Old/New Testament
ಇಸ್ರೇಲಿನ ಕಾವಲುಗಾರನಾಗಿ ದೇವರು ಯೆಹೆಜ್ಕೇಲನನ್ನು ಆರಿಸಿದ್ದು
33 ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ನಿನ್ನ ಜನರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು, ‘ನಾನು ಈ ದೇಶದೊಂದಿಗೆ ಯುದ್ಧ ಮಾಡಲು ಶತ್ರು ಸೈನಿಕರನ್ನು ಬರಮಾಡುತ್ತೇನೆ. ಈ ಸಮಯದಲ್ಲಿ ಜನರು ಒಬ್ಬ ಕಾವಲುಗಾರನನ್ನು ಆರಿಸುವರು. 3 ಈತನು ಶತ್ರು ಸೈನ್ಯವನ್ನು ನೋಡಿದಾಕ್ಷಣ ತನ್ನ ತುತ್ತೂರಿಯನ್ನೂದಿ ಜನರನ್ನು ಎಚ್ಚರಿಸುವನು. 4 ಜನರು ಅದನ್ನು ಕೇಳಿದರೂ ಅಲಕ್ಷ್ಯ ಮಾಡಿದಾಗ ಶತ್ರುವು ಬಂದು ಅವರನ್ನು ಸೆರೆಹಿಡಿದು ಕೈದಿಗಳನ್ನಾಗಿ ಮಾಡಿ ಕೊಂಡೊಯ್ಯುವನು. ಆಗ ಅವರ ಮರಣಕ್ಕೆ ಅವರೇ ಕಾರಣರಾಗುವರು. 5 ಅವನು ತುತ್ತೂರಿಯ ಶಬ್ದ ಕೇಳಿದನು. ಆದರೆ ಅದನ್ನು ಅಲಕ್ಷಿಸಿದನು. ಆದ್ದರಿಂದ ಅವನ ಮರಣಕ್ಕೆ ಅವನೇ ಕಾರಣನು. ಅವನು ಆ ಎಚ್ಚರಿಕೆಯ ಶಬ್ದಕ್ಕೆ ಗಮನವನ್ನು ಕೊಟ್ಟಿದ್ದರೆ ಅವನು ಬದುಕುತ್ತಿದ್ದನು.
6 “‘ಆದರೆ ವೈರಿಯು ಬರುವಂತದ್ದನ್ನು ಆ ಕಾವಲುಗಾರನು ಕಂಡರೂ, ಜನರನ್ನು ಎಚ್ಚರಿಸಲು ತುತ್ತೂರಿಯನ್ನು ಊದದಿದ್ದರೆ ವೈರಿಯು ಅವರನ್ನು ಸೆರೆಹಿಡಿದು ಕೈದಿಗಳನ್ನಾಗಿ ಮಾಡಿ ಕೊಂಡೊಯ್ಯುವನು. ಆ ಮನುಷ್ಯನು ಪಾಪಮಾಡಿದ್ದರಿಂದ ಆ ಶಿಕ್ಷೆಯು ಅವನಿಗೆ ದೊರಕಿತು. ಆದರೆ, ಕಾವಲುಗಾರನು ಕೂಡಾ ಅವನ ಮರಣಕ್ಕೆ ಕಾರಣನಾಗುವನು.’
7 “ಈಗ, ನರಪುತ್ರನೇ, ನಾನು ನಿನ್ನನ್ನು ಇಸ್ರೇಲಿನ ಕಾವಲುಗಾರನನ್ನಾಗಿ ಆರಿಸಿದ್ದೇನೆ. ನನ್ನ ಬಾಯಿಂದ ನೀನು ಸಂದೇಶವನ್ನು ಕೇಳಿದಾಗ, ನನ್ನ ಪರವಾಗಿ ನೀನು ಜನರನ್ನು ಎಚ್ಚರಿಸಬೇಕು. 8 ‘ಈ ಕೆಟ್ಟ ಮನುಷ್ಯನು ಸಾಯುವನು’ ಎಂದು ನಾನು ಹೇಳಿದರೆ, ನೀನು ಹೋಗಿ ಆ ಮನುಷ್ಯನನ್ನು ಎಚ್ಚರಿಸಬೇಕು. ಆದರೆ ನೀನು ಅವನನ್ನು ಎಚ್ಚರಿಸದೆ ಹೋದರೆ, ಅವನ ಜೀವಿತವನ್ನು ಬದಲಾಯಿಸಿಕೊಳ್ಳಲು ಹೇಳದೆ ಹೋದರೆ, ಪಾಪಮಾಡಬೇಡ ಎಂದು ಹೇಳದೆ ಹೋದರೆ, ಆ ದುಷ್ಟನು ಸಾಯುವನು. ಯಾಕೆಂದರೆ, ಅವನು ಪಾಪಮಾಡಿದನು. ಆದರೆ ಅವನ ಮರಣಕ್ಕೆ ನಿನ್ನನ್ನು ಕಾರಣನನ್ನಾಗಿ ಮಾಡುತ್ತೇನೆ. 9 ಆದರೆ ನೀನು ಅವನನ್ನು ಎಚ್ಚರಿಸಿ, ಅವನ ಜೀವಿತವನ್ನು ಬದಲಾಯಿಸಲು ಹೇಳಿ, ಪಾಪವನ್ನು ಮಾಡಬೇಡ ಎಂದು ಹೇಳಿದರೂ ಅವನು ಕೇಳದೆ ಹೋದರೆ ಪಾಪ ಮಾಡುವದನ್ನು ಬಿಡದೆ ಹೋದರೆ ಅವನು ಪಾಪ ಮಾಡಿದುದರಿಂದ ಸಾಯುವನು. ಆದರೆ ನೀನು ಅವನ ಮರಣಕ್ಕೆ ಕಾರಣನಾಗುವದಿಲ್ಲ.
ದೇವರು ಮನುಷ್ಯರನ್ನು ನಾಶಮಾಡಲು ಇಷ್ಟಪಡುವುದಿಲ್ಲ
10 “ಆದ್ದರಿಂದ ನರಪುತ್ರನೇ, ನನ್ನ ಪರವಾಗಿ ಇಸ್ರೇಲ್ ಜನರೊಂದಿಗೆ ಮಾತನಾಡು. ‘ನಾವು ಪಾಪಮಾಡಿದ್ದೇವೆ. ಕಟ್ಟಳೆಗಳನ್ನು ಮೀರಿದ್ದೇವೆ. ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ. ನಾವು ಆ ಪಾಪಗಳಿಂದಾಗಿ ಕ್ಷೀಣಿಸುತ್ತಿದ್ದೇವೆ. ನಾವು ಜೀವಿಸಬೇಕಾದರೆ ಏನು ಮಾಡಬೇಕು?’ ಎಂದು ಅವರು ಕೇಳಿಯಾರು.
