Old/New Testament
ಇಸ್ರೇಲ್ ಮತ್ತು ಯೆಹೂದವು ಪಾಪದಲ್ಲಿ ಬೀಳಲು ಅವರ ನಾಯಕರೇ ಕಾರಣ
5 “ಯಾಜಕರೇ, ಇಸ್ರೇಲ್ ಜನಾಂಗವೇ, ಅರಸನ ಪರಿವಾರದವರೇ, ನನ್ನ ಮಾತುಗಳಿಗೆ ಕಿವಿಗೊಡಿರಿ. ಯಾಕೆಂದರೆ ನಿಮಗೆ ನ್ಯಾಯತೀರ್ಪು ಬಂದಿದೆ.
“ಮಿಚ್ಪದಲ್ಲಿ ನೀವು ಉರುಲಿನಂತೆ ಇದ್ದಿರಿ. ತಾಬೋರಿನಲ್ಲಿ ನೆಲದ ಮೇಲೆ ಹರಡಿಸಿದ್ದ ಬಲೆಯಂತೆ ಇದ್ದಿರಿ. 2 ನೀವು ಅನೇಕಾನೇಕ ಕೆಟ್ಟ ಸಂಗತಿಗಳನ್ನು ಮಾಡಿದ್ದೀರಿ. ಆದ್ದರಿಂದ ನಿಮ್ಮೆಲ್ಲರನ್ನು ನಾನು ಶಿಕ್ಷಿಸುತ್ತೇನೆ. 3 ಎಫ್ರಾಯೀಮೇ, ನನಗೆ ಗೊತ್ತುಂಟು. ಇಸ್ರೇಲ್ ಮಾಡಿದ ವಿಷಯಗಳೆಲ್ಲವನ್ನು ನಾನು ಬಲ್ಲೆನು. ಎಫ್ರಾಯೀಮೇ, ನೀನು ಈಗಲೂ ಸೂಳೆಯಂತೆ ವರ್ತಿಸುತ್ತಿರುವೆ. ತನ್ನ ಪಾಪಗಳಿಂದ ಇಸ್ರೇಲ್ ಮಲಿನವಾಗಿದೆ. 4 ಇಸ್ರೇಲಿನ ಜನರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾರೆ. ಆ ದುಷ್ಕೃತ್ಯಗಳು ಅವರನ್ನು ತಮ್ಮ ದೇವರ ಬಳಿಗೆ ಹಿಂತಿರುಗಿ ಬಾರದಂತೆ ಮಾಡುತ್ತಿವೆ. ಅವರು ಯಾವಾಗಲೂ ಇತರ ದೇವರುಗಳ ಹಿಂದೆ ಹೇಗೆ ಹೋಗೋಣ ಎಂದು ಮಾರ್ಗವನ್ನು ಹುಡುಕುತ್ತಿದ್ದಾರೆ. ಅವರಿಗೆ ಯೆಹೋವನ ಪರಿಚಯವಿಲ್ಲ. 5 ಇಸ್ರೇಲಿನ ಹೆಮ್ಮೆಯು ಅವರಿಗೆ ವಿರುದ್ಧವಾಗಿ ಸಾಕ್ಷಿನೀಡುತ್ತದೆ. ಇಸ್ರೇಲ್ ಮತ್ತು ಎಫ್ರಾಯೀಮ್ ತಮ್ಮ ಪಾಪಗಳಿಂದಲೇ ಮುಗ್ಗರಿಸುವರು. ಯೆಹೂದವೂ ಅವರೊಂದಿಗೆಯೇ ಮುಗ್ಗರಿಸುವದು.
6 “ಜನರ ನಾಯಕರು ಯೆಹೋವನನ್ನು ಹುಡುಕಾಡುವರು. ಅವರು ತಮ್ಮ ಕುರಿದನಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವರು. ಆದರೆ ಅವರು ಯೆಹೋವನನ್ನು ಕಂಡುಕೊಳ್ಳುವದಿಲ್ಲ. ಯಾಕೆಂದರೆ ಆತನು ಅವರನ್ನು ಬಿಟ್ಟುಹೋಗಿರುತ್ತಾನೆ. 7 ಅವರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಅವರ ಮಕ್ಕಳು ಅನ್ಯರಿಗೆ ಹುಟ್ಟಿದ್ದಾರೆ. ಆದ್ದರಿಂದ ಈಗ ಆತನು ಅವರನ್ನೂ ಅವರ ದೇಶವನ್ನೂ ತಿರುಗಿ ನಾಶಮಾಡುವನು.”
ಇಸ್ರೇಲಿನ ನಾಶನದ ಪ್ರವಾದನೆ
8 “ಗಿಬ್ಯದಲ್ಲಿ ಕೊಂಬನ್ನೂದು,
ರಾಮದಲ್ಲಿ ತುತ್ತೂರಿಯನ್ನೂದು.
ಬೇತಾವೆನಿನಲ್ಲಿ ಎಚ್ಚರಿಕೆಯನ್ನು ನೀಡು.
ಬೆನ್ಯಾಮೀನನೇ, ವೈರಿಯು ನಿನ್ನ ಹಿಂದೆಯೇ ಇದ್ದಾನೆ.
9 ಶಿಕ್ಷೆಯು ವಿಧಿಸಲ್ಪಡುವಾಗ
ಎಫ್ರಾಯೀಮ್ ಬರಿದಾಗುವದು.
ಇದು ಖಂಡಿತವಾಗಿಯೂ ನೆರವೇರುವದೆಂದು
ಯೆಹೋವನಾದ ನಾನು ಇಸ್ರೇಲ್ ಕುಟುಂಬಗಳಿಗೆ ತಿಳಿಸುತ್ತಿದ್ದೇನೆ.
10 ಯೆಹೂದದ ನಾಯಕರು ಪರರ ಆಸ್ತಿಯನ್ನು ದೋಚುವ ಕಳ್ಳರಂತಿದ್ದಾರೆ.
ಯೆಹೋವನಾದ ನಾನು ಅವರ ಮೇಲೆ ನನ್ನ ಕೋಪವನ್ನು ನೀರಿನಂತೆ ಸುರಿಸುವೆನು.
11 ಎಫ್ರಾಯೀಮ್ ಶಿಕ್ಷಿಸಲ್ಪಡುವನು.
ಅವನು ದ್ರಾಕ್ಷಿಹಣ್ಣಿನಂತೆ ನಜ್ಜುಗುಜ್ಜಾಗುವನು.
ಕಾರಣವೇನೆಂದರೆ, ಅವನು ಹೊಲಸನ್ನು ಹಿಂಬಾಲಿಸಲು ತೀರ್ಮಾನಿಸಿದ್ದಾನೆ.
