Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಮೀಕ 1-3

ಇಸ್ರೇಲ್ ಮತ್ತು ಸಮಾರ್ಯವು ಶಿಕ್ಷಿಸಲ್ಪಡಬೇಕು

ಯೆಹೋವನ ಮಾತುಗಳು ಮೀಕನಿಗೆ ಬಂದವು. ಅರಸರಾದ ಯೋಥಾಮ, ಅಹಾಜ ಮತ್ತು ಹಿಜ್ಕೀಯರ ಆಳ್ವಿಕೆಯ ಸಮಯದಲ್ಲಿ ಇದು ನಡೆಯಿತು. ಇವರು ಯೆಹೂದ ರಾಜ್ಯದ ಅರಸರು. ಮೀಕನು ಮೋರೆಷೆತ್‌ನವನು. ಇವನು ಸಮಾರ್ಯ ಮತ್ತು ಜೆರುಸಲೇಮಿನ ವಿಷಯವಾಗಿ ದೇವದರ್ಶನವನ್ನು ಹೊಂದಿದನು.

ಎಲ್ಲಾ ಜನರೇ, ಕೇಳಿರಿ!
    ಭೂಮಿಯೂ ಅದರಲ್ಲಿರುವವರೆಲ್ಲರೂ ಕೇಳಿರಿ!
ನನ್ನ ಒಡೆಯನಾದ ಯೆಹೋವನು ತನ್ನ ಪವಿತ್ರ ಆಲಯದಿಂದ ಬರುವನು.
    ನಿಮ್ಮ ವಿರುದ್ಧ ಸಾಕ್ಷಿಯಾಗಿ ಆತನು ಬರುವನು.
ಯೆಹೋವನು ತನ್ನ ಸ್ಥಳದಿಂದ ಹೊರಟು ಬರುವುದನ್ನು ನೋಡಿರಿ.
    ಆತನು ಲೋಕದ ಬೆಟ್ಟಗಳ ಮೇಲೆ ನಡೆಯಲು ಬರುತ್ತಿದ್ದಾನೆ.
ಬೆಂಕಿಯಲ್ಲಿ ಮೇಣವು ಕರಗುವಂತೆ
    ಬೆಟ್ಟಗಳು ಆತನ ಪಾದದಡಿಯಿಂದ ಕರಗಿಹೋಗುತ್ತವೆ.
ತಗ್ಗುಗಳು ಇಬ್ಭಾಗವಾಗಿ ನೀರಿನಂತೆ
    ಕಡಿದಾದ ಸ್ಥಳದಿಂದ ಹರಿದುಹೋಗುತ್ತವೆ.
ಇದಕ್ಕೆಲ್ಲಾ ಕಾರಣ ಯಾಕೋಬನ ಪಾಪಗಳೇ,
    ಇಸ್ರೇಲರ ದ್ರೋಹಗಳೇ!

ಪಾಪಕ್ಕೆ ಕಾರಣ ಸಮಾರ್ಯವೇ

ಯಾಕೋಬು ಪಾಪಮಾಡಿದ್ದಕ್ಕೆ ಕಾರಣವೇನು?
    ಸಮಾರ್ಯವೇ ಕಾರಣ.
ಯೆಹೂದದ ಎತ್ತರವಾದ ಸ್ಥಳ ಯಾವುದು?[a]
    ಅದೇ ಜೆರುಸಲೇಮ್.
ಆದ್ದರಿಂದ ನಾನು ಸಮಾರ್ಯವನ್ನು ಕಲ್ಲಿನ ರಾಶಿಯನ್ನಾಗಿ ಮಾಡುವೆನು.
    ಅದು ದ್ರಾಕ್ಷಿಬಳ್ಳಿ ನೆಡಲು ಸಿದ್ಧವಾಗುವುದು.
ಸಮಾರ್ಯದ ಕಲ್ಲುಗಳನ್ನೆಲ್ಲಾ ತಗ್ಗಿಗೆ ನೂಕಿಬಿಡುವೆನು;
    ಆಗ ಅಲ್ಲಿ ಕೇವಲ ಅಸ್ತಿವಾರಗಳು ಕಾಣುವವು.
ಆಕೆಯ ವಿಗ್ರಹಗಳೆಲ್ಲಾ ಒಡೆದು ಪುಡಿಮಾಡಲ್ಪಡುವವು.
    ಆಕೆಯ ಸೂಳೆತನದ ಹಣವು ಬೆಂಕಿಯಲ್ಲಿ ಸುಡಲ್ಪಡುವುದು.
ಆಕೆಯ ಸುಳ್ಳುದೇವರ ವಿಗ್ರಹಗಳನ್ನೆಲ್ಲಾ ನಾಶಮಾಡುವೆನು.
    ಯಾಕೆಂದರೆ ಸಮಾರ್ಯ ನನಗೆ ಅಪನಂಬಿಗಸ್ತಳಾಗಿ ಧನಿಕಳಾದಳು.
ನನಗೆ ನಂಬಿಗಸ್ತರಲ್ಲದವರು
    ಆಕೆಯಿಂದ ಅದನ್ನು ಕಸಿದುಕೊಳ್ಳುವರು.

