Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಜೆಕರ್ಯ 9-12

ಇತರ ಜನಾಂಗಗಳ ಮೇಲೆ ನ್ಯಾಯತೀರ್ಪು

ಯೆಹೋವನಿಂದ ಬಂದ ಸಂದೇಶ: ಹದ್ರಾಕ್ ದೇಶದ ಮತ್ತು ಅದರ ರಾಜಧಾನಿಯಾದ ದಮಸ್ಕ ನಗರದ ವಿರುದ್ಧವಾಗಿ ಯೆಹೋವನ ಸಂದೇಶ: “ಇಸ್ರೇಲ್ ಕುಲದವರು ಮಾತ್ರವೇ ದೇವರನ್ನು ತಿಳಿದವರಲ್ಲ. ಪ್ರತಿಯೊಬ್ಬರೂ ಸಹಾಯಕ್ಕಾಗಿ ಆತನಿಗೆ ಮೊರೆಯಿಡುವರು. ಈ ಸಂದೇಶವು ಹಮಾತನಿಗೆ ವಿರುದ್ಧವಾದದ್ದು. ಅವನ ಮೊರೆಯು ಹದ್ರಾಕ್ ದೇಶಕ್ಕೆ ತಾಗಿ ಇದೆ. ಈ ಸಂದೇಶವು ತೂರ್ ಚೀದೋನಿನ ಜನರ ವಿರುದ್ಧವಾಗಿಯೂ ಇದೆ. ಆ ಜನರು ಜ್ಞಾನಿಗಳೂ ಕುಶಲಕರ್ಮಿಗಳೂ ಆಗಿರಬಹುದು. ತೂರ್ ಒಂದು ಕೋಟೆಯಂತೆ ಕಟ್ಟಲ್ಪಟ್ಟಿದೆ. ಅಲ್ಲಿರುವ ಜನರು ಬೆಳ್ಳಿಯನ್ನು ಧೂಳಿನಂತೆ ಸಂಗ್ರಹಿಸಿರುತ್ತಾರೆ. ಬಂಗಾರವಂತೂ ಮಣ್ಣಿನ ತರಹ ಸಾಮಾನ್ಯವಾಗಿರುತ್ತದೆ. ಆದರೆ ನಮ್ಮ ಒಡೆಯನಾದ ಯೆಹೋವನು ಅದೆಲ್ಲವನ್ನು ತೆಗೆದುಕೊಳ್ಳುವನು. ಆಕೆಯ ನೌಕಾಬಲವನ್ನು ಮುರಿದುಬಿಡುವನು. ಮತ್ತು ಆ ನಗರವು ಬೆಂಕಿಯಿಂದ ನಾಶವಾಗುವದು.

“ಅಷ್ಕೆಲೋನಿನ ಜನರು ಇದನ್ನು ನೋಡಿ ಭಯಗ್ರಸ್ತರಾಗುವರು. ಗಾಜದ ಜನರು ಭಯದಿಂದ ನಡುಗುವರು. ಮತ್ತು ಎಕ್ರೋನಿನ ಜನರು ಇದನ್ನೆಲ್ಲಾ ನೋಡಿ ನಿರೀಕ್ಷೆ ಇಲ್ಲದವರಾಗಿರುವರು. ಗಾಜದಲ್ಲಿ ಯಾವ ಅರಸನೂ ಉಳಿಯನು. ಅಷ್ಕೆಲೋನಿನಲ್ಲಿ ಯಾರೂ ವಾಸಿಸರು. ಅಷ್ಡೋದಿನ ಜನರಿಗೆ ತಮ್ಮ ತಂದೆ ಯಾರು ಎಂದು ತಿಳಿಯರು. ನಾನು ಅಹಂಕಾರದ ಪಿಲಿಷ್ಟಿಯ ಜನರನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಅವರು ನಿಷಿದ್ಧ ಆಹಾರಪದಾರ್ಥವನ್ನಾಗಲಿ ರಕ್ತದಿಂದಿರುವ ಮಾಂಸವನ್ನಾಗಲಿ ಇನ್ನು ಮುಂದೆ ತಿನ್ನುವದಿಲ್ಲ. ಪಿಲಿಷ್ಟಿಯರಲ್ಲಿ ಯಾರಾದರೂ ಉಳಿದರೆ ಅವರು ನನ್ನ ಜನರೊಂದಿಗೆ ಒಂದಾಗುವರು. ಎಕ್ರೋನಿನ ಯೆಬೂಸಿಯರಂತೆ ಅವರು ಯೆಹೊದದ ಇನ್ನೊಂದು ಸಂತತಿಯವರಾಗುವರು. ನಾನು ನನ್ನ ದೇಶವನ್ನು ಸಂರಕ್ಷಿಸುವೆನು. ಶತ್ರುಸೈನ್ಯವು ಅದರೊಳಗಿಂದ ದಾಟಿಹೋಗಲು ನಾನು ಬಿಡೆನು. ಇನ್ನು ಮುಂದೆ ನನ್ನ ಜನರಿಗೆ ಅವರು ಹಾನಿಮಾಡದಂತೆ ಮಾಡುವೆನು. ಕಳೆದುಹೋದ ಸಮಯಗಳಲ್ಲಿ ಅವರೆಷ್ಟು ಸಂಕಟ ಅನುಭವಿಸಿದರೆಂದು ನನ್ನ ಸ್ವಂತ ಕಣ್ಣುಗಳಿಂದ ನೋಡಿರುತ್ತೇನೆ.”

ಭವಿಷ್ಯತ್ತಿನ ಅರಸನು

ಚೀಯೋನ್ ನಗರಿಯೇ, ಹರ್ಷಿಸು!
    ಜೆರುಸಲೇಮ್ ಜನರೇ, ಸಂತೋಷದಿಂದ ಆರ್ಭಟಿಸಿರಿ.
ನಿಮ್ಮ ಅರಸನು ನಿಮ್ಮ ಬಳಿಗೆ ಬರುತ್ತಿದ್ದಾನೆ!
    ಆತನು ವಿಜಯಶಾಲಿಯಾದ ನೀತಿವಂತನಾಗಿದ್ದಾನೆ.
    ಆದರೆ ದೀನನಂತೆ ಕತ್ತೆಯ ಮೇಲೆ,
    ಹೌದು, ಕತ್ತೆಯ ಮರಿಯ ಮೇಲೆ ಸವಾರಿ ಮಾಡಿಕೊಂಡು ಬರುವನು.
10 ಅರಸನು ಹೀಗೆನ್ನುತ್ತಾನೆ: “ಎಫ್ರಾಯೀಮಿನಲ್ಲಿ ರಥಗಳನ್ನೂ ಜೆರುಸಲೇಮಿನಲ್ಲಿ ಅಶ್ವಾರೂಢರಾದ ಸೈನಿಕರನ್ನೂ ನಾಶಮಾಡಿದೆನು;
    ಯುದ್ಧದ ಬಿಲ್ಲುಗಳನ್ನು ತುಂಡು ಮಾಡಿದೆನು.”

