Old/New Testament
ಯೆಹೂದದ ಅರಸಾನದ ಯೋಷೀಯ
34 ಯೋಷೀಯನು ಅರಸನಾದಾಗ ಎಂಟು ವರ್ಷ ಪ್ರಾಯದವನಾಗಿದ್ದನು. ಅವನು ಮೂವತ್ತೊಂದು ವರ್ಷದ ತನಕ ಜೆರುಸಲೇಮಿನಲ್ಲಿ ರಾಜ್ಯಭಾರವನ್ನು ಮಾಡಿದನು. 2 ಯೋಷೀಯನು ಯೆಹೋವನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನೇ ಮಾಡಿದನು. ಅವನು ತನ್ನ ಪೂರ್ವಿಕನಾದ ದಾವೀದನಂತೆ ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು. ಅವನು ಒಳ್ಳೆಯ ಕಾರ್ಯಗಳನ್ನು ಮಾಡುವುದನ್ನು ಬಿಟ್ಟುಬಿಡಲಿಲ್ಲ. 3 ಅವನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ತನ್ನ ಪಿತೃವಾದ ದಾವೀದನು ಅನುಸರಿಸಿದ್ದ ದೇವರನ್ನು ಅನುಸರಿಸಿದನು. ಆಗ ಅವನು ಇನ್ನೂ ಎಳೆಯ ಪ್ರಾಯದವನಾಗಿದ್ದನು. ಅವನು ಪಟ್ಟಕ್ಕೆ ಬಂದ ಹನ್ನೆರಡನೆಯ ವರ್ಷದಲ್ಲಿ, ಜೆರುಸಲೇಮಿನಲ್ಲಿ ಮತ್ತು ಯೆಹೂದದಲ್ಲಿದ್ದ ಎತ್ತರವಾದ ಸ್ಥಳಗಳನ್ನೂ ಅಶೇರಸ್ತಂಭಗಳನ್ನೂ ಎರಕದ ಮತ್ತು ಕೆತ್ತನೆಯ ವಿಗ್ರಹಗಳನ್ನೂ ನಾಶಮಾಡಿದನು. 4 ಜನರು ಬಾಳ್ ದೇವರ ವಿಗ್ರಹಗಳನ್ನೂ ಯಜ್ಞವೇದಿಕೆಗಳನ್ನೂ ಯೋಷೀಯನ ಮುಂದೆಯೇ ಕೆಡವಿಹಾಕಿದರು. ಆಮೇಲೆ ಯೋಷೀಯನು ಉನ್ನತಸ್ಥಳದಲ್ಲಿದ್ದ ಧೂಪವೇದಿಕೆಯನ್ನು ಕೆಡವಿ ಹಾಕಿ, ವಿಗ್ರಹಗಳನ್ನೆಲ್ಲಾ ಒಡೆದು ಪುಡಿಮಾಡಿ ಬಾಳ್ ದೇವರ ಪೂಜಾರಿಗಳ ಸಮಾಧಿಯ ಮೇಲೆ ಚೆಲ್ಲಿದನು. 5 ಯೋಷೀಯನು ಬಾಳ್ ದೇವರ ವಿಗ್ರಹಗಳನ್ನೂ ಪೂಜಾರಿಯವರ ಎಲುಬುಗಳನ್ನೂ ಅವರ ವೇದಿಕೆಗಳ ಮೇಲೆಯೇ ಸುಟ್ಟುಬಿಟ್ಟನು. ಹೀಗೆ ಅವನು ಯೆಹೂದವನ್ನು ಮತ್ತು ಜೆರುಸಲೇಮನ್ನು ಶುಚಿಗೊಳಿಸಿದನು ಮತ್ತು ಶುದ್ಧೀಕರಿಸಿದನು. 6 ಅದೇ ಪ್ರಕಾರ ಎಫ್ರಾಯೀಮ್, ಮನಸ್ಸೆ, ಸಿಮೆಯೋನ್ ಮತ್ತು ನಫ್ತಾಲಿ ಪ್ರಾಂತ್ಯಗಳ ಉದ್ದಕ್ಕೂ ಮಾಡಿದನು. ಆ ಪಟ್ಟಣಗಳ ಸಮೀಪದಲ್ಲಿದ್ದ ಹಾಳುಬಿದ್ದವುಗಳಿಗೂ ಅವನು ಹಾಗೆಯೇ ಮಾಡಿದನು. 7 ಅಲ್ಲಿಂದ ಮುಂದೆ ಇಸ್ರೇಲ್ ದೇಶದಲ್ಲೂ ಪೂಜಾಸ್ಥಳಗಳನ್ನು ಕೆಡವಿ, ಅಶೇರಸ್ತಂಭಗಳನ್ನು ತುಂಡರಿಸಿ ಎರಕದ ಕೆತ್ತನೆಯ ವಿಗ್ರಹಗಳನ್ನು ಪುಡಿಮಾಡಿ, ಧೂಪವೇದಿಕೆಗಳನ್ನೆಲ್ಲಾ ನಾಶಮಾಡಿ ಜೆರುಸಲೇಮಿಗೆ ಹಿಂತಿರುಗಿದನು.
8 ತನ್ನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಯೋಷೀಯನು ಶಾಫಾನ್, ಮಾಸೇಯ ಮತ್ತು ಯೋವಾಹ ಇವರನ್ನು ತನ್ನ ದೇವರಾದ ಯೆಹೋವನ ಆಲಯವನ್ನು ಸರಿಪಡಿಸಲು ಕಳುಹಿಸಿದನು. ಶಾಫಾನನ ತಂದೆಯ ಹೆಸರು ಅಚಲ್ಯ. ಮಾಸೇಯನು ನಗರದ ನಾಯಕನಾಗಿದ್ದನು. ಯೋವಾಹನ ತಂದೆಯ ಹೆಸರು ಯೆಹೋವಾಹಾಜ್. ಯೋವಾಹನು ರಾಜಲೇಖಕನೂ ಆಗಿದ್ದನು.
ಯೆಹೂದವನ್ನು ಮತ್ತು ದೇವಾಲಯವನ್ನು ಶುಚಿಮಾಡುವ ಉದ್ದೇಶದಿಂದ ಯೋಷೀಯನು ದೇವಾಲಯದ ದುರಸ್ತಿಕಾರ್ಯಕ್ಕೆ ಕೈ ಹಾಕಿದನು. 9 ಜನರು ದೇವಾಲಯದ ದುರಸ್ತಿಗಾಗಿ ಅರ್ಪಿಸಿದ್ದ ಕಾಣಿಕೆಯನ್ನು ಅವರು ಮಹಾಯಾಜಕನಾದ ಹಿಲ್ಕೀಯನಿಗೆ ತಂದುಕೊಟ್ಟರು. ಮನಸ್ಸೆ, ಎಫ್ರಾಯೀಮ್ ಮತ್ತು ಇಸ್ರೇಲ್ ರಾಜ್ಯದ ಜನರು ಕೊಟ್ಟ ಕಾಣಿಕೆಯನ್ನು ದ್ವಾರಪಾಲಕರಾದ ಲೇವಿಯರು ಒಟ್ಟುಗೂಡಿಸಿದರು. ಯೆಹೂದ, ಬೆನ್ಯಾಮೀನ್ ಕುಲದವರೂ ಜೆರುಸಲೇಮಿನಲ್ಲಿ ವಾಸಿಸುವರೂ ಕೊಟ್ಟ ಕಾಣಿಕೆಗಳನ್ನು ಅವರು ತೆಗೆದುಕೊಂಡರು. 10 ದೇವಾಲಯದ ಕೆಲಸ ಮಾಡಿದವರಿಗೆ ಲೇವಿಯರು ಹಣವನ್ನು ಕೊಟ್ಟರು. 11 ಬಡಗಿಗಳಿಗೂ ಮೇಸ್ತ್ರಿಗಳಿಗೂ ಈ ಹಣದಿಂದ ಸಂಬಳ ಕೊಟ್ಟರು; ಬೇಕಾಗಿದ್ದ ಕಲ್ಲುಗಳನ್ನೂ ಮರದ ತೊಲೆಗಳನ್ನೂ ಇತರ ವಸ್ತುಗಳನ್ನೂ ಕೊಂಡುಕೊಂಡರು. ಹಿಂದಿನ ಕಾಲದಲ್ಲಿ ಯೆಹೂದದ ಅರಸರು ಯೆಹೋವನ ದೇವಾಲಯವನ್ನು ಸರಿಪಡಿಸುವುದರ ಬಗ್ಗೆ ಹೆಚ್ಚು ಗಮನಕೊಟ್ಟಿರಲಿಲ್ಲ. ಆದ್ದರಿಂದ ಕಟ್ಟಡವು ಹಳೆಯದಾಗಿ ಬೀಳುವ ಸ್ಥಿತಿಯಲ್ಲಿತ್ತು. 12-13 ಕೆಲಸಗಾರರು ನಂಬಿಗಸ್ತಿಕೆಯಿಂದ ಕೆಲಸ ಮಾಡಿದರು. ಅವರು ಮೇಲ್ವಿಚಾರಕರು ಯಹತ್ ಮತ್ತು ಓಬದ್ಯ. ಇವರು ಲೇವಿಯರಾಗಿದ್ದರು ಮತ್ತು ಮೆರಾರೀಯ ಸಂತತಿಯವರಾಗಿದ್ದರು. ಇತರ ಮೇಲ್ವಿಚಾರಕರು ಯಾರೆಂದರೆ: ಜೆಕರ್ಯ ಮತ್ತು ಮೆಷುಲ್ಲಾಮ್. ಇವರು ಕೆಹಾತ್ಯನ ಸಂತತಿಯವರಾಗಿದ್ದರು. ವಾದ್ಯಗಳನ್ನು ಬಾರಿಸುವುದರಲ್ಲಿ ನಿಪುಣರಾದ ಲೇವಿಯರೂ ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದರು. ಇತರ ಕೆಲವು ಲೇವಿಯರು, ಆ ಯೋಜನೆಯ ಅಧಿಕಾರಿಗಳಾಗಿಯೂ ಕಾರ್ಯದರ್ಶಿಗಳಾಗಿಯೂ ದ್ವಾರಪಾಲಕರಾಗಿಯೂ ನೇಮಕ ಮಾಡಲ್ಪಟ್ಟವರಾಗಿದ್ದರು.
