Old/New Testament
ಜನಾಂಗಗಳ ವಿಷಯವಾಗಿ ಯೆಹೋವನ ಸಂದೇಶಗಳು
46 ಈ ಸಂದೇಶಗಳು ಪ್ರವಾದಿಯಾದ ಯೆರೆಮೀಯನಿಗೆ ಬಂದವು. ಈ ಸಂದೇಶಗಳು ವಿವಿಧ ಜನಾಂಗಗಳ ಬಗ್ಗೆ ಇವೆ.
ಈಜಿಪ್ಟಿನ ಬಗ್ಗೆ ಸಂದೇಶ
2 ಈ ಸಂದೇಶವು ಈಜಿಪ್ಟ್ ಜನಾಂಗದ ಬಗ್ಗೆ ಇದೆ. ಈ ಸಂದೇಶವು ಫರೋಹನೆಕೋವಿನ ಸೈನ್ಯದ ಬಗ್ಗೆ ಇದೆ. ಫರೋಹನೆಕೋವು ಈಜಿಪ್ಟಿನ ರಾಜನಾಗಿದ್ದನು. ಅವನ ಸೈನ್ಯವನ್ನು ಕರ್ಕೆಮೀಷ್ ಪಟ್ಟಣದಲ್ಲಿ ಸೋಲಿಸಲಾಯಿತು. ಕರ್ಕೆಮೀಷ್ ಪಟ್ಟಣವು ಯೂಫ್ರೇಟೀಸ್ ನದಿಯ ದಂಡೆಯ ಮೇಲಿದೆ. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಹೂದದಲ್ಲಿ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಫರೋಹನೆಕೋವಿನ ಸೈನ್ಯವನ್ನು ಕರ್ಕೆಮೀಷಿನಲ್ಲಿ ಸೋಲಿಸಿದನು. ಯೆಹೋಯಾಕೀಮನು ರಾಜನಾದ ಯೋಷೀಯನ ಮಗನಾಗಿದ್ದನು. ಈಜಿಪ್ಟಿಗೆ ಯೆಹೋವನ ಸಂದೇಶ ಹೀಗಿತ್ತು:
3 “ನಿಮ್ಮ ದೊಡ್ಡ ಮತ್ತು ಸಣ್ಣ ಗುರಾಣಿಗಳನ್ನು
ಸಿದ್ಧಪಡಿಸಿಕೊಂಡು ಯುದ್ಧಕ್ಕೆ ಹೊರಡಿರಿ.
4 ಕುದುರೆಗಳನ್ನು ಸಜ್ಜುಗೊಳಿಸಿರಿ.
ಸೈನಿಕರೇ, ನಿಮ್ಮ ಕುದುರೆಯ ಮೇಲೆ ಹತ್ತಿರಿ,
ಯುದ್ಧಕ್ಕಾಗಿ ನಿಮ್ಮನಿಮ್ಮ ಸ್ಥಾನಗಳಿಗೆ ಹೋಗಿರಿ.
ನಿಮ್ಮ ಶಿರಸ್ತ್ರಾಣಗಳನ್ನು ಧರಿಸಿರಿ,
ನಿಮ್ಮ ಭರ್ಜಿಗಳನ್ನು ಚೂಪುಗೊಳಿಸಿರಿ.
ನಿಮ್ಮ ಕವಚಗಳನ್ನು ಧರಿಸಿರಿ.
5 ನಾನು ನೋಡುತ್ತಿರುವುದೇನು?
ಸೈನ್ಯವು ಗಾಬರಿಪಟ್ಟಿದೆ.
ಸೈನಿಕರು ಓಡಿಹೋಗುತ್ತಿದ್ದಾರೆ.
ಅವರ ಶೂರಸೈನಿಕರು ಸೋತಿದ್ದಾರೆ.
ಅವರು ಅವಸರದಿಂದ ಓಡಿಹೋಗುತ್ತಿದ್ದಾರೆ.
ಅವರು ಹಿಂದಕ್ಕೆ ತಿರುಗಿ ಸಹ ನೋಡುತ್ತಿಲ್ಲ.
ಎಲ್ಲಾ ಕಡೆಗೂ ಭೀತಿ ಆವರಿಸಿಕೊಂಡಿದೆ”
ಯೆಹೋವನು ಹೀಗೆಂದನು.
6 “ವೇಗಶಾಲಿಗಳೂ ಓಡಿಹೋಗಲಾರರು.
ಶೂರಸೈನಿಕರೂ ತಪ್ಪಿಸಿಕೊಳ್ಳಲಾರರು.
ಅವರೆಲ್ಲರೂ ಎಡವಿ ಬಿದ್ದುಬಿಡುವರು.
ಇದೆಲ್ಲ ಉತ್ತರದಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ನಡೆಯುವುದು.
7 ನೈಲ್ ನದಿಯಂತೆ ಯಾರು ಬರುತ್ತಿರುವರು?
ಶಕ್ತಿಶಾಲಿಯಾದ ಮತ್ತು ರಭಸದಿಂದ ಹರಿಯುವ ನದಿಯಂತೆ ಯಾರು ಬರುತ್ತಿರುವರು?