11 “ಆಗ ನೀನು ಅವರಿಗೆ ಹೀಗೆ ಹೇಳಬೇಕು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನನ್ನ ಜೀವದಾಣೆ, ನಾನು ಜನರು ಸಾಯುವುದನ್ನು ನೋಡಲು ಇಷ್ಟಪಡುವದಿಲ್ಲ; ದುಷ್ಟರು ಸಾಯುವದರಲ್ಲಿಯೂ ನನಗೆ ಇಷ್ಟವಿಲ್ಲ. ಆ ದುಷ್ಟರು ನನ್ನ ಕಡೆಗೆ ತಿರುಗಬೇಕೆಂದು ನಾನು ಇಷ್ಟಪಡುತ್ತೇನೆ. ಅವರು ತಮ್ಮ ದುರ್ನಡತೆಯನ್ನು ಬಿಟ್ಟು ನಿಜವಾದ ಜೀವನವನ್ನು ನಡೆಸಬೇಕು. ಆದ್ದರಿಂದ ನನ್ನ ಬಳಿಗೆ ಹಿಂದಿರುಗಿ ಬನ್ನಿರಿ. ದುಷ್ಟತನವನ್ನು ಬಿಟ್ಟುಬಿಡಿರಿ. ಇಸ್ರೇಲ್ ಜನರೇ, ನೀವು ಯಾಕೆ ಸಾಯುತ್ತೀರಿ?’
12 “ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು: ‘ಒಬ್ಬನು ಒಳ್ಳೆಯವನಾಗಿದ್ದುಕೊಂಡು ನಂತರ ದುಷ್ಟತನವನ್ನು ನಡಿಸಿದರೆ ಅವನ ಸತ್ಕಾರ್ಯಗಳು ಅವನನ್ನು ರಕ್ಷಿಸಲಾರವು. ಒಬ್ಬನು ದುಷ್ಕೃತ್ಯಗಳನ್ನು ಮಾಡಿ ತನ್ನ ದುಷ್ಟತ್ವದಿಂದ ತಿರುಗಿದರೆ ಅವನು ನಾಶವಾಗುವದಿಲ್ಲ. ಆದ್ದರಿಂದ ಹಿಂದೆ ಮಾಡಿದ್ದ ಪುಣ್ಯಕಾರ್ಯಗಳು ಒಬ್ಬ ಪಾಪಿಯನ್ನು ರಕ್ಷಿಸಲಾರದೆಂಬುದನ್ನು ಜ್ಞಾಪಕದಲ್ಲಿಟ್ಟುಕೊ.’
13 “ಒಂದುವೇಳೆ ‘ನೀನು ಜೀವಿಸುವಿ’ ಎಂದು ಒಬ್ಬ ಒಳ್ಳೆಯ ಮನುಷ್ಯನಿಗೆ ನಾನು ಹೇಳಬಹುದು. ಅವನು ತಾನು ಮಾಡಿದ ಒಳ್ಳೆಯ ಕಾರ್ಯಗಳ ನಿಮಿತ್ತ ತಾನು ರಕ್ಷಿಸಲ್ಪಟ್ಟಿದ್ದೇನೆ ಎಂದು ನೆನಸಬಹುದು. ಆ ಬಳಿಕ ಅವನು ದುಷ್ಕೃತ್ಯಗಳನ್ನು ಮಾಡಲು, ನಾನು ಅವನ ಪುಣ್ಯಕಾರ್ಯಗಳನ್ನು ನೋಡದೆ ಅವನ ದುಷ್ಕೃತ್ಯಗಳ ನಿಮಿತ್ತ ಅವನನ್ನು ಸಾಯಿಸುವೆನು.
14 “ಒಂದುವೇಳೆ ನಾನು ಒಬ್ಬ ದುಷ್ಟನಿಗೆ ನೀನು ಸಾಯುವಿ ಎಂದು ಹೇಳಿದರೆ ಅವನು ತನ್ನ ಜೀವಿತವನ್ನು ಬದಲಾಯಿಸಿ, ದುಷ್ಟತ್ವವನ್ನು ನಿಲ್ಲಿಸಿ, ಅವನು ನೀತಿವಂತನಾಗಿ ಬಾಳಿ 15 ಒತ್ತೆ ತೆಗೆದುಕೊಂಡಿದ್ದ ವಸ್ತುಗಳನ್ನು ಹಿಂದಕ್ಕೆ ಕೊಟ್ಟು, ತಾನು ಕದ್ದುಕೊಂಡದ್ದನ್ನು ಹಿಂದಕ್ಕೆ ಕೊಟ್ಟು, ಜೀವಕರವಾದ ಕಟ್ಟಳೆಗಳನ್ನು ಅನುಸರಿಸಿದರೆ ಆ ಮನುಷ್ಯನು ಖಂಡಿತವಾಗಿ ಬದುಕುವನು. ಅವನನ್ನು ಸಾಯಿಸುವುದಿಲ್ಲ. 16 ಅವನು ಹಿಂದೆ ಮಾಡಿದ ದುಷ್ಕೃತ್ಯಗಳನ್ನು ನಾನು ನನ್ನ ನೆನಪಿಗೆ ತರುವದಿಲ್ಲ. ಯಾಕೆಂದರೆ ಈಗ ಅವನು ಶಿಷ್ಟನಾಗಿ ಬಾಳುತ್ತಿದ್ದಾನೆ. ಆದುದರಿಂದ ಅವನು ಜೀವಿಸುವನು.
17 “ಆದರೆ ನಿನ್ನ ಜನರು, ‘ಅದು ನ್ಯಾಯವಲ್ಲ. ನನ್ನ ಒಡೆಯನಾದ ಯೆಹೋವನು ಹಾಗೆ ಮಾಡಲಾರನು’ ಎಂದು ಹೇಳುವರು.