ಧರ್ಮಶಾಸ್ತ್ರವು ದೊರೆತದ್ದು
14 ದೇವಾಲಯದೊಳಗೆ ಶೇಖರಿಸಿಟ್ಟಿದ್ದ ಹಣವನ್ನು ಲೇವಿಯರು ತಂದುಕೊಟ್ಟರು. ಅದೇ ಸಮಯದಲ್ಲಿ ಮಹಾಯಾಜಕನಾದ ಹಿಲ್ಕೀಯನು ಮೋಶೆಯ ಧರ್ಮಶಾಸ್ತ್ರದ ಪ್ರತಿಯೊಂದನ್ನು ದೇವಾಲಯದಲ್ಲಿ ಕಂಡನು. 15 ಕಾರ್ಯದರ್ಶಿಯಾದ ಶಾಫಾನನಿಗೆ, “ದೇವಾಲಯದಲ್ಲಿ ನನಗೆ ಯೆಹೋವನ ಧರ್ಮಶಾಸ್ತ್ರವು ಸಿಕ್ಕಿತು” ಎಂದು ಹೇಳಿ ಅದನ್ನು ಕೊಟ್ಟನು. 16 ಶಾಫಾನನು ಅದನ್ನು ಅರಸನಾದ ಯೋಷೀಯನಿಗೆ ತಂದು ಅದು ದೊರೆತ ವಿಷಯವನ್ನು ತಿಳಿಸಿದನು. “ನೀನು ಹೇಳಿದ ಪ್ರಕಾರವೇ ನಿನ್ನ ಸೇವಕರು ಮಾಡುತ್ತಿದ್ದಾರೆ. 17 ದೇವಾಲಯದೊಳಗಿದ್ದ ಹಣವನ್ನು ಅವರು ತೆಗೆದು ಅದನ್ನು ಕೆಲಸಗಾರರಿಗೂ ಮೇಲ್ವಿಚಾರಕರಿಗೂ ಕೊಡುತ್ತಿದ್ದಾರೆ. ಯಾಜಕನಾದ ಹಿಲ್ಕೀಯನು ಈ ಪುಸ್ತಕವನ್ನು ನನಗೆ ಕೊಟ್ಟನು” 18 ಎಂದು ಹೇಳಿ ಆ ಪುಸ್ತಕವನ್ನು ಓದತೊಡಗಿದನು. ಅವನು ಅರಸನ ಮುಂದೆ ನಿಂತುಕೊಂಡು ಓದುತ್ತಿರಲು 19 ಅರಸನಾದ ಯೋಷೀಯನು ಧರ್ಮಶಾಸ್ತ್ರದ ಮಾತುಗಳನ್ನು ಕೇಳಿ ತನ್ನ ಬಟ್ಟೆಗಳನ್ನು ಹರಿದುಕೊಂಡನು. 20 ಆಗ ಅರಸನು ಹಿಲ್ಕೀಯ, ಶಾಫಾನನ ಮಗನಾದ ಅಹೀಕಾಮ್, ಮೀಕನ ಮಗನಾದ ಅಬ್ದೋನ್, ಕಾರ್ಯದರ್ಶಿಯಾದ ಶಾಫಾನ್ ಮತ್ತು ಸೇವಕನಾದ ಅಸಾಯ ಇವರಿಗೆ ಹೇಳಿದ್ದೇನೆಂದರೆ, 21 “ಹೋಗಿ ನನ್ನ ವಿಷಯವಾಗಿಯೂ ಇಸ್ರೇಲ್ ಮತ್ತು ಯೆಹೂದದಲ್ಲಿರುವ ಜನರಿಗೋಸ್ಕರವಾಗಿಯೂ ಯೆಹೋವನಲ್ಲಿ ವಿಚಾರಿಸಿರಿ. ಯೆಹೋವನು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಯಾಕೆಂದರೆ ನಮ್ಮ ಪೂರ್ವಿಕರು ಆತನ ಧರ್ಮಶಾಸ್ತ್ರದ ಪ್ರಕಾರ ನಡೆದುಕೊಂಡಿಲ್ಲ. ಈ ಪುಸ್ತಕದಲ್ಲಿ ಮಾಡಬೇಕೆಂದು ಹೇಳಿದ್ದನ್ನು ಅವರು ಮಾಡದೆ ಹೋಗಿದ್ದಾರೆ” ಎಂದು ಹೇಳಿದನು.
22 ಹಿಲ್ಕೀಯನೂ ಅರಸನ ಸೇವಕರೂ ಪ್ರವಾದಿನಿಯಾಗಿದ್ದ ಹುಲ್ದಳ ಬಳಿಗೆ ಹೋದರು. ಆಕೆ ತೊಕ್ಹತನ ಮಗನಾದ ಶಲ್ಲೂಮನ ಹೆಂಡತಿಯಾಗಿದ್ದಳು. ತೊಕ್ಹತನು ಹಸ್ರನ ಮಗ. ಇವನು ಅರಸನ ಬಟ್ಟೆಬರೆಗಳ ಮುಖ್ಯಸ್ತನಾಗಿದ್ದನು. ಹುಲ್ದಳು ಜೆರುಸಲೇಮಿನ ಹೊಸ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದಳು. ಅರಸನು ಹೇಳಿದ್ದನ್ನೆಲ್ಲಾ ಸೇವಕರು ಆಕೆಗೆ ತಿಳಿಸಿದರು. 23 ಹುಲ್ದಳು ಅವರಿಗೆ, “ಅರಸನಾದ ಯೋಷೀಯನಿಗೆ ಹೋಗಿ ತಿಳಿಸಿರಿ. 24 ಯೆಹೋವನು ಹೇಳುವುದೇನೆಂದರೆ, ‘ನಾನು ಈ ಸ್ಥಳಕ್ಕೂ ಇಲ್ಲಿ ವಾಸಿಸುವವರಿಗೂ ಸಂಕಟವನ್ನು ಬರಮಾಡುವೆನು. ಯೆಹೂದ ದೇಶದ ಅರಸನ ಮುಂದೆ ಓದಿದಂಥ ಪುಸ್ತಕದಲ್ಲಿ ಬರೆಯಿಸಿದ ಎಲ್ಲಾ ಶಾಪಗಳನ್ನು ನಾನು ಬರಮಾಡುವೆನು. 25 ಯಾಕೆಂದರೆ ಜನರು ನನ್ನನ್ನು ತೊರೆದು ಸುಳ್ಳುದೇವರುಗಳಿಗೆ ಧೂಪಹಾಕಿದರು. ಅವರು ತಮ್ಮ ಕೆಟ್ಟಕಾರ್ಯಗಳಿಂದ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ನನ್ನ ಕೋಪಾಗ್ನಿಯನ್ನು ಈ ಸ್ಥಳದ ಮೇಲೆ ಸುರಿಸುವೆನು. ಉರಿಯುವ ಬೆಂಕಿಯಂತಿರುವ ನನ್ನ ಕೋಪಾಗ್ನಿಯನ್ನು ಆರಿಸಲು ಸಾಧ್ಯವಿಲ್ಲ.’
