Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಜೆಕರ್ಯ 13-14

13 ಆದರೆ ಆ ಸಮಯದಲ್ಲಿ ಜೆರುಸಲೇಮಿನಲ್ಲಿ ವಾಸಿಸುವ ಜನರಿಗೂ ದಾವೀದನ ಕುಟುಂಬದವರಿಗೂ ಒಂದು ಹೊಸ ಬುಗ್ಗೆಯ ನೀರು ಚಿಮ್ಮುವದು. ಆ ಬುಗ್ಗೆಯು ಜನರ ಪಾಪಗಳನ್ನು ತೊಳೆದು ಶುದ್ಧಮಾಡುವದಕ್ಕಾಗಿ ಇರುವದು.

ಇನ್ನು ಮುಂದೆ ಸುಳ್ಳು ಪ್ರವಾದಿಗಳಿರುವದಿಲ್ಲ

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಈ ಪ್ರಪಂಚದಲ್ಲಿರುವ ವಿಗ್ರಹಗಳನ್ನೆಲ್ಲಾ ನಾನು ತೆಗೆದುಬಿಡುವೆನು. ಜನರು ಅವುಗಳ ಹೆಸರನ್ನು ತಮ್ಮ ನೆನಪಿಗೆ ತಾರರು. ಸುಳ್ಳು ಪ್ರವಾದಿಗಳನ್ನೂ ಅಶುದ್ಧ ಆತ್ಮಗಳನ್ನೂ ನಾನು ಭೂಮಿಯ ಮೇಲಿಂದ ತೆಗೆದುಬಿಡುವೆನು. ಯಾವನಾದರೂ ಪ್ರವಾದಿಸುವದನ್ನು ಮಂದುವರಿಸಿದರೆ ಅವನು ಶಿಕ್ಷೆಗೆ ಗುರಿಯಾಗುವನು. ‘ನೀನು ಯೆಹೋವನ ಹೆಸರಿನಲ್ಲಿ ಸುಳ್ಳನ್ನು ಹೇಳಿರುವೆ. ಆದ್ದರಿಂದ ನೀನು ಸಾಯಲೇಬೇಕು’ ಎಂದು ಅವನ ಸ್ವಂತ ತಂದೆತಾಯಿಗಳು ಅವನಿಗೆ ಹೇಳುವರು. ಅವನ ಸ್ವಂತ ತಂದೆ ತಾಯಿಗಳು ಅವನು ಸುಳ್ಳು ಪ್ರವಾದನೆ ಹೇಳಿದ್ದಕ್ಕೆ ಅವನನ್ನು ಖಡ್ಗದಿಂದ ಕೊಲ್ಲಿಸುವರು. ಆ ಸಮಯದಲ್ಲಿ ಪ್ರವಾದಿಗಳು ತಮ್ಮ ದರ್ಶನ, ಪ್ರವಾದನೆಗಳಿಗಾಗಿ ನಾಚಿಕೊಳ್ಳುವರು. ತಾವು ಪ್ರವಾದಿಗಳೆಂದು ತೋರಿಸಿಕೊಳ್ಳಲು ಧರಿಸುವ ಗಡುಸಾದ ಬಟ್ಟೆಗಳನ್ನು ಧರಿಸಿಕೊಳ್ಳುವದಿಲ್ಲ. ಅವರು ಪ್ರವಾದನೆಗಳೆಂದು ಹೇಳುವ ತಮ್ಮ ಸುಳ್ಳುಗಳಿಂದ ಜನರನ್ನು ಮೋಸಪಡಿಸುವದಿಲ್ಲ. ಅವನು, ‘ನಾನು ಪ್ರವಾದಿಯಲ್ಲ, ನಾನೊಬ್ಬ ರೈತ. ನಾನು ಬಾಲ್ಯಪ್ರಾಯದಿಂದಲೇ ರೈತನಾಗಿದ್ದೇನೆ’ ಎಂದು ಹೇಳುವನು. ಆದರೆ ಬೇರೆ ಜನರು, ‘ಹಾಗಾದರೆ ನಿನ್ನ ಕೈಯಲ್ಲಿ ಗಾಯಗಳೇನು?’ ಎಂದು ಕೇಳಿದಾಗ ಅವನು, ‘ನನ್ನ ಸ್ನೇಹಿತರ ಮನೆಯಲ್ಲಿ ನನಗೆ ಏಟು ಬಿತ್ತು’ ಎಂದು ಅನ್ನುವನು.”

ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ: “ಖಡ್ಗವೇ, ಕುರುಬನನ್ನು ಹೊಡೆ. ನನ್ನ ಸ್ನೇಹಿತನಿಗೆ ಹೊಡೆ. ಕುರುಬನನ್ನು ಹೊಡೆ. ಆಗ ಕುರಿಗಳು ಚದರಿಹೋಗುವವು. ಮತ್ತು ನಾನು ಆ ಚಿಕ್ಕವುಗಳನ್ನು ಶಿಕ್ಷಿಸುವೆನು. ದೇಶದ ಮೂರನೇ ಎರಡು ಪಾಲಷ್ಟು ಜನರು ಗಾಯಗೊಂಡು ಸಾಯುವರು. ಒಂದು ಪಾಲಷ್ಟು ಜನರು ಬದುಕಿ ಉಳಿಯುವರು. ಆ ಬಳಿಕ ನಾನು ಉಳಿದವರನ್ನು ಪರೀಕ್ಷಿಸುವೆನು. ಅವರಿಗೆ ಅನೇಕ ಸಂಕಟ ಬರಮಾಡುವೆನು. ಅದು ಬೆಳ್ಳಿಯನ್ನು ಬೆಂಕಿಯಲ್ಲಿ ಪರೀಕ್ಷಿಸಿದಂತಿರುವುದು. ಒಬ್ಬನು ಬಂಗಾರವನ್ನು ಪರೀಕ್ಷಿಸುವಂತೆ ನಾನು ಅವರನ್ನು ಪರೀಕ್ಷಿಸುವೆನು. ಆಗ ಅವರು ಸಹಾಯ ಮಾಡುವಂತೆ ನನಗೆ ಮೊರೆಯಿಡುವರು ಮತ್ತು ನಾನು ಅವರಿಗೆ ಉತ್ತರಕೊಡುವೆನು. ಆಗ ನಾನು, ‘ನೀವು ನನ್ನ ಜನರು’ ಎಂದು ಹೇಳುವೆನು. ಅದಕ್ಕವರು, ‘ಯೆಹೋವನು ನಮ್ಮ ದೇವರು’ ಎಂದು ಹೇಳುವರು.”

ನ್ಯಾಯತೀರ್ಪಿನ ದಿನ

14 ಯೆಹೋವನ ನ್ಯಾಯತೀರಿಸುವ ದಿನ ಬಂದಿದೆ. ನೀವು ಸುಲಿದುಕೊಂಡ ಐಶ್ವರ್ಯವು ನಿಮ್ಮ ಪಟ್ಟಣದಲ್ಲಿ ಪಾಲು ಮಾಡಲಾಗುವದು. ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಮಾಡಲು ನಾನು ಎಲ್ಲಾ ಜನಾಂಗಗಳನ್ನು ಒಟ್ಟಿಗೆ ಸೇರಿಸುವೆನು. ಅವರು ಪಟ್ಟಣವನ್ನು ವಶಪಡಿಸಿಕೊಂಡು ಕಟ್ಟಡಗಳನ್ನೆಲ್ಲಾ ಧ್ವಂಸಮಾಡುವರು. ಹೆಂಗಸರನ್ನು ಬಲಾತ್ಕಾರದಿಂದ ಸಂಭೋಗಿಸುವರು. ಜನಸಂಖ್ಯೆಯ ಅರ್ಧದಷ್ಟು ಜನರು ಸೆರೆಹಿಡಿಯಲ್ಪಡುವರು. ಉಳಿದವರನ್ನು ಪಟ್ಟಣದಿಂದ ಕೊಂಡೊಯ್ಯುವುದಿಲ್ಲ. ಆಗ ಯೆಹೋವನು ಆ ಜನಾಂಗಗಳ ವಿರುದ್ಧವಾಗಿ ಯುದ್ಧ ಮಾಡುವನು. ಅದು ಭಯಂಕರವಾದ ಕಾದಾಟವಾಗಿರುವದು. ಅದೇ ಸಮಯದಲ್ಲಿ ಜೆರುಸಲೇಮಿಗೆ ಪೂರ್ವದಲ್ಲಿರುವ ಆಲೀವ್ ಮರಗಳ ಬೆಟ್ಟದ ಮೇಲೆ ನಿಂತುಕೊಳ್ಳುವನು. ಆ ಬೆಟ್ಟವು ಇಬ್ಭಾಗವಾಗುವದು. ಅದರ ಒಂದು ಭಾಗವು ಉತ್ತರಕ್ಕೆ ಹೋಗುವದು, ಇನ್ನೊಂದು ಭಾಗವು ದಕ್ಷಿಣದ ಕಡೆಗೆ ಹೋಗುವದು. ಆ ಬೆಟ್ಟವು ನಿನ್ನ ಹತ್ತಿರಕ್ಕೆ ಬರುತ್ತಿರುವಾಗ ನೀನು ಓಡಿಹೋಗಲು ಪ್ರಯತ್ನಿಸುವೆ. ಯೆಹೂದದ ಅರಸನಾದ ಉಜ್ಜೀಯನ ಕಾಲದಲ್ಲಿ ಆದ ಭೂಕಂಪದ ಸಮಯದಲ್ಲಿ ನೀನು ಹೇಗೆ ಪಲಾಯನ ಮಾಡಿದ್ದಿಯೋ ಅದೇ ರೀತಿಯಲ್ಲಿ ನೀನು ಓಡುವೆ. ಆಗ ನನ್ನ ದೇವರಾದ ಯೆಹೋವನು ತನ್ನ ಎಲ್ಲಾ ಪರಿಶುದ್ಧ ಜನರೊಂದಿಗೆ ಬರುವನು.

