Old/New Testament
ಹಿಜ್ಕೀಯನು ಪಸ್ಕಹಬ್ಬವನ್ನು ಆಚರಿಸಿದ್ದು
30 ಅರಸನಾದ ಹಿಜ್ಕೀಯನು ಯೆಹೂದದವರಿಗೂ ಇಸ್ರೇಲರಿಗೂ ಎಫ್ರಾಯೀಮ್ ಮನಸ್ಸೆ ಪ್ರಾಂತ್ಯಗಳವರಿಗೂ ಸಂದೇಶ ಕಳುಹಿಸಿ, ಯೆಹೋವನ ಆಲಯಕ್ಕೆ ಬಂದು ಇಸ್ರೇಲಿನ ಯೆಹೋವ ದೇವರಿಗೆ ಪಸ್ಕಹಬ್ಬವನ್ನು ಆಚರಿಸುವಂತೆ ಅವರನ್ನೆಲ್ಲಾ ಆಮಂತ್ರಿಸಿದನು. 2 ಹಿಜ್ಕೀಯ ಅರಸನೂ ಅಧಿಕಾರಿಗಳೂ ಜೆರುಸಲೇಮಿನ ಸಭೆಯವರೆಲ್ಲರೂ ಎರಡನೆಯ ತಿಂಗಳಲ್ಲಿ ಹಬ್ಬವನ್ನು ಆಚರಿಸಲು ನಿರ್ಧರಿಸಿದರು. 3 ಅದಕ್ಕೆ ಕಾರಣವೇನೆಂದರೆ, ನಿಯಮಿತ ದಿವಸದಲ್ಲಿ ಹಬ್ಬ ನಡೆಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಬೇಕಾದಷ್ಟು ಯಾಜಕರು ಆ ಪರಿಶುದ್ಧ ಸೇವೆಗಾಗಿ ತಮ್ಮನ್ನು ಸಿದ್ಧಪಡಿಸಿಕೊಂಡಿರಲಿಲ್ಲ. ಅಲ್ಲದೆ ಜೆರುಸಲೇಮಿನಲ್ಲಿಯೂ ಜನ ಸೇರಿ ಬರಲಿಲ್ಲ. 4 ಈ ನಿರ್ಧಾರವು ಅರಸನಾದ ಹಿಜ್ಕೀಯನಿಗೂ ಜನರಿಗೂ ಸರಿಕಂಡಿತು. 5 ಇದನ್ನು ಬೇರ್ಷೆಬದಿಂದ ಹಿಡಿದು ದಾನ್ ಪಟ್ಟಣದವರೆಗಿನ ಜನರಿಗೆಲ್ಲಾ ಪ್ರಕಟಿಸಿದರು. ಇಸ್ರೇಲಿನ ದೇವರಾದ ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸುವುದಕ್ಕಾಗಿ ಜೆರುಸಲೇಮಿಗೆ ಬರಲು ಎಲ್ಲರಿಗೂ ಆಹ್ವಾನಿಸಿದರು. ಮೋಶೆಯು ಹೇಳಿದ್ದ ನಿಯಮಕ್ಕನುಸಾರವಾಗಿ ಪಸ್ಕಹಬ್ಬವನ್ನು ಎಷ್ಟೋ ಜನರು ಅನೇಕ ವರ್ಷಗಳಿಂದ ಆಚರಿಸಿರಲಿಲ್ಲ. 6 ಅದಕ್ಕಾಗಿ ಸಂದೇಶಕರು ರಾಜನ ಪತ್ರವನ್ನು ಇಡೀ ಇಸ್ರೇಲ್ ಮತ್ತು ಯೆಹೂದ ಪ್ರಾಂತ್ಯದ ಜನರಿಗೆ ಕೊಟ್ಟರು. ಅದರಲ್ಲಿ ಹೀಗೆ ಬರೆದಿದ್ದನು:
“ಇಸ್ರೇಲಿನ ಮಕ್ಕಳೇ, ಅಬ್ರಹಾಮನೂ ಇಸಾಕನೂ ಯಾಕೋಬನೂ ಆರಾಧಿಸಿದ ದೇವರಾದ ಯೆಹೋವನ ಕಡೆಗೆ ತಿರುಗಿರಿ. ಆಗ ನಿಮ್ಮಲ್ಲಿ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡು ಉಳಿದವರ ಕಡೆಗೆ ಆತನು ತಿರುಗಿಕೊಳ್ಳುವನು. 7 ನಿಮ್ಮ ತಂದೆಗಳೂ ಸಹೋದರರೂ ನಡೆದಂತೆ ನೀವೂ ನಡೆಯಬೇಡಿರಿ. ಅವರು ತಮ್ಮ ಪಿತೃಗಳ ದೇವರಾದ ಯೆಹೋವನಿಗೆ ವಿರೋಧವಾಗಿ ನಡೆದ ಕಾರಣ ಆತನು ಅವರನ್ನು ನಾಶನಕ್ಕೆ ಒಪ್ಪಿಸಿದನು. ಇದಕ್ಕೆ ನೀವೇ ಸಾಕ್ಷಿಗಳು. 8 ನಿಮ್ಮ ಪೂರ್ವಿಕರ ಹಾಗೆ ಮೊಂಡರಾಗಿರಬೇಡಿ. ನೀವು ಪೂರ್ಣಮನಸ್ಸಿನಿಂದ ದೇವರಿಗೆ ವಿಧೇಯರಾಗಿರಿ. ಆತನ ಶಾಶ್ವತವಾದ ಮಹಾಪವಿತ್ರಸ್ಥಳಕ್ಕೆ ಬನ್ನಿರಿ. ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಿರಿ ಮತ್ತು ಆತನ ಸೇವೆಮಾಡಿರಿ. ಆಗ ನಿಮ್ಮ ಮೇಲಿರುವ ಆತನ ಕೋಪವು ಶಮನವಾಗುವುದು. 9 ನೀವು ಯೆಹೋವನಿಗೆ ವಿಧೇಯರಾದರೆ ನಿಮ್ಮ ಮಕ್ಕಳೂ ಬಂಧುಗಳೂ ತಮ್ಮನ್ನು ಸೆರೆಹಿಡಿದವರಿಂದ ಕರುಣೆಯನ್ನು ಹೊಂದಿ ಮತ್ತೆ ಈ ದೇಶಕ್ಕೆ ಬರುವರು. ದೇವರಾದ ಯೆಹೋವನು ದಯೆಯೂ ಕರುಣೆಯೂ ಉಳ್ಳವನಾಗಿದ್ದಾನೆ. ನೀವು ಆತನ ಕಡೆಗೆ ತಿರುಗಿದರೆ ಆತನು ನಿಮ್ಮನ್ನು ತಳ್ಳಿಬಿಡುವುದಿಲ್ಲ.”
