Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
2 ಸಮುವೇಲನು 1-2

ಸೌಲನ ಮರಣದ ಬಗ್ಗೆ ದಾವೀದನಿಗೆ ವಾರ್ತೆ

ದಾವೀದನು ಅಮಾಲೇಕ್ಯರನ್ನು ಸೋಲಿಸಿದ ಬಳಿಕ, ಚಿಕ್ಲಗಿಗೆ ಹಿಂದಿರುಗಿಬಂದು, ಅಲ್ಲಿ ಎರಡು ದಿವಸ ಇದ್ದನು. ಸೌಲನ ಮರಣಾನಂತರ ಇದು ಸಂಭವಿಸಿತು. ಮೂರನೆಯ ದಿನ ಒಬ್ಬ ಯುವ ಸೈನಿಕನು ಚಿಕ್ಲಗಿಗೆ ಬಂದನು. ಈ ಮನುಷ್ಯನು ಸೌಲನಿದ್ದ ಪಾಳೆಯದಿಂದ ಬಂದವನು. ಅವನು ಬಟ್ಟೆಗಳೆಲ್ಲವನ್ನು ಹರಿದುಕೊಂಡಿದ್ದನು; ತಲೆಯ ಮೇಲೆ ಧೂಳನ್ನು ಹಾಕಿಕೊಂಡಿದ್ದನು.[a] ಅವನು ದಾವೀದನ ಬಳಿಗೆ ಬಂದು ಅವನ ಮುಂದೆ, ತನ್ನ ತಲೆಯನ್ನು ನೆಲಕ್ಕೆ ಬಾಗಿಸಿ ನಮಸ್ಕರಿಸಿದನು.

ದಾವೀದನು ಅವನಿಗೆ, “ನೀನು ಎಲ್ಲಿಂದ ಬಂದೆ?” ಎಂದು ಅವನನ್ನು ಕೇಳಿದನು.

ಅದಕ್ಕೆ ಅವನು, “ನಾನು ಇಸ್ರೇಲರ ಪಾಳೆಯದಿಂದ ತಪ್ಪಿಸಿಕೊಂಡು ಬಂದೆ” ಎಂದು ಹೇಳಿದನು.

ದಾವೀದನು ಅವನನ್ನು, “ಯುದ್ಧದಲ್ಲಿ ಯಾರು ಗೆದ್ದರು, ನನಗೆ ದಯವಿಟ್ಟು ತಿಳಿಸು?” ಎಂದು ಕೇಳಿದನು.

ಅವನು, “ಇಸ್ರೇಲ್ ಜನರು ಯುದ್ಧರಂಗದಿಂದ ಓಡಿಹೋದರು. ಯುದ್ಧದಲ್ಲಿ ಅನೇಕರು ಸತ್ತುಹೋದರು. ಸೌಲನೂ ಅವನ ಮಗನಾದ ಯೋನಾತಾನನೂ ಸತ್ತರು” ಎಂದು ಹೇಳಿದನು.

ದಾವೀದನು ಆ ಯುವಕನಿಗೆ, “ಸೌಲನು ಮತ್ತು ಅವನ ಮಗನಾದ ಯೋನಾತಾನನು ಸತ್ತರೆಂದು ನಿನಗೆ ಹೇಗೆ ತಿಳಿಯಿತು?” ಎಂದು ಕೇಳಿದನು.

ಅದಕ್ಕೆ ಆ ಯುವಕನು, “ನಾನು ಆಕಸ್ಮಿಕವಾಗಿ ಗಿಲ್ಬೋವದ ಶಿಖರದ ಮೇಲಿದ್ದೆ. ಸೌಲನು ತನ್ನ ಭರ್ಜಿಯ ಮೇಲೆ ಒರಗಿಕೊಂಡಿದ್ದನ್ನು ಅಲ್ಲಿಂದಲೇ ನಾನು ನೋಡಿದೆ. ಫಿಲಿಷ್ಟಿಯರ ರಥಗಳು ಮತ್ತು ಕುದುರೆಸವಾರರು ಸೌಲನ ಹತ್ತಿರಕ್ಕೆ ಬರುತ್ತಿದ್ದರು. ಸೌಲನು ಹಿಂದಿರುಗಿ ನೋಡಿದಾಗ ಅವನಿಗೆ ನಾನು ಕಾಣಿಸಿದೆನು. ಅವನು ನನ್ನನ್ನು ಕರೆದಾಗ, ‘ಇಗೋ ಬಂದೆನು’ ಎಂದು ಉತ್ತರಿಸಿದೆನು. ನಂತರ ಸೌಲನು, ‘ನೀನು ಯಾರು?’ ಎಂದು ಕೇಳಿದನು. ‘ನಾನೊಬ್ಬ ಅಮಾಲೇಕ್ಯನು’ ಎಂದು ನಾನು ಹೇಳಿದೆನು. ಸೌಲನು ನನಗೆ, ‘ದಯವಿಟ್ಟು ನನ್ನನ್ನು ಕೊಂದುಬಿಡು. ನಾನು ಬಹು ಸಂಕಟದಲ್ಲಿದ್ದೇನೆ. ನಾನು ಈಗಾಗಲೇ ಸತ್ತವನಂತಿದ್ದೇನೆ’ ಎಂದನು. 10 ಆದ್ದರಿಂದ ನಾನು ಅವನನ್ನು ಕೊಂದೆನು. ಅವನು ಮತ್ತೆ ಜೀವದಿಂದ ಉಳಿಯಲಾರದಷ್ಟು ಗಾಯಗೊಂಡಿದ್ದಾನೆಂಬುದು ನನಗೆ ತಿಳಿದಿತ್ತು. ನಂತರ ನಾನು ಅವನ ತಲೆಯಿಂದ ಕಿರೀಟವನ್ನೂ ತೋಳಿನ ಕವಚವನ್ನೂ ತೆಗೆದುಕೊಂಡೆನು. ನನ್ನ ಒಡೆಯನೇ, ನಾನು ಆ ಕಿರೀಟವನ್ನು ಮತ್ತು ತೋಳಿನ ಕವಚವನ್ನು ನಿನ್ನ ಬಳಿಗೆ ತಂದಿದ್ದೇನೆ” ಎಂದು ಹೇಳಿದನು.