ಮೀಕನ ಮಹಾ ದುಃಖ

ಮುಂದೆ ಸಂಭವಿಸುವ ಘಟನೆಗಳ ಬಗ್ಗೆ ನಾನು ಬಹಳ ದುಃಖಿತನಾಗಿದ್ದೇನೆ.
    ನಾನು ಬಟ್ಟೆಯನ್ನಾಗಲಿ ಚಪ್ಪಲಿಯನ್ನಾಗಲಿ ಹಾಕಿಕೊಳ್ಳದೇ ಹೋಗುವೆನು.
ನಾಯಿಯಂತೆ ಅಳುವೆನು,
    ಪಕ್ಷಿಯಂತೆ ಗೋಳಾಡುವೆನು.
ಸಮಾರ್ಯದ ಗಾಯವು ವಾಸಿಯಾಗದು.
    ಆಕೆಯ ರೋಗವು (ಪಾಪ) ಯೆಹೂದಕ್ಕೆ ಹಬ್ಬಿಯದೆ.
ಅದು ನನ್ನ ಜನರ ಪಟ್ಟಣದ ಹೆಬ್ಬಾಗಿಲಿನವರೆಗೆ ಹೋಗಿದೆ.
    ಜೆರುಸಲೇಮಿನ ತನಕ ಪಸರಿಸಿಯದೆ.
10 ಇದನ್ನು ಗತ್‌ನಲ್ಲಿ ತಿಳಿಸಬೇಡಿ.
    ಅಕ್ಕೊದಲ್ಲಿ ಅಳಬೇಡಿರಿ.
ಬೆತ್ ಒಫ್ರದ ಧೂಳಿನಲ್ಲಿ ಹೊರಳಾಡಿರಿ.
11 ಶಾಫೀರ್‌ನಲ್ಲಿ ವಾಸಿಸುವವರೇ,
    ಬೆತ್ತಲೆಯಾಗಿ ನಾಚಿಕೆಯಿಂದ ನಡೆಯಿರಿ.
ಚಾನಾನ್‌ನಲ್ಲಿ ವಾಸಿಸುವವರು
    ಹೊರಗೆ ಬರುವದಿಲ್ಲ.
ಬೇತೇಚೆಲಿನ ಜನರು ಅಳುವರು,
    ನಿಮಗೆ ಅವರು ನೀಡುತ್ತಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವರು.
12 ಮಾರೊತ್‌ನಲ್ಲಿ ವಾಸಿಸುವ ಜನರು ಬಲಹೀನರಾಗಿದ್ದಾರೆ.
    ಅವರು ಶುಭವಾರ್ತೆಗಾಗಿ ಕಾಯುತ್ತಿದ್ದಾರೆ.
ಯಾಕೆಂದರೆ ಜೆರುಸಲೇಮಿನ ನಗರ ದ್ವಾರದ ಬಳಿಗೆ
    ಯೆಹೋವನಿಂದ ಆಪತ್ತು ಬಂದಿದೆ.
13 ಲಾಕೀಷಿನ ಸ್ತ್ರೀಯೇ,
    ವೇಗವಾಗಿ ಓಡುವ ಕುದುರೆಯನ್ನು ನಿನ್ನ ಬಂಡಿಗೆ ಬಿಗಿ.
ಚೀಯೋನಿನ ಪಾಪವು ಲಾಕೀಷಿನಲ್ಲಿ ಪ್ರಾರಂಭವಾಯಿತು.
    ಯಾಕೆಂದರೆ ನೀನು ಇಸ್ರೇಲಿನ ಪಾಪವನ್ನು ಅನುಸರಿಸಿದಿ.
14 ಆದ್ದರಿಂದ ಗತ್‌ನಲ್ಲಿರುವ ಮೋರೆಷತ್‌ಗೆ
    ಬೀಳ್ಕೊಡುವ ಕಾಣಿಕೆಗಳನ್ನು ಕೊಡು.
ಅಕ್ಜೀಬಿನ ಕುಟುಂಬಗಳು
    ಇಸ್ರೇಲ್ ಅರಸರನ್ನು ಮೋಸಪಡಿಸುವವು.
15 ಮಾರೇಷದಲ್ಲಿ ವಾಸಿಸುವ ಜನರೇ,
    ನಿಮಗೆ ವಿರುದ್ಧವಾಗಿ ನಾನು ಒಬ್ಬ ವ್ಯಕ್ತಿಯನ್ನು ಕರೆತರುವೆನು.
    ಅವನು ನಿಮ್ಮ ಬಳಿಯಲ್ಲಿರುವ ವಸ್ತುಗಳನ್ನು ಕಿತ್ತುಕೊಳ್ಳುವನು.
ಇಸ್ರೇಲಿನ ಮಹಿಮೆಯು (ದೇವರ)
    ಅದುಲ್ಲಾಮಿಗೆ ಬರುವದು.
16 ನಿನ್ನ ಕೂದಲನ್ನು ಬೋಳಿಸು;
    ಯಾಕೆಂದರೆ ನೀನು ಪ್ರೀತಿಸುವ ಮಕ್ಕಳಿಗಾಗಿ ನೀನು ಅಳುವೆ.
ಗಿಡುಗನಂತೆ ನಿನ್ನ ತಲೆ ಬೋಳಾಗಲಿ. ನಿನ್ನ ದುಃಖವನ್ನು ಪ್ರದರ್ಶಿಸು.
    ಯಾಕೆಂದರೆ ನಿನ್ನ ಮಕ್ಕಳು ನಿನ್ನಿಂದ ತೆಗೆಯಲ್ಪಡುವರು.