8 ಭೋರ್ಗರೆಯುವ ನೈಲ್ ನದಿಯಂತೆ
ಈಜಿಪ್ಟ್ ಬರುತ್ತಿದೆ.
ಬಲಿಷ್ಠವಾಗಿಯೂ ಮತ್ತು ರಭಸವಾಗಿಯೂ
ಹರಿಯುವ ನದಿಯಂತೆ ಬರುತ್ತಿದೆ.
‘ನಾನು ಬಂದು ಭೂಮಿಯ ಮೇಲೆಲ್ಲ ವ್ಯಾಪಿಸಿಕೊಳ್ಳುವೆನು.
ನಾನು ನಗರಗಳನ್ನೂ ಅಲ್ಲಿದ್ದ ಜನರನ್ನೂ ನಾಶಮಾಡುವೆನು’ ಎಂದು ಈಜಿಪ್ಟ್ ಹೇಳುತ್ತಿದೆ.
9 ಅಶ್ವಾರೋಹಿಗಳೇ, ಯುದ್ಧದಲ್ಲಿ ಧುಮುಕಿರಿ,
ಸಾರಥಿಗಳೇ, ರಥಗಳನ್ನು ವೇಗವಾಗಿ ಓಡಿಸಿರಿ.
ಶೂರ ಸೈನಿಕರೇ, ಮುನ್ನುಗ್ಗಿರಿ;
ಕೂಷ್ಯ ಮತ್ತು ಪೂಟ್ಯ ಸೈನಿಕರೇ, ನಿಮ್ಮ ಗುರಾಣಿಗಳನ್ನು ಹಿಡಿದುಕೊಂಡು ಹೋಗಿರಿ.
ಲೂದ್ಯ ಸೈನಿಕರೇ, ನಿಮ್ಮ ಬಿಲ್ಲುಗಳನ್ನು ಉಪಯೋಗಿಸಿರಿ.
10 “ಆದರೆ ಆ ದಿನ ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಗೆಲ್ಲುವನು.
ಆಗ ಆ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುವನು.
ಯೆಹೋವನ ವೈರಿಗಳು ತಕ್ಕ ಶಿಕ್ಷೆಯನ್ನು ಅನುಭವಿಸುವರು.
ಖಡ್ಗವು ಸರ್ವರನ್ನು ಕೊಲೆ ಮಾಡುವುದು.
ಖಡ್ಗವು ತನ್ನ ರಕ್ತದ ದಾಹ ತೀರುವವರೆಗೂ ಕೊಲೆ ಮಾಡುವುದು.
ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನಿಗೆ ಬಲಿ ನಡೆಯಬೇಕಾಗಿರುವುದರಿಂದ ಹೀಗೆಲ್ಲ ಆಗುವುದು.
ಈಜಿಪ್ಟಿನ ಸೈನ್ಯವನ್ನು ಉತ್ತರದಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ಬಲಿಯಾಗಿ ಕೊಡಲಾಗುವುದು.
11 “ಈಜಿಪ್ಟೇ, ಗಿಲ್ಯಾದಿಗೆ ಹೋಗಿ ಔಷಧಿಯನ್ನು ತೆಗೆದುಕೊಂಡು ಬಾ.
ನೀನು ಬಗೆಬಗೆಯ ಔಷಧಿಗಳನ್ನು ಉಪಯೋಗಿಸಬಹುದು.
ಆದರೆ ಅದರಿಂದ ಪ್ರಯೋಜನವಿಲ್ಲ. ನೀನು ಗುಣಹೊಂದುವುದಿಲ್ಲ.
12 ಬೇರೆ ಜನಾಂಗಗಳು ನೀನು ಗೋಳಾಡುವದನ್ನು ಕೇಳಿಸಿಕೊಳ್ಳುವವು.
ನಿನ್ನ ಗೋಳಾಟವು ಇಡೀ ಭೂಮಂಡಲದಲ್ಲೆಲ್ಲ ಕೇಳಿಸುವುದು.
‘ಒಬ್ಬ ಶೂರ ಸೈನಿಕನು’ ಮತ್ತೊಬ್ಬ ‘ಶೂರ ಸೈನಿಕನನ್ನು’ ಎದುರಿಸುವನು.
ಆ ಶೂರ ಸೈನಿಕರಿಬ್ಬರೂ ಒಟ್ಟಿಗೆ ನೆಲಕ್ಕೆ ಬೀಳುವರು.”
13 ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನು ಕೊಟ್ಟ ಸಂದೇಶವಿದು. ಈ ಸಂದೇಶ ನೆಬೂಕದ್ನೆಚ್ಚರನು ಈಜಿಪ್ಟಿನ ಮೇಲೆ ಧಾಳಿ ಮಾಡಲು ಬರುವುದರ ಬಗ್ಗೆ ಇದೆ.