12 ನಾನು ಎಫ್ರಾಯೀಮನನ್ನು ನಾಶಮಾಡುವೆನು, ನುಸಿಯು ಬಟ್ಟೆಯನ್ನು ನಾಶಮಾಡುವ ರೀತಿಯಲ್ಲಿ,
ಮರದ ತುಂಡನ್ನು ಗೆದ್ದಲು ನಾಶಮಾಡುವಂತೆ ಯೆಹೂದವನ್ನು ನಾಶಮಾಡುವೆನು.
13 ಎಫ್ರಾಯೀಮು ತನ್ನ ವ್ಯಾಧಿಯನ್ನು ನೋಡಿದನು.
ಯೆಹೂದವು ತನ್ನ ಗಾಯಗಳನ್ನು ನೋಡಿದನು.
ಆಮೇಲೆ ಸಹಾಯಕ್ಕಾಗಿ ಅಶ್ಶೂರ್ಯರ ಬಳಿಗೆ ಹೋದರು.
ಆ ಮಹಾ ಅರಸನ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಆದರೆ ಆ ಅರಸನು ನಿಮ್ಮನ್ನು ಗುಣಮಾಡನು.
ನಿಮ್ಮ ಗಾಯಗಳನ್ನು ಗುಣಮಾಡಲು ಸಾಧ್ಯವಿಲ್ಲ.
14 ಯಾಕೆಂದರೆ ನಾನು ಎಫ್ರಾಯೀಮನಿಗೆ ಸಿಂಹದಂತಿರುವೆನು.
ಯೆಹೂದ ಜನಾಂಗದವರಿಗೆ ನಾನು ಪ್ರಾಯದ ಸಿಂಹದಂತಿರುವೆನು.
ಹೌದು, ಯೆಹೋವನಾದ ನಾನು ಅವರನ್ನು ಹರಿದು ಚೂರುಚೂರಾಗಿ ಮಾಡುವೆನು.
ನಾನು ಅವರನ್ನು ಎತ್ತಿಕೊಂಡು ಹೋಗುವೆನು.
ಯಾರೂ ಅವರನ್ನು ನನ್ನಿಂದ ರಕ್ಷಿಸಲಾರರು.
15 ಜನರು ತಮ್ಮ ದೋಷವನ್ನು ಒಪ್ಪಿಕೊಳ್ಳುವ ತನಕ
ನಾನು ನನ್ನ ಸ್ಥಳಕ್ಕೆ ಹಿಂತಿರುಗಿ ಹೋಗುವೆನು,
ಅವರು ನನ್ನನ್ನು ಹುಡುಕುವರು.
ಹೌದು, ತಮ್ಮ ಸಂಕಟದಲ್ಲಿ ನನ್ನನ್ನು ಹುಡುಕಲು ಅತಿಯಾಗಿ ಪ್ರಯತ್ನಿಸುವರು.”
ಯೆಹೋವನ ಬಳಿಗೆ ಹಿಂತಿರುಗಿ ಬರುವಾಗ ದೊರಕುವ ಬಹುಮಾನ
6 “ಬನ್ನಿರಿ, ನಾವು ಯೆಹೋವನ ಬಳಿಗೆ ಹಿಂತಿರುಗೋಣ.
ಆತನು ನಮಗೆ ಗಾಯ ಮಾಡಿದರೂ ಗುಣಮಾಡುವನು.
ನಮ್ಮ ಗಾಯಗಳಿಗೆ ಬಟ್ಟೆಯನ್ನು ಸುತ್ತುವನು.
2 ಎರಡು ದಿವಸಗಳ ತರುವಾಯ ನಮ್ಮನ್ನು ತಿರುಗಿ ಜೀವಂತ ಮಾಡುವನು.
ಮೂರನೇ ದಿವಸದಲ್ಲಿ ನಮ್ಮನ್ನು ಎಬ್ಬಿಸುವನು.
ಆಗ ನಾವು ಆತನ ಸಮೀಪದಲ್ಲಿ ವಾಸಿಸಬಹುದು.
3 ಯೆಹೋವನ ವಿಷಯವಾಗಿ ನಾವು ಕಲಿಯೋಣ.
ಆತನನ್ನು ಅರಿತುಕೊಳ್ಳಲು ಅತಿಯಾಗಿ ಪ್ರಯತ್ನಿಸೋಣ.
ಸೂರ್ಯೋದಯ ಆಗುತ್ತದೆಯೆಂಬುದು ನಮಗೆ ಗೊತ್ತಿರುವಂತೆಯೇ ಆತನು ಬರುವುದೂ ನಮಗೆ ಗೊತ್ತಿದೆ.
ವಸಂತಕಾಲದ ಮಳೆಯಂತೆ ಯೆಹೋವನು ಬರುವನು.”
ಜನರು ನಿಷ್ಠಾವಂತರಲ್ಲ
4 “ಎಫ್ರಾಯೀಮೇ, ನಿನಗೆ ನಾನು ಏನು ಮಾಡಲಿ?
ಯೆಹೂದವೇ, ನಿನಗೆ ನಾನು ಏನು ಮಾಡಬೇಕು?
ನಿನ್ನ ನಂಬಿಗಸ್ತಿಕೆಯು ಮುಂಜಾನೆಯ ಮಂಜಿನಂತಿದೆ.
ನಿನ್ನ ನಂಬಿಗಸ್ತಿಕೆಯು ಇಬ್ಬನಿಯಂತಿದೆ.
ಅದು ಬೇಗನೆ ಇಲ್ಲದೆಹೋಗುವದು.
5 ನಾನು ಪ್ರವಾದಿಗಳ ಮೂಲಕ ಜನರಿಗೆ ಕಟ್ಟಳೆಗಳನ್ನು ವಿಧಿಸಿದೆನು.
ನನ್ನ ಅಪ್ಪಣೆಯ ಮೇರೆಗೆ ಜನರು ಕೊಲ್ಲಲ್ಪಟ್ಟರು.
6 ಯಾಕೆಂದರೆ ನನಗೆ ವಿಧೇಯತೆಯಿಂದ
ಕೂಡಿದ ಪ್ರೀತಿಯು ಬೇಕೇ ಹೊರತು ಯಜ್ಞವಲ್ಲ.
ಜನರು ತರುವ ಸರ್ವಾಂಗಹೋಮಗಳಿಗಿಂತಲೂ
ಅವರು ನನ್ನನ್ನು (ದೇವರನ್ನು) ತಿಳಿದುಕೊಳ್ಳಬೇಕೆಂಬುದೇ ನನಗೆ ಇಷ್ಟ.