ಜನರ ದುಷ್ಟ ಯೋಚನೆಗಳು

ಪಾಪಮಾಡಲು ಯೋಚಿಸುವವರಿಗೆ ಸಂಕಟವು ಒದಗುವದು.
    ಇವರು ಹಾಸಿಗೆಯ ಮೇಲೆ ಬಿದ್ದುಕೊಂಡು ಪಾಪಮಾಡಲು ಯೋಚಿಸುತ್ತಾರೆ.
ಬೆಳಿಗ್ಗೆ ಸೂರ್ಯ ಮೂಡಲು ತಾವು ಯೋಚಿಸಿದ ಪಾಪವನ್ನು ಕಾರ್ಯಗತ ಮಾಡುತ್ತಾರೆ.
    ಯಾಕೆ? ಯಾಕೆಂದರೆ ಅವರಿಗೆ ತಮ್ಮ ಇಷ್ಟಪ್ರಕಾರ ನಡೆದುಕೊಳ್ಳಲು ಬಲವಿದೆ.
ಅವರಿಗೆ ಹೊಲಗದ್ದೆಗಳು ಬೇಕು, ಅದನ್ನು ಅವರು ತೆಗೆದುಕೊಳ್ಳುವರು.
    ಅವರಿಗೆ ಮನೆಮಠಗಳು ಬೇಕು, ಅದನ್ನು ಅವರು ತೆಗೆದುಕೊಳ್ಳುವರು.
ಒಬ್ಬನಿಗೆ ಮೋಸಮಾಡಿ ಅವನ ಮನೆಯನ್ನು ಕಿತ್ತುಕೊಳ್ಳುವರು.
    ಇನ್ನೊಬ್ಬನಿಗೆ ಮೋಸಮಾಡಿ ಅವನ ಹೊಲಗದ್ದೆಗಳನ್ನು ಕಿತ್ತುಕೊಳ್ಳುವರು.

ಜನರನ್ನು ಶಿಕ್ಷಿಸಲು ಯೆಹೋವನ ಯೋಜನೆ

ಅದಕ್ಕಾಗಿಯೇ ಯೆಹೋವನು ಹೀಗೆ ಹೇಳುತ್ತಾನೆ:
“ನೋಡಿ, ನಾನು ಈ ಕುಟುಂಬದ ವಿರುದ್ಧವಾಗಿ ಸಂಕಟ ತರಲು ಯೋಚಿಸುತ್ತಿದ್ದೇನೆ.
    ನಿನ್ನನ್ನು ನೀನು ರಕ್ಷಿಸಲು ಸಾಧ್ಯವಿರುವುದಿಲ್ಲ.
ಭಯಂಕರ ದಿವಸಗಳು ಬರುವದರಿಂದ
    ನೀನು ಉಬ್ಬಿಕೊಳ್ಳುವುದನ್ನು ನಿಲ್ಲಿಸುವೆ.
ಆಗ ಜನರು ನಿಮ್ಮ ಬಗ್ಗೆ ಹಾಡನ್ನು ಹಾಡುವರು.
    ಜನರು ಶೋಕಗೀತೆಯನ್ನು ಹಾಡುವರು.
‘ನಾವು ನಾಶವಾದೆವು!
    ಯೆಹೋವನು ನಮ್ಮ ದೇಶವನ್ನು ನಮ್ಮಿಂದ ತೆಗೆದುಕೊಂಡು ಇತರ ಜನರಿಗೆ ಕೊಟ್ಟನು.
ಹೌದು, ಆತನು ನಮ್ಮ ಭೂಮಿಯನ್ನು ನಮ್ಮಿಂದ ತೆಗೆದುಕೊಂಡುಬಿಟ್ಟನು,
    ನಮ್ಮ ಗದ್ದೆಗಳನ್ನು ಯೆಹೋವನು ನಮ್ಮ ವೈರಿಗಳಿಗೆ ಪಾಲು ಮಾಡಿಕೊಟ್ಟನು.
ಈಗ ನಾವು ನಮ್ಮ ದೇಶವನ್ನು ಅಳತೆಮಾಡಿ
    ದೇವಜನರಿಗೆ ಹಂಚಲು ಆಗುವದಿಲ್ಲ.’”

ಮೀಕನನ್ನು ಬೋಧಿಸಬಾರದೆಂದು ಹೇಳಿದ್ದು

ಜನರು, “ನೀನು ನಮಗೆ ಬೋಧಿಸಬೇಡ,
    ಆ ಕೆಟ್ಟವಿಷಯಗಳನ್ನು ನಮಗೆ ಹೇಳಬೇಡ,
    ನಮಗೆ ಯಾವ ಕೆಟ್ಟ ವಿಷಯವೂ ಸಂಭವಿಸುವುದಿಲ್ಲ” ಎಂದು ಹೇಳುತ್ತಾರೆ.

