Old/New Testament
ಒಣಗಿದ ಎಲುಬುಗಳ ದರ್ಶನ
37 ಯೆಹೋವನ ಶಕ್ತಿಯು ನನ್ನ ಮೇಲೆ ಬಂದಿತು. ಯೆಹೋವನ ಆತ್ಮವು ನನ್ನನ್ನು ನಗರದೊಳಗಿಂದ ಎತ್ತಿಕೊಂಡು ತಗ್ಗಿನ ಮಧ್ಯಕ್ಕೆ ಕೊಂಡೊಯ್ದನು. ಆ ಬಯಲಿನ ತುಂಬಾ ಒಣಗಿದ ಎಲುಬುಗಳು ತುಂಬಿದ್ದವು. 2 ಆ ಬಯಲಿನ ನೆಲದ ಮೇಲೆ ಅನೇಕಾನೇಕ ಒಣ ಎಲುಬುಗಳು ಬಿದ್ದುಕೊಂಡಿದ್ದವು. ಯೆಹೋವನು ನನ್ನನ್ನು ಆ ಎಲುಬುಗಳ ನಡುವೆ ನಡೆಯುವಂತೆ ಮಾಡಿದನು. ಆ ಎಲುಬುಗಳು ತೀರಾ ಒಣಗಿಹೋಗಿರುವುದನ್ನು ನಾನು ನೋಡಿದೆನು.
3 ಆಗ ನನ್ನ ಒಡೆಯನಾದ ಯೆಹೋವನು ನನ್ನೊಡನೆ ಹೀಗೆ ಹೇಳಿದನು, “ನರಪುತ್ರನೇ, ಈ ಎಲುಬುಗಳಿಗೆ ತಿರುಗಿ ಜೀವ ಬಂದೀತೋ?”
ಅದಕ್ಕೆ ನಾನು, “ನನ್ನ ಒಡೆಯನಾದ ಯೆಹೋವನೇ, ನೀನೇ ಬಲ್ಲೆ. ಈ ಪ್ರಶ್ನೆಗೆ ಉತ್ತರ ನಿನಗೇ ಗೊತ್ತಿದೆ” ಎಂದು ಉತ್ತರಿಸಿದೆನು.
4 ಆಗ ಯೆಹೋವನು, “ನನ್ನ ಪರವಾಗಿ ಆ ಎಲುಬುಗಳೊಂದಿಗೆ ಮಾತನಾಡು. ಅವುಗಳಿಗೆ ಹೀಗೆ ಹೇಳು: ‘ಒಣಗಿದ ಎಲುಬುಗಳೇ, ಯೆಹೋವನ ಮಾತನ್ನು ಕೇಳಿರಿ. 5 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ, ನಾನು ನಿಮಗೆ ಉಸಿರನ್ನು[a] ಬರುವಂತೆ ಮಾಡುವೆನು. ಆಗ ನೀವು ಜೀವಂತರಾಗುವಿರಿ. 6 ನಾನು ನಿಮ್ಮಲ್ಲಿ ಸ್ನಾಯುಗಳನ್ನೂ ನರಗಳನ್ನೂ ಬರಮಾಡುವೆನು. ಆಮೇಲೆ ನಿಮ್ಮನ್ನು ಚರ್ಮದಿಂದ ಹೊದಿಸುವೆನು. ಆಮೇಲೆ ನಿಮ್ಮಲ್ಲಿ ಶ್ವಾಸವನ್ನಿಟ್ಟು ನಿಮಗೆ ಜೀವ ಬರುವಂತೆ ಮಾಡುವೆನು. ಆಗ ನಾನು ಒಡೆಯನಾದ ಯೆಹೋವನು ಎಂದು ನೀವು ತಿಳಿದುಕೊಳ್ಳುವಿರಿ.’”
7 ನಾನು ಎಲುಬುಗಳೊಂದಿಗೆ ಯೆಹೋವನ ಪರವಾಗಿ ಮಾತನಾಡಿದೆನು. ನಾನು ಮಾತನಾಡುತ್ತಾ ಇರುವಾಗಲೇ ಒಂದು ದೊಡ್ಡ ಶಬ್ದವನ್ನು ಕೇಳಿದೆನು. ಎಲುಬುಗಳು ಅಲ್ಲಾಡತೊಡಗಿದವು ಮತ್ತು ಒಂದಕ್ಕೊಂದು ಜೋಡಿಸಲ್ಪಟ್ಟವು. 8 ನನ್ನ ಕಣ್ಣೆದುರಿನಲ್ಲೇ ಅವುಗಳಿಗೆ ಸ್ನಾಯುಗಳು, ನರಗಳು ಬಂದವು; ಮತ್ತು ಚರ್ವವು ಅವುಗಳನ್ನು ಮುಚ್ಚಿತು. ಆದರೆ ಆ ಶರೀರ ಚಲಿಸಲಿಲ್ಲ. ಯಾಕೆಂದರೆ ಅದರಲ್ಲಿ ಶ್ವಾಸವಿರಲಿಲ್ಲ.
9 ಆಗ ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನನ್ನ ಪರವಾಗಿ ಗಾಳಿಯೊಂದಿಗೆ ಮಾತನಾಡು. ನರಪುತ್ರನೇ, ಗಾಳಿಯೊಂದಿಗೆ ಮಾತನಾಡು. ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, ‘ಗಾಳಿಯೇ, ಎಲ್ಲಾ ದಿಕ್ಕುಗಳಿಂದ ಬಂದು ಈ ಸತ್ತ ಶರೀರಗಳ ಮೇಲೆ ಊದು. ಅವರ ಮೇಲೆ ಗಾಳಿ ಊದು. ಆಗ ಅವುಗಳಿಗೆ ಜೀವ ಬರುವದು.’”
10 ನಾನು ಯೆಹೋವನ ಪರವಾಗಿ ಗಾಳಿಗೆ ಆತನು ಹೇಳಿದಂತೆಯೇ ಹೇಳಿದೆನು. ಆಗ ನಿರ್ಜೀವ ದೇಹಗಳೊಳಗೆ ಶ್ವಾಸವು ಹೊಕ್ಕಿತು. ಅವುಗಳಿಗೆ ಜೀವಬಂದು ನಿಂತುಕೊಂಡವು. ಅಲ್ಲಿ ಅನೇಕ ಜನರಿದ್ದರು. ಒಂದು ದೊಡ್ಡ ಸೈನ್ಯದ ತರಹ ಜನಸಮೂಹವು ಅಲ್ಲಿತ್ತು.
11 ಆಗ ಒಡೆಯನಾದ ಯೆಹೋವನು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಈ ಎಲುಬುಗಳು ಇಸ್ರೇಲ್ ಜನಾಂಗ. ‘ನಮ್ಮ ಎಲುಬುಗಳು ಒಣಗಿಹೋಗಿವೆ. ನಮ್ಮ ನಿರೀಕ್ಷೆಯು ಮುಗಿದುಹೋಯಿತು. ನಾವು ಸಂಪೂರ್ಣವಾಗಿ ನಾಶವಾಗಿ ಹೋಗಿದ್ದೇವೆ’ ಎಂದು ಇಸ್ರೇಲರು ಹೇಳುತ್ತಾರೆ. 12 ಆದ್ದರಿಂದ ನನ್ನ ಪರವಾಗಿ ಅವರೊಂದಿಗೆ ಮಾತನಾಡು. ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆಂದು ಹೇಳು: ‘ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆದು ನಿಮ್ಮನ್ನು ಹೊರತಂದು ನಿಮ್ಮ ಸ್ವದೇಶವಾದ ಇಸ್ರೇಲಿಗೆ ನಿಮ್ಮನ್ನು ಬರಮಾಡುವೆನು. 13 ನನ್ನ ಜನರೇ, ನಿಮ್ಮನ್ನು ಸಮಾಧಿಯೊಳಗಿಂದ ಎಬ್ಬಿಸಿ ತರುವೆನು. ಆಗ ನಾನೇ ಯೆಹೋವನೆಂದು ನೀವು ತಿಳಿಯುವಿರಿ. 14 ನಾನು ನನ್ನ ಆತ್ಮವನ್ನು ನಿಮ್ಮಲ್ಲಿ ಇಡುವೆನು, ಆಗ ನೀವು ತಿರುಗಿ ಜೀವ ಹೊಂದುವಿರಿ. ಅನಂತರ ನಿಮ್ಮನ್ನು ನಿಮ್ಮ ಸ್ವದೇಶಕ್ಕೆ ಬರಮಾಡುವೆನು. ಆಗ ನಾನೇ ಯೆಹೋವನೆಂದು ನೀವು ತಿಳಿಯುವಿರಿ. ನಾನು ಹೇಳಿದ್ದೆಲ್ಲ ಸಂಭವಿಸುತ್ತದೆ ಎಂದು ಆಗ ನಿಮಗೆ ತಿಳಿದು ಬರುವದು.’” ಇದು ಯೆಹೋವನ ನುಡಿ.
