Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆರೆಮೀಯ 32-33

ಯೆರೆಮೀಯನು ಹೊಲವನ್ನು ಕೊಂಡದ್ದು

32 ಯೆಹೂದದ ರಾಜನಾದ ಚಿದ್ಕೀಯನ ಆಳ್ವಿಕೆಯ ಹತ್ತನೆಯ ವರ್ಷದಲ್ಲಿ[a] ಯೆರೆಮೀಯನಿಗೆ ಯೆಹೋವನಿಂದ ಬಂದ ಸಂದೇಶವಿದು. ಚಿದ್ಕೀಯನ ಆಳ್ವಿಕೆಯ ಹತ್ತನೆಯ ವರ್ಷ ನೆಬೂಕದ್ನೆಚ್ಚರನ ಆಳ್ವಿಕೆಯ ಹದಿನೆಂಟನೇ ವರ್ಷವಾಗಿತ್ತು. ಆ ಸಮಯದಲ್ಲಿ ಬಾಬಿಲೋನಿನ ರಾಜನ ಸೈನ್ಯವು ಜೆರುಸಲೇಮನ್ನು ಮುತ್ತಿತ್ತು. ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದನು. ಈ ಕಾರಾಗೃಹವು ಯೆಹೂದದ ರಾಜನ ಅರಮನೆಗೆ ಸೇರಿತ್ತು. ಯೆಹೂದದ ರಾಜನಾದ ಚಿದ್ಕೀಯನು ಯೆರೆಮೀಯನನ್ನು ಆ ಕಾರಾಗೃಹದಲ್ಲಿಟ್ಟಿದ್ದನು. ಯೆರೆಮೀಯನು ಪ್ರವಾದಿಸಿದ ವಿಷಯಗಳನ್ನು ಚಿದ್ಕೀಯನು ಮೆಚ್ಚಿಕೊಂಡಿರಲಿಲ್ಲ. ಯೆರೆಮೀಯನು ಹೇಳಿದ್ದೇನೆಂದರೆ: “ಯೆಹೋವನು ಹೀಗೆನ್ನುತ್ತಾನೆ: ‘ನಾನು ತಕ್ಷಣವೇ ಜೆರುಸಲೇಮ್ ನಗರವನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ. ನೆಬೂಕದ್ನೆಚ್ಚರನು ಈ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು. ಯೆಹೂದದ ರಾಜನಾದ ಚಿದ್ಕೀಯನು ಬಾಬಿಲೋನಿನ ಸೈನಿಕರಿಂದ ತಪ್ಪಿಸಿಕೊಳ್ಳಲಾರ. ಖಂಡಿತವಾಗಿಯೂ ಅವನನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸಲಾಗುವುದು. ಚಿದ್ಕೀಯನು ಮುಖಾಮುಖಿಯಾಗಿ ಬಾಬಿಲೋನಿನ ರಾಜನೊಂದಿಗೆ ಮಾತನಾಡುವನು. ಚಿದ್ಕೀಯನು ತನ್ನ ಕಣ್ಣುಗಳಿಂದ ಅವನನ್ನು ನೋಡುವನು. ಬಾಬಿಲೋನಿನ ರಾಜನು ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗುವನು. ನಾನು ಅವನನ್ನು ದಂಡಿಸುವವರೆಗೆ ಚಿದ್ಕೀಯನು ಅಲ್ಲಿರುವನು. ನೀವು ಕಸ್ದೀಯರೊಡನೆ ಯುದ್ಧ ಮಾಡಿದರೂ ನಿಮಗೆ ಜಯವಾಗದು.’” ಇದು ಯೆಹೋವನ ನುಡಿ.

ಸೆರೆಯಲ್ಲಿದ್ದಾಗ ಯೆರೆಮೀಯನು ಹೇಳಿದನು, “ನನಗೆ ಯೆಹೋವನಿಂದ ಒಂದು ಸಂದೇಶ ಬಂದಿದೆ. ಅದು ಹೀಗಿದೆ: ಯೆರೆಮೀಯನೇ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾಗಿರುವ ಹನಮೇಲನು ಶೀಘ್ರದಲ್ಲಿ ನಿನ್ನ ಬಳಿಗೆ ಬಂದು, ‘ಯೆರೆಮೀಯನೇ, ಅನಾತೋತ್ ಪಟ್ಟಣದ ಬಳಿಯಲ್ಲಿರುವ ನನ್ನ ಹೊಲವನ್ನು ಕೊಂಡುಕೊ. ನೀನು ನನ್ನ ಅತಿ ಸಮೀಪದ ಬಂಧುವಾದುದರಿಂದ ಅದನ್ನು ಕೊಂಡುಕೊ. ಆ ಹೊಲವನ್ನು ಕೊಂಡುಕೊಳ್ಳಲು ನಿನಗೆ ಅಧಿಕಾರವಿದೆ ಮತ್ತು ಅದು ನಿನ್ನ ಹೊಣೆಗಾರಿಕೆಯೂ ಹೌದು’ ಎಂದು ಹೇಳುವನು.

“ಆಮೇಲೆ ಯೆಹೋವನು ಹೇಳಿದಂತೆಯೇ ಆಯಿತು. ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಕಾರಾಗೃಹದ ಅಂಗಳದಲ್ಲಿದ್ದ ನನ್ನ ಬಳಿಗೆ ಬಂದು ಹೀಗೆ ಹೇಳಿದನು: ‘ಯೆರೆಮೀಯನೇ, ಬೆನ್ಯಾಮೀನ್ ಸೀಮೆಯ ಅನಾತೋತಿನಲ್ಲಿರುವ ನನ್ನ ಹೊಲವನ್ನು ಕೊಂಡುಕೊ. ಆ ಹೊಲವನ್ನು ನಿನಗಾಗಿ ಕೊಂಡುಕೊ. ಅದರ ಒಡೆಯನಾಗುವದಕ್ಕೆ ನಿನಗೆ ಹಕ್ಕಿದೆ.’”

