Old/New Testament
ದೇವರು ತನ್ನ ಶತ್ರುಗಳನ್ನು ಶಿಕ್ಷಿಸುತ್ತಾನೆ
34 ಎಲ್ಲಾ ಜನಾಂಗಗಳೇ, ಹತ್ತಿರ ಬಂದು ಕೇಳಿರಿ; ಜನಗಳೇ ಸ್ಪಷ್ಟವಾಗಿ ಕೇಳಿಸಿಕೊಳ್ಳಿರಿ. ಭೂಮಿಯೂ ಭೂಮಿಯ ಮೇಲಿರುವ ಸಮಸ್ತವೂ ಅವುಗಳಿಗೆ ಕಿವಿಗೊಡಬೇಕು. ಲೋಕವೂ ಅದರಲ್ಲಿರುವ ಸಮಸ್ತವೂ ಆಲಿಸಲಿ. 2 ಯೆಹೋವನು ಎಲ್ಲಾ ದೇಶಗಳವರ ಮೇಲೆಯೂ ಅವುಗಳ ಸೈನ್ಯದ ಮೇಲೆಯೂ ಕೋಪಗೊಂಡಿದ್ದಾನೆ. ಯೆಹೋವನು ಅವರೆಲ್ಲರನ್ನು ನಾಶಮಾಡುತ್ತಾನೆ. ಅವರೆಲ್ಲರೂ ಕೊಲ್ಲಲ್ಪಡುವಂತೆ ಮಾಡುತ್ತಾನೆ. 3 ಅವರ ಹೆಣಗಳು ಹೊರಗೆ ಬಿಸಾಡಲ್ಪಡುವವು. ದುರ್ವಾಸನೆಯು ಹರಡುವದು, ರಕ್ತವು ಪರ್ವತದಿಂದ ಹರಿಯುವುದು. 4 ಆಕಾಶವು ಸುರುಳಿಯಂತೆ ಮುಚ್ಚಿಹೋಗುವದು. ನಕ್ಷತ್ರಗಳು ದ್ರಾಕ್ಷಾಲತೆಯ ಒಣಗಿದ ಎಲೆಗಳಂತೆಯೂ ಅಂಜೂರದ ಒಣಗಿದ ಎಲೆಗಳಂತೆಯೂ ಉದುರಿಬೀಳುವವು. ಆಕಾಶದಲ್ಲಿರುವ ಎಲ್ಲಾ ನಕ್ಷತ್ರಗಳು ಕರಗಿಹೋಗುವವು. 5 “ಆಕಾಶದಲ್ಲಿರುವ ನನ್ನ ಖಡ್ಗವು ರಕ್ತದಲ್ಲಿ ಮುಳುಗಿದಾಗ ಇವೆಲ್ಲಾ ಸಂಭವಿಸುವದು” ಎಂದು ಯೆಹೋವನು ಅನ್ನುತ್ತಾನೆ.
ಯೆಹೋವನ ಖಡ್ಗವು ಎದೋಮನ್ನು ತುಂಡರಿಸುವುದು. ಆತನು ಆ ಜನರನ್ನು ದೋಷಿಗಳೆಂದು ನ್ಯಾಯತೀರಿಸಿದ್ದಾನೆ. ಆದ್ದರಿಂದ ಅವರು ಸಾಯಬೇಕು. 6 ಆತನು ಬೊಚ್ರದಲ್ಲಿ ಮತ್ತು ಎದೋಮಿನಲ್ಲಿ ಕೊಲ್ಲುವ ಸಮಯವನ್ನು ನಿರ್ಧರಿಸಿರುತ್ತಾನೆ. ಯೆಹೋವನ ಖಡ್ಗವು ವಪೆಯಿಂದಲೂ, ಕುರಿಹೋತಗಳ ರಕ್ತದಿಂದಲೂ, ಟಗರುಗಳ ಪಿತ್ತಕೋಶದ ಕೊಬ್ಬಿನಿಂದಲೂ ರಕ್ತಭರಿತವಾಗಿದೆ. 7 ಟಗರುಗಳು, ದನಕುರಿಗಳು ಮತ್ತು ಬಲವಾದ ಹೋರಿಗಳು ಕೊಲ್ಲಲ್ಪಡುವವು. ಭೂಮಿಯು ಅವುಗಳ ರಕ್ತದಿಂದ ತುಂಬಿಹೋಗುವದು. ಅಲ್ಲಿನ ಧೂಳು ಅವುಗಳ ಕೊಬ್ಬಿನಿಂದ ಆವೃತವಾಗಿದೆ.
8 ಇದು ನೆರವೇರುವುದು, ಯಾಕೆಂದರೆ ದೇವರು ದಂಡನೆಗಾಗಿ ಸಮಯವನ್ನು ಆರಿಸಿಕೊಂಡಿದ್ದಾನೆ. ಜನರು ಚೀಯೋನಿನಲ್ಲಿ ಮಾಡಿದ ಕಾರ್ಯಗಳಿಗೆ ದಂಡನೆಯನ್ನು ಅನುಭವಿಸುವುದಕ್ಕಾಗಿ ಆತನು ಒಂದು ವರ್ಷವನ್ನು ಆರಿಸಿಕೊಂಡಿದ್ದಾನೆ. 9 ಎದೋಮಿನ ನದಿಗಳು ಕರಗಿರುವ ರಾಳದಂತಿರುವದು. ಅದರ ನೆಲವು ಸುಡುವ ಗಂಧಕದಂತಿರುವದು. 10 ಬೆಂಕಿಯು ಹಗಲಿರುಳು ಉರಿಯುವದು. ಯಾರಿಗೂ ಅದನ್ನು ನಂದಿಸಲು ಸಾಧ್ಯವಿಲ್ಲ. ಎದೋಮಿನಿಂದ ಹೊಗೆಯು ಯಾವಾಗಲೂ ಮೇಲಕ್ಕೇರುವದು. ಆ ದೇಶವು ನಿತ್ಯಕಾಲಕ್ಕೂ ನಾಶವಾಗಿ ಹೋಗುವದು. ಆ ದೇಶದೊಳಗೆ ಯಾರೂ ಪ್ರಯಾಣ ಮಾಡುವದಿಲ್ಲ. 11 ಪಕ್ಷಿಗಳು ಮತ್ತು ಚಿಕ್ಕಪ್ರಾಣಿಗಳೂ ಅದರಲ್ಲಿ ವಾಸಿಸುವವು. ಗೂಬೆಗಳೂ ಕಾಗೆಗಳೂ ಅಲ್ಲಿ ವಾಸಿಸುವವು. ಅದು “ಬೆಂಗಾಡಿನ ಮರುಭೂಮಿ” ಎಂದು ಕರೆಯಲ್ಪಡುವದು. 12 ಅದರ ನಾಯಕರೂ ಸ್ವತಂತ್ರರೂ[a] ಇಲ್ಲವಾಗುವರು; ಯಾಕೆಂದರೆ ಅವರಿಗೆ ಆಳಲಿಕ್ಕೆ ಅಲ್ಲಿ ಏನೂ ಇರದು.