ಯೆಹೂದ ಮತ್ತು ಇಸ್ರೇಲ್ ಒಂದಾಗುವದು
15 ಯೆಹೋವನ ಸಂದೇಶವು ನನಗೆ ತಿರುಗಿ ಬಂತು. ಆತನು ಹೇಳಿದ್ದೇನೆಂದರೆ: 16 “ನರಪುತ್ರನೇ, ಒಂದು ದಂಡವನ್ನು ತೆಗೆದುಕೊಂಡು ಅದರ ಮೇಲೆ, ‘ಈ ದಂಡವು ಯೆಹೂದನಿಗೂ ಅವನ ಸ್ನೇಹಿತರಾದ ಇಸ್ರೇಲರಿಗೂ ಸೇರಿದ್ದು’ ಎಂದು ಬರೆ. ಆಮೇಲೆ ಇನ್ನೊಂದು ದಂಡವನ್ನು ತೆಗೆದುಕೊಂಡು ಅದರ ಮೇಲೆ, ‘ಎಫ್ರಾಯಿಮನ ಈ ದಂಡವು ಯೋಸೇಫನಿಗೂ ಅವನ ಸ್ನೇಹಿತರಾದ ಇಸ್ರೇಲರಿಗೂ ಸೇರಿದ್ದು’ ಎಂದು ಬರೆ. 17 ಆಮೇಲೆ ಆ ಎರಡೂ ದಂಡಗಳನ್ನು ನಿನ್ನ ಕೈಯಲ್ಲಿ ಕೂಡಿಸು. ಆಗ ಅದು ಒಂದೇ ದಂಡವಾಗುವದು.
18 “ನಿನ್ನ ಜನರು ಅದು ಏನು ಎಂದು ವಿವರಿಸಲು ಹೇಳುವರು. 19 ಅವರಿಗೆ ಹೀಗೆ ಹೇಳು: ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ನಾನು ಯೋಸೇಫನ ದಂಡವನ್ನು ಎಫ್ರಾಯೀಮ್ ಮತ್ತು ಅವನ ಸ್ನೇಹಿತರಾದ ಇಸ್ರೇಲರ ಕೈಯಿಂದ ತೆಗೆದುಕೊಂಡು ಅದನ್ನು ಯೆಹೂದದ ದಂಡದೊಂದಿಗೆ ಇಟ್ಟು ಒಂದೇ ದಂಡವಾಗುವಂತೆ ಮಾಡುವೆನು. ಅವು ನನ್ನ ಕೈಯಲ್ಲಿ ಒಂದೇ ದಂಡವಾಗುತ್ತವೆ.’
20 “ಆ ದಂಡಗಳನ್ನು ಕೈಯಲ್ಲಿ ಹಿಡಿದುಕೊಂಡು ನಿನ್ನೆದುರಿಗೆ ಚಾಚು. ನೀನು ಅವುಗಳ ಮೇಲೆ ಹೆಸರು ಬರೆದಿರುವೆ. 21 ಯೆಹೋವನು ಹೀಗೆ ಹೇಳುತ್ತಾನೆ ಎಂದು ಆ ಜನರಿಗೆ ಹೇಳು: ‘ನಾನು ಇಸ್ರೇಲ್ ಜನರನ್ನು ಅವರು ಚದರಿದ ದೇಶಗಳಿಂದಲೂ ಸುತ್ತಲಿರುವ ದೇಶಗಳಿಂದಲೂ ಅವರನ್ನು ಒಟ್ಟುಗೂಡಿಸಿ ಅವರ ಸ್ವದೇಶಕ್ಕೆ ತರುವೆನು. 22 ಇಸ್ರೇಲಿನ ಪರ್ವತ ರಾಜ್ಯದಲ್ಲಿ ಅವರನ್ನು ಒಂದು ಜನಾಂಗವನ್ನಾಗಿ ಮಾಡುವೆನು. ಅವರೆಲ್ಲರಿಗೂ ಒಬ್ಬನೇ ರಾಜನಿರುವನು. ಅವರು ಇನ್ನು ಮುಂದೆ ಎರಡು ರಾಜ್ಯಗಳಾಗುವದಿಲ್ಲ. 23 ಅವರು ಇನ್ನು ಮೇಲೆ ವಿಗ್ರಹಗಳಿಂದ ತಮ್ಮನ್ನು ಹೊಲೆ ಮಾಡಿಕೊಳ್ಳುವದಿಲ್ಲ. ಅವರು ಪಾಪಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸುವೆನು. ನಾನು ಅವರನ್ನು ತೊಳೆದು ಶುದ್ಧಮಾಡುವೆನು. ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.
24 “‘ನನ್ನ ಸೇವಕನಾದ ದಾವೀದನು ಅವರ ರಾಜನಾಗುವನು. ಅವರೆಲ್ಲರಿಗೆ ಒಬ್ಬನೇ ಕುರುಬನಿರುವನು. ನಾನು ಹೇಳಿದ ಮಾತುಗಳಿಗೆ ಅವರು ವಿಧೇಯರಾಗುವರು; ನನ್ನ ಕಟ್ಟಳೆ ನಿಯಮಗಳಲ್ಲಿ ಅವರು ಬಾಳುವರು. 25 ನಾನು ನನ್ನ ಸೇವಕನಾದ ಯಾಕೋಬನಿಗೆ ಕೊಟ್ಟಿರುವ ದೇಶದಲ್ಲಿ ಅವರು ವಾಸಿಸುವರು. ನಿಮ್ಮ ಪೂರ್ವಿಕರು ಆ ಪ್ರಾಂತ್ಯದಲ್ಲಿ ವಾಸವಾಗಿದ್ದರು. ನನ್ನ ಜನರು ಅಲ್ಲಿಯೇ ವಾಸಮಾಡುವರು. ಅವರೂ ಅವರ ಮಕ್ಕಳೂ ಮೊಮ್ಮಕ್ಕಳೂ ಅಲ್ಲಿ ನಿತ್ಯಕಾಲಕ್ಕೂ ಜೀವಿಸುವರು. ನನ್ನ ಸೇವಕನಾದ ದಾವೀದನು ಅವರ ನಿತ್ಯಕಾಲದ ರಾಜನು. 26 ನಾನು ಸಮಾಧಾನದ ಒಡಂಬಡಿಕೆಯನ್ನು ಅವರ ಜೊತೆ ಮಾಡುವೆನು. ಇದು ನಿರಂತರದ ಒಡಂಬಡಿಕೆಯಾಗಿರುವದು. ನಾನು ಅವರ ಸ್ವದೇಶವನ್ನು ಹಿಂತಿರುಗಿಸಿ ಕೊಡುವೆನು. ಅವರನ್ನು ಅಭಿವೃದ್ಧಿಪಡಿಸಿ ಹೆಚ್ಚಿಸುವೆನು ಮತ್ತು ಅವರ ಮಧ್ಯೆ ನನ್ನ ಪವಿತ್ರ ಸ್ಥಳವನ್ನು ಇರಿಸುವೆನು. ಇದು ನಿರಂತರವಾದ ಒಡಂಬಡಿಕೆ. 27 ನನ್ನ ಪವಿತ್ರಗುಡಾರ ಅವರೊಂದಿಗಿರುವದು. ಹೌದು, ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು. 28 ಇತರ ದೇಶಗಳವರು ನಾನು ಯೆಹೋವನೆಂದು ತಿಳಿಯುವರು. ಇಸ್ರೇಲರನ್ನು ನನ್ನ ವಿಶೇಷ ಜನರೆಂದು ಅವರಿಗೆ ತಿಳಿದುಬರುವದು. ಯಾಕೆಂದರೆ ಅವರ ಮಧ್ಯೆ ನನ್ನ ಪರಿಶುದ್ಧ ಸ್ಥಾನವನ್ನು ನಿರಂತರಕ್ಕೂ ಇರಿಸುವೆನು.’”