ಇದು ಯೆಹೋವನ ಸಂದೇಶವೆಂದು ನನಗೆ ತಿಳಿಯಿತು. ನಾನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನಿಂದ ಅನಾತೋತಿನಲ್ಲಿರುವ ಹೊಲವನ್ನು ಕೊಂಡು ಅದರ ಕ್ರಯವಾಗಿ ಹದಿನೇಳು ಶೆಕೆಲ್‌[b] ಬೆಳ್ಳಿಯನ್ನು ತೂಕಹಾಕಿದೆನು. 10 ನಾನು ಕ್ರಯಪತ್ರಕ್ಕೆ ಸಹಿ ಹಾಕಿದೆನು. ಕ್ರಯಪತ್ರದ ಒಂದು ಪ್ರತಿಗೆ ರುಜು ಮಾಡಿಸಿದೆನು. ಇದಕ್ಕೆ ಸಾಕ್ಷಿಯಾಗಿ ಕೆಲಜನರನ್ನು ಕರೆಸಿದೆನು. ನಾನು ಬೆಳ್ಳಿಯನ್ನು ತಕ್ಕಡಿಯಲ್ಲಿ ತೂಕಹಾಕಿ ಕೊಟ್ಟೆನು. 11 ಆಮೇಲೆ ಕ್ರಯಪತ್ರದ ರುಜು ಮಾಡಿದ ಒಂದು ಪ್ರತಿಯನ್ನು ಮತ್ತು ರುಜು ಮಾಡದ ಒಂದು ಪ್ರತಿಯನ್ನು ತೆಗೆದುಕೊಂಡೆನು. 12 ನಾನು ಅವುಗಳನ್ನು ಬಾರೂಕನ ಕೈಗೆ ಕೊಟ್ಟೆನು. ಬಾರೂಕನು ನೇರೀಯನ ಮಗನಾಗಿದ್ದನು. ನೇರೀಯನು ಮಹ್ಸೇಮನ ಮಗನಾಗಿದ್ದನು. ಮೊಹರು ಮಾಡಿದ ಕ್ರಯಪತ್ರದಲ್ಲಿ ನಾನು ಹೊಲವನ್ನು ಕ್ರಯಕ್ಕೆ ಕೊಂಡ ಎಲ್ಲಾ ಷರತ್ತುಗಳಿದ್ದವು. ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಮತ್ತು ಉಳಿದ ಸಾಕ್ಷಿಗಳು ಅಲ್ಲಿದ್ದಾಗಲೇ ನಾನು ಈ ಕ್ರಯಪತ್ರವನ್ನು ಬಾರೂಕನ ಕೈಗೆ ಕೊಟ್ಟೆನು. ಆ ಸಾಕ್ಷಿಗಳು ಸಹ ಈ ಕ್ರಯಪತ್ರಕ್ಕೆ ಸಹಿಹಾಕಿದ್ದರು. ಆ ಅಂಗಳದಲ್ಲಿ ಕುಳಿತ ಹಲವಾರು ಜನ ಯೆಹೂದ್ಯರು ನಾನು ಬಾರೂಕನ ಕೈಗೆ ಆ ಕ್ರಯಪತ್ರ ಕೊಡುವದನ್ನು ನೋಡಿದರು.

13 ಎಲ್ಲಾ ಜನರು ನೋಡುತ್ತಿದ್ದಂತೆಯೆ ನಾನು ಬಾರೂಕನಿಗೆ, 14 “ಸರ್ವಶಕ್ತನೂ ಇಸ್ರೇಲಿನ ದೇವರೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ: ‘ಕ್ರಯಪತ್ರದ ಎರಡೂ ಪ್ರತಿಗಳನ್ನು ಅಂದರೆ ರುಜುಮಾಡಿದ ಮತ್ತು ರುಜುಮಾಡದ ಪ್ರತಿಗಳನ್ನು ತೆಗೆದುಕೊಂಡು ಅವುಗಳು ಬಹುಕಾಲ ಉಳಿಯುವಂತೆ ಒಂದು ಮಣ್ಣಿನ ಪಾತ್ರೆಯಲ್ಲಿ ಹಾಕಿ ಮುಚ್ಚಿಡು.’ 15 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು, ‘ಮುಂದಿನಕಾಲದಲ್ಲಿ ಇಸ್ರೇಲ್ ದೇಶದಲ್ಲಿ ನನ್ನ ಜನರು ಪುನಃ ಮನೆಗಳನ್ನು, ಹೊಲಗಳನ್ನು, ದ್ರಾಕ್ಷಿತೋಟಗಳನ್ನು ಕೊಂಡುಕೊಳ್ಳುವರು’ ಎಂದು ಅನ್ನುತ್ತಾನೆ.”

16 ನೇರೀಯನ ಮಗನಾದ ಬಾರೂಕನಿಗೆ ಕ್ರಯಪತ್ರವನ್ನು ಕೊಟ್ಟ ಮೇಲೆ ನಾನು ಯೆಹೋವನಿಗೆ ಪ್ರಾರ್ಥಿಸಿ ಹೀಗೆಂದೆನು:

17 “ದೇವರಾದ ಯೆಹೋವನೇ, ನೀನು ಭೂಮ್ಯಾಕಾಶಗಳನ್ನು ಸೃಷ್ಟಿಸಿದೆ. ಅವುಗಳನ್ನು ನೀನು ನಿನ್ನ ಅಪಾರವಾದ ಶಕ್ತಿಯಿಂದ ಸೃಷ್ಟಿಸಿದೆ. ನಿನಗೆ ಅಸಾಧ್ಯವಾದುದು ಯಾವುದೂ ಇಲ್ಲ. 18 ಯೆಹೋವನೇ, ನೀನು ಸಾವಿರಾರು ಜನರಿಗೆ ನಂಬಿಗಸ್ತನಾಗಿಯೂ ಕರುಣಾಮಯಿಯಾಗಿಯೂ ಇರುವೆ. ಆದರೆ ತಂದೆಗಳು ಮಾಡಿದ ಪಾಪಕ್ಕಾಗಿ ಮಕ್ಕಳಿಗೆ ಶಿಕ್ಷೆಯನ್ನು ವಿಧಿಸುವಾತನೂ ನೀನೇ. ಮಹತ್ವವುಳ್ಳವನೇ, ಪರಾಕ್ರಮಿಯಾದ ದೇವರೇ, ಸರ್ವಶಕ್ತನಾದ ಯೆಹೋವನು ಎಂಬುದೇ ನಿನ್ನ ನಾಮಧೇಯ. 19 ನೀನು ಮಹತ್ತರವಾದ ಯೋಜನೆಗಳನ್ನು ಹಾಕಿ ಮಹತ್ಕಾರ್ಯಗಳನ್ನು ಮಾಡುವೆ. ಜನರು ಮಾಡುವ ಎಲ್ಲವನ್ನೂ ನೀನು ನೋಡುವೆ. ಒಳ್ಳೆಯದನ್ನು ಮಾಡುವವರಿಗೆ ನೀನು ಪ್ರತಿಫಲಗಳನ್ನು ಕೊಡುವೆ. ಕೆಟ್ಟದ್ದನ್ನು ಮಾಡುವವರನ್ನು ನೀನು ದಂಡಿಸುವೆ. ಅವರು ಯಾವುದಕ್ಕೆ ಅರ್ಹರೊ ಅದನ್ನು ಕೊಡುವೆ. 20 ಯೆಹೋವನೇ, ನೀನು ಈಜಿಪ್ಟ್ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿದೆ. ಇಂದಿನವರೆಗೂ ನೀನು ಅದ್ಭುತಕಾರ್ಯಗಳನ್ನು ಮಾಡಿದೆ. ಇಸ್ರೇಲಿನಲ್ಲಿಯೂ ನೀನು ಅವುಗಳನ್ನು ಮಾಡಿದೆ. ಜನರು ಇರುವಲ್ಲೆಲ್ಲ ನೀನು ಅವುಗಳನ್ನು ಮಾಡಿದೆ. ಇವುಗಳಿಂದ ನೀನು ಸುಪ್ರಸಿದ್ಧನಾಗಿರುವೆ. 21 ಯೆಹೋವನೇ, ನೀನು ಅದ್ಭುತಕಾರ್ಯಗಳನ್ನು ಮಾಡಿ ನಿನ್ನ ಜನರನ್ನು ಈಜಿಪ್ಟಿನಿಂದ ಇಸ್ರೇಲಿಗೆ ಕರೆದುತಂದೆ. ಇದನ್ನು ಬಲವಾದ ಕೈಗಳಿಂದಲೇ ಮಾಡಿದೆ. ನಿನ್ನ ಸಾಮರ್ಥ್ಯ ಆಶ್ಚರ್ಯಕರವಾದದು.

