Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಹೋಶೇಯ 1-4

ಹೋಶೇಯನ ಮುಖಾಂತರ ದೇವರಾದ ಯೆಹೋವನ ಸಂದೇಶ

ಬೆಯೇರಿಯ ಮಗನಾದ ಹೋಶೇಯನಿಗೆ ಯೋಹೋವನಿಂದ ಬಂದ ಸಂದೇಶ: ಈ ಸಂದೇಶವು ಯೆಹೂದ ಪ್ರಾಂತ್ಯದ ಅರಸರಾದ ಉಜ್ಜೀಯ, ಯೋಥಾಮ, ಅಹಾಜ ಮತ್ತು ಹಿಜ್ಕೀಯ ಇವರ ಆಳ್ವಿಕೆಯ ಸಮಯದಲ್ಲಿ ಬಂದಿತು. ಇದು ಇಸ್ರೇಲಿನ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನ ಆಳ್ವಿಕೆಯ ಕಾಲ.

ಹೋಶೇಯನಿಗೆ ಯೆಹೋವನಿಂದ ಬಂದ ಸಂದೇಶದಲ್ಲಿ ಇದು ಮೊದಲನೆಯದು. ಯೆಹೋವನು ಹೇಳಿದ್ದೇನೆಂದರೆ, “ನೀನು ಹೋಗಿ ಒಬ್ಬ ವೇಶ್ಯೆಯನ್ನು ಮದುವೆಯಾಗು. ಆ ವೇಶ್ಯೆಯಿಂದ[a] ಮಕ್ಕಳನ್ನು ಪಡೆದುಕೊ. ಯಾಕೆಂದರೆ ಈ ದೇಶದ ಜನರು ಸೂಳೆಯಂತೆ ವರ್ತಿಸಿರುತ್ತಾರೆ. ಅವರು ಯೆಹೋವನಿಗೆ ಅಪನಂಬಿಗಸ್ತಿಕೆಯುಳ್ಳವರಾಗಿರುತ್ತಾರೆ.”

ಇಜ್ರೇಲನ ಜನನ

ಹಾಗೆ ಹೋಶೇಯನು ದಿಬ್ಲಯೀಮನ ಮಗಳಾದ ಗೋಮೆರ್ ಎಂಬಾಕೆಯನ್ನು ಮದುವೆಯಾದನು. ಗೋಮೆರಳು ಗರ್ಭಿಣಿಯಾಗಿ ಹೋಶೇಯನಿಗೆ ಗಂಡುಮಗುವನ್ನು ಹೆತ್ತಳು. ಹೋಶೇಯನಿಗೆ ಯೆಹೋವನು ಹೇಳಿದ್ದೇನೆಂದರೆ, “ಅವನಿಗೆ ಇಜ್ರೇಲ್ ಎಂದು ಹೆಸರನ್ನಿಡು. ಯಾಕೆಂದರೆ, ಇನ್ನು ಸ್ವಲ್ಪ ಸಮಯದಲ್ಲಿ ನಾನು ಯೇಹುವಿನ ಸಂತತಿಯವರನ್ನು ಶಿಕ್ಷಿಸುವೆನು. ಅವನು ಇಜ್ರೇಲ್ ತಗ್ಗಿನಲ್ಲಿ ರಕ್ತವನ್ನು ಸುರಿಸಿರುತ್ತಾನಲ್ಲಾ? ಆ ಮೇಲೆ ನಾನು ಇಸ್ರೇಲ್ ರಾಜ್ಯಕ್ಕೆ ಅಂತ್ಯವನ್ನು ತರುವೆನು. ಆಗ ಇಜ್ರೇಲ್ ತಗ್ಗಿನಲ್ಲಿ ಇಸ್ರೇಲಿನ ಬಿಲ್ಲನ್ನು ತುಂಡು ಮಾಡುವೆನು.”

ಲೋರುಹಾಮಳ ಜನನ

ಗೋಮೆರಳು ತಿರುಗಿ ಗರ್ಭಿಣಿಯಾಗಿ ಹೆಣ್ಣುಮಗುವನ್ನು ಹೆತ್ತಳು. ಯೆಹೋವನು ಹೋಶೇಯನಿಗೆ, ಆಕೆಗೆ, “ಲೋರುಹಾಮ” ಎಂಬ ಹೆಸರನ್ನಿಡಲು ಹೇಳಿದನು. “ಯಾಕೆಂದರೆ, ನಾನು ಇನ್ನು ಮುಂದೆ ಇಸ್ರೇಲ್ ಜನಾಂಗವನ್ನು ಕ್ಷಮಿಸುವುದಿಲ್ಲ. ಆದರೆ ನಾನು ಯೆಹೂದ ದೇಶಕ್ಕೆ ಕರುಣೆಯನ್ನು ತೋರಿಸುವೆನು. ನಾನು ಅವರನ್ನು ರಕ್ಷಿಸುವೆನು. ಅವರನ್ನು ರಕ್ಷಿಸಲು ನಾನು ಬಿಲ್ಲುಬಾಣಗಳನ್ನು ಉಪಯೋಗಿಸುವದಿಲ್ಲ. ಅಥವಾ ಯುದ್ಧಾಶ್ವಗಳನ್ನಾಗಲಿ ಸೈನ್ಯವನ್ನಾಗಲಿ ಉಪಯೋಗಿಸುವದಿಲ್ಲ. ನನ್ನ ಸ್ವಂತ ಸಾಮರ್ಥ್ಯದಿಂದಲೇ ನಾನು ಅವರನ್ನು ರಕ್ಷಿಸುವೆನು.”

ಲೋಅಮ್ಮಿಯ ಜನನ

ಗೋಮೆರಳು ಲೋರುಹಾಮಳಿಗೆ ಮೊಲೆಯುಣಿಸುವದನ್ನು ನಿಲ್ಲಿಸಿದ ಬಳಿಕ ಆಕೆಯು ತಿರುಗಿ ಗರ್ಭಿಣಿಯಾಗಿ ಗಂಡುಮಗುವನ್ನು ಹೆತ್ತಳು. ಆಗ ಯೆಹೋವನು, “ಅವನಿಗೆ ಲೋಅಮ್ಮಿ ಎಂದು ಹೆಸರಿಡು. ಯಾಕೆಂದರೆ ನೀವು ನನ್ನ ಜನರಲ್ಲ; ನಾನು ನಿಮ್ಮ ದೇವರಲ್ಲ” ಎಂದು ಹೇಳಿದನು.

