Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ದಾನಿಯೇಲ 3-4

ಬಂಗಾರದ ವಿಗ್ರಹ ಮತ್ತು ಉರಿಯುವ ಕುಲುಮೆ

ಅರಸನಾದ ನೆಬೂಕದ್ನೆಚ್ಚರನು ಒಂದು ಬಂಗಾರದ ವಿಗ್ರಹವನ್ನು ಮಾಡಿಸಿದ್ದನು. ಆ ವಿಗ್ರಹವು ಅರವತ್ತು ಮೊಳ ಎತ್ತರವಾಗಿತ್ತು. ಆರು ಮೊಳ ಅಗಲವಾಗಿತ್ತು. ಆ ವಿಗ್ರಹವನ್ನು ಬಾಬಿಲೋನ್ ಪ್ರಾಂತ್ಯದ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು. ಅರಸನು ಆ ವಿಗ್ರಹದ ಪ್ರತಿಷ್ಠಾಪನೆಯ ಮಹೋತ್ಸವಕ್ಕೆ ಉಪರಾಜರನ್ನು, ನಾಯಕರನ್ನು, ದೇಶಾಧಿಪತಿಗಳನ್ನು, ಮಂತ್ರಿಗಳನ್ನು, ಕೋಶಾಧ್ಯಕ್ಷರನ್ನು, ನ್ಯಾಯಾಧಿಪತಿಗಳನ್ನು ಮತ್ತು ಉಳಿದೆಲ್ಲ ಅಧಿಕಾರಿಗಳನ್ನು ಕರೆಸಿದನು.

ಅವರೆಲ್ಲರು ಬಂದು ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ವಿಗ್ರಹದ ಎದುರಿಗೆ ನಿಂತುಕೊಂಡರು. ಆಗ ಸಾರುವವನು ದೊಡ್ಡ ಧ್ವನಿಯಲ್ಲಿ, “ವಿವಿಧ ಜನಾಂಗ, ಕುಲ, ಭಾಷೆಗಳ ಜನರೇ, ನಾನು ಹೇಳುವುದನ್ನು ಕೇಳಿರಿ. ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೇ ನೀವು ಅಡ್ಡಬೀಳಬೇಕು. ಇದು ರಾಜಾಜ್ಞೆ. ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಬಂಗಾರದ ವಿಗ್ರಹವನ್ನು ಪೂಜಿಸಬೇಕು. ಅರಸನಾದ ನೆಬೂಕದ್ನೆಚ್ಚರನು ಈ ವಿಗ್ರಹವನ್ನು ನಿಲ್ಲಿಸಿದ್ದಾನೆ. ಯಾರಾದರೂ ಈ ಬಂಗಾರದ ವಿಗ್ರಹಕ್ಕೆ ಅಡ್ಡಬೀಳದಿದ್ದರೆ ಮತ್ತು ಪೂಜಿಸದಿದ್ದರೆ ತಕ್ಷಣ ಅವರನ್ನು ಬೆಂಕಿಯ ಕೊಂಡಕ್ಕೆ ಎಸೆಯಲಾಗುವುದು” ಎಂದು ಸಾರಿದನು.

ಆದ್ದರಿಂದ ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅವರು ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸಿದರು. ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ವಿಗ್ರಹವನ್ನು ಎಲ್ಲ ಜನಾಂಗಗಳ, ಭಾಷೆಗಳ ಜನರು ಪೂಜಿಸಿದರು.

ಆಗ ಕೆಲವು ಜನ ಕಲ್ದೀಯರು ಅರಸನ ಬಳಿಗೆ ಬಂದು ಅವರು ಯೆಹೂದ್ಯರ ವಿರುದ್ಧ ಮಾತನಾಡತೊಡಗಿದರು. ಅರಸನಾದ ನೆಬೂಕದ್ನೆಚ್ಚರನಿಗೆ ಅವರು, “ಮಹಾರಾಜನೇ, ಚಿರಂಜೀವಿಯಾಗಿರು! 10 ಅರಸನೇ, ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಪ್ರತಿಯೊಬ್ಬನೂ ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸಬೇಕು ಎಂದು ತಾವು ಆಜ್ಞೆ ಕೊಟ್ಟಿದ್ದೀರಿ. 11 ಯಾರಾದರೂ ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸದಿದ್ದರೆ ಅವರನ್ನು ಉರಿಯುವ ಬೆಂಕಿಯ ಕೊಂಡದಲ್ಲಿ ಎಸೆಯಲಾಗುವುದೆಂದು ಕೂಡ ತಾವು ಹೇಳಿದ್ದೀರಿ. 12 ಅರಸನೇ, ಕೆಲವು ಜನ ಯೆಹೂದ್ಯರು ತಮ್ಮ ಆಜ್ಞೆಯನ್ನು ಪಾಲಿಸಲಿಲ್ಲ. ಆ ಯೆಹೂದ್ಯರನ್ನು ತಾವು ಬಾಬಿಲೋನ್ ಪ್ರಾಂತ್ಯದಲ್ಲಿ ಪ್ರಮುಖ ಅಧಿಕಾರಿಗಳನ್ನಾಗಿ ನೇಮಿಸಿದ್ದೀರಿ. ಅವರ ಹೆಸರುಗಳು, ಶದ್ರಕ್, ಮೇಶಕ್, ಅಬೇದ್‌ನೆಗೋ ಎಂದು. ಅವರು ನಿಮ್ಮ ದೇವರುಗಳನ್ನು ಪೂಜಿಸುವುದಿಲ್ಲ. ನೀವು ನಿಲ್ಲಿಸಿದ ಬಂಗಾರದ ವಿಗ್ರಹಕ್ಕೆ ಅಡ್ಡಬಿದ್ದು ಪೂಜಿಸುವದಿಲ್ಲ” ಎಂದು ಚಾಡಿ ಹೇಳಿದರು.

13 ನೆಬೂಕದ್ನೆಚ್ಚರನಿಗೆ ಬಹಳ ಕೋಪ ಬಂತು. ಅವನು ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಕರೆಸಿದನು. ಅವರನ್ನು ಅರಸನ ಬಳಿಗೆ ಕರೆದುತರಲಾಯಿತು. 14 ನೆಬೂಕದ್ನೆಚ್ಚರನು ಅವರಿಗೆ, “ಶದ್ರಕ್, ಮೇಶಕ್, ಅಬೆದ್‌ನೆಗೋ, ನೀವು ನನ್ನ ದೇವರುಗಳನ್ನು ಪೂಜಿಸುವುದಿಲ್ಲವಂತೆ, ಇದು ನಿಜವೇ? ನಾನು ನಿಲ್ಲಿಸಿದ ಬಂಗಾರದ ವಿಗ್ರಹವನ್ನು ನೀವು ಅಡ್ಡಬಿದ್ದು ಪೂಜಿಸಲಿಲ್ಲವಂತೆ, ಇದು ನಿಜವೇ? 15 ಈಗಲಾದರೋ ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಅಡ್ಡಬಿದ್ದು ಚಿನ್ನದ ವಿಗ್ರಹವನ್ನು ಪೂಜಿಸಬೇಕು. ನಾನು ಮಾಡಿಸಿದ ಈ ವಿಗ್ರಹವನ್ನು ಪೂಜಿಸಲು ನೀವು ಸಿದ್ಧರಾಗಿದ್ದರೆ ಸರಿ. ನೀವು ಅದನ್ನು ಪೂಜಿಸದಿದ್ದರೆ ತಕ್ಷಣ ನಿಮ್ಮನ್ನು ಉರಿಯುವ ಕೊಂಡದಲ್ಲಿ ಎಸೆಯಲಾಗುವುದು. ಆಗ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವುದು ಯಾವ ದೇವರಿಗೂ ಸಾಧ್ಯವಾಗಲಾರದು” ಎಂದು ಹೇಳಿದನು.