ಆದರೆ ಯಾಕೋಬಿನ ಜನರೇ,
    ನಾನು ನಿಮಗೆ ಹೇಳಲೇಬೇಕು.
ನಿಮ್ಮ ದುಷ್ಟತನದ ನಿಮಿತ್ತ ಯೆಹೋವನು
    ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದಾನೆ.
ನೀವು ನ್ಯಾಯವಾದ ರೀತಿಯಲ್ಲಿ ಜೀವಿಸುತ್ತಿದ್ದರೆ
    ನಾನು ನಿಮಗೆ ಒಳ್ಳೆಯ ಸಂಗತಿಗಳನ್ನು ತಿಳಿಸುತ್ತಿದ್ದೆ.
ಆದರೆ ನನಗೆ ವೈರಿಯಂತೆ[b] ಎದ್ದುನಿಂತಿರುವ ನನ್ನ ಜನರೇ,
    ನೀವು ಹಾದುಹೋಗುವವರ ಬಟ್ಟೆಯನ್ನು ಅವರ ಬೆನ್ನಿನ ಮೇಲಿಂದ ಕಿತ್ತುಕೊಳ್ಳುತ್ತೀರಿ.
ನಿಭರ್ಯವಾಗಿ ಓಡಾಡುವ ಜನರಿಂದ
    ಕೈದಿಗಳೋ ಎಂಬಂತೆ ಸುಲಿದುಕೊಳ್ಳುತ್ತೀರಿ.
ನನ್ನ ಜನರು ಸ್ತ್ರೀಯರ ಕೈಯಿಂದ
    ಅಂದವಾದ ಮನೆಗಳನ್ನು ಕಿತ್ತುಕೊಂಡಿದ್ದೀರಿ;
ಅವರ ಚಿಕ್ಕಮಕ್ಕಳಿಂದ ನನ್ನ ಐಶ್ವರ್ಯವನ್ನು
    ನಿರಂತರಕ್ಕೂ ಕಿತ್ತುಕೊಂಡಿದ್ದೀರಿ.
10 ಎದ್ದು ಈ ಸ್ಥಳವನ್ನು ಬಿಟ್ಟುಹೋಗು.
    ಇದು ನಿನ್ನ ವಿಶ್ರಾಂತಿಯ ಸ್ಥಳವಲ್ಲ, ಯಾಕೆಂದರೆ ನೀನು ಇದನ್ನು ಹಾಳು ಮಾಡಿರುವೆ.
ನೀನು ಇದನ್ನು ಹೊಲಸು ಮಾಡಿರುವೆ,
    ಆದ್ದರಿಂದ ಇದು ನಾಶವಾಗುವದು; ಭಯಂಕರ ರೀತಿಯಲ್ಲಿ ಕೆಡವಲ್ಪಡುವದು.

11 ಈ ಜನರು ನನ್ನ ಮಾತುಗಳನ್ನು ಕೇಳಲು ಇಷ್ಟಪಡುವದಿಲ್ಲ.
    ಆದರೆ ಬೇರೊಬ್ಬನ ಸುಳ್ಳು ಮಾತುಗಳನ್ನು ಕೇಳಲು ಇಷ್ಟಪಡುವರು.
ಸುಳ್ಳು ಪ್ರವಾದಿಯು ಬಂದು, “ನಿಮಗೆ ಒಳ್ಳೆಯ ಭವಿಷ್ಯವಿದೆ.
    ಬೇಕಾದಷ್ಟು ದ್ರಾಕ್ಷಾರಸ, ಮದ್ಯವು ನಿಮಗೆ ದೊರಕುವವು” ಎಂದು ಹೇಳಿದರೆ ಅವರು ಅವನನ್ನು ನಂಬಿ ಸ್ವೀಕರಿಸಿಕೊಳ್ಳುವರು.

ಯೆಹೋವನು ತನ್ನ ಜನರನ್ನು ಒಟ್ಟುಗೂಡಿಸುತ್ತಾನೆ

12 ಯಾಕೋಬಿನ ಜನರೇ, ನಾನು ನಿಮ್ಮೆಲ್ಲರನ್ನು ಒಟ್ಟಾಗಿ ಸೇರಿಸುತ್ತೇನೆ.
    ಇಸ್ರೇಲಿನಲ್ಲಿ ಉಳಿದವರನ್ನೆಲ್ಲಾ ಒಟ್ಟುಗೂಡಿಸುತ್ತೇನೆ.
ಹಟ್ಟಿಯೊಳಗೆ ಕುರಿಗಳನ್ನು ಸೇರಿಸುವಂತೆ,
    ಹುಲ್ಲುಗಾವಲಿನಲ್ಲಿ ಕುರಿಮಂದೆ ಸೇರಿಸಲ್ಪಡುವಂತೆ ನಾನು ಅವರನ್ನು ಒಟ್ಟುಗೂಡಿಸುವೆನು.
ಆಗ ಆ ಸ್ಥಳವು ಜನಸಮೂಹದ
    ಗದ್ದಲದಿಂದ ತುಂಬಿಹೋಗುವುದು.
13 ಆಗ ಒಡೆದುಹಾಕುವವನು[c] ಜನಗಳ ಮುಂದೆ ಮುನ್ನುಗ್ಗಿ ಹೋಗಿ,
    ದ್ವಾರಗಳನ್ನು ಒಡೆದುಹಾಕಿದಾಗ ಜನರು ಪಟ್ಟಣವನ್ನು ಬಿಟ್ಟುಹೋಗುವರು.
ಅವರು ತಮ್ಮ ರಾಜನನ್ನೂ ಕರ್ತನನ್ನೂ
    ಹಿಂಬಾಲಿಸಿಕೊಂಡು ಅಲ್ಲಿಂದ ಹೋಗುವರು.

