Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 7-9

ದೇವಾಲಯದ ಪ್ರತಿಷ್ಠೆ

ಸೊಲೊಮೋನನು ಪ್ರಾರ್ಥಿಸುವದನ್ನು ನಿಲ್ಲಿಸಿದ ಕೂಡಲೇ ಆಕಾಶದಿಂದ ಬೆಂಕಿಯು ಬಂದು ಯಜ್ಞವೇದಿಕೆಯ ಮೇಲಿದ್ದ ಸರ್ವಾಂಗಹೋಮಗಳನ್ನೂ ಯಜ್ಞಮಾಂಸವನ್ನೂ ದಹಿಸಿಬಿಟ್ಟಿತು. ಯೆಹೋವನ ಮಹಿಮೆಯು ದೇವಾಲಯದಲ್ಲಿ ತುಂಬಿತು. ದೇವಾಲಯದಲ್ಲಿ ತುಂಬಲ್ಪಟ್ಟ ಮಹಿಮೆಯಿಂದಾಗಿ ಯಾಜಕರಿಗೆ ದೇವಾಲಯದೊಳಗೆ ಪ್ರವೇಶಿಸಲು ಆಗದೆ ಹೋಯಿತು. ಸೇರಿಬಂದ ಇಸ್ರೇಲ್ ಜನರೆಲ್ಲಾ ಆಕಾಶದಿಂದ ಬೆಂಕಿ ಬೀಳುವದನ್ನೂ ದೇವಾಲಯದಲ್ಲಿ ಯೆಹೋವನ ಮಹಿಮೆ ತುಂಬಿದ್ದನ್ನೂ ನೋಡಿ ನೆಲದ ಮೇಲೆ ಬೋರಲಬಿದ್ದು

“ಯೆಹೋವನು ಒಳ್ಳೆಯವನು,
    ಅವನ ಕರುಣೆಯು ನಿರಂತರಕ್ಕೂ ಇರುವಂಥದ್ದು”

ಎಂದು ಹೇಳುತ್ತಾ ದೇವರನ್ನು ಸುತ್ತಿಸಿ ಕೊಂಡಾಡಿದರು.

ಅನಂತರ ಅರಸನಾದ ಸೊಲೊಮೋನನೂ ಇಸ್ರೇಲಿನ ಎಲ್ಲಾ ಜನರೂ ಯೆಹೋವನ ಮುಂದೆ ಯಜ್ಞವನ್ನು ಸಮರ್ಪಿಸಿದರು. ಸೊಲೊಮೋನ ಅರಸನು ಇಪ್ಪತ್ತೆರಡು ಸಾವಿರ ಹೋರಿಗಳನ್ನೂ ಒಂದು ಲಕ್ಷ ಇಪ್ಪತ್ತು ಸಾವಿರ ಕುರಿಗಳನ್ನೂ ಯಜ್ಞವಾಗಿ ಸಮರ್ಪಿಸಿದನು. ಅರಸನೂ ಎಲ್ಲಾ ಜನರೂ ದೇವಾಲಯವನ್ನು ಆರಾಧನೆಗಾಗಿ ಪ್ರತಿಷ್ಠಿಸಿದರು. ಯಾಜಕರು ತಮ್ಮ ಕೆಲಸಗಳನ್ನು ಮಾಡಲು ತಮ್ಮ ತಮ್ಮ ಸ್ಥಳಗಳಲ್ಲಿ ತಯಾರಾಗಿ ನಿಂತಿದ್ದರು. ಲೇವಿಕುಲದ ಗಾಯಕರು ತಮ್ಮ ವಾದ್ಯಗಳೊಂದಿಗೆ ದೇವರನ್ನು ಸ್ತುತಿಸಲು ನಿಂತಿದ್ದರು. ಆ ವಾದ್ಯಗಳನ್ನು ಅರಸನಾದ ದಾವೀದನು ದೇವರನ್ನು ಸ್ತುತಿಸುವದಕ್ಕೋಸ್ಕರ ತಯಾರಿಸಿದ್ದನು. ಯಾಜಕರೂ ಲೇವಿಯರೂ, “ದೇವರಾದ ಯೆಹೋವನ ಕೃಪೆಯು ನಿರಂತರವಾದದ್ದು” ಎಂದು ಹೇಳುತ್ತಿದ್ದರು. ಯಾಜಕರು ಲೇವಿಯರಿಗೆ ಎದುರಾಗಿ ನಿಂತುಕೊಂಡು ತುತ್ತೂರಿಯನ್ನು ಊದಿದರು. ಇಸ್ರೇಲರೆಲ್ಲರೂ ನಿಂತುಕೊಂಡರು.

ಆಲಯದ ಮುಂದೆ ಇದ್ದ ಅಂಗಳವನ್ನು ಸೊಲೊಮೋನನು ಶುದ್ಧೀಕರಿಸಿದನು. ಆ ಸ್ಥಳದಲ್ಲಿ ಸೊಲೊಮೋನನು ಸರ್ವಾಂಗಹೋಮಗಳನ್ನೂ ಧಾನ್ಯನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಸಮರ್ಪಿಸಿದ್ದನು. ಯಾಕೆಂದರೆ ಸೊಲೊಮೋನನು ಮಾಡಿಸಿದ ತಾಮ್ರದ ಯಜ್ಞವೇದಿಕೆಯ ಮೇಲೆ ಇಷ್ಟೆಲ್ಲಾ ಸರ್ವಾಂಗಹೋಮಗಳನ್ನೂ ಧಾನ್ಯನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಸಮರ್ಪಿಸಲು ಆಗದೆಹೋಯಿತು.

ಸೊಲೊಮೋನನೂ ಎಲ್ಲಾ ಇಸ್ರೇಲರೂ ಏಳು ದಿನಗಳ ತನಕ ಪರ್ಣಶಾಲೆಗಳ ಹಬ್ಬವನ್ನು ಆಚರಿಸಿದರು. ಸೊಲೊಮೋನನೊಂದಿಗೆ ಬಹುದೊಡ್ಡ ಇಸ್ರೇಲರ ಸಮೂಹವು ನೆರೆದು ಬಂದಿತ್ತು. ಹಮಾತಿನಿಂದ ಹಿಡಿದು ಈಜಿಪ್ಟಿನ ನದಿಯ ತನಕ ವಾಸಿಸುವವರೆಲ್ಲರೂ ಜೆರುಸಲೇಮಿಗೆ ಬಂದಿದ್ದರು. ಏಳು ದಿನ ಹಬ್ಬದ ಆಚರಣೆಯ ಬಳಿಕ ಎಂಟನೆಯ ದಿನವನ್ನು ಪವಿತ್ರ ದಿನವನ್ನಾಗಿ ಆಚರಿಸಿದರು. ಅವರು ಯಜ್ಞವೇದಿಕೆಯನ್ನು ಯೆಹೋವನ ಆರಾಧನೆಗೋಸ್ಕರ ಪ್ರತಿಷ್ಠಿಸಿದರು. ಹಬ್ಬವನ್ನು ಏಳು ದಿನಗಳ ತನಕ ಆಚರಿಸಿದರು. 10 ಏಳನೆಯ ತಿಂಗಳಿನ ಇಪ್ಪತ್ತಮೂರನೆಯ ದಿನದಂದು ಸೊಲೊಮೋನನು ನೆರೆದು ಬಂದಿದ್ದ ಜನರನ್ನು ಅವರ ಮನೆಗಳಿಗೆ ಕಳುಹಿಸಿದನು. ದೇವರಾದ ಯೆಹೋವನು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಮತ್ತು ಎಲ್ಲಾ ಇಸ್ರೇಲರಿಗೂ ಕರುಣೆಯನ್ನು ತೋರಿಸಿದ್ದಕ್ಕಾಗಿ ಜನರೆಲ್ಲರೂ ಹರ್ಷಿಸುತ್ತಾ ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು.

