Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಒಬದ್ಯ

ಎದೋಮ್ ಶಿಕ್ಷಿಸಲ್ಪಡುವದು

ಒಬದ್ಯನಿಗೆ ಆದ ದೈವದರ್ಶನ. ನನ್ನ ಒಡೆಯನಾದ ಯೆಹೋವನು ಎದೋಮಿನ ಬಗ್ಗೆ ಹೀಗೆ ಹೇಳುತ್ತಾನೆ:

ದೇವರಾದ ಯೆಹೋವನಿಂದ ನಾವು ಒಂದು ಸುದ್ಧಿ ಕೇಳಿದೆವು.
    ಒಬ್ಬ ಸಂದೇಶದೂತನು ಜನಾಂಗಗಳ ಕಡೆಗೆ ಕಳುಹಿಸಲ್ಪಟ್ಟನು.
ಅವನು ಹೇಳಿದ್ದೇನೆಂದರೆ, “ಬನ್ನಿ, ನಾವು ಎದೋಮಿಗೆ ವಿರುದ್ಧವಾಗಿ ಯುದ್ಧಮಾಡೋಣ.”

ಯೆಹೋವನು ಎದೋಮಿನೊಂದಿಗೆ ಮಾತನಾಡುತ್ತಾನೆ

“ಎದೋಮೇ, ನಿನ್ನನ್ನು ನಾನು ಅತ್ಯಂತ ಚಿಕ್ಕದಾದ ಜನಾಂಗವನ್ನಾಗಿ ಮಾಡುವೆನು.
    ಎಲ್ಲರೂ ನಿನ್ನನ್ನು ಹೆಚ್ಚಾಗಿ ಹಗೆ ಮಾಡುವರು.
ನಿನ್ನ ಹೆಚ್ಚಳಿಕೆಯು ನಿನ್ನನ್ನು ಮರುಳುಗೊಳಿಸಿತು.
    ನೀನು ಎತ್ತರವಾದ ಬೆಟ್ಟದಂಚಿನ ಗುಹೆಗಳಲ್ಲಿ ವಾಸಿಸುವೆ.
    ನಿನ್ನ ಮನೆಯು ಪರ್ವತಗಳಲ್ಲಿದೆ.
ಆದ್ದರಿಂದ ನೀನು ನಿನ್ನಲ್ಲಿ ಹೇಳಿಕೊಳ್ಳುವದೇನೆಂದರೆ,
    ‘ಯಾರೂ ನನ್ನನ್ನು ಕೆಳಗೆ ಭೂಮಿಯ ಮೇಲೆ ಇಳಿಸಲಾರರು.’”

