ನಿಮ್ಮನ್ನು ನಡಿಸಿದೆನು. ನಾನು ಅಮೋರಿಯರ ದೇಶವನ್ನು ಸ್ವಾಧೀನಪಡಿಸಲು ಅವರಿಗೆ ಸಹಾಯ ಮಾಡಿದೆನು. 11 ನಿಮ್ಮ ಕೆಲವು ಗಂಡುಮಕ್ಕಳನ್ನು ನಾನು ಪ್ರವಾದಿಗಳನ್ನಾಗಿ ಮಾಡಿದೆನು. ಇನ್ನು ಕೆಲವರನ್ನು ನಾಜೀರರನ್ನಾಗಿ ಮಾಡಿದೆನು. ಇಸ್ರೇಲ್ ಜನರೇ, ಇವು ಸತ್ಯವಾದ ಮಾತುಗಳು,” ಇವು ಯೆಹೋವನ ನುಡಿಗಳು. 12 “ಆದರೆ ನೀವು ನಾಜೀರರನ್ನು ದ್ರಾಕ್ಷಾರಸ ಕುಡಿಯುವಂತೆ ಮಾಡಿದಿರಿ. ಪ್ರವಾದಿಗಳನ್ನು ಪ್ರವಾದಿಸಬೇಡಿ ಎಂದು ಹೇಳಿದಿರಿ. 13 ನೀವು ನನಗೆ ಬಹು ಭಾರವಾಗಿದ್ದೀರಿ. ಬಂಡಿಯಲ್ಲಿ ಒತ್ತಿ ತುಂಬಿಸಿದಾಗ ಹೇಗೆ ಬಗ್ಗುತ್ತದೋ ಅದೇ ರೀತಿಯಲ್ಲಿ ನಾನು ಬಹುವಾಗಿ ಬಗ್ಗಿರುತ್ತೇನೆ. ಆದರೆ ನಾನು ನಿಮ್ಮನ್ನು ಅದೇ ರೀತಿಯಲ್ಲಿ ಬಗ್ಗಿಸುತ್ತೇನೆ.[a] 14 ಯಾರೂ ತಪ್ಪಿಸಿಕೊಳ್ಳಲಾರರು. ಅತಿ ವೇಗವಾದ ಓಟಗಾರರೂ ತಪ್ಪಿಸಿಕೊಳ್ಳಲಾರರು. ಬಲಶಾಲಿಗಳಿಗೂ ಶಕ್ತಿ ಸಾಲದು. ಸಿಪಾಯಿಗಳಿಗೂ ತಮ್ಮನ್ನು ಕಾಪಾಡಿಕೊಳ್ಳಲಾಗದು. 15 ಬಿಲ್ಲುಬಾಣ ಹಿಡಿದಿರುವವರೂ ಉಳಿಯರು. ವೇಗದ ಓಟಗಾರರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕುದುರೆ ಮೇಲಿನ ಸವಾರರು ಜೀವಸಹಿತ ತಪ್ಪಿಸಿಕೊಳ್ಳುವುದಿಲ್ಲ. 16 ಆ ಸಮಯದಲ್ಲಿ ಅತಿ ಧೈರ್ಯಶಾಲಿಗಳೂ ರಣವೀರರೂ ಓಡಿಬಿಡುವರು. ತಮ್ಮ ಬಟ್ಟೆಗಳನ್ನು ಧರಿಸಿಕೊಳ್ಳಲೂ ಅವರಿಗೆ ಸಮಯವಿರುವುದಿಲ್ಲ.” ಇವು ಯೆಹೋವನ ನುಡಿ.

