Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಚೆಫನ್ಯ 1-3

ಚೆಫನ್ಯನಿಗೆ ಯೆಹೋವನು ಕೊಟ್ಟ ಸಂದೇಶ. ಆಮೋನನ ಮಗನಾದ ಯೋಷೀಯನು ಯೆಹೂದ ಪ್ರಾಂತ್ಯದ ಅರಸನಾಗಿದ್ದಾಗ ಈ ಸಂದೇಶವು ಅವನಿಗೆ ದೊರಕಿತು. ಚೆಫನ್ಯನು ಕೂಷನ ಮಗನು; ಕೂಷನು ಗೆದಲ್ಯನ ಮಗನು; ಗೆದಲ್ಯನು ಅಮರ್ಯನ ಮಗನು; ಅಮರ್ಯನು ಹಿಜ್ಕೀಯನ ಮಗನು.

ಜನರಿಗೆ ನ್ಯಾಯತೀರಿಸುವ ಯೆಹೋವನ ದಿನ

ಯೆಹೋವನು ಹೇಳುವುದೇನೆಂದರೆ, “ಭೂಲೋಕದಲ್ಲಿರುವದೆಲ್ಲವನ್ನು ನಾನು ನಾಶಮಾಡುತ್ತೇನೆ. ಲೋಕದೊಳಗಿರುವ ಎಲ್ಲಾ ಮನುಷ್ಯರನ್ನೂ ಪ್ರಾಣಿಗಳನ್ನೂ ಆಕಾಶದಲ್ಲಿರುವ ಎಲ್ಲಾ ಪಕ್ಷಿಗಳನ್ನೂ ನೀರಿನಲ್ಲಿರುವ ಎಲ್ಲಾ ಮೀನುಗಳನ್ನೂ ನಾನು ನಾಶಮಾಡುವೆನು. ಎಲ್ಲಾ ದುಷ್ಟ ಜನರನ್ನೂ ಮತ್ತು ಅವರನ್ನು ಪಾಪಕ್ಕೆ ನಡಿಸುವ ಎಲ್ಲಾ ವಸ್ತುಗಳನ್ನೂ[a] ನಾನು ನಾಶಮಾಡುವೆನು. ಭೂಮಿಯ ಮೇಲಿರುವ ಎಲ್ಲಾ ಜನರನ್ನು ನಿರ್ಮೂಲ ಮಾಡುವೆನು.” ಈ ವಿಷಯಗಳನ್ನು ಯೆಹೋವನು ತಿಳಿಸಿದನು.

ಯೆಹೋವನು ಹೀಗೆ ನುಡಿದನು: “ನಾನು ಯೆಹೂದವನ್ನೂ ಜೆರುಸಲೇಮಿನಲ್ಲಿ ವಾಸಿಸುವ ಜನರನ್ನೂ ದಂಡಿಸುವೆನು. ಬಾಳನ ಪೂಜೆಯ ಪ್ರತಿಯೊಂದು ಚಿಹ್ನೆಯನ್ನೂ ಅದನ್ನು ಪೂಜಿಸುವ ಪುರೋಹಿತರನ್ನೂ ಮತ್ತು ಯಾವ ಜನರು ತಮ್ಮ ಮಾಳಿಗೆಯ ಮೇಲೆ ಹತ್ತಿ ನಕ್ಷತ್ರಗಳನ್ನು ಆರಾಧಿಸುತ್ತಾರೋ ನಾನು ಅವರನ್ನು ನಿರ್ಮೂಲ ಮಾಡುತ್ತೇನೆ. ಜನರು ತಮ್ಮ ಸುಳ್ಳು ಪುರೋಹಿತರನ್ನು ಮರೆತುಬಿಡುವರು. ಕೆಲವರು ತಮ್ಮನ್ನು ನನ್ನ ಆರಾಧಕರೆಂದು ಹೇಳಿಕೊಳ್ಳುವರು. ಆದರೆ ಈಗ ಅವರು ಸುಳ್ಳು ದೇವರಾದ ಮಲ್ಕಾಮನನ್ನು ಆರಾಧಿಸುತ್ತಾರೆ. ಅಂಥವರನ್ನು ಅವರ ಸ್ಥಳಗಳಿಂದ ತೆಗೆದುಹಾಕುವೆನು. ಕೆಲವರು ಯೆಹೋವನಾದ ನನ್ನಿಂದ ತೊಲಗಿಹೋದರು. ನನ್ನನ್ನು ಹಿಂಬಾಲಿಸುವುದನ್ನು ನಿಲ್ಲಿಸಿಬಿಟ್ಟರು. ಅವರು ಯೆಹೋವನನ್ನು ಸಹಾಯಕ್ಕಾಗಿ ಬೇಡುವಂತದ್ದನ್ನು ನಿಲ್ಲಿಸಿದರು. ಅವರನ್ನು ನಾನು ಅವರ ಸ್ಥಳಗಳಿಂದ ತೆಗೆದುಹಾಕುವೆನು.”

ದೇವರಾದ ಯೆಹೋವನ ಸನ್ನಿಧಿಯಲ್ಲಿ ಮೌನವಾಗಿರಿ. ಯಾಕೆಂದರೆ ಯೆಹೋವನು ಜನರಿಗೆ ನ್ಯಾಯತೀರಿಸುವ ದಿನವು ಹತ್ತಿರವಾಯಿತು. ಯೆಹೋವನು ತನ್ನ ಯಜ್ಞವನ್ನು ತಯಾರು ಮಾಡಿ ತನ್ನ ಆಮಂತ್ರಿತರನ್ನು ಸಿದ್ಧವಾಗಿರಲು ಹೇಳಿದ್ದಾನೆ.

“ಯೆಹೋವನ ಯಜ್ಞದ ದಿನದಲ್ಲಿ ನಾನು ರಾಜಕುಮಾರರನ್ನೂ ಇತರ ನಾಯಕರುಗಳನ್ನೂ ಶಿಕ್ಷಿಸುವೆನು. ಪರದೇಶದ ಬಟ್ಟೆಯನ್ನು ತೊಟ್ಟುಕೊಳ್ಳುವ ಪ್ರತಿಯೊಬ್ಬರನ್ನೂ ನಾನು ಶಿಕ್ಷಿಸುವೆನು. ಆ ಸಮಯದಲ್ಲಿ ಹೊಸ್ತಿಲನ್ನು ಹಾರಿ ತಮ್ಮ ಒಡೆಯರ ಮನೆಯನ್ನು ತಮ್ಮ ಸುಳ್ಳು, ಮೋಸ, ಹಿಂಸೆಗಳಿಂದ ತುಂಬಿರುವವರನ್ನು ಶಿಕ್ಷಿಸುತ್ತೇನೆ” ಎಂದು ಯೆಹೋವನು ನುಡಿಯುತ್ತಾನೆ.