16 ಇದನ್ನು ಕೇಳಿ ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವವರು ಅರಸನಿಗೆ, “ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಏನೂ ಹೇಳಬೇಕಾಗಿಲ್ಲ. 17 ನೀನು ನಮ್ಮನ್ನು ಉರಿಯುವ ಕೊಂಡದಲ್ಲಿ ಎಸೆದರೆ ನಾವು ಆರಾಧಿಸುವ ದೇವರು ನಮ್ಮನ್ನು ರಕ್ಷಿಸಬಲ್ಲನು. ಆತನು ಇಚ್ಛಿಸಿದರೆ ನಮ್ಮನ್ನು ನಿನ್ನ ಕೈಯಿಂದ ಬಿಡಿಸಬಲ್ಲನು. 18 ಅರಸನೇ, ಒಂದುವೇಳೆ ದೇವರು ನಮ್ಮನ್ನು ರಕ್ಷಿಸದಿದ್ದರೂ ನಾವು ನಿನ್ನ ದೇವರುಗಳನ್ನು ಪೂಜಿಸುವುದಿಲ್ಲ. ನೀನು ನಿಲ್ಲಿಸಿದ ಬಂಗಾರದ ವಿಗ್ರಹವನ್ನು ಪೂಜಿಸುವುದಿಲ್ಲ. ಇದು ನಿನಗೆ ತಿಳಿದಿರಲಿ” ಎಂದು ಖಂಡಿತವಾಗಿ ಹೇಳಿದರು.

19 ಆಗ ನೆಬೂಕದ್ನೆಚ್ಚರನಿಗೆ ಬಹಳ ಕೋಪ ಬಂತು. ಶದ್ರಕ್, ಮೇಶಕ್, ಅಬೇದ್‌ನೆಗೋ ಅವರ ವಿರುದ್ಧವಾಗಿ ಅವನ ಮುಖಭಾವವು ಕೆರಳಿತು. ಕುಲುಮೆಯನ್ನು ಏಳರಷ್ಟು ಹೆಚ್ಚಾಗಿ ಉರಿಸಬೇಕೆಂದು ಆಜ್ಞಾಪಿಸಿದನು. 20 ಆಮೇಲೆ ನೆಬೂಕದ್ನೆಚ್ಚರನು, ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಬಂಧಿಸಿ ಉರಿಯುವ ಕೊಂಡದಲ್ಲಿ ಎಸೆಯಬೇಕೆಂದು ತನ್ನ ಸೈನ್ಯದಲ್ಲಿದ್ದ ಅತಿ ಬಲಶಾಲಿಗಳಾದ ಕೆಲವರಿಗೆ ಆಜ್ಞಾಪಿಸಿದನು.

21 ಅವರು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರನ್ನು ಚೆನ್ನಾಗಿ ಬಿಗಿದುಕಟ್ಟಿ ಉರಿಯುವ ಕೊಂಡದಲ್ಲಿ ಎಸೆದರು. ಅವರು ತಮ್ಮ ಶಲ್ಯ, ಇಜಾರು, ಟೊಪ್ಪಿಗೆ ಮೊದಲಾದ ಉಡುಪನ್ನು ಧರಿಸಿಕೊಂಡಿದ್ದರು. 22 ಆಜ್ಞೆಯನ್ನು ಕೊಟ್ಟಾಗ ಅರಸನು ತುಂಬ ಕೋಪದಲ್ಲಿದ್ದನು. ಆದ್ದರಿಂದ ತಕ್ಷಣ ಕುಲುಮೆಯಲ್ಲಿ ಅತಿ ಹೆಚ್ಚು ಬೆಂಕಿಯನ್ನು ಉರಿಸಲಾಯಿತು. ಆ ಜ್ವಾಲೆ ಎಷ್ಟು ಭಯಂಕರವಾಗಿತ್ತೆಂದರೆ ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಕುಲುಮೆಯಲ್ಲಿ ಎಸೆಯಲು ಹೋದ ಶಕ್ತಿಶಾಲಿಗಳಾದ ಸೈನಿಕರೇ ಅದರ ತಾಪಕ್ಕೆ ಸತ್ತುಹೋದರು. 23 ಶದ್ರಕ್, ಮೇಶಕ್, ಅಬೇದ್‌ನೆಗೋ ಈ ಮೂವರು ಕಟ್ಟಲ್ಪಟ್ಟವರಾಗಿ ಧಗಧಗನೆ ಉರಿಯುವ ಬೆಂಕಿಯಲ್ಲಿ ಬಿದ್ದುಬಿಟ್ಟರು.

24 ಅರಸನಾದ ನೆಬೂಕದ್ನೆಚ್ಚರನು ಬೆಚ್ಚಿ ತಟ್ಟನೆ ಎದ್ದುನಿಂತನು. ಅವನು ಆಶ್ಚರ್ಯಚಕಿತನಾಗಿ ತನ್ನ ಮಂತ್ರಿಗಳನ್ನು, “ನಾವು ಕೇವಲ ಮೂರು ಜನರನ್ನು ಕಟ್ಟಿದೆವು, ಕೇವಲ ಮೂರು ಜನರನ್ನು ಬೆಂಕಿಯಲ್ಲಿ ಎಸೆದೆವು. ಹೌದಲ್ಲವೇ?” ಎಂದು ಕೇಳಿದನು.

ಅವನ ಮಂತ್ರಿಗಳು, “ಹೌದು, ಮಹಾರಾಜನೇ” ಎಂದು ಉತ್ತರಿಸಿದರು.

25 ಆಗ ಅರಸನು, “ನೋಡಿರಿ, ನಾಲ್ಕು ಜನರು ಬೆಂಕಿಯಲ್ಲಿ ತಿರುಗಾಡುತ್ತಿರುವುದು ನನಗೆ ಕಾಣುತ್ತಿದೆ. ಅವರು ಕಟ್ಟಲ್ಪಟ್ಟಿಲ್ಲ. ಅವರನ್ನು ಬೆಂಕಿಯು ಸುಟ್ಟಿಲ್ಲ. ನಾಲ್ಕನೆಯವನು ದೇವಕುಮಾರನಂತೆ ಕಾಣುತ್ತಾನೆ” ಎಂದು ಹೇಳಿದನು.

26 ಆಗ ನೆಬೂಕದ್ನೆಚ್ಚರನು ಉರಿಯುವ ಕೊಂಡದ ಬಾಯಿಯ ಬಳಿಗೆ ಹೋಗಿ, “ಮಹೋನ್ನತನಾದ ದೇವರ ಸೇವಕರಾದ ಶದ್ರಕ್, ಮೇಶಕ್, ಅಬೆದ್‌ನೆಗೋ ಎಂಬವರೇ ಬನ್ನಿ, ಹೊರಗೆ ಬನ್ನಿ” ಎಂದು ಕೂಗಿದನು.