26 “ಆದರೆ ಯೆಹೋವನನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಾದ ಯೋಷೀಯನಿಗೆ ಹೀಗೆ ಹೇಳಿರಿ: ‘ನೀನು ಸ್ವಲ್ಪಕಾಲದ ಹಿಂದೆ ಕೇಳಿದ ವಿಷಯಗಳ ಬಗ್ಗೆ ಇಸ್ರೇಲಿನ ಯೆಹೋವನು ಹೇಳುವುದೇನೆಂದರೆ, 27 ಯೋಷೀಯನೇ, ನೀನು ನನ್ನ ಮಾತುಗಳನ್ನು ಕೇಳಿದಾಗ ನನ್ನ ಮುಂದೆ ತಗ್ಗಿಸಿಕೊಂಡು ಪಶ್ಚಾತ್ತಾಪಪಟ್ಟು ನಿನ್ನ ಬಟ್ಟೆಗಳನ್ನು ಹರಿದುಕೊಂಡೆ. ನನ್ನ ಮುಂದೆ ನೀನು ಗೋಳಾಡಿದೆ. ನಿನ್ನ ಹೃದಯವು ಮೃದುವಾದದ್ದರಿಂದ, ನಿನ್ನನ್ನು ಲಕ್ಷಿಸಿದೆನು. 28 ನಿನ್ನನ್ನು ನಿನ್ನ ಪೂರ್ವಿಕರ ಬಳಿಗೆ ತೆಗೆದುಕೊಳ್ಳುತ್ತೇನೆ. ನಿನ್ನ ಪ್ರಾರ್ಥನೆಯನ್ನು ನಾನು ಕೇಳಿದೆ. ನೀನು ನಿನ್ನ ಸಮಾಧಿಗೆ ಸಮಾಧಾನದಿಂದ ಸೇರುವೆ. ನಾನು ಈ ಸ್ಥಳದ ಮೇಲೂ ಈ ಸ್ಥಳದಲ್ಲಿ ವಾಸಿಸುವವರ ಮೇಲೂ ತರುವ ಸಂಕಟಗಳಲ್ಲಿ ನೀನು ಒಂದಾನ್ನಾದರೂ ಅನುಭವಿಸುವದಿಲ್ಲ.’” ಹಿಲ್ಕೀಯನೂ ಅರಸನ ಸೇವಕರೂ ಈ ಸಂದೇಶವನ್ನು ಅರಸನಾದ ಯೋಷೀಯನಿಗೆ ತಂದರು.
29 ಅರಸನಾದ ಯೋಷೀಯನು ಯೆಹೂದದ ಮತ್ತು ಜೆರುಸಲೇಮಿನ ಪ್ರಧಾನರನ್ನು ತನ್ನ ಬಳಿಗೆ ಕರೆಯಿಸಿದನು. 30 ಅರಸನೂ ಯೆಹೂದದಲ್ಲಿ ವಾಸಿಸುವ ಜನರೂ ಜೆರುಸಲೇಮಿನಲ್ಲಿ ವಾಸಿಸುವ ಜನರೂ ಯಾಜಕರೂ ಲೇವಿಯರೂ ದೊಡ್ಡವರು ಸಣ್ಣವರು ಎಂಬ ವ್ಯತ್ಯಾಸವಿಲ್ಲದೆ ತಮ್ಮ ಅರಸನೊಂದಿಗೆ ಇದ್ದರು. ಯೋಷೀಯನು ಧರ್ಮಶಾಸ್ತ್ರವನ್ನು ಜನರಿಗೆ ಓದಿ ತಿಳಿಸಿದನು. ಆ ಪುಸ್ತಕವು ದೇವಾಲಯದಲ್ಲಿ ಸಿಕ್ಕಿತ್ತು. 31 ಆಮೇಲೆ ಅರಸನು ತನ್ನ ಸ್ಥಳದಲ್ಲಿ ಎದ್ದುನಿಂತು, ಯೆಹೋವನ ಎಲ್ಲಾ ಕಟ್ಟಳೆಗಳಿಗೆ ವಿಧೇಯನಾಗಿ ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಮನಸ್ಸಿನಿಂದಲೂ ಅನುಸರಿಸುವುದಾಗಿ ಪ್ರಮಾಣಮಾಡಿದನು. 32 ಆಮೇಲೆ ಎಲ್ಲಾ ಜೆರುಸಲೇಮಿನವರಿಂದಲೂ ಮತ್ತು ಬೆನ್ಯಾಮೀನ್ಯರಿಂದಲೂ ಪ್ರಮಾಣ ಮಾಡಿಸಿದನು. ತಮ್ಮ ಪೂರ್ವಿಕರು ವಿಧೇಯರಾಗಿದ್ದ ದೇವರಿಗೆ ತಾವೂ ವಿಧೇಯರಾಗಿರುವುದಾಗಿ ಅವರು ಪ್ರಮಾಣ ಮಾಡಿದರು. 33 ಇಸ್ರೇಲ್ ಜನರ ಬಳಿ ನಾನಾ ಜನಾಂಗದವರ ವಿಗ್ರಹಗಳಿದ್ದವು. ಆದರೆ ಯೋಷೀಯನು ಆ ವಿಗ್ರಹಗಳನ್ನೆಲ್ಲಾ ನಾಶಮಾಡಿದನು. ಇಸ್ರೇಲರು ದೇವರಾದ ಯೆಹೋವನ ಸೇವೆಮಾಡುವಂತೆ ಯೋಷೀಯನು ಮಾಡಿದನು. ಯೋಷೀಯನು ಬದುಕಿದ್ದಷ್ಟು ಕಾಲ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಸೇವೆಮಾಡಿದರು.
ಯೋಷೀಯನು ಪಸ್ಕಹಬ್ಬವನ್ನು ಆಚರಿಸಿದ್ದು
35 ಅರಸನಾದ ಯೋಷೀಯನು ಯೆಹೋವನಿಗೆ ಪಸ್ಕಹಬ್ಬವನ್ನು ಜೆರುಸಲೇಮಿನಲ್ಲಿ ಆಚರಿಸಿದನು. ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯು ವಧಿಸಲ್ಪಟ್ಟಿತು. 2 ದೇವಾಲಯದಲ್ಲಿ ಸೇವೆ ಮಾಡುತ್ತಿದ್ದ ಯಾಜಕರನ್ನು ಯೋಷೀಯನು ಪ್ರೋತ್ಸಾಹಿಸಿ ವಿವಿಧ ಕೆಲಸಕಾರ್ಯಗಳಿಗೆ ಯಾಜಕರನ್ನು ಆರಿಸಿದನು. 3 ಎಲ್ಲಾ ಇಸ್ರೇಲರಿಗೆ ಉಪದೇಶಿಸತಕ್ಕವರೂ ಯೆಹೋವನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆ ಯೋಷೀಯನು, “ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಸೊಲೊಮೋನನು ಕಟ್ಟಿದ ದೇವಾಲಯದೊಳಗೆ ಇಡಿರಿ. ಸೊಲೊಮೋನನು ಇಸ್ರೇಲಿನ ರಾಜನಾದ ದಾವೀದನ ಮಗ. ಆ ಪೆಟ್ಟಿಗೆಯನ್ನು ನಿಮ್ಮ ಹೆಗಲಿನ ಮೇಲೆ ಹೊತ್ತುಕೊಂಡು ಸ್ಥಳದಿಂದ ಸ್ಥಳಕ್ಕೆ ಹೋಗಬೇಡಿ; ನಿಮ್ಮ ದೇವರಾದ ಯೆಹೋವನ ಸೇವೆಮಾಡಿರಿ; ದೇವಜನರಾದ ಇಸ್ರೇಲರ ಸೇವೆಮಾಡಿರಿ. 4 ನಿಮ್ಮ ನಿಮ್ಮ ವಂಶಕ್ರಮದ ಮೇರೆಗೆ ದೇವಾಲಯದೊಳಗೆ ಸೇವೆಮಾಡಲು ನಿಮ್ಮನ್ನು ಸಿದ್ಧಮಾಡಿಕೊಳ್ಳಿರಿ. ಅರಸನಾದ ದಾವೀದನೂ ಅವನ ಮಗನಾದ ಸೊಲೊಮೋನನೂ ನಿಮಗೆ ಕೊಟ್ಟ ಸೇವಾ ಜವಾಬ್ದಾರಿಕೆಗಳನ್ನು ನಡಿಸಿರಿ. 5 ಪವಿತ್ರಸ್ಥಳದಲ್ಲಿ ಲೇವಿಯರೊಂದಿಗೆ ನಿಲ್ಲಿರಿ ಮತ್ತು ಬೇರೆ ಕುಲಗಳ ಜನರಿಗೂ ಸಹಾಯ ಮಾಡುವುದಕ್ಕಾಗಿ ಹೀಗೆ ಮಾಡಿರಿ. 6 ಪಸ್ಕದ ಕುರಿಮರಿಯನ್ನು ವಧಿಸಿ ಯೆಹೋವನಿಗಾಗಿ ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ. ನಿಮ್ಮ ಸೋದರರಾದ ಇಸ್ರೇಲರಿಗೆ ಕುರಿಮರಿಯನ್ನು ಸಿದ್ಧಮಾಡಿರಿ. ಯೆಹೋವನು ನಮಗೆ ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸಿರಿ. ಆತನು ಮೋಶೆಯ ಮೂಲಕ ನಮಗೆ ಈ ವಿಧಿನಿಯಮಗಳನ್ನು ಅನುಗ್ರಹಿಸಿದ್ದಾನೆ” ಎಂದು ಹೇಳಿದನು.
