Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 27-29

ತೂರ್ ಒಂದು ದೊಡ್ಡ ವಾಣಿಜ್ಯ ಕೇಂದ್ರ

27 ಯೆಹೋವನ ವಾಕ್ಯವು ನನಗೆ ತಿರುಗಿ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ತೂರಿನ ವಿಷಯವಾದ ಶೋಕಗೀತೆಯನ್ನು ಹಾಡು. ಅದರ ಬಗ್ಗೆ ಈ ರೀತಿಯಾಗಿ ಹೇಳು:

“‘ತೂರೇ, ನೀನು ಸಮುದ್ರಕ್ಕೆ ಬಾಗಿಲು.
    ಅನೇಕ ದೇಶಗಳಿಗೆ ನೀನು ವ್ಯಾಪಾರಿ.
    ಕರಾವಳಿಯ ಅನೇಕ ದೇಶಗಳಿಗೆ ನೀನು ಪ್ರಯಾಣಿಸುವೆ.’
ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.
ತೂರೇ, ನೀನು ಅತಿ ಸುಂದರಳೆಂದು ಭಾವಿಸಿರುವೆ.
    ನೀನು ಪರಿಪೂರ್ಣ ಸುಂದರಳೆಂದು ತಿಳಿದಿರುವೆ.
ಭೂಮಧ್ಯ ಸಮುದ್ರವು ನಿನ್ನ ಸುತ್ತಲೂ ಮೇರೆಯಂತಿದೆ.
ನಿನ್ನನ್ನು ಕಟ್ಟಿದವರು ಅಂದವಾಗಿಯೇ ಕಟ್ಟಿದರು.
    ನಿನ್ನಿಂದ ಹೊರಡುವ ಹಡಗುಗಳಂತೆ ನೀನು ಸುಂದರವಾಗಿರುವೆ.
ನಿನ್ನನ್ನು ಕಟ್ಟಿದವರು ಸೆನೀರ್ ಬೆಟ್ಟದ
    ತುರಾಯಿ ಮರಗಳನ್ನು ಹಲಗೆಗಳಿಗಾಗಿ ಉಪಯೋಗಿಸಿದರು.
ಲೆಬನೋನಿನ ದೇವದಾರು ಮರವನ್ನು
    ಹಾಯಿ ಮರವನ್ನಾಗಿ ಉಪಯೋಗಿಸಿದರು.
ಬಾಷಾನಿನ ಅಲ್ಲೋನ್ ಮರಗಳಿಂದ
    ಹುಟ್ಟುಗಳನ್ನು ತಯಾರಿಸಿದರು.
ನಿನ್ನ ಮೇಲ್ಮಾಳಿಗೆಯನ್ನು ಕಿತ್ತೀಮ್ ದ್ವೀಪದ ತಿಲಕದ ಮರಗಳಿಂದ ಮಾಡಿದರು.
    ಅದನ್ನು ದಂತಗಳಿಂದ ಶೃಂಗರಿಸಿದರು.
ಈಜಿಪ್ಟಿನಲ್ಲಿ ತಯಾರಿಸಿದ ಬಣ್ಣದ ನಾರುಮಡಿಯನ್ನು
    ನಿನ್ನ ಹಾಯಿಗಳಿಗಾಗಿ ಉಪಯೋಗಿಸಿದರು.
    ಆ ಹಾಯಿಯು ನಿನ್ನ ಧ್ವಜವಾಯಿತು.
ನಿನ್ನ ಮೇಲ್ಮಾಳಿಗೆಯ ಹೊದಿಕೆಯು ನೀಲ ಮತ್ತು ಧೂಮ್ರ ವರ್ಣದವುಗಳಾಗಿದ್ದವು.
    ಅವು ಸೈಪ್ರಸ್ ದ್ವೀಪದಿಂದ ಬಂದವುಗಳಾಗಿದ್ದವು.
ಚೀದೋನ್ ಮತ್ತು ಅರ್ವಾದಿನ ಜನರು ನಿನ್ನ ಹಡಗುಗಳಿಗೆ ಹುಟ್ಟುಹಾಕುವವರಾಗಿದ್ದರು.
    ತೂರೇ, ನಿನ್ನ ಜ್ಞಾನಿಗಳು ಹಡಗುಗಳನ್ನು ನಡಿಸುವವರಾಗಿದ್ದರು.
ಗೆಬಲಿನ ಹಿರಿಯರೂ ಜ್ಞಾನಿಗಳೂ
    ನಿನ್ನ ಹಡಗುಗಳ ಬಿರುಕುಗಳನ್ನು ಸರಿಪಡಿಸುವವರಾಗಿದ್ದರು.
ಸಾಗರದ ಹಡಗುಗಳೂ ಅದರ ನಾವಿಕರೂ
    ನಿನ್ನೊಂದಿಗೆ ವ್ಯಾಪಾರ ಮಾಡಲು ಬಂದರು.

10 “‘ಪರ್ಶಿಯ, ಲೂದ್ ಮತ್ತು ಪೂಟ್‌ನ ಜನರು ನಿನ್ನ ಸೈನ್ಯದಲ್ಲಿರುವರು. ಅವರು ಯುದ್ಧವೀರರು. ಅವರು ನಿನ್ನ ಗೋಡೆಗಳಲ್ಲಿ ತಮ್ಮ ಗುರಾಣಿ ಮತ್ತು ಶಿರಸ್ತ್ರಾಣಗಳನ್ನು ತೂಗು ಹಾಕಿದರು. ನಿನ್ನ ನಗರಕ್ಕೆ ಘನತೆಯನ್ನು ಅವರು ತಂದರು. 11 ಅರ್ವಾದ್ ಮತ್ತು ಸಿಲಿಸಿಯಾದ ಜನರು ನಿನ್ನ ಕೋಟೆಗೋಡೆಗಳಲ್ಲಿ ಕಾವಲಿಗಿರುವರು. ಗಮ್ಮಾದಿನಿಂದ ಬಂದ ಜನರು ನಿನ್ನ ಬುರುಜುಗಳಲ್ಲಿರುವರು. ನಿನ್ನ ಸೌಂದರ್ಯವನ್ನು ಅವರು ಪರಿಪೂರ್ಣ ಮಾಡಿದರು.

12 “‘ತಾರ್ಷೀಷ್ ನಿನ್ನ ಉತ್ತಮ ವ್ಯಾಪಾರ ಕೇಂದ್ರವಾಗಿತ್ತು. ಅವರು ತಮ್ಮ ಬೆಳ್ಳಿ, ಕಬ್ಬಿಣ, ತವರ ಮತ್ತು ಸೀಸ ಲೋಹಗಳನ್ನು ಕೊಟ್ಟು ನಿನ್ನಿಂದ ವಸ್ತುಗಳನ್ನು ಕೊಂಡುಕೊಂಡರು. 13 ಗ್ರೀಸ್, ತುರ್ಕಿ ಮತ್ತು ಕಪ್ಪು ಸಮುದ್ರದ ಸುತ್ತಲಿರುವ ದೇಶಗಳವರು ನಿನ್ನಲ್ಲಿಗೆ ವ್ಯಾಪಾರಕ್ಕಾಗಿ ಬಂದರು. ಅವರು ನಿನ್ನ ವಸ್ತುಗಳಿಗೆ ಬದಲಾಗಿ ಗುಲಾಮರನ್ನೂ ತಾಮ್ರವನ್ನೂ ಕೊಟ್ಟರು. 14 ತೋಗರ್ಮ ದೇಶದ ಜನರು ನೀನು ಮಾರುವ ವಸ್ತುಗಳಿಗೆ ಕುದುರೆ, ಯುದ್ಧದ ಕುದುರೆಗಳು, ಹೇಸರಕತ್ತೆಗಳನ್ನು ಬದಲಿಕೊಟ್ಟರು. 15 ರೋಧೆ ದ್ವೀಪದ ಜನರು ನಿನ್ನೊಂದಿಗೆ ವ್ಯಾಪಾರ ಮಾಡಿದರು. ನೀನು ಅನೇಕ ಕಡೆಗಳಲ್ಲಿ ವ್ಯಾಪಾರ ಮಾಡಿದಿ. ಜನರು ದಂತವನ್ನೂ ಬೀಟೆ ಮರಗಳನ್ನೂ ತಂದು ನಿನ್ನೊಂದಿಗೆ ವ್ಯಾಪಾರ ಮಾಡಿದರು. 16 ನಿನ್ನಲ್ಲಿ ಅನೇಕ ಬೆಲೆಬಾಳುವ ವಸ್ತುಗಳಿದ್ದುದರಿಂದ ಅರಾಮ್ ನಿನ್ನೊಂದಿಗೆ ವ್ಯಾಪಾರ ಮಾಡಿತು. ಅವರು ಇಂದ್ರನೀಲ, ಧೂಮ್ರ ಬಣ್ಣದ ಬಟ್ಟೆ, ಕಸೂತಿ ಕೆಲಸ, ನಯವಾದ ಬಟ್ಟೆ, ಹವಳ, ಕೆಂಪು ಹರಳು ಇತ್ಯಾದಿಗಳನ್ನು ಕೊಟ್ಟು ವಸ್ತುಗಳನ್ನು ನಿನ್ನಿಂದ ಕೊಂಡುಕೊಂಡರು.