“ಅಂಥ ಜನರೇ ನ್ಯಾಯವಂತರಲ್ಲ. ಅವರೇ ಬದಲಾಗಬೇಕು. 18 ಒಬ್ಬ ಒಳ್ಳೆಯ ಮನುಷ್ಯನು ತನ್ನ ಶಿಷ್ಟತ್ವವನ್ನು ಬಿಟ್ಟು ಪಾಪದ ಮಾರ್ಗದಲ್ಲಿ ನಡೆದರೆ ಅವನು ಅವನ ಪಾಪಗಳ ನಿಮಿತ್ತ ಸಾಯುವನು. 19 ಆದರೆ ಒಬ್ಬ ಪಾಪಿ ತನ್ನ ದುಷ್ಟತನವನ್ನು ಬಿಟ್ಟು ನೀತಿವಂತನಾಗಿ ಬಾಳಿದರೆ ಅವನು ಜೀವಿಸುವನು. 20 ಆದರೆ ನಾನು ನ್ಯಾಯವಂತನಲ್ಲ, ಎಂದು ನೀವು ಹೇಳುತ್ತೀರಿ. ಆದರೆ ನಾನು ಖಂಡಿತವಾಗಿ ಹೇಳುತ್ತೇನೆ, ಇಸ್ರೇಲ್ ಮನೆತನದವರೇ, ಪ್ರತಿಯೊಬ್ಬನೂ ತಾನು ಮಾಡಿದ ಕಾರ್ಯಗಳಿಗಾಗಿ ನ್ಯಾಯ ಹೊಂದುವನು.”
ಜೆರುಸಲೇಮ್ ವಶಮಾಡಲ್ಪಟ್ಟಿತು
21 ಸೆರೆಯ ಹನ್ನೆರಡನೆಯ ವರ್ಷದ ಹತ್ತನೆಯ ತಿಂಗಳಿನ ಐದನೇ ದಿವಸದಲ್ಲಿ ಜೆರುಸಲೇಮಿನಿಂದ ಒಬ್ಬನು ನನ್ನ ಬಳಿಗೆ ಬಂದನು. ಅವನು ರಣರಂಗದಿಂದ ತಪ್ಪಿಸಿಕೊಂಡು ಬಂದಾತನು. ಅವನು, “ನಗರವು ಪರಾಧೀನವಾಯಿತು” ಎಂದು ಹೇಳಿದನು.
22 ಅವನು ಬರುವ ಹಿಂದಿನ ದಿವಸದ ಸಾಯಂಕಾಲ ನನ್ನ ಒಡೆಯನಾದ ಯೆಹೋವನ ಆತ್ಮನಿಂದ ಪರವಶನಾದೆನು. ದೇವರು ನನ್ನನ್ನು ಮಾತನಾಡದಂತೆ ಮಾಡಿದ್ದನು. ಆ ಸಮಯದಲ್ಲಿ ಆ ಮನುಷ್ಯನು ನನ್ನ ಬಳಿಗೆ ಬಂದನು. ಆಗ ದೇವರು ನನ್ನ ಬಾಯನ್ನು ತೆರೆದು ನಾನು ಮಾತನಾಡುವಂತೆ ಮಾಡಿದನು. 23 ಆಗ ಯೆಹೋವನ ಸಂದೇಶವು ನನಗೆ ಬಂತು. ಆತನು ಹೇಳಿದ್ದೇನೆಂದರೆ, 24 “ನರಪುತ್ರನೇ, ಕೆಡವಲ್ಪಟ್ಟು ಹಾಳುಬಿದ್ದ ಪಟ್ಟಣಗಳಲ್ಲಿ ಇಸ್ರೇಲ್ ಜನರು ವಾಸಿಸುತ್ತಿದ್ದಾರೆ. ಅವರು ಹೇಳುವುದೇನೆಂದರೆ, ‘ಅಬ್ರಹಾಮನು ಒಬ್ಬನೇ. ಈ ದೇಶವನ್ನೆಲ್ಲಾ ದೇವರು ಅವನಿಗೆ ಕೊಟ್ಟನು. ನಾವು ಈಗ ಬಹಳ ಮಂದಿ ಇದ್ದೇವೆ. ಆದ್ದರಿಂದ ಖಂಡಿತವಾಗಿ ಈ ದೇಶ ನಮಗೇ ಸೇರಿದ್ದಾಗಿದೆ.’
25 “ನೀನು ಅವರಿಗೆ ಹೀಗೆ ಹೇಳಬೇಕು. ನಿಮ್ಮ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ನೀವು ರಕ್ತವಿರುವ ಮಾಂಸವನ್ನು ತಿನ್ನುತ್ತೀರಿ. ನಿಮ್ಮ ಸಹಾಯಕ್ಕಾಗಿ ನೀವು ವಿಗ್ರಹಗಳಿಗೆ ಮೊರೆಯಿಡುತ್ತೀರಿ. ನೀವು ನರಹತ್ಯೆ ಮಾಡುತ್ತೀರಿ. ಹೀಗೆ ಇರುವದರಿಂದ ನಾನು ಈ ದೇಶವನ್ನು ನಿಮಗೆ ಹೇಗೆ ಕೊಡಲಿ? 26 ನೀವು ನಿಮ್ಮ ಕತ್ತಿಯ ಮೇಲೆ ಭರವಸೆಯಿಡುತ್ತೀರಿ. ಪ್ರತಿಯೊಬ್ಬನು ಭಯಂಕರವಾದ ಕೃತ್ಯಗಳನ್ನು ನಡಿಸುತ್ತಾನೆ. ನಿಮ್ಮ ನೆರೆಯವನ ಹೆಂಡತಿಯೊಂದಿಗೆ ಸಂಭೋಗಿಸುವಿರಿ. ಆದ್ದರಿಂದ ನೀವು ಈ ದೇಶವನ್ನು ಹೊಂದಲಾರಿರಿ.’