ಇಸ್ರೇಲಿನ ನಾಯಕರು ದುಷ್ಟತ್ವವನ್ನು ನಡಿಸಿದ್ದಾರೆ

ಆಗ ನಾನು ಹೇಳಿದ್ದೇನೆಂದರೆ, “ಯಾಕೋಬಿನ ನಾಯಕರೇ, ಇಸ್ರೇಲಿನ ಅಧಿಪತಿಗಳೇ, ನನ್ನ ಮಾತನ್ನು ಕೇಳಿರಿ.
    ನ್ಯಾಯ ಏನು ಎಂದು ನಿಮಗೆ ತಿಳಿದಿರಬೇಕು.
ನೀವು ಶಿಷ್ಟತನವನ್ನು ದ್ವೇಷಿಸಿ ದುಷ್ಟತನವನ್ನು ಪ್ರೀತಿಸುತ್ತೀರಿ!
    ನೀವು ಜನರ ಚರ್ಮವನ್ನು ಸುಲಿಯುತ್ತಾ
    ಅವರ ಎಲುಬುಗಳಿಂದ ಮಾಂಸವನ್ನು ಕಿತ್ತು ತೆಗೆಯುತ್ತೀರಿ.
ನೀವು ನನ್ನ ಜನರ ದೇಹದಿಂದ ಚರ್ಮ ತೆಗೆದು ಎಲುಬುಗಳನ್ನು ತುಂಡುಮಾಡಿ ಅವರನ್ನು ನಾಶಮಾಡುತ್ತೀರಿ.
    ತಪ್ಪಲೆಯೊಳಗೆ ಬೇಯಿಸಲು ಮಾಂಸ ತುಂಡುಮಾಡಿ ಹಾಕುವಂತೆ ನೀವು ಅವರ ಎಲುಬುಗಳನ್ನು ತುಂಡುಮಾಡುತ್ತೀರಿ.
ನೀವು ಯೆಹೋವನಿಗೆ ಪ್ರಾರ್ಥಿಸಬಹುದು.
    ಆದರೆ ಆತನು ನಿಮಗೆ ಉತ್ತರಕೊಡುವದಿಲ್ಲ.
ನಿಮ್ಮ ಕೆಟ್ಟ ಪಾಪಗಳ ನಿಮಿತ್ತ
    ತನ್ನ ಮುಖವನ್ನು ಮರೆಮಾಡಿಕೊಳ್ಳುತ್ತಾನೆ.”

ಸುಳ್ಳುಪ್ರವಾದಿಗಳು

ಕೆಲವು ಸುಳ್ಳುಪ್ರವಾದಿಗಳೆದ್ದು ಯೆಹೋವನ ಜನರಿಗೆ ಸುಳ್ಳನ್ನು ತಿಳಿಸುತ್ತಾರೆ. ಅಂಥವರ ಬಗ್ಗೆ ಯೆಹೋವನು ಹೇಳುವುದೇನೆಂದರೆ,

“ಈ ಪ್ರವಾದಿಗಳ ಮಾತುಗಳು ಅವರ ಹೊಟ್ಟೆಗಳನ್ನವಲಂಬಿಸಿವೆ.
ಜನರು ಅವರಿಗೆ ಆಹಾರ ಕೊಟ್ಟರೆ ಶಾಂತಿಯನ್ನು ವಾಗ್ದಾನ ಮಾಡುತ್ತಾರೆ.
    ಜನರು ಅವರಿಗೆ ಆಹಾರ ಕೊಡದಿದ್ದರೆ ಯುದ್ಧವನ್ನು ವಾಗ್ದಾನ ಮಾಡುತ್ತಾರೆ.

“ಹೀಗಿರುವದರಿಂದ ನಿಮಗೆ ರಾತ್ರಿಯಂತಿರುವದು.
    ನಿಮಗೆ ದರ್ಶನಗಳಾಗುವದಿಲ್ಲ.
ಮುಂದೆ ಏನು ಸಂಭವಿಸುತ್ತದೆ ಎಂಬುದನ್ನು ನೀವು ನೋಡುವದಿಲ್ಲ.
    ಆದ್ದರಿಂದ ನಿಮಗೆ ಕತ್ತಲೆಯಂತಿದೆ.
ಪ್ರವಾದಿಗಳಿಗೆ ಸೂರ್ಯನು ಮುಳುಗಿರುತ್ತಾನೆ.
    ಅವರಿಗೆ ಮುಂದೆ ಆಗುವಂಥದು ಕಾಣಿಸುವುದಿಲ್ಲ.
    ಆದ್ದರಿಂದ ಅವರಿಗೆ ಎಲ್ಲಾ ಕತ್ತಲೆಯಾಗಿದೆ.
ದೇವದರ್ಶಿಗಳು ನಾಚಿಕೆಗೊಂಡಿದ್ದಾರೆ.
    ಭವಿಷ್ಯ ಹೇಳುವವರು ನಾಚಿಕೆಗೊಳಗಾಗಿದ್ದಾರೆ.
ಯಾಕೆಂದರೆ ದೇವರು ಅವರ ಕೂಡ ಮಾತನಾಡುವದನ್ನು ನಿಲ್ಲಿಸಿರುವದರಿಂದ
    ಅವರು ಏನನ್ನೂ ಹೇಳುವದಿಲ್ಲ.”