22 “ಯೆಹೋವನೇ, ನೀನು ಈ ಭೂಮಿಯನ್ನು ಇಸ್ರೇಲರಿಗೆ ಕೊಟ್ಟೆ. ನೀನು ಬಹಳ ಕಾಲದ ಹಿಂದೆಯೇ ಈ ಭೂಮಿಯನ್ನು ಅವರ ಪೂರ್ವಿಕರಿಗೆ ಕೊಡುವದಾಗಿ ಮಾತು ಕೊಟ್ಟಿದ್ದೆ. ಇದು ಬಹಳ ಒಳ್ಳೆಯ ಭೂಮಿ. ಇದು ಅನೇಕ ಒಳ್ಳೆ ವಸ್ತುಗಳನ್ನು ಹೊಂದಿರುವ ಒಳ್ಳೆಯ ಭೂಮಿ.[c] 23 ಇಸ್ರೇಲಿನ ಜನರು ಈ ಪ್ರದೇಶಕ್ಕೆ ಬಂದು ಅದನ್ನು ತಮ್ಮದನ್ನಾಗಿ ಮಾಡಿಕೊಂಡರು. ಆದರೆ ಅವರು ನಿನ್ನ ಆಜ್ಞೆಯನ್ನು ಪಾಲಿಸಲಿಲ್ಲ; ನಿನ್ನ ಉಪದೇಶಗಳನ್ನು ಅನುಸರಿಸಲಿಲ್ಲ; ನಿನ್ನ ಆಜ್ಞೆಯಂತೆ ಮಾಡಲಿಲ್ಲ. ಆದ್ದರಿಂದ ನೀನು ಇಸ್ರೇಲರಿಗೆ ಇಂಥಾ ದುರ್ಗತಿ ಬರುವಂತೆ ಮಾಡಿದೆ.

24 “ಈಗ ವೈರಿಗಳು ನಗರವನ್ನು ಮುತ್ತಿದ್ದಾರೆ. ಜೆರುಸಲೇಮಿನ ಗೋಡೆಯನ್ನು ಹತ್ತಿ ಅದನ್ನು ಸ್ವಾಧೀನಪಡಿಸಿಕೊಳ್ಳುವದಕ್ಕಾಗಿ ಅವರು ಇಳಿಜಾರುಗೋಡೆಗಳನ್ನು ಕಟ್ಟುತ್ತಿದ್ದಾರೆ. ಬಾಬಿಲೋನಿನ ಸೈನಿಕರು ತಮ್ಮ ಖಡ್ಗ, ಕ್ಷಾಮ ಮತ್ತು ಭಯಂಕರವ್ಯಾಧಿ ಇವುಗಳ ಸಹಾಯದಿಂದ ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವರು. ಬಾಬಿಲೋನಿನ ಸೈನಿಕರು ಈಗ ನಗರದ ಮೇಲೆ ಧಾಳಿ ಮಾಡುತ್ತಿದ್ದಾರೆ. ಯೆಹೋವನೇ, ಹೀಗಾಗುವದೆಂದು ನೀನು ಹೇಳಿದ್ದೆ, ಈಗ ನೀನು ಹೇಳಿದಂತೆಯೇ ಆಗುತ್ತಿದೆ.

25 “ನನ್ನ ಒಡೆಯನಾದ ಯೆಹೋವನೇ, ಆ ದುರ್ಬಟನೆಗಳೆಲ್ಲಾ ಸಂಭವಿಸುತ್ತಿವೆ. ಆದರೆ ಈಗ ನೀನು ‘ಯೆರೆಮೀಯನೇ, ಬೆಳ್ಳಿಯನ್ನು ಕೊಟ್ಟು ಹೊಲವನ್ನು ಕೊಂಡುಕೋ ಮತ್ತು ಈ ಖರೀದಿಗೆ ಸಾಕ್ಷಿಯಾಗಿ ಕೆಲವು ಜನರನ್ನು ಆರಿಸಿಕೋ’ ಎಂದು ಹೇಳುತ್ತಿರುವಿಯಲ್ಲ. ಬಾಬಿಲೋನಿನ ಸೈನ್ಯವು ನಗರವನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿ ನಿಂತಿರುವಾಗ ನೀನು ಇದನ್ನು ಹೇಳುತ್ತಿರುವಿಯಲ್ಲ, ಏಕೆ? ಏಕೆ ನಾನು ಹಣವನ್ನು ಹೀಗೆ ವ್ಯರ್ಥವಾಗಿ ಕಳೆದುಕೊಳ್ಳಬೇಕು?”

26 ಆಗ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು: 27 “ಯೆರೆಮೀಯನೇ, ನಾನೇ ಯೆಹೋವನು, ನಾನು ಈ ಭೂಮಂಡಲದ ಪ್ರತಿಯೊಬ್ಬನ ದೇವರು. ಯೆರೆಮೀಯನೆ, ನನಗೆ ಯಾವುದೂ ಅಸಾಧ್ಯವಲ್ಲವೆಂಬುದನ್ನು ನೀನು ಬಲ್ಲೆ.” 28 ಯೆಹೋವನು ಹೀಗೆಂದನು: “ಜೆರುಸಲೇಮ್ ನಗರವನ್ನು ನಾನು ಕೂಡಲೇ ಬಾಬಿಲೋನಿನ ಸೈನ್ಯಕ್ಕೂ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೂ ಒಪ್ಪಿಸುವೆನು. ಸೈನ್ಯವು ಈ ನಗರವನ್ನು ವಶಪಡಿಸಿಕೊಳ್ಳುವುದು. 29 ಬಾಬಿಲೋನಿನ ಸೈನ್ಯವು ಈಗಾಗಲೇ ಜೆರುಸಲೇಮ್ ನಗರದ ಮೇಲೆ ಧಾಳಿ ಮಾಡುತ್ತಿದೆ. ಸೈನಿಕರು ಬೇಗನೆ ನಗರವನ್ನು ಪ್ರವೇಶಿಸಿ ಅದಕ್ಕೆ ಬೆಂಕಿಹಚ್ಚಿ ಸುಟ್ಟುಹಾಕುವರು. ಜೆರುಸಲೇಮಿನ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರಾದ ಬಾಳನಿಗೆ ನೈವೇದ್ಯವನ್ನು ಅರ್ಪಿಸಿ ನಾನು ಕೋಪಿಸಿಕೊಳ್ಳುವಂತೆ ಮಾಡಿದ ಕೆಲವು ಮನೆಗಳು ಈ ನಗರದಲ್ಲಿವೆ. ಅದಲ್ಲದೆ ಕೆಲವು ಜನರು ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸಿರುವರು. ಬಾಬಿಲೋನಿನ ಸೈನ್ಯವು ಆ ಮನೆಗಳನ್ನು ಸುಟ್ಟುಹಾಕುವುದು. 30 ನಾನು ಇಸ್ರೇಲಿನ ಜನರನ್ನು ಮತ್ತು ಯೆಹೂದದ ಜನರನ್ನು ಗಮನಿಸಿದ್ದೇನೆ. ಅವರು ಮಾಡುವದೆಲ್ಲ ಕೆಟ್ಟದ್ದೆ. ಅವರು ಚಿಕ್ಕಂದಿನಿಂದ ಕೆಟ್ಟದ್ದನ್ನೇ ಮಾಡಿದ್ದಾರೆ. ಇಸ್ರೇಲಿನ ಜನರು ತಮ್ಮ ಕೈಗಳಿಂದ ಮಾಡಿದ ವಿಗ್ರಹಗಳನ್ನು ಪೂಜಿಸಿ ನನಗೆ ಬಹುಕೋಪ ಬರುವಂತೆ ಮಾಡಿದರು.” ಇದು ಯೆಹೋವನ ನುಡಿ. 31 “ಜೆರುಸಲೇಮ್ ನಗರವು ನಿರ್ಮಾಣಗೊಂಡಂದಿನಿಂದ ಇಂದಿನವರೆಗೂ ಈ ನಗರದ ಜನರು ನನಗೆ ಕೋಪ ಬರುವಂತೆ ಮಾಡಿದ್ದಾರೆ. ಈ ನಗರವು ನನಗೆ ಅತಿಕೋಪ ಬರುವಂತೆ ಮಾಡಿದೆ. ಆದ್ದರಿಂದ ಕಣ್ಣಿಗೆ ಕಾಣದಂತೆ ಅದನ್ನು ಅಳಿಸಿಬಿಡುವೆನು. 32 ಇಸ್ರೇಲಿನ ಮತ್ತು ಯೆಹೂದದ ಜನರು ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನಾನು ಜೆರುಸಲೇಮ್ ನಗರವನ್ನು ನಾಶಮಾಡುತ್ತೇನೆ. ಜನರು, ರಾಜರು, ಮುಂದಾಳುಗಳು, ಯಾಜಕರು, ಪ್ರವಾದಿಗಳು, ಯೆಹೂದದ ಪ್ರಜೆಗಳು, ಜೆರುಸಲೇಮಿನ ನಿವಾಸಿಗಳು ಇವರೆಲ್ಲರೂ ನನಗೆ ಕೋಪ ಬರುವಂತೆ ಮಾಡಿದ್ದಾರೆ.