ಗೋಗಿನ ವಿಷಯವಾದ ದೈವೋಕ್ತಿ
38 ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಮಾಗೋಗ್ ದೇಶದಲ್ಲಿರುವ ಗೋಗಿನ ಕಡೆಗೆ ಮುಖ ಮಾಡು. ಅವನು ಮೆಷೆಕ್ ಮತ್ತು ತೂಬಲ್ ದೇಶಗಳ ಪ್ರಮುಖ ನಾಯಕನು. ಅವನಿಗೆ ವಿರುದ್ಧವಾಗಿ ನನಗೋಸ್ಕರ ಪ್ರವಾದಿಸು. 3 ಅವನಿಗೆ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ ಎಂದು ಹೇಳು. ‘ಗೋಗನೇ, ನೀನು ಮೆಷೆಕ್ ಮತ್ತು ತೂಬಲ್ ದೇಶದ ಅತ್ಯಂತ ಪ್ರಮುಖ ನಾಯಕನಾಗಿರುವೆ. 4 ನಾನು ನಿನ್ನ ದವಡೆಗೆ ಕೊಕ್ಕೆ ಹಾಕಿ ನಿನ್ನನ್ನು ಸೆರೆಹಿಡಿದುಕೊಂಡು ಬರುವೆನು. ನಿನ್ನೆಲ್ಲಾ ಭೂಸೈನಿಕರನ್ನೂ ನಿನ್ನೆಲ್ಲಾ ಕುದುರೆಗಳನ್ನೂ ನಿನ್ನೆಲ್ಲಾ ರಾಹುತರನ್ನೂ ಬಂಧಿಸಿ ತರುವೆನು. ನಿನ್ನ ಸೈನಿಕರು ಸಮವಸ್ತ್ರಧಾರಿಗಳಾಗಿ ಖೇಡ್ಯಶಿರಸ್ತ್ರಾಣಗಳನ್ನು ತೊಟ್ಟುಕೊಂಡಿರುವಾಗಲೇ ಅವರನ್ನು ಬಂಧಿಸಿ ತರುವೆನು. 5 ಪರ್ಶಿಯ, ಇಥಿಯೋಪ್ಯ ಮತ್ತು ಪೂಟ್ ದೇಶಗಳ ಸೈನಿಕರು ಆ ಸೈನ್ಯದಲ್ಲಿರುವರು. ಅವರೆಲ್ಲರೂ ತಮ್ಮ ಆಯುಧಗಳನ್ನು ಧರಿಸಿಕೊಂಡಿರುವರು. 6 ಅಲ್ಲಿ ಗೋಮೆರ್ಯ ರಾಜ್ಯವು ತನ್ನ ಎಲ್ಲಾ ಸಿಪಾಯಿಗಳೊಂದಿಗೆ ಇರುವುದು. ಬಹು ದೂರದ ಉತ್ತರ ದಿಕ್ಕಿನಲ್ಲಿರುವ ತೋಗರ್ಮ ರಾಜ್ಯವೂ ಇದರಲ್ಲಿ ಸೇರಿರುವದು. ಈ ಕೈದಿಗಳ ಸಾಲಿನಲ್ಲಿ ಅನೇಕಾನೇಕ ಮಂದಿ ಇರುವರು.
7 “‘ಸಿದ್ಧರಾಗಿರಿ! ನಿಮ್ಮೊಂದಿಗೆ ಸೇರಿರುವ ಸೈನ್ಯದೊಂದಿಗೆ ಸಿದ್ಧರಾಗಿರಿ. ನೀವು ಎಚ್ಚರವಾಗಿದ್ದು ಸಿದ್ಧರಾಗಿರಬೇಕು. 8 ಬಹುಕಾಲದ ನಂತರ, ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. ಅನಂತರದ ವರ್ಷಗಳಲ್ಲಿ, ನೀವು ಯುದ್ಧದಿಂದ ಗುಣಹೊಂದಿರುವ ದೇಶಕ್ಕೆ ಬರುವಿರಿ. ಆ ದೇಶದಲ್ಲಿರುವ ಜನರು ತಾವು ಕಳುಹಿಸಲ್ಪಟ್ಟಿದ್ದ ಅನೇಕ ದೇಶಗಳಿಂದ ಹಿಂತಿರುಗಿ ಬಂದು ಒಟ್ಟಾಗಿ ಸೇರಿದವರಾಗಿದ್ದಾರೆ. ಅವರು ಇಸ್ರೇಲಿನ ಪರ್ವತಗಳಿಗೆ ಮತ್ತೆ ಬರಮಾಡಲ್ಪಟ್ಟರಾಗಿದ್ದಾರೆ. ಹಿಂದಿನ ಕಾಲದಲ್ಲಿ ಅನೇಕ ಸಲ ಈ ಪರ್ವತಗಳು ಹಾಳು ಮಾಡಲ್ಪಟ್ಟಿದ್ದರೂ ಸಹ ಈಗ ಜನರನ್ನು ಮತ್ತೆ ಕರೆದುಕೊಂಡು ಬರಲಾಗಿದೆ ಮತ್ತು ಅವರೆಲ್ಲರೂ ಅಲ್ಲಿ ಸುರಕ್ಷಿತವಾಗಿ ನೆಲೆಸುವರು. 9 ಆದರೆ ನೀನು ಮತ್ತು ಬೇರೆ ದೇಶಗಳ ಸೈನಿಕರು ಅವರೊಂದಿಗೆ ಯುದ್ಧಮಾಡಲು ಬಿರುಗಾಳಿಯಂತೆಯೂ ಕಾರ್ಮುಗಿಲಿನಂತೆಯೂ ಬರುವಿರಿ.’”
10 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ, “ಆ ಸಮಯದಲ್ಲಿ ನಿನ್ನ ಮನಸ್ಸಿಗೆ ಒಂದು ಆಲೋಚನೆಯು ಹೊಳೆಯುವುದು. ನೀನು ಒಂದು ದುಷ್ಟ ಯೋಜನೆಯನ್ನು ಮಾಡುವಿ. 11 ‘ನಾನು ಹೋಗಿ ಇಸ್ರೇಲಿನಲ್ಲಿರುವ ಗೋಡೆಯಿಲ್ಲದ ನಗರಗಳನ್ನು ವಶಮಾಡಿಕೊಳ್ಳುತ್ತೇನೆ; ಅವರು ಶಾಂತಿಯಿಂದ ನೆಲೆಸಿರುತ್ತಾರೆ; ತಾವು ಸುರಕ್ಷಿತರಾಗಿದ್ದೇವೆ ಎಂದುಕೊಂಡಿದ್ದಾರೆ. ಆದರೆ ಅವರನ್ನು ರಕ್ಷಿಸಲು ಅವರ ಪಟ್ಟಣಗಳಿಗೆ ಕೋಟೆಗಳೇ ಇಲ್ಲ. ಅವರ ಹೆಬ್ಬಾಗಿಲಿಗೆ ಚಿಲಕವಿಲ್ಲ. ಅವರಿಗೆ ಬಾಗಿಲು ಸಹ ಇಲ್ಲ. 12 ನಾನು ಅವರನ್ನು ಸೋಲಿಸಿ ಅವರ ಬಳಿಯಲ್ಲಿರುವ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ದೋಚಿಕೊಳ್ಳುವೆನು. ಹಿಂದೆ ನಾಶವಾಗಿದ್ದು ಈಗ ಜನಭರಿತವಾಗಿರುವ ಆ ನಗರಗಳ ಮೇಲೆ ಯುದ್ಧ ಮಾಡುವೆನು. ಈಗ ಆ ಜನರಿಗೆ ದನಕರುಗಳೂ ಸ್ವತ್ತುಗಳೂ ಇವೆ. ಅವರು ಲೋಕದ ಕೇಂದ್ರ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಬಲಾಢ್ಯ ದೇಶಗಳು ಬೇರೆ ಬಲಾಢ್ಯ ದೇಶಗಳೊಂದಿಗೆ ಸಂಪರ್ಕಿಸಲು ಇವರ ಮೂಲಕ ಹೋಗಲೇಬೇಕು’ ಎಂದು ನೀನು ಹೇಳಿಕೊಳ್ಳುತ್ತಿರುವೆ.
13 “ಶೆಬ, ದೆದಾನ್, ತಾರ್ಷೀಷಿನ ವ್ಯಾಪಾರಿಗಳು ಮತ್ತು ಇತರ ವಾಣಿಜ್ಯ ನಗರಗಳ ಜನರು ನಿನ್ನನ್ನು ನೋಡಿ, ‘ನೀನು ಸೂರೆಮಾಡಲು ಬಂದಿರುವಿಯಾ? ಬೆಳ್ಳಿಬಂಗಾರಗಳನ್ನೂ ಪಶುಗಳನ್ನೂ ಬೆಲೆಬಾಳುವ ವಸ್ತುಗಳನ್ನೂ ಕೊಳ್ಳೆಹೊಡೆಯಲು ನಿನ್ನ ಸೈನ್ಯಸಮೇತವಾಗಿ ಬಂದಿರುವೆಯಾ?’” ಎಂದು ವಿಚಾರಿಸುವರು.