27 “‘ನೀನು ಅವರಿಗೆ ನಿಮ್ಮ ಒಡೆಯನಾದ ಯೆಹೋವನು ಹೀಗೆ ಹೇಳಿದನೆಂದು ತಿಳಿಸಬೇಕು, “ನನ್ನ ಜೀವದಾಣೆ, ಕೆಡವಲ್ಪಟ್ಟ ಪಟ್ಟಣಗಳಲ್ಲಿ ವಾಸಿಸುವ ಜನರು ಕೊಲ್ಲಲ್ಪಡುವರು. ಯಾರಾದರೂ ಪಟ್ಟಣದ ಹೊರಗೆ ಹೋಗಿದ್ದಲ್ಲಿ ಅವರನ್ನು ಕಾಡುಪ್ರಾಣಿಗಳು ತಿನ್ನುವಂತೆ ಮಾಡುವೆನು. ಯಾರಾದರೂ ಕೋಟೆಯೊಳಗಾಗಲಿ ಗುಹೆಯೊಳಗಾಗಲಿ ಸೇರಿಕೊಂಡರೆ ಅವರು ರೋಗದಿಂದ ಸಾಯುವರು. 28 ನಾನು ಈ ದೇಶವನ್ನು ಬರಿದಾಗಿಯೂ ಬಂಜರು ಭೂಮಿಯನ್ನಾಗಿಯೂ ಮಾಡುವೆನು. ಈ ದೇಶವು ಹೆಮ್ಮೆಪಟ್ಟುಕೊಳ್ಳುತ್ತಿದ್ದ ವಿಷಯಗಳನ್ನೆಲ್ಲಾ ಅವರು ಕಳೆದುಕೊಳ್ಳುವರು. ಇಸ್ರೇಲಿನ ಪರ್ವತಗಳು ಬೋಳುಗುಡ್ಡಗಳಾಗುವವು. ಯಾರೂ ಅದನ್ನು ದಾಟಿ ಹೋಗಲಾರರು. 29 ಅವರು ಅನೇಕ ಭಯಂಕರ ಕೃತ್ಯಗಳನ್ನು ಮಾಡಿದ್ದಾರೆ. ಆದ್ದರಿಂದ ಅವರ ರಾಜ್ಯವನ್ನು ಬಂಜರು ಭೂಮಿಯನ್ನಾಗಿ ಮಾಡುವೆನು. ಆಗ ಈ ಜನರು ನಾನು ಯೆಹೋವನೆಂದು ತಿಳಿದುಕೊಳ್ಳುವರು.”
30 “‘ನರಪುತ್ರನೇ, ನಿನ್ನ ವಿಷಯದಲ್ಲಿ ನಿನ್ನ ಜನರು ಗೋಡೆಗೆ ಒರಗಿಕೊಂಡೂ ಬಾಗಿಲಿನ ನಡುವೆ ನಿಂತುಕೊಂಡೂ ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಒಬ್ಬರಿಗೊಬ್ಬರು, “ಬನ್ನಿ, ಯೆಹೋವನು ಹೇಳುವುದನ್ನು ನಾವು ಹೋಗಿ ಕೇಳೋಣ” 31 ಎಂದು ಹೇಳುತ್ತಾ ನಿನ್ನ ಬಳಿಗೆ ನನ್ನ ಜನರಂತೆ ಬರುವರು. ನನ್ನ ಜನರಂತೆ ನಿನ್ನ ಎದುರಿನಲ್ಲಿ ಬಂದು ಕುಳಿತುಕೊಳ್ಳುವರು. ನಿನ್ನ ಮಾತುಗಳನ್ನು ಅವರು ಕೇಳಿದರೂ ಅವುಗಳಿಗೆ ವಿಧೇಯರಾಗದೆ ಇಷ್ಟಪಡುವದನ್ನೆ ಮಾಡುವರು. ಇತರರಿಗೆ ಮೋಸ ಮಾಡಿ ಹಣಗಳಿಸುವದೇ ಅವರ ಕೆಲಸ.
32 “‘ನೀನು ಅವರಿಗೆ ಏನೂ ಅಲ್ಲ. ಒಬ್ಬ ಪ್ರೇಮಗೀತೆಯನ್ನು ಹಾಡುವ ಹಾಡುಗಾರ. ನಿನಗೆ ಮಧುರವಾದ ಕಂಠವಿದೆ. ನೀನು ವಾದ್ಯವನ್ನು ಚೆನ್ನಾಗಿ ಬಾರಿಸುವಿ. ಅವರು ನಿನ್ನ ಮಾತುಗಳನ್ನು ಕೇಳಿದರೂ ನೀನು ಹೇಳಿದಂತೆ ಮಾಡುವದಿಲ್ಲ. 33 ಆದರೆ ನೀನು ಹಾಡುವ ವಿಷಯಗಳು ಸಂಭವಿಸುವವು. ಆಗ ಜನರೂ, “ನಿಜವಾಗಿಯೂ ನಮ್ಮ ಮಧ್ಯೆ ಒಬ್ಬ ಪ್ರವಾದಿಯು ವಾಸಿಸಿದನಲ್ಲಾ?” ಎಂದು ಅನ್ನುವರು.’”
ಇಸ್ರೇಲ್ ಒಂದು ಕುರಿಮಂದೆಯಂತಿದೆ
34 ಯೆಹೋವನ ಸಂದೇಶ ನನಗೆ ಬಂತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ನೀನು ಇಸ್ರೇಲರ ಕುರುಬರ ಸಂಗಡ ನನ್ನ ಪರವಾಗಿ ಮಾತನಾಡು. ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ ಎಂದು ಅವರಿಗೆ ಹೇಳು, ‘ಇಸ್ರೇಲರ ಕುರುಬರೇ, ನೀವು ನೀವಾಗಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತೀರಿ. ಇದು ಸರಿಯಲ್ಲ. ನಿಮ್ಮ ಮಂದೆಗೆ ನೀವು ಆಹಾರ ಯಾಕೆ ಒದಗಿಸುವುದಿಲ್ಲ? 3 ನೀವು ಕೊಬ್ಬಿದ ಕುರಿಯ ಮಾಂಸವನ್ನು ತಿನ್ನುತ್ತೀರಿ; ಅದರ ಉಣ್ಣೆಯಿಂದ ಬಟ್ಟೆಯನ್ನು ತಯಾರಿಸುತ್ತೀರಿ. ಕೊಬ್ಬಿದ ಕುರಿಗಳನ್ನು ಕಡಿಯುತ್ತೀರಿ; ಆದರೆ ಕುರಿಗಳನ್ನು ಮೇಯಿಸುವುದಿಲ್ಲ. 4 ಆದರೆ ನೀವು ಬಲಹೀನ ಕುರಿಗಳನ್ನು ಬಲಪಡಿಸಲಿಲ್ಲ. ಕಾಯಿಲೆಯಲ್ಲಿರುವ ಕುರಿಗಳನ್ನು ನೀವು ಪರಾಂಬರಿಸಲಿಲ್ಲ. ಗಾಯಗೊಂಡ ಕುರಿಗಳಿಗೆ ಬಟ್ಟೆ ಸುತ್ತಲಿಲ್ಲ. ಕೆಲವು ಕುರಿಗಳು ದಾರಿತಪ್ಪಿ ದೂರ ಹೋದವು. ಆದರೆ ನೀವು ಅದರ ಬೆನ್ನ ಹಿಂದೆ ಹೋಗಿ ಹಿಂತಿರುಗಿ ಬರುವಂತೆ ಮಾಡಲಿಲ್ಲ. ತಪ್ಪಿಹೋದ ಕುರಿಗಳನ್ನು ನೀವು ಹುಡುಕಲಿಲ್ಲ. ನೀವು ಬಹಳ ಕ್ರೂರಿಗಳೂ ದಯೆ ಇಲ್ಲದವರೂ ಆಗಿದ್ದೀರಿ. ಆ ರೀತಿಯಾಗಿ ನೀವು ನಿಮ್ಮ ಕುರಿಗಳನ್ನು ನಡೆಸಿದಿರಿ.
