Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 47-48

ಆಲಯದಿಂದ ನೀರಿನ ಹರಿಯುವಿಕೆ

47 ಅವನು ಆಲಯದ ಪ್ರವೇಶ ದ್ವಾರಕ್ಕೆ ನನ್ನನ್ನು ಕರೆದುಕೊಂಡು ಹೋದನು. ನಾನು ಅಲ್ಲಿ ಆಲಯದ ಪೂರ್ವ ದ್ವಾರದ ಕೆಳಗಡೆಯಿಂದ ಹರಿಯುವ ನೀರನ್ನು ಕಂಡೆನು. ಆಲಯದ ಮುಂಭಾಗ ಪೂರ್ವ ದಿಕ್ಕಿನಲ್ಲಿದೆ. ಆ ನೀರು ಆಲಯದ ದಕ್ಷಿಣದ ಭಾಗದ ಕೆಳಗಿನಿಂದ ಹರಿಯುತ್ತಾ ಯಜ್ಞವೇದಿಯ ದಕ್ಷಿಣದ ಕಡೆಗೆ ಹರಿಯುತ್ತಿತ್ತು. ಅವನು ನನ್ನನ್ನು ಉತ್ತರದ ದ್ವಾರದಿಂದ ಹೊರಕ್ಕೆ ತಂದು, ದೇವಾಲಯದ ಹೊರ ಅಂಚಿನಲ್ಲಿಯೇ ಪೂರ್ವ ದ್ವಾರಕ್ಕೆ ತಂದನು. ಆ ದ್ವಾರದ ದಕ್ಷಿಣದ ಕಡೆಯಿಂದ ನೀರು ಹರಿದು ಬರುತ್ತಿತ್ತು.

ಅವನು ಕೈಯಲ್ಲಿ ಅಳತೆಯ ನೂಲನ್ನು ಹಿಡಿದುಕೊಂಡು ಪೂರ್ವದ ಕಡೆಗೆ ನಡೆದನು. ಅವನು ಸಾವಿರ ಮೊಳ ಅಳೆದನು. ನನ್ನನ್ನು ಆ ಸ್ಥಳದಲ್ಲಿ ನೀರಿನಲ್ಲಿ ನಡೆದುಕೊಂಡು ಬರುವಂತೆ ಹೇಳಿದನು. ನೀರು ನನ್ನ ಪಾದ ಮುಳುಗುವಷ್ಟು ಆಳವಿತ್ತು. ಅವನು ತಿರುಗಿ ಸಾವಿರ ಮೊಳ ಅಳೆದನು. ಆ ಜಾಗದಲ್ಲಿದ್ದ ನೀರಿನಲ್ಲಿ ನನಗೆ ನಡೆಯಲು ಹೇಳಿದನು. ಅಲ್ಲಿ ನೀರು ನನ್ನ ಮೊಣಕಾಲಿನಷ್ಟು ಆಳವಿತ್ತು. ತಿರುಗಿ ಅವನು ಸಾವಿರ ಮೊಳದಷ್ಟು ದೂರ ಅಳತೆ ಮಾಡಿದನು. ಆ ಸ್ಥಳದಲ್ಲಿ ನೀರಿನಲ್ಲಿ ನಡೆಯಲು ಹೇಳಿದನು. ಅಲ್ಲಿ ನೀರು ನನ್ನ ಸೊಂಟದಷ್ಟು ಆಳವಾಗಿತ್ತು. ಅವನು ಇನ್ನೂ ಒಂದು ಸಾವಿರ ಮೊಳ ದೂರ ಅಳೆದನು. ಅಲ್ಲಿ ನೀರು ಹೆಚ್ಚಿದ್ದು ನನ್ನಿಂದ ದಾಟಲು ಆಗದಷ್ಟು ಆಳವಿತ್ತು. ಅದು ನದಿಯಾಗಿತ್ತು. ಆ ನೀರಿನಲ್ಲಿ ಈಜಾಡಬಹುದಾಗಿತ್ತು. ದಾಟಲಾಗದ ಆಳವಾದ ಹೊಳೆಯಾಗಿತ್ತು. ಆಗ ಅವನು ನನಗೆ, “ನರಪುತ್ರನೇ, ನೀನು ನೋಡಿರುವ ವಿಷಯಗಳ ಬಗ್ಗೆ ಗಮನವಿಟ್ಟಿಯಾ?” ಎಂದು ಕೇಳಿದನು.