14 ದೇವರು ಹೇಳಿದ್ದೇನೆಂದರೆ, “ನರಪುತ್ರನೇ, ನನ್ನ ಪರವಾಗಿ ಗೋಗನಿಗೆ ಹೇಳು, ನನ್ನ ಒಡೆಯನಾಗಿರುವ ಯೆಹೋವನು ಹೀಗೆನ್ನುತ್ತಾನೆ: ‘ನನ್ನ ಜನರು ಸಮಾಧಾನದಿಂದಲೂ ಶಾಂತಿಯಿಂದಲೂ ಜೀವಿಸುತ್ತಿರುವಾಗ ನೀನು ಅವರನ್ನು ವಶಮಾಡಲು ಬಂದಿರುವೆ. 15 ಬಹು ದೂರದ ಉತ್ತರದಿಕ್ಕಿನಲ್ಲಿರುವ ನಿನ್ನ ಸ್ಥಳದಿಂದ ಬರುವೆ. ನೀನು ಬಹಳ ಜನರನ್ನು ನಿನ್ನ ಸಂಗಡ ಕರೆತರುವೆ. ಅವರೆಲ್ಲಾ ಕುದುರೆಗಳ ಮೇಲೆ ಬರುವರು. ನೀವು ಅತಿ ದೊಡ್ಡ ಮತ್ತು ಬಲಾಢ್ಯ ಸೈನ್ಯವಾಗಿರುವಿರಿ. 16 ನನ್ನ ಜನರಾದ ಇಸ್ರೇಲಿನವರೊಂದಿಗೆ ಯುದ್ಧಕ್ಕೆ ಬರುವಿರಿ. ನೀವು ಕರೀ ಮೋಡದಂತೆ ದೇಶವನ್ನು ಕವಿಯುವಿರಿ. ಆ ಸಮಯ ಬಂದಾಗ ನನ್ನ ದೇಶಕ್ಕೆ ವಿರುದ್ಧವಾಗಿ ಯುದ್ಧ ಮಾಡಲು ನಿಮ್ಮನ್ನು ತರಿಸುವೆನು. ಆಗ ಗೋಗ್ ಮತ್ತು ಅವನೊಂದಿಗಿರುವ ರಾಜ್ಯಗಳು ನಾನು ಎಷ್ಟು ಸಾಮರ್ಥ್ಯಶಾಲಿ ಎಂದು ತಿಳಿದುಕೊಳ್ಳುವರು. ಅವರು ನನ್ನನ್ನು ಗೌರವಿಸಲು ಕಲಿಯುವರು. ನಾನು ಪವಿತ್ರನು ಎಂದು ತಿಳಿಯುವರು. ನಾನು ನಿನಗೇನು ಮಾಡಬೇಕಿದ್ದೇನೆಂದು ಅವರು ಕಾದು ನೋಡುವರು.’”
17 ಇದು ನನ್ನ ಒಡೆಯನಾದ ಯೆಹೋವನ ನುಡಿ: “ಆಗ ನಾನು ನಿನ್ನ ವಿಷಯದಲ್ಲಿ ಹೇಳಿದ್ದು ಜನರು ಜ್ಞಾಪಕಕ್ಕೆ ಬರುವದು. ನಾನು ಇದನ್ನು ನನ್ನ ಸೇವಕರಾದ ಪ್ರವಾದಿಗಳಿಗೆ ತಿಳಿಸಿರುತ್ತೇನೆ ಎಂದು ಅರಿಯುವರು. ಹಿಂದಿನ ಕಾಲದಲ್ಲಿ ಇಸ್ರೇಲ್ ಪ್ರವಾದಿಗಳು ನನ್ನ ಪರವಾಗಿ ಮಾತನಾಡಿ ನೀವು ಅವರ ವಿರುದ್ಧವಾಗಿ ಯುದ್ಧಕ್ಕೆ ಬರುವಿರೆಂದು ಹೇಳಿರುತ್ತೇನೆ ಎಂಬುದನ್ನು ತಮ್ಮ ಜ್ಞಾಪಕಕ್ಕೆ ತರುವರು.”
18 ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ಆ ಸಮಯದಲ್ಲಿ ಗೋಗನು ಇಸ್ರೇಲಿನ ವಿರುದ್ಧವಾಗಿ ಯುದ್ಧಕ್ಕೆ ಬರುವಾಗ ನಾನು ಅವನ ಮೇಲೆ ಕೋಪೋದ್ರಿಕ್ತನಾಗುವೆನು. 19 ನನ್ನ ಸಿಟ್ಟಿನ ಭರದಲ್ಲಿ ಪ್ರಮಾಣಮಾಡಿ ಹೇಳುವುದೇನೆಂದರೆ, ಆ ಸಮಯದಲ್ಲಿ ಇಸ್ರೇಲಿನಲ್ಲಿ ಭಾರಿ ಭೂಕಂಪವಾಗುವದು. 20 ಆಗ ಜೀವವುಳ್ಳ ಸಮಸ್ತವೂ ಹೆದರಿಕೆಯಿಂದ ನಡುಗುವವು. ನೀರಿನಲ್ಲಿರುವ ಮೀನುಗಳು, ಆಕಾಶದ ಪಕ್ಷಿಗಳು, ಭೂಮಿಯ ಮೇಲಿರುವ ಪ್ರಾಣಿಗಳು, ನೆಲದ ಮೇಲೆ ಹರಿದಾಡುವವುಗಳೆಲ್ಲಾ ಭೀತಿಯಿಂದ ನಡುಗುವವು. ಪರ್ವತಗಳು ಬಿದ್ದುಹೋಗುವವು, ಪ್ರತಿಯೊಂದು ಗೋಡೆಯು ನೆಲಕ್ಕೆ ಬಿದ್ದು ಹೋಗುವದು.”
21 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಪರ್ವತಗಳಲ್ಲಿ ಗೋಗನಿಗೆ ಭಯಂಕರ ಪರಿಸ್ಥಿತಿ ಉಂಟಾಗುವಂತೆ ಮಾಡುವೆನು. ಅವನ ಸೈನಿಕರು ಭಯಗೊಂಡು ಒಬ್ಬರನ್ನೊಬ್ಬರು ಕತ್ತಿಯಿಂದ ಕೊಲ್ಲುವರು. 22 ನಾನು ಗೋಗನನ್ನು ರೋಗಮರಣಗಳಿಂದ ಶಿಕ್ಷಿಸುವೆನು. ಅವನ ಮೇಲೆಯೂ ಅವನೊಂದಿಗೆ ಬಂದ ಬಹುದೇಶದ ಸೈನಿಕರ ಮೇಲೆಯೂ ಆಲಿಕಲ್ಲು, ಬೆಂಕಿ, ಗಂಧಕದ ಮಳೆಯಿಂದ ಶಿಕ್ಷಿಸುವೆನು. 23 ನಾನು ಎಷ್ಟು ಶಕ್ತಿಶಾಲಿ ಎಂದು ತೋರಿಸುವೆನು. ನಾನು ಪವಿತ್ರನು ಎಂದು ಅವರಿಗೆ ತೋರಿಸುವೆನು. ಅನೇಕ ಜನಾಂಗಗಳು ನಾನು ಯಾರು ಎಂದು ತಿಳಿಯುವರು. ನಾನು ಯೆಹೋವನೆಂದು ಆಗ ಅವರು ತಿಳಿಯುವರು.