11 ಆಗ ದಾವೀದನು ದುಃಖದಿಂದ ತನ್ನ ಬಟ್ಟೆಗಳನ್ನೆಲ್ಲ ಹರಿದುಕೊಂಡನು. ದಾವೀದನ ಜೊತೆಯಲ್ಲಿದ್ದವರೂ ತಮ್ಮ ಬಟ್ಟೆಗಳನ್ನು ಹರಿದುಕೊಂಡರು. 12 ಅವರು ಬಹಳ ದುಃಖದಿಂದ ಅತ್ತರು. ಅವರು ಸಂಜೆಯ ತನಕ ಏನನ್ನೂ ತಿನ್ನಲಿಲ್ಲ. ಸೌಲನೂ ಅವನ ಮಗನಾದ ಯೋನಾತಾನನೂ ಯೆಹೋವನ ಜನರೂ ಸತ್ತದ್ದಕ್ಕಾಗಿ ಮತ್ತು ಇಸ್ರೇಲಿಗಾಗಿ ದಾವೀದನು ಮತ್ತು ಅವನ ಜನರು ಅತ್ತರು. ಸೌಲನನ್ನೂ ಅವನ ಮಗನಾದ ಯೋನಾತಾನನನ್ನೂ ಮತ್ತು ಅನೇಕ ಮಂದಿ ಇಸ್ರೇಲರನ್ನೂ ಖಡ್ಗಗಳಿಂದ ಇರಿದು ಕೊಂದದ್ದಕ್ಕಾಗಿ ಅವರು ಅತ್ತರು.

ಅಮಾಲೇಕ್ಯನನ್ನು ಕೊಲ್ಲಲು ದಾವೀದನ ಆಜ್ಞೆ

13 ಸೌಲನ ಮರಣದ ಬಗ್ಗೆ ತಿಳಿಸಿದ ಯುವಕನಿಗೆ ದಾವೀದನು, “ನೀನು ಎಲ್ಲಿಂದ ಬಂದಿರುವೆ?” ಎಂದು ಕೇಳಿದನು.

ಆ ಯುವಕನು, “ನಾನು ಇಸ್ರೇಲ್ ಜನರಲ್ಲಿ ವಾಸಿಸುತ್ತಿರುವ ವಿದೇಶೀಯನ ಮಗ. ನಾನೊಬ್ಬ ಅಮಾಲೇಕ್ಯನು” ಎಂದು ಉತ್ತರಿಸಿದನು.

14 ದಾವೀದನು ಆ ಯುವಕನಿಗೆ, “ಯೆಹೋವನಿಂದ ಆರಿಸಲ್ಪಟ್ಟ ರಾಜನನ್ನು ಕೊಲ್ಲಲು ನೀನು ಹೆದರಲಿಲ್ಲವೇಕೆ?” ಎಂದು ಕೇಳಿದನು.

15-16 ನಂತರ ದಾವೀದನು ತನ್ನ ಗುಂಪಿನ ಯುವಕನೊಬ್ಬನನ್ನು ಕರೆದು, “ನೀನು ಹೋಗಿ ಆ ಅಮಾಲೇಕ್ಯನನ್ನು ಕೊಲ್ಲು” ಎಂದು ಹೇಳಿದನು. ಇಸ್ರೇಲರ ಯುವಕನು ಆ ಅಮಾಲೇಕ್ಯನನ್ನು ಕೊಂದುಬಿಟ್ಟನು. ದಾವೀದನು ಆ ಅಮಾಲೇಕ್ಯನಿಗೆ, “ನಿನ್ನ ಸಾವಿಗೆ ನೀನೇ ಕಾರಣನು.[b] ನೀನು ನಿನ್ನ ವಿರುದ್ಧವೇ ಸಾಕ್ಷಿ ಹೇಳಿದೆ. ‘ಯೆಹೋವನಿಂದ ಆರಿಸಲ್ಪಟ್ಟ ರಾಜನನ್ನು ನಾನು ಕೊಂದೆ’ ಎಂದು ನೀನೇ ಹೇಳಿದೆ” ಎಂದನು.

ಸೌಲನನ್ನು ಮತ್ತು ಯೋನಾತಾನನನ್ನು ಕುರಿತು ದಾವೀದನ ಶೋಕಗೀತೆ

17 ದಾವೀದನು, ಸೌಲನನ್ನು ಮತ್ತು ಅವನ ಮಗನಾದ ಯೋನಾತಾನನನ್ನು ಕುರಿತು ಒಂದು ಶೋಕಗೀತೆಯನ್ನು ಹಾಡಿದನು. 18 ಈ ಶೋಕಗೀತೆಯನ್ನು ಯೆಹೂದದ ಜನರಿಗೆ ಕಲಿಸಬೇಕೆಂದು ಅವನು ತನ್ನ ಜನರಿಗೆ ಹೇಳಿದನು. ಈ ಗೀತೆಗೆ “ಬಿಲ್ಲು” ಎಂದು ಹೆಸರು. ಈ ಗೀತೆಯನ್ನು ಯಾಷಾರ್ ಗ್ರಂಥದಲ್ಲಿ ಬರೆಯಲಾಗಿದೆ.

19 “ಇಸ್ರೇಲೇ, ನಿನ್ನ ಸೌಂದರ್ಯವೆಲ್ಲ ಉನ್ನತಸ್ಥಳಗಳಲ್ಲಿ ನಾಶವಾಯಿತು.
    ಬಲಶಾಲಿಗಳಾದ ಜನರೆಲ್ಲ ಬಿದ್ದು ಹೋದರು.
20 ಗತ್‌ನಲ್ಲಿ ಈ ಸುದ್ದಿಯನ್ನು ಹೇಳದಿರು.
    ಅಷ್ಕೆಲೋನಿನ ಬೀದಿಗಳಲ್ಲಿ ಇದನ್ನು ಸಾರದಿರು.
ಫಿಲಿಷ್ಟಿಯರ ಪಟ್ಟಣಗಳೆಲ್ಲಾ ಸಂತೋಷಪಡುವವು.
    ಆ ವಿದೇಶಿಯರ ಹೆಣ್ಣುಮಕ್ಕಳು ಉಲ್ಲಾಸಪಡುವರು.