14 “ಈಜಿಪ್ಟಿನಲ್ಲಿ ಈ ಸಂದೇಶವನ್ನು ಪ್ರಕಟಿಸು,
ಮಿಗ್ದೋಲ್ ನಗರದಲ್ಲಿ ಇದನ್ನು ಪ್ರಚುರಪಡಿಸು.
ನೋಫ್ ಮತ್ತು ತಹಪನೇಸ್‌ಗಳಲ್ಲಿ ಪ್ರಚುರಪಡಿಸಿರಿ,
‘ಯುದ್ಧಕ್ಕೆ ಸಿದ್ಧರಾಗಿರಿ,
ಏಕೆಂದರೆ ನಿಮ್ಮ ಸುತ್ತಲೂ ಜನರು ಖಡ್ಗಕ್ಕೆ ಆಹುತಿಯಾಗಿದ್ದಾರೆ.’
15 ಈಜಿಪ್ಟೇ, ನಿಮ್ಮ ಶೂರಸೈನಿಕರು ಏಕೆ ಕೊಲ್ಲಲ್ಪಡುವರು?
ಅವರು ನಿಲ್ಲಲಾರರು.
ಏಕೆಂದರೆ ಯೆಹೋವನು ಅವರನ್ನು ನೆಲಕ್ಕೆ ತಳ್ಳುವನು.
16 ಆ ಸೈನಿಕರು ಮತ್ತೆಮತ್ತೆ ಎಡವುತ್ತಾರೆ.
ಅವರು ಒಬ್ಬರಮೇಲೊಬ್ಬರು ಬೀಳುವರು.
‘ಎದ್ದೇಳು, ನಮ್ಮ ಜನರಲ್ಲಿಗೆ ನಾವು ಹೋಗೋಣ.
ನಮ್ಮ ಜನ್ಮಭೂಮಿಗೆ ನಾವು ಹೋಗೋಣ.
ನಮ್ಮ ವೈರಿಯು ನಮ್ಮನ್ನು ಸೋಲಿಸುತ್ತಿದ್ದಾನೆ.
ನಾವು ಇಲ್ಲಿಂದ ಹೊರಡಬೇಕು’ ಎಂದು ಅವರು ಹೇಳಿಕೊಳ್ಳುವರು.
17 ‘ಈಜಿಪ್ಟಿನ ರಾಜನಾದ ಫರೋಹನು ಕೇವಲ ಒಂದು ಪೊಳ್ಳು ಧ್ವನಿ.
ಅವನ ವೈಭವದ ದಿನಗಳು ಮುಗಿದವು’”
ಎಂದು ಆ ಸೈನಿಕರು ತಮ್ಮ ಜನ್ಮಭೂಮಿಯಲ್ಲಿ ಹೇಳುವರು.
18 ಈ ಸಂದೇಶವು ರಾಜನಿಂದ ಬಂದದ್ದು.
ಆ ರಾಜನೇ ಸರ್ವಶಕ್ತನಾದ ಯೆಹೋವನು.
“ನನ್ನ ಜೀವದಾಣೆಯಾಗಿ ಹೇಳುತ್ತೇನೆ.
ಬಲಿಷ್ಠನಾದ ನಾಯಕನು ಬರುವನು.
ಅವನು ತಾಬೋರ್ ಬೆಟ್ಟದಂತೆಯೂ ಸಮುದ್ರದ ಸಮೀಪದ ಕರ್ಮೆಲ್ ಗುಡ್ಡದಂತೆಯೂ ಇರುವನು.
19 ಈಜಿಪ್ಟಿನ ಜನಗಳೇ, ನಿಮ್ಮ ವಸ್ತುಗಳನ್ನು ಕಟ್ಟಿಕೊಂಡು
ಸೆರೆವಾಸಕ್ಕೆ ಸಿದ್ಧರಾಗಿರಿ.
ಏಕೆಂದರೆ ನೋಫ್ ಪಟ್ಟಣವು ಹಾಳುಬಿದ್ದ ನಿರ್ಜನವಾದ ಪ್ರದೇಶವಾಗುವುದು.
ನಗರಗಳನ್ನು ನಾಶಪಡಿಸಲಾಗುವುದು;
ಅವುಗಳು ನಿರ್ಜನವಾಗುವವು.
20 “ಈಜಿಪ್ಟು ಸುಂದರವಾದ ಹಸುವಿನಂತಿದೆ,
ಆದರೆ ಉತ್ತರದಿಂದ ತೊಣಚಿಯು[a] ಅದನ್ನು ಪೀಡಿಸಲು ಬರುತ್ತಿದೆ.
21 ಸಂಬಳಕ್ಕಾಗಿ ದುಡಿಯುವ ಈಜಿಪ್ಟಿನ ಸೈನಿಕರು ಕೊಬ್ಬಿದ ಕರುಗಳಂತಿದ್ದಾರೆ.
ಅವರೆಲ್ಲರು ಹಿಂತಿರುಗಿ ಓಡಿಹೋಗುವರು.
ಅವರು ಧೈರ್ಯದಿಂದ ಧಾಳಿಯನ್ನು ಎದುರಿಸಲಾರರು.
