Old/New Testament
ದಾನಿಯೇಲನು ಕನಸಿನಲ್ಲಿ ಕಂಡ ಟಗರು ಮತ್ತು ಹೋತ
8 ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ದಾನಿಯೇಲನೆಂಬ ನಾನು ಈ ದರ್ಶನವನ್ನು ಕಂಡೆನು. ಇದು ಮೊದಲಿನ ದರ್ಶನದ ತರುವಾಯ ಕಂಡದ್ದು. 2 ಈ ದರ್ಶನದಲ್ಲಿ ನಾನು ಶೂಷನ್ ನಗರದಲ್ಲಿದ್ದೆನು. ಶೂಷನ್ ನಗರವು ಏಲಾಮ್ ಸಂಸ್ಥಾನದ ರಾಜಧಾನಿಯಾಗಿತ್ತು. ನಾನು ಊಲಾ ನದಿಯ ದಡದ ಮೇಲೆ ನಿಂತುಕೊಂಡಿದ್ದೆನು. 3 ನಾನು ಕಣ್ಣೆತ್ತಿ ನೋಡಲಾಗಿ ಊಲಾ ನದಿಯ ಪಕ್ಕದಲ್ಲಿ ನಿಂತುಕೊಂಡಿದ್ದ ಟಗರೊಂದು ನನ್ನ ಕಣ್ಣಿಗೆ ಬಿತ್ತು. ಟಗರಿಗೆ ಎರಡು ಉದ್ದವಾದ ಕೊಂಬುಗಳಿದ್ದವು. ಆ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದು ಕೊಂಬು ಇನ್ನೊಂದು ಕೊಂಬಿಗಿಂತ ಉದ್ದವಾಗಿತ್ತು. ಉದ್ದವಾದ ಕೊಂಬು ಇನ್ನೊಂದು ಕೊಂಬಿಗಿಂತ ಹಿಂದಕ್ಕೆ ಇತ್ತು. 4 ಆ ಟಗರು ತನ್ನ ಕೊಂಬುಗಳಿಂದ ಎಲ್ಲ ಕಡೆಗೂ ಹಾಯುತ್ತಿತ್ತು. ಆ ಟಗರು ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಜಿಗಿದಾಡುತ್ತಿತ್ತು. ಯಾವ ಪ್ರಾಣಿಗೂ ಆ ಟಗರನ್ನು ತಡೆಯಲಾಗಲಿಲ್ಲ. ಮಿಕ್ಕ ಪ್ರಾಣಿಗಳನ್ನು ರಕ್ಷಿಸುವುದು ಯಾರಿಂದಲೂ ಆಗಲಿಲ್ಲ. ಆ ಟಗರು ತನ್ನ ಮನಸ್ಸಿಗೆ ಬಂದಂತೆ ಮಾಡಲು ಸಾಧ್ಯವಾಯಿತು. ಆ ಟಗರು ಬಹಳ ಪ್ರಬಲವಾಯಿತು.
5 ನಾನು ಈ ಟಗರಿನ ಬಗ್ಗೆ ಯೋಚಿಸಿದೆ. ನಾನು ಯೋಚನೆ ಮಾಡುತ್ತಿರುವಾಗಲೇ ಪಶ್ಚಿಮ ದಿಕ್ಕಿನಿಂದ ಒಂದು ಹೋತವು ಬರುವುದನ್ನು ಕಂಡೆ. ಈ ಹೋತವು ಇಡೀ ಭೂಮಂಡಲದ ಮೇಲೆಲ್ಲಾ ಓಡಾಡಿತು. ಅದು ತನ್ನ ಕಾಲುಗಳು ನೆಲಕ್ಕೆ ಸೋಕದಂತೆ ಓಡುತ್ತಿತ್ತು. ಈ ಹೋತಕ್ಕೆ ಎದ್ದುಕಾಣುವ ಒಂದು ದೊಡ್ಡ ಕೊಂಬು ಇತ್ತು. ಆ ಕೊಂಬು ಸರಿಯಾಗಿ ಆ ಹೋತದ ಎರಡು ಕಣ್ಣುಗಳ ಮಧ್ಯದಲ್ಲಿತ್ತು.
6 ಆ ಹೋತವು ಟಗರಿನ ಹತ್ತಿರಕ್ಕೆ ಬಂದಿತು. ನಾನು ಊಲಾ ನದಿಯ ದಡದ ಮೇಲೆ ನೋಡಿದ ಟಗರೇ ಇದಾಗಿತ್ತು. ಆ ಹೋತಕ್ಕೆ ಬಹಳ ಕೋಪ ಬಂದಿತ್ತು; ಅದು ವೇಗದಿಂದ ಟಗರಿನ ಕಡೆಗೆ ಓಡಿತು. 7 ಹೋತವು ಟಗರಿನ ಕಡೆಗೆ ಓಡುವದನ್ನು ನಾನು ನೋಡುತ್ತಿದ್ದೆ. ಅದು ಅತಿ ಕೋಪದಿಂದ ಟಗರಿನ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು. ಟಗರಿಗೆ ಆ ಹೋತವನ್ನು ತಡೆದು ನಿಲ್ಲಿಸಲಾಗಲಿಲ್ಲ. ಆ ಹೋತವು ಟಗರನ್ನು ನೆಲಕ್ಕೆ ಉರುಳಿಸಿ ತುಳಿದುಹಾಕಿತು. ಟಗರನ್ನು ಹೋತದಿಂದ ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ.
8 ಹೋತವು ಬಹಳ ಪ್ರಬಲವಾಯಿತು. ಆದರೆ ಅದು ಪ್ರಾಬಲ್ಯಕ್ಕೆ ಬಂದಾಗಲೇ ಅದರ ದೊಡ್ಡ ಕೊಂಬು ಮುರಿದುಹೋಯಿತು. ಆ ಒಂದು ದೊಡ್ಡ ಕೊಂಬು ಇದ್ದ ಸ್ಥಳದಲ್ಲಿ ನಾಲ್ಕು ಕೊಂಬುಗಳು ಮೊಳೆತವು. ಆ ಕೊಂಬುಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಆ ನಾಲ್ಕು ಕೊಂಬುಗಳು ನಾಲ್ಕು ಬೇರೆಬೇರೆ ದಿಕ್ಕುಗಳಲ್ಲಿ ಚಾಚಿಕೊಂಡವು.
9 ಆಗ ಅವುಗಳಿಂದ ಒಂದು ಚಿಕ್ಕ ಕೊಂಬು ಮೊಳೆಯಿತು. ಆ ಚಿಕ್ಕ ಕೊಂಬು ಬೆಳೆದು ಬಹಳ ದೊಡ್ಡದಾಯಿತು. ಅದು ಆಗ್ನೇಯಕ್ಕೆ ಬೆಳೆಯಿತು. ಅದು ದಕ್ಷಿಣಕ್ಕೆ, ಪೂರ್ವಕ್ಕೆ ಮತ್ತು ಸುಂದರವಾದ ನಾಡಿಗೆ ಬೆಳೆಯಿತು. 10 ಆ ಚಿಕ್ಕ ಕೊಂಬು ಬಹಳ ದೊಡ್ಡದಾಯಿತು. ಅದು ಆಕಾಶಕ್ಕೆ ಮುಟ್ಟುವಂತೆ ಬೆಳೆಯಿತು. ಆ ಚಿಕ್ಕ ಕೊಂಬು ಆಕಾಶದ ಕೆಲವು ನಕ್ಷತ್ರಗಳನ್ನು ನೆಲಕ್ಕೆ ಬೀಳಿಸಿತು ಮತ್ತು ಎಲ್ಲ ನಕ್ಷತ್ರಗಳ ಮೇಲೆ ಹತ್ತಿತ್ತು. 11 ಆ ಚಿಕ್ಕ ಕೊಂಬು ಅತಿ ಪ್ರಬಲವಾಯಿತು ಮತ್ತು ನಕ್ಷತ್ರಾಧಿಪತಿಯನ್ನು (ದೇವರನ್ನು) ವಿರೋಧಿಸತೊಡಗಿತು. ಆ ಚಿಕ್ಕ ಕೊಂಬು ನಕ್ಷತ್ರಾಧಿಪತಿಗೆ ನಿತ್ಯಹೋಮಗಳು ಸಲ್ಲದಂತೆ ಮಾಡಿತು. ಜನರು ನಕ್ಷತ್ರಾಧಿಪತಿಯನ್ನು ಪೂಜಿಸುವ ಸ್ಥಳವನ್ನು ಕೆಡವಿಬಿಟ್ಟಿತು. 12 ಆ ಚಿಕ್ಕ ಕೊಂಬು ನಿತ್ಯಹೋಮಗಳನ್ನು ತಡೆಯುವ ಪಾಪವನ್ನು ಮಾಡಿತು. ಅದು ಒಳ್ಳೆಯತನವನ್ನು (ಸತ್ಯ, ಧರ್ಮವನ್ನು) ನೆಲಕ್ಕೆ ತಳ್ಳಿತು. ಇದೆಲ್ಲವನ್ನು ಮಾಡಿ ಆ ಚಿಕ್ಕ ಕೊಂಬು ತನ್ನ ಇಷ್ಟಾರ್ಥವನ್ನು ಸಾಧಿಸುವದರಲ್ಲಿ ಜಯ ಪಡೆಯಿತು.