10 ಸಂದೇಶಕಾರರು ಎಫ್ರಾಯೀಮ್ ಮತ್ತು ಮನಸ್ಸೆ ಪ್ರಾಂತ್ಯಗಳ ಪ್ರತಿಯೊಂದು ಪಟ್ಟಣಗಳಿಗೆ ಹೋದರು. ಜೆಬುಲೂನ್ ಪ್ರಾಂತ್ಯಕ್ಕೂ ಹೋದರು. ಆದರೆ ಜನರು ಸಂದೇಶಕರನ್ನು ಗೇಲಿ ಮಾಡಿದರು. 11 ಆದರೆ ಆಶೇರ್, ಮನಸ್ಸೆ ಮತ್ತು ಜೆಬುಲೂನ್ ಪ್ರಾಂತ್ಯಗಳ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಜೆರುಸಲೇಮಿಗೆ ಹೋದರು. 12 ಇದಲ್ಲದೆ, ದೇವರ ಶಕ್ತಿಯು ಯೆಹೂದದ ಜನರನ್ನು ಒಂದಾಗಿ ಮಾಡಿತು. ಆದ್ದರಿಂದ ಅವರು ಅರಸನಿಗೆ ಮತ್ತು ಅಧಿಕಾರಿಗಳಿಗೆ ವಿಧೇಯರಾದರು. ಹೀಗೆ ಜನರು ಯೆಹೋವನ ಕಟ್ಟಳೆಗಳಿಗೆ ವಿಧೇಯರಾದರು.
13 ಜೆರುಸಲೇಮಿನಲ್ಲಿ ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಲು ಎಷ್ಟೋ ಮಂದಿ ಜೆರುಸಲೇಮಿಗೆ ಎರಡನೆಯ ತಿಂಗಳಲ್ಲಿ ಬಂದರು. ಅದು ಮಹಾ ಜನಸಮೂಹವಾಗಿತ್ತು. 14 ಆ ಜನರು ಜೆರುಸಲೇಮಿನೊಳಗಿದ್ದ ಅನ್ಯ ದೇವರುಗಳಿಗಾಗಿ ಮಾಡಿದ್ದ ಯಜ್ಞವೇದಿಕೆಗಳನ್ನು ಕೆಡವಿಹಾಕಿದರು; ವಿಗ್ರಹಗಳಿಗೆ ಧೂಪಸಮರ್ಪಣೆಗಾಗಿ ಮಾಡಿದ ವೇದಿಕೆಗಳನ್ನೂ ಹಾಳುಗೆಡವಿದರು. ಅವುಗಳನ್ನೆಲ್ಲಾ ಕಿದ್ರೋನ್ ಕಣಿವೆಯಲ್ಲಿ ಬಿಸಾಡಿದರು. 15 ಆ ಬಳಿಕ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ದರು. ಯಾಜಕರೂ ಲೇವಿಯರೂ ನಾಚಿಕೆಯಿಂದ[a] ತಮ್ಮನ್ನು ಸೇವೆಗಾಗಿ ಸಿದ್ಧಪಡಿಸಿಕೊಂಡು ಸರ್ವಾಂಗಹೋಮಕ್ಕಾಗಿ ಕಾಣಿಕೆಗಳನ್ನು ಯೆಹೋವನ ಮಂದಿರಕ್ಕೆ ತಂದರು. 16 ಮೋಶೆಯ ಕಟ್ಟಳೆಯ ಪ್ರಕಾರವಾಗಿ ಅವರು ತಮ್ಮತಮ್ಮ ಸ್ಥಾನಗಳಲ್ಲಿ ನಿಂತುಕೊಂಡು ಸೇವೆ ನಡಿಸಿದರು. ಲೇವಿಯರು ರಕ್ತವನ್ನು ಯಾಜಕರಿಗೆ ಕೊಟ್ಟರು. ಯಾಜಕರು ಆ ರಕ್ತವನ್ನು ವೇದಿಕೆಯ ಮೇಲೆ ಚಿಮಿಕಿಸಿದರು. 17 ಜನಸಮೂಹದವರಲ್ಲಿ ಎಷ್ಟೋ ಮಂದಿ ಪವಿತ್ರ ಸೇವೆಗಾಗಿ ತಮ್ಮನ್ನು ಸಿದ್ಧಮಾಡಿಕೊಂಡಿರಲಿಲ್ಲ. ಆದ್ದರಿಂದ ಪಸ್ಕದ ಕುರಿಯನ್ನು ಅವರು ವಧಿಸಲಾಗಲಿಲ್ಲ. ಲೇವಿಯರೇ ಅವರ ಬದಲಾಗಿ ಪಸ್ಕದ ಕುರಿಯನ್ನು ವಧಿಸಿದರು. ಹೀಗೆ ಲೇವಿಯರು ಪ್ರತಿಯೊಂದು ಕುರಿಯನ್ನು ದೇವರಿಗಾಗಿ ಪರಿಶುದ್ಧಗೊಳಿಸಿ ಸಮರ್ಪಿಸಿದರು.