ಶದ್ರಕ್, ಮೇಶಕ್, ಅಬೇದ್‌ನೆಗೋ ಈ ಮೂವರು ಬೆಂಕಿಯೊಳಗಿಂದ ಹೊರಗೆ ಬಂದರು. 27 ಅವರು ಹೊರಗೆ ಬಂದ ಮೇಲೆ ಉಪರಾಜರು, ನಾಯಕರು, ದೇಶಾಧಿಪತಿಗಳು, ಮಂತ್ರಿಗಳು ಮತ್ತು ಇತರರು ಅವರ ಸುತ್ತಲೂ ನೆರೆದರು. ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಬೆಂಕಿಯು ಸುಟ್ಟಿಲ್ಲ. ಅವರ ದೇಹಕ್ಕೆ ಬೆಂಕಿಯು ಮುಟ್ಟಿಲ್ಲ. ಅವರ ಕೂದಲಿಗೂ ವಸ್ತ್ರಗಳಿಗೂ ಬೆಂಕಿಯು ತಾಕಿಲ್ಲ. ಬೆಂಕಿಯ ಸಮೀಪಕ್ಕೆ ಹೋದ ವಾಸನೆಯೂ ಅವರಿಗೆ ಮುಟ್ಟಿಲ್ಲ ಎಂಬುದನ್ನು ಅವರು ತಿಳಿದುಕೊಂಡರು.

28 ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳ ದೇವರಿಗೆ ಸ್ತೋತ್ರವಾಗಲಿ. ಅವರ ದೇವರು ತನ್ನ ದೂತನನ್ನು ಕಳುಹಿಸಿ ತನ್ನ ಸೇವಕರನ್ನು ಬೆಂಕಿಯಿಂದ ರಕ್ಷಿಸಿದ್ದಾನೆ. ಈ ಮೂರು ಜನರು ತಮ್ಮ ದೇವರ ಮೇಲೆ ವಿಶ್ವಾಸವಿಟ್ಟರು. ಅವರು ನನ್ನ ಆಜ್ಞೆಯನ್ನು ಪಾಲಿಸಲು ಒಪ್ಪಲಿಲ್ಲ. ಬೇರೆ ಯಾವ ದೇವರನ್ನೂ ಪೂಜಿಸುವುದಕ್ಕೆ ಅಥವಾ ಸೇವಿಸುವುದಕ್ಕೆ ಬದಲಾಗಿ ಸಾಯಲು ಅವರು ಸಿದ್ಧರಾಗಿದ್ದರು. 29 ನಾನು ಈಗ ಸಕಲ ಜನಾಂಗ, ಕುಲ, ಭಾಷೆಗಳ ಜನರಲ್ಲಿ ಯಾರಾದರೂ ಶದ್ರಕ್, ಮೇಶಕ್, ಅಬೇದ್‌ನೆಗೋ ಇವರ ದೇವರ ವಿರುದ್ಧವಾಗಿ ಮಾತನಾಡಿದರೆ ಅವರನ್ನು ತುಂಡುತುಂಡಾಗಿ ಕತ್ತರಿಸಿ ಅವರ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಬೇಕೆಂಬ ಆಜ್ಞೆಯನ್ನು ವಿಧಿಸುತ್ತೇನೆ. ಬೇರೆ ಯಾವ ದೇವರೂ ತನ್ನ ಭಕ್ತರನ್ನು ಈ ರೀತಿ ರಕ್ಷಿಸಲಾರನು” ಎಂದು ಹೇಳಿದನು. 30 ಬಳಿಕ ರಾಜನು ಶದ್ರಕ್, ಮೇಶಕ್ ಮತ್ತು ಅಬೇದ್‌ನೆಗೋ ಈ ಮೂವರಿಗೆ ಬಾಬಿಲೋನ್ ಸಂಸ್ಥಾನದಲ್ಲಿ ಹೆಚ್ಚು ಮಹತ್ವದ ಪದವಿಗಳನ್ನು ಕೊಟ್ಟನು.

ನೆಬೂಕದ್ನೆಚ್ಚರನಿಗೆ ಮರದ ಕನಸು

ಲೋಕದಲ್ಲೆಲ್ಲ ವಾಸಿಸುವ ಸಕಲ ಜನಾಂಗ, ಕುಲ, ಭಾಷೆಗಳ ಜನರಿಗೆ ಅರಸನಾದ ನೆಬೂಕದ್ನೆಚ್ಚರನು ಈ ಪತ್ರವನ್ನು ಕಳುಹಿಸಿದನು.

ಶುಭಾಶಯಗಳು,

ಮಹೋನ್ನತನಾದ ದೇವರು ನನಗೋಸ್ಕರ ಮಾಡಿದ ಸೂಚಕಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ನಿಮಗೆ ತಿಳಿಸಲು ನನಗೆ ಬಹಳ ಸಂತೋಷವಾಗುತ್ತದೆ.

ದೇವರು ಅಚ್ಚರಿಗೊಳಿಸುವ ಅದ್ಭುತಕಾರ್ಯಗಳನ್ನು ಮಾಡಿದ್ದಾನೆ.
    ದೇವರು ಅದ್ಭುತಕಾರ್ಯಗಳನ್ನು ಮಾಡಿದ್ದಾನೆ.
ದೇವರ ಸಾಮ್ರಾಜ್ಯವು ಶಾಶ್ವತವಾದದ್ದು.
    ದೇವರ ಆಳ್ವಿಕೆಯು ಎಲ್ಲಾ ತಲೆಮಾರುಗಳಲ್ಲಿಯೂ ಮುಂದುವರೆಯುವುದು.