ಎದೋಮನು ಅದೋಗತಿಗೆ ಸೇರುವನು

ದೇವರಾದ ಯೆಹೋವನು ಹೀಗೆ ಹೇಳುತ್ತಾನೆ:
“ನೀನು ಹದ್ದಿನಂತೆ ಉನ್ನತದಲ್ಲಿ ಹಾರಾಡಿದರೂ,
    ನಕ್ಷತ್ರಗಳಲ್ಲಿ ಗೂಡುಕಟ್ಟಿದರೂ ಸಹ
    ಅಲ್ಲಿಂದಲೂ ನಾನು ನಿನ್ನನ್ನು ಕೆಳಕ್ಕೆ ತರುವೆನು.
ನೀನು ಸಂಪೂರ್ಣವಾಗಿ ನಾಶವಾಗುವೆ.
    ಕಳ್ಳರು ನಿನ್ನ ಬಳಿಗೆ ಬರುವರು,
ದರೋಡೆಗಾರರು ರಾತ್ರಿವೇಳೆ ಬರುವರು.
    ಅವರು ತಮಗೆ ಇಷ್ಟಬಂದದ್ದನ್ನೆಲ್ಲಾ ದೋಚುವರು.
ನಿನ್ನ ತೋಟದಲ್ಲಿ ಕೆಲಸಗಾರರು ದ್ರಾಕ್ಷೆಯನ್ನು ಕೊಯ್ಯುವಾಗ
    ಕೆಲವೊಂದನ್ನು ಬಿಟ್ಟುಬಿಡುವರು.
ಆದರೆ ವೈರಿಯು ಏಸಾವಿನ ಗುಪ್ತನಿಧಿಗಾಗಿ ಹುಡುಕುವರು;
    ಅವರು ಎಲ್ಲವನ್ನು ಕಂಡುಹಿಡಿಯುವರು.
ನಿನ್ನ ಸ್ನೇಹಿತರಂತಿದ್ದ ಜನರೆಲ್ಲರೂ ಸೇರಿ
    ನಿನ್ನನ್ನು ನಿನ್ನ ದೇಶದಿಂದ ಹೊರಗಟ್ಟುವರು.
ನಿನ್ನೊಡನೆ ಸಮಾಧಾನದಲ್ಲಿದ್ದ ಜನರು
    ನಿನ್ನನ್ನು ಮೋಸಪಡಿಸಿ ಸೋಲಿಸುವರು.
ನಿನ್ನೊಂದಿಗೆ ಯುದ್ಧದಲ್ಲಿ ಹೋರಾಡಿದವನು
    ನಿನ್ನನ್ನು ಉರುಲಿನಲ್ಲಿ ಸಿಕ್ಕಿಸುವನು.
‘ಆದರೆ ಅದು ಅವನಿಗೆ ತಿಳಿಯುವುದೇ ಇಲ್ಲ’” ಎಂದು ಅನ್ನುವರು.