6-7 ಅದು ಒಂದು ಮಹಾ ವಿಶೇಷ ದಿವಸವಾಗಿರುವದು. ಆ ದಿವಸದಲ್ಲಿ ಬೆಳಕಾಗಲಿ ಚಳಿಯಾಗಲಿ ಹಿಮವಾಗಲಿ ಇರುವದಿಲ್ಲ. ಇದು ಹೇಗೆ ಎಂದು ಯೆಹೋವನಿಗೆ ಮಾತ್ರ ಗೊತ್ತು. ರಾತ್ರಿ ಬರಬೇಕಾದ ವೇಳೆಯಲ್ಲಿ ಹಗಲು ಇನ್ನೂ ಇರುವದು. ಆ ಸಮಯದಲ್ಲಿ ಜೆರುಸಲೇಮಿನಿಂದ ನೀರು ಹರಿಯುತ್ತಲೇ ಇರುವದು. ಆ ನದಿಯು ಇಬ್ಭಾಗವಾಗಿ ಒಂದು ಭಾಗ ಪೂರ್ವಕ್ಕೆ ಹರಿಯುವದು. ಇನ್ನೊಂದು ಭಾಗ ಪಶ್ಚಿಮಕ್ಕೆ ಹರಿದು ಮೆಡಿಟರೇನಿಯನ್ ಸಮುದ್ರವನ್ನು ಸೇರುವದು. ಈ ನದಿಯು ಎಲ್ಲಾ ಕಾಲದಲ್ಲಿಯೂ ಬೇಸಿಗೆ, ಹಿಮಕಾಲವೆನ್ನದೆ ಹರಿಯುತ್ತಲೇ ಇರುವದು. ಆ ಸಮಯದಲ್ಲಿ ಯೆಹೋವನು ಇಡೀ ಭೂಲೋಕದ ಅರಸನಾಗುವನು. ಆತನು ಒಬ್ಬನೇ. ಆತನ ಹೆಸರು ಒಂದೇ. 10 ಆ ಸಮಯದಲ್ಲಿ ಜೆರುಸಲೇಮಿನ ಸುತ್ತಮುತ್ತ ಇರುವ ಜಾಗವು ನಿರ್ಜನವಾಗಿದ್ದು ಅರಾಬಾ ಮರುಭೂಮಿಯಂತಿರುವದು. ದೇಶವು ಗೆಬದಿಂದ ಹಿಡಿದು ನೆಗೆವ್‌ನಲ್ಲಿರುವ ರಿಮ್ಮೋನ್ ತನಕ ಮರುಭೂಮಿಯಂತಿರುವದು. ಆದರೆ ಜೆರುಸಲೇಮ್ ನಗರವು ತಿರುಗಿ ಕಟ್ಟಲ್ಪಡುವದು. ಬೆನ್ಯಾಮೀನ್ ದ್ವಾರದಿಂದ ಮೂಲೇ ದ್ವಾರ ಅಥವಾ ಮೊದಲನೇ ದ್ವಾರದ ತನಕ ಮತ್ತು ಹನನೇಲ್ ಬುರುಜಿನಿಂದ ಹಿಡಿದು ಅರಸನ ದ್ರಾಕ್ಷಿತೊಟ್ಟಿಯ ತನಕ ಹೊಸದಾಗಿ ಕಟ್ಟಲ್ಪಡುವದು. 11 ಜನರು ಅಲ್ಲಿಗೆ ವಾಸಿಸಲು ಹೋಗುವರು. ಇನ್ನು ಮುಂದೆ ಯಾವ ಶತ್ರುವೂ ಅವರನ್ನು ನಾಶಮಾಡಲು ಬರುವುದಿಲ್ಲ. ಜೆರುಸಲೇಮ್ ಸುರಕ್ಷಿತವಾಗಿರುವದು.