10 ಯೆಹೋವನು ಇನ್ನೂ ಹೇಳುವುದೇನೆಂದರೆ, “ಆ ಸಮಯದಲ್ಲಿ ಜೆರುಸಲೇಮಿನ ಮೀನು ಬಾಗಿಲಲ್ಲಿ ಜನರು ಸಹಾಯಕ್ಕಾಗಿ ಮೊರೆಯಿಡುವರು. ನಗರದ ಇತರ ಕಡೆಗಳಿಂದ ಜನರು ರೋಧಿಸುವರು. ನಗರದ ಸುತ್ತಲಿರುವ ಬೆಟ್ಟಗಳಲ್ಲಿ ನಾಶವಾಗುವ ಶಬ್ದವನ್ನು ಜನರು ಕೇಳುವರು. 11 ನಗರದ ಕೆಳಗಿನ ಭಾಗದಲ್ಲಿರುವವರೇ, ನೀವು ಅಳುವಿರಿ. ಯಾಕೆಂದರೆ ನಿಮ್ಮಲ್ಲಿರುವ ಧನಿಕರೂ ವ್ಯಾಪಾರಸ್ತರೂ ನಾಶವಾಗುವರು.

12 “ಆ ಸಮಯಗಳಲ್ಲಿ ನಾನು ದೀಪವನ್ನು ಹಚ್ಚಿ ಜೆರುಸಲೇಮಿನಲ್ಲಿ ಹುಡುಕಾಡುವೆನು. ತಮ್ಮ ಸ್ವಂತ ರೀತಿಯಲ್ಲಿ ನಡೆದು ತೃಪ್ತಿಯಾಗಿರುವ ಜನರನ್ನು ಕಂಡುಕೊಳ್ಳುವೆನು. ಅವರು ಹೇಳುವುದೇನೆಂದರೆ, ‘ಯೆಹೋವನು ಏನೂ ಮಾಡುವುದಿಲ್ಲ. ಅವನು ಸಹಾಯವನ್ನೂ ಮಾಡುವುದಿಲ್ಲ. ಜನರಿಗೆ ಕೆಡುಕನ್ನೂ ಮಾಡುವುದಿಲ್ಲ.’ ಅಂಥವರನ್ನು ನಾನು ಹಿಡಿದು ಶಿಕ್ಷಿಸುವೆನು. 13 ಆಗ ಇತರ ಜನರು ಬಂದು ಅವರ ಐಶ್ವರ್ಯವನ್ನು ಸುಲುಕೊಂಡು ಅವರ ಮನೆಯನ್ನು ನಾಶಮಾಡುವರು. ಆ ಸಮಯಗಳಲ್ಲಿ ಮನೆಕಟ್ಟಿದ ಜನರು ಅದರಲ್ಲಿ ವಾಸಮಾಡುವುದಿಲ್ಲ. ದ್ರಾಕ್ಷಿತೋಟವನ್ನು ನೆಟ್ಟವರು, ಅದರ ಹಣ್ಣಿನ ರಸವನ್ನು ಕುಡಿಯುವುದಿಲ್ಲ. ಬೇರೆಯವರು ಅದನ್ನು ಪಡೆದುಕೊಳ್ಳುವರು.”

14 ಯೆಹೋವನ ನ್ಯಾಯತೀರ್ಪಿನ ದಿನವು ಬೇಗನೇ ಬರುತ್ತದೆ; ಅತ್ಯಂತ ವೇಗವಾಗಿ ಬರುತ್ತಿದೆ. ಆ ದಿನದಂದು ಜನರು ಬಹಳವಾಗಿ ದುಃಖಿಸುವರು. ಧೈರ್ಯಶಾಲಿಗಳಾದ ಸೈನಿಕರೂ ಅಳುವರು. 15 ಯೆಹೋವನು ತನ್ನ ಕೋಪವನ್ನು ಆ ದಿವಸದಲ್ಲಿ ತೋರಿಸುವನು. ಆ ದಿವಸಗಳಲ್ಲಿ ಮಹಾ ಸಂಕಟಗಳಿರುವವು. ಅವು ನಾಶನದ ದಿವಸಗಳಾಗಿರುವವು. ಆ ದಿವಸವು ಕತ್ತಲು, ಕಾರ್ಮುಗಿಲು ಕವಿದ ಬಿರುಗಾಳಿಯ ದಿವಸವಾಗಿರುವುದು. 16 ಅದು ಒಂದು ಯುದ್ಧದ ದಿವಸದಂತಿರುವುದು; ಎಲ್ಲೆಲ್ಲೂ ಕೊಂಬು, ತುತ್ತೂರಿಗಳ ಧ್ವನಿಗಳನ್ನು ಜನರು ಬುರುಜು, ಕೊತ್ತಲಗಳಿಂದ ಕೇಳಿಸಿಕೊಳ್ಳುವರು.

17 ಯೆಹೋವನು ಹೇಳುವುದೇನೆಂದರೆ, “ಜನರ ಜೀವನವನ್ನು ನಾನು ಬಹು ಕಷ್ಟಕರವಾಗಿ ಮಾಡುವೆನು. ಅವರು ಕುರುಡರಂತೆ ಅತ್ತಿತ್ತ ತೊಳಲಾಡುವರು. ತಾವು ಎಲ್ಲಿಗೆ ಹೋಗುತ್ತಿದ್ದಾರೆಂದು ಅವರಿಗೆ ತಿಳಿಯದು. ಯಾಕೆಂದರೆ ಯೆಹೋವನಿಗೆ ವಿರುದ್ಧವಾಗಿ ಪಾಪ ಮಾಡಿದ್ದಾರೆ. ಅನೇಕ ಮಂದಿ ಕೊಲ್ಲಲ್ಪಡುವರು. ಅವರ ರಕ್ತವು ಭೂಮಿಗೆ ಸುರಿಯಲ್ಪಡುವುದು. ಅವರ ಹೆಣಗಳು ಮಲದ ಹಾಗೆ ನೆಲದಲ್ಲಿ ಬೀಳುವವು. 18 ಅವರ ಬೆಳ್ಳಿಬಂಗಾರಗಳು ಅವರ ಸಹಾಯಕ್ಕೆ ಬಾರವು. ಆ ಸಮಯದಲ್ಲಿ ಯೆಹೋವನು ಕೋಪಾಗ್ನಿಯಿಂದ ತುಂಬಿದವನಾಗುವನು. ಯೆಹೋವನು ಇಡೀ ಪ್ರಪಂಚವನ್ನೇ ನಾಶಮಾಡುವನು. ಭೂಮಿಯ ಮೇಲಿರುವ ಪ್ರತಿಯೊಬ್ಬನನ್ನು ಯೆಹೋವನು ಸಂಪೂರ್ಣವಾಗಿ ನಾಶಮಾಡುವನು.”