ಆ ಅರಸನು ಸಮಾಧಾನದ ವರ್ತಮಾನವನ್ನು ರಾಜ್ಯಗಳಿಗೆ ತರುವನು.
    ಸಮುದ್ರದಿಂದ ಸಮುದ್ರದ ತನಕ ಯುಫ್ರೇಟೀಸ್ ನದಿಯಿಂದ
    ಭೂಮಿಯ ಕಟ್ಟಕಡೆಯವರೆಗೆ ಆತನು ರಾಜ್ಯವನ್ನಾಳುವನು.

ಯೆಹೋವನು ತನ್ನ ಜನರನ್ನು ಕಾಪಾಡುವನು

11 ಜೆರುಸಲೇಮೇ, ನಾವು ನಿನ್ನ ಒಡಂಬಡಿಕೆಗೆ ಮುದ್ರೆ ಹಾಕಲು ರಕ್ತವನ್ನು ಉಪಯೋಗಿಸಿದೆವು.
    ಆದ್ದರಿಂದ ನೆಲದ ಹೊಂಡದೊಳಗಿಂದ ಜನರನ್ನು ಬಿಡುಗಡೆ ಮಾಡಿದ್ದೇನೆ.
12 ಸೆರೆಹಿಡಿಯಲ್ಪಟ್ಟವರೇ, ಮನೆಗೆ ಹೋಗಿ.
    ಈಗ ನಿಮಗೊಂದು ನಿರೀಕ್ಷೆಯಿದೆ.
ನಾನು ನಿಮಗೆ ಖಂಡಿತವಾಗಿ ಹೇಳುವುದೇನೆಂದರೆ,
    ನಾನು ತಿರುಗಿ ಬರುತ್ತೇನೆ.
13 ಯೆಹೂದನೇ, ನಾನು ನಿನ್ನನ್ನು ಬಿಲ್ಲಿನಂತೆ ಉಪಯೋಗಿಸುವೆನು.
    ಎಫ್ರಾಯೀಮನೇ, ನಾನು ನಿನ್ನನ್ನು ಬಾಣದಂತೆ ಉಪಯೋಗಿಸುವೆನು.
ಇಸ್ರೇಲೇ, ಗ್ರೀಸಿನ ಜನರೊಂದಿಗೆ ಯುದ್ಧಮಾಡಲು
    ನಾನು ನಿನ್ನನ್ನು ಖಡ್ಗದಂತೆ ಉಪಯೋಗಿಸುವೆನು.
14 ಯೆಹೋವನು ಅವರಿಗೆ ಕಾಣಿಸಿಕೊಂಡು
    ತನ್ನ ಬಾಣವನ್ನು ಮಿಂಚಿನ ವೇಗದಲ್ಲಿ ಹಾರಿಸುವನು.
ನನ್ನ ಒಡೆಯನಾದ ಯೆಹೋವನು ತುತ್ತೂರಿ ಊದಿದಾಗ
    ಮರುಭೂಮಿಯ ಬಿರುಗಾಳಿಯಂತೆ ಸೈನ್ಯವು ಮುಂದಕ್ಕೆ ನುಗ್ಗುವುದು.
15 ಸರ್ವಶಕ್ತನಾದ ದೇವರು ಅವರನ್ನು ಕಾಪಾಡುವನು.
    ಸೈನಿಕರು ಶತ್ರುವನ್ನು ಜಯಿಸಲು ಕವಣೆ ಮತ್ತು ಕಲ್ಲುಗಳನ್ನು ಉಪಯೋಗಿಸುವರು.
ಶತ್ರುಗಳ ರಕ್ತವನ್ನು ಚೆಲ್ಲುವರು.
    ಅದು ದ್ರಾಕ್ಷಾರಸದಂತೆ ಹರಿಯುವದು.
    ಅದು ಯಜ್ಞವೇದಿಕೆಯ ಮೂಲೆಗಳಲ್ಲಿ ರಕ್ತವನ್ನು ಹೊಯಿದಂತೆ ಕಾಣುವುದು.
16 ಆ ಸಮಯಗಳಲ್ಲಿ ದೇವರಾದ ಯೆಹೋವನು,
    ಕುರುಬನು ತನ್ನ ಕುರಿಗಳನ್ನು ಸಂರಕ್ಷಿಸುವ ರೀತಿಯಲ್ಲಿ
    ತನ್ನ ಜನರನ್ನು ರಕ್ಷಿಸುವನು.
ಅವರು ಆತನಿಗೆ ಅಮೂಲ್ಯರಾಗಿರುವರು.
    ಆತನ ಕೈಯಲ್ಲಿ ಹೊಳೆಯುವ ಆಭರಣದಂತಿರುವರು.
17 ಆಗ ಪ್ರತಿಯೊಂದು ಸುಂದರವೂ ರಮಣೀಯವೂ ಆಗಿರುವುದು.
    ಬೆಳೆಯು ಸುಭಿಕ್ಷವಾಗಿರುವುದು.
ಆಹಾರ ಮತ್ತು ದ್ರಾಕ್ಷಾರಸ ಮಾತ್ರವೇ ಅಲ್ಲ,
    ಎಲ್ಲಾ ಯೌವನಸ್ಥರೂ ಯೌವನಸ್ಥೆಯರೂ ಹಾಗೆಯೇ ಇರುವರು.

ಯೆಹೋವನ ವಾಗ್ದಾನಗಳು

10 ವಸಂತ ಕಾಲದಲ್ಲಿ ಮಳೆಗಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಯೆಹೋವನು ಮಿಂಚನ್ನು ಕಳುಹಿಸುವನು; ಆಗ ಮಳೆ ಸುರಿಯುವುದು ಮತ್ತು ದೇವರು ಎಲ್ಲರ ಹೊಲಗಳಲ್ಲಿ ಸಸಿಗಳು ಬೆಳೆಯುವಂತೆ ಮಾಡುವನು.