ಅವರ ವಿನಾಶದ ಕಾಲ ಬರುತ್ತಿದೆ.
ಬೇಗ ಅವರನ್ನು ದಂಡಿಸಲಾಗುವುದು.
22 ಈಜಿಪ್ಟು ಬುಸುಗುಟ್ಟಿ ತಪ್ಪಿಸಿಕೊಳ್ಳಲು
ಪ್ರಯತ್ನಮಾಡುವ ಹಾವಿನಂತಿದೆ.
ವೈರಿಗಳು ಬಹಳ ಹತ್ತಿರಕ್ಕೆ ಬಂದಿದ್ದಾರೆ.
ಈಜಿಪ್ಟಿನ ಸೈನಿಕರು ಓಡಿಹೋಗಲು ಪ್ರಯತ್ನ ಮಾಡುತ್ತಿದ್ದಾರೆ.
ವೈರಿಗಳು ಕೊಡಲಿಯನ್ನು ಹಿಡಿದುಕೊಂಡು ಈಜಿಪ್ಟಿನ ಮೇಲೆ ಬೀಳುವರು;
ಅವರು ಮರ ಕಡಿಯುವ ಜನರಂತಿದ್ದಾರೆ.”
23 ಯೆಹೋವನು ಹೀಗೆನ್ನುತ್ತಾನೆ:
“ವೈರಿಗಳು ಈಜಿಪ್ಟಿನ ಅರಣ್ಯವನ್ನು (ಸೈನ್ಯವನ್ನು) ಕತ್ತರಿಸುವರು.
ಆ ಅರಣ್ಯದಲ್ಲಿ (ಸೈನ್ಯದಲ್ಲಿ) ಅನೇಕ ಮರಗಳಿವೆ (ಸೈನಿಕರಿದ್ದಾರೆ).
ಆದರೂ ಅದನ್ನು ಕತ್ತರಿಸಲಾಗುವುದು.
ಮಿಡತೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವೈರಿಗಳ ಸೈನಿಕರಿದ್ದಾರೆ.
ಆ ಸೈನಿಕರನ್ನು ಯಾರಿಂದಲೂ ಎಣಿಸಲಾಗದು.
24 ಈಜಿಪ್ಟಿಗೆ ಅವಮಾನವಾಗುವುದು.
ಉತ್ತರದ ಶತ್ರು ಅವಳನ್ನು ಸೋಲಿಸುವುದು.”
25 ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ: “ಬಹುಬೇಗನೆ ನಾನು ಥೀಬಸ್ಸಿನ ಆಮೋನ್ ದೇವತೆಯನ್ನು ದಂಡಿಸುವೆನು. ನಾನು ಫರೋಹನನ್ನು, ಈಜಿಪ್ಟನ್ನು ಮತ್ತು ಅವಳ ದೇವರುಗಳನ್ನು ದಂಡಿಸುವೆನು. ನಾನು ಈಜಿಪ್ಟಿನ ರಾಜರನ್ನು ದಂಡಿಸುವೆನು. ಫರೋಹನನ್ನು ನಂಬಿದವರನ್ನು ದಂಡಿಸುವೆನು. 26 ಆ ಜನರನ್ನೆಲ್ಲ ಅವರ ಶತ್ರುಗಳು ಸೋಲಿಸುವಂತೆ ಮಾಡುವೆನು. ಅವರ ಶತ್ರುಗಳು ಅವರನ್ನು ಕೊಲ್ಲಬಯಸುವರು. ನಾನು ಆ ಜನರನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಮತ್ತು ಅವನ ಸೇವಕರ ಕೈಗೆ ಒಪ್ಪಿಸುವೆನು.”
“ಬಹಳ ಹಿಂದೆ, ಈಜಿಪ್ಟ್ ದೇಶದಲ್ಲಿ ಶಾಂತಿ ನೆಲೆಸಿತ್ತು. ತೊಂದರೆಗಳ ಈ ದಿನಗಳ ತರುವಾಯ ಈಜಿಪ್ಟ್ ಪುನಃ ಶಾಂತಿಯ ಬೀಡಾಗುವುದು” ಇದು ಯೆಹೋವನ ನುಡಿ.
ಉತ್ತರ ಇಸ್ರೇಲಿಗೆ ಸಂದೇಶ
27 “ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ.
ಇಸ್ರೇಲೇ, ಅಂಜಬೇಡ.
ಆ ದೂರಸ್ಥಳಗಳಿಂದ ನಾನು ನಿನ್ನನ್ನು ಖಂಡಿತವಾಗಿ ರಕ್ಷಿಸುತ್ತೇನೆ.
ಬಂಧಿಯಾಗಿರುವ ದೇಶಗಳಿಂದ ನಾನು ನಿನ್ನ ಮಕ್ಕಳನ್ನು ರಕ್ಷಿಸುತ್ತೇನೆ.
ಯಾಕೋಬು ಪುನಃ ನೆಮ್ಮದಿಯಾಗಿಯೂ ಸುರಕ್ಷಿತವಾಗಿಯೂ ಇರುವುದು.