ಇಸ್ರೇಲ್ ಜನಾಂಗದವರೊಂದಿಗೆ ಯೆಹೋವನು ಮಾತಾಡುತ್ತಾನೆ

10 “ಇನ್ನು ಮುಂದೆ ಇಸ್ರೇಲರ ಜನಸಂಖ್ಯೆಯು ಸಮುದ್ರದ ಮರಳಿನಂತಿರುವದು. ನೀವು ಮರಳನ್ನು ಅಳತೆಮಾಡಲೂ ಅದನ್ನು ಲೆಕ್ಕಿಸಲೂ ಸಾಧ್ಯವಿಲ್ಲ. ಆಗ, ‘ನೀವು ನನ್ನ ಜನರಲ್ಲ’ ಎಂಬ ಹೇಳಿಕೆಯ ಬದಲಾಗಿ, ‘ನೀವು ಜೀವಸ್ವರೂಪನಾದ ದೇವರ ಮಕ್ಕಳು’ ಎಂಬುದಾಗಿ ಕರೆಯಲ್ಪಡುವಿರಿ.

11 “ಆಗ ಇಸ್ರೇಲಿನ ಪ್ರಜೆಗಳು ಮತ್ತು ಯೆಹೂದ ಪ್ರಾಂತ್ಯದ ಪ್ರಜೆಗಳು ಒಂದಾಗಿ ಸೇರಲ್ಪಡುವರು. ತಮಗೆ ಒಬ್ಬ ಅರಸನನ್ನು ಅವರು ಆರಿಸಿಕೊಳ್ಳುವರು. ಅವರ ಜನಾಂಗಕ್ಕೆ ಆ ದೇಶವು ಸಾಲದೆ ಹೋಗುವದು. ಇಜ್ರೇಲನ ದಿನವು ನಿಜವಾಗಿಯೂ ಮಹತ್ವವುಳ್ಳದ್ದಾಗಿರುವದು.”

“ಆಗ ನೀವು ನಿಮ್ಮ ಸಹೋದರರಿಗೆ, ‘ನೀವು ನನ್ನ ಜನರು’ ಎಂದು ಹೇಳುವಿರಿ. ಮತ್ತು ನಿಮ್ಮ ಸಹೋದರಿಯರಿಗೆ, ‘ಆತನು ನಿಮ್ಮ ಮೇಲೆ ಕರುಣೆ ಇಟ್ಟಿರುತ್ತಾನೆ’ ಎಂದು ಹೇಳುವಿರಿ.

“ನಿಮ್ಮ ತಾಯಿಯೊಂದಿಗೆ ವಾದಿಸಿರಿ. ಯಾಕೆಂದರೆ ಆಕೆ ನನ್ನ ಹೆಂಡತಿಯಲ್ಲ. ನಾನು ಆಕೆಯ ಗಂಡನಲ್ಲ. ವೇಶ್ಯೆಯ ಹಾಗೆ ಆಕೆ ವರ್ತಿಸುವದನ್ನು ನಿಲ್ಲಿಸು ಎಂದು ಹೇಳಿರಿ. ಆಕೆಯ ಸ್ತನಗಳ ಮಧ್ಯದಿಂದ ಆಕೆಯ ಪ್ರಿಯತಮರನ್ನು ತೆಗೆದುಹಾಕಲು ಹೇಳಿರಿ. ಆಕೆ ವ್ಯಭಿಚಾರ ಮಾಡುವದನ್ನು ನಿಲ್ಲಿಸದೆ ಹೋದರೆ ನಾನು ಆಕೆಯನ್ನು ಬೆತ್ತಲೆ ಮಾಡಿ, ಆಕೆ ಜನ್ಮ ತಾಳಿದಾಗ ಹೇಗೆ ಇದ್ದಳೋ ಹಾಗೆ ಮಾಡುವೆನು. ಆಕೆಯ ಜನರನ್ನು ಆಕೆಯಿಂದ ತೊಲಗಿಸಿ ಆಕೆಯನ್ನು ಒಣ ಮರುಭೂಮಿಯಂತೆ ಬೆಂಗಾಡಾಗಿ ಮಾಡುವೆನು. ಆಕೆ ಬಾಯಾರಿ ಸಾಯುವಂತೆ ಮಾಡುವೆನು. ಆಕೆಯ ಮಕ್ಕಳನ್ನು ನಾನು ಕನಿಕರಿಸೆನು. ಯಾಕೆಂದರೆ ಅವರು ವ್ಯಭಿಚಾರದಿಂದ ಹುಟ್ಟಿದ ಮಕ್ಕಳು. ಅವರ ತಾಯಿಯು ವೇಶ್ಯೆಯಂತೆ ವರ್ತಿಸಿದಳು. ತಾನು ನಡಿಸಿದ ಕೃತ್ಯಗಳಿಗಾಗಿ ಆಕೆ ನಾಚಿಕೆಪಡಬೇಕು. ಆಕೆಯು ಹೀಗೆಂದುಕೊಳ್ಳುತ್ತಿದ್ದಾಳೆ, ‘ನಾನು ನನ್ನ ಪ್ರಿಯತಮರ ಬಳಿಗೆ ಹೋಗುವೆನು. ಅವರು ನನಗೆ ಅನ್ನ ನೀರನ್ನು ಕೊಡುವರು. ನನಗೆ ಉಣ್ಣೆಯನ್ನೂ, ನಾರುಮಡಿಯನ್ನೂ ಕೊಡುವರು. ದ್ರಾಕ್ಷಾರಸ ಮತ್ತು ಆಲೀವ್ ಎಣ್ಣೆಯನ್ನೂ ಕೊಡುವರು.’

“ಅದಕ್ಕಾಗಿ ಯೆಹೋವನಾದ ನಾನು ಇಸ್ರೇಲರ ಮಾರ್ಗವನ್ನು ಮುಳ್ಳುಗಳಿಂದ ಮುಚ್ಚಿಬಿಡುವೆನು. ನಾನು ಗೋಡೆ ಕಟ್ಟುವೆನು. ಆಗ ಅವಳು ತನ್ನ ದಾರಿಯನ್ನು ಕಂಡುಕೊಳ್ಳಲಾರಳು. ಆಕೆಯು ತನ್ನ ಪ್ರಿಯತಮರ ಹಿಂದೆ ಓಡಿಹೋದರೂ ಅವರನ್ನು ಹಿಡಿಯಲಾರಳು. ಆಕೆಯು ತನ್ನ ಪ್ರಿಯತಮರನ್ನು ಹುಡುಕುವಳು. ಆದರೆ ಅವರು ಆಕೆಗೆ ಸಿಗುವುದಿಲ್ಲ. ಆಗ ಆಕೆ ಹೀಗೆ ಹೇಳುವಳು, ‘ನಾನು ನನ್ನ ಮೊದಲನೇ ಪತಿಯ ಬಳಿಗೆ (ಯೆಹೋವನು) ಹೋಗುವೆನು. ನಾನು ಆತನೊಂದಿಗೆ ಇದ್ದಾಗ ನನ್ನ ಜೀವಿತವು ಎಷ್ಟೋ ಚೆನ್ನಾಗಿತ್ತು. ಈಗಿನ ನನ್ನ ಜೀವಿತಕ್ಕಿಂತ ಆಗಿನ ಜೀವಿತವು ಎಷ್ಟೋ ಮೇಲಾಗಿತ್ತು.’