ಆಗ ಅವನು ನನ್ನನ್ನು ಹೊಳೆಯ ಪಕ್ಕದಲ್ಲೇ ಕರೆದುಕೊಂಡು ಹೋದನು. ನಾನು ನದಿಯ ತೀರದಲ್ಲಿ ನಡೆಯುತ್ತಿರುವಾಗ ಅದರ ಎರಡೂ ಕಡೆಗಳಲ್ಲಿ ಲೆಕ್ಕವಿಲ್ಲದಷ್ಟು ಮರಗಳನ್ನು ನೋಡಿದೆನು. ಅವನು ನನ್ನೊಡನೆ, “ಈ ನದಿಯು ಪೂರ್ವಕ್ಕೆ ಹೊರಟು ಅರಾಬಾ ತಗ್ಗಿನ ಕಡೆ ಹರಿಯುತ್ತಿದೆ. ಇದು ಮೃತ್ಯುಸಮುದ್ರವನ್ನು ಸೇರಿದಾಗ ಅದರ ನೀರು ಹೊಸದಾಗಿ ಶುದ್ಧವಾಗುವದು. ನೀರಿನಲ್ಲಿ ನಾನಾ ತರದ ಮೀನುಗಳು ಜೀವಿಸುವವು, ಮತ್ತು ಆ ಹೊಳೆಯು ಹರಿಯುವಲ್ಲೆಲ್ಲಾ ವಿವಿಧ ಜಾತಿಯ ಪ್ರಾಣಿಗಳು ವಾಸಿಸುವವು. 10 ಎಂಗೇದಿಯಿಂದ ಪ್ರಾರಂಭವಾಗಿ ಏನ್‌ಎಗ್ಲಯಿಮ್ ತನಕ ಬೆಸ್ತರು ಹೊಳೆಯ ದಡದಲ್ಲಿ ನಿಂತಿರುವದನ್ನು ನೀನು ನೋಡಬಹುದು. ಅವರು ತಮ್ಮ ಬಲೆಗಳನ್ನು ಬೀಸಿ ನಾನಾ ತರದ ಮೀನುಗಳನ್ನು ಹಿಡಿಯುವದನ್ನು ನೀನು ನೋಡಬಹುದು. ಭೂಮಧ್ಯ ಸಮುದ್ರದೊಳಗೆ ಎಷ್ಟು ವಿಧವಾದ ಮೀನುಗಳಿವೆಯೋ ಅಷ್ಟೇ ವಿಧವಾದ ಮೀನುಗಳು ಈ ಹೊಳೆಯಲ್ಲಿಯೂ ಇವೆ. 11 ಆದರೆ ಜವುಗು ನೆಲಗಳೂ ಸವುಳು ನೆಲಗಳೂ ಸಿಹಿಯಾಗುವದಿಲ್ಲ. ಅವು ಉಪ್ಪು ತಯಾರಿಸುವದಕ್ಕಾಗಿ ಉಪಯೋಗಿಸಲ್ಪಡುವವು. 12 ಎಲ್ಲಾ ತರಹದ ಹಣ್ಣಿನ ಮರಗಳು ನದಿಯ ಇಕ್ಕೆಡೆಗಳಲ್ಲಿಯೂ ಬೆಳೆಯುವವು. ಅವುಗಳ ಎಲೆಗಳು ಎಂದಿಗೂ ಒಣಗಿ ನೆಲಕ್ಕೆ ಉದುರವು. ಆ ಮರಗಳಲ್ಲಿ ಸದಾಕಾಲ ಹಣ್ಣುಗಳು ಇರುವವು. ಪ್ರತೀ ತಿಂಗಳಿಗೆ ಹಣ್ಣುಗಳನ್ನು ಕೊಡುವವು. ಯಾಕೆಂದರೆ ಆ ಮರಗಳಿಗೆ ನೀರು ಆಲಯದಿಂದ ಬರುತ್ತದೆ. ಅದರ ಹಣ್ಣುಗಳನ್ನು ಆಹಾರಕ್ಕಾಗಿಯೂ ಅದರ ಎಲೆಗಳಿಂದ ಔಷಧಿಯನ್ನೂ ತಯಾರಿಸಬಹುದು.”

ಕುಲಗಳಿಗನುಸಾರವಾಗಿ ದೇಶದ ವಿಭಜನೆ

13 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲರ ಹನ್ನೆರಡು ಕುಲಗಳಿಗೆ ದೇಶವನ್ನು ವಿಂಗಡಿಸುವಾಗ ಅವುಗಳ ಮೇರೆ ಯಾವುವೆಂದರೆ, ಯೋಸೇಫನಿಗೆ ಎರಡು ಪಾಲು ಇರುವದು. 14 ನೀವು ದೇಶವನ್ನು ಸಮಾನವಾಗಿ ಪಾಲು ಮಾಡಬೇಕು. ನಾನು ನಿಮ್ಮ ಪೂರ್ವಿಕರಿಗೆ ಈ ದೇಶವನ್ನು ಕೊಡುತ್ತೇನೆಂದು ವಾಗ್ದಾನ ಮಾಡಿದ್ದೆನು. ಈಗ ನಾನು ಇದನ್ನು ನಿಮಗೆ ಕೊಡುತ್ತಿದ್ದೇನೆ.

15 “ದೇಶದ ಮೇರೆ ಯಾವದೆಂದರೆ, ಉತ್ತರದ ಮೇರೆಯು ಭೂಮಧ್ಯ ಸಮುದ್ರದಲ್ಲಿ ಪ್ರಾರಂಭವಾಗಿ ಹೆತ್ಲೋನ್ ಕಡೆಗೂ ಅಲ್ಲಿಂದ ಚೆದಾದ್ ಕಡೆಗೂ 16 ಅಲ್ಲಿಂದ ಬೇರೋತ್ ಕಡೆಗೂ ಅಲ್ಲಿಂದ ಸಿಬ್ರಯಿಮ್ (ಇದು ದಮಸ್ಕ ಮತ್ತು ಹಾಮತ್‌ಗಳ ಮೇರೆಯಲ್ಲಿದೆ) ಕಡೆಗೂ ಅಲ್ಲಿಂದ ಹಾಚೇರ್ ಕಡೆಗೂ ಅಲ್ಲಿಂದ ಹತ್ತೀಕೋನ್ (ಇದು ಹವಾನದ ಮೇರೆಯಲ್ಲಿದೆ) ಕಡೆಗೂ ಹೋಗುತ್ತದೆ. 17 ಹೀಗೆ ಉತ್ತರದ ಮೇರೆಯು ಸಮುದ್ರದಿಂದ ದಮಸ್ಕದ ಉತ್ತರದ ಗಡಿಯಾದ ಹಚರ್ ಐನೋನ್ ಮತ್ತು ಹಮಾತಿಗೆ ಸೇರ್ಪಡೆಯಾಗುವದು. ಇದು ಉತ್ತರ ಭಾಗದ ಮೇರೆ.