7 ಇಸ್ರೇಲರಿಗೆ ಅರಸನಾದ ಯೋಷೀಯನು ಪಸ್ಕಹಬ್ಬದ ಯಜ್ಞಗಳಿಗಾಗಿ ಮೂವತ್ತು ಸಾವಿರ ಕುರಿಮರಿಗಳನ್ನು ಕೊಟ್ಟನು. ಇದರ ಮೇಲೆ ಮೂರು ಸಾವಿರ ಪಶುಗಳನ್ನು ಅವನು ಜನರಿಗೆ ಕೊಟ್ಟನು. ಈ ಪ್ರಾಣಿಗಳೆಲ್ಲಾ ಅರಸನಾದ ಯೋಷೀಯನದೇ ಆಗಿದ್ದವು. 8 ಯೋಷೀಯನ ಆಡಳಿತಾಧಿಕಾರಿಗಳೂ ಯಾಜಕರಿಗೆ, ಲೇವಿಯರಿಗೆ ಮತ್ತು ಜನರಿಗೆ ಧಾರಾಳವಾಗಿ ಪಶುಗಳನ್ನು ಕೊಟ್ಟರು. ಮಹಾಯಾಜಕನಾದ ಹಿಲ್ಕೀಯ, ಜೆಕರ್ಯ ಮತ್ತು ಯೆಹೀಯೇಲನು ದೇವಾಲಯದ ಮುಖ್ಯಸ್ತರಾಗಿದ್ದರು. ಅವರು ಯಾಜಕರಿಗೆ ಎರಡು ಸಾವಿರದ ಆರು ನೂರು ಕುರಿಗಳನ್ನು ಮತ್ತು ಆಡುಗಳನ್ನು, ಮೂನ್ನೂರು ಹೋರಿಗಳನ್ನು ಪಸ್ಕಹಬ್ಬದ ಯಜ್ಞಗಳಿಗಾಗಿ ಕೊಟ್ಟರು. 9 ಕೋನನ್ಯ, ಸೆಮಾಯ, ನೆತನೇಲ್ ಮತ್ತು ಇವರ ಸಹೋದರರು ಮತ್ತು ಹಷಲ್ಯ, ಯೆಗೀಯೇಲ್, ಯೋಜಾಬಾದ್ ಇವರು ಐನೂರು ಕುರಿಗಳನ್ನು ಆಡುಗಳನ್ನು ಮತ್ತು ಐನೂರು ಹೋರಿಗಳನ್ನು ಪಸ್ಕಹಬ್ಬದ ಯಜ್ಞಕ್ಕಾಗಿ ಲೇವಿಯರಿಗೆ ಕೊಟ್ಟರು. ಇವರು ಲೇವಿಯರ ನಾಯಕರಾಗಿದ್ದರು.
10 ಪಸ್ಕಹಬ್ಬದ ಆಚರಣೆಗಳಿಗೆ ಎಲ್ಲವೂ ಸಿದ್ಧವಾದಾಗ ಯಾಜಕರೂ ಲೇವಿಯರೂ ತಮ್ಮ ನೇಮಿತ ಸ್ಥಳಗಳಲ್ಲಿ ನಿಂತರು. ಇದು ಅರಸನ ಆಜ್ಞೆಯಾಗಿತ್ತು. 11 ಪಸ್ಕದ ಪಶುಗಳನ್ನು ವಧಿಸಿದ ಬಳಿಕ ಲೇವಿಯರು ಅದರ ಚರ್ಮ ಸುಲಿದು ಅದರ ರಕ್ತವನ್ನು ಯಾಜಕರಿಗೆ ಕೊಟ್ಟರು. ಆ ರಕ್ತವನ್ನು ಯಾಜಕರು ವೇದಿಕೆಯ ಮೇಲೆ ಚಿಮಿಕಿಸಿದರು. 12 ಆಮೇಲೆ ಬೇರೆಬೇರೆ ಕುಲಗಳವರಿಗೆ ಸರ್ವಾಂಗಹೋಮವನ್ನರ್ಪಿಸಲು ಪಶುಗಳನ್ನು ಕೊಟ್ಟರು. ಈ ಸರ್ವಾಂಗಹೋಮವು ಮೋಶೆಯ ಕಟ್ಟಳೆಗನುಸಾರವಾಗಿ ನಡೆಯಿತು. 13 ಲೇವಿಯರು ಪಸ್ಕದ ಪಶುಗಳ ಮಾಂಸವನ್ನು ಕಟ್ಟಳೆಯ ಪ್ರಕಾರ ಬೆಂಕಿಯಲ್ಲಿ ಸುಟ್ಟರು. ಪರಿಶುದ್ಧ ಯಜ್ಞದ ಮಾಂಸವನ್ನು ಪಾತ್ರೆಗಳಲ್ಲಿ ಮತ್ತು ಹಂಡೆಗಳಲ್ಲಿ ಬೇಯಿಸಿದರು. ಆಮೇಲೆ ಅವುಗಳನ್ನು ಜನರಿಗೆ ಹಂಚಿದರು. 14 ಬಳಿಕ ಲೇವಿಯರು ತಮಗಾಗಿಯೂ ಆರೋನನ ಸಂತತಿಯವರಾದ ಯಾಜಕರಿಗಾಗಿಯೂ ಮಾಂಸವನ್ನು ಸಿದ್ಧಮಾಡಿದರು. ಆ ಯಾಜಕರು ರಾತ್ರಿ ತನಕವೂ ಕೆಲಸದಲ್ಲಿ ನಿರತರಾಗಿದ್ದರು; ಸರ್ವಾಂಗಹೋಮಗಳನ್ನೂ ಪಶುಗಳ ಕೊಬ್ಬನ್ನೂ ಹೋಮಮಾಡುತ್ತಾ ಇದ್ದರು. 15 ಆಸಾಫನ ಕುಟುಂಬದವರಾದ ಲೇವಿಗಾಯಕರು ದಾವೀದನಿಂದ ನೇಮಕಗೊಂಡಿದ್ದ ಸ್ಥಳದಲ್ಲಿ ನಿಂತುಕೊಂಡರು. ಅವರು ಯಾರೆಂದರೆ: ಆಸಾಫ್, ಹೇಮಾನ್ ಮತ್ತು ಅರಸನ ಪ್ರವಾದಿಯಾಗಿದ್ದ ಯೆದೂತೂನ್. ದ್ವಾರಪಾಲಕರು ತಮ್ಮತಮ್ಮ ಸ್ಥಳಗಳಲ್ಲಿಯೇ ನಿಂತಿದ್ದರು. ಅವರು ತಮ್ಮ ಸ್ಥಳಗಳನ್ನು ಬಿಟ್ಟುಹೋಗುವ ಅಗತ್ಯವಿರಲಿಲ್ಲ ಯಾಕಂದೆರ ಪಸ್ಕದ ಯಜ್ಞಗಳನ್ನು ಅವರ ಸೋದರರಾದ ಲೇವಿಯರು ಅವರಿಗಾಗಿ ಮಾಡಿದರು.
16 ಹೀಗೆ ಅರಸನಾದ ಯೋಷೀಯನ ಆಜ್ಞೆಗನುಸಾರವಾಗಿ ಪಸ್ಕಹಬ್ಬದ ಪ್ರತಿಯೊಂದು ವಿಷಯವು ನಡೆಯಿತು. ಸರ್ವಾಂಗಹೋಮವನ್ನು ಯಜ್ಞವೇದಿಕೆಯಲ್ಲಿ ಸಮರ್ಪಿಸಿದರು. 17 ಇಸ್ರೇಲಿನ ಜನರೂ ಅಲ್ಲಿ ಸೇರಿಬಂದವರೂ ಪಸ್ಕಹಬ್ಬವನ್ನು ಮತ್ತು ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿನಗಳವರೆಗೆ ಆಚರಿಸಿದರು. 18 ಪ್ರವಾದಿಯಾದ ಸಮುವೇಲನ ಕಾಲದಿಂದ ಈ ರೀತಿಯಾಗಿ ಪಸ್ಕಹಬ್ಬವನ್ನು ಎಂದೂ ಆಚರಿಸಿರಲಿಲ್ಲ. ಇಸ್ರೇಲರ ಅರಸರಲ್ಲಿ ಯಾರೂ ಈ ರೀತಿಯಾಗಿ ಹಬ್ಬ ಆಚರಿಸಿರಲಿಲ್ಲ. ಅರಸನಾದ ಯೋಷೀಯ, ಯಾಜಕರು, ಲೇವಿಯರು, ಯೆಹೂದದ ಜನರು, ಇಸ್ರೇಲಿನಿಂದ ಬಂದ ಜನರು ಮತ್ತು ಜೆರುಸಲೇಮಿನ ಜನರು ವಿಶೇಷ ರೀತಿಯಲ್ಲಿ ಪಸ್ಕಹಬ್ಬವನ್ನು ಆಚರಿಸಿದರು. 19 ಇದು ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ನಡೆಯಿತು.