ನೆಬೂಕದ್ನೆಚ್ಚರನಾದ ನಾನು ಅರಮನೆಯಲ್ಲಿದ್ದೆ; ಸುಖಸಂತೋಷದಿಂದ ಇದ್ದೆ. ಆಗ ನನಗೊಂದು ಕನಸು ಬಿತ್ತು. ಅದು ನನ್ನಲ್ಲಿ ಭಯವನ್ನುಂಟುಮಾಡಿತು. ನಾನು ನನ್ನ ಹಾಸಿಗೆಯ ಮೇಲೆ ಮಲಗಿದ್ದೆ. ಅನೇಕ ಚಿತ್ರಗಳನ್ನು ಮತ್ತು ದೃಶ್ಯಗಳನ್ನು ಕಂಡೆ. ಅವುಗಳು ನನ್ನಲ್ಲಿ ಹೆಚ್ಚಿನ ಭಯವನ್ನುಂಟುಮಾಡಿದವು. ಅದಕ್ಕಾಗಿ ಬಾಬಿಲೋನಿನ ಎಲ್ಲಾ ವಿದ್ವಾಂಸರನ್ನು ಕರೆತರಬೇಕೆಂದು ಆಜ್ಞೆಯನ್ನು ಕೊಟ್ಟೆ. ಅವರು ನನ್ನ ಕನಸಿನ ಅರ್ಥವನ್ನು ತಿಳಿಸಲಿ ಎಂಬುದೇ ನನ್ನ ಉದ್ದೇಶವಾಗಿತ್ತು. ಮಂತ್ರವಾದಿಗಳು, ಜೋಯಿಸರು ಮತ್ತು ವಿದ್ವಾಂಸರು ಬಂದ ಮೇಲೆ ನಾನು ಅವರಿಗೆ ನನ್ನ ಕನಸಿನ ಬಗ್ಗೆ ಹೇಳಿದೆ. ಆದರೆ ಅವರಿಗೆ ಅರ್ಥವನ್ನು ತಿಳಿಸಲಾಗಲಿಲ್ಲ. ಕೊನೆಗೆ ದಾನಿಯೇಲನು ಬಂದನು. (ನಾನು ದಾನಿಯೇಲನಿಗೆ ನನ್ನ ದೇವರ ಸ್ಮರಣಾರ್ಥವಾಗಿ ಬೇಲ್ತೆಶಚ್ಚರನೆಂಬ ಹೆಸರನ್ನು ಇಟ್ಟಿದ್ದೆ. ಪರಿಶುದ್ಧ ದೇವರುಗಳ ಆತ್ಮವು ಅವನಲ್ಲಿದೆ.) ನಾನು ದಾನಿಯೇಲನಿಗೆ ನನ್ನ ಕನಸಿನ ಬಗ್ಗೆ ಹೇಳಿದೆ. ನಾನು, “ಬೇಲ್ತೆಶಚ್ಚರನೇ, ಎಲ್ಲಾ ಮಂತ್ರವಾದಿಗಳಿಗಿಂತಲೂ ನೀನು ಬಹಳ ಶ್ರೇಷ್ಠನು. ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿದೆ ಎಂದು ನನಗೆ ಗೊತ್ತಿದೆ. ನಿನಗೆ ತಿಳಿದುಕೊಳ್ಳಲು ಕಷ್ಟವಾದ ಯಾವ ರಹಸ್ಯವೂ ಇಲ್ಲವೆಂದು ನಾನು ಬಲ್ಲೆನು. ನಾನು ಕನಸಿನಲ್ಲಿ ಕಂಡದ್ದು ಇಂತಿದೆ. ಅದರ ಅರ್ಥವನ್ನು ನನಗೆ ಹೇಳು. 10 ನಾನು ನನ್ನ ಹಾಸಿಗೆಯಲ್ಲಿ ಮಲಗಿಕೊಂಡಾಗ ಕಂಡ ದೃಶ್ಯಗಳು ಇವು: ನನ್ನ ಎದುರಿಗೆ ಭೂಮಿಯ ಮಧ್ಯದಲ್ಲಿ ಬಹು ಎತ್ತರವಾದ ಒಂದು ಮರವು ಇದ್ದುದನ್ನು ನಾನು ಕಂಡೆ. 11 ಆ ಮರವು ಬಹಳ ದೊಡ್ಡದಾಗಿ ಮತ್ತು ಬಲಯುತವಾಗಿ ಬೆಳೆಯಿತು. ಆ ಮರದ ತುದಿಯು ಆಕಾಶಕ್ಕೆ ಮುಟ್ಟಿತ್ತು. ಅದನ್ನು ಭೂಲೋಕದ ಯಾವ ಸ್ಥಳದಿಂದಲಾದರೂ ನೋಡಬಹುದಾಗಿತ್ತು. 12 ಆ ಮರದ ಎಲೆಗಳು ಸುಂದರವಾಗಿದ್ದವು. ಅದು ತುಂಬ ಒಳ್ಳೆಯ ಹಣ್ಣುಗಳನ್ನು ಫಲಿಸಿತ್ತು. ಆ ಮರದಲ್ಲಿ ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಆಹಾರವಿತ್ತು. ಕಾಡುಪ್ರಾಣಿಗಳೂ ಆ ಮರದ ಕೆಳಗೆ ಆಶ್ರಯವನ್ನು ಪಡೆದಿದ್ದವು. ಅದರ ಕೊಂಬೆಗಳಲ್ಲಿ ಪಕ್ಷಿಗಳು ವಾಸಮಾಡಿಕೊಂಡಿದ್ದವು. ಪ್ರತಿಯೊಂದು ಪ್ರಾಣಿಗೂ ಆ ಮರದಿಂದ ಆಹಾರ ಸಿಕ್ಕುತ್ತಿತ್ತು.

13 “ನಾನು ನನ್ನ ಹಾಸಿಗೆಯಲ್ಲಿ ಮಲಗಿಕೊಂಡು ನನ್ನ ದರ್ಶನದಲ್ಲಿ ಅದೆಲ್ಲವನ್ನು ನೋಡುತ್ತಿದ್ದೆ. ಆಗ ಪವಿತ್ರ ದೇವದೂತನೊಬ್ಬನು ಆಕಾಶದಿಂದ ಕೆಳಗಿಳಿದು ಬರುವುದನ್ನು ಕಂಡೆ. 14 ಅವನು ಮಹಾ ಧ್ವನಿಯಿಂದ, ‘ಮರವನ್ನು ಕಡಿದುಹಾಕಿರಿ; ಅದರ ಕೊಂಬೆಗಳನ್ನು ಕಡಿದುಹಾಕಿರಿ; ಅದರ ಎಲೆಗಳನ್ನು ಕಿತ್ತುಹಾಕಿರಿ; ಹಣ್ಣುಗಳನ್ನು ಸುತ್ತಲೂ ಉದುರಿಸಿಬಿಡಿ. ಮರದ ಕೆಳಗೆ ಇದ್ದ ಪ್ರಾಣಿಗಳು ಓಡಿಹೋಗುವವು. ಅದರ ಕೊಂಬೆಗಳಲ್ಲಿ ವಾಸವಾಗಿದ್ದ ಪಕ್ಷಿಗಳು ಹಾರಿಹೋಗುವವು. 15 ಆದರೆ ಅದರ ಬೇರುಗಳು ಮತ್ತು ಬುಡದ ಮೋಟು ಭೂಮಿಯಲ್ಲಿ ಉಳಿಯಲಿ. ಅದರ ಸುತ್ತಲೂ ಕಬ್ಬಿಣದ ಮತ್ತು ಕಂಚಿನ ಒಂದು ಪಟ್ಟಿಯನ್ನು ಹಾಕಿರಿ. ಆ ಮೋಟು ಮತ್ತು ಬೇರುಗಳು ಹೊಲದಲ್ಲಿ ಉಳಿಯಲಿ. ಅದರ ಸುತ್ತ ಹುಲ್ಲು ಬೆಳೆದಿರಲಿ. ಅದು ಅಡವಿಯಲ್ಲಿ ಕಾಡುಪ್ರಾಣಿಗಳ ಮತ್ತು ಸಸಿಗಳ ಜೊತೆಯಲ್ಲಿ ಇರಲಿ; ಅದು ಇಬ್ಬನಿಯಿಂದ ನೆನೆಯಲಿ. 16 ಅದು ಮನುಷ್ಯನಂತೆ ವಿಚಾರ ಮಾಡುವುದನ್ನು ಬಿಟ್ಟು ಪ್ರಾಣಿಯಂತೆ ವಿಚಾರ ಮಾಡತೊಡಗಲಿ. ಅದು ಈ ಸ್ಥಿತಿಯಲ್ಲಿ ಏಳು ವರ್ಷವಿರಲಿ’ ಎಂದು ಹೇಳಿದನು.