ಮೀಕನು ದೇವರ ನಂಬಿಗಸ್ತ ಪ್ರವಾದಿ

ಯೆಹೋವನ ಆತ್ಮನು ನನ್ನಲ್ಲಿ ಅಧಿಕಾರವನ್ನೂ,
    ಒಳ್ಳೆಯತನವನ್ನೂ ಶಕ್ತಿಯನ್ನೂ ತುಂಬಿದ್ದಾನೆ.
ಯಾಕೆಂದರೆ ಯಾಕೋಬನ ಅಪರಾಧಗಳನ್ನು ಅವನಿಗೆ ತಿಳಿಸುವುದಕ್ಕಾಗಿಯಷ್ಟೇ,
    ಇಸ್ರೇಲಿನ ಪಾಪಗಳನ್ನು ಅವನಿಗೆ ಹೇಳುವುದಕ್ಕಾಗಿಯಷ್ಟೇ.

ಇಸ್ರೇಲಿನ ನಾಯಕರು ಇದಕ್ಕೆ ಕಾರಣ

ಯಾಕೋಬಿನ ನಾಯಕರೇ, ಇಸ್ರೇಲಿನ ಪ್ರಧಾನರೇ, ನನಗೆ ಕಿವಿಗೊಡಿರಿ!
    ಸರಿಯಾದ ಜೀವಿತವನ್ನು ನೀವು ದ್ವೇಷಿಸುತ್ತೀರಿ.
ನೆಟ್ಟಗಿರುವದನ್ನು ಡೊಂಕಾಗಿ ನೀವು ಮಾಡುವಿರಿ.
10 ಜನರನ್ನು ಕೊಲೆ ಮಾಡಿ ಚೀಯೋನನ್ನು ಕಟ್ಟುತ್ತೀರಿ.
    ಜನರನ್ನು ಮೋಸಮಾಡಿ ಜೆರುಸಲೇಮನ್ನು ಕಟ್ಟುತ್ತೀರಿ.
11 ಜೆರುಸಲೇಮಿನ ನ್ಯಾಯಾಧೀಶರು ಲಂಚ ತೆಗೆದುಕೊಂಡು
    ಅನ್ಯಾಯವಾದ ತೀರ್ಪುಕೊಡುವರು.
ಜನರಿಗೆ ಬೋಧಿಸುವ ಮೊದಲು ಜೆರುಸಲೇಮಿನ ಯಾಜಕರು
    ಹಣವನ್ನು ವಸೂಲಿ ಮಾಡುವರು.
ಜನರು ತಮ್ಮ ಭವಿಷ್ಯದ ಬಗ್ಗೆ ಕೇಳಲು
    ಪ್ರವಾದಿಗಳಿಗೆ ಮುಂಗಡವಾಗಿ ಹಣ ಕೊಡುವರು.
ಆಮೇಲೆ ಆ ನಾಯಕರು, “ಯೆಹೋವನು ನಮ್ಮಲ್ಲಿ ವಾಸಮಾಡುತ್ತಿದ್ದಾನೆ.
    ಆದ್ದರಿಂದ ನಮಗೆ ಕೆಟ್ಟದ್ದು ಏನೂ ಸಂಭವಿಸುವದಿಲ್ಲ” ಎಂದು ಹೇಳುವರು.

12 ನಾಯಕರೇ, ನಿಮ್ಮಿಂದಾಗಿ ಚೀಯೋನ್ ನಾಶವಾಗುವದು.
    ನೇಗಿಲಿನಿಂದ ಉತ್ತಲ್ಪಟ್ಟ ಹೊಲದಂತೆ ಅದು ಇರುವದು.
ಜೆರುಸಲೇಮ್ ಕಲ್ಲಿನ ರಾಶಿಯಾಗುವದು.
    ಆಲಯದ ಗುಡ್ಡವು ಬರಿದಾದ ಬೆಟ್ಟವಾಗುವುದು.
    ಅದರ ಮೇಲೆ ಪೊದೆಗಳು ಹುಲುಸಾಗಿ ಬೆಳೆದುಕೊಳ್ಳುವವು.

ಪ್ರಕಟನೆ 11

ಇಬ್ಬರು ಸಾಕ್ಷಿಗಳು

11 ತರುವಾಯ ದಂಡದಂತಿರುವ ಒಂದು ಅಳತೆಯ ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು: “ಹೋಗು, ದೇವರ ಆಲಯವನ್ನೂ ಯಜ್ಞವೇದಿಕೆಯನ್ನೂ ಅಳತೆಮಾಡು; ಮತ್ತು ಅಲ್ಲಿ ಆರಾಧಿಸುವ ಜನರನ್ನು ಲೆಕ್ಕಹಾಕು. ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳತೆ ಮಾಡದೆ ಬಿಟ್ಟುಬಿಡು. ಅದನ್ನು ಯೆಹೂದ್ಯರಲ್ಲದ ಜನರಿಗೆ ಬಿಟ್ಟಿದೆ. ಆ ಜನರು ಪವಿತ್ರ ನಗರದ ಮೇಲೆ ನಲವತ್ತೆರಡು ತಿಂಗಳ ಕಾಲ ತುಳಿದಾಡುವರು. ನಾನು ನನ್ನ ಇಬ್ಬರು ಸಾಕ್ಷಿಗಳಿಗೆ ಅಧಿಕಾರವನ್ನು ಕೊಡುತ್ತೇನೆ. ಅವರು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪ್ರವಾದನೆ ಮಾಡುತ್ತಾರೆ. ಅವರು ಗೋಣಿತಟ್ಟುಗಳನ್ನು ಧರಿಸಿಕೊಂಡಿರುತ್ತಾರೆ.”