“ಆಕೆಗೆ (ಇಸ್ರೇಲಿಗೆ) ನಾನು (ಯೆಹೋವನು) ಧಾನ್ಯ, ಎಣ್ಣೆ, ದ್ರಾಕ್ಷಾರಸವನ್ನು ಕೊಟ್ಟವನೆಂದು ತಿಳಿದಿಲ್ಲ. ಆಕೆಗೆ ಹೆಚ್ಚೆಚ್ಚಾಗಿ ಬೆಳ್ಳಿಬಂಗಾರಗಳನ್ನು ಕೊಡುತ್ತಾ ಬಂದೆನು. ಆದರೆ ಆ ಬೆಳ್ಳಿಬಂಗಾರವನ್ನು ಇಸ್ರೇಲ್ ಬಾಳನ ವಿಗ್ರಹಗಳನ್ನು ತಯಾರಿಸಲು ಉಪಯೋಗಿಸಿದಳು. ಆದ್ದರಿಂದ ನಾನು ಹಿಂತಿರುಗಿ ಬರುವೆನು. ನಾನು ಕೊಟ್ಟಿರುವ ಧಾನ್ಯವು ಕೊಯ್ಲಿಗೆ ತಯಾರಾದ ಅವಳಿಂದ ಅದನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ದ್ರಾಕ್ಷಿಹಣ್ಣು ಪಕ್ವವಾಗಿದ್ದಾಗ ನಾನು ಬಂದು ನನ್ನ ದ್ರಾಕ್ಷಾರಸವನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ನಾನು ಕೊಟ್ಟಿರುವ ಉಣ್ಣೆ ಮತ್ತು ನಾರಿನ ಬಟ್ಟೆಯನ್ನು ಹಿಂದಕ್ಕೆ ತೆಗೆದುಕೊಳ್ಳುವೆನು. ನಾನು ಅದನ್ನು ಅವಳಿಗೆ ತನ್ನ ಬೆತ್ತಲೆ ಶರೀರವನ್ನು ಮುಚ್ಚಿಕೊಳ್ಳುವದಕ್ಕೋಸ್ಕರ ಕೊಟ್ಟಿದ್ದೆನು. 10 ಈಗ ನಾನು ಆಕೆಯನ್ನು ಬಟ್ಟೆಯನ್ನು ಬಿಚ್ಚಿಹಾಕುವೆನು. ಆಕೆಯ ಬೆತ್ತಲೆತನವನ್ನು ಆಕೆಯ ಪ್ರಿಯತಮರೆಲ್ಲರೂ ನೋಡುವರು. ನನ್ನ ಕೈಯೊಳಗಿಂದ ಯಾರೂ ಆಕೆಯನ್ನು ರಕ್ಷಿಸಲಾರರು. 11 ನಾನು (ದೇವರು) ಆಕೆಯ ಉಲ್ಲಾಸಗಳನ್ನು ಅವಳಿಂದ ತೆಗೆಯುವೆನು. ಆಕೆಯ ಹಬ್ಬದ ದಿನಗಳು, ಅಮಾವಾಸ್ಯೆಯ ಹಬ್ಬ, ಸಬ್ಬತ್ ದಿನಗಳನ್ನು ಆಕೆಯಿಂದ ತೆಗೆದುಬಿಡುವೆನು. 12 ಆಕೆಯ ದ್ರಾಕ್ಷಾಲತೆಗಳನ್ನೂ ಅಂಜೂರದ ಮರಗಳನ್ನೂ ನಾಶಮಾಡುವೆನು. ‘ಇವುಗಳನ್ನು ನನ್ನ ಪ್ರಿಯತಮರು ನನಗೆ ಕೊಟ್ಟರು’ ಎಂದು ಆಕೆ ಹೇಳುತ್ತಾಳೆ. ಆದರೆ ನಾನು ಆಕೆಯ ತೋಟವನ್ನೇ ಬದಲಾಯಿಸುವೆನು. ಅದು ದಟ್ಟ ಅಡವಿಯಂತೆ ಆಗುವದು. ಅದರಲ್ಲಿದ್ದ ಮರಗಳ ಹಣ್ಣನ್ನು ಕಾಡುಪ್ರಾಣಿಗಳು ಬಂದು ತಿನ್ನುವವು.

13 “ಆಕೆಯು ಬಾಳನ ಸೇವೆಮಾಡಿದ್ದುದರಿಂದ ನಾನು ಆಕೆಯನ್ನು ಶಿಕ್ಷಿಸುವೆನು. ಬಾಳನಿಗೆ ಆಕೆ ಧೂಪ ಹಾಕಿದಳು. ಆಕೆ ವಸ್ತ್ರಾಭರಣಗಳಿಂದ ಭೂಷಿತಳಾಗಿ ಮೂಗುತಿಯನ್ನು ಧರಿಸಿಕೊಂಡು ತನ್ನ ಪ್ರೇಮಿಗಳ ಬಳಿಗೆ ಹೋದಳು. ನನ್ನನ್ನು ಮರೆತುಬಿಟ್ಟಳು.” ಇದು ಯೆಹೋವನು ಹೇಳಿದ ಮಾತು.