17 “‘ಇಸ್ರೇಲ್ ಮತ್ತು ಯೆಹೂದ ದೇಶದವರು ನಿನ್ನೊಂದಿಗೆ ವ್ಯಾಪಾರ ಮಾಡಿದರು. ಅವರು ನಿನ್ನ ವಸ್ತುಗಳಿಗೆ ಗೋಧಿ, ಆಲೀವ್, ಅಂಜೂರ, ಜೇನು, ಎಣ್ಣೆ ಮತ್ತು ಮುಲಾಮುಗಳನ್ನು ಕೊಟ್ಟರು. 18 ದಮಸ್ಕವೂ ನಿನ್ನ ಒಳ್ಳೆಯ ಗಿರಾಕಿಯಾಗಿತ್ತು. ನೀನು ಸಂಪಾದಿಸಿಕೊಂಡಿದ್ದ ಅನೇಕ ಒಳ್ಳೆಯ ವಸ್ತುಗಳಿಗಾಗಿ ಅವರು ನಿನ್ನೊಂದಿಗೆ ವ್ಯಾಪಾರ ಮಾಡಿದರು. ಅವರು ಹೆಲ್ಬೋನಿನ ದ್ರಾಕ್ಷಾರಸವನ್ನು ಮತ್ತು ಉಣ್ಣೆಯನ್ನು ಆ ವಸ್ತುಗಳಿಗಾಗಿ ಮಾರಿದರು. 19 ಅಲ್ಲದೆ ಊಜಾಲಿನ ದ್ರಾಕ್ಷಾರಸವನ್ನು, ಉಕ್ಕನ್ನು, ದಾಲ್ಚಿನ್ನಿ ಮತ್ತು ಕಬ್ಬನ್ನು ಆ ವಸ್ತುಗಳಿಗಾಗಿ ವ್ಯಾಪಾರ ಮಾಡಿದರು. 20 ದೆದಾನಿನ ನಿನ್ನ ಜನರು ಒಳ್ಳೆಯ ವ್ಯಾಪಾರಸ್ಥರು. ಅವರು ಸವಾರಿ ಕುದುರೆಗಳನ್ನೂ ಜೇನನ್ನೂ ಬಟ್ಟೆಗಳನ್ನೂ ಕೊಟ್ಟು ಕೊಂಡುಕೊಂಡರು. 21 ಅರಾಬ್ಯರು ಮತ್ತು ಕೇದಾರಿನವರು ಕುರಿಮರಿಗಳನ್ನು, ಟಗರು ಮತ್ತು ಆಡುಗಳನ್ನು ಕೊಟ್ಟು ವ್ಯಾಪಾರ ಮಾಡಿದರು. 22 ಶೆಬ ಮತ್ತು ರಗ್ಮದ ವ್ಯಾಪಾರಿಗಳು ನಿನ್ನೊಂದಿಗೆ ವ್ಯಾಪಾರ ಮಾಡಿದರು. ಅವರು ನಿನಗೆ ಸಂಬಾರ ಜೀನಸು, ರತ್ನಗಳು ಮತ್ತು ಚಿನ್ನವನ್ನು ಬದಲಿಕೊಟ್ಟರು. 23 ಮತ್ತು ಹಾರಾನ್‌ಕನ್ನೆ, ಎದೆನ್, ಶೆಬದ ವ್ಯಾಪಾರಿಗಳು, ಅಶ್ಶೂರ್ ಮತ್ತು ಕಿಲ್ಮದ್ ಊರಿನವರು ನಿನ್ನೊಂದಿಗೆ ವ್ಯಾಪಾರ ಮಾಡಿದರು. 24 ಅವರು ನಿನ್ನೊಂದಿಗೆ ಉತ್ತಮ ಬಟ್ಟೆಗಳು, ಕಸೂತಿ ಕೆಲಸಗಳು, ಬಣ್ಣಬಣ್ಣದ ಜಮಖಾನೆಗಳು, ಹುರಿದ ಹಗ್ಗಗಳು, ದೇವದಾರು ಮರಗಳಿಂದ ಮಾಡಿದ ವಸ್ತುಗಳು ಇವುಗಳೊಂದಿಗೆ ವ್ಯಾಪಾರ ನಡಿಸಿದರು. 25 ತಾರ್ಷೀಷಿನ ಹಡಗುಗಳು ನೀನು ಮಾರಿದ ವಸ್ತುಗಳನ್ನು ಕೊಂಡೊಯ್ದವು.

“‘ತೂರೇ, ನೀನು ಆ ಸರಕು ಸಾಗಾಣಿಕೆಯ ಹಡಗುಗಳಂತಿರುವೆ.
ಸಮುದ್ರಮಧ್ಯದಲ್ಲಿ ಅನೇಕ ಐಶ್ವರ್ಯಗಳಿಂದ ತುಂಬಿದವಳಾಗಿದ್ದೀ.
26 ನಿನ್ನನ್ನು ಹುಟ್ಟುಹಾಕುವವರು ಸಮುದ್ರದ ಬಹುದೂರ ನಿನ್ನನ್ನು ನಡಿಸಿದರು.
    ಆದರೆ ಪೂರ್ವದಿಂದ ಬಂದ ಬಲವುಳ್ಳ ಗಾಳಿಯು ನಿನ್ನನ್ನು ಮುರಿಯುವದು.
27 ನಿನ್ನ ಎಲ್ಲಾ ಐಶ್ವರ್ಯವು, ನಿನ್ನ ದಿನಸುಗಳು,
    ನಿನ್ನ ಸರಕುಗಳು, ನಿನ್ನ ನಾವಿಕರು, ನಿನ್ನ ಅಂಬಿಗರು, ನಿನ್ನ ಕಿಂಡಿಗಳನ್ನು ಭದ್ರಪಡಿಸುವವರು,
ನಿನ್ನ ವ್ಯಾಪಾರಿಗಳು, ನಿನ್ನ ಎಲ್ಲಾ ಸೈನಿಕರು, ನಿನ್ನ ಎಲ್ಲಾ ಸಿಬ್ಬಂದಿ ವರ್ಗದವರು
    ನಾಶನದ ದಿನದಲ್ಲಿ ಸಮುದ್ರದೊಳಗೆ ಮುಳುಗಿಹೋಗುವರು.

