Old/New Testament
ಹೋಶೇಯನು ಇಸ್ರೇಲಿನಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದನು
17 ಏಲನ ಮಗನಾದ ಹೋಶೇಯನು ಸಮಾರ್ಯದಲ್ಲಿ ಇಸ್ರೇಲನ್ನು ಆಳಲಾರಂಭಿಸಿದನು. ಇದು ಅಹಾಜನು ಯೆಹೂದದ ರಾಜನಾಗಿದ್ದ ಹನ್ನೆರಡನೆಯ ವರ್ಷದಲ್ಲಾಯಿತು. ಹೋಶೇಯನು ಒಂಭತ್ತು ವರ್ಷ ಆಳಿದನು. 2 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಹೋಶೇಯನು ಮಾಡಿದನು. ಆದರೆ ಹೋಶೇಯನು ಅವನಿಗಿಂತ ಮೊದಲು ಇಸ್ರೇಲನ್ನು ಆಳಿದ ರಾಜರುಗಳಷ್ಟು ಕೆಟ್ಟವನಲ್ಲ.
3 ಅಶ್ಶೂರದ ರಾಜನಾದ ಶಲ್ಮನೆಸರನು ಹೋಶೇಯನ ವಿರುದ್ಧ ಯುದ್ಧಕ್ಕೆ ಬಂದನು. ಶಲ್ಮನೆಸರನು ಹೋಶೇಯನನ್ನು ಸೋಲಿಸಿದನು. ಆದ್ದರಿಂದ ಹೋಶೇಯನು ಶಲ್ಮನೆಸರನಿಗೆ ಸೇವಕನಾಗಿ ಕಪ್ಪಕಾಣಿಕೆಯನ್ನು ಕೊಟ್ಟನು.
4 ಹೋಶೇಯನು ಈಜಿಪ್ಟಿನ ರಾಜನಲ್ಲಿಗೆ ಸಂದೇಶಕರನ್ನು ಕಳುಹಿಸಿದ್ದನು. ಈಜಿಪ್ಟಿನ ರಾಜನಿಗೆ ಸೋ ಎಂಬ ಹೆಸರಿತ್ತು. ಹೋಶೇಯನು ಅಶ್ಶೂರದ ರಾಜನಿಗೆ ಪ್ರತಿವರ್ಷ ಕಪ್ಪಕಾಣಿಕಯನ್ನು ಕೊಡುತ್ತಿದ್ದನು, ಆದರೆ ಆ ವರ್ಷ ಕೊಡಲಿಲ್ಲ. ಆದರೆ ಅಶ್ಶೂರದ ರಾಜನಿಗೆ ಹೋಶೇಯನು ತನ್ನ ವಿರುದ್ಧ ಮಾಡಿರುವ ಒಳಸಂಚು ತಿಳಿದುಬಂದಿತು. ಆದ್ದರಿಂದ ಅಶ್ಶೂರದ ರಾಜನು ಹೋಶೇಯನನ್ನು ಬಂಧಿಸಿ, ಸೆರೆಯಲ್ಲಿಟ್ಟನು.
5 ನಂತರ ಅಶ್ಶೂರದ ರಾಜನು ಇಸ್ರೇಲಿನಲ್ಲೆಲ್ಲಾ ಸಂಚರಿಸಿ ಸಮಾರ್ಯಕ್ಕೆ ಬಂದನು. ಅವನು ಸಮಾರ್ಯವನ್ನು ಮೂರು ವರ್ಷ ಮುತ್ತಿಗೆ ಹಾಕಿದನು. 6 ಹೋಶೇಯನು ಇಸ್ರೇಲಿನ ರಾಜನಾಗಿದ್ದ ಒಂಭತ್ತನೆಯ ವರ್ಷದಲ್ಲಿ ಅಶ್ಶೂರದ ರಾಜನು ಸಮಾರ್ಯವನ್ನು ಸ್ವಾಧೀನಪಡಿಸಿಕೊಂಡನು. ಅಶ್ಶೂರದ ರಾಜನು ಇಸ್ರೇಲರನ್ನು ಸೆರೆಯಾಳುಗಳನ್ನಾಗಿ ಒಯ್ದು ಹಲಹು ಪ್ರಾಂತ್ಯದಲ್ಲಿಯೂ ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತ್ಯದಲ್ಲಿಯೂ ಮೇದ್ಯರ ನಗರಗಳಲ್ಲಿಯೂ ಇರಿಸಿದನು.
7 ಇಸ್ರೇಲರು ತಮ್ಮ ದೇವರಾದ ಯೆಹೋವನ ವಿರುದ್ಧ ಪಾಪಗಳನ್ನು ಮಾಡಿದ್ದರಿಂದ ಇವೆಲ್ಲವೂ ಸಂಭವಿಸಿದವು. ಈಜಿಪ್ಟಿನ ರಾಜನಾದ ಫರೋಹನ ಆಳ್ವಿಕೆಯಿಂದ ಇಸ್ರೇಲರನ್ನು ತಪ್ಪಿಸಿ ಯೆಹೋವನು ಅವರನ್ನು ಈಜಿಪ್ಟ್ ದೇಶದಿಂದ ಹೊರತಂದಿದ್ದನು. ಆದರೆ ಇಸ್ರೇಲರು ಬೇರೆ ದೇವರುಗಳನ್ನು ಪೂಜಿಸಲು ಆರಂಭಿಸಿ 8 ಅನ್ಯರು ಮಾಡುವಂತಹ ಕಾರ್ಯಗಳನ್ನೇ ಮಾಡತೊಡಗಿದರು. ಇಸ್ರೇಲರು ಈಜಿಪ್ಟಿನಿಂದ ತಮ್ಮ ದೇಶಕ್ಕೆ ಬಂದಾಗ ಯೆಹೋವನು ಅಲ್ಲಿಯ ನಿವಾಸಿಗಳನ್ನು ಬಲವಂತವಾಗಿ ಹೊರಗಟ್ಟಿದ್ದನು. ಆದರೆ ಇಸ್ರೇಲರು ತಮ್ಮನ್ನು ಆಳುವುದಕ್ಕಾಗಿ ದೇವರನ್ನು ತೊರೆದು ರಾಜರನ್ನು ಆರಿಸಿಕೊಂಡರು. 9 ಇಸ್ರೇಲರು ತಮ್ಮ ದೇವರಾದ ಯೆಹೋವನ ವಿರುದ್ಧ ರಹಸ್ಯವಾದ ಕೆಟ್ಟಕಾರ್ಯಗಳನ್ನು ಮಾಡಿದರು.
ಇಸ್ರೇಲರು ಚಿಕ್ಕ ಊರಿನಿಂದಿಡಿದು ದೊಡ್ಡ ನಗರದವರೆಗೂ ತಮ್ಮ ಎಲ್ಲಾ ನಗರಗಳಲ್ಲಿ ಉನ್ನತಸ್ಥಳಗಳನ್ನು ನಿರ್ಮಿಸಿದರು. 10 ಇಸ್ರೇಲರು ಪ್ರತಿಯೊಂದು ಬೆಟ್ಟದ ಮೇಲೂ ಪ್ರತಿಯೊಂದು ಹಸಿರುಗಿಡಗಳ ಅಡಿಯಲ್ಲೂ ಸ್ಮಾರಕಕಲ್ಲುಗಳನ್ನು ಮತ್ತು ಅಶೇರ್ ವಿಗ್ರಹಕಲ್ಲುಗಳನ್ನು ನಿಲ್ಲಿಸಿದರು. 11 ಇಸ್ರೇಲರು ಪೂಜಾಸ್ಥಳಗಳಲ್ಲೆಲ್ಲಾ ಧೂಪವನ್ನು ಸುಡುತ್ತಿದ್ದರು. ಯೆಹೋವನು ಆ ದೇಶದಿಂದ ಬಲವಂತವಾಗಿ ಹೊರಗಟ್ಟಿದ ಆ ಮೊದಲಿನ ಜನಾಂಗಗಳಂತೆ ಇಸ್ರೇಲರು ಮಾಡಿದರು. ಇಸ್ರೇಲರು ಮಾಡಿದ ದುಷ್ಕೃತ್ಯಗಳಿಂದ ಯೆಹೋವನು ಕೋಪಗೊಂಡನು. 12 ಅವರು ವಿಗ್ರಹಗಳ ಸೇವೆಮಾಡಿದರು. ಯೆಹೋವನು ಇಸ್ರೇಲರಿಗೆ, “ನೀವು ವಿಗ್ರಹಗಳನ್ನು ಪೂಜಿಸಲೇಬಾರದು” ಎಂದು ಹೇಳಿದ್ದನು.