ಯೆಹೋವನು ಹೇಳುವುದೇನೆಂದರೆ, “ಆ ದಿವಸದಲ್ಲಿ
    ಎದೋಮಿನಲ್ಲಿರುವ ಬುದ್ಧಿವಂತರನ್ನು ನಾಶಮಾಡುವೆನು.
    ಏಸಾವಿನ ಪರ್ವತದಲ್ಲಿರುವ ಜಾಣರನ್ನು ನಾನು ನಾಶಮಾಡುವೆನು.
ತೇಮಾನನೇ, ನಿನ್ನ ಯುದ್ಧವೀರರು ಭಯಪಡುವರು.
    ಏಸಾವಿನ ಪರ್ವತದಲ್ಲಿರುವ ಪ್ರತಿಯೊಬ್ಬನು ನಾಶವಾಗುವನು.
    ಎಷ್ಟೋ ಮಂದಿ ಹತರಾಗುವರು.
10 ನೀನು ನಾಚಿಕೆಯಿಂದ ಮುಚ್ಚಲ್ಪಡುವೆ, ನಿರಂತರಕ್ಕೂ ನಾಶವಾಗುವೆ.
    ಯಾಕೆಂದರೆ ನೀನು ನಿನ್ನ ಸಹೋದರನಾದ ಯಾಕೋಬನೊಂದಿಗೆ ಕ್ರೂರವಾಗಿ ನಡೆದುಕೊಂಡೆ.
11 ನೀನು ಇಸ್ರೇಲರ ವೈರಿಯೊಂದಿಗೆ ಸೇರಿಕೊಂಡೆ.
    ಅನ್ಯರು ಇಸ್ರೇಲಿನ ಐಶ್ವರ್ಯವನ್ನು ಎತ್ತಿಕೊಂಡು ಹೋದರು.
ಪರದೇಶಿಗಳು ಇಸ್ರೇಲ್ ಪಟ್ಟಣದ ಬಾಗಿಲನ್ನು ಪ್ರವೇಶಿಸಿದರು.
    ಆ ಪರದೇಶಿಗಳು ಜೆರುಸಲೇಮಿನ ಯಾವ ಭಾಗ ತಮಗೆ ದೊರಕಬೇಕೆಂದು ಚೀಟುಹಾಕಿದರು.
    ಆಗ ನೀನು ನಿನ್ನ ಪಾಲನ್ನು ತೆಗೆದುಕೊಳ್ಳಲು ಅವರೊಂದಿಗಿದ್ದೆ.
12 ನಿನ್ನ ಸಹೋದರನ ಸಂಕಟದಲ್ಲಿ ನೀನು ಹರ್ಷಿಸಿದೆ.
    ನೀನು ಹಾಗೆ ಮಾಡಬಾರದಾಗಿತ್ತು.
ಯೆಹೂದವನ್ನು ನಾಶಮಾಡುವಾಗ ನೀನು ಸಂತೋಷಪಟ್ಟೆ.
    ನೀನು ಹಾಗೆ ಮಾಡಬಾರದಾಗಿತ್ತು.
ನೀನು ಅವರ ಸಂಕಟ ಕಾಲದಲ್ಲಿ ಕೊಚ್ಚಿಕೊಂಡೆ.
    ನೀನು ಹಾಗೆ ಮಾಡಬಾರದಾಗಿತ್ತು.
13 ನನ್ನ ಜನರ ನಗರದ ಬಾಗಿಲನ್ನು ನೀನು ಪ್ರವೇಶಿಸಿ ಅವರ ತೊಂದರೆಗಳನ್ನು ನೋಡಿ ನೀನು ಹಾಸ್ಯ ಮಾಡಿದೆ.
    ನೀನು ಹಾಗೆ ಮಾಡಬಾರದಾಗಿತ್ತು.
ಅವರು ಸಂಕಟಪಡುತ್ತಿರುವಾಗ ನೀನು ಅವರ ಐಶ್ವರ್ಯವನ್ನು ಸೂರೆಮಾಡಿದೆ.
    ನೀನು ಹಾಗೆ ಮಾಡಬಾರದಿತ್ತು.
14 ದಾರಿಯ ಚೌಕದಲ್ಲಿ ನೀನು ನಿಂತುಕೊಂಡು ತಪ್ಪಿಸಿಕೊಂಡು ಹೋಗುವವರನ್ನು ಸಾಯಿಸಿದೆ.
    ನೀನು ಹಾಗೆ ಮಾಡಬಾರದಾಗಿತ್ತು.
    ತಪ್ಪಿಸಿಕೊಂಡು ಹೋದವರನ್ನು ನೀನು ಸೆರೆಹಿಡಿದೆ.
    ನೀನು ಹಾಗೆ ಮಾಡಬಾರದಾಗಿತ್ತು.
15 ಎಲ್ಲಾ ಜನಾಂಗಗಳವರಿಗೆ