ಇಸ್ರೇಲಿಗೆ ಎಚ್ಚರಿಕೆಯ ಮಾತು

ಇಸ್ರೇಲಿನ ಜನರೇ, ಈ ಸಂದೇಶಕ್ಕೆ ಕಿವಿಗೊಡಿರಿ! ನಿಮ್ಮ ವಿಷಯವಾಗಿ ಯೆಹೋವನು ಹೀಗೆ ಹೇಳಿದ್ದಾನೆ. ಇಸ್ರೇಲೇ, ಇದು ನಾನು ಈಜಿಪ್ಟ್‌ನಿಂದ ಬಿಡಿಸಿಕೊಂಡು ಬಂದ ಎಲ್ಲಾ ಕುಟುಂಬಗಳವರ (ಇಸ್ರೇಲ್) ವಿಷಯವಾದ ಸಂದೇಶ. “ಈ ಭೂಮುಖದಲ್ಲಿ ಅನೇಕ ಕುಟುಂಬಗಳಿವೆ. ಅವರೆಲ್ಲರಲ್ಲಿ ನಿಮ್ಮನ್ನು ಮಾತ್ರವೇ ನಾನು ವಿಶೇಷ ರೀತಿಯಲ್ಲಿ ಬಲ್ಲೆನು. ಆದರೆ ನೀವು ನನಗೆ ವಿರುದ್ಧವಾದಿರಿ. ಆದ್ದರಿಂದ ನಾನು ನೀವು ಮಾಡಿದ ಪಾಪಗಳಿಗೆ ನಿಮ್ಮೆಲ್ಲರನ್ನು ಶಿಕ್ಷಿಸುವೆನು.”

ಇಸ್ರೇಲಿನ ಶಿಕ್ಷೆಯ ಕಾರಣ

ಇಬ್ಬರು ಒಟ್ಟಾಗಿ ನಡೆಯಬೇಕಾದರೆ
    ಅದಕ್ಕೆ ಅವರಿಬ್ಬರೂ ಒಪ್ಪಿಕೊಂಡಿರಲೇಬೇಕು.
ಅಡವಿಯಲ್ಲಿರುವ ಸಿಂಹವು
    ಪ್ರಾಣಿಯನ್ನು ಹಿಡಿದ ನಂತರವೇ ಗರ್ಜಿಸುವದು.
ಪ್ರಾಯದ ಸಿಂಹವು ತನ್ನ ಗವಿಯಲ್ಲಿ ಗರ್ಜಿಸಿದರೆ
    ಅದು ಒಂದು ಪ್ರಾಣಿಯನ್ನು ಹಿಡಿಯಿತು ಎಂದು ಅರ್ಥ.
ಬಲೆಯಲ್ಲಿ ಆಹಾರ ಹಾಕದಿದ್ದರೆ
    ಪಕ್ಷಿಯು ಬಲೆಯೊಳಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ.
ಏನೂ ಸಿಕ್ಕಿಕೊಳ್ಳದೆ
    ಬೋನು ಮುಚ್ಚಿಕೊಳ್ಳುವುದೇ?
ತುತ್ತೂರಿಯ ಎಚ್ಚರಿಕೆಯ ಶಬ್ಧವನ್ನು ಕೇಳಿದ ಜನರು
    ಖಂಡಿತವಾಗಿ ಹೆದರಿ ನಡುಗುವರು.
ಒಂದು ಗಂಡಾಂತರವು ಪಟ್ಟಣಕ್ಕೆ ಬಂದಿರುವುದಾದರೆ
    ಅದನ್ನು ಬರಮಾಡಿದಾತನು ಯೆಹೋವನೇ.

ನನ್ನ ಒಡೆಯನಾದ ಯೆಹೋವನು ಒಂದು ಕಾರ್ಯವನ್ನು ಮಾಡಲು ನಿರ್ಧರಿಸಬಹುದು. ಆದರೆ ಆತನು ಹಾಗೆ ಮಾಡುವ ಮುಂಚಿತವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ಮುಂತಿಳಿಸುವನು. ಸಿಂಹವು ಗರ್ಜಿಸಿದಾಗ ಜನರಿಗೆ ಭಯವಾಗುವುದು. ಯೆಹೋವನು ಮಾತನಾಡಿದಾಗ ಪ್ರವಾದಿಗಳು ಪ್ರವಾದಿಸುವರು.