ಗೋಗ್ ಮತ್ತು ಅವನ ಸೈನ್ಯದ ಅಂತ್ಯ
39 “ನರಪುತ್ರನೇ, ನನ್ನ ಪರವಾಗಿ ಗೋಗನಿಗೆ ವಿರುದ್ಧವಾಗಿ ಹೇಳು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆಂದು ಅವನಿಗೆ ಹೇಳು: ‘ಗೋಗನೇ, ನೀನು ಮೆಷೆಕ್ ಮತ್ತು ತೂಬಲ್ ದೇಶಗಳ ಪ್ರಮುಖ ನಾಯಕನು. ಆದರೆ ನಾನು ನಿನಗೆ ವಿರುದ್ಧವಾಗಿದ್ದೇನೆ. 2 ನಾನು ನಿನ್ನನ್ನು ಸೆರೆಹಿಡಿದು ಅತ್ಯಂತ ಉತ್ತರ ದಿಕ್ಕಿನಿಂದ ನಿನ್ನನ್ನು ಬರಮಾಡಿ ಇಸ್ರೇಲಿನ ಪರ್ವತಗಳ ವಿರುದ್ಧವಾಗಿ ಯುದ್ಧ ಮಾಡಿಸುವೆನು. 3 ಆದರೆ ನಾನು ನಿನ್ನ ಎಡಗೈಯಲ್ಲಿರುವ ಬಿಲ್ಲಿಗೆ ಹೊಡೆಯುವೆನು, ಆಗ ನಿನ್ನ ಬಲಗೈಯಲ್ಲಿರುವ ಬಾಣವು ಬಿದ್ದುಹೋಗುವುದು! 4 ನೀನು ಇಸ್ರೇಲಿನ ಪರ್ವತದಲ್ಲಿ ಸಾಯುವೆ, ನೀನೂ, ನಿನ್ನ ಎಲ್ಲಾ ಸೈನ್ಯ, ನಿನ್ನೊಂದಿಗೆ ಬಂದಿದ್ದ ಇತರ ದೇಶದವರೆಲ್ಲಾ ರಣರಂಗದಲ್ಲಿ ಸಾಯುವರು. ನಿಮ್ಮ ಹೆಣಗಳನ್ನು ಆಕಾಶದ ಸಕಲ ಮಾಂಸಹಾರಿ ಪಕ್ಷಿಗಳಿಗೂ, ಕಾಡುಪ್ರಾಣಿಗಳಿಗೂ ಆಹಾರವಾಗಿ ಕೊಡುವೆನು. 5 ನೀನು ನಗರವನ್ನು ಪ್ರವೇಶಿಸುವದಿಲ್ಲ. ನಗರದ ಹೊರಗೆ ಹೊಲದಲ್ಲಿ ನೀನು ಕೊಲ್ಲಲ್ಪಡುವೆ. ಇದನ್ನು ನಾನು ನುಡಿದಿದ್ದೇನೆ.’” ಈ ಸಂಗತಿಗಳನ್ನು ನನ್ನ ಒಡೆಯನಾದ ಯೆಹೋವನು ನುಡಿದನು.
6 ದೇವರು ಹೇಳಿದ್ದೇನೆಂದರೆ, “ನಾನು ಮಾಗೋಗ್ ಮತ್ತು ಕಡಲ ತೀರದಲ್ಲಿ ವಾಸಿಸುವ ಜನರ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ. ತಾವು ಸುರಕ್ಷಿತವಾಗಿದ್ದೇವೆ ಎಂದು ಅವರು ನೆನಸುತ್ತಾರೆ. ಆದರೆ ನಾನು ಯೆಹೋವನು ಎಂದು ಅವರಿಗೆ ತಿಳಿಯುವದು. 7 ನನ್ನ ಜನರಾದ ಇಸ್ರೇಲರಲ್ಲಿ ನನ್ನ ಪವಿತ್ರನಾಮವನ್ನು ಪ್ರಸಿದ್ಧಿಪಡಿಸುವೆನು. ಅವರು ನನ್ನ ಪವಿತ್ರ ನಾಮವನ್ನು ಇನ್ನು ಮುಂದೆ ಅವಮಾನಕ್ಕೆ ಗುರಿಪಡಿಸುವದಿಲ್ಲ. ರಾಜ್ಯಗಳೆಲ್ಲಾ ನಾನು ಯೆಹೋವನೆಂದು ಅರಿತುಕೊಳ್ಳುವರು. ನಾನೇ ಇಸ್ರೇಲಿನ ಪವಿತ್ರನಾದ ದೇವರು ಎಂದು ತಿಳಿಯುವರು. 8 ಅದು ಸಂಭವಿಸುವ ಸಮಯವು ಹತ್ತಿರ ಬಂದಿತು.” ಇದು ಯೆಹೋವನ ನುಡಿ. “ಆ ದಿವಸದ ವಿಷಯವಾಗಿ ನಾನು ಮಾತನಾಡುತ್ತಿದ್ದೇನೆ.
9 “ಆ ಸಮಯದಲ್ಲಿ ಇಸ್ರೇಲಿನ ನಗರಗಳಲ್ಲಿ ವಾಸಿಸುವ ಜನರು ಹೊರಗೆ ಬಯಲಿಗೆ ಹೋಗುವರು. ಅಲ್ಲಿ ಅವರು ವೈರಿಗಳ ಆಯುಧಗಳನ್ನು ಕೂಡಿಸಿ ಸುಟ್ಟುಬಿಡುವರು. ಎಲ್ಲಾ ಬಿಲ್ಲುಬಾಣಗಳನ್ನು, ಗುರಾಣಿ, ಬರ್ಜಿ, ಗದೆಗಳನ್ನೆಲ್ಲಾ ಬೆಂಕಿಯಲ್ಲಿ ಹಾಕುವರು. ಏಳು ವರ್ಷಗಳ ತನಕ ಈ ಆಯುಧಗಳನ್ನು ಸೌದೆಯಾಗಿ ಉಪಯೋಗಿಸುವರು. 10 ಆದ್ದರಿಂದ ಅವರಿಗೆ ಅಡವಿಯಿಂದ ಮತ್ತು ಬಯಲಿನಿಂದ ಸೌದೆಯನ್ನು ತೆಗೆಯುವ ಅವಶ್ಯಕತೆ ಇರುವದಿಲ್ಲ. ಅವರು ಸತ್ತ ಸೈನಿಕರಿಂದ ಬೆಲೆಬಾಳುವ ವಸ್ತುಗಳನ್ನು ದೋಚುವರು. ತಮ್ಮಿಂದ ದೋಚಿದ ಸೈನಿಕರಿಂದ ಅವರು ದೋಚುವರು.” ಇದು ಒಡೆಯನಾದ ಯೆಹೋವನ ನುಡಿ.
11 ದೇವರು ಹೇಳಿದ್ದೇನೆಂದರೆ, “ಆ ಸಮಯದಲ್ಲಿ ಗೋಗನನ್ನು ಹೂಣಿಡಲು ನಾನು ಇಸ್ರೇಲಿನಲ್ಲಿ ಸ್ಥಳವನ್ನು ಆರಿಸುತ್ತೇನೆ. ಇವನನ್ನು ಮೃತ್ಯುಸಮುದ್ರದ ಪೂರ್ವದಲ್ಲಿರುವ ‘ಪ್ರಯಾಣಿಕರ ಕಣಿವೆ’[b] ಯಲ್ಲಿ ಸಮಾಧಿ ಮಾಡಲಾಗುವುದು. ಅದು ಪ್ರವಾಸಿಗಳಿಗೆ ಅಡ್ಡಿಯಾಗುವದು. ಯಾಕೆಂದರೆ ಗೋಗನೂ ಅವನ ಸೈನ್ಯವೂ ಅಲ್ಲಿ ಹೂಣಿಡಲ್ಪಡುವವು. ಆ ಸ್ಥಳ ‘ಗೋಗ್ ಸೈನ್ಯದ ತಗ್ಗು’ ಎಂಬ ಹೊಸ ಹೆಸರಿನಿಂದ ಕರೆಯಲ್ಪಡುವದು. 12 ಇವರನ್ನೆಲ್ಲಾ ಸಮಾಧಿ ಮಾಡಲು ಇಸ್ರೇಲರಿಗೆ ಏಳು ತಿಂಗಳು ಬೇಕಾಗುವದು. ತಮ್ಮ ರಾಜ್ಯವನ್ನು ಶುದ್ಧಪಡಿಸಲು ಅವರು ಹಾಗೆ ಮಾಡಲೇಬೇಕು. 13 ಸಾಮಾನ್ಯ ಜನರು ಶತ್ರು ಸೈನಿಕರನ್ನು ಹೂಣಿಡುವರು. ನಾನು ನನ್ನ ಹೆಸರನ್ನು ಪ್ರಸಿದ್ಧಿಗೆ ತರುವ ದಿವಸ ಆ ಜನರು ಪ್ರಸಿದ್ಧರಾಗುವರು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
14 “ಹೆಣಗಳನ್ನು ಹೂಳಿಟ್ಟು ದೇಶವನ್ನು ಶುದ್ಧಗೊಳಿಸುವ ಕೆಲಸಗಾರರಿಗೆ ಖಾಯಂ ಕೆಲಸ ಕೊಡಲಾಗುವದು. ಅವರು ದೇಶದಲ್ಲೆಲ್ಲಾ ಹೆಣಗಳನ್ನು ಹುಡುಕಿ ತೆಗೆಯುವರು. ಅವರಿಗೆ ಏಳು ತಿಂಗಳು ಬೇಕಾಗುವುದು. 15 ಅವರಲ್ಲೊಬ್ಬನಿಗೆ ಒಂದು ಎಲುಬು ನೋಡಸಿಕ್ಕಿದರೆ ಅವನು ಅಲ್ಲಿ ಒಂದು ಗುರುತನ್ನಿಡುವನು. ಹೂಣಿಡುವವರು ಬಂದು ಆ ಎಲುಬನ್ನು ತೆಗೆದು ಗೋಗನ ಸೈನ್ಯದ ತಗ್ಗಿನಲ್ಲಿ ಹೂಣಿಡುವ ತನಕ ಆ ಗುರುತು ಅಲ್ಲಿಯೇ ಇರುವದು. 16 ಸತ್ತವರ ಆ ನಗರವನ್ನು (ಸಮಾಧಿ) ಹಮೋನ ಎಂದು ಕರೆಯಲಾಗುವದು. ಈ ರೀತಿಯಾಗಿ ಅವರು ದೇಶವನ್ನು ಶುದ್ಧ ಮಾಡುವರು.”