7 ಆದರೆ ಜನರು ಆದಾಮನಂತೆ ಒಡಂಬಡಿಕೆಯನ್ನು ಮುರಿದುಹಾಕಿದರು.
ಅವರ ದೇಶದಲ್ಲಿ ಅವರು ನನಗೆ ದ್ರೋಹಿಗಳಾದರು.
8 ಗಿಲ್ಯಾದು ಕೆಟ್ಟತನವನ್ನು ನಡಿಸುವ ಜನರಿಂದ ಕೂಡಿದ ನಗರವಾಗಿದೆ.
ಜನರು ಇತರರನ್ನು ಮೋಸಗೊಳಿಸಿ ಕೊಲೆಮಾಡಿರುತ್ತಾರೆ.
9 ಕಳ್ಳರು ದಾರಿಯಲ್ಲಿ ಹೊಂಚುಹಾಕುತ್ತಾ
ಜನರನ್ನು ಸೂರೆಮಾಡಲು ಕಾಯುತ್ತಿರುತ್ತಾರೆ.
ಅದೇ ರೀತಿಯಲ್ಲಿ ಶೆಕೆಮಿಗೆ ಹೋಗುವ ದಾರಿಯಲ್ಲಿ ಯಾಜಕರು ಕಾಯುತ್ತಾ ಹಾದುಹೋಗುತ್ತಿರುವ ಜನರ ಮೇಲೆ ಬೀಳುವರು.
ಅವರು ದುಷ್ಕೃತ್ಯಗಳನ್ನು ಮಾಡಿರುತ್ತಾರೆ.
10 ಇಸ್ರೇಲ್ ಜನಾಂಗದಲ್ಲಿ ಅತೀ ಭಯಂಕರ ಸಂಗತಿಗಳನ್ನು ನಾನು ನೋಡಿರುತ್ತೇನೆ.
ಎಫ್ರಾಯೀಮು ದೇವರಿಗೆ ದ್ರೋಹಿಯಾದನು.
ಇಸ್ರೇಲು ಪಾಪದಿಂದ ಹೊಲಸಾಗಿದೆ.
11 ಯೆಹೂದವೇ, ನಿನಗೆ ಸುಗ್ಗೀಕಾಲವು ನೇಮಕವಾಗಿದೆ,
ಸೆರೆವಾಸದಿಂದ ನನ್ನ ಜನರನ್ನು ನಾನು ಹಿಂತಿರುಗಿ ಕರೆತಂದಾಗ ಅದು ಸಂಭವಿಸುವದು.
7 “ನಾನು ಇಸ್ರೇಲನ್ನು ಗುಣಪಡಿಸುವೆನು.
ಆಗ ಎಫ್ರಾಯೀಮನು ಪಾಪಮಾಡಿದ್ದಾನೆಂದು ಜನರಿಗೆ ತಿಳಿದುಬರುವದು.
ಜನರಿಗೆ ಸಮಾರ್ಯದವರ ಸುಳ್ಳು ತಿಳಿದುಬರುವದು.
ಆ ನಗರದಲ್ಲಿ ಕಳ್ಳರು ಬರುತ್ತಾ ಹೋಗುತ್ತಾ ಇರುವದನ್ನು ಜನರು ತಿಳಿಯುವರು.
2 ನಾನು ಅವರ ದುಷ್ಟತ್ವವನ್ನು ನೆನಪಿನಲ್ಲಿಟ್ಟಿರುತ್ತೇನೆಂಬುದನ್ನು ಅವರು ನಂಬುವದಿಲ್ಲ.
ಅವರು ಮಾಡಿದ ದುಷ್ಟತನವು ಸುತ್ತಲೂ ಕಾಣಿಸುವದು.
ನಾನು ಅವರ ಪಾಪಗಳನ್ನು ಸ್ಪಷ್ಟವಾಗಿ ನೋಡುತ್ತೇನೆ.
3 ಅವರ ದುಷ್ಟತನವು ಅವರ ಅರಸರನ್ನು ಸಂತಸಗೊಳಿಸುತ್ತದೆ.
ಅವರ ಸುಳ್ಳುಗಳು ಅವರ ನಾಯಕರನ್ನು ಸಂತೋಷಪಡಿಸುತ್ತವೆ.
4 ರೊಟ್ಟಿಯನ್ನು ಸುಡಲು ರೊಟ್ಟಿಗಾರನು ಹಿಟ್ಟನ್ನು ನಾದುವನು.
ರೊಟ್ಟಿಯು ಶಾಖದಿಂದ ಉಬ್ಬುತ್ತಿರುವಾಗ ರೊಟ್ಟಿಗಾರನು ಒಲೆಯನ್ನು ಮತ್ತಷ್ಟು ಉರಿಸುವುದಿಲ್ಲ.
ಇಸ್ರೇಲರಾದರೋ ಹಾಗಲ್ಲ,
ಅವರು ಒಲೆಯನ್ನು ಮತ್ತಷ್ಟು ಉರಿಸುತ್ತಾರೆ.
5 ನಮ್ಮ ಅರಸನ ದಿವಸದಲ್ಲಿ ನಾಯಕರು ಅತಿಯಾಗಿ ಕುಡಿದು ರೋಗಗ್ರಸ್ತರಾಗುವರು.
ಅವರು ದ್ರಾಕ್ಷಾರಸದಿಂದ ಅಮಲೇರಿದವರಾಗಿ
ದೇವರನ್ನು ಅಪಹಾಸ್ಯಮಾಡುವ ಜನರೊಂದಿಗೆ ಒಪ್ಪಂದ ಮಾಡಿಕೊಳ್ಳುವರು.
6 ಜನರು ಗುಪ್ತವಾಗಿ ಯೋಜನೆಯನ್ನು ತಯಾರಿಸುವರು.
ಉರಿಯುವ ಒಲೆಯಂತೆ ಅವರ ಹೃದಯವು ಉತ್ಸಾಹಗೊಳ್ಳುವುದು.
ಅವರ ಉತ್ಸಾಹವು ರಾತ್ರಿಯೆಲ್ಲಾ ಉರಿಯುವುದು.
ಅದು ಮುಂಜಾನೆಯಲ್ಲಿ ಧಗಧಗಿಸುವ ಬೆಂಕಿಯ ಕಾವಿನಂತಿರುವದು.
7 ಅವರು ಬಿಸಿ ಮಾಡಲ್ಪಟ್ಟ ಕುಲುಮೆಯಂತಿರುವರು.
