Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 21-22

ಸೌಲನ ಕುಟುಂಬಕ್ಕಾದ ದಂಡನೆ

21 ದಾವೀದನ ಕಾಲದಲ್ಲಿ ಒಮ್ಮೆ ಮೂರು ವರ್ಷಗಳವರೆಗೆ ಬರಗಾಲವಿತ್ತು. ದಾವೀದನು ಯೆಹೋವನಲ್ಲಿ ಪ್ರಾರ್ಥಿಸಿದನು. ಆಗ ಯೆಹೋವನು, “ಸೌಲನು ಮತ್ತು ಕೊಲೆಗಾರರಾದ ಅವನ ಕುಟುಂಬದವರು ಈ ಬರಗಾಲಕ್ಕೆ ಕಾರಣ. ಸೌಲನು ಗಿಬ್ಯೋನ್ಯರನ್ನು ಕೊಂದದ್ದರಿಂದ ಈಗಿನ ಬರಗಾಲವು ಬಂದಿದೆ” ಎಂದು ಹೇಳಿದನು. (ಗಿಬ್ಯೋನ್ಯರು ಇಸ್ರೇಲರಲ್ಲ, ಅವರು ಇನ್ನೂ ಜೀವಂತವಾಗಿ ಉಳಿದಿರುವ ಅಮೋರಿಯರ ಕುಟುಂಬದವರು. ಗಿಬ್ಯೋನ್ಯರನ್ನು ಹಿಂಸಿಸುವುದಿಲ್ಲವೆಂದು ಇಸ್ರೇಲರು ಪ್ರಮಾಣ ಮಾಡಿದ್ದರು. ಆದರೆ ಸೌಲನು ಇಸ್ರೇಲಿನ ಮತ್ತು ಯೆಹೂದದ ಜನರ ಮೇಲೆ ಹೆಚ್ಚಿನ ಅಭಿಮಾನವನ್ನಿಟ್ಟಿದ್ದನು. ಆದ್ದರಿಂದ ಅವನು ಗಿಬ್ಯೋನ್ಯರನ್ನು ಕೊಲ್ಲಲು ಪ್ರಯತ್ನಿಸಿದನು.)

ರಾಜನಾದ ದಾವೀದನು ಗಿಬ್ಯೋನ್ಯರನ್ನು ಒಟ್ಟಾಗಿ ಕರೆದು ಅವರೊಂದಿಗೆ ಮಾತನಾಡಿದನು. ದಾವೀದನು ಗಿಬ್ಯೋನ್ಯರಿಗೆ, “ನಾನು ನಿಮಗೆ ಏನು ಮಾಡಲಿ? ಇಸ್ರೇಲಿನ ಪಾಪವನ್ನು ತೆಗೆದುಹಾಕಲು, ಯೆಹೋವನ ಜನರನ್ನು ನೀವು ಹರಸಲು, ನಾನು ನಿಮಗೆ ಏನು ಮಾಡಬೇಕು?” ಎಂದು ಕೇಳಿದನು.

ಗಿಬ್ಯೋನ್ಯರು ದಾವೀದನಿಗೆ, “ಸೌಲನ ಬೆಳ್ಳಿಬಂಗಾರವಾಗಲಿ ಅವನ ಮನೆಯಾಗಲಿ ನಮಗೆ ಬೇಕಾಗಿಲ್ಲ ಮತ್ತು ಇಸ್ರೇಲಿನ ಯಾವ ವ್ಯಕ್ತಿಯನ್ನೂ ಕೊಲ್ಲಲು ನಮಗೆ ಹಕ್ಕಿಲ್ಲ” ಎಂದು ಹೇಳಿದರು.

ದಾವೀದನು, “ಆದರೆ ನಿಮಗಾಗಿ ನಾನು ಏನು ಮಾಡಲಿ?” ಎಂದನು.

ಗಿಬ್ಯೋನ್ಯರು ರಾಜನಾದ ದಾವೀದನಿಗೆ, “ಸೌಲನು ನಮ್ಮ ವಿರುದ್ಧ ಯೋಜಿಸಿ ಇಸ್ರೇಲಿನ ದೇಶದಲ್ಲಿ ಉಳಿದಿದ್ದ ನಮ್ಮ ಜನರನ್ನೆಲ್ಲ ನಾಶಪಡಿಸಲು ಪ್ರಯತ್ನಿಸಿದನು. ಅವನ ಏಳು ಮಂದಿ ಗಂಡುಮಕ್ಕಳನ್ನು ನಮ್ಮ ಬಳಿಗೆ ಕಳುಹಿಸು. ಸೌಲನು ವಾಸವಾಗಿದ್ದ ಗಿಬೆಯ ಬೆಟ್ಟದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕುತ್ತೇವೆ” ಎಂದು ಹೇಳಿದರು.

