Old/New Testament
ಯಾಜಕರ ಕೋಣೆಗಳು
42 ಆಮೇಲೆ ಆ ಮನುಷ್ಯನು ನನ್ನನ್ನು ಉತ್ತರದ್ವಾರದ ಮೂಲಕ ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಅವನು ನನ್ನನ್ನು ಪಶ್ಚಿಮದಲ್ಲಿರುವ ಅನೇಕ ಕೋಣೆಗಳಿದ್ದ ಕಟ್ಟಡಕ್ಕೆ ಕರೆದುಕೊಂಡು ಹೋದನು. ಅದು ಇಕ್ಕಟ್ಟಾದ ಸ್ಥಳದ ಪಶ್ಚಿಮದಲ್ಲಿತ್ತು ಮತ್ತು ಕಟ್ಟಡವು ಉತ್ತರ ಭಾಗದಲ್ಲಿತ್ತು. 2 ಈ ಕಟ್ಟಡವು ನೂರು ಮೊಳ ಉದ್ದವಾಗಿದ್ದು ಐವತ್ತು ಮೊಳ ಅಗಲವಿತ್ತು. ಉತ್ತರ ಭಾಗದ ಪ್ರಾಕಾರದೊಳಗಿಂದ ಜನರು ಒಳಪ್ರವೇಶಿಸುತ್ತಿದ್ದರು. 3 ಆ ಕಟ್ಟಡವು ಮೂರು ಅಂತಸ್ತಿನಷ್ಟು ಎತ್ತರವಿದ್ದು ಅದಕ್ಕೆ ಅನೇಕ ಮೇಲಂತಸ್ತುಗಳಿದ್ದವು. ಇಪ್ಪತ್ತು ಮೊಳದ ಒಳಗಿನ ಪ್ರಾಕಾರವು ಆಲಯಕ್ಕೂ ಕಟ್ಟಡಕ್ಕೂ ನಡುವೆ ಇತ್ತು. ಎದುರಿನ ಕೋಣೆಗಳು ಹೊರಗಿನ ಪ್ರಾಕಾರದ ನೆಲಗಟ್ಟಿಗೆ ಮುಖಮಾಡಿದ್ದವು. 4 ಇದರ ಪ್ರವೇಶ ದ್ವಾರವು ಉತ್ತರ ದಿಕ್ಕಿನಲ್ಲಿದ್ದಾಗ್ಯೂ, ಹತ್ತು ಮೊಳ ಅಗಲ, ನೂರು ಮೊಳ ಉದ್ದದ ದಾರಿಯು ಆ ಕಟ್ಟಡದ ದಕ್ಷಿಣ ಭಾಗದಲ್ಲಿತ್ತು. 5-6 ಈ ಕಟ್ಟಡವು ಮೂರು ಅಂತಸ್ತು ಎತ್ತರವಿದ್ದಾಗ್ಯೂ ಇದಕ್ಕೆ ಹೊರಗಿನ ಪ್ರಾಕಾರಕ್ಕೆ ಇದ್ದಂತೆ ಸ್ತಂಭಗಳಿರಲಿಲ್ಲ. ಮೇಲಿನ ಅಂತಸ್ತಿನ ಕೋಣೆಗಳು, ಮಧ್ಯ ಮತ್ತು ಕೆಳಗಿನ ಅಂತಸ್ತುಗಳ ಕೋಣೆಗಳಿಂದ ಹಿಂದಕ್ಕೆ ಇದ್ದವು. ಮೇಲಿನಂತಸ್ತು, ಮಧ್ಯ ಅಂತಸ್ತಿಗಿಂತ ಕಿರಿದಾಗಿತ್ತು. ಮತ್ತು ಮಧ್ಯ ಅಂತಸ್ತು ಕೆಳಗಿನ ಅಂತಸ್ತಿಗಿಂತ ಅಗಲದಲ್ಲಿ ಕಿರಿದಾಗಿತ್ತು. ಯಾಕೆಂದರೆ ಮೇಲಂತಸ್ತುಗಳು ಆ ಜಾಗವನ್ನು ಆಕ್ರಮಿಸಿದ್ದವು. 7 ಕೋಣೆಗಳ ಉದ್ದಕ್ಕೆ ಅನುಸಾರವಾಗಿ ಒಂದು ಗೋಡೆಯು ಹೊರಗಿನ ಪ್ರಾಕಾರಕ್ಕೆ ಸಮವಾಗಿ ಇತ್ತು. ಇದು ಕೋಣೆಗಳೆದುರು ಐವತ್ತು ಮೊಳ ಉದ್ದವಾಗಿತ್ತು. 8 ಹೊರಗಿನ ಪ್ರಾಕಾರಕ್ಕೆ ಸರಿಯಾಗಿ ಹೋಗಿದ್ದ ಕೋಣೆಗಳ ಸಾಲು ಐವತ್ತು ಮೊಳ ಉದ್ದವಾಗಿತ್ತು. ಆದರೆ ಆಲಯದ ಬಳಿಯಲ್ಲಿದ್ದ ಕಟ್ಟಡವು ನೂರು ಮೊಳ ಉದ್ದವಾಗಿತ್ತು. 9 ಕಟ್ಟಡದ ಪೂರ್ವ ಭಾಗದಲ್ಲಿ ಪ್ರವೇಶ ದ್ವಾರವು ಇತ್ತು. ಇದರ ಮೂಲಕ ಹೊರಗಿನ ಪ್ರಾಕಾರದಿಂದ ಜನರು ಒಳ ಪ್ರವೇಶ ಮಾಡಬಹುದು. 10 ಈ ಪ್ರವೇಶ ದ್ವಾರವು ಪ್ರಾಕಾರದ ಬದಿಯಲ್ಲಿ ಗೋಡೆಯು ಪ್ರಾರಂಭವಾಗುವಲ್ಲಿಯೇ ಇತ್ತು.
ಬೇರೆ ಕಟ್ಟಡ ಮತ್ತು ಕಿರಿದಾದ ಜಾಗಕ್ಕೆ ತಾಗಿ ದಕ್ಷಿಣದಿಕ್ಕಿನಲ್ಲಿ ಕೋಣೆಗಳು ಇದ್ದವು. 11 ಈ ಕೋಣೆಗಳ ಎದುರಿನಲ್ಲಿ ದಾರಿಯು ಇತ್ತು. ಇದು ಉತ್ತರ ದಿಕ್ಕಿನಲ್ಲಿದ್ದ ಕೋಣೆಗಳಂತೆ ಇತ್ತು. ಅವುಗಳ ಅಳತೆಯೂ ಬಾಗಿಲು ಕದಗಳ ವಿನ್ಯಾಸವೂ ಒಂದೇ ಆಗಿತ್ತು. 12 ಕೆಳಗಿನ ಕೋಣೆಗಳ ಪ್ರವೇಶ ದ್ವಾರವು ಕಟ್ಟಡದ ಪೂರ್ವ ಭಾಗದಲ್ಲಿದ್ದು ಗೋಡೆಯ ಬದಿಯಲ್ಲಿದ್ದ ದಾರಿಯಿಂದ ಜನರು ಒಳಪ್ರವೇಶ ಮಾಡಬಹುದಾಗಿತ್ತು.