5 “‘ಈಗ ಆ ಮಂದೆಯು ಚದರಿಹೋಗಿದೆ. ಯಾಕೆಂದರೆ ಅವುಗಳಿಗೆ ಕುರುಬರಿಲ್ಲ. ಅವುಗಳು ಕಾಡುಪ್ರಾಣಿಗಳಿಗೆ ಆಹಾರವಾದವು. ಆದ್ದರಿಂದ ಅವು ಚದರಿಹೋದವು. 6 ಕುರುಬರೇ ಇಲ್ಲವಾದ್ದರಿಂದ ಎತ್ತರವಾದ ಎಲ್ಲಾ ಬೆಟ್ಟಗುಡ್ಡಗಳ ಮೇಲೆ ನನ್ನ ಮಂದೆಯು ಅಲೆದಾಡಿತು; ಭೂಮಂಡಲದ ಎಲ್ಲಾ ಕಡೆಗಳಲ್ಲಿ ಚದರಿ ಹೋಯಿತು.’”
7 ಆದ್ದರಿಂದ ಕುರಬರೇ, ಯೆಹೋವನ ಮಾತುಗಳನ್ನು ಕೇಳಿರಿ. ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, 8 “ನನ್ನ ಜೀವದಾಣೆ, ನನ್ನ ಕುರಿಗಳು ಎಲ್ಲಾ ಬಗೆಯ ಕಾಡುಪ್ರಾಣಿಗಳಿಂದ ಹಿಡಿಯಲ್ಪಟ್ಟು ಅವುಗಳಿಗೆ ಆಹಾರವಾದವು. ಯಾಕೆಂದರೆ ಅವುಗಳಿಗೆ ಒಳ್ಳೆಯ ಕುರುಬರಿರಲಿಲ್ಲ. ನನ್ನ ಕುರುಬರು ತಮ್ಮ ಕುರಿಗಳಿಗೆ ಗಮನಕೊಡಲಿಲ್ಲ. ಅವರು ಅವುಗಳನ್ನು ಕೊಂದು ತಿಂದರು. ಆದರೆ ಮಂದೆಗೆ ಆಹಾರ ಒದಗಿಸಲಿಲ್ಲ.”
9 ಆದ್ದರಿಂದ ಕುರುಬರೇ, ಯೆಹೋವನ ಮಾತನ್ನು ಕೇಳಿರಿ. 10 ಯೆಹೋವನು ಹೇಳುವುದೇನೆಂದರೆ, “ನಾನು ಆ ಕುರುಬರಿಗೆ ವಿರುದ್ಧವಾಗಿದ್ದೇನೆ. ಅವರ ಕೈಯಿಂದ ನನ್ನ ಕುರಿಗಳ ಬಗ್ಗೆ ವಿಚಾರಿಸುವೆನು. ನಾನು ಅವರನ್ನು ತೊಲಗಿಸಿ ಬಿಡುವೆನು. ಇನ್ನು ಮುಂದೆ ಅವರು ನನ್ನ ಕುರುಬರಾಗಿರುವುದಿಲ್ಲ. ಇನ್ನು ಅವರಿಗೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ನನ್ನ ಕುರಿಗಳನ್ನು ಅವರ ಬಾಯಿಂದ ತಪ್ಪಿಸುವೆನು. ಆಗ ನನ್ನ ಕುರಿಗಳು ಅವರಿಗೆ ಆಹಾರವಾಗುವುದಿಲ್ಲ.”
11 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ, “ನಾನೇ ಅವರಿಗೆ ಕುರುಬನಾಗಿರುವೆನು. ತಪ್ಪಿಹೋದ ಕುರಿಗಳನ್ನು ನಾನು ಹುಡುಕುವೆನು, ನಾನು ಅವರನ್ನು ಗಮನಿಸುತ್ತಾ ನಡೆಸುವೆನು. 12 ತಪ್ಪಿಹೋದ ಕುರಿಗಳಿಗಾಗಿ ಹುಡುಕುವ ಕುರುಬನಂತೆ ನನ್ನ ಕುರಿಗಳನ್ನು ಹುಡುಕಿ ರಕ್ಷಿಸುವೆನು. ಮೋಡ ಕವಿದ ಕಾರ್ಗತ್ತಲೆಯ ದಿನದಲ್ಲಿ ತಪ್ಪಿಸಿಕೊಂಡ ಅವುಗಳನ್ನು ಹುಡುಕಿ ತರುವೆನು. 13 ನನ್ನ ಕುರಿಗಳನ್ನು ಆ ದೇಶಗಳಿಂದ ಬರಮಾಡುವೆನು. ಆ ದೇಶಗಳಿಂದ ಅವುಗಳನ್ನು ಒಟ್ಟುಗೂಡಿಸುವೆನು. ಅವುಗಳ ಸ್ವಂತ ದೇಶಕ್ಕೆ ಹಿಂದಿರುಗಿಸುವೆನು. ಇಸ್ರೇಲರ ಬೆಟ್ಟಗಳಲ್ಲಿ ಅವುಗಳನ್ನು ಮೇಯಿಸುವೆನು. ನೀರಿನ ತೊರೆಗಳ ಬದಿಯಲ್ಲಿ ಜನರಿರುವ ಸ್ಥಳಗಳಲ್ಲಿ ನಾನು ಅವುಗಳನ್ನು ಮೇಯಿಸುವೆನು. 14 ಹುಲ್ಲುಗಾವಲಿಗೆ ನಾನು ಅವುಗಳನ್ನು ನಡೆಸುವೆನು. ಇಸ್ರೇಲಿನ ಎತ್ತರವಾದ ಬೆಟ್ಟಗಳಲ್ಲಿ ಅವು ಮೇಯುವವು. ಅಲ್ಲಿ ಒಳ್ಳೆಯ ಸ್ಥಳದಲ್ಲಿ ಅವುಗಳು ಮಲಗಿ ಹುಲ್ಲನ್ನು ಮೇಯುವವು. 15 ಹೌದು, ನಾನು ನನ್ನ ಮಂದೆಯನ್ನು ಮೇಯಿಸಿ ಅವುಗಳನ್ನು ವಿಶ್ರಾಂತಿಯ ಸ್ಥಳಕ್ಕೆ ನಡೆಸುವೆನು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
16 “ಕಳೆದುಹೋದ ಕುರಿಗಳನ್ನು ನಾನು ಹುಡುಕುವೆನು. ಚದರಿಹೋಗಿದ್ದ ಕುರಿಗಳನ್ನು ಹಿಂದಕ್ಕೆ ತರುವೆನು. ಗಾಯಗೊಂಡ ಕುರಿಗಳನ್ನು ಬಟ್ಟೆಯಿಂದ ಸುತ್ತುವೆನು. ಬಲಹೀನ ಕುರಿಗಳನ್ನು ಬಲಶಾಲಿಯಾಗಿ ಮಾಡುವೆನು. ಆದರೆ ನಾನು ಕೊಬ್ಬಿದ, ಶಕ್ತಿಶಾಲಿಯಾದ ಕುರುಬರನ್ನು ನಾಶಮಾಡುವೆನು. ಯೋಗ್ಯವಾದ ಶಿಕ್ಷೆಯನ್ನು ಅವರಿಗೆ ಉಣಿಸುವೆನು.”