ಜನರು ಭವಿಷ್ಯವನ್ನು ತಿಳಿಯುವುದಕ್ಕೆ ತಮ್ಮ ಸಣ್ಣ ಬೊಂಬೆಗಳನ್ನೋ ಮಂತ್ರಜಾಲವನ್ನೋ ಉಪಯೋಗಿಸುವರು. ಆದರೆ ಅವೆಲ್ಲಾ ನಿಷ್ಪ್ರಯೋಜಕ. ಆ ಜನರು ದರ್ಶನವನ್ನು ನೋಡುವರು ಮತ್ತು ಕನಸುಗಳ ಬಗ್ಗೆ ಹೇಳುವರು. ಆದರೆ ಅವುಗಳೆಲ್ಲಾ ನಿಷ್ಪ್ರಯೋಜಕ ಸುಳ್ಳುಗಳಾಗಿವೆ. ಆದ್ದರಿಂದ ಜನರು ಸಹಾಯಕ್ಕಾಗಿ ಕೂಗುತ್ತಾ ಅತ್ತಿಂದಿತ್ತ ತಿರುಗಾಡುವ ಕುರಿಗಳಂತಿದ್ದಾರೆ. ಅವುಗಳನ್ನು ನಡಿಸಲು ಕುರುಬರೇ ಇಲ್ಲ.

ಯೆಹೋವನು ಹೇಳುವುದೇನೆಂದರೆ, “ನಾನು ಕುರುಬರ ಮೇಲೆ ಬಹಳವಾಗಿ ಕೋಪಿಸಿರುವೆನು. ಆ ನಾಯಕರನ್ನು ನಾನು ನನ್ನ ಜನರ ಮೇಲೆ ಜವಾಬ್ದಾರರನ್ನಾಗಿ ಮಾಡಿದ್ದೇನೆ.” ಯೆಹೂದದ ಜನರು ದೇವರ ಮಂದೆಯಾಗಿದ್ದಾರೆ. ಹೇಗೆ ಸಿಪಾಯಿಯು ತನ್ನ ಯುದ್ಧದ ಕುದುರೆಯನ್ನು ಪರಾಂಬರಿತ್ತಾನೋ ಹಾಗೆ ಸರ್ವಶಕ್ತನಾದ ಯೆಹೋವನು ತನ್ನ ಮಂದೆಯನ್ನು ನಿಜವಾಗಿಯೂ ಪರಾಂಬರಿಸುತ್ತಾನೆ.

“ಮೂಲೇ ಕಲ್ಲು, ಗುಡಾರದ ಗೂಟ, ಯುದ್ಧದ ಬಿಲ್ಲು ಮತ್ತು ಮುನ್ನುಗ್ಗುವ ಸೈನ್ಯ, ಇವೆಲ್ಲವು ಒಟ್ಟಾಗಿ ಯೆಹೂದಿಂದ ಬರುವದು. ಇವರು ಶತ್ರುಗಳನ್ನು ಜಯಿಸುವರು. ಸೈನಿಕರು ರಸ್ತೆಯ ಧೂಳಿನ ಮೇಲೆ ಮುನ್ನಡೆದು ಯೆಹೋವನು ಅವರೊಂದಿಗಿರುವದರಿಂದ ಅವರು ಅಶ್ವಾರೂಢನಾಗಿರುವ ಶತ್ರುಸೈನ್ಯವನ್ನು ಸದೆಬಡಿಯುವರು. ಯೆಹೂದ ವಂಶವನ್ನು ನಾನು ಬಲಗೊಳಿಸುವೆನು. ಯೋಸೇಫನ ವಂಶದವರಿಗೆ ಜಯವಾಗುವಂತೆ ಮಾಡುವೆನು. ನಾನು ಅವರನ್ನು ಹಿಂದಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಬರುವೆನು. ಅವರನ್ನು ಸಂತೈಸುವೆನು. ನಾನು ಎಂದಿಗೂ ಅವರನ್ನು ತೊರೆಯಲಿಲ್ಲವೆಂಬಂತೆ ಇರುವುದು. ನಾನು ಅವರ ದೇವರಾದ ಯೆಹೋವನು. ನಾನೇ ಅವರಿಗೆ ಸಹಾಯ ಮಾಡುವೆನು. ಕುಡಿದು ಮತ್ತರಾದ ಸೈನಿಕರು ಸಂತೋಷಪಡುವಂತೆ ಎಫ್ರಾಯೀಮ್ಯರು ಸಂತಸದಿಂದಿರುವರು. ಮಕ್ಕಳೂ ಆನಂದದಿಂದ ನಲಿದಾಡುವರು. ಅವರೆಲ್ಲರೂ ಯೆಹೋವನ ಜೊತೆಯಲ್ಲಿ ಸಂತೋಷದಿಂದಿರುವರು.