ಯಾರೂ ಅದನ್ನು ಹೆದರಿಸಲಾರರು.”
28 ಯೆಹೋವನು ಹೀಗೆನ್ನುತ್ತಾನೆ:
“ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ.
ನಾನು ನಿನ್ನ ಜೊತೆಯಲ್ಲಿದ್ದೇನೆ.
ನಾನು ನಿನ್ನನ್ನು ಅನೇಕ ಸ್ಥಳಗಳಿಗೆ ಕಳುಹಿಸಿದೆ.
ನಾನು ಆ ಜನಾಂಗಗಳನ್ನೆಲ್ಲ ಸಂಪೂರ್ಣವಾಗಿ ನಾಶಮಾಡುತ್ತೇನೆ.
ಆದರೆ ನಿನ್ನನ್ನು ನಾನು ಸಂಪೂರ್ಣವಾಗಿ ನಾಶಮಾಡುವದಿಲ್ಲ.
ನೀನು ಮಾಡಿದ ದುಷ್ಕೃತ್ಯಗಳಿಗಾಗಿ ನಿನಗೆ ಶಿಕ್ಷೆ ಆಗಲೇಬೇಕು.
ಆದ್ದರಿಂದ ನೀನು ದಂಡನೆಯಿಂದ ತಪ್ಪಿಸಿಕೊಳ್ಳಲು ನಾನು ಬಿಡುವದಿಲ್ಲ.
ನಾನು ನಿನಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ, ಆದರೆ ನ್ಯಾಯವಂತನಾಗಿರುವೆನು.”
ಫಿಲಿಷ್ಟಿಯರ ಬಗ್ಗೆ ಸಂದೇಶ
47 ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಫಿಲಿಷ್ಟಿಯರ ಬಗ್ಗೆ ಬಂದಿತು. ಫರೋಹನು ಗಾಜಾ ಪಟ್ಟಣದ ಮೇಲೆ ಧಾಳಿ ಮಾಡುವ ಮುಂಚೆ ಈ ಸಂದೇಶ ಬಂದಿತು.
2 ಯೆಹೋವನು ಹೀಗೆನ್ನುತ್ತಾನೆ:
“ನೋಡಿರಿ, ಉತ್ತರದಲ್ಲಿ ಶತ್ರು ಸೈನಿಕರು ಒಟ್ಟುಗೂಡುತ್ತಿದ್ದಾರೆ.
ದಡಮೀರಿ ಭೋರ್ಗರೆಯುವ ನದಿಯಂತೆ ಅವರು ಬರುವರು.
ಅವರು ಪ್ರವಾಹದಂತೆ ಇಡೀ ದೇಶವನ್ನು ವ್ಯಾಪಿಸುವರು.
ಅವರು ಪಟ್ಟಣಗಳನ್ನೂ ಅಲ್ಲಿ ವಾಸಿಸುವ ಜನರನ್ನೂ ಮುತ್ತುವರು.
ಆ ದೇಶಗಳಲ್ಲಿ ವಾಸಮಾಡುವ ಎಲ್ಲರೂ
ಸಹಾಯಕ್ಕಾಗಿ ಗೋಳಿಡುವರು.
3 ಅವರು ವೇಗವಾಗಿ ಓಡುವ
ಕುದುರೆಗಳ ಶಬ್ಧವನ್ನು ಕೇಳುವರು.
ಅವರು ರಭಸವಾಗಿ ಚಲಿಸುವ ರಥಗಳ ಶಬ್ಧವನ್ನು ಕೇಳುವರು.
ಅವರು ಚಕ್ರಗಳ ಗಡಗಡ ಶಬ್ಧವನ್ನು ಕೇಳುವರು.
ತಂದೆಗಳು ತಮ್ಮತಮ್ಮ ಮಕ್ಕಳಿಗೆ ಸುರಕ್ಷಣೆಯನ್ನು
ಕೊಡಲಾಗದಷ್ಟು ದುಬರ್ಲರಾಗಿರುವರು.
4 ಎಲ್ಲಾ ಫಿಲಿಷ್ಟಿಯರ ವಿನಾಶನದ ಕಾಲ ಬಂದಿದೆ.
ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ
ಅಳಿದುಳಿದವರನ್ನೆಲ್ಲ ನಾಶಮಾಡುವ ಕಾಲ ಬಂದಿದೆ.
ಯೆಹೋವನು ಬಹುಬೇಗ ಫಿಲಿಷ್ಟಿಯರನ್ನು ನಾಶಮಾಡುವನು.
ಕಪ್ತೋರ್ ದಿಬಪದ ಅಳಿದುಳಿದ ಜನರನ್ನು ಆತನು ನಾಶಮಾಡುವನು.
5 ಗಾಜಾದ ಜನರು ದುಃಖಿತರಾಗಿ ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವರು.
ಅಷ್ಕೆಲೋನಿನ ಜನರನ್ನು ಸ್ತಬ್ಧಗೊಳಿಸಲಾಗುವುದು.