ಸೊಲೊಮೋನನಿಗೆ ದೇವರು ಪ್ರತ್ಯಕ್ಷನಾದದ್ದು

11 ಸೊಲೊಮೋನನು ತಾನು ಯೋಜಿಸಿದ ರೀತಿಯಲ್ಲಿ ದೇವಾಲಯವನ್ನೂ ಅರಮನೆಯನ್ನೂ ಕಟ್ಟಿ ಮುಗಿಸಿದನು. 12 ಆ ಬಳಿಕ ಯೆಹೋವನು ರಾತ್ರಿಯಲ್ಲಿ ಸೊಲೊಮೋನನಿಗೆ ಕಾಣಿಸಿಕೊಂಡು,

“ಸೊಲೊಮೋನನೇ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ. ನಾನು ಈ ಆಲಯವನ್ನು ಯಜ್ಞಾಲಯಕ್ಕಾಗಿ ಆರಿಸಿಕೊಂಡಿರುತ್ತೇನೆ. 13 ನಾನು ಮಳೆ ಬಾರದಂತೆ ಆಕಾಶವನ್ನು ಮುಚ್ಚಿದರೆ, ಅಥವಾ ಮಿಡತೆಗಳಿಗೆ ದೇಶವನ್ನು ಹಾಳುಮಾಡಲು ಅಪ್ಪಣೆಕೊಟ್ಟರೆ ಅಥವಾ ಜನರಿಗೆ ರೋಗವನ್ನು ಬರಮಾಡಿದರೆ 14 ನನ್ನ ಹೆಸರಿನಿಂದ ಕರೆಯಲ್ಪಡುವ ನನ್ನ ಜನರು ದೀನತೆಯಿಂದ ಪ್ರಾರ್ಥಿಸಿ, ತಮ್ಮ ಪಾಪಗಳನ್ನು ಬಿಟ್ಟು ನನ್ನ ಕಡೆಗೆ ತಿರುಗಿದರೆ ನಾನು ಪರಲೋಕದಿಂದ ಅವರನ್ನು ಆಲೈಸಿ, ಅವರ ಪಾಪಗಳನ್ನು ಮನ್ನಿಸಿ ಅವರ ದೇಶವನ್ನು ಗುಣಪಡಿಸುವೆನು. 15 ನಿಮ್ಮನ್ನು ದೃಷ್ಟಿಸಿ ನಿಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುವೆನು. 16 ನನ್ನ ನಾಮದ ಮಹತ್ವ ಶಾಶ್ವತವಾಗಿರಬೇಕೆಂದು ನಾನು ಈ ಆಲಯವನ್ನು ಆರಿಸಿಕೊಂಡು ಶುದ್ಧೀಕರಿಸಿದ್ದೇನೆ. ಹೌದು, ನನ್ನ ದೃಷ್ಟಿಯೂ ನನ್ನ ಹೃದಯವೂ ಸದಾಕಾಲ ಈ ಆಲಯದ ಮೇಲೆ ನೆಲೆಸಿರುತ್ತದೆ. 17 ಸೊಲೊಮೋನನೇ, ನಿನ್ನ ತಂದೆಯಾದ ದಾವೀದನು ಹೇಗೆ ಜೀವಿಸಿದನೋ ಅದೇ ಪ್ರಕಾರ ನೀನು ನನ್ನೆದುರಿನಲ್ಲಿ ಜೀವಿಸಿ, ನನ್ನ ಅಪ್ಪಣೆಗಳನ್ನು ಕೈಕೊಂಡು, ನನ್ನ ವಿಧಿನಿಯಮಗಳಿಗೆ ವಿಧೇಯನಾಗುವದಾದರೆ, 18 ನಾನು ನಿನ್ನನ್ನು ಬಲಿಷ್ಠನಾದ ಅರಸನನ್ನಾಗಿ ಮಾಡುವೆನು. ನಿನ್ನ ರಾಜ್ಯವು ಮಹಾರಾಜ್ಯವಾಗುವದು. ನಿನ್ನ ತಂದೆಯಾದ ದಾವೀದನಿಗೆ, ‘ದಾವೀದನೇ, ನಿನ್ನ ಕುಟುಂಬದವರಲ್ಲಿ ಒಬ್ಬನು ಯಾವಾಗಲೂ ಇಸ್ರೇಲಿನ ರಾಜನಾಗಿರುವನು’ ಎಂದು ನಾನು ವಾಗ್ದಾನ ಮಾಡಿದ್ದೇನೆ.

19 “ಆದರೆ ನಾನು ಕೊಟ್ಟ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ನೀನು ಮೀರಿ ಇತರ ದೇವರುಗಳನ್ನು ಪೂಜಿಸಿದರೆ, 20 ನಾನು ಇಸ್ರೇಲರನ್ನು ಅವರಿಗೆ ಕೊಟ್ಟಿರುವ ದೇಶದಿಂದ ತೆಗೆದುಹಾಕುವೆನು; ನನ್ನ ಹೆಸರಿಗೋಸ್ಕರ ಪವಿತ್ರ ಮಾಡಿದ ಈ ದೇವಾಲಯವನ್ನು ತೊರೆದುಬಿಡುವೆನು. ಈ ದೇವಾಲಯದ ಬಗ್ಗೆ ಲೋಕದ ಜನರು ಗೇಲಿಮಾಡುವಂತೆ ಮಾಡುವೆನು. 21 ಅತ್ಯಂತ ಪ್ರಸಿದ್ಧಿಹೊಂದಿದ ಈ ದೇವಾಲಯವನ್ನು ನೋಡುವ ಪ್ರತಿಯೊಬ್ಬನು, ‘ದೇವರು ಈ ದೇಶಕ್ಕೆ ಮತ್ತು ಈ ಆಲಯಕ್ಕೆ ಹೀಗೇಕೆ ಮಾಡಿದನು?’ ಎಂದು ಅಚ್ಚರಿಪಡುವಂತೆ ಮಾಡುವೆನು. 22 ಆಗ ಜನರು, ‘ಯಾಕೆಂದರೆ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ಆತನು ಅವರನ್ನು ಈಜಿಪ್ಟಿನಿಂದ ಬಿಡಿಸಿ ಹೊರತಂದನು. ಆದರೆ ಅವರು ಬೇರೆ ದೇವರುಗಳನ್ನು ಪೂಜಿಸಿ ಅವುಗಳ ಸೇವೆಮಾಡಿದರು. ಆದ್ದರಿಂದಲೇ ಭಯಂಕರವಾದ ಈ ಸಂಕಟಗಳನ್ನೆಲ್ಲ ದೇವರು ಇಸ್ರೇಲರಿಗೆ ಬರಮಾಡಿದನು’ ಎಂದು ಹೇಳುವರು” ಅಂದನು.