12 ಆದರೆ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧ ಮಾಡಿದ ಜನಾಂಗಗಳನ್ನೆಲ್ಲಾ ಯೆಹೋವನು ಶಿಕ್ಷಿಸುವನು. ಅವರಿಗೆ ಭಯಂಕರ ರೋಗವನ್ನು ಬರಮಾಡುವನು. ಅವರು ಜೀವಂತರಾಗಿರುವಾಗಲೇ ಅವರ ಚರ್ಮವು ಕೊಳೆತುಹೋಗುವದು. ಅವರ ಕಣ್ಣುಗಳು ಅವು ಇರುವಲ್ಲಿಯೇ ಕೊಳೆತುಹೋಗುವವು. ಅವರ ಬಾಯೊಳಗೆ ಅವರ ನಾಲಿಗೆಗಳು ಕೊಳೆತುಹೋಗುವವು. 13-15 ಆ ಭಯಂಕರವಾದ ವ್ಯಾಧಿಯು ಶತ್ರುಗಳ ಶಿಬಿರದಲ್ಲಿರುವದು. ಅವರ ಬಳಿಯಲ್ಲಿರುವ ಕುದುರೆ, ಹೇಸರಕತ್ತೆ, ಒಂಟೆ ಮತ್ತು ಕತ್ತೆಗಳೆಲ್ಲಾ ಈ ವ್ಯಾಧಿಯಿಂದ ಸಂಕಟಪಡುವವು.

ಆ ಸಮಯದಲ್ಲಿ ಆ ಜನರು ನಿಜವಾಗಿಯೂ ಯೆಹೋವನಿಗೆ ಭಯಪಡುವರು. ಪ್ರತಿಯೊಬ್ಬನೂ ತನ್ನ ನೆರೆಯವನ ಕೈಗಳನ್ನು ಹಿಡಿದುಕೊಳ್ಳುವನು ಮತ್ತು ಆ ನೆರೆಯವರು ಪರಸ್ಪರ ಹೊಡೆದಾಡಿಕೊಳ್ಳುವರು. ಯೆಹೂದವೂ ಜೆರುಸಲೇಮಿನೊಂದಿಗೆ ಕಾದಾಡುವದು. ಎಲ್ಲಾ ಜನಾಂಗಗಳ ಐಶ್ವರ್ಯವನ್ನು ಪಟ್ಟಣದ ಸುತ್ತಲೂ ಶೇಖರಿಸಿಟ್ಟಿರುವಾಗಲೂ ಇದು ಸಂಭವಿಸುವುದು. ಆಗ ಅಲ್ಲಿ ಬಹು ಸಂಖ್ಯೆಯಲ್ಲಿ ಬೆಳ್ಳಿಬಂಗಾರ ಮತ್ತು ಬಟ್ಟೆಗಳ ರಾಶಿ ಇರುವದು. 16 ಜೆರುಸಲೇಮಿನೊಂದಿಗೆ ಯುದ್ಧಮಾಡಲು ಬಂದವರಲ್ಲಿ ಕೆಲವರು ಸಾಯದೆ ಉಳಿಯುವರು. ಅವರೆಲ್ಲರು ಪ್ರತಿವರ್ಷ ಅರಸನೂ ಸರ್ವಶಕ್ತನೂ ಆಗಿರುವ ಯೆಹೋವನನ್ನು ಆರಾಧಿಸಲು ಜೆರುಸಲೇಮಿಗೆ ಬರುವರು. ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಬರುವರು. 17 ರಾಜನೂ ಸರ್ವಶಕ್ತನೂ ಆಗಿರುವ ಯೆಹೋವನನ್ನು ಆರಾಧಿಸಲು ಭೂಲೋಕದ ಕುಟುಂಬಗಳ ಯಾವ ಜನರಾದರೂ ಜೆರುಸಲೇಮಿಗೆ ಹೋಗದಿದ್ದಲ್ಲಿ ಅವರ ರಾಜ್ಯಗಳಲ್ಲಿ ಮಳೆಗೆರೆಯುವದು ನಿಂತುಹೋಗುವದು. 18 ಈಜಿಪ್ಟಿನಲ್ಲಿರುವ ಯಾವ ಕುಟುಂಬವಾಗಲಿ ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಬಾರದೆ ಹೋದಲ್ಲಿ ಯೆಹೋವನು ಶತ್ರುಗಳಿಗೆ ತಂದ ವ್ಯಾಧಿಯನ್ನು ಅವರಿಗೂ ಬರಮಾಡುವನು. 19 ಇದು ಕೇವಲ ಈಜಿಪ್ಟಿನ ಜನರಿಗೆ ಮಾತ್ರವೇ ಆಗಿರದೆ ಯಾವ ದೇಶವು ಪರ್ಣಶಾಲೆಗಳ ಹಬ್ಬವನ್ನು ಆಚರಿಸಲು ಬರುವುದಿಲ್ಲವೋ ಆ ದೇಶದ ಜನರೂ ಅದೇ ರೋಗಕ್ಕೆ ತುತ್ತಾಗುವರು.