21 “ಗಿಲ್ಬೋವದ ಪರ್ವತಗಳಲ್ಲಿ
    ಮಂಜೂ ಮಳೆಯೂ ಸುರಿಯದಿರಲಿ.
ಆ ಹೊಲಗಳಿಂದ ಕಾಣಿಕೆಯ ವಸ್ತುಗಳೂ ಬಾರದಿರಲಿ.
ಅಲ್ಲಿನ ಶಕ್ತಿಸಂಪನ್ನರ ಗುರಾಣಿಗಳೆಲ್ಲ ತುಕ್ಕುಹಿಡಿದಿವೆ.
    ಸೌಲನ ಗುರಾಣಿಯು ಎಣ್ಣೆಯಿಲ್ಲದೆ ಬಿದ್ದಿದೆ.[c]
22 ಯೋನಾತಾನನ ಬಿಲ್ಲು ತನ್ನ ಪಾಲಿನ ಶತ್ರುಗಳನ್ನು ಸಂಹರಿಸಿತು.
    ಸೌಲನ ಖಡ್ಗವು ತನ್ನ ಪಾಲಿನ ಶತ್ರುಗಳನ್ನು ಸಂಹರಿಸಿತು.
ಈಗ ಸತ್ತುಬಿದ್ದಿರುವ ಸೈನಿಕರ ರಕ್ತವನ್ನು ಅವರ ಆಯುಧಗಳು ಚಿಮ್ಮಿಸಿದವು.
    ಅವರ ಆಯುಧಗಳು ಬಲಿಷ್ಠರ ಕೊಬ್ಬನ್ನು ಕತ್ತರಿಸಿಹಾಕಿದವು.

23 “ಸೌಲನು ಮತ್ತು ಯೋನಾತಾನನು ಒಬ್ಬರನ್ನೊಬ್ಬರು ಪ್ರೀತಿಸಿದರು;
    ತಮ್ಮ ಪರಸ್ಪರ ಜೀವಿತದಲ್ಲಿ ಆನಂದಿಸಿದರು.
    ಸೌಲನು ಮತ್ತು ಯೋನಾತಾನನು ಮರಣದಲ್ಲೂ ಒಂದಾದರು.
ಅವರು ಹದ್ದುಗಳಿಗಿಂತ ವೇಗವಾಗಿ ಹೋದರು;
    ಸಿಂಹಗಳಿಗಿಂತ ಶಕ್ತಿಶಾಲಿಗಳಾಗಿದ್ದರು.
24 ಇಸ್ರೇಲಿನ ಕುವರಿಯರೇ, ಸೌಲನಿಗಾಗಿ ಗೋಳಾಡಿರಿ!
    ಸೌಲನು ನಿಮಗೆ ಕೆಂಪು ಬಟ್ಟೆಗಳನ್ನು ಉಡಿಸಿದನು.
    ಸೌಲನು ಸುವರ್ಣಾಭರಣಗಳನ್ನು ಬಟ್ಟೆಗಳ ಮೇಲೆ ತೊಡಿಸಿದನು.

25 “ಬಲಶಾಲಿಗಳಾದ ಜನರೆಲ್ಲ ಯುದ್ಧದಲ್ಲಿ ಮಡಿದರು.
    ಗಿಲ್ಬೋವ ಪರ್ವತಗಳಲ್ಲಿ ಯೋನಾತಾನನೂ ಮಡಿದನು.
26 ನನ್ನ ಸೋದರನಾದ ಯೋನಾತಾನನೇ, ನಿನಗಾಗಿ ನಾನು ದುಃಖಿಸುವೆ!
    ನಿನ್ನ ಗೆಳೆತನವು ನನಗೆ ಉಲ್ಲಾಸದಾಯಕವಾಗಿತ್ತು.
ನನ್ನ ಮೇಲಿನ ನಿನ್ನ ಪ್ರೀತಿಯು
    ಸ್ತ್ರೀಯರ ಪ್ರೀತಿಗಿಂತಲೂ ಅತಿಶಯವಾಗಿತ್ತು.
27 ಬಲಶಾಲಿಗಳಾದ ಜನರೆಲ್ಲ ಯುದ್ಧದಲ್ಲಿ ಮಡಿದರು.
    ಅವರ ಯುದ್ಧಾಯುಧಗಳೆಲ್ಲ ಹಾಳಾಗಿಹೋದವು.”

ಹೆಬ್ರೋನಿಗೆ ದಾವೀದನ ಆಗಮನ

ತರುವಾಯ ದಾವೀದನು ಯೆಹೋವನಲ್ಲಿ ಪ್ರಾರ್ಥಿಸಿ, “ಯೆಹೂದದ ಯಾವುದಾದರೂ ನಗರಕ್ಕೆ ನಾನು ಹೋಗಬಹುದೇ?” ಎಂದು ಕೇಳಿದನು.

“ಹೋಗು” ಎಂಬುದಾಗಿ ಯೆಹೋವನು ಹೇಳಿದನು.

“ನಾನು ಎಲ್ಲಿಗೆ ಹೋಗಲಿ?” ಎಂದು ದಾವೀದನು ಕೇಳಿದನು.

“ಹೆಬ್ರೋನಿಗೆ ಹೋಗು” ಎಂದು ಯೆಹೋವನು ಉತ್ತರಿಸಿದನು.

ಆದ್ದರಿಂದ ದಾವೀದನು ಅಲ್ಲಿಗೆ ಹೋದನು. ಅವನ ಇಬ್ಬರು ಹೆಂಡತಿಯರೂ ಅವನ ಜೊತೆಯಲ್ಲಿ ಹೋದರು. ಅವರು ಯಾರೆಂದರೆ: ಇಜ್ರೇಲಿನ ಅಹೀನೋವಮಳು ಮತ್ತು ಕರ್ಮೆಲಿನ ನಾಬಾಲನ ವಿಧವೆಯಾದ ಅಬೀಗೈಲಳು. ದಾವೀದನು ತನ್ನ ಜನರನ್ನು ಮತ್ತು ಅವರ ಕುಟುಂಬಗಳನ್ನು ಸಹ ಕರೆತಂದನು. ಅವರೆಲ್ಲರೂ ಹೆಬ್ರೋನ್ ಮತ್ತು ಅದರ ಸಮೀಪದ ನಗರಗಳಲ್ಲಿ ನೆಲೆಸಿದರು.