9-10 ಅಷ್ಡೋದ್ ಮತ್ತು ಈಜಿಪ್ಟಿನ ಉನ್ನತ ಬುರುಜುಗಳ ಬಳಿಗೆ ಹೋಗಿ ಈ ಸಂದೇಶವನ್ನು ಸಾರಿರಿ, “ಸಮಾರ್ಯದ ಪರ್ವತಗಳ ಬಳಿಗೆ ಬನ್ನಿರಿ. ಅಲ್ಲಿ ಒಂದು ದೊಡ್ಡ ಗಲಿಬಿಲಿಯನ್ನು ನೋಡುವಿರಿ. ಯಾಕೆಂದರೆ ಜನರಿಗೆ ಸರಿಯಾಗಿ ಜೀವಿಸುವ ರೀತಿ ಗೊತ್ತಿಲ್ಲ. ಅವರು ಜನರೊಂದಿಗೆ ಕ್ರೂರವಾಗಿ ವರ್ತಿಸುವರು. ಬೇರೆ ಜನರಿಂದ ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಉನ್ನತ ಬುರುಜುಗಳಲ್ಲಿ ಅಡಗಿಸಿಡುವರು. ಯುದ್ಧದಲ್ಲಿ ಸೂರೆ ಮಾಡಿದ ವಸ್ತುಗಳಿಂದ ಅವರ ಖಜಾನೆಯು ತುಂಬಿರುವದು.”

11 ಆದ್ದರಿಂದ ಯೆಹೋವನು ಹೇಳುವುದೇನೆಂದರೆ, “ಆ ದೇಶಕ್ಕೆ ಒಬ್ಬ ಶತ್ರುವು ಬರುವನು. ಅವನು ನಿಮ್ಮ ಬಲವನ್ನೇ ಮುರಿಯುವನು. ನೀವು ಉನ್ನತ ಬುರುಜುಗಳಲ್ಲಿ ಅಡಿಗಿಸಿಟ್ಟಿದ್ದ ವಸ್ತುಗಳನ್ನು ಕಿತ್ತುಕೊಳ್ಳುವನು.”

12 ಯೆಹೋವನು ಹೇಳುವುದೇನೆಂದರೆ,

“ಒಂದುವೇಳೆ ಸಿಂಹವು ಒಂದು ಕುರಿಮರಿಯ ಮೇಲೆ ಎರಗಿದರೆ
    ಕುರುಬನು ಅದನ್ನು ರಕ್ಷಿಸಲು ಪ್ರಯತ್ನಿಸಾನು.
ಆದರೆ ಕುರುಬನು ಆ ಕುರಿಮರಿಯ
    ಒಂದು ಭಾಗವನ್ನು ಮಾತ್ರ ಕಾಪಾಡಿಯಾನು.
ಸಿಂಹದ ಬಾಯಿಂದ ಕುರಿಯ ಎರಡು ಕಾಲುಗಳನ್ನೋ
    ಕಿವಿಯ ಒಂದು ಭಾಗವನ್ನೋ ಎಳೆದು ರಕ್ಷಿಸಿಯಾನು.
ಅದೇ ರೀತಿಯಲ್ಲಿ ಬಹುತೇಕ ಇಸ್ರೇಲರು ರಕ್ಷಿಸಲ್ಪಡುವದಿಲ್ಲ.
    ಸಮಾರ್ಯದಲ್ಲಿರುವ ಜನರು ತಮ್ಮ ಹಾಸಿಗೆಯ ಒಂದು ಮೂಲೆಯನ್ನಾಗಲಿ
    ಅಥವಾ ಮಂಚದ ಮೇಲಿನ ಬಟ್ಟೆಯ ಒಂದು ತುಂಡನ್ನಾಗಲಿ ಉಳಿಸಿಕೊಳ್ಳುವರು.”