13 ಆಗ ಒಬ್ಬ ಪವಿತ್ರನು[a] ಮಾತನಾಡುವದನ್ನು ಕೇಳಿದೆ. ಮತ್ತೊಬ್ಬ ಪವಿತ್ರನು ಮೊದಲನೆಯ ಪವಿತ್ರನಿಗೆ ಉತ್ತರಿಸುವದನ್ನೂ ಕೇಳಿದೆ. ಮೊದಲನೆಯ ಪವಿತ್ರನು, “ಈ ದರ್ಶನ ನಿತ್ಯಹೋಮಗಳಿಗೆ ಏನಾಗುವದೆಂಬುದನ್ನು ತೋರಿಸುವದು. ಇದು ಆ ಭಯಾನಕ ಪಾಪದ ಕುರಿತಾಗಿದೆ. ಅಧಿಪತಿಯು ಆರಾಧಿಸಲ್ಪಡುವ ಪವಿತ್ರಾಲಯವನ್ನು ಜನರು ಹಾಳುಮಾಡಿದರೆ, ಜನರು ಆ ಸ್ಥಳವನ್ನು ತುಳಿದಾಡಿದರೆ, ಆ ನಕ್ಷತ್ರಗಳ ಮೇಲೆ ಜನರು ನಡೆದಾಡಿದರೆ ಏನಾಗುವದೆಂಬುದನ್ನು ಇದು ತೋರಿಸಿಕೊಡುತ್ತದೆ. ಆದರೆ ಇದೆಲ್ಲ ಎಷ್ಟು ದಿನ ನಡೆಯುವದು?” ಎಂದನು.
14 ಇನ್ನೊಬ್ಬ ಪವಿತ್ರನು, “ಇದೆಲ್ಲಾ ಎರಡು ಸಾವಿರದ ಮುನ್ನೂರು ದಿನಗಳವರೆಗೆ ನಡೆಯುವುದು. ಆಮೇಲೆ ಪವಿತ್ರಾಲಯಕ್ಕೆ ಪುನಃ ನ್ಯಾಯ ಸಿಕ್ಕುವುದು” ಎಂದು ಉತ್ತರಿಸಿದನು.
ದಾನಿಯೇಲನಿಗೆ ದರ್ಶನದ ಅರ್ಥವನ್ನು ವಿವರಿಸಲಾಯಿತು
15 ದಾನಿಯೇಲನೆಂಬ ನಾನು ಈ ದರ್ಶನವನ್ನು ಕಂಡೆ ಮತ್ತು ಅದರ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ನಾನು ಈ ದರ್ಶನದ ಬಗ್ಗೆ ವಿಚಾರ ಮಾಡುತ್ತಿದ್ದಾಗ ಮನುಷ್ಯನಂತಿದ್ದವನೊಬ್ಬನು ನನ್ನ ಎದುರಿಗೆ ನಿಂತಿದ್ದನು. 16 ಆಗ ನಾನು ಮನುಷ್ಯನ ಧ್ವನಿಯನ್ನು ಕೇಳಿದೆ. ಈ ಧ್ವನಿಯು ಊಲಾ ನದಿಯ ಮೇಲಿಂದ ಬಂದಿತು. ಆ ಧ್ವನಿಯು, “ಗಬ್ರಿಯೇಲನೇ, ಕನಸಿನ ಅರ್ಥವನ್ನು ಈ ಮನುಷ್ಯನಿಗೆ ತಿಳಿಸು” ಎಂದು ಆದೇಶ ಕೊಟ್ಟಿತು.
17 ಆಗ ಮನುಷ್ಯನಂತಿದ್ದ ಗಬ್ರಿಯೇಲನು ನಾನು ನಿಂತಲ್ಲಿಗೆ ಬಂದನು. ಅವನು ತೀರ ನನ್ನ ಹತ್ತಿರಕ್ಕೆ ಬಂದಾಗ ನನಗೆ ಬಹಳ ಭಯವಾಯಿತು. ನಾನು ನೆಲಕ್ಕೆ ಬಿದ್ದೆ. ಆದರೆ ಗಬ್ರಿಯೇಲನು ನನಗೆ, “ಮನುಷ್ಯನೇ, ಈ ದರ್ಶನ ಅಂತ್ಯಕಾಲದ ಕುರಿತಾಗಿದೆ ಎಂಬುದು ನಿನಗೆ ತಿಳಿದಿರಲಿ” ಎಂದು ಹೇಳಿದನು.
18 ಗಬ್ರಿಯೇಲನು ನನ್ನೊಂದಿಗೆ ಮಾತನಾಡುತ್ತಿದ್ದಾಗ ನಾನು ನಿದ್ರಾವಶನಾದೆನು. ಅದು ಬಹಳ ಗಾಢವಾದ ನಿದ್ರೆಯಾಗಿತ್ತು. ನನ್ನ ಮುಖವು ನೆಲದ ಮೇಲೆ ಇತ್ತು. ಆಗ ಗಬ್ರಿಯೇಲನು ನನ್ನನ್ನು ಮುಟ್ಟಿ ಎಬ್ಬಿಸಿ, 19 “ನಾನು ನಿನಗೆ ಈಗ ದರ್ಶನದ ಅರ್ಥವನ್ನು ವಿವರಿಸುತ್ತೇನೆ. ಭವಿಷ್ಯದಲ್ಲಿ ನಡೆಯಲಿರುವುದನ್ನು ನಾನು ನಿನಗೆ ಹೇಳುತ್ತೇನೆ. ನಿನ್ನ ದರ್ಶನವು ಅಂತ್ಯಕಾಲದ ಕುರಿತಾದದ್ದು.
20 “ನೀನು ಎರಡು ಕೊಂಬುಗಳುಳ್ಳ ಒಂದು ಟಗರನ್ನು ನೋಡಿದೆ. ಆ ಕೊಂಬುಗಳು ಮೇದ್ಯಯ ಮತ್ತು ಪಾರಸಿಯ ರಾಜ್ಯಗಳು. 21 ಆ ಹೋತವು ಗ್ರೀಕ್ ರಾಜ್ಯ. ಅದರ ಎರಡು ಕಣ್ಣುಗಳ ಮಧ್ಯದ ಕೊಂಬು ಮೊದಲನೆಯ ಅರಸ. 22 ಆ ಕೊಂಬು ಮುರಿಯಿತು; ಅದರ ಸ್ಥಳದಲ್ಲಿ ನಾಲ್ಕು ಕೊಂಬುಗಳು ಮೊಳೆತವು. ಆ ನಾಲ್ಕು ಕೊಂಬುಗಳು ನಾಲ್ಕು ರಾಜ್ಯಗಳನ್ನು ಸೂಚಿಸುವವು. ಆ ನಾಲ್ಕು ರಾಜ್ಯಗಳು ಮೊದಲನೆಯ ಅರಸನ ರಾಷ್ಟ್ರದಿಂದ ಹುಟ್ಟುವವು. ಆದರೆ ಆ ನಾಲ್ಕು ರಾಜ್ಯಗಳು ಮೊದಲನೆಯ ಅರಸನಷ್ಟು ಶಕ್ತಿಶಾಲಿಯಾಗಿರುವದಿಲ್ಲ.
23 “ಆ ರಾಜ್ಯಗಳ ಅಂತ್ಯಕಾಲ ಸಮೀಪಿಸಿದಾಗ ಒಬ್ಬ ಧೈರ್ಯಶಾಲಿಯಾದ ಮತ್ತು ಕ್ರೂರನಾದ ಅರಸನು ತಲೆದೋರುವನು. ಈ ಅರಸನು ಬಹಳ ಕುತಂತ್ರಿಯಾಗಿರುವನು. ಅಧರ್ಮಿಗಳ ಮತ್ತು ಪಾಪಿಗಳ ಸಂಖ್ಯೆ ಹೆಚ್ಚಾದಾಗ ಇದೆಲ್ಲ ನಡೆಯುವುದು. 24 ಈ ಅರಸನು ಬಹಳ ಪ್ರಬಲನಾಗಿರುವನು. ಆದರೆ ಆ ಪ್ರಾಬಲ್ಯ ಸ್ವಶಕ್ತಿಯಿಂದ ಬಂದುದಲ್ಲ. ಈ ಅರಸನು ಅಪಾರ ವಿನಾಶವನ್ನುಂಟು ಮಾಡುವನು. ಅವನು ಕೈಕೊಂಡ ಪ್ರತಿಯೊಂದು ಕೆಲಸದಲ್ಲಿ ಅವನಿಗೆ ಜಯ ಲಭಿಸುವುದು. ಅವನು ಬಲಿಷ್ಠರನ್ನೂ ದೇವಭಕ್ತರನ್ನೂ ನಾಶಮಾಡುವನು.