13 ಅವನು ನನಗೆ ಹೀಗೆ ಹೇಳಿದನು, “ನಿಯಮಿತ ಇಕ್ಕಟ್ಟಾದ ಸ್ಥಳದ ಬಳಿಯಲ್ಲಿ ಇರುವ ಉತ್ತರದ ಮತ್ತು ದಕ್ಷಿಣದ ಕೋಣೆಗಳು ಪವಿತ್ರವಾದವುಗಳು. ಅವು ಯೆಹೋವನಿಗೆ ಯಜ್ಞ ಸಮರ್ಪಿಸುವ ಯಾಜಕರಿಗಾಗಿ ಇವೆ. ಅಲ್ಲಿ ಯಾಜಕರು ಅತಿ ಪವಿತ್ರ ಕಾಣಿಕೆಪದಾರ್ಥಗಳನ್ನು ತಿನ್ನುವರು. ಮತ್ತು ಅಲ್ಲಿ ಅತಿ ಪವಿತ್ರ ಕಾಣಿಕೆಗಳನ್ನಿಡುವರು. ಯಾಕೆಂದರೆ ಆ ಸ್ಥಳವು ಪವಿತ್ರವಾದದ್ದು. ಅತಿ ಪವಿತ್ರ ಕಾಣಿಕೆ ಯಾವುವೆಂದರೆ, ಧಾನ್ಯಸಮರ್ಪಣೆ, ಪಾಪಪರಿಹಾರಕಯಜ್ಞ, ದೋಷಪರಿಹಾರಕಯಜ್ಞ, ಸಮಾಧಾನಯಜ್ಞದ ಕಾಣಿಕೆ. 14 ಈ ಪವಿತ್ರಸ್ಥಳಕ್ಕೆ ಪ್ರವೇಶಿಸುವ ಯಾಜಕರು ತಮ್ಮ ದೀಕ್ಷಾವಸ್ತ್ರಗಳನ್ನು ಅಲ್ಲಿಯೇ ತೆಗೆದಿಟ್ಟು ಹೊರಗಿನ ಪ್ರಾಕಾರಕ್ಕೆ ಹೋಗಬೇಕು. ಯಾಕೆಂದರೆ ಆ ವಸ್ತುಗಳು ಪವಿತ್ರವಾದದ್ದು. ಒಬ್ಬ ಯಾಜಕನು ಇತರ ಜನರು ಇರುವ ಸ್ಥಳಕ್ಕೆ ಹೋಗಬೇಕಿದ್ದಲ್ಲಿ ಅವನು ಕೋಣೆಗೆ ಬಂದು ದೀಕ್ಷಾವಸ್ತ್ರಗಳನ್ನು ತೆಗೆದಿಟ್ಟು ಬೇರೆ ವಸ್ತ್ರಗಳನ್ನು ಹಾಕಿಕೊಂಡು ಹೋಗಬೇಕು.”
ಹೊರಗಿನ ಪ್ರಾಕಾರ
15 ಆಲಯದ ಒಳಭಾಗದ ಅಳತೆಯನ್ನು ಅವನು ತೆಗೆದುಕೊಂಡ ಬಳಿಕ ನನ್ನನ್ನು ಪೂರ್ವದ ದ್ವಾರದಿಂದ ಹೊರತಂದು ಆ ಜಾಗವನ್ನೆಲ್ಲಾ ಅಳೆದನು. 16 ಪೂರ್ವ ಭಾಗವನ್ನು ಅವನು ತನ್ನ ಅಳತೆ ಕೋಲಿನಿಂದ ಅಳೆದನು. ಅದು ಐನೂರು ಮೊಳ ಉದ್ದವಿತ್ತು. 17 ಅವನು ಉತ್ತರ ಭಾಗವನ್ನು ಅಳೆದನು, ಅದು ಐನೂರು ಮೊಳ ಉದ್ದವಿತ್ತು. 18 ಅವನು ದಕ್ಷಿಣದ ಭಾಗವನ್ನು ಅಳೆದನು, ಅದು ಐನೂರು ಮೊಳ ಉದ್ದವಿತ್ತು. 19 ಅನಂತರ ಪಶ್ಚಿಮದ ಭಾಗಕ್ಕೆ ಹೋಗಿ ಅಲ್ಲಿ ಅಳೆದನು. ಅದು ಐನೂರು ಮೊಳ ಉದ್ದವಿತ್ತು. 20 ಆಲಯದ ಸುತ್ತಲೂ ಇದ್ದ ನಾಲ್ಕು ಗೋಡೆಗಳನ್ನು ಅಳೆದನು. ಆ ಗೋಡೆ ಐನೂರು ಮೊಳ ಉದ್ದವಿದ್ದು ಐನೂರು ಮೊಳ ಅಗಲವಿತ್ತು. ಅದು ಪವಿತ್ರಸ್ಥಳವನ್ನೂ ಬೇರೆ ಸ್ಥಳವನ್ನೂ ಬೇರ್ಪಡಿಸಿತ್ತು.
ಯೆಹೋವನು ತನ್ನ ಜನರ ಮಧ್ಯದಲ್ಲಿ ವಾಸಿಸುವನು
43 ಆ ಮನುಷ್ಯನು ನನ್ನನ್ನು ಪೂರ್ವದ ದ್ವಾರಕ್ಕೆ ಕರೆದುಕೊಂಡು ಹೋದನು. 2 ಅಲ್ಲಿ ಇಸ್ರೇಲ್ ದೇವರ ಮಹಿಮೆಯು ಪೂರ್ವದಿಂದ ಬಂದಿತು. ದೇವರ ಸ್ವರವು ಸಮುದ್ರದ ಶಬ್ದದಂತೆ ಗಟ್ಟಿಯಾಗಿತ್ತು. ದೇವರ ಮಹಿಮಾ ಪ್ರಕಾಶದಿಂದ ನೆಲವು ಬೆಳಕಿನಿಂದ ತುಂಬಿತ್ತು. 3 ನಾನು ನೋಡಿದ ದರ್ಶನವು ಕೆಬಾರ್ ಕಾಲುವೆಯ ಬಳಿ ಕಂಡ ದರ್ಶನದಂತಿತ್ತು. ನಾನು ಸಾಷ್ಟಾಂಗವೆರಗಿದೆನು. 4 ಯೆಹೋವನ ಮಹಿಮೆಯು ಪೂರ್ವದಿಕ್ಕಿನ ದ್ವಾರದ ಮೂಲಕ ಆಲಯದೊಳಗೆ ಬಂದಿತು.