ಯೆಹೂದದ ಜನರು ಬಂದು ದಾವೀದನನ್ನು ಯೆಹೂದದ ರಾಜನನ್ನಾಗಿ ಅಭಿಷೇಕಿಸಿದರು. ಬಳಿಕ ಅವರು ದಾವೀದನಿಗೆ, “ಸೌಲನ ಸಮಾಧಿ ಮಾಡಿದವರು ಯಾಬೇಷ್ ಗಿಲ್ಯಾದಿನವರೇ” ಎಂದು ಹೇಳಿದರು.

ಯಾಬೇಷ್ ಗಿಲ್ಯಾದಿನ ಜನರಿಗೆ ದಾವೀದನು ಸಂದೇಶಕರನ್ನು ಕಳುಹಿಸಿ, “ಸೌಲನ ದೇಹದ ಬೂದಿಯನ್ನು[d] ಸಮಾಧಿಮಾಡುವುದರ ಮೂಲಕ ನೀವು ನಿಮ್ಮ ಒಡೆಯನಾದ ಸೌಲನಿಗೆ ಕರುಣೆ ತೋರಿದ್ದೀರಿ. ಅದಕ್ಕಾಗಿ ಯೆಹೋವನು ನಿಮ್ಮನ್ನು ಆಶೀರ್ವದಿಸಲಿ. ಆತನು ನಿಮಗೆ ಕೃಪಾಳುವೂ ನಂಬಿಗಸ್ತನೂ ಆಗಿರಲಿ. ನೀವು ಸೌಲನ ಬೂದಿಯನ್ನು ಸಮಾಧಿಮಾಡಿದ್ದರಿಂದ ನಾನೂ ನಿಮಗೆ ಕರುಣೆ ತೋರಿಸುವೆನು. ನಿಮ್ಮ ಒಡೆಯನಾದ ಸೌಲನು ಮರಣ ಹೊಂದಿರುವುದರಿಂದ, ಯೆಹೂದ ಕುಲದವರು ನನ್ನನ್ನು ತಮ್ಮ ರಾಜನನ್ನಾಗಿ ಅಭಿಷೇಕಿಸಿದ್ದಾರೆ. ಆದ್ದರಿಂದ ನೀವು ಬಲಿಷ್ಠರಾಗಿರಿ ಮತ್ತು ಧೈರ್ಯದಿಂದಿರಿ” ಎಂದು ಹೇಳಿಸಿದನು.

ಈಷ್ಬೋಶೆತನು ರಾಜನಾದನು

ಸೌಲನ ಸೈನ್ಯದಲ್ಲಿ ನೇರನ ಮಗನಾದ ಅಬ್ನೇರನು ಸೇನಾಧಿಪತಿಯಾಗಿದ್ದನು. ಸೌಲನ ಮಗನಾದ ಈಷ್ಬೋಶೆತನನ್ನು ಅಬ್ನೇರನು ಮಹನಯಿಮಿಗೆ ಕರೆದೊಯ್ದನು. ಆ ಸ್ಥಳದಲ್ಲಿ ಅಬ್ನೇರನು ಈಷ್ಬೋಶೆತನನ್ನು ಗಿಲ್ಯಾದ್, ಆಶೇರ್, ಇಜ್ರೇಲ್, ಎಫ್ರಾಯೀಮ್ ಮತ್ತು ಬೆನ್ಯಾಮೀನ್ ಜನರ ಮೇಲೆಯೂ ಮತ್ತು ಇಸ್ರೇಲಿಗೆಲ್ಲ ರಾಜನನ್ನಾಗಿ ಮಾಡಿದನು.

10 ಈಷ್ಬೋಶೆತನು ಸೌಲನ ಮಗ. ಈಷ್ಬೋಶೆತನು ಇಸ್ರೇಲನ್ನು ಆಳಲು ಆರಂಭಿಸಿದಾಗ ನಲವತ್ತು ವರ್ಷ ವಯಸ್ಸಿನವನಾಗಿದ್ದನು. ಅವನು ಎರಡು ವರ್ಷ ಆಳಿದನು. ಆದರೆ ಯೆಹೂದ ಕುಲದವರು ದಾವೀದನನ್ನು ಹಿಂಬಾಲಿಸಿದರು. 11 ದಾವೀದನು ಯೆಹೂದ ಕುಲದವರಿಗೆ ಹೆಬ್ರೋನಿನಲ್ಲಿ ಏಳು ವರ್ಷ ಆರು ತಿಂಗಳುಗಳ ಕಾಲ ರಾಜನಾಗಿದ್ದನು.

ಈಷ್ಬೋಶೆತನ ಜನರು ಮತ್ತು ದಾವೀದನ ಜನರು ಪರಸ್ಪರ ಹೋರಾಡಿದರು

12 ನೇರನ ಮಗನಾದ ಅಬ್ನೇರನೂ ಸೌಲನ ಮಗನಾದ ಈಷ್ಬೋಶೆತನ ಸೇವಕರೂ ಮಹನಯಿಮಯನ್ನು ಬಿಟ್ಟು ಗಿಬ್ಯೋನಿಗೆ ಹೋದರು. 13 ಚೆರೂಯಳ ಮಗನಾದ ಯೋವಾಬನು ಮತ್ತು ದಾವೀದನ ಸೈನಿಕರು ಸಹ ಗಿಬ್ಯೋನಿಗೆ ಹೋದರು. ಅವರು ಅಬ್ನೇರನನ್ನು ಮತ್ತು ಈಷ್ಬೋಶೆತನ ಸೇವಕರನ್ನು ಗಿಬ್ಯೋನಿನ ಕೆರೆಯ ಹತ್ತಿರ ಸಂಧಿಸಿದರು. ಅಬ್ನೇರನ ಗುಂಪಿನವರು ಕೆರೆಯ ಒಂದು ಕಡೆ ಕುಳಿತರು. ಯೋವಾಬನ ಗುಂಪಿನವರು ಕೆರೆಯ ಮತ್ತೊಂದು ಕಡೆ ಕುಳಿತರು.