ರಾಜನಾದ ದಾವೀದನು, “ಆ ಗಂಡುಮಕ್ಕಳನ್ನು ನಾನು ನಿಮಗೆ ಒಪ್ಪಿಸುತ್ತೇನೆ” ಎಂದು ಹೇಳಿದನು. ಆದರೆ ಯೋನಾತಾನನ ಮಗನಾದ ಮೆಫೀಬೋಶೆತನನ್ನು ರಾಜನು ರಕ್ಷಿಸಿದನು. (ಯೋನಾತಾನನು ಸೌಲನ ಮಗ.) ದಾವೀದನು ಯೆಹೋವನ ಹೆಸರಿನಲ್ಲಿ ಯೋನಾತಾನನಿಗೆ ವಾಗ್ದಾನ ಮಾಡಿದ್ದನು.[a] ಆದ್ದರಿಂದ ಮೆಫೀಬೋಶೆತನಿಗೆ ಅವರಿಂದ ತೊಂದರೆಯಾಗದಂತೆ ನೋಡಿಕೊಂಡನು. ಆದರೆ ಅಯ್ಯಾಹನ ಮಗಳಾದ ರಿಚ್ಪಳಲ್ಲಿ ಹುಟ್ಟಿದ ಸೌಲನ ಗಂಡುಮಕ್ಕಳಾದ ಅರ್ಮೋನ್ ಮತ್ತು ಮೆಫೀಬೋಶೆತ್ ಎಂಬ ಇಬ್ಬರು ಗಂಡುಮಕ್ಕಳನ್ನೂ ಮೆಹೋಲದ ಬರ್ಜಿಲ್ಲೈಯ ಮಗನಾದ ಅದಿಯೇಲನಿಗೆ ಸೌಲನ ಮಗಳಾದ ಮೇರಬಳಲ್ಲಿ ಹುಟ್ಟಿದ್ದ ಐದು ಮಂದಿ ಗಂಡುಮಕ್ಕಳನ್ನೂ ತೆಗೆದುಕೊಂಡು ಗಿಬ್ಯೋನ್ಯರಿಗೆ ಒಪ್ಪಿಸಿದನು. ಗಿಬ್ಯೋನ್ಯರು ಈ ಏಳು ಮಂದಿ ಗಂಡುಮಕ್ಕಳನ್ನು ಗಿಬೆಯ ಬೆಟ್ಟದ ಮೇಲೆ ಯೆಹೋವನ ಸನ್ನಿಧಿಯಲ್ಲಿ ನೇತುಹಾಕಿದರು. ಈ ಏಳು ಮಂದಿ ಒಟ್ಟಿಗೆ ಸತ್ತರು. ಅವರನ್ನು ಸುಗ್ಗಿಯ ಆರಂಭದ ದಿನಗಳಲ್ಲಿ ಕೊಲ್ಲಲಾಯಿತು. (ಬಾರ್ಲಿಯ ಸುಗ್ಗಿಯು ಆಗ ತಾನೇ ಆರಂಭವಾಗಿತ್ತು.)

ರಿಚ್ಪಳು ತನ್ನ ಮಕ್ಕಳ ದೇಹಗಳನ್ನು ಕಾಯುತ್ತಿದ್ದಳು

10 ಅಯ್ಯಾಹನ ಮಗಳಾದ ರಿಚ್ಪಳು ಶೋಕವಸ್ತ್ರವನ್ನು ಕಲ್ಲಿನ ಮೇಲೆ ಹಾಸಿದಳು. ಸುಗ್ಗಿಯ ಆರಂಭದಿಂದ, ಆ ದೇಹಗಳ ಮೇಲೆ ಮಳೆಯು ಬೀಳುವ ತನಕ, ಆಕೆ ಆ ವಸ್ತ್ರದ ಮೇಲೆ ಕುಳಿತುಕೊಂಡಳು. ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಹಗಲು ಹೊತ್ತಿನಲ್ಲಿಯೂ, ಕಾಡಿನ ಪ್ರಾಣಿಗಳು ರಾತ್ರಿಯ ಹೊತ್ತಿನಲ್ಲಿಯೂ ತನ್ನ ಮಕ್ಕಳ ದೇಹಗಳನ್ನು ಮುಟ್ಟಲು ರಿಚ್ಪಳು ಅವಕಾಶಕೊಡಲಿಲ್ಲ.

11 ಅಯ್ಯಾಹನ ಮಗಳೂ ಸೌಲನ ಉಪಪತ್ನಿಯೂ ಆದ ರಿಚ್ಪಳು ಮಾಡುತ್ತಿರುವುದನ್ನು ಜನರು ದಾವೀದನಿಗೆ ತಿಳಿಸಿದರು. 12 ಆಗ ದಾವೀದನು ಸೌಲನ ಮತ್ತು ಯೋನಾತಾನನ ಮೂಳೆಗಳನ್ನು ತರುವುದಕ್ಕೋಸ್ಕರ ಯಾಬೇಷ್‌ಗಿಲ್ಯಾದಿಗೆ ಹೋದನು. ಸೌಲ ಮತ್ತು ಯೋನಾತಾನರನ್ನು ಫಿಲಿಷ್ಟಿಯರು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವರ ಶವಗಳನ್ನು ಬೇತ್‌ಷೆಯಾನಿನ ಬೀದಿಯಲ್ಲಿ ತೂಗುಹಾಕಿದ್ದರು. ಯಾಬೇಷ್‌ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು. 13 ದಾವೀದನು ಯಾಬೇಷ್‌ಗಿಲ್ಯಾದಿನಿಂದ ಸೌಲನ ಮತ್ತು ಅವನ ಮಗನಾದ ಯೋನಾತಾನನ ಮೂಳೆಗಳನ್ನೂ ನೇತುಹಾಕಲ್ಪಟ್ಟಿದ್ದ ಸೌಲನ ಏಳು ಮಂದಿ ಮಕ್ಕಳ ದೇಹಗಳನ್ನೂ ಜನರು ಒಟ್ಟಾಗಿ ಸೇರಿಸಿದರು. 14 ಸೌಲ ಮತ್ತು ಅವನ ಮಗನಾದ ಯೋನಾತಾನರ ಮೂಳೆಗಳನ್ನು ಅವರು ಬೆನ್ಯಾಮೀನಿನ ಪ್ರದೇಶದಲ್ಲಿ ಸಮಾಧಿ ಮಾಡಿದರು. ಸೌಲನ ತಂದೆಯಾದ ಕೀಷನ ಸ್ಮಶಾನದಲ್ಲಿ ಈ ದೇಹಗಳನ್ನು ಜನರು ಸಮಾಧಿ ಮಾಡಿದರು. ರಾಜನು ಆಜ್ಞಾಪಿಸಿದ್ದನ್ನೆಲ್ಲ ಜನರು ಮಾಡಿದರು. ನಂತರ ಆ ದೇಶದ ಜನರ ಪ್ರಾರ್ಥನೆಯನ್ನು ದೇವರು ಆಲಿಸಿದನು.