25 “ಅರಸನು ಚತುರನೂ ಕುತಂತ್ರಿಯೂ ಆಗಿರುವನು. ಅವನು ತನ್ನ ಬುದ್ಧಿಶಕ್ತಿಯನ್ನೂ ಹುಸಿನುಡಿಗಳನ್ನೂ ಬಳಸಿಕೊಂಡು ಅಭಿವೃದ್ಧಿ ಹೊಂದುವನು. ತಾನು ಬಹಳ ಮುಖ್ಯನೆಂದು ಅವನು ಭಾವಿಸುವನು. ನೆಮ್ಮದಿಯಾಗಿರುವ ಅನೇಕ ಜನರನ್ನು ಅನಿರೀಕ್ಷಿತವಾಗಿ ನಾಶಮಾಡುವನು. ಅವನು ರಾಜರುಗಳ ರಾಜನೊಂದಿಗೆ (ದೇವರೊಂದಿಗೆ) ಸಹ ಹೋರಾಡುವ ಪ್ರಯತ್ನ ಮಾಡುವನು. ಆದರೆ ಆ ಕ್ರೂರ ರಾಜನ ಶಕ್ತಿಯು ನಾಶವಾಗುವುದು. ಆದರೆ ಅದು ಮನುಷ್ಯನ ಕೈಯಿಂದ ನಾಶವಾಗುವದಿಲ್ಲ.
26 “ಆಗಿನ ಕಾಲದ ಮತ್ತು ಪರಿಸ್ಥಿತಿಯ ಬಗ್ಗೆ ಕಂಡ ದರ್ಶನಗಳು ನಿಜವಾಗುವವು. ಈ ದರ್ಶನ ಗುಟ್ಟಾಗಿರಲಿ. ಅದೆಲ್ಲ ನಡೆಯಬೇಕಾದರೆ ಇನ್ನೂ ಬಹಳ ಕಾಲಬೇಕು” ಎಂದು ಹೇಳಿದನು.
27 ದಾನಿಯೇಲನೆಂಬ ನಾನು ಬಹಳ ಅಶಕ್ತನಾದೆನು. ಆ ದರ್ಶನದ ತರುವಾಯ ಹಲವಾರು ದಿವಸ ನಾನು ಕಾಯಿಲೆ ಬಿದ್ದೆನು. ಆಮೇಲೆ ನಾನು ಗುಣಹೊಂದಿ ರಾಜಕಾರ್ಯವನ್ನು ಪ್ರಾರಂಭಿಸಿದೆನು. ಆದರೆ ಆ ದರ್ಶನದಿಂದ ನನ್ನ ಮನಸ್ಸು ಕಲಕಿತು. ಆ ದರ್ಶನದ ಅರ್ಥವೇನೆಂಬುದು ನನಗೆ ತಿಳಿಯಲಿಲ್ಲ.
ದಾನಿಯೇಲನ ಪ್ರಾರ್ಥನೆ
9 ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಂದು ನಡೆದ ಸಂಗತಿಗಳಿವು: ದಾರ್ಯಾವೆಷನು ಅಹಷ್ವೇರೋಷನೆಂಬವನ ಮಗನು. ದಾರ್ಯವೆಷನು ಮೇದ್ಯಯ ವಂಶದವನು. ಅವನು ಕಸ್ದೀಯ ರಾಜ್ಯದ ದೊರೆಯಾದನು. 2 ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷ ದಾನಿಯೇಲನೆಂಬ ನಾನು ಕೆಲವು ಧರ್ಮಗ್ರಂಥಗಳನ್ನು ಓದುತ್ತಿದ್ದೆ. ಎಪ್ಪತ್ತು ವರ್ಷಗಳ ತರುವಾಯ ಜೆರುಸಲೇಮಿನ ಪುನರ್ನಿರ್ಮಾಣವಾಗುವದೆಂದು ಯೆಹೋವನು ಯೆರೆಮೀಯನಿಗೆ ಹೇಳಿದ್ದು ನನಗೆ ಈ ಧರ್ಮಗ್ರಂಥಗಳಿಂದ ತಿಳಿಯಿತು.
3 ಆಗ ನಾನು ದೇವರಾದ ನನ್ನ ಯೆಹೋವನನ್ನು ಪ್ರಾರ್ಥಿಸಿದೆ ಮತ್ತು ಆತನ ಸಹಾಯವನ್ನು ಕೋರಿದೆ. ನಾನು ಯಾವ ಆಹಾರವನ್ನೂ ಸ್ವೀಕರಿಸಲಿಲ್ಲ ಮತ್ತು ದುಃಖಸೂಚಕವಾದ ವಸ್ತ್ರಗಳನ್ನು ಧರಿಸಿಕೊಂಡೆ. ನನ್ನ ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡೆ. 4 ನಾನು ಯೆಹೋವನಾದ ನನ್ನ ದೇವರನ್ನು ಪ್ರಾರ್ಥಿಸಿದೆ. ನಾನು ನನ್ನ ಎಲ್ಲ ಪಾಪಗಳ ಬಗ್ಗೆ ಆತನಿಗೆ ಹೇಳಿದೆ. ನಾನು,
“ಯೆಹೋವನೇ, ನೀನು ಭಯಂಕರನಾಗಿರುವೆ. ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳನ್ನು ಅನುಸರಿಸುವವರಿಗೆ, ಮಾಡಿದ ಪ್ರೀತಿಯ ಮತ್ತು ಕರುಣೆಯ ವಾಗ್ದಾನಗಳನ್ನು ನೀನು ನೆರವೇರಿಸುವೆ.
5 “ಆದರೆ ಯೆಹೋವನೇ, ನಾವು ಪಾಪ ಮಾಡಿದ್ದೇವೆ. ನಾವು ತಪ್ಪುಗಳನ್ನು ಮಾಡಿದ್ದೇವೆ. ನಾವು ನಿನಗೆ ವಿರೋಧವಾಗಿ ದಂಗೆ ಎದ್ದಿದ್ದೇವೆ. ನಾವು ನಿನ್ನ ಆಜ್ಞೆಗಳನ್ನು ಮತ್ತು ಸರಿಯಾದ ನಿರ್ಣಯಗಳನ್ನು ತೊರೆದಿದ್ದೇವೆ. 6 ಪ್ರವಾದಿಗಳು ಹೇಳಿದ್ದನ್ನು ನಾವು ಕೇಳಲಿಲ್ಲ. ಅವರು ನಿನ್ನ ಸೇವಕರಾಗಿದ್ದರು. ಆ ಪ್ರವಾದಿಗಳು ನಿನ್ನ ಪರವಾಗಿ ಹೇಳಿದರು. ಅವರು ನಮ್ಮ ರಾಜರುಗಳಿಗೆ, ನಮ್ಮ ನಾಯಕರುಗಳಿಗೆ ಮತ್ತು ನಮ್ಮ ಹಿರಿಯರಿಗೆ ಹೇಳಿದರು. ಅವರು ಇಸ್ರೇಲಿನ ಎಲ್ಲ ಜನರಿಗೆ ಹೇಳಿದರು. ಆದರೆ ನಾವು ಆ ಪ್ರವಾದಿಗಳ ಮಾತಿಗೆ ಕಿವಿಗೊಡಲಿಲ್ಲ.
7 “ಯೆಹೋವನೇ, ನೀನು ಒಳ್ಳೆಯವನು, ಒಳ್ಳೆಯತನ ನಿನ್ನ ಪಾಲಾಗಿದೆ. ಆದರೆ ಈಗ ನಮ್ಮದು ನಾಚಿಕೆಪಡುವ ಸ್ಥಿತಿಯಾಗಿದೆ. ಯೆಹೂದ ಮತ್ತು ಜೆರುಸಲೇಮಿನ ಜನರು ನಾಚಿಕೆಪಡುವಂತಾಗಿದೆ. ಹತ್ತಿರದಲ್ಲಿದ್ದವರು ಹಾಗೂ ದೂರದಲ್ಲಿದ್ದವರು, ಒಟ್ಟಿನಲ್ಲಿ ಇಸ್ರೇಲಿನ ಎಲ್ಲ ಜನರು ನಾಚಿಕೆಪಡುವಂತಾಗಿದೆ. ಯೆಹೋವನೇ, ನೀನು ಆ ಜನರನ್ನು ಎಲ್ಲಾ ದೇಶಗಳಲ್ಲಿ ಚದರಿಸಿಬಿಟ್ಟಿರುವೆ. ಆ ಎಲ್ಲಾ ದೇಶಗಳಲ್ಲಿರುವ ಇಸ್ರೇಲರು ನಾಚಿಕೆಪಡಬೇಕಾಗಿದೆ. ಯೆಹೋವನೇ, ನಿನ್ನ ವಿರುದ್ಧ ಮಾಡಿದ ಎಲ್ಲಾ ಹೀನಕೃತ್ಯಗಳಿಗಾಗಿ ಅವರು ನಾಚಿಕೆಪಡಬೇಕಾಗಿದೆ.