17 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಮಂದೆಯೇ, ನಾನು ಒಂದೊಂದು ಕುರಿಗಳ ನ್ಯಾಯತೀರಿಸುತ್ತೇನೆ. ಟಗರುಗಳನ್ನೂ ಹೋತಗಳನ್ನೂ ನ್ಯಾಯವಿಚಾರಣೆ ಮಾಡುವೆನು. 18 ನೀವು ಒಳ್ಳೆಯ ದೇಶದಲ್ಲಿ ಬೆಳೆಯುವ ಹುಲ್ಲನ್ನು ಮೇಯಬಹುದು. ಆದ್ದರಿಂದ ಬೇರೆ ಕುರಿಗಳು ಮೇಯಬೇಕಾದ ಹುಲ್ಲನ್ನು ನೀವು ಯಾಕೆ ತುಳಿದು ಹಾಳುಮಾಡುವಿರಿ? ನೀವು ಶುದ್ಧವಾದ ನೀರು ಬೇಕಾದಷ್ಟು ಕುಡಿಯಬಹುದು. ಆದರೆ ಬೇರೆ ಕುರಿಗಳು ನೀರು ಕುಡಿಯದಂತೆ ಯಾಕೆ ನೀರನ್ನು ಕದಡಿಸುತ್ತೀರಿ. 19 ನೀವು ತುಳಿದು ಹಾಳುಮಾಡಿದ ಹುಲ್ಲನ್ನು ನನ್ನ ಕುರಿಗಳು ಮೇಯಬೇಕು. ನೀವು ಕಾಲಿನಿಂದ ಕೆದಕಿ ಕೆಸರು ಮಾಡಿದ ನೀರನ್ನು ನನ್ನ ಕುರಿಗಳು ಕುಡಿಯಬೇಕು.”
20 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನಾನು ಕೊಬ್ಬಿದ ಕುರಿಗಳಿಗೂ ಬಲಹೀನ ಕುರಿಗಳಿಗೂ ನ್ಯಾಯತೀರಿಸುವೆನು. 21 ನೀವು ನಿಮ್ಮ ಶಕ್ತಿಯಿಂದ ಬೇರೆ ಕುರಿಗಳನ್ನು ದೂಡಿಬಿಡುವಿರಿ. ನಿಮ್ಮ ಕೊಂಬುಗಳಿಂದ ಬಲಹೀನ ಕುರಿಗಳನ್ನು ಹಾದುಬಿಡುವಿರಿ. ಅವುಗಳು ಆ ಸ್ಥಳದಿಂದ ಓಡಿಬಿಡುವಂತೆ ಮಾಡುವಿರಿ. 22 ಆದ್ದರಿಂದ ನಾನು ನನ್ನ ಕುರಿಗಳನ್ನು ರಕ್ಷಿಸುವೆನು. ಅವುಗಳನ್ನು ಕಾಡುಪ್ರಾಣಿಗಳು ಇನ್ನು ಮುಂದೆ ಹಿಡಿಯಲಾರವು. ಅವುಗಳಲ್ಲಿ ಪ್ರತಿಯೊಂದಕ್ಕೂ ನಾನು ನ್ಯಾಯತೀರಿಸುವೆನು. 23 ಆಮೇಲೆ ನಾನು ಅವರಿಗೆ ಒಬ್ಬ ಕುರುಬನನ್ನು ನೇಮಿಸುವೆನು. ಅವನು ನನ್ನ ಸೇವಕನಾದ ದಾವೀದನು; ಅವನು ಅವರನ್ನು ಮೇಯಿಸುವನು ಮತ್ತು ಅವರಿಗೆ ಕುರುಬನಾಗುವನು. 24 ಯೆಹೋವನಾದ ನಾನು ಅವರಿಗೆ ದೇವರಾಗಿರುವೆನು. ನನ್ನ ಸೇವಕನಾದ ದಾವೀದನು ಅವರೊಂದಿಗೆ ವಾಸಿಸುತ್ತಾ ಅವರನ್ನು ಆಳುವನು. ಇದು ಯೆಹೋವನಾದ ನನ್ನ ನುಡಿ.