ಕಣಿವೆ ಪ್ರದೇಶದಿಂದ ಉಳಿದುಕೊಂಡವರೇ,
ನಿಮ್ಮನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿರಿ?
6 “ಅಯ್ಯೋ, ಯೆಹೋವನ ಖಡ್ಗವೇ, ನೀನಿನ್ನೂ ಹೋಗಲಿಲ್ಲವೇ?
ಎಷ್ಟು ಹೊತ್ತು ನೀನು ಹೋರಾಡುತ್ತಿರುವೆ?
ನಿನ್ನ ಒರೆಯಲ್ಲಿ ಹೋಗು!
ಸುಮ್ಮನಿರು, ಶಾಂತವಾಗಿರು!
7 ಆದರೆ ಯೆಹೋವನ ಖಡ್ಗವು ವಿಶ್ರಾಂತಿ ಪಡೆಯುವುದು ಹೇಗೆ ಸಾಧ್ಯ?
ಯೆಹೋವನು ಅದಕ್ಕೆ ಒಂದು ಆಜ್ಞೆಯನ್ನು ಕೊಟ್ಟಿದ್ದಾನೆ.
ಅಷ್ಕೆಲೋನ್ ನಗರದ ಮೇಲೆ ಮತ್ತು ಕರಾವಳಿಯ ಮೇಲೆ
ಧಾಳಿ ಮಾಡಬೇಕೆಂದು ಯೆಹೋವನು ಅದಕ್ಕೆ ಆಜ್ಞೆ ವಿಧಿಸಿದ್ದಾನೆ.”
6 ಆದ್ದರಿಂದ ಕ್ರಿಸ್ತನನ್ನು ಕುರಿತ ಆರಂಭದ ಪಾಠಗಳನ್ನು ನಾವು ಮುಗಿಸಿದವರಾಗಿರಬೇಕು. ನಾವು ಆರಂಭಿಸಿದ ಪಾಠಗಳಿಗೆ ಮತ್ತೆ ಹೋಗಬಾರದು. ನಮ್ಮ ಮೊದಲಿನ ದುಷ್ಕೃತ್ಯಗಳನ್ನು ತೊರೆದುಬಿಟ್ಟು ದೇವರಲ್ಲಿ ನಂಬಿಕೆಯನ್ನಿಟ್ಟು ಕ್ರಿಸ್ತನಲ್ಲಿ ನಮ್ಮ ಜೀವನವನ್ನು ಪ್ರಾರಂಭಿಸಿದೆವು. 2 ಆ ಸಮಯದಲ್ಲಿ ನಮಗೆ ದೀಕ್ಷಾಸ್ನಾನ, ಹಸ್ತಾರ್ಪಣ, ಸತ್ತವರ ಪುನರುತ್ಥಾನ ಮತ್ತು ನಿತ್ಯವಾದ ನ್ಯಾಯತೀರ್ಪು ಇವುಗಳನ್ನು ಕುರಿತು ಬೋಧಿಸಲಾಯಿತು. ಆದರೆ ಈಗ ನಾವು ಪೂರ್ಣ ತಿಳುವಳಿಕೆಗೆ ಹೋಗುವುದು ಅಗತ್ಯವಾಗಿದೆ. 3 ದೇವರ ಚಿತ್ತವಾದರೆ ಹೀಗೆ ಮುಂದಕ್ಕೆ ಸಾಗುತ್ತಾ ಹೋಗುವೆವು.
4-6 ಕ್ರಿಸ್ತನ ಮಾರ್ಗವನ್ನು ಜನರು ಬಿಟ್ಟುಹೋದ ನಂತರ, ನೀವು ಅವರ ಜೀವನವನ್ನು ಮತ್ತೆ ಪರಿವರ್ತಿಸಲು ಸಾಧ್ಯವೇ? ನಾನು ಸತ್ಯವನ್ನು ತಿಳಿದುಕೊಂಡ ಜನರನ್ನು ಕುರಿತು ಮಾತಾಡುತ್ತಿದ್ದೇನೆ. ಅವರು ದೇವರ ವರಗಳನ್ನು ಪಡೆದವರೂ ಪವಿತ್ರಾತ್ಮನಲ್ಲಿ ಪಾಲುಗಾರರೂ ಆಗಿದ್ದಾರೆ. ದೇವರು ಹೇಳಿದ ಸಂಗತಿಗಳನ್ನು ಅವರು ಕೇಳಿದವರೂ ದೇವರ ಹೊಸಲೋಕದ ಮಹಾಶಕ್ತಿಗಳನ್ನು ನೋಡಿದವರೂ ಆಗಿದ್ದಾರೆ. ಅವುಗಳೆಲ್ಲ ಉತ್ತಮವಾದವುಗಳೆಂಬುದನ್ನು ಅವರು ಕಲಿತುಕೊಂಡಿದ್ದಾರೆ. ಆದರೂ ಅವರು ಕ್ರಿಸ್ತನ ಮಾರ್ಗವನ್ನು ಬಿಟ್ಟುಹೋದರು. ಅವರ ಜೀವಿತವನ್ನು ಮತ್ತೆ ಪರಿವರ್ತಿಸಿ ಕ್ರಿಸ್ತನ ಬಳಿಗೆ ಬರಮಾಡಲು ಸಾಧ್ಯವಿಲ್ಲ. ಏಕೆಂದರೆ ಕ್ರಿಸ್ತನನ್ನು ಬಿಟ್ಟುಹೋದ ಅವರು ಕ್ರಿಸ್ತನನ್ನು ಮತ್ತೆ ಶಿಲುಬೆಗೇರಿಸಿ ಮೊಳೆಗಳನ್ನು ಹೊಡೆಯುವವರೂ ಜನರೆಲ್ಲರ ಮುಂದೆ ಕ್ರಿಸ್ತನಿಗೆ ಅವಮಾನ ಮಾಡುವವರೂ ಆಗಿದ್ದಾರೆ.