17 ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನರಪುತ್ರನೇ, ಎಲ್ಲಾ ಪಕ್ಷಿಗಳಿಗೂ ಕಾಡುಪ್ರಾಣಿಗಳಿಗೂ ಹೀಗೆ ಹೇಳು: ‘ನೀವೆಲ್ಲಾ ಕೂಡಿ ಬನ್ನಿರಿ. ನಾನು ನಿಮಗಾಗಿ ಇಸ್ರೇಲಿನ ಪರ್ವತಗಳಲ್ಲಿ ಮಾಡುವ ಮಹಾಯಜ್ಞಕ್ಕೆ ಎಲ್ಲಾ ಕಡೆಯಿಂದಲೂ ನೆರೆದುಬಂದು ಮಾಂಸವನ್ನು ತಿಂದು ರಕ್ತವನ್ನು ಕುಡಿಯಿರಿ. 18 ನೀವು ರಣವೀರರ ಮಾಂಸವನ್ನು ತಿನ್ನುವಿರಿ, ಪ್ರಪಂಚದ ನಾಯಕರ ರಕ್ತವನ್ನು ಕುಡಿಯುವಿರಿ. ಅವರೆಲ್ಲಾ ಬಾಷಾನಿನ ಕುರಿ, ಹೋತ, ಹೋರಿಗಳಂತೆ ಕೊಬ್ಬಿಕೊಂಡಿದ್ದಾರೆ. 19 ನಿಮಗಾಗಿ ವಧಿಸಿರುವ ಯಜ್ಞಪಶುಗಳ ಮಾಂಸವನ್ನು ಹೊಟ್ಟೆತುಂಬ ತಿನ್ನಿರಿ; ಅಮಲೇರುವ ತನಕ ರಕ್ತವನ್ನು ಕುಡಿಯಿರಿ. 20 ನನ್ನ ಈ ಔತಣದಲ್ಲಿ ಕುದುರೆಗಳ, ರಾಹುತರ, ಶೂರರ ಮತ್ತು ಸೈನಿಕರ ಮಾಂಸವನ್ನು ಬೇಕಾದಷ್ಟು ತಿನ್ನುವಿರಿ.’” ನನ್ನ ಒಡೆಯನಾದ ಯೆಹೋವನ ನುಡಿಗಳಿವು.
21 ದೇವರು ಹೇಳಿದ್ದೇನೆಂದರೆ, “ನಾನು ಮಾಡಿದ್ದನ್ನು ಇತರ ದೇಶಗಳವರು ನೋಡುವಂತೆ ಮಾಡುವೆನು. ಆಗ ಆ ದೇಶದವರು ನನ್ನನ್ನು ಗೌರವಿಸಲು ಪ್ರಾರಂಭಿಸುವರು. ಆ ಶತ್ರುವಿಗೆದುರಾಗಿ ನನ್ನ ಸಾಮರ್ಥ್ಯ ತೋರಿಸಿದುದನ್ನು ಅವರು ನೋಡುವರು. 22 ಆ ದಿವಸದಿಂದ ಇಸ್ರೇಲಿನ ಜನಾಂಗ ನಾನು ಅವರ ಒಡೆಯನಾದ ಯೆಹೋವನೆಂದು ಅರಿಯುವರು. 23 ಎಲ್ಲಾ ಜನಾಂಗಗಳವರಿಗೆ ನಾನು ಯಾಕೆ ಇಸ್ರೇಲರು ಸೆರೆಹಿಡಿಯಲ್ಪಟ್ಟು ಚದರಿಹೋಗುವಂತೆ ಮಾಡಿದೆನು ಎಂದು ತಿಳಿಯುವರು. ನನ್ನ ಜನರು ನನಗೆ ವಿರುದ್ಧವಾಗಿ ತಿರುಗಿ ಬಿದ್ದರು. ಆಗ ನಾನು ಅವರಿಂದ ದೂರ ಹೋದೆನು. ಅವರ ವೈರಿಗಳು ಅವರನ್ನು ಸೋಲಿಸುವಂತೆ ಮಾಡಿದೆನು. ಆದ್ದರಿಂದ ಅವರು ರಣರಂಗದಲ್ಲಿ ಮಡಿದರು. 24 ಅವರು ಪಾಪ ಮಾಡಿ ತಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಂಡರು. ಅದಕ್ಕಾಗಿ ನಾನು ಅವರನ್ನು ಶಿಕ್ಷಿಸಿದೆನು. ಅವರಿಂದ ನಾನು ದೂರವಾಗಿ ಅವರಿಗೆ ಸಹಾಯ ಮಾಡಲು ನಿರಾಕರಿಸಿದೆನು.”
25 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಈಗ ನಾನು ಯಾಕೋಬನ ವಂಶದವರನ್ನು ಸೆರೆಯಿಂದ ಬಿಡಿಸಿ ಹಿಂದಕ್ಕೆ ತರುವೆನು. ಇಸ್ರೇಲಿನ ಜನಾಂಗದವರ ಮೇಲೆಲ್ಲಾ ನನ್ನ ದಯೆ ಇರುವದು. ನನ್ನ ಪವಿತ್ರನಾಮದ ಸಲುವಾಗಿ ಅವರನ್ನು ಉದ್ಧರಿಸುವೆನು. 26 ಆ ಜನರು ತಮಗೊದಗಿದ ಅವಮಾನವನ್ನೂ ನನಗೆ ವಿರುದ್ಧವಾಗಿ ವರ್ತಿಸಿದ್ದನ್ನೂ ಮರೆತುಬಿಡುವರು. ತಮ್ಮ ಸ್ವದೇಶದಲ್ಲಿ ಸುರಕ್ಷಿತವಾಗಿ ವಾಸಿಸುವರು. ಅವರು ಯಾರಿಗೂ ಹೆದರಬೇಕಾಗಿಲ್ಲ. 27 ಬೇರೆಬೇರೆ ದೇಶಗಳಿಂದ ನಾನು ನನ್ನ ಜನರನ್ನು ಹಿಂದಕ್ಕೆ ತರಿಸುವೆನು. ಅವರ ಶತ್ರುಗಳ ದೇಶದಿಂದ ನಾನು ಅವರನ್ನು ಒಟ್ಟುಗೂಡಿಸುವೆನು. ಆಗ ಅನೇಕ ಜನಾಂಗಗಳು ನಾನು ಎಷ್ಟು ಪವಿತ್ರನೆಂದು ಅರಿತುಕೊಳ್ಳುವರು. 28 ನಾನು ಅವರ ಒಡೆಯನಾದ ಯೆಹೋವನೆಂದು ತಿಳಿಯುವರು. ಯಾಕೆಂದರೆ ನಾನು, ಅವರನ್ನು ಅವರ ಸ್ವದೇಶವನ್ನು ಬಿಟ್ಟು ಸೆರೆಹಿಡಿಯಲ್ಪಟ್ಟವರಾಗಿ ಬೇರೆ ದೇಶಗಳಿಗೆ ಹೋಗುವಂತೆ ಮಾಡಿದೆನು. ಆಮೇಲೆ ತಿರುಗಿ ಅವರನ್ನು ಒಟ್ಟುಗೂಡಿಸಿ ಅವರ ದೇಶಕ್ಕೆ ಹಿಂದಕ್ಕೆ ಕರೆಸಿದೆನು. 29 ನಾನು ಇಸ್ರೇಲ್ ಜನಾಂಗದವರ ಮೇಲೆ ನನ್ನ ಆತ್ಮವನ್ನು ಸುರಿಸುವೆನು. ಅನಂತರ ನಾನು ಎಂದಿಗೂ ಅವರಿಗೆ ವಿಮುಖನಾಗಿರುವದಿಲ್ಲ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ಸುಳ್ಳುಬೋಧಕರು