18 “ಪೂರ್ವ ಭಾಗದಲ್ಲಿ, ಮೇರೆಯು ಹವ್ರಾನ್ ಮತ್ತು ದಮಸ್ಕದ ಮಧ್ಯದಲ್ಲಿರುವ ಹಚರ್ ಐನೋನ್ ಇಲ್ಲಿಂದ ಹೊರಟು ಜೋರ್ಡನ್ ಹೊಳೆಯ ತೀರದಲ್ಲಿ ಮುಂದುವರಿದು ಗಿಲ್ಯಾದಿಗೂ ಇಸ್ರೇಲ್ ರಾಜ್ಯಕ್ಕೂ ಮಧ್ಯದಲ್ಲಿ ಹರಿದು ಪೂರ್ವದ ಸಮುದ್ರದ ಕಡೆಗೆ ಹೋಗುತ್ತದೆ. ಅಲ್ಲಿಂದ ತಾಮಾರಿಗೆ ಸೇರುತ್ತದೆ. ಇದು ಪೂರ್ವ ಕಡೆಯ ಮೇರೆ.

19 “ದಕ್ಷಿಣ ಮೇರೆಯು ತಾಮಾರಿನಿಂದ ಹೊರಟು ಮೆರೀಬೋತ್-ಕಾದೇಶ್ ನಲ್ಲಿರುವ ನೀರಿನ ಬುಗ್ಗೆಯವರೆಗೂ ಹೋಗುವರು. ಬಳಿಕ ಅಲ್ಲಿಂದ ಹೊರಟು ಈಜಿಪ್ಟಿನ ನೀರಿನ ತೊರೆಯ ಮಾರ್ಗದಿಂದ ಭೂಮಧ್ಯ ಸಮುದ್ರವನ್ನು ಸೇರುವದು. ಇದು ದಕ್ಷಿಣದ ಮೇರೆ.

20 “ಪಶ್ಚಿಮದಲ್ಲಿ ಲೆಬೊಹಮಾತ್ ಎಂಬ ಸ್ಥಳದ ಮುಂಭಾಗದಲ್ಲಿರುವ ಸಮುದ್ರ ತೀರವೇ ಪಶ್ಚಿಮ ದಿಕ್ಕಿನ ಮೇರೆಯಾಗಿರುತ್ತದೆ.

21 “ಈ ದೇಶವನ್ನು ನಿಮ್ಮ ಕುಲಗಳಿಗನುಸಾರವಾಗಿ ನೀವು ವಿಂಗಡಿಸಬೇಕು. 22 ನೀವು ಇದನ್ನು ಸ್ವಂತ ಸ್ವಾಸ್ತ್ಯಕ್ಕಾಗಿ ವಿಂಗಡಿಸಬೇಕು. ನಿಮ್ಮ ಮಧ್ಯೆ ಪರದೇಶದವರೂ ಅವರ ಮಕ್ಕಳೂ ವಾಸವಾಗಿದ್ದಾರೆ. ಈ ಪರದೇಶಸ್ಥರು ಈ ದೇಶದ ನಿವಾಸಿಗಳಾಗಿರುವರು. ಅವರು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದ ಇಸ್ರೇಲಿನವರಂತಿರುತ್ತಾರೆ. ನೀವು ಅವರಿಗೂ ನಿಮ್ಮ ವಂಶದವರೊಂದಿಗೆ ಭೂಮಿಯನ್ನು ಕೊಡಬೇಕು. 23 ಯಾವ ಕುಲದವರೊಂದಿಗೆ ಆ ಪರದೇಶಸ್ಥನು ವಾಸವಾಗಿರುತ್ತಾನೋ ಅದೇ ಕುಲದವರು ಅವನಿಗೆ ನೆಲವನ್ನು ಕೊಡಬೇಕು.” ಇದು ನನ್ನ ಒಡೆಯನಾದ ಯೆಹೋವನ ನುಡಿ.

ಇಸ್ರೇಲಿನ ವಿವಿಧ ಕುಲದವರಿಗೆ ಸ್ವಾಸ್ತ್ಯ

48 1-7 “ಉತ್ತರದ ಮೇರೆಯು ಭೂಮಧ್ಯ ಸಮುದ್ರದಿಂದ ಪೂರ್ವಕ್ಕೆ ಹೋಗಿ ಅಲ್ಲಿಂದ ಹೆತ್ಲೋನಿಗೂ ಅಲ್ಲಿಂದ ಹಮಾತ್ ಕಣಿವೆಗೂ ಅಲ್ಲಿಂದ ಹಚರ್ ಏನಾನಿಗೂ ಹೋಗುವುದು. ಈ ಸ್ಥಳವು ಹಮಾತ್ ಮತ್ತು ದಮಸ್ಕಸ್‌ನ ಗಡಿಯಲ್ಲಿರುವದು. ಪೂರ್ವದ ಗಡಿಯಿಂದ ಪಶ್ಚಿಮದ ತನಕ ಹೋಗುವ ಈ ಪ್ರಾಂತ್ಯದಲ್ಲಿ ಇಸ್ರೇಲಿನ ದಾನ್, ಆಶೇರ್, ನಫ್ತಾಲಿ, ಮನಸ್ಸೆ, ಎಫ್ರಾಯೀಮ್ ರೂಬೇನ್ ಮತ್ತು ಯೆಹೂದ ಕುಲದ ಜನರಿಗೆ ಭೂಮಿಯು ಸಿಗುವದು.

ದೇಶದ ವಿಶೇಷವಾದ ಭಾಗ

“ಆ ಯೆಹೂದನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದವರೆಗೆ ನೀವು ಮೀಸಲಾಗಿಡಬೇಕಾದ ಭೂಮಿಯಿದೆ. ಇದಲ ಅಗಲ ಇಪ್ಪತ್ತೈದು ಸಾವಿರ ಮೊಳ. ಇದರ ಉದ್ದವು ಪೂರ್ವದಿಂದ ಪಶ್ಚಿಮದ ತನಕ ಇರುವ ಬೇರೆ ಕುಲದವರ ಸ್ವಾಸ್ತ್ಯದ ಭೂಮಿಯಷ್ಟಿರುವುದು. ಆಲಯವು ಈ ವಿಶೇಷವಾದ ಪ್ರಾಂತ್ಯದ ಮಧ್ಯದಲ್ಲಿರುವದು. ಈ ಭೂಮಿಯನ್ನು ನೀವು ಯೆಹೋವನಿಗಾಗಿ ಪ್ರತಿಷ್ಠಿಸಬೇಕು. ಇದು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಇಪ್ಪತ್ತು ಸಾವಿರ ಮೊಳ ಅಗಲವಾಗಿರುವದು. 10 ಈ ವಿಶೇಷವಾದ ಭೂಮಿಯನ್ನು ವಿಭಾಗಿಸಿ ಯಾಜಕರಿಗೆ ಮತ್ತು ಲೇವಿಯರಿಗೆ ಕೊಡಲಾಗುವುದು.