25 “ನಾನು ನನ್ನ ಕುರಿಗಳೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡುವೆನು. ಕೆಟ್ಟ ಕುರಿಗಳನ್ನು ನಾನು ದೇಶದೊಳಗಿಂದ ತೆಗೆದುಬಿಡುವೆನು. ಆಮೇಲೆ ನನ್ನ ಕುರಿಗಳು ಅಡವಿಯಲ್ಲಿ ಸುರಕ್ಷಿತವಾಗಿದ್ದು ಕಾಡುಗಳಲ್ಲಿ ಮಲಗಿಕೊಳ್ಳುವವು. 26 ನಾನು ನನ್ನ ಕುರಿಗಳನ್ನೂ ನನ್ನ ಬೆಟ್ಟದ ಸುತ್ತಲೂ ಇರುವ ಸ್ಥಳಗಳನ್ನೂ ಆಶೀರ್ವದಿಸುವೆನು. ಸರಿಯಾದ ಸಮಯಕ್ಕೆ ಮಳೆ ಬೀಳುವಂತೆ ಮಾಡುವೆನು. ಮತ್ತು ಅದನ್ನು ಆಶೀರ್ವಾದದ ಸುರಿಮಳೆಯಂತೆ ಸುರಿಸುವೆನು. 27 ಹೊಲದಲ್ಲಿ ಬೆಳೆಯುವ ಮರಗಳು ಫಲವನ್ನಿಯುವವು. ಭೂಮಿಯು ಬೆಳೆಯನ್ನು ಕೊಡುವದು. ಆಗ ಕುರಿಗಳು ಅವರ ದೇಶದಲ್ಲಿ ಸುರಕ್ಷಿತವಾಗಿರುವವು. ಅವರ ಮೇಲಿರುವ ನೊಗಗಳನ್ನು ನಾನು ಮುರಿದುಬಿಡುವೆನು. ಅವರನ್ನು ಗುಲಾಮರನ್ನಾಗಿ ಮಾಡಿದ ದೇಶದವರ ಶಕ್ತಿಯನ್ನೆ ಮುರಿಯುವೆನು. ನಾನು ಯೆಹೋವನೆಂದು ಆಗ ಅವರಿಗೆ ತಿಳಿಯುವದು. 28 ಬೇರೆ ದೇಶಗಳು ಅವರನ್ನು ಪ್ರಾಣಿಗಳನ್ನು ಹಿಡಿಯುವಂತೆ ಇನ್ನು ಹಿಡಿಯುವದಿಲ್ಲ. ಅವರು ಅವುಗಳನ್ನು ಇನ್ನು ಮುಂದಕ್ಕೆ ತಿನ್ನುವದಿಲ್ಲ. ಅವರು ಸುರಕ್ಷಿತವಾಗಿ ಜೀವಿಸುವರು. ಯಾರೂ ಅವರನ್ನು ಇನ್ನು ಹೆದರಿಸುವುದಿಲ್ಲ. 29 ನಾನು ಅವರಿಗೆ ಭೂಮಿಯನ್ನು ಕೊಡುವೆನು. ಅದರಲ್ಲಿ ಅವರು ತೋಟವನ್ನು ಮಾಡುವರು. ಆ ನಾಡಿನಲ್ಲಿ ಅವರು ಇನ್ನೆಂದಿಗೂ ಹಸಿವೆಯಿಂದ ಸಂಕಟಪಡುವುದಿಲ್ಲ. ಇತರ ಜನಾಂಗದವರಿಂದ ಇನ್ನು ಮುಂದೆ ಅವಮಾನ ಹೊಂದುವುದಿಲ್ಲ. 30 ಆಗ ನಾನು ಅವರ ದೇವರೆಂದೂ ನಾನು ಅವರೊಂದಿಗೆ ಇದ್ದೇನೆ ಎಂದೂ ಅವರು ತಿಳಿದುಕೊಳ್ಳುವರು. ಇಸ್ರೇಲ್ ಜನಾಂಗವು ಸಹ ತಾವು ನನ್ನ ಜನರು ಎಂದು ತಿಳಿದುಕೊಳ್ಳುವರು.” ಇದು ಒಡೆಯನಾದ ಯೆಹೋವನ ನುಡಿ.
31 “ನೀವು ನನ್ನ ಕುರಿಗಳು, ಹಸಿರುಗಾವಲಿನ ಕುರಿಗಳು. ನೀವು ಮಾನವರಷ್ಟೇ. ನಾನು ನಿಮ್ಮ ದೇವರು.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.
ದೇವರ ಮಂದೆ
5 ನಿಮ್ಮ ಸಭಾಹಿರಿಯರಿಗೆ ನಾನು ಈಗ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾನೂ ಒಬ್ಬ ಹಿರಿಯನಾಗಿದ್ದೇನೆ. ನಾನು ಕ್ರಿಸ್ತನ ಬಾಧೆಗಳನ್ನು ಕಣ್ಣಾರೆ ನೋಡಿದ್ದೇನೆ. ನಮಗೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ನಾನೂ ಪಾಲುಗಾರನಾಗಿದ್ದೇನೆ. 2 ನೀವು ಜವಾಬ್ದಾರಿ ವಹಿಸಿಕೊಂಡಿರುವ ಸಭೆಯನ್ನು ಪರಿಪಾಲಿಸಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅವರು ದೇವರ ಮಂದೆ. ನೀವು ಆ ಮಂದೆಯನ್ನು ಕಾಯಿರಿ, ಏಕೆಂದರೆ ಅದು ನಿಮ್ಮ ಬಯಕೆಯಾಗಿದೆ; ಅದು ಬಲವಂತದಿಂದ ಹೊರಿಸಿದ ಹೊರೆಯಲ್ಲ. ದೇವರು ಅದನ್ನೇ ಇಷ್ಟಪಡುತ್ತಾನೆ. ನೀವು ಆ ಮಂದೆಯನ್ನು ಕಾಯುವುದು ಹಣದ ನಿಮಿತ್ತವಲ್ಲ, ದೇವರ ಸೇವೆ ಮಾಡಲು ನಿಮಗಿರುವ ಸಂತಸದ ನಿಮಿತ್ತವಾಗಿಯೇ. 3 ನೀವು ಜವಾಬ್ದಾರರಾಗಿರುವ ಆ ಮಂದೆಯ ಮೇಲೆ ದಬ್ಬಾಳಿಕೆ ಮಾಡಬೇಡಿ. ನೀವು ಅವರಿಗೆ ಉತ್ತಮ ಮಾದರಿಯಾಗಿರಿ. 4 ಪ್ರಧಾನ ಕುರುಬನು (ಕ್ರಿಸ್ತನು) ಪ್ರತ್ಯಕ್ಷನಾದಾಗ, ನಿಮಗೆ ಕಿರೀಟವು ಲಭಿಸುವುದು. ಮಹಾ ಪ್ರಭಾವವನ್ನು ಹೊಂದಿರುವ ಆ ಕಿರೀಟವು ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದೇ ಇಲ್ಲ.