ಫಿಲಿಷ್ಟಿಯರೊಡನೆ ಯುದ್ಧ

15 ಫಿಲಿಷ್ಟಿಯರು ದಾವೀದನೊಡನೆ ಮತ್ತೆ ಯುದ್ಧವನ್ನು ಮಾಡಿದರು. ದಾವೀದನು ತನ್ನ ಜನರೊಂದಿಗೆ ಫಿಲಿಷ್ಟಿಯರ ವಿರುದ್ಧ ಹೋರಾಡಲು ಹೋದನು. ಆದರೆ ದಾವೀದನು ಆಯಾಸಗೊಂಡು ಬಲಹೀನನಾದನು. 16 ಇಷ್ಬೀಬೆನೋಬನು ಒಬ್ಬ ರಾಕ್ಷಸನ ಮಗ. ಅವನ ಬರ್ಜಿಯು ಏಳುವರೆ ಪೌಂಡುಗಳಷ್ಟು ತೂಕವಿತ್ತು. ಅವನು ಹೊಸ ಖಡ್ಗವನ್ನು ಹೊಂದಿದ್ದನು. ಅವನು ದಾವೀದನನ್ನು ಕೊಲ್ಲುವುದಕ್ಕಿದ್ದನು. 17 ಆದರೆ ಚೆರೂಯಳ ಮಗನಾದ ಅಬೀಷೈ ಆ ಫಿಲಿಷ್ಟಿಯನನ್ನು ಕೊಂದು ದಾವೀದನನ್ನು ರಕ್ಷಿಸಿದನು.

ಆಗ ದಾವೀದನ ಜನರು ಅವನಿಂದ ವಿಶೇಷ ಪ್ರಮಾಣವನ್ನು ಮಾಡಿಸಿದರು. ಅವರು ಅವನಿಗೆ, “ನೀನು ನಮ್ಮೊಂದಿಗೆ ಇನ್ನು ಮೇಲೆ ಯುದ್ಧಕ್ಕೆ ಬರಬಾರದು. ನೀನು ಯುದ್ಧಕ್ಕೆ ಹೋಗಿ ಕೊಲ್ಲಲ್ಪಟ್ಟರೆ, ಇಸ್ರೇಲಿನ ಅತ್ಯಂತ ಮಹಾಪುರುಷನನ್ನು ಕಳೆದುಕೊಂಡಂತಾಗುತ್ತದೆ” ಎಂದು ಹೇಳಿದರು.

18 ತರುವಾಯ, ಫಿಲಿಷ್ಟಿಯರೊಡನೆ ಮತ್ತೊಂದು ಯುದ್ಧವು ಗೋಬ್ ಎಂಬ ಸ್ಥಳದಲ್ಲಿ ನಡೆಯಿತು. ಹುಷಾದ ಸಿಬ್ಬೆಕೈ ಎನ್ನುವವನು ರೆಫಾಯನಾದ ಸಫ್ ಎಂಬವನನ್ನು ಕೊಂದನು.

19 ಆಗ ಗೋಬ್ ಎಂಬ ಸ್ಥಳದಲ್ಲಿ ಫಿಲಿಷ್ಟಿಯರೊಡನೆ ಮತ್ತೊಂದು ಯುದ್ಧವು ಆರಂಭವಾಯಿತು. ಯಾರೇಯೋರೆಗೀವ್ ಎಂಬವನು ಬೆನ್ಯಾಮೀನ್ ಕುಲದವನೂ ಬೆತ್ಲೆಹೇಮಿನವನೂ ಆಗಿದ್ದನು. ಇವನ ಮಗನಾದ ಎಲ್ಹಾನಾನನು ಗಿತ್ತಿಯನಾದ ಗೊಲ್ಯಾತನನ್ನು ಕೊಂದನು. ಗೊಲ್ಯಾತನ ಭರ್ಜಿಯು ನೇಕಾರನ ಕುಂಟೆಯಷ್ಟು ಗಾತ್ರವಿತ್ತು.

20 ಗತ್‌ನಲ್ಲಿ ಮತ್ತೆ ಯುದ್ಧವು ನಡೆಯಿತು. ಅಲ್ಲಿ ಬಹಳ ಎತ್ತರವಾದ ಮನುಷ್ಯನಿದ್ದನು. ಈ ಮನುಷ್ಯನ ಪ್ರತಿಯೊಂದು ಕೈಯಲ್ಲಿ ಆರು ಬೆರಳುಗಳೂ ಪಾದಗಳಲ್ಲಿ ಆರು ಬೆರಳುಗಳೂ ಇದ್ದವು. (ಅವನಿಗೆ ಒಟ್ಟು ಇಪ್ಪತ್ತನಾಲ್ಕು ಬೆರಳುಗಳಿದ್ದವು.) ಇವನು ಸಹ ರೆಫಾಯರಲ್ಲಿ ಒಬ್ಬನಾಗಿದ್ದನು. 21 ಈ ಮನುಷ್ಯನು ಇಸ್ರೇಲನ್ನು ಪ್ರತಿಭಟಿಸಿದನು. ಆದರೆ ಇವನನ್ನು ಯೋನಾತಾನನು ಕೊಂದನು. (ಯೋನಾತಾನನು ದಾವೀದನ ಸೋದರನಾದ ಶಿಮೆಯಾನನ ಮಗ.)

22 ಈ ನಾಲ್ಕು ಜನರು ಗತ್ ಊರಿನ ರೆಫಾಯರು. ಅವರೆಲ್ಲರೂ ದಾವೀದನಿಂದ ಮತ್ತು ಅವನ ಜನರಿಂದ ಕೊಲ್ಲಲ್ಪಟ್ಟರು.