14 ಅಬ್ನೇರನು ಯೋವಾಬನಿಗೆ, “ಯುವಜನರೆಲ್ಲ ಮೇಲೆದ್ದು, ಇಲ್ಲಿ ಹೋರಾಡಲಿ” ಎಂದು ಹೇಳಿದನು.

ಯೋವಾಬನು “ಆಗಲಿ, ಅವರು ಹೋರಾಡಲಿ” ಎಂದನು.

15 ನಂತರ ಯುವಜನರು ಮೇಲೆದ್ದರು. ಎರಡು ಗುಂಪಿನವರೂ ಹೋರಾಡುವುದಕ್ಕಾಗಿ ತಮ್ಮತಮ್ಮ ಜನರನ್ನು ಲೆಕ್ಕ ಹಾಕಿದರು. ಸೌಲನ ಮಗನಾದ ಈಷ್ಬೋಶೆತನಿಗಾಗಿ ಬೆನ್ಯಾಮೀನ್ ಕುಲದ ಹನ್ನೆರಡು ಜನರನ್ನು ಆರಿಸಲಾಯಿತು. ದಾವೀದನ ಸೇವಕರಲ್ಲಿ ಹನ್ನೆರಡು ಜನರನ್ನು ಆರಿಸಲಾಯಿತು. 16 ಪ್ರತಿಯೊಬ್ಬರೂ ತಮ್ಮ ಎದುರಾಳಿಯ ತಲೆಯನ್ನು ಹಿಡಿದುಕೊಂಡರು ಮತ್ತು ಖಡ್ಗದಿಂದ ಅವರ ಪಕ್ಕೆಗಳಿಗೆ ತಿವಿದರು. ಆದ್ದರಿಂದ ಅವರು ಒಟ್ಟಾಗಿ ಕೆಳಕ್ಕೆ ಬಿದ್ದರು. ಆದಕಾರಣವೇ ಆ ಸ್ಥಳವನ್ನು “ಹರಿತ ಕತ್ತಿಯ ಹೊಲ” ಎಂದು ಕರೆಯುತ್ತಾರೆ. ಈ ಸ್ಥಳವು ಗಿಬ್ಯೋನಿನಲ್ಲಿದೆ. 17 ಆ ದಿನ ಘೋರವಾದ ಯುದ್ಧ ಸಂಭವಿಸಿತು. ದಾವೀದನ ಸೇವಕರು ಅಬ್ನೇರನನ್ನು ಮತ್ತು ಇಸ್ರೇಲರನ್ನು ಸೋಲಿಸಿದರು.

ಅಸಾಹೇಲನನ್ನು ಅಬ್ನೇರನು ಕೊಲ್ಲುವನು

18 ಚೆರೂಯಳಿಗೆ ಯೋವಾಬ್, ಅಬೀಷೈ ಮತ್ತು ಅಸಾಹೇಲ್ ಎಂಬ ಮೂವರು ಮಕ್ಕಳಿದ್ದರು. ಅವರೆಲ್ಲಾ ಅಲ್ಲಿದ್ದರು. ಅಸಾಹೇಲನು ವೇಗದ ಓಟಗಾರ. ಅವನು ಕಾಡಿನ ಜಿಂಕೆಯಂತೆ ವೇಗವಾಗಿ ಓಡಬಲ್ಲವನಾಗಿದ್ದನು. 19 ಅಸಾಹೇಲನು ಯಾವ ಕಡೆಗೂ ತಿರುಗದೆ ನೇರವಾಗಿ ಅಬ್ನೇರನ ಕಡೆಗೆ ಹೋದನು. 20 ಅಬ್ನೇರನು ಹಿಂದಕ್ಕೆ ತಿರುಗಿ, “ನೀನು ಅಸಾಹೇಲನಲ್ಲವೇ?” ಎಂದು ಕೇಳಿದನು.

“ಹೌದು” ಎಂದು ಅಸಾಹೇಲನು ಹೇಳಿದನು.

21 ಆಗ ಅಬ್ನೇರನು ಅವನಿಗೆ, “ನೀನು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿ ಒಬ್ಬ ಯುವಕನನ್ನು ಹಿಡಿದುಕೊಂಡು ಅವನ ಬಳಿಯಿರುವ ಆಯುಧವನ್ನು ನಿನಗಾಗಿ ತೆಗೆದುಕೊ” ಎಂದು ಹೇಳಿದನು. ಆದರೆ ಅಸಾಹೇಲನು ಅಬ್ನೇರನನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಲಿಲ್ಲ.

22 ಅಬ್ನೇರನು ಮತ್ತೆ ಅಸಾಹೇಲನಿಗೆ, “ನನ್ನನ್ನು ಅಟ್ಟಿಸಿಕೊಂಡು ಬರಬೇಡ; ಇಲ್ಲವಾದರೆ ನಾನು ನಿನ್ನನ್ನು ಕೊಲ್ಲುತ್ತೇನೆ. ನಾನು ನಿನ್ನನ್ನು ಕೊಂದುಬಿಟ್ಟರೆ, ನಿನ್ನ ಸೋದರನಾದ ಯೋವಾಬನ ಮುಖವನ್ನು ನಾನು ಮತ್ತೆ ನೋಡಲಾಗುವುದಿಲ್ಲ” ಎಂದು ಹೇಳಿದನು.

23 ಆದರೂ ಅಸಾಹೇಲನು ಅಬ್ನೇರನನ್ನು ಅಟ್ಟಿಸಿಕೊಂಡೇ ಹೋದನು. ಆದ್ದರಿಂದ ಅಬ್ನೇರನು ತನ್ನ ಬರ್ಜಿಯ ಹಿಡಿಕೆಯನ್ನು ಹಿಡಿದುಕೊಂಡು ಅದನ್ನು ಅಸಾಹೇಲನ ಹೊಟ್ಟೆಗೆ ತಿವಿದನು. ಆ ಬರ್ಜಿಯು ಅಸಾಹೇಲನ ಹೊಟ್ಟೆಯೊಳಗೆ ಆಳವಾಗಿ ಚುಚ್ಚಿಕೊಂಡು ಅವನ ಬೆನ್ನಿನಿಂದ ಹಾಯ್ದು ಬಂದಿತು. ಅಸಾಹೇಲನು ಕೂಡಲೇ ಅಲ್ಲೇ ಸತ್ತುಬಿದ್ದನು.