18-19 ಎಫ್ರಾಯೀಮ್, ಮನಸ್ಸೆ, ಇಸ್ಸಾಕಾರ್ ಮತ್ತು ಜೆಬುಲೂನಿನಿಂದ ಬಂದಿದ್ದ ಎಷ್ಟೋ ಮಂದಿ ಪಸ್ಕಹಬ್ಬಕ್ಕಾಗಿ ತಮ್ಮನ್ನು ಸಿದ್ಧಮಾಡಿಕೊಂಡಿರಲಿಲ್ಲ. ಅವರು ಪಸ್ಕದ ಕುರಿಮರಿಯನ್ನು ಯೋಗ್ಯವಾದ ರೀತಿಯಲ್ಲಿ ತಿನ್ನಲಿಲ್ಲ. ಆದರೆ ಹಿಜ್ಕೀಯನು ಅಂಥವರಿಗೋಸ್ಕರವಾಗಿ, “ದೇವರಾದ ಯೆಹೋವನೇ, ನೀನು ಒಳ್ಳೆಯವನಾಗಿರುವೆ. ಇವರು ಯೋಗ್ಯವಾದ ರೀತಿಯಲ್ಲಿ ನಿನ್ನನ್ನು ಆರಾಧಿಸಲು ಬಂದಿದ್ದಾರೆ. ಆದರೆ ಧರ್ಮಶಾಸ್ತ್ರದ ಪ್ರಕಾರ ಅವರು ತಮ್ಮನ್ನು ಶುದ್ಧ ಮಾಡಿಕೊಳ್ಳಲಿಲ್ಲ. ದಯಮಾಡಿ ಅವರನ್ನು ಕ್ಷಮಿಸು. ನಮ್ಮ ಪಿತೃಗಳು ವಿಧೇಯರಾಗಿದ್ದ ದೇವರೇ, ಜನರು ಮೋಶೆಯ ನಿಯಮಕ್ಕನುಸಾರವಾಗಿ ತಮ್ಮನ್ನು ಶುದ್ಧಿ ಮಾಡಿಕೊಂಡಿಲ್ಲದಿದ್ದರೂ ನೀನು ಅವರನ್ನು ದಯವಿಟ್ಟು ಕ್ಷಮಿಸು” ಎಂದು ಪ್ರಾರ್ಥಿಸಿದನು. 20 ಯೆಹೋವನು ಹಿಜ್ಕೀಯನ ಪ್ರಾರ್ಥನೆಯನ್ನು ಕೇಳಿ ಅವರನ್ನು ಕ್ಷಮಿಸಿದನು. 21 ಇಸ್ರೇಲರು ಜೆರುಸಲೇಮಿನಲ್ಲಿ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿವಸಗಳ ತನಕ ಆಚರಿಸಿದರು. ಅವರೆಲ್ಲಾ ಹರ್ಷದಿಂದ ತುಂಬಿ ಹಬ್ಬವನ್ನು ಆಚರಿಸಿದರು. ಯಾಜಕರೂ ಲೇವಿಯರೂ ಪ್ರತಿದಿನ ಗಟ್ಟಿಯಾಗಿ ಸ್ತುತಿಗೀತೆಗಳನ್ನು ಹಾಡಿದರು. 22 ದೇವರ ಸೇವೆ ಮಾಡುವದನ್ನು ತಿಳಿದಿದ್ದ ಲೇವಿಯರನ್ನು ಹಿಜ್ಕೀಯನು ಪ್ರೋತ್ಸಾಹಿಸಿದನು. ಜನರು ಏಳು ದಿವಸ ಹಬ್ಬವನ್ನು ಆಚರಿಸಿ ಸಮಾಧಾನಯಜ್ಞವನ್ನು ಸಮರ್ಪಿಸಿದರು; ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿದರು.
23 ಬಂದವರೆಲ್ಲರೂ ಇನ್ನೂ ಏಳು ದಿವಸ ಅಲ್ಲಿಯೇ ಇರಲು ಒಪ್ಪಿಕೊಂಡರು. ಇನ್ನೂ ಏಳು ದಿವಸ ಪಸ್ಕಹಬ್ಬ ಆಚರಿಸಲು ಅವರು ಸಂತೋಷಪಟ್ಟರು. 24 ಯೆಹೂದದ ಅರಸನಾದ ಹಿಜ್ಕೀಯನು ಸೇರಿಬಂದ ಜನರಿಗೆ ಒಂದು ಸಾವಿರ ಹೋರಿಗಳನ್ನೂ ಏಳು ಸಾವಿರ ಕುರಿಗಳನ್ನೂ ವಧಿಸಿ ತಿನ್ನಲು ಕೊಟ್ಟನು. ಪ್ರಧಾನರು ಒಂದು ಸಾವಿರ ಹೋರಿಗಳನ್ನೂ ಹತ್ತು ಸಾವಿರ ಕುರಿಗಳನ್ನೂ ಸೇರಿಬಂದ ಜನರಿಗೆ ಕೊಟ್ಟರು. ಎಷ್ಟೋ ಮಂದಿ ಯಾಜಕರು ಪವಿತ್ರ ಸೇವೆಗೆ ತಮ್ಮನ್ನು ಶುದ್ಧಪಡಿಸಿಕೊಂಡರು. 25 ಯೆಹೂದದ ಜನರೆಲ್ಲರೂ ಲೇವಿಯರೂ ಇಸ್ರೇಲಿನಿಂದ ಬಂದ ಜನರೂ ಮತ್ತು ಇಸ್ರೇಲಿನಿಂದ ಬಂದು ಯೆಹೂದದಲ್ಲಿ ನೆಲೆಸಿದ್ದ ವಿದೇಶಿಯರೂ ಹಬ್ಬವನ್ನು ಆಚರಿಸಿ ಬಹಳವಾಗಿ ಸಂತೋಷಿಸಿದರು. 26 ಜೆರುಸಲೇಮಿನಲ್ಲಿ ಸಂತಸವು ತುಂಬಿತ್ತು. ಸೊಲೊಮೋನ್ ಅರಸನ ಸಮಯದಿಂದ ಅಂದಿನ ತನಕ ಅಂಥಾ ಹಬ್ಬವು ಆಚರಿಸಲ್ಪಟ್ಟಿರಲಿಲ್ಲ. 27 ಯಾಜಕರು ಮತ್ತು ಲೇವಿಯರು ಎದ್ದುನಿಂತು ಜನರನ್ನು ಯೆಹೋವನು ಆಶೀರ್ವದಿಸುವಂತೆ ಕೇಳಿಕೊಂಡರು. ದೇವರು ಪರಲೋಕದ ತನ್ನ ಪವಿತ್ರ ನಿವಾಸಕ್ಕೆ ಬಂದ ಆ ಪ್ರಾರ್ಥನೆಗೆ ಕಿವಿಗೊಟ್ಟನು.