20 ಆ ಸಮಯದಲ್ಲಿ ಸಮಸ್ತವೂ ಯೆಹೋವನಿಗೆ ಸೇರಿದ್ದಾಗಿರುವದು. ಕುದುರೆಗಳ ಮೇಲಿರುವ ಜೀನಿನ ಮೇಲೂ ಸರ್ವಶಕ್ತನಾದ “ಯೆಹೋವನಿಗೆ ಇದು ಮೀಸಲಾಗಿರುವದು” ಎಂದು ಬರೆಯಲ್ಪಡುವದು. ಯೆಹೋವನ ಆಲಯದಲ್ಲಿ ಉಪಯೋಗಿಸುವ ಎಲ್ಲಾ ಮಡಕೆಗಳು ಯಜ್ಞವೇದಿಕೆಯ ಮೇಲೆ ಉಪಯೋಗಿಸುವ ಬೋಗುಣಿಗಳಷ್ಟೇ ಮುಖ್ಯವಾಗಿವೆ. 21 ವಾಸ್ತವವಾಗಿ ಜೆರುಸಲೇಮಿನ ಮತ್ತು ಯೆಹೊದದ ಪ್ರತಿಯೊಂದು ಪಾತ್ರೆಯ ಮೇಲೆ, “ಸರ್ವಶಕ್ತನಾದ ಯೆಹೋವನಿಗೆ ಮೀಸಲಾಗಿದೆ” ಎಂದು ಬರೆದಿರುತ್ತದೆ. ಯಜ್ಞಗಳನ್ನರ್ಪಿಸಲು ಬರುವ ಜನರೆಲ್ಲರೂ ಆ ಪಾತ್ರೆಗಳನ್ನು ತೆಗೆದುಕೊಂಡು ಅವುಗಳಲ್ಲಿ ವಿಶೇಷ ಅಡಿಗೆಯನ್ನು ಮಾಡುವರು.

ಆ ಸಮಯದಲ್ಲಿ ಸರ್ವಶಕ್ತನಾದ ಯೆಹೋವನ ಆಲಯದೊಳಗೆ ಯಾವ ವರ್ತಕನೂ ವ್ಯಾಪಾರ ನಡೆಸುವದಿಲ್ಲ.

ಪ್ರಕಟನೆ 21

ನೂತನ ಜೆರುಸಲೇಮ್

21 ನಂತರ ನೂತನ ಪರಲೋಕವನ್ನು ಮತ್ತು ನೂತನ ಭೂಮಿಯನ್ನು[a] ನಾನು ನೋಡಿದೆನು. ಮೊದಲನೆ ಪರಲೋಕ ಮತ್ತು ಮೊದಲನೆ ಭೂಮಿ ಅದೃಶ್ಯವಾಗಿದ್ದವು. ಅಲ್ಲಿ ಸಮುದ್ರವಿರಲಿಲ್ಲ. ಪರಿಶುದ್ಧ ನಗರವು ಪರಲೋಕದಿಂದ ದೇವರ ಬಳಿಯಿಂದ ಇಳಿದು ಬರುತ್ತಿರುವುದನ್ನು ನಾನು ನೋಡಿದೆನು. ಈ ಪರಿಶುದ್ಧ ನಗರವೇ ನೂತನ ಜೆರುಸಲೇಮ್. ವಧುವು ತನ್ನ ಪತಿಗಾಗಿ ಶೃಂಗರಿಸಿಕೊಳ್ಳುವಂತೆ ಅದನ್ನು ಸಿದ್ಧಪಡಿಸಿದ್ದರು.