5 ಆಗ ದೇವರಾತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಪ್ರಾಕಾರಕ್ಕೆ ತಂದಿತು. ಯೆಹೋವನ ಮಹಿಮೆಯು ಆಲಯವನ್ನು ತುಂಬಿತು. 6 ಆಲಯದೊಳಗಿಂದ ಯಾರೋ ನನ್ನೊಡನೆ ಮಾತನಾಡಿದಂತೆ ಕೇಳಿಸಿತು. ಅವನು ನನ್ನ ಬಳಿಯಲ್ಲಿ ಇನ್ನೂ ನಿಂತುಕೊಂಡಿದ್ದನು. 7 ಆಲಯದೊಳಗಿಂದ ಬಂದ ಸ್ವರವು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಇದು ನನ್ನ ಸಿಂಹಾಸನವೂ ಪಾದಪೀಠವೂ ಇರುವ ಸ್ಥಳ. ನಾನು ಇಲ್ಲಿ ನನ್ನ ಜನರಾದ ಇಸ್ರೇಲರ ಮಧ್ಯದಲ್ಲಿ ನಿರಂತರವೂ ವಾಸಿಸುವೆನು. ಇಸ್ರೇಲ್ ಜನಾಂಗವು ಇನ್ನು ಮುಂದೆ ನನ್ನ ಪವಿತ್ರವಾದ ಹೆಸರನ್ನು ಹಾಳುಮಾಡುವದಿಲ್ಲ. ರಾಜರೂ ಅವರ ಜನರೂ ಲೈಂಗಿಕ ಪಾಪಗಳನ್ನು ಮಾಡಿ ನನ್ನನ್ನು ಅವಮಾನಪಡಿಸರು. ಅವರ ರಾಜರುಗಳ ಮೃತಶರೀರವನ್ನು ಇಲ್ಲಿ ಸಮಾಧಿ ಮಾಡುವದಿಲ್ಲ. 8 ಅವರ ಹೊಸ್ತಿಲನ್ನು ನನ್ನ ಹೊಸ್ತಿಲ ಬಳಿಯಲ್ಲಿ ಇಡುವದರಿಂದ ಅವರ ನಿಲುವುಗಳನ್ನು ನನ್ನ ನಿಲುವುಗಳ ಬಳಿಯಲ್ಲಿ ಇಡುವದರಿಂದ ಅವರು ನನ್ನ ಹೆಸರಿಗೆ ಅವಮಾನ ಮಾಡುವದಿಲ್ಲ. ಹಿಂದಿನ ಕಾಲದಲ್ಲಿ, ಕೇವಲ ಒಂದೇ ಗೋಡೆಯು ಅವರಿಂದ ನನ್ನನ್ನು ಪ್ರತ್ಯೇಕಿಸಿತ್ತು. ಆದ್ದರಿಂದ ಪ್ರತಿಯೊಂದು ಸಲ ಅವರು ಪಾಪ ಮಾಡಿದಾಗ ಮತ್ತು ಆ ಭಯಂಕರ ಕೃತ್ಯಗಳನ್ನು ಮಾಡಿದಾಗ ನನ್ನ ಹೆಸರಿಗೆ ಅವಮಾನವಾಯಿತು. ಆದ್ದರಿಂದ ನಾನು ಕೋಪಗೊಂಡು ಅವರನ್ನು ನಾಶಮಾಡಿದೆನು. 9 ಈಗ ಅವರು ತಮ್ಮ ಲೈಂಗಿಕ ಪಾಪಗಳನ್ನು ತೆಗೆದುಬಿಡಲಿ ಮತ್ತು ತಮ್ಮ ರಾಜರ ಹೆಣಗಳನ್ನೂ ನನ್ನಿಂದ ದೂರಮಾಡಲಿ. ಆಗ ನಾನು ಅವರೊಂದಿಗೆ ನಿರಂತರವಾಗಿ ವಾಸಿಸುವೆನು.
10 “ಈಗ, ನರಪುತ್ರನೇ, ಇಸ್ರೇಲ್ ಜನಾಂಗದವರಿಗೆ ಆಲಯದ ವಿಚಾರವಾಗಿ ತಿಳಿಸು. ಆಲಯದ ವಿನ್ಯಾಸದ ಬಗ್ಗೆ ಅವರು ತಿಳಿದಾಗ ತಮ್ಮ ಪಾಪಗಳಿಗಾಗಿ ಅವರು ನಾಚಿಕೆಪಡುವರು. 11 ಅವರು ತಮ್ಮ ಎಲ್ಲಾ ಪಾಪಗಳ ನಿಮಿತ್ತ ನಾಚಿಕೆಪಡುವರು. ಆಲಯದ ವಿನ್ಯಾಸವನ್ನು ಅವರು ತಿಳಿದುಕೊಳ್ಳಲಿ. ಅದು ಹೇಗೆ ಕಟ್ಟಲ್ಪಡಬೇಕೆಂಬುದನ್ನು, ಪ್ರವೇಶ ದ್ವಾರಗಳು ಮತ್ತು ಹೊರಗೆ ಹೋಗುವ ಬಾಗಿಲುಗಳು ಎಲ್ಲಿರಬೇಕೆಂಬುದನ್ನು ಮತ್ತು ಅವುಗಳ ಮೇಲೆ ಇರಬೇಕಾದ ಎಲ್ಲಾ ಚಿತ್ರಗಳನ್ನು ಅವರು ತಿಳಿದುಕೊಳ್ಳಲಿ. ಅದರ ನಿಯಮಗಳನ್ನು, ಕಟ್ಟಳೆಗಳನ್ನು ಅವರಿಗೆ ಬೋಧಿಸಿರಿ. ಅವರು ಎಲ್ಲಾ ಧರ್ಮಬೋಧನೆಗಳನ್ನು ಅನುಸರಿಸುವಂತೆ ಎಲ್ಲಾ ಕಟ್ಟಳೆಗಳನ್ನು ಬರೆದಿಡಿರಿ. 12 ಇದು ಆಲಯದ ಕಟ್ಟಳೆ: ಪರ್ವತದ ಮೇಲಿನ ಎಲ್ಲಾ ಪ್ರಾಂತ್ಯದ ಮೇರೆಯೊಳಗಿರುವ ಸ್ಥಳವು ಅತಿ ಪರಿಶುದ್ಧವಾದದ್ದು. ಇದು ಆಲಯದ ಕಟ್ಟಳೆ.