ಯೋಷೀಯನ ಮರಣ
20 ದೇವಾಲಯಕ್ಕಾಗಿ ಎಲ್ಲಾ ಒಳ್ಳೆಯ ಕಾರ್ಯಗಳನ್ನು ಯೋಷೀಯನು ಮಾಡಿದನು. ಸ್ವಲ್ಪಕಾಲವಾದ ಬಳಿಕ ಈಜಿಪ್ಟಿನ ಅರಸನಾದ ನೆಕೋ ಯೂಫ್ರೇಟೀಸ್ ನದಿಯ ಬಳಿಯಲ್ಲಿದ್ದ ಕರ್ಕೆಮೀಷ್ ಪಟ್ಟಣದ ಮೇಲೆ ಯುದ್ಧಮಾಡಲು ಹೊರಟನು. ಅರಸನಾದ ಯೋಷೀಯನು ನೆಕೋನ ಮೇಲೆ ಯುದ್ಧಮಾಡಲು ಹೊರಟನು. 21 ಆದರೆ ನೆಕೋ ಯೋಷೀಯನಿಗೆ ಸಂದೇಶವನ್ನು ಕಳುಹಿಸಿ ಅದರಲ್ಲಿ,
“ಅರಸನಾದ ಯೋಷೀಯನೇ, ನಾನು ನಿನಗೆ ವಿರುದ್ಧವಾಗಿ ಬರಲಿಲ್ಲ. ಆದ್ದರಿಂದ ನೀನು ಯುದ್ಧಕ್ಕೆ ಕೈಹಾಕಬೇಡ. ನಾನು ನನ್ನ ವೈರಿಗಳ ಮೇಲೆ ಯುದ್ಧಮಾಡಲು ಬಂದಿದ್ದೇನೆ. ಬೇಗನೆ ಯುದ್ಧಮಾಡಲು ದೇವರು ನನ್ನನ್ನು ಅವಸರಪಡಿಸುತ್ತಿದ್ದಾನೆ. ದೇವರು ನಿನ್ನೊಂದಿಗಿದ್ದಾನೆ. ಆದ್ದರಿಂದ ನನಗೆ ತೊಂದರೆ ಕೊಡಬೇಡ. ನೀನು ನನ್ನ ಮೇಲೆ ಯುದ್ಧ ಮಾಡಿದರೆ ದೇವರು ನಿನ್ನನ್ನು ನಾಶಮಾಡುವನು” ಎಂದು ಹೇಳಿದನು.
22 ಆದರೆ ಅರಸನಾದ ಯೋಷೀಯನು ಹಿಂದಕ್ಕೆ ಹೋಗಲಿಲ್ಲ. ಅವನು ನೆಕೋನನ್ನು ಎದುರಿಸಲು ನಿರ್ಧರಿಸಿದನು. ತನ್ನ ವೇಷ ಬದಲಾಯಿಸಿ ಯುದ್ಧಕ್ಕೆ ಹೋದನು. ದೇವರ ಅಪ್ಪಣೆಯ ಬಗ್ಗೆ ನೆಕೋ ಹೇಳಿದ್ದನ್ನು ಕೇಳಲು ಯೋಷೀಯನು ನಿರಾಕರಿಸಿ ಮೆಗಿದ್ದೋ ಕಣಿವೆಯಲ್ಲಿ ಯುದ್ಧಕ್ಕೆ ಹೊರಟನು. 23 ರಣರಂಗದಲ್ಲಿ ಅರಸನಾದ ಯೋಷೀಯನಿಗೆ ಬಾಣಗಳು ತಾಗಿದ್ದವು. ಆಗ ತನ್ನ ಸೇವಕರಿಗೆ, “ನನ್ನನ್ನು ಇಲ್ಲಿಂದ ಕೊಂಡೊಯ್ಯಿರಿ. ನಾನು ತೀವ್ರವಾಗಿ ಗಾಯಗೊಂಡಿದ್ದೇನೆ” ಅಂದನು.
24 ಆಗ ಸೇವಕರು ಯೋಷೀಯನನ್ನು ಅವನಿದ್ದ ರಥದಿಂದ ತೆಗೆದು ಅವನ ಜೊತೆಯಲ್ಲಿ ತಂದಿದ್ದ ಇನ್ನೊಂದು ರಥದಲ್ಲಿ ಹಾಕಿ ರಣರಂಗದಿಂದ ನೇರವಾಗಿ ಜೆರುಸಲೇಮಿಗೆ ಕೊಂಡೊಯ್ದರು. ಅಲ್ಲಿ ಅವನು ಸತ್ತನು. ಅವನ ಪೂರ್ವಿಕರ ಬಳಿಯಲ್ಲಿ ಅವನನ್ನು ಸಮಾಧಿಮಾಡಿದರು. ಅವನು ಸತ್ತದ್ದನ್ನು ಕೇಳಿ ಯೆಹೂದದ ಮತ್ತು ಜೆರುಸಲೇಮಿನ ಜನರು ತುಂಬಾ ಶೋಕಿಸಿದರು. 25 ಯೆರೆಮೀಯನು ಅವನ ಬಗ್ಗೆ ಶೋಕಗೀತೆಗಳನ್ನು ರಚಿಸಿ ಹಾಡಿದನು. ಆ ಗೀತೆಗಳನ್ನು ಗಂಡಸರು ಹೆಂಗಸರು ಈಗಲೂ ಹಾಡುತ್ತಾರೆ. ಯೋಷೀಯನ ಕುರಿತು ದುಃಖದ ಹಾಡನ್ನು ಹಾಡುವದು ಅವರಿಗೆ ರೂಢಿಯಾಗಿದೆ. ಆ ಗೀತೆಗಳನ್ನು ಮರಣದ ಹಾಡಿನ ಪುಸ್ತಕದಲ್ಲಿ ಬರೆಯಲಾಗಿದೆ.
26-27 ಯೋಷೀಯನು ಅರಸನಾಗಿದ್ದಾಗ ಮಾಡಿದ ಇತರ ಕಾರ್ಯಗಳನ್ನೂ ಅವನ ಆಳ್ವಿಕೆಯ ಪ್ರಾರಂಭದಿಂದ ಕೊನೆಯ ತನಕದ ವಿಷಯಗಳನ್ನೂ ಇಸ್ರೇಲಿನ ಮತ್ತು ಯೆಹೂದದ ಅರಸರ ಗ್ರಂಥದಲ್ಲಿ ಬರೆಯಲಾಗಿದೆ. ದೇವರ ಮೇಲೆ ಯೋಷೀಯನಿಗಿದ್ದ ಭಕ್ತಿಯನ್ನೂ ಅವನು ಯೆಹೋವನಿಗೆ ಹೇಗೆ ವಿಧೇಯನಾಗಿದ್ದನೆಂಬುದನ್ನೂ ಆ ಗ್ರಂಥದಲ್ಲಿ ವಿವರಿಸಿದೆ.
ಯೆಹೂದದ ಅರಸನಾದ ಯೆಹೋವಾಹಾಜ
36 ಯೆಹೂದದ ಜನರು ಯೆಹೋವಾಹಾಜನನ್ನು ತಮ್ಮ ಹೊಸ ಅರಸನನ್ನಾಗಿ ಜೆರುಸಲೇಮಿನಲ್ಲಿ ಆರಿಸಿದರು. ಯೆಹೋವಾಹಾಜನು ಯೋಷೀಯನ ಮಗನು. 2 ಅವನು ತನ್ನ ಇಪ್ಪತ್ತಮೂರನೆ ವಯಸ್ಸಿನಲ್ಲಿ ಪಟ್ಟಕ್ಕೆ ಬಂದನು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳ ಕಾಲ ಆಳಿದನು. 3 ಆ ಬಳಿಕ ಈಜಿಪ್ಟಿನ ನೆಕೋ ಯೆಹೋವಾಹಾಜನನ್ನು ಕೈದಿಯನ್ನಾಗಿ ಮಾಡಿದನು. ಯೆಹೂದದ ಜನರು ತನಗೆ ಮೂರು ಸಾವಿರದ ನಾನೂರು ಕಿಲೋಗ್ರಾಂ ಬೆಳ್ಳಿಯನ್ನೂ ಮೂವತ್ತನಾಲ್ಕು ಕಿಲೋಗ್ರಾಂ ಬಂಗಾರವನ್ನೂ ಕೊಡಲು ಆಜ್ಞಾಪಿಸಿದನು. 4 ನೆಕೋ ಯೆಹೋವಾಹಾಜನ ತಮ್ಮನಾದ ಎಲ್ಯಾಕೀಮನನ್ನು ಯೆಹೋವಾಹಾಜನ ಬದಲಿಗೆ ಯೆಹೂದದ ಮತ್ತು ಜೆರುಸಲೇಮಿನ ಅರಸನನ್ನಾಗಿ ಮಾಡಿದನು. ಅವನಿಗೆ ಎಲ್ಯಾಕೀಮನ ಬದಲು ಯೆಹೋಯಾಕೀಮ ಎಂಬ ಹೆಸರಿಟ್ಟನು. ನೆಕೋ ಯೆಹೋವಾಹಾಜನನ್ನು ಈಜಿಪ್ಟಿಗೆ ತೆಗೆದುಕೊಂಡು ಹೋದನು.