33 “ಆ ಜನರು ಸಹಾಯಕೋರಿ ನನ್ನಲ್ಲಿಗೆ ಬರಬೇಕಾಗಿತ್ತು. ಆದರೆ ಅವರು ನನಗೆ ವಿಮುಖರಾದರು. ನಾನು ಮತ್ತೆಮತ್ತೆ ಅವರಿಗೆ ಬುದ್ಧಿಕಲಿಸುವ ಪ್ರಯತ್ನ ಮಾಡಿದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ನಾನು ಅವರನ್ನು ತಿದ್ದುವ ಪ್ರಯತ್ನ ಮಾಡಿದೆ, ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. 34 ಆ ಜನರು ತಮಗಾಗಿ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ. ನಾನು ಆ ವಿಗ್ರಹಗಳನ್ನು ದ್ವೇಷಿಸುತ್ತೇನೆ. ನನ್ನ ಹೆಸರಿನಿಂದ ಖ್ಯಾತಿಗೊಂಡ ಆಲಯದಲ್ಲಿ ಆ ವಿಗ್ರಹಗಳನ್ನಿಟ್ಟು ನನ್ನ ಆಲಯವನ್ನು ‘ಹೊಲಸು’ ಮಾಡಿದ್ದಾರೆ.

35 “ಬೆನ್‌ಹಿನ್ನೊಮ್ ಕಣಿವೆಯಲ್ಲಿ ಅವರು ಸುಳ್ಳುದೇವರಾದ ಬಾಳನಿಗಾಗಿ ಎತ್ತರವಾದ ಸ್ಥಳಗಳನ್ನು ಕಟ್ಟಿದ್ದಾರೆ. ತಮ್ಮ ಮಕ್ಕಳನ್ನು ಆಹುತಿಕೊಡುವದಕ್ಕಾಗಿ ಈ ಪೂಜಾಸ್ಥಳಗಳನ್ನು ಕಟ್ಟಿಸಿದ್ದಾರೆ. ಇಂಥಾ ಭಯಂಕರವಾದ ಕೆಲಸವನ್ನು ಮಾಡಲು ನಾನು ಅವರಿಗೆ ಆಜ್ಞಾಪಿಸಿಲ್ಲ. ಯೆಹೂದದ ಜನರು ಇಂಥಾ ಭಯಂಕರವಾದ ಕಾರ್ಯವನ್ನು ಮಾಡುವರೆಂದು ನಾನೆಂದೂ ಊಹಿಸಿರಲಿಲ್ಲ.

36 “‘ಬಾಬಿಲೋನಿನ ರಾಜನು ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು. ಈ ಪಟ್ಟಣವನ್ನು ವಶಪಡಿಸಿಕೊಳ್ಳಲು ಅವನು ಖಡ್ಗ, ಕ್ಷಾಮ, ಭಯಂಕರವಾದ ವ್ಯಾಧಿಗಳನ್ನು ಬಳಸಿಕೊಳ್ಳುವನು’ ಎಂದು ನೀವು ಹೇಳುತ್ತಿದ್ದೀರಿ. ಆದರೆ ಇಸ್ರೇಲರ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ: 37 ‘ಇಸ್ರೇಲರನ್ನು ಮತ್ತು ಯೆಹೂದ್ಯರನ್ನು ತಮ್ಮ ಪ್ರದೇಶವನ್ನು ಬಿಟ್ಟುಹೋಗಲು ನಾನು ಒತ್ತಾಯಿಸಿದ್ದೇನೆ. ನಾನು ಅವರ ಮೇಲೆ ತುಂಬ ಕೋಪಗೊಂಡಿದ್ದೆ. ಆದರೆ ನಾನು ಅವರನ್ನು ಈ ಸ್ಥಳಕ್ಕೆ ಹಿಂದಿರುಗಿಸುವೆನು. ನಾನು ಒತ್ತಾಯಿಸಿ ಅವರನ್ನು ಅಟ್ಟಿದ ಸ್ಥಳಗಳಿಂದ ಅವರನ್ನು ಒಟ್ಟುಗೂಡಿಸುವೆನು. ಅವರನ್ನು ಪುನಃ ಈ ಸ್ಥಳಕ್ಕೆ ಕರೆತರುವೆನು. ಅವರು ನೆಮ್ಮದಿಯಿಂದ ಮತ್ತು ಸುರಕ್ಷಿತವಾಗಿ ಇರುವಂತೆ ಮಾಡುವೆನು. 38 ಇಸ್ರೇಲರು ಮತ್ತು ಯೆಹೂದ್ಯರು ನನ್ನ ಭಕ್ತರಾಗಿರುವರು, ನಾನು ಅವರ ದೇವರಾಗಿರುವೆನು. 39 ಒಂದೇ ಜನಾಂಗವಾಗುವ ಬಯಕೆಯನ್ನು ನಾನು ಅವರಲ್ಲಿ ಉಂಟುಮಾಡುವೆನು. ಅವರು ತಮ್ಮ ಜೀವಮಾನವೆಲ್ಲಾ ನನ್ನನ್ನು ಆರಾಧಿಸಬೇಕೆಂಬ ಬಯಕೆಯನ್ನು ಹೊಂದಿರುವರು. ಹೌದು, ಅವರ ಬಯಕೆಯೂ ಅವರ ಮಕ್ಕಳ ಬಯಕೆಯೂ ಇದೇ ಆಗಿರುವುದು.