ಅರಸನಾದ ಹಿಜ್ಕೀಯನ ಅಭಿವೃದ್ಧಿಕಾರ್ಯಗಳು
31 ಪಸ್ಕಹಬ್ಬದ ಆಚರಣೆಯು ಮುಕ್ತಾಯವಾಯಿತು. ಇಸ್ರೇಲಿನಿಂದ ಜೆರುಸಲೇಮಿಗೆ ಬಂದಿದ್ದವರು ಯೆಹೂದದ ಪಟ್ಟಣಗಳಿಗೆ ಹೋದರು. ಅಲ್ಲಿದ್ದ ಕಲ್ಲಿನ ವಿಗ್ರಹಗಳನ್ನು ಒಡೆದು ನಾಶಮಾಡಿದರು; ಅಶೇರಸ್ತಂಭಗಳನ್ನು ಮತ್ತು ಪೂಜಾಸ್ಥಳಗಳನ್ನು ಕೆಡವಿಹಾಕಿದರು. ಹೀಗೆ ಅವರು ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯಗಳಲ್ಲೆಲ್ಲಾ ಸಂಚಾರ ಮಾಡಿದರು. ಆ ಜನರು ಎಫ್ರಾಯೀಮ್ ಮನಸ್ಸೆ ಪ್ರಾಂತ್ಯಗಳಲ್ಲಿಯೂ ಹಾಗೆಯೇ ಮಾಡಿದರು. ವಿಗ್ರಹಗಳನ್ನು ಪೂಜಿಸಲು ಮಾಡಿದ ಎಲ್ಲಾ ವಸ್ತುಗಳನ್ನು ನಾಶಮಾಡಿದರು. ಬಳಿಕ ಆ ಇಸ್ರೇಲರೆಲ್ಲಾ ತಮ್ಮತಮ್ಮ ಮನೆಗಳಿಗೆ ಹಿಂದಿರುಗಿದರು.
2 ಯಾಜಕರೂ ಲೇವಿಯರೂ ಬೇರೆಬೇರೆ ಗುಂಪುಗಳಾಗಿ ವಿಭಾಗಿಸಲ್ಪಟ್ಟಿದ್ದರು. ಪ್ರತಿಯೊಂದು ಗುಂಪಿನವರಿಗೂ ಪ್ರತ್ಯೇಕವಾದ ಸೇವಾಕಾರ್ಯವು ಕೊಡಲ್ಪಟ್ಟಿತ್ತು. ಅರಸನಾದ ಹಿಜ್ಕೀಯನು ಅವರ ಕೆಲಸಗಳನ್ನು ಮತ್ತೆ ಪ್ರಾರಂಭಿಸಲು ಈ ಗುಂಪಿನವರಿಗೆ ಹೇಳಿದನು. ಹೀಗೆ ಯಾಜಕರೂ ಲೇವಿಯರೂ ಮತ್ತೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುತ್ತಿದ್ದರು. ಅಲ್ಲದೆ ದೇವಾಲಯದೊಳಗೆ ದೇವರಿಗೆ ಸ್ತುತಿಗೀತೆ ಹಾಡುವ ಕೆಲಸವೂ ಅವರದೇ ಆಗಿತ್ತು. 3 ಹಿಜ್ಕೀಯನು ತನ್ನ ಪಶುಗಳಲ್ಲಿ ಕೆಲವನ್ನು ಸರ್ವಾಂಗಹೋಮಕ್ಕಾಗಿ ಕೊಟ್ಟನು. ಇವುಗಳನ್ನು ಪ್ರತಿನಿತ್ಯದ ಬೆಳಿಗ್ಗೆ ಮತ್ತು ಸಂಜೆ ಸಮರ್ಪಿಸುವ ಸರ್ವಾಂಗಹೋಮಗಳಿಗಾಗಿ ಉಪಯೋಗಿಸಿಕೊಳ್ಳಲಾಯಿತು; ಅಲ್ಲದೆ ಸಬ್ಬತ್ ದಿನದಂದೂ ಅಮವಾಸ್ಯೆ ದಿನದಂದೂ ಅವುಗಳನ್ನು ಅರ್ಪಿಸಿದರು. ಇವೆಲ್ಲಾ ದೇವರ ಕಟ್ಟಳೆಗಳಿಗನುಸಾರವಾಗಿದ್ದವು.