ಅಬ್ನೇರನನ್ನು ಯೋವಾಬ್ ಮತ್ತು ಅಬೀಷೈ ಅಟ್ಟಿಸಿಕೊಂಡು ಹೋಗುವರು

ಅಸಾಹೇಲನ ದೇಹವು ನೆಲದ ಮೇಲೆ ಬಿದ್ದಿತ್ತು. ಜನರು ಅವನ ಬಳಿಗೆ ಹೋಗಿ ಅಲ್ಲಿಯೇ ನಿಂತರು. 24 ಆದರೆ ಯೋವಾಬ್ ಮತ್ತು ಅಬೀಷೈ ಅಬ್ನೇರನನ್ನು ಅಟ್ಟಿಸಿಕೊಂಡೇ ಹೋದರು. ಅವರು “ಅಮ್ಮಾ” ಬೆಟ್ಟಕ್ಕೆ ಬರುವಷ್ಟರಲ್ಲಿ ಸೂರ್ಯನು ಮುಳುಗಿದನು. (ಗಿಬ್ಯೋನಿನ ಮರಳುಗಾಡಿನ ಮಾರ್ಗದಲ್ಲಿರುವ ಗೀಯದ ಎದುರಿಗಿರುವುದೇ “ಅಮ್ಮಾ” ಬೆಟ್ಟ.) 25 ಬೆನ್ಯಾಮೀನ್ ಕುಲದವರೆಲ್ಲರು ಅಬ್ನೇರನ ಹತ್ತಿರಕ್ಕೆ ಬಂದರು. ಅವರೆಲ್ಲ ಬೆಟ್ಟದ ಮೇಲೆ ಒಟ್ಟಾಗಿ ನಿಂತರು.

26 ಅಬ್ನೇರನು ಯೋವಾಬನಿಗೆ, “ನಾವು ಎಂದೆಂದಿಗೂ ಯುದ್ಧ ಮಾಡಿ ಒಬ್ಬರನ್ನೊಬ್ಬರು ಕೊಲ್ಲಬೇಕೇ? ಇದು ಹಗೆತನದಲ್ಲಿ ಅಂತ್ಯಗೊಳ್ಳುತ್ತದೆಂಬುದು ನಿಜವಾಗಿಯೂ ನಿನಗೆ ತಿಳಿದಿದೆ. ತಮ್ಮ ಸೋದರರನ್ನೇ ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಲು ನಿನ್ನ ಜನರಿಗೆ ಹೇಳು” ಎಂದು ಕೂಗಿ ಹೇಳಿದನು.

27 ಆಗ ಯೋವಾಬನು, “ನೀನು ಒಳ್ಳೆಯ ಮಾತನ್ನೇ ಆಡಿರುವೆ. ನೀನು ಹೀಗೆ ಹೇಳದೆ ಇದ್ದಿದ್ದರೆ, ಯೆಹೋವನಾಣೆಗೂ ಜನರು ನಾಳೆ ಮುಂಜಾನೆವರೆಗೂ ತಮ್ಮ ಸೋದರರನ್ನೇ ಅಟ್ಟಿಸಿಕೊಂಡು ಹೋಗುತ್ತಿದ್ದರು” ಎಂದು ಹೇಳಿದನು. 28 ಆಗ ಯೋವಾಬನು ತುತ್ತೂರಿಯನ್ನು ಊದಿದನು. ಅವನ ಜನರು ಇಸ್ರೇಲರನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿದರು. ಅವರು ಇಸ್ರೇಲರ ವಿರುದ್ಧ ಹೋರಾಡಲು ಪ್ರಯತ್ನಿಸಲೇ ಇಲ್ಲ.

29 ಅಬ್ನೇರನು ತನ್ನ ಜನರೊಂದಿಗೆ ರಾತ್ರಿಯೆಲ್ಲಾ ಅರಾಬಾ ಕಣಿವೆಯಲ್ಲಿ ಪ್ರಯಾಣಮಾಡಿ, ಜೋರ್ಡನ್ ನದಿಯನ್ನು ದಾಟಿ ಮಹನಯಿಮಿಗೆ ಬಂದನು.

30 ಅಬ್ನೇರನನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿದ ನಂತರ ಯೋವಾಬನು ಹಿಂತಿರುಗಿ ಬಂದನು. ಯೋವಾಬನು ತನ್ನ ಜನರನ್ನೆಲ್ಲ ಒಟ್ಟಾಗಿ ಸೇರಿಸಿದಾಗ, ದಾವೀದನ ಭಟರಲ್ಲಿ ಹತ್ತೊಂಭತ್ತು ಮಂದಿ ಕಾಣಲಿಲ್ಲ. ಅಸಾಹೇಲನು ಸಹ ಕಾಣಲಿಲ್ಲ. 31 ಆದರೆ ಅಬ್ನೇರನ ಹಿಂಬಾಲಕರೂ ಬೆನ್ಯಾಮೀನ್ ಕುಟುಂಬದ ಗುಂಪಿನವರೂ ಆದ ಮುನ್ನೂರೈವತ್ತು ಜನರನ್ನು ದಾವೀದನ ಭಟರು ಕೊಂದಿದ್ದರು. 32 ದಾವೀದನ ಭಟರು ಅಸಾಹೇಲನ ಶವವನ್ನು ಬೆತ್ಲೆಹೇಮಿಗೆ ತಂದು, ಅವನ ತಂದೆಯ ಶ್ಮಶಾನ ಭೂಮಿಯಲ್ಲಿ ಸಮಾಧಿಮಾಡಿದರು.

ಯೋವಾಬನು ತನ್ನ ಜನರೊಂದಿಗೆ ರಾತ್ರಿಯೆಲ್ಲ ಪ್ರಯಾಣಮಾಡಿ ಹೆಬ್ರೋನನ್ನು ತಲುಪಿದಾಗ ಸೂರ್ಯೋದಯವಾಯಿತು.