ಜನರ ಜೀವಿತವನ್ನು ಮಾರ್ಪಡಿಸಲು ದೇವರ ಕರೆ

ನಾಚಿಕೆಗೆಟ್ಟವರೇ, ನಿಮ್ಮ ಜೀವಿತವನ್ನು ಬದಲಾಯಿಸಿರಿ. ನೀವು ಒಣಗಿ, ಸತ್ತ ಹೂವಿನೋಪಾದಿಯಾಗುವ ಮೊದಲೇ ನಿಮ್ಮ ಜೀವಿತವನ್ನು ಮಾರ್ಪಡಿಸಿರಿ. ಬಿಸಿಲೇರಿದಾಗ ಹೂವು ಬಾಡಿಹೋಗಿ ಒಣಗುತ್ತದೆ. ಅದೇ ಪ್ರಕಾರ ಯೆಹೋವನು ತನ್ನ ಕೋಪವನ್ನು ಪ್ರದರ್ಶಿಸುವಾಗ ನೀವು ಹಾಗೆ ಆಗುವಿರಿ. ಆದ್ದರಿಂದ ಯೆಹೋವನ ಕೋಪದ ದಿನವು ನಿಮ್ಮ ಮೇಲೆ ಬರುವುದಕ್ಕಿಂತ ಮೊದಲೇ ನಿಮ್ಮ ಜೀವಿತವನ್ನು ಬದಲಾಯಿಸಿರಿ. ದೀನರೇ, ಯೆಹೋವನ ಬಳಿಗೆ ಬನ್ನಿರಿ. ಆತನ ನಿಯಮಗಳಿಗೆ ಒಳಗಾಗಿರಿ, ಒಳ್ಳೇದನ್ನು ಮಾಡಿರಿ, ದೀನರಾಗಿರಿ. ಯೆಹೋವನು ತನ್ನ ಕೋಪಾಗ್ನಿಯನ್ನು ಪ್ರದರ್ಶಿಸುವ ದಿವಸದಲ್ಲಿ ನೀವು ರಕ್ಷಿಸಲ್ಪಡಬಹುದು.

ಇಸ್ರೇಲರ ನೆರೆಯವರನ್ನು ಯೆಹೋವನು ಶಿಕ್ಷಿಸುವನು

ಗಾಜದಲ್ಲಿ ಯಾರೂ ಉಳಿಯರು. ಅಷ್ಕೆಲೋನ್ ನಾಶವಾಗುವದು. ಮಧ್ಯಾಹ್ನದೊಳಗಾಗಿ ಅಷ್ಡೋದನ್ನು ಬಿಟ್ಟು ಹೋಗುವಂತೆ ಬಲವಂತ ಮಾಡಲಾಗುವುದು. ಎಕ್ರೋನ್ ನಿರ್ಜನವಾಗುವುದು. ಫಿಲಿಷ್ಟಿಯ ಜನರೇ, ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರೇ, ಯೆಹೋವನಿಂದ ಬಂದ ಸಂದೇಶ ನಿಮಗಾಗಿಯೇ. ಕಾನಾನ್ ದೇಶವೇ, ಪಾಲೆಸ್ತೀನ್ ದೇಶವೇ, ನೀವು ನಾಶಗೊಳ್ಳುವಿರಿ. ನಿಮ್ಮಲ್ಲಿ ಯಾರೂ ವಾಸಿಸರು. ಕರಾವಳಿಯಲ್ಲಿರುವ ನಿಮ್ಮ ಪ್ರಾಂತ್ಯವು ಕುರುಬರಿಗೆ ತಮ್ಮ ಕುರಿಗಳನ್ನು ಮೇಯಿಸುವ ಬಯಲಾಗುವದು. ಆ ದೇಶವು ಯೆಹೂದದಲ್ಲಿ ಅಳಿದುಳಿದವರಿಗೆ ಆಗುವದು. ಯೆಹೂದದಲ್ಲಿರುವ ಜನರನ್ನು ಯೆಹೋವನು ನೆನಪುಮಾಡುವನು. ಅವರು ಸೆರೆಯಾಳುಗಳಾಗಿ ಅನ್ಯದೇಶದಲ್ಲಿರುವರು. ಆದರೆ ಯೆಹೋವನು ಅವರನ್ನು ಹಿಂದಕ್ಕೆ ತರುವನು. ಆಗ ಯೆಹೂದದ ಜನರು ಆ ಬಯಲಿನಲ್ಲಿ ತಮ್ಮ ಕುರಿಮಂದೆಗಳನ್ನು ಮೇಯಿಸುವರು. ಸಾಯಂಕಾಲ ಬರಿದಾದ ಅಷ್ಕೆಲೋನಿನ ಮನೆಗಳಲ್ಲಿ ತಂಗುವರು.