ದಾವೀದನು ಯೆಹೋವನಿಗಾಗಿ ರಚಿಸಿದ ಸ್ತುತಿಗೀತೆ

22 ಯೆಹೋವನು ದಾವೀದನನ್ನು ಸೌಲನಿಂದ ಮತ್ತು ಅವನ ಇತರ ಎಲ್ಲಾ ಶತ್ರುಗಳಿಂದ ರಕ್ಷಿಸಿದನು. ಆ ಸಮಯದಲ್ಲಿ ದಾವೀದನು ಈ ಹಾಡನ್ನು ರಚಿಸಿ ಹಾಡಿದನು:

ಯೆಹೋವನು ನನ್ನ ಬಂಡೆ; ನನ್ನ ಕೋಟೆ; ನನ್ನ ವಿಮೋಚಕ.
    ನಾನು ಸಹಾಯಕ್ಕಾಗಿ ದೇವರ ಬಳಿಗೆ ಓಡಿಹೋಗುತ್ತೇನೆ.
ಆತನೇ ನನ್ನ ಆಶ್ರಯಗಿರಿ. ಯೆಹೋವನು ನನ್ನ ಗುರಾಣಿ. ಆತನ ಶಕ್ತಿಯು ನನ್ನನ್ನು ರಕ್ಷಿಸುತ್ತದೆ.
    ಆತನು ನಾನು ಅಡಗಿಕೊಳ್ಳುವ ಸ್ಥಳ; ಬೆಟ್ಟಗಳ ಮೇಲಿರುವ ನನ್ನ ಸುರಕ್ಷಿತ ಸ್ಥಳ;
ಆತನು ನನ್ನನ್ನು ಕ್ರೂರ ಶತ್ರುಗಳಿಂದ ರಕ್ಷಿಸುವನು!
ಯೆಹೋವನು ಸ್ತೋತ್ರಕ್ಕೆ ಅರ್ಹನಾಗಿದ್ದಾನೆ.
    ನಾನು ಸಹಾಯಕ್ಕಾಗಿ ಆತನನ್ನು ಕರೆಯುವೆನು.
    ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುವನು.

ಸಾವಿನ ಅಲೆಗಳು ನನ್ನನ್ನು ಸುತ್ತುವರೆದಿವೆ;
    ತೊಂದರೆಗಳು ಪ್ರವಾಹದಂತೆ ನುಗ್ಗಿಬಂದಿವೆ.
    ಅವೆಲ್ಲ ನನ್ನಲ್ಲಿ ಭೀತಿಯನ್ನು ಉಂಟುಮಾಡಿವೆ.
ಪಾತಾಳದ ಪಾಶಗಳು ನನ್ನನ್ನು ಸುತ್ತುವರೆದಿವೆ;
    ಮರಣಕರವಾದ ಉರುಲುಗಳು ನನ್ನೆದುರಿನಲ್ಲಿವೆ.
ನಾನು ಅವುಗಳಲ್ಲಿ ಸಿಲುಕಿಕೊಂಡಿದ್ದಾಗ ಯೆಹೋವನಿಗೆ ಪ್ರಾರ್ಥಿಸಿದೆನು.
    ಹೌದು, ನನ್ನ ದೇವರಿಗೆ ನಾನು ಮೊರೆಯಿಟ್ಟೆನು;
ತನ್ನ ಆಲಯದಲ್ಲಿದ್ದ ಆತನಿಗೆ ನನ್ನ ಸ್ವರ ಕೇಳಿಸಿತು;
    ಸಹಾಯಕ್ಕಾಗಿ ನಾನಿಟ್ಟ ಮೊರೆಗೆ ಆತನು ಕಿವಿಗೊಟ್ಟನು.
ಆಗ ಭೂಮಿಯು ಗಡಗಡನೆ ನಡುಗಿತು.
    ಆಕಾಶದ ಅಡಿಪಾಯಗಳು ಅಲುಗಾಡಿದವು.
    ಏಕೆಂದರೆ ಯೆಹೋವನಿಗೆ ಸಿಟ್ಟೇರಿತ್ತು!
ಆತನ ಮೂಗಿನ ಹೊಳ್ಳೆಗಳಿಂದ ಹೊಗೆಯು ಹೊರಬಂದಿತು.
    ಬೆಂಕಿಕಿಡಿಯ ಜ್ವಾಲೆಗಳು ಆತನ ಬಾಯಿಂದ ಹೊರಬಂದವು;
    ದಹಿಸುವ ಬೆಂಕಿಯು ಆತನ ಬಾಯೊಳಗಿಂದ ಬಂದಿತು.
10 ಆತನು ಆಕಾಶವನ್ನು ಇಬ್ಭಾಗಮಾಡಿ ಕೆಳಗಿಳಿದು ಬಂದನು!
    ಆತನ ಕಾಲುಗಳ ಕೆಳಗೆ ಕತ್ತಲೆ ಕವಿದಿತ್ತು.
11 ಕೆರೂಬಿಗಳ ಮೇಲೆ ಆಸೀನನಾಗಿ ವಾಯುವೇ
    ತನ್ನ ರೆಕ್ಕೆಗಳೋ ಎಂಬಂತೆ ಹಾರಿಬಂದನು.
12 ಆತನು ಕಾರ್ಮೋಡಗಳನ್ನೇ ತನ್ನ ಸುತ್ತಲೂ ಗುಡಾರದಂತಾಗಿಸಿಕೊಂಡನು.
    ಆತನು ಆಕಾಶದ ನೀರನ್ನು, ಗುಡುಗುವ ದೊಡ್ಡ ಮೋಡಗಳನ್ನು ತನ್ನ ಸುತ್ತಲೂ ಕವಿಸಿಕೊಂಡನು.
13 ಉರಿಯುವ ಕಲ್ಲಿದ್ದಲಿನಂತಿದ್ದ ಕಿಡಿಗಳು
    ಆತನ ಸುತ್ತಲೂ ಇದ್ದ ಬೆಳಕಿನಿಂದ ಬಂದವು.
14 ಯೆಹೋವನು ಆಕಾಶದಿಂದ ಗುಡುಗಿದನು!
    ಸರ್ವೋನ್ನತನಾದ ದೇವರು ತನ್ನ ಸ್ವರ ಕೇಳುವಂತೆ ಮಾಡಿದನು.
15 ಆತನಿಂದ ಹೊರಟ ಬಾಣಗಳು ಶತ್ರುಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿದವು.
    ಆತನು ಸಿಡಿಲನ್ನು ಉಂಟುಮಾಡಿದನು, ಜನರು ಭೀತಿಯಿಂದ ಓಡಿಹೋದರು.