2 ಹಿಂದಿನ ಕಾಲದಲ್ಲಿ, ದೇವಜನರಲ್ಲಿ ಸುಳ್ಳುಪ್ರವಾದಿಗಳಿದ್ದರು. ಈಗಲೂ ಇದ್ದಾರೆ. ನಿಮ್ಮಲ್ಲಿಯೂ ಸಹ ಕೆಲವು ಸುಳ್ಳುಪ್ರವಾದಿಗಳಿರುತ್ತಾರೆ. ಜನರನ್ನು ನಾಶನಕ್ಕೆ ನಡೆಸುವ ಸುಳ್ಳುಬೋಧನೆಗಳನ್ನು ಅವರು ಬೋಧಿಸುತ್ತಾರೆ. ತಾವು ಸುಳ್ಳುಬೋಧಕರೆಂಬುದು ನಿಮಗೆ ಸುಲಭವಾಗಿ ತಿಳಿಯದ ರೀತಿಯಲ್ಲಿ ಅವರು ಬೋಧಿಸುತ್ತಾರೆ. ಅವರು ತಮಗೆ ಬಿಡುಗಡೆ ತಂದುಕೊಟ್ಟ ಒಡೆಯನನ್ನೇ (ಯೇಸು) ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಅವರು ಬಹುಬೇಗನೆ ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ. 2 ಅವರು ಮಾಡುವ ಕೆಟ್ಟಕಾರ್ಯಗಳನ್ನು ಅನೇಕ ಜನರು ಅನುಸರಿಸುತ್ತಾರೆ. ಆ ಜನರ ದೆಸೆಯಿಂದ ಸತ್ಯಮಾರ್ಗದ ಕುರಿತಾಗಿ ಇತರರು ಕೆಟ್ಟಮಾತುಗಳನ್ನು ಆಡುತ್ತಾರೆ. 3 ಆ ಸುಳ್ಳುಬೋಧಕರಿಗೆ ಬೇಕಾಗಿರುವುದು ಕೇವಲ ನಿಮ್ಮ ಹಣವಷ್ಟೆ. ಆದ್ದರಿಂದ ಅವರು ನಿಜವಲ್ಲದ ಸಂಗತಿಗಳನ್ನು ನಿಮಗೆ ಹೇಳಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ಆದರೆ ಬಹಳ ಹಿಂದಿನಿಂದಲೇ ಆ ಸುಳ್ಳುಬೋಧಕರ ವಿರುದ್ಧವಾದ ತೀರ್ಪು ಸಿದ್ಧವಾಗಿದೆ. ಅವರನ್ನು ನಾಶಪಡಿಸುವಾತನಿಂದ (ದೇವರಿಂದ) ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
4 ದೇವದೂತರು ಪಾಪಗಳನ್ನು ಮಾಡಿದಾಗ, ದೇವರು ಅವರನ್ನು ದಂಡಿಸದೆ ಬಿಡಲಿಲ್ಲ. ಆತನು ಅವರನ್ನು ನರಕಕ್ಕೆ ದಬ್ಬಿದನು. ಕತ್ತಲೆಯ ಗುಂಡಿಗಳಿಗೆ ಹಾಕಿದನು. ಅವರಿಗೆ ನ್ಯಾಯತೀರ್ಪಾಗುವವರೆಗೂ ಅವರು ಅಲ್ಲಿಯೇ ಇರುವರು.
5 ಬಹಳ ಹಿಂದೆ ಬದುಕಿದ್ದ ಕೆಟ್ಟ ಜನರನ್ನು ದೇವರು ದಂಡಿಸಿದನು. ಈ ಲೋಕದಲ್ಲಿ ತನಗೆ ವಿರುದ್ಧವಾದ ಜನರು ತುಂಬಿಕೊಂಡಿದ್ದಾಗ ಆತನು ಜಲಪ್ರಳಯವನ್ನು ಬರಮಾಡಿ ದನು. ಆದರೆ ನೋಹನನ್ನೂ ಅವನೊಂದಿಗಿದ್ದ ಏಳು ಮಂದಿಯನ್ನೂ ರಕ್ಷಿಸಿದನು. ಯೋಗ್ಯರಾಗಿ ಜೀವಿಸಬೇಕೆಂದು ಆ ಜನರಿಗೆ ತಿಳಿಸಿದವನೇ ನೋಹ.
6 ದೇವರು ಸೊದೋಮ್, ಗೊಮೋರ ಎಂಬ ಕೆಟ್ಟ ಪಟ್ಟಣಗಳನ್ನು ದಂಡಿಸಿದನು. ಆತನು ಆ ಪಟ್ಟಣಗಳಲ್ಲಿ ಏನೂ ಉಳಿಯದಂತೆ, ಸುಟ್ಟು ಬೂದಿಮಾಡಿದನು. ತನಗೆ ವಿರುದ್ಧವಾಗಿರುವ ಜನರಿಗೆ ಏನಾಗುತ್ತದೆ ಎಂಬುದಕ್ಕೆ ಆತನು ಆ ಪಟ್ಟಣಗಳನ್ನು ನಿದರ್ಶನಗಳನ್ನಾಗಿ ಇಟ್ಟಿದ್ದಾನೆ. 7 ಆದರೆ ದೇವರು ಆ ಪಟ್ಟಣಗಳಿಂದ ಲೋಟನನ್ನು ರಕ್ಷಿಸಿದನು. ಲೋಟನು ನೀತಿವಂತನಾಗಿದ್ದನು. ದುಷ್ಟ ಜನರ ಕೆಟ್ಟ ನಡತೆಯಿಂದ ಅವನು ದುಃಖಗೊಂಡಿದ್ದನು. 8 (ಲೋಟನು ನೀತಿವಂತನಾಗಿದ್ದನು. ಆದರೆ ಅವನು ಪ್ರತಿದಿನವೂ ಆ ದುಷ್ಟಜನರ ಮಧ್ಯೆ ಜೀವಿಸುತ್ತಿದ್ದನು. ಕೆಟ್ಟಕಾರ್ಯಗಳನ್ನು ನೋಡಿ ಮತ್ತು ಕೇಳಿ ಅವನ ಒಳ್ಳೆಯ ಹೃದಯವು ವೇದನೆಗೆ ಒಳಗಾಗಿತ್ತು.)
9 ಹೌದು, ಪ್ರಭುವಾದ ದೇವರು ತನ್ನ ಭಕ್ತರನ್ನು ತೊಂದರೆಗಳಿಂದ ಯಾವಾಗಲೂ ರಕ್ಷಿಸುತ್ತಾನೆ. ಆತನು ದುಷ್ಟಜನರನ್ನು ನ್ಯಾಯತೀರ್ಪಿನ ದಿನ ಬರುವತನಕ ದಂಡಿಸುತ್ತಾನೆ. 10 ಪ್ರಭುವಿನ ಅಧಿಕಾರವನ್ನು ದ್ವೇಷಿಸುವ ಜನರನ್ನು ಮತ್ತು ತಮ್ಮ ಪಾಪಸ್ವಭಾವದ ಇಚ್ಚೆಗನುಸಾರವಾಗಿ ಕೆಟ್ಟಕಾರ್ಯಗಳನ್ನು ಮಾಡುವ ಜನರನ್ನು ದೇವರು ಹೀಗೆ ದಂಡಿಸುತ್ತಾನೆ.
ಈ ಸುಳ್ಳುಬೋಧಕರು ತಮಗೆ ಬೇಕಾದದ್ದನ್ನೆಲ್ಲಾ ಮಾಡುತ್ತಾರೆ ಮತ್ತು ತಮ್ಮ ಬಗ್ಗೆ ಹೊಗಳಿಕೊಳ್ಳುತ್ತಾರೆ. ಪ್ರಭಾವದಿಂದ ಕೂಡಿರುವ ದೇವದೂತರ ಬಗ್ಗೆ ಕೆಟ್ಟದ್ದನ್ನು ಹೇಳಲು ಅವರು ಹೆದರುವುದಿಲ್ಲ. 11 ದೇವದೂತರು ಈ ಸುಳ್ಳುಬೋಧಕರಿಗಿಂತ ಹೆಚ್ಚು ಬಲಿಷ್ಠರಾಗಿದ್ದಾರೆ ಮತ್ತು ಹೆಚ್ಚು ಶಕ್ತಿಯುಳ್ಳವರಾಗಿದ್ದಾರೆ. ಆದರೂ ದೇವದೂತರು ಸುಳ್ಳುಬೋಧಕರನ್ನು ಪ್ರಭುವಿನ ಸನ್ನಿಧಿಯಲ್ಲಿ ದೂಷಿಸುವುದಿಲ್ಲ.