ಯೆಹೋವನು ಹೀಗೆನ್ನುತ್ತಾನೆ, “ಮೋವಾಬ್ಯರೂ ಅಮ್ಮೋನ್ಯರೂ ಏನು ಮಾಡಿದ್ದಾರೆಂದು ನನಗೆ ಗೊತ್ತಿದೆ. ಅವರು ನನ್ನ ಜನರನ್ನೂ ಕೆಣಕಿದರು. ಅವರ ಪ್ರದೇಶಗಳನ್ನು ಎಳೆದುಕೊಂಡು ತಮ್ಮ ರಾಜ್ಯಗಳನ್ನು ವಿಸ್ತರಿಸಿದರು. ನನ್ನ ಜೀವದಾಣೆ, ಮೋವಾಬ್ಯರೂ ಅಮ್ಮೋನ್ಯರೂ ಸೊದೋಮ್ ಗೊಮೋರದವರಂತೆ ನಾಶವಾಗುವರು. ನಾನು ಸರ್ವಶಕ್ತನಾದ ಇಸ್ರೇಲರ ದೇವರಾಗಿರುವೆನು. ನಾನು ವಾಗ್ದಾನ ಮಾಡುವದೇನೆಂದರೆ, ಆ ರಾಜ್ಯಗಳು ಸಂಪೂರ್ಣವಾಗಿ ನಾಶವಾಗುವವು. ಅವರ ಭೂಮಿಯು ಕಳೆಗಳಿಂದ ತುಂಬಿಹೋಗುವದು. ಅದು ಮೃತ್ಯುಸಮುದ್ರದ ಉಪ್ಪಿನಿಂದ ತುಂಬಿಹೋದಂತಿರುವದು. ನನ್ನ ಜನರಲ್ಲಿ ಉಳಿದವರು ಅವರ ದೇಶವನ್ನೂ ಅಲ್ಲಿ ಉಳಿದಿರುವ ವಸ್ತುಗಳನ್ನೂ ತಮ್ಮ ವಶಮಾಡಿಕೊಳ್ಳುವರು.”

10 ಸರ್ವಶಕ್ತನಾದ ಯೆಹೋವನ ಜನರನ್ನು ಮೋವಾಬ್ಯರು ಮತ್ತು ಅಮ್ಮೋನ್ಯರು ಕ್ರೂರವಾಗಿ ಕಂಡು ಅವರನ್ನು ಪರಿಹಾಸ್ಯಮಾಡಿದ್ದರಿಂದಲೂ ಈ ಸಂಗತಿಗಳು ಅವರಲ್ಲಿ ನೆರವೇರುವವು. 11 ಅವರು ಯೆಹೋವನಿಗೆ ಭಯಪಡುವರು. ಯಾಕೆಂದರೆ ಆತನು ಅವರ ದೇವರುಗಳನ್ನು ನಾಶಮಾಡಿದ್ದಾನೆ. ಆಗ ದೂರದಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸುವರು. 12 ಇಥಿಯೋಪ್ಯದ ಜನರೇ, ಇದರಲ್ಲಿ ನೀವೂ ಸೇರಿರುವಿರಿ. ಯೆಹೋವನ ಕತ್ತಿಯು ನಿಮ್ಮ ಜನರೆಲ್ಲರನ್ನು ಕೊಲ್ಲುವದು. 13 ದೇವರು ಆಮೇಲೆ ಉತ್ತರಕ್ಕೆ ಮುಖಮಾಡಿ ಅಶ್ಶೂರವನ್ನು ಶಿಕ್ಷಿಸುವನು. ಆತನು ನಿನೆವೆ ಪಟ್ಟಣವನ್ನು ಶಿಕ್ಷಿಸಿದಾಗ ಅದು ನಿರ್ಜನವಾದ ಮರುಭೂಮಿಯಾಗುವದು. 14 ಆಮೇಲೆ ಆ ಹಾಳುಬಿದ್ದ ನಗರದಲ್ಲಿ ಕಾಡುಪ್ರಾಣಿಗಳೂ ಕುರಿಗಳೂ ವಾಸಮಾಡುವವು. ಕಾಗೆಗಳೂ ಗೂಬೆಗಳೂ ಪಟ್ಟಣದ ಸ್ತಂಭಗಳ ಮೇಲೆ ಕುಳಿತುಕೊಂಡು ಒಂದನ್ನೊಂದು ಕರೆಯುವವು. ಬಾಗಿಲ ಹೊಸ್ತಿಲಲ್ಲಿ ಕಾಗೆಗಳು ಕುಳಿತುಕೊಳ್ಳುವವು. ಕಪ್ಪುಪಕ್ಷಿಗಳು ನಿರ್ಜನವಾದ ಮನೆಗಳ ಮೇಲೆ ಕುಳಿತುಕೊಳ್ಳುವವು. 15 ಈ ನಿನೆವೆಯು ಸಂತೋಷಭರಿತ ನಗರಿಯಾಗಿದೆ. ಅದರ ನಿವಾಸಿಗಳು ತಾವು ಸುರಕ್ಷಿತರಾಗಿದ್ದೇವೆಂದು ತಿಳಿದಿದ್ದಾರೆ. ನಿನೆವೆಯು ಲೋಕದಲ್ಲಿ ಅತ್ಯಂತ ಮಹತ್ವಪೂರ್ಣ ಸ್ಥಳವೆಂದು ತಿಳಿದಿದ್ದಾರೆ. ಅವರು ಬಹಳ ಗರ್ವಪಡುತ್ತಾರೆ. ಆದರೆ ಆ ನಗರವು ನಾಶವಾಗುವದು. ಕಾಡುಮೃಗಗಳ ಹಕ್ಕೆಯಾಗುವದು. ದಾಟಿಹೋಗುವ ಜನರು, ತಮ್ಮ ಆಶ್ಚರ್ಯವನ್ನು ಸಿಳ್ಳುಹಾಕಿ ತಲೆಯಾಡಿಸಿ “ಎಂಥಾ ದುರ್ಗತಿ” ಎಂದು ಉದ್ಗರಿಸುವರು.