13 ಮುಳ್ಳುಗಿಡಗಳು ಅಲ್ಲಿಯ ಸುಂದರವಾದ ಬಂಗಲೆಗಳಲ್ಲಿ ಬೆಳೆಯುವವು. ಕಾಡುನಾಯಿಗಳೂ ಗೂಬೆಗಳೂ ಆ ಮನೆಗಳಲ್ಲಿ ವಾಸಿಸುವವು. ಕಾಡುಪ್ರಾಣಿಗಳು ಅದನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುವವು. ಅಲ್ಲಿ ಬೆಳೆಯುವ ಎತ್ತರವಾದ ಹುಲ್ಲುಗಳಲ್ಲಿ ಉಷ್ಟ್ರಪಕ್ಷಿಗಳು ವಾಸಮಾಡುವವು. 14 ಕಾಡುಬೆಕ್ಕುಗಳು ಮತ್ತು ಕತ್ತೆಕಿರುಬಗಳು ಅಲ್ಲಿ ವಾಸಮಾಡುವವು. ಕಾಡುಹೋತಗಳು ತಮ್ಮ ಸ್ನೇಹಿತರನ್ನು ಕರೆಯುವವು. ರಾತ್ರಿಪ್ರಾಣಿಗಳು ಅಲ್ಲಿ ವಿಶ್ರಮಿಸಿಕೊಳ್ಳುವವು. 15 ಅಲ್ಲಿ ಹಾವುಗಳು ತಮ್ಮ ಮನೆಗಳನ್ನು ಮಾಡಿಕೊಳ್ಳುವವು. ಅಲ್ಲಿಯೇ ಮೊಟ್ಟೆಗಳನ್ನಿಡುವವು, ಮೊಟ್ಟೆಗಳು ಒಡೆದಾಗ ಸಣ್ಣ ಹಾವುಮರಿಗಳು ಆ ಕತ್ತಲೆಯ ಜಾಗದಲ್ಲಿ ಹರಿದಾಡುವವು. ಹೆಂಗಸರು ಪರಸ್ಪರ ಸಂಧಿಸಿ ಮಾತನಾಡುವಂತೆ ಸತ್ತಪ್ರಾಣಿಗಳ ಮಾಂಸವನ್ನು ತಿನ್ನುವ ಪಕ್ಷಿಗಳು ಒಟ್ಟಾಗಿ ಸೇರುವವು.
16 ಯೆಹೋವನ ಸುರುಳಿಯನ್ನು ನೋಡಿರಿ. ಅಲ್ಲಿ ಬರೆದಿರುವದನ್ನು ಓದಿರಿ. ಅದರಲ್ಲಿ ಯಾವದೂ ಕಳೆದುಹೋಗಿಲ್ಲ. ಆ ಪ್ರಾಣಿಗಳು ಒಟ್ಟಾಗಿ ವಾಸಿಸುವವೆಂದು ಆ ಸುರುಳಿಯಲ್ಲಿ ಬರೆದದೆ. ಅವುಗಳನ್ನು ಒಟ್ಟಾಗಿ ಸೇರಿಸುತ್ತೇನೆಂದು ದೇವರು ಹೇಳಿದ್ದಾನೆ. ಆದ್ದರಿಂದ ಯೆಹೋವನ ಆತ್ಮವು ಅವುಗಳನ್ನು ಒಟ್ಟಾಗಿ ಸೇರಿಸುವದು. 17 ಅವುಗಳಿಗೆ ಮಾಡತಕ್ಕದ್ದನ್ನು ದೇವರು ತೀರ್ಮಾನಿಸಿದ್ದಾನೆ. ಆತನು ಅವುಗಳಿಗೆ ಒಂದು ಸ್ಥಳವನ್ನು ಆರಿಸಿದ್ದಾನೆ. ಆತನು ಮೇರೆಯನ್ನು ನಿರ್ಮಿಸಿ ಅವುಗಳ ದೇಶವನ್ನು ತೋರಿಸಿದ್ದಾನೆ. ಹೀಗೆ ಆ ಪ್ರಾಣಿಗಳು ದೇಶವನ್ನು ನಿತ್ಯಕಾಲಕ್ಕೂ ತಮ್ಮದಾಗಿ ಮಾಡಿಕೊಳ್ಳುವವು. ವರ್ಷವರ್ಷವೂ ಅವುಗಳು ಅಲ್ಲಿಯೇ ವಾಸಮಾಡುವವು.
ದೇವರು ತನ್ನ ಜನರನ್ನು ಸಂತೈಸುವನು
35 ಮರಭೂಮಿಯೂ ಒಣನೆಲವೂ ಬಹಳವಾಗಿ ಸಂತೋಷಿಸುವದು. ಅದು ಹರ್ಷಿಸುತ್ತಾ ಪುಷ್ಪದಂತೆ ಫಲಿಸುವುದು. 2 ಮರುಭೂಮಿಯು ಹರ್ಷದಿಂದ ಅರಳಿದ ಹೂಗಳಿಂದ ತುಂಬಿಹೋಗುವುದು. ಸಂತೋಷದಿಂದ, ಕುಣಿದಾಡುವದೋ ಎಂಬಂತೆ ತೋರುವದು. ಲೆಬನೋನಿನ ಅರಣ್ಯದಂತೆಯೂ ಕರ್ಮೆಲ್ ಬೆಟ್ಟದಂತೆಯೂ ಶಾರೋನಿನ ಕಣಿವೆಯಂತೆಯೂ ಮನೋಹರವಾಗಿರುವದು. ಇವೆಲ್ಲಾ ನೆರವೇರುವದು ಯಾಕೆಂದರೆ ಎಲ್ಲಾ ಜನರು ಯೆಹೋವನ ಮಹಿಮೆಯನ್ನು ನಮ್ಮ ದೇವರ ಪ್ರಭಾವವನ್ನೂ ಕಾಣುವರು.