ಭೂಲೋಕದ ಪ್ರಭುವಿನ ಸನ್ನಿಧಿಯಲ್ಲಿ ನಿಂತಿರುವ ಎರಡು ಆಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳೇ ಈ ಇಬ್ಬರು ಸಾಕ್ಷಿಗಳು. ಈ ಸಾಕ್ಷಿಗಳಿಗೆ ಯಾರಾದರೂ ಕೇಡು ಮಾಡಲು ಪ್ರಯತ್ನಿಸಿದರೆ, ಸಾಕ್ಷಿಗಳ ಬಾಯಿಂದ ಬೆಂಕಿಯು ಹೊರಬಂದು ಅವರ ಶತ್ರುವನ್ನು ಅಂದರೆ ಅವರಿಗೆ ತೊಂದರೆ ಮಾಡಲು ಪ್ರಯತ್ನಿಸಿದ್ದವರನ್ನೆಲ್ಲ ಸಾಯಿಸುತ್ತದೆ. ಈ ಸಾಕ್ಷಿಗಳು ತಮ್ಮ ಪ್ರವಾದನೆಯ ಕಾಲದಲ್ಲಿ ಆಕಾಶದಿಂದ ಸುರಿಯುವ ಮಳೆಯನ್ನು ನಿಲ್ಲಿಸಲೂ ನೀರನ್ನು ರಕ್ತವನ್ನಾಗಿಸಲೂ ಭೂಮಿಗೆ ಎಲ್ಲಾ ವಿಧವಾದ ವಿಪತ್ತುಗಳನ್ನು ಕಳುಹಿಸಲೂ ಅಧಿಕಾರವನ್ನು ಹೊಂದಿರುತ್ತಾರೆ. ಅವರು ತಮಗೆ ಇಷ್ಟ ಬಂದಷ್ಟು ಸಲ ಹೀಗೆ ಮಾಡಶಕ್ತರಾಗಿದ್ದಾರೆ.

ಈ ಇಬ್ಬರು ಸಾಕ್ಷಿಗಳು ತಮ್ಮ ಸಂದೇಶವನ್ನು ಹೇಳಿ ಮುಗಿಸಿದ ನಂತರ, ತಳವಿಲ್ಲದ ಕೂಪದಿಂದ ಮೇಲಕ್ಕೆ ಬರುವ ಮೃಗವು ಅವರ ವಿರುದ್ಧ ಹೋರಾಟ ಮಾಡುತ್ತದೆ. ಈ ಮೃಗವು ಅವರನ್ನು ಸೋಲಿಸಿ, ಕೊಂದು ಹಾಕುತ್ತದೆ. ಈ ಸಾಕ್ಷಿಗಳ ಎರಡು ಶವಗಳು ಮಹಾನಗರದ ಬೀದಿಯಲ್ಲಿ ಬಿದ್ದಿರುತ್ತವೆ. ಈ ನಗರಕ್ಕೆ ಸೊದೋಮ್[a] ಮತ್ತು ಈಜಿಪ್ಟ್ ಎಂದು ಹೆಸರಾಗುತ್ತದೆ. ಆ ನಗರದ ಹೆಸರುಗಳಿಗೆ ವಿಶೇಷ ಅರ್ಥವಿದೆ. ಪ್ರಭುವು ಈ ನಗರದಲ್ಲಿಯೇ ಶಿಲುಬೆಗೇರಿಸಲ್ಪಟ್ಟನು. ಸಕಲ ಪ್ರಜೆ, ಕುಲ, ಭಾಷೆ, ಜನಾಂಗದವರು ಮೂರುವರೆ ದಿನಗಳ ಕಾಲ ಈ ಸಾಕ್ಷಿಗಳ ಶವಗಳನ್ನು ನೋಡುತ್ತಾ ಇರುತ್ತಾರೆ. ಅವರನ್ನು ಸಮಾಧಿ ಮಾಡಲು ಜನರು ಒಪ್ಪುವುದಿಲ್ಲ. 10 ಈ ಇಬ್ಬರು ಸತ್ತದ್ದಕ್ಕಾಗಿ ಭೂಮಿಯ ಮೇಲಿನ ಜನರು ಸಂತೋಷಗೊಳ್ಳುವರು. ಅವರು ಸಮಾರಂಭಗಳನ್ನು ನಡೆಸಿ, ಒಬ್ಬರಿಗೊಬ್ಬರು ಉಡುಗೊರೆಗಳನ್ನು ನೀಡುತ್ತಾರೆ. ಈ ಇಬ್ಬರು ಪ್ರವಾದಿಗಳು ಭೂಮಿಯ ಮೇಲೆ ವಾಸಿಸುತ್ತಿರುವ ಜನರಿಗೆ ಹೆಚ್ಚು ಸಂಕಟವನ್ನು ಉಂಟುಮಾಡಿದ್ದರಿಂದ ಆ ಜನರು ಹೀಗೆ ಮಾಡುತ್ತಾರೆ.