14 “ಆದ್ದರಿಂದ ನಾನು (ಯೆಹೋವನು) ಆಕೆಯೊಂದಿಗೆ ಸರಸ ಸಲ್ಲಾಪವಾಡುವೆನು. ಆಕೆಯನ್ನು ಮರುಭೂಮಿಗೆ ನಡೆಸಿ ಆಕೆಯೊಂದಿಗೆ ನಯನುಡಿಗಳಿಂದ ಮಾತಾಡುವೆನು. 15 ಅಲ್ಲಿ ಆಕೆಗೆ ನಾನು ದ್ರಾಕ್ಷಿತೋಟಗಳನ್ನು ಕೊಡುವೆನು. ಆಕೆಗೆ ಆಕೋರ್ ತಗ್ಗುಪ್ರದೇಶವನ್ನು ನಿರೀಕ್ಷೆಯ ಬಾಗಿಲಾಗಿ ಕೊಡುವೆನು. ಆಗ ಅವಳು ತಾನು ಈಜಿಪ್ಟಿನಿಂದ ಹೊರಬಂದ ತನ್ನ ಯೌವನದ ದಿನಗಳಲ್ಲಿ ಹೇಗೆ ನನ್ನ ಸಂಗಡ ಮಾತನಾಡಿದಳೋ ಹಾಗೆಯೇ ನನ್ನೊಂದಿಗೆ ಮಾತನಾಡುವಳು.” 16 ಇವು ಯೆಹೋವನ ಮಾತುಗಳು.

“ಆಗ ನನ್ನನ್ನು ನೀನು ‘ನನ್ನ ಗಂಡ’ ಎಂದು ಕರೆಯುವೆ. ‘ನನ್ನ ಬಾಳನು’ ಎಂದು ಕರೆಯುವದಿಲ್ಲ. 17 ನಾನು ಆಕೆಯ ಬಾಯಿಯಿಂದ ಬಾಳ್ ದೇವರುಗಳ ಹೆಸರನ್ನು ತೆಗೆದುಬಿಡುವೆನು. ಆಮೇಲೆ ಜನರು ಎಂದಿಗೂ ಬಾಳನ ಹೆಸರೆನ್ನೆತ್ತುವದಿಲ್ಲ.

18 “ಆ ಸಮಯದಲ್ಲಿ ನಾನು ಇಸ್ರೇಲರಿಗೋಸ್ಕರವಾಗಿ ಅಡವಿಯ ಮೃಗಗಳೊಂದಿಗೂ ಆಕಾಶದ ಪಕ್ಷಿಗಳೊಂದಿಗೂ ನೆಲದ ಮೇಲೆ ಹರಿದಾಡುವ ಜಂತುಗಳೊಂದಿಗೂ ಒಡಂಬಡಿಕೆ ಮಾಡುವೆನು. ನಾನು ಯುದ್ಧದ ಆಯುಧ, ಬಿಲ್ಲು, ಖಡ್ಗಗಳನ್ನು ತುಂಡು ಮಾಡುವೆನು. ಆ ದೇಶದೊಳಗೆ ಯಾವ ಆಯುಧವೂ ಇರದು. ಆಗ ಇಸ್ರೇಲಿನ ಜನರು ನಿಶ್ಟಿಂತೆಯಿಂದ ಮಲಗುವರು. 19 ಆಗ ನಾನು (ಯೆಹೋವನು) ನಿನ್ನನ್ನು ಒಳ್ಳೆಯತನದಿಂದಲೂ ನ್ಯಾಯದಿಂದಲೂ ಪ್ರೀತಿಯಿಂದಲೂ ಕರುಣೆಯಿಂದಲೂ ಕೂಡಿರುವ ನಿರಂತರವಾದ ವಧುವನ್ನಾಗಿ ಮಾಡುವೆನು. 20 ನಿನ್ನನ್ನು ನಾನು ನನ್ನ ನಂಬಿಗಸ್ತಳಾದ ವಧುವನ್ನಾಗಿ ಮಾಡುವೆನು. ಆಗ ನೀನು ನನ್ನನ್ನು ನಿಜವಾಗಿಯೂ ಅರಿತುಕೊಳ್ಳುವೆ. 21 ಆಗ ನಾನು ನಿನಗೆ ಪ್ರತಿಕ್ರಿಯೆ ತೋರ್ಪಡಿಸುವೆನು.” ಇದು ಯೆಹೋವನು ಹೇಳಿದ ಮಾತು:

“ನಾನು ಆಕಾಶದೊಂದಿಗೆ ಮಾತಾಡಲು
    ಅದು ಭೂಮಿಯ ಮೇಲೆ ಮಳೆಗರೆಯುವದು.
22 ಭೂಮಿಯು ಧಾನ್ಯ, ದ್ರಾಕ್ಷಾರಸ, ಎಣ್ಣೆಯನ್ನು ಕೊಡುವದು.
    ಇಜ್ರೇಲಿನ ಅವಶ್ಯಕತೆಗಳನ್ನು ಅವು ದೊರಕಿಸುವದು.
23 ಆಕೆಯ ದೇಶದಲ್ಲಿ ನಾನು ಬೀಜ ಬಿತ್ತುವೆನು.
    ನಾನು ಲೋರುಹಾಮಳಿಗೆ ಕರುಣೆ ತೋರುವೆನು.
ಲೋ ಅಮ್ಮಿಗೆ ನಾನು, ‘ನೀವು ನನ್ನ ಜನರು’ ಎಂದು ಹೇಳುವೆನು.
    ಆಗ ಅವರು, ‘ನೀನು ನಮ್ಮ ದೇವರು’ ಎಂದು ಹೇಳುವರು.”

ಗುಲಾಮಳಾಗಿದ್ದ ಗೋಮೆರಳನ್ನು ಹೋಶೇಯನು ಕ್ರಯಕೊಟ್ಟು ಹಿಂದಕ್ಕೆ ಪಡಕೊಂಡದ್ದು

ತಿರುಗಿ ಯೆಹೋವನು ನನಗೆ ಮತ್ತೆ ಹೇಳಿದ್ದೇನೆಂದರೆ, “ಗೋಮೆರಳಿಗೆ ಅನೇಕ ಪ್ರಿಯತಮರಿದ್ದಾರೆ, ಆದರೆ ನೀನು ಆಕೆಯನ್ನು ಪ್ರೀತಿ ಮಾಡುತ್ತಲೇ ಇರಬೇಕು. ಯಾಕೆಂದರೆ ಅದು ಯೆಹೋವನ ರೀತಿ. ಯೆಹೋವನು ಇಸ್ರೇಲ್ ಜನರನ್ನು ಪ್ರೀತಿಸುತ್ತಲೇ ಇದ್ದಾನೆ. ಆದರೆ ಅವರು ಅನ್ಯದೇವರುಗಳನ್ನು ಆರಾಧಿಸುತ್ತಲೇ ಇದ್ದಾರೆ. ಅವರು ಒಣದ್ರಾಕ್ಷಿಯ ಉಂಡೆಗಳನ್ನು ತಿನ್ನಲು ಆಶಿಸುತ್ತಾರೆ.”