ಅವರು ತಮ್ಮನ್ನು ಆಳುವವರನ್ನು ನಾಶಮಾಡಿದರು.
ಅವರ ರಾಜರುಗಳೆಲ್ಲಾ ಬಿದ್ದುಹೋದರು.
ಅವರಲ್ಲಿ ಒಬ್ಬರಾದಲೂ ಸಹಾಯಕ್ಕಾಗಿ ನನಗೆ ಮೊರೆಯಿಡಲಿಲ್ಲ.”
ತಾನು ನಾಶವಾಗುತ್ತೇನೆಂದು ಇಸ್ರೇಲಿಗೆ ಗೊತ್ತಿಲ್ಲ
8 “ಎಫ್ರಾಯೀಮು ಬೇರೆ ದೇಶಗಳೊಂದಿಗೆ ಬೆರೆತುಹೋಗುತ್ತದೆ.
ಎಫ್ರಾಯೀಮು ತಿರುವಿಹಾಕದ ಚಪಾತಿಯಂತಿದೆ.
9 ಅನ್ಯರು ಎಫ್ರಾಯೀಮನ ಶಕ್ತಿಯನ್ನು ಮುರಿಯುವರು.
ಆದರೆ ಅವನಿಗೆ ಅದು ತಿಳಿದಿರುವದಿಲ್ಲ.
ಎಫ್ರಾಯೀಮನ ತಲೆಯಲ್ಲಿ ನರೆಕೂದಲು ಬಂದಾಗ್ಯೂ
ಅದಕ್ಕೆ ತಿಳಿವಳಿಕೆ ಬಂದಿರುವುದಿಲ್ಲ.
10 ಎಫ್ರಾಯೀಮನ ಹೆಮ್ಮೆಯು ಅವನಿಗೆ ವಿರುದ್ಧವಾಗಿ ಸಾಕ್ಷಿ ಕೊಡುತ್ತದೆ.
ಜನರಿಗೆ ನಾನಾ ತರದ ಸಂಕಟಗಳು ಬಂದಾಗ್ಯೂ
ಅವರು ತಮ್ಮ ದೇವರಾದ ಯೆಹೋವನ ಬಳಿಗೆ ಹೋಗಲಿಲ್ಲ.
ಜನರು ತಮ್ಮ ಸಹಾಯಕ್ಕಾಗಿ ಆತನಿಗೆ ಮೊರೆಯಿಡಲಿಲ್ಲ.
11 ಹೀಗೆ ಎಫ್ರಾಯೀಮ್ ತಿಳಿವಳಿಕೆ ಇಲ್ಲದ ಮೂರ್ಖ ಪಾರಿವಾಳದಂತಾಗಿದೆ.
ಜನರು ಸಹಾಯಕ್ಕಾಗಿ ಈಜಿಪ್ಟನ್ನು ಕರೆದರು,
ಅಶ್ಶೂರ್ಯದ ಕಡೆಗೆ ಓಡಿದರು.
12 ಅವರು ಆ ದೇಶಗಳಿಗೆ ಹೋಗುವಾಗ
ನಾನು ಅವರನ್ನು ಉರುಲಿನೊಳಗೆ ಸಿಕ್ಕಿಸುವೆನು.
ನನ್ನ ಬಲೆಯನ್ನು ಅವರ ಮೇಲೆ ಬೀಸುವೆನು.
ಆಕಾಶದ ಪಕ್ಷಿಗಳ ರೀತಿಯಲ್ಲಿ ಅವರನ್ನು ಕೆಳಗೆ ಬೀಳಿಸುವೆನು.
ಅವರು ಮಾಡಿದ ಒಪ್ಪಂದಕ್ಕಾಗಿ ನಾನು ಅವರನ್ನು ಶಿಕ್ಷಿಸುವೆನು.
13 ಅವರು ನನ್ನನ್ನು ಬಿಟ್ಟು ತೊಲಗಿದರು. ಇದು ಅವರಿಗೆ ಕೆಡುಕು ಉಂಟುಮಾಡುವದು.
ಅವರು ನನಗೆ ವಿಧೇಯರಾಗಲು ಇಷ್ಟಪಡಲಿಲ್ಲ. ಆದ್ದರಿಂದ ಅವರು ನಾಶವಾಗುವರು.
ನಾನು ಅವರನ್ನು ರಕ್ಷಿಸಿ ಕಾಪಾಡಿದ್ದಾಗ್ಯೂ
ಅವರು ನನಗೆ ವಿರುದ್ಧವಾಗಿ ಸುಳ್ಳಾಡಿದರು.
14 ಹೃದಯಪೂರ್ವಕವಾಗಿ ಅವರು ನನ್ನನ್ನು ಕರೆಯಲಿಲ್ಲ.
ಹೌದು, ಅವರು ತಮ್ಮ ಹಾಸಿಗೆಗಳ ಮೇಲೆ ಅಳುವರು.
ಆಹಾರಧಾನ್ಯ, ಹೊಸ ದ್ರಾಕ್ಷಾರಸವನ್ನು ಕೇಳುವಾಗ, ಬೇರೆಯವರ ದೇಶಗಳಲ್ಲಿ ಆಹಾರಕ್ಕಾಗಿ ಅಲೆದಾಡುವಾಗ ಅವರು ಅಳುವರು.
ಆದರೆ ತಮ್ಮ ಹೃದಯಗಳಲ್ಲಿ ಅವರು ನನ್ನಿಂದ ದೂರವಾಗಿದ್ದಾರೆ.
15 ನಾನು ಅವರಿಗೆ ತರಬೇತಿಕೊಟ್ಟು ಅವರ ತೋಳುಗಳನ್ನು ಬಲಪಡಿಸಿದೆನು.
ಆದರೆ ನನಗೆ ವಿರುದ್ಧವಾಗಿ ಅವರು ದುರಾಲೋಚನೆಯನ್ನು ಮಾಡಿದರು.
16 ಅವರು ದೇವರಲ್ಲದ್ದಕ್ಕೆ ತಿರುಗಿಕೊಂಡರು.
ಮೋಸದ ಬಿಲ್ಲಿನಂತೆ ಅವರಾದರು.
ಅವರ ನಾಯಕರು ತಮ್ಮ ಶಕ್ತಿಯ ಬಗ್ಗೆ ಹೆಚ್ಚಳಪಟ್ಟರು.
ಆದರೆ ಅವರು ಕತ್ತಿಯಲ್ಲಿ ಸಾಯುವರು.
ಆಗ ಈಜಿಪ್ಟಿನ ಜನರು
ಅವರನ್ನು ನೋಡಿ ನಗಾಡುವರು.