16 ಯೆಹೋವನೇ, ನೀನು ಗದರಿಸಿದಾಗ
    ನಿನ್ನ ಬಾಯಿಂದ ಪ್ರಬಲವಾದ ಗಾಳಿಯು ಬೀಸಿತು;
ನೀರು ಹಿಂದಕ್ಕೆ ತಳ್ಳಲ್ಪಟ್ಟಿತು. ಸಮುದ್ರದ ತಳವೂ
    ಭೂಮಿಯ ಅಸ್ತಿವಾರಗಳು ಕಣ್ಣಿಗೆ ಗೋಚರವಾದವು.

17 ಆತನು ಮೇಲಿನ ಲೋಕದಿಂದ ಕೆಳಗಿಳಿದನು.
    ಆತನು ನನ್ನನ್ನು ಹಿಡಿದುಕೊಂಡು ನನ್ನನ್ನು ನೀರಿನಡಿಯಿಂದ ಮೇಲಕ್ಕೆತ್ತಿದನು.
18 ನನ್ನನ್ನು ದ್ವೇಷಿಸುತ್ತಿದ್ದ ಶತ್ರುಗಳಿಂದ ಆತನೇ ರಕ್ಷಿಸಿದನು.
    ನನ್ನ ಶತ್ರುಗಳು ನನಗಿಂತಲೂ ಬಹಳ ಬಲಿಷ್ಠರೂ ಸೊಕ್ಕಿದವರೂ ಆಗಿದ್ದರು.
    ಅವರ ಕೈಯಿಂದ ಆತನೇ ನನ್ನನ್ನು ರಕ್ಷಿಸಿದನು.
19 ಶತ್ರುಗಳು ನನಗೆ ಮುತ್ತಿಗೆ ಹಾಕಿದಾಗ ನಾನು ತೊಂದರೆಯಲ್ಲಿದ್ದೆನು.
    ಆದರೆ ನನಗೆ ಯೆಹೋವನು ಸಹಾಯ ಮಾಡಿದನು.
20 ಆತನು ನನ್ನನ್ನು ಸುರಕ್ಷಿತವಾದ ಸ್ಥಳಕ್ಕೆ ತಂದನು.
    ಆತನು ನನ್ನನ್ನು ಪ್ರೀತಿಸಿ ರಕ್ಷಿಸಿದನು.
21 ನಾನು ನೀತಿಗನುಸಾರವಾಗಿ ನಡೆದುಕೊಂಡಿದ್ದರಿಂದ ಯೆಹೋವನು ನನಗೆ ಪ್ರತಿಫಲವನ್ನು ಕೊಟ್ಟನು.
    ನಾನು ನಿರ್ದೋಷಿಯಾಗಿದ್ದರಿಂದ ಆತನು ನನಗೆ ಒಳ್ಳೆಯದನ್ನೇ ಮಾಡಿದನು.
22 ನಾನು ಆತನ ಮಾರ್ಗಗಳನ್ನೇ ಅನುಸರಿಸಿದೆನು.
    ನನ್ನ ದೇವರ ವಿರುದ್ಧ ನಾನು ಪಾಪವನ್ನು ಮಾಡಲಿಲ್ಲ.
23 ನಾನು ಯೆಹೋವನ ಆಜ್ಞೆಗಳನ್ನು ಯಾವಾಗಲೂ ಜ್ಞಾಪಿಸಿಕೊಂಡೆನು.
    ನಾನು ಯಾವಾಗಲೂ ಆತನ ಕಟ್ಟಳೆಗನುಸಾರವಾಗಿಯೇ ನಡೆದುಕೊಂಡೆನು.
24 ನಾನು ದೋಷಿಯಲ್ಲವೆಂಬುದು ಆತನಿಗೆ ತಿಳಿದಿದೆ.
    ನಾನು ಪಾಪದಲ್ಲಿ ಬೀಳದಂತೆ ಎಚ್ಚರಿಕೆ ವಹಿಸಿದೆನು.
25 ನಾನು ಒಳ್ಳೆಯದನ್ನೇ ಮಾಡಿದೆನು.
    ಯೆಹೋವನ ದೃಷ್ಟಿಯಲ್ಲಿ ನಾನು ತಪ್ಪೇನೂ ಮಾಡಲಿಲ್ಲ,
    ಆದ್ದರಿಂದ ಆತನು ನನಗೆ ಪ್ರತಿಫಲ ಕೊಡುವನು!

26 ನಿನ್ನನ್ನು ಪ್ರೀತಿಸುವವರನ್ನು ನೀನು ಪ್ರೀತಿಸುತ್ತಿ.
    ನಿನ್ನ ಮುಂದೆ ದೋಷವಿಲ್ಲದವನಾಗಿ ನಡೆಯುವವನಿಗೆ ನಿರ್ದೋಷಿಯಾಗಿರುತ್ತಿ.
27 ನೀನು ಪರಿಶುದ್ಧರಿಗೆ ಪರಿಶುದ್ಧನಾಗಿರುವೆ;
    ಮೋಸಗಾರರಿಗೆ ಜಾಣನಾಗಿರುವೆ.
28 ನೀನು ದೀನರನ್ನು ಮೇಲಕ್ಕೆತ್ತುವೆ;
    ಗರ್ವಿಷ್ಠರನ್ನಾದರೋ ತುಳಿದುಬಿಡುವೆ.
29 ಯೆಹೋವನೇ, ನನ್ನ ದೀಪವು ನೀನೇ.
    ಯೆಹೋವನು ನನಗೆ ಬೆಳಕು ಕೊಟ್ಟು ನನ್ನ ಸುತ್ತಲಿನ ಅಂಧಕಾರವನ್ನು ಪ್ರಕಾಶಮಯವಾಗುವಂತೆ ಮಾಡುವನು.
30 ನಿನ್ನ ಸಹಾಯದಿಂದಲೇ, ನಾನು ವೈರಿಗಳ ಮೇಲೆ ಬೀಳುವೆನು.
    ನಿನ್ನ ಸಹಾಯದಿಂದಲೇ ನಾನು ಶತ್ರುಗಳ ಗೋಡೆಗಳನ್ನು ಹತ್ತಬಲ್ಲೆನು.