40 “‘ನಾನು ಇಸ್ರೇಲರ ಮತ್ತು ಯೆಹೂದ್ಯರ ಸಂಗಡ ಶಾಶ್ವತವಾದ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಗನುಸಾರವಾಗಿ ನಾನು ಅವರಿಗೆ ವಿಮುಖನಾಗುವುದೇ ಇಲ್ಲ. ನಾನು ಯಾವಾಗಲೂ ಅವರಿಗೆ ಒಳ್ಳೆಯವನಾಗಿರುತ್ತೇನೆ. ನನ್ನನ್ನು ಗೌರವಿಸಬೇಕೆಂಬ ಇಚ್ಛೆಯನ್ನು ಅವರಲ್ಲಿ ಬರಮಾಡುತ್ತೇನೆ. ಆಗ ಅವರೆಂದಿಗೂ ನನಗೆ ವಿಮುಖರಾಗುವದಿಲ್ಲ. 41 ಅವರು ನನ್ನನ್ನು ಸಂತೋಷಪಡಿಸುವರು. ಅವರಿಗೆ ಒಳ್ಳೆಯದನ್ನು ಮಾಡುವದರಲ್ಲಿ ನಾನು ಸಂತೋಷಪಡುವೆನು. ನಾನು ಖಂಡಿತವಾಗಿ ಅವರನ್ನು ಈ ದೇಶದಲ್ಲಿ ನೆಟ್ಟು ಬೆಳೆಯುವಂತೆ ಮಾಡುತ್ತೇನೆ. ಇದನ್ನು ನಾನು ಮನಃಪೂರ್ವಕವಾಗಿ ಮಾಡುತ್ತೇನೆ.’”

42 ಯೆಹೋವನು ಹೀಗೆನ್ನುತ್ತಾನೆ: “ಇಸ್ರೇಲಿನ ಮತ್ತು ಯೆಹೂದದ ಜನರ ಮೇಲೆ ನಾನು ಈ ಮಹಾವಿಪತ್ತನ್ನು ತಂದಿದ್ದೇನೆ. ಅದರಂತೆಯೇ ನಾನು ಅವರಿಗೆ ಒಳಿತನ್ನು ತರುವೆನು. ನಾನು ಅವರಿಗೆ ಒಳ್ಳೆಯದನ್ನು ಮಾಡುವದಾಗಿ ಮಾತುಕೊಡುತ್ತೇನೆ. 43 ನೀವು ‘ಈ ಪ್ರದೇಶವು ಒಂದು ಬರಿದಾದ ಮರುಭೂಮಿ. ಇಲ್ಲಿ ಜನರಾಗಲಿ ಪ್ರಾಣಿಗಳಾಗಲಿ ಇಲ್ಲ. ಬಾಬಿಲೋನಿನ ಸೈನ್ಯವು ಈ ದೇಶವನ್ನು ಸೋಲಿಸಿದೆ’ ಎಂದು ಹೇಳುತ್ತಿರುವಿರಿ. ಆದರೆ ಮುಂದಿನಕಾಲದಲ್ಲಿ ಜನರು ಪುನಃ ಈ ಪ್ರದೇಶದಲ್ಲಿ ಹೊಲಗಳನ್ನು ಕೊಂಡುಕೊಳ್ಳುವರು. 44 ಜನರು ಹಣ ಕೊಟ್ಟು ಭೂಮಿಯನ್ನು ಕೊಂಡುಕೊಳ್ಳುವರು. ಅವರು ಕರಾರುಪತ್ರಗಳಿಗೆ ಸಹಿಹಾಕುವರು. ಜನರು ಕ್ರಯಪತ್ರಗಳಿಗೆ ಸಹಿ ಹಾಕುವದನ್ನು ಬೇರೆಯವರು ನೋಡುವರು. ಬೆನ್ಯಾಮೀನ್ ಕುಲದವರು ವಾಸಿಸುವ ಪ್ರದೇಶದಲ್ಲಿ ಜನರು ಪುನಃ ಹೊಲಗಳನ್ನು ಕೊಂಡುಕೊಳ್ಳುವರು. ಜೆರುಸಲೇಮಿನ ಸುತ್ತಲಿನ ಪ್ರದೇಶದಲ್ಲಿ ಅವರು ಹೊಲಗಳನ್ನು ಕೊಂಡುಕೊಳ್ಳುವರು. ಅವರು ಯೆಹೂದ ಪ್ರದೇಶದ ಊರುಗಳಲ್ಲಿಯೂ ಬೆಟ್ಟಪ್ರದೇಶದಲ್ಲಿಯೂ ಪಶ್ಚಿಮದ ಇಳಿಜಾರು ಪ್ರದೇಶದಲ್ಲಿಯೂ ದಕ್ಷಿಣದ ಮರಳುಗಾಡಿನಲ್ಲಿಯೂ ಹೊಲಗಳನ್ನು ಕೊಂಡುಕೊಳ್ಳುವರು. ನಾನು ನಿಮ್ಮ ಜನರನ್ನು ನಿಮ್ಮ ಪ್ರದೇಶಕ್ಕೆ ಪುನಃ ಕರೆದುಕೊಂಡು ಬರುವದರಿಂದ ಹೀಗಾಗುವುದು.” ಇದು ಯೆಹೋವನ ನುಡಿ.

ದೇವರ ವಾಗ್ದಾನ

33 ಎರಡನೇ ಬಾರಿ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು. ಯೆರೆಮೀಯನು ಇನ್ನೂ ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದನು. “ಯೆಹೋವನು ಭೂಮಿಯನ್ನು ಸೃಷ್ಟಿಸಿದನು. ಆತನೇ ಅದನ್ನು ಸುರಕ್ಷಿತವಾಗಿಡುವನು. ಯೆಹೋವನು ಹೀಗೆನ್ನುತ್ತಾನೆ: ‘ಯೆಹೂದವೇ, ನನಗೆ ಪ್ರಾರ್ಥಿಸು. ಆಗ ನಾನು ನಿನಗೆ ಉತ್ತರಿಸುವೆನು. ನಾನು ನಿನಗೆ ಬಹು ಮುಖ್ಯವಾದ ರಹಸ್ಯಗಳನ್ನು ತಿಳಿಸುತ್ತೇನೆ. ಈ ಸಂಗತಿಗಳನ್ನು ನೀನು ಹಿಂದೆಂದೂ ಕೇಳಲಿಲ್ಲ. ಯೆಹೋವನು ಇಸ್ರೇಲಿನ ದೇವರಾಗಿದ್ದಾನೆ. ಜೆರುಸಲೇಮಿನಲ್ಲಿನ ಮನೆಗಳ ಬಗ್ಗೆಯೂ ಮತ್ತು ಯೆಹೂದದ ರಾಜರ ಅರಮನೆಗಳ ಬಗ್ಗೆಯೂ ಯೆಹೋವನು ಹೀಗೆ ಹೇಳುತ್ತಾನೆ. ವೈರಿಗಳು ಆ ಮನೆಗಳನ್ನು ಕೆಡವಿಬಿಡುತ್ತಾರೆ. ವೈರಿಗಳು ನಗರದ ಕೋಟೆಗೋಡೆಗಳ ತುದಿಯವರೆಗೂ ಇಳಿಜಾರಾದ ಗೋಡೆಗಳನ್ನು ಕಟ್ಟುತ್ತಾರೆ. ವೈರಿಗಳು ಖಡ್ಗ ಹಿಡಿದು ಈ ನಗರದ ಜನರೊಂದಿಗೆ ಕಾದಾಡುವರು.