13 ಇಸ್ರೇಲ್ ಮತ್ತು ಯೆಹೂದಗಳನ್ನು ಎಚ್ಚರಿಸಲು ಯೆಹೋವನು ಪ್ರತಿಯೊಬ್ಬ ಪ್ರವಾದಿಯನ್ನು ಮತ್ತು ದೇವದರ್ಶಿಯನ್ನು ಬಳಸಿಕೊಂಡನು. ಯೆಹೋವನು, “ನಿಮ್ಮ ಕೆಟ್ಟಕಾರ್ಯಗಳಿಂದ ದೂರವಾಗಿ! ನನ್ನ ಆಜ್ಞೆಗಳಿಗೆ ಮತ್ತು ಧರ್ಮಶಾಸ್ತ್ರಗಳಿಗೆ ವಿಧೇಯತೆಯಿಂದಿರಿ. ನಿಮ್ಮ ಪೂರ್ವಿಕರಿಗೆ ನಾನು ನೀಡಿದ ಕಟ್ಟಳೆಗಳನ್ನೆಲ್ಲಾ ಅನುಸರಿಸಿ. ನಾನು ನನ್ನ ಸೇವಕರಾದ ಪ್ರವಾದಿಗಳ ಮೂಲಕ ಇವುಗಳನ್ನು ನೀಡಿದ್ದೇನೆ” ಎಂದು ಹೇಳಿದ್ದನು.
14 ಆದರೆ ಅವರು ಯೆಹೋವನ ಮಾತುಗಳಿಗೆ ಕಿವಿಗೊಡಲಿಲ್ಲ; ತಮ್ಮ ದೇವರಾದ ಯೆಹೋವನನ್ನು ನಂಬದೆಹೋದ ತಮ್ಮ ಪೂರ್ವಿಕರನ್ನೇ ಅನುಸರಿಸಿದರು. 15 ಯೆಹೋವನು ಅವರ ಪೂರ್ವಿಕರೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಮತ್ತು ಆತನ ನಿಯಮಗಳನ್ನು ಅವರು ಒಪ್ಪಲಿಲ್ಲ. ಅವರು ಯೆಹೋವನ ಎಚ್ಚರಿಕೆಗೆ ಗಮನವನ್ನೂ ನೀಡಲಿಲ್ಲ. ಅವರು ನಿರರ್ಥಕವಾದ ವಿಗ್ರಹಗಳನ್ನು ಅನುಸರಿಸಿ ನಿಷ್ಪ್ರಯೋಜಕರಾದರು, ಅವರು ತಮ್ಮ ಸುತ್ತಮುತ್ತಲಿನ ಜನಾಂಗಗಳನ್ನು ಅನುಸರಿಸಿದರು. ಯೆಹೋವನು ಇಸ್ರೇಲಿನ ಜನರಿಗೆ ಮಾಡಬಾರದೆಂದು ಎಚ್ಚರಿಸಿ ಹೇಳಿದ್ದನ್ನು ಈ ಜನಾಂಗಗಳು ಮಾಡಿದವು.
16 ಜನರು ತಮ್ಮ ದೇವರಾದ ಯೆಹೋವನ ಆಜ್ಞೆಗಳನ್ನು ಅನುಸರಿಸುವುದನ್ನು ನಿಲ್ಲಿಸಿದರು. ಅವರು ಚಿನ್ನದ ಎರಡು ಬಸವನ ಮೂರ್ತಿಗಳನ್ನು ನಿರ್ಮಿಸಿದರು. ಅವರು ಅಶೇರ ಸ್ತಂಭಗಳನ್ನು ನಿರ್ಮಿಸಿದರು. ಅವರು ಪರಲೋಕದ ಎಲ್ಲಾ ನಕ್ಷತ್ರಗಳನ್ನು ಮತ್ತು ಬಾಳ್ ದೇವರನ್ನು ಪೂಜಿಸಿದರು. 17 ಅವರು ತಮ್ಮ ಗಂಡುಮಕ್ಕಳನ್ನು ಮತ್ತು ಹೆಣ್ಣುಮಕ್ಕಳನ್ನು ಬೆಂಕಿಯಲ್ಲಿ ಆಹುತಿಕೊಟ್ಟರು. ಅವರು ಭವಿಷ್ಯವನ್ನು ತಿಳಿಯಲು ಮಾಂತ್ರಿಕ ವಿದ್ಯೆಯನ್ನು ಮತ್ತು ಕಣಿಹೇಳುವುದನ್ನು ಕಲಿತರು. ಯೆಹೋವನು ಕೆಟ್ಟದ್ದೆಂದು ಹೇಳಿದ್ದಕ್ಕೆ ತಮ್ಮನ್ನು ತಾವು ಮಾರಿಕೊಂಡು ಯೆಹೋವನಿಗೆ ಕೋಪವನ್ನು ಉಂಟುಮಾಡಿದರು. 18 ಆದ್ದರಿಂದ ಯೆಹೋವನು ಇಸ್ರೇಲಿನ ಬಗ್ಗೆ ಉಗ್ರಕೋಪಿಯಾಗಿ, ಅವರನ್ನು ತನ್ನ ದೃಷ್ಟಿಯಿಂದ ದೂರಮಾಡಿದನು. ಯೆಹೂದಕುಲದವರ ಹೊರತಾಗಿ ಇಸ್ರೇಲರಲ್ಲಿ ಯಾರೂ ಉಳಿಯಲಿಲ್ಲ!
ಯೆಹೂದದ ಜನರೂ ಸಹ ತಪ್ಪಿತಸ್ಥರಾದರು
19 ಆದರೆ ಯೆಹೂದದ ಜನರೂ ಸಹ ತಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ವಿಧೇಯರಾಗಿರಲಿಲ್ಲ. ಯೆಹೂದದ ಜನರು ಇಸ್ರೇಲಿನ ಜನರಂತೆಯೇ ಜೀವಿಸುತ್ತಿದ್ದರು.
20 ಯೆಹೋವನು ಇಸ್ರೇಲಿನ ಜನರೆಲ್ಲರನ್ನೂ ತಿರಸ್ಕರಿಸಿದನು. ಅವನು ಅವರಿಗೆ ಅನೇಕ ತೊಂದರೆಗಳನ್ನು ಉಂಟುಮಾಡಿದನು. ಅವರನ್ನು ನಾಶಗೊಳಿಸಲು ನಾಶಕರಿಗೆ ಆತನು ಅವಕಾಶ ನೀಡಿದನು. ಕೊನೆಗೆ, ಆತನು ಅವರನ್ನು ದೂರತಳ್ಳಿ, ತನ್ನ ದೃಷ್ಟಿಯಿಂದ ಅವರನ್ನೂ ದೂರಮಾಡಿದನು. 21 ಯೆಹೋವನು ಇಸ್ರೇಲನ್ನು ದಾವೀದನ ವಂಶಾವಳಿಯಿಂದ ಕಿತ್ತುಹಾಕಿದನು. ಇಸ್ರೇಲರು ನೆಬಾಟನ ಮಗನಾದ ಯಾರೊಬ್ಬಾಮನನ್ನು ತಮ್ಮ ರಾಜನನ್ನಾಗಿಸಿಕೊಂಡರು. ಯಾರೊಬ್ಬಾಮನು ಇಸ್ರೇಲರನ್ನು ಯೆಹೋವನಿಂದ ದೂರಮಾಡಿದನು. ಇಸ್ರೇಲರು ಮಹಾಪಾಪಗಳನ್ನು ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದನು. 22 ಆದ್ದರಿಂದ ಇಸ್ರೇಲರು ಯಾರೊಬ್ಬಾಮನು ಮಾಡಿದ ಪಾಪಗಳನ್ನೆಲ್ಲ ಅನುಸರಿಸಿದರು. 23 ಯೆಹೋವನು ಇಸ್ರೇಲನ್ನು ತನ್ನ ದೃಷ್ಟಿಯಿಂದ ದೂರ ತಳ್ಳುವವರೆಗೆ, ಅವರು ಈ ಪಾಪಗಳನ್ನು ಮಾಡುವುದನ್ನು ನಿಲ್ಲಿಸಲೇ ಇಲ್ಲ. ಇದು ಸಂಭವಿಸುತ್ತದೆಂದು ಯೆಹೋವನು ಹೇಳಿದ್ದನು! ಆತನು ಜನರಿಗೆ ಇದನ್ನು ಮುಂಚೆಯೇ ತಿಳಿಸಲು ತನ್ನ ಪ್ರವಾದಿಗಳನ್ನು ಕಳುಹಿಸಿದ್ದನು. ಆದ್ದರಿಂದಲೇ ಇಸ್ರೇಲರನ್ನು ತಮ್ಮ ದೇಶದಿಂದ ಅಶ್ಶೂರಿಗೆ ಸೆರೆಹಿಡಿದು ಒಯ್ದರು. ಅವರು ಇಂದಿಗೂ ಅಲ್ಲಿಯೇ ಇದ್ದಾರೆ.