8 “ಯೆಹೋವನೇ, ನಾವೆಲ್ಲರೂ ನಾಚಿಕೆಪಡಬೇಕು. ನಮ್ಮ ಎಲ್ಲ ರಾಜರು, ನಾಯಕರು ನಾಚಿಕೆಪಟ್ಟುಕೊಳ್ಳಬೇಕು. ನಮ್ಮ ಹಿರಿಯರು ನಾಚಿಕೆಪಡಬೇಕು. ಏಕೆಂದರೆ ನಾವು ನಿನ್ನ ವಿಷಯದಲ್ಲಿ ಪಾಪ ಮಾಡಿದ್ದೇವೆ.
9 “ಆದರೆ ನಮ್ಮ ದೇವರಾದ ಯೆಹೋವನೇ, ನೀನು ಕರುಣಾಳು, ದುಷ್ಕೃತ್ಯಗಳನ್ನು ಮಾಡಿದ ಜನರನ್ನು ನೀನು ಕ್ಷಮಿಸುವೆ. ನಾವು ನಿಜವಾಗಿಯೂ ನಿನಗೆ ತಿರುಗಿಬಿದ್ದೆವು. 10 ನಾವು ನಮ್ಮ ದೇವರಾದ ಯೆಹೋವನ ಆಜ್ಞಾಪಾಲನೆ ಮಾಡಿಲ್ಲ. ಯೆಹೋವನು ತನ್ನ ಸೇವಕರಾದ ಪ್ರವಾದಿಗಳ ಮುಖಾಂತರ ನಮಗೆ ಕಟ್ಟಳೆಗಳನ್ನು ತಿಳಿಸಿದನು. ಆದರೆ ನಾವು ಆ ಕಟ್ಟಳೆಗಳನ್ನು ಪಾಲಿಸಲಿಲ್ಲ. 11 ಇಸ್ರೇಲಿನ ಜನರಲ್ಲಿ ಒಬ್ಬರೂ ಸಹ ನಿನ್ನ ಉಪದೇಶವನ್ನು ಪಾಲಿಸಲಿಲ್ಲ. ಅವರೆಲ್ಲರೂ ಅದರಿಂದ ದೂರಾದರು. ಅವರು ನಿನ್ನ ಆಜ್ಞೆಯನ್ನು ಪಾಲಿಸಲಿಲ್ಲ. ಮೋಶೆಯ ಧರ್ಮಶಾಸ್ತ್ರದಲ್ಲಿ ಶಾಪಗಳ ಮತ್ತು ವಾಗ್ದಾನಗಳ ಬಗ್ಗೆ ಹೇಳಲಾಗಿದೆ. (ಮೋಶೆಯು ದೇವರ ಸೇವಕನಾಗಿದ್ದನು) ಆ ಶಾಪಗಳು ಧರ್ಮಶಾಸ್ತ್ರವನ್ನು ಪಾಲಿಸದಿದ್ದವರಿಗೆ ಆಗುವ ಶಿಕ್ಷೆಯಾಗಿದೆ. ಆ ಎಲ್ಲಾ ಶಿಕ್ಷೆಗಳು ನಮಗೆ ಆಗಿವೆ. ನಾವು ಯೆಹೋವನಾದ ನಿನ್ನ ವಿರುದ್ಧ ಪಾಪ ಮಾಡಿದ್ದರಿಂದ ನಮಗೆ ಹೀಗಾಯಿತು.
12 “ನಮಗೂ ನಮ್ಮ ನಾಯಕರುಗಳಿಗೂ ನೀನು ಹೇಳಿದಂತೆಯೇ ಮಾಡಿರುವೆ. ನೀನು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿರುವೆ. ಜೆರುಸಲೇಮ್ ನಗರಕ್ಕೆ ಉಂಟಾದಷ್ಟು ಕೇಡು ಭೂಮಂಡಲದಲ್ಲಿ ಯಾವ ನಗರಕ್ಕೂ ಆಗಿಲ್ಲ. 13 ಆ ಕೇಡುಗಳೆಲ್ಲಾ ನಮಗೆ ಉಂಟಾದವು. ಇದೆಲ್ಲಾ ಮೋಶೆಯ ಧರ್ಮಶಾಸ್ತ್ರದಲ್ಲಿ ಹೇಳಿದಂತೆಯೇ ನಡೆದುಹೋಯಿತು. ಆದರೆ ಈವರೆಗೂ ನಾವು ನಿನ್ನ ಸಹಾಯವನ್ನು ಕೇಳಲಿಲ್ಲ. ಇಂದಿಗೂ ನಾವು ಪಾಪ ಮಾಡುವದನ್ನು ನಿಲ್ಲಿಸಲಿಲ್ಲ. ಯೆಹೋವನೇ, ಇನ್ನೂ ನಾವು ನಿನ್ನ ಸತ್ಯೋಪದೇಶದ ಕಡೆಗೆ ಗಮನ ಕೊಡುತ್ತಿಲ್ಲ. 14 ಯೆಹೋವನಾದ ನೀನು ನಮಗೆ ಆಪತ್ತುಗಳನ್ನು ಸಿದ್ಧಪಡಿಸಿಟ್ಟಿದ್ದೆ. ಆ ಆಪತ್ತುಗಳು ನಮ್ಮ ಮೇಲೆ ಬರುವಂತೆ ನೀನು ಮಾಡಿದೆ. ಯೆಹೋವನಾದ ನೀನು ಎಲ್ಲವನ್ನು ನಿಷ್ಪಕ್ಷಪಾತವಾಗಿ ಮಾಡುವೆ. ಆದ್ದರಿಂದಲೇ ಇದೆಲ್ಲವನ್ನು ಮಾಡಿದೆ. ಆದರೆ ಇಂದಿಗೂ ನಾವು ನಿನ್ನ ಉಪದೇಶಕ್ಕೆ ಕಿವಿಗೊಟ್ಟಿಲ್ಲ.
15 “ನಮ್ಮ ದೇವರಾದ ಯೆಹೋವನೇ, ನೀನು ನಿನ್ನ ಶಕ್ತಿಯಿಂದ ನಮ್ಮನ್ನು ಈಜಿಪ್ಟಿನಿಂದ ಹೊರಗೆ ತೆಗೆದುಕೊಂಡು ಬಂದೆ. ನಾವು ನಿನ್ನ ಜನರಾಗಿದ್ದೇವೆ. ನೀನು ಕರುಣೆ ತೋರುವುದರಲ್ಲಿ ಇಂದಿಗೂ ಸುಪ್ರಸಿದ್ಧನಾಗಿರುವೆ. ಯೆಹೋವನೇ, ನಾವು ಪಾಪ ಮಾಡಿದ್ದೇವೆ. ನಾವು ಬಹಳ ಹೀನಕೃತ್ಯಗಳನ್ನು ಮಾಡಿದ್ದೇವೆ. 16 ಯೆಹೋವನೇ, ನಾವು ಮತ್ತು ನಮ್ಮ ಪೂರ್ವಿಕರು ನಿನಗೆ ಪಾಪಮಾಡಿದ್ದರಿಂದ ಇದೆಲ್ಲಾ ಆಗುತ್ತಿದೆ. ಜೆರುಸಲೇಮಿನ ಮೇಲೆ ಕೋಪ ಮಾಡುವದನ್ನು ದಯವಿಟ್ಟು ನಿಲ್ಲಿಸು. ಜೆರುಸಲೇಮ್ ನಗರವು ನಿನ್ನ ಪವಿತ್ರವಾದ ಬೆಟ್ಟದ ಮೇಲೆ ಇದೆ. ನೀನು ಸರಿಯಾದದ್ದನ್ನು ಮಾಡುವೆ. ಆದ್ದರಿಂದ ಜೆರುಸಲೇಮಿನ ಮೇಲೆ ಕೋಪಗೊಳ್ಳುವದನ್ನು ದಯವಿಟ್ಟು ನಿಲ್ಲಿಸಿಬಿಡು. ನಮ್ಮ ಸುತ್ತಮುತ್ತಲಿನ ಜನರೆಲ್ಲ ನಮ್ಮನ್ನು ನಿಂದಿಸುವರು ಮತ್ತು ನಮ್ಮ ಜನರನ್ನು ಗೇಲಿ ಮಾಡುವರು.