4 ದೇಶದ ಜನರು ಯಾಜಕರಿಗೂ ಲೇವಿಯರಿಗೂ ತಮ್ಮ ಬೆಳೆಯ ಒಂದು ಪಾಲನ್ನು ಕೊಡಬೇಕಾಗಿತ್ತು. ಹಿಜ್ಕೀಯನು ಯಾಜಕರಿಗೂ ಲೇವಿಯರಿಗೂ ಅವರು ಕೊಡಬೇಕಾಗಿದ್ದ ಪಾಲನ್ನು ಕೊಡಬೇಕೆಂದು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ಜನರಿಗೆ ಆಜ್ಞಾಪಿಸಿದನು. ಹೀಗಿರುವಾಗ ಯಾಜಕರೂ ಲೇವಿಯರೂ ತಮ್ಮ ಸಮಯವನ್ನೆಲ್ಲಾ ದೇವರ ಸೇವೆಯಲ್ಲಿ ಕಳೆಯಬಹುದು. 5 ದೇಶದ ಜನರೆಲ್ಲಾ ಅರಸನ ಈ ಆಜ್ಞೆಯನ್ನು ಕೇಳಿ ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನುತುಪ್ಪ ಮುಂತಾದ ಎಲ್ಲವುಗಳಲ್ಲಿ ಮತ್ತು ಪ್ರಥಮ ಫಲಗಳಲ್ಲಿ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಕೊಟ್ಟರು. 6 ಇಸ್ರೇಲಿನ ಮತ್ತು ಯೆಹೂದದ ಊರುಗಳಲ್ಲಿ ವಾಸವಾಗಿದ್ದ ಜನರು ತಮ್ಮ ದನಕರುಗಳಲ್ಲಿ ಮತ್ತು ಕುರಿಗಳಲ್ಲಿ ದಶಾಂಶವನ್ನು ತಂದುಕೊಟ್ಟರು. ಯೆಹೋವನಿಗೆ ಮೀಸಲಾಗಿ ವಿಶೇಷ ಸ್ಥಳದಲ್ಲಿ ಇಡತಕ್ಕ ಪವಿತ್ರ ವಸ್ತುಗಳಲ್ಲಿಯೂ ದಶಾಂಶವನ್ನು ತಂದುಕೊಟ್ಟರು. ಇವುಗಳನ್ನೆಲ್ಲ ಅವರು ತಮ್ಮ ದೇವರಾದ ಯೆಹೋವನಿಗೆ ತಂದು ರಾಶಿ ಹಾಕಿದರು.
7 ವರ್ಷದ ಮೂರನೆಯ ತಿಂಗಳಿನಲ್ಲಿ ಜನರು ತಮ್ಮ ಕಾಣಿಕೆಗಳನ್ನು ತರಲು ಪ್ರಾರಂಭ ಮಾಡಿದರೆ ಅದು ಏಳನೆಯ ತಿಂಗಳಲ್ಲಿ ಮುಗಿಯುತ್ತಿತ್ತು. 8 ಹಿಜ್ಕೀಯನೂ ಪ್ರಧಾನರೂ ಜನರ ಕಾಣಿಕೆಯ ರಾಶಿಯನ್ನು ನೋಡಿ ಯೆಹೋವನಿಗೆ ಸ್ತೋತ್ರ ಮಾಡಿದರು ಮತ್ತು ಅದನ್ನು ಅರ್ಪಿಸಿದ ಜನರಿಗಾಗಿ ಸ್ತೋತ್ರ ಮಾಡಿದರು.
9 ಹಿಜ್ಕೀಯನು ಕಾಣಿಕೆಯ ರಾಶಿಯ ವಿಷಯವಾಗಿ ಯಾಜಕರೊಂದಿಗೆ ಮತ್ತು ಲೇವಿಯರೊಂದಿಗೆ ಮಾತನಾಡಿದಾಗ 10 ಚಾದೋಕನ ಕುಲದ ಮಹಾಯಾಜಕನಾದ ಅಜರ್ಯನು ಹಿಜ್ಕೀಯನಿಗೆ, “ದೇವಾಲಯಕ್ಕೆ ಜನರು ಕಾಣಿಕೆಗಳನ್ನು ತರಲು ಪ್ರಾರಂಭ ಮಾಡಿದಂದಿನಿಂದ ನಮಗೆ ಊಟಕ್ಕೆ ಯಾವ ಕೊರತೆಯೂ ಇಲ್ಲವಾಗಿದೆ. ನಾವು ತೃಪ್ತಿಯಾಗುವಷ್ಟು ಊಟಮಾಡಿದರೂ ಇನ್ನೂ ಉಳಿದಿರುತ್ತದೆ. ದೇವರು ನಿಜವಾಗಲೂ ತನ್ನ ಜನರನ್ನು ಆಶೀರ್ವದಿಸಿರುತ್ತಾನೆ. ಆದ್ದರಿಂದಲೇ ನಮಗೆ ಹೇರಳವಾಗಿ ಉಳಿದಿದೆ” ಎಂದು ಹೇಳಿದನು.