ಸಮಾರ್ಯದ ಜನರ ಆರಂಭ ಕಾಲ
24 ಇಸ್ರೇಲರನ್ನು ಸಮಾರ್ಯದಿಂದ ಅಶ್ಶೂರದ ರಾಜನು ಒಯ್ದನು. ನಂತರ ಅಶ್ಶೂರದ ರಾಜನು ಬಾಬಿಲೋನ್, ಕೂತಾ, ಅವ್ವಾ, ಹಮಾತ್ ಮತ್ತು ಸೆಫರ್ವಯಿಮ್ಗಳಿಂದ ಜನರನ್ನು ಕರೆತಂದು ಇಸ್ರೇಲರ ಬದಲಾಗಿ ಅವರನ್ನು ಸಮಾರ್ಯದಲ್ಲಿ ನೆಲೆಗೊಳಿಸಿದನು. ಅವರು ಸಮಾರ್ಯವನ್ನು ಹೊಂದಿಕೊಂಡು ಅವರ ಸುತ್ತಲಿನ ನಗರಗಳಲ್ಲಿ ವಾಸಿಸಿದರು. 25 ಆದರೆ ಅವರು ಯೆಹೋವನನ್ನು ಗೌರವಿಸಲಿಲ್ಲ. ಆದ್ದರಿಂದ ಅವರ ಮೇಲೆ ಆಕ್ರಮಣಮಾಡಲು ಯೆಹೋವನು ಸಿಂಹಗಳನ್ನು ಕಳುಹಿಸಿದನು. ಈ ಸಿಂಹಗಳು ಆ ಜನರಲ್ಲಿ ಕೆಲವರನ್ನು ಕೊಂದುಹಾಕಿದವು. 26 ಅಶ್ಶೂರದ ರಾಜನಿಗೆ ಕೆಲವು ಜನರು, “ನೀನು ಕೆಲವು ಜನರನ್ನು ಒಯ್ದು ಸಮಾರ್ಯ ನಗರಗಳಲ್ಲಿ ಇರಿಸಿದೆ. ಅವರು ಆ ದೇಶದ ದೇವರ ನಿಯಮಗಳ ಬಗ್ಗೆ ತಿಳಿದುಕೊಂಡಿಲ್ಲ. ಆದ್ದರಿಂದ ಅವರನ್ನು ಆಕ್ರಮಣಮಾಡಲು ದೇವರು ಸಿಂಹಗಳನ್ನು ಕಳುಹಿಸಿದನು. ಆ ದೇಶದ ದೇವರ ನಿಯಮಗಳನ್ನು ಅವರು ತಿಳಿದಿಲ್ಲದಿರುವುದರಿಂದ ಅವರನ್ನು ಸಿಂಹಗಳು ಕೊಂದುಹಾಕಿದವು” ಎಂದು ಹೇಳಿದರು.
27 ಆದ್ದರಿಂದ ಅಶ್ಶೂರದ ರಾಜನು, “ನೀವು ಸಮಾರ್ಯದಿಂದ ಕೆಲವು ಯಾಜಕರನ್ನು ಕರೆದೊಯ್ದಿರುವಿರಿ. ನಾನು ಸಮಾರ್ಯದಿಂದ ಸೆರೆಹಿಡಿದು ತಂದಿರುವ ಯಾಜಕರಲ್ಲೊಬ್ಬನನ್ನು ಅಲ್ಲಿಗೆ ಕಳುಹಿಸಿ. ಆ ಯಾಜಕನು ಹೋಗಿ ಅಲ್ಲಿಯೇ ನೆಲೆಸಲಿ. ನಂತರ ಆ ಯಾಜಕನ ಆ ದೇಶದ ದೇವರ ಕಟ್ಟಳೆಗಳನ್ನು ಜನರಿಗೆ ಬೋಧಿಸಲಿ” ಎಂದು ಆಜ್ಞಾಪಿಸಿದನು.
28 ಹೀಗೆ ಅಶ್ಶೂರದವರು ಸಮಾರ್ಯದಿಂದ ಕರೆದೊಯ್ದಿದ್ದ ಯಾಜಕರಲ್ಲೊಬ್ಬನು ಬೇತೇಲಿನಲ್ಲಿ ವಾಸಿಸಲು ಬಂದನು. ಈ ಯಾಜಕನು ಜನರಿಗೆ, ಯೆಹೋವ ಭಕ್ತಿಯನ್ನು ಬೋಧಿಸಿದನು.
29 ಆದರೆ ಅವರೆಲ್ಲರೂ ತಮ್ಮ ಸ್ವಂತ ದೇವರುಗಳನ್ನು ನಿರ್ಮಿಸಿ, ಅವುಗಳನ್ನು ಸಮಾರ್ಯದವರು ನಿರ್ಮಿಸಿದ್ದ ಉನ್ನತಸ್ಥಳಗಳಲ್ಲಿನ ಆಲಯಗಳಲ್ಲಿ ಇರಿಸಿದರು. ಅವರು ಎಲ್ಲೆಲ್ಲಿ ವಾಸಿಸುತ್ತಿದ್ದರೋ ಅಲ್ಲೆಲ್ಲಾ ಹೀಗೆಯೇ ಮಾಡಿದರು. 30 ಬಾಬಿಲೋನಿನ ಜನರು ಸುಳ್ಳುದೇವತೆಯಾದ ಸುಕ್ಕೋತ್ಬೆನೋತನ್ನು ನಿರ್ಮಿಸಿದರು. ಕೂತದ ಜನರು ಸುಳ್ಳುದೇವತೆಯಾದ ನೇರ್ಗಲ್ಯನ್ನು ಮಾಡಿದರು. ಹಮಾತಿನ ಜನರು ಸುಳ್ಳುದೇವತೆಯಾದ ಅಷೀಮಾವನ್ನು ಮಾಡಿದರು. 31 ಅವ್ವೀಯರು ಸುಳ್ಳುದೇವತೆಯಾದ ನಿಭಜ್ ಮತ್ತು ತರ್ತಕ್ಗಳನ್ನು ಮಾಡಿದರು. ಸೆಫರ್ವಯಿಮಿನವರು ತಮ್ಮ ದೇವರುಗಳಾದ ಅದ್ರಮ್ಮೆಲೆಕ್ ಮತ್ತು ಅನ್ನಮ್ಮೆಲೆಕ್ಗಳನ್ನು ಗೌರವಿಸಲು ತಮ್ಮ ಮಕ್ಕಳನ್ನು ಬೆಂಕಿಯಲ್ಲಿ ಆಹುತಿಕೊಟ್ಟರು.