ಲೂಕ 14:1-24

ಸಬ್ಬತ್‌ದಿನದಲ್ಲಿ ವಾಸಿಮಾಡುವುದು ಸರಿಯೋ?

14 ಒಂದು ಸಬ್ಬತ್ ದಿನದಲ್ಲಿ ಯೇಸು ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದನು. ಅಲ್ಲಿದ್ದ ಜನರೆಲ್ಲರೂ ಯೇಸುವನ್ನೇ ದೃಷ್ಟಿಸಿ ನೋಡುತ್ತಿದ್ದರು. ಯೇಸುವಿನ ಎದುರಿನಲ್ಲಿಯೇ ಜಲೋದರ[a] ರೋಗವುಳ್ಳ ಒಬ್ಬನನ್ನು ಇರಿಸಿದ್ದರು. ಯೇಸು ಫರಿಸಾಯರಿಗೂ ಧರ್ಮೋಪದೇಶಕರಿಗೂ, “ಸಬ್ಬತ್‌ದಿನದಲ್ಲಿ ವಾಸಿಮಾಡುವುದು ಸರಿಯೋ? ತಪ್ಪೋ?” ಎಂದು ಕೇಳಿದನು. ಅವರು ಉತ್ತರಕೊಡಲಿಲ್ಲ. ಆಗ ಯೇಸು ಆ ಮನುಷ್ಯನ ಕೈಮುಟ್ಟಿ ವಾಸಿಮಾಡಿ ಅವನನ್ನು ಕಳುಹಿಸಿಬಿಟ್ಟನು. ಯೇಸು ಫರಿಸಾಯರಿಗೂ ಧರ್ಮೋಪದೇಶಕರಿಗೂ, “ಸಬ್ಬತ್ ದಿನದಲ್ಲಿ ನಿಮ್ಮ ಮಗನಾಗಲಿ ನಿಮ್ಮ ದುಡಿಯುವ ಪಶುವಾಗಲಿ ಬಾವಿಗೆ ಬಿದ್ದರೆ, ಆ ಕೂಡಲೇ ನೀವು ಬಾವಿಯಿಂದ ಮೇಲಕ್ಕೆ ಎತ್ತಿ ಬದುಕಿಸುತ್ತೀರಿ ಎಂಬುದು ನಿಮಗೆ ಗೊತ್ತೇ ಇದೆ” ಎಂದು ಹೇಳಿದನು. ಫರಿಸಾಯರಾಗಲಿ ಧರ್ಮೋಪದೇಶಕರಾಗಲಿ ಯೇಸುವಿನ ಈ ಮಾತಿಗೆ ಉತ್ತರ ಕೊಡಲಾಗಲಿಲ್ಲ.

ನಿನ್ನನ್ನು ಪ್ರಮುಖನನ್ನಾಗಿ ಮಾಡಿಕೊಳ್ಳಬೇಡ

ಅತಿಥಿಗಳಾಗಿ ಬಂದಿದ್ದ ಕೆಲವರು ಊಟಕ್ಕೆ ಕುಳಿತುಕೊಳ್ಳಲು ಉತ್ತಮವಾದ ಸ್ಥಳಗಳನ್ನು ಆರಿಸಿಕೊಳ್ಳುತ್ತಿರುವುದನ್ನು ಕಂಡ ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬನು ನಿನ್ನನ್ನು ಮದುವೆಗೆ ಆಮಂತ್ರಿಸಿದರೆ, ಉನ್ನತವಾದ ಆಸನದಲ್ಲಿ ಕುಳಿತುಕೊಳ್ಳಬೇಡ. ಅವನು ನಿನಗಿಂತಲೂ ಪ್ರಮುಖನಾದವನನ್ನು ಆಮಂತ್ರಿಸಿದ್ದಿರಬಹುದು. ನೀನು ಉನ್ನತವಾದ ಸ್ಥಳದಲ್ಲಿ ಕುಳಿತುಕೊಂಡಿದ್ದರೆ, ನಿನಗೆ ಆಮಂತ್ರಣ ನೀಡಿರುವವನು ಬಂದು, ‘ಈ ಸ್ಥಳವನ್ನು ಇವನಿಗೆ ಬಿಟ್ಟುಕೊಡು’ ಎಂದು ನಿನಗೆ ಹೇಳಬಹುದು. ಆಗ ನೀನು ನಾಚಿಕೆಯಿಂದ ಕೊನೆಯ ಸ್ಥಳದಲ್ಲಿ ಕುಳಿತುಕೊಳ್ಳಬೇಕಾಗುವುದು.

10 “ಆದ್ದರಿಂದ ಒಬ್ಬನು ನಿನ್ನನ್ನು ಆಮಂತ್ರಿಸುವಾಗ, ಕೊನೆಯ ಸ್ಥಳದಲ್ಲಿ ಹೋಗಿ ಕುಳಿತುಕೊ. ಆಗ ನಿನ್ನನ್ನು ಆಮಂತ್ರಿಸಿದ ವ್ಯಕ್ತಿಯು ಬಂದು, ‘ಸ್ನೇಹಿತನೇ, ಉನ್ನತವಾದ ಈ ಸ್ಥಳದಲ್ಲಿ ಕುಳಿತುಕೊ!’ ಎಂದು ನಿನಗೆ ಹೇಳುವನು. ಆಗ ನೆರೆದು ಬಂದ ಅತಿಥಿಗಳೆಲ್ಲಾ ನಿನ್ನನ್ನು ಗೌರವಿಸುವರು. 11 ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು. ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನೂ ಹೆಚ್ಚಿಸಲ್ಪಡುವನು.”