ವಿಗ್ರಹಾರಾಧನೆಯು ಇಸ್ರೇಲರ ನಾಶನಕ್ಕೆ ಕಾರಣ
8 “ಯೆಹೋವನಾಲಯದ ಕಾವಲುಗಾರನಂತೆ ತುತ್ತೂರಿಯನ್ನು ನಿನ್ನ ತುಟಿಗಳಲ್ಲಿಟ್ಟು ಊದು. ಇಸ್ರೇಲರು ನನ್ನ ಕಟ್ಟಳೆಗಳಿಗೆ ಅವಿಧೇಯರಾಗಿ ನನ್ನ ಒಡಂಬಡಿಕೆಯನ್ನು ಮುರಿದಿದ್ದಾರೆ. 2 ‘ನಮ್ಮ ದೇವರೇ, ಇಸ್ರೇಲಿನಲ್ಲಿರುವ ನಾವು ನಿನ್ನನ್ನು ಅರಿತಿದ್ದೇವೆ’ ಎಂದು ಅವರು ಕಿರುಚುವರು. 3 ಆದರೆ ಇಸ್ರೇಲ್ ಒಳ್ಳೇದನ್ನು ನಿರಾಕರಿಸಿತು. ಆದ್ದರಿಂದ ಶತ್ರುಗಳು ಅವರನ್ನು ಓಡಿಸಿದರು. 4 ಇಸ್ರೇಲರು ತಮಗಾಗಿ ಅರಸನನ್ನು ಆರಿಸಿಕೊಂಡರು. ಆದರೆ ಸಲಹೆಗಳಿಗಾಗಿ ನನ್ನ ಬಳಿಗೆ ಬರಲಿಲ್ಲ. ಇಸ್ರೇಲರು ತಮ್ಮ ನಾಯಕರನ್ನು ಆರಿಸಿಕೊಂಡರು. ಆದರೆ ನಾನು ತಿಳಿದಿರುವ ನಾಯಕರನ್ನು ಆರಿಸಿಕೊಳ್ಳಲಿಲ್ಲ. ಇಸ್ರೇಲರು ತಮಗೆ ವಿಗ್ರಹಗಳನ್ನು ತಯಾರಿಸಲು ತಮ್ಮ ಬೆಳ್ಳಿಬಂಗಾರವನ್ನು ಉಪಯೋಗಿಸಿದರು. ಆದ್ದರಿಂದ ಅವರು ನಾಶವಾಗುವರು. 5-6 ಯೆಹೋವನು ನೀವು ಮಾಡಿಕೊಂಡ ಬಸವನನ್ನು ನಿರಾಕರಿಸಿದ್ದಾನೆ. ಸಮಾರ್ಯವೇ, ಯೆಹೋವನು ಹೇಳುವುದೇನೆಂದರೆ, ‘ನಾನು ಇಸ್ರೇಲರ ವಿರುದ್ಧವಾಗಿ ತುಂಬಾ ಕೋಪಗೊಂಡಿದ್ದೇನೆ.’ ಇಸ್ರೇಲಿನ ಜನರು ಅವರ ಪಾಪಗಳಿಗಾಗಿ ಶಿಕ್ಷಿಸಲ್ಪಡುವರು. ಶಿಲ್ಪಿಯು ಅವರ ವಿಗ್ರಹಗಳನ್ನು ಮಾಡಿದನು. ಅವು ದೇವರಲ್ಲ. ಸಮಾರ್ಯದ ಬಸವನ ವಿಗ್ರಹಗಳು ಚೂರುಚೂರಾಗಿ ಒಡೆಯಲ್ಪಡುವವು. 7 ಇಸ್ರೇಲರು ಅಜ್ಞಾನದ ಕಾರ್ಯ ಮಾಡಿದರು. ಅವರು ಗಾಳಿಯನ್ನು ನೆಡಲು ಪ್ರಯತ್ನಿಸಿದರು. ಆದರೆ ಅವರಿಗೆ ತೊಂದರೆಗಳೇ ಪ್ರಾಪ್ತವಾಗುವದು. ಅವರು ಸುಂಟರಗಾಳಿಯನ್ನು ಕೊಯ್ಯುವರು. ಹೊಲದಲ್ಲಿ ಧಾನ್ಯವು ಬೆಳೆಯುವದು. ಆದರೆ ಅವು ಆಹಾರವನ್ನು ಕೊಡುವದಿಲ್ಲ. ಒಂದುವೇಳೆ ಅದು ಕೊಟ್ಟರೂ ಅಪರಿಚಿತರು ಅದನ್ನು ತಿನ್ನುವರು.
8 “ಇಸ್ರೇಲ್ ನಾಶವಾಯಿತು.
ಅವರು ಯಾರಿಗೂ ಬೇಡವಾದ ಪಾತ್ರೆಯನ್ನು ಬಿಸಾಡಿದಂತೆ
ಜನಾಂಗಗಳ ಮಧ್ಯದಲ್ಲಿ ಚದರಿಸಲ್ಪಟ್ಟರು.
9 ಎಫ್ರಾಯೀಮನು ತನ್ನ ಪ್ರೇಮಿಗಳ ಬಳಿಗೆ ಹೋದನು.
ಕಾಡುಕತ್ತೆಯಂತೆ ಅಶ್ಶೂರ್ಯದ ಕಡೆಗೆ ಅಡ್ಡಾಡುತ್ತಾ ಹೋದನು.
10 ಜನಾಂಗಗಳ ಮಧ್ಯೆ ಇರುವ ತನ್ನ ಪ್ರಿಯತಮರ ಕಡೆಗೆ ಇಸ್ರೇಲು ಹೋದನು.
ಆದರೆ ನಾನು ಇಸ್ರೇಲರನ್ನು ಒಟ್ಟುಸೇರಿಸುವೆನು.
ಆದರೆ ಅದರ ಮೊದಲು ಆ ಬಲಿಷ್ಠ ರಾಜನ ಕೈಯಿಂದ
ಅವರ ಸಂಕಟ ಅನುಭವಿಸಬೇಕು.
ಇಸ್ರೇಲು ಯೆಹೋವನನ್ನು ಮರೆತು ವಿಗ್ರಹಗಳನ್ನು ಪೂಜಿಸಿದ್ದು
11 “ಎಫ್ರಾಯೀಮ್ ಹೆಚ್ಚೆಚ್ಚಾಗಿ ಯಜ್ಞವೇದಿಕೆಗಳನ್ನು ಕಟ್ಟಿಸಿದನು.
ಅದು ಪಾಪವಾಗಿತ್ತು.