32 ಆದರೆ ಅವರು ಯೆಹೋವನಲ್ಲಿಯೂ ಭಕ್ತಿಯನ್ನಿಟ್ಟಿದ್ದರು. ಅವರು ಉನ್ನತಸ್ಥಳಗಳಿಗೆ ಯಾಜಕರನ್ನು ಜನರಲ್ಲಿಯೇ ಆಯ್ಕೆ ಮಾಡಿಕೊಂಡರು. ಆ ಯಾಜಕರು ಜನರಿಗಾಗಿ ಉನ್ನತಸ್ಥಳಗಳಲ್ಲಿನ ದೇವಾಲಯಗಳಲ್ಲಿ ಯಜ್ಞವನ್ನು ಅರ್ಪಿಸಿದರು. 33 ಅವರು ಯೆಹೋವನಲ್ಲಿ ಭಕ್ತಿಯಿಟ್ಟಿದ್ದರು, ಆದರೆ ತಮ್ಮ ಸ್ವಂತ ದೇವರುಗಳ ಸೇವೆಯನ್ನೂ ಮಾಡಿದರು. ಅವರು ತಮ್ಮನ್ನು ತೆಗೆದುಕೊಂಡುಬಂದ ದೇಶಗಳಲ್ಲಿ ಮಾಡುತ್ತಿದ್ದಂತೆ ತಮ್ಮ ದೇವರುಗಳ ಸೇವೆಯನ್ನು ಮಾಡಿದರು.
34 ಇಂದಿಗೂ ಸಹ ಅವರು ಪೂರ್ವಕಾಲದಲ್ಲಿ ಮಾಡುತ್ತಿದ್ದಂತೆಯೇ ಜೀವಿಸುತ್ತಿದ್ದಾರೆ. ಅವರಿಗೆ ಯೆಹೋವನಲ್ಲಿ ಭಕ್ತಿಯಿಲ್ಲ. ಅವರು ಇಸ್ರೇಲರ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ವಿಧೇಯರಾಗುವುದಿಲ್ಲ. ಯೆಹೋವನು ಯಾಕೋಬನ ಸಂತತಿಗೆ ನೀಡಿದ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸುವುದಿಲ್ಲ. 35 ಯೆಹೋವನು ಇಸ್ರೇಲಿನ ಜನರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು ಅವರಿಗೆ, “ನೀವು ಅನ್ಯದೇವತೆಗಳನ್ನು ಪೂಜಿಸಬಾರದು; ನೀವು ಅವುಗಳಿಗೆ ಕೈಮುಗಿಯಬಾರದು; ಅವುಗಳ ಸೇವೆಯನ್ನು ಮಾಡಬಾರದು; ಅವುಗಳಿಗೆ ಯಜ್ಞಗಳನ್ನು ಅರ್ಪಿಸಬಾರದು. 36 ಆದರೆ ನೀವು ಯೆಹೋವನನ್ನು ಅನುಸರಿಸಲೇಬೇಕು. ನಿಮ್ಮನ್ನು ಈಜಿಪ್ಟಿನಿಂದ ಹೊರಗೆತಂದ ದೇವರೇ ನಿಮ್ಮ ಯೆಹೋವ. ಯೆಹೋವನು ನಿಮ್ಮನ್ನು ರಕ್ಷಿಸಲು ತನ್ನ ಮಹಾಶಕ್ತಿಯನ್ನು ಬಳಸಿದನು. ನೀವು ಯೆಹೋವನನ್ನು ಗೌರವಿಸಿ ಆರಾಧಿಸಬೇಕು ಮತ್ತು ಆತನಿಗೆ ಯಜ್ಞಗಳನ್ನು ಅರ್ಪಿಸಬೇಕು. 37 ಆತನು ನಿಮಗೆ ಬರೆಯಿಸಿಕೊಟ್ಟ ನಿಯಮಗಳಿಗೆ, ಶಾಸ್ತ್ರಗಳಿಗೆ, ಉಪದೇಶಗಳಿಗೆ ಮತ್ತು ಆಜ್ಞೆಗಳಿಗೆ ನೀವು ವಿಧೇಯರಾಗಿರಬೇಕು. ನೀವು ಎಲ್ಲಾ ಕಾಲದಲ್ಲೂ ಇವುಗಳಿಗೆ ವಿಧೇಯತೆಯಿಂದಿರಬೇಕು. ನೀವು ಅನ್ಯದೇವತೆಗಳನ್ನು ಪೂಜಿಸಲೇಬಾರದು. 38 ನಾನು ನಿಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ನೀವು ಮರೆಯಲೇಬಾರದು. ನೀವು ಅನ್ಯದೇವರುಗಳನ್ನು ಪೂಜಿಸಬಾರದು. 39 ನೀವು ನಿಮ್ಮ ದೇವರಾದ ಯೆಹೋವನನ್ನು ಮಾತ್ರ ಆರಾಧಿಸಬೇಕು. ಆಗ ಆತನು ನಿಮ್ಮನ್ನು ನಿಮ್ಮ ಶತ್ರುಗಳಿಂದ ರಕ್ಷಿಸುತ್ತಾನೆ” ಎಂದು ಆಜ್ಞಾಪಿಸಿದನು.
40 ಆದರೆ ಇಸ್ರೇಲರು ಆತನ ಮಾತಿಗೆ ಕಿವಿಗೊಡದೆ ತಮ್ಮ ಮೊದಲಿನ ಕಾರ್ಯಗಳನ್ನೇ ಮುಂದುವರಿಸಿದರು. 41 ಅನ್ಯಜನಾಂಗಗಳು ಯೆಹೋವನಲ್ಲಿ ಭಕ್ತಿಯಿಂದಿದ್ದರೂ ತಮ್ಮ ಸ್ವಂತ ವಿಗ್ರಹಗಳನ್ನು ಪೂಜಿಸುತ್ತಿದ್ದರು. ಅವರ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮ ಪೂರ್ವಿಕರು ಮಾಡಿದಂತಹ ಕಾರ್ಯಗಳನ್ನು ಮಾಡುತ್ತಿದ್ದರು. ಅವರು ಇಂದಿಗೂ ಇಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಹಿಜ್ಕೀಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದನು
18 ಅಹಾಜನ ಮಗನಾದ ಹಿಜ್ಕೀಯನು ಯೆಹೂದದ ರಾಜನಾದನು. ಏಲನ ಮಗನಾದ ಹೋಶೇಯನು ಇಸ್ರೇಲಿನ ರಾಜನಾಗಿದ್ದ ಮೂರನೆಯ ವರ್ಷದಲ್ಲಿ ಹಿಜ್ಕೀಯನು ಆಳಲಾರಂಭಿಸಿದನು. 2 ಹಿಜ್ಕೀಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೊಂಭತ್ತು ವರ್ಷ ವಯಸ್ಸಾಗಿತ್ತು. ಹಿಜ್ಕೀಯನು ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಜೆಕರ್ಯನ ಮಗಳಾದ ಅಬೀ ಎಂಬ ಹೆಸರಿನವಳು ಅವನ ತಾಯಿ.
3 ಹಿಜ್ಕೀಯನು ತನ್ನ ಪೂರ್ವಿಕನಾದ ದಾವೀದನಂತೆ, ಯೆಹೋವನು ಯೋಗ್ಯವೆಂದು ಹೇಳಿದ್ದನ್ನು ಮಾಡಿದನು.
4 ಹಿಜ್ಕೀಯನು ಉನ್ನತಸ್ಥಳಗಳನ್ನು ನಾಶಗೊಳಿಸಿದನು. ಅವನು ಸ್ಮಾರಕಕಲ್ಲುಗಳನ್ನು ಒಡೆದುಹಾಕಿದನು ಮತ್ತು ಅಶೇರ ಕಲ್ಲುಗಳನ್ನು ಕತ್ತರಿಸಿಹಾಕಿದನು. ಆ ಸಮಯದಲ್ಲಿ ಇಸ್ರೇಲರು ಮೋಶೆಯು ಮಾಡಿದ ತಾಮ್ರಸರ್ಪಕ್ಕೆ ಧೂಪವನ್ನು ಸುಡುತ್ತಿದ್ದರು. ಈ ತಾಮ್ರಸರ್ಪವನ್ನು “ನೆಹುಷ್ಟಾನ್” ಎಂದು ಕರೆಯುತ್ತಿದ್ದರು. ಜನರು ಈ ಸರ್ಪವನ್ನು ಆರಾಧಿಸುತ್ತಿದ್ದುದರಿಂದ ಹಿಜ್ಕೀಯನು ಈ ತಾಮ್ರಸರ್ಪವನ್ನು ಒಡೆದು ಚೂರುಚೂರು ಮಾಡಿದನು.