17 “ಈ ಶಿಕ್ಷೆಯನ್ನು ದೇವದೂತನು ಸಾರಿದನು. ಮಾನವ ಸಾಮ್ರಾಜ್ಯಗಳ ಮೇಲೆ ಮಹೋನ್ನತನಾದ ದೇವರು ಆಳುವನು. ಅವನು ಆ ಸಾಮ್ರಾಜ್ಯಗಳನ್ನು ತನಗೆ ಬೇಕಾದವರಿಗೆ ಒಪ್ಪಿಸುವನು, ಕನಿಷ್ಠರನ್ನು ನೇಮಿಸುವನು ಎಂಬುದು ಲೋಕದ ಜನರಿಗೆಲ್ಲ ತಿಳಿದುಬರಲಿ ಎಂದೇ ಅವನು ಸಾರಿದನು.

18 “ಅರಸನಾದ ನೆಬೂಕದ್ನೆಚ್ಚರನೆಂಬ ನಾನು ಈ ಕನಸನ್ನು ಕಂಡೆನು. ಈಗ ನೀನು, ಬೇಲ್ತೆಶಚ್ಚರನೇ (ದಾನಿಯೇಲನೇ), ಇದರ ಅರ್ಥವನ್ನು ನನಗೆ ತಿಳಿಸು. ನನ್ನ ರಾಜ್ಯದಲ್ಲಿರುವ ವಿದ್ವಾಂಸರಲ್ಲಿ ಯಾರೂ ಇದರ ಅರ್ಥವನ್ನು ನನಗೆ ಹೇಳಲಾರರು. ಆದರೆ ನೀನು ಈ ಕನಸಿನ ಅರ್ಥವನ್ನು ತಿಳಿಸಬಲ್ಲೆ. ಏಕೆಂದರೆ ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿರುವದು ನನಗೆ ತಿಳಿದದೆ” ಎಂದೆನು.

19 ಆಗ ದಾನಿಯೇಲನು (ಬೇಲ್ತೆಶಚ್ಚರನು) ಸುಮಾರು ಒಂದು ಗಂಟೆಯವರೆಗೆ ಮೌನವಾಗಿದ್ದನು. ಅವನ ಬುದ್ಧಿಗೆ ತೋರಿದ ವಿಷಯಗಳು ಅವನನ್ನು ಗಾಬರಿಪಡಿಸಿದವು. ಆಗ ರಾಜನು, “ಬೇಲ್ತೆಶಚ್ಚರನೇ, ಕನಸು ಅಥವಾ ಕನಸಿನ ಅರ್ಥವು ನಿನ್ನನ್ನು ಭಯಗೊಳಿಸದಿರಲಿ” ಎಂದು ಧೈರ್ಯ ಹೇಳಿದನು.

ಆಗ ಬೇಲ್ತೆಶಚ್ಚರನು ಅರಸನಿಗೆ, “ನನ್ನ ಒಡೆಯನೇ, ಈ ಕನಸು ನಿನ್ನ ವಿರೋಧಿಗಳಿಗೆ ಫಲಿಸಲಿ. ಇದರ ಅರ್ಥವು ನಿನ್ನ ವಿರೋಧಿಗಳ ಅನುಭವಕ್ಕೆ ಬರಲಿ ಎಂದು ನಾನು ಹಾರೈಸುತ್ತೇನೆ. 20-21 ನೀನು ನಿನ್ನ ಕನಸಿನಲ್ಲಿ ಒಂದು ಮರವನ್ನು ಕಂಡೆ. ಆ ಮರವು ದೊಡ್ಡದಾಗಿ ಮತ್ತು ಬಲಯುತವಾಗಿ ಬೆಳೆಯಿತು. ಅದರ ತುದಿ ಆಕಾಶವನ್ನು ಮುಟ್ಟಿತ್ತು. ಅದು ಭೂಲೋಕದ ಎಲ್ಲೆಡೆಯಿಂದಲೂ ಕಾಣಿಸುತ್ತಿತ್ತು. ಅದರ ಎಲೆಗಳು ಸುಂದರವಾಗಿದ್ದವು: ಅದು ಸಾಕಷ್ಟು ಹಣ್ಣುಗಳನ್ನು ಫಲಿಸಿತ್ತು. ಆ ಹಣ್ಣುಗಳು ಎಲ್ಲರಿಗೂ ಸಾಕಾಗುವಷ್ಟು ಆಹಾರವನ್ನು ಕೊಟ್ಟವು. ಅದು ಕಾಡುಪ್ರಾಣಿಗಳಿಗೆ ವಾಸಸ್ಥಾನವಾಗಿತ್ತು; ಅದರ ಕೊಂಬೆಗಳು ಪಕ್ಷಿಗಳಿಗೆ ಗೂಡುಕಟ್ಟುವ ಸ್ಥಳಗಳಾಗಿದ್ದವು. ಆ ಮರವನ್ನು ನೀನು ನೋಡಿದೆ. 22 ಅರಸನೇ, ನೀನೇ ಆ ಮರ. ನೀನು ಪ್ರಖ್ಯಾತನೂ ಮತ್ತು ಪ್ರಬಲನೂ ಆಗಿರುವೆ. ನೀನು ಗಗನಚುಂಬಿಯಾದ ಆ ಮರದಂತೆ ಬೆಳೆದಿರುವೆ. ನಿನ್ನ ಪ್ರಾಬಲ್ಯವು ಈ ಭೂಮಿಯಲ್ಲಿ ದೂರದೂರದವರೆಗೆ ಹಬ್ಬಿದೆ.

23 “ಅರಸನೇ, ನೀನು ಆಕಾಶದಿಂದ ಇಳಿದುಬರುತ್ತಿದ್ದ ಒಬ್ಬ ಪರಿಶುದ್ಧ ದೇವದೂತನನ್ನು ಕಂಡೆ. ಅವನು, ‘ಮರವನ್ನು ಕಡಿದು ನಾಶಮಾಡಿರಿ. ಅದರ ಬುಡದ ಮೋಟಿನ ಸುತ್ತಲೂ ಕಬ್ಬಿಣದ ಮತ್ತು ಕಂಚಿನ ಒಂದು ಪಟ್ಟಿಯನ್ನು ಹಾಕಿರಿ. ಆ ಬುಡದ ಮೋಟನ್ನು ಮತ್ತು ಬೇರುಗಳನ್ನು ಭೂಮಿಯಲ್ಲಿ ಬಿಟ್ಟುಬಿಡಿ. ಅದರ ಸುತ್ತಲೂ ಕಾಡಿನ ಹುಲ್ಲು ಬೆಳೆಯಲಿ. ಅದು ಇಬ್ಬನಿಯಿಂದ ತೋಯ್ದು ಹೋಗಲಿ. ಅದು ಕಾಡುಪ್ರಾಣಿಯಂತೆ ಇರುವುದು. ಅದು ಏಳು ವರ್ಷ ಕಳೆಯುವವರೆಗೆ ಹಾಗೆಯೇ ಇರುವುದು’ ಎಂದು ಹೇಳಿದನು.