ಯೆಹೂದದ ಅರಸನಾದ ಯೆಹೋಯಾಕೀಮ
5 ಯೆಹೋಯಾಕೀಮನು ಯೆಹೂದ ದೇಶದ ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷ ಪ್ರಾಯದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಯೆಹೋಯಾಕೀಮನು ಯೆಹೋವನ ಚಿತ್ತಕ್ಕೆ ಒಳಗಾಗಲಿಲ್ಲ. ಅವನು ತನ್ನ ದೇವರಾದ ಯೆಹೋವನ ವಿರುದ್ಧವಾಗಿ ಪಾಪಮಾಡಿದನು.
6 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದ ಪ್ರಾಂತ್ಯದ ಮೇಲೆ ಯುದ್ಧಕ್ಕೆ ಬಂದನು. ಯೆಹೋಯಾಕೀಮನನ್ನು ಸೆರೆಹಿಡಿದು ಅವನನ್ನು ಕಂಚಿನ ಸರಪಣಿಯಿಂದ ಕಟ್ಟಿಸಿದನು. ನಂತರ ಯೆಹೋಯಾಕೀಮನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು. 7 ನೆಬೂಕದ್ನೆಚ್ಚರನು ದೇವಾಲಯದಿಂದ ಹಲವಾರು ವಸ್ತುಗಳನ್ನು ತೆಗೆದುಕೊಂಡು ಹೋಗಿ ಬಾಬಿಲೋನಿನ ತನ್ನ ಅರಮನೆಯಲ್ಲಿ ಇಟ್ಟುಕೊಂಡನು. 8 ಯೆಹೋಯಾಕೀಮನು ಮಾಡಿದ ದುಷ್ಕ್ರಿಯೆಗಳೆಲ್ಲಾ ಇಸ್ರೇಲಿನ ಮತ್ತು ಯೆಹೂದದ ರಾಜರುಗಳ ಗ್ರಂಥದಲ್ಲಿ ಬರೆಯಲ್ಪಟ್ಟಿವೆ. ಯೆಹೋಯಾಕೀಮನ ಬದಲು ಯೆಹೋಯಾಕೀನನು ಅರಸನಾದನು. ಇವನು ಯೆಹೋಯಾಕೀಮನ ಮಗ.
ಯೆಹೂದದ ಅರಸನಾದ ಯೆಹೋಯಾಕೀನ
9 ಯೆಹೋಯಾಕೀನನು ಯೆಹೂದ ದೇಶದ ಪಟ್ಟಕ್ಕೆ ಬಂದಾಗ ಹದಿನೆಂಟು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸಗಳ ಕಾಲ ರಾಜ್ಯವನ್ನಾಳಿದನು. ಅವನು ಯೆಹೋವನ ಚಿತ್ತಕ್ಕನುಸಾರವಾಗಿ ನಡೆಯಲಿಲ್ಲ. ಯೆಹೋಯಾಕೀನನು ದೇವರಿಗೆ ವಿರುದ್ಧವಾಗಿ ಪಾಪ ಮಾಡಿದನು. 10 ವಸಂತ ಕಾಲದಲ್ಲಿ ನೆಬೂಕದ್ನೆಚ್ಚರನು ತನ್ನ ಸೇವಕರನ್ನು ಕಳುಹಿಸಿ ಯೆಹೋಯಾಕೀನನನ್ನು ಕರೆಯಿಸಿದನು. ಆ ಸೇವಕರು ದೇವಾಲಯದ ಕೆಲವು ವಸ್ತುಗಳನ್ನೂ ಅವನ ಜೊತೆಯಲ್ಲಿ ಬಾಬಿಲೋನಿಗೆ ತೆಗೆದುಕೊಂಡು ಹೋದರು. ನೆಬೂಕದ್ನೆಚ್ಚರನು ಯೆಹೂದ ಮತ್ತು ಜೆರುಸಲೇಮಿಗೆ ಚಿದ್ಕೀಯನನ್ನು ಹೊಸ ಅರಸನನ್ನಾಗಿ ಮಾಡಿದನು. ಚಿದ್ಕೀಯನು ಯೆಹೋಯಾಕೀನನ ಸಂಬಂಧಿಕನಾಗಿದ್ದನು.
ಯೆಹೂದದ ಅರಸನಾದ ಚಿದ್ಕೀಯನು
11 ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷ ಪ್ರಾಯದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಕಾಲ ರಾಜ್ಯಭಾರ ಮಾಡಿದನು. 12 ಚಿದ್ಕೀಯನು ಯೆಹೋವನ ಚಿತ್ತಾನುಸಾರವಾಗಿ ನಡೆಯಲಿಲ್ಲ. ಅವನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದನು. ಪ್ರವಾದಿಯಾದ ಯೆರೆಮೀಯನು ದೇವರ ಸಂದೇಶವನ್ನು ಕೊಡುತ್ತಾ ಬಂದನು. ಆದರೆ ಚಿದ್ಕೀಯನು ದೇವರೆದುರಿಗೆ ತನ್ನನ್ನು ತಗ್ಗಿಸಿಕೊಳ್ಳದೆ ಯೆರೆಮೀಯನ ಮೂಲಕ ಬಂದ ದೇವರ ಆಜ್ಞೆಗಳಿಗೆ ವಿಧೇಯನಾಗಲಿಲ್ಲ.
ಜೆರುಸಲೇಮಿನ ನಾಶನ
13 ಚಿದ್ಕೀಯನು ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ದಂಗೆ ಎದ್ದನು. ನೆಬೂಕದ್ನೆಚ್ಚರನು ತನಗೆ ವಿಧೇಯನಾಗಿರುವಂತೆ ಚಿದ್ಕೀಯನಿಂದ ಪ್ರಮಾಣ ಮಾಡಿಸಿಕೊಂಡಿದ್ದನು. ಚಿದ್ಕೀಯನು ದೇವರ ಹೆಸರಿನಲ್ಲಿ ಆಣೆಯಿಟ್ಟು ತಾನು ನೆಬೂಕದ್ನೆಚ್ಚರನಿಗೆ ನಂಬಿಗಸ್ತನಾಗಿರುವುದಾಗಿ ಪ್ರಮಾಣಮಾಡಿದ್ದನು. ಆದರೆ ಚಿದ್ಕೀಯನು ಮನಸ್ಸನ್ನು ಕಠಿಣಮಾಡಿಕೊಂಡು ಇಸ್ರೇಲಿನ ದೇವರಾದ ಯೆಹೋವನಿಗೆ ವಿಧೇಯನಾಗಲು ನಿರಾಕರಿಸಿದನು. 14 ಅವನು ಮಾತ್ರವಲ್ಲದೆ ಎಲ್ಲಾ ಯಾಜಕರು, ಯೆಹೂದದ ಜನನಾಯಕರು ಬಹಳ ಪಾಪಗಳನ್ನು ಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟುಹೋಗಿದ್ದರು. ಅವರು ಬೇರೆ ದೇಶಗಳ ನಡವಳಿಕೆಯನ್ನು ಅನುಸರಿಸಿದರು. ಆ ನಾಯಕರುಗಳು ದೇವಾಲಯವನ್ನು ಹಾಳುಮಾಡಿದರು. ಜೆರುಸಲೇಮಿನಲ್ಲಿದ್ದ ಆ ಆಲಯವನ್ನು ಯೆಹೋವನು ತನಗಾಗಿ ಪ್ರತಿಷ್ಠಿಸಿಕೊಂಡಿದ್ದನು. 