ಯಜ್ಞವೇದಿಕೆ
13 “ಯಜ್ಞವೇದಿಕೆ ಉದ್ದಮೊಳದ[a] ಅಳತೆಯ ಪ್ರಕಾರ ಇರಬೇಕು. ಯಜ್ಞವೇದಿಯ ಅಡಿಪಾಯದ ಸುತ್ತಲೂ ಕಾಲಿವೆ ತೋಡಲ್ಪಟ್ಟಿತ್ತು. ಅದರ ಆಳ ಒಂದು ಮೊಳ. ಪ್ರತಿಯೊಂದು ಕಡೆಯಲ್ಲಿ ಅದರ ಅಗಲ ಒಂದು ಮೊಳ. ಯಜ್ಞವೇದಿಯ ಸುತ್ತ ಒಂದು ಗೇಣುದ್ದದ ಚೌಕಟ್ಟಿತ್ತು. ಇದು ಎತ್ತರವಾದ ಯಜ್ಞವೇದಿಯ ವಿನ್ಯಾಸ. 14 ನೆಲದಿಂದ ಅಡಿಪಾಯದ ತಳದವರೆಗೆ ಅಡಿಪಾಯದ ಎತ್ತರ ಎರಡು ಮೊಳ, ಅದರ ಅಗಲ ಒಂದು ಮೊಳ, ಚಿಕ್ಕ ಸಜ್ಜದಿಂದ ದೊಡ್ಡ ಸಜ್ಜದವರೆಗೆ ನಾಲ್ಕು ಮೊಳ ಎತ್ತರ, ಎರಡು ಮೊಳ ಅಗಲ. 15 ಯಜ್ಞವೇದಿಯ ಮೇಲೆ ಬೆಂಕಿ ಹಾಕುವ ಸ್ಥಳದ ಎತ್ತರ ನಾಲ್ಕು ಮೊಳ. ಅದರ ನಾಲ್ಕು ಮೂಲೆಗಳು ಕೊಂಬಿನ ಆಕಾರದಂತಿದ್ದವು. 16 ಬೆಂಕಿಹಾಕುವ ಸ್ಥಳದ ಉದ್ದ ಹನ್ನೆರಡು ಮೊಳ; ಅಗಲ ಹನ್ನೆರಡು ಮೊಳ. ಅದು ಚೌಕವಾಗಿತ್ತು. 17 ಅದರ ಮೆಟ್ಟಲು ಹದಿನಾಲ್ಕು ಮೊಳ ಅಗಲ, ಹದಿನಾಲ್ಕು ಮೊಳ ಉದ್ದವಾಗಿದ್ದು ಚೌಕವಾಗಿತ್ತು. ಅದರ ಸುತ್ತಲೂ ಇದ್ದ ಅಂಚು ಅರ್ಧ ಮೊಳ ಅಗಲವಾಗಿತ್ತು. (ಅಡಿಪಾಯದ ಸುತ್ತಲೂ ಇದ್ದ ಕಾಲುವೆಯ ಅಗಲ ಎರಡು ಮೊಳ.) ಯಜ್ಞವೇದಿಯ ಮೇಲೆ ಹತ್ತುವ ಮೆಟ್ಟಲುಗಳು ಪೂರ್ವಭಾಗದಲ್ಲಿದ್ದವು.”
18 ಆಗ ಅವನು ನನಗೆ, “ನರಪುತ್ರನೇ, ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ಯಜ್ಞವೇದಿಯ ಕ್ರಮಗಳು ಯಾವುದೆಂದರೆ, ಯಜ್ಞವೇದಿಯನ್ನು ಕಟ್ಟುವಾಗ ಸರ್ವಾಂಗಹೋಮ ಮತ್ತು ಅದರ ಮೇಲೆ ರಕ್ತ ಚಿಮುಕಿಸುವದಕ್ಕೆ ಈ ಕ್ರಮಗಳನ್ನು ಅನುಸರಿಸು. 19 ಚಾದೋಕನ ಸಂತತಿಯ ಯಾಜಕರ ಪಾಪಪರಿಹಾರಕ್ಕಾಗಿ ನೀನು ಒಂದು ಎಳೆ ಹೋರಿಯನ್ನು ಅರ್ಪಿಸು. ಇವರು ಲೇವಿಕುಲದ ಯಾಜಕರು. ಇವರು ನನಗೆ ಕಾಣಿಕೆಗಳನ್ನು ಅರ್ಪಿಸುವ ಸೇವೆ ಮಾಡುವವರಾಗಿರುತ್ತಾರೆ.’” ಇದು ನನ್ನ ಒಡೆಯನಾದ ಯೆಹೋವನ ನುಡಿ. 20 “ನೀನು ಹೋರಿಯ ರಕ್ತವನ್ನು ತೆಗೆದು ವೇದಿಯ ನಾಲ್ಕು ಕೊಂಬುಗಳಲ್ಲಿ ಪ್ರೋಕ್ಷಿಸಬೇಕು; ಮತ್ತು ಮೆಟ್ಟಿಲಿನ ನಾಲ್ಕು ಮೂಲೆಗಳಿಗೂ, ಅದರ ಸುತ್ತಲೂ ಇರುವ ದಿಂಡಿನ ಮೇಲೂ ರಕ್ತ ಪ್ರೋಕ್ಷಿಸಬೇಕು. ಹೀಗೆ ಮಾಡುವಾಗ ನೀನು ವೇದಿಯನ್ನು ಪವಿತ್ರಗೊಳಿಸುವೆ. 21 ಆಮೇಲೆ ಪಾಪಪರಿಹಾರದ ಹೋರಿಯನ್ನು ತೆಗೆದು ಆಲಯದ ಜಾಗದಲ್ಲಿ ಆಲಯದ ಹೊರಗಿರುವ ಸ್ಥಳದಲ್ಲಿ ಸುಡಬೇಕು.
22 “ಎರಡನೇ ದಿವಸದಲ್ಲಿ ಪೂರ್ಣಾಂಗವಾದ ಹೋತವನ್ನು ನೀನು ಅರ್ಪಿಸಬೇಕು. ಪಾಪಪರಿಹಾರಕಯಜ್ಞಕ್ಕಾಗಿ ಯಾಜಕರು ಹೇಗೆ ಯಜ್ಞವೇದಿಯನ್ನು ಪವಿತ್ರ ಮಾಡಿದರೋ ಅದೇ ರೀತಿಯಲ್ಲಿ ತಿರುಗಿ ಮಾಡಬೇಕು. 23 ಯಜ್ಞವೇದಿಯನ್ನು ಶುದ್ಧೀಕರಿಸಿದ ನಂತರ ನಿಷ್ಕಳಂಕವಾದ ಒಂದು ಹೋರಿ ಮತ್ತು ಹಿಂಡಿನಿಂದ ಒಂದು ಟಗರನ್ನು ಸಮರ್ಪಿಸಬೇಕು. 24 ಯೆಹೋವನ ಸನ್ನಿಧಾನದಲ್ಲಿ ಅವುಗಳನ್ನು ವಧಿಸಬೇಕು. ಆಮೇಲೆ ಯಾಜಕರು ಅದರ ಮೇಲೆ ಉಪ್ಪು ಚಿಮುಕಿಸಿ ಹೋರಿ ಮತ್ತು ಟಗರನ್ನು ಸರ್ವಾಂಗಹೋಮವಾಗಿ ಸಮರ್ಪಿಸಬೇಕು. 25 ದೋಷಪರಿಹಾರಕಯಜ್ಞಕ್ಕಾಗಿ ಪ್ರತಿದಿವಸ ಏಳು ದಿವಸಗಳ ತನಕ ಒಂದೊಂದು ಆಡನ್ನು ಸಮರ್ಪಿಸಬೇಕು. ಅದೇ ಸಮಯದಲ್ಲಿ ನಿಷ್ಕಳಂಕವಾದ ಒಂದು ಎಳೇ ಹೋರಿ ಮತ್ತು ಟಗರುಗಳನ್ನು ದೋಷಪರಿಹಾರಕಯಜ್ಞಕ್ಕಾಗಿ ಸಮರ್ಪಿಸಬೇಕು. 26 ಏಳು ದಿವಸಗಳ ತನಕ ಯಾಜಕರು ವೇದಿಯನ್ನು ಪವಿತ್ರ ಮಾಡಬೇಕು ಮತ್ತು ದೇವರನ್ನು ಆರಾಧಿಸುವದಕ್ಕೆ ಸಿದ್ಧಪಡಿಸಬೇಕು. 27 ಏಳು ದಿವಸಗಳ ತರುವಾಯ, ಎಂಟನೇ ದಿನದಲ್ಲಿ ಯಾಜಕರು ನಿಮ್ಮ ಪರವಾಗಿ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಅರ್ಪಿಸಬೇಕು. ಆಗ ನಾನು ನಿಮಗೆ ಪ್ರಸನ್ನನಾಗುವೆನು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.
