Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೋಬನು 34-35

34 ಎಲೀಹು ತನ್ನ ಮಾತನ್ನು ಮುಂದುವರಿಸಿದನು:

“ಜ್ಞಾನಿಗಳೇ, ನನ್ನ ಮಾತುಗಳನ್ನು ಕೇಳಿರಿ.
    ಜಾಣರೇ, ನನಗೆ ಗಮನಕೊಡಿರಿ.
ಕಿವಿಯು ಮಾತುಗಳನ್ನು ವಿವೇಚಿಸುತ್ತದೆ;
    ನಾಲಿಗೆಯು ಆಹಾರವನ್ನು ರುಚಿನೋಡುತ್ತದೆ.
ಅಂತೆಯೇ ನಾವು ಈ ವಾದಗಳನ್ನು ಪರೀಕ್ಷಿಸಿ
    ನ್ಯಾಯವಾದದ್ದನ್ನೇ ಆರಿಸಿಕೊಳ್ಳೋಣ.
ಯೋಬನು ಹೇಳುವುದೇನೆಂದರೆ, ‘ನಾನು ನಿರಪರಾಧಿ.
    ದೇವರು ನನಗೆ ನ್ಯಾಯದೊರಕಿಸುತ್ತಿಲ್ಲ.
ನಾನು ನೀತಿವಂತನಾಗಿದ್ದರೂ ಅಪರಾಧಿಯೆನಿಸಿಕೊಂಡಿದ್ದೇನೆ.
    ನಾನು ನಿರ್ದೋಷಿಯಾಗಿದ್ದರೂ ಆತನ ಬಾಣದ ಪೆಟ್ಟು ವಿಪರೀತವಾಗಿದೆ.’

“ಯೋಬನಿಗೆ ಸಮಾನನು ಯಾರು?
    ಅವನು ನೀರು ಕುಡಿದಂತೆ ದೇವರನ್ನು ದೂಷಿಸುತ್ತಾನೆ.
ಯೋಬನು ದುಷ್ಟರೊಂದಿಗೆ ಸ್ನೇಹದಿಂದಿರುವನು;
    ಕೆಟ್ಟವರ ಸಂಗಡ ನಡೆದಾಡುವನು.
ಯಾಕೆಂದರೆ, ‘ದೇವರಿಗೆ ವಿಧೇಯನಾಗಿರುವವನಿಗೆ
    ಅದರಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಅವನೇ ಹೇಳಿದ್ದಾನೆ.

10 “ಆದ್ದರಿಂದ ಬುದ್ಧಿವಂತರೇ, ನನ್ನ ಮಾತುಗಳಿಗೆ ಕಿವಿಗೊಡಿ.
    ದೇವರು ಕೆಟ್ಟದ್ದನ್ನು ಎಂದಿಗೂ ಮಾಡುವುದಿಲ್ಲ.
    ಸರ್ವಶಕ್ತನಾದ ದೇವರು ಎಂದಿಗೂ ತಪ್ಪು ಮಾಡುವುದಿಲ್ಲ.
11 ಆತನು ಮನುಷ್ಯನಿಗೆ ಅವನ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವನು.
    ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ದೇವರಿಂದ ಹೊಂದಿಕೊಳ್ಳುವನು.
12 ಹೌದು, ನಿಜ, ದೇವರು ಕೆಟ್ಟದ್ದನ್ನು ಮಾಡುವುದಿಲ್ಲ;
    ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕು ಮಾಡುವುದಿಲ್ಲ.
13 ಭೂಲೋಕಕ್ಕೆ ದೇವರನ್ನು ಅಧಿಪತಿಯನ್ನಾಗಿ ಯಾರು ಆರಿಸಿಕೊಂಡರು?
    ಇಡೀ ಪ್ರಪಂಚದ ಮೇಲಿನ ಜವಾಬ್ದಾರಿಯನ್ನು ದೇವರಿಗೆ ಯಾರು ಕೊಟ್ಟರು?
14 ಆತನು ಸ್ವಾರ್ಥದಲ್ಲಿ ಮನಸ್ಸಿಟ್ಟು,
    ತನ್ನ ಆತ್ಮವನ್ನೂ ಜೀವದ ಉಸಿರನ್ನೂ ಜನರಿಂದ ತೆಗೆದುಕೊಳ್ಳುವುದಾದರೆ,
15 ಆಗ ಭೂಮಿಯ ಮೇಲಿರುವ ಎಲ್ಲಾ ಜನರು
    ಸತ್ತುಹೋಗಿ ಧೂಳಾಗುವರು.