15 ಅವರ ಪೂರ್ವಿಕರ ದೇವರಾದ ಯೆಹೋವನು ಆಗಾಗ್ಗೆ ತನ್ನ ಪ್ರವಾದಿಗಳನ್ನು ಕಳುಹಿಸಿ ತನ್ನ ಜನರನ್ನು ಎಚ್ಚರಿಸಿದನು. ಯಾಕೆಂದರೆ ಆತನಿಗೆ ತನ್ನ ಜನರೂ ತನ್ನ ಮಂದಿರವೂ ನಾಶವಾಗುವದರಲ್ಲಿ ಇಷ್ಟವಿರಲಿಲ್ಲ. 16 ಆದರೆ ಆತನ ಜನರು ಪ್ರವಾದಿಗಳನ್ನು ಹಾಸ್ಯಮಾಡಿದರು; ಅವರ ಮಾತುಗಳನ್ನು ಕೇಳಲು ನಿರಾಕರಿಸಿದರು; ದೇವರ ಸಂದೇಶವನ್ನು ದ್ವೇಷಿಸಿದರು. ಆಗ ದೇವರ ಕೋಪವು ಅವರ ಮೇಲೆ ಉರಿಯತೊಡಗಿತು. ಅದನ್ನು ನಿಲ್ಲಿಸಲು ಯಾರಿಗೂ ಸಾಧ್ಯವಾಗಲಿಲ್ಲ. 17 ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ನಾಶಮಾಡಲು ಬಾಬಿಲೋನಿನ ಅರಸನನ್ನು ಕಳುಹಿಸಿದನು. ಬಾಬಿಲೋನಿನ ಅರಸನು ದೇವಾಲಯದೊಳಗಿದ್ದ ಯುವಜನರನ್ನು ಕೊಂದುಹಾಕಿದನು. ಅವನಿಗೆ ಯೆಹೂದದ ಮತ್ತು ಜೆರುಸಲೇಮಿನ ಜನರ ಮೇಲೆ ಕರುಣೆಯೇ ಇರಲಿಲ್ಲ. ಅವನು ಚಿಕ್ಕವರನ್ನೂ ದೊಡ್ಡವರನ್ನೂ ಗಂಡಸರನ್ನೂ ಹೆಂಗಸರನ್ನೂ ಬಿಡದೆ ಸಂಹರಿಸಿದನು. ರೋಗಿಗಳನ್ನೂ ಆರೋಗ್ಯವಂತರನ್ನೂ ಸಂಹರಿಸಿದನು; ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ಶಿಕ್ಷಿಸಲು ದೇವರು ನೆಬೂಕದ್ನೆಚ್ಚರನನ್ನು ಉಪಯೋಗಿಸಿದನು. 18 ದೇವಾಲಯದೊಳಗಿದ್ದ ಎಲ್ಲಾ ವಸ್ತುಗಳನ್ನು ನೆಬೂಕದ್ನೆಚ್ಚರನು ಬಾಬಿಲೋನಿಗೆ ಸಾಗಿಸಿದನು. ದೇವಾಲಯದೊಳಗೂ ಅರಸನ ಬಳಿಯಲ್ಲಿಯೂ ಅಧಿಕಾರಿಗಳ ಬಳಿಯಲ್ಲಿಯೂ ಇದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ಬಾಬಿಲೋನಿಗೆ ಸಾಗಿಸಿದನು. 19 ನೆಬೂಕದ್ನೆಚ್ಚರನು ಮತ್ತು ಅವನ ಸೈನಿಕರು ದೇವಾಲಯವನ್ನು ಸುಟ್ಟುಹಾಕಿದರು; ಜೆರುಸಲೇಮ್ ಪಟ್ಟಣದ ಪೌಳಿಗೋಡೆಯನ್ನು ಕೆಡವಿಹಾಕಿದರು; ಅರಸನ ಮತ್ತು ಅವನ ಪರಿವಾರದವರ ಮನೆಗಳನ್ನೆಲ್ಲಾ ಸುಟ್ಟುಹಾಕಿದರು. ಜೆರುಸಲೇಮಿನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನೆಲ್ಲಾ ದೋಚಿದರು ಮತ್ತು ಸುಟ್ಟುಹಾಕಿದರು; 20 ಜೀವದಿಂದುಳಿದ ಜನರನ್ನು ಸೆರೆಹಿಡಿದು ಬಾಬಿಲೋನಿನಗೆ ತೆಗೆದುಕೊಂಡು ಹೋಗಿ ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಪಾರಸಿಯ ಸಾಮ್ರಾಜ್ಯ ಸ್ಥಾಪನೆಯಾಗುವ ತನಕ ಅವರು ಅಲ್ಲಿ ಗುಲಾಮರಾಗಿದ್ದರು. 21 ಹೀಗೆ ಯೆಹೋವನು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿಸಿದ ಮಾತುಗಳನ್ನು ನೆರವೇರಿಸಿದನು. “ಈ ಸ್ಥಳವು ಎಪ್ಪತ್ತು ವರ್ಷಗಳ ತನಕ ಪಾಳುಬೀಳುವದು. ಜನರು ಆಚರಿಸದೆಹೋದ ಸಬ್ಬತ್ ಹಬ್ಬಗಳಿಗೆ ಅದು ಪರಿಹಾರವಾಗಿರುವುದು” ಎಂದು ಯೆರೆಮೀಯನು ಹೇಳಿದ್ದನು.[a]
22 ಪಾರಸಿ ರಾಜನಾದ ಕೋರೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ಯೆಹೋವನು ಅವನಿಂದ ಒಂದು ವಿಶೇಷ ಪ್ರಕಟನೆಯನ್ನು ಹೊರಡಿಸಿದನು. ಯೆರೆಮೀಯನು ಹೇಳಿದ ಮಾತು ನೆರವೇರುವಂತೆ ಇದಾಯಿತು. ಕೊರೇಷನು ತನ್ನ ಸಾಮ್ರಾಜ್ಯದ ಮೂಲೆಮೂಲೆಗಳಿಗೆ ಜನರನ್ನು ಕಳುಹಿಸಿ ಈ ಸಂದೇಶವನ್ನು ಕೊಟ್ಟನು:
23 ಪಾರಸಿ ರಾಜನಾದ ಕೋರೆಷನು ತಿಳಿಸುವದೇನೆಂದರೆ:
ಪರಲೋಕದಲ್ಲಿರುವ ದೇವರಾದ ಯೆಹೋವನು ನನ್ನನ್ನು ಇಡೀ ಭೂಮಿಗೆ ಅರಸನನ್ನಾಗಿ ಮಾಡಿದ್ದಾನೆ. ಆತನು ಜೆರುಸಲೇಮಿನಲ್ಲಿರುವ ತನ್ನ ಆಲಯವನ್ನು ತಿರುಗಿ ಕಟ್ಟುವ ಜವಾಬ್ದಾರಿಕೆಯನ್ನು ನನಗೆ ಕೊಟ್ಟಿರುತ್ತಾನೆ. ಆದ್ದರಿಂದ ದೇವರ ಜನರೆಲ್ಲಾ ಜೆರುಸಲೇಮಿಗೆ ಹಿಂತಿರುಗಿ ಹೋಗಬಹುದು. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗೆ ಇರಲಿ.
19 ಬಳಿಕ, ಯೇಸುವನ್ನು ಕರೆದುಕೊಂಡು ಹೋಗಿ, ಕೊರಡೆಯಿಂದ ಹೊಡೆಯಬೇಕೆಂದು ಪಿಲಾತನು ಆಜ್ಞಾಪಿಸಿದನು. 2 ಸೈನಿಕರು ಮುಳ್ಳುಬಳ್ಳಿಗಳಿಂದ ಒಂದು ಕಿರೀಟವನ್ನು ಮಾಡಿ ಯೇಸುವಿನ ತಲೆಯ ಮೇಲೆ ಇಟ್ಟರು. ಬಳಿಕ ಸೈನಿಕರು ಯೇಸುವಿಗೆ ಕಡುಕೆಂಪಾದ ಅಂಗಿಯನ್ನು ತೊಡಿಸಿದರು. 3 ಸೈನಿಕರು ಪದೇಪದೇ ಯೇಸುವಿನ ಬಳಿಗೆ ಬಂದು, “ಯೆಹೂದ್ಯರ ರಾಜನೇ, ನಿನಗೆ ನಮಸ್ಕಾರ!” ಎಂದು ಹೇಳುತ್ತಾ ಆತನ ಕೆನ್ನೆಗೆ ಹೊಡೆದರು.
4 ಪಿಲಾತನು ಮತ್ತೆ ಹೊರಗೆ ಬಂದು, ಯೆಹೂದ್ಯರಿಗೆ, “ನೋಡಿ! ನಾನು ಯೇಸುವನ್ನು ನಿಮ್ಮ ಬಳಿಗೆ ತರುತ್ತಿದ್ದೇನೆ. ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ ಎಂಬುದು ನಿಮಗೆ ತಿಳಿದಿರಲಿ” ಎಂದು ಹೇಳಿದನು. 5 ಆಗ ಯೇಸು ಹೊರಗೆ ಬಂದನು. ಆತನ ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಇಟ್ಟಿದ್ದರು ಮತ್ತು ಕೆಂಪು ಅಂಗಿಯನ್ನು ಆತನಿಗೆ ತೊಡಿಸಿದ್ದರು. ಪಿಲಾತನು ಯೆಹೂದ್ಯರಿಗೆ, “ಇಗೋ, ಈ ಮನುಷ್ಯನು!” ಎಂದು ಹೇಳಿದನು.
6 ಮಹಾಯಾಜಕರು ಮತ್ತು ಯೆಹೂದ್ಯ ಕಾವಲುಗಾರರು ಯೇಸುವನ್ನು ಕಂಡು, “ಅವನನ್ನು ಶಿಲುಬೆಗೆ ಹಾಕಿಸು! ಅವನನ್ನು ಶಿಲುಬೆಗೆ ಹಾಕಿಸು!” ಎಂದು ಕೂಗಿದರು.