ಆ ವೇದಿಕೆಗಳ ಮೇಲೆಯೇ ಅವರು ಪಾಪಮಾಡಿದರು.
12 ಎಫ್ರಾಯೀಮನಿಗೆ ನಾನು ಸಾವಿರಾರು ವಿಧಿನಿಯಮಗಳನ್ನು ಬರೆದರೂ
ಅವನು ಅವುಗಳನ್ನು ಬೇರೆಯವರಿಗಾಗಿ ಬರೆದದೆ ಎಂದು ತಿಳಿದುಕೊಳ್ಳುವನು.
13 ಇಸ್ರೇಲರು ಯಜ್ಞವನ್ನು ಪ್ರೀತಿಸುತ್ತಾರೆ.
ಅವರು ಮಾಂಸವನ್ನು ಯಜ್ಞಮಾಡಿ ತಿನ್ನುತ್ತಾರೆ.
ಯೆಹೋವನು ಅವರ ಯಜ್ಞವನ್ನು ಸ್ವೀಕರಿಸುವುದಿಲ್ಲ.
ಅವರ ಪಾಪಗಳನ್ನು ತನ್ನ ನೆನಪಿಗೆ ತಂದು
ಅವರನ್ನು ಶಿಕ್ಷಿಸುವನು.
ಅವರು ಈಜಿಪ್ಟಿಗೆ ಸೆರೆಯಾಳುಗಳಾಗಿ ಒಯ್ಯಲ್ಪಡುವರು.
14 ಇಸ್ರೇಲರು ರಾಜರ ಅರಮನೆಗಳನ್ನು ಕಟ್ಟಿದರು.
ಆದರೆ ಅದರ ನಿರ್ಮಾಣಿಕನನ್ನು ಮರೆತರು.
ಯೆಹೂದವು ಕೋಟೆಗಳನ್ನು ಕಟ್ಟುತ್ತಾನೆ;
ಆದರೆ ಯೆಹೂದದ ಪಟ್ಟಣಗಳ ಮೇಲೆ ನಾನು ಬೆಂಕಿಯನ್ನು ಕಳುಹಿಸುವೆನು.
ಆ ಬೆಂಕಿಯು ಅರಮನೆಗಳನ್ನು ನಾಶಮಾಡುವದು.”
ಎಫೆಸದಲ್ಲಿರುವ ಸಭೆಗೆ ಯೇಸುವಿನ ಪತ್ರ
2 “ಎಫೆಸದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದಿರುವಾತನು ಮತ್ತು ಏಳು ದೀಪಸ್ತಂಭಗಳ ನಡುವೆ ತಿರುಗಾಡುವಾತನು ನಿನಗೆ ಇವುಗಳನ್ನು ಹೇಳುತ್ತಾನೆ.
2 “ನೀನು ಮಾಡುತ್ತಿರುವುದು ನನಗೆ ತಿಳಿದಿದೆ. ನೀನು ಕಷ್ಟಪಟ್ಟು ಕೆಲಸಮಾಡುತ್ತಾ ತಾಳ್ಮೆಯಿಂದಿರುವೆ. ನೀನು ಕೆಟ್ಟ ಜನರನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ನನಗೆ ತಿಳಿದಿದೆ. ಅಪೊಸ್ತಲರಾಗಿಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ, ಅವರು ಸುಳ್ಳುಗಾರರೆಂಬುದನ್ನು ಕಂಡುಹಿಡಿದಿರುವೆ. 3 ನೀನು ತಾಳ್ಮೆಯಿಂದ ಸತತವಾಗಿ ಪ್ರಯತ್ನಿಸುತ್ತಿರುವೆ; ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಬೇಸರಪಡದೆ ಸಹಿಸಿಕೊಂಡೆ.
4 “ಆದರೆ ನಿನ್ನ ವಿರುದ್ಧವಾಗಿ ನಾನು ಹೇಳುವುದೇನೆಂದರೆ: ನಿನ್ನ ಮೊದಲಿನ ಪ್ರೀತಿಯನ್ನು ತೊರೆದುಬಿಟ್ಟಿರುವೆ. 5 ಆದ್ದರಿಂದ ನೀನು ಎಲ್ಲಿಂದ ಬಿದ್ದಿದ್ದೀ ಎಂಬುದನ್ನು ನೆನಪು ಮಾಡಿಕೊ; ಮನಸ್ಸನ್ನು ಪರಿವರ್ತಿಸಿಕೊ. ನೀನು ಮೊದಲು ಮಾಡಿದ ಕಾರ್ಯಗಳನ್ನು ಮಾಡು. ನೀನು ಪರಿವರ್ತನೆಗೊಳ್ಳದಿದ್ದರೆ ನಾನು ನಿನ್ನಲ್ಲಿಗೆ ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದುಬಿಡುತ್ತೇನೆ. 6 ಆದರೆ ನೀನು ಯೋಗ್ಯವಾದ ಒಂದನ್ನು ಮಾಡುತ್ತಿರುವೆ. ಅದೇನೆಂದರೆ, ನಿಕೊಲಾಯಿತರು[a] ಮಾಡುವ ಕಾರ್ಯಗಳನ್ನು ನೀನು ದ್ವೇಷಿಸುತ್ತಿ. ನಾನು ಸಹ ಅವರ ಕಾರ್ಯಗಳನ್ನು ದ್ವೇಷಿಸುತ್ತೇನೆ.
7 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಯಾವನು ಜಯಗಳಿಸುತ್ತಾನೋ ಅವನಿಗೆ ತಿನ್ನಲು ಜೀವದಾಯಕ ಮರದ ಹಣ್ಣನ್ನು ಕೊಡುತ್ತೇನೆ. ಈ ಮರವು ದೇವರ ತೋಟದಲ್ಲಿದೆ.
ಸ್ಮುರ್ನದಲ್ಲಿರುವ ಸಭೆಗೆ ಯೇಸುವಿನ ಪತ್ರ
8 “ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ಆದಿಯೂ ಅಂತ್ಯವೂ ಆಗಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ. ಸತ್ತು ಜೀವಂತವಾಗಿ ಎದ್ದುಬಂದಾತನು ಆತನೇ.