28 “‘ನಿನ್ನ ವ್ಯಾಪಾರಿಗಳನ್ನು ನೀನು ಬಹುದೂರ ಕಳುಹಿಸುವೆ.
    ಆ ಸ್ಥಳಗಳು ನಿನ್ನ ಹಡಗಿನ ನಾವಿಕನ ಕೂಗಾಟವನ್ನು ಕೇಳಿ ಭಯದಿಂದ ತತ್ತರಿಸುವವು.
29 ಹಡಗಿನ ಎಲ್ಲಾ ನಾವಿಕರು ನೀರಿಗೆ
    ಧುಮುಕಿ ಈಜುತ್ತಾ ದಡ ಸೇರುವರು.
30 ನಿನಗೋಸ್ಕರ ಅವರು ದುಃಖಿಸುತ್ತಾ ಅಳುವರು;
    ತಲೆಯ ಮೇಲೆ ಧೂಳನ್ನು ತೂರಿಕೊಂಡು ಬೂದಿರಾಶಿಯ ಮೇಲೆ ಹೊರಳಾಡುವರು.
31 ನಿನಗಾಗಿ ಶೋಕದಿಂದ ತಮ್ಮ ತಲೆಗಳನ್ನು ಬೋಳಿಸುವರು.
    ಶೋಕದ ಬಟ್ಟೆಗಳನ್ನು ಧರಿಸುವರು.
ತಮ್ಮ ಪ್ರಿಯರು ಸತ್ತಾಗ ಅಳುವಂತೆ ನಿನಗಾಗಿ ಅಳುವರು.

32 “‘ಅಳುತ್ತಾ ನಿನಗೆ ಈ ಶೋಕಗೀತೆಯನ್ನು ಹಾಡುವರು:

“‘ತೂರಿನಂತೆ ಯಾರಿಲ್ಲ.
    ಆದರೆ ತೂರ್ ಹಾಳಾಗಿಹೋಯಿತು, ಸಮುದ್ರ ಮಧ್ಯದಲ್ಲಿ ನಾಶವಾಯಿತು.
33 ನಿನ್ನ ವ್ಯಾಪಾರಿಗಳು ಸಮುದ್ರದಾಚೆ ಹೋದರು;
ನೀನು ಅನೇಕರನ್ನು ತೃಪ್ತಿಗೊಳಿಸಿದಿ.
ನಿನ್ನ ಐಶ್ವರ್ಯದಿಂದಲೂ ನೀನು ಮಾರಿದ ಸರಕುಗಳಿಂದಲೂ
    ನೀನು ಲೋಕದ ರಾಜರನ್ನು ಐಶ್ವರ್ಯವಂತರನ್ನಾಗಿ ಮಾಡಿದಿ.
34 ನೀನು ಈಗ ಸಮುದ್ರದ ನೀರಿನಿಂದ ಮುರಿದುಬಿದ್ದಿರುವೆ.
    ಆಳವಾದ ನೀರಿನಲ್ಲಿ ಮುಳುಗಿಸಲ್ಪಟ್ಟಿರುವೆ.
ನೀನು ಮಾರುವ ಸರಕುಗಳೂ
    ನಿನ್ನ ಜನರೂ ಬಿದ್ದುಹೋದರು.
35 ಕರಾವಳಿಯಲ್ಲಿ ವಾಸಿಸುವ ಜನರೆಲ್ಲರೂ
    ನಿನ್ನ ವಾರ್ತೆಯನ್ನು ಕೇಳಿ ಚಕಿತರಾದರು.
ಅವರ ರಾಜರು ದಂಗುಬಡಿದವರಾಗಿ ಭಯಭೀತರಾಗುವರು.
36 ಬೇರೆ ದೇಶಗಳಲ್ಲಿರುವ ವ್ಯಾಪಾರಿಗಳು
    ಆಶ್ಚರ್ಯದಿಂದ ಸಿಳ್ಳು ಹಾಕಿದರು.
ನಿನಗೆ ಸಂಭವಿಸಿದ ವಿಷಯಗಳು ಜನರಿಗೆ ಭೀತಿಯನ್ನುಂಟುಮಾಡಿತು.
    ಯಾಕೆಂದರೆ ನಿನ್ನ ಕಥೆ ಮುಗಿಯಿತು.
    ನಿನಗೆ ಅಂತ್ಯವಾಯಿತು. ಇನ್ನು ನೀನು ಕಾಣುವದಿಲ್ಲ.’”

ತಾನು ದೇವರಂತೆ ಎಂದು ತೂರ್ ನೆನಸಿತು

28 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ತೂರಿನ ರಾಜನಿಗೆ ಹೀಗೆ ಹೇಳು, ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ:

“‘ನೀನು ಬಹಳ ಹೆಮ್ಮೆಯುಳ್ಳವನು.
    “ನಾನು ದೇವರು ಎಂದು ಹೇಳುವೆ.
ಸಾಗರದ ಮಧ್ಯದಲ್ಲಿ ದೇವರುಗಳ ಸಿಂಹಾಸನದಲ್ಲಿ
    ನಾನು ಕೂತಿರುತ್ತೇನೆ ಎಂದು ಅನ್ನುವೆ.”

“‘ಆದರೆ ನೀನು ಮನುಷ್ಯನು, ದೇವರಲ್ಲ.
    ನೀನು ದೇವರೆಂದು ನೀನೇ ನೆನಸಿಕೊಳ್ಳುವೆ.
ನೀನು ದಾನಿಯೇಲನಿಗಿಂತ ಜಾಣನು ಎಂಬುದಾಗಿ ಭಾವಿಸುತ್ತಿ.
    ಎಲ್ಲಾ ರಹಸ್ಯಗಳು ನನಗೆ ಗೊತ್ತು ಎಂದು ನೀನು ನೆನಸುವೆ.
ನಿನ್ನ ಜ್ಞಾನ ಮತ್ತು ತಿಳುವಳಿಕೆಯಿಂದ ನೀನು ಐಶ್ವರ್ಯವನ್ನು ಕೂಡಿಹಾಕಿದ್ದೀ.
    ನಿನ್ನ ಖಜಾನೆಯಲ್ಲಿ ಬೆಳ್ಳಿಬಂಗಾರವನ್ನು ಶೇಖರಿಸಿದ್ದೀ.
ನಿನ್ನ ವ್ಯಾಪಾರದ ಜಾಣತನದಿಂದ ನಿನ್ನ ಐಶ್ವರ್ಯವು ಬೆಳೆಯುವಂತೆ ಮಾಡಿದ್ದೀ.
    ಆ ಐಶ್ವರ್ಯದ ಕಾರಣದಿಂದ ನೀನು ಹೆಮ್ಮೆಯಿಂದ ತುಂಬಿರುತ್ತೀ.

“‘ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
ತೂರ್, ನೀನು ದೇವರೆಂದು ನೆನಸಿಕೊಂಡಿಯಲ್ಲಾ?
ನಿನಗೆ ವಿರುದ್ಧವಾಗಿ ಯುದ್ಧ ಮಾಡಲು ಅಪರಿಚಿತರನ್ನು ಕರೆತರುವೆನು.
    ಅವರು ಎಲ್ಲಾ ಜನಾಂಗಗಳವರಿಗಿಂತ ಕ್ರೂರರು,
ಅವರು ತಮ್ಮ ಖಡ್ಗವನ್ನು ಎಳೆದು
    ನಿನ್ನ ಜ್ಞಾನದಿಂದ ಕೊಂಡುಕೊಂಡಿದ್ದ ಎಲ್ಲಾ ಬೆಲೆಬಾಳುವ
    ಅಪೂರ್ವ ವಸ್ತುಗಳನ್ನು ನಾಶಮಾಡುವರು.
ನಿನ್ನ ಘನತೆಯನ್ನು ಕೆಡಿಸಿಬಿಡುವರು. ಸಮಾಧಿಗೆ ನಿನ್ನನ್ನು ತರುವರು.
    ಸಮುದ್ರದಲ್ಲಿ ಸತ್ತ ನಾವಿಕನ ಸ್ಥಿತಿಯು ನಿನ್ನದಾಗುವದು.
ಆ ಮನುಷ್ಯನು ನಿನ್ನನ್ನು ಕೊಂದುಹಾಕುವನು.
    ಆಗಲೂ ನೀನು “ನಾನು ದೇವರು” ಎಂದು ಹೇಳುವಿಯಾ?
ಇಲ್ಲ. ಅವನು ನಿನ್ನನ್ನು ತನ್ನ ಅಧಿಕಾರದಲ್ಲಿರಿಸುವನು.
    ಆಗ ನೀನು “ಕೇವಲ ಮನುಷ್ಯನೇ” ಎಂದು ತಿಳಿಯುವಿ.
10 ಪರದೇಶಸ್ಥರು ನಿನ್ನನ್ನು ಪರದೇಶಿಯಂತೆ ನೋಡುವರು ಮತ್ತು ಕೊಲೆ ಮಾಡುವರು.
    ನಾನು ಆ ರೀತಿಯಾಗಿ ಮಾಡಬೇಕೆಂದು ಆಜ್ಞಾಪಿಸುವದರಿಂದ ನಿನಗೆ ಹಾಗೆ ಆಗುವದು.’”
ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.