ಆದರೆ ಪಿಲಾತನು, “ನೀವೇ ಆತನನ್ನು ಶಿಲುಬೆಗೆ ಹಾಕಿರಿ. ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ” ಎಂದು ಉತ್ತರಕೊಟ್ಟನು.
7 ಯೆಹೂದ್ಯರು, “ನಮಗೊಂದು ನಿಯಮವಿದೆ. ಅದರ ಪ್ರಕಾರ ಇವನಿಗೆ ಮರಣದಂಡನೆ ಆಗಲೇಬೇಕು. ಯಾಕೆಂದರೆ ಇವನು ತನ್ನನ್ನು ದೇವರ ಮಗನೆಂದು ಹೇಳಿಕೊಂಡಿದ್ದಾನೆ” ಎಂದು ಉತ್ತರಕೊಟ್ಟರು.
8 ಪಿಲಾತನು ಇದನ್ನು ಕೇಳಿ ಬಹು ಭಯಗೊಂಡು, 9 ಮತ್ತೆ ಭವನದೊಳಗೆ ಹೋಗಿ, ಯೇಸುವಿಗೆ, “ನೀನು ಎಲ್ಲಿಯವನು?” ಎಂದು ಕೇಳಿದನು. ಆದರೆ ಯೇಸು ಮೌನವಾಗಿದ್ದನು. 10 ಪಿಲಾತನು, “ನೀನು ನನ್ನೊಂದಿಗೆ ಮಾತಾಡುವುದಿಲ್ಲವೇ? ನಿನ್ನನ್ನು ಬಿಡಿಸುವ ಅಧಿಕಾರವೂ ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗಿದೆ ಎಂಬುದು ನಿನಗೆ ತಿಳಿಯದೋ?” ಎಂದನು.
11 ಯೇಸು “ನನ್ನ ಮೇಲೆ ನಿನಗಿರುವ ಅಧಿಕಾರವೆಂದರೆ ದೇವರು ನಿನಗೆ ಕೊಟ್ಟಿರುವ ಅಧಿಕಾರವೊಂದೇ. ಆದ್ದರಿಂದ ನನ್ನನ್ನು ನಿನ್ನ ಕೈಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪದೋಷವಿರುವುದು” ಎಂದು ಉತ್ತರಕೊಟ್ಟನು.
12 ಇದಾದ ಮೇಲೆ, ಯೇಸುವನ್ನು ಬಿಡುಗಡೆ ಮಾಡಲು ಪಿಲಾತನು ಪ್ರಯತ್ನಿಸಿದನು. ಆದರೆ ಯೆಹೂದ್ಯರು, “ತನ್ನನ್ನು ರಾಜನೆಂದು ಹೇಳಿಕೊಳ್ಳುವ ಯಾವ ವ್ಯಕ್ತಿಯಾಗಲಿ ಸೀಸರನ ವಿರೋಧಿಯಾಗಿದ್ದಾನೆ. ಆದ್ದರಿಂದ ನೀನು ಈ ಮನುಷ್ಯನನ್ನು (ಯೇಸುವನ್ನು) ಬಿಡುಗಡೆ ಮಾಡಿದರೆ, ನೀನು ಸೀಸರನ ಮಿತ್ರನಲ್ಲವೆಂದೇ ಅದರ ಅರ್ಥ” ಎಂದು ಕೂಗಿದರು.
13 ಯೆಹೂದ್ಯರು ಹೇಳಿದ್ದನ್ನು ಕೇಳಿ ಪಿಲಾತನು ಯೇಸುವನ್ನು ಹೊರಗೆ ಕರೆಯಿಸಿ, “ಹಾಸುಗಲ್ಲು” ಎಂಬ ಕಟ್ಟೆಯ (ಯೆಹೂದ್ಯರ ಭಾಷೆ[a] ಯಲ್ಲಿ ಅದರ ಹೆಸರು ಗಬ್ಬಥ.) ಮೇಲಿದ್ದ ನ್ಯಾಯಪೀಠದಲ್ಲಿ ಕುಳಿತುಕೊಂಡನು. 14 ಅಂದು ಪಸ್ಕಹಬ್ಬದ ಸಿದ್ಧತೆಯ ದಿನ ಮತ್ತು ಆಗಲೇ ಮಧ್ಯಾಹ್ನವಾಗಿತ್ತು. ಪಿಲಾತನು ಯೆಹೂದ್ಯರಿಗೆ, “ಇಗೋ, ನಿಮ್ಮ ರಾಜನು!” ಎಂದು ಹೇಳಿದನು.
15 ಯೆಹೂದ್ಯರು, “ಕೊಲ್ಲಿರಿ, ಕೊಲ್ಲಿರಿ; ಅವನನ್ನು ಶಿಲುಬೆಗೇರಿಸಿರಿ!” ಎಂದು ಕಿರುಚಿದರು.
ಪಿಲಾತನು ಯೆಹೂದ್ಯರಿಗೆ, “ನಿಮ್ಮ ರಾಜನನ್ನು ಶಿಲುಬೆಗೇರಿಸಬೇಕೇ?” ಎಂದು ಕೇಳಿದನು.
ಮಹಾಯಾಜಕರು, “ನಮಗಿರುವ ಒಬ್ಬನೇ ರಾಜನೆಂದರೆ ಸೀಸರ್!” ಎಂದು ಉತ್ತರಕೊಟ್ಟರು.
16 ಆಗ ಪಿಲಾತನು, ಯೇಸುವನ್ನು ಶಿಲುಬೆಗೇರಿಸಲು ಅವರಿಗೆ ಒಪ್ಪಿಸಿಕೊಟ್ಟನು.
ಯೇಸುವನ್ನು ಶಿಲುಬೆಗೇರಿಸಿದರು
(ಮತ್ತಾಯ 27:32-44; ಮಾರ್ಕ 15:21-32; ಲೂಕ 23:26-39)
ಸೈನಿಕರು ಯೇಸುವನ್ನು ಕರೆದೊಯ್ದರು. 17 ಯೇಸು ತನ್ನ ಸ್ವಂತ ಶಿಲುಬೆಯನ್ನು ಹೊತ್ತುಕೊಂಡು, “ಕಪಾಲ” ಎಂಬ ಸ್ಥಳಕ್ಕೆ ಹೊರಟನು. (ಯೆಹೂದ್ಯರ ಭಾಷೆಯಲ್ಲಿ ಈ ಸ್ಥಳದ ಹೆಸರು “ಗೊಲ್ಗೊಥಾ.”) 18 ಅವರು ಗೊಲ್ಗೊಥಾದಲ್ಲಿ ಯೇಸವನ್ನೂ ಆತನ ಸಂಗಡ ಇನ್ನಿಬ್ಬರನ್ನೂ ಶಿಲುಬೆಗೇರಿಸಿದರು. ಅವರಿಬ್ಬರನ್ನು ಯೇಸುವಿನ ಎರಡು ಕಡೆಗಳಲ್ಲಿ ಹಾಕಿ, ಯೇಸುವನ್ನು ಅವರ ಮಧ್ಯದಲ್ಲಿ ಹಾಕಿದರು.
19 ಪಿಲಾತನು ಒಂದು ಫಲಕವನ್ನು ಬರೆದು ಶಿಲುಬೆಯ ಮೇಲೆ ಹಚ್ಚಿದನು. ಆ ಫಲಕದಲ್ಲಿ, “ನಜರೇತಿನ ಯೇಸು, ಯೆಹೂದ್ಯರ ರಾಜನು” ಎಂದು ಬರೆದಿತ್ತು. 20 ಆ ಫಲಕವನ್ನು ಯೆಹೂದ್ಯರ ಭಾಷೆಯಲ್ಲಿ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು. ಫಲಕದಲ್ಲಿ ಬರೆದಿರುವುದನ್ನು ಅನೇಕ ಯೆಹೂದ್ಯರು ಓದಿದರು. ಏಕೆಂದರೆ ಯೇಸುವನ್ನು ಶಿಲುಬೆಯ ಮೇಲೆ ಕೊಂದ ಸ್ಥಳವು ಪಟ್ಟಣದ ಸಮೀಪದಲ್ಲಿತ್ತು.
21 ಯೆಹೂದ್ಯ ಮಹಾಯಾಜಕರು ಪಿಲಾತನಿಗೆ, “‘ಯೆಹೂದ್ಯರ ರಾಜನು’ ಎಂದು ಬರೆಯಬೇಡ. ಆದರೆ, ‘ಇವನು ತನ್ನನ್ನು ಯೆಹೂದ್ಯರ ರಾಜ ಎಂದು ಹೇಳಿಕೊಂಡನು’ ಎಂಬುದಾಗಿ ಬರೆ” ಎಂದರು.
22 ಪಿಲಾತನು, “ನಾನು ಬರೆದಿರುವುದನ್ನು ಬದಲಾಯಿಸಲಾಗುವುದಿಲ್ಲ” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International