ಸೊಲೊಮೋನನು ಕಟ್ಟಿದ ಪಟ್ಟಣಗಳು

ದೇವಾಲಯವನ್ನೂ ತನ್ನ ಅರಮನೆಯನ್ನೂ ಕಟ್ಟಲು ಸೊಲೊಮೋನನಿಗೆ ಇಪ್ಪತ್ತು ವರ್ಷಗಳು ಬೇಕಾದವು. ಅನಂತರ ಹೂರಾಮನು ಕೊಟ್ಟ ಪಟ್ಟಣಗಳನ್ನು ಭದ್ರಪಡಿಸಿ ಕೆಲವು ಇಸ್ರೇಲರು ಅಲ್ಲಿ ವಾಸಿಸುವಂತೆ ಮಾಡಿದನು. ಇದಾದ ಬಳಿಕ ಸೊಲೊಮೋನನು ಚೋಬದ ಹಮಾತ್ ಎಂಬಲ್ಲಿಗೆ ಹೋಗಿ ಅದನ್ನು ವಶಪಡಿಸಿಕೊಂಡನು. ಅರಣ್ಯದಲ್ಲಿದ್ದ ತದ್ಮೋರ್ ಎಂಬ ಪಟ್ಟಣವನ್ನು ಸೊಲೊಮೋನನು ಕಟ್ಟಿದನು. ಆಮೇಲೆ ಹಮಾತಿನ ಎಲ್ಲಾ ಪಟ್ಟಣಗಳನ್ನು ಉಗ್ರಾಣ ಪಟ್ಟಣಗಳನ್ನಾಗಿ ಮಾಡಿದನು. ಮೇಲಿನ ಬೇತ್ಹೋರೋನ್ ಮತ್ತು ಕೆಳಗಿನ ಬೇತ್ಹೋರೋನ್ ಎಂಬ ನಗರಗಳನ್ನು ಸೊಲೊಮೋನನು ಬಲವಾದ ಕೋಟೆಯ ನಗರಗಳನ್ನಾಗಿ ಮತ್ತೆ ಕಟ್ಟಿದನು. ಆ ನಗರಗಳನ್ನು ಕೋಟೆ, ಕದ ಮತ್ತು ಹೆಬ್ಬಾಗಿಲುಗಳಿಂದ ಬಲಗೊಳಿಸಿದನು. ಅಲ್ಲದೆ, ಬಾಲಾತ್ ಪಟ್ಟಣ ಮತ್ತು ಇನ್ನಿತರ ಪಟ್ಟಣಗಳನ್ನು ಉಗ್ರಾಣ ನಗರಗಳನ್ನಾಗಿ ಮಾಡಿದನು. ಅವನು ರಥಗಳನ್ನು ಇಡುವದಕ್ಕಾಗಿಯೂ ಮತ್ತು ರಾಹುತರ ವಾಸಕ್ಕಾಗಿಯೂ ಪಟ್ಟಣಗಳನ್ನು ಕಟ್ಟಿಸಿದನು. ಜೆರುಸಲೇಮಿನಲ್ಲಿಯೂ ಲೆಬನೋನಿನಲ್ಲಿಯೂ ಮತ್ತು ತನ್ನ ಆಡಳಿತದಲ್ಲಿದ್ದ ದೇಶಗಳಲ್ಲಿಯೂ ಸೊಲೊಮೋನನು ತನ್ನ ಇಷ್ಟದ ಪ್ರಕಾರ ಕಟ್ಟಿಸಿದನು.

7-8 ಇಸ್ರೇಲರು ಇದ್ದ ದೇಶದಲ್ಲಿ ಅನ್ಯ ಜನರಾದ ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸಿಸುತ್ತಿದ್ದರು. ಇವರನ್ನೆಲ್ಲಾ ಸೊಲೊಮೋನನು ಗುಲಾಮರನ್ನಾಗಿ ಉಪಯೋಗಿಸಿದನು. ಈ ಜನರು ಇಸ್ರೇಲರಾಗಿರಲಿಲ್ಲ. ಇಸ್ರೇಲರು ದೇಶವನ್ನು ವಶಪಡಿಸಿಕೊಂಡಾಗ ಅಲ್ಲಿದ್ದ ನಿವಾಸಿಗಳನ್ನು ಓಡಿಸದೆ ಬಿಟ್ಟವರ ಸಂತತಿಯವರಾಗಿದ್ದರು. ಅವರು ಈಗಲೂ ಅಲ್ಲಿಯೇ ಇದ್ದಾರೆ. ಸೊಲೊಮೋನನು ಇಸ್ರೇಲರಲ್ಲಿ ಯಾರನ್ನೂ ಗುಲಾಮರನ್ನಾಗಿ ಮಾಡಲಿಲ್ಲ. ಇಸ್ರೇಲರು ಸೊಲೊಮೋನನ ಯುದ್ಧವೀರರಾಗಿದ್ದರು. ಅವರು ಸೊಲೊಮೋನನ ಸೈನಕ್ಕೂ ರಥಾಶ್ವಗಳಿಗೂ ಸಾರಧಿಗಳಿಗೂ ಮಹಾದಂಡನಾಯಕರಾಗಿದ್ದರು. 10 ಇನ್ನು ಕೆಲವರು ಮುಖ್ಯಾಧಿಕಾರಿಗಳಿಗೆ ಅಧಿಪತಿಗಳಾಗಿದ್ದರು. ಜನಸೇವೆಗಾಗಿ ಈ ರೀತಿಯ 250 ಅಧಿಪತಿಗಳಿದ್ದರು.

11 ಸೊಲೊಮೋನನು ದಾವೀದ ನಗರದಲ್ಲಿದ್ದ ಫರೋಹನ ಕುಮಾರ್ತೆಯನ್ನು ಆಕೆಗಾಗಿ ಕಟ್ಟಿದ ಅರಮನೆಗೆ ಕರೆಸಿದನು. “ನನ್ನ ಹೆಂಡತಿಯು ದಾವೀದನ ಮನೆಯಲ್ಲಿ ವಾಸಿಸಬಾರದು. ಯಾಕೆಂದರೆ ದೇವರ ಒಡಂಬಡಿಕೆಯ ಪೆಟ್ಟಿಗೆ ಇರುವ ಸ್ಥಳಗಳು ಪರಿಶುದ್ಧವಾಗಿವೆ” ಎಂದು ಸೊಲೊಮೋನನು ಅಂದುಕೊಂಡನು.