    ಯೆಹೋವನ ದಿನವು ಬೇಗನೇ ಬರುವದು.
ನೀನು ಬೇರೆಯವರಿಗೆ ಮಾಡಿದ ದುಷ್ಕೃತ್ಯಗಳನ್ನು ಅವರು ನಿನ್ನ ಮೇಲೆಯೇ ನಡೆಸುವರು.
    ಅದೇ ದುಷ್ಕೃತ್ಯಗಳು ನಿನ್ನ ತಲೆ ಮೇಲೆ ಬೀಳುವವು.
16 ಯಾಕೆಂದರೆ ನನ್ನ ಪರಿಶುದ್ಧ ಪರ್ವತದಲ್ಲಿ ರಕ್ತವನ್ನು ಸುರಿಸಿದೆ.
    ನೀನು ಹುಟ್ಟಲೇ ಇಲ್ಲ ಎಂಬುದಾಗಿ ಅನಿಸುವದು.
ಆದ್ದರಿಂದ ಇತರ ಜನಾಂಗಗಳು ನಿನ್ನ ರಕ್ತವನ್ನು ಸುರಿಸುತ್ತವೆ.
    ನೀನು ಕೊನೆಗೊಳ್ಳುವೆ.
17 ಆದರೆ ಚೀಯೋನ್ ಬೆಟ್ಟದಲ್ಲಿ ಅಳಿದುಳಿದವರು ಇರುವರು.
    ಅವರು ನನ್ನ ವಿಶೇಷ ಜನರಾಗಿರುವರು.
ಯಾಕೋಬನ ಜನರು ತಮಗೆ ಸೇರಿರುವದನ್ನು
    ಹಿಂದಕ್ಕೆ ಪಡೆದುಕೊಳ್ಳುವರು.
18 ಯಾಕೋಬನ ಸಂತತಿಯವರು ಬೆಂಕಿಯಂತಿರುವರು.
    ಯೋಸೇಫನ ಜನಾಂಗವು ಬೆಂಕಿಯ ನಾಲಗೆಗಳಂತೆ ಇರುವರು.
ಆದರೆ ಏಸಾವಿನ ಜನಾಂಗ ಸುಟ್ಟ ಬೂದಿಯಂತಿರುವರು.
    ಯೆಹೂದದ ಜನರು ಎದೋಮನನ್ನು ಸುಟ್ಟುಹಾಕುವರು.
    ಯೆಹೂದದ ಜನರು ಎದೋಮನನ್ನು ನಾಶಮಾಡುವರು.
ಆಗ ಏಸಾವಿನ ಜನರಲ್ಲಿ ಯಾರೂ ಉಳಿಯುವದಿಲ್ಲ.”
    ಯಾಕೆಂದರೆ ಇದು ದೇವರಾದ ಯೆಹೋವನ ಮಾತು.
19 ಆಗ ನೆಗೆವಿನ ಜನರು ಏಸಾವಿನ ಪರ್ವತಗಳಲ್ಲಿ ವಾಸಿಸುವರು.
    ಬೆಟ್ಟದ ಕೆಳಗೆ ವಾಸಿಸುವವರು ಫಿಲಿಷ್ಟಿಯರ ದೇಶವನ್ನು ಆಕ್ರಮಿಸುವರು.
ಎಫ್ರಾಯೀಮ್ ಮತ್ತು ಸಮಾರ್ಯದ ಜನರು ಜೀವಿಸುವರು.
    ಗಿಲ್ಯಾದ್ ಪ್ರಾಂತ್ಯವು ಬೆನ್ಯಾಮೀನರಿಗೆ ಸೇರುವದು.
20 ಸೆರೆ ಒಯ್ಯಲ್ಪಟ್ಟ ಇಸ್ರೇಲರು ಚಾರೆಪ್ತದವರೆಗೆ ಕಾನಾನ್ ದೇಶವನ್ನು ವಶಪಡಿಸಿಕೊಳ್ಳುವರು.
    ಸೆಫಾರದಿನಲ್ಲಿ ಸೆರೆಯಾಗಿರುವ ಜೆರುಸಲೇಮಿನವರು ನೆಗೆವಿನ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.
21 ವಿಜಯಿಗಳು ಚೀಯೋನ್ ಬೆಟ್ಟವನ್ನೇರಿ
    ಏಸಾವಿನ ಪರ್ವತಗಳಲ್ಲಿ ವಾಸಿಸುವ ಜನರನ್ನಾಳುವರು.
    ಆಗ ಸಾಮ್ರಾಜ್ಯವು ಯೆಹೋವನಿಗೆ ಸೇರುವುದು.