31 ದೇವರ ಶಕ್ತಿಯು ಪರಿಪೂರ್ಣವಾದದ್ದು.
    ಯೆಹೋವನ ಮಾತು ಪರೀಕ್ಷಿಸಲ್ಪಟ್ಟದ್ದು;
    ಆತನು ತನ್ನಲ್ಲಿ ಭರವಸೆಯಿಟ್ಟವರನ್ನು ಸಂರಕ್ಷಿಸುತ್ತಾನೆ.
32 ಯೆಹೋವನ ಹೊರತು ಬೇರೆ ದೇವರಿಲ್ಲ.
    ನಮ್ಮ ದೇವರ ಹೊರತು ಬೇರೆ ಬಂಡೆಯಿಲ್ಲ.
33 ದೇವರು ನನ್ನ ಬಲವೂ ಕೋಟೆಯೂ ಆಗಿದ್ದಾನೆ.
    ಆತನು ನನ್ನ ಮಾರ್ಗವನ್ನು ದೋಷವಿಲ್ಲದ್ದಾಗಿ ಮಾಡುತ್ತಾನೆ.
34 ನಾನು ಉನ್ನತ ಪ್ರದೇಶಗಳಲ್ಲಿ ನಿಲ್ಲುವಂತೆ
    ಆತನು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳಂತೆ ಮಾಡುತ್ತಾನೆ.
35 ಆತನು ಯುದ್ಧಕ್ಕಾಗಿ ನನ್ನನ್ನು ತರಬೇತುಗೊಳಿಸುವನು.
    ಆದ್ದರಿಂದ ನನ್ನ ತೋಳುಗಳು ಹಿತ್ತಾಳೆಯ ಬಿಲ್ಲನ್ನೂ ಬಗ್ಗಿಸಬಲ್ಲವು.

36 ದೇವರೇ, ನೀನು ನನ್ನನ್ನು ಸಂರಕ್ಷಿಸಿ ಜಯಹೊಂದಲು ನನಗೆ ಸಹಾಯಮಾಡಿರುವೆ.
    ನನ್ನ ಶತ್ರುವನ್ನು ಸೋಲಿಸಲು ನೀನು ನನಗೆ ಸಹಾಯ ಮಾಡಿರುವೆ.
37 ನನ್ನ ಕಾಲುಗಳನ್ನೂ ಕೀಲುಗಳನ್ನೂ ಬಲಗೊಳಿಸು;
    ಆಗ ನಾನು ಎಡವದೆ ವೇಗವಾಗಿ ನಡೆಯಬಲ್ಲೆನು.
38 ನಾನು ನನ್ನ ಶತ್ರುಗಳನ್ನು ಅಟ್ಟಿಸಿಕೊಂಡು ಹೋದೆನು.
    ನಾನು ಅವರನ್ನು ನಾಶಗೊಳಿಸಿದೆನು!
    ನಾನು ನನ್ನ ಶತ್ರುಗಳನ್ನು ನಾಶಗೊಳಿಸುವ ತನಕ ಹಿಂದಿರುಗುವುದಿಲ್ಲ.
39 ನಾನು ನನ್ನ ಶತ್ರುಗಳನ್ನು ನಾಶಗೊಳಿಸಿದೆನು!
    ನಾನು ಅವರನ್ನು ಸಂಪೂರ್ಣವಾಗಿ ನಾಶಗೊಳಿಸಿದೆನು.
ಅವರು ಮತ್ತೆ ಮೇಲೇಳುವುದಿಲ್ಲ.
    ಹೌದು, ನನ್ನ ಶತ್ರುಗಳು ನನ್ನ ಪಾದಗಳ ಕೆಳಗೆ ಬಿದ್ದಿದ್ದಾರೆ.

40 ದೇವರೇ, ನೀನು ನನ್ನನ್ನು ಯುದ್ಧಕ್ಕಾಗಿ ಬಲಪಡಿಸಿರುವೆ.
    ನನ್ನ ಶತ್ರುಗಳನ್ನು ನನಗೆ ಅಧೀನರಾಗುವಂತೆ ಮಾಡಿರುವೆ.
41 ನನ್ನ ಶತ್ರುಗಳು ಓಡಿಹೋಗಲು ನೀನೇ ಕಾರಣ.
    ಆದ್ದರಿಂದಲೇ ನನ್ನನ್ನು ದ್ವೇಷಿಸಿದ ಜನರನ್ನು ನಾನು ನಾಶ ಮಾಡಿದೆನು.
42 ನನ್ನ ಶತ್ರುಗಳು ಸಹಾಯಕ್ಕಾಗಿ ನೋಡಿದರು.
    ಆದರೆ ಅವರನ್ನು ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ.
ಅವರು ಯೆಹೋವನ ಕಡೆಗೂ ನೋಡಿದರು;
    ಆದರೆ ಆತನು ಅವರಿಗೆ ಉತ್ತರ ಕೊಡಲಿಲ್ಲ.
43 ನಾನು ನನ್ನ ಶತ್ರುಗಳನ್ನು
    ತುಂಡುತುಂಡಾಗಿ ಕತ್ತರಿಸಿಹಾಕಿದೆ.
ಅವರು ನೆಲದ ಮೇಲಿನ ಧೂಳಿನಂತಾದರು.
    ನನ್ನ ಶತ್ರುಗಳನ್ನು ರಸ್ತೆಯಲ್ಲಿನ ಮಣ್ಣಿನಂತಾಗುವವರೆಗೆ ತುಳಿದುಬಿಟ್ಟೆನು.