ನಾನು ಹದಿನೈದು ತುಂಡು ಬೆಳ್ಳಿಯನ್ನೂ ಒಂಭತ್ತು ಕ್ವಿಂಟಾಲ್ ಜವೆಗೋಧಿಯನ್ನೂ ಕೊಟ್ಟು ಆಕೆಯನ್ನು ಕೊಂಡುಕೊಂಡೆನು. ಬಳಿಕ ನಾನು ಆಕೆಗೆ, “ನೀನು ನನ್ನೊಂದಿಗೆ ಅನೇಕ ದಿನಗಳವರೆಗೆ ಮನೆಯೊಳಗೆ ಇರಬೇಕು. ನೀನು ವೇಶ್ಯೆಯಂತಿರಬಾರದು. ನೀನು ಪರಪುರುಷನೊಡನೆ ಇರಬಾರದು. ನಾನೇ ನಿನ್ನ ಗಂಡನಾಗಿರುವೆನು” ಎಂದು ಹೇಳಿದೆನು.

ಅದೇ ರೀತಿಯಲ್ಲಿ, ಇಸ್ರೇಲಿನ ಜನರು ಬಹಳ ದಿವಸಗಳ ತನಕ ಅರಸನಾಗಲಿ ಅಧಿಪತಿಯಾಗಲಿ ಇಲ್ಲದೆ ಇರುವರು. ಅವರು ಯಜ್ಞವಿಲ್ಲದೆ ಇರುವರು, ಸ್ಮಾರಕಸ್ತಂಭಗಳೂ ಇರುವದಿಲ್ಲ. ಅವರಲ್ಲಿ ಏಫೋದ್ ಇರುವದಿಲ್ಲ; ಅಲ್ಲದೆ ಮನೆದೇವತೆಯೂ ಇರುವದಿಲ್ಲ. ಹೀಗೆ ಇದ್ದ ಬಳಿಕ ಇಸ್ರೇಲರು ಹಿಂತಿರುಗಿ ಬರುವರು. ಆಗ ಅವರು ತಮ್ಮ ದೇವರಾದ ಯೆಹೋವನನ್ನೂ ಅವರ ಅರಸನಾದ ದಾವೀದನನ್ನೂ ಹುಡುಕುವರು. ಕೊನೆಯ ದಿವಸಗಳಲ್ಲಿ ತಮ್ಮ ದೇವರಾದ ಯೆಹೋವನನ್ನೂ ಆತನ ಒಳ್ಳೆಯತನವನ್ನೂ ಗೌರವಿಸಲು ಬರುವರು.

ಇಸ್ರೇಲರ ಮೇಲೆ ಯೆಹೋವನು ಕೋಪಗೊಂಡಿದ್ದಾನೆ

ಇಸ್ರೇಲ್ ಜನರೇ, ಯೆಹೋವನ ಮಾತಿಗೆ ಕಿವಿಗೊಡಿರಿ! ಈ ದೇಶದಲ್ಲಿ ವಾಸಿಸುವ ಜನರ ವಿರುದ್ಧವಾಗಿ ಯೆಹೋವನು ತನ್ನ ವಾದವನ್ನು ಅವರ ಮುಂದಿಡುತ್ತಾನೆ. “ಈ ದೇಶದಲ್ಲಿರುವ ಜನರು ಯೆಹೋವನನ್ನು ನಿಜವಾಗಿಯೂ ತಿಳಿದಿಲ್ಲ. ಅವರು ಯೆಹೋವನಿಗೆ ಸತ್ಯವಂತರೂ ಅಲ್ಲ. ನಿಷ್ಠಾವಂತರೂ ಅಲ್ಲ. ಜನರು ಆಣೆ ಇಟ್ಟುಕೊಳ್ಳುತ್ತಾರೆ, ಸುಳ್ಳನ್ನಾಡುತ್ತಾರೆ, ಕೊಲೆ ಮಾಡುತ್ತಾರೆ ಮತ್ತು ಸೂರೆ ಮಾಡುತ್ತಾರೆ. ಅವರು ವ್ಯಭಿಚಾರವೆಂಬ ಪಾಪಗಳನ್ನು ಮಾಡುತ್ತಾರೆ. ಆದ್ದರಿಂದ ಅವರು ಮಕ್ಕಳನ್ನು ಹುಟ್ಟಿಸುತ್ತಾರೆ. ಜನರು ತಿರುಗಿತಿರುಗಿ ಕೊಲೆ ಮಾಡುತ್ತಾರೆ. ಹೀಗೆ ದೇಶವು ಸತ್ತವರಿಗಾಗಿ ಗೋಳಾಡುವ ಮನುಷ್ಯನಂತಿರುವದು. ಆದ್ದರಿಂದ ಅದರ ಜನರೆಲ್ಲಾ ಬಲಹೀನರಾಗತ್ತಾರೆ. ಅಡವಿಯಲ್ಲಿರುವ ಪ್ರಾಣಿಗಳೂ ಆಕಾಶದ ಪಕ್ಷಿಗಳೂ ಸಮುದ್ರದಲ್ಲಿರುವ ಮೀನುಗಳೂ ಸಾಯುತ್ತಿವೆ. ಯಾರೂ ಪರಸ್ಪರ ವಾದಿಸದೆ ತಪ್ಪು ಹೊರಿಸದೆ ಇರಬೇಕು. ಯಾಜಕರೇ, ನಿಮ್ಮೊಂದಿಗೆ ನಾನು ವಾದಿಸುತ್ತೇನೆ. ನೀವು (ಯಾಜಕರು) ಹಗಲಿನಲ್ಲಿ ಬಿದ್ದುಹೋಗುವಿರಿ. ರಾತ್ರಿ ಹೊತ್ತಿನಲ್ಲಿ ಪ್ರವಾದಿಗಳೂ ನಿಮ್ಮ ಜೊತೆಗೆ ಬೀಳುವರು ಮತ್ತು ನಾನು ನಿಮ್ಮ ತಾಯಿಯನ್ನು ಸಹ ನಾಶಮಾಡುವೆನು.