3 ಬಲಹೀನವಾದ ಕೈಗಳನ್ನು ಬಲಗೊಳಿಸಿರಿ, ನಡುಗುವ ಮೊಣಕಾಲುಗಳನ್ನು ಬಲಗೊಳಿಸಿರಿ. 4 ಜನರು ಭಯದಿಂದ ಗಲಿಬಿಲಿಗೊಂಡಿದ್ದಾರೆ. ಅವರಿಗೆ ಹೀಗೆ ಹೇಳು, “ಧೈರ್ಯಗೊಳ್ಳಿರಿ, ಭಯಪಡಬೇಡಿ.” ಇಗೋ, ನಿಮ್ಮ ದೇವರು ಬಂದು ನಿಮ್ಮ ವೈರಿಗಳನ್ನು ಶಿಕ್ಷಿಸುವನು. ಆತನು ಬಂದು ನಿಮಗೆ ಪ್ರತಿಫಲವನ್ನು ಕೊಡುವನು. ಯೆಹೋವನು ನಿಮ್ಮನ್ನು ಕಾಪಾಡುತ್ತಾನೆ. 5 ಆಗ ಕುರುಡರಿಗೆ ದೃಷ್ಟಿ ಬರುವದು. ಅವರ ಕಣ್ಣುಗಳು ತೆರೆಯಲ್ಪಡುವವು. ಆಗ ಕಿವುಡರು ಕೇಳಿಸಿಕೊಳ್ಳುವರು. ಅವರ ಕಿವಿಗಳು ತೆರೆಯಲ್ಪಡುವವು. 6 ಕುಂಟರು ಜಿಂಕೆಯಂತೆ ಜಿಗಿದಾಡುವರು. ಮಾತನಾಡಲು ಸಾಧ್ಯವಾಗದ ಜನರು ಆಗ ಹರ್ಷಗಾನವನ್ನು ಹಾಡುವರು. ಯಾವಾಗ ಮರುಭೂಮಿಯಲ್ಲಿ ತೊರೆಯ ನೀರು ಹರಿಯುವದೋ ಆಗ ಇವೆಲ್ಲಾ ಜರಗುವವು. ಒಣಭೂಮಿಯಲ್ಲಿ ಒರತೆಯ ನೀರು ಹರಿಯುವದು. 7 ಆಗ ಜನರು ಬಿಸುಲ್ಗುದುರೆಯನ್ನು ನೋಡಿ ನೀರು ಎಂದು ಭಾವಿಸುವರು. ಆದರೆ ಆಗ ನೀರಿನ ಕೊಳಗಳೇ ಇರುವವು. ಬೆಂಗಾಡಿನಲ್ಲಿ ಬಾವಿಗಳಿರುವವು. ನೆಲದೊಳಗಿಂದ ನೀರು ಉಕ್ಕುವುದು. ಒಂದು ಕಾಲದಲ್ಲಿ ಕಾಡುಪ್ರಾಣಿಗಳು ವಾಸವಾಗಿದ್ದ ಸ್ಥಳದಲ್ಲಿ ಎತ್ತರವಾದ ನೀರವಂಜಿಗಳು ಬೆಳೆಯುವವು.
8 ಆ ಸಮಯದಲ್ಲಿ ಅಲ್ಲಿ ಮಾರ್ಗವಿರುವದು. ಆ ಹೆದ್ದಾರಿಯು “ಪರಿಶುದ್ಧ” ಮಾರ್ಗವೆಂದು ಕರೆಯಲ್ಪಡುವದು. ದುಷ್ಟಜನರಿಗೆ ಆ ಮಾರ್ಗದಲ್ಲಿ ನಡೆಯಲು ಅನುಮತಿ ಇರುವದಿಲ್ಲ. ಮೂರ್ಖರು ಆ ಮಾರ್ಗದಲ್ಲಿ ನಡೆಯರು. ಆ ಮಾರ್ಗದಲ್ಲಿ ಒಳ್ಳೆಯ ಜನರು ಮಾತ್ರ ನಡೆಯುವರು. 9 ಆ ಮಾರ್ಗದಲ್ಲಿ ಅಪಾಯವಿರುವದಿಲ್ಲ. ಜನರಿಗೆ ಹಾನಿಮಾಡಲು ಸಿಂಹಗಳಾಗಲಿ ಕ್ರೂರಜಂತುಗಳಾಗಲಿ ಆ ಮಾರ್ಗದಲ್ಲಿರುವದಿಲ್ಲ. ದೇವರು ರಕ್ಷಿಸುವ ಜನರಿಗೆ ಮಾತ್ರವೇ ಆ ಮಾರ್ಗವಿರುವುದು.
10 ಯೆಹೋವನು ತನ್ನ ಜನರನ್ನು ಸ್ವತಂತ್ರರನ್ನಾಗಿ ಮಾಡುತ್ತಾನೆ. ಆ ಜನರು ಆತನ ಬಳಿಗೆ ಹಿಂದಿರುಗಿ ಬರುವರು. ಚೀಯೋನಿಗೆ ಜನರು ಬರುವಾಗ ಅವರು ಸಂತೋಷಭರಿತರಾಗುವರು. ಅವರು ನಿತ್ಯವೂ ಸಂತೋಷವಾಗಿರುವರು. ತಲೆಯ ಮೇಲಿನ ಕಿರೀಟದಂತೆ ಅವರ ಸಂತೋಷವಿರುವದು. ಅವರಲ್ಲಿ ಹರ್ಷವೂ ಸಂತಸವೂ ಸಂಪೂರ್ಣವಾಗಿ ತುಂಬಿರುವವು. ದುಃಖವೂ ಚಿಂತೆಯೂ ಬಹು ದೂರವಾಗಿರುವವು.