ಜೆರುಸಲೇಮಿನ ಭವಿಷ್ಯ

ಜೆರುಸಲೇಮೇ, ನಿನ್ನ ಜನರು ದೇವರಿಗೆ ವಿರುದ್ಧವಾಗಿ ನಡೆದರು. ಇತರರನ್ನು ಹಿಂಸಿಸಿದರು ಮತ್ತು ಪಾಪದಿಂದ ಮಲಿನರಾದರು. ನಿನ್ನ ಜನರು ನನ್ನ ಮಾತುಗಳನ್ನು ಕೇಳಲಿಲ್ಲ. ನನ್ನ ಬೋಧನೆಯನ್ನು ಸ್ವೀಕರಿಸಲಿಲ್ಲ. ಜೆರುಸಲೇಮ್ ದೇವರ ಮೇಲೆ ಭರವಸವಿಡಲಿಲ್ಲ. ಆತನ ಬಳಿಗೆ ಹೋಗಲಿಲ್ಲ. ಜೆರುಸಲೇಮಿನ ನಾಯಕರು ಗರ್ಜಿಸುವ ಸಿಂಹದಂತೆ ಇದ್ದಾರೆ, ಅವರ ನ್ಯಾಯಾಧಿಪತಿಗಳು ರಾತ್ರಿ ಕಾಲದಲ್ಲಿ ಕುರಿಗಳ ಮೇಲೆ ಬೀಳುವ ಹಸಿದ ತೋಳಗಳಂತಿದ್ದಾರೆ. ಬೆಳಗಾಗಲು, ಏನೂ ಉಳಿಯುವುದಿಲ್ಲ. ಅವರ ಪ್ರವಾದಿಗಳು ಬಡಾಯಿಗಾರರೂ ದ್ರೋಹಿಗಳೂ ಆಗಿದ್ದಾರೆ. ಅವರು ಯಾವಾಗಲೂ ಇನ್ನೂಇನ್ನೂ ಹೆಚ್ಚಾಗಿ ದೊರಕುವಂತೆ ಪ್ರಯತ್ನಿಸಿರುತ್ತಾರೆ. ಅವರ ಯಾಜಕರು ಪವಿತ್ರ ವಸ್ತುಗಳನ್ನು ಸಾಧಾರಣ ವಸ್ತುಗಳನ್ನಾಗಿ ಉಪಯೋಗಿಸಿದ್ದಾರೆ. ದೇವರ ನಿಯಮಗಳನ್ನು ನಿರ್ಲಕ್ಷಿಸಿದ್ದಾರೆ. ಆದರೆ ದೇವರು ಇನ್ನೂ ಆ ನಗರದಲ್ಲಿದ್ದಾನೆ. ಅವರಿಗೆ ಇನ್ನೂ ಒಳ್ಳೆಯದನ್ನೇ ಮಾಡುತ್ತಿದ್ದಾನೆ. ಆತನು ತಪ್ಪು ಕಾರ್ಯಗಳನ್ನು ಮಾಡುವವನಲ್ಲ. ತನ್ನ ಜನರಿಗೆ ಸಹಾಯ ಮಾಡುತ್ತಿರುತ್ತಾನೆ. ಪ್ರತಿ ದಿನವೂ ಸರಿಯಾದ ತೀರ್ಮಾನ ಮಾಡಲು ತನ್ನ ಜನರಿಗೆ ಸಹಾಯ ಮಾಡುತ್ತಾನೆ. ಆದರೆ ಆ ದುಷ್ಟಜನರು ತಮ್ಮ ದುಷ್ಟತನಕ್ಕಾಗಿ ನಾಚಿಕೆಪಡುತ್ತಿಲ್ಲ.

ದೇವರು ಹೀಗೆನ್ನುತ್ತಾನೆ, “ನಾನು ಇಡೀ ಜನಾಂಗಗಳನ್ನು ನಾಶಮಾಡಿದ್ದೇನೆ. ಅವರ ಬುರುಜುಗಳನ್ನು ನಾಶಮಾಡಿ, ಅವರ ರಸ್ತೆಗಳಲ್ಲಿ ಯಾರೂ ನಡೆಯದ ಹಾಗೆ ಮಾಡಿರುತ್ತೇನೆ. ಅವರ ನಗರಗಳು ನಿರ್ಜನವಾಗಿವೆ. ಯಾರೂ ಅಲ್ಲಿ ವಾಸಮಾಡುವದಿಲ್ಲ. ನೀವು ಇದರಿಂದ ಪಾಠ ಕಲಿಯಬೇಕೆಂದು ಇದನ್ನೆಲ್ಲಾ ಹೇಳುತ್ತಿದ್ದೇನೆ. ನೀವು ನನ್ನನ್ನು ಗೌರವಿಸಿ ನನಗೆ ಭಯಪಡಬೇಕೆಂದು ನಾನು ಈ ವಿಷಯಗಳನ್ನು ತಿಳಿಸುತ್ತಿದ್ದೇನೆ. ನೀವು ಹೀಗೆ ಮಾಡುವುದಾದರೆ ನಿನ್ನ ಮನೆಯು ನಾಶವಾಗದು. ನೀವು ನನ್ನ ನಿಯಮಗಳನ್ನು ಅನುಸರಿಸುವದಾದರೆ ನಾನು ಆಲೋಚಿಸಿರುವ ಪ್ರಕಾರ ನಿಮ್ಮನ್ನು ಶಿಕ್ಷಿಸುವದಿಲ್ಲ.” ಆದರೆ ಆ ದುಷ್ಟ ಜನರು ತಮ್ಮ ಮಾರ್ಗವನ್ನು ಬಿಡದೆ ದುಷ್ಟತನದಲ್ಲಿಯೇ ಮುಂದುವರಿಯುತ್ತಿದ್ದಾರೆ.

ಯೆಹೋವನು ಹೀಗೆ ಹೇಳುತ್ತಾನೆ: “ನನ್ನನ್ನು ಕಾದುಕೊಂಡಿರಿ. ನೀವು ನನ್ನ ನ್ಯಾಯತೀರ್ಪಿನ ತನಕ ಕಾದುಕೊಂಡಿರಿ. ನಾನು ಬೇರೆ ಜನಾಂಗಗಳನ್ನು ಇಲ್ಲಿಗೆ ಕರೆದು ನಿಮ್ಮನ್ನು ಶಿಕ್ಷಿಸುವಂತೆ ಮಾಡುವ ಹಕ್ಕು ನನಗಿದೆ. ನಿಮ್ಮ ಮೇಲೆ ನನಗಿರುವ ಸಿಟ್ಟು ತೋರಿಸಲು ನಾನು ಆ ಜನಾಂಗಗಳನ್ನು ಉಪಯೋಗಿಸುವೆನು. ನಿಮ್ಮ ಮೇಲೆ ನಾನು ಎಷ್ಟರಮಟ್ಟಿಗೆ ಕೋಪಗೊಂಡಿದ್ದೇನೆ ಎಂದು ಅವರ ಮೂಲಕ ನಿಮಗೆ ತಿಳಿದುಬರುವುದು. ಆಗ ಇಡೀ ದೇಶವೇ ನಾಶವಾಗುವುದು. ಆಗ ನಾನು ಇತರ ಜನಾಂಗಗಳವರ ಭಾಷೆಯನ್ನು ಬದಲಾಯಿಸಿ ದೇವರಾದ ಯೆಹೋವನ ನಾಮವನ್ನು ಉಚ್ಚರಿಸುವಂತೆ ಮಾಡುವೆನು. ಅವರೆಲ್ಲರೂ ನನ್ನನ್ನು ಆರಾಧಿಸುವರು. ಒಟ್ಟಾಗಿ ಸೇರಿ ಒಂದೇ ಜನಾಂಗವಾಗಿ ನನ್ನನ್ನು ಆರಾಧಿಸುವರು. 10 ಇಥಿಯೋಪ್ಯದಲ್ಲಿ ನದಿಯ ಆಚೆ ದಡದವರೆಗೂ ಜನರು ಬರುವರು. ನನ್ನಿಂದ ಚದರಿಹೋಗಿದ್ದ ಜನರು ನನ್ನ ಬಳಿಗೆ ಬರುವರು. ನನ್ನನ್ನು ಆರಾಧಿಸಲು ಬರುವವರು ನನಗೆ ಕಾಣಿಕೆಗಳನ್ನು ತರುವರು.