11 ಆಗ ಹಿಜ್ಕೀಯನು ದೇವಾಲಯದಲ್ಲಿ ಉಗ್ರಾಣದ ಕೋಣೆಗಳನ್ನು ಕಟ್ಟಲು ಯಾಜಕರಿಗೆ ಆಜ್ಞಾಪಿಸಿದನು. ಅಂತೆಯೇ ಅವುಗಳನ್ನು ಕಟ್ಟಲಾಯಿತು. 12 ಆ ಬಳಿಕ ದೇವರಿಗೆ ಕೊಟ್ಟಿದ್ದ ದಶಮಾಂಶ ಮತ್ತು ಬೇರೆ ಕಾಣಿಕೆಗಳನ್ನು ಆ ಉಗ್ರಾಣದ ಕೋಣೆಗಳಲ್ಲಿ ಕೂಡಿಸಿಟ್ಟರು. ಲೇವಿಯನಾದ ಕೋನನ್ಯನು ಇದರ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟನು. ಇವನಿಗೆ ಸಹಾಯಕನಾಗಿ ಕೋನನ್ಯನ ಸೋದರನಾದ ಶಿಮ್ಮಿಯು ನೇಮಿಸಲ್ಪಟ್ಟನು. 13 ಕೋನನ್ಯ ಮತ್ತು ಶಿಮ್ಮಿಯು ಈ ಜನರ ಮೇಲ್ವಿಚಾರಕರಾಗಿದ್ದರು; ಯೆಹೀಯೇಲ್, ಅಜಜ್ಯ, ನಹತ್, ಅಸಾಹೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಾಕ್ಯ, ಮಹತ್ ಮತ್ತು ಬೆನಾಯ ಇವರನ್ನು ಸಹಾಯಕರಾಗಿ ಅರಸನಾದ ಹಿಜ್ಕೀಯನೂ ದೇವಾಲಯದ ಮೇಲ್ವಿಚಾರಕನಾದ ಅಜರ್ಯನೂ ಆರಿಸಿದರು.
14 ಕೋರೆ ಎಂಬ ಲೇವಿಯು ಜನರು ದೇವರಿಗೆ ಸ್ವ ಇಚ್ಛೆಯಿಂದ ಸಮರ್ಪಿಸಿದ ಕಾಣಿಕೆಗೆ ಮುಖ್ಯಸ್ತನಾಗಿದ್ದನು. ಅವನು ಅದರ ಲೆಕ್ಕವನ್ನು ಒಪ್ಪಿಸುತ್ತಿದ್ದನು. ಅಲ್ಲದೆ ಯೆಹೋವನಿಗೆ ಕೊಟ್ಟವುಗಳನ್ನು ಮತ್ತು ಯೆಹೋವನಿಗೆ ಮೀಸಲಾಗಿಟ್ಟ ಕಾಣಿಕೆಗಳನ್ನು ಹಂಚಿಕೊಡುವುದು ಅವನ ಜವಾಬ್ದಾರಿಕೆಯಾಗಿತ್ತು. ಅಲ್ಲದೆ ಅವನು ಪೂರ್ವದ ಬಾಗಿಲಿನ ದ್ವಾರಪಾಲಕನಾಗಿದ್ದನು. ಅವನು ಲೇವಿಯನಾದ ಇಮ್ನನ ಮಗನು. 15 ಏದೆನ್, ಮಿನ್ಯಾಮಿನ್, ಯೇಷೂವ, ಶೆಮಾಯ, ಅಮರ್ಯ ಮತ್ತು ಶೆಕನ್ಯ ಇವರು ಕೋರೆಯ ಸಹಾಯಕರು. ಇವರು ಯಾಜಕರು ವಾಸಿಸುವ ಪಟ್ಟಣಗಳಲ್ಲಿದ್ದು ನಂಬಿಗಸ್ತಿಕೆಯಿಂದ ಸೇವೆ ಮಾಡಿದರು. ಕೂಡಿಸಿದ ಕಾಣಿಕೆಗಳನ್ನು ನಂಬಿಗಸ್ತಿಕೆಯಿಂದ ಯಾಜಕರ ಕುಟುಂಬದವರಿಗೆ ಪಕ್ಷಪಾತವಿಲ್ಲದೆ ಹಂಚಿದರು.
16 ಮೂರು ವರ್ಷಕ್ಕೆ ಮೇಲ್ಪಟ್ಟ ಎಲ್ಲಾ ಗಂಡುಮಕ್ಕಳಿಗೂ ಲೇವಿಯರ ವಂಶಾವಳಿ ಪಟ್ಟಿಯಲ್ಲಿ ಹೆಸರು ದಾಖಲಾದವರೆಲ್ಲರಿಗೂ ಹಂಚಿದರು. ಗಂಡಸರು ದೇವಾಲಯದಲ್ಲಿ ತಮಗೆ ಒಪ್ಪಿಸಿರುವ ಕೆಲಸಗಳನ್ನು ಮಾಡಿದರು. 17 ಒಟ್ಟುಗೂಡಿಸಿದ ಕಾಣಿಕೆಯಲ್ಲಿ ಯಾಜಕರೂ ತಮ್ಮ ಪಾಲನ್ನು ತೆಗೆದುಕೊಂಡರು. ಇದನ್ನು ವಂಶಾವಳಿಗನುಸಾರವಾಗಿ ಮಾಡಲಾಯಿತು. ಲೇವಿಯರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕಿಂತ ಹೆಚ್ಚು ವಯಸ್ಸಾದವರೂ ತಮ್ಮ ಪಾಲನ್ನು ಜವಾಬ್ದಾರಿಗಳಿಗನುಸಾರವಾಗಿಯೂ ತಮ್ಮ ಗುಂಪುಗಳಿಗನುಸಾರವಾಗಿಯೂ ಪಡೆದುಕೊಂಡರು. 18 ಲೇವಿಯರ ಹೆಂಡತಿಯರಿಗೂ ಮಕ್ಕಳಿಗೂ ಎಲ್ಲರಿಗೂ ಅದರಲ್ಲಿ ಪಾಲು ದೊರೆಯಿತು. ಯಾರ್ಯಾರ ಹೆಸರುಗಳು ಲೇವಿಯರ ಕುಟುಂಬದ ಪಟ್ಟಿಯಲ್ಲಿ ಬರೆಯಲ್ಪಟ್ಟಿತ್ತೊ ಅವರೆಲ್ಲರಿಗೆ ಪಾಲು ದೊರೆಯಿತು. ಯಾಕೆಂದರೆ ಲೇವಿಯರು ತಮ್ಮನ್ನು ದೇವಾಲಯದ ಸೇವೆಗೆ ಯಾವಾಗಲೂ ಸಿದ್ಧಪಡಿಸಿಕೊಳ್ಳುತ್ತಿದ್ದರು.