ಸಿಂಹಾಸನದಿಂದ ಒಂದು ಗಟ್ಟಿಯಾದ ಧ್ವನಿಯನ್ನು ನಾನು ಕೇಳಿದೆನು. ಆ ಧ್ವನಿಯು, “ಈಗ ದೇವರ ಮನೆಯು ಜನರ ಸಂಗಡವಿದೆ. ಆತನು ಅವರೊಂದಿಗೆ ನೆಲೆಸುತ್ತಾನೆ. ಅವರು ಆತನವರಾಗಿರುತ್ತಾರೆ. ದೇವರು ತಾನೇ ಅವರೊಂದಿಗೆ ಇರುತ್ತಾನೆ ಮತ್ತು ಅವರ ದೇವರಾಗಿರುತ್ತಾನೆ. ದೇವರು ಅವರ ಕಣ್ಣೀರನ್ನೆಲ್ಲ ಒರಸಿ ಬಿಡುವನು. ಅಲ್ಲಿ ಇನ್ನು ಮರಣವಿರುವುದಿಲ್ಲ, ದುಃಖವಿರುವುದಿಲ್ಲ, ಗೋಳಾಟವಿರುವುದಿಲ್ಲ ಮತ್ತು ನೋವಿರುವುದಿಲ್ಲ. ಹಳೆಯ ಮಾರ್ಗಗಳೆಲ್ಲ ಹೋಗಿಬಿಟ್ಟವು” ಎಂದು ಹೇಳಿತು.

ಸಿಂಹಾಸನದ ಮೇಲೆ ಕುಳಿತಿದ್ದವನು, “ನೋಡು! ನಾನು ಎಲ್ಲವನ್ನೂ ಹೊಸದಾಗಿ ಸೃಷ್ಟಿಸುತ್ತೇನೆ!” ಎಂದು ಹೇಳಿದನು. ನಂತರ ಆತನು, “ಈ ವಾಕ್ಯಗಳು ಸತ್ಯವಾದುವುಗಳೂ ನಂಬತಕ್ಕವುಗಳೂ ಆಗಿರುವುದರಿಂದ ಇವುಗಳನ್ನು ಬರೆ” ಎಂದು ಹೇಳಿದನು.

ಸಿಂಹಾಸನದ ಮೇಲೆ ಕುಳಿತಿದ್ದಾತನು ನನಗೆ ಹೀಗೆ ಹೇಳಿದನು: “ಎಲ್ಲವೂ ನೆರವೇರಿತು! ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ. ಬಾಯಾರಿದವರಿಗೆ ನಾನು ಜೀವಜಲದ ಬುಗ್ಗೆಯಿಂದ ನೀರನ್ನು ಉಚಿತವಾಗಿ ಕೊಡುತ್ತೇನೆ. ಜಯಗಳಿಸುವವನು ಇದೆಲ್ಲವನ್ನು ಪಡೆಯುತ್ತಾನೆ. ನಾನು ಅವನ ದೇವರಾಗಿರುತ್ತೇನೆ, ಅವನು ನನ್ನ ಮಗನಾಗಿರುತ್ತಾನೆ. ಆದರೆ ಹೇಡಿಗಳಿಗೆ, ನಂಬಿಕೆಯಿಲ್ಲದವರಿಗೆ, ಅಸಹ್ಯಕೃತ್ಯ ಮಾಡುವವರಿಗೆ, ಕೊಲೆಗಾರರಿಗೆ, ಲೈಂಗಿಕ ಪಾಪಮಾಡುವವರಿಗೆ, ಮಾಟಮಂತ್ರಗಾರರಿಗೆ, ವಿಗ್ರಹಾರಾಧಕರಿಗೆ, ಸುಳ್ಳುಗಾರರಿಗೆ ಸಿಕ್ಕುವ ಸ್ಥಳ ಬೆಂಕಿಗಂಧಕಗಳು ಉರಿಯುವ ಕೆರೆಯೇ. ಇದು ಎರಡನೆಯ ಮರಣವಾಗಿರುತ್ತದೆ.”