“ನಾನು ಸಿಳ್ಳು ಹೊಡೆದು ಎಲ್ಲರನ್ನು ಒಟ್ಟುಗೂಡಿಸುವೆನು. ನಾನು ನಿಜವಾಗಿಯೂ ಅವರನ್ನು ರಕ್ಷಿಸುವೆನು. ಜನರು ಕಿಕ್ಕಿರಿದು ತುಂಬಿಹೋಗುವರು. ಹೌದು, ನಾನು ನನ್ನ ಜನರನ್ನು ಎಲ್ಲಾ ರಾಜ್ಯಗಳಿಗೆ ಚದರಿಸಿಬಿಟ್ಟಿರುತ್ತೇನೆ. ಆದರೆ ಆ ಬಹುದೂರದ ರಾಜ್ಯಗಳಲ್ಲಿ ಅವರು ನನ್ನನ್ನು ನೆನಪು ಮಾಡುವರು. ಅವರೂ ಅವರ ಮಕ್ಕಳೂ ಉಳಿಯುವರು ಮತ್ತು ಅವರು ಹಿಂತಿರುಗಿ ಬರುವರು. 10 ನಾನು ಅವರನ್ನು ಈಜಿಪ್ಟ್‌ನಿಂದ ಮತ್ತು ಅಶ್ಯೂರದಿಂದ ಹಿಂದಕ್ಕೆ ತರುವೆನು. ಅವರನ್ನು ಗಿಲ್ಯಾದಿಗೆ ಕರೆದುಕೊಂಡು ಬರುವೆನು. ಅಲ್ಲಿ ಅವರಿಗೆ ಸ್ಥಳ ಸಾಲದು. ಆದ್ದರಿಂದ ಅವರು ಪಕ್ಕದ ಲೆಬನೋನ್ ಪ್ರಾಂತ್ಯದಲ್ಲಿ ವಾಸಿಸುವಂತೆ ಮಾಡುವೆನು.” 11 ಇದು ಹಿಂದಿನ ಕಾಲದಲ್ಲಿ ದೇವರು ಅವರನ್ನು ಈಜಿಪ್ಟಿನಿಂದ ಬಿಡಿಸಿ ತಂದಂತೆ ಇರುವದು. ಆತನು ಸಮುದ್ರದ ತೆರೆಗಳನ್ನು ಬಡಿದು ಅದು ಇಬ್ಭಾಗವಾಗುವಂತೆ ಮಾಡಿದನು. ಜನರು ಸಂಕಟದ ಸಮುದ್ರದ ಮಧ್ಯದಲ್ಲಿ ದಾಟಿಹೋದರು. ಯೆಹೋವನು ಹೊಳೆಗಳನ್ನು ಬತ್ತಿಸಿಬಿಡುವನು. ಆತನು ಅಶ್ಯೂರ್ಯದ ಜಂಬವನ್ನೂ ಈಜಿಪ್ಟಿನ ಬಲವನ್ನೂ ಮುರಿಯುವನು. 12 ಯೆಹೋವನು ತನ್ನ ಜನರನ್ನು ಶಕ್ತಿಶಾಲಿಗಳನ್ನಾಗಿ ಮಾಡುವನು. ಅವರು ಆತನ ನಾಮದ ಘನತೆಗೋಸ್ಕರ ಜೀವಿಸುವರು. ಇದು ಯೆಹೋವನ ನುಡಿ.

ದೇವರು ಅನ್ಯ ದೇಶಗಳವರನ್ನು ಶಿಕ್ಷಿಸುವನು

11 ಲೆಬನೋನೇ, ನೀನು ನಿನ್ನ ದ್ವಾರಗಳನ್ನು ತೆರೆ.
    ಆಗ ಬೆಂಕಿಯು ಒಳಬಂದು ನಿನ್ನ ದೇವದಾರು ಮರಗಳನ್ನೆಲ್ಲಾ ಸುಟ್ಟು ಹಾಕುವದು.
ದೇವದಾರು ಮರಗಳು ಬೀಳುವಾಗ ಓಕ್ ಮರಗಳು ರೋದಿಸುವವು.
    ಆ ಬಲವಾದ ಮರಗಳನ್ನು ತೆಗೆದುಕೊಂಡು ಹೋಗಲಾಗುವುದು.
ಅಡವಿಯು ಕಡಿದುಹಾಕಲ್ಪಟ್ಟಿದ್ದಕ್ಕಾಗಿ
    ಬಾಷಾನಿನ ಶ್ರೇಷ್ಠ ವೃಕ್ಷಗಳು ದುಃಖಿಸುವವು.
ರೋದಿಸುವ ಕುರುಬರ ಕಡೆಗೆ ಕಿವಿಗೊಡಿರಿ.
    ಅವರ ನಾಯಕರುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ.
ಪ್ರಾಯದ ಸಿಂಹಗಳ ಗರ್ಜನೆಗೆ ಕಿವಿಗೊಡಿರಿ.
    ಯೋರ್ದನ್ ಹೊಳೆಯ ಬದಿಯಲ್ಲಿದ್ದ ದಟ್ಟವಾದ ಪೊದರುಗಳೆಲ್ಲಾ ತೆಗೆದುಕೊಂಡು ಹೋಗಲಾಗಿದೆ.

ನನ್ನ ದೇವರಾದ ಯೆಹೋವನು ಹೇಳುವುದೇನೆಂದರೆ, “ಕೊಲ್ಲುವದಕ್ಕೋಸ್ಕರವಾಗಿ ಬೆಳೆಸಿದ ಕುರಿಗಳನ್ನು ಪರಾಮರಿಸು. ಅವರ ನಾಯಕರುಗಳು ವರ್ತಕರಂತೆಯೂ ಧಣಿಗಳಂತೆಯೂ ಇರುವರು. ಧಣಿಗಳು ಕುರಿಗಳನ್ನು ಕೊಂದರೂ ಶಿಕ್ಷಿಸಲ್ಪಡುವುದಿಲ್ಲ. ವರ್ತಕರು ಕುರಿಗಳನ್ನು ಮಾರಿ, ‘ನಾನೀಗ ಧನಿಕನಾಗಿದ್ದೇನೆ. ಯೆಹೋವನಿಗೆ ಸ್ತೋತ್ರವಾಗಲಿ’ ಎಂದು ಅನ್ನುವರು. ಕುರುಬರು ತಮ್ಮ ಕುರಿಗಳಿಗಾಗಿ ಚಿಂತಿಸುವುದಿಲ್ಲ. ಈ ದೇಶದಲ್ಲಿ ವಾಸಿಸುವ ಜನರ ಬಗ್ಗೆ ನಾನು ದುಃಖಿಸುವುದಿಲ್ಲ.” ಇದು ಯೆಹೋವನ ನುಡಿ. “ನೋಡಿರಿ, ಪ್ರತಿಯೊಬ್ಬನೂ ತನ್ನ ಅರಸನಿಂದಲೂ ನೆರೆಯವರಿಂದಲೂ ಹಾಳುಮಾಡಲ್ಪಡುವಂತೆ ನಾನು ಮಾಡುವೆನು. ಅವರ ದೇಶವನ್ನು ಹಾಳುಮಾಡುವಂತೆ ಅವರನ್ನು ಬಿಡುವೆನು. ಅವರನ್ನು ನಿಲ್ಲಿಸುವುದಿಲ್ಲ.”