24 “ಕನಸಿನ ಅರ್ಥವು ಹೀಗಿದೆ: ಅರಸನೇ, ಮಹೋನ್ನತನಾದ ದೇವರು ನನ್ನ ಒಡೆಯನಾದ ಅರಸನಿಗೆ ಹೀಗಾಗಬೇಕೆಂದು ಆಜ್ಞಾಪಿಸಿದ್ದಾನೆ. 25 ರಾಜನಾದ ನೆಬೂಕದ್ನೆಚ್ಚರನೇ, ನಿನ್ನನ್ನು ಬಲವಂತದಿಂದ ಜನರಿಂದ ದೂರಮಾಡುವರು. ನೀನು ಕಾಡುಪ್ರಾಣಿಗಳೊಂದಿಗೆ ವಾಸಮಾಡುವೆ; ಹಸುಗಳಂತೆ ಹುಲ್ಲು ತಿನ್ನುವೆ; ಇಬ್ಬನಿಯಿಂದ ತೋಯಿಸಿಕೊಳ್ಳುವೆ. ಏಳು ವರ್ಷಗಳು ಕಳೆಯುವವು. ಆಗ ನೀನು ಮಹೋನ್ನತನಾದ ದೇವರು ಮಾನವರ ಸಾಮ್ರಾಜ್ಯದ ಮೇಲೆ ಆಳ್ವಿಕೆ ಮಾಡುತ್ತಾನೆ ಮತ್ತು ತನಗೆ ಬೇಕಾದವರಿಗೆ ರಾಜ್ಯವನ್ನು ಕೊಡುತ್ತಾನೆ ಎಂಬ ಪಾಠವನ್ನು ಕಲಿಯುವೆ.

26 “ಮರದ ಬುಡದ ಮೋಟನ್ನು ಮತ್ತು ಅದರ ಬೇರುಗಳನ್ನು ಭೂಮಿಯಲ್ಲಿಯೇ ಬಿಟ್ಟುಬಿಡಿ ಎಂಬುದರ ಅರ್ಥವೇನೆಂದರೆ, ನಿನ್ನ ರಾಜ್ಯವನ್ನು ನಿನಗೆ ಹಿಂತಿರುಗಿಸಲಾಗುವುದು. ಮಹೋನ್ನತನಾದ ದೇವರು ನಿನ್ನ ಸಾಮ್ರಾಜ್ಯದ ಮೇಲೆ ಆಳ್ವಿಕೆ ಮಾಡುತ್ತಾನೆ ಎಂಬುದನ್ನು ನೀನು ತಿಳಿದುಕೊಂಡ ಬಳಿಕ ಹೀಗಾಗುವುದು. 27 ಆದ್ದರಿಂದ ರಾಜನೇ, ನನ್ನ ಬುದ್ಧಿವಾದವನ್ನು ದಯವಿಟ್ಟು ಒಪ್ಪಿಕೊ. ನೀನು ಪಾಪಕೃತ್ಯಗಳನ್ನು ಮಾಡಬೇಡ. ನೀತಿಯನ್ನು ಅನುಸರಿಸು; ಕೆಟ್ಟದ್ದನ್ನು ಮಾಡಬೇಡ. ಬಡಜನರಿಗೆ ಕರುಣೆಯನ್ನು ತೋರು. ಇದರಿಂದ ನಿನ್ನ ನೆಮ್ಮದಿಯ ಕಾಲವು ಹೆಚ್ಚಾಗುವುದು. ಇದೇ ನನ್ನ ಬುದ್ಧಿವಾದ” ಎಂದು ಅರಿಕೆ ಮಾಡಿದನು.

28 ಇದೆಲ್ಲವೂ ಅರಸನಾದ ನೆಬೂಕದ್ನೆಚ್ಚರನ ಅನುಭವಕ್ಕೆ ಬಂತು. 29-30 ಕನಸು ಕಂಡ ಹನ್ನೆರಡು ತಿಂಗಳುಗಳಾದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಬಾಬಿಲೋನಿನಲ್ಲಿದ್ದ ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಮಾಳಿಗೆಯ ಮೇಲಿದ್ದಾಗ ಅರಸನು, “ಈ ಬಾಬಿಲೋನ್ ನಗರವನ್ನು ನೋಡಿ, ನಾನು ಈ ಮಹಾನಗರವನ್ನು ಕಟ್ಟಿದೆ. ಇದು ನನ್ನ ಅರಮನೆ. ನಾನು ನನ್ನ ಸಾಮರ್ಥ್ಯದಿಂದ ಈ ಅರಮನೆಯನ್ನು ಕಟ್ಟಿದೆ. ನಾನು ಎಂಥಾ ದೊಡ್ಡವನು ಎಂದು ಲೋಕಕ್ಕೆ ತೋರಿಸಲು ನಾನು ಈ ಅರಮನೆಯನ್ನು ಕಟ್ಟಿದೆ” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿದ್ದನು.

31 ಆ ಶಬ್ದಗಳು ಇನ್ನೂ ಬಾಯಿಯಲ್ಲಿಯೇ ಇದ್ದಾಗ, ಆಕಾಶವಾಣಿಯಾಯಿತು. ಆ ಧ್ವನಿಯು, “ಅರಸನಾದ ನೆಬೂಕದ್ನೆಚ್ಚರನೇ, ನಿನ್ನಿಂದ ನಿನ್ನ ರಾಜಪದವಿಯನ್ನು ಕಿತ್ತುಕೊಳ್ಳಲಾಗಿದೆ. 32 ಜನರನ್ನು ಬಿಟ್ಟುಹೋಗುವಂತೆ ನಿನ್ನನ್ನು ಒತ್ತಾಯಿಸಲಾಗುವುದು. ನೀನು ಕಾಡುಪ್ರಾಣಿಗಳೊಂದಿಗೆ ವಾಸಿಸುವೆ. ಹಸುಗಳಂತೆ ಹುಲ್ಲು ತಿನ್ನುವೆ; ನೀನು ಪಾಠ ಕಲಿಯುವದಕ್ಕೆ ಏಳು ವರ್ಷ ಬೇಕಾಗುವುದು. ಆಗ ಮಹೋನ್ನತನಾದ ದೇವರು ಮಾನವನ ಸಾಮ್ರಾಜ್ಯಗಳ ಮೇಲೆ ಆಳ್ವಿಕೆ ಮಾಡುತ್ತಾನೆ ಮತ್ತು ತನಗೆ ಬೇಕಾದವರಿಗೆ ಸಾಮ್ರಾಜ್ಯವನ್ನು ಕೊಡುತ್ತಾನೆ ಎಂಬ ಸತ್ಯವನ್ನು ನೀನು ತಿಳಿದುಕೊಳ್ಳುವೆ” ಎಂದು ನುಡಿಯಿತು.

33 ಆ ಮಾತುಗಳು ತಕ್ಷಣ ನೆರವೇರಿದವು. ನೆಬೂಕದ್ನೆಚ್ಚರನು ಜನರನ್ನು ಬಿಟ್ಟುಹೋಗಬೇಕಾಯಿತು. ಅವನು ಹಸುಗಳಂತೆ ಹುಲ್ಲು ತಿನ್ನತೊಡಗಿದನು. ಅವನು ಇಬ್ಬನಿಯಿಂದ ನೆನೆದನು. ಅವನ ಕೂದಲುಗಳು ಹದ್ದಿನ ಗರಿಗಳಂತೆ ಬೆಳೆದವು. ಅವನ ಉಗುರುಗಳು ಪಕ್ಷಿಗಳ ಉಗುರುಗಳಂತೆ ಬೆಳೆದವು.

34 ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಆಕಾಶದ ಕಡೆಗೆ ನೋಡಿದೆ. ಆಗ ನಾನು ಸ್ವಸ್ಥ ಬುದ್ಧಿಯುಳ್ಳವನಾಗಿದ್ದೆ. ಬಳಿಕ ನಾನು ಮಹೋನ್ನತನಾದ ದೇವರನ್ನು ಸ್ತುತಿಸಿದೆ. ನಿತ್ಯನಾದ ಆ ದೇವರನ್ನು ಕೊಂಡಾಡಿದೆ. ಸ್ತೋತ್ರಮಾಡಿದೆ.