“‘ಜೆರುಸಲೇಮಿನ ಜನರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾರೆ. ನಾನು ಅವರ ಮೇಲೆ ಕೋಪಗೊಂಡಿದ್ದೇನೆ; ಅವರಿಗೆ ವಿರುದ್ಧವಾಗಿದ್ದೇನೆ. ನಾನು ಅಲ್ಲಿ ಬಹಳ ಜನರನ್ನು ಕೊಂದುಹಾಕುವೆನು. ಬಾಬಿಲೋನಿನ ಸೈನ್ಯವು ಜೆರುಸಲೇಮಿನ ವಿರುದ್ಧ ಹೋರಾಡಲು ಬರುವುದು. ಜೆರುಸಲೇಮಿನ ಮನೆಗಳಲ್ಲಿ ಅನೇಕಾನೇಕ ಮೃತದೇಹಗಳು ಕಣ್ಣಿಗೆ ಬೀಳುವವು.

“‘ಅನಂತರ ನಾನು ಆ ನಗರದ ಜನರನ್ನು ಕ್ಷಮಿಸುವೆನು. ಆ ಜನರು ಶಾಂತಿಯನ್ನೂ ಸುರಕ್ಷಣೆಯನ್ನೂ ಪಡೆಯುವಂತೆ ಮಾಡುವೆನು. ಯೆಹೂದ ಮತ್ತು ಇಸ್ರೇಲುಗಳಿಗೆ ಮತ್ತೊಮ್ಮೆ ಒಳ್ಳೆಯದಾಗುವಂತೆ ಮಾಡುವೆನು. ಅವರನ್ನು ನಾನು ಮೊದಲಿನಂತೆ ಶಕ್ತಿಶಾಲಿಗಳನ್ನಾಗಿ ಮಾಡುವೆನು. ಅವರು ನನ್ನ ವಿರುದ್ಧ ಪಾಪಗಳನ್ನು ಮಾಡಿದರೂ ಅವರ ಪಾಪಗಳನ್ನು ತೊಳೆದುಬಿಡುವೆನು. ಅವರು ನನ್ನ ವಿರುದ್ಧ ಕಾದಾಡಿದರೂ ಅವರನ್ನು ಕ್ಷಮಿಸುವೆನು. ಆಗ ಜೆರುಸಲೇಮ್ ಒಂದು ಅದ್ಭುತವಾದ ಸ್ಥಳವಾಗುವುದು; ಜನರು ಸಂತೋಷದಿಂದಿರುವರು. ಅಲ್ಲಿ ನಡೆದ ಒಳ್ಳೆಯ ಸಂಗತಿಗಳ ಬಗ್ಗೆ ಕೇಳಿದಾಗ ಬೇರೆ ಜನಾಂಗಗಳ ಜನರು ಅದನ್ನು ಹೊಗಳುವರು; ವಿಸ್ಮಯಪಡುವರು. ನಾನು ಜೆರುಸಲೇಮಿಗೆ ಮಾಡುತ್ತಿರುವ ಒಳಿತಿನ ವಿಷಯವು ಅವರ ಕಿವಿಗೆ ಬೀಳುವುದು.’

10 “‘ನಮ್ಮ ದೇಶವು ಒಂದು ಬರಿದಾದ ಮರುಭೂಮಿಯಾಗಿದೆ. ಅಲ್ಲಿ ಜನರಾಗಲಿ ಪ್ರಾಣಿಗಳಾಗಲಿ ವಾಸಿಸುವದಿಲ್ಲ’ ಎಂದು ನೀವು ಹೇಳುತ್ತಿರುವಿರಿ. ಜೆರುಸಲೇಮಿನ ಬೀದಿಗಳಲ್ಲಿ ಮತ್ತು ಯೆಹೂದದ ಊರುಗಳಲ್ಲಿ ಈಗ ಮೌನವಿದೆ. ಆದರೆ ಬೇಗನೆ ಅಲ್ಲಿ ಧ್ವನಿಕೇಳಿಸುವುದು. 11 ಅಲ್ಲಿ ಹರ್ಷದ ಮತ್ತು ಸಂತೋಷದ ಧ್ವನಿ ಕೇಳಿಬರುವುದು. ಅಲ್ಲಿ ವಧುವರರ ಸಂತೋಷದ ಧ್ವನಿ ಕೇಳಿಸುವುದು. ಜನರು ಯೆಹೋವನ ಆಲಯಕ್ಕೆ ತಮ್ಮ ಕಾಣಿಕೆಗಳನ್ನು ಅರ್ಪಿಸಲು ಬರುವ ಧ್ವನಿಯು ಕೇಳಿಸುವುದು. ಅವರು ‘ಸರ್ವಶಕ್ತನಾದ ಯೆಹೋವನನ್ನು ಸ್ತುತಿಸಿರಿ. ಆತನು ಒಳ್ಳೆಯವನು. ಆತನ ಕರುಣೆಯು ಶಾಶ್ವತವಾಗಿರುವುದು’ ಎಂದು ಹೇಳುವರು. ನಾನು ಯೆಹೂದಕ್ಕೆ ಪುನಃ ಸುಸ್ಥಿತಿಯನ್ನು ತರುವುದರಿಂದ ಜನರು ಹೀಗೆ ಹೇಳುವರು. ಅದು ಮೊದಲಿನಂತೆ ಆಗುವುದು.” ಯೆಹೋವನು ಈ ವಿಷಯಗಳನ್ನು ಹೇಳಿದನು.

12 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ಈ ಸ್ಥಳವು ಈಗ ಬರಿದಾಗಿದೆ. ಈಗ ಇಲ್ಲಿ ಜನರಾಗಲಿ ಪಶುಗಳಾಗಲಿ ವಾಸಿಸುವದಿಲ್ಲ. ಆದರೆ ಯೆಹೂದದ ಎಲ್ಲಾ ಊರುಗಳಲ್ಲಿ ಜನರು ವಾಸಿಸುವರು; ಕುರುಬರು ವಾಸಿಸುವರು. ಕುರಿಮಂದೆಗಳಿಗಾಗಿ ಹುಲ್ಲುಗಾವಲುಗಳಿರುವವು. 13 ಕುರಿಗಳು ತಮ್ಮ ಮುಂದೆ ನಡೆದುಕೊಂಡು ಹೋಗುವಾಗ ಕುರುಬರು ಅವುಗಳನ್ನು ಎಣಿಸುವರು. ಇಡೀ ದೇಶದಲ್ಲೆಲ್ಲ ಅಂದರೆ ಬೆಟ್ಟಪ್ರದೇಶದಲ್ಲಿಯೂ ಪಶ್ಚಿಮದ ಇಳಿಜಾರು ಪ್ರದೇಶಗಳಲ್ಲಿಯೂ ನೆಗೆವ್ ಪ್ರದೇಶದಲ್ಲಿಯೂ ಯೆಹೂದದ ಎಲ್ಲಾ ಊರುಗಳಲ್ಲಿಯೂ ತಮ್ಮ ಕುರಿಗಳನ್ನು ಎಣಿಸುತ್ತಿರುವರು.”