17 “ಯೆಹೋವನೇ, ನಿನ್ನ ಸೇವಕನಾದ ನನ್ನ ಪ್ರಾರ್ಥನೆಯನ್ನು ಕೇಳು. ಸಹಾಯಕೋರಿ ಮಾಡುವ ನನ್ನ ಪ್ರಾರ್ಥನೆಯನ್ನು ಲಾಲಿಸು. ನಿನ್ನ ಪವಿತ್ರ ಸ್ಥಳಕ್ಕಾಗಿ ಒಳ್ಳೆಯದನ್ನು ಮಾಡು. ಆ ಕಟ್ಟಡವನ್ನು ನಾಶಮಾಡಲಾಗಿದೆ. ಯೆಹೋವನೇ, ಈ ಒಳ್ಳೆಯ ಕಾರ್ಯಗಳನ್ನು ನಿನ್ನ ಹಿತಕ್ಕಾಗಿ ಮಾಡು. 18 ನನ್ನ ದೇವರೆ, ನನ್ನ ಪ್ರಾರ್ಥನೆಯನ್ನು ಕೇಳು. ನಿನ್ನ ಕಣ್ಣುಗಳನ್ನು ತೆರೆದು ನಮಗಾದ ಎಲ್ಲ ಕೇಡನ್ನು ನೋಡು. ನಿನ್ನ ಹೆಸರುಳ್ಳ ಪಟ್ಟಣದ ಗತಿ ಏನಾಗಿದೆ ನೋಡು. ನಾವು ಒಳ್ಳೆಯ ಜನರೆಂದು ನಾನು ಹೇಳುತ್ತಿಲ್ಲ. ನಾವು ಒಳ್ಳೆಯ ಜನರೆಂದು ಇದೆಲ್ಲವನ್ನು ಕೇಳುತ್ತಿಲ್ಲ. ನೀನು ಕರುಣಾಮಯನಾಗಿರುವುದರಿಂದಲೇ ಇದನ್ನೆಲ್ಲ ಕೇಳುತ್ತಿದ್ದೇನೆ. 19 ಯೆಹೋವನೇ, ನನ್ನ ಮೊರೆಯನ್ನು ಕೇಳು. ಯೆಹೋವನೇ, ನಮ್ಮನ್ನು ಕ್ಷಮಿಸು. ಯೆಹೋವನೇ, ನಮ್ಮ ಕಡೆಗೆ ಗಮನ ನೀಡಿ ಸಹಾಯಮಾಡು. ತಡಮಾಡಬೇಡ. ಈಗಲೇ ಸಹಾಯಮಾಡು. ನಿನ್ನ ಮಹಿಮೆಗಾಗಿಯೇ ಸಹಾಯಮಾಡು. ನನ್ನ ದೇವರೇ, ನಿನ್ನ ಹೆಸರಿನಿಂದ ಕರೆಯಲ್ಪಡುವ ನಿನ್ನ ನಗರಕ್ಕಾಗಿಯೂ ನಿನ್ನ ಜನರಿಗಾಗಿಯೂ ಈಗಲೇ ಸಹಾಯಮಾಡು” ಎಂದು ಪ್ರಾರ್ಥಿಸಿದೆನು.
ಎಪ್ಪತ್ತು ವಾರಗಳ ಬಗ್ಗೆ ದರ್ಶನ
20 ನಾನು ಪ್ರಾರ್ಥನೆಯಲ್ಲಿ ನನ್ನ ಪಾಪಗಳ ಬಗ್ಗೆ ಮತ್ತು ಇಸ್ರೇಲರ ಪಾಪಗಳ ಬಗ್ಗೆ ಹೇಳಿಕೊಂಡೆ. ನಾನು ನನ್ನ ದೇವರಾದ ಯೆಹೋವನ ಪವಿತ್ರ ಪರ್ವತಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದೆ. 21 ನಾನು ಪ್ರಾರ್ಥಿಸುತ್ತಿದ್ದಾಗ ಗಬ್ರಿಯೇಲನೆಂಬ ಪುರುಷನು ನನ್ನಲ್ಲಿಗೆ ಬಂದನು. ಗಬ್ರಿಯೇಲನನ್ನೇ ನಾನು ದರ್ಶನದಲ್ಲಿ ಕಂಡಿದ್ದೆನು. ಗಬ್ರಿಯೇಲನು ವೇಗವಾಗಿ ಹಾರುತ್ತಾ ಸಾಯಂಕಾಲದ ನೈವೇದ್ಯದ ಸಮಯದಲ್ಲಿ ನನ್ನ ಬಳಿಗೆ ಬಂದನು. 22 ನಾನು ತಿಳಿದುಕೊಳ್ಳಬಯಸಿದ ವಿಷಯಗಳನ್ನು ತಿಳಿದುಕೊಳ್ಳಲು ಗಬ್ರಿಯೇಲನು ನನಗೆ ಸಹಾಯ ಮಾಡಿದನು. ಗಬ್ರಿಯೇಲನು, “ದಾನಿಯೇಲನೇ, ನಾನು ನಿನಗೆ ಜ್ಞಾನವನ್ನು ಕೊಡಲು ಮತ್ತು ಅರ್ಥಮಾಡಿಕೊಳ್ಳಲು ನಿನಗೆ ಸಹಾಯ ಮಾಡಲು ಬಂದಿದ್ದೇನೆ. 23 ನೀನು ಪ್ರಾರ್ಥಿಸಲು ಪ್ರಾರಂಭಿಸಿದಾಗಲೇ ನನಗೆ ದೇವರ ಆಜ್ಞೆಯಾಯಿತು. ನಾನು ಅದನ್ನು ನಿನಗೆ ತಿಳಿಸಲು ಬಂದಿರುವೆನು. ದೇವರು ನಿನ್ನನ್ನು ತುಂಬ ಪ್ರೀತಿಸುತ್ತಾನೆ. ನೀನು ದೈವಾಜ್ಞೆಯನ್ನು ಅರಿತುಕೊಳ್ಳುವೆ ಮತ್ತು ದರ್ಶನದ ಅರ್ಥವನ್ನು ತಿಳಿದುಕೊಳ್ಳುವೆ.
24 “ದಾನಿಯೇಲನೇ, ನಿಮ್ಮ ಜನರಿಗೆ ಮತ್ತು ನಿಮ್ಮ ಪವಿತ್ರ ನಗರಕ್ಕೆ ದೇವರು ಎಪ್ಪತ್ತು ವಾರಗಳ ಅವಧಿಯನ್ನು ಗೊತ್ತುಮಾಡಿದ್ದಾನೆ. ಅಧರ್ಮವನ್ನು ಕೊನೆಗಾಣಿಸುವದು, ಪಾಪಗಳನ್ನು ತಡೆಯುವುದು, ಅಪರಾಧಗಳನ್ನು ನಿವಾರಿಸುವುದು, ಜನರನ್ನು ಪರಿಶುದ್ಧಗೊಳಿಸುವುದು, ಎಂದೆಂದಿಗೂ ಉಳಿಯುವ ಧರ್ಮವನ್ನು ಸ್ಥಾಪಿಸುವುದು, ದರ್ಶನಗಳಿಗೆ ಮತ್ತು ಪ್ರವಾದಿಯ ನುಡಿಗಳಿಗೆ ಮುದ್ರೆಹಾಕಿ ಕಾರ್ಯರೂಪಕ್ಕೆ ತರುವುದು, ಪವಿತ್ರ ಸ್ಥಳವನ್ನು ಪ್ರತಿಷ್ಠಿಸುವುದು, ಇವೆಲ್ಲವುಗಳಿಗಾಗಿ ಈ ಎಪ್ಪತ್ತು ವಾರಗಳ ಅವಧಿಯನ್ನು ಗೊತ್ತು ಮಾಡಲಾಗಿದೆ.