11 “ಆಗ ಜೆರುಸಲೇಮೇ, ನಿನ್ನ ಜನರು ನನಗೆ ವಿರುದ್ಧವಾಗಿ ಮಾಡಿದ ದುಷ್ಕೃತ್ಯಗಳಿಗಾಗಿ ನೀನು ನಾಚಿಕೆಪಡುವುದಿಲ್ಲ. ಯಾಕೆಂದರೆ ನಾನು ಆ ದುಷ್ಟ ಜನರನ್ನೆಲ್ಲಾ ನಿರ್ಮೂಲ ಮಾಡುವೆನು. ಅಹಂಕಾರ ತುಂಬಿದ ಜನರನ್ನು ನಾನು ತೆಗೆದುಬಿಡುವೆನು. ನನ್ನ ಪವಿತ್ರ ಪರ್ವತದಲ್ಲಿ ಗರ್ವವುಳ್ಳವರು ಯಾರೂ ಇರುವದಿಲ್ಲ. 12 ನನ್ನ ಪಟ್ಟಣದೊಳಗೆ ಬರೇ ದೀನದರಿದ್ರರೇ ವಾಸಮಾಡುವರು. ಅವರು ಯೆಹೋವನ ಹೆಸರಿನಲ್ಲಿ ಭರವಸೆ ಇಡುವವರಾಗಿರುವರು. 13 ಇಸ್ರೇಲಿನಲ್ಲಿ ಉಳಿದವರು ದುಷ್ಕೃತ್ಯಗಳನ್ನು ಮಾಡುವುದಿಲ್ಲ. ಸುಳ್ಳು ಹೇಳುವದಿಲ್ಲ. ಜನರನ್ನು ಮೋಸಗೊಳಿಸುವದಿಲ್ಲ. ಅವರು ಕುರಿಗಳಂತೆ ಮೇದು ವಿಶ್ರಾಂತಿ ತೆಗೆದುಕೊಳ್ಳುವರು. ಯಾರೂ ಅವರ ಗೊಡವೆಗೆ ಹೋಗುವುದಿಲ್ಲ.”

ಸಂತಸದ ಹಾಡು

14 ಜೆರುಸಲೇಮೇ, ಹಾಡುತ್ತಾ ಸಂತೋಷಿಸುತ್ತಿರು.
    ಇಸ್ರೇಲೇ, ಸಂತೋಷದಿಂದ ಆರ್ಭಟಿಸು.
    ಜೆರುಸಲೇಮೇ, ಸಂತೋಷದಿಂದಿದ್ದು ಉಲ್ಲಾಸಿಸು.
15 ಯಾಕೆಂದರೆ ನಿನ್ನ ಯೆಹೋವನು ನಿನ್ನ ಶಿಕ್ಷೆಯನ್ನು ನಿಲ್ಲಿಸಿದ್ದಾನೆ.
    ನಿನ್ನ ವೈರಿಗಳ ಬಲವಾದ ಬುರುಜುಗಳನ್ನು ನಾಶಮಾಡಿದ್ದಾನೆ.
ಇಸ್ರೇಲಿನ ರಾಜನೇ, ನಿನ್ನ ದೇವರು ನಿನ್ನೊಂದಿಗಿದ್ದಾನೆ.
    ನಿನಗೆ ಕೆಟ್ಟದ್ದು ಸಂಭವಿಸುತ್ತದೆಂದು ನೀನು ಚಿಂತಿಸದಿರು.
16 ಆ ಸಮಯದಲ್ಲಿ ಜೆರುಸಲೇಮಿಗೆ ಹೀಗೆ ಹೇಳಲಾಗುವುದು:
    “ಬಲವಾಗಿರು! ಭಯಪಡದಿರು!
17 ನಿನ್ನ ದೇವರಾದ ಯೆಹೋವನು ನಿನ್ನೊಂದಿಗಿದ್ದಾನೆ.
    ಆತನು ರಣಶೂರನು.
ನಿನ್ನನ್ನು ರಕ್ಷಿಸಿ ನಿನ್ನ ಮೇಲಿನ ತನ್ನ ಪ್ರೀತಿಯನ್ನು ತೋರ್ಪಡಿಸುವನು.
    ನಿನ್ನೊಂದಿಗೆ ಎಷ್ಟು ಸಂತೋಷದಲ್ಲಿರುವನೆಂದು ತೋರಿಸುವನು.
ನಿನ್ನೊಂದಿಗೆ ನಗಾಡುತ್ತಾ ಹರ್ಷಿಸುವನು.
18     ನಿನ್ನ ನಾಚಿಕೆಯನ್ನು ತೆಗೆದುಬಿಡುವನು.
ನಿನ್ನನ್ನು ಹಿಂಸಿಸುವ ಜನರನ್ನು ನಿಲ್ಲಿಸುವನು.
19 ಆ ಸಮಯದಲ್ಲಿ, ನಿನಗೆ ಕೇಡುಮಾಡುವವರನ್ನು ಶಿಕ್ಷಿಸುವೆನು.
    ಗಾಯಗೊಂಡಿರುವ ನಿನ್ನ ಜನರನ್ನು ರಕ್ಷಿಸುವೆನು.
ತಮ್ಮ ದೇಶದಿಂದ ದೂರಕ್ಕೆ ಚದರಿಸಲ್ಪಟ್ಟ ಜನರನ್ನು ನಾನು ಹಿಂದಕ್ಕೆ ಕರೆದುಕೊಂಡು ಬರುವೆನು.
    ನಾನು ಅವರನ್ನು ಪ್ರಸಿದ್ಧಿಪಡಿಸುವೆನು.
    ಎಲ್ಲಾ ಜನರು ಅವರನ್ನು ಹೊಗಳುವರು.
20 ಆಗ ನಿಮ್ಮೆಲ್ಲರನ್ನು ನಾನು ಹಿಂದಕ್ಕೆ ಕರೆತರುವೆನು.
    ನಿನ್ನನ್ನು ಪ್ರಸಿದ್ಧಿಪಡಿಸುವೆನು.
ಎಲ್ಲಾ ಜನರು ನಿನ್ನನ್ನು ಹೊಗಳುವರು.
    ನಿನ್ನ ಕಣ್ಣೆದುರಿಗೆ ಸೆರೆಹಿಡಿದವರನ್ನು ಕರೆತರುವಾಗ ಹಾಗೆ ಆಗುವದು”
ಇದು ಯೆಹೋವನ ನುಡಿ.