9 “ನಿನ್ನ ಸಂಕಟಗಳನ್ನು ನಾನು ಬಲ್ಲೆನು. ನೀನು ಬಡವನೆಂಬುದೂ ನನಗೆ ತಿಳಿದಿದೆ. ಆದರೆ ನೀನು ನಿಜವಾಗಿಯೂ ಶ್ರೀಮಂತ. ನಿನ್ನ ಬಗ್ಗೆ ಕೆಲವು ಜನರು ಹೇಳುವ ಕೆಟ್ಟ ಸಂಗತಿಗಳು ನನಗೆ ತಿಳಿದಿವೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಿಜವಾದ ಯೆಹೂದ್ಯರಲ್ಲ. ಅವರು ಸೈತಾನನ ಸಮಾಜದವರಾಗಿದ್ದಾರೆ. 10 ನಿನಗೆ ಸಂಭವಿಸುವ ಸಂಗತಿಗಳ ವಿಷಯದಲ್ಲಿ ಭಯಪಡಬೇಡ. ನಾನು ನಿನಗೆ ಹೇಳುವುದೇನೆಂದರೆ, ಸೈತಾನನು ನಿಮ್ಮಲ್ಲಿ ಕೆಲವರನ್ನು ಪರೀಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸುತ್ತಾನೆ. ನೀವು ಹತ್ತು ದಿನಗಳ ಕಾಲ ಸಂಕಟವನ್ನು ಅನುಭವಿಸುವಿರಿ. ನೀನು ಸಾಯಬೇಕಾದರೂ ನಂಬಿಗಸ್ತನಾಗಿದ್ದರೆ, ನಾನು ನಿನಗೆ ಜೀವವೆಂಬ ಕಿರೀಟವನ್ನು ದಯಪಾಲಿಸುವೆನು.
11 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಜಯಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.
ಪೆರ್ಗಮದಲ್ಲಿರುವ ಸಭೆಗೆ ಯೇಸುವಿನ ಪತ್ರ
12 “ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ಹರಿತವಾದ ಇಬ್ಬಾಯಿಖಡ್ಗವನ್ನು ಹೊಂದಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ.
13 “ನೀನು ಎಲ್ಲಿ ವಾಸಮಾಡುತ್ತಿರುವೆ ಎಂಬುದು ನನಗೆ ತಿಳಿದಿದೆ. ಸೈತಾನನ ಸಿಂಹಾಸನ ವಿರುವ ಕಡೆಯಲ್ಲಿ ನೀನು ವಾಸಿಸುತ್ತಿರುವೆ. ಆದರೆ ನೀನು ನನಗೆ ನಂಬಿಗಸ್ತನಾಗಿರುವೆ. ಅಂತಿಪನ ಕಾಲದಲ್ಲಿಯೂ ನೀನು ನನ್ನಲ್ಲಿಟ್ಟಿರುವ ನಂಬಿಕೆಯನ್ನು ತಿಳಿಸಲು ನಿರಾಕರಿಸಲಿಲ್ಲ. ನಿನ್ನ ಪಟ್ಟಣದಲ್ಲಿ ಕೊಲ್ಲಲ್ಪಟ್ಟ ಅಂತಿಪನು ನನ್ನ ನಂಬಿಗಸ್ತ ಸಾಕ್ಷಿಯಾಗಿದ್ದನು. ನಿನ್ನ ನಗರ ಸೈತಾನನು ವಾಸಿಸುವ ನಗರವಾಗಿದೆ.
14 “ಆದರೆ ನಿನ್ನ ವಿರುದ್ಧವಾಗಿ ಹೇಳಬೇಕಾದ ಕೆಲವು ಸಂಗತಿಗಳಿವೆ. ನಿನ್ನ ಸಭೆಯಲ್ಲಿ ಬಿಳಾಮನ ದುರ್ಬೋಧನೆಗಳನ್ನು ಅನುಸರಿಸುವ ಜನರಿದ್ದಾರೆ. ಇಸ್ರೇಲಿನ ಜನರನ್ನು ಹೇಗೆ ಪಾಪಕ್ಕೆ ಒಳಗಾಗುವಂತೆ ಮಾಡಬೇಕೆಂಬುದನ್ನು ಬಿಳಾಮನು ಬಾಲಾಕನಿಗೆ ದುರ್ಬೋಧನೆ ಮಾಡಿದನು. ಆದ್ದರಿಂದ ಇಸ್ರೇಲರು ವಿಗ್ರಹಗಳಿಗೆ ಅರ್ಪಿತವಾದ ಆಹಾರವನ್ನು ತಿನ್ನುವುದರ ಮೂಲಕವಾಗಿಯೂ ಲೈಂಗಿಕ ಪಾಪಗಳನ್ನು ಮಾಡುವುದರ ಮೂಲಕವಾಗಿಯೂ ಪಾಪ ಮಾಡಿದರು. 15 ನಿನ್ನ ಸಭೆಯಲ್ಲಿಯೂ ಇದೇ ರೀತಿ ನಡೆಯುತ್ತಿದೆ. ನಿಕೊಲಾಯಿತರ ಬೋಧನೆಗಳನ್ನು ಅನುಸರಿಸುವ ಜನರು ನಿನ್ನಲ್ಲಿದ್ದಾರೆ. 16 ಆದ್ದರಿಂದ ನಿನ್ನ ಮನಸ್ಸನ್ನು ಪರಿವರ್ತಿಸಿಕೊ! ಇಲ್ಲವಾದರೆ, ನಾನು ತ್ವರಿತವಾಗಿ ನಿನ್ನಲ್ಲಿಗೆ ಬಂದು, ನನ್ನ ಬಾಯಿಂದ ಹೊರಗೆ ಬರುವ ಖಡ್ಗದಿಂದ ಆ ಜನರ ವಿರುದ್ಧ ಹೋರಾಡುತ್ತೇನೆ.
17 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.
“ಜಯಗಳಿಸಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಅಡಗಿಸಿಟ್ಟಿರುವ ಮನ್ನವನ್ನು[b] ಕೊಡುತ್ತೇನೆ. ಅವನಿಗೆ ನಾನು ಬಿಳುಪಾದ ಕಲ್ಲನ್ನು ಕೊಡುತ್ತೇನೆ. ಆ ಕಲ್ಲಿನ ಮೇಲೆ ಹೊಸ ಹೆಸರನ್ನು ಕೆತ್ತಲಾಗಿದೆ. ಈ ಹೊಸ ಹೆಸರು ಯಾರಿಗೂ ತಿಳಿದಿಲ್ಲ. ಈ ಕಲ್ಲನ್ನು ಪಡೆದುಕೊಂಡ ವ್ಯಕ್ತಿಯು ಮಾತ್ರ ಹೊಸ ಹೆಸರನ್ನು ತಿಳಿದುಕೊಳ್ಳುತ್ತಾನೆ.