13 ಸರ್ವಶಕ್ತನೂ ನನ್ನ ಒಡೆಯನೂ ಆಗಿರುವ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, “ಯಾಕೋಬನ ಕುಟುಂಬದವರಿಗೆ ಈ ವಿಷಯವನ್ನು ತಿಳಿಸು. 14 ಇಸ್ರೇಲು ಪಾಪಮಾಡಿದೆ. ಅದಕ್ಕಾಗಿ ನಾನು ಅದನ್ನು ಶಿಕ್ಷಿಸುವೆನು. ಬೇತೇಲಿನಲ್ಲಿರುವ ವೇದಿಕೆಗಳನ್ನು ನಾನು ನಾಶಮಾಡುವೆನು. ವೇದಿಕೆಯ ಕೊಂಬುಗಳು ಮುರಿಯಲ್ಪಟ್ಟು ನೆಲದ ಮೇಲೆ ಬೀಳುವವು. 15 ಬೇಸಿಗೆ ಕಾಲದ ಅರಮನೆಯೊಂದಿಗೆ ಚಳಿಗಾಲದ ಅರಮನೆಯನ್ನೂ ನಾಶಮಾಡುವೆನು. ದಂತದ ಭವನಗಳನ್ನು ನಾಶಮಾಡುವೆನು, ಇತರ ಎಷ್ಟೋ ಮನೆಗಳು ನಾಶವಾಗುವವು.” ಇವು ಯೆಹೋವನ ನುಡಿಗಳು.

ಪ್ರಕಟನೆ 6

ಕುರಿಮರಿಯು ಸುರುಳಿಯನ್ನು ಬಿಚ್ಚಿತು

ನಂತರ ಕುರಿಮರಿಯು ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ಗಮನಿಸಿದೆನು. ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಗುಡುಗಿನಂತೆ ಮಾತನಾಡುವುದನ್ನು ನಾನು ಕೇಳಿದೆನು. ಅದು “ಬಾ!” ಎಂದು ಹೇಳಿತು. ನಾನು ನೋಡಿದಾಗ ನನ್ನ ಮುಂದೆ ಒಂದು ಬಿಳಿ ಕುದುರೆಯಿರುವುದು ನನಗೆ ಕಾಣಿಸಿತು. ಕುದುರೆಯ ಮೇಲಿದ್ದ ಸವಾರನ ಕೈಯಲ್ಲಿ ಒಂದು ಬಿಲ್ಲು ಇತ್ತು. ಆ ಸವಾರನಿಗೆ ಒಂದು ಕಿರೀಟವನ್ನು ಕೊಡಲಾಯಿತು. ಅವನು ಶತ್ರುವನ್ನು ಸೋಲಿಸುತ್ತಾ ಜಯಗಳಿಸುವುದಕ್ಕಾಗಿ ಹೊರಟನು.

ಆ ಕುರಿಮರಿಯು ಎರಡನೆಯ ಮುದ್ರೆಯನ್ನು ತೆಗೆಯಿತು. ಆಗ ಎರಡನೆಯ ಜೀವಿಯು, “ಬಾ!” ಎಂದು ಹೇಳಿದ್ದನ್ನು ಕೇಳಿದೆನು. ಆಗ ಮತ್ತೊಂದು ಕುದುರೆಯು ಹೊರಗೆ ಬಂದಿತು. ಇದು ಕೆಂಪು ಕುದುರೆಯಾಗಿತ್ತು. ಈ ಕುದುರೆಯ ಮೇಲೆ ಕುಳಿತಿದ್ದ ಸವಾರನಿಗೆ ಲೋಕದಲ್ಲಿದ್ದ ಶಾಂತಿಯನ್ನು ತೆಗೆದುಹಾಕಲೂ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡಲೂ ಅವನಿಗೆ ಅಧಿಕಾರವನ್ನು ನೀಡಲಾಗಿತ್ತು. ಈ ಸವಾರನಿಗೆ ಒಂದು ಮಹಾಖಡ್ಗವನ್ನೂ ಕೊಡಲಾಗಿತ್ತು.