11 ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 12 “ನರಪುತ್ರನೇ, ತೂರ್ ದೇಶದ ರಾಜನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ:

“‘ನೀನೊಬ್ಬ ಆದರ್ಶ ಮನುಷ್ಯನಾಗಿದ್ದೆ.
    ಸರ್ವಾಂಗಸುಂದರನೂ ಜ್ಞಾನದಿಂದ ತುಂಬಿದವನೂ ಆಗಿದ್ದೆ.
13 ದೇವರ ಉದ್ಯಾನವನವಾಗಿದ್ದ ಏದೆನಿನಲ್ಲಿ ನೀನಿದ್ದೆ.
    ನಿನ್ನ ಬಳಿಯಲ್ಲಿ ಬಂಗಾರದ ಚೌಕಟ್ಟಿನಲ್ಲಿ ಕುಳ್ಳಿರಿಸಿದ
    ವಜ್ರ, ವೈಢೂರ್ಯ, ನವರತ್ನಗಳ ಆಭರಣಗಳಿದ್ದವು.
ನೀನು ಸೃಷ್ಟಿಸಲ್ಪಟ್ಟ ದಿನದಲ್ಲಿ ಈ ಸೌಂದರ್ಯವು ನಿನಗೆ ಕೊಡಲ್ಪಟ್ಟಿತು.
    ದೇವರು ನಿನ್ನನ್ನು ಬಲಾಢ್ಯನನ್ನಾಗಿ ಮಾಡಿದನು.
14 ನೀನು ಆರಿಸಲ್ಪಟ್ಟ ಕೆರೂಬಿಯರಲ್ಲಿ ಒಬ್ಬನಾಗಿದ್ದೆ.
    ನಿನ್ನ ರೆಕ್ಕೆಗಳು ನನ್ನ ಸಿಂಹಾಸನದ ಮೇಲೆ ಚಾಚಿದ್ದವು.
ನಾನು ನಿನ್ನನ್ನು ದೇವರ ಪವಿತ್ರ ಪರ್ವತದಲ್ಲಿಟ್ಟೆನು.
    ನೀನು ಬೆಂಕಿಯಂತೆ ಹೊಳೆಯುವ ರತ್ನಗಳ ಮೇಲೆ ನಡೆದಾಡಿದೆ.
15 ನಾನು ನಿನ್ನನ್ನು ಸೃಷ್ಟಿಸಿದಾಗ ನೀನು ಸದ್ಗುಣಿಯಾಗಿ ನಿರ್ದೋಷಿಯಾಗಿದ್ದಿ.
    ಆದರೆ ನೀನು ದುಷ್ಟನಾಗುತ್ತಾ ಬಂದೆ.
16 ನಿನ್ನ ವ್ಯಾಪಾರವು ನಿನಗೆ ಐಶ್ವರ್ಯವನ್ನು ತಂದಿತು.
    ಆದರೆ ಅದರೊಂದಿಗೆ ನಾನಾ ದುಷ್ಟತ್ವಗಳು ನಿನ್ನೊಳಗೆ ಬಂದು ನೀನು ಪಾಪ ಮಾಡಿದೆ.
ಆಗ ನಾನು ನಿನ್ನನ್ನು ಅಶುದ್ಧನೆಂದು ಪರಿಗಣಿಸಿ
    ನಿನ್ನನ್ನು ದೇವರ ಪರ್ವತದಿಂದ ದಬ್ಬಿಬಿಟ್ಟೆನು.
ನೀನು ನನ್ನ ಕೆರೂಬಿಯರಲ್ಲಿ ವಿಶೇಷವಾದವನಾಗಿದ್ದೆ.
    ನಿನ್ನ ರೆಕ್ಕೆಗಳು ನನ್ನ ಸಿಂಹಾಸನದ ಮೇಲೆ ಚಾಚಿರುತ್ತಿದ್ದವು.
ಆದರೆ ಬೆಂಕಿಯಂತೆ ಹೊಳೆಯುವ ರತ್ನಾಭರಣಗಳನ್ನೆಲ್ಲಾ
    ತೆಗೆದಿಡಲು ನಿನ್ನನ್ನು ಬಲವಂತಪಡಿಸಿದೆ.
17 ನಿನ್ನ ಸೌಂದರ್ಯವು ನಿನಗೆ ಹೆಮ್ಮೆ ಏರುವಂತೆ ಮಾಡಿತು.
    ನಿನ್ನ ಘನತೆಯು ನಿನ್ನ ಜ್ಞಾನವನ್ನು ಕೆಡಿಸಿತು.
ಆದ್ದರಿಂದ ನಿನ್ನನ್ನು ನೆಲಕ್ಕೆ ದಬ್ಬಿದೆ.
    ಈಗ ಬೇರೆ ರಾಜರುಗಳು ನಿನ್ನನ್ನೆ ಎವೆಯಿಕ್ಕದೆ ನೋಡುತ್ತಾರೆ.
18 ನೀನು ಅನೇಕ ತಪ್ಪುಗಳನ್ನು ಮಾಡಿದೆ.
ನೀನು ಮೋಸಗಾರನಾದ ವ್ಯಾಪಾರಿ.
    ಇದರಿಂದಾಗಿ ನೀನು ಪವಿತ್ರಸ್ಥಳವನ್ನು ಹೊಲೆ ಮಾಡಿರುವಿ.
ಆದ್ದರಿಂದ ನಿನ್ನೊಳಗೆ ಬೆಂಕಿಯನ್ನು ಬರಮಾಡಿ
    ಅದು ನಿನ್ನನ್ನು ದಹಿಸುವಂತೆ ಮಾಡಿದೆನು.
ನೀನು ಸುಟ್ಟ ಬೂದಿಯಾದೆ.
    ಈಗ ಎಲ್ಲರೂ ನಿನ್ನ ಲಜ್ಜಾತನವನ್ನು ನೋಡುವರು.

19 “‘ಬೇರೆ ಜನಾಂಗಗಳ ಜನರು
    ನಿನಗೆ ಆದದ್ದನ್ನು ನೋಡಿ ಬೆಚ್ಚಿಬೆರಗಾದರು.
ನಿನಗಾದ ದುಸ್ಥಿತಿಯು ಜನರನ್ನು ಭಯಪಡಿಸಿತು.
    ನಿನ್ನ ಅಂತ್ಯವಾಯಿತು!’”