ಪ್ರಕಟನೆ 16

ದೇವರ ಕೋಪದಿಂದ ತುಂಬಿದ್ದ ಪಾತ್ರೆಗಳು

16 ನಂತರ ಆಲಯದಿಂದ ಒಂದು ಮಹಾಶಬ್ದವು ನನಗೆ ಕೇಳಿಸಿತು. ಆ ಶಬ್ದವು ಏಳು ದೇವದೂತರಿಗೆ, “ನೀವು ಹೋಗಿ ಏಳು ಪಾತ್ರೆಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿದುಬಿಡಿ” ಎಂದು ಹೇಳಿತು.

ಮೊದಲನೆಯ ದೇವದೂತನು ಹೊರಟನು. ಅವನು ತನ್ನ ಪಾತ್ರೆಯಲ್ಲಿದ್ದುದನ್ನು ಭೂಮಿಯ ಮೇಲೆ ಸುರಿದನು. ಆಗ ಮೃಗದ ಗುರುತನ್ನು ಹೊಂದಿದ್ದ ಮತ್ತು ಅದರ ವಿಗ್ರಹವನ್ನು ಆರಾಧಿಸುತ್ತಿದ್ದ ಜನರೆಲ್ಲರಿಗೂ ಅಸಹ್ಯವಾದ ಹಾಗೂ ನೋವಿನಿಂದ ಕೂಡಿದ ಹುಣ್ಣುಗಳಾದವು.

ಎರಡನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸಮುದ್ರದ ಮೇಲೆ ಸುರಿದನು. ಆಗ ಸಮುದ್ರವು ಸತ್ತ ಮನುಷ್ಯನ ರಕ್ತದಂತಾಯಿತು. ಸಮುದ್ರದಲ್ಲಿದ್ದ ಜೀವಜಂತುಗಳೆಲ್ಲ ಸತ್ತುಹೋದವು.

ಮೂರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ನದಿಗಳ ಮತ್ತು ನೀರಿನ ಬುಗ್ಗೆಗಳ ಮೇಲೆ ಸುರಿದನು. ಆಗ ನದಿಗಳು ಮತ್ತು ನೀರಿನ ಬುಗ್ಗೆಗಳೆಲ್ಲ ರಕ್ತವಾಗಿ ಪರಿಣಮಿಸಿದವು. ಆಗ ನೀರಿನ ಅಧಿಪತಿಯಾದ ದೂತನು ದೇವರಿಗೆ ಹೇಳಿದ್ದು ನನಗೆ ಕೇಳಿಸಿತು:

“ನೀನೇ ವರ್ತಮಾನ ಕಾಲದಲ್ಲಿರುವಾತನು.
ನೀನೊಬ್ಬನೇ ಪರಿಶುದ್ಧನು.
ನೀನು ನೀಡಿದ ಈ ತೀರ್ಪುಗಳಲ್ಲೆಲ್ಲಾ ನೀನು ನ್ಯಾಯವಂತನಾಗಿರುವೆ.
ಆ ಜನರು ನಿನ್ನ ಪರಿಶುದ್ಧ ಜನರ ಮತ್ತು ನಿನ್ನ ಪ್ರವಾದಿಗಳ ರಕ್ತವನ್ನು ಸುರಿಸಿದರು.
ಈಗ ನೀನು ಅವರಿಗೆ ಕುಡಿಯಲು ರಕ್ತವನ್ನೇ ನೀಡಿರುವೆ.
    ಅವರು ಇದಕ್ಕೆ ಪಾತ್ರರಾಗಿದ್ದಾರೆ.”

ಯಜ್ಞವೇದಿಕೆಯಿಂದ ಹೀಗೆ ಹೇಳುವುದನ್ನೂ ನಾನು ಕೇಳಿಸಿಕೊಂಡೆನು:

“ಹೌದು, ದೇವರಾದ ಪ್ರಭುವೇ, ಸರ್ವಶಕ್ತನೇ,
    ನಿನ್ನ ತೀರ್ಪುಗಳೆಲ್ಲಾ ಸತ್ಯವಾಗಿವೆ ಮತ್ತು ನ್ಯಾಯವಾಗಿವೆ.”

ನಾಲ್ಕನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸೂರ್ಯನ ಮೇಲೆ ಸುರಿದನು. ಜನರನ್ನು ಕಡುಬಿಸಿಲಿನಿಂದ ಕಂದಿಸುವ ಅಧಿಕಾರವನ್ನು ಸೂರ್ಯನಿಗೆ ಕೊಡಲಾಯಿತು. ಜನರು ಕುಡುಬಿಸಿಲಿನಿಂದ ಕಂದಿಹೋಗಿ ದೇವರ ಹೆಸರನ್ನು ಶಪಿಸಿದರು. ಈ ಉಪದ್ರವಗಳನ್ನು ದೇವರೊಬ್ಬನೇ ನಿಯಂತ್ರಿಸ ಬಲ್ಲವನಾಗಿದ್ದಾನೆ. ಆದರೆ ಜನರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಪರಿವರ್ತಿಸಿಕೊಳ್ಳಲಿಲ್ಲ. ದೇವರನ್ನು ಮಹಿಮೆಪಡಿಸಲು ಒಪ್ಪಿಕೊಳ್ಳಲಿಲ್ಲ.