16 “ನೀನು ವಿವೇಕಿಯಾಗಿದ್ದರೆ,
    ನನ್ನ ಮಾತುಗಳಿಗೆ ಕಿವಿಗೊಡು.
17 ನ್ಯಾಯವನ್ನು ದ್ವೇಷಿಸುವವನು ಅಧಿಪತಿಯಾಗುವನೇ?
    ಯೋಬನೇ, ಬಲಿಷ್ಠನೂ ಒಳ್ಳೆಯವನೂ ಆಗಿರುವ ದೇವರನ್ನು
    ದೋಷಿಯೆಂಬುದಾಗಿ ತೀರ್ಪುನೀಡಲು ನಿನಗೆ ಸಾಧ್ಯವೇ?
18 ‘ನೀವು ಅಯೋಗ್ಯರು!’ ಎಂದು ರಾಜರುಗಳಿಗೆ ಹೇಳುವವನು ದೇವರೊಬ್ಬನೇ.
    ‘ನೀವು ಕೆಡುಕರು!’ ಎಂದು ನಾಯಕರುಗಳಿಗೆ ಹೇಳುವವನು ದೇವರೇ.
19 ದೇವರಲ್ಲಿ ಸಾಮಾನ್ಯರು ಮತ್ತು ಪ್ರಮುಖರು ಎಂದಾಗಲಿ
    ಬಡವರು ಮತ್ತು ಶ್ರೀಮಂತರು ಎಂದಾಗಲಿ ಭೇದಭಾವವಿಲ್ಲ.
    ಯಾಕೆಂದರೆ ಎಲ್ಲರನ್ನೂ ಸೃಷ್ಟಿಮಾಡಿದವನು ದೇವರೇ.
20 ಒಬ್ಬನು ಕ್ಷಣಮಾತ್ರದೊಳಗೆ ಮಧ್ಯರಾತ್ರಿಯಲ್ಲಿ ಸಾಯಬಹುದು.
    ಜನರು ಕಾಯಿಲೆಯಿಂದ ಸಾಯಬಹುದು.
    ದುಷ್ಟರು ಸಹ ಯಾವುದೇ ಕಾರಣವಿಲ್ಲದೆ ಸಾಯಬಹುದು.