ಚೀದೋನಿನ ವಿರುದ್ಧ ಸಂದೇಶ

20 ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೀಗೆ ಹೇಳಿದನು: 21 “ನರಪುತ್ರನೇ, ಚೀದೋನಿನ ಕಡೆಗೆ ನೋಡಿ ನನ್ನ ಪರವಾಗಿ ನೀನೇ ಅದರ ವಿರುದ್ಧವಾಗಿ ಮಾತನಾಡು. 22 ನನ್ನ ಒಡೆಯನಾದ ಯೆಹೋವನು ಈ ಮಾತುಗಳನ್ನು ಹೇಳಿದನೆಂದು ಅವನಿಗೆ ತಿಳಿಸು:

“‘ಚೀದೋನೇ, ನಾನು ನಿನಗೆ ವಿರುದ್ಧವಾಗಿದ್ದೇನೆ.
    ನಿನ್ನ ಜನರು ನನ್ನನ್ನು ಗೌರವಿಸಲು ಕಲಿಯುವರು.
ನಾನು ಚೀದೋನನ್ನು ಶಿಕ್ಷಿಸಿದಾಗ
    ನಾನೇ ಯೆಹೋವನೆಂದು ಜನರಿಗೆ ಗೊತ್ತಾಗುವದು.
ನಾನು ಪವಿತ್ರನು ಎಂದು ಅವರು ತಿಳಿದು ಆ ರೀತಿಯಾಗಿ ಅವರು ನನ್ನೊಂದಿಗೆ ವರ್ತಿಸುವರು.
23 ಚೀದೋನಿಗೆ ನಾನು ರೋಗಮರಣಗಳನ್ನು ಕಳುಹಿಸುವೆನು.
    ನಗರದೊಳಗೆ ವಾಸಿಸುವ ಅನೇಕ ಮಂದಿ ಸಾಯುವರು.
ನಗರದ ಹೊರಗೆ ಖಡ್ಗವು ಅನೇಕರನ್ನು ಕೊಲ್ಲುವದು,
    ಆಗ ಅವರು ನಾನು ಯೆಹೋವನೆಂದು ತಿಳಿಯುವರು.’”

ರಾಜ್ಯಗಳು ಇಸ್ರೇಲಿಗೆ ಹಾಸ್ಯ ಮಾಡುವದನ್ನು ನಿಲ್ಲಿಸುವರು

24 “‘ಇಸ್ರೇಲಿನ ಸುತ್ತಲಿರುವ ರಾಜ್ಯಗಳು ಅದನ್ನು ಹಗೆ ಮಾಡಿದರು. ಆ ರಾಜ್ಯಗಳಿಗೆ ಬಹು ದೊಡ್ಡ ಕಂಟಕವು ಬಂದೊದಗುವದು. ಆಗ ಹರಿತವಾದ ಮುಳ್ಳಾಗಲಿ ಮುಳ್ಳಿನ ಪೊದೆಗಳಾಗಲಿ ಇಸ್ರೇಲಿನ ಜನರನ್ನು ಬಾಸಿ ಮಾಡಲು ಇರುವದಿಲ್ಲ. ಆಗ ನಾನು ಅವರ ಒಡೆಯನಾದ ಯೆಹೋವನು ಎಂದು ಅವರು ತಿಳಿಯುವರು.’”

25 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದನು: “ಬೇರೆ ದೇಶಗಳಿಗೆ ನಾನು ಇಸ್ರೇಲರನ್ನು ಚದರಿಸಿದೆನು. ಆದರೆ ತಿರುಗಿ ಇಸ್ರೇಲರನ್ನೆಲ್ಲಾ ಒಟ್ಟುಗೂಡಿಸುವೆನು. ಆಗ ಆ ದೇಶದವರು ನಾನು ಪವಿತ್ರವಾದ ದೇವರೆಂದು ತಿಳಿದು ಆ ರೀತಿಯಾಗಿ ನನ್ನನ್ನು ನೋಡುವರು. ಆಗ ಇಸ್ರೇಲರು ತಮ್ಮ ದೇಶದಲ್ಲಿ ವಾಸಮಾಡುವರು. ಆ ದೇಶವನ್ನು ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟಿದ್ದೆನು. 26 ಆ ದೇಶದಲ್ಲಿ ಅವರು ಸುರಕ್ಷಿತವಾಗಿ ವಾಸಿಸುವರು; ಮನೆಗಳನ್ನು ಕಟ್ಟಿ ದ್ರಾಕ್ಷಿತೋಟಗಳನ್ನು ಮಾಡುವರು. ಅವರನ್ನು ದ್ವೇಷಿಸಿದ ರಾಜ್ಯಗಳನ್ನು ದಂಡಿಸುವೆನು. ಆಗ ಇಸ್ರೇಲ್ ಜನರು ಸುರಕ್ಷಿತವಾಗಿ ಜೀವಿಸುವರು; ನಾನೇ ದೇವರಾದ ಯೆಹೋವನು ಎಂದು ತಿಳಿದುಕೊಳ್ಳುವರು.”

ಈಜಿಪ್ಟಿನ ವಿರುದ್ಧ ಸಂದೇಶ

29 ಸೆರೆ ಒಯ್ಯಲ್ಪಟ್ಟ ಹತ್ತನೇ ವರ್ಷದ ಹತ್ತನೇ ತಿಂಗಳಿನ, ಹನ್ನೆರಡನೇ ದಿವಸದಲ್ಲಿ ನನ್ನ ಒಡೆಯನಾದ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನ ಕಡೆಗೆ ಮುಖಮಾಡು. ಅವನಿಗೂ ಈಜಿಪ್ಟಿಗೂ ವಿರುದ್ಧವಾಗಿ ನನ್ನ ಪರವಾಗಿ ಮಾತನಾಡು. ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ ಎಂದು ಅವರಿಗೆ ತಿಳಿಸು,

“‘ಈಜಿಪ್ಟಿನ ರಾಜನಾದ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೇನೆ.
    ನೀನು ನೈಲ್ ನದಿಯ ದಡದಲ್ಲಿ ಮಲಗಿರುವ ಪೇರ್ಮೊಸಳೆ,
“ಇದು ನಾನು ನಿರ್ಮಿಸಿದ ಹೊಳೆ”
    ಎಂದು ನೀನು ಹೇಳಿಕೊಳ್ಳುವೆ.

“‘ಆದರೆ ನಾನು ನಿನ್ನ ದವಡೆಗಳಿಗೆ ಕೊಂಡಿಗಳನ್ನು ಸಿಕ್ಕಿಸುವೆನು.
    ನೈಲ್ ನದಿಯ ಮೀನುಗಳು ನಿನ್ನ ಪೊರೆಗಳಿಗೆ ಸಿಲುಕಿಕೊಳ್ಳುವವು.
ನಾನು ನಿನ್ನನ್ನೂ ನಿನ್ನ ಮೀನುಗಳನ್ನೂ
    ನೀರಿನೊಳಗಿಂದ ಹೊರಕ್ಕೆತ್ತಿ ಒಣನೆಲದ ಮೇಲೆ ಹಾಕುವೆನು.
ನೀನು ನೆಲದ ಮೇಲೆ ಬೀಳುವೆ.
    ಯಾರೂ ನಿನ್ನನ್ನು ಮೇಲಕ್ಕೆ ಎತ್ತುವುದೂ ಇಲ್ಲ ಹೂಣಿಡುವುದೂ ಇಲ್ಲ.
ನಾನು ನಿನ್ನನ್ನು ಕಾಡುಪ್ರಾಣಿಗಳಿಗೂ ಪಕ್ಷಿಗಳಿಗೂ ಕೊಡುವೆನು.
    ಅವರಿಗೆ ನೀನು ಆಹಾರವಾಗುವೆ.
ಆಗ ಈಜಿಪ್ಟಿನಲ್ಲಿ ವಾಸಮಾಡುವವರೆಲ್ಲರೂ
    ನಾನು ಒಡೆಯನಾದ ಯೆಹೋವನು ಎಂದು ತಿಳಿದುಕೊಳ್ಳುವರು.