ಕೊಲ್ಲುವದಕ್ಕಾಗಿ ಬೆಳೆಸುವ ಕುರಿಗಳನ್ನು ನಾನು ಪರಾಮರಿಸಿದೆನು. ನನಗೆ ಎರಡು ಕೋಲುಗಳು ದೊರೆತವು. ಒಂದು ಕೋಲನ್ನು ದಯೆ ಎಂದೂ ಇನ್ನೊಂದನ್ನು ಒಗ್ಗಟ್ಟು ಎಂಬ ಹೆಸರಿನಿಂದಲೂ ಕರೆದೆನು. ಆ ಬಳಿಕ ಕುರಿಗಳನ್ನು ಪರಾಮರಿಸ ತೊಡಗಿದೆನು. ಒಂದೇ ತಿಂಗಳೊಳಗೆ ಮೂರು ಮಂದಿ ಕುರುಬರನ್ನು ನಾನು ಕೆಲಸದಿಂದ ಬಿಡಿಸಿದೆನು. ನಾನು ಕುರಿಗಳ ಮೇಲೆ ಸಿಟ್ಟುಗೊಳ್ಳಲಾರಂಭಿಸಿದೆನು. ಅವು ನನ್ನನ್ನು ಹಗೆ ಮಾಡಲಾರಂಭಿಸಿದವು. ಆಗ ನಾನು, “ಸರಿ, ನಾನು ನಿಮ್ಮನ್ನು ಇನ್ನು ನೋಡಿಕೊಳ್ಳುವದಿಲ್ಲ. ಹೋಗಿಬಿಡುತ್ತೇನೆ” ಅಂದೆನು. ಸಾಯಲು ಮನಸ್ಸುಳ್ಳವುಗಳನ್ನು ಸಾಯಲುಬಿಟ್ಟೆನು. ನಾಶವಾಗಲು ಮನಸ್ಸುಳ್ಳವುಗಳನ್ನು ನಾಶವಾಗಲು ಬಿಟ್ಟೆನು. ಅಳಿಯದೆ ಉಳಿದವುಗಳು ಪರಸ್ಪರ ನಾಶಮಾಡಿಕೊಳ್ಳುವವು. 10 ಆಗ ನಾನು ದಯೆ ಹೆಸರಿನ ಕೋಲನ್ನು ತೆಗೆದುಕೊಂಡು ತುಂಡುಮಾಡಿದೆನು. ಯೆಹೋವನು ಎಲ್ಲಾ ಜನರೊಂದಿಗೆ ಮಾಡಿದ ಒಡಂಬಡಿಕೆಯು ಮುರಿಯಿತು ಎಂಬುದಾಗಿ ಅವರಿಗೆ ತೋರಿಸಿದೆನು. 11 ಹೀಗೆ ಆ ದಿವಸ ಒಡಂಬಡಿಕೆಗೆ ಅಂತ್ಯವಾಯಿತು. ನನ್ನನ್ನೇ ನೋಡುತ್ತಿದ್ದ ಆ ಬಡ ಕುರಿಗಳಿಗೆ ಈ ಸಂದೇಶವು ಯೆಹೋವನಿಂದಲೇ ನನಗೆ ಬಂದಿದೆ ಎಂಬುದು ತಿಳಿದಿತ್ತು.

12 ಆಗ ನಾನು ಹೀಗೆಂದೆನು, “ನನಗೆ ಸಂಬಳ ಕೊಡಲು ನಿಮಗೆ ಇಷ್ಟವಿದ್ದರೆ ಕೊಡಿರಿ, ಇಷ್ಟವಿಲ್ಲದಿದ್ದರೆ ಬೇಡ.” ಆಗ ಅವರು ನನಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು. 13 ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ, “ನನ್ನ ಬೆಲೆ ಅಷ್ಟೇ ಎಂದು ಅವರು ನೆನಸುತ್ತಾರೆ. ಆ ಹಣವನ್ನು ತೆಗೆದು ಆಲಯದ ಖಜಾನೆಗೆ ಸುರಿ.” ನಾನು ಆ ಮೂವತ್ತು ಬೆಳ್ಳಿ ನಾಣ್ಯವನ್ನು ತೆಗೆದುಕೊಂಡು ಆಲಯದ ಖಜಾನೆಗೆ ಸುರಿದೆನು. 14 ಆಮೇಲೆ ನಾನು “ಒಗ್ಗಟ್ಟು” ಎಂಬ ಹೆಸರಿನ ಕೋಲನ್ನು ಎರಡು ತುಂಡಾಗಿ ಮುರಿದೆನು. ಇಸ್ರೇಲ್ ಮತ್ತು ಯೆಹೂದ ರಾಜ್ಯಗಳ ಒಗ್ಗಟ್ಟು ಮುರಿಯಿತು ಎಂದು ತೋರಿಸುವದಕ್ಕಾಗಿ ನಾನು ಹಾಗೆ ಮಾಡಿದೆನು.

15 ಆಗ ಯೆಹೋವನು ನನಗೆ ಹೇಳಿದ್ದೇನೆಂದರೆ, “ಒಬ್ಬ ಮೂರ್ಖ ಕುರುಬನು ಉಪಯೋಗಿಸುವ ವಸ್ತುಗಳನ್ನು ತೆಗೆದುಕೊಂಡು ಬಾ. 16 ನಾನು ಈ ದೇಶಕ್ಕೆ ಒಬ್ಬ ಹೊಸ ಕುರುಬನನ್ನು ನೇಮಕ ಮಾಡುವೆನೆಂದು ಆ ರೀತಿಯಾಗಿ ತೋರಿಸುವೆನು. ಆದರೆ ಈ ಮನುಷ್ಯನಿಗೆ ನಾಶಮಾಗುತ್ತಿರುವ ಕುರಿಗಳನ್ನು ಪರಾಮರಿಸಲು ಸಾಧ್ಯವಾಗುವುದಿಲ್ಲ. ಗಾಯಗೊಂಡ ಕುರಿಗಳನ್ನು ಗುಣಮಾಡಲು ಅವನಿಂದ ಸಾಧ್ಯವಾಗುವುದಿಲ್ಲ. ಸಾಯದೆ ಉಳಿದ ಕುರಿಗಳಿಗೆ ಆಹಾರ ಕೊಡಲು ಅವನಿಂದ ಸಾಧ್ಯವಾಗುವುದಿಲ್ಲ. ಪುಷ್ಟಿಕರವಾದ ಕುರಿಗಳನ್ನು ಪೂರ್ತಿಯಾಗಿ ತಿಂದುಹಾಕಲಾಗುವದು. ಅದರ ಗೊರಸುಗಳು ಮಾತ್ರವೇ ಉಳಿಯುವದು.”