ಹೊರಗಿನ ದ್ವಾರ
44 ಆ ಬಳಿಕ ನನ್ನನ್ನು ಆ ಮನುಷ್ಯನು ಆಲಯದ ಪೂರ್ವದ್ವಾರಕ್ಕೆ ತಂದನು. ನಾವು ದ್ವಾರದ ಹೊರಗಿದ್ದೆವು. ದ್ವಾರವು ಮುಚ್ಚಿತ್ತು. 2 ಆಗ ಯೆಹೋವನು ನನಗೆ ಹೀಗೆಂದನು, “ಈ ದ್ವಾರವು ಮುಚ್ಚಿಯೇ ಇರಬೇಕು. ಇದು ತೆರೆಯಲ್ಪಡುವದಿಲ್ಲ. ಇದರ ಮೂಲಕ ಯಾರೂ ಪ್ರವೇಶ ಮಾಡುವದಿಲ್ಲ. ಯಾಕೆಂದರೆ ಇಸ್ರೇಲಿನ ದೇವರಾದ ಯೆಹೋವನು ಈ ದ್ವಾರದ ಮೂಲಕ ಪ್ರವೇಶಿಸಿದ್ದನು. ಆದ್ದರಿಂದ ಇದು ಮುಚ್ಚಿಯೇ ಇರಬೇಕು. 3 ಜನರ ಅಧಿಪತಿಯು ಯೆಹೋವನ ಸನ್ನಿಧಿಯಲ್ಲಿ ಊಟಮಾಡಲು ಬರುವಾಗ ಅವನು ಮಾತ್ರ ಈ ದ್ವಾರದ ಬಳಿ ಕುಳಿತುಕೊಳ್ಳಬಹುದು. ಅಧಿಪತಿಯು ದ್ವಾರದ ಮಂಟಪದ ಮೂಲಕ ಪ್ರವೇಶಿಸಬೇಕು ಮತ್ತು ಅದೇ ಮಾರ್ಗದಲ್ಲಿ ಹೊರ ಬರಬೇಕು.”
ಆಲಯದ ಪವಿತ್ರತೆ
4 ಆ ಬಳಿಕ ನನ್ನನ್ನು ಉತ್ತರದ ದ್ವಾರದ ಮೂಲಕ ಆಲಯದ ಮುಂಭಾಗಕ್ಕೆ ಅವನು ಕರೆದುಕೊಂಡು ಹೋದನು. ನಾನು ನೋಡಿದಾಗ ಯೆಹೋವನ ತೇಜಸ್ಸು ಆತನ ಆಲಯವನ್ನು ತುಂಬುತ್ತಿತ್ತು. ನಾನು ಸಾಷ್ಟಾಂಗವೆರಗಿದೆನು. 5 ಆಗ ಯೆಹೋವನು ಹೇಳಿದ್ದೇನೆಂದರೆ, “ನರಪುತ್ರನೇ, ಕಿವಿಯಾರೆ ಕೇಳು, ಕಣ್ಣಾರೆ ನೋಡಿ ಅರ್ಥಮಾಡಿಕೊ. ಪವಿತ್ರಾಲಯದ ಎಲ್ಲಾ ವಿಧಿನಿಯಮಗಳನ್ನು ಗಮನವಿಟ್ಟು ಕೇಳು. ಆಲಯದೊಳಕ್ಕೆ ಬರುವ ಪ್ರವೇಶ ದ್ವಾರಗಳನ್ನೂ ಪವಿತ್ರಸ್ಥಳದಿಂದ ಹೊರ ಹೋಗುವ ಪ್ರವೇಶ ದ್ವಾರಗಳನ್ನೂ ಗಮನವಿಟ್ಟು ನೋಡು. 6 ಅನಂತರ ನನ್ನ ಮಾತಿಗೆ ವಿಧೇಯರಾಗಲು ನಿರಾಕರಿಸುವ ಎಲ್ಲಾ ಇಸ್ರೇಲರಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ಇಸ್ರೇಲ್ ಜನಾಂಗವೇ, ನೀವು ಮಾಡಿರುವ ಭಯಂಕರ ಕೃತ್ಯಗಳು ನನಗೆ ಸಾಕಾಗಿವೆ. 7 ನೀವು ನನ್ನ ಆಲಯದೊಳಗೆ ಅನ್ಯರನ್ನು ತಂದಿರುತ್ತೀರಿ. ಅವರು ಸುನ್ನತಿಯಾದವರಾಗಿರಲಿಲ್ಲ. ಅವರು ಸಂಪೂರ್ಣವಾಗಿ ನನ್ನನ್ನು ನಂಬಿರಲಿಲ್ಲ. ಈ ರೀತಿಯಾಗಿ ನೀವು ನನ್ನ ಆಲಯವನ್ನು ಹೊಲೆ ಮಾಡಿರುತ್ತೀರಿ. ನೀವು ನಾವು ಮಾಡಿಕೊಂಡ ಒಡಂಬಡಿಕೆಯನ್ನು ಮುರಿದುಬಿಟ್ಟಿರಿ. ಭಯಂಕರ ಕೃತ್ಯಗಳನ್ನು ಮಾಡಿ ಆಮೇಲೆ ನನಗೆ ರೊಟ್ಟಿ, ಕೊಬ್ಬು, ರಕ್ತಗಳ ಕಾಣಿಕೆ ಅರ್ಪಿಸುತ್ತೀರಿ. ಆದರೆ ಇವೆಲ್ಲಾ ನನ್ನ ಆಲಯವನ್ನು ಅಶುದ್ಧಗೊಳಿಸುತ್ತಿವೆ. 8 ನೀವು ನನ್ನ ಪವಿತ್ರ ವಸ್ತುಗಳನ್ನು ಅಲಕ್ಷ್ಯಮಾಡಿದಿರಿ. ನನ್ನ ಪವಿತ್ರಸ್ಥಳದ ಜವಾಬ್ದಾರಿಕೆಯನ್ನು ನೀವು ಅನ್ಯರ ವಶಮಾಡಿದ್ದೀರಿ.’”