ಅಶ್ಶೂರರು ಯೆಹೂದದ ಪ್ರವೇಶ ಮಾಡುವರು
36 ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೇ ವರ್ಷದಲ್ಲಿ ಅಶ್ಶೂರದ ಅರಸನಾದ ಸನ್ಹೇರೀಬನು ಯೆಹೂದದಲ್ಲಿ ಕೋಟೆಗಳನ್ನು ಹೊಂದಿದ್ದ ಎಲ್ಲಾ ಪಟ್ಟಣಗಳ ವಿರುದ್ಧ ದಂಡೆತ್ತಿ ಬಂದು ಅವುಗಳನ್ನೆಲ್ಲ ಸೋಲಿಸಿದನು. 2 ಅಶ್ಶೂರದ ರಾಜನಾದ ಸನ್ಹೇರೀಬನು ತನ್ನ ಸೇನಾದಂಡನಾಯಕನನ್ನು ಒಂದು ದೊಡ್ಡ ಸೈನ್ಯದೊಡನೆ ಜೆರುಸಲೇಮಿನಲ್ಲಿದ್ದ ಅರಸನಾದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಸೇನಾದಂಡನಾಯಕ ತನ್ನ ಸೈನ್ಯದೊಡನೆ ಲಾಕೀಷಿನಿಂದ ಜೆರುಸಲೇಮಿಗೆ ಹೊರಟನು. ಅವರು ಮೇಲಿನ ಕೊಳದ ಬಳಿಯಲ್ಲಿರುವ ನೀರುಕಾಲುವೆಯ ಬಳಿ ನಿಂತರು. ಮೇಲಿನ ಕೊಳವು ಅಗಸರ ಬಯಲಿಗೆ ಹೋಗುವ ಮಾರ್ಗದಲ್ಲಿದೆ.
3 ಜೆರುಸಲೇಮಿನಿಂದ ಮೂರು ಮಂದಿ ಸೇನಾದಂಡನಾಯಕನೊಂದಿಗೆ ಮಾತನಾಡಲು ಹೊರಟರು. ಅವರು ಯಾರೆಂದರೆ ಹಿಲ್ಕೀಯನ ಮಗನಾದ ಎಲ್ಯಾಕೀಮ್, ಆಸಾಫನ ಮಗನಾದ ಯೋವ ಮತ್ತು ಶೆಬ್ನ. ಎಲ್ಯಾಕೀಮನು ಅರಮನೆಯ ಆಡಳಿತಗಾರನಾಗಿದ್ದನು; ಯೋವನು ದಾಖಲೆಕಾರನಾಗಿದ್ದನು; ಶೆಬ್ನ ಅರಮನೆಯ ಕಾರ್ಯದರ್ಶಿಯಾಗಿದ್ದನು.
4 ಸೇನಾದಂಡನಾಯಕನು ಅವರಿಗೆ, “ಮಹಾರಾಜನಾದ ಅಶ್ಶೂರದ ಅರಸನು ಹಿಜ್ಕೀಯನಿಗೆ ಹೇಳುವುದನ್ನು ನೀವು ಹೋಗಿ ಅವನಿಗೆ ತಿಳಿಸಿರಿ. ಅವನು ಹೇಳುವುದೇನೆಂದರೆ:
“‘ನೀನು ಯಾವುದರ ಮೇಲೆ ಭರವಸವಿಟ್ಟಿರುವೆ? 5 ನೀನು ನಿನ್ನ ಶಕ್ತಿಯಲ್ಲಿಯೂ ಯುದ್ಧದ ತಂತ್ರೋಪಾಯಗಳ ಮೇಲೆಯೂ ಭರವಸವಿಟ್ಟಿದ್ದರೆ ಅವು ಕೇವಲ ನಿಷ್ಪ್ರಯೋಜಕವಾಗಿವೆ; ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಿರುವೆ? ನೀನು ನನ್ನ ವಿರುದ್ಧ ದಂಗೆ ಏಳಬೇಕಾದರೆ ಯಾರ ಮೇಲೆ ಭರವಸವಿಟ್ಟಿರುವೆ? 6 ಈಜಿಪ್ಟು ನಿನಗೆ ಸಹಾಯ ಮಾಡುವುದೆಂದು ನಂಬಿರುವಿಯಾ? ಈಜಿಪ್ಟು ಒಂದು ಮುರಿದ ದಂಟು. ಅದರ ಮೇಲೆ ನೀನು ಭಾರಹಾಕಿದರೆ ಅದು ನಿನ್ನ ಅಂಗೈಯಲ್ಲಿ ರಂಧ್ರಮಾಡುವುದು. ಈಜಿಪ್ಟಿನ ರಾಜನಾದ ಫರೋಹನ ಸಹಾಯಕ್ಕಾಗಿ ಆಶ್ರಯಿಸಿಕೊಂಡ ಯಾವ ಜನರೂ ಅವನಲ್ಲಿ ಭರವಸೆ ಇಡಲಾಗದು.
7 “‘ಒಂದುವೇಳೆ ನೀವು, “ನಾವು ನಮ್ಮ ದೇವರಾದ ಯೆಹೋವನ ಮೇಲೆ ಭರವಸವಿಟ್ಟಿದ್ದೇವೆ” ಎಂದು ಹೇಳಬಹುದು. ಆದರೆ ಜನರು ಯೆಹೋವನನ್ನು ಆರಾಧಿಸುತ್ತಿದ್ದ ವೇದಿಕೆಗಳನ್ನೂ ಎತ್ತರವಾದ ಸ್ಥಳಗಳನ್ನೂ ಹಿಜ್ಕೀಯನು ನಾಶಮಾಡಿದ್ದಾನೆ. ಅಲ್ಲದೆ, ಯೆಹೂದ ಮತ್ತು ಜೆರುಸಲೇಮಿನಲ್ಲಿರುವ ಜನರಿಗೆ, “ನೀವು ಜೆರುಸಲೇಮಿನಲ್ಲಿರುವ ಯಜ್ಞವೇದಿಕೆಯಲ್ಲಿಯೇ ಆರಾಧಿಸಬೇಕು” ಎಂದು ಆಜ್ಞಾಪಿಸಿರುವುದು ನನಗೆ ಗೊತ್ತಿದೆ.
8 “‘ನೀವು ನನ್ನ ಒಡೆಯನಾದ ಅರಸನೊಂದಿಗೆ ಯುದ್ಧಮಾಡುವ ಆಲೋಚನೆಯನ್ನು ಇನ್ನೂ ಹೊಂದಿದ್ದರೆ, ನಿಮ್ಮೊಂದಿಗೆ ಈ ಒಪ್ಪಂದವನ್ನು ಮಾಡಿಕೊಳ್ಳುವೆನು. ಯುದ್ಧಕ್ಕೆ ಬರಲು ನಿಮ್ಮಲ್ಲಿ ಸಾಕಷ್ಟು ಸೈನಿಕರಿದ್ದಾರೆ. ನಾನು ನಿಮಗೆ ಎರಡುಸಾವಿರ ಕುದುರೆಗಳನ್ನು ಕೊಡುವುದಾಗಿ ವಾಗ್ದಾನ ಮಾಡುತ್ತೇನೆ. 9 ಹೀಗಿದ್ದರೂ ನನ್ನ ಒಡೆಯನ ಸೈನ್ಯಾಧಿಕಾರಿಗಳಲ್ಲಿ ಕನಿಷ್ಠನಾದವನನ್ನು ಸೋಲಿಸಲು ನಿಮ್ಮಿಂದಾಗದು. ಆದ್ದರಿಂದ ನೀವು ಈಜಿಪ್ಟಿನವರ ಅಶ್ವದಳದ ಮೇಲೆ ಯಾಕೆ ಭರವಸವಿಡುತ್ತೀರಿ?