ಆ ಕುರಿಮರಿಯು ಮೂರನೆಯ ಮುದ್ರೆಯನ್ನು ತೆಗೆಯಿತು. ಆಗ ಮೂರನೆಯ ಜೀವಿಯು, “ಬಾ” ಎಂದು ಹೇಳುವುದನ್ನು ನಾನು ಕೇಳಿದೆನು. ನಾನು ನೋಡಿದಾಗ, ನನ್ನ ಮುಂದೆ ಒಂದು ಕಪ್ಪು ಕುದುರೆಯಿರುವುದು ನನಗೆ ಕಾಣಿಸಿತು. ಆ ಕುದುರೆಯ ಮೇಲಿದ್ದ ಸವಾರನು ತನ್ನ ಕೈಯಲ್ಲಿ ಎರಡು ತಕ್ಕಡಿಗಳನ್ನು ಹಿಡಿದಿದ್ದನು. ಆಗ ಒಬ್ಬನ ಸ್ವರವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಆ ನಾಲ್ಕು ಜೀವಿಗಳಿದ್ದ ಸ್ಥಳದಿಂದ ಈ ಧ್ವನಿಯು ಹೊರ ಹೊಮ್ಮಿತು. ಆ ಧ್ವನಿಯು, “ಒಂದು ದಿನದ ಕೆಲಸಕ್ಕೆ ಒಂದು ಕಿಲೋಗ್ರಾಂ ಗೋಧಿ. ಒಂದು ದಿನದ ಕೆಲಸಕ್ಕೆ ಮೂರು ಕಿಲೋಗ್ರಾಂ ಬಾರ್ಲಿ. ಆದರೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಕೆಡಿಸಬೇಡಿ!” ಎಂದು ಹೇಳಿತು.

ಆ ಕುರಿಮರಿಯು ನಾಲ್ಕನೆಯ ಮುದ್ರೆಯನ್ನು ತೆರೆಯಿತು. ಆಗ ನಾಲ್ಕನೆಯ ಜೀವಿಯು, “ಬಾ” ಎಂದು ಹೇಳಿದ ಧ್ವನಿಯು ನನಗೆ ಕೇಳಿಸಿತು. ನಾನು ನೋಡಿದಾಗ, ನನ್ನ ಮುಂದೆ ಒಂದು ಬೂದುಬಣ್ಣದ ಕುದುರೆಯಿರುವುದು ನನಗೆ ಕಾಣಿಸಿತು. ಆ ಕುದುರೆಯ ಮೇಲೆ ಕುಳಿತಿದ್ದ ಸವಾರನೇ ಮೃತ್ಯು.[a] ಅವನ ಹಿಂದೆ ಪಾತಾಳ ಎಂಬುವನು ಬಂದನು. ಅವರಿಗೆ ಭೂಮಿಯ ಕಾಲುಭಾಗದ ಮೇಲೆ ಅಧಿಕಾರವನ್ನು ನೀಡಲಾಯಿತು. ಕತ್ತಿಯಿಂದಲೂ ಬರಗಾಲದಿಂದಲೂ ರೋಗಗಳಿಂದಲೂ ಮತ್ತು ಲೋಕದ ಮೇಲಿರುವ ಕಾಡುಮೃಗಗಳಿಂದಲೂ ಜನರನ್ನು ಕೊಲ್ಲುವ ಅಧಿಕಾರವನ್ನು ಅವರಿಗೆ ನೀಡಲಾಯಿತು.

ಕುರಿಮರಿಯು ಐದನೆಯ ಮುದ್ರೆಯನ್ನು ತೆರೆಯಿತು. ಆಗ ಯಜ್ಞವೇದಿಕೆಯ ಕೆಳಗೆ ಕೆಲವು ಆತ್ಮಗಳಿರುವುದನ್ನು ನಾನು ನೋಡಿದೆನು. ದೇವರ ಸಂದೇಶಕ್ಕೂ ತಾವು ಸ್ವೀಕರಿಸಿ ಕೊಂಡ ಸತ್ಯಕ್ಕೂ ನಂಬಿಗಸ್ತರಾಗಿದ್ದ ಕಾರಣ ಕೊಲ್ಲಲ್ಪಟ್ಟವರ ಆತ್ಮಗಳೇ ಅವು. 10 ಈ ಆತ್ಮಗಳು, “ಪವಿತ್ರನಾದ ಮತ್ತು ಸತ್ಯವಂತನಾದ ಪ್ರಭುವೇ, ನಮ್ಮನ್ನು ಕೊಂದ ಜನರಿಗೆ ತೀರ್ಪು ನೀಡಲು ಮತ್ತು ಅವರನ್ನು ದಂಡಿಸಲು ನೀನು ಎಷ್ಟು ಕಾಲ ತೆಗೆದುಕೊಳ್ಳುವೆ?” ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದವು. 11 ಆ ಆತ್ಮಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ಬಿಳಿ ನಿಲುವಂಗಿಯನ್ನು ಕೊಡಲಾಯಿತು. ಇನ್ನೂ ಸ್ವಲ್ಪಕಾಲ ಕಾಯುವಂತೆ ಅವುಗಳಿಗೆ ತಿಳಿಸಲಾಯಿತು. ಅವರ ಸಹೋದರರಲ್ಲಿ ಕೆಲವರು ಇನ್ನೂ ಕ್ರಿಸ್ತನ ಸೇವೆಯಲ್ಲಿದ್ದಾರೆ. ಅವರೂ ಕೊಲ್ಲಲ್ಪಡಬೇಕು. ಈ ಕೊಲೆಗಳೆಲ್ಲಾ ಮುಗಿಯುವ ತನಕ ಕಾಯಬೇಕೆಂದು ಆ ಆತ್ಮಗಳಿಗೆ ಹೇಳಲಾಯಿತು.