“‘ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ?
ಯಾಕೆಂದರೆ ಇಸ್ರೇಲಿನ ಜನರು ಈಜಿಪ್ಟಿನ ಸಹಾಯದ ಮೇಲೆ ಆತುಕೊಂಡರು.
    ಆದರೆ ಈಜಿಪ್ಟ್ ಪೊಳ್ಳು ಬೆತ್ತದಂತಿತ್ತು.
ಇಸ್ರೇಲ್ ಜನರು ಈಜಿಪ್ಟಿನ ಮೇಲೆ ಆತುಕೊಂಡರು.
    ಆದರೆ ಈಜಿಪ್ಟ್ ಅವರ ಕೈಗಳನ್ನೂ ಭುಜಗಳನ್ನೂ ಗಾಯಗೊಳಿಸಿತು.
ನಿನ್ನ ಸಹಾಯಕ್ಕಾಗಿ ಅವರು ನಿನ್ನನ್ನು ಆಶ್ರಯಿಸಿದರು.
    ಆದರೆ ನೀನು ಅವರ ಬೆನ್ನೆಲುಬನ್ನು ತಿರುಗಿಸಿ ಮುರಿದುಬಿಟ್ಟೆ.’”

ಆದ್ದರಿಂದ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ,
“ನಾನು ನಿನಗೆ ವಿರುದ್ಧವಾಗಿ ಖಡ್ಗವನ್ನು ತರುವೆನು.
    ನಾನು ನಿನ್ನ ಜನರನ್ನೂ ಪ್ರಾಣಿಗಳನ್ನೂ ಸಂಪೂರ್ಣವಾಗಿ ಸಂಹರಿಸುವೆನು.
ಈಜಿಪ್ಟ್ ನಿಶ್ಯೇಷವಾಗಿ ನಾಶವಾಗುವದು.
    ಆಗ ಅವರು ನಾನೇ ದೇವರಾದ ಯೆಹೋವನು ಎಂದು ತಿಳಿದುಕೊಳ್ಳುವರು.”

ದೇವರು ಹೀಗೆಂದನು, “ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ. ಯಾಕೆಂದರೆ ನೀನು, ‘ಇದು ನನ್ನ ನದಿ, ಇದನ್ನು ನಾನು ಮಾಡಿದೆನು’ ಎಂದು ಹೇಳಿದೆ. 10 ಆದ್ದರಿಂದ ನಾನು ನಿನಗೆ ವಿರೋಧವಾಗಿರುತ್ತೇನೆ. ನೈಲ್ ನದಿಯ ಅನೇಕ ಶಾಖೆಗಳಿಗೂ ನಾನು ವಿರೋಧವಾಗಿದ್ದೇನೆ. ಈಜಿಪ್ಟನ್ನು ನಾನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಮಿಗ್ದೋಲ್‌ನಿಂದ ಅಸ್ವಾನ್ ತನಕ ಇರುವ ಪಟ್ಟಣಗಳು ಬರಿದಾಗುವವು. ಇಥಿಯೋಪ್ಯದ ಮೇರೆಯ ತನಕವೂ ಬರಿದಾಗುವದು. 11 ಯಾವನೂ, ಯಾವ ಪ್ರಾಣಿಯೂ ಈಜಿಪ್ಟ್ ದೇಶವನ್ನು ದಾಟುವುದಿಲ್ಲ. ನಲವತ್ತು ವರ್ಷದ ತನಕ ಯಾರೂ ಅಲ್ಲಿ ನೆಲೆಸುವದಿಲ್ಲ. 12 ನಾನು ಈಜಿಪ್ಟನ್ನು ನಾಶಮಾಡುತ್ತೇನೆ. ಅದರ ನಗರಗಳು ನಲವತ್ತು ವರ್ಷಗಳ ತನಕ ನಿರ್ಜನವಾಗಿರುವದು. ಈಜಿಪ್ಟ್ ಜನರನ್ನು ಬೇರೆ ದೇಶಗಳಿಗೆ ಅಟ್ಟಿಬಿಡುವೆನು. ಪರದೇಶಗಳಲ್ಲಿ ಅವರು ಪ್ರವಾಸಿಗಳಂತಿರುವರು.”

13 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳುತ್ತಾನೆ: “ಈಜಿಪ್ಟಿನ ಜನರನ್ನು ನಾನು ಅನೇಕ ದೇಶಗಳಲ್ಲಿ ಚದರಿಸಿಬಿಡುವೆನು. ನಲವತ್ತು ವರ್ಷದ ಕೊನೆಯಲ್ಲಿ ಅವರನ್ನು ತಿರಿಗಿ ಒಟ್ಟುಗೂಡಿಸುವೆನು. 14 ಸೆರೆಹಿಡಿಯಲ್ಪಟ್ಟ ಈಜಿಪ್ಟರನ್ನು ಪತ್ರೋಸ್ ದೇಶಕ್ಕೆ ಬರಮಾಡುವೆನು. ಅವರ ಜನ್ಮಸ್ಥಳಕ್ಕೆ ಅವರನ್ನು ತಿರುಗಿ ಬರಮಾಡುವೆನು. ಆದರೆ ಅವರ ರಾಜ್ಯಕ್ಕೆ ಮಹತ್ವವಿರುವುದಿಲ್ಲ. 15 ಅದು ಯಾವ ಮಹತ್ವವೂ ಇಲ್ಲದ ರಾಜ್ಯವಾಗಿರುವುದು. ಬೇರೆ ರಾಜ್ಯಗಳಿಗಿಂತ ಅದು ಎಂದಿಗೂ ಉನ್ನತಸ್ಥಾನದಲ್ಲಿರದು. ಅದು ಅಷ್ಟು ಚಿಕ್ಕ ರಾಜ್ಯವಾಗುವುದರಿಂದ ಬೇರೆ ದೇಶಗಳ ಮೇಲೆ ಅಧಿಕಾರ ನಡೆಸದು. 16 ಇಸ್ರೇಲರು ಅವರ ಮೇಲೆ ಇನ್ನು ಎಂದಿಗೂ ಭರವಸವಿಡುವುದಿಲ್ಲ. ಇಸ್ರೇಲರು ಸಹಾಯಕ್ಕಾಗಿ ದೇವರ ಬಳಿಗೆ ಹೋಗದೆ ಈಜಿಪ್ಟಿನವರ ಮೇಲೆ ಭರವಸವಿಟ್ಟಿದ್ದ ಪಾಪವನ್ನು ಅರಿತುಕೊಳ್ಳುವರು. ಆಗ ಅವರು ನಾನೇ ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವರು.”

ಬಾಬಿಲೋನ್ ಈಜಿಪ್ಟನ್ನು ಸೆರೆಹಿಡಿಯುವದು

17 ಯೆಹೋಯಾಖೀನನು ಸೆರೆಹಿಡಿಯಲ್ಪಟ್ಟ ಇಪ್ಪತ್ತೇಳನೇ ವರ್ಷದ, ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 18 “ನರಪುತ್ರನೇ, ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ತನ್ನ ಸೈನ್ಯವು ತೂರ್ ದೇಶದವರೊಂದಿಗೆ ಉಗ್ರವಾಗಿ ಹೋರಾಡುವಂತೆ ನಡೆಸಿದನು. ಪ್ರತಿ ಸೈನಿಕನ ತಲೆಯನ್ನು ಬೋಳಿಸಿದರು. ಪ್ರತಿಯೊಬ್ಬನ ಭುಜಗಳು ಭಾರ ಹೊತ್ತುಹೊತ್ತು ಸವೆದುಹೋಗಿದ್ದವು. ನೆಬೂಕದ್ನೆಚ್ಚರ್ ಮತ್ತು ಅವನ ಸೈನ್ಯವು ತೂರ್ ದೇಶವನ್ನು ಸೋಲಿಸಲು ಬಹಳವಾಗಿ ಪ್ರಯಾಸಪಡಬೇಕಾಗಿ ಬಂತು. ಆದರೆ ಅವರ ಪ್ರಯಾಸದ ಪ್ರತಿಫಲವಾಗಿ ಏನೂ ದೊರಕಲಿಲ್ಲ.” 19 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ರಾಜನಾದ ನೆಬೂಕದ್ನೆಚ್ಚರನಿಗೆ ನಾನು ಈಜಿಪ್ಟ್ ದೇಶವನ್ನು ಕೊಡುವೆನು. ನೆಬೂಕದ್ನೆಚ್ಚರನು ಈಜಿಪ್ಟಿನವರನ್ನು ಸೆರೆಹಿಡಿದು ಕೊಂಡೊಯ್ವನು. ಈಜಿಪ್ಟಿನ ಬೆಲೆಬಾಳುವ ವಸ್ತುಗಳನ್ನೆಲ್ಲಾ ದೋಚುವನು. ಇದು ಅವನ ಸೈನಿಕರ ಸಂಬಳವಾಗುವುದು. 20 ನೆಬೂಕದ್ನೆಚ್ಚರನು ಪ್ರಯಾಸದ ಕೆಲಸ ಮಾಡಿದ್ದರಿಂದ ನಾನು ಅವನಿಗೆ ಪ್ರತಿಫಲವಾಗಿ ಈಜಿಪ್ಟ್ ದೇಶವನ್ನು ಕೊಟ್ಟೆನು. ಯಾಕೆಂದರೆ ಅವರು ನನಗೋಸ್ಕರ ಪ್ರಯಾಸಪಟ್ಟರು.” ಇದು ಒಡೆಯನಾದ ಯೆಹೋವನ ನುಡಿ.