12 ಅನಂತರ ಸೊಲೊಮೋನನು ದೇವಾಲಯದ ಮಂಟಪದ ಮುಂದೆ ತಾನು ಕಟ್ಟಿಸಿದ ಯಜ್ಞವೇದಿಕೆಯ ಮೇಲೆ ಯೆಹೋವನಿಗೆ ಸರ್ವಾಂಗಹೋಮಗಳನ್ನು ಅರ್ಪಿಸಿದನು. 13 ಮೋಶೆಯ ಅಪ್ಪಣೆಯ ಪ್ರಕಾರ ಪ್ರತಿನಿತ್ಯವೂ ಸಬ್ಬತ್‌ದಿನಗಳಲ್ಲಿಯೂ ಅಮಾವಾಸ್ಯೆಯ ದಿನಗಳಲ್ಲಿಯೂ ವರ್ಷದ ಮೂರು ಹಬ್ಬದ ದಿನಗಳಲ್ಲಿಯೂ (ಹುಳಿಯಿಲ್ಲದ ರೊಟ್ಟಿಯ ಹಬ್ಬ, ವಾರಗಳ ಹಬ್ಬ ಮತ್ತು ಪರ್ಣಶಾಲೆಗಳ ಹಬ್ಬ) ಆಯಾ ದಿನಗಳಲ್ಲಿ ಯಜ್ಞಗಳನ್ನು ಸಮರ್ಪಿಸುತ್ತಿದ್ದನು. 14 ದಾವೀದನು ಹೇಳಿದ ಪ್ರಕಾರ ಸೊಲೊಮೋನನು ಯಾಜಕರನ್ನು ಸರದಿಯ ಪ್ರಕಾರ ಸೇವೆಗೆ ನೇಮಿಸಿದನು. ಲೇವಿಯರನ್ನು ಆಯಾಕೆಲಸಕ್ಕೆ ನೇಮಿಸಿದನು. ಅವರು ಗಾಯನದಲ್ಲಿಯೂ ಯಾಜಕರ ಕೆಲಸಗಳಲ್ಲಿ ಸಹಾಯಕರಾಗಿಯೂ ದೇವಾಲಯದ ಕೆಲಸದಲ್ಲಿ ಪಾಲುತೆಗೆದುಕೊಂಡರು. ದ್ವಾರಪಾಲಕರ ಕೆಲಸಕ್ಕೆ ಸೊಲೊಮೋನನು ಜನರನ್ನು ಆರಿಸಿ ದ್ವಾರಗಳನ್ನು ಕಾಯುವುದಕ್ಕೆ ಅವರನ್ನು ನೇಮಿಸಿದನು. ದೇವಮನುಷ್ಯನಾದ ದಾವೀದನು ಹೀಗೆಯೇ ಮಾಡಬೇಕೆಂದು ತಿಳಿಸಿದ್ದನು. 15 ಸೊಲೊಮೋನನು ಯಾಜಕರಿಗಾಗಲಿ ಲೇವಿಯರಿಗಾಗಲಿ ಕೊಟ್ಟ ಆಜ್ಞೆಗಳನ್ನು ಯಾರೂ ಬದಲಿಸಲಿಲ್ಲ; ಅವುಗಳಿಗೆ ಯಾರೂ ಅವಿಧೇಯರಾಗಲಿಲ್ಲ; ಬೆಲೆಬಾಳುವ ವಸ್ತುಗಳ ಸಂಗ್ರಹಣ ಕಾರ್ಯದಲ್ಲೂ ಅವರು ಜಾಗರೂಕರಾಗಿದ್ದರು.

16 ದೇವಾಲಯವನ್ನು ಕಟ್ಟುವ ಕಾರ್ಯವು ಪ್ರಾರಂಭದಿಂದ ಹಿಡಿದು ಕೊನೆಯತನಕ ಎಲ್ಲವೂ ಯೋಜನೆಗನುಸಾರವಾಗಿ ನಡೆಯಿತು. ಹೀಗೆ ದೇವಾಲಯದ ಕಾರ್ಯವೆಲ್ಲಾ ಮುಕ್ತಾಯವಾಯಿತು.

17 ಆ ಬಳಿಕ ಸೊಲೊಮೋನನು ಎದೋಮ್ ದೇಶದ ಕೆಂಪುಸಮುದ್ರದ ತೀರದಲ್ಲಿದ್ದ ಎಚ್ಯೋನ್ಗೆಬೆರ್ ಮತ್ತು ಏಲೋತ್ ಎಂಬ ಪಟ್ಟಣಗಳಿಗೆ ಹೋದನು. 18 ಹೂರಾಮನು ಸೊಲೊಮೋನನಿಗೋಸ್ಕರ ಹಡಗುಗಳನ್ನು ಕಳುಹಿಸಿದನು. ಅವನ ಜನರೇ ಅದನ್ನು ನಡೆಸಿದರು. ಅವರು ಒಳ್ಳೆಯ ನುರಿತ ನಾವಿಕರಾಗಿದ್ದರು. ಹೂರಾಮನ ನಾವಿಕರು ಸೊಲೊಮೋನನ ಸೇವಕರೊಂದಿಗೆ ಓಫೀರ್ ದೇಶಕ್ಕೆ ಹೋಗಿ ಅಲ್ಲಿಂದ ಹದಿನೇಳು ಟನ್ ಬಂಗಾರವನ್ನು ಸೊಲೊಮೋನನಿಗೆ ತಂದುಕೊಟ್ಟರು.

ಶೆಬದ ರಾಣಿಯು ಸೊಲೊಮೋನನನ್ನು ಸಂದರ್ಶಿಸಿದ್ದು

ಸೊಲೊಮೋನನ ಪ್ರಖ್ಯಾತಿಯನ್ನು ಶೆಬದ ರಾಣಿಯು ಕೇಳಿ ಅವನನ್ನು ಕಠಿಣವಾದ ಪ್ರಶ್ನೆಗಳಿಂದ ಪರೀಕ್ಷಿಸುವದಕ್ಕಾಗಿ ಜೆರುಸಲೇಮಿಗೆ ಬಂದಳು. ಆಕೆಯು ದೊಡ್ಡ ಪರಿವಾರದೊಂದಿಗೆ ಬಂದಳು. ಜೊತೆಗೆ ಒಂಟೆಗಳ ಮೇಲೆ ಸುಗಂಧದ್ರವ್ಯವನ್ನೂ ಅಪರಿಮಿತವಾದ ಬಂಗಾರವನ್ನೂ ವಜ್ರವೈಢೂರ್ಯಗಳನ್ನೂ ಹೇರಿಕೊಂಡು ಬಂದಳು. ಅಲ್ಲಿ ಆಕೆ ಸೊಲೊಮೋನನ ಸಂಗಡ ಮಾತನಾಡಿ ತನ್ನಲ್ಲಿದ್ದ ಎಷ್ಟೋ ಪ್ರಶ್ನೆಗಳನ್ನು ಕೇಳಿದಳು. ಅವನು ಆಕೆಯ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದನು. ಆಕೆಯ ಯಾವ ಪ್ರಶ್ನೆಯೂ ಅವನಿಗೆ ಕಷ್ಟಕರವೆನಿಸಲಿಲ್ಲ. ಶೆಬದ ರಾಣಿಯು ಅವನ ಜ್ಞಾನವನ್ನೂ ಅವನು ಕಟ್ಟಿಸಿದ ಮನೆಯನ್ನೂ ನೋಡಿದಳು. ಸೊಲೊಮೋನನ ಮೇಜಿನ ಮೇಲೆ ಇಟ್ಟಿರುವ ಆಹಾರವನ್ನು ನೋಡಿದಳು. ಅವನ ಸೇವಕರು ಮಾಡುವ ಸೇವೆಯ ರೀತಿಯನ್ನು ಪರಿಶೀಲಿಸಿದಳು. ಅವರು ಧರಿಸುವ ಉಡುಪು, ಸಮವಸ್ತ್ರಗಳು, ದೇವಾಲಯಕ್ಕೆ ಹೋಗುವಾಗ ಮಾಡುವ ಮೆರವಣಿಗೆಗಳನ್ನು ಮತ್ತು ಯಜ್ಞಗಳನ್ನು ನೋಡಿದಳು. ಪ್ರತಿಯೊಂದು ವಿಷಯವನ್ನು ಆಕೆ ಗಮನಿಸಿದಾಗ ಅಚ್ಚರಿಗೊಂಡಳು.