12 ಆದರೆ ಈ ಸುಳ್ಳುಬೋಧಕರು ತಮಗೆ ಅರ್ಥವಾಗದ ಸಂಗತಿಗಳ ವಿರುದ್ಧ ಕೆಟ್ಟದ್ದನ್ನು ಮಾತಾಡುತ್ತಾರೆ. ಅವರು ವಿವೇಚಿಸದೆ ಕಾರ್ಯ ಮಾಡುವ ಪ್ರಾಣಿಗಳಂತಿದ್ದಾರೆ. ಹಿಡಿಯಲ್ಪಟ್ಟು ಕೊಲ್ಲಲ್ಪಡುವುದಕ್ಕಾಗಿಯೇ ಹುಟ್ಟಿರುವ ಕ್ರೂರಪ್ರಾಣಿಗಳಂತೆ ಅವರು ನಾಶವಾಗುವರು. 13 ಅವರಿಂದ ಅನೇಕ ಜನರು ಸಂಕಟಕ್ಕೆ ಒಳಗಾಗುವರು. ಅವರು ಮಾಡಿದ್ದಕ್ಕೆ ಅದೇ ಪ್ರತಿಫಲವಾಗಿರುವುದು. ಈ ಸುಳ್ಳುಬೋಧಕರು ಜನರೆಲ್ಲರ ಎದುರಿನಲ್ಲಿ ಕೆಟ್ಟದ್ದನ್ನು ಮಾಡಲು ಸಂತೋಷಿಸುತ್ತಾರೆ.
ತಮ್ಮನ್ನು ಸಂತಸಗೊಳಿಸುವ ಕೆಟ್ಟಕಾರ್ಯಗಳಿಂದ ಅವರು ಆನಂದಿಸುತ್ತಾರೆ. ಅವರು ನಿಮ್ಮ ಮಧ್ಯದಲ್ಲಿ ಕೊಳಕಾದ ಕಲೆಗಳಂತಿದ್ದಾರೆ. ನೀವು ಒಟ್ಟಾಗಿ ಊಟ ಮಾಡುವಾಗ ಅವರು ನಿಮಗೆ ಅಪಮಾನಕರವಾಗಿದ್ದಾರೆ. 14 ಅವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರಾಗಿದ್ದಾರೆ. ಅವರು ದುರ್ಬಲರನ್ನು ಪಾಪವೆಂಬ ಉರುಲಿನಲ್ಲಿ ಬೀಳಿಸುತ್ತಾರೆ. ಅವರು ತಮ್ಮ ಹೃದಯಗಳಿಗೆ ಸ್ವಾರ್ಥವನ್ನೇ ಕಲಿಸಿದ್ದಾರೆ. ಅವರು ಶಾಪಗ್ರಸ್ತರಾಗಿದ್ದಾರೆ.
15 ಈ ಸುಳ್ಳುಬೋಧಕರು ಸರಿಯಾದ ಮಾರ್ಗವನ್ನು ತೊರೆದು, ಕೆಟ್ಟಮಾರ್ಗವನ್ನು ಅನುಸರಿಸಿದ್ದಾರೆ. ಬಿಳಾಮನು ಬೆಯೋರನ ಮಗ. ಅವನು ಅಧರ್ಮದಿಂದ ದೊರೆಯುವ ಲಾಭವನ್ನು ಪ್ರೀತಿಸಿದನು. 16 ಆದರೆ ಅವನು ಮಾಡುತ್ತಿರುವುದು ತಪ್ಪೆಂದು ಒಂದು ಹೇಸರಕತ್ತೆಯು ಅವನಿಗೆ ತಿಳಿಸಿತು. ಅದು ಒಂದು ಮೂಕಪ್ರಾಣಿ. ಆದರೆ ಅದು ಮಾನವನಂತೆ ಮಾತಾಡಿ ಆ ಪ್ರವಾದಿಯ ಹುಚ್ಚುತನಕ್ಕೆ ಅಡ್ಡಿ ಮಾಡಿತು.
17 ಈ ಸುಳ್ಳುಬೋಧಕರು ನೀರಿಲ್ಲದ ಒರತೆಗಳಂತಿದ್ದಾರೆ. ಅವರು ಬಿರುಗಾಳಿಯಿಂದ ಬಡಿದುಕೊಂಡು ಹೋಗುವ ಮೋಡಗಳಂತಿದ್ದಾರೆ. ಅವರಿಗಾಗಿ ಒಂದು ಕಗ್ಗತ್ತಲಾದ ಸ್ಥಳವನ್ನು ಕಾದಿರಿಸಲಾಗಿದೆ. 18 ಅವರು ಅರ್ಥವಿಲ್ಲದ ಮಾತು ಗಳಿಂದ ಬಡಾಯಿಕೊಚ್ಚಿಕೊಳ್ಳುತ್ತಾರೆ; ಜನರನ್ನು ಪಾಪಗಳ ಬಲೆಗೆ ನಡೆಸುತ್ತಿದ್ದಾರೆ. ತಪ್ಪುಮಾರ್ಗದಲ್ಲಿ ನಡೆಯುವ ಜನರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡು ಬಂದ ಜನರನ್ನು ದಾರಿತಪ್ಪಿಸುತ್ತಾರೆ. ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಮಾಡಲು ಇಚ್ಛಿಸುವ ಕೆಟ್ಟಕಾರ್ಯಗಳನ್ನು ಬಳಸಿಕೊಂಡು ಈ ಸುಳ್ಳುಬೋಧಕರು ಅವರನ್ನು ದಾರಿ ತಪ್ಪಿಸುತ್ತಾರೆ. 19 ಈ ಸುಳ್ಳುಬೋಧಕರು ಆ ಜನರಿಗೆ ಸ್ವಾತಂತ್ರ್ಯವನ್ನು ಕೊಡುವುದಾಗಿ ವಾಗ್ದಾನ ಮಾಡುತ್ತಾರೆ. ಆದರೆ ಈ ಸುಳ್ಳುಬೋಧಕರೇ ಸ್ವತಂತ್ರರಾಗದೆ ನಾಶವಾಗುವಂಥ ಸಂಗತಿಗಳಿಗೆ ಗುಲಾಮರಾಗಿದ್ದಾರೆ. ಒಬ್ಬನು ಯಾವುದಕ್ಕೆ ಸೋತುಹೋಗಿದ್ದಾನೋ ಅದಕ್ಕೆ ಗುಲಾಮನಾಗಿದ್ದಾನೆ.
20 ಈ ಲೋಕದಲ್ಲಿನ ಕೆಟ್ಟಕಾರ್ಯಗಳಿಂದ ಆ ಜನರನ್ನು ಪಾರುಮಾಡಲಾಯಿತು. ನಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದರ ಮೂಲಕ ಅವರಿಗೆ ಬಿಡುಗಡೆಯಾಯಿತು. ಆದರೆ ಆ ಜನರು ತಮ್ಮ ಹಿಂದಿನ ಸಂಗತಿಗಳ ಕಡೆಗೆ ಹಿಂದಿರುಗಿಹೋದರೆ ಮತ್ತು ಅವುಗಳು ಅವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದರೆ ಅವರು ಮೊದಲಿಗಿಂತಲೂ ಹೆಚ್ಚು ಕೆಟ್ಟುಹೋಗುತ್ತಾರೆ. 21 ಹೌದು, ಆ ಜನರು ಸರಿಯಾದ ಮಾರ್ಗವನ್ನು ತಿಳಿಯದೆ ಹೋಗಿದ್ದರೇ ಒಳ್ಳೆಯದಾಗುತ್ತಿತ್ತು. ಸರಿಯಾದ ಮಾರ್ಗವನ್ನು ಅರಿತುಕೊಂಡು, ಪವಿತ್ರ ಬೋಧನೆಗಳಿಗೆ ವಿಮುಖರಾಗುವುದಕ್ಕಿಂತ ಅದನ್ನು ತಿಳಿದುಕೊಳ್ಳದಿದ್ದರೇ ಚೆನ್ನಾಗಿರುತ್ತಿತ್ತು. 22 ನಿಜವಾಗಿ ಈ ಗಾದೆಗಳಂತೆಯೇ ಅವರು ಮಾಡಿದರು: “ನಾಯಿಯು ತಾನು ಕಕ್ಕಿದ್ದನ್ನೇ ನೆಕ್ಕಲು ತಿರುಗಿಕೊಂಡಿತು”(A) ಮತ್ತು “ತೊಳೆದ ಹಂದಿಯು ಕೆಸರಿನಲ್ಲಿ ಹೊರಳಾಡಲು ಹೋಯಿತು.”
Kannada Holy Bible: Easy-to-Read Version. All rights reserved. © 1997 Bible League International