7 ಆ ಜನರು ತನ್ನ ಮೇಲೆ ಪದೇಪದೇ ಸುರಿಯುವ ಮಳೆಯನ್ನು ಹೀರಿಕೊಳ್ಳುವ ಭೂಮಿಯಂತಿದ್ದಾರೆ. ಅದು ಜನರಿಗೆ ಆಹಾರವನ್ನು ಕೊಡಲೆಂದು ರೈತನು ಅದರಲ್ಲಿ ಸಸಿಯನ್ನು ನೆಟ್ಟು ಬೆಳೆಸುತ್ತಾನೆ. ಅದು ಜನರಿಗೆ ಉಪಯುಕ್ತವಾದ ಬೆಳೆಗಳನ್ನು ಬೆಳೆಸಿದರೆ, ಅದಕ್ಕೆ ದೇವರಿಂದ ಆಶೀರ್ವಾದ ದೊರೆಯುತ್ತದೆ. 8 ಆದರೆ ಅದು ಮುಳ್ಳುಗಿಡಗಳನ್ನೂ ಕಳೆಯನ್ನೂ ಬೆಳೆಸಿದರೆ ನಿಷ್ಪ್ರಯೋಜಕವಾಗಿ ದೇವರ ಶಾಪಕ್ಕೆ ಗುರಿಯಾಗುತ್ತದೆ. ಆ ಭೂಮಿಯನ್ನು ಬೆಂಕಿಯಿಂದ ಸುಟ್ಟು ನಾಶಮಾಡಲಾಗುವುದು.
9 ಪ್ರಿಯ ಸ್ನೇಹಿತರೇ, ನಾವು ಈ ಸಂಗತಿಗಳನ್ನು ನಿಮಗೆ ಹೇಳುತ್ತಿದ್ದರೂ ನಿಮ್ಮಿಂದ ಇದಕ್ಕಿಂತಲೂ ಉತ್ತಮವಾದ ಕಾರ್ಯಗಳನ್ನು ಅಪೇಕ್ಷಿಸುತ್ತೇವೆ. ರಕ್ಷಣೆಗೆ ಸಂಬಂಧಿಸಿದ ಕಾರ್ಯಗಳನ್ನು ನೀವು ಮಾಡುತ್ತೀರೆಂದು ನಾವು ದೃಢವಾಗಿ ನಂಬಿದ್ದೇವೆ. 10 ದೇವರು ನ್ಯಾಯವಂತನಾಗಿದ್ದಾನೆ. ನೀವು ಮಾಡಿದ ಉಪಕಾರವನ್ನು ಮತ್ತು ದೇವಜನರಿಗೆ ಸಹಾಯ ಮಾಡಿದ್ದರ ಮೂಲಕ ಮತ್ತು ಸಹಾಯ ಮಾಡುತ್ತಲೇ ಇರುವುದರ ಮೂಲಕ ನೀವು ಆತನಿಗೆ ತೋರಿದ ಪ್ರೀತಿಯನ್ನು ಆತನು ಮರೆತುಬಿಡುವುದಿಲ್ಲ. 11 ನಿಮ್ಮಲ್ಲಿ ಪ್ರತಿಯೊಬ್ಬರು ತಮ್ಮ ಇಡೀ ಜೀವನದಲ್ಲಿ ಇದೇ ಆಸಕ್ತಿಯುಳ್ಳವರಾಗಿ ನಿಮ್ಮ ನಿರೀಕ್ಷೆಯನ್ನು ದೃಢಪಡಿಸಿಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. 12 ನೀವು ಸೋಮಾರಿಗಳಾಗಿರಬೇಕೆಂಬುದು ನಮ್ಮ ಅಪೇಕ್ಷೆಯಲ್ಲ. ದೇವರ ವಾಗ್ದಾನದ ಫಲಗಳನ್ನು ಪಡೆಯುವ ಜನರಂತೆ ನೀವಿರಬೇಕೆಂಬುದು ನಮ್ಮ ಅಪೇಕ್ಷೆ. ಆ ಜನರಿಗೆ ನಂಬಿಕೆ ಮತ್ತು ತಾಳ್ಮೆಯಿದ್ದುದರಿಂದ ಅವರು ದೇವರ ವಾಗ್ದಾನದಂತೆ ಫಲವನ್ನು ಪಡೆದರು.