ಆಕೆ ಅರಸನಾದ ಸೊಲೊಮೋನನಿಗೆ, “ನನ್ನ ದೇಶದಲ್ಲಿ ನಾನು ನಿನ್ನ ವಿಷಯವಾಗಿ ಕೇಳಿದ ಸಂಗತಿಗಳು, ನಿನ್ನ ಜ್ಞಾನ, ನಿನ್ನ ಕೆಲಸಕಾರ್ಯಗಳು ಎಲ್ಲವೂ ಸತ್ಯವಾಗಿವೆ. ನಾನು ಇಲ್ಲಿಗೆ ಬಂದು ಅವುಗಳನ್ನೆಲ್ಲಾ ಕಣ್ಣಾರೆ ನೋಡುವ ತನಕ ನಾನು ಅವುಗಳನ್ನು ನಂಬಿರಲಿಲ್ಲ. ಆದರೆ ನಾನು ಕೇಳಿದ್ದು ನಿನ್ನ ಜ್ಞಾನದ ಅರ್ಧದಷ್ಟೂ ಇಲ್ಲವೆಂದು ಈಗ ನನಗೆ ತಿಳಿಯಿತು. ನಾನು ಕೇಳಿದ್ದಕ್ಕಿಂತಲೂ ನೀನು ಮಹಾಜ್ಞಾನಿಯಾಗಿರುವೆ. ನಿನ್ನ ಹೆಂಡತಿಯರೂ ನಿನ್ನ ಅಧಿಕಾರಿಗಳೂ ಧನ್ಯರು. ನಿನ್ನ ಸೇವೆಮಾಡುವ ಇವರು ನಿನ್ನ ಜ್ಞಾನೋಪದೇಶವನ್ನು ಯಾವಾಗಲೂ ಕೇಳುವರು. ನಿನ್ನ ದೇವರಿಗೆ ಸ್ತೋತ್ರವಾಗಲಿ. ಆತನು ನಿನ್ನಲ್ಲಿ ಸಂತೋಷಿಸಿ ತನ್ನ ಸಿಂಹಾಸನದಲ್ಲಿ ನಿನ್ನನ್ನು ಕುಳ್ಳಿರಿಸಿದ್ದಾನೆ. ನಿನ್ನ ದೇವರು ಇಸ್ರೇಲನ್ನು ಪ್ರೀತಿಸುತ್ತಾನೆ ಮತ್ತು ಶಾಶ್ವತವಾಗಿ ಪೋಷಿಸುತ್ತಾನೆ. ಅದಕ್ಕಾಗಿಯೇ ನ್ಯಾಯವಾದದ್ದನ್ನೂ ಸರಿಯಾದದ್ದನ್ನೂ ಮಾಡುವುದಕ್ಕಾಗಿ ನಿನ್ನನ್ನು ಇಸ್ರೇಲಿನ ಅರಸನನ್ನಾಗಿ ಮಾಡಿದ್ದಾನೆ” ಎಂದು ಹೇಳಿದಳು.

ಆ ಬಳಿಕ ಶೆಬದ ರಾಣಿಯು ಸೊಲೊಮೋನ್ ಅರಸನಿಗೆ ನಾಲ್ಕು ಸಾವಿರದ ನೂರ ನಲವತ್ತು ಕಿಲೋಗ್ರಾಂ ಬಂಗಾರ, ಲೆಕ್ಕವಿಲ್ಲದಷ್ಟು ಸುಗಂಧದ್ರವ್ಯಗಳು ಮತ್ತು ಬೆಲೆಬಾಳುವ ವಜ್ರಗಳನ್ನು ಕೊಟ್ಟಳು. ಅಷ್ಟು ಅತ್ಯುತ್ತಮವಾದ ಸುಗಂಧದ್ರವ್ಯಗಳನ್ನು ಯಾರೂ ಸೊಲೊಮೋನನಿಗೆ ಕೊಟ್ಟಿರಲಿಲ್ಲ.

10 ಹೂರಾಮನ ಮತ್ತು ಸೊಲೊಮೋನನ ಸೇವಕರು ಓಫೀರಿನಿಂದ ಬಂಗಾರವನ್ನು ತಂದರು; ಅಲ್ಲದೆ ಸುಗಂಧದ ಮರಗಳನ್ನೂ ವಜ್ರವೈಢೂರ್ಯಗಳನ್ನೂ ತಂದರು. 11 ಸುಗಂಧದ ಮರಗಳಿಂದ ಸೊಲೊಮೋನನು ದೇವಾಲಯದ ಮತ್ತು ಅರಮನೆಯ ಮೆಟ್ಟಲುಗಳನ್ನು ಮಾಡಿಸಿದನು; ಅಲ್ಲದೆ ಗಾಯಕರಿಗಾಗಿ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ಅದರಿಂದ ತಯಾರಿಸಿದನು. ಯೆಹೂದ ಪ್ರಾಂತ್ಯದಲ್ಲಿ ಯಾರೂ ಅಂತಹ ಸುಂದರವಾದ ಸುಗಂಧವಸ್ತುಗಳನ್ನು ನೋಡಿರಲಿಲ್ಲ.

12 ಶೆಬದ ರಾಣಿಯು ಕೇಳಿದ್ದನ್ನೆಲ್ಲಾ ಸೊಲೊಮೋನನು ಕೊಟ್ಟನು. ಆಕೆಯು ಅವನಿಗೆ ತಂದದ್ದಕ್ಕಿಂತ ಹೆಚ್ಚಾಗಿ ಆಕೆಗೆ ಕೊಟ್ಟನು. ಅನಂತರ ಶೆಬದ ರಾಣಿಯೂ ಆಕೆಯ ಪರಿವಾರವೂ ತಮ್ಮ ದೇಶಕ್ಕೆ ತೆರಳಿದರು.

ಸೊಲೊಮೋನನ ಅಪರಿಮಿತವಾದ ಐಶ್ವರ್ಯ

13 ಸೊಲೊಮೋನನು ಒಂದು ವರ್ಷದಲ್ಲಿ ಇಪ್ಪತ್ತೆರಡು ಸಾವಿರದ ಒಂಭೈನೂರ ಎಪ್ಪತ್ತೇಳು ಕಿಲೋಗ್ರಾಂ ಬಂಗಾರವನ್ನು ಸಂಗ್ರಹಿಸಿದನು. 14 ಇತರ ದೇಶಗಳ ವ್ಯಾಪಾರಸ್ಥರು, ಅರೇಬಿಯದ ಎಲ್ಲಾ ರಾಜರುಗಳು ಮತ್ತು ದೇಶಾಧಿಪತಿಗಳು ಸೊಲೊಮೋನನಿಗೆ ಬೆಳ್ಳಿಬಂಗಾರಗಳನ್ನು ತಂದುಕೊಡುತ್ತಿದ್ದರು.

15 ಸೊಲೊಮೋನನು ಇನ್ನೂರು ದೊಡ್ಡ ಗಾತ್ರದ ಗುರಾಣಿಗಳನ್ನು ಚಿನ್ನದ ತಗಡಿನಿಂದ ಮಾಡಿಸಿದನು. ಪ್ರತಿಯೊಂದು ಗುರಾಣಿಗೆ ಸುಮಾರು ಎಳು ಕಿಲೋಗ್ರಾಂಗಳಷ್ಟು ಚಿನ್ನವು ಹಿಡಿಯಿತು. 16 ಇದಲ್ಲದೆ ಮುನ್ನೂರು ಸಣ್ಣ ಗುರಾಣಿಗಳನ್ನೂ ಸೊಲೊಮೋನನು ಚಿನ್ನದ ತಗಡಿನಿಂದ ಮಾಡಿಸಿದನು; ಒಂದೊಂದು ಗುರಾಣಿಗೆ ಸುಮಾರು ನಾಲ್ಕು ಪೌಂಡ್ ಬಂಗಾರ ಹಿಡಿಯಿತು. ಈ ಗುರಾಣಿಗಳನ್ನೆಲ್ಲಾ ಸೊಲೊಮೋನನು “ಲೆಬನೋನಿನ ತೋಪು” ಎಂಬ ಅರಮನೆಯಲ್ಲಿ ಶೇಖರಿಸಿಟ್ಟನು.