17 ಕೆಲಸಕ್ಕೆ ಬಾರದ ಕುರುಬನೇ,
    ನೀನು ನನ್ನ ಕುರಿಗಳನ್ನು ತೊರೆದುಬಿಟ್ಟೆ.
ಅವನನ್ನು ಶಿಕ್ಷಿಸಿರಿ!
    ಖಡ್ಗದಿಂದ ಅವನ ಬಲಗೈಯನ್ನು ಕತ್ತರಿಸಿಹಾಕಿರಿ, ಮತ್ತು ಬಲಗಣ್ಣನ್ನು ಕಿತ್ತುಹಾಕಿರಿ.
    ಆಗ ಅವನ ಬಲಗೈ ಅಪ್ರಯೋಜಕವಾಗುವದು,
    ಬಲಗಣ್ಣು ದೃಷ್ಟಿಹೀನವಾಗುವದು.

ಯೆಹೂದದ ಸುತ್ತಲಿರುವ ದೇಶಗಳ ಬಗ್ಗೆ ದರ್ಶನ

12 ಇಸ್ರೇಲಿನ ಬಗ್ಗೆ ಯೆಹೋವನ ದುಃಖದ ಸಂದೇಶ. ಯೆಹೋವನು ಆಕಾಶವನ್ನೂ ಭೂಮಿಯನ್ನೂ ನಿರ್ಮಿಸಿರುತ್ತಾನೆ. ಮಾನವನಲ್ಲಿ ತನ್ನ ಆತ್ಮವನ್ನಿಟ್ಟನು. ಆ ಬಳಿಕ ಆತನು ಹೇಳಿದ್ದೇನೆಂದರೆ, “ನಾನು ಜೆರುಸಲೇಮಿನ ಸುತ್ತಮುತ್ತಲಿರುವ ರಾಷ್ಟ್ರಗಳಿಗೆ ಆಕೆಯನ್ನು ಒಂದು ವಿಷದ ಲೋಟವನ್ನಾಗಿ ಮಾಡುತ್ತೇನೆ. ಆ ರಾಜ್ಯಗಳು ಆ ಪಟ್ಟಣದ ಮೇಲೆ ಬೀಳುವವು. ಆಗ ಇಡೀ ಯೆಹೂದವು ಉರುಲಿನೊಳಗೆ ಬೀಳುವದು. ಆದರೆ ನಾನು ಜೆರುಸಲೇಮನ್ನು ಒಂದು ಭಾರವಾದ ಬಂಡೆ ಕಲ್ಲಿನಂತೆ ಮಾಡುವೆನು. ಅದನ್ನು ತೆಗೆಯಲು ಯತ್ನಿಸುವವನು ಗಾಯಗೊಳ್ಳುವನು. ಆದರೂ ಲೋಕದ ಎಲ್ಲಾ ದೇಶಗಳವರು ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಬರುವರು. ಆದರೆ ಆ ಸಮಯದಲ್ಲಿ ನಾನು ಅವರ ಕುದುರೆಗಳನ್ನು ಬೆಚ್ಚಿಬೀಳುವಂತೆ ಮಾಡುವೆನು. ಅದರ ಸವಾರನು ಭಯಗೊಳ್ಳುವನು. ಶತ್ರುವಿನ ಎಲ್ಲಾ ಕುದುರೆಗಳನ್ನು ನಾನು ಕುರುಡು ಮಾಡುವೆನು. ಆದರೆ ನಾನು ಕಣ್ಣು ತೆರೆದು ಯೆಹೂದ ವಂಶವನ್ನು ಸಂರಕ್ಷಿಸುವೆನು. ಯೆಹೂದದ ಪ್ರಧಾನರು ತಮ್ಮ ಜನರನ್ನು ಹುರಿದುಂಬಿಸುವರು. ‘ಸೇವಾಧೀಶ್ವರನಾದ ಯೆಹೋವನು ನಿಮ್ಮ ದೇವರು. ಆತನೇ ನಮಗೆ ಬಲವನ್ನು ಕೊಡುವಾತನು’ ಎಂದು ಹೇಳುವರು. ಆ ಸಮಯದಲ್ಲಿ ಯೆಹೂದದ ಕುಲ ಪ್ರಧಾನರನ್ನು ನಾನು ಕಾಡಿನಲ್ಲಿ ಉರಿಯುವ ಬೆಂಕಿಯಂತೆ ಮಾಡುವೆನು. ಅವರು ಹುಲ್ಲು ಸುಡುವ ಬೆಂಕಿಯೋಪಾದಿಯಲ್ಲಿ ತಮ್ಮ ವೈರಿಗಳನ್ನು ನಾಶಮಾಡುವರು. ತಮ್ಮ ಸುತ್ತಮುತ್ತಲಿರುವ ವೈರಿಗಳನ್ನು ನಾಶಮಾಡುವರು. ಜೆರುಸಲೇಮಿನ ಜನರು ಮತ್ತೆ ನೆಮ್ಮದಿಯಿಂದ ವಾಸಿಸುವರು.”

ಯೆಹೋವನು ಯೆಹೂದದ ಜನರನ್ನು ಮೊದಲು ರಕ್ಷಿಸುವನು. ಆಗ ಜೆರುಸಲೇಮಿನ ನಿವಾಸಿಗಳು ತಮ್ಮನ್ನು ಹೆಚ್ಚಿಸಿಕೊಳ್ಳುವದಿಲ್ಲ. ಜೆರುಸಲೇಮಿನಲ್ಲಿ ವಾಸಿಸುವ ದಾವೀದನ ಸಂತತಿಯವರೂ ಇತರರೂ ತಾವು ಯೆಹೂದ ಪ್ರಾಂತ್ಯದಲ್ಲಿ ವಾಸಿಸುವ ಜನರಿಗಿಂತ ಉತ್ತಮರು ಎಂದು ಹೆಚ್ಚಳಪಡುವದಿಲ್ಲ. ಜೆರುಸಲೇಮಿನಲ್ಲಿ ವಾಸಿಸುವ ಜನರನ್ನು ಯೆಹೋವನು ಕಾಪಾಡುತ್ತಾನೆ. ಬಲಹೀನ ಮನುಷ್ಯನೂ ದಾವೀದನಂತೆ ಶೂರನಾಗುವನು. ದಾವೀದನ ಸಂತತಿಯ ಜನರು ದೇವರುಗಳಂತಿದ್ದು ದೇವರ ಸ್ವಂತ ದೂತರಂತೆ ತಮ್ಮ ಜನರನ್ನು ನಡಿಸುವರು.

ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಜೆರುಸಲೇಮಿಗೆ ವಿರುದ್ಧವಾಗಿ ಯುದ್ಧಕ್ಕೆ ಬರುವ ಜನಾಂಗಗಳನ್ನು ನಾನು ನಾಶಮಾಡುವೆನು. 10 ನಾನು ದಾವೀದನ ಸಂತತಿಯವರನ್ನೂ ಜೆರುಸಲೇಮಿನಲ್ಲಿ ವಾಸಿಸುವವರನ್ನೂ ದಯೆಕರುಣೆಗಳ ಆತ್ಮದಿಂದ ತುಂಬಿಸುವೆನು. ಅವರು ತಾವು ಈಟಿಯಿಂದ ತಿವಿದ ನನ್ನನ್ನು ದೃಷ್ಟಿಸಿ ನೋಡುವರು; ತುಂಬಾ ದುಃಖಿಸುವರು. ತಮಗಿದ್ದ ಒಬ್ಬನೇ ಮಗನನ್ನು ಕಳಕೊಂಡವರಂತೆ ರೋಧಿಸುವರು. 11 ಜೆರುಸಲೇಮಿನಲ್ಲಿ ಅತೀವ ಗೋಳಾಟದ ಮತ್ತು ದುಃಖದ ಕಾಲ ಬರುವದು. ಅದು ಮೆಗಿದ್ದೋ ತಗ್ಗಿನಲ್ಲಿ ಹದದ್ ರಿಮ್ಮೋನನು ಸತ್ತಾಗ ಜನರು ಗೋಳಾಡಿದ ಸಮಯದಂತೆ ಇರುವದು. 12 ಪ್ರತಿಯೊಂದು ಕುಟುಂಬವೂ ರೋಧಿಸುವದು. ದಾವೀದನ ಕುಲದವರೂ ಗೋಳಾಡುವರು. ಅವರ ಹೆಂಡತಿಯರೂ ಗೋಳಾಡುವರು. ನಾತಾನಿನ ಕುಟುಂಬದವರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು. 13 ಲೇವಿಯ ಸಂತಾನದ ಜನರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು. ಶಿಮ್ಮಿಯ ಸಂತಾನದವರೂ ಗೋಳಾಡುವರು; ಅವರ ಹೆಂಡತಿಯರೂ ಗೋಳಾಡುವರು. 14 ಅದೇ ರೀತಿಯಲ್ಲಿ ಇತರ ಎಲ್ಲಾ ಕುಲದವರೂ ದುಃಖಿಸುವರು. ಗಂಡಸರೂ ಹೆಂಗಸರೂ ಗೋಳಾಡುವರು.”

ಪ್ರಕಟನೆ 20

ಒಂದುಸಾವಿರ ವರ್ಷಗಳು

20 ಆಗ ಒಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಆ ದೇವದೂತನು ತಳವಿಲ್ಲದ ಕೂಪದ ಬೀಗದ ಕೈಯನ್ನು ಹೊಂದಿದ್ದನು ಮತ್ತು ಒಂದು ದೊಡ್ಡ ಸರಪಣಿಯನ್ನೂ ತನ್ನ ಕೈಯಲ್ಲಿ ಹಿಡಿದಿದ್ದನು. ಆ ದೇವದೂತನು ಪುರಾತನ ಘಟಸರ್ಪವನ್ನು ಹಿಡಿದನು. ಆ ಘಟಸರ್ಪವೇ ಸೈತಾನ. ದೇವದೂತನು ಅವನನ್ನು ಸರಪಣಿಗಳಿಂದ ಕಟ್ಟಿ ಒಂದುಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು. ಆ ದೇವದೂತನು ಘಟಸರ್ಪವನ್ನು ತಳವಿಲ್ಲದ ಕೂಪಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿ ಬೀಗಹಾಕಿದನು, ಆ ಘಟಸರ್ಪವು ಒಂದುಸಾವಿರ ವರ್ಷಗಳ ಕಾಲ ಮುಗಿಯುವ ತನಕ ಲೋಕದ ಜನರನ್ನು ಮರುಳು ಮಾಡದಿರಲೆಂದು ಆ ದೇವದೂತನು ಹೀಗೆ ಮಾಡಿದನು. ಒಂದುಸಾವಿರ ವರ್ಷಗಳ ತರುವಾಯ ಆ ಘಟಸರ್ಪಕ್ಕೆ ಸ್ವಲ್ಪಕಾಲ ಬಿಡುಗಡೆ ಮಾಡಲಾಗುವುದು.

ನಂತರ ನಾನು ಕೆಲವು ಸಿಂಹಾಸನಗಳನ್ನು ಮತ್ತು ಅವುಗಳ ಮೇಲೆ ಜನರು ಕುಳಿತಿರುವುದನ್ನು ನೋಡಿದೆನು. ಈ ಜನರು ತೀರ್ಪು ನೀಡುವ ಅಧಿಕಾರವನ್ನು ಹೊಂದಿದ್ದರು. ಯೇಸುವಿನ ಸತ್ಯಕ್ಕೆ ಮತ್ತು ದೇವರ ಸಂದೇಶಕ್ಕೆ ನಂಬಿಗಸ್ತರಾಗಿದ್ದರ ನಿಮಿತ್ತವಾಗಿ ಕೊಲ್ಲಲ್ಪಟ್ಟವರ ಜೀವಾತ್ಮಗಳನ್ನು ನಾನು ನೋಡಿದೆನು. ಆ ಜನರು ಮೃಗವನ್ನಾಗಲಿ ಅದರ ವಿಗ್ರಹವನ್ನಾಗಲಿ ಆರಾಧಿಸಿರಲಿಲ್ಲ. ಅವರು ತಮ್ಮ ಹಣೆಯ ಮೇಲಾಗಲಿ ಕೈಗಳ ಮೇಲಾಗಲಿ ಮೃಗದ ಗುರುತನ್ನು ಹಾಕಿಸಿಕೊಂಡಿರಲಿಲ್ಲ. ಆ ಜನರು ಮತ್ತೆ ಜೀವವನ್ನು ಪಡೆದು ಕ್ರಿಸ್ತನೊಂದಿಗೆ ಒಂದುಸಾವಿರ ವರ್ಷ ಆಳಿದರು. (ಸತ್ತುಹೋಗಿದ್ದ ಇತರ ಜನರು ಒಂದುಸಾವಿರ ವರ್ಷಗಳು ಮುಗಿಯುವ ತನಕ ಜೀವಂತರಾಗಲೇ ಇಲ್ಲ.)