10 ಐದನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಆ ಮೃಗದ ಸಿಂಹಾಸನದ ಮೇಲೆ ಸುರಿದನು. ಮೃಗದ ರಾಜ್ಯದಲ್ಲಿ ಅಂಧಕಾರವು ಕವಿಯಿತು. ಜನರು ನೋವಿನಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡರು. 11 ಜನರು ತಮಗಾದ ಹುಣ್ಣುಗಳಿಂದ ಮತ್ತು ನೋವಿನಿಂದ ಪರಲೋಕದ ದೇವರನ್ನು ದೂಷಿಸಿದರು. ಆದರೆ ಜನರು ತಾವು ಮಾಡುವ ಕೆಟ್ಟಕಾರ್ಯಗಳನ್ನು ತೊರೆದುಬಿಟ್ಟು ತಮ್ಮ ಹೃದಯಗಳನ್ನು ಮಾರ್ಪಡಿಸಿಕೊಳ್ಳಲು ಒಪ್ಪಲಿಲ್ಲ.

12 ಆರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಯೂಫ್ರಟಿಸ್ ಮಹಾನದಿಯ ಮೇಲೆ ಸುರಿಸಿದನು. ನದಿಯಲ್ಲಿದ್ದ ನೀರು ಬತ್ತಿಹೋಯಿತು. ಇದರಿಂದ ಪೂರ್ವದಲ್ಲಿದ್ದ ರಾಜರುಗಳು ಬರಲು ಮಾರ್ಗವು ಸಿದ್ಧವಾಯಿತು. 13 ಆಗ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳನ್ನು ನಾನು ನೋಡಿದೆನು. ಅವು ಘಟಸರ್ಪದ ಬಾಯಿಂದ, ಮೃಗದ ಬಾಯಿಂದ ಮತ್ತು ಸುಳ್ಳುಪ್ರವಾದಿಯ ಬಾಯಿಂದ ಹೊರಗೆ ಬಂದವು. 14 ಈ ಅಶುದ್ಧಾತ್ಮಗಳು ಸೈತಾನನ ಆತ್ಮಗಳಾಗಿವೆ. ಅವುಗಳಿಗೆ ಮಹಾ ಅದ್ಭುತಗಳನ್ನು ಮಾಡಲು ಶಕ್ತಿಯಿದೆ. ಈ ಅಶುದ್ಧಾತ್ಮಗಳು ಸರ್ವಶಕ್ತನಾದ ದೇವರ ಮಹಾದಿನದಂದು ನಡೆಯುವ ಯುದ್ಧಕ್ಕೆ, ಲೋಕದಲ್ಲೆಲ್ಲಾ ಇರುವ ರಾಜರನ್ನು ಒಟ್ಟುಗೂಡಿಸಲು ಹೊರಗೆ ಹೋಗುತ್ತವೆ.

15 “ಕೇಳಿರಿ! ನಾನು ಕಳ್ಳನಂತೆ ಬರುತ್ತೇನೆ. ಎಚ್ಚರವಾಗಿದ್ದು ತನ್ನ ಬಟ್ಟೆಗಳನ್ನು ಕಾಪಾಡಿಕೊಳ್ಳುವವನು ಭಾಗ್ಯವಂತನಾಗಿದ್ದಾನೆ. ಆಗ ಅವನು ಬಟ್ಟೆಯಿಲ್ಲದೆ ಹೊರಗೆ ಹೋಗಿ ತನ್ನನ್ನು ನಾಚಿಕೆಗೆ ಗುರಿಪಡಿಸಿಕೊಳ್ಳುವ ಅಗತ್ಯತೆವಿರುವುದಿಲ್ಲ.”

16 ಬಳಿಕ ಅಶುದ್ಧಾತ್ಮಗಳು ರಾಜರುಗಳನ್ನು ಹೀಬ್ರೂ ಭಾಷೆಯಲ್ಲಿ ಹರ್ಮೆಗದೋನ್ ಎಂಬ ಹೆಸರುಳ್ಳ ಸ್ಥಳದಲ್ಲಿ ಒಟ್ಟಾಗಿ ಸೇರಿಸಿದವು.

17 ಏಳನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಗಾಳಿಯಲ್ಲಿ ಸುರಿದನು. ಆಗ ಒಂದು ಮಹಾಧ್ವನಿಯು ಸಿಂಹಾಸನದಿಂದ ಆಲಯದ ಹೊರಕ್ಕೆ ಬಂದಿತು. ಆ ಧ್ವನಿಯು, “ಮುಗಿದುಹೋಯಿತು!” ಎಂದು ಹೇಳಿತು. 18 ಆಗ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಉಂಟಾದವು ಮತ್ತು ಭೂಕಂಪವೂ ಆಯಿತು. ಜನರು ಭೂಮಿಯ ಮೇಲೆ ಇರಲು ಆರಂಭಿಸಿದಂದಿನಿಂದ ಅಂತಹ ಭೀಕರ ಭೂಕಂಪವು ಎಂದೂ ಸಂಭವಿಸಿರಲಿಲ್ಲ. 19 ಆ ಮಹಾನಗರವು ಒಡೆದು ಮೂರು ಭಾಗವಾಯಿತು. ಜನಾಂಗಗಳ ನಗರಗಳು ನಾಶವಾದವು. ಮಹಾನಗರವಾದ ಬಾಬಿಲೋನನ್ನು ದೇವರು ದಂಡಿಸದೆ ಬಿಡಲಿಲ್ಲ. ಆತನು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕುಡಿಯಲು ಕೊಟ್ಟನು. 20 ಸಕಲ ದ್ವೀಪಗಳೂ ಅದೃಶ್ಯವಾದವು ಮತ್ತು ಬೆಟ್ಟಗಳೇ ಇಲ್ಲವಾದವು. 21 ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಆಲಿಕಲ್ಲುಗಳು ಬಿದ್ದವು. ಆ ಆಲಿಕಲ್ಲುಗಳು ನೂರು ಪೌಂಡುಗಳಷ್ಟು ಭಾರವಾಗಿದ್ದವು. ಈ ಉಪದ್ರವದ ಕಾಟದಿಂದ ಜನರು ದೇವರನ್ನು ದೂಷಿಸಿದರು. ಈ ಉಪದ್ರವವು ಬಹಳ ಭೀಕರವಾಗಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International