9 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲರೊಂದಿಗೆ ವಾಸವಾಗಿರುವ ಅನ್ಯಜನರೊಳಗೆ ತನುಮನಗಳಲ್ಲಿ ಸುನ್ನತಿಯಾಗಿಲ್ಲದವನು ನನ್ನ ಪವಿತ್ರಾಲಯವನ್ನು ಪ್ರವೇಶಿಸಕೂಡದು. 10 ಗತಕಾಲದಲ್ಲಿ ಇಸ್ರೇಲರು ನನ್ನನ್ನು ತ್ಯಜಿಸಿದಾಗ ಲೇವಿಯರು ನನ್ನನ್ನು ಬಿಟ್ಟುಹೋದರು. ಇಸ್ರೇಲರು ನನ್ನನ್ನು ಬಿಟ್ಟು ವಿಗ್ರಹಗಳನ್ನು ಪೂಜಿಸಿದರು. ಲೇವಿಯರು ಮಾಡಿದ ಪಾಪಕ್ಕಾಗಿ ಶಿಕ್ಷಿಸಲ್ಪಡುವರು. 11 ನನ್ನ ಪವಿತ್ರಸ್ಥಳದಲ್ಲಿ ಸೇವೆಮಾಡಲು ಲೇವಿಯರು ಆರಿಸಲ್ಪಟ್ಟಿರುತ್ತಾರೆ. ಅವರು ಆಲಯದ ಪ್ರವೇಶ ದ್ವಾರವನ್ನು ಕಾವಲು ಕಾಯ್ದರು. ಆಲಯದೊಳಗೆ ಸೇವೆಮಾಡಿದರು. ಜನರು ಅರ್ಪಿಸುವ ಪ್ರಾಣಿಗಳನ್ನು ವಧಿಸಿ ಯಜ್ಞಕ್ಕಾಗಿ ಅವುಗಳನ್ನು ತಯಾರುಮಾಡಿ ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸಿದರು. ಜನರಿಗೆ ಸಹಾಯ ಮಾಡಿ, ಅವರ ಸೇವೆಮಾಡಲು ಅವರು ಆರಿಸಲ್ಪಟ್ಟಿದ್ದಾರೆ. 12 ಆದರೆ ಆ ಲೇವಿಯರು, ಜನರು ನನಗೆ ವಿರುದ್ಧವಾಗಿ ಪಾಪ ಮಾಡುವಂತೆ ಸಹಾಯಮಾಡಿದರು. ಜನರು ತಮ್ಮ ವಿಗ್ರಹಗಳನ್ನು ಪೂಜಿಸುವಂತೆ ಅವರಿಗೆ ಸಹಾಯ ಮಾಡಿದರು. ಆದ್ದರಿಂದ ನಾನು ವಾಗ್ದಾನ ಮಾಡುವದೇನೆಂದರೆ, ‘ಅವರು ಮಾಡಿದ ಪಾಪಗಳಿಗಾಗಿ ಅವರು ಶಿಕ್ಷಿಸಲ್ಪಡುವರು.’” ಇದು ನನ್ನ ಒಡೆಯನಾದ ಯೆಹೋವನ ನುಡಿ.
13 “ಆದ್ದರಿಂದ ಯಾಜಕರಂತೆ ಲೇವಿಯರು ನನಗೆ ಕಾಣಿಕೆಗಳನ್ನು ತರಕೂಡದು. ಅವರು ನನ್ನ ಪವಿತ್ರ ವಸ್ತುಗಳ ಬಳಿಗೂ, ಅತೀ ಪವಿತ್ರ ವಸ್ತುಗಳ ಬಳಿಗೂ ಬರಬಾರದು. ಅವರು ಮಾಡಿದ ಭಯಂಕರ ಕೃತ್ಯಗಳಿಗಾಗಿ ಅವರು ಅವಮಾನಿತರಾಗಬೇಕು. 14 ಆದರೆ ನಾನು ನನ್ನ ಆಲಯದಲ್ಲಿ ಸೇವೆಮಾಡಲು ಅವರಿಗೆ ಬಿಡುವೆನು. ಅವರು ಅದರೊಳಗೆ ಮಾಡಬೇಕಾದ ಸೇವೆಯನ್ನು ಮಾಡುವರು.
15 “ಯಾಜಕರೆಲ್ಲರೂ ಲೇವಿ ಕುಲಕ್ಕೆ ಸಂಬಂಧಪಟ್ಟವರು. ಆದರೆ ಲೇವಿಯರು ನನ್ನನ್ನು ಬಿಟ್ಟು ತೊಲಗಿದಾಗ ಚಾದೋಕನ ಸಂತತಿಯವರಾದ ಯಾಜಕರು ನನ್ನ ಪವಿತ್ರ ಸ್ಥಳವನ್ನು ಪರಾಂಬರಿಸಿದರು. ಆದ್ದರಿಂದ ಚಾದೋಕನ ಸಂತತಿಯವರು ಮಾತ್ರ ನನಗೆ ಕಾಣಿಕೆಗಳನ್ನು ಸಮರ್ಪಿಸುವರು. ಅವರು ನನ್ನ ಸನ್ನಿಧಿಯಲ್ಲಿ ನಿಂತು ಯಜ್ಞಮಾಡಲ್ಪಡುವ ಪ್ರಾಣಿಗಳ ಕೊಬ್ಬು ಮತ್ತು ರಕ್ತವನ್ನು ನನಗೆ ಸಮರ್ಪಿಸುವರು.” ಇದು ನನ್ನ ಒಡೆಯನಾದ ಯೆಹೋವನ ನುಡಿ. 16 “ಅವರು ನನ್ನ ಪವಿತ್ರಸ್ಥಳವನ್ನು ಪ್ರವೇಶಿಸುವರು. ನನ್ನ ಮೇಜಿನ ಬಳಿಗೆ ನನಗೆ ಸೇವೆಮಾಡಲು ಬರುವರು. ನಾನು ಅವರಿಗೆ ವಹಿಸಿರುವ ವಸ್ತುಗಳನ್ನು ಪರಾಂಬರಿಸುವರು. 17 ಒಳಗಿನ ಪ್ರಾಕಾರದ ಪ್ರವೇಶ ದ್ವಾರವನ್ನು ಹೊಕ್ಕುವಾಗ ಅವರು ನಾರುಮಡಿ ಬಟ್ಟೆಯನ್ನು ಧರಿಸುವರು. ಅವರು ಒಳಗಿನ ಪ್ರಾಕಾರದ ಪ್ರವೇಶ ದ್ವಾರದಲ್ಲಾಗಲಿ ಆಲಯದೊಳಗಾಗಲಿ ಸೇವೆಮಾಡುವಾಗ ಉಣ್ಣೆಯಿಂದ ಮಾಡಿದ ಬಟ್ಟೆಯನ್ನು ಧರಿಸಿಕೊಳ್ಳುವದಿಲ್ಲ. 18 ಅವರು ನಾರುಮಡಿಯ ಮುಂಡಾಸನ್ನು ಧರಿಸಿಕೊಳ್ಳುವರು. ಅದೇ ಬಟ್ಟೆಯ ಚಡ್ಡಿಯನ್ನೂ ಧರಿಸುವರು. ಅವರಿಗೆ ಬೆವರು ಬರಿಸುವ ಯಾವ ಬಟ್ಟೆಯಾಗಲಿ ಅವರು ಧರಿಸುವದಿಲ್ಲ. 19 ಹೊರಗಿನ ಪ್ರಾಕಾರದಲ್ಲಿರುವ ಜನರ ಬಳಿಗೆ ಅವರು ಹೋಗುವಾಗ, ನನ್ನ ಸೇವೆಮಾಡಲು ಅವರು ಧರಿಸಿಕೊಂಡಿದ್ದ ವಸ್ತ್ರಗಳನ್ನು ತೆಗೆದಿಡುವರು. ಒಳಗಿನ ಪ್ರಾಕಾರದಲ್ಲಿರುವ ವಿಶೇಷವಾದ ಉಗ್ರಾಣ ಕೋಣೆಯಲ್ಲಿ ಅವರು ಆ ವಸ್ತ್ರಗಳನ್ನು ಇಡುವರು ಮತ್ತು ಹೊರಗಿನ ಪ್ರಾಕಾರದಲ್ಲಿರುವ ಜನರ ಬಳಿಗೆ ಹೋಗುವಾಗ ಬೇರೆ ಬಟ್ಟೆಗಳನ್ನು ಧರಿಸಿಕೊಳ್ಳುವರು. ಹೀಗೆ ಅವರು ಮಾಡುವದರಿಂದ ಸಾಮಾನ್ಯ ಜನರು ಆ ವಿಶೇಷವಾದ ಬಟ್ಟೆಗಳನ್ನು ಮುಟ್ಟಿದಂತಾಗುವುದು.