“ನನ್ನ ಜನರು ಅಜ್ಞಾನಿಗಳಾಗಿರುವುದರಿಂದ ಅವರು ನಾಶವಾಗುವರು, ನೀವು ಕಲಿಯಲು ನಿರಾಕರಿಸುತ್ತೀರಿ. ಆದ್ದರಿಂದ ನೀವು ನನ್ನ ಯಾಜಕರಾಗಿರಲು ನಾನು ನಿರಾಕರಿಸುತ್ತೇನೆ. ನಿಮ್ಮ ದೇವರ ಕಟ್ಟಳೆಗಳನ್ನು ನೀವು ಮರೆತುಬಿಟ್ಟಿರುವಿರಿ. ಆದ್ದರಿಂದ ನಾನು ನಿಮ್ಮ ಮಕ್ಕಳನ್ನು ಮರೆತುಬಿಡುವೆನು. ಅವರು ಅಹಂಕಾರಿಗಳಾದರು. ನನ್ನ ವಿರುದ್ಧವಾಗಿ ಹೆಚ್ಚೆಚ್ಚಾಗಿ ಪಾಪ ಮಾಡಿದರು. ಆದ್ದರಿಂದ ಅವರ ಗೌರವವನ್ನು ನಾನು ಲಜ್ಜಾಸ್ಪದವನ್ನಾಗಿ ಮಾಡುವೆನು.

“ಜನರ ಪಾಪದೊಂದಿಗೆ ಯಾಜಕರೂ ಒಂದಾದರು, ಅವರು ಹೆಚ್ಚುಹೆಚ್ಚು ಪಾಪಗಳನ್ನು ಮಾಡಲು ಆಶಿಸಿದರು. ಯಾಜಕರು ಸಾಮಾನ್ಯ ಜನರಿಂದ ಬೇರೆ ಆಗಿರಲಿಲ್ಲ. ಅವರು ಮಾಡಿದ ಪಾಪಗಳಿಗಾಗಿ ಅವರನ್ನು ನಾನು ಶಿಕ್ಷಿಸುವೆನು. ಕೆಟ್ಟ ಕೆಲಸವನ್ನು ಮಾಡಿದ್ದಕ್ಕೆ ಅವರಿಗೆ ಪ್ರತಿಫಲ ಕೊಡುವೆನು. 10 ಅವರು ತಿನ್ನುವರು ಆದರೆ ಅವರು ತೃಪ್ತಿಹೊಂದುವದಿಲ್ಲ. ಅವರು ಲೈಂಗಿಕಪಾಪ ಮಾಡುವರು ಆದರೆ ಅವರಿಗೆ ಮಕ್ಕಳಾಗುವದಿಲ್ಲ. ಕಾರಣವೇನೆಂದರೆ ಅವರು ಯೆಹೋವನನ್ನು ತೊರೆದು ವೇಶ್ಯೆಯರಂತೆ ವರ್ತಿಸಿದರು.

11 “ಲೈಂಗಿಕಪಾಪ, ಗಡುಸಾದ ಮದ್ಯ ಮತ್ತು ಹೊಸ ದ್ರಾಕ್ಷಾರಸ ಇವುಗಳಿಂದ ವಿಚಾರಪ್ರಜ್ಞೆಯನ್ನು ಕಳೆದುಕೊಳ್ಳುವರು. 12 ನನ್ನ ಜನರು ಮರದ ತುಂಡುಗಳಿಂದ ಸಲಹೆಗಳನ್ನು ಕೇಳುವರು. ಆ ಮರದ ತುಂಡುಗಳು ಅವರಿಗೆ ಉತ್ತರಿಸುವವು ಎಂದು ಅವರು ನೆನಸುತ್ತಾರೆ. ಯಾಕೆಂದರೆ, ವೇಶ್ಯೆಯರಂತೆ ಅವರು ಆ ಸುಳ್ಳು ದೇವರುಗಳನ್ನು ಹಿಂದಟ್ಟಿಕೊಂಡು ಹೋಗುವರು. ಅವರು ತಮ್ಮ ದೇವರುಗಳನ್ನು ಬಿಟ್ಟು ವೇಶ್ಯೆಯರಂತೆ ವರ್ತಿಸುತ್ತಾರೆ. 13 ಅವರು ಪರ್ವತ ಶಿಖರಗಳ ಮೇಲೆ ಯಜ್ಞಗಳನ್ನರ್ಪಿಸುತ್ತಾರೆ; ಬೆಟ್ಟಗಳ ಮೇಲೆಯೂ ಓಕ್, ಪಾಪಲಾರ್ ಮತ್ತು ಏಲ್ಮ್ ಮರಗಳಡಿಗಳಲ್ಲಿಯೂ ಧೂಪ ಹಾಕುತ್ತಾರೆ. ಆ ಮರಗಳ ನೆರಳು ದಟ್ಟವಾಗಿರುವದು. ಆದ್ದರಿಂದ ನಿಮ್ಮ ಹೆಣ್ಣುಮಕ್ಕಳು ವೇಶ್ಯೆಯರಂತೆ ಅದರಡಿಯಲ್ಲಿ ಮಲಗುವರು. ನಿಮ್ಮ ಸೊಸೆಯಂದಿರು ಲೈಂಗಿಕಪಾಪದಲ್ಲಿ ಮಗ್ನರಾಗಿರುವರು.

14 “ನಿಮ್ಮ ಹೆಣ್ಣುಮಕ್ಕಳು ಸೂಳೆತನ ಮಾಡುವದಕ್ಕಾಗಲಿ ನಿಮ್ಮ ಸೊಸೆಯರು ಲೈಂಗಿಕಪಾಪ ಮಾಡುವದಕ್ಕಾಗಲಿ ನಾನು ಅವರನ್ನು ದೂರುವದಿಲ್ಲ. ಗಂಡಸರು ವೇಶ್ಯೆಯರೊಂದಿಗೆ ಮಲಗುವರು. ಅವರು ಮಂದಿರದ ವೇಶ್ಯೆಯರೊಂದಿಗೆ ಯಜ್ಞವನ್ನರ್ಪಿಸುವರು. ಹೀಗೆ ಆ ಬುದ್ಧಿಯಿಲ್ಲದ ಜನರು ತಮ್ಮನ್ನು ತಾವೇ ನಾಶಮಾಡಿಕೊಳ್ಳುತ್ತಾರೆ.