ಕಡೆಯ ಏಳು ಉಪದ್ರವಗಳನ್ನು ತಮ್ಮ ಪಾತ್ರೆಗಳಲ್ಲಿ ತುಂಬಿಕೊಂಡಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ನನ್ನ ಬಳಿಗೆ ಬಂದು, “ನನ್ನ ಸಂಗಡ ಬಾ. ಕುರಿಮರಿಯಾದಾತನ ಪತ್ನಿಯಾಗಲಿರುವ ವಧುವನ್ನು ನಾನು ನಿನಗೆ ತೋರಿಸುತ್ತೇನೆ” ಎಂದನು. 10 ಆ ದೇವದೂತನು ಪವಿತ್ರಾತ್ಮವಶನಾದ ನನ್ನನ್ನು ಬಹಳ ದೊಡ್ಡದಾದ ಮತ್ತು ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದನು. ದೇವದೂತನು ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಆ ನಗರವು ಪರಲೋಕದೊಳಗಿಂದ ದೇವರ ಕಡೆಯಿಂದ ಇಳಿದುಬರುತ್ತಿತ್ತು.

11 ಆ ನಗರವು ದೇವರ ಪ್ರಭಾವದಿಂದ ಪ್ರಕಾಶಿಸುತ್ತಿತ್ತು. ಅದು ಬಹು ಬೆಲೆಬಾಳುವ ವಜ್ರದಂತೆ ಪ್ರಕಾಶಿಸುತ್ತಿತ್ತು. ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು. 12 ಆ ನಗರಕ್ಕೆ ಹನ್ನೆರಡು ಬಾಗಿಲುಗಳುಳ್ಳ ಅತ್ಯಂತ ಎತ್ತರವಾದ ಗೋಡೆಯಿತ್ತು. ಆ ಬಾಗಿಲುಗಳ ಬಳಿಯಲ್ಲಿ ಹನ್ನೆರಡು ಮಂದಿ ದೇವದೂತರಿದ್ದರು. ಪ್ರತಿಯೊಂದು ಬಾಗಿಲಿನ ಮೇಲೂ ಇಸ್ರೇಲಿನ ಹನ್ನೆರಡು ಕುಲಗಳಲ್ಲಿ ಒಂದು ಕುಲದ ಹೆಸರನ್ನು ಬರೆಯಲಾಗಿತ್ತು. 13 ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. 14 ಆ ನಗರದ ಗೋಡೆಗಳನ್ನು ಹನ್ನೆರಡು ಅಡಿಪಾಯದ ಕಲ್ಲುಗಳ ಮೇಲೆ ಕಟ್ಟಲಾಗಿತ್ತು. ಆ ಕಲ್ಲುಗಳ ಮೇಲೆ ಕುರಿಮರಿಯಾದಾತನ ಹನ್ನರೆಡು ಮಂದಿ ಅಪೊಸ್ತಲರ ಹೆಸರುಗಳನ್ನು ಬರೆಯಲಾಗಿತ್ತು.

15 ನನ್ನ ಸಂಗಡ ಮಾತನಾಡಿದ ದೇವದೂತನ ಬಳಿಯಲ್ಲಿ ಚಿನ್ನದ ಅಳತೆಗೋಲಿತ್ತು. ಆ ನಗರವನ್ನು, ಅದರ ಬಾಗಿಲುಗಳನ್ನು ಮತ್ತು ಅದರ ಗೋಡೆಯನ್ನು ದೇವದೂತನು ಆ ಕೋಲಿನಿಂದ ಅಳೆಯುತ್ತಿದ್ದನು. 16 ನಗರವನ್ನು ಚೌಕೋನವಾಗಿ ನಿರ್ಮಿಸಲಾಗಿತ್ತು. ಅದರ ಉದ್ದವು ಅದರ ಅಗಲದಷ್ಟಿತ್ತು. ದೇವದೂತನು ತನ್ನ ಅಳತೆಗೋಲಿನಿಂದ ನಗರವನ್ನು ಅಳೆದನು. ನಗರವು 1,500 ಮೈಲಿ ಉದ್ದ, 1,500 ಮೈಲಿ ಅಗಲ ಮತ್ತು 1,500 ಮೈಲಿ[b] ಎತ್ತರವಾಗಿತ್ತು. 17 ದೇವದೂತನು ಗೋಡೆಯನ್ನೂ ಅಳೆದನು. ಅದು ಮನುಷ್ಯರ ಮೊಳದಲ್ಲಿ 144 ಮೊಳವಿತ್ತು.[c] ದೇವದೂತನು ಉಪಯೋಗಿಸಿದ ಅಳತೆಮಾನವೇ ಅದು. 18 ಗೋಡೆಯನ್ನು ಸೂರ್ಯಕಾಂತ ಶಿಲೆಯಿಂದ ನಿರ್ಮಿಸಲಾಗಿತ್ತು. ನಗರವನ್ನು ಗಾಜಿನಷ್ಟು ಅಪ್ಪಟವಾದ ಚಿನ್ನದಿಂದ ನಿರ್ಮಿಸಲಾಗಿತ್ತು.