“ಯಾಜಕರು ಆ ಪ್ರದೇಶದ ಒಂದು ಭಾಗವನ್ನು ಪಡೆದುಕೊಳ್ಳುವರು. ಆ ಭಾಗದ ಉದ್ದವು ಉತ್ತರದಿಕ್ಕಿಗೆ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳ ಅಗಲವಾಗಿಯೂ ಪೂರ್ವಕ್ಕೆ ಹತ್ತು ಸಾವಿರ ಮೊಳ ಅಗಲವಾಗಿಯೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರುತ್ತದೆ. ಯೆಹೋವನ ಆಲಯವು ಈ ಪ್ರದೇಶದ ಮಧ್ಯದಲ್ಲಿರುವುದು. 11 ಈ ಭೂಮಿಯು ಚಾದೋಕನ ಸಂತತಿಯವರಿಗಿರುವದು. ಆ ಜನರು ನನ್ನ ಪರಿಶುದ್ಧ ಯಾಜಕರಾಗಿ ಆರಿಸಲ್ಪಟ್ಟಿರುತ್ತಾರೆ. ಯಾಕೆಂದರೆ ಇಸ್ರೇಲಿನ ಇತರ ಜನರು ನನ್ನನ್ನು ಬಿಟ್ಟು ತೊಲಗಿದರೂ ಇವರು ನನಗೆ ಸೇವೆಮಾಡುವದನ್ನು ಮುಂದುವರಿಸುತ್ತಿದ್ದರು. ಲೇವಿಕುಲದ ಜನರಂತೆ ಚಾದೋಕನ ಸಂತತಿಯವರು ನನ್ನನ್ನು ಬಿಟ್ಟುಹೋಗಲಿಲ್ಲ. 12 ಪವಿತ್ರ ಪ್ರಾಂತ್ಯದ ಈ ಭಾಗವು ಆ ಯಾಜಕರಿಗಾಗಿ ಮೀಸಲಾಗಿದೆ. ಇದು ಲೇವಿಯರ ಭೂಮಿಗೆ ಪಕ್ಕದಲ್ಲಿ ಇರುತ್ತದೆ.

13 “ಯಾಜಕರ ಭೂಮಿಯ ಪಕ್ಕದಲ್ಲಿ ಲೇವಿಯರ ಪಾಲಿನ ಭೂಮಿ ಇರುವದು. ಇದರ ಉದ್ದ ಇಪ್ಪತ್ತೈದು ಸಾವಿರ ಮೊಳ; ಅಗಲ ಹತ್ತು ಸಾವಿರ ಮೊಳ. ಈ ಎರಡು ಪಾಲುಗಳ ಒಟ್ಟಳತೆ ಇಪ್ಪತ್ತೈದು ಸಾವಿರ ಮೊಳ ಉದ್ದ, ಇಪ್ಪತ್ತು ಸಾವಿರ ಮೊಳ ಅಗಲ. 14 ಈ ಪ್ರದೇಶವನ್ನು ಲೇವಿಯರು ಮಾರಕೂಡದು, ಬದಲಾಯಿಸಕೂಡದು ಮತ್ತು ವಿಭಜಿಸಕೂಡದು. ಈ ಪ್ರದೇಶವು ಯೆಹೋವನಿಗೆ ಮೀಸಲಾಗಿರುವುದರಿಂದ ಅದು ಬಹಳ ವಿಶೇಷವಾಗಿದೆ ಅಲ್ಲದೆ ದೇಶದ ಅತ್ಯುತ್ತಮ ಭಾಗವಾಗಿದೆ.