21 “ಆ ದಿವಸದಲ್ಲಿ ಇಸ್ರೇಲ್ ವಂಶವನ್ನು ನಾನು ಬಲಪಡಿಸುವೆನು. ಯೆಹೆಜ್ಕೇಲನೇ, ನೀನು ಅವರೊಂದಿಗೆ ಮಾತನಾಡುವಂತೆ ಮಾಡುವೆನು. ಆಗ ಅವರು ನಾನೇ ಯೆಹೋವನೆಂದು ತಿಳಿದುಕೊಳ್ಳುವರು.”

1 ಪೇತ್ರನು 3

ಗಂಡ ಮತ್ತು ಹೆಂಡತಿ

ಸ್ತ್ರೀಯರೇ, ಇದೇ ರೀತಿಯಲ್ಲಿ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ದೇವರಲ್ಲಿ ಭಯಭಕ್ತಿಯುಳ್ಳವರಾಗಿದ್ದು ನಿಷ್ಕಳಂಕರಾಗಿ ಜೀವಿಸುವುದನ್ನು ಕಂಡು ವಾಕ್ಯೋಪದೇಶವಿಲ್ಲದಿದ್ದರೂ ದೇವರ ವಾಕ್ಯದ ಮೇಲೆ ನಂಬಿಕೆಯಿಡಲು ನಿಮ್ಮ ನಡತೆಯಿಂದಲೇ ಪ್ರೋತ್ಸಾಹಿಸಲ್ಪಡುವರು. ತಲೆಕೂದಲನ್ನು ಸುಂದರವಾಗಿ ಬಾಚಿಕೊಳ್ಳುವುದಾಗಲಿ ಬಂಗಾರದ ಒಡವೆಗಳಾಗಲಿ ಒಳ್ಳೆಯ ಬಟ್ಟೆಗಳಾಗಲಿ ನಿಮ್ಮ ಸೌಂದರ್ಯದ ಸಾಧನಗಳಾಗದಿರಲಿ. ಸಾತ್ವಿಕವೂ ಶಾಂತವೂ ಆದ ಆಂತರ್ಯವೇ ನಿಮ್ಮ ಸೌಂದರ್ಯವಾಗಿರಬೇಕು. ಆ ಸೌಂದರ್ಯ ನಶಿಸಿಹೋಗುವುದಿಲ್ಲ. ಅದು ದೇವರಿಗೆ ಬಹು ಅಮೂಲ್ಯವಾದದ್ದು.

ಬಹು ಕಾಲದ ಹಿಂದೆ ಜೀವಿಸಿದ್ದು ದೇವರನ್ನು ಅನುಸರಿಸುತ್ತಾ ಪರಿಶುದ್ಧರಾಗಿದ್ದ ಸ್ತ್ರೀಯರು ಇದೇ ರೀತಿಯಲ್ಲಿ ತಮ್ಮನ್ನು ಶೃಂಗರಿಸಿಕೊಂಡರು. ಅವರು ತಮ್ಮ ಗಂಡಂದಿರಿಗೆ ಅಧೀನರಾಗಿದ್ದರು. ನಾನು ಸಾರಳಂತಹ ಸ್ತ್ರೀಯರ ಬಗ್ಗೆ ಹೇಳುತ್ತಿದ್ದೇನೆ. ಅವಳು ತನ್ನ ಗಂಡನಾದ ಅಬ್ರಹಾಮನಿಗೆ ವಿಧೇಯಳಾಗಿದ್ದು, ಅವನನ್ನು ತನ್ನ ಒಡೆಯನೆಂದು ಕರೆದಳು. ಸ್ತ್ರೀಯರಾದ ನೀವು ಭಯಪಡದೆ ಯಾವಾಗಲೂ ಯೋಗ್ಯವಾದುದನ್ನು ಮಾಡಿದರೆ, ನೀವು ಸಾರಳ ನಿಜವಾದ ಮಕ್ಕಳಾಗುವಿರಿ.

ಪುರುಷರೇ, ಇದೇ ರೀತಿಯಲ್ಲಿ ನೀವು ನಿಮ್ಮ ಪತ್ನಿಯರನ್ನು ಅರ್ಥಮಾಡಿಕೊಂಡು ಅವರೊಂದಿಗೆ ಬಾಳಬೇಕು. ನೀವು ನಿಮ್ಮ ಪತ್ನಿಯರಿಗೆ ಗೌರವ ತೋರಬೇಕು. ಅವರು ನಿಮಗಿಂತ ದುರ್ಬಲರು. ಆದರೆ ದೇವರು ನಿಮಗೆ ಕೊಡುವ ಆಶೀರ್ವಾದವನ್ನೇ ಅಂದರೆ ನಿಜಜೀವವನ್ನು ನೀಡುವ ಕೃಪೆಯನ್ನೇ ನಿಮ್ಮ ಪತ್ನಿಯರಿಗೂ ಕೊಡುವನು. ನೀವು ಹೀಗೆ ಜೀವಿಸುವುದಾಗಿದ್ದರೆ ಪ್ರಾರ್ಥಿಸಲು ನಿಮಗೆ ಅಡ್ಡಿಯಾಗುವುದಿಲ್ಲ.

ಒಳ್ಳೆಯದರ ನಿಮಿತ್ತ ಉಂಟಾಗುವ ಸಂಕಟ

ಆದ್ದರಿಂದ ನೀವೆಲ್ಲರೂ ಒಟ್ಟಾಗಿ ಶಾಂತಿಯಿಂದ ಬಾಳಿರಿ; ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಒಬ್ಬರನ್ನೊಬ್ಬರು ಸಹೋದರರಂತೆ ಪ್ರೀತಿಸಿರಿ. ದಯೆ ತೋರುವವರೂ ಮತ್ತು ದೀನತೆ ಉಳ್ಳವರೂ ಆಗಿರಿ. ಅಪಕಾರ ಮಾಡಿದವನಿಗೆ ಅಪಕಾರ ಮಾಡದೆ, ನಿಂದಿಸಿದವನನ್ನು ನಿಂದಿಸದೆ, ಅವನನ್ನು ಆಶೀರ್ವದಿಸುವಂತೆ ದೇವರಲ್ಲಿ ಬೇಡಿಕೊಳ್ಳಿರಿ. ಏಕೆಂದರೆ ಆಶೀರ್ವಾದವನ್ನು ಹೊಂದಿಕೊಳ್ಳಲು ನೀವು ಕರೆಯಲ್ಪಟ್ಟವರಾಗಿದ್ದೀರಿ. 10 ಪವಿತ್ರ ಗ್ರಂಥವು ಹೇಳುವುದೇನೆಂದರೆ,