ನಿಮಗೆ ಪ್ರತಿಫಲ ದೊರೆಯುವುದು

12 ಬಳಿಕ ಯೇಸು ತನ್ನನ್ನು ಆಮಂತ್ರಿಸಿದ ಫರಿಸಾಯನಿಗೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ನಿನ್ನ ಸ್ನೇಹಿತರನ್ನು, ಸಹೋದರರನ್ನು, ಸಂಬಂಧಿಕರನ್ನು ಮತ್ತು ಶ್ರೀಮಂತರಾದ ನೆರೆಯವರನ್ನು ಆಮಂತ್ರಿಸಿದರೆ, ಅವರೂ ನಿನ್ನನ್ನು ಮತ್ತೊಮ್ಮೆ ಊಟಕ್ಕೆ ಆಮಂತ್ರಿಸುವರು. ಆಗ ಅದೇ ನಿನಗೆ ಪ್ರತಿಫಲವಾಗುವುದು. 13 ಅದರ ಬದಲು, ನೀನು ಔತಣ ಮಾಡಿಸುವಾಗ ಬಡಜನರನ್ನು, ಕುಂಟರನ್ನು ಮತ್ತು ಕುರುಡರನ್ನು ಆಮಂತ್ರಿಸು. 14 ಆಗ ನಿನಗೆ ಆಶೀರ್ವಾದ ದೊರೆಯುವುದು. ಏಕೆಂದರೆ, ಈ ಜನರು ನಿನ್ನನ್ನು ಔತಣಕ್ಕೆ ಆಮಂತ್ರಿಸಲಾರರು. ಅವರಲ್ಲಿ ಏನೂ ಇಲ್ಲ. ಆದರೆ ನೀತಿವಂತರು ಜೀವಂತವಾಗಿ ಎದ್ದುಬರುವಾಗ, ನಿನಗೆ ಪ್ರತಿಫಲ ದೊರೆಯುವುದು” ಎಂದು ಹೇಳಿದನು.

ಔತಣಕೂಟದ ಸಾಮ್ಯ

(ಮತ್ತಾಯ 22:1-10)

15 ಯೇಸುವಿನೊಡನೆ ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನು ಈ ವಿಷಯಗಳನ್ನು ಕೇಳಿ ಯೇಸುವಿಗೆ, “ದೇವರ ರಾಜ್ಯದಲ್ಲಿ ಊಟಮಾಡುವವರೇ ಧನ್ಯರು!” ಎಂದನು.

16 ಯೇಸು ಅವನಿಗೆ ಹೇಳಿದ್ದೇನೆಂದರೆ: “ಒಬ್ಬನು ಒಂದು ದೊಡ್ಡ ಔತಣವನ್ನು ಮಾಡಿಸಿ ಅನೇಕ ಜನರನ್ನು ಆಮಂತ್ರಿಸಿದನು. 17 ಊಟದ ಸಮಯ ಬಂದಾಗ, ಅವನು ತನ್ನ ಸೇವಕನನ್ನು ಕಳುಹಿಸಿ, ‘ಬನ್ನಿರಿ! ಊಟ ಸಿದ್ಧವಾಗಿದೆ’ ಎಂದು ಅತಿಥಿಗಳಿಗೆ ತಿಳಿಸಿದನು. 18 ಆದರೆ ಎಲ್ಲಾ ಅತಿಥಿಗಳು ತಾವು ಬರಲಾಗುವುದಿಲ್ಲವೆಂದು ಹೇಳಿದರು. ಪ್ರತಿಯೊಬ್ಬನೂ ಒಂದೊಂದು ನೆವ ಹೇಳಿದನು. ಮೊದಲನೆಯವನು, ‘ನಾನು ಇದೀಗ ಒಂದು ಹೊಲವನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ಆದ್ದರಿಂದ ನಾನು ಹೋಗಿ ಅದನ್ನು ನೋಡಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು. 19 ಎರಡನೆಯವನು, ‘ನಾನು ಇದೀಗ ಐದು ಜೊತೆ ಎತ್ತುಗಳನ್ನು ಕ್ರಯಕ್ಕೆ ತೆಗೆದುಕೊಂಡಿದ್ದೇನೆ. ನಾನು ಹೋಗಿ ಅವುಗಳನ್ನು ಪರೀಕ್ಷಿಸಬೇಕು. ದಯಮಾಡಿ ಕ್ಷಮಿಸು’ ಎಂದು ಹೇಳಿದನು. 20 ಮೂರನೆಯವನು, ‘ನಾನು ಇದೀಗ ಮದುವೆಯಾಗಿದ್ದೇನೆ, ನಾನು ಬರಲಾರೆ’ ಎಂದನು.

21 “ಆದ್ದರಿಂದ ಆ ಸೇವಕನು ಹಿಂತಿರುಗಿ ಹೋಗಿ ಅವರು ಹೇಳಿದ್ದನ್ನೆಲ್ಲ ತನ್ನ ಯಜಮಾನನಿಗೆ ತಿಳಿಸಿದನು. ಆಗ ಯಜಮಾನನು ಬಹಳ ಕೋಪಗೊಂಡು ಆ ಸೇವಕನಿಗೆ, ‘ಈ ಊರಿನ ಬೀದಿಗಳಿಗೂ ಸಂದಿಗಳಿಗೂ ಬೇಗನೆ ಹೋಗಿ ಬಡವರನ್ನೂ ಅಂಗವಿಕಲರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು.

22 “ತರುವಾಯ ಆ ಸೇವಕನು ಬಂದು, ‘ಸ್ವಾಮೀ, ನೀನು ಹೇಳಿದಂತೆಯೇ ಮಾಡಿದೆನು. ಆದರೆ ನಮ್ಮಲ್ಲಿ ಇನ್ನೂ ಹೆಚ್ಚು ಜನರಿಗೆ ಸ್ಥಳವಿದೆ.’ ಎಂದು ಹೇಳಿದನು. 23 ಆಗ ಯಜಮಾನನು ಆ ಸೇವಕನಿಗೆ, ‘ಹೆದ್ದಾರಿಗಳಿಗೂ ರಸ್ತೆಗಳಿಗೂ ಹೋಗಿ, ಅಲ್ಲಿರುವ ಜನರನ್ನೆಲ್ಲಾ ಆಮಂತ್ರಿಸು. ನನ್ನ ಮನೆಯು ಜನರಿಂದ ತುಂಬಿಹೋಗಬೇಕೆಂಬುದೇ ನನ್ನ ಅಪೇಕ್ಷೆ. 24 ನಾನು ಮೊದಲನೆ ಸಲ ಆಮಂತ್ರಿಸಿದ ಆ ಜನರಲ್ಲಿ ಒಬ್ಬರಾದರೂ ನನ್ನೊಂದಿಗೆ ಊಟಮಾಡಕೂಡದು!’ ಎಂದು ಹೇಳಿದನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International