ನಗರದ ಆಸ್ತಿಯ ಪಾಲು

15 “ಯಾಜಕರಿಗೆ ಮತ್ತು ಲೇವಿಯರಿಗೆ ಸ್ಥಳ ಕೊಟ್ಟ ಮೇಲೆ ಇನ್ನೂ ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಐದು ಸಾವಿರ ಮೊಳ ಅಗಲದ ಒಂದು ತುಂಡು ಜಾಗ ಉಳಿಯುವದು. ಈ ಜಾಗವು ನಗರವನ್ನು ಕಟ್ಟುವುದಕ್ಕಾಗಿ; ಪಶುಗಳ ಹುಲ್ಲುಗಾವಲಿಗಾಗಿ ಮತ್ತು ಮನೆಗಳನ್ನು ಕಟ್ಟುವುದಕ್ಕಾಗಿ ಇರುವದು. ಸಾಮಾನ್ಯ ಜನರು ಈ ಜಾಗವನ್ನು ಉಪಯೋಗಿಸಬಹುದು. ನಗರವು ಇದರ ಮಧ್ಯದಲ್ಲಿ ಇರುವದು. 16 ನಗರದ ಅಳತೆಯು ಈ ರೀತಿಯಾಗಿ ಇರುವದು; ಉತ್ತರದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ; ದಕ್ಷಿಣದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ, ಪೂರ್ವದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಮತ್ತು ಪಶ್ಚಿಮ ದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಇರುವದು. 17 ಪಶುಗಳನ್ನು ಮೇಯಿಸಲು ಪಟ್ಟಣದ ಸುತ್ತಲೂ ಹುಲ್ಲುಗಾವಲಿರುವದು. ಈ ಹುಲ್ಲುಗಾವಲಿನ ಅಗಲವು ಪಟ್ಟಣದ ಸುತ್ತಲೂ ಇನ್ನೂರ ಐವತ್ತು ಮೊಳವಿರುತ್ತದೆ. 18 ವಿಶೇಷವಾದ ಪ್ರದೇಶದಲ್ಲಿ ಉಳಿದ ಸ್ಥಳದ ಪೂರ್ವಕ್ಕೆ ಹತ್ತು ಸಾವಿರ ಮೊಳ ಮತ್ತು ಪಶ್ಚಿಮಕ್ಕೆ ಹತ್ತು ಸಾವಿರ ಮೊಳ. ಈ ಸ್ಥಳವು ಭೂಪ್ರದೇಶದ ಪವಿತ್ರ ಭಾಗದ ಪಕ್ಕದಲ್ಲಿರುತ್ತದೆ. ನಗರದ ಕೆಲಸಗಾರರಿಗೆ ಬೆಳೆಗಳನ್ನು ಬೆಳೆಯಿಸುವುದಕ್ಕಾಗಿ ಈ ಸ್ಥಳವಿರುತ್ತದೆ. 19 ನಗರದ ಕೆಲಸಗಾರರು ಈ ಜಾಗವನ್ನು ಉತ್ತು ಬೆಳೆ ಬೆಳೆಸುವರು. ಇವರು ಇಸ್ರೇಲರ ಎಲ್ಲಾ ಗೋತ್ರಕ್ಕೆ ಸೇರಿದವರಾಗಿರುತ್ತಾರೆ.

20 “ವಿಶೇಷವಾದ ಈ ಭೂಪ್ರದೇಶವು ಚೌಕವಾಗಿರುವದು. ಇದರ ಉದ್ದ ಮತ್ತು ಇಪ್ಪತ್ತೈದು ಸಾವಿರ ಮೊಳ ಅಗಲ ಇಪ್ಪತ್ತೈದು ಸಾವಿರ ಮೊಳ. ಈ ಪ್ರದೇಶವನ್ನು ನೀನು ಅದರ ವಿಶೇಷವಾದ ಕಾರ್ಯಗಳಿಗಾಗಿ ಮೀಸಲಾಗಿಡಬೇಕು. ಅದರ ಒಂದು ಭಾಗವು ಯಾಜಕರಿಗಾಗಿರುತ್ತದೆ. ಇನ್ನೊಂದು ಭಾಗವು ಲೇವಿಯರಿಗಾಗಿರುತ್ತದೆ; ಮತ್ತೊಂದು ಭಾಗವು ಪಟ್ಟಣಕ್ಕಾಗಿರುತ್ತದೆ.

21-22 “ಈ ವಿಶೇಷ ಭೂಪ್ರದೇಶದ ಒಂದು ಭಾಗವು ದೇಶಾಧಿಪತಿಗೆ ಸೇರಿದೆ. ಈ ಭೂಪ್ರದೇಶವು ಚೌಕವಾಗಿದೆ. ಇದರ ಉದ್ದ 25,000 ಮೊಳ. ಇದರ ಅಗಲ 25,000 ಮೊಳ. ಈ ವಿಶೇಷ ಪ್ರದೇಶದಲ್ಲಿ ಒಂದು ಭಾಗವು ಯಾಜಕರಿಗೂ ಒಂದು ಭಾಗವು ಲೇವಿಯರಿಗೂ ಒಂದು ಭಾಗವು ದೇವಾಲಯಕ್ಕೂ ಸೇರಿವೆ. ಈ ವಿಶೇಷ ಪ್ರದೇಶದ ಕೇಂದ್ರದಲ್ಲಿ ದೇವಾಲಯವಿರುತ್ತದೆ. ಉಳಿದ ಭಾಗವೆಲ್ಲಾ ದೇಶಾಧಿಪತಿಗೆ ಸೇರಿದೆ. ಬೆನ್ಯಾಮೀನನ ಭಾಗಕ್ಕೂ ಯೆಹೂದದ ಭಾಗಕ್ಕೂ ನಡುವೆ ಇರುವ ಭೂಮಿಯು ಅಧಿಪತಿಗೆ ಸೇರಿದೆ.

23-27 “ಈ ವಿಶೇಷ ಜಾಗದ ದಕ್ಷಿಣದ ಸ್ಥಳವು ಜೋರ್ಡನ್ ಹೊಳೆಯ ಪೂರ್ವದಲ್ಲಿ ವಾಸಿಸಿದ್ದ ಇಸ್ರೇಲರ ಕುಲದವರಿಗಾಗಿ. ಈ ಗೋತ್ರದ ಪ್ರತಿ ಒಂದೊಂದು ಕುಲದವರಿಗೆ ಪೂರ್ವದ ಮೇರೆಯಿಂದ ಹಿಡಿದು ಭೂಮಧ್ಯ ಸಮುದ್ರದವರೆಗಿನ ದೇಶದ ಭಾಗದಲ್ಲಿ ಒಂದು ತುಂಡು ಅವರಿಗೆ ದೊರೆಯುವದು. ಉತ್ತರದಿಂದ ದಕ್ಷಿಣದ ತನಕ ಇಲ್ಲಿ ಜಾಗ ದೊರೆಯುವ ಕುಲದವರು ಯಾರೆಂದರೆ, ಬೆನ್ಯಾಮೀನ್, ಸಿಮೆಯೋನ್, ಇಸ್ಸಾಕಾರ್, ಜೆಬೂಲೂನ್ ಮತ್ತು ಗಾದ್ ವಂಶದವರು.