20 “ಆ ಯಾಜಕರು ತಮ್ಮ ತಲೆಯನ್ನು ಬೋಳಿಸುವದೂ ಇಲ್ಲ ಮತ್ತು ತಲೆಕೂದಲನ್ನು ಉದ್ದವಾಗಿ ಬೆಳೆಸುವದೂ ಇಲ್ಲ. ಇದು ಅವರಲ್ಲಿರುವ ಶೋಕವನ್ನು ಸೂಚಿಸುತ್ತದೆ. ಯಾಜಕರು ಯೆಹೋವನ ಸೇವೆಮಾಡುವಾಗ ಸಂತೋಷದಿಂದಿರಬೇಕು. ಅವರು ತಮ್ಮ ತಲೆಕೂದಲನ್ನು ಸಣ್ಣದಾಗಿರಿಸುವದಕ್ಕೆ ಕತ್ತರಿಸಬಹುದು. 21 ಯಾಜಕರು ಒಳಗಿನ ಪ್ರಾಕಾರವನ್ನು ಪ್ರವೇಶಿಸುವಾಗ ದ್ರಾಕ್ಷಾರಸವನ್ನು ಕುಡಿದಿರಬಾರದು. 22 ಯಾಜಕರು ವಿಧವೆಯರನ್ನಾಗಲಿ ವಿವಾಹವಿಚ್ಛೇದನಗೊಂಡ ಸ್ತ್ರೀಯರನ್ನಾಗಲಿ ಮದುವೆಯಾಗಕೂಡದು. ಇಸ್ರೇಲ್ ಸಂತತಿಯವಳೇ ಆಗಿರುವ ಕನ್ನಿಕೆಯನ್ನಾಗಲಿ ಅಥವಾ ಯಾಜಕನಾಗಿದ್ದ ತನ್ನ ಗಂಡನನ್ನು ಕಳೆದುಕೊಂಡ ವಿಧವೆಯನ್ನಾಗಲಿ ಮದುವೆಯಾಗಬೇಕು.
23 “ಯಾಜಕರು ಜನರಿಗೆ ಪವಿತ್ರ ವಸ್ತುಗಳ ಮತ್ತು ಪವಿತ್ರವಲ್ಲದ ವಸ್ತುಗಳ ಬಗ್ಗೆ ಉಪದೇಶಿಸಬೇಕು. ಒಬ್ಬನನ್ನು ಅಶುದ್ಧನನ್ನಾಗಿ ಮಾಡುವಂಥವುಗಳ ಬಗ್ಗೆ ಇರುವ ನಿಯಮಗಳನ್ನು ಅವರು ಜನರಿಗೆ ಉಪದೇಶಿಸಬೇಕು. 24 ವ್ಯಾಜ್ಯಗಳಿಗೆ ತೀರ್ಪು ನೀಡುವ ನ್ಯಾಯಾಧಿಶರಾಗಿ ಯಾಜಕರು ಸೇವೆಮಾಡಬೇಕು ಮತ್ತು ನನ್ನ ಆಡಳಿತವನ್ನು ಆಧರಿಸಿ ಅವರು ತೀರ್ಪು ನೀಡಬೇಕು. ಅವರು ವಿಶೇಷವಾದ ಕೂಟಗಳನ್ನು ಏರ್ಪಡಿಸುವಾಗ ನನ್ನ ವಿಧಿನಿಯಮಗಳನ್ನು ಅನುಸರಿಸುವರು ಮತ್ತು ವಿಶೇಷವಾದ ಎಲ್ಲಾ ರಜಾದಿನಗಳನ್ನು ಮತ್ತು ಸಬ್ಬತ್ ದಿನಗಳನ್ನು ಅವರು ಗೌರವಿಸುವರು. 25 ಸತ್ತ ಹೆಣದ ಬಳಿಗೆ ಹೋಗಿ ಅವರು ತಮ್ಮನ್ನು ಅಪವಿತ್ರ ಮಾಡಿಕೊಳ್ಳಬಾರದು. ಆದರೆ ಸತ್ತವರು ತಮ್ಮ ಹೆತ್ತವರಾಗಲಿ ಮಕ್ಕಳಾಗಲಿ ಅಥವಾ ಮದುವೆಯಾಗದಿದ್ದ ಸಹೋದರ ಸಹೋದರಿಯರಾಗಲಿ ಆಗಿದ್ದಲ್ಲಿ ಅವರು ತಮ್ಮನ್ನು ಅಪವಿತ್ರ ಮಾಡಿಕೊಳ್ಳಬೇಕಾಗುತ್ತದೆ. 26 ಆ ಯಾಜಕನು ತನ್ನನ್ನು ಶುದ್ಧ ಮಾಡಿಕೊಂಡ ತರುವಾಯ ತಾನು ಏಳು ದಿವಸ ಕಾಯಬೇಕು. 27 ಅನಂತರ ಅವನು ಪವಿತ್ರಸ್ಥಳಕ್ಕೆ ತಿರುಗಿ ಹೋಗಬಹುದು. ಆದರೆ ಒಳಗಿನ ಪ್ರಾಕಾರದೊಳಗೆ ಹೋಗುವ ದಿನದಂದು ಯಾಜಕನು ಮೊದಲು ತನಗಾಗಿ ಪಾಪಪರಿಹಾರಕಯಜ್ಞವನ್ನು ಸಮರ್ಪಿಸಿಕೊಳ್ಳಬೇಕು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
28 “ಲೇವಿಯರ ಆಸ್ತಿಯು ನಾನೇ, ಇಸ್ರೇಲರೊಳಗೆ ಅವರಿಗೆ ಯಾವ ಆಸ್ತಿಯೂ ಇರುವದಿಲ್ಲ. ನಾನೇ ಅವರ ಸ್ವಾಸ್ತ್ಯ. 29 ಜನರು ಧಾನ್ಯಸಮರ್ಪಣೆ, ಪಾಪಪರಿಹಾರಕಯಜ್ಞ, ದೋಷಪರಿಹಾರಕಯಜ್ಞಕ್ಕೆ ತಂದ ಕಾಣಿಕೆಯೇ ಅವರ ಆಹಾರವಾಗಿರುವದು. 30 ಎಲ್ಲಾ ಪ್ರಥಮಫಲವು ಯಾಜಕರಿಗೆ ಸಲ್ಲತಕ್ಕದ್ದು. ಅಲ್ಲದೆ ನೀವು ನಾದುವ ಮೊದಲನೆ ರೊಟ್ಟಿಯ ಹಿಟ್ಟು ಯಾಜಕರಿಗೆ ಕೊಡಬೇಕು. ಹೀಗೆ ಮಾಡಿದ್ದಲ್ಲಿ ನೀವು ಆಶೀರ್ವದಿಸಲ್ಪಡುತ್ತೀರಿ. 31 ಯಾಜಕರು ಸ್ವಾಭಾವಿಕವಾಗಿ ಸತ್ತು ಅಥವಾ ವನ್ಯಜಂತುಗಳು ಕೊಂದಿರುವ ಯಾವ ಪ್ರಾಣಿಯಾಗಲಿ ಪಕ್ಷಿಯಾಗಲಿ ಅದರ ಮಾಂಸವನ್ನು ತಿನ್ನಬಾರದು.