21 “ಮನುಷ್ಯರ ಕಾರ್ಯಗಳನ್ನು ದೇವರು ಗಮನಿಸುತ್ತಾನೆ.
    ಅವನ ಪ್ರತಿಯೊಂದು ಹೆಜ್ಜೆ ಆತನಿಗೆ ಗೊತ್ತಿದೆ.
22 ದುಷ್ಟನನ್ನು ದೇವರಿಂದ ಮರೆಮಾಡಬಲ್ಲ ಕತ್ತಲೆಯ ಸ್ಥಳವಾಗಲಿ
    ಕಾರ್ಗತ್ತಲೆಯ ಸ್ಥಳವಾಗಲಿ ಇಲ್ಲವೇ ಇಲ್ಲ.
23 ದೇವರು ಮನುಷ್ಯರನ್ನು ಪರೀಕ್ಷಿಸಲು ಸಮಯವನ್ನು ಗೊತ್ತು ಪಡಿಸಬೇಕಿಲ್ಲ;
    ನ್ಯಾಯತೀರ್ಪು ನೀಡಲು ಅವರನ್ನು ತನ್ನ ಮುಂದೆ ಕರೆಸಬೇಕಿಲ್ಲ.
24 ಬಲಿಷ್ಠರು ತಪ್ಪು ಮಾಡಿದಾಗ
    ದೇವರು ಅವರನ್ನು ವಿಚಾರಿಸದೆ ನಾಶಮಾಡಿ
ಅವರ ಸ್ಥಳದಲ್ಲಿ ಬೇರೆಯವರನ್ನು ನೆಲೆಗೊಳಿಸುವನು.
25 ಹೀಗೆ ಆತನು ಅವರ ಕಾರ್ಯಗಳನ್ನು ಲಕ್ಷಿಸಿ,
    ರಾತ್ರಿಯಲ್ಲಿ ಅವರನ್ನು ಸೋಲಿಸಿ ನಾಶಮಾಡುವನು.
26 ದೇವರು ದುಷ್ಟರನ್ನು
    ಅವರ ದುಷ್ಕೃತ್ಯಗಳ ನಿಮಿತ್ತ ಬಹಿರಂಗವಾಗಿ ದಂಡಿಸುವನು.
27 ಯಾಕೆಂದರೆ ದುಷ್ಟರು ದೇವರಿಗೆ ವಿಧೇಯರಾಗಲಿಲ್ಲ;
    ಆತನ ಮಾರ್ಗಗಳನ್ನು ಲಕ್ಷಿಸಲಿಲ್ಲ.
28 ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ದುಷ್ಟರು ಮಾಡಿದರು.
    ಆತನು ದಿಕ್ಕಿಲ್ಲದವರ ಕೂಗನ್ನು ಕೇಳಿದನು.
29 ಆದರೆ ದೇವರು ಬಡಜನರಿಗೆ ಸಹಾಯಮಾಡದಿರಲು ನಿರ್ಧರಿಸಿದರೆ,
    ಆತನನ್ನು ದೋಷಿಯೆಂದು ತೀರ್ಪುಮಾಡುವವನು ಯಾರು?
ದೇವರು ತನ್ನ ಮುಖವನ್ನು ಅವರಿಗೆ ಮರೆಮಾಡಿಕೊಂಡರೆ ಆತನನ್ನು ನೋಡಬಲ್ಲವರು ಯಾರು?
    ಮನುಷ್ಯರನ್ನೂ ಜನಾಂಗಗಳನ್ನೂ ಆಳುವವನು ದೇವರೇ.
30 ದೈವಹೀನನಾದ ರಾಜನು ಜನರನ್ನು ನಾಶನಕ್ಕೆ ನಡೆಸುವುದಾದರೆ
    ದೇವರು ಅವನನ್ನು ಪದಚ್ಯುತಿಗೊಳಿಸುವನು.

31 “ಮನುಷ್ಯನು ದೇವರಿಗೆ, ‘ನಾನು ದೋಷಿ,
    ನಾನು ಇನ್ನೆಂದಿಗೂ ಪಾಪ ಮಾಡುವುದಿಲ್ಲ.
32 ದೇವರೇ, ನೀನು ನನಗೆ ಅಗೋಚರವಾಗಿದ್ದರೂ ನೀತಿಮಾರ್ಗವನ್ನು ಬೋಧಿಸು,
    ನಾನು ತಪ್ಪು ಮಾಡಿದ್ದರೆ ಅದನ್ನು ಮತ್ತೆ ಮಾಡುವುದಿಲ್ಲ’ ಎಂದು ಹೇಳಬಹುದು.
33 ಯೋಬನೇ, ನೀನು ಮಾರ್ಪಾಟಾಗದೆ
    ದೇವರಿಂದ ಪ್ರತಿಫಲವನ್ನು ಅಪೇಕ್ಷಿಸುವುದೇಕೆ?
ಯೋಬನೇ, ಇದು ನಿನ್ನ ನಿರ್ಧಾರ, ನನ್ನದಲ್ಲ.
    ನಿನ್ನ ಆಲೋಚನೆಯನ್ನು ನನಗೆ ತಿಳಿಸು.
34 ಜ್ಞಾನಿಗಳೂ ಬುದ್ಧಿವಂತರೂ
    ನನ್ನ ಮಾತುಗಳಿಗೆ ಕಿವಿಗೊಟ್ಟು,
35 ‘ಯೋಬನು ತಿಳುವಳಿಕೆಯಿಲ್ಲದೆ ಮಾತಾಡುತ್ತಾನೆ.
    ಅವನ ಮಾತುಗಳಿಗೆ ಅರ್ಥವೇ ಇಲ್ಲ!’
36 ಯೋಬನಿಗೆ ಪರಿಶೋಧನೆ ನಿರಂತರವಾಗಿದ್ದರೆ ಒಳ್ಳೆಯದು.
    ಯಾಕೆಂದರೆ ಅವನು ದುಷ್ಟನಂತೆ ಉತ್ತರಿಸುತ್ತಿದ್ದಾನೆ.
37 ಅವನು ತನ್ನ ಪಾಪಕ್ಕೆ ಇನ್ನೂ ಕೂಡಿಸಿಕೊಳ್ಳುತ್ತಿದ್ದಾನೆ;
    ನಮ್ಮ ಮಧ್ಯದಲ್ಲಿ ತನ್ನ ದುಷ್ಟತನವನ್ನು ಅಧಿಕಮಾಡಿಕೊಳ್ಳುತ್ತಿದ್ದಾನೆ; ದೇವದ್ರೋಹವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ” ಎಂದು ನನಗೆ ಹೇಳುವರು.