5 ಹಿಜ್ಕೀಯನು ಇಸ್ರೇಲಿನ ದೇವರಾದ ಯೆಹೋವನಲ್ಲಿ ನಂಬಿಕೆಯಿಟ್ಟನು. ಯೆಹೂದದ ರಾಜರುಗಳಲ್ಲೆಲ್ಲಾ ಹಿಜ್ಕೀಯನಂಥವರು ಅವನ ಮುಂಚೆಯಾಗಲಿ ಅವನ ನಂತರವಾಗಲಿ ಇರಲಿಲ್ಲ. 6 ಹಿಜ್ಕೀಯನು ಯೆಹೋವನಿಗೆ ಬಹಳ ನಂಬಿಕೆಯುಳ್ಳವನಾಗಿದ್ದನು. ಅವನು ಯೆಹೋವನನ್ನು ಅನುಸರಿಸುವುದನ್ನು ನಿಲ್ಲಿಸಲೇ ಇಲ್ಲ. ಯೆಹೋವನು ಮೋಶೆಗೆ ನೀಡಿದ ಆಜ್ಞೆಗಳಿಗೆ ಅವನು ವಿಧೇಯನಾಗಿ ಅನುಸರಿಸಿದನು. 7 ಯೆಹೋವನು ಹಿಜ್ಕೀಯನೊಂದಿಗಿದ್ದನು. ಹಿಜ್ಕೀಯನು ತಾನು ಮಾಡಿದ್ದರಲ್ಲೆಲ್ಲಾ ಜಯಗಳಿಸಿದನು.
ಹಿಜ್ಕೀಯನು ಅಶ್ಶೂರದ ರಾಜನೊಂದಿಗಿದ್ದ ಸಂಬಂಧವನ್ನು ಕಡಿದುಹಾಕಿದನು. ಅಶ್ಶೂರದ ರಾಜನ ಸೇವೆಯನ್ನು ಹಿಜ್ಕೀಯನು ನಿಲ್ಲಿಸಿದನು. 8 ಹಿಜ್ಕೀಯನು ಗಾಜಾ ಪ್ರಾಂತ್ಯದವರೆಗಿದ್ದ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿದ್ದ ಫಿಲಿಷ್ಟಿಯರನ್ನು ಸೋಲಿಸಿದನು. ಅವನು ಫಿಲಿಷ್ಟಿಯರ ಚಿಕ್ಕ ಊರಿನಿಂದಿಡಿದು ದೊಡ್ಡ ನಗರಗಳನ್ನೆಲ್ಲಾ ಸೋಲಿಸಿದನು.
ಸಮಾರ್ಯಕ್ಕೆ ಅಶ್ಶೂರದವರ ಮುತ್ತಿಗೆ
9 ಅಶ್ಶೂರದ ರಾಜನಾದ ಶಲ್ಮನೆಸರನು ಸಮಾರ್ಯದ ವಿರುದ್ಧ ಹೋರಾಡಲು ಹೋದನು. ಅವನ ಸೈನ್ಯವು ನಗರವನ್ನು ಸುತ್ತುವರಿಯಿತು. ಹಿಜ್ಕೀಯನು ಯೆಹೂದದ ರಾಜನಾಗಿದ್ದ ನಾಲ್ಕನೆಯ ವರ್ಷದಲ್ಲಿ ಇದು ಸಂಭವಿಸಿತು. (ಅದು ಏಲನ ಮಗನಾದ ಹೋಶೇಯನು ಇಸ್ರೇಲಿನ ರಾಜನಾಗಿ ಆಳುತ್ತಿದ್ದ ಏಳನೆಯ ವರ್ಷದಲ್ಲಿ ಸಂಭವಿಸಿತು.) 10 ಮೂರು ವರ್ಷಗಳ ಕೊನೆಯಲ್ಲಿ ಶಲ್ಮನೆಸರನು ಸಮಾರ್ಯವನ್ನು ವಶಪಡಿಸಿಕೊಂಡನು. ಹಿಜ್ಕೀಯನು ಯೆಹೂದದ ರಾಜನಾಗಿದ್ದ ಆರನೆಯ ವರ್ಷದಲ್ಲಿ ಅವನು ಸಮಾರ್ಯವನ್ನು ವಶಪಡಿಸಿಕೊಂಡನು. (ಹೋಶೇಯನು ಇಸ್ರೇಲಿನ ರಾಜನಾಗಿ ಆಳುತ್ತಿದ್ದ ಒಂಭತ್ತನೆಯ ವರ್ಷದಲ್ಲಿ ಇದು ಸಂಭವಿಸಿತು.) 11 ಅಶ್ಶೂರದ ರಾಜನು ಇಸ್ರೇಲರನ್ನು, ಸೆರೆಯಾಳುಗಳನ್ನಾಗಿ ಅಶ್ಶೂರಿಗೆ ಒಯ್ದನು. ಅವನು ಅವರನ್ನು ಹಲಹು ಎಂಬ ಪ್ರಾಂತದಲ್ಲಿಯೂ ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತದಲ್ಲಿಯೂ ಮೇದ್ಯರ ನಗರಗಳಲ್ಲಿಯೂ ವಾಸಿಸುವಂತೆ ಮಾಡಿದನು. 12 ಇಸ್ರೇಲರು ತಮ್ಮ ದೇವರಾದ ಯೆಹೋವನಿಗೆ ಅವಿಧೇಯರಾದದ್ದೂ ಆತನ ಒಡಂಬಡಿಕೆಯನ್ನು ಉಲ್ಲಂಘಿಸಿದ್ದೂ ಆತನ ಸೇವಕನಾದ ಮೋಶೆಯ ಆಜ್ಞೆಗಳಿಗೆ ಅವಿಧೇಯರಾದದ್ದೂ ಇದಕ್ಕೆ ಕಾರಣ.
ಯೆಹೂದವನ್ನು ವಶಪಡಿಸಿಕೊಳ್ಳಲು ಅಶ್ಶೂರದವರು ಸಿದ್ಧರಾದರು
13 ಹಿಜ್ಕೀಯನು ರಾಜನಾಗಿದ್ದ ಹದಿನಾಲ್ಕನೆಯ ವರ್ಷದಲ್ಲಿ ಅಶ್ಶೂರದ ರಾಜನಾದ ಸನ್ಹೇರೀಬನು ಯೆಹೂದದ ಬಲಾಢ್ಯ ನಗರಗಳ ವಿರುದ್ಧವಾಗಿ ಹೋರಾಡಲು ಹೋದನು. ಸನ್ಹೇರೀಬನು ಆ ನಗರಗಳನ್ನೆಲ್ಲ ಸೋಲಿಸಿದನು. 14 ಆಗ ಯೆಹೂದದ ರಾಜನಾದ ಹಿಜ್ಕೀಯನು ಲಾಕೀಷಿನಲ್ಲಿದ್ದ ಅಶ್ಶೂರದ ರಾಜನಿಗೆ ಒಂದು ಸಂದೇಶವನ್ನು ಕಳುಹಿಸಿದನು. ಹಿಜ್ಕೀಯನು, “ನಾನು ತಪ್ಪು ಮಾಡಿದ್ದೇನೆ. ನನ್ನನ್ನು ಒಬ್ಬಂಟಿಗನನ್ನಾಗಿ ಬಿಡು. ನಂತರ ನೀನು ಅಪೇಕ್ಷಿಸಿದ್ದನ್ನೆಲ್ಲಾ ಕೊಡುತ್ತೇನೆ” ಎಂದು ಹೇಳಿದನು.
ಆಗ ಅಶ್ಶೂರದ ರಾಜನು ಯೆಹೂದದ ರಾಜನಾದ ಹಿಜ್ಕೀಯನಿಗೆ ಸುಮಾರು ಹನ್ನೊಂದು ಟನ್ ಬೆಳ್ಳಿಯನ್ನು ಮತ್ತು ಒಂದು ಟನ್ ಚಿನ್ನವನ್ನು ಕೊಡುವಂತೆ ಹೇಳಿದನು. 15 ಹಿಜ್ಕೀಯನು ದೇವಾಲಯದಲ್ಲಿದ್ದ ಮತ್ತು ರಾಜನ ಭಂಡಾರದಲ್ಲಿದ್ದ ಬೆಳ್ಳಿಯನ್ನೆಲ್ಲ ನೀಡಿದನು. 16 ಈ ಸಮಯದಲ್ಲಿ, ಹಿಜ್ಕೀಯನು ಯೆಹೋವನ ಆಲಯದ ಬಾಗಿಲುಗಳಿಗೆ ಮತ್ತು ಕದಗಳಿಗೆ ಹೊದಿಸಿದ್ದ ಬಂಗಾರವನ್ನು ಕತ್ತರಿಸಿಹಾಕಿದನು. ರಾಜನಾದ ಹಿಜ್ಕೀಯನು ಈ ಬಾಗಿಲುಗಳ ಮತ್ತು ಕದಗಳ ಮೇಲೆ ಬಂಗಾರವನ್ನು ಹೊದಿಸಿದ್ದನು. ಹಿಜ್ಕೀಯನು ಈ ಬಂಗಾರವನ್ನು ಅಶ್ಶೂರದ ರಾಜನಿಗೆ ನೀಡಿದನು.