“ಈ ಜೀವಿತದಲ್ಲಿ ಸಂತೋಷಿಸುತ್ತಾ
    ಸುದಿನಗಳನ್ನು ನೋಡಲು ಅಪೇಕ್ಷಿಸುವವನು
ಕೆಟ್ಟ ಮಾತುಗಳನ್ನಾಡದಿರಲಿ;
    ಸುಳ್ಳನ್ನು ನುಡಿಯದಿರಲಿ.
11 ಅವನು ಕೆಟ್ಟದ್ದನ್ನು ಮಾಡದೆ ಒಳ್ಳೆಯದನ್ನೇ ಮಾಡಲಿ.
    ಅವನು ಶಾಂತಿಯನ್ನು ಎದುರುನೋಡುತ್ತಾ ಅದನ್ನು ಪಡೆಯಲು ಪ್ರಯತ್ನಿಸಲಿ.
12 ನೀತಿವಂತರನ್ನು ಪ್ರಭುವು ಕಾಯುತ್ತಾನೆ;
    ಅವರ ಪ್ರಾರ್ಥನೆಗಳನ್ನು ಆಲಿಸುತ್ತಾನೆ.
ಆದರೆ ಕೆಟ್ಟದ್ದನ್ನು ಮಾಡುವ ಜನರನ್ನು ಪ್ರಭುವು ವಿರೋಧಿಸುತ್ತಾನೆ.”(A)

13 ನೀವು ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಿದ್ದರೆ, ಯಾರೂ ನಿಮಗೆ ಕೇಡು ಮಾಡುವುದಿಲ್ಲ. 14 ಆದರೆ ಯೋಗ್ಯವಾದುದನ್ನು ಮಾಡುವಾಗ ನೀವು ಸಂಕಟಪಡಬೇಕಾಗಬಹುದು. ಆದರೆ “ನಿಮ್ಮನ್ನು ಸಂಕಟಕ್ಕೆ ಒಳಪಡಿಸುವ ಜನರಿಗೆ ಹೆದರಬೇಡಿರಿ ಮತ್ತು ಚಿಂತಿಸಬೇಡಿರಿ.”(B) 15 ನಿಮ್ಮ ಹೃದಯಗಳಲ್ಲಿ ಕ್ರಿಸ್ತನೇ ಪ್ರಭುವಾಗಿರಲಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ನಿಮ್ಮನ್ನು ಕೇಳುವ ಪ್ರತಿಯೊಬ್ಬರಿಗೂ ಉತ್ತರ ಹೇಳಲು ಯಾವಾಗಲೂ ಸಿದ್ಧವಾಗಿರಿ. 16 ಆದರೆ ಸಾತ್ವಿಕತೆಯಿಂದ ಗೌರವಕರವಾದ ರೀತಿಯಲ್ಲಿ ಅವರಿಗೆ ಉತ್ತರವನ್ನು ಹೇಳಿ. ನೀವು ಮಾಡುತ್ತಿರುವುದು ಯೋಗ್ಯವಾದದ್ದೆಂಬುದು ನಿಮಗೆ ಯಾವಾಗಲೂ ಖಚಿತವಾಗಿ ತಿಳಿದಿರಬೇಕು. ಆಗ, ನೀವು ಕ್ರಿಸ್ತನಲ್ಲಿ ಒಳ್ಳೆಯವರಾಗಿ ಜೀವಿಸುವುದನ್ನು ನೋಡಿ ನಿಮ್ಮ ಬಗ್ಗೆ ಕೆಟ್ಟಮಾತುಗಳನ್ನು ಹೇಳುವವರು ತಾವು ಹೇಳಿದ ಕೆಟ್ಟ ಸಂಗತಿಗಳಿಗಾಗಿ ನಾಚಿಕೆಪಡುವರು.

17 ಕೆಟ್ಟದ್ದನ್ನು ಮಾಡಿ ಸಂಕಟ ಪಡುವುದಕ್ಕಿಂತ ಒಳ್ಳೆಯದನ್ನು ಮಾಡಿ ಸಂಕಟಪಡುವುದು ಉತ್ತಮ. ಹೌದು, ಅದು ದೇವರ ಅಪೇಕ್ಷೆಯಾಗಿದ್ದರೆ ಅದೇ ಒಳ್ಳೆಯದು.

18 ನಿಮ್ಮ ಪಾಪಗಳಿಗಾಗಿ ಕ್ರಿಸ್ತನು ಒಂದೇಸಾರಿ
    ಬಾಧೆ ಅನುಭವಿಸಿ ಸತ್ತನು.
ನೀತಿವಂತನಾಗಿದ್ದ ಆತನು
    ಅಪರಾಧಿಗಳಿಗಾಗಿ ಪ್ರಾಣಕೊಟ್ಟನು.
    ನಿಮ್ಮೆಲ್ಲರನ್ನು ದೇವರ ಬಳಿಗೆ ನಡೆಸುವುದಕ್ಕಾಗಿ ಆತನು ಹೀಗೆ ಮಾಡಿದನು.
ಆತನ ದೇಹವು ಕೊಲ್ಲಲ್ಪಟ್ಟಿತು,
    ಆದರೆ ಆತನು ಆತ್ಮಸಂಬಂಧದಲ್ಲಿ ಮತ್ತೆ ಜೀವಂತನಾದನು.

19 ಬಳಿಕ ಆತನು ಆತ್ಮರೂಪದಲ್ಲಿ ಹೋಗಿ ಸೆರೆಮನೆಯಲ್ಲಿದ್ದ ಆತ್ಮಗಳಿಗೆ ಸುವಾರ್ತೆ ಸಾರಿದನು. 20 ಬಹಳ ಹಿಂದೆ ನೋಹನ ಕಾಲದಲ್ಲಿ ದೇವರಿಗೆ ಅವಿಧೇಯರಾಗಿದ್ದವರೇ ಅವರು. ನೋಹನು ನಾವೆಯನ್ನು ಕಟ್ಟುತ್ತಿದ್ದಾಗ ದೇವರು ತಾಳ್ಮೆಯಿಂದ ಕಾಯುತ್ತಿದ್ದನು. ಕೆಲವರು ಅಂದರೆ ಎಂಟು ಮಂದಿ ಮಾತ್ರ, ಆ ನಾವೆಯಲ್ಲಿ ನೀರಿನ ಮೂಲಕ ರಕ್ಷಿಸಲ್ಪಟ್ಟರು. 21 ಆ ನೀರು ಈಗ ನಿಮ್ಮನ್ನು ರಕ್ಷಿಸುತ್ತಿರುವ ದೀಕ್ಷಾಸ್ನಾನದಂತಿದೆ. ದೀಕ್ಷಾಸ್ನಾನವು ಮೈಕೊಳೆಯನ್ನು ತೊಳೆಯುವಂಥದ್ದಲ್ಲ. ಅದು ಪರಿಶುದ್ಧ ಹೃದಯ ಬೇಕೆಂದು ವಿಜ್ಞಾಪಿಸಿಕೊಳ್ಳುವಂಥದಾಗಿದೆ. ಯೇಸು ಕ್ರಿಸ್ತನು ಸಾವಿನಿಂದ ಎದ್ದುಬಂದದ್ದರಿಂದ ಅದು ನಿಮ್ಮನ್ನು ರಕ್ಷಿಸುತ್ತದೆ. 22 ಈಗ ಯೇಸು ಪರಲೋಕಕ್ಕೆ ಹೋಗಿರುವನು. ಆತನು ದೇವರ ಬಲಗಡೆಯಲ್ಲಿದ್ದಾನೆ. ಆತನು ದೇವದೂತರನ್ನೂ ಅಧಿಕಾರಿಗಳನ್ನೂ ಶಕ್ತಿಗಳನ್ನೂ ಆಳುತ್ತಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International