11 ಆದರೆ ಮೂರುವರೆ ದಿನಗಳ ನಂತರ ದೇವರು ಆ ಇಬ್ಬರು ಪ್ರವಾದಿಗಳೊಳಗೆ ಮತ್ತೆ ಜೀವ ಪ್ರವೇಶಿಸುವಂತೆ ಮಾಡಿದನು. ಆಗ ಅವರು ತಮ್ಮ ಕಾಲೂರಿ ನಿಂತುಕೊಂಡರು. ಅವರನ್ನು ನೋಡಿದ ಜನರೆಲ್ಲರೂ ಭಯಗ್ರಸ್ತರಾದರು. 12 ಅನಂತರ “ಮೇಲೇರಿ ಬನ್ನಿ!” ಎಂದು ಪರಲೋಕದಿಂದ ಮಹಾವಾಣಿಯು ಆ ಪ್ರವಾದಿಗಳಿಗೆ ತಿಳಿಸಿತು. ಆಗ ಆ ಇಬ್ಬರು ಪ್ರವಾದಿಗಳು ಮೋಡದೊಂದಿಗೆ ಪರಲೋಕಕ್ಕೆ ಏರಿಹೋದರು. ಅವರು ಹೋಗುವುದನ್ನು ಅವರ ಶತ್ರುಗಳು ನೋಡುತ್ತಾ ಇದ್ದರು.

13 ಆ ಸಮಯದಲ್ಲಿ ಮಹಾಭೂಕಂಪವಾಯಿತು. ಆ ನಗರದ ಹತ್ತನೆಯ ಒಂದು ಭಾಗ ನಾಶವಾಯಿತು. ಭೂಕಂಪದಲ್ಲಿ ಏಳು ಸಾವಿರ ಜನರು ನಾಶವಾದರು. ಸಾಯದೆ ಉಳಿದಿದ್ದ ಜನರು ಬಹು ಭಯಗೊಂಡು ಪರಲೋಕದ ದೇವರನ್ನು ಘನಪಡಿಸಿದರು.

14 ಎರಡನೆಯ ಮಹಾವಿಪತ್ತು ಮುಗಿಯಿತು. ಮೂರನೆಯ ಮಹಾವಿಪತ್ತು ಬೇಗನೆ ಬರಲಿದೆ.

ಏಳನೆಯ ತುತೂರಿ

15 ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳು ಉಂಟಾದವು. ಆ ಶಬ್ದಗಳು ಹೀಗೆ ಹೇಳಿದವು:

“ಈ ಲೋಕದ ರಾಜ್ಯವು ಈಗ ನಮ್ಮ ಪ್ರಭುವಿನ ಮತ್ತು ಆತನವನಾಗಿರುವ ಕ್ರಿಸ್ತನ ರಾಜ್ಯವಾಗಿ ಮಾರ್ಪಾಟಾಯಿತು.
    ಆತನು ಯುಗಯುಗಾಂತರಗಳಲ್ಲಿಯೂ ಆಳುವನು.”

16 ನಂತರ ಇಪ್ಪತ್ನಾಲ್ಕು ಮಂದಿ ಹಿರಿಯರು ಮೊಣಕಾಲೂರಿ ದೇವರನ್ನು ಆರಾಧಿಸಿದರು. ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿರುವ ಹಿರಿಯರೇ ಇವರು. 17 ಆ ಹಿರಿಯರು ಹೀಗೆ ಹೇಳಿದರು:

“ಪ್ರಭುವೇ, ಸರ್ವಶಕ್ತನಾದ ದೇವರೇ, ಭೂತಕಾಲದಲ್ಲಿ ಇದ್ದಾತನೇ,
    ವರ್ತಮಾನ ಕಾಲದಲ್ಲಿ ಇರುವಾತನೇ, ನಿನಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
ನೀನು ನಿನ್ನ ಮಹಾ ಅಧಿಕಾರವನ್ನು ಉಪಯೋಗಿಸಿ ನಿನ್ನ ಆಡಳಿತವನ್ನು
    ಆರಂಭಿಸಿದ್ದರಿಂದ ನಿನಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
18 ಲೋಕದ ಜನರು ಕೋಪಗೊಂಡಿದ್ದರು.
    ಆದರೆ ಇದು ನಿನ್ನ ಕೋಪದ ಸಮಯ.
ಸತ್ತವರಿಗೆ ತೀರ್ಪು ನೀಡುವ ಸಮಯವಿದು.
    ನಿನ್ನ ಸೇವಕರಾದ ಪ್ರವಾದಿಗಳಿಗೂ
ನಿನ್ನ ಪರಿಶುದ್ಧ ಜನರಿಗೂ ನಿನ್ನನ್ನು ಗೌರವಿಸುವ
    ದೊಡ್ಡವರಿಗೂ ಚಿಕ್ಕವರಿಗೂ ಪ್ರತಿಫಲ ನೀಡುವ ಸಮಯವಿದು.
ಲೋಕನಾಶಕರನ್ನು ನಾಶಪಡಿಸುವ ಸಮಯವಿದು.”

19 ನಂತರ ಪರಲೋಕದಲ್ಲಿರುವ ದೇವರ ಆಲಯವು ತೆರೆಯಿತು. ದೇವರು ತನ್ನ ಜನರಿಗೆ ಅನುಗ್ರಹಿಸಿದ ಒಡಂಬಡಿಕೆಯನ್ನು ಇಟ್ಟಿದ್ದ ಪೆಟ್ಟಿಗೆಯು ಆತನ ಆಲಯದಲ್ಲಿ ಕಾಣಿಸಿತು. ಆಗ ಮಿಂಚುಗಳು ಹೊಳೆದವು, ಶಬ್ದಗಳಾದವು, ಗುಡುಗುಗಳಾದವು, ಭೂಕಂಪಗಳಾದವು ಮತ್ತು ಆಲಿಕಲ್ಲಿನ ಮಳೆಯೂ ಸುರಿಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International