35 ಎಲೀಹು ಮಾತನ್ನು ಮುಂದುವರಿಸಿ,

“ಯೋಬನೇ, ‘ನಾನು ದೇವರಿಗಿಂತ ನೀತಿವಂತನೆಂದು’
    ನೀನು ಹೇಳುವುದು ನ್ಯಾಯವಲ್ಲ.
ಅಲ್ಲದೆ ನೀನು ದೇವರಿಗೆ,
    ‘ಮನುಷ್ಯನು ಪಾಪ ಮಾಡದೆ ದೇವರನ್ನು ಮೆಚ್ಚಿಸುವುದರಿಂದ ಅವನಿಗೆ ಪ್ರಯೋಜನವೇನು?
    ನಾನು ಪಾಪಮಾಡದಿದ್ದರೆ ನನಗೇನು ಒಳಿತಾಗುವುದು’ ಎಂದು ಕೇಳು.

“ಯೋಬನೇ, ನಾನು ನಿನಗೂ ನಿನ್ನೊಂದಿಗಿರುವ ಸ್ನೇಹಿತರಿಗೂ ಉತ್ತರಕೊಡುವೆ.
ಕಣ್ಣೆತ್ತಿ ಆಕಾಶವನ್ನು ನೋಡು.
    ಮೋಡಗಳನ್ನು ದೃಷ್ಟಿಸು, ಅವು ನಿನಗಿಂತ ಎಷ್ಟೋ ಎತ್ತರವಾಗಿವೆ.
ಯೋಬನೇ, ನೀನು ಪಾಪಮಾಡಿದರೆ, ಅದರಿಂದ ದೇವರಿಗೇನೂ ಕೇಡಾಗುವುದಿಲ್ಲ.
    ನೀನು ಅನೇಕ ಪಾಪಗಳನ್ನು ಮಾಡಿದ್ದರೂ ಅದರಿಂದ ದೇವರಿಗೇನೂ ಆಗುವುದಿಲ್ಲ.
ಯೋಬನೇ, ನೀನು ಒಳ್ಳೆಯವನಾಗಿದ್ದರೆ, ಅದರಿಂದ ದೇವರಿಗೇನೂ ಸಹಾಯವಾಗುವುದಿಲ್ಲ.
    ದೇವರಿಗೆ ನಿನ್ನಿಂದೇನೂ ಲಾಭವಾಗುವುದಿಲ್ಲ.
ಯೋಬನೇ, ನಿನ್ನ ದುಷ್ಟತನದಿಂದ ನಿನ್ನಂಥವನಿಗೇ ಕೇಡಾಗುವುದು;
    ನಿನ್ನ ಒಳ್ಳೆಯ ಕಾರ್ಯಗಳಿಂದ ನಿನ್ನಂಥವನಿಗೇ ಒಳ್ಳೆಯದಾಗುವುದು.