44 ಜನರು ನನ್ನ ವಿರುದ್ಧ ವಾದಿಸಿದಾಗ ನೀನು ನನ್ನನ್ನು ರಕ್ಷಿಸಿದೆ.
    ನೀನು ನನ್ನನ್ನು ಜನಾಂಗಗಳಿಗೆ ಅಧಿಪತಿಯನ್ನಾಗಿ ಮಾಡಿದೆ.
    ನಾನು ತಿಳಿಯದ ಜನರೂ ನನ್ನ ಸೇವೆಮಾಡುತ್ತಾರೆ!
45 ಅನ್ಯದೇಶದ ಜನರೂ ನನಗೆ ವಿಧೇಯರಾಗಿರುವರು!
    ಅವರು ನನ್ನ ಬಗ್ಗೆ ಕೇಳಿದಾಗ, ತಕ್ಷಣವೇ ನನಗೆ ವಿಧೇಯರಾಗುವರು!
    ಆ ಪರದೇಶಿಯರು ನನಗೆ ಭಯಪಡುವರು.
46 ಅನ್ಯದೇಶದ ಜನರು ಭಯಗೊಳ್ಳುವರು;
    ತಾವು ಅಡಗಿದ್ದ ಸ್ಥಳಗಳಿಂದ ನಡುಗುತ್ತಾ ಹೊರಬರುವರು.

47 ಯೆಹೋವನು ಜೀವಸ್ವರೂಪನಾಗಿದ್ದಾನೆ.
    ನನ್ನ ಬಂಡೆಗೆ ಸ್ತೋತ್ರವಾಗಲಿ.
ಯೆಹೋವನು ಮಹೋನ್ನತನು!
    ನನ್ನನ್ನು ರಕ್ಷಿಸುವ ಬಂಡೆಯಾದಾತನಿಗೆ ಸ್ತುತಿಯುಂಟಾಗಲಿ.
48 ನನ್ನ ಶತ್ರುಗಳನ್ನು ನನಗಾಗಿ ದಂಡಿಸುವ ದೇವರು ಆತನೇ.
    ಆತನು ಜನರನ್ನು ನನ್ನ ಅಧೀನತೆಗೆ ಒಳಪಡಿಸುವನು.
49 ನನ್ನ ಶತ್ರುಗಳಿಂದ ನನ್ನನ್ನು ಸ್ವತಂತ್ರನಾಗಿಸುವವನು ದೇವರೇ.

ಹೌದು, ನೀನು ನನ್ನನ್ನು ನನ್ನ ಶತ್ರುಗಳಿಂದ ತಪ್ಪಿಸಿ ಮೇಲಕ್ಕೇರಿಸುವೆ.
    ನನ್ನನ್ನು ಹಿಂಸಿಸಬೇಕೆನ್ನುವ ಮನುಷ್ಯನಿಂದ ನೀನು ನನಗೆ ರಕ್ಷಣೆ ನೀಡುವೆ.
50 ಯೆಹೋವನೇ, ಈ ಕಾರಣದಿಂದಲೇ ನಾನು ಅನ್ಯ ಜನಾಂಗಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.
    ಈ ಕಾರಣದಿಂದಲೇ ನಿನ್ನ ಹೆಸರಿನ ಮೇಲೆ ಹಾಡುಗಳನ್ನು ಹಾಡುವೆನು.

51 ಆತನು ತಾನು ನೇಮಿಸಿದ ರಾಜನಿಗೆ ಸಹಾಯಮಾಡಿ ಯುದ್ಧಗಳಲ್ಲಿ ಜಯ ದಯಪಾಲಿಸುವನು.
    ಆತನು ನನ್ನ ರಕ್ಷಣಾದುರ್ಗವಾಗಿದ್ದಾನೆ.
ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಪ್ರೀತಿಯನ್ನು ಮತ್ತು ದಯೆಯನ್ನು ತೋರುವನು.
    ದಾವೀದನಿಗೆ ಮತ್ತು ಅವನ ಸಂತತಿಯವರಿಗೆ ಆತನು ಎಂದೆಂದಿಗೂ ಕೃಪೆ ತೋರಿಸುವವನಾಗಿದ್ದಾನೆ.

ಲೂಕ 18:24-43

24 ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರರಾಜ್ಯಕ್ಕೆ ಸೇರುವುದು ಬಹಳ ಕಷ್ಟ! 25 ಐಶ್ವರ್ಯವಂತನು ದೇವರ ರಾಜ್ಯಕ್ಕೆ ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.

ಯಾರಿಗೆ ರಕ್ಷಣೆಯಾಗುವುದು?

26 ಜನರು ಯೇಸುವಿನ ಈ ಮಾತನ್ನು ಕೇಳಿ, “ಹಾಗಾದರೆ ಯಾರಿಗೆ ರಕ್ಷಣೆಯಾಗುವುದು?” ಎಂದು ಕೇಳಿದರು.

27 ಯೇಸು ಅವರಿಗೆ, “ಜನರಿಗೆ ಅಸಾಧ್ಯವಾದ ಕಾರ್ಯಗಳನ್ನು ದೇವರು ಮಾಡಬಲ್ಲನು” ಎಂದು ಉತ್ತರಿಸಿದನು.

28 ಪೇತ್ರನು, “ನೋಡು, ನಾವು ನಮ್ಮದೆಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು!” ಅಂದನು.