ಇಸ್ರೇಲಿನ ಲಜ್ಜಾಸ್ಪದವಾದ ಪಾಪಗಳು

15 “ಇಸ್ರೇಲೇ, ನೀನು ಸೂಳೆಯಂತೆ ವರ್ತಿಸುತ್ತೀ. ಆದರೆ ಯೆಹೂದವನ್ನು ತಪ್ಪಿತಸ್ಥಳನ್ನಾಗಿ ಮಾಡಬೇಡ. ಗಿಲ್ಗಾಲಿಗಾಗಲಿ ಬೇತಾವೆನಿಗಾಗಲಿ ಹೋಗದಿರು. ಯೆಹೋವನ ಮೇಲೆ ಆಣೆ ಇಡಬೇಡ. ‘ಯೆಹೋವನಾಣೆ’ ಎಂದು ಹೇಳಬೇಡ. 16 ಇಸ್ರೇಲಿಗೆ ಅನೇಕ ಸಂಗತಿಗಳನ್ನು ಯೆಹೋವನು ಕೊಟ್ಟಿರುತ್ತಾನೆ. ಆತನು ಕುರಿಗಳನ್ನು ವಿಶಾಲವಾದ ಮತ್ತು ಹುಲುಸಾದ ಹುಲ್ಲುಗಾವಲಿಗೆ ಒಯ್ಯುವ ಕುರುಬನಂತಿದ್ದಾನೆ. ಆದರೆ ಇಸ್ರೇಲ್ ಹಠಮಾರಿಯಾಗಿರುತ್ತದೆ. ಬಾರಿಬಾರಿಗೆ ಹೊರಗೆ ಓಡುವ ಯೌವನ ಹಸುವಿನಂತಿದೆ.

17 “ಅವನ ವಿಗ್ರಹಗಳೊಂದಿಗೆ ಎಫ್ರಾಯೀಮು ಸೇರಿರುತ್ತಾನೆ. ಆದ್ದರಿಂದ ಅವನನ್ನು ಸುಮ್ಮನೆ ಬಿಟ್ಟುಬಿಡು. 18 ಅವರು ಅಮಲೇರಿದ ಮೇಲೆ ಸೂಳೆಯರಂತೆ ವರ್ತಿಸುತ್ತಾರೆ. ಅವರು ಲಂಚವನ್ನು ಪ್ರೀತಿಸುತ್ತಾರೆ ಮತ್ತು ಲಂಚಕೊಡುವಂತೆ ಒತ್ತಾಯ ಮಾಡುತ್ತಾರೆ. ಆ ಅಧಿಪತಿಗಳು ತಮ್ಮ ಜನರ ಮೇಲೆ ಅಪಮಾನ ಬರಮಾಡುತ್ತಾರೆ. 19 ಅವರು ತಮ್ಮ ಭಧ್ರತೆಗಾಗಿ ಆ ದೇವರುಗಳ ಬಳಿಗೆ ಹೋದರು ಮತ್ತು ತಮ್ಮ ಯೋಚನೆ ಮಾಡುವ ಶಕ್ತಿಯನ್ನೇ ಕಳಕೊಂಡರು. ಅವರ ಧೂಪಹೋಮಗಳೇ ಅವರನ್ನು ನಾಚಿಕೆಗೆ ಗುರಿಪಡಿಸುವವು.”

ಪ್ರಕಟನೆ 1

ಪೀಠಿಕೆ

ಇದು ಯೇಸು ಕ್ರಿಸ್ತನ ಪ್ರಕಟನೆ. ದೇವರು ಬೇಗನೆ ಸಂಭವಿಸಲಿರುವುದನ್ನು ತನ್ನ ಸೇವಕರಿಗೆ ತೋರ್ಪಡಿಸುವುದಕ್ಕಾಗಿ ಯೇಸುವಿಗೆ ಇವುಗಳನ್ನು ಪ್ರಕಟಿಸಿದನು. ಕ್ರಿಸ್ತನು ತನ್ನ ಸೇವಕನಾದ ಯೋಹಾನನಿಗೆ ಇವುಗಳನ್ನು ತೋರಿಸಲು ತನ್ನ ದೂತನನ್ನು ಕಳುಹಿಸಿದನು. ಯೋಹಾನನು ತಾನು ಕಂಡದ್ದೆಲ್ಲವನ್ನು ತಿಳಿಸಿದನು. ಇದು ಯೇಸು ಕ್ರಿಸ್ತನು ಅವನಿಗೆ ಹೇಳಿದ ಸತ್ಯ. ಇದು ದೇವರಿಂದ ಬಂದ ಸಂದೇಶ. ದೇವರಿಂದ ಬಂದ ಈ ಸಂದೇಶದ ವಾಕ್ಯಗಳನ್ನು ಓದುವವರೂ ಈ ಸಂದೇಶವನ್ನು ಕೇಳಿ ಅದನ್ನು ಕೈಕೊಂಡು ನಡೆಯುವವರೂ ಭಾಗ್ಯವಂತರಾಗಿದ್ದಾರೆ. ಏಕೆಂದರೆ ನೆರವೇರುವ ಕಾಲವು ಸಮೀಪವಾಗಿದೆ.

ಯೋಹಾನನು ಸಭೆಗಳಿಗೆ ಬರೆದ ಯೇಸುವಿನ ಸಂದೇಶ

ಏಷ್ಯಾ[a] ಪ್ರದೇಶದಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನೆಂದರೆ:

ವರ್ತಮಾನ, ಭೂತ, ಭವಿಷ್ಯತ್ಕಾಲಗಳಲ್ಲಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ. ಯೇಸು ನಂಬಿಗಸ್ತ ಸಾಕ್ಷಿಯಾಗಿದ್ದಾನೆ. ಸತ್ತವರೊಳಗಿಂದ ಮೇಲೆದ್ದು ಬಂದವರಲ್ಲಿ ಆತನೇ ಮೊದಲಿಗನಾಗಿದ್ದಾನೆ. ಆತನು ಲೋಕದ ರಾಜರುಗಳಿಗೆ ಅಧಿಪತಿಯಾಗಿದ್ದಾನೆ.

ಯೇಸು ನಮ್ಮನ್ನು ಪ್ರೀತಿಸುತ್ತಾನೆ. ಆತನು ತನ್ನ ರಕ್ತದಿಂದ (ಮರಣ) ನಮ್ಮ ಪಾಪಗಳನ್ನು ನಿವಾರಿಸಿ ಬಿಡುಗಡೆಗೊಳಿಸಿದನು; ನಮ್ಮನ್ನು ಒಂದು ರಾಜ್ಯವನ್ನಾಗಿ ಮಾಡಿ ನಮ್ಮನ್ನು ತನ್ನ ತಂದೆಯಾದ ದೇವರ ಸೇವೆ ಮಾಡುವ ಯಾಜಕರನ್ನಾಗಿ ಮಾಡಿದನು. ಯೇಸುವಿಗೆ ಎಂದೆಂದಿಗೂ ಮಹಿಮೆ ಪ್ರಭಾವಗಳಿರಲಿ! ಆಮೆನ್.