17 ರಾಜನಾದ ಸೊಲೊಮೋನನು ದಂತದಿಂದ ಒಂದು ದೊಡ್ಡ ಸಿಂಹಾಸನವನ್ನು ಮಾಡಿಸಿದನು. ಸಿಂಹಾಸನವನ್ನು ಅಪ್ಪಟ ಬಂಗಾರದ ತಗಡಿನಿಂದ ಹೊದಿಸಿದನು. 18 ಸಿಂಹಾಸನವನ್ನು ಹತ್ತಲು ಆರು ಮೆಟ್ಟಲುಗಳಿದ್ದವು. ಅದಕ್ಕೆ ಬಂಗಾರದಿಂದ ಮಾಡಿದ ಪಾದಪೀಠವಿತ್ತು. ಸಿಂಹಾಸನದ ಎರಡು ಕಡೆಗಳಲ್ಲೂ ಕೈಗಳನ್ನಿಡಲು ಏರ್ಪಾಟು ಮಾಡಲಾಗಿತ್ತು; ಅವುಗಳ ಸಮೀಪದಲ್ಲಿ ಎರಡು ಸಿಂಹಗಳ ಆಕೃತಿಯನ್ನು ಮಾಡಿಟ್ಟಿದ್ದರು. 19 ಆರು ಮೆಟ್ಟಲುಗಳ ಮೇಲೆ ಹನ್ನೆರಡು ಸಿಂಹಗಳ ಆಕೃತಿಯನ್ನು ಇಟ್ಟಿದ್ದರು. ಪ್ರತಿಯೊಂದು ಮೆಟ್ಟಲಿನ ಎರಡೂ ಕಡೆಗಳಲ್ಲಿ ಒಂದೊಂದು ಸಿಂಹದ ಆಕೃತಿಯಿತ್ತು. ಇಂಥ ಸಿಂಹಾಸನವು ಬೇರೆ ಯಾವ ರಾಜ್ಯದಲ್ಲಿಯೂ ಇರಲಿಲ್ಲ.

20 ಸೊಲೊಮೋನನು ಕುಡಿಯುವ ಪಾತ್ರೆಗಳೆಲ್ಲಾ ಬಂಗಾರದವುಗಳೇ. “ಲೆಬನೋನಿನ ತೋಪು” ಎಂಬ ಅರಮನೆಯಲ್ಲಿ ಇಟ್ಟಿದ್ದ ಎಲ್ಲಾ ವಸ್ತುಗಳು ಅಪ್ಪಟ ಬಂಗಾರದಿಂದಲೇ ಮಾಡಿದವುಗಳಾಗಿದ್ದವು. ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆಯೇ ಇರಲಿಲ್ಲ.

21 ರಾಜನಾದ ಸೊಲೊಮೋನನ ಬಳಿಯಲ್ಲಿ ತಾರ್ಷೀಷಿಗೆ ಹೋಗಲು ಹಡಗುಗಳಿದ್ದವು. ಹೂರಾಮನ ನಾವಿಕರು ಅವುಗಳನ್ನು ನಡಿಸಿದರು. ಮೂರು ವರ್ಷಕ್ಕೊಮ್ಮೆ ಹಡಗುಗಳು ತಾರ್ಷೀಷಿನಿಂದ ಹಿಂದಿರುಗುತ್ತಿದ್ದವು. ಅವು ಚಿನ್ನ, ಬೆಳ್ಳಿ, ದಂತ, ಕೋತಿ ಮತ್ತು ನವಿಲುಗಳನ್ನು ಸೊಲೊಮೋನನಿಗೆ ತರುತ್ತಿದ್ದವು.

22 ರಾಜನಾದ ಸೊಲೊಮೋನನು ಭೂಲೋಕದ ಎಲ್ಲಾ ರಾಜರುಗಳಿಗಿಂತ ಜ್ಞಾನದಲ್ಲಿಯೂ ಐಶ್ವರ್ಯದಲ್ಲಿಯೂ ಹೆಚ್ಚು ಪ್ರಸಿದ್ಧನಾದನು. 23 ದೇವರು ಅವನಿಗೆ ದಯಪಾಲಿಸಿದ ಜ್ಞಾನವನ್ನು ನೋಡಿ ಅವನಿಂದ ಜ್ಞಾನವಾಕ್ಯಗಳನ್ನು ಕೇಳಲು ಲೋಕದ ರಾಜರುಗಳು ಅವನ ಬಳಿಗೆ ಬರುತ್ತಿದ್ದರು. 24 ಪ್ರತಿ ವರ್ಷವೂ ಆ ರಾಜರುಗಳು ಸೊಲೊಮೋನನಿಗೆ ಬಹುಮಾನಗಳನ್ನು ತರುತ್ತಿದ್ದರು. ಬೆಳ್ಳಿಬಂಗಾರದ ವಸ್ತುಗಳನ್ನು, ಬಟ್ಟೆಗಳನ್ನು, ಆಯುಧಗಳನ್ನು, ಸುಗಂಧವಸ್ತುಗಳನ್ನು, ಕುದುರೆಗಳನ್ನು ಮತ್ತು ಹೇಸರಕತ್ತೆಗಳನ್ನು ಕಾಣಿಕೆಯಾಗಿ ಅವನಿಗೆ ಕೊಡುತ್ತಿದ್ದರು.

25 ಸೊಲೊಮೋನನ ರಥಗಳಿಗೂ ರಥಾಶ್ವಗಳಿಗೂ ನಾಲ್ಕು ಸಾವಿರ ಲಾಯಗಳಿದ್ದವು. ಅವನ ಬಳಿಯಲ್ಲಿ ಹನ್ನೆರಡು ಸಾವಿರ ರಾಹುತರು ಇದ್ದರು. ಅವರನ್ನು ಪ್ರತ್ಯೇಕವಾದ ಪಟ್ಟಣಗಳಲ್ಲಿಯೂ ಜೆರುಸಲೇಮಿನಲ್ಲಿಯೂ ಇರಿಸಿದನು. 26 ಯೂಫ್ರೇಟೀಸ್ ನದಿಯಿಂದ ಹಿಡಿದು ಫಿಲಿಷ್ಟಿಯರ ರಾಜ್ಯ ಮತ್ತು ಈಜಿಪ್ಟಿನ ಮೇರೆಯ ತನಕವಿದ್ದ ಎಲ್ಲಾ ಅರಸರುಗಳಿಗೆ ಸೊಲೊಮೋನನೇ ರಾಜನಾಗಿದ್ದನು. 27 ಸೊಲೊಮೋನನಿಂದಾಗಿ ಜೆರುಸಲೇಮಿನಲ್ಲಿ ಬೆಳ್ಳಿಯು ಹೆಚ್ಚಾಗಿ, ಕಲ್ಲುಗಳಷ್ಟು ಸಾಮಾನ್ಯವಾಗಿತ್ತು. ಮಾತ್ರವಲ್ಲದೆ ದೇವದಾರು ಮರಗಳು ಬೆಟ್ಟಪ್ರದೇಶದಲ್ಲಿ ಬೆಳೆಯುವ ಸಿಕಮೋರ್ ಮರಗಳಂತೆ ಧಾರಾಳವಾಗಿದ್ದವು. 28 ಜನರು ಸೊಲೊಮೋನನಿಗೋಸ್ಕರ ಈಜಿಪ್ಟ್ ಮತ್ತು ಬೇರೆ ದೇಶಗಳಿಂದ ಕುದುರೆಗಳನ್ನು ತಂದು ಕೊಡುತ್ತಿದ್ದರು.