ಅಶ್ಶೂರದ ರಾಜನು ಜೆರುಸಲೇಮಿಗೆ ಜನರನ್ನು ಕಳುಹಿಸಿದನು
17 ಅಶ್ಶೂರದ ರಾಜ ಜೆರುಸಲೇಮಿನಲ್ಲಿದ್ದ ರಾಜನಾದ ಹಿಜ್ಕೀಯನ ಬಳಿಗೆ ತನ್ನ ಮೂವರು ಮಹಾಸೇನಾಧಿಪತಿಗಳಾದ ತರ್ತಾನ್, ರಬ್ಸಾರೀಸ್, ರಬ್ಷಾಕೆ ಎಂಬವರನ್ನು ಮಹಾಸೈನ್ಯದೊಂದಿಗೆ ಕಳುಹಿಸಿದನು. ಅವರು ಲಾಕೀಷಿನಿಂದ ಜೆರುಸಲೇಮಿಗೆ ಹೋದರು. ಅವರು ಮೇಲಿನ ಕೆರೆಯ ನೀರಿನ ಕೊಳವೆಯ ಬಳಿ ನಿಂತರು. (ಮೇಲಿನ ಕೆರೆಯು ರಸ್ತೆಯ ಮೇಲೆ ದೋಭಿಘಾಟ್ ಬಳಿಯಿತ್ತು.) 18 ಈ ಜನರು ರಾಜನನ್ನು ಕರೆದರು. ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಅದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಅವರನ್ನು ಭೇಟಿಮಾಡಲು ಹೊರಗೆ ಬಂದರು.
19 ಸೇನಾಧಿಪತಿಗಳಲ್ಲಿ ಒಬ್ಬನಾದ ರಬ್ಷಾಕೆಯು ಅವರಿಗೆ, “ಅಶ್ಶೂರದ ಮಹಾರಾಜನು ಹಿಜ್ಕೀಯನಿಗೆ ತಿಳಿಸುವುದೇನೆಂದರೆ:
‘ನಿನ್ನ ನಂಬಿಕೆಗೆ ಆಧಾರವು ಎಲ್ಲಿದೆ? 20 “ಯುದ್ಧದಲ್ಲಿ ನನಗೆ ಸಹಾಯಮಾಡಲು ನನ್ನಲ್ಲಿ ಬೇಕಾದಷ್ಟು ವಿವೇಕವೂ ಬಲವೂ ಇದೆ” ಎಂದು ನೀನು ಹೇಳುವೆ. ಆದರೆ ನೀನು ಯಾರನ್ನು ನಂಬಿಕೊಂಡು ನನಗೆ ವಿರುದ್ಧವಾಗಿ ದಂಗೆ ಎದ್ದಿರುವೆ? 21 ನೀನು ಮುರಿದುಬಿದ್ದಿರುವ ದಂಟನ್ನು ಊರುಗೋಲೆಂದು ನಂಬಿ ಭರವಸೆಯಿಟ್ಟಿರುವೆ! ಈಜಿಪ್ಟ್ ಊರುಗೋಲಾಗಿದೆ. ಒಬ್ಬ ಮನುಷ್ಯನು ಈ ಊರುಗೋಲಿನ ಮೇಲೆ ಭರವಸೆಯಿಟ್ಟರೆ ಅದು ಮುರಿದು ಬೀಳುತ್ತದೆ ಮತ್ತು ಅವನ ಕೈಯನ್ನೇ ಚುಚ್ಚಿ ಅವನಿಗೆ ನೋವನ್ನು ಉಂಟುಮಾಡುತ್ತದೆ! ಈಜಿಪ್ಟಿನ ರಾಜನು ತನ್ನನ್ನು ನಂಬಿದ ಜನರೆಲ್ಲರಿಗೂ ಇದೇ ರೀತಿಯಲ್ಲಿದ್ದಾನೆ. 22 ಬಹುಶಃ ನೀನು, “ನಾವು ನಮ್ಮ ದೇವರಾದ ಯೆಹೋವನಲ್ಲಿ ಭರವಸೆಯಿಟ್ಟಿದ್ದೇವೆ” ಎಂದು ಹೇಳುವೆ. ಆದರೆ ಹಿಜ್ಕೀಯನು ಯೆಹೋವನ ಉನ್ನತಸ್ಥಳಗಳನ್ನು ಮತ್ತು ಯಜ್ಞವೇದಿಕೆಯನ್ನು ನಾಶಪಡಿಸಿ ಯೆಹೂದಕ್ಕೆ ಮತ್ತು ಜೆರುಸಲೇಮಿಗೆ, “ನೀವು ಜೆರುಸಲೇಮಿನಲ್ಲಿರುವ ಯಜ್ಞವೇದಿಕೆಯ ಸನ್ನಿಧಿಯಲ್ಲಿ ಮಾತ್ರ ಆರಾಧಿಸಬೇಕು” ಎಂದು ಹೇಳಿದನೆಂಬುದು ನನಗೆ ತಿಳಿದಿದೆ.
23 ‘ಈಗ ನಮ್ಮ ಒಡೆಯನಾದ ಅಶ್ಶೂರದ ರಾಜನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊ. ನಿನ್ನಲ್ಲಿ ಸವಾರಿಮಾಡಬಲ್ಲ ಸವಾರರು ಇದ್ದರೆ ನಿನಗೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆಂದು ನಾನು ಪ್ರಮಾಣ ಮಾಡುತ್ತೇನೆ. 24 ನನ್ನ ಒಡೆಯನ ಅಧಿಕಾರಿಗಳಲ್ಲಿ ಕನಿಷ್ಠನಾದ ಒಬ್ಬ ಅಧಿಕಾರಿಯನ್ನು ನೀನು ಸೋಲಿಸಲಾಗುವುದಿಲ್ಲ! ನಿನಗೆ ರಥಗಳನ್ನು ಮತ್ತು ಕುದುರೆಯ ಸವಾರರನ್ನು ಕೊಡಲು ನೀನು ಈಜಿಪ್ಟನ್ನು ಅವಲಂಬಿಸಿರುವೆ.
25 ‘ನಾನು ಯೆಹೋವನ ಚಿತ್ತವಿಲ್ಲದೆ ಜೆರುಸಲೇಮನ್ನು ನಾಶಗೊಳಿಸಲು ಬಂದೆನೆಂದು ನೆನಸುತ್ತೀಯೋ? “ಈ ದೇಶದ ವಿರುದ್ಧವಾಗಿ ನುಗ್ಗಿ ನಾಶಗೊಳಿಸು” ಎಂದು ಯೆಹೋವನೇ ನನಗೆ ಆಜ್ಞಾಪಿಸಿದನು”’ ಎಂದು ಹೇಳಿದನು.
26 ನಂತರ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಶೆಬ್ನ ಮತ್ತು ಯೋವ ಎಂಬುವರು ಸೇನಾಧಿಪತಿಗೆ, “ದಯವಿಟ್ಟು ನಮ್ಮೊಂದಿಗೆ ಅರಾಮ್ಯರ ಭಾಷೆಯಲ್ಲಿ ಮಾತನಾಡು. ನಾವು ಆ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಗೋಡೆಯ ಮೇಲಿರುವ ಜನರಿಗೆ ನಮ್ಮ ಮಾತುಗಳು ಕೇಳುವುದರಿಂದ ಯೆಹೂದದ ಭಾಷೆಯಲ್ಲಿ ನಮ್ಮೊಂದಿಗೆ ಮಾತನಾಡಬೇಡ” ಎಂದು ಹೇಳಿದರು.