ಪ್ರಕಟನೆ 9

ಐದನೆಯ ತುತೂರಿ—ಮೊದಲನೆ ವಿಪತ್ತು

ಐದನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಒಂದು ನಕ್ಷತ್ರವು ಆಕಾಶದಿಂದ ಭೂಮಿಯ ಮೇಲೆ ಬಿದ್ದದ್ದನ್ನು ನಾನು ನೋಡಿದೆನು. ಆ ನಕ್ಷತ್ರಕ್ಕೆ ತಳವಿಲ್ಲದ ಆಳವಾದ ಕೂಪಕ್ಕೆ[a] ಹೋಗುವ ಬೀಗದ ಕೈ ಕೊಡಲ್ಪಟ್ಟಿತು. ನಂತರ ಆ ನಕ್ಷತ್ರವು ತಳವಿಲ್ಲದ ಆಳವಾದ ಕೂಪವನ್ನು ತೆರೆಯಿತು. ದೊಡ್ಡ ಕುಲುಮೆಯಿಂದ ಹೊಗೆಯು ಬರುವಂತೆ ಆ ಕೂಪದಿಂದ ಹೊಗೆ ಮೇಲಕ್ಕೆ ಬಂದಿತು. ಆ ಕೂಪದಿಂದ ಬಂದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾದವು.

ನಂತರ ಮಿಡತೆಗಳು ಹೊಗೆಯೊಳಗಿಂದ ಭೂಮಿಯ ಮೇಲಕ್ಕೆ ಬಂದಿಳಿದವು. ಅವುಗಳಿಗೆ ಚೇಳುಗಳಂತೆ ಕುಟುಕುವ ಶಕ್ತಿಯನ್ನು ಕೊಡಲಾಯಿತು. ಭೂಮಿಯ ಮೇಲಿನ ಹುಲ್ಲಿಗಾಗಲಿ ಸಸ್ಯಕ್ಕಾಗಲಿ ಮರಕ್ಕಾಗಲಿ ಹಾನಿ ಮಾಡದಂತೆ ಆ ಮಿಡತೆಗಳಿಗೆ ತಿಳಿಸಲಾಯಿತು. ತಮ್ಮ ಹಣೆಗಳ ಮೇಲೆ ದೇವರ ಮುದ್ರೆಯಿಲ್ಲದ ಜನರನ್ನು ಹಿಂಸಿಸಲು ಅವುಗಳಿಗೆ ತಿಳಿಸಲಾಯಿತು. ಜನಗಳಿಗೆ ಐದು ತಿಂಗಳ ಕಾಲ ನೋವು ಉಂಟುಮಾಡುವಂತಹ ಶಕ್ತಿಯನ್ನು ಈ ಮಿಡತೆಗಳಿಗೆ ಕೊಡಲಾಯಿತು. ಆದರೆ ಜನರನ್ನು ಕೊಲ್ಲುವ ಶಕ್ತಿಯನ್ನು ಮಿಡತೆಗಳಿಗೆ ಕೊಡಲಿಲ್ಲ. ಈ ಮಿಡತೆಗಳು ಕುಟುಕಿದಾಗ ಚೇಳು ಕುಟುಕಿದಷ್ಟೇ ನೋವಾಗುತ್ತಿತ್ತು. ಆ ದಿನಗಳಲ್ಲಿ ಜನರು ಸಾಯುವುದಕ್ಕೆ ಮಾರ್ಗವನ್ನು ಹುಡುಕಿದರೂ ಅವರಿಗೆ ಸಿಕ್ಕುವುದಿಲ್ಲ. ಅವರು ಮರಣವನ್ನು ಬಯಸಿದರೂ ಮರಣವು ಅವರಿಗೆ ಮರೆಯಾಗುತ್ತದೆ.