“ಹಿಂಸೆಗೂ ಅನ್ಯಾಯಕ್ಕೂ ಒಳಗಾಗಿರುವವರು
    ತಮ್ಮನ್ನು ಬಲಿಷ್ಠರಿಂದ ಬಿಡಿಸಬಲ್ಲ ಯಾರಿಗಾದರೂ ಮೊರೆಯಿಡುವರು.
10 ಆದರೆ ಆ ಕೆಟ್ಟ ಜನರು ಸಹಾಯಕ್ಕಾಗಿ ದೇವರನ್ನು ಕೇಳಿಕೊಳ್ಳುವುದಿಲ್ಲ.
    ಅವರು, ‘ನನ್ನನ್ನು ಸೃಷ್ಟಿಸಿದ ದೇವರೆಲ್ಲಿ?’ ಎಂದು ಕೇಳುವುದಿಲ್ಲ.
    ‘ಕುಗ್ಗಿಹೋದವರಿಗೆ ಸಹಾಯಮಾಡುವ ದೇವರೆಲ್ಲಿ?’ ಎಂದು ಕೇಳುವುದಿಲ್ಲ.
11 ‘ನಮ್ಮನ್ನು ಪಕ್ಷಿಗಳಿಗಿಂತಲೂ ಪ್ರಾಣಿಗಳಿಗಿಂತಲೂ
    ಜ್ಞಾನಿಗಳನ್ನಾಗಿ ಮಾಡುವ ದೇವರೆಲ್ಲಿ?’ ಎಂದು ಅವರು ಕೇಳುವುದಿಲ್ಲ.

12 “ಅಲ್ಲದೆ ಆ ಕೆಟ್ಟವರು ದೇವರನ್ನು ಸಹಾಯಕ್ಕಾಗಿ ಕೇಳಿಕೊಂಡರೂ ಆತನು ಅವರಿಗೆ ಉತ್ತರಿಸುವುದಿಲ್ಲ.
    ಯಾಕೆಂದರೆ ಅವರು ದುಷ್ಟರೂ ದುರಾಭಿಮಾನಿಗಳೂ ಆಗಿದ್ದಾರೆ.
13 ಹೌದು, ದೇವರು ಅವರ ಬೆಲೆಯಿಲ್ಲದ ಬೇಡಿಕೆಯನ್ನು ಕೇಳುವುದಿಲ್ಲ;
    ಸರ್ವಶಕ್ತನಾದ ದೇವರು ಅವರಿಗೆ ಗಮನ ಕೊಡುವುದಿಲ್ಲ.
14 ಯೋಬನೇ, ನೀನು, ‘ದೇವರನ್ನು ಕಾಣಲಾರೆನು’ ಎಂದು ಹೇಳುವಾಗ
    ಆತನು ನಿನಗೆ ಕಿವಿಗೊಡುವುದಿಲ್ಲ.
ನಿನ್ನ ವ್ಯಾಜ್ಯವು ಆತನ ಮುಂದೆ ಇರುವುದರಿಂದ
    ನೀನು ಆತನಿಗಾಗಿ ಕಾದುಕೊಂಡಿರಬೇಕು.

15 “ದೇವರು ಕೆಟ್ಟಜನರನ್ನು ದಂಡಿಸುವುದಿಲ್ಲ;
    ಪಾಪವನ್ನು ಗಮನಿಸುವುದಿಲ್ಲ ಎಂಬುದು ಯೋಬನ ಆಲೋಚನೆ.
16 ಆದ್ದರಿಂದ ಯೋಬನು ತನ್ನ ನಿಷ್ಪ್ರಯೋಜಕ ಮಾತನ್ನು ಮುಂದುವರಿಸುತ್ತಿದ್ದಾನೆ;
    ದುರಾಭಿಮಾನದಿಂದ ವರ್ತಿಸುತ್ತಿದ್ದಾನೆ; ತಿಳುವಳಿಕೆಯಿಲ್ಲದೆ ಮಾತಾಡುತ್ತಿದ್ದಾನೆ.”