10 “‘ಈಗ ನಾನು ಯೆಹೋವನ ಸಹಾಯವಿಲ್ಲದೆ ಈ ದೇಶವನ್ನು ನಾಶಮಾಡಲು ಬಂದೆನೆಂದು ನೆನಸುತ್ತೀರೋ? “ಎದ್ದುಹೋಗಿ ಈ ದೇಶದ ವಿರುದ್ಧ ಯುದ್ಧ ನಡೆಸಿ ಅದನ್ನು ಸಂಪೂರ್ಣವಾಗಿ ನಾಶಮಾಡು” ಎಂದು ಯೆಹೋವನು ನನಗೆ ಹೇಳಿದ್ದಾನೆ.’”
11 ಆಗ ಎಲ್ಯಾಕೀಮ್, ಶೆಬ್ನ ಮತ್ತು ಯೋವ ಎಂಬವರು ಆ ಸೇನಾದಂಡನಾಯಕನಿಗೆ, “ದಯಮಾಡಿ ನಮ್ಮೊಂದಿಗೆ ಅರಮೇಯಿಕ್ ಭಾಷೆಯಲ್ಲಿ ಮಾತನಾಡು. ಆ ಭಾಷೆಯು ನಮಗೆ ಗೊತ್ತು. ಯೆಹೂದದ ಭಾಷೆಯಲ್ಲಿ ನಮ್ಮೊಂದಿಗೆ ಮಾತನಾಡಬೇಡ. ನೀವು ನಮ್ಮ ಭಾಷೆಯಲ್ಲಿ ಮಾತನಾಡಿದರೆ ಗೋಡೆಯ ಮೇಲಿರುವ ನಮ್ಮ ಜನರು ತಿಳಿದುಕೊಳ್ಳುವರು” ಎಂದು ಹೇಳಿದರು.
12 ಸೇನಾದಂಡನಾಯಕನು ಅದಕ್ಕುತ್ತರವಾಗಿ, “ನನ್ನ ಒಡೆಯನು ನಿಮ್ಮೊಂದಿಗೂ ನಿಮ್ಮ ಅರಸನೊಂದಿಗೂ ಮಾತ್ರ ಮಾತನಾಡಲು ಕಳುಹಿಸಲಿಲ್ಲ. ನನ್ನ ಒಡೆಯನು ಕೋಟೆಗೋಡೆಯ ಮೇಲೆ ಕುಳಿತಿರುವ ಜನರೊಂದಿಗೆ ಮಾತಾಡಲು ಕಳುಹಿಸಿದ್ದಾನೆ. ಆ ಜನರಿಗೆ ಊಟಕ್ಕೆ ಆಹಾರ, ಕುಡಿಯಲು ನೀರು ದೊರಕುವದಿಲ್ಲ. ಅವರು ನಿಮ್ಮ ಹಾಗೆ ತಮ್ಮ ಸ್ವಂತ ಮಲವನ್ನು ತಿಂದು ಮೂತ್ರವನ್ನು ಕುಡಿಯುವರು” ಎಂದು ಹೇಳಿದನು.
13 ಬಳಿಕ ಸೇನಾದಂಡನಾಯಕನು ಯೆಹೂದ್ಯ ಭಾಷೆಯಲ್ಲಿ ಗಟ್ಟಿಯಾಗಿ, 14 “ಮಹಾರಾಜನಾಗಿರುವ ಅಶ್ಶೂರದ ಅರಸನ ಮಾತುಗಳನ್ನು ಕೇಳಿರಿ:
“‘ಹಿಜ್ಕೀಯನು ನಿಮ್ಮನ್ನು ಮೋಸಪಡಿಸದಂತೆ ನೋಡಿಕೊಳ್ಳಿರಿ. ಅವನು ನಮ್ಮ ಸಾಮರ್ಥ್ಯದಿಂದ ನಿಮ್ಮನ್ನು ರಕ್ಷಿಸಲಾರನು. 15 “ಯೆಹೋವನನ್ನು ನಂಬಿರಿ. ಆತನು ನಮ್ಮನ್ನು ರಕ್ಷಿಸುವನು. ಅಶ್ಶೂರದ ಅರಸನು ನಮ್ಮ ಪಟ್ಟಣವನ್ನು ಸೋಲಿಸಲು ಬಿಡುವದಿಲ್ಲ” ಎಂದು ಹಿಜ್ಕೀಯನು ಹೇಳಿದರೆ ಅವನನ್ನು ನಂಬಬೇಡಿ.
16 “‘ಹಿಜ್ಕೀಯನ ಮಾತುಗಳನ್ನು ಕೇಳಬೇಡಿ. ಅಶ್ಶೂರದ ಅರಸನ ಮಾತುಗಳಿಗೆ ಕಿವಿಗೊಡಿರಿ. ಅವನು ಹೇಳುವುದೇನೆಂದರೆ: “ನೀವು ನನ್ನೊಡನೆ ಒಪ್ಪಂದ ಮಾಡಿಕೊಂಡು ನಿಮ್ಮ ನಗರದಿಂದ ಹೊರಗೆ ಬಂದು ನನ್ನನ್ನು ಸಂಧಿಸಬೇಕು. ಆಗ ನೀವೆಲ್ಲರೂ ನಿಮ್ಮ ಮನೆಗಳಿಗೆ ಹೋಗಬಹುದು; ನಿಮ್ಮ ಸ್ವಂತ ದ್ರಾಕ್ಷಿತೋಟದ ದ್ರಾಕ್ಷಿಹಣ್ಣುಗಳನ್ನು ತಿನ್ನಬಹುದು; ಅಂಜೂರದ ಮರದ ಹಣ್ಣನ್ನು ತಿನ್ನಬಹುದು ನೀವೆಲ್ಲರೂ ನಿಮ್ಮ ಬಾವಿಯ ನೀರನ್ನು ಕುಡಿಯಬಹುದು. 17 ಹೀಗೆ ನೀವು ಸೇವಿಸುತ್ತಾ ಇದ್ದರೆ ನಾನು ಬಂದು ನಿಮ್ಮ ದೇಶಕ್ಕೆ ಸಮಾನವಾದ ಇನ್ನೊಂದು ದೇಶಕ್ಕೆ ನಿಮ್ಮನ್ನು ಕರೆದೊಯ್ಯವೆನು. ಆ ಹೊಸ ದೇಶದಲ್ಲಿ ನೀವು ಒಳ್ಳೆಯ ಧಾನ್ಯವನ್ನು ಮತ್ತು ಹೊಸ ದ್ರಾಕ್ಷಾರಸವನ್ನು, ರೊಟ್ಟಿಯನ್ನು ಮತ್ತು ದ್ರಾಕ್ಷಿತೋಟಗಳನ್ನು ಹೊಂದುವಿರಿ.”