ಸೊಲೊಮೋನನ ಮರಣ

29 ಸೊಲೊಮೋನನು ಪ್ರಾರಂಭದಿಂದ ಅಂತ್ಯದ ತನಕ ಮಾಡಿದ ಎಲ್ಲಾ ವಿಷಯಗಳನ್ನು ಪ್ರವಾದಿಯಾದ ನಾತಾನನು ಬರೆದ ಲೇಖನಗಳಲ್ಲಿಯೂ, ಶೀಲೋವದ ಅಹೀಯನ ಪ್ರವಾದನೆಯಲ್ಲಿಯೂ ಮತ್ತು ದೇವದರ್ಶಿಯಾದ ಇದ್ದೋವಿನ ದರ್ಶನಗಳ ಪುಸ್ತಕದಲ್ಲಿಯೂ ಬರೆಯಲಾಗಿದೆ. ದೇವದರ್ಶಿಯಾದ ಇದ್ದೋ, ನೆಬಾಟನ ಮಗನಾದ ಯಾರೊಬ್ಬಾಮನ ವಿಷಯವಾಗಿಯೂ ಬರೆದಿದ್ದಾನೆ. 30 ಜೆರುಸಲೇಮಿನಲ್ಲಿ ಸೊಲೊಮೋನನು ನಲವತ್ತು ವರ್ಷಗಳ ಕಾಲ ಇಸ್ರೇಲರನ್ನು ಆಳಿದನು. 31 ಆ ಬಳಿಕ ಸೊಲೊಮೋನನು ತನ್ನ ಪೂರ್ವಿಕರೊಂದಿಗೆ ಸೇರಿದನು. ಅವನನ್ನು ದಾವೀದನಗರದಲ್ಲಿ ಹೂಳಿಟ್ಟರು. ಸೊಲೊಮೋನನ ನಂತರ ಅವನ ಮಗನಾದ ರೆಹಬ್ಬಾಮನು ಅರಸನಾದನು.

ಯೋಹಾನ 11:1-29

ಲಾಜರನ ಮರಣ

11 ಲಾಜರನೆಂಬ ಒಬ್ಬನು ಅಸ್ವಸ್ಥನಾಗಿದ್ದನು. ಅವನು ಬೆಥಾನಿ ಎಂಬ ಊರಿನಲ್ಲಿ ವಾಸವಾಗಿದ್ದನು. ಮರಿಯಳು ಮತ್ತು ಆಕೆಯ ಸಹೋದರಿಯಾದ ಮಾರ್ಥಳು ಈ ಊರಿನಲ್ಲೇ ವಾಸವಾಗಿದ್ದರು. ಪ್ರಭುವಿಗೆ (ಯೇಸುವಿಗೆ) ಪರಿಮಳತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೆಕೂದಲಿನಿಂದ ಒರಸಿದವಳೇ ಈ ಮರಿಯಳು. ಅಸ್ವಸ್ಥನಾಗಿದ್ದ ಲಾಜರನು ಮರಿಯಳ ಸಹೋದರನಾಗಿದ್ದನು. ಆದ್ದರಿಂದ ಮರಿಯಳು ಮತ್ತು ಮಾರ್ಥಳು, “ಪ್ರಭುವೇ, ನಿನ್ನ ಪ್ರಿಯ ಸ್ನೇಹಿತನಾದ ಲಾಜರನು ಅಸ್ವಸ್ಥನಾಗಿದ್ದಾನೆ” ಎಂಬ ಸಂದೇಶವನ್ನು ಆತನಿಗೆ ತಿಳಿಸಲು ಒಬ್ಬನನ್ನು ಕಳುಹಿಸಿಕೊಟ್ಟರು.

ಯೇಸು ಇದನ್ನು ಕೇಳಿದಾಗ, “ಈ ಕಾಯಿಲೆಯು ದೇವರ ಮತ್ತು ದೇವಕುಮಾರನ ಮಹಿಮೆಗಾಗಿ ಬಂದಿದೆಯೇ ಹೊರತು ಮರಣಕ್ಕಾಗಿಯಲ್ಲ” ಎಂದು ಹೇಳಿದನು. ಯೇಸು ಮಾರ್ಥಳನ್ನು, ಆಕೆಯ ಸಹೋದರಿಯನ್ನು ಮತ್ತು ಲಾಜರನ್ನು ಪ್ರೀತಿಸುತ್ತಿದ್ದನು. ಲಾಜರನು ಅಸ್ವಸ್ಥನಾಗಿದ್ದಾನೆ ಎಂಬ ವಾರ್ತೆಯನ್ನು ಆತನು ಕೇಳಿದಾಗ ತಾನಿದ್ದ ಸ್ಥಳದಲ್ಲಿಯೇ ಇನ್ನೂ ಎರಡು ದಿನಗಳವರೆಗೆ ತಂಗಿದನು. ಬಳಿಕ ಆತನು ತನ್ನ ಶಿಷ್ಯರಿಗೆ, “ನಾವು ಜುದೇಯಕ್ಕೆ ಹಿಂತಿರುಗಿ ಹೋಗಬೇಕು” ಎಂದು ಹೇಳಿದನು.

ಶಿಷ್ಯರು, “ಗುರುವೇ, ಜುದೇಯದ ಯೆಹೂದ್ಯರು ನಿನ್ನನ್ನು ಕಲ್ಲುಗಳಿಂದ ಕೊಲ್ಲಲು ಪ್ರಯತ್ನಿಸಿದರು. ಅದಾದದ್ದು ಕೇವಲ ಸ್ವಲ್ಪಕಾಲದ ಹಿಂದೆಯಷ್ಟೇ. ಈಗ ನೀನು ಮತ್ತೆ ಅಲ್ಲಿಗೆ ಹೋಗಬೇಕೆನ್ನುವಿಯಾ?” ಎಂದು ಉತ್ತರಕೊಟ್ಟರು.

ಯೇಸು, “ಹಗಲಿಗೆ ಹನ್ನೆರಡು ತಾಸುಗಳಿರುತ್ತವೆ. ಹೌದಲ್ಲವೇ? ಹಗಲಿನಲ್ಲಿ ನಡೆಯುವವನು ಎಡವಿಬೀಳುವುದಿಲ್ಲ. ಏಕೆಂದರೆ ಈ ಲೋಕದ ಬೆಳಕಿನಿಂದ ಅವನು ನೋಡಬಲ್ಲನು. 10 ಆದರೆ ರಾತ್ರಿಯಲ್ಲಿ ನಡೆಯುವವನು ಎಡವುತ್ತಾನೆ. ಏಕೆಂದರೆ ನೋಡಿಕೊಂಡು ನಡೆಯಲು ಅವನಿಗೆ ಯಾವ ಬೆಳಕೂ ಇರುವುದಿಲ್ಲ” ಎಂದು ಉತ್ತರಕೊಟ್ಟನು.

11 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ, “ನಮ್ಮ ಸ್ನೇಹಿತನಾದ ಲಾಜರನು ಈಗ ನಿದ್ರಿಸುತ್ತಿದ್ದಾನೆ. ಅವನನ್ನು ಎಬ್ಬಿಸಲು ನಾನು ಅಲ್ಲಿಗೆ ಹೋಗುತ್ತಿದ್ದೇನೆ” ಎಂದು ಹೇಳಿದನು.