13 ದೇವರು ಅಬ್ರಹಾಮನಿಗೆ ಒಂದು ವಾಗ್ದಾನ ಮಾಡಿದನು. ದೇವರಿಗಿಂತ ದೊಡ್ಡವನಿಲ್ಲ. ಆದ್ದರಿಂದ, ದೇವರು ತನ್ನ ಮೇಲೆಯೇ ಆಣೆಯಿಟ್ಟು ತನ್ನ ಮಾತಿನಂತೆಯೇ ಮಾಡಿದನು. 14 ಆತನು ಅವನಿಗೆ, “ನಾನು ನಿಜವಾಗಿಯೂ ನಿನ್ನನ್ನು ಆಶೀರ್ವದಿಸುತ್ತೇನೆ. ಅನೇಕಾನೇಕ ಸಂತತಿಗಳನ್ನು ನಿನಗೆ ದಯಪಾಲಿಸುವೆನು”(A) ಎಂದು ಹೇಳಿದನು. 15 ಅಬ್ರಹಾಮನು ಇದರ ನೆರವೇರುವಿಕೆಗಾಗಿ ತಾಳ್ಮೆಯಿಂದ ಕಾದಿದ್ದನು. ತರುವಾಯ ಅವನಿಗೆ ದೇವರ ವಾಗ್ದಾನದ ಫಲ ದೊರೆಯಿತು.
16 ಜನರು ವಾಗ್ದಾನ ಮಾಡುವಾಗ ಯಾವಾಗಲೂ ತಮಗಿಂತ ದೊಡ್ಡವರಾದ ಯಾರಾದರೊಬ್ಬರನ್ನು ಬಳಸಿಕೊಳ್ಳುತ್ತಾರೆ. ಅವರು ಹೇಳಿದ್ದು ನಿಜವೆಂಬುದನ್ನು ಆ ವಾಗ್ದಾನವು ಶ್ರುತಪಡಿಸುತ್ತದೆ. ಇದರಿಂದಾಗಿ ಅವರ ಎಲ್ಲಾ ವಾಗ್ವಾದಗಳಿಗೆ ಕೊನೆಯಾಗುತ್ತದೆ. 17 ಹಾಗೆಯೇ ದೇವರು ತನ್ನ ವಾಗ್ದಾನವನ್ನು ಬಾಧ್ಯವಾಗಿ ಪಡೆಯುವ ಜನರಿಗೆ ತನ್ನ ಸಂಕಲ್ಪವು ಸ್ಥಿರವಾದದ್ದು ಎಂಬುದನ್ನು ಸ್ಪಷ್ಟಪಡಿಸಲು ಆಣೆಯಿಟ್ಟು ನಿಶ್ಚಯಪಡಿಸಿದನು. 18 ದೇವರ ವಾಗ್ದಾನ ಮತ್ತು ಆಣೆ ಅಚಲವಾದ ಎರಡು ಆಧಾರಗಳಾಗಿವೆ. ಇವುಗಳ ವಿಷಯದಲ್ಲಿ ನಮಗೆಂದಿಗೂ ಮೋಸವಾಗುವುದಿಲ್ಲ.
ಇದರಿಂದಾಗಿ, ದೇವರ ರಕ್ಷಣೆಗಾಗಿ ಓಡಿ ಬಂದಿರುವ ನಾವು ನಮ್ಮ ನಿರೀಕ್ಷೆಯಲ್ಲಿ ಸ್ಥಿರವಾಗಿರಲು ಬಲವಾದ ಪ್ರೋತ್ಸಾಹ ಉಂಟಾಯಿತು. 19 ಈ ನಿರೀಕ್ಷೆಯು ನಮ್ಮ ಆತ್ಮಗಳನ್ನು ಅಪಾಯದಲ್ಲಿ ಕೊಚ್ಚಿಕೊಂಡು ಹೋಗದಂತೆ ಕಾಪಾಡುವ ಬಲವಾದ ಸ್ಥಿರವಾದ ಲಂಗರಿನಂತಿದೆ. ಅದು ಸ್ವರ್ಗದಾಲಯದ ತೆರೆಯ ಮರೆಯಲ್ಲಿರುವ ಮಹಾ ಪವಿತ್ರಸ್ಥಳದ ಒಳಕ್ಕೆ ಪ್ರವೇಶಿಸುತ್ತದೆ. 20 ಯೇಸು ಈಗಾಗಲೇ ಅಲ್ಲಿಗೆ ಪ್ರವೇಶಿಸಿ, ಅನುಸರಿಸುವುದಕ್ಕಾಗಿ ಮಾರ್ಗವನ್ನು ತೋರಿದನು. ಯೇಸು ಮೆಲ್ಕಿಜೆದೇಕನಂತೆ ಸದಾಕಾಲಕ್ಕೂ ಇರುವ ಪ್ರಧಾನಯಾಜಕನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International