18 “‘ಹಿಜ್ಕೀಯನು ತನ್ನ ಮಾತುಗಳಿಂದ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ. ಅವನು, “ಯೆಹೋವನು ನಮ್ಮನ್ನು ರಕ್ಷಿಸುತ್ತಾನೆ” ಎಂದು ಹೇಳುತ್ತಾನೆ. ನಾನು ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ. ಬೇರೆ ದೇಶದ ದೇವರುಗಳು ಅವರ ದೇಶವನ್ನು ಅಶ್ಶೂರದ ಅರಸನಿಂದ ಕಾಪಾಡಲು ಶಕ್ತರಾದರೋ? ಇಲ್ಲ! 19 ಹಮಾತಿನ, ಅರ್ಪಾದಿನ ದೇವರೆಲ್ಲಿ? ಅವರು ಸೋತುಹೋದರು. ಸೆಫರ್ವಯಿಮಿನ ದೇವರುಗಳೆಲ್ಲಿ? ಅವರು ಸಮಾರ್ಯವನ್ನು ನನ್ನ ಬಲದಿಂದ ರಕ್ಷಿಸಿದರೋ? ಇಲ್ಲ! 20 ಬೇರೆ ಯಾವ ದೇಶದ ದೇವರುಗಳು ನನ್ನ ಕೈಯಿಂದ ತಮ್ಮ ಜನರನ್ನು ತಪ್ಪಿಸಿ ಕಾಪಾಡಿದರು? ಹೀಗಿರಲು ಯೆಹೋವನು ಜೆರುಸಲೇಮನ್ನು ನನ್ನಿಂದ ರಕ್ಷಿಸುವನೋ? ಇಲ್ಲ.’”
21 ಇದನ್ನು ಕೇಳಿ ಜೆರುಸಲೇಮಿನ ಜನರು ಮೌನವಾದರು. ಅವರು ಸೇನಾದಂಡನಾಯಕನಿಗೆ ಯಾವ ಉತ್ತರವನ್ನೂ ಕೊಡಲಿಲ್ಲ. ಯಾಕೆಂದರೆ ಹಿಜ್ಕೀಯನು ಅವರ ಸಂಗಡ ಮಾತಾಡಬಾರದೆಂದು ಹೇಳಿದ್ದನು.
22 ಹಿಲ್ಕೀಯನ ಮಗನೂ ಅರಮನೆಯ ಆಡಳಿತಾಧಿಕಾರಿಯೂ ಆಗಿದ್ದ ಎಲ್ಯಾಕೀಮ್, ಲೇಖಕನಾದ ಶೆಬ್ಹ, ಆಸಾಫನ ಮಗನೂ ಮಂತ್ರಿಯೂ ಆಗಿದ್ದ ಯೋವ ಎಂಬವರು ತಮ್ಮ ಬಟ್ಟೆಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ಅಶ್ಶೂರದ ಸೇನಾದಂಡನಾಯಕ ಹೇಳಿದ್ದನ್ನೆಲ್ಲಾ ತಿಳಿಸಿದರು.
2 ನಿಮಗೆ ಸಹಾಯ ಮಾಡಲು ನಾನು ಬಹಳವಾಗಿ ಮಾಡುತ್ತಿರುವ ಪ್ರಯತ್ನ ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ ಇದಲ್ಲದೆ ಲವೊದಿಕೀಯದಲ್ಲಿರುವವರಿಗೆ ಮತ್ತು ನನ್ನನ್ನು ಎಂದೂ ನೋಡಿಲ್ಲದವರಿಗೆ ಸಹ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. 2 ಅವರೆಲ್ಲರೂ ಆಂತರ್ಯದಲ್ಲಿ ಉತ್ತೇಜಿತರಾಗಿ ಪ್ರೀತಿಯಿಂದ ಒಂದಾಗಿರಬೇಕೆಂದು ಮತ್ತು ತಿಳುವಳಿಕೆಯಿಂದ ಬರುವ ದೃಢನಂಬಿಕೆಯಲ್ಲಿ ಶ್ರೀಮಂತರಾಗಿರಬೇಕೆಂದು ಆಶಿಸುತ್ತೇನೆ. ಅಂದರೆ ದೇವರ ನಿಗೂಢ ಸತ್ಯವನ್ನು ಅವರು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಸ್ವತಃ ಕ್ರಿಸ್ತನೇ ಆ ಸತ್ಯ. 3 ಕ್ರಿಸ್ತನಲ್ಲಿ ಸರ್ವಜ್ಞಾನವು ಮತ್ತು ತಿಳುವಳಿಕೆಯು ಬಚ್ಚಿಟ್ಟಿರುವ ನಿಕ್ಷೇಪಗಳಂತಿವೆ.
4 ಯಾವನೂ ನಿಮ್ಮನ್ನು ಸರಿಯೆನಿಸುವ ಸುಳ್ಳು ಮಾತುಗಳಿಂದ ಮೋಸಗೊಳಿಸದಂತೆ ಈ ಸಂಗತಿಗಳನ್ನು ನಿಮಗೆ ಹೇಳಿದ್ದೇನೆ. 5 ಅಲ್ಲಿ ನಾನು ನಿಮ್ಮೊಡನೆ ಇರದಿದ್ದರೂ ನನ್ನ ಮನಸ್ಸು ನಿಮ್ಮೊಡನಿರುತ್ತದೆ. ನಿಮ್ಮ ಕ್ರಮಬದ್ಧವಾದ ನಡತೆಯನ್ನು ನೋಡಲು ಮತ್ತು ಕ್ರಿಸ್ತನಲ್ಲಿ ಇಟ್ಟಿರುವ ದೃಢನಂಬಿಕೆಯನ್ನು ಅರಿಯಲು ಬಹಳ ಸಂತೋಷಪಡುತ್ತೇನೆ.