27 ಆದರೆ ರಬ್ಷಾಕೆಯು ಅವರಿಗೆ, “ನನ್ನ ಒಡೆಯನು ನನ್ನನ್ನು ಕಳುಹಿಸಿದ್ದು ನಾನು ನಿಮ್ಮೊಂದಿಗೆ ಮತ್ತು ನಿಮ್ಮ ರಾಜನೊಂದಿಗೆ ಮಾತ್ರ ಮಾತಾಡುವುದಕ್ಕಲ್ಲ. ಗೋಡೆಯ ಮೇಲೆ ಕುಳಿತಿರುವ ಇತರ ಜನರೊಂದಿಗೂ ನಾನು ಮಾತನಾಡುತ್ತೇನೆ! ಅವರು ನಿಮ್ಮೊಂದಿಗಿದ್ದರೆ ತಮ್ಮ ಮಲವನ್ನು ತಾವೇ ತಿನ್ನಬೇಕಾಗುತ್ತದೆ ಮತ್ತು ತಮ್ಮ ಮೂತ್ರವನ್ನು ತಾವೇ ಕುಡಿಯಬೇಕಾಗುತ್ತದೆ!” ಎಂದು ಹೇಳಿದನು.
28 ನಂತರ ಸೇನಾಧಿಪತಿಯು ಯೂದಾಯ ಭಾಷೆಯಲ್ಲಿ ಗಟ್ಟಿಯಾಗಿ,
“ಅಶ್ಶೂರದ ಮಹಾರಾಜನ ಈ ಸಂದೇಶವನ್ನು ಕೇಳಿರಿ! 29 ‘ನಿಮ್ಮನ್ನು ಮೂರ್ಖರನ್ನಾಗಿಸಲು ಹಿಜ್ಕೀಯನಿಗೆ ಅವಕಾಶ ಕೊಡಬೇಡಿ! ನನ್ನ ಶಕ್ತಿಯಿಂದ ಅವನು ನಿಮ್ಮನ್ನು ರಕ್ಷಿಸಲಾಗುವುದಿಲ್ಲ. 30 ಯೆಹೋವನನ್ನು ನೀವು ನಂಬುವಂತೆ ಮಾಡಲು ಹಿಜ್ಕೀಯನಿಗೆ ಅವಕಾಶ ನೀಡಬೇಡಿ! ಯೆಹೋವನು ನಮ್ಮನ್ನು ರಕ್ಷಿಸುತ್ತಾನೆ! ಅಶ್ಶೂರದ ರಾಜನು ಈ ನಗರವನ್ನು ಸೋಲಿಸಲಾಗುವುದಿಲ್ಲ!’ ಎಂದು ಹಿಜ್ಕೀಯನು ಹೇಳುತ್ತಾನೆ. 31 ಆದರೆ ಹಿಜ್ಕೀಯನ ಮಾತುಗಳನ್ನು ಕೇಳಬೇಡಿ! ಎಂದು ಹೇಳಿದನು. ಅಶ್ಶೂರದ ರಾಜ ಹೀಗೆ ಹೇಳುತ್ತಾನೆ:
“‘ನನ್ನೊಂದಿಗೆ ಶಾಂತಿಒಪ್ಪಂದ ಮಾಡಿಕೊಂಡು ನನ್ನ ಆಶ್ರಯಕ್ಕೆ ಬನ್ನಿರಿ. ನಂತರ ಪ್ರತಿಯೊಬ್ಬರೂ ತನ್ನ ಸ್ವಂತ ದ್ರಾಕ್ಷಿಯನ್ನು ತಿನ್ನಬಹುದು; ತನ್ನ ಸ್ವಂತ ಅಂಜೂರವನ್ನು ತಿನ್ನಬಹುದು; ತನ್ನ ಸ್ವಂತ ಬಾವಿಯಿಂದ ನೀರನ್ನು ಕುಡಿಯಬಹುದು. 32 ನಾನು ಬಂದು, ನಿಮ್ಮನ್ನು ಈ ದೇಶಕ್ಕೆ ಸಮಾನವಾದ ಬೇರೊಂದು ದೇಶಕ್ಕೆ ಕರೆದೊಯ್ಯುವವರೆಗೆ ನೀವು ಹೀಗೆ ಮಾಡಬಹುದು. ಆ ದೇಶವು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ, ಆಲೀವ್ ಮರ ಮತ್ತು ಜೇನುತುಪ್ಪ ಮುಂತಾದವುಗಳಿಂದ ಸಮೃದ್ಧಿಯಾಗಿದೆ. ನೀವು ಅಲ್ಲಿ ಸಾಯದೆ ಜೀವಿಸಬಹುದು. ಆದರೆ ಹಿಜ್ಕೀಯನ ಮಾತುಗಳನ್ನು ಕೇಳಬೇಡಿ! ಅವನು ನಿಮ್ಮ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾನೆ. “ಯೆಹೋವನು ನಮ್ಮನ್ನು ರಕ್ಷಿಸುತ್ತಾನೆ” ಎಂದು ಅವನು ಹೇಳುತ್ತಾನೆ. 33 ಬೇರೆ ಜನಾಂಗಗಳ ದೇವರುಗಳು ಅವರ ದೇಶಗಳನ್ನು ಅಶ್ಶೂರದ ರಾಜನಿಗೆ ಸಿಗದಂತೆ ರಕ್ಷಿಸಿದನೇ? ಇಲ್ಲ! 34 ಹಮಾತ್ ಮತ್ತು ಅರ್ಪಾದ್ ದೇವರುಗಳು ಎಲ್ಲಿವೆ? ಸೆಫರ್ವಯಿಮ್, ಹೇನ, ಇವ್ವಾದ ದೇವರುಗಳು ಎಲ್ಲಿವೆ? ಸಮಾರ್ಯವನ್ನು ನನ್ನ ಕೈಗೆ ಸಿಗದಂತೆ ಅವು ರಕ್ಷಿಸಿದವೇ? ಇಲ್ಲ! 35 ಬೇರೆ ಜನಾಂಗಗಳ ದೇವತೆಗಳು ಯಾವುದಾದರೂ ತಮ್ಮ ದೇಶವನ್ನು ನನ್ನಿಂದ ರಕ್ಷಿಸುತ್ತವೆಯೇ? ಇಲ್ಲ! ಜೆರುಸಲೇಮನ್ನು ಯೆಹೋವನು ನನ್ನಿಂದ ರಕ್ಷಿಸುತ್ತಾನೆಯೇ ಇಲ್ಲ!’”
36 ಆದರೆ ಜನರೆಲ್ಲರೂ ಸುಮ್ಮನಿದ್ದರು, ರಾಜನಾದ ಹಿಜ್ಕೀಯನು ಜನರಿಗೆ ಆಜ್ಞಾಪಿಸಿದ್ದರಿಂದ ಅವರು ಸೇನಾಧಿಪತಿಯೊಂದಿಗೆ ಒಂದು ಮಾತನ್ನೂ ಆಡಲಿಲ್ಲ. “ಅವನಿಗೆ ಏನನ್ನೂ ಹೇಳಬೇಡಿ” ಎಂದು ಹಿಜ್ಕೀಯನು ಹೇಳಿದ್ದನು.
37 ಹಿಲ್ಕೀಯನ ಮಗನೂ ರಾಜಗೃಹಾಧಿಪತಿಯೂ ಅದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ ಮತ್ತು ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಹಿಜ್ಕೀಯನ ಬಳಿಗೆ ಬಂದರು. ಅವರು ದುಃಖದಿಂದ ತಮ್ಮ ಬಟ್ಟೆಗಳನ್ನು ಹರಿದುಕೊಂಡಿದ್ದರು. ಅಶ್ಶೂರದ ಸೇನಾಧಿಪತಿಯಾದ ರಬ್ಷಾಕೆಯು ಹೇಳಿದ ಸಂಗತಿಗಳನ್ನು ಅವರು ಹಿಜ್ಕೀಯನಿಗೆ ತಿಳಿಸಿದರು.