ಥುವತೈರದಲ್ಲಿರುವ ಸಭೆಗೆ ಯೇಸುವಿನ ಪತ್ರ
18 “ಥುವತೈರದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ದೇವಕುಮಾರನು ಈ ಸಂಗತಿಗಳನ್ನು ಹೇಳುತ್ತಾನೆ. ಬೆಂಕಿಯ ಉರಿಯಂತೆ ಪ್ರಜ್ವಲಿಸುವ ಕಣ್ಣುಗಳೂ ಹೊಳೆಯುವ ತಾಮ್ರದಂತಿರುವ ಪಾದಗಳೂ ಇರುವಾತನು, ನಿನಗೆ ಇವುಗಳನ್ನು ಹೇಳುತ್ತಾನೆ.
19 “ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಪ್ರೀತಿ, ನಂಬಿಕೆ, ಸೇವೆ ಮತ್ತು ತಾಳ್ಮೆಗಳು ನನಗೆ ತಿಳಿದಿವೆ. ಈಗ ನೀನು ಮೊದಲಿಗಿಂತ ಹೆಚ್ಚಿಗೆ ಮಾಡುತ್ತಿರುವುದನ್ನೂ ಬಲ್ಲೆನು. 20 ಆದರೆ ನಿನ್ನ ವಿರುದ್ಧವಾಗಿ ಇವುಗಳನ್ನು ಹೇಳಬೇಕಾಗಿದೆ. ಯೆಜೆಬೇಲ್ ಎಂಬ ಸ್ತ್ರೀಯು ತನ್ನ ಇಷ್ಟದಂತೆ ಮಾಡಲು ಅವಕಾಶಕೊಟ್ಟಿರುವೆ. ಆಕೆಯು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು ತನ್ನ ಬೋಧನೆಗಳಿಂದ ನನ್ನ ಸೇವಕರನ್ನು ನನ್ನಿಂದ ದೂರ ಸೆಳೆಯುತ್ತಿದ್ದಾಳೆ. ಲೈಂಗಿಕ ಪಾಪಗಳನ್ನು ಮಾಡುವಂತೆಯೂ ವಿಗ್ರಹಗಳಿಗೆ ಅರ್ಪಿತವಾದ ಆಹಾರವನ್ನು ತಿನ್ನುವಂತೆಯೂ ಆಕೆಯು ನನ್ನ ಜನರನ್ನು ಪ್ರೇರೇಪಿಸುತ್ತಿದ್ದಾಳೆ.[c] 21 ತನ್ನ ಮನಸ್ಸನ್ನು ಪರಿವರ್ತಿಸಿಕೊಂಡು ಪಾಪಗಳಿಂದ ದೂರ ಸರಿಯಲು ನಾನು ಆಕೆಗೆ ಸಮಯ ಕೊಟ್ಟರೂ ಪರಿವರ್ತನೆ ಹೊಂದಲು ಆಕೆಗೆ ಇಷ್ಟವಿಲ್ಲ.
22 “ಆದ್ದರಿಂದ ಆಕೆಯು ಮಹಾಸಂಕಟಪಡುತ್ತಾ ಹಾಸಿಗೆಯ ಮೇಲೆ ಬಿದ್ದಿರುವಂತೆ ಮಾಡುತ್ತೇನೆ. ಅವಳ ಜೊತೆಯಲ್ಲಿ ಲೈಂಗಿಕ ಪಾಪ ಮಾಡುವ ಜನರೆಲ್ಲರೂ ಮಹಾಸಂಕಟವನ್ನು ಅನುಭವಿಸುತ್ತಾರೆ. ಅವಳು ಮಾಡುವ ಕಾರ್ಯಗಳಿಗೆ ಅವರು ವಿಮುಖರಾಗದಿದ್ದರೆ ನಾನು ಇದನ್ನು ಈಗಲೇ ಮಾಡುತ್ತೇನೆ. 23 ನಾನು ಅವಳ ಹಿಂಬಾಲಕರನ್ನು ಕೊಲ್ಲುತ್ತೇನೆ. ಮನುಷ್ಯರ ಅಂತರಂಗವನ್ನೂ ಅವರ ಆಲೋಚನೆಗಳನ್ನೂ ತಿಳಿದಿರುವಾತನು ನಾನೇ ಎಂಬುದನ್ನು ಆಗ ಎಲ್ಲಾ ಸಭೆಗಳವರು ತಿಳಿದುಕೊಳ್ಳುವರು. ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ನೀಡುತ್ತೇನೆ.
24 “ಆದರೆ ಥುವತೈರದಲ್ಲಿರುವ ಇನ್ನಿತರರಿಗೆ ನಾನು ಹೇಳುವುದೇನೆಂದರೆ, ನೀವು ಆಕೆಯ ಬೋಧನೆಗಳನ್ನು ಅನುಸರಿಸಲಿಲ್ಲ, ‘ಸೈತಾನನ ಅಗಾಧವಾದ ರಹಸ್ಯಗಳು’ ಎಂದು ಅವರು ಹೇಳುವ ಸಂಗತಿಗಳನ್ನು ನೀವು ಕಲಿತುಕೊಂಡಿಲ್ಲ. ಆದ್ದರಿಂದ ನಾನು ಬೇರೊಂದು ಹೊರೆಯನ್ನು ನಿಮ್ಮ ಮೇಲೆ ಹೊರಿಸುವುದಿಲ್ಲ. 25 ನಾನು ಬರುವ ತನಕ ಈಗ ನೀವಿರುವಂತೆಯೇ ಇರಿ.
26 “ಜಯಗಳಿಸುವವನಿಗೆ ಮತ್ತು ನಾನು ಅಪೇಕ್ಷಿಸುವುದನ್ನು ಕೊನೆಯವರೆಗೆ ಮಾಡುವವನಿಗೆ ಜನಾಂಗಗಳ ಮೇಲಿನ ಅಧಿಕಾರವನ್ನು ನೀಡುತ್ತೇನೆ: 27 ‘ಅವನು ಕಬ್ಬಿಣದ ಕೋಲಿನಿಂದ ಅವರನ್ನು ಆಳುತ್ತಾನೆ. ಮಣ್ಣಿನ ಕುಡಿಕೆಗಳೋ ಎಂಬಂತೆ ಅವರನ್ನು ಚೂರುಚೂರು ಮಾಡುತ್ತಾನೆ.’[d] 28 ನಾನು ನನ್ನ ತಂದೆಯಿಂದ ಪಡೆದುಕೊಂಡ ಶಕ್ತಿ ಇದೇ. ನಾನು ಅವನಿಗೆ ಉದಯಸೂಚಕ ನಕ್ಷತ್ರವನ್ನು ನೀಡುತ್ತೇನೆ. 29 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.
Kannada Holy Bible: Easy-to-Read Version. All rights reserved. © 1997 Bible League International