ಕ್ರಿಸ್ತನಲ್ಲಿ ನೆಲೆಗೊಂಡಿರಿ
6 ಪ್ರಭುವಾದ ಕ್ರಿಸ್ತ ಯೇಸುವನ್ನು ನೀವು ಸ್ವೀಕರಿಸಿಕೊಂಡಿರುವುದರಿಂದ ಆತನಲ್ಲಿ ನೆಲೆಗೊಂಡಿದ್ದು ಜೀವಿಸಿರಿ. 7 ಕ್ರಿಸ್ತನನ್ನು ಮಾತ್ರ ನೀವು ಅವಲಂಬಿಸಬೇಕು. ಜೀವವೂ ಶಕ್ತಿಯೂ ಆತನಿಂದಲೇ ಬರುತ್ತವೆ. ನಿಮಗೆ ಸತ್ಯವನ್ನು ಉಪದೇಶಿಸಲಾಗಿದೆ. ನೀವು ಆ ಸತ್ಯ ಬೋಧನೆಯಲ್ಲಿ ದೃಢವಾಗಿ ನೆಲೆಗೊಂಡಿರಬೇಕು ಮತ್ತು ದೇವರಿಗೆ ಸಲ್ಲತಕ್ಕ ಕೃತಜ್ಞತಾಸ್ತುತಿಯಿಂದ ತುಂಬಿದವರಾಗಿರಬೇಕು.
8 ಯಾರೂ ನಿಮ್ಮನ್ನು ಮೋಸಕರವಾದ ಮತ್ತು ನಿರರ್ಥಕವಾದ ತತ್ವಜ್ಞಾನ ಬೋಧನೆಯಿಂದ ತಪ್ಪು ದಾರಿಗೆ ನಡೆಸದಂತೆ ಜಾಗ್ರತೆಯಿಂದಿರಿ. ಆ ತತ್ವಜ್ಞಾನಗಳು ಜನರಿಂದ ಬಂದುವೇ ಹೊರತು ಕ್ರಿಸ್ತನಿಂದಲ್ಲ. ಅವು ಈ ಲೋಕದ ಜನರ ನಿರರ್ಥಕ ತತ್ವಗಳು. 9 ದೇವರ ಸರ್ವಸಂಪೂರ್ಣತೆಯು ಕ್ರಿಸ್ತನಲ್ಲಿ ನೆಲೆಗೊಂಡಿದೆ. (ಕ್ರಿಸ್ತನು ಈ ಲೋಕದಲ್ಲಿದ್ದಾಗಲೂ ಸಹ ನೆಲೆಗೊಂಡಿತ್ತು.) 10 ನೀವೆಲ್ಲರೂ ಕ್ರಿಸ್ತನಲ್ಲಿ ಸಂಪೂರ್ಣರಾಗಿದ್ದೀರಿ. ನಿಮಗೆ ಬೇರೇನೂ ಬೇಕಿಲ್ಲ. ಕ್ರಿಸ್ತನು ಎಲ್ಲ ದೊರೆತನಗಳನ್ನು ಮತ್ತು ಅಧಿಕಾರಗಳನ್ನು ಆಳುತ್ತಾನೆ.
11 ಕ್ರಿಸ್ತನಲ್ಲಿ ನೀವು ಬೇರೊಂದು ಸುನ್ನತಿಯನ್ನು ಪಡೆದಿರುವಿರಿ. ಆ ಸುನ್ನತಿಯು ಕೈಯಿಂದ ಮಾಡಿದ್ದಲ್ಲ. ಅಂದರೆ ನಿಮ್ಮ ಪಾಪಾಧೀನಸ್ವಭಾವದಿಂದ ನಿಮಗೆ ಬಿಡುಗಡೆಯಾಯಿತು. ಇದುವೇ ಕ್ರಿಸ್ತನು ಮಾಡುವ ಸುನ್ನತಿ. 12 ನೀವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಕ್ರಿಸ್ತನೊಂದಿಗೆ ಹೂಳಲ್ಪಟ್ಟಿರಿ. ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸುವುದರ ಮೂಲಕ ತೋರಿದ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ನೀವು ಆ ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಮೇಲಕ್ಕೆ ಎದ್ದುಬಂದಿರಿ.
13 ನೀವು ನಿಮ್ಮ ಪಾಪಗಳ ದೆಸೆಯಿಂದ ಮತ್ತು ನಿಮ್ಮ ಪಾಪ ಸ್ವಭಾವದ ಹಿಡಿತದಿಂದ ಇನ್ನೂ ಮುಕ್ತರಾಗದೆ ಇದ್ದುದರಿಂದ ಆತ್ಮಿಕವಾಗಿ ಸತ್ತವರಾಗಿದ್ದಿರಿ. ಆದರೆ ದೇವರು ನಿಮಗೆ ಕ್ರಿಸ್ತನೊಂದಿಗೆ ಜೀವವನ್ನು ದಯಪಾಲಿಸಿದನು. ಆತನು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದನು. 14 ದೇವರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ನಾವು ಅಪರಾಧಿಗಳಾಗಿದ್ದೆವು. ನಮ್ಮ ಮೇಲೆ ಹೊರಿಸಲಾದ ದೋಷಾರೋಪಣೆಯ ಪಟ್ಟಿಯಲ್ಲಿ ನಾವು ಉಲ್ಲಂಘಿಸಿದ ಆಜ್ಞೆಗಳನ್ನೆಲ್ಲ ಲಿಖಿತಗೊಳಿಸಲಾಗಿತ್ತು. ಆದರೆ ದೇವರು ನಮ್ಮ ಅಪರಾಧಗಳನ್ನೆಲ್ಲ ಕ್ಷಮಿಸಿ ಅವುಗಳನ್ನು ಶಿಲುಬೆಗೆ ಜಡಿದನು. 15 ದೇವರು ತನಗೆ ವಿರೋಧವಾಗಿದ್ದ ದೊರೆತನಗಳನ್ನೂ ಅಧಿಕಾರಗಳನ್ನೂ ಸೋಲಿಸಿ, ಅವುಗಳನ್ನು ನಿರಾಯುಧರನ್ನಾಗಿ ಮಾಡಿ ಶಿಲುಬೆಯ ವಿಜಯೋತ್ಸವದಲ್ಲಿ ಅವುಗಳನ್ನು ಇಡೀ ಲೋಕದ ಎದುರಿನಲ್ಲಿ ಸೆರೆಯಾಳುಗಳನ್ನಾಗಿ ಮೆರವಣಿಗೆ ಮಾಡಿದನು.