28 “ದೇವರ ಪ್ರಾಂತ್ಯದ ದಕ್ಷಿಣದ ಮೇರೆಯು ತಾಮಾರಿನಿಂದ ಪ್ರಾರಂಭವಾಗಿ ಮೆರೀಬೋತ್‌ಕಾದೇಶ್ ಎಂಬ ಮರುಭೂಮಿಯ ನೀರಿನಾಶ್ರಯಕ್ಕೆ ಹೋಗುತ್ತದೆ. ಅನಂತರ ಈಜಿಪ್ಟಿನ ನದಿಯ ಅಂಚಿನಲ್ಲಿ ಮುಂದುವರಿದು ಭೂಮಧ್ಯ ಸಮುದ್ರಕ್ಕೆ ತಾನು ಸೇರುವ ಸ್ಥಳಕ್ಕೆ ಹೋಗುತ್ತದೆ. 29 ಈ ಪ್ರಾಂತ್ಯವನ್ನು ನೀವು ಇಸ್ರೇಲರ ಕುಲದವರಿಗೆ ವಿಭಾಗಿಸಿ ಹಂಚಬೇಕು. ಇದು ಪ್ರತೀ ಕುಲದವರಿಗೆ ದೊರಕುವ ಭೂಮಿಯ ವಿವರ.” ಇದು ನನ್ನ ಒಡೆಯನಾದ ಯೆಹೋವನ ನುಡಿ.

ನಗರದ ಬಾಗಿಲುಗಳು

30 “ಇವು ನಗರದ ಬಾಗಿಲುಗಳು. ಅವುಗಳಿಗೆ ಇಸ್ರೇಲರ ಕುಲದವರ ಹೆಸರು ಕೊಡಲ್ಪಟ್ಟಿದೆ.

“ನಗರದ ಉತ್ತರದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಾಗಿರುವದು. 31 ಅದಕ್ಕೆ ಮೂರು ಬಾಗಿಲುಗಳು ಇರುವವು. ರೂಬೇನ್ ಬಾಗಿಲು, ಯೆಹೂದ ಬಾಗಿಲು ಮತ್ತು ಲೇವಿ ಬಾಗಿಲು.

32 “ನಗರದ ಪೂರ್ವದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಾಗಿರುವದು. ಈ ಮೇರೆಯಲ್ಲಿ ಮೂರು ಬಾಗಿಲುಗಳಿರುವವು. ಯೋಸೇಫ್ ಬಾಗಿಲು, ಬೆನ್ಯಾಮೀನ್ ಬಾಗಿಲು ಮತ್ತು ದಾನ್ ಬಾಗಿಲು.

33 “ನಗರದ ದಕ್ಷಿಣ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಿರುವದು. ಇದಕ್ಕೆ ಮೂರು ಬಾಗಿಲುಗಳಿರುವವು. ಸಿಮೆಯೋನ್ ಬಾಗಿಲು, ಇಸ್ಸಾಕಾರ್ ಬಾಗಿಲು ಮತ್ತು ಜೆಬುಲೂನ್ ಬಾಗಿಲು.

34 “ನಗರದ ಪಶ್ಚಿಮದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಿರುವದು. ಅದಕ್ಕೆ ಮೂರು ಬಾಗಿಲುಗಳು ಇರುವವು. ಗಾದ್ ಬಾಗಿಲು, ಆಶೇರ್ ಬಾಗಿಲು ಮತ್ತು ನಫ್ತಾಲಿ ಬಾಗಿಲು.

35 “ನಗರದ ಸುತ್ತಳತೆಯು ಹದಿನೆಂಟು ಸಾವಿರ ಮೊಳ. ಇಂದಿನಿಂದ ಈ ನಗರದ ಹೆಸರು ‘ಯೆಹೋವನು ಅಲ್ಲಿದ್ದಾನೆ.’”[a]

1 ಯೋಹಾನ 3

ನಾವು ದೇವರ ಮಕ್ಕಳಾಗಿದ್ದೇವೆ

ತಂದೆಯು ನಮ್ಮನ್ನು ಬಹಳವಾಗಿ ಪ್ರೀತಿಸಿದನು! ದೇವರ ಮಕ್ಕಳು ಎಂಬ ಹೆಸರನ್ನು ನಮಗೆ ಕೊಡುವಷ್ಟರ ಮಟ್ಟಿಗೆ ದೇವರು ನಮ್ಮನ್ನು ಪ್ರೀತಿಸಿದನು. ನಾವು ನಿಜವಾಗಿಯೂ ದೇವರ ಮಕ್ಕಳಾಗಿದ್ದೇವೆ. ಆದರೆ ಲೋಕದಲ್ಲಿರುವ ಜನರಾದರೋ ನಾವು ದೇವರ ಮಕ್ಕಳೆಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವರು ದೇವರನ್ನು ತಿಳಿದಿಲ್ಲ. ಪ್ರಿಯ ಸ್ನೇಹಿತರೇ, ಈಗ ನಾವು ದೇವರ ಮಕ್ಕಳಾಗಿದ್ದೇವೆ. ನಾವು ಮುಂದೆ ಏನಾಗುವೆವೆಂಬುದನ್ನು ನಮಗಿನ್ನೂ ತೋರ್ಪಡಿಸಿಲ್ಲ. ಆದರೆ ಕ್ರಿಸ್ತನು ಮರಳಿ ಬಂದಾಗ ಅದನ್ನು ತಿಳಿದುಕೊಳ್ಳುತ್ತೇವೆ. ನಾವು ಆತನಂತಾಗುವೆವು. ನಾವು ಆತನ ನಿಜಸ್ವರೂಪವನ್ನೇ ನೋಡುವೆವು. ಕ್ರಿಸ್ತನಲ್ಲಿ ಈ ನಿರೀಕ್ಷೆಯನ್ನು ಹೊಂದಿರುವ ಪ್ರತಿಯೊಬ್ಬನೂ ಕ್ರಿಸ್ತನು ಶುದ್ಧನಾಗಿರುವಂತೆ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.