ಮಿಡತೆಗಳು ಯುದ್ಧಕ್ಕೆ ಸಿದ್ಧಪಡಿಸಿದ ಕುದುರೆಗಳಂತೆ ಕಾಣುತ್ತಿದ್ದವು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆ ಎನೋ ಇದ್ದವು; ಅವುಗಳ ಮುಖಗಳು ಮಾನವರ ಮುಖಗಳಂತಿದ್ದವು. ತಲೆಕೂದಲು ಸ್ತ್ರೀಯರ ತಲೆಕೂದಲಂತಿತ್ತು; ಹಲ್ಲುಗಳು ಸಿಂಹಗಳ ಹಲ್ಲುಗಳಂತಿದ್ದವು. ಎದೆಗಳು ಉಕ್ಕಿನ ಕವಚಗಳಂತೆ ಇದ್ದವು; ರೆಕ್ಕೆಗಳ ಶಬ್ದವು ಯುದ್ಧದಲ್ಲಿ ಆತುರದಿಂದ ಓಡುವ ಅನೇಕ ಕುದುರೆಗಳ ಮತ್ತು ರಥಗಳ ಶಬ್ದದಂತಿತ್ತು. 10 ಚೇಳುಗಳಿಗಿರುವಂತೆ ಬಾಲಗಳೂ ಕೊಂಡಿಗಳೂ ಇದ್ದವು; ಜನರಿಗೆ ಐದುತಿಂಗಳ ಕಾಲ ನೋವುಂಟುಮಾಡುವ ಶಕ್ತಿಯು ಅವುಗಳ ಬಾಲಗಳಲ್ಲಿ ಇತ್ತು. 11 ಮಿಡತೆಗಳಿಗೆ ಒಬ್ಬ ರಾಜನಿದ್ದನು. ತಳವಿಲ್ಲದ ಕೂಪದ ದೂತನೇ ಅವುಗಳ ರಾಜನಾಗಿದ್ದನು. ಅವನಿಗೆ ಹಿಬ್ರೂ ಭಾಷೆಯಲ್ಲಿ “ಅಬದ್ದೋನ್” ಎಂಬ ಹೆಸರಿತ್ತು. ಗ್ರೀಕ್ ಭಾಷೆಯಲ್ಲಿ “ಅಪೊಲ್ಲುವೋನ್” (ವಿನಾಶಕರ) ಎಂದೂ ಹೆಸರಿತ್ತು.

12 ಮೊದಲನೆಯ ಮಹಾವಿಪತ್ತು ಕಳೆದುಹೋಯಿತು. ಇನ್ನೂ ಎರಡು ಮಹಾವಿಪತ್ತುಗಳು ಬರಲಿದ್ದವು.

ಆರನೇ ತುತೂರಿಯ ಪ್ರಾರಂಭ

13 ಆರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ದೇವರ ಸನ್ನಿಧಿಯಲ್ಲಿರುವ ಚಿನ್ನದ ಯಜ್ಞವೇದಿಕೆಯ ಮೇಲಿನ ಕೊಂಬುಗಳಿಂದ ಬರುತ್ತಿರುವ ಧ್ವನಿಯನ್ನು ನಾನು ಕೇಳಿದೆನು. 14 ಆ ಧ್ವನಿಯು ತುತೂರಿಯಿದ್ದ ಆರನೆಯ ದೇವದೂತನಿಗೆ, “ಯೂಫ್ರಟಿಸ್ ಎಂಬ ಮಹಾನದಿಯ ಬಳಿ ಕಟ್ಟಿಹಾಕಿರುವ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಡು” ಎಂದು ಹೇಳಿತು. 15 ಈ ನಾಲ್ಕು ಮಂದಿ ದೇವದೂತರನ್ನು ಇದೇ ವರ್ಷ, ಇದೇ ತಿಂಗಳು, ಇದೇ ದಿನ, ಇದೇ ತಾಸಿಗಾಗಿ ಸಿದ್ಧಪಡಿಸಲಾಗಿತ್ತು. ಭೂಮಿಯ ಮೇಲಿರುವ ಜನರಲ್ಲಿ ಮೂರನೆಯ ಒಂದು ಭಾಗವನ್ನು ಸಂಹರಿಸಲು ಇವರನ್ನು ಬಿಡುಗಡೆ ಮಾಡಲಾಯಿತು. 16 ಅವರಲ್ಲಿದ್ದ ಅಶ್ವದಳದ ಸೈನಿಕರ ಸಂಖ್ಯೆ ಇಪ್ಪತ್ತುಕೋಟಿ ಎಂದು ನನಗೆ ಕೇಳಿಸಿತು.