5 ಯುವಕರೇ, ನಾನು ನಿಮಗೂ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನೀವು ಹಿರಿಯರಿಗೆ ಅಧೀನರಾಗಿರಬೇಕು. ನೀವೆಲ್ಲರೂ ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಬೇಕು.
“ದೇವರು ಅಹಂಕಾರಿಗಳಿಗೆ ವಿರುದ್ಧನಾಗಿದ್ದಾನೆ.
ಆದರೆ ಆತನು ನಮ್ರತೆಯಿಂದ ಇರುವ ಜನರಿಗೆ ಕೃಪೆಯನ್ನು ದಯಪಾಲಿಸುವನು.”(A)
6 ಆದ್ದರಿಂದ ದೇವರ ಶಕ್ತಿಯುತವಾದ ಹಸ್ತದ ಕೆಳಗೆ ನಮ್ರತೆಯಿಂದಿರಿ. ಯೋಗ್ಯಕಾಲವು ಸಮೀಪಿಸಿದಾಗ ಆತನು ನಿಮ್ಮನ್ನು ಮೇಲೆತ್ತುವನು. 7 ಆತನು ನಿಮ್ಮನ್ನು ಪರಿಪಾಲಿಸುವುದರಿಂದ ನಿಮ್ಮ ಚಿಂತೆಗಳನ್ನೆಲ್ಲಾ ಆತನಿಗೆ ಒಪ್ಪಿಸಿರಿ.
8 ಸ್ವಸ್ಥಚಿತ್ತರಾಗಿರಿ ಮತ್ತು ಎಚ್ಚರವಾಗಿರಿ! ಸೈತಾನನು ನಿಮ್ಮ ಶತ್ರು. ಗರ್ಜಿಸುವ ಸಿಂಹವು ಯಾರನ್ನು ತಿನ್ನಲಿ ಎಂದು ಹುಡುಕುತ್ತಿರುವಂತೆ ಅವನು ಮನುಷ್ಯನನ್ನು ಹುಡುಕುತ್ತಿದ್ದಾನೆ. 9 ನಿಮ್ಮ ನಂಬಿಕೆಯಲ್ಲಿ ಸ್ಥಿರವಾಗಿದ್ದು ಅವನನ್ನು ಎದುರಿಸಿರಿ. ಯಾಕೆಂದರೆ ಲೋಕದಲ್ಲಿರುವ ನಿಮ್ಮ ಸಹೋದರ ಸಹೋದರಿಯರೆಲ್ಲರೂ ನಿಮಗಿರುವಂಥ ಬಾಧೆಗಳನ್ನು ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ.
10 ಹೌದು, ನೀವು ಸ್ವಲ್ಪಕಾಲ ಮಾತ್ರ ಸಂಕಟವನ್ನು ಅನುಭವಿಸುವಿರಿ. ಆದರೆ ಅನಂತರ ದೇವರು ಎಲ್ಲವನ್ನು ಸರಿಪಡಿಸುತ್ತಾನೆ. ಆತನು ನಿಮ್ಮನ್ನು ಬಲಪಡಿಸುತ್ತಾನೆ. ನೀವು ಕೆಳಕ್ಕೆ ಬೀಳದಂತೆ ಆತನು ನಿಮಗೆ ಆಧಾರವಾಗುವನು. ಎಲ್ಲರಿಗೂ ಕೃಪೆಯನ್ನು ತೋರುವ ದೇವರು ಆತನೇ. ತನ್ನ ಪ್ರಭಾವದಲ್ಲಿ ಪಾಲುಗಾರರಾಗಲು ಕ್ರಿಸ್ತನೇ ನಿಮ್ಮನ್ನು ಕರೆದನು. ಆ ಪ್ರಭಾವವು ಶಾಶ್ವತವಾದದ್ದು. 11 ಸರ್ವಾಧಿಪತ್ಯವು ಎಂದೆಂದಿಗೂ ಆತನದೇ. ಆಮೆನ್.
ಅಂತಿಮ ಶುಭಾಶಯಗಳು
12 ನಾನು ಈ ಕಿರುಪತ್ರವನ್ನು ಸಿಲ್ವಾನನ ನೆರವಿನಿಂದ ಬರೆದೆನು. ಅವನು ಕ್ರಿಸ್ತನಲ್ಲಿ ನಂಬಿಗಸ್ತನಾದ ಸಹೋದರನೆಂಬುದು ನನಗೆ ತಿಳಿದಿದೆ. ನಾನು ನಿಮ್ಮನ್ನು ಸಂತೈಸಲು ಮತ್ತು ಪ್ರೋತ್ಸಾಹಿಸಲು ಈ ಪತ್ರವನ್ನು ಬರೆದೆನು. ಇದುವೇ ದೇವರ ನಿಜವಾದ ಕೃಪೆ ಎಂಬುದನ್ನು ನಿಮಗೆ ತಿಳಿಸಬೇಕೆಂಬುದೇ ನನ್ನ ಅಪೇಕ್ಷೆಯಾಗಿತ್ತು. ಆ ಕೃಪೆಯಲ್ಲಿ ಸ್ಥಿರತೆಯಿಂದಿರಿ.
13 ಬಾಬಿಲೋನಿನಲ್ಲಿರುವ ಸಭೆಯವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ. ನಿಮ್ಮನ್ನು ಆರಿಸಿಕೊಂಡಂತೆಯೇ ಆ ಜನರನ್ನೂ ಆರಿಸಿಕೊಳ್ಳಲಾಗಿದೆ. ಕ್ರಿಸ್ತನಲ್ಲಿ ನನ್ನ ಮಗನಾದ ಮಾರ್ಕನೂ ನಿಮಗೆ ವಂದನೆಗಳನ್ನು ತಿಳಿಸಿದ್ದಾನೆ. 14 ನೀವು ಭೇಟಿ ಮಾಡಿದಾಗ ಒಬ್ಬರಿಗೊಬ್ಬರು ಪ್ರೀತಿಯ ಮುದ್ದನ್ನು ನೀಡಿರಿ.
ಕ್ರಿಸ್ತನಲ್ಲಿರುವ ನಿಮಗೆಲ್ಲರಿಗೂ ಶಾಂತಿಯಿರಲಿ.
Kannada Holy Bible: Easy-to-Read Version. All rights reserved. © 1997 Bible League International