25 “ದಾನಿಯೇಲನೇ, ಇದನ್ನು ತಿಳಿದುಕೊ. ಇದನ್ನು ಚೆನ್ನಾಗಿ ಅರ್ಥಮಾಡಿಕೊ. ‘ಹೋಗಿ ಜೆರುಸಲೇಮನ್ನು ಸರಿಪಡಿಸಿರಿ’ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ರಾಜನು ಬರುವದರೊಳಗೆ ಏಳು ವಾರಗಳು ಕಳೆಯಬೇಕು. ಆಗ ಜೆರುಸಲೇಮು ಮತ್ತೆ ನಿರ್ಮಾಣವಾಗುವುದು. ಜನರು ಒಂದಾಗಿ ಸೇರುವದಕ್ಕೆ ಜೆರುಸಲೇಮಿನಲ್ಲಿ ಮತ್ತೆ ಸ್ಥಳಾವಕಾಶವಾಗುವುದು. ನಗರದ ಸುತ್ತಲೂ ಅದನ್ನು ರಕ್ಷಿಸುವುದಕ್ಕಾಗಿ ಒಂದು ಕಂದಕವನ್ನು ಕೊರೆಯಲಾಗುವುದು. ಅರವತ್ತೆರಡು ವಾರಗಳವರೆಗೆ ಜೆರುಸಲೇಮ್ ನಗರವನ್ನು ಕಟ್ಟಲಾಗುವುದು. ಆದರೆ ಆ ಅವಧಿಯಲ್ಲಿ ಹಲವಾರು ಕಷ್ಟನಷ್ಟಗಳು ಸಂಭವಿಸುವವು. 26 ಅರವತ್ತೆರಡು ವಾರಗಳ ತರುವಾಯ ಅಭಿಷಿಕ್ತನ ಕೊಲೆಯಾಗುವುದು. ಅವನು ಇಲ್ಲವಾಗುವನು. ಭವಿಷ್ಯತ್ತಿನ ನಾಯಕನ ಜನರು ನಗರವನ್ನೂ ಪವಿತ್ರಾಲಯವನ್ನೂ ಹಾಳುಮಾಡುವರು. ಆ ಅಂತ್ಯವು ಒಂದು ಪ್ರವಾಹದಂತೆ ಬರುವುದು. ಕೊನೆಯವರೆಗೂ ಯುದ್ಧ ನಡೆಯುವುದು. ಆ ಸ್ಥಳವನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದು ದೇವರು ಆಜ್ಞಾಪಿಸಿದ್ದಾನೆ.
27 “ಆಗ ಭವಿಷ್ಯತ್ತಿನ ನಾಯಕನು ಬಹುಜನರೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳುವನು. ಆ ಒಪ್ಪಂದ ಒಂದು ವಾರದವರೆಗೆ ಮುಂದುವರೆಯುವದು. ಅರ್ಧವಾರದವರೆಗೆ ಯಜ್ಞ ಮತ್ತು ನೈವೇದ್ಯಗಳನ್ನು ನಿಲ್ಲಿಸಲಾಗುವುದು. ಒಬ್ಬ ಘಾತುಕನು ಬರುವನು. ಅವನು ಬಹುವಿನಾಶಕಾರಿ ಕೆಲಸಗಳನ್ನು ಮಾಡುವನು. ಆದರೆ ಆ ಘಾತುಕನನ್ನು ಮುಗಿಸಿಬಿಡಬೇಕೆಂದು ದೇವರ ಆಜ್ಞೆಯಾಗಿದೆ” ಎಂದು ಹೇಳಿದನು.
ಟೈಗ್ರಿಸ್ ನದಿಯ ದಡದಲ್ಲಿ ದಾನಿಯೇಲನ ದರ್ಶನ
10 ಕೋರೆಷನು ಪಾರಸಿಯ ರಾಜನಾಗಿದ್ದನು. ಕೋರೆಷನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ದಾನಿಯೇಲನಿಗೆ ಒಂದು ಸಂಗತಿಯು ಪ್ರಕಟವಾಯಿತು. (ದಾನಿಯೇಲನ ಇನ್ನೊಂದು ಹೆಸರು ಬೇಲ್ತೆಶಚ್ಚರ.) ಈ ಸಂಗತಿ ಸತ್ಯವಾದುದು; ಆದರೆ ತಿಳಿದುಕೊಳ್ಳಲು ಬಹಳ ಕಷ್ಟಕರವಾಗಿತ್ತು. ದಾನಿಯೇಲನು ಈ ಸಂಗತಿಯನ್ನು ತಿಳಿದುಕೊಂಡನು. ಒಂದು ದರ್ಶನದಲ್ಲಿ ಅದರ ಬಗ್ಗೆ ಅವನಿಗೆ ವಿವರಿಸಲಾಯಿತು.
2 ದಾನಿಯೇಲನು ಹೇಳುವುದೇನೆಂದರೆ: ಆ ಸಮಯದಲ್ಲಿ ದಾನಿಯೇಲನೆಂಬ ನಾನು ಮೂರು ವಾರ ಶೋಕದಲ್ಲಿದ್ದೆನು. 3 ಆ ಮೂರು ವಾರಗಳಲ್ಲಿ ನಾನು ಇಷ್ಟಪಡುತ್ತಿದ್ದ ಆಹಾರವನ್ನು ತಿನ್ನಲಿಲ್ಲ; ಮಾಂಸಾಹಾರವನ್ನು ಸೇವಿಸಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ; ತಲೆಗೆ ಎಣ್ಣೆಯನ್ನು ಹಾಕಿಕೊಳ್ಳಲಿಲ್ಲ. ಮೂರು ವಾರಗಳವರೆಗೆ ಇದೆಲ್ಲವನ್ನು ನಾನು ನಿಲ್ಲಿಸಿಬಿಟ್ಟೆ.
4 ವರ್ಷದ ಮೊದಲನೆ ತಿಂಗಳ ಇಪ್ಪತ್ನಾಲ್ಕನೆಯ ದಿನದಲ್ಲಿ ನಾನು ಟೈಗ್ರಿಸ್ ಮಹಾನದಿಯ, ದಡದಲ್ಲಿ ನಿಂತುಕೊಂಡಿದ್ದೆ. 5 ಅಲ್ಲಿ ನಿಂತುಕೊಂಡಿದ್ದಾಗ ನಾನು ಮುಖವೆತ್ತಿ ನೋಡಿದೆ. ನನ್ನ ಎದುರಿಗೆ ಒಬ್ಬ ವ್ಯಕ್ತಿಯು ನಿಂತಿದ್ದನ್ನು ಕಂಡೆ. ಅವನು ನಾರುಬಟ್ಟೆಯನ್ನು ಧರಿಸಿಕೊಂಡಿದ್ದನು. ಅವನು ಊಫಜಿನ ಅಪರಂಜಿಯ ಪಟ್ಟಿಯನ್ನು ಸೊಂಟಕ್ಕೆ ಬಿಗಿದುಕೊಂಡಿದ್ದನು. 6 ಅವನ ಶರೀರವು ಪ್ರಕಾಶಮಾನವಾದ ವಜ್ರದಂತೆ ಇತ್ತು. ಅವನ ಮುಖವು ಕೋಲ್ಮಿಂಚಿನಂತೆ ಹೊಳೆಯುತ್ತಿತ್ತು. ಅವನ ಕಣ್ಣುಗಳು ಬೆಂಕಿಯ ಪಂಜುಗಳಂತಿದ್ದವು. ಅವನ ಕೈಕಾಲುಗಳು ಉಜ್ಜಿದ ಹಿತ್ತಾಳೆಯಂತೆ ಝಗಝಗಿಸುತ್ತಿದ್ದವು. ಅವನ ಧ್ವನಿಯು ಜನಜಂಗುಳಿಯ ಧ್ವನಿಯಂತೆ ದೊಡ್ಡದಾಗಿತ್ತು.
7 ದಾನಿಯೇಲನೆಂಬ ನನಗೆ ಮಾತ್ರ ಆ ದರ್ಶನವಾಯಿತು. ನನ್ನ ಜೊತೆಯಲ್ಲಿದ್ದವರಿಗೆ ಆ ದರ್ಶನ ಕಾಣಿಸಲಿಲ್ಲವಾದರೂ ಅವರು ಭಯಪಟ್ಟರು. ಅವರು ಭಯದಿಂದ ಓಡಿಹೋಗಿ ಅಡಗಿಕೊಂಡರು. 8 ನಾನೊಬ್ಬನೇ ಅಲ್ಲಿದ್ದೆ. ನಾನು ಆ ದರ್ಶನವನ್ನು ನೋಡುತ್ತಲೇ ಇದ್ದೆ. ಅದರಿಂದ ನನಗೆ ಭಯವಾಯಿತು. ನಾನು ದುರ್ಬಲನಾದೆ. ನನ್ನ ಮುಖವು ಸತ್ತವರ ಮುಖದಂತೆ ಬಿಳುಪೇರಿತು; ನಾನು ನಿಸ್ಸಹಾಯಕನಾದೆ. 9 ದರ್ಶನದಲ್ಲಿ ಕಾಣಿಸಿಕೊಂಡ ಮನುಷ್ಯನು ಮಾತನಾಡುವದನ್ನು ನಾನು ಕೇಳಿದೆ. ಅವನ ಧ್ವನಿಯನ್ನು ಕೇಳಿದ ಕೂಡಲೇ ನಾನು ಬೋರಲುಬಿದ್ದು ಗಾಢವಾದ ನಿದ್ರೆಯಲ್ಲಿ ಮುಳುಗಿದೆ.