ಉತ್ತಮ ಕೊಂಬೆ

14 ಇದು ಯೆಹೋವನ ನುಡಿ: “ನಾನು ಇಸ್ರೇಲಿನ ಮತ್ತು ಯೆಹೂದದ ಜನರಿಗೆ ಒಂದು ವಿಶೇಷವಾದ ವಾಗ್ದಾನವನ್ನು ಮಾಡಿದೆ. ನನ್ನ ವಾಗ್ದಾನವು ನೆರವೇರುವ ಸಮಯ ಬರುತ್ತಿದೆ. 15 ಆಗ ನಾನು ದಾವೀದನ ವಂಶದಿಂದ ಒಳ್ಳೆಯದಾದ ‘ಮೊಳಕೆಯೊಂದನ್ನು’ ಚಿಗುರಿಸುವೆನು. ಆ ಮೊಳಕೆಯು ದೇಶಕ್ಕೆ ಒಳ್ಳೆಯದನ್ನೂ ನೀತಿಯುತವಾದುದನ್ನೂ ಮಾಡುವುದು. 16 ಆಗ ಯೆಹೂದ್ಯರು ಸುರಕ್ಷಿತರಾಗಿರುವರು. ಜೆರುಸಲೇಮಿನಲ್ಲಿ ಜನರು ಸುರಕ್ಷಿತರಾಗಿರುವರು. ಆ ‘ಮೊಳಕೆಯ’ ಹೆಸರು ‘ಯೆಹೋವನು ಒಳ್ಳೆಯವನು.’”[d]

17 ಯೆಹೋವನು ಹೀಗೆನ್ನುತ್ತಾನೆ: “ಯಾವಾಗಲೂ ದಾವೀದನ ವಂಶದವನೊಬ್ಬನು ಸಿಂಹಾಸನಾರೂಢನಾಗಿದ್ದುಕೊಂಡು ಇಸ್ರೇಲರನ್ನು ಆಳುವನು. 18 ಯಾವಾಗಲೂ ಲೇವಿವಂಶದವರೇ ಯಾಜಕರಾಗಿರುವರು. ಆ ಯಾಜಕರು ಸದಾಕಾಲ ನನ್ನ ಎದುರಿನಲ್ಲಿ ನಿಂತುಕೊಂಡು ಸರ್ವಾಂಗಹೋಮ, ಧಾನ್ಯಸಮರ್ಪಣೆ ಮತ್ತು ಯಜ್ಞಗಳನ್ನು ಮಾಡುವರು.”

19 ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು. 20 ಯೆಹೋವನು ಹೀಗೆ ಹೇಳಿದನು: “ಹಗಲು ಮತ್ತು ರಾತ್ರಿಗಳ ಜೊತೆ ನಾನೊಂದು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ. ಅವುಗಳು ಶಾಶ್ವತವಾಗಿ ಮುಂದುವರಿಯಲು ನಾನು ಒಪ್ಪಿಕೊಂಡಿದ್ದೇನೆ. ನೀವು ಆ ಒಡಂಬಡಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ನೀವು ಆ ಒಡಂಬಡಿಕೆಯನ್ನು ಬದಲಾಯಿಸಬಹುದಾದರೆ 21 ನೀವು ದಾವೀದನ ಮತ್ತು ಲೇವಿಯರ ಜೊತೆ ನಾನು ಮಾಡಿಕೊಂಡ ಒಡಂಬಡಿಕೆಯನ್ನೂ ಬದಲಾಯಿಸಬಹುದು. ಆಗ ದಾವೀದನ ವಂಶದವರು ರಾಜರಾಗಲಾರರು ಮತ್ತು ಲೇವಿಯರ ವಂಶದವರು ಯಾಜಕರಾಗಲಾರರು. 22 ಆದರೆ ನಾನು ನನ್ನ ಸೇವಕನಾದ ದಾವೀದನಿಗೂ ಲೇವಿಯರಿಗೂ ಅಸಂಖ್ಯಾತ ಸಂತಾನವನ್ನು ಕೊಡುತ್ತೇನೆ. ಅವರು ಆಕಾಶದ ನಕ್ಷತ್ರಗಳಂತೆಯೂ ಸಮುದ್ರದ ತೀರದ ಮರಳಿನಂತೆಯೂ ಅಸಂಖ್ಯಾತರಾಗುವರು.”

23 ಯೆರೆಮೀಯನು ಯೆಹೋವನಿಂದ ಈ ಸಂದೇಶವನ್ನು ಪಡೆದನು: 24 “ಯೆರೆಮೀಯನೇ, ಜನರು ಏನು ಹೇಳಿದರೆಂಬುದನ್ನು ಕೇಳಲಿಲ್ಲವೇ? ‘ಯೆಹೋವನು ಯೆಹೂದದಲ್ಲಿ ಮತ್ತು ಇಸ್ರೇಲಿನಲ್ಲಿ ಎರಡು ಕುಟುಂಬಗಳನ್ನು ಆರಿಸಿಕೊಂಡನು; ಆದರೆ ಈಗ ಅವರನ್ನು ತಿರಸ್ಕರಿಸಿದ್ದಾನೆ.’ ಎಂದು ಅವರು ಹೇಳುತ್ತಿದ್ದಾರೆ. ಅನ್ಯಜನರು ನನ್ನ ಜನರನ್ನು ಎಷ್ಟು ದ್ವೇಷಿಸುತ್ತಾರೆಂದರೆ, ಅವರು ಒಂದು ಜನಾಂಗವಾಗಿ ಮುಂದುವರಿಯುವುದು ಅವರಿಗೆ ಇಷ್ಟವೇ ಇಲ್ಲ.”

25 ಯೆಹೋವನು ಹೀಗೆನ್ನುತ್ತಾನೆ: “ಹಗಲಿರುಳುಗಳ ಸಂಗಡ ನಾನು ಮಾಡಿಕೊಂಡ ಒಡಂಬಡಿಕೆ ಸ್ಥಿರವಾಗಿಲ್ಲದಿದ್ದರೆ ಮತ್ತು ಭೂಮ್ಯಾಕಾಶಗಳಿಗೆ ನಾನು ಕಟ್ಟಳೆಗಳನ್ನೇ ವಿಧಿಸಿಲ್ಲದಿದ್ದರೆ 26 ಅವರನ್ನು ತ್ಯಜಿಸಬಹುದೇನೋ! ಯಾಕೋಬನ ಸಂತಾನದವರನ್ನು ತ್ಯಜಿಸಿ ದಾವೀದನ ವಂಶದವರು ಅಬ್ರಹಾಮ, ಇಸಾಕ ಮತ್ತು ಯಾಕೋಬರ ಸಂತತಿಯವರನ್ನು ಆಳದಂತೆ ಮಾಡಬಹುದೇನೋ! ಆದರೆ ದಾವೀದನು ನನ್ನ ಸೇವಕ. ನಾನು ಅವರಿಗೆ ಕರುಣೆ ತೋರೇ ತೋರುವೆನು; ಅವರಿಗೆ ಒಳ್ಳೆಯದಾಗುವಂತೆ ಮಾಡೇ ಮಾಡುವೆನು.”