ಅಪೊಸ್ತಲರ ಕಾರ್ಯಗಳು 15:1-21

ಜೆರುಸಲೇಮಿನಲ್ಲಿ ಸಮ್ಮೇಳನ

15 ಬಳಿಕ ಕೆಲವು ಜನರು ಜುದೇಯದಿಂದ ಅಂತಿಯೋಕ್ಯಕ್ಕೆ ಬಂದರು. “ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗುವುದಿಲ್ಲ. ಸುನ್ನತಿ ಮಾಡಿಸಿಕೊಳ್ಳಬೇಕೆಂದು ಮೋಶೆಯೇ ಹೇಳಿದ್ದಾನೆ” ಎಂದು ಅವರು ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಉಪದೇಶಿಸತೊಡಗಿದರು. ಪೌಲ ಬಾರ್ನಬರು ಈ ಉಪದೇಶಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಅವರೊಂದಿಗೆ ವಾದ ಮಾಡಿದರು. ಈ ಸಮಸ್ಯೆಯ ಬಗ್ಗೆ ಅಪೊಸ್ತಲರೊಡನೆ ಮತ್ತು ಹಿರಿಯರೊಡನೆ ಚರ್ಚಿಸಲು ಪೌಲ ಬಾರ್ನಬರನ್ನು ಮತ್ತು ಇತರ ಕೆಲವರನ್ನು ಜೆರುಸಲೇಮಿಗೆ ಕಳುಹಿಸಲು ಸಭೆ ನಿರ್ಧರಿಸಿತು.

ಅಂತೆಯೇ ಸಭೆಯು ಇವರನ್ನು ಕಳುಹಿಸಿತು. ಇವರು ಫೆನಿಷ್ಯ ಮತ್ತು ಸಮಾರ್ಯದ ಮಾರ್ಗವಾಗಿ ಪ್ರಯಾಣಮಾಡಿದರು. ಯೆಹೂದ್ಯರಲ್ಲದ ಜನರು ನಿಜದೇವರ ಕಡೆಗೆ ತಿರುಗಿಕೊಂಡಿದ್ದರ ಬಗ್ಗೆ ಈ ನಾಡುಗಳಲ್ಲಿ ವಿವರಿಸಿದರು. ಇದನ್ನು ಕೇಳಿ ಸಹೋದರರಿಗೂ ಬಹಳ ಸಂತೋಷವಾಯಿತು. ಪೌಲ ಬಾರ್ನಬರು ಮತ್ತು ಇತರರು ಜೆರುಸಲೇಮನ್ನು ತಲುಪಿದರು. ಅಪೊಸ್ತಲರು, ಹಿರಿಯರು ಮತ್ತು ಸಭೆಯವರು ಇವರನ್ನು ಸ್ವಾಗತಿಸಿದರು. ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಪೌಲ ಬಾರ್ನಬರು ಮತ್ತು ಇತರರು ವಿವರಿಸಿದರು. ಜೆರುಸಲೇಮಿನಲ್ಲಿದ್ದ ವಿಶ್ವಾಸಿಗಳಲ್ಲಿ ಕೆಲವರು ಫರಿಸಾಯರ ಗುಂಪಿಗೆ ಸೇರಿದವರಾಗಿದ್ದರು. ಅವರು ಎದ್ದು ನಿಂತುಕೊಂಡು, “ಯೆಹೂದ್ಯರಲ್ಲದ ವಿಶ್ವಾಸಿಗಳು ಸುನ್ನತಿ ಮಾಡಿಸಿಕೊಳ್ಳಬೇಕು. ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೆಂದು ನಾವು ಅವರಿಗೆ ಹೇಳಬೇಕು!” ಎಂದರು.