ಇಗೋ, ಯೇಸು ಮೋಡಗಳ ಸಂಗಡ ಬರುತ್ತಿದ್ದಾನೆ. ಪ್ರತಿಯೊಬ್ಬರು ಆತನನ್ನು ನೋಡುವರು, ಆತನನ್ನು ಇರಿದವರು[b] ಸಹ ನೋಡುವರು. ಆತನನ್ನು ಕಂಡು ಲೋಕದ ಜನರೆಲ್ಲರೂ ಎದೆಬಡಿದುಕೊಂಡು ಗೋಳಾಡುವರು. ಹೌದು, ಇದು ಸಂಭವಿಸುತ್ತದೆ! ಆಮೆನ್.

ಪ್ರಭುವಾದ ದೇವರು ಹೇಳುವುದೇನೆಂದರೆ: “ನಾನೇ ಆದಿಯೂ ಅಂತ್ಯವೂ[c] ಆಗಿದ್ದೇನೆ. ನಾನು ವರ್ತಮಾನ, ಭೂತ ಮತ್ತು ಭವಿಷ್ಯತ್ ಕಾಲಗಳಲ್ಲಿರುವಾತನು. ನಾನೇ ಸರ್ವಶಕ್ತನು.”

ಯೋಹಾನನೆಂಬ ನಾನು ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿದ್ದೇನೆ. ನಾವೆಲ್ಲರೂ ಒಟ್ಟಾಗಿ ಯೇಸುವಿನ ನಿಮಿತ್ತ ಸಂಕಟಗಳಲ್ಲಿಯೂ ರಾಜ್ಯದಲ್ಲಿಯೂ ತಾಳ್ಮೆಯಲ್ಲಿಯೂ ಪಾಲುಗಾರರಾಗಿದ್ದೇವೆ. ನಾನು ದೇವರ ಸಂದೇಶಕ್ಕೂ ಯೇಸುವಿನ ಸತ್ಯಕ್ಕೂ ನಂಬಿಗಸ್ತನಾಗಿದ್ದುದರಿಂದ ಪತ್ಮೊಸ್ ದ್ವೀಪದಲ್ಲಿದ್ದೆನು. 10 ಪ್ರಭುವಿನ ದಿನದಂದು ಪವಿತ್ರಾತ್ಮನು ನನ್ನನ್ನು ವಶಪಡಿಸಿಕೊಂಡನು. ಆಗ ನನ್ನ ಹಿಂಭಾಗದಲ್ಲಿ ಒಂದು ಮಹಾಶಬ್ದವನ್ನು ಕೇಳಿದೆನು. ಆ ಶಬ್ದವು ತುತೂರಿಯ ಧ್ವನಿಯಂತಿತ್ತು. 11 ಆ ಧ್ವನಿಯು, “ನೀನು ನೋಡುವುದನ್ನೆಲ್ಲ ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ ಮತ್ತು ಲವೊದಿಕೀಯ ಎಂಬ ಏಳು ಸಭೆಗಳಿಗೆ ಕಳುಹಿಸು” ಎಂದು ಹೇಳಿತು.

12 ನನ್ನ ಜೊತೆಯಲ್ಲಿ ಯಾರು ಮಾತನಾಡುತ್ತಿದ್ದಾರೆಂದು ನೋಡಲು ನಾನು ಹಿಂದಕ್ಕೆ ತಿರುಗಿದಾಗ, ಏಳು ಬಂಗಾರದ ದೀಪಸ್ತಂಭಗಳನ್ನು ಕಂಡೆನು. 13 ಆ ದೀಪಸ್ತಂಭಗಳ ಮಧ್ಯದಲ್ಲಿ “ಮನುಷ್ಯಕುಮಾರ”ನಂತೆ[d] ಇರುವಾತನನ್ನು ನಾನು ನೋಡಿದೆನು. ಆತನು ಉದ್ದನೆಯ ನಿಲುವಂಗಿಯನ್ನು ಧರಿಸಿದ್ದನು; ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. 14 ಆತನ ತಲೆಕೂದಲು ಮಂಜಿನಂತೆಯೂ ಉಣ್ಣೆಯಂತೆಯೂ ಬೆಳ್ಳಗಿದ್ದವು; ಕಣ್ಣುಗಳು ಬೆಂಕಿಯ ಜ್ವಾಲೆಯಂತಿದ್ದವು; 15 ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತಿದ್ದವು; ಧ್ವನಿಯು ಹರಿಯುವ ನೀರಿನ ಘೋಷದಂತಿತ್ತು. 16 ಆತನು ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದುಕೊಂಡಿದ್ದನು. ಆತನ ಬಾಯೊಳಗಿನಿಂದ ಹರಿತವಾದ ಇಬ್ಬಾಯಿಖಡ್ಗವು ಹೊರಬರುತ್ತಿತ್ತು. ಆತನ ಮುಖವು ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು.

17 ನಾನು ಆತನನ್ನು ನೋಡಿದಾಗ, ಆತನ ಪಾದಗಳ ಬಳಿ ಸತ್ತವನಂತೆ ಕುಸಿದುಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, “ಹೆದರಬೇಡ! ನಾನೇ ಆದಿ ಮತ್ತು ಅಂತ್ಯ. 18 ನಾನೇ ಜೀವಿಸುವಾತನು. ನಾನು ಸತ್ತೆನು, ಆದರೆ ಇಗೋ ನೋಡು, ನಾನು ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿದ್ದೇನೆ. ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿವೆ. 19 ಆದ್ದರಿಂದ ನೀನು ನೋಡಿದ ಸಂಗತಿಗಳನ್ನು ಬರೆ. ಈಗ ಸಂಭವಿಸುವ ಸಂಗತಿಗಳನ್ನು ಮತ್ತು ಮುಂದೆ ಸಂಭವಿಸಬೇಕಾದ ಸಂಗತಿಗಳನ್ನು ಬರೆ. 20 ನನ್ನ ಬಲಗೈಯಲ್ಲಿ ನೀನು ನೋಡಿದ ಏಳು ನಕ್ಷತ್ರಗಳ ಮತ್ತು ನೀನು ಕಂಡ ಏಳು ಬಂಗಾರದ ದೀಪಸ್ತಂಭಗಳ ಗೂಢಾರ್ಥವು ಹೀಗಿದೆ: ಏಳು ನಕ್ಷತ್ರಗಳೆಂದರೆ ಏಳು ಸಭೆಗಳ ದೂತರು. ಏಳು ದೀಪಸ್ತಂಭಗಳೆಂದರೆ ಏಳು ಸಭೆಗಳು.” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International