ಪಾಪ ಮಾಡುವವನು ದೇವರ ಕಟ್ಟಳೆಗಳನ್ನು ಉಲ್ಲಂಘಿಸುವವನಾಗಿದ್ದಾನೆ. ಹೌದು, ಪಾಪಮಾಡುವುದಕ್ಕೂ ದೇವರ ಕಟ್ಟಳೆಗಳಿಗೆ ವಿರುದ್ಧವಾಗಿ ಜೀವಿಸುವುದಕ್ಕೂ ಯಾವ ವ್ಯತ್ಯಾಸವಿಲ್ಲ. ಕ್ರಿಸ್ತನು ಜನರ ಪಾಪಗಳನ್ನು ಹೋಗಲಾಡಿಸಲು ಬಂದನೆಂಬುದು ನಿಮಗೆ ತಿಳಿದಿದೆ. ಆತನಲ್ಲಿ ಪಾಪವೆಂಬುದಿಲ್ಲ. ಆದ್ದರಿಂದ ಕ್ರಿಸ್ತನಲ್ಲಿ ನೆಲಸಿರುವ ವ್ಯಕ್ತಿಯು ಪಾಪದಲ್ಲೇ ಮುಂದುವರಿಯುವುದಿಲ್ಲ. ಪಾಪವನ್ನು ಮಾಡುತ್ತಲೇ ಇರುವವನು ಆತನನ್ನು ಎಂದೂ ಅರ್ಥಮಾಡಿಕೊಂಡವನಲ್ಲ ಮತ್ತು ಎಂದೂ ತಿಳಿದವನಲ್ಲ.

ಪ್ರಿಯ ಮಕ್ಕಳೇ, ನಿಮ್ಮನ್ನು ಯಾರೂ ತಪ್ಪುಮಾರ್ಗಕ್ಕೆ ಎಳೆಯದಂತೆ ನೋಡಿಕೊಳ್ಳಿರಿ. ಕ್ರಿಸ್ತನು ನೀತಿವಂತನಾಗಿದ್ದಾನೆ. ಆತನಂತೆ ನೀತಿವಂತನಾಗಿರಲು ಬಯಸುವವನು ಒಳ್ಳೆಯದನ್ನು ಮಾಡಬೇಕು. ಸೈತಾನನು ಆರಂಭದಿಂದಲೂ ಪಾಪಗಳನ್ನು ಮಾಡುತ್ತಿದ್ದಾನೆ. ಪಾಪಗಳನ್ನು ಮಾಡುತ್ತಲೇ ಇರುವವನು ಸೈತಾನನಿಗೆ ಸೇರಿದವನಾಗಿದ್ದಾನೆ. ದೇವರ ಮಗನಾದ ಕ್ರಿಸ್ತನು ಸೈತಾನನ ಕಾರ್ಯವನ್ನು ನಾಶಪಡಿಸುವುದಕ್ಕಾಗಿಯೇ ಬಂದನು.

ದೇವರಿಂದ ಹೊಸದಾಗಿ ಹುಟ್ಟಿದವನು ಪಾಪಗಳಲ್ಲಿ ನೆಲೆಗೊಂಡಿರುವುದಿಲ್ಲ. ಏಕೆಂದರೆ ದೇವರು ದಯಪಾಲಿಸಿದ ಹೊಸ ಜೀವವು ಅವನಲ್ಲಿ ನೆಲೆಸಿರುತ್ತದೆ. ಅವನು ದೇವರಿಂದ ಹೊಸದಾಗಿ ಹುಟ್ಟಿದ ಕಾರಣ ಪಾಪದಲ್ಲೇ ಮುಂದುವರಿಯಲು ಅವನಿಗೆ ಸಾಧ್ಯವಿಲ್ಲ. 10 ಆದ್ದರಿಂದ ದೇವರ ಮಕ್ಕಳು ಯಾರೆಂಬುದನ್ನೂ ಸೈತಾನನ ಮಕ್ಕಳು ಯಾರೆಂಬುದನ್ನೂ ನಾವು ತಿಳಿದುಕೊಳ್ಳಬಹುದು. ಯೋಗ್ಯವಾದುದನ್ನು ಮಾಡದಿರುವ ಜನರು ದೇವರ ಮಕ್ಕಳಲ್ಲ. ತನ್ನ ಸಹೋದರನನ್ನು ಪ್ರೀತಿಸದಿರುವವನು ದೇವರ ಮಗನಲ್ಲ.

ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು

11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ ನೀವು ಆರಂಭದಿಂದಲೂ ಕೇಳಿದ ವಾಕ್ಯ. 12 ನೀವು ಕಾಯಿನನಂತಿರಬೇಡಿ. ಅವನು ಕೆಡುಕನಿಗೆ ಸೇರಿದವನಾಗಿದ್ದನು. ಅವನು ತನ್ನ ತಮ್ಮನನ್ನು (ಹೇಬೆಲ) ಕೊಂದುಹಾಕಿದನು. ಅವನು ತನ್ನ ತಮ್ಮನನ್ನು ಕೊಂದದ್ದೇಕೆ? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ಒಳ್ಳೆಯವುಗಳೂ ಆಗಿದ್ದರಿಂದಲೇ.