ಬಳಿಕ, ಅಪೊಸ್ತಲರು ಮತ್ತು ಹಿರಿಯರು ಈ ಸಮಸ್ಯೆಯನ್ನು ಪರಿಶೀಲಿಸಲು ಸೇರಿಬಂದರು. ದೀರ್ಘಚರ್ಚೆಯಾಯಿತು. ಬಳಿಕ ಪೇತ್ರ ಎದ್ದುನಿಂತು ಅವರಿಗೆ, “ನನ್ನ ಸಹೋದರರೇ, ನಿಮಗೇ ತಿಳಿದಿರುವಂತೆ, ಯೆಹೂದ್ಯರಲ್ಲದ ಜನರಿಗೆ ಸುವಾರ್ತೆಯನ್ನು ಬೋಧಿಸುವುದಕ್ಕಾಗಿ ನಿಮ್ಮ ಮಧ್ಯದೊಳಗಿಂದ ದೇವರು ನನ್ನನ್ನು ಬಹುದಿನಗಳ ಹಿಂದೆ ಆರಿಸಿಕೊಂಡನು. ಅವರು ನನ್ನಿಂದ ಸುವಾರ್ತೆಯನ್ನು ಕೇಳಿ ನಂಬಿಕೊಂಡರು. ಎಲ್ಲಾ ಜನರ ಆಲೋಚನೆಗಳನ್ನು ಬಲ್ಲ ದೇವರು ಯೆಹೂದ್ಯರಲ್ಲದ ಜನರನ್ನೂ ಸ್ವೀಕರಿಸಿಕೊಂಡನು. ದೇವರು ನಮಗೆ ಪವಿತ್ರಾತ್ಮನನ್ನು ಕೊಟ್ಟಂತೆಯೇ ಅವರಿಗೂ ಪವಿತ್ರಾತ್ಮನನ್ನು ಕೊಟ್ಟು ಇದನ್ನು ರುಜುವಾತುಪಡಿಸಿದ್ದಾನೆ. ದೇವರ ದೃಷ್ಟಿಯಲ್ಲಿ ಅವರಿಗೂ ನಮಗೂ ಯಾವ ವ್ಯತ್ಯಾಸವಿಲ್ಲ. ಅವರು ನಂಬಿಕೊಂಡಾಗ, ದೇವರು ಅವರ ಹೃದಯಗಳನ್ನು ಶುದ್ಧೀಕರಿಸಿದನು. 10 ಹೀಗಿರಲಾಗಿ, ಯೆಹೂದ್ಯರಲ್ಲದ ಸಹೋದರರ ಹೆಗಲ ಮೇಲೆ ಭಾರವಾದ ಹೊರೆಯನ್ನು[a] ಯಾಕೆ ಹೊರಿಸುತ್ತೀರಿ? ನೀವು ದೇವರನ್ನು ಸಿಟ್ಟಿಗೆಬ್ಬಿಸಲು ಪ್ರಯತ್ನಿಸುತ್ತಿದ್ದೀರಾ? ನಮಗಾಗಲಿ ನಮ್ಮ ಪಿತೃಗಳಿಗಾಗಲಿ ಈ ಹೊರೆಯನ್ನು ಹೊರವಷ್ಟು ಶಕ್ತಿ ಇರಲಿಲ್ಲ! 11 ಆದ್ದರಿಂದ ನಾವಾಗಲಿ ಇವರಾಗಲಿ ರಕ್ಷಣೆ ಹೊಂದುವುದು ಪ್ರಭುವಾದ ಯೇಸುವಿನ ಕೃಪೆಯಿಂದಲೇ ಎಂದು ನಾವು ನಂಬುತ್ತೇವೆ!” ಎಂದನು.

12 ಆಗ ಇಡೀ ಸಭೆಯು ಮೌನವಾಯಿತು. ಅವರು ಪೌಲ ಬಾರ್ನಬರಿಗೆ ಕಿವಿಗೊಟ್ಟರು. ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ದೇವರು ತಮ್ಮ ಮೂಲಕವಾಗಿ ಮಾಡಿದ ಎಲ್ಲಾ ಅದ್ಭುತಕಾರ್ಯಗಳ ಮತ್ತು ಸೂಚಕಕಾರ್ಯಗಳ ಬಗ್ಗೆ ಪೌಲ ಬಾರ್ನಬರು ಹೇಳಿದರು. 13 ಬಳಿಕ ಯಾಕೋಬನು, “ನನ್ನ ಸಹೋದರರೇ, ನನಗೆ ಕಿವಿಗೊಡಿರಿ. 14 ಯೆಹೂದ್ಯರಲ್ಲದ ಜನರಿಗೆ ದೇವರು ತನ್ನ ಪ್ರೀತಿಯನ್ನು ಹೇಗೆ ತೋರಿಸಿದ್ದಾನೆಂದು ಸೀಮೋನನು ನಮಗೆ ತಿಳಿಸಿದ್ದಾನೆ. ಮೊಟ್ಟಮೊದಲ ಬಾರಿಗೆ, ದೇವರು ಯೆಹೂದ್ಯರಲ್ಲದ ಜನರನ್ನು ಸ್ವೀಕರಿಸಿಕೊಂಡನು. ಅವರನ್ನು ತನ್ನ ಜನರನ್ನಾಗಿ ಮಾಡಿಕೊಂಡನು. 15 ಪ್ರವಾದಿಗಳ ಮಾತುಗಳು ಸಹ ಇದಕ್ಕೆ ಸಾಮರಸ್ಯವಾಗಿವೆ:

16 ‘ಇದಾದನಂತರ ನಾನು ಹಿಂತಿರುಗುವೆನು.
    ನಾನು ದಾವೀದನ ಮನೆಯನ್ನು ಮತ್ತೆ ಕಟ್ಟುವೆನು.
    ಅದು ಬಿದ್ದುಹೋಗಿದೆ.
ಆದರೆ ಕೆಡವಲ್ಪಟ್ಟ ಅವನ ಮನೆಯ ಚೂರುಗಳನ್ನು ನಾನು ಮತ್ತೆ ಒಂದುಗೂಡಿಸುವೆನು.
    ನಾನು ಅವನ ಮನೆಯನ್ನು ಹೊಸದು ಮಾಡುವೆನು.
17 ಬಳಿಕ ಇತರ ಜನರೆಲ್ಲರೂ ಪ್ರಭುವಿಗಾಗಿ ಹುಡುಕುವರು.
    ಯೆಹೂದ್ಯರಲ್ಲದ ಜನರೆಲ್ಲರೂ ಸಹ ನನ್ನ ಜನರೇ ಆಗಿದ್ದಾರೆ.
ಪ್ರಭುವೇ ಇದನ್ನು ಹೇಳಿದ್ದಾನೆ.
    ಈ ಕಾರ್ಯಗಳನ್ನೆಲ್ಲ ಮಾಡುವವನು ಆತನೇ.’(A)

18 ‘ಆದಿಯಿಂದಲೂ ಈ ಕಾರ್ಯಗಳನ್ನು ತಿಳಿಯಪಡಿಸಲಾಗಿದೆ.’[b]

19 “ಆದ್ದರಿಂದ, ದೇವರ ಕಡೆಗೆ ತಿರುಗಿಕೊಂಡ ಯೆಹೂದ್ಯರಲ್ಲದ ಸಹೋದರರಿಗೆ ನಾವು ತೊಂದರೆ ಕೊಡಬಾರದು. 20 ಅದಕ್ಕೆ ಬದಲಾಗಿ ನಾವು ಅವರಿಗೆ ಒಂದು ಪತ್ರವನ್ನು ಬರೆದು ಈ ವಿಷಯಗಳನ್ನು ತಿಳಿಸೋಣ:

ವಿಗ್ರಹಗಳಿಗೆ ಅರ್ಪಿಸಿದ ಆಹಾರವನ್ನು ತಿನ್ನಬೇಡಿರಿ. (ಈ ಆಹಾರ ಅಶುದ್ಧವಾದದ್ದು.)

ಯಾವುದೇ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ. ರಕ್ತವನ್ನು ತಿನ್ನಬೇಡಿ.

ಕುತ್ತಿಗೆ ಹಿಸುಕಿಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.

21 ಅವರು ಇವುಗಳನ್ನು ಮಾಡಕೂಡದು. ಏಕೆಂದರೆ ಮೋಶೆಯ ಧರ್ಮಶಾಸ್ತ್ರವನ್ನು ಬೋಧಿಸುವಂಥ ಜನರು ಪ್ರತಿಯೊಂದು ಪಟ್ಟಣದಲ್ಲಿ ಇನ್ನೂ ಇದ್ದಾರೆ. ಅನೇಕ ವರ್ಷಗಳಿಂದ ಪ್ರತಿ ಸಬ್ಬತ್ ದಿನದಲ್ಲಿ ಮೋಶೆಯ ಮಾತುಗಳನ್ನು ಓದಲಾಗುತ್ತಿದೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International