ದೇವರ ಆಳ್ವಿಕೆಯು ಶಾಶ್ವತವಾದದ್ದು!
    ಆತನ ಸಾಮ್ರಾಜ್ಯವು ಎಲ್ಲಾ ತಲೆಮಾರುಗಳಲ್ಲಿಯೂ ಇರುವುದು.
35 ಭೂಮಿಯ ಜನರು ಬಹು ಮುಖ್ಯರಲ್ಲ.
    ದೇವರು ಪರಲೋಕ ಸಮೂಹದವರಿಗೂ ಭೂಲೋಕದ ನಿವಾಸಿಗಳಿಗೂ ತನ್ನ ಚಿತ್ತಾನುಸಾರ ಮಾಡುತ್ತಾನೆ.
ಯಾರೂ ಆತನನ್ನು ತಡೆಯಲಾರರು!
    ಯಾರೂ ಆತನನ್ನು ಪ್ರಶ್ನಿಸಲಾರರು!

36 ಆಗ ದೇವರು ನನಗೆ ಸರಿಯಾದ ಬುದ್ಧಿಯನ್ನು ಕೊಟ್ಟನು. ನನಗೆ ರಾಜನ ಗೌರವ, ಪ್ರಭಾವ, ವೈಭವಗಳು ಮತ್ತೆ ಲಭಿಸಿದವು. ನನ್ನ ಮಂತ್ರಿಗಳೂ ಅಧಿಪತಿಗಳೂ ನನ್ನನ್ನು ಸ್ವೀಕರಿಸಿದರು. ನಾನು ಮತ್ತೆ ಅರಸನಾದೆನು. ನಾನು ಮೊದಲಿಗಿಂತಲೂ ಅಧಿಕ ಶಕ್ತಿಶಾಲಿಯಾದ ಮತ್ತು ಪ್ರಭಾವಶಾಲಿಯಾದ ಅರಸನಾದೆನು. 37 ಅರಸ ನೆಬೂಕದ್ನೆಚ್ಚರನಾದ ನಾನು ಈಗ ಪರಲೋಕದ ರಾಜನನ್ನು ಘನಪಡಿಸುತ್ತೇನೆ, ಮಹಿಮೆಪಡಿಸುತ್ತೇನೆ. ಆತನು ಮಾಡುವದೆಲ್ಲ ಸರಿ. ಆತನು ಯಾವಾಗಲೂ ನ್ಯಾಯವಂತನಾಗಿದ್ದಾನೆ. ಆತನು ಗರ್ವಿಷ್ಠರನ್ನು ದೀನರನ್ನಾಗಿ ಮಾಡಬಲ್ಲನು.

1 ಯೋಹಾನ 5

ದೇವರ ಮಕ್ಕಳು ಲೋಕದ ವಿರುದ್ಧ ಜಯಗಳಿಸುವರು

ಯೇಸುವೇ ಕ್ರಿಸ್ತನೆಂದು ನಂಬುವವರು ದೇವರ ಮಕ್ಕಳಾಗಿದ್ದಾರೆ. ತಂದೆಯನ್ನು (ದೇವರನ್ನು) ಪ್ರೀತಿಸುವವನು ತಂದೆಯ ಮಕ್ಕಳನ್ನೂ ಪ್ರೀತಿಸುತ್ತಾನೆ. ನಾವು ದೇವರ ಮಕ್ಕಳನ್ನು ಪ್ರೀತಿಸುತ್ತಿದ್ದೇವೆಂಬುದು ನಮಗೆ ಹೇಗೆ ತಿಳಿದಿದೆ? ನಾವು ದೇವರನ್ನು ಪ್ರೀತಿಸುತ್ತಿರುವುದರಿಂದ ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗಿರುವುದರಿಂದ ದೇವರ ಆಜ್ಞೆಗಳು ನಮಗೆ ತಿಳಿದಿವೆ. ದೇವರನ್ನು ಪ್ರೀತಿಸುವುದು ಎಂದರೆ ಆತನ ಆಜ್ಞೆಗಳಿಗೆ ವಿಧೇಯರಾಗಿರುವುದು. ದೇವರ ಆಜ್ಞೆಗಳು ನಮಗೆ ಕಠಿಣವಾದವುಗಳಲ್ಲ. ಏಕೆಂದರೆ ದೇವರಿಂದ ಹೊಸದಾಗಿ ಹುಟ್ಟಿರುವ ಪ್ರತಿಯೊಬ್ಬನೂ ಲೋಕದ ವಿರುದ್ಧ ಗೆಲ್ಲುವ ಶಕ್ತಿಯನ್ನು ಹೊಂದಿದ್ದಾನೆ. ಲೋಕದ ವಿರುದ್ಧ ಜಯಗಳಿಸಿದ್ದು ನಮ್ಮ ನಂಬಿಕೆಯೇ. ಆದ್ದರಿಂದ ಲೋಕದ ವಿರುದ್ಧ ಜಯಗಳಿಸುವವನು ಯಾರು? ಯೇಸುವನ್ನು ದೇವರ ಮಗನೆಂದು ನಂಬುವ ವ್ಯಕ್ತಿಯು ಮಾತ್ರ ಜಯಗಳಿಸುತ್ತಾನೆ.

ದೇವರು ತನ್ನ ಮಗನನ್ನು ಕುರಿತು ನಮಗೆ ತಿಳಿಸಿದನು

ಬಂದಾತನೇ ಯೇಸು ಕ್ರಿಸ್ತನು. ಯೇಸು ನೀರಿನಿಂದ ಮಾತ್ರವಲ್ಲದೆ ರಕ್ತದಿಂದ ಬಂದನು. ಇದು ನಿಜವೆಂದು ನಮಗೆ ಆತ್ಮನು ತಿಳಿಸುತ್ತಾನೆ. ಏಕೆಂದರೆ ಆತ್ಮನು ಸತ್ಯಸ್ವರೂಪನಾಗಿದ್ದಾನೆ. ಆದ್ದರಿಂದ ಯೇಸುವಿನ ಬಗ್ಗೆ ನಮಗೆ ತಿಳಿಸಲು ಮೂರು ಸಾಕ್ಷಿಗಳಿವೆ: ಆತ್ಮ, ನೀರು ಮತ್ತು ರಕ್ತ. ಈ ಮೂರು ಸಾಕ್ಷಿಗಳ ಅಭಿಪ್ರಾಯವು ಒಂದೇ.