29 ಅದಕ್ಕೆ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ದೇವರ ರಾಜ್ಯದ ನಿಮಿತ್ತ ತನ್ನ ಮನೆ, ಹೆಂಡತಿ, ಸಹೋದರರು, ತಂದೆತಾಯಿಗಳು ಅಥವಾ ಮಕ್ಕಳನ್ನು ತ್ಯಜಿಸಿದ ಪ್ರತಿಯೊಬ್ಬನು ತಾನು ತ್ಯಜಿಸಿದ್ದಕ್ಕಿಂತಲೂ ಹೆಚ್ಚು ಪಡೆಯುವನು. 30 ಅವನು ಈ ಜೀವನದಲ್ಲಿಯೇ ಅವುಗಳಿಗಿಂತ ಅನೇಕ ಪಾಲು ಹೆಚ್ಚಾದವುಗಳನ್ನು ಪಡೆಯುವನು ಮತ್ತು ತನ್ನ ಮುಂದಿನ ಲೋಕದಲ್ಲಿ ದೇವರೊಂದಿಗೆ ಸದಾಕಾಲ ಜೀವಿಸುವನು” ಎಂದು ಹೇಳಿದನು.

ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ

(ಮತ್ತಾಯ 20:17-19; ಮಾರ್ಕ 10:32-34)

31 ಬಳಿಕ ಯೇಸು ತನ್ನ ಹನ್ನೆರಡು ಮಂದಿ ಅಪೊಸ್ತಲರೊಂದಿಗೆ ಪ್ರತ್ಯೇಕವಾಗಿ ಮಾತಾಡಿದನು. ಅವರಿಗೆ, “ಕೇಳಿರಿ! ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ದೇವರು ತನ್ನ ಪ್ರವಾದಿಗಳ ಮೂಲಕ ಮನುಷ್ಯಕುಮಾರನ ಬಗ್ಗೆ ಬರೆಸಿರುವ ಪ್ರತಿಯೊಂದು ಸಂಗತಿಯೂ ಸಂಭವಿಸುವುದು! 32 ಆತನ ಜನರೇ ಆತನಿಗೆ ವಿರೋಧವಾಗಿ ಎದ್ದು ಯೆಹೂದ್ಯರಲ್ಲದ ಜನರಿಗೆ ಆತನನ್ನು ಒಪ್ಪಿಸಿಕೊಡುವರು. ಅವರು ಆತನನ್ನು ಗೇಲಿಮಾಡಿ ಆತನ ಮುಖಕ್ಕೆ ಉಗುಳುವರು. ಆತನಿಗೆ ಅವಮಾನ ಮಾಡುವರು ಮತ್ತು ನಾಚಿಕೆಪಡಿಸುವರು. 33 ಅವರು ಆತನಿಗೆ ಕೊರಡೆಗಳಿಂದ ಹೊಡೆಯುವರು ಮತ್ತು ಆತನನ್ನು ಕೊಲ್ಲುವರು! ಆದರೆ ಆತನು ತನ್ನ ಮೂರನೇ ದಿನದಲ್ಲಿ ಮತ್ತೆ ಜೀವಂತವಾಗಿ ಎದ್ದುಬರುವನು” ಅಂದನು. 34 ಅಪೊಸ್ತಲರು ಇದನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸಿದರೂ ಅವರಿಗೆ ಸಾಧ್ಯವಾಗಲಿಲ್ಲ, ಏಕೆಂದರೆ ಅದರ ಅರ್ಥವು ಅವರಿಗೆ ಮರೆಯಾಗಿತ್ತು.

ಯೇಸುವಿನಿಂದ ಕಣ್ಣುಪಡೆದ ಕುರುಡ

(ಮತ್ತಾಯ 20:29-34; ಮಾರ್ಕ 10:46-52)

35 ಯೇಸು ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಆ ರಸ್ತೆಯ ಪಕ್ಕದಲ್ಲಿ ಒಬ್ಬ ಕುರುಡನು ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು. 36 ಆ ರಸ್ತೆಯಲ್ಲಿ ಜನಸಮೂಹದ ಶಬ್ದವನ್ನು ಕೇಳಿ ಆ ಕುರುಡನು, “ಯಾವ ಸಮಾರಂಭ ನಡೆಯುತ್ತಿದೆ?” ಎಂದು ಕೇಳಿದನು.

37 ಜನರು ಅವನಿಗೆ, “ನಜರೇತಿನ ಯೇಸು ಬರುತ್ತಿದ್ದಾನೆ” ಎಂದು ತಿಳಿಸಿದರು.

38 ಆ ಕುರುಡನು ಗಟ್ಟಿಯಾಗಿ, “ಯೇಸುವೇ, ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.

39 ಜನಸಮೂಹದ ಮುಂದಿದ್ದ ಜನರು ಕುರುಡನನ್ನು ಗದರಿಸಿ, ಅವನಿಗೆ ಮಾತಾಡಕೂಡದೆಂದು ಹೇಳಿದರು. ಆದರೆ ಆ ಕುರುಡನು ಮತ್ತಷ್ಟು ಗಟ್ಟಿಯಾಗಿ, “ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.

40 ಯೇಸು ಅಲ್ಲೇ ನಿಂತು, “ಆ ಕುರುಡನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ” ಎಂದು ಹೇಳಿದನು. ಆ ಕುರುಡನು ಹತ್ತಿರಕ್ಕೆ ಬಂದಾಗ, ಯೇಸು ಅವನಿಗೆ 41 “ನಾನು ನಿನಗಾಗಿ ಏನು ಮಾಡಬೇಕು?” ಎಂದು ಕೇಳಿದನು.

ಕುರುಡನು, “ಪ್ರಭುವೇ, ನನಗೆ ಮತ್ತೆ ಕಣ್ಣು ಕಾಣುವಂತೆ ಮಾಡು” ಅಂದನು.

42 ಯೇಸು ಅವನಿಗೆ, “ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಎಂದು ಹೇಳಿದನು.

43 ಆಗ ಆ ಕುರುಡನಿಗೆ ದೃಷ್ಟಿ ಬಂದಿತು. ಅವನು ದೇವರನ್ನು ಸ್ತುತಿಸುತ್ತಾ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ಈ ಮಹತ್ಕಾರ್ಯಕ್ಕಾಗಿ ದೇವರನ್ನು ಕೊಂಡಾಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International