ಇದೇ ಪ್ರಥಮ ಪುನರುತ್ಥಾನ. ಪ್ರಥಮ ಪುನರುತ್ಥಾನದಲ್ಲಿ ಸೇರಿರುವವರು ಪವಿತ್ರರೂ ಧನ್ಯರೂ ಆಗಿದ್ದಾರೆ. ಈ ಜನರ ಮೇಲೆ ಎರಡನೆ ಮರಣಕ್ಕೆ ಅಧಿಕಾರವಿಲ್ಲ. ಆ ಜನರು ದೇವರಿಗೆ ಮತ್ತು ಕ್ರಿಸ್ತನಿಗೆ ಯಾಜಕರಾಗಿರುತ್ತಾರೆ. ಅವರು ಆತನೊಂದಿಗೆ ಒಂದು ಸಾವಿರ ವರ್ಷ ಆಳುತ್ತಾರೆ.

ಸೈತಾನನಿಗೆ ಸೋಲು

ಒಂದುಸಾವಿರ ವರ್ಷಗಳು ಮುಗಿದ ನಂತರ, ಸೈತಾನನನ್ನು ಅವನ ಸೆರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಸೈತಾನನು ಗೋಗ್ ಮತ್ತು ಮಾಗೋಗ್ ಜನಾಂಗಗಳನ್ನು ಮರುಳುಗೊಳಿಸಲು ಭೂಲೋಕದಲ್ಲೆಲ್ಲಾ ಹೋಗಿ ಆ ಜನರನ್ನು ಯುದ್ಧಕ್ಕೆ ಒಟ್ಟುಗೂಡಿಸುತ್ತಾನೆ. ಅವರು ಸಮುದ್ರ ತೀರದ ಮರಳಿನ ಕಣಗಳಂತೆ ಅಸಂಖ್ಯಾತವಾಗಿರುತ್ತಾರೆ.

ಸೈತಾನನ ಸೈನ್ಯವು ಭೂಮಿಯಲ್ಲೆಲ್ಲಾ ಶಿಸ್ತಿನಿಂದ ನಡೆದಾಡಿ ದೇವಜನರ ಶಿಬಿರದ ಸುತ್ತಲೂ ದೇವರ ಪ್ರಿಯ ನಗರದ ಸುತ್ತಲೂ ಒಟ್ಟುಗೂಡಿದರು. ಆದರೆ ಪರಲೋಕದಿಂದ ಇಳಿದು ಬಂದ ಬೆಂಕಿಯು ಸೈತಾನನ ಸೈನ್ಯವನ್ನು ನಾಶಗೊಳಿಸಿತು. 10 ಸೈತಾನನನ್ನು (ಇವನೇ ಜನರನ್ನು ಮೋಸಗೊಳಿಸಿದವನು.) ಬೆಂಕಿಗಂಧಕಗಳು ಉರಿಯುತ್ತಿದ್ದ ಕೆರೆಗೆ ಎಸೆಯಲಾಯಿತು. ಅಲ್ಲಿ ಮೃಗವೂ ಇತ್ತು, ಸುಳ್ಳುಪ್ರವಾದಿಗಳೂ ಇದ್ದರು. ಅಲ್ಲಿ ಅವರು ಹಗಲಿರುಳು ಎಂದೆಂದಿಗೂ ಹಿಂಸೆ ಅನುಭವಿಸುವರು.

ಲೋಕದ ಜನರಿಗಾಗುವ ತೀರ್ಪು

11 ಬಳಿಕ ನಾನು ಒಂದು ದೊಡ್ಡ ಬಿಳಿ ಸಿಂಹಾಸನವನ್ನೂ ಆ ಸಿಂಹಾಸನದ ಮೇಲೆ ಕುಳಿತಿದ್ದಾತನನ್ನೂ ನೋಡಿದೆನು. ಭೂಮಿ ಮತ್ತು ಆಕಾಶಗಳು ಆತನ ಬಳಿಯಿಂದ ಓಡಿಹೋಗಿ ಅದೃಶ್ಯವಾದವು. 12 ಸತ್ತುಹೋಗಿದ್ದ ಚಿಕ್ಕವರು ಮತ್ತು ದೊಡ್ಡವರು ಸಿಂಹಾಸನದ ಮುಂದೆ ನಿಂತಿದ್ದರು. ಆಗ ಜೀವಬಾಧ್ಯರ ಪುಸ್ತಕವನ್ನು ತೆರೆಯಲಾಯಿತು. ತೆರೆದಿದ್ದ ಇತರ ಪುಸ್ತಕಗಳೂ ಅಲ್ಲಿದ್ದವು. ಸತ್ತುಹೋಗಿದ್ದ ಈ ಜನರಿಗೆ ಅವರು ಮಾಡಿದ್ದ ಕಾರ್ಯಗಳ ಆಧಾರದ ಮೇಲೆ ತೀರ್ಪು ನೀಡಲಾಯಿತು. ಇವುಗಳು ಪುಸ್ತಕಗಳಲ್ಲಿ ಬರೆಯಲ್ಪಟ್ಟಿವೆ.

13 ಸಮುದ್ರವು ತನ್ನಲ್ಲಿ ಸತ್ತಿದ್ದ ಜನರನ್ನು ಒಪ್ಪಿಸಿತು. ಮೃತ್ಯುವೂ ಪಾತಾಳವೂ ತನ್ನಲ್ಲಿದ್ದ ಸತ್ತ ಜನರನ್ನು ಒಪ್ಪಿಸಿದವು. ಪ್ರತಿಯೊಬ್ಬ ವ್ಯಕ್ತಿಗೂ ಅವನ ಕಾರ್ಯಗಳಿಗನುಸಾರವಾಗಿ ತೀರ್ಪು ನೀಡಲಾಯಿತು. 14 ಆಮೇಲೆ ಮೃತ್ಯುವನ್ನೂ ಪಾತಾಳವನ್ನೂ ಬೆಂಕಿಯ ಕೆರೆಗೆ ಎಸೆಯಲಾಯಿತು. ಈ ಬೆಂಕಿಯ ಕೆರೆಯು ಎರಡನೆಯ ಮರಣ. 15 ಜೀವಬಾಧ್ಯರ ಪುಸ್ತಕದಲ್ಲಿ ಯಾರ ಹೆಸರು ಬರೆಯಲ್ಪಟ್ಟಿಲ್ಲವೋ ಆ ವ್ಯಕ್ತಿಯನ್ನು ಬೆಂಕಿಯ ಕೆರೆಗೆ ಎಸೆಯಲಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International