12 ಶಿಷ್ಯರು, “ಪ್ರಭುವೇ, ಅವನು ನಿದ್ರೆ ಮಾಡುತ್ತಿದ್ದರೆ ಆರೋಗ್ಯ ಹೊಂದುವನು” ಎಂದು ಉತ್ತರಕೊಟ್ಟರು. 13 ಲಾಜರನು ಸತ್ತುಹೋಗಿದ್ದಾನೆ. ಎಂಬರ್ಥದಲ್ಲಿ ಯೇಸು ಹೇಳಿದನು. ಆದರೆ ಲಾಜರನು ನಿಜವಾಗಿಯೂ ನಿದ್ರಿಸುತ್ತಿದ್ದಾನೆ ಎಂಬರ್ಥದಲ್ಲಿ ಯೇಸು ಹೇಳಿದನೆಂಬುದಾಗಿ ಶಿಷ್ಯರು ಭಾವಿಸಿಕೊಂಡರು.

14 ಆದ್ದರಿಂದ ಯೇಸು, “ಲಾಜರನು ಸತ್ತುಹೋಗಿದ್ದಾನೆ. 15 ಆದರೆ ನಾನು ಅಲ್ಲಿ ಇಲ್ಲದಿದ್ದ ಕಾರಣ ಸಂತೋಷಿಸುತ್ತೇನೆ. ನಿಮ್ಮ ವಿಷಯದಲ್ಲಿಯೂ ನಾನು ಸಂತೋಷಪಡುತ್ತೇನೆ. ಏಕೆಂದರೆ, ಆಗ ನೀವು ನನ್ನಲ್ಲಿ ನಂಬಿಕೆ ಇಡುವಿರಿ. ಬನ್ನಿ, ಅವನ ಬಳಿಗೆ ಹೋಗೋಣ” ಎಂದು ಸ್ವಷ್ಟವಾಗಿ ಹೇಳಿದನು.

16 ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಸಹ ಯೇಸುವಿನೊಂದಿಗೆ ಹೋಗಿ ಜುದೇಯದಲ್ಲಿ ಸಾಯೋಣ” ಎಂದು ಹೇಳಿದನು.

ಬೆಥಾನಿಯಲ್ಲಿ ಯೇಸು

17 ಯೇಸು ಬೆಥಾನಿಯಕ್ಕೆ ಬಂದನು. ಈಗಾಗಲೇ ಲಾಜರನು ಸತ್ತು ಸಮಾಧಿಯಾಗಿ ನಾಲ್ಕು ದಿನಗಳಾಯಿತೆಂಬುದು ಯೇಸುವಿಗೆ ತಿಳಿಯಿತು. 18 ಬೆಥಾನಿಯು ಜೆರುಸಲೇಮಿನಿಂದ ಸುಮಾರು ಎರಡು ಮೈಲಿಗಳಷ್ಟು ದೂರದಲ್ಲಿತ್ತು. 19 ಅನೇಕ ಯೆಹೂದ್ಯರು ಮಾರ್ಥ ಮತ್ತು ಮರಿಯಳ ಬಳಿಗೆ ಬಂದಿದ್ದರು. ಮಾರ್ಥ ಮತ್ತು ಮರಿಯಳನ್ನು ಅವರ ತಮ್ಮನಾದ ಲಾಜರನ ವಿಷಯದಲ್ಲಿ ಸಂತೈಸಲು ಯೆಹೂದ್ಯರು ಬಂದಿದ್ದರು.

20 ಯೇಸು ಬರುತ್ತಿದ್ದಾನೆ ಎಂಬ ಸುದ್ದಿಯನ್ನು ಕೇಳಿ ಮಾರ್ಥಳು ಆತನನ್ನು ವಂದಿಸಲು ಹೊರಗೆ ಹೋದಳು. ಆದರೆ ಮರಿಯಳು ಮನೆಯಲ್ಲೇ ಇದ್ದಳು. 21 ಮಾರ್ಥಳು ಯೇಸುವಿಗೆ, “ಪ್ರಭುವೇ, ನೀನು ಇಲ್ಲಿ ಇದ್ದಿದ್ದರೆ, ನನ್ನ ಸಹೋದರನು ಸಾಯುತ್ತಿರಲಿಲ್ಲ. 22 ಆದರೆ ಈಗಲೂ ಸಹ ನೀನು ಏನನ್ನೇ ಕೇಳಿಕೊಂಡರೂ ದೇವರು ನಿನಗೆ ಕೊಡುತ್ತಾನೆ ಎಂಬುದು ನನಗೆ ತಿಳಿದಿದೆ” ಎಂದು ಹೇಳಿದಳು.

23 ಯೇಸು, “ನಿನ್ನ ಸಹೋದರನು ಮತ್ತೆ ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು.

24 ಮಾರ್ಥಳು, “ಅಂತಿಮ ದಿನದಂದು ಪುನರುತ್ಥಾನವಾಗುವಾಗ ಅವನು ಮತ್ತೆ ಎದ್ದುಬರುವನೆಂದು ನನಗೆ ಗೊತ್ತಿದೆ” ಎಂಬುದಾಗಿ ಉತ್ತರ ಕೊಟ್ಟಳು.

25 ಯೇಸು ಆಕೆಗೆ, “ನಾನೇ ಪುನರುತ್ಥಾನ. ನಾನೇ ಜೀವ. ನನ್ನನ್ನು ನಂಬುವವನು ತಾನು ಸತ್ತನಂತರವೂ ಮತ್ತೆ ಜೀವವನ್ನು ಹೊಂದುವನು. 26 ಮತ್ತು ಬದುಕುತ್ತಾ ನನ್ನನ್ನು ನಂಬುವವನು ಎಂದಿಗೂ ಸಾಯುವುದಿಲ್ಲ. ಮಾರ್ಥಳೇ, ನೀನು ಇದನ್ನು ನಂಬುವಿಯಾ?” ಎಂದನು.

27 ಮಾರ್ಥಳು, “ಹೌದು ಪ್ರಭುವೇ, ನೀನು ದೇವರ ಮಗನಾದ ಕ್ರಿಸ್ತನೆಂದು ನಾನು ನಂಬುವೆ. ಈ ಲೋಕಕ್ಕೆ ಬರಬೇಕಾಗಿದ್ದವನು ನೀನೇ” ಎಂದು ಉತ್ತರಕೊಟ್ಟಳು.

ಯೇಸು ಕಣ್ಣೀರಿಡುವನು

28 ಮಾರ್ಥಳು ಹೀಗೆ ಹೇಳಿದ ಮೇಲೆ, ತನ್ನ ಸಹೋದರಿಯಾದ ಮರಿಯಳ ಬಳಿಗೆ ಹಿಂತಿರುಗಿ ಹೋದಳು. ಮಾರ್ಥಳು ಮರಿಯಳೊಂದಿಗೆ ಪ್ರತ್ಯೇಕವಾಗಿ ಮಾತಾಡಿ, “ಗುರುವು (ಯೇಸು) ನಿನ್ನನ್ನು ಕರೆಯುತ್ತಿದ್ದಾನೆ” ಎಂದು ತಿಳಿಸಿದಳು. 29 ಇದನ್ನು ಕೇಳಿದ ಕೂಡಲೇ ಮರಿಯಳು ಎದ್ದು ಯೇಸುವಿನ ಬಳಿಗೆ ಬೇಗಬೇಗನೆ ಹೋದಳು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International