1 ಈ ಲೋಕವು ಆರಂಭವಾಗುವುದಕ್ಕಿಂತ ಮುಂಚಿನಿಂದಲೂ ಇದ್ದ ಜೀವವಾಕ್ಯದ ಕುರಿತಾಗಿ ನಾವು ನಿಮಗೆ ಬರೆಯುತ್ತಿದ್ದೇವೆ: ಅದನ್ನು ಕಿವಿಯಾರೆ ಕೇಳಿದೆವು; ಕಣ್ಣಾರೆ ನೋಡಿದೆವು, ಮನಸ್ಸಿಟ್ಟು ಗಮನಿಸಿದೆವು, ಕೈಗಳಿಂದ ಮುಟ್ಟಿ ನೋಡಿದೆವು. 2 ಆ ಜೀವವು ನಮಗೆ ಪ್ರತ್ಯಕ್ಷವಾಯಿತು. ನಾವು ಅದನ್ನು ನೋಡಿದ್ದರಿಂದ ಅದರ ಬಗ್ಗೆ ಸಾಕ್ಷಿ ಹೇಳ ಬಲ್ಲೆವು. ನಾವೀಗ ನಿಮಗೆ ಆ ಜೀವದ ಬಗ್ಗೆ ಸಾಕ್ಷಿ ಹೇಳುತ್ತೇವೆ. ಅದು ತಂದೆಯಾದ ದೇವರ ಸಂಗಡವಿದ್ದ ನಿತ್ಯವಾದ ಜೀವ. ದೇವರು ಈ ಜೀವವನ್ನು ನಮಗೆ ತೋರಿಸಿದನು. 3 ನಾವು ನೋಡಿದವುಗಳನ್ನೂ ಕೇಳಿದವುಗಳನ್ನೂ ಈಗ ನಿಮಗೆ ಹೇಳುತ್ತೇವೆ. ಏಕೆಂದರೆ ನೀವು ನಮ್ಮ ಅನ್ಯೋನ್ಯತೆಯಲ್ಲಿ ಪಾಲುಗಾರರಾಗಬೇಕೆಂಬುದು ನಮ್ಮ ಅಪೇಕ್ಷೆ. ನಮ್ಮ ಈ ಅನ್ಯೋನ್ಯತೆಯು ತಂದೆಯಾದ ದೇವರ ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಸಂಗಡವಿರುವಂಥದ್ದು. 4 ನಮ್ಮ[a] ಸಂತೋಷವು ಪರಿಪೂರ್ಣವಾಗಲೆಂದು ನಾವು ನಿಮಗೆ ಈ ಸಂಗತಿಗಳನ್ನು ಬರೆಯುತ್ತಿದ್ದೇವೆ.
ದೇವರು ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ
5 ನಾವು ದೇವರಿಂದ ಕೇಳಿ ನಿಮಗೆ ತಿಳಿಸುವ ವಾರ್ತೆ ಏನೆಂದರೆ, ದೇವರು ಬೆಳಕಾಗಿದ್ದಾನೆ; ಆತನಲ್ಲಿ ಅಂಧಕಾರವಿಲ್ಲ. 6 ಆದ್ದರಿಂದ ದೇವರ ಜೊತೆಯಲ್ಲಿ ಅನ್ಯೋನ್ಯತೆಯಿಂದ ಇದ್ದೇವೆ ಎಂದು ನಾವು ಹೇಳಿಕೊಂಡು, ಅಂಧಕಾರದಲ್ಲಿ ಜೀವಿಸುತ್ತಿದ್ದರೆ ಸುಳ್ಳು ಹೇಳಿದಂತಾಯಿತು. ಏಕೆಂದರೆ ನಾವು ಸತ್ಯವನ್ನು ಅನುಸರಿಸುತ್ತಿಲ್ಲ. 7 ದೇವರು ಬೆಳಕಿನಲ್ಲಿದ್ದಾನೆ. ಆದ್ದರಿಂದ ನಾವೂ ಬೆಳಕಿನಲ್ಲಿ ಜೀವಿಸಬೇಕಾಗಿದೆ. ನಾವು ಬೆಳಕಿನಲ್ಲಿ ಜೀವಿಸುವವರಾಗಿದ್ದರೆ ಪರಸ್ಪರ ಅನ್ಯೋನ್ಯತೆಯಲ್ಲಿದ್ದೇವೆ ಮತ್ತು ದೇವರ ಮಗನಾದ ಯೇಸುವಿನ ರಕ್ತವು ನಮ್ಮ ಪಾಪಗಳನ್ನೆಲ್ಲಾ ನಿವಾರಣೆ ಮಾಡುತ್ತದೆ.
8 ನಮ್ಮಲ್ಲಿ ಪಾಪವಿಲ್ಲವೆಂದು ಹೇಳಿಕೊಂಡರೆ, ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುವವರಾಗಿದ್ದೇವೆ ಮತ್ತು ನಮ್ಮಲ್ಲಿ ಸತ್ಯವೇ ಇಲ್ಲ. 9 ಆದರೆ ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿ ನಮ್ಮನ್ನು ಶುದ್ಧೀಕರಿಸುತ್ತಾನೆ. 10 ನಾವು ಪಾಪಮಾಡಿಲ್ಲವೆಂದು ಹೇಳಿದರೆ ದೇವರನ್ನೇ ಸುಳ್ಳುಗಾರನನ್ನಾಗಿ ಮಾಡುವವರಾಗಿದ್ದೇವೆ ಮತ್ತು ದೇವರ ವಾಕ್ಯವನ್ನು ಒಪ್ಪಿಕೊಳ್ಳದವರಾಗಿದ್ದೇವೆ.
Kannada Holy Bible: Easy-to-Read Version. All rights reserved. © 1997 Bible League International