17 ನಾನು ದರ್ಶನದಲ್ಲಿ ಕುದುರೆಗಳನ್ನೂ ಕುದುರೆಗಳ ಮೇಲಿದ್ದ ಸವಾರರನ್ನೂ ನೋಡಿದೆನು. ಅವರು ಹೀಗೆ ಕಾಣುತ್ತಿದ್ದರು: ಅವರು ಬೆಂಕಿಯಂತೆ ಕೆಂಪಾದ, ಕಪ್ಪಾದ, ನೀಲಿಯ ಮತ್ತು ಗಂಧಕದಂತೆ ಹಳದಿಯಾದ ಕವಚಗಳನ್ನು ಹೊಂದಿದ್ದರು. ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತೆ ಕಾಣುತ್ತಿದ್ದವು. ಕುದುರೆಗಳ ಬಾಯಿಂದ ಬೆಂಕಿ, ಹೊಗೆ ಮತ್ತು ಗಂಧಕಗಳು ಬರುತ್ತಿದ್ದವು. 18 ಭೂಮಿಯ ಮೇಲಿನ ಜನರಲ್ಲಿ ಮೂರನೆಯ ಒಂದು ಭಾಗವು ಕುದುರೆಗಳ ಬಾಯಿಂದ ಹೊರಬಂದ ಬೆಂಕಿ, ಹೊಗೆ ಮತ್ತು ಗಂಧಕಗಳ ಉಪದ್ರವಗಳಿಂದ ಕೊಲ್ಲಲ್ಪಟ್ಟಿತು. 19 ಕುದುರೆಗಳ ಶಕ್ತಿಯು ಅವುಗಳ ಬಾಯಲ್ಲಿಯೂ ಬಾಲಗಳಲ್ಲಿಯೂ ಇತ್ತು. ಅವುಗಳ ಬಾಲಗಳು ಜನರನ್ನು ಕಚ್ಚಬಲ್ಲ ಹೆಡೆಗಳುಳ್ಳ ಸರ್ಪಗಳಂತೆ ಇದ್ದವು.

20 ಈ ಉಪದ್ರವಗಳಿಂದ ಸಾಯದೆ ಉಳಿದ ಜನರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಲಿಲ್ಲ. ತಮ್ಮ ಸ್ವಂತ ಕೈಗಳಿಂದ ನಿರ್ಮಿಸಿದ ವಿಗ್ರಹಗಳನ್ನು ತೊರೆದುಬಿಡಲಿಲ್ಲ. ಅವರು ದೆವ್ವಗಳ ಆರಾಧನೆಯನ್ನು ನಿಲ್ಲಿಸಲಿಲ್ಲ. ಚಿನ್ನ, ಬೆಳ್ಳಿ, ತಾಮ್ರ, ಕಲ್ಲು ಮತ್ತು ಮರಗಳಿಂದ ಮಾಡಲ್ಪಟ್ಟು, ನಡೆಯಲಾರದ, ನೋಡಲಾರದ ಮತ್ತು ಕೇಳಲಾರದ ವಿಗ್ರಹಗಳನ್ನು ಪೂಜಿಸುವುದನ್ನು ಅವರು ನಿಲ್ಲಿಸಲಿಲ್ಲ. 21 ಈ ಜನರು ತಮ್ಮ ಹೃದಯಗಳನ್ನು ಮತ್ತು ಜೀವಿತಗಳನ್ನು ಪರಿವರ್ತಿಸಿಕೊಳ್ಳಲಿಲ್ಲ ಮತ್ತು ಇತರರನ್ನು ಕೊಲ್ಲುವುದನ್ನು ಬಿಟ್ಟುಬಿಡಲಿಲ್ಲ. ಅವರು ತಾವು ನಡೆಸುತ್ತಿದ್ದ ಮಾಟಮಂತ್ರಗಳನ್ನು, ಲೈಂಗಿಕ ಪಾಪಗಳನ್ನು ಮತ್ತು ಕಳ್ಳತನವನ್ನು ತೊರೆದುಬಿಡಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International