19 ಆರೋನನ ಸಂತತಿಯ ಕೆಲವು ಯಾಜಕರಿಗೆ ಲೇವಿಯರು ವಾಸಿಸುತ್ತಿದ್ದ ಪಟ್ಟಣಗಳ ಹತ್ತಿರ ಹೊಲಗಳಿದ್ದವು. ಆರೋನನ ಸಂತತಿಯವರಲ್ಲಿ ಕೆಲವರು ಲೇವಿಯರ ಪಟ್ಟಣಗಳಲ್ಲಿಯೂ ವಾಸಮಾಡುತ್ತಿದ್ದರು. ಈ ಆರೋನನ ಸಂತತಿಯವರಿಗೆ ಪಾಲು ಕೊಡಲು ಕೆಲವರನ್ನು ನೇಮಿಸಲಾಯಿತು. ಗಂಡಸರಿಗೆ ಮತ್ತು ವಂಶಾವಳಿಯಲ್ಲಿ ಹೆಸರನ್ನು ಹೊಂದಿದ್ದ ಎಲ್ಲಾ ಲೇವಿಯರಿಗೆ ಸಂಗ್ರಹಿಸಲ್ಪಟ್ಟಿದ್ದರಲ್ಲಿ ಅವರವರ ಪಾಲು ದೊರೆಯಿತು.
20 ಹೀಗೆ ಅರಸನಾದ ಹಿಜ್ಕೀಯನು ಯೆಹೂದ ದೇಶದಲ್ಲಿ ಈ ಒಳ್ಳೆಯ ಕಾರ್ಯವನ್ನು ಮಾಡಿದನು. ದೇವರಾದ ಯೆಹೋವನ ದೃಷ್ಟಿಯಲ್ಲಿ ಯೋಗ್ಯವಾದದ್ದನ್ನು ನಂಬಿಗಸ್ತಿಕೆಯಿಂದ ಮಾಡಿದನು. 21 ಹಿಜ್ಕೀಯನು ತಾನು ಪ್ರಾರಂಭಿಸಿದ ಪ್ರತಿಯೊಂದು ಕಾರ್ಯಗಳನ್ನೂ ದೇವಾಲಯದ ಕಾರ್ಯಗಳನ್ನೂ ದೇವರ ಕಟ್ಟಳೆಗಳನ್ನೂ ಅನುಸರಿಸುವದನ್ನು ಪೂರ್ಣಹೃದಯದಿಂದ ಮಾಡಿ ಯಶಸ್ವಿಯಾದನು.
ಯೇಸುವಿನ ಬಂಧನ
(ಮತ್ತಾಯ 26:47-56; ಮಾರ್ಕ 14:43-50; ಲೂಕ 22:47-53)
18 ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರೊಂದಿಗೆ ಹೊರಟನು. ಅವರು ಕಿದ್ರೋನ್ ಕಣಿವೆಯನ್ನು ದಾಟಿಹೋದರು. ಅದರ ಮತ್ತೊಂದು ಕಡೆಯಲ್ಲಿ ಆಲಿವ್ ಮರಗಳ ತೋಟವಿತ್ತು. ಯೇಸು ಮತ್ತು ಆತನ ಶಿಷ್ಯರು ಅಲ್ಲಿಗೆ ಹೋದರು.
2 ಯೇಸುವಿಗೆ ದ್ರೋಹ ಬಗೆದ ಯೂದನಿಗೂ ಈ ಸ್ಥಳವು ತಿಳಿದಿತ್ತು. ಏಕೆಂದರೆ ಯೇಸು ತನ್ನ ಶಿಷ್ಯರೊಂದಿಗೆ ಆಗಾಗ್ಗೆ ಅಲ್ಲಿಗೆ ಬರುತ್ತಿದ್ದನು. 3 ಯೂದನು ಸೈನಿಕರ ಗುಂಪೊಂದನ್ನೂ ಮಹಾಯಾಜಕರ ಮತ್ತು ಫರಿಸಾಯರ ಕಾವಲುಗಾರರಲ್ಲಿ ಕೆಲವರನ್ನೂ ಕರೆದುಕೊಂಡು ತೋಟಕ್ಕೆ ಬಂದನು. ಅವರು ದೀವಟಿಗೆ, ಪಂಜು ಮತ್ತು ಆಯುಧಗಳಿಂದ ಸುಸಜ್ಜಿತರಾಗಿದ್ದರು.
4 ತನಗೆ ಸಂಭವಿಸಲಿದ್ದ ಪ್ರತಿಯೊಂದೂ ಯೇಸುವಿಗೆ ತಿಳಿದಿತ್ತು. ಆತನು ಹೊರಗೆ ಹೋಗಿ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು.
5 ಅವರು, “ನಜರೇತಿನ ಯೇಸುವನ್ನು” ಎಂದು ಉತ್ತರಕೊಟ್ಟರು.
ಆತನು, “ನಾನೇ ಯೇಸು” ಎಂದನು. (ಯೇಸುವಿಗೆ ದ್ರೋಹ ಬಗೆದ ಯೂದನು ಅವರೊಂದಿಗೆ ಅಲ್ಲೇ ನಿಂತಿದ್ದನು.) 6 ಆತನು, “ನಾನೇ ಯೇಸು” ಎಂದಾಗ ಅವರು ಹಿಂದೆ ಸರಿದು ನೆಲದ ಮೇಲೆ ಬಿದ್ದರು.