12 ಆ ಕುರಿಮರಿಯು ಆರನೆಯ ಮುದ್ರೆಯನ್ನು ತೆರೆಯುವುದನ್ನು ನಾನು ನೋಡುತ್ತಲೇ ಇದ್ದೆನು. ಆಗ ಮಹಾಭೂಕಂಪವಾಯಿತು. ಸೂರ್ಯನು ಕಪ್ಪು ಕಂಬಳಿಯಂತೆ ಕಪ್ಪಾದನು. ಪೂರ್ಣಚಂದ್ರನು ರಕ್ತದಂತೆ ಕೆಂಪಾದನು. 13 ಆಕಾಶದಲ್ಲಿದ್ದ ನಕ್ಷತ್ರಗಳು, ಬಿರುಗಾಳಿ ಬೀಸಿದಾಗ ಅಂಜೂರದ ಹಣ್ಣುಗಳು ಮರದಿಂದ ಭೂಮಿಯ ಮೇಲೆ ಉದುರುವಂತೆ ಉದುರಿದವು. 14 ಆಕಾಶವು ವಿಭಾಗಗೊಂಡು ಸುರುಳಿಯಂತೆ ಸುತ್ತಲ್ಪಟ್ಟಿತು. ಪ್ರತಿಯೊಂದು ಬೆಟ್ಟ ಮತ್ತು ದ್ವೀಪಗಳು ತಮ್ಮ ನೆಲೆಯಿಂದ ಚಲಿಸಿದವು.

15 ಆಗ ಲೋಕದ ರಾಜರುಗಳೂ ಅಧಿಪತಿಗಳೂ ಸೇನಾಧಿಪತಿಗಳೂ ಶ್ರೀಮಂತರೂ ಬಲಿಷ್ಠರೂ ಪ್ರತಿಯೊಬ್ಬ ಗುಲಾಮನೂ ಸ್ವತಂತ್ರ ಪ್ರಜೆಯೂ ಗವಿಗಳಲ್ಲಿ ಮತ್ತು ಬೆಟ್ಟಗಳ ಮೇಲಿನ ಬಂಡೆಗಳ ಮರೆಯಲ್ಲಿ ಅಡಗಿಕೊಂಡರು. 16 ಆ ಜನರು ಬೆಟ್ಟಗಳಿಗೆ ಮತ್ತು ಬಂಡೆಗಳಿಗೆ, “ನಮ್ಮ ಮೇಲೆ ಬೀಳಿರಿ. ಸಿಂಹಾಸನದ ಮೇಲೆ ಕುಳಿತಿರುವಾತನ ದೃಷ್ಟಿಯಿಂದ ನಮ್ಮನ್ನು ಮರೆಮಾಡಿ; ಕುರಿಮರಿಯಾದಾತನ ಕೋಪದಿಂದ ನಮ್ಮನ್ನು ಮರೆಮಾಡಿ; 17 ಆತನ ಕೋಪವು ಪ್ರಕಟವಾಗುವ ಮಹಾದಿನವು ಬಂದುಬಿಟ್ಟಿದೆ. ಆ ಕೋಪದ ಎದುರಿನಲ್ಲಿ ನಿಲ್ಲಲು ಯಾರಿಗೂ ಸಾಧ್ಯವಿಲ್ಲ” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International