19 ನಗರದ ಗೋಡೆಯ ಅಡಿಪಾಯದ ಕಲ್ಲುಗಳಲ್ಲಿ ಸಕಲ ವಿಧವಾದ ಬೆಲೆಬಾಳುವ ರತ್ನಗಳಿದ್ದವು. ಮೊದಲನೆ ಮೂಲೆಗಲ್ಲು ವಜ್ರ, ಎರಡನೆಯದು ವೈಢೂರ್ಯ, ಮೂರನೆಯದು ಪಚ್ಚೆ, 20 ನಾಲ್ಕನೆಯದು ಪದ್ಮರಾಗ, ಐದನೆಯದು ಗೋಮೇಧಿಕ, ಆರನೆಯದು ಮಾಣಿಕ್ಯ, ಏಳನೆಯದು ಪೀತರತ್ನ, ಎಂಟನೆಯದು ಬೆರುಲ್ಲ, ಒಂಭತ್ತನೆಯದು ಪುಷ್ಯರಾಗ, ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ ಮತ್ತು ಹನ್ನೆರಡನೆಯದು ನೀಲಸ್ಫಟಿಕ. 21 ಹನ್ನೆರಡು ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು. ಪ್ರತಿಯೊಂದು ಬಾಗಿಲು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು. ನಗರದ ಬೀದಿಯು ಗಾಜಿನಂತೆ ಶುಭ್ರವಾಗಿದ್ದ ಅಪ್ಪಟ ಚಿನ್ನದಿಂದ ಮಾಡಲ್ಪಟ್ಟಿತ್ತು.

22 ನಾನು ನಗರದಲ್ಲಿ ಒಂದು ಆಲಯವನ್ನೂ ನೋಡಲಿಲ್ಲ. ಸರ್ವಶಕ್ತನಾದ ದೇವರಾದ ಪ್ರಭು ಮತ್ತು ಕುರಿಮರಿಯಾದಾತನು (ಯೇಸು) ನಗರದ ಆಲಯವಾಗಿದ್ದಾರೆ. 23 ನಗರದ ಮೇಲೆ ಸೂರ್ಯನಾಗಲಿ ಚಂದ್ರನಾಗಲಿ ಪ್ರಕಾಶಿಸುವ ಅಗತ್ಯವಿರಲಿಲ್ಲ. ದೇವರ ಪ್ರಭಾವವೇ ಆ ನಗರಕ್ಕೆ ಬೆಳಕನ್ನು ನೀಡುತ್ತಿತ್ತು. ಕುರಿಮರಿಯಾದಾತನು ನಗರಕ್ಕೆ ದೀಪವಾಗಿದ್ದನು.

24 ಕುರಿಮರಿಯಾದಾತನು ನೀಡಿದ ಬೆಳಕಿನಿಂದ ಲೋಕದ ಜನರು ನಡೆಯುತ್ತಾರೆ. ಲೋಕದ ರಾಜರುಗಳು ತಮ್ಮ ಸಿರಿಸಂಪತ್ತನ್ನು ನಗರಕ್ಕೆ ತರುತ್ತಾರೆ. 25 ನಗರದ ಬಾಗಿಲುಗಳು ಎಂದಿಗೂ ಮುಚ್ಚುವುದೇ ಇಲ್ಲ. ಏಕೆಂದರೆ ಅಲ್ಲಿ ರಾತ್ರಿಯೇ ಇಲ್ಲ. 26 ಜನಾಂಗಗಳ ವೈಭವ ಮತ್ತು ಗೌರವಗಳು ನಗರಕ್ಕೆ ಬರುತ್ತವೆ. 27 ಪರಿಶುದ್ಧವಾಗಿಲ್ಲದ ಯಾವುದೂ ನಗರವನ್ನು ಪ್ರವೇಶಿಸುವುದೇ ಇಲ್ಲ. ಅವಮಾನಕರವಾದ ಕಾರ್ಯಗಳನ್ನು ಮಾಡುವವನಾಗಲಿ ಸುಳ್ಳು ಹೇಳುವವನಾಗಲಿ ನಗರವನ್ನು ಎಂದಿಗೂ ಪ್ರವೇಶಿಸುವುದಿಲ್ಲ. ಕುರಿಮರಿಯಾದಾತನು ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿರುವನೋ ಅವರು ಮಾತ್ರ ಆ ನಗರವನ್ನು ಪ್ರವೇಶಿಸುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International