7 ಯೇಸು ಅವರಿಗೆ ಮತ್ತೆ “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು.
ಅವರು, “ನಜರೇತಿನ ಯೇಸುವನ್ನು” ಎಂದು ಹೇಳಿದರು.
8 ಆತನು, “ನಾನೇ ಯೇಸು ಎಂದು ನಿಮಗೆ ಹೇಳಿದೆನಲ್ಲಾ. ನೀವು ನನ್ನನ್ನು ಹುಡುಕುತ್ತಿದ್ದರೆ, ಉಳಿದ ಇವರನ್ನು ಹೋಗಬಿಡಿರಿ” ಎಂದು ಹೇಳಿದನು. 9 “ನೀನು ನನಗೆ ಕೊಟ್ಟ ಜನರಲ್ಲಿ ಯಾರನ್ನೂ ನಾನು ಕಳೆದುಕೊಳ್ಳಲಿಲ್ಲ” ಎಂದು ಯೇಸು ಮೊದಲು ಹೇಳಿದ್ದ ಮಾತು ಹೀಗೆ ನಿಜವಾಯಿತು.
10 ಸೀಮೋನ್ ಪೇತ್ರನ ಬಳಿ ಒಂದು ಖಡ್ಗವಿತ್ತು. ಅವನು ಆ ಖಡ್ಗವನ್ನು ಹೊರತೆಗೆದು ಪ್ರಧಾನ ಯಾಜಕನ ಸೇವಕನೊಬ್ಬನಿಗೆ ಹೊಡೆದು, ಅವನ ಬಲಗಿವಿಯನ್ನು ಕತ್ತರಿಸಿದನು. (ಆ ಸೇವಕನ ಹೆಸರು ಮಾಲ್ಕ.) 11 ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು! ತಂದೆಯು ನನಗೆ ಕೊಟ್ಟಿರುವ ಸಂಕಟದ ಪಾತ್ರೆಯನ್ನು ನಾನು ಸ್ವೀಕರಿಸಿಕೊಳ್ಳಬೇಕು” ಎಂದು ಹೇಳಿದನು.
ಅನ್ನನ ಮುಂದೆ ಯೇಸು
(ಮತ್ತಾಯ 26:57-58; ಮಾರ್ಕ 14:53-54; ಲೂಕ 22:54)
12 ಬಳಿಕ ಆ ಸೈನಿಕರು, ಅವರ ಸೇನಾಧಿಪತಿ ಹಾಗೂ ಯೆಹೂದ್ಯ ಕಾವಲುಗಾರರು ಯೇಸುವನ್ನು ಹಿಡಿದು ಕಟ್ಟಿ, ಅನ್ನನ ಬಳಿಗೆ ತಂದರು. 13 ಅನ್ನನು ಕಾಯಫನ ಮಾವ. ಆ ವರ್ಷ ಕಾಯಫನು ಪ್ರಧಾನಯಾಜಕನಾಗಿದ್ದನು. 14 ಎಲ್ಲಾ ಜನರಿಗಾಗಿ ಒಬ್ಬನು ಸಾಯುವುದೇ ಮೇಲು ಎಂಬ ಸಲಹೆಯನ್ನು ಕೊಟ್ಟಿದ್ದವನು ಇವನೇ.
ಪೇತ್ರನ ವಿಶ್ವಾಸದ್ರೋಹ
(ಮತ್ತಾಯ 26:69-70; ಮಾರ್ಕ 14:66-68; ಲೂಕ 22:55-57)
15 ಸೀಮೋನ್ ಪೇತ್ರ ಮತ್ತು ಯೇಸುವಿನ ಶಿಷ್ಯರಲ್ಲಿ ಮತ್ತೊಬ್ಬನು ಯೇಸುವಿನೊಂದಿಗೆ ಹೋದರು. ಆ ಮತ್ತೊಬ್ಬ ಶಿಷ್ಯನಿಗೆ ಪ್ರಧಾನಯಾಜಕನ ಪರಿಚಯವಿತ್ತು. ಆದ್ದರಿಂದ ಅವನು ಪ್ರಧಾನ ಯಾಜಕನ ಮನೆಯ ಅಂಗಳದೊಳಗೆ ಹೋದನು. 16 ಆದರೆ ಪೇತ್ರನು ಹೊರಗೆ ಬಾಗಿಲಿನ ಸಮೀಪದಲ್ಲಿ ಕಾದುಕೊಂಡಿದ್ದನು. ಪ್ರಧಾನಯಾಜಕನ ಪರಿಚಯವಿದ್ದ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಯೊಂದಿಗೆ ಮಾತಾಡಿ ಪೇತ್ರನನ್ನು ಒಳಗೆ ಕರೆದುಕೊಂಡು ಹೋದನು. 17 ದ್ವಾರಪಾಲಕಿಯು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದಳು.
ಪೇತ್ರನು, “ಇಲ್ಲ, ನಾನಲ್ಲ!” ಎಂದು ಉತ್ತರಕೊಟ್ಟನು.
18 ಆಗ ಚಳಿಯಿದ್ದುದರಿಂದ ಕಾವಲುಗಾರರು ಬೆಂಕಿ ಹಾಕಿ ಅದರ ಸುತ್ತಲೂ ನಿಂತುಕೊಂಡು ತಮ್ಮನ್ನು ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು. ಪೇತ್ರನು ಅವರೊಂದಿಗೆ ನಿಂತುಕೊಂಡಿದ್ದನು.
Kannada Holy Bible: Easy-to-Read Version. All rights reserved. © 1997 Bible League International