13 ಸಹೋದರ ಸಹೋದರಿಯರೇ, ಈ ಲೋಕದ ಜನರು ನಿಮ್ನನ್ನು ದ್ವೇಷಿಸುವಾಗ ಆಶ್ಚರ್ಯಗೊಳ್ಳದಿರಿ. 14 ನಾವು ಮರಣವನ್ನು (ಪಾಪಗಳನ್ನು) ತೊರೆದು ಜೀವಕ್ಕೆ ಬಂದಿದ್ದೇವೆ ಎಂಬುದು ನಮಗೆ ಗೊತ್ತಿದೆ. ಕ್ರಿಸ್ತನಲ್ಲಿ ನಮ್ಮ ಸಹೋದರ ಸಹೋದರಿಯರನ್ನು ನಾವು ಪ್ರೀತಿಸುತ್ತಿರುವುದರಿಂದಲೇ ಇದನ್ನು ತಿಳಿದುಕೊಂಡಿದ್ದೇನೆ. ಪ್ರೀತಿಸದಿರುವ ವ್ಯಕ್ತಿಯು ಇನ್ನೂ ಮರಣದಲ್ಲಿದ್ದಾನೆ. 15 ತನ್ನ ಸಹೋದರನನ್ನು ದ್ವೇಷಿಸುವ ಪ್ರತಿಯೊಬ್ಬನೂ ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರನಲ್ಲಿಯೂ ನಿತ್ಯಜೀವ ಇರುವುದಿಲ್ಲವೆಂಬುದು ನಿಮಗೆ ತಿಳಿದಿದೆ.

16 ಯೇಸು ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ನಿಜವಾದ ಪ್ರೀತಿಯೆಂದರೇನೆಂಬುದನ್ನು ನಾವು ತಿಳಿದುಕೊಂಡೆವು. ಆದ್ದರಿಂದ ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾದವರಿಗೋಸ್ಕರ ನಾವೂ ನಮ್ಮ ಪ್ರಾಣಗಳನ್ನು ಕೊಡಬೇಕು. 17 ಈ ಲೋಕದ ಐಶ್ವರ್ಯವನ್ನು ಹೊಂದಿರುವ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿದರೂ ಸಹಾಯ ಮಾಡದೆ ಹೋದರೆ, ಅವನಲ್ಲಿ ದೇವರ ಪ್ರೀತಿಯು ನೆಲೆಗೊಂಡಿಲ್ಲ. ಅವನೇಕೆ ಸಹಾಯ ಮಾಡಲಿಲ್ಲ? ಏಕೆಂದರೆ ಅವನ ಹೃದಯದಲ್ಲಿ ದೇವರ ಮೇಲೆ ಪ್ರೀತಿಯೇ ಇಲ್ಲ. 18 ನನ್ನ ಮಕ್ಕಳೇ, ನಮ್ಮ ಪ್ರೀತಿಯು ಕೇವಲ ಶಬ್ಧಗಳಲ್ಲಿ ಮತ್ತು ಮಾತಿನಲ್ಲಿ ಇರಬಾರದು. ನಮ್ಮ ಪ್ರೀತಿಯು ನಿಜವಾದ ಪ್ರೀತಿಯಾಗಿರಬೇಕು. ನಾವು ಮಾಡುವ ಕಾರ್ಯಗಳಲ್ಲಿಯೇ ನಮ್ಮ ಪ್ರೀತಿಯನ್ನು ತೋರ್ಪಡಿಸಬೇಕು.

19-20 ನಾವು ಸತ್ಯಮಾರ್ಗಕ್ಕೆ ಸೇರಿದವರೆಂಬುದನ್ನು ಈ ಮೂಲಕವಾಗಿಯೇ ತಿಳಿದುಕೊಳ್ಳುತ್ತೇವೆ. ನಮ್ಮ ಮನಸ್ಸಾಕ್ಷಿಯು ನಮ್ಮನ್ನು ತಪ್ಪಿತಸ್ಥರೆಂದು ಹೇಳಿದರೂ ನಾವು ದೇವರ ಎದುರಿನಲ್ಲಿ ಸಮಾಧಾನದಿಂದಿರಲು ಸಾಧ್ಯ. ಏಕೆಂದರೆ ನಮ್ಮ ಮನಸ್ಸಾಕ್ಷಿಗಿಂತ ದೇವರೇ ದೊಡ್ಡವನು. ಆತನಿಗೆ ಎಲ್ಲವೂ ತಿಳಿದಿದೆ.

21 ನನ್ನ ಪ್ರಿಯ ಸ್ನೇಹಿತರೇ, ನಾವು ತಪ್ಪು ಮಾಡುತ್ತಿಲ್ಲ ಎಂದು ನಮಗೆ ತಿಳಿದಿದ್ದರೆ, ನಾವು ದೇವರ ಬಳಿಗೆ ಧೈರ್ಯವಾಗಿ ಬರಲು ಸಾಧ್ಯ. 22 ಮತ್ತು ನಾವು ಕೇಳಿಕೊಳ್ಳುವವುಗಳನ್ನು ದೇವರು ನಮಗೆ ನೀಡುತ್ತಾನೆ. ನಾವು ಆತನಿಗೆ ವಿಧೇಯರಾಗಿರುವುದರಿಂದ ಮತ್ತು ಆತನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡುವುದರಿಂದ ಅವುಗಳನ್ನು ಆತನಿಂದ ಪಡೆದುಕೊಳ್ಳುತ್ತೇವೆ. 23 ದೇವರ ಆಜ್ಞೆ ಏನೆಂದರೆ ಆತನ ಮಗನಾದ ಯೇಸು ಕ್ರಿಸ್ತನಲ್ಲಿ ನಾವು ನಂಬಿಕೆಯಿಟ್ಟು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ. 24 ದೇವರ ಆಜ್ಞೆಗಳಿಗೆ ವಿಧೇಯನಾಗಿರುವವನು ದೇವರಲ್ಲಿ ನೆಲೆಸಿರುತ್ತಾನೆ ಮತ್ತು ದೇವರು ಆತನಲ್ಲಿ ನೆಲೆಸಿರುತ್ತಾನೆ. ದೇವರು ನಮ್ಮಲ್ಲಿ ನೆಲೆಸಿದ್ದಾನೆ ಎಂಬುದು ನಮಗೆ ಹೇಗೆ ತಿಳಿದದೆ? ದೇವರು ನಮಗೆ ದಯಪಾಲಿಸಿರುವ ಪವಿತ್ರಾತ್ಮನಿಂದಲೇ ನಮಗೆ ತಿಳಿದದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International