19 ಆ ತೀರ್ಪು ಏನೆಂದರೆ: ಬೆಳಕು ಈ ಲೋಕಕ್ಕೆ ಬಂದಿದೆ, ಆದರೆ ಜನರು ಬೆಳಕನ್ನು ಅಪೇಕ್ಷಿಸದೆ ಕತ್ತಲೆಯನ್ನೇ ಬಯಸಿದರು. ಏಕೆಂದರೆ ಅವರು ದುಷ್ಕೃತ್ಯಗಳನ್ನು ಮಾಡುತ್ತಿದ್ದರು. 20 ಕೇಡನ್ನು ಮಾಡುವ ಪ್ರತಿಯೊಬ್ಬನೂ ಬೆಳಕನ್ನು ದ್ವೇಷಿಸುವನು. ಅವನು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವನು ಮಾಡಿರುವ ಕೆಟ್ಟಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ. 21 ಆದರೆ ಸತ್ಯಮಾರ್ಗವನ್ನು ಅನುಸರಿಸುವವನು ಬೆಳಕಿಗೆ ಬರುತ್ತಾನೆ. ಅವನು ಮಾಡಿರುವ ಕಾರ್ಯಗಳೆಲ್ಲಾ ದೇವರ ಮೂಲಕವಾಗಿ ಮಾಡಿದ ಕಾರ್ಯಗಳೆಂದು ಬೆಳಕು ತೋರಿಸುತ್ತದೆ.
ಯೇಸು ಮತ್ತು ಸ್ನಾನಿಕ ಯೋಹಾನ
22 ಇದಾದ ನಂತರ, ಯೇಸು ಮತ್ತು ಆತನ ಶಿಷ್ಯರು ಜುದೇಯ ಪ್ರಾಂತ್ಯಕ್ಕೆ ಹೋದರು. ಅಲ್ಲಿ ಯೇಸು ತನ್ನ ಶಿಷ್ಯರೊಡನೆ ತಂಗಿದ್ದು, ಜನರಿಗೆ ದೀಕ್ಷಾಸ್ನಾನ ಮಾಡಿಸಿದನು. 23 ಯೋಹಾನನು ಸಹ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಐನೋನ್ ಎಂಬ ಊರು ಸಲೀಮ್ ಊರಿನ ಸಮೀಪದಲ್ಲಿದೆ. ಅಲ್ಲಿ ಬೇಕಾದಷ್ಟು ನೀರಿದ್ದುದರಿಂದ ಯೋಹಾನನು ಅಲ್ಲಿ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಜನರು ಅಲ್ಲಿಗೆ ಬಂದು ದೀಕ್ಷಾಸ್ನಾನ ತೆಗೆದುಕೊಳ್ಳುತ್ತಿದ್ದರು. 24 (ಆಗ ಯೋಹಾನನನ್ನು ಇನ್ನೂ ಸೆರೆಮನೆಗೆ ಹಾಕಿರಲಿಲ್ಲ.)
25 ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಮತ್ತೊಬ್ಬ ಯೆಹೂದ್ಯನಿಗೂ ಶುದ್ಧಾಚಾರದ ಬಗ್ಗೆ ವಾದವಾಯಿತು. 26 ಆದ್ದರಿಂದ ಶಿಷ್ಯರು ಯೋಹಾನನ ಬಳಿಗೆ ಬಂದು, “ಗುರುವೇ, ಜೋರ್ಡನ್ ನದಿಯ ಆಚೆದಡದಲ್ಲಿ ನಿನ್ನೊಂದಿಗಿದ್ದ ವ್ಯಕ್ತಿಯನ್ನು ಜ್ಞಾಪಿಸಿಕೊ. ಆತನ ಕುರಿತಾಗಿ ನೀನೇ ಸಾಕ್ಷಿ ಹೇಳಲಿಲ್ಲವೇ? ಆತನು ಜನರಿಗೆ ದೀಕ್ಷಾಸ್ನಾನ ಕೊಡುತ್ತಿದ್ದಾನೆ. ಅನೇಕ ಜನರು ಆತನ ಬಳಿಗೆ ಹೋಗುತ್ತಿದ್ದಾರೆ” ಎಂದು ಹೇಳಿದರು.
27 ಯೋಹಾನನು, “ದೇವರು ಏನು ಕೊಡುತ್ತಾನೋ ಅದನ್ನು ಮಾತ್ರ ಒಬ್ಬನು ಪಡೆದುಕೊಳ್ಳಬಲ್ಲನು. 28 ‘ನಾನು ಕ್ರಿಸ್ತನಲ್ಲ. ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದಕ್ಕಾಗಿ ಮಾತ್ರ ಕಳುಹಿಸಲ್ಪಟ್ಟಿದ್ದೇನೆ’ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ. 29 ಮದುಮಗಳು ಮದುಮಗನಿಗೆ ಮಾತ್ರ ಸೇರಿದವಳಾಗಿದ್ದಾಳೆ. ಮದುಮಗನಿಗೆ ಸಹಾಯಮಾಡುವ ಸ್ನೇಹಿತನು ಮದುಮಗನ ಬರುವಿಕೆಗಾಗಿ ಕಾಯುತ್ತಿರುತ್ತಾನೆ ಮತ್ತು ಆತನ ಕರೆಗಾಗಿ ಆಲಿಸುತ್ತಿರುತ್ತಾನೆ. ಮದುಮಗನ ಸ್ವರವನ್ನು ಕೇಳುವಾಗ ಈ ಸ್ನೇಹಿತನು ಬಹು ಸಂತೋಷಪಡುವನು. ಅದೇ ಸಂತೋಷ ನನಗಿದೆ. ನನ್ನ ಪೂರ್ಣಾನಂದದ ಸಮಯವು ಇದೇ ಆಗಿದೆ. 30 ಆತನು (ಯೇಸು) ವೃದ್ಧಿಯಾಗಬೇಕು ಮತ್ತು ನಾನು ಕಡಿಮೆಯಾಗಬೇಕು.
ಪರಲೋಕದಿಂದ ಬರುವ ವ್ಯಕ್ತಿ
31 “ಮೇಲಿನಿಂದ ಬರುವ ಒಬ್ಬನು (ಯೇಸು) ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. ಈ ಲೋಕದ ವ್ಯಕ್ತಿಯು ಈ ಲೋಕಕ್ಕೆ ಸೇರಿದವನಾಗಿದ್ದಾನೆ. ಅವನು ಈ ಲೋಕದಲ್ಲಿನ ಸಂಗತಿಗಳ ಬಗ್ಗೆ ಮಾತಾಡುತ್ತಾನೆ. ಆದರೆ ಪರಲೋಕದಿಂದ ಬರುವ ಒಬ್ಬನು ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. 32 ಆತನು ತಾನು ಕಂಡಿರುವುದರ ಬಗ್ಗೆ ಮತ್ತು ಕೇಳಿರುವುದರ ಬಗ್ಗೆ ಸಾಕ್ಷಿ ನೀಡುತ್ತಾನೆ. ಆದರೆ ಆತನ ಸಾಕ್ಷಿಯನ್ನು ಜನರು ಸ್ವೀಕರಿಸಿಕೊಳ್ಳುವುದಿಲ್ಲ. 33 ಆತನ ಸಾಕ್ಷಿಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯು ದೇವರೇ ಸತ್ಯವಂತನೆಂದು ನಿರೂಪಿಸುತ್ತಾನೆ. 34 ದೇವರು ಆತನನ್ನು (ಯೇಸುವನ್ನು) ಕಳುಹಿಸಿದನು. ದೇವರು ಹೇಳುವ ಸಂಗತಿಗಳನ್ನು ಆತನು ಹೇಳುತ್ತಾನೆ. ಏಕೆಂದರೆ ದೇವರು ಆತನಿಗೆ ಆತ್ಮವನ್ನು ಅಮಿತವಾಗಿ ಕೊಡುತ್ತಾನೆ. 35 ತಂದೆಯು ಮಗನನ್ನು ಪ್ರೀತಿಸುತ್ತಾನೆ. ತಂದೆಯು ಮಗನಿಗೆ ಪ್ರತಿಯೊಂದರ ಮೇಲೆಯೂ ಅಧಿಕಾರವನ್ನು ಕೊಟ್ಟಿದ್ದಾನೆ. 36 ಮಗನಲ್ಲಿ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ಆದರೆ ಮಗನಿಗೆ ವಿಧೇಯನಾಗದವನು ಆ ಜೀವವನ್ನು ಎಂದಿಗೂ ಹೊಂದಿಕೊಳ್ಳುವುದಿಲ್ಲ. ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International