ಮಾನವ ನಿರ್ಮಿತ ನಿಯಮಗಳನ್ನು ಅನುಸರಿಸಬೇಡಿ
16 ಹೀಗಿರುವುದರಿಂದ ತಿಂದು ಕುಡಿಯುವುದರ ಬಗ್ಗೆ ಇಲ್ಲವೆ ಯೆಹೂದ್ಯರ ಪದ್ಧತಿಗಳ (ಹಬ್ಬಗಳು, ಅಮಾವಾಸ್ಯೆಯ ಆಚರಣೆಗಳು, ಸಬ್ಬತ್ ದಿನಗಳು) ಬಗ್ಗೆ ನಿಮಗೆ ನಿಯಮಗಳನ್ನು ರೂಪಿಸಲು ಯಾರಿಗೂ ಅವಕಾಶ ಕೊಡಬೇಡಿ. 17 ಪೂರ್ವಕಾಲದಲ್ಲಿ ಈ ಸಂಗತಿಗಳೆಲ್ಲ ಮುಂದೆ ಬರಬೇಕಾಗಿದ್ದವುಗಳ ಛಾಯೆಗಳಾಗಿದ್ದವು. ಅವುಗಳ ನಿಜರೂಪವು ಕ್ರಿಸ್ತನಲ್ಲಿ ತೋರಿಬಂದಿತು. 18 ಕೆಲವರು ದೇವದೂತರ ಪೂಜೆಯಲ್ಲಿಯೂ ಅತಿವಿನಯವಂತರಂತೆ ನಟಿಸುವುದರಲ್ಲಿಯೂ ಆಸಕ್ತರಾಗಿದ್ದಾರೆ. ಆ ಜನರು ತಾವು ಕಂಡ ದರ್ಶನಗಳ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತಾರೆ. “ನೀವು ಇಂಥಿಂಥ ಕಾರ್ಯಗಳನ್ನು ಮಾಡದಿರುವುದರಿಂದ ತಪ್ಪಿತಸ್ಥರಾಗಿದ್ದೀರಿ” ಎಂದು ಆ ಜನರು ನಿಮ್ಮ ಬಗ್ಗೆ ಹೇಳಲು ಅವಕಾಶಕೊಡಬೇಡಿ. ಅವರ ಪ್ರಾಪಂಚಿಕ ಆಲೋಚನೆಯು ಅವರನ್ನು ನಿಷ್ಕಾರಣವಾಗಿ ಗರ್ವದಿಂದ ಉಬ್ಬಿಸುತ್ತದೆ. 19 ಆ ಜನರು ತಮ್ಮನ್ನು ಕ್ರಿಸ್ತನೆಂಬ ಶಿರಸ್ಸಿನ ಅಧೀನಕ್ಕೆ ಒಳಪಡಿಸುವುದಿಲ್ಲ. ಇಡೀ ದೇಹವು ಆತನನ್ನೇ ಅವಲಂಬಿಸಿಕೊಂಡಿದೆ. ಆತನಿಂದಲೇ ದೇಹದ ಅಂಗಾಂಗಗಳು ಇತರ ಅಂಗಗಳ ಬಗ್ಗೆ ಚಿಂತಿಸುತ್ತವೆ ಮತ್ತು ಪರಸ್ಪರ ಸಹಾಯ ಮಾಡುತ್ತವೆ. ಇದರಿಂದ ದೇಹವು ಬಲಗೊಂಡು ಒಂದಾಗಿ ಕೂಡಿಸಲ್ಪಡುತ್ತದೆ. ಹೀಗೆ, ದೇವರ ಇಚ್ಛೆಯಂತೆ ದೇಹವು ಬೆಳೆಯುತ್ತದೆ.
20 ನೀವು ಕ್ರಿಸ್ತನೊಂದಿಗೆ ಸತ್ತು ಪ್ರಾಪಂಚಿಕವಾದ ನಿರರ್ಥಕ ನಿಯಮಗಳಿಂದ ಬಿಡುಗಡೆ ಹೊಂದಿದ್ದೀರಿ. ಹೀಗಿದ್ದರೂ ನೀವು ಈ ಲೋಕಕ್ಕೆ ಸೇರಿದವರಂತೆ ವರ್ತಿಸುವುದೇಕೆ? ಈ ನಿಯಮಗಳನ್ನು ಏಕೆ ಅನುಸರಿಸುತ್ತಿರುವಿರಿ ಎಂಬುದೇ ನನ್ನ ಮಾತಿನ ಅರ್ಥ: 21 “ಇದನ್ನು ತಿನ್ನಬೇಡ”, “ಅದರ ರುಚಿ ನೋಡಬೇಡ”, “ಅದನ್ನು ಮುಟ್ಟಬೇಡ” ಎಂದು ಹೇಳುವುದೇಕೆ? 22 ಪ್ರಾಪಂಚಿಕ ವಿಷಯಗಳ ಕುರಿತಾದ ಈ ನಿಯಮಗಳೆಲ್ಲ ಬಳಸಿದ ಮೇಲೆ ನಾಶವಾಗುತ್ತವೆ. ಅವುಗಳು ಜನರ ಆಜ್ಞೆ ಮತ್ತು ಜನರ ಉಪದೇಶಗಳೇ ಹೊರತು ದೇವರವಲ್ಲ. 23 ಈ ನಿಯಮಗಳು ನೋಡುವುದಕ್ಕೆ ಬದ್ಧಿಯುಳ್ಳವಾಗಿವೆ. ಆದರೆ ಅತಿವಿನಯವಂತರಂತೆ ನಟಿಸಲು ಮತ್ತು ತಮ್ಮ ದೇಹಗಳನ್ನು ದಂಡಿಸಲು ಜನರನ್ನು ಪ್ರೆರೇಪಿಸುವ ಅವುಗಳು ಕೇವಲ ಮಾನವ ನಿರ್ಮಿತವಾದ ಧರ್ಮದ ಒಂದು ಭಾಗವಾಗಿವೆ. ಆದರೆ ಪಾಪಸ್ವಭಾವವು ಇಚ್ಛಿಸುವ ದುಷ್ಕೃತ್ಯಗಳನ್ನು ಮಾಡದಂತೆ ಅವು ಜನರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International