10 ಆಗ ಒಂದು ಕೈ ನನ್ನನ್ನು ಮುಟ್ಟಿತು. ನಾನು ಮೊಣಕಾಲುಗಳನ್ನು ಮತ್ತು ಅಂಗೈಗಳನ್ನು ನೆಲಕ್ಕೆ ಊರಿ ಬಾಗಿ ನಿಂತುಕೊಂಡೆ. ನಾನು ಭಯದಿಂದ ನಡುಗುತ್ತಿದ್ದೆ. 11 ದರ್ಶನದಲ್ಲಿ ಕಾಣಿಸಿಕೊಂಡ ಮನುಷ್ಯನು ನನಗೆ, “ದಾನಿಯೇಲನೇ, ದೇವರು ನಿನ್ನನ್ನು ತುಂಬ ಪ್ರೀತಿಸುತ್ತಾನೆ. ನಾನು ನಿನಗೆ ಈ ಮುಂದೆ ಹೇಳುವ ಮಾತುಗಳ ಬಗ್ಗೆ ಚೆನ್ನಾಗಿ ವಿಚಾರಮಾಡು. ಎದ್ದುನಿಲ್ಲು, ನನ್ನನ್ನು ನಿನ್ನ ಬಳಿಗೆ ಕಳುಹಿಸಲಾಗಿದೆ” ಎಂದು ಹೇಳಿದನು. ಆಗ ನಾನು ಎದ್ದುನಿಂತೆ. ನಾನು ಭಯದಿಂದ ಇನ್ನೂ ನಡುಗುತ್ತಿದ್ದೆ. 12 ಆಮೇಲೆ ದರ್ಶನದಲ್ಲಿನ ಆ ಮನುಷ್ಯನು ಪುನಃ ಮಾತನಾಡಲು ಪ್ರಾರಂಭಿಸಿದನು. ಅವನು, “ದಾನಿಯೇಲನೇ, ಭಯಪಡಬೇಡ. ನೀನು ಜ್ಞಾನಸಂಪಾದನೆ ಮಾಡಬೇಕೆಂದೂ ದೇವರೆದುರಿಗೆ ಭಕ್ತಿವಿನಯಗಳಿಂದ ವರ್ತಿಸಬೇಕೆಂದೂ ತೀರ್ಮಾನಿಸಿದ ಮೊದಲ ದಿನದಿಂದಲೇ ಆತನು ನಿನ್ನ ಪ್ರಾರ್ಥನೆಗಳನ್ನು ಆಲಿಸುತ್ತಿದ್ದಾನೆ. ನೀನು ಪ್ರಾರ್ಥನೆ ಮಾಡಿದ್ದರಿಂದಲೇ ನಾನು ಇಲ್ಲಿಗೆ ಬಂದೆನು. 13 ಆದರೆ ಪಾರಸಿಯ ರಾಜ್ಯದ ದಿವ್ಯಪಾಲಕನು ನನ್ನೊಂದಿಗೆ ಕಳೆದ ಇಪ್ಪತ್ತೊಂದು ದಿನಗಳಿಂದ ಹೋರಾಡುತ್ತಿದ್ದನು; ನನಗೆ ತೊಂದರೆ ಕೊಡುತ್ತಿದ್ದನು. ಆಗ ಪ್ರಧಾನ ದಿವ್ಯಪಾಲಕರಲ್ಲೊಬ್ಬನಾದ ಮಿಕಾಯೇಲನು ನನ್ನ ಸಹಾಯಕ್ಕೆ ಬಂದನು. ನಾನು ಅಲ್ಲಿ ಪಾರಸಿಯ ರಾಜನ ಹತ್ತಿರ ಸಿಕ್ಕಿಹಾಕಿಕೊಂಡಿದ್ದೆ. 14 ದಾನಿಯೇಲನೇ, ಭವಿಷ್ಯದಲ್ಲಿ ನಿನ್ನ ಜನರಿಗೆ ಏನಾಗುವದೆಂಬುದನ್ನು ನಿನಗೆ ವಿವರಿಸಲು ನಾನು ಈಗ ಇಲ್ಲಿಗೆ ಬಂದೆನು. ಈ ಕನಸು ಭವಿಷ್ಯದ ಒಂದು ಕಾಲದ ಕುರಿತಾಗಿದೆ” ಎಂದು ಹೇಳಿದನು.
15 ಆ ಪುರುಷನು ನನ್ನೊಂದಿಗೆ ಮಾತನಾಡುತ್ತಿದ್ದಾಗ ನಾನು ನೆಲವನ್ನು ನೋಡುತ್ತಾ ಬಾಗಿಕೊಂಡಿದ್ದೆ. ಮಾತನಾಡಲು ನನ್ನಿಂದ ಸಾಧ್ಯವಾಗಲಿಲ್ಲ. 16 ಆಗ ಮನುಷ್ಯಕುಮಾರನಂತಿರುವವನು ನನ್ನ ತುಟಿಗಳನ್ನು ಸ್ಪರ್ಶಿಸಿದನು. ನಾನು ಬಾಯಿ ತೆರೆದು ಮಾತನಾಡಲು ಪ್ರಾರಂಭಿಸಿದೆ. ನನ್ನ ಎದುರಿಗೆ ನಿಂತುಕೊಂಡಿದ್ದವನಿಗೆ, “ಸ್ವಾಮಿ, ದರ್ಶನದಲ್ಲಿ ನೋಡಿದ ಸಂಗತಿಗಳಿಂದ ನಾನು ಚಿಂತಾಕ್ರಾಂತನಾಗಿದ್ದೇನೆ; ಅಂಜಿಕೊಂಡಿದ್ದೇನೆ; ನಿಸ್ಸಹಾಯಕನಾಗಿದ್ದೇನೆ. 17 ಸ್ವಾಮೀ, ನಾನು ನಿಮ್ಮ ಸೇವಕನಾದ ದಾನಿಯೇಲ. ನಾನು ನಿಮ್ಮ ಸಂಗಡ ಹೇಗೆ ಮಾತನಾಡಲಿ. ನನಗೆ ಶಕ್ತಿಯೇ ಇಲ್ಲದಂತಾಗಿದೆ. ಉಸಿರಾಡುವುದೂ ಕಷ್ಟವಾಗಿದೆ” ಎಂದೆ.
18 ಆ ಮನುಷ್ಯಕುಮಾರನಂತಿರುವವನು ಪುನಃ ನನ್ನನ್ನು ಸ್ಪರ್ಶಿಸಿದನು. ಆತನು ನನ್ನನ್ನು ಸ್ಪರ್ಶಿಸಿದಾಗ ನನಗೆ ಉಪಶಮನವಾಯಿತು. 19 ಆಗ ಆತನು “ದಾನಿಯೇಲನೇ, ಭಯಪಡಬೇಡ. ದೇವರು ನಿನ್ನನ್ನು ತುಂಬ ಪ್ರೀತಿಸುತ್ತಾನೆ. ಸಮಾಧಾನ ತಂದುಕೊ. ಈಗ ನೀನು ಬಲಗೊಳ್ಳು, ಬಲಗೊಳ್ಳು” ಎಂದು ಹೇಳಿದನು.
ಆತನು ನನ್ನೊಂದಿಗೆ ಮಾತನಾಡಿದ ಮೇಲೆ ನನಗೆ ಬಲಬಂದಿತು. ಆಗ ನಾನು, “ಸ್ವಾಮೀ, ನೀವು ನನಗೆ ಬಲವನ್ನು ನೀಡಿದಿರಿ. ಈಗ ನೀವು ಮಾತನಾಡಬಹುದು” ಎಂದು ಹೇಳಿದೆ.
20 ಆಗ ಅವನು, “ದಾನಿಯೇಲನೇ, ನಾನು ಏಕೆ ಬಂದಿದ್ದೇನೆಂಬುದು ನಿನಗೆ ಗೊತ್ತಿಲ್ಲವೇ? ತಕ್ಷಣ ನಾನು ಪಾರಸಿಯ ರಾಜ್ಯದ ದಿವ್ಯಪಾಲಕನೊಂದಿಗೆ ಹೋರಾಡಲು ಹಿಂದಿರುಗಬೇಕು. ನಾನು ಹೋದಮೇಲೆ ಗ್ರೀಕ್ ರಾಜ್ಯದ ದಿವ್ಯಪಾಲಕನು ಬರುವನು. 21 ದಾನಿಯೇಲನೇ, ನಾನು ಹೋಗುವ ಮುಂಚೆ ‘ಸತ್ಯಶಾಸನ’ದಲ್ಲಿ ಏನು ಬರೆದಿದೆ ಎಂಬುದನ್ನು ನಿನಗೆ ಹೇಳುವೆನು. ಆ ದುಷ್ಟದೂತರೊಂದಿಗೆ ಹೋರಾಡುವಲ್ಲಿ ಮಿಕಾಯೇಲನ ಹೊರತು ನನಗೆ ಬೆಂಬಲವಾಗತಕ್ಕವರು ಇನ್ಯಾರೂ ಇಲ್ಲ. ಮಿಕಾಯೇಲನು ನಿಮ್ಮ ಜನರ ಪಾಲಕನಾಗಿದ್ದಾನೆ.