ಇಬ್ರಿಯರಿಗೆ 1

ದೇವರು ತನ್ನ ಮಗನ ಮೂಲಕ ಮಾತನಾಡಿದನು

ಪೂರ್ವಕಾಲದಲ್ಲಿ ದೇವರು ಪ್ರವಾದಿಗಳ ಮೂಲಕ ನಮ್ಮ ಜನರೊಂದಿಗೆ ಹಲವಾರು ವಿಧದಲ್ಲಿ ಅನೇಕ ಸಲ ಮಾತನಾಡಿದನು. ಈಗ, ಕೊನೆಯ ದಿನಗಳಲ್ಲಿ ದೇವರು ಮತ್ತೆ ನಮ್ಮ ಜೊತೆಯಲ್ಲಿ ತನ್ನ ಮಗನ ಮೂಲಕ ಮಾತನಾಡಿದನು. ದೇವರು ತನ್ನ ಮಗನ ಮೂಲಕ ಲೋಕವನ್ನೆಲ್ಲ ಸೃಷ್ಟಿಸಿ, ಸಮಸ್ತಕ್ಕೂ ಆತನನ್ನೇ ಬಾಧ್ಯಸ್ತನನ್ನಾಗಿ ಮಾಡಿದನು. ದೇವರ ಮಹಿಮೆಯು ಆತನಲ್ಲಿ ತೋರಿಬಂದಿತು. ಆತನು ದೇವರ ಸ್ವಭಾವದ ಪ್ರತಿರೂಪವಾಗಿದ್ದಾನೆ. ಆತನು ತನ್ನ ಶಕ್ತಿಯ ಆಜ್ಞೆಯಿಂದ ಪರಿಪಾಲಿಸುತ್ತಿದ್ದಾನೆ. ಆತನು ಜನರನ್ನು ಅವರ ಪಾಪಗಳಿಂದ ಶುದ್ಧಿಮಾಡಿ, ಸ್ವರ್ಗದಲ್ಲಿ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು. ದೇವರು ಆತನಿಗೆ ದೇವದೂತರಿಗಿಂತ ಎಷ್ಟೋ ಶ್ರೇಷ್ಠವಾದ ಹೆಸರನ್ನು ದಯಪಾಲಿಸಿದನು. ಆತನು ದೇವದೂತರಿಗಿಂತ ಅಷ್ಟೊಂದು ಶ್ರೇಷ್ಠನಾದನು.

ದೇವರು ಯಾವ ದೂತರಿಗೂ ಈ ಸಂಗತಿಗಳನ್ನು ಎಂದೂ ಹೇಳಿಲ್ಲ:

“ನೀನು ನನ್ನ ಮಗ;
    ಈ ದಿನ ನಾನು ನಿನ್ನ ತಂದೆಯಾದೆನು.”(A)

ದೇವರು ದೂತನೊಬ್ಬನಿಗೆ ಎಂದೂ ಹೀಗೆ ಹೇಳಿಲ್ಲ:

“ನಾನು ಅವನ ತಂದೆಯಾಗಿರುವೆನು,
    ಅವನು ನನ್ನ ಮಗನಾಗಿರುವನು.”(B)

ದೇವರು ತನ್ನ ಚೊಚ್ಚಲ ಮಗನನ್ನು ಈ ಲೋಕಕ್ಕೆ ಬರಮಾಡುವಾಗ, ಆತನು ಹೇಳುವುದೇನೆಂದರೆ,

“ದೇವದೂತರೆಲ್ಲರೂ ಆತನನ್ನು ಆರಾಧಿಸಲಿ.”[a]

ದೇವರು ತನ್ನ ದೂತರನ್ನು ಕುರಿತು ಹೇಳಿದ್ದು ಹೀಗಿದೆ:

“ದೇವರು ತನ್ನ ದೂತರನ್ನು ಗಾಳಿಗಳನ್ನಾಗಿ ಮಾಡಿದನು.
    ಆತನು ತನ್ನ ಸೇವಕರನ್ನು ಬೆಂಕಿಯ ಜ್ವಾಲೆಗಳಂತೆ ಮಾಡಿದನು.”(C)

ಆದರೆ ದೇವರು ತನ್ನ ಮಗನನ್ನು ಕುರಿತು ಹೀಗೆ ಹೇಳಿದನು:

“ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲೂ ಇರುವುದು.
    ನೀನು ನಿನ್ನ ರಾಜ್ಯವನ್ನು ಸಮರ್ಪಕವಾದ ತೀರ್ಪುಗಳೊಡನೆ ಆಳುವೆ.
ನೀನು ಒಳ್ಳೆಯದನ್ನು ಪ್ರೀತಿಸುವೆ, ಕೆಟ್ಟದ್ದನ್ನು ದ್ವೇಷಿಸುವೆ.
    ಆದ್ದರಿಂದ ದೇವರು, ಹೌದು, ನಿನ್ನ ದೇವರೇ ನಿನ್ನನ್ನು
    ನಿನ್ನ ಸಂಗಡಿಗರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದದ ತೈಲದಿಂದ ಅಭಿಷೇಕಿಸಿದ್ದಾನೆ.”(D)

10 ಇದಲ್ಲದೆ ದೇವರು ಹೀಗೆನ್ನುತ್ತಾನೆ:

“ಪ್ರಭುವೇ, ಆದಿಯಲ್ಲಿ ನೀನು ಈ ಲೋಕವನ್ನು ಸೃಷ್ಟಿಸಿದೆ.
    ಗಗನಮಂಡಲವು ನಿನ್ನ ಕೈಕೆಲಸವಾಗಿದೆ.
11 ಇವೆಲ್ಲವು ನಾಶವಾಗುತ್ತವೆ, ಆದರೆ ನೀನು ಶಾಶ್ವತವಾಗಿರುವೆ.
    ಎಲ್ಲಾ ವಸ್ತುಗಳೂ ವಸ್ತ್ರಗಳಂತೆ ಹಳೆಯವಾಗುವವು.
12 ನೀನು ಅವುಗಳನ್ನು ಮೇಲಂಗಿಯಂತೆ ಮಡಿಚಿಡುವೆ.
    ಅವು ವಸ್ತ್ರಗಳಂತೆ ಬದಲಾಗುತ್ತವೆ.
ಆದರೆ ನೀನು ಎಂದೆಂದಿಗೂ ಬದಲಾಗುವುದಿಲ್ಲ.
    ನಿನ್ನ ಜೀವಕ್ಕೆ ಅಂತ್ಯವೆಂಬುದಿಲ್ಲ.”(E)

13 ದೇವರು ಯಾವ ದೂತನಿಗೂ ಇದನ್ನೆಂದೂ ಹೇಳಿಲ್ಲ:

“ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವತನಕ,
    ನೀನು ನನ್ನ ಬಲಗಡೆಯಲ್ಲಿ ಕುಳಿತುಕೊ.”(F)

14 ದೇವದೂತರೆಲ್ಲರೂ ದೇವರ ಸೇವೆಮಾಡುವ ಆತ್ಮಗಳಾಗಿದ್ದಾರೆ ಮತ್ತು ರಕ್ಷಣೆಯನ್ನು ಹೊಂದಿಕೊಳ್ಳುವ ಜನರ ಸಹಾಯಕ್ಕಾಗಿ ಕಳುಹಿಸಲ್ಪಟ್ಟವರಾಗಿದ್ದಾರೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International