ಜನರು ಸಾಕ್ಷಿ ಹೇಳಿದಾಗ ನಾವು ನಂಬುತ್ತೇವೆ. ಆದರೆ ದೇವರ ಸಾಕ್ಷಿಯು ಅದಕ್ಕಿಂತಲೂ ವಿಶೇಷವಾಗಿದೆ. ದೇವರು ತನ್ನ ಸ್ವಂತ ಮಗನ ಕುರಿತು ಹೇಳಿದ ಸತ್ಯವೇ ಆತನು ನಮಗೆ ನೀಡಿದ ಸಾಕ್ಷಿಯಾಗಿದೆ. 10 ದೇವರ ಮಗನನ್ನು ನಂಬುವವನು ದೇವರಿಂದ ಸಾಕ್ಷೀಕರಿಸಲ್ಪಟ್ಟ ಸತ್ಯವನ್ನು ಹೊಂದಿರುತ್ತಾನೆ. ದೇವರನ್ನು ನಂಬದೆ ಇರುವವನು, ದೇವರನ್ನು ಸುಳ್ಳುಗಾರನನ್ನಾಗಿ ಮಾಡುತ್ತಾನೆ. ಏಕೆಂದರೆ ದೇವರು ತನ್ನ ಮಗನ ಬಗ್ಗೆ ನಮಗೆ ಹೇಳಿದುದನ್ನು ಅವನು ನಂಬುವುದಿಲ್ಲ. 11 ನಮಗೆ ನಿತ್ಯಜೀವವನ್ನು ತಾನು ದಯಪಾಲಿಸಿರುವುದಾಗಿ ದೇವರು ಹೇಳಿದನು. ಈ ನಿತ್ಯಜೀವವು ಆತನ ಮಗನಲ್ಲಿದೆ. (ಯೇಸು) 12 ಯಾವನಲ್ಲಿ ಆ ಮಗನಿರುತ್ತಾನೋ ಅವನಲ್ಲಿ ಆ ಜೀವವಿದೆ. ಆದರೆ ಯಾವನಲ್ಲಿ ದೇವರ ಮಗನು ಇರುವುದಿಲ್ಲವೋ ಅವನಲ್ಲಿ ಆ ಜೀವವಿಲ್ಲ.

ಈಗ ನಮಗೆ ನಿತ್ಯಜೀವವಿದೆ

13 ದೇವರ ಮಗನಲ್ಲಿ ನಂಬಿಕೆಯಿಟ್ಟಿರುವ ನಿಮಗೆ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಈಗ ನಿಮಗೆ ನಿತ್ಯಜೀವವಿದೆ ಎಂಬುದು ನಿಮಗೆ ಗೊತ್ತಾಗುವಂತೆ ನಾನು ಈ ಪತ್ರ ಬರೆಯುತ್ತಿದ್ದೇನೆ. 14 ನಾವು ಯಾವ ಸಂದೇಹಗಳೂ ಇಲ್ಲದೆ ದೇವರ ಬಳಿಗೆ ಬರಲು ಸಾಧ್ಯವಿದೆ. ಇದರ ಅರ್ಥವೇನೆಂದರೆ (ದೇವರ ಚಿತ್ತಕ್ಕನುಸಾರವಾಗಿ) ನಮಗೆ ಬೇಕಾದವುಗಳಿಗಾಗಿ ದೇವರನ್ನು ಕೇಳಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ. 15 ನಾವು ದೇವರನ್ನು ಬೇಡಿಕೊಂಡಾಗಲೆಲ್ಲಾ ಆತನು ನಮ್ಮ ಬೇಡಿಕೆಗಳನ್ನು ಕೇಳುವುದರಿಂದ ಆತನಲ್ಲಿ ಬೇಡಿಕೊಂಡದ್ದನ್ನು ಆತನು ನಮಗೆ ದಯಪಾಲಿಸುತ್ತಾನೆಂಬುದು ನಮಗೆ ತಿಳಿದಿದೆ.

16 ಕ್ರಿಸ್ತನಲ್ಲಿ ಸಹೋದರನಾಗಲಿ ಅಥವಾ ಸಹೋದರಿಯಾಗಲಿ ಪಾಪ ಮಾಡುವುದನ್ನು (ನಿತ್ಯವಾದ ಮರಣಕ್ಕೆ ನಡೆಸುವ ಪಾಪವನ್ನಲ್ಲ) ಕಂಡ ವ್ಯಕ್ತಿಯು ತನ್ನ ಆ ಸಹೋದರನಿಗಾಗಿ ಅಥವಾ ಆ ಸಹೋದರಿಗಾಗಿ ಪ್ರಾರ್ಥಿಸಬೇಕು. ಆಗ ದೇವರು ಆ ಸಹೋದರನಿಗೆ ಅಥವಾ ಆ ಸಹೋದರಿಗೆ ಜೀವವನ್ನು ದಯಪಾಲಿಸುತ್ತಾನೆ. ಶಾಶ್ವತವಾದ ಮರಣದ ಕಡೆಗೆ ನಡೆಸದಿರುವ ಪಾಪವನ್ನು ಮಾಡುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಮರಣದ ಕಡೆಗೆ ನಡೆಸುವ ಪಾಪವಿದೆ. ಈ ಪಾಪ ಮಾಡುವವರಿಗಾಗಿ ಪ್ರಾರ್ಥಿಸಬೇಕೆಂದು ನಾನು ಹೇಳುತ್ತಿಲ್ಲ. 17 ನೀತಿಗೆ ವಿರುದ್ಧವಾದುದೆಲ್ಲಾ ಪಾಪವಾಗಿದೆ. ಆದರೆ ಶಾಶ್ವತ ಮರಣದ ಕಡೆಗೆ ಕೊಂಡೊಯ್ಯದಿರುವ ಪಾಪವೂ ಇದೆ.

18 ದೇವರಿಂದ ಹೊಸದಾಗಿ ಹುಟ್ಟಿದವನು ಪಾಪದಲ್ಲೇ ಮುಂದುವರಿಯುವುದಿಲ್ಲವೆಂದು ನಮಗೆ ತಿಳಿದಿದೆ. ದೇವರ ಮಗನಾದ ಯೇಸು ಅವನನ್ನು ಸುರಕ್ಷಿತವಾಗಿ ಕಾಪಾಡುತ್ತಾನೆ. ಕೆಡುಕನು ಅವನಿಗೆ ಕೇಡುಮಾಡಲಾಗುವುದಿಲ್ಲ. 19 ನಾವು ದೇವರಿಗೆ ಸೇರಿದವರೆಂಬುದು ನಮಗೆ ತಿಳಿದಿದೆ. ಆದರೆ ಈ ಲೋಕವು ಕೆಡುಕನ ವಶದಲ್ಲಿದೆ. 20 ದೇವರ ಮಗನು ಬಂದಿದ್ದಾನೆಂಬುದು ನಮಗೆ ತಿಳಿದಿದೆ. ದೇವರ ಮಗನು ನಮಗೆ ತಿಳುವಳಿಕೆಯನ್ನು ದಯಪಾಲಿಸಿರುವನು. ಈಗ ನಾವು ದೇವರನ್ನು ತಿಳಿದುಕೊಳ್ಳಬಲ್ಲೆವು. ಸತ್ಯವಾಗಿರುವಾತನು ದೇವರೇ. ಸತ್ಯ ದೇವರಲ್ಲಿಯೂ ಮತ್ತು ಆತನ ಮಗನಾದ ಯೇಸು ಕ್ರಿಸ್ತನಲ್ಲಿಯೂ ನಾವು ನೆಲೆಸಿದ್ದೇವೆ. ಆತನು ಸತ್ಯದೇವರೂ ನಿತ್ಯಜೀವವೂ ಆಗಿದ್ದಾನೆ. 21 ಆದ್ದರಿಂದ ಪ್ರಿಯ ಮಕ್ಕಳೇ, ನೀವು ಸುಳ್ಳುದೇವರುಗಳಿಂದ ದೂರವಾಗಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International