1 ಸಭಾಹಿರಿಯನು, ತಾನು ಸತ್ಯವಾಗಿಯೂ ಪ್ರೀತಿಸುವ,
ತನ್ನ ಪ್ರಿಯ ಸ್ನೇಹಿತನಾದ ಗಾಯನಿಗೆ ಬರೆಯುವ ಪತ್ರ.
2 ನನ್ನ ಪ್ರಿಯ ಸ್ನೇಹಿತನೇ, ನಿನ್ನ ಆತ್ಮವು ಅಭಿವೃದ್ಧಿ ಹೊಂದುತ್ತಿದೆ ಎಂಬುದು ನನಗೆ ತಿಳಿದಿದೆ. ನೀನು ಸರ್ವವಿಧದಲ್ಲಿಯೂ ಅಭಿವೃದ್ಧಿ ಹೊಂದಬೇಕೆಂದೂ ಆರೋಗ್ಯದಿಂದಿರಬೇಕೆಂದೂ ನಾನು ಪ್ರಾರ್ಥಿಸುತ್ತೇನೆ. 3 ಕ್ರಿಸ್ತನಲ್ಲಿ ಸಹೋದರರಾದ ಕೆಲವರು ಬಂದು, ನಿನ್ನ ಜೀವನದಲ್ಲಿರುವ ಸತ್ಯವನ್ನು ನನಗೆ ತಿಳಿಸಿದರು. ನೀನು ಸತ್ಯಮಾರ್ಗದಲ್ಲಿ ನಡೆಯುತ್ತಿರುವೆ ಎಂಬುದನ್ನು ಅವರು ನನಗೆ ಹೇಳಿದರು. ಇದು ನನಗೆ ಬಹಳ ಸಂತೋಷವನ್ನು ಉಂಟುಮಾಡಿತು. 4 ನನ್ನ ಮಕ್ಕಳು ಸತ್ಯಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂಬುದನ್ನು ಕೇಳುವಾಗಲೆಲ್ಲಾ ನನಗೆ ಬಹಳ ಸಂತೋಷವಾಗುತ್ತದೆ.
5 ನನ್ನ ಪ್ರಿಯ ಸ್ನೇಹಿತನೇ, ಕ್ರಿಸ್ತನಲ್ಲಿ ಸಹೋದರರಾದವರಿಗೆ ನೀನು ಸಹಾಯ ಮಾಡುತ್ತಿರುವುದು ಒಳ್ಳೆಯದೇ ಸರಿ. ನಿನಗೆ ಗೊತ್ತಿಲ್ಲದ ಸಹೋದರರಿಗೂ ನೀನು ಸಹಾಯ ಮಾಡುತ್ತಿರುವೆ! 6 ನಿನಗಿರುವ ಪ್ರೀತಿಯನ್ನು ಕುರಿತು ಈ ಸಹೋದರರು ಸಭೆಗೆ ತಿಳಿಸಿದರು. ಅವರು ತಮ್ಮ ಪ್ರವಾಸವನ್ನು ಮುಂದುವರಿಸಲು ದಯವಿಟ್ಟು ಅವರಿಗೆ ಸಹಾಯಮಾಡು. ದೇವರಿಗೆ ಮೆಚ್ಚಿಗೆಕರವಾದ ರೀತಿಯಲ್ಲಿ ಅವರಿಗೆ ಸಹಾಯಮಾಡು. 7 ಈ ಸಹೋದರರು ಕ್ರಿಸ್ತನ ಸೇವೆಗಾಗಿ ಪ್ರವಾಸಹೊರಟಿದ್ದಾರೆ. ಅವಿಶ್ವಾಸಿಗಳಿಂದ ಅವರು ಯಾವ ಸಹಾಯವನ್ನೂ ತೆಗೆದುಕೊಳ್ಳಲಿಲ್ಲ. 8 ಆದ್ದರಿಂದ ನಾವು ಈ ಸಹೋದರರಿಗೆ ಸಹಾಯ ಮಾಡಬೇಕು. ನಾವು ಅವರಿಗೆ ಸಹಾಯಮಾಡಿದಾಗ, ಸತ್ಯಕ್ಕೋಸ್ಕರ ಅವರು ಮಾಡುವ ಕಾರ್ಯದಲ್ಲಿ ನಾವೂ ಪಾಲುಗಾರರಾಗುತ್ತೇವೆ.
9 ನಾನು ಸಭೆಗೆ ಒಂದು ಪತ್ರವನ್ನು ಬರೆದೆನು. ಆದರೆ ನಾವು ಹೇಳಿದುದನ್ನು ದಿಯೊತ್ರೇಫನು ಕೇಳುವುದಿಲ್ಲ. ಅವನು ತಾನೇ ಅವರ ನಾಯಕನಾಗಿರಬೇಕೆಂದು ಯಾವಾಗಲೂ ಇಚ್ಛಿಸುತ್ತಾನೆ. 10 ನಾನು ಬಂದಾಗ, ದಿಯೊತ್ರೇಫನು ಮಾಡುತ್ತಿರುವುದರ ಬಗ್ಗೆ ತಿಳಿಸುತ್ತೇನೆ. ಅವನು ನಮ್ಮನ್ನು ಕುರಿತು ಸುಳ್ಳನ್ನೂ ಕೆಟ್ಟ ಸಂಗತಿಗಳನ್ನೂ ಹೇಳುತ್ತಾನೆ. ಆದರೆ ಅಷ್ಟೇ ಅಲ್ಲ! ಕ್ರಿಸ್ತನ ಸೇವೆಮಾಡುತ್ತಿರುವ ಆ ಸಹೋದರರಿಗೆ ಸಹಾಯಮಾಡಲು ಅವನು ಒಪ್ಪುವುದಿಲ್ಲ. ಅಲ್ಲದೆ ಆ ಸಹೋದರರಿಗೆ ಸಹಾಯ ಮಾಡಲಿಚ್ಛಿಸುವ ಜನರನ್ನೂ ಅವನು ತಡೆಯುತ್ತಾನೆ. ಆ ಜನರು ಸಭೆಯನ್ನು ಬಿಟ್ಟುಹೋಗುವಂತೆ ಅವನು ಮಾಡುತ್ತಾನೆ.
11 ನನ್ನ ಪ್ರಿಯ ಸ್ನೇಹಿತನೇ, ಕೆಟ್ಟದ್ದನ್ನು ಅನುಸರಿಸಬೇಡ; ಒಳ್ಳೆಯದನ್ನೇ ಅನುಸರಿಸು. ಒಳ್ಳೆಯದನ್ನು ಮಾಡುವವನು ದೇವರಿಗೆ ಸೇರಿದವನಾಗಿದ್ದಾನೆ. ಆದರೆ ಕೆಟ್ಟದ್ದನ್ನು ಮಾಡುವವನು ದೇವರನ್ನು ಎಂದೂ ತಿಳಿಯದವನಾಗಿದ್ದಾನೆ.
12 ದೇಮೇತ್ರಿಯನ ಬಗ್ಗೆ ಜನರೆಲ್ಲರೂ ಒಳ್ಳೆಯ ಸಂಗತಿಗಳನ್ನು ಹೇಳುತ್ತಾರೆ. ಅವರು ಹೇಳುವುದನ್ನು ಸತ್ಯವೂ ಅಂಗೀಕರಿಸುತ್ತದೆ. ಅವನನ್ನು ಕುರಿತು ನಾವೂ ಸಹ ಒಳ್ಳೆಯದನ್ನು ಹೇಳುತ್ತೇವೆ. ನಾವು ಹೇಳುವುದು ನಿಜವೆಂಬುದು ನಿನಗೆ ತಿಳಿದಿದೆ.
13 ನಾನು ನಿನಗೆ ಹೇಳಲಿಚ್ಛಿಸುವ ಅನೇಕ ವಿಚಾರಗಳಿವೆ. ಆದರೆ ನಾನು ಕಾಗದವನ್ನೂ ಇಂಕನ್ನೂ ಬಳಸಲು ಇಚ್ಛಿಸುವುದಿಲ್ಲ. 14 ನಾನು ನಿನ್ನನ್ನು ನೋಡಲು ಬರಬೇಕೆಂದಿದ್ದೇನೆ. ಆಗ ನಾವಿಬ್ಬರೂ ಒಟ್ಟಿಗೆ ಮಾತನಾಡಬಹುದು. 15 ನಿನಗೆ ಶಾಂತಿಯಿರಲಿ. ಸ್ನೇಹಿತರು ನಿನಗೆ ವಂದನೆ ತಿಳಿಸಿದ್ದಾರೆ. ಅಲ್ಲಿರುವ ಸ್ನೇಹಿತರಿಗೆಲ್ಲ ದಯವಿಟ್ಟು ನಮ್ಮ ವಂದನೆಯನ್ನು ತಿಳಿಸು.
Kannada Holy Bible: Easy